ಬೇಂದ್ರೆಯವರ ನಂತರ ಹೊಸಗನ್ನಡ ಕಾವ್ಯದಲ್ಲಿ ಕಾಲಾನುಕ್ರಮಣಿಕೆಯಲ್ಲಿ ದಾಖಲಾಗಿರುವ (ಜನನ: ೧೮೯೯) ಹೆಸರು ವಿ.ಸೀ ಎಂದೇ ಪ್ರಖ್ಯಾತರಾದ ವಿ. ಸೀತಾರಾಮಯ್ಯ. ಶುಚಿ – ರುಚಿಯಾದ ಬಾಳು, ಅದಕ್ಕೆ ಶ್ರೇಷ್ಠ ಅಭಿರುಚಿ – ಶೈಲಿ, ಪಾಂಡಿತ್ಯ – ರಸಿಕತೆಗಳ ಮೆರುಗು, ಇವಕ್ಕೆ ಬೆನ್ನೆಲುಬಾಗಿ ಮನುಷ್ಯ ಉದಾತ್ತವಾಗಿ ಬಾಳಬಲ್ಲನೆಂಬ ಜೀವನದೃಷ್ಟಿಯ ಉದಾರ ಮಾನವತಾವಾದ, ಇದರೊಂದಿಗೆ ಹೆಣೆದುಕೊಂಡಿರುವ ನಿರೀಶ್ವರವಾದ.. ಎಲ್ಲವುಗಳ ಸಾರಸಂಗ್ರಹವೇ ವಿ.ಸೀ ಎನ್ನಲಡ್ಡಿಯಿಲ್ಲ. ಹಾಗೂ ವಿ.ಸೀ ಅಂದಕೂಡಲೇ ಈ ಗುಣಗಳೆಲ್ಲ ಅಯಾಚಿತವಾಗಿ ಮನದಲ್ಲಿ ಮೂಡುವುದು ಅವರ ವ್ಯಕ್ತಿತ್ವದಷ್ಟೇ ಅವರ ಕಾವ್ಯದ ಗುಣಲಕ್ಷಣಗಳನ್ನೂ ಬಿಟ್ಟುಕೊಡುತ್ತದೆ. ಅದಲು – ಬದಲು, ಹಗಲು – ಇರುಳು, ಸ್ನೇಹ – ವಿಶ್ವಾಸ, ನೆಳಲು – ಬೆಳಕು… ಹೀಗೆ ಯುಗ್ಮ ಅಂದರೆ ಜೋಡಿ ಹೆಸರುಗಳನ್ನೇ ತಮ್ಮ ಸಂಕಲನದ ಶೀರ್ಷಿಕೆಗಳಾಗಿ ಆರಿಸಿದ ವಿ.ಸೀ, ಹಣ್ಣುಗಳಲ್ಲೂ ಒಂದು ಕಾಂಬಿನೇಷನ್ ಮಾಡಿ ತಮ್ಮ ಒಂದು ಸಂಗ್ರಹವನ್ನು ದ್ರಾಕ್ಷಿ – ದಾಳಿಂಬೆ ಎಂದು ಕರೆದರು! ಗೀತೆಗಳು, ದೀಪಗಳು, ಕಸ್ಮೈದೇವಾಯ, ಹೆಜ್ಜೆಪಾಡು, ಮೃಗಶಾಲೆಯ ಸಿಂಹಗಳು, ಹರಸು ತಾಯಿ ಜೋಡಿಯಲ್ಲದ ಹೆಸರುಗಳನ್ನು ಹೊಂದಿರುವ ಅವರ ಕೆಲವು ಸಂಗ್ರಹಗಳು.

ಕವಿಯಾಗಿ ವಿ.ಸೀ ಮುಖ್ಯರಾಗುವುದು, ಅವರ ಕಾವ್ಯದ ಸಮ್ಮೋಹಕ ಗುಣಕ್ಕಿಂತ (ಉದಾಹರಣೆಗೆ ಬೇಂದ್ರೆ ಕಾವ್ಯ) ಕವಿತೆಗಳಲ್ಲಿ ಅವರು ಎತ್ತುವ ತಾತ್ತ್ವಿಕ ಪ್ರಶ್ನೆಗಳಿಂದ ಎಂಬ ಯೋಚನೆ ವಿ.ಸೀ ಕಾವ್ಯ ವಿಮರ್ಶೆಯಲ್ಲಿ ದಾಖಲಾಗಿದೆ. ದೈವತ್ವವನ್ನು ಪ್ರಶ್ನಿಸುವುದು, ಅನುಭಾವವನ್ನೂ ಒಳಗೊಂಡಂತೆ ಎಲ್ಲ ಇಂದ್ರಿಯಾತೀತ ಸಾಧ್ಯತೆ – ಅನುಭವಗಳನ್ನು ತಿರಸ್ಕರಿಸುವ ಕವಿಯ ಒಲವು ಮನುಷ್ಯ ಮತ್ತು ಕೇವಲ ಮನುಷ್ಯನತ್ತ. ಸ್ನೇಹ – ಪ್ರೀತಿಯ ಜತೆ ವೈಚಾರಿಕತೆಯನ್ನೂ ಹೊಂದಿರುವ್ರ ಅವರ ಹಲವು ಕವಿತೆಗಳ ಕೇಂದ್ರ ಮಾನವನ ವ್ಯಕ್ತಿತ್ವ ಸುಧಾರಣೆ, ಘನತೆವೆತ್ತ ಬದುಕಿನ ಆಶಯ: ಮಣಿಯದಿಹ ಮನವೊಂದು, ಸಾಧಿಸುವ ಹಟವೊಂದು / ನಿಜದ ನೇರಕೆ ನಡೆವ ನಿಶ್ಚಲತೆಯೊಂದು / ಅನ್ಯಾಯಕೆಂದೆಂದು ಬಾಗದೆಚ್ಚರವೊಂದು / ಮರುಕಕ್ಕೆ, ಪ್ರೇಮಕ್ಕೆ ಚಿರತೆರೆದ ಎದೆಯೊಂದು ಎಂದು ಸಾಗುವ ಅವರ “ಅಭೀಃ” ಕವಿತೆ ಟ್ಯಾಗೋರರ “ವೇರ್ ದಿ ಮೈಂಡ್ ಈಸ್ ವಿದೌಟ್ ಫಿಯರ್” ಸಾಲುಗಳಿಗೆ ಸಮಾನಾಂತರವಾಗಿ ಸಾಗುತ್ತಿದೆ ಎಂದು ಅನ್ನಿಸಿದರೆ ಆಶ್ಚರ್ಯವಿಲ್ಲ. ಒಂದೇ ಬಗೆಯ ಗೇಯತೆ, ಸರಳ ಶಬ್ದಗಳು, ಸಾಲುಗಳು ಅವರ ಕಾವ್ಯವನ್ನು ಸಪ್ಪೆಗೊಳಿಸುವಂತೆ ಕಂಡಾಗಲೆಲ್ಲ ತೀಕ್ಷ್ಣ – ಕ್ರಾಂತಿಕಾರಕ ಒಳನೋಟಗಳು ಅವುಗಳಲ್ಲಿ ಹುದುಗಿರುವುದನ್ನು ಮನಗಾಣುವುದು ಓದುಗರಿಗೆ ಲಾಭಕರ. ಭಾವ ನಾವೀನ್ಯ, ಉಕ್ತಿ ಚಾತುರ್ಯಗಳನ್ನೂ ಅವುಗಳಲ್ಲಿ ಕಾಣಬಹುದು.

ಕನ್ನಡ – ಇಂಗ್ಲಿಷ್ ಸಾಹಿತ್ಯಗಳೆರಡರಲ್ಲೂ ಉನ್ನತ ಮಟ್ಟದ ಪಾಂಡಿತ್ಯ, ಅರ್ಥಶಾಸ್ತ್ರ – ವಿಜ್ಞಾನ – ಸಮಾಜವಿಜ್ಞಾನ – ತತ್ತ್ವಶಾಸ್ತ್ರಗಳಲ್ಲಿ ಜಿಜ್ಞಾಸೆಯಿಂದ ಕೂಡಿದ ಆಸಕ್ತಿ,ಸಂಸ್ಕೃತ ಕಾವ್ಯ – ಪುರಾಣ – ಮೀಮಾಂಸೆಗಳನ್ನು ಸಾದ್ಯಂತ ಓದಿದ ಅರ್ಹತೆ, ಸಂಗೀತ, ಶಿಲ್ಪ, ಚಿತ್ರಕಲೆಗಳಲ್ಲಿ ಪ್ರೌಢಿಮೆ… ಎಲ್ಲ ಇದ್ದ ವಿ.ಸೀ “ಎಮ್ಮ ಮನೆಯಂಗಳದಲಿ ಬೆಳೆದೊಂದು ಹೂವನ್ನು” ಎಂಬ ಮಗಳನ್ನು ಮದುವೆ ಮಾಡಿ ಮನೆದುಂಬಿಸಿಕೊಡುವ ಅಪ್ಪಟ ಭಾರತೀಯ ಸಂವೇದನೆಯ ಕವಿತೆಯನ್ನೂ ಬರೆದು ಪ್ರಸಿದ್ಧರಾದವರು. ತನ್ನಲ್ಲಿರುವ ಸ್ನೇಹ – ಕರುಣೆ – ಪ್ರೀತಿ – ನಂಬಿಕೆಗಳಿಗೆ ಆತುಕೊಂಡರೆ ಮನುಷ್ಯ ಭೂಮಿಯನ್ನು ಸ್ವರ್ಗ ಮಾಡಿಕೊಳ್ಳಬಹುದು ಎನ್ನುವ ಅವರ ಗ್ರಹಿಕೆ ಸರಳೀಕೃತವಾದುದೇನಲ್ಲ ಎನ್ನುವುದನ್ನು ಹೇಳುವಂತೆ ಪ್ರೀತಿ – ದಾಂಪತ್ಯ – ದಾಂಪತ್ಯದಾಚೆಗಿನ ಗಂಡು – ಹೆಣ್ಣುಗಳ ಸ್ನೇಹ ಸಂಬಂಧ, ಮನುಷ್ಯ ಸ್ವಭಾವ ಹಾಗೂ ಇವುಗಳನ್ನೆಲ್ಲವನ್ನು ಹೊಂದಿರುವ ಬದುಕಿನ ಕುರಿತಾಗಿ ಕೆಲ ವಿಷಾದಗೀತೆಗಳನ್ನೂ ಅವರು ಬರೆದಿದ್ದಾರೆ: ಬಾಳಿದು ಗರಗಸ / ಹೋಗುತ್ತ ಕುಯ್ಯುವುದು / ಬರುತ್ತ ಕುಯ್ಯುವುದು / ಉಳಿಯುವುದು ಸತ್ಯವೊಂದೇ

ಕಾವ್ಯದ ಶಕ್ತಿ – ಸಾಧ್ಯತೆಗಳ ಕುರಿತು ಚಿಂತಿಸಿರುವುದು, ಅದರ ತಾಂತ್ರಿಕ ಕುಸುರಿಗೆ ಸ್ಪಂದನಶೀಲರಾಗಿರುವುದು, ಪಾಶ್ಚಾತ್ಯ ಲೋಕದಿಂದ ಬಹಳಷ್ಟು ಎರವಲು ಪಡೆದಿರುವ ಭಾರತೀಯ ಸಾಹಿತ್ಯ ವಿಮರ್ಶೆಯ ಪರಿಕಲ್ಪನೆಯತ್ತ ಒಂದು ಮೂಲಭೂತ ಸಂದೇಹ ವ್ಯಕ್ತಪಡಿಸಿರುವುದು ಸಹ ವಿ.ಸೀ ವೈಶಿಷ್ಟ್ಯಗಳೇ. ಇವುಗಳಿಗೆ ನ್ಯಾಯ ಒದಗಿಸುವಂತೆ ಅವರನ್ನು ಕನ್ನಡ ವಿಮರ್ಶಾಲೋಕ ಮರು ಮೌಲ್ಯಮಾಪನಗೊಳಿಸುತ್ತಲೂ ಇದೆ.

ಮಧುರಚೆನ್ನ: ಕಂಡರಿಯದ ಪ್ರಿಯತಮನನ್ನು ಹುಡುಕಿಕೊಂಡು ಹೋಗುವ ವಸ್ತು – ವಿಷಯದ “ನನ್ನ ನಲ್ಲ” ಬರಿದೇ ಕ್ಯಾಚೀ ಟೈಟಲ್ (ಪುರುಷ ಕವಿ ಬರೆದ!) ಅಲ್ಲ; ಕನ್ನಡ ಸಾಹಿತ್ಯ ಲೋಕದ ವಯಸ್ಸಿಗೆ ಮೀರಿದ ಪ್ರತಿಭೆ, “ಮಧುರ ಚೆನ್ನ”ರ ಅನುಭಾವಿ ಕವಿತೆ. ಜೀವಿತದ ಕೇವಲ ನಲವತ್ತೊಂಬತ್ತು ವರುಷಗಳಲ್ಲಿ ಆತ್ಮಶೋಧನೆ, ಸಾಮಾಜಿಕ ಜಾಗೃತಿ, ಸಾಂಸ್ಕೃತಿಕ ಚಟುವಟಿಕೆಗಳು (ಅವರು ಕಟ್ಟಿದ ಹಲಸಂಗಿ ಗೆಳೆಯರ ಗುಂಪು ಸಾಕಷ್ಟು ಪ್ರಸಿದ್ಧಿ ಗಳಿಸಿತು) ಉದ್ಯಮಶೀಲತೆ…ಎಲ್ಲವನ್ನೂ ಮಾಡಿ ಮುಗಿಸಿದ ಗಲಗಲಿ ಚನ್ನಮಲ್ಲಪ್ಪ (ಜನನ: ೧೯೦೩) ತಮ್ಮ ಕ್ಯಾಚೀ ಕಾವ್ಯನಾಮದಿಂದಲೂ ಸೆಳೆಯುತ್ತಾರೆ. ಶರಣೆ ಅಕ್ಕ ಮಹಾದೇವಿಯಿಂದ ದೇವ / ದೈವ ಚೆನ್ನಮಲ್ಲಕಾರ್ಜುನನನ್ನು “ನಲ್ಲ”ನನ್ನಾಗಿ ಮಾಡಿಕೊಳ್ಳುವ ಪರಿಕಲ್ಪನೆಯನ್ನು ಹದಿಮೂರರ ಹದಿ ವಯಸ್ಸಿನಲ್ಲಿಯೇ ಕಡ ಪಡೆದು (ಹನ್ನೆರಡು ತುಂಬಿಲ್ಲ ಕನ್ನಕ್ಕಿ ನಾನಂದು / ನನ್ನ ನಲ್ಲನ ಕತೆಗೆ ಮರುಳುಗೊಂಡೆ / ಇನ್ನೇನು ಹೇಳುವೆನು ಇಂದಿಗಿಪ್ಪತ್ತಾರು / ಈಸೊಂದು ದಿನಕೊರಗಿ ಗೊತ್ತುಗಂಡೆ) ಮುಂದುವರಿಸುವ ಮಧುರ ಚೆನ್ನರ ಈ ನೀಳ್ಗವನದಲ್ಲಿ ದೇವಪ್ರಜ್ಞೆಯ ಹುಡುಕಾಟ, ನಲ್ಲನ ಶೋಧನೆ, ಪ್ರಕೃತಿಯಲ್ಲಿನ ಹುಡುಕಾಟ ಮೊದಲ ಮೂರು ಭಾಗಗಳಲ್ಲಿ ಕ್ರಮವಾಗಿ ಬೆಳೆದು ದಿವ್ಯಾನುಭವವಾಗಿ ನಾಲ್ಕನೆಯ ಭಾಗದಲ್ಲಿ ಸಾರ್ಥಕಗೊಳ್ಳುತ್ತದೆ. ಸಮೃದ್ಧ ಪ್ರತಿಮೆಗಳ, ಒಡಪುಗಳ ಭಂಡಾರದಂತಿರುವ ಹಾಗೂ ಇಂದ್ರಿಯಾತ್ಮಕವಾದ ಅನುಭಾವ ಕಾವ್ಯ ಪರಂಪರೆಗೆ ಸಲ್ಲುವ ರೀತಿಯಲ್ಲಿ ಅನ್ವೇಷಣೆಯನ್ನು ಪ್ರತಿಮೆಗಳ ಮೂಲಕ ಹಿಡಿದಿಡುವ ಕವಿ ಅದರ ಫಲವನ್ನು ಮಾತ್ರ ವಿಸ್ತರಿಸಿ, ಸರಳೀಕರಿಸಿ ಹೇಳುತ್ತಾರೆ ಎಂಬ ಅಭಿಪ್ರಾಯವಿದೆ: ಬುದ್ಧಿ ಭಾವದ ಸೀಮೆ ಇಲ್ಲಿಗಾಯಿತಯ್ಯ / ಮುಂದೆ ದೇವನ ದಿವ್ಯ ರಾಜ್ಯವಯ್ಯ / ಇದಷ್ಟು ಹೆಮ್ಮೆಯಲ್ಲ ಹೆಣ್ಣು ಹಣ್ಣಾಗುತ್ತಲೇ / ಕೈ ಮುಗಿದು ಶರಣು ಶರಣೆಂಬುದಯ್ಯ. ಪರಮ ಸ್ಥಿತಿಯನ್ನು, ಆ ಕಾಣ್ಕೆಯನ್ನು ಮಾತಾಗಿಸುವುದು ಕಷ್ಟ ಎಂಬ ಎಂದಿನ ಕಾರಣ ಇದರ ಹಿಂದೆ ಇದ್ದೇಇದೆ.

ಆದರೂ ಅನುಭಾವ ಕಾವ್ಯವನ್ನು ತೀರ ಪ್ರತಿಮಾರೂಢವಾಗಿಸದೆ, ಸುಳಿವು ಬಿಟ್ಟುಕೊಡದಷ್ಟು ಸೂಚ್ಯವಾಗಿಸದೆ ಹಾಗೆಯೇ ವಾಚ್ಯವೂ ಆಗಿಸದೆ, ಆತ್ಮಯಾತ್ರೆಯ ಸ್ವಗತವಾಗಿಸದೆ ಕೆಲ ಮೂಲಭೂತ ಹಾಗೂ ಕೆಲ ಸ್ವಂತ ಅನ್ವೇಷಣೆಯ ನಿಖರ ದ್ವಂದ್ವಗಳಲ್ಲಿ ನಿರ್ವಹಿಸುತ್ತಾರೆ ಎನ್ನುವುದು ವಿಮರ್ಶಕರು ಹೇಳುವ ಮಧುರಚೆನ್ನರ ಹೆಚ್ಚುಗಾರಿಕೆ. ಕತ್ತಲೆ – ಬೆಳಕು, ನಿದ್ದೆ – ಎಚ್ಚರ, ಮೊಲೆಹಾಲು – ಮನದ್ಹಾಲು ಅವುಗಳಲ್ಲಿ ಕೆಲವು. (ಇದೇ ವಸ್ತು ಕುರಿತಂತೆ ತಮ್ಮ ಸ್ವಂತ ದ್ವಂದ್ವಗಳನ್ನು ನಿರ್ಮಿಸಿ ಗಮನ ಸೆಳೆದ ಬೇಂದ್ರೆಯವರು ಮಧುರಚೆನ್ನರ ಕುರಿತು ಬಹಳ ಭರವಸೆ ಹೊಂದಿದ್ದರು; ಅವರ ಕಾವ್ಯ ವಿಕಾಸವನ್ನು ಆಸ್ಥೆಯಿಂದ ಗಮನಿಸುತ್ತಿದ್ದರು ಎಂಬ ವಿವರ ಇಲ್ಲಿ ಪ್ರಾಸಂಗಿಕವಾಗಿ ನೆನಪಾಗುತ್ತಿದೆ.) “ದೇಹದಲ್ಲಿ ಜೀವನಿರುವ ರೀತಿಯಲ್ಲಿ ಜಗದಲ್ಲಿ ದೇವನಿರಬಹುದು” ಎಂದು ಅವರ ಗ್ರಹಿಕೆ ಏಕ ಕಾಲದಲ್ಲಿ ಮೂರ್ತ ಮತ್ತು ಅಮೂರ್ತವಾಗಿ ಹೊಳೆಯುವುದು ಅವರ ಸೃಜನಶೀಲ ಪ್ರತಿಮಾನಿರ್ಮಾಣಕ್ಕೆ ಸಾಕ್ಷಿ.

ಮುಗ್ಧತೆಯನ್ನು ಕಳೆದುಕೊಳ್ಳುವ, ಅರಿವನ್ನು ಪಡೆಯುವ ಕೇಂದ್ರ ವಸ್ತುಗಳನ್ನೂ ಅವರು ನಿರ್ವಹಿಸಿದ್ದಾರೆ. (ಈ ಬಿಂದುವಿನಲ್ಲಿ ತಕ್ಷಣ ನೆನಪಾಗುವುದು ವಿಲಿಯಂ ಬ್ಲೇಕ್ ಕವಿಯ “ಸಾಂಗ್ಸ್ ಆಫ್ ಇನ್ನೊಸೆನ್ಸ್” ಮತ್ತು “ಸಾಂಗ್ಸ್ ಆಫ್ ಎಕ್ಸ್‌ಪೀರಿಯೆನ್ಸ್”. ಆದರೆ ಈ ಇಬ್ಬರು ಪ್ರತಿಭಾವಂತರ ಲೋಕ ಅಥವಾ ಅನುಭಾವ ಲೋಕ ದೃಷ್ಟಿ ಎಷ್ಟು ಸಂವಾದಿಯಾಗಿದೆ ಎನ್ನುವುದು ಇನ್ನೂ ಅಧ್ಯಯನಕ್ಕೊಳಬೇಕಾದ ಆಸಕ್ತಿಕರ ವಿಷಯ) ಚಿರಪರಿಚಿತ ಧ್ರುವನ ಕತೆಯನ್ನೂ ಈ ಚೌಕಟ್ಟಿಗೆ ಒಗ್ಗಿಸಿ ಅವರು ಪದ್ಯ ಹೆಣೆದಿರುವ ಪರಿ ಕುತೂಹಲ ಕೆರಳಿಸುವಂಥದು: ಧ್ರುವ ಕಳೆದುಹೋಗುವುದು ಮುಗ್ಧತೆ ಕಳೆದುಹೋಗುವುದರ ಸಂಕೇತವಾಗಿ ಬಳಕೆಯಾದರೆ ನಿದ್ದೆ ಕಳೆದು ಎಚ್ಚರಾಗುವ ಸುನೀತಿಗೆ ಎಲ್ಲೆಲ್ಲೂ ಮಗನೇ ಕಾಣುವುದು ಅರಸುವಿಕೆಯ ನಂತರ ಅಸ್ಪಷ್ಟವಾಗುವ ಜಾಗೃತ ಸ್ಥಿತಿಯ ಸಂಕೇತವಾಗಿ ಬರುತ್ತದೆ. ಹತ್ತೂ ನಿಟ್ಟಿಗೆ / ಹೊತ್ತಿಸಿ ಉರಿಯನು / ನಿತ್ತೆನು ನಾ ಕಿತ್ತಡಿಯಾಗಿ / ಹತ್ತೂ ನಿಟ್ಟಿಗೆ / ಹೊತ್ತಿಸಿ ಉರಿಯನು / ಕುತ್ತೆನು ನಾ ಮಾಸತಿಯಾಗಿ ಎಂದು ಹೆಣ್ಣು ಉಗ್ರ ತಪೋನಿರತಳಾಗುವುದು ಆಕೆಯ ಗುರಿಯಾದ ಅನುಭಾವಿಕ ಸ್ಥಿತಿ ಸಾಕಷ್ಟು ಶಕ್ತಿಯುತ ಎನ್ನುವುದನ್ನು ಹಾಗೂ ಗಗನ – ಪೃಥ್ವಿ ಒಂದಾಗುವ ಆ ಹೊತ್ತನ್ನು ಸಹಿಸಿಕೊಳ್ಳುವುದು ಸಾಕಷ್ಟು ಕಷ್ಟ ಎನ್ನುವುದನ್ನು ಬಿಂಬಿಸುತ್ತದೆ.

ಮಧುರಚೆನ್ನರ ಅನುಭಾವ ಶೋಧದ ಇನ್ನೊಂದು ಆಯಾಮವನ್ನು ಚಿತ್ರಿಸುವ ಕವನ “ದೇವತಾ ಪೃಥ್ವಿ”. ಇಲ್ಲಿ ತಾಯಿ ಮಲಗಿದ್ದಾಳೆ. ಅವಳನ್ನು ಎಬ್ಬಿಸುತ್ತಿರುವ ಮಗನಿಗೆ ದೈಹಿಕ ಹಸಿವನ್ನು ನೀಗಿಸುವ ಮೊಲೆಹಾಲು ಬೇಕಿಲ್ಲ; ಮಾನಸಿಕ ಹಸಿವೆಯನ್ನು ನೀಗಿಸುವ ಮನದ್ಹಾಲು ಬೇಕಾಗಿದೆ. ಸ್ವಲ್ಪ ಸಮಯ ಪ್ರಯತ್ನಿಸಿದ ನಂತರ ತಾಯಿ ಮಲಗಿರುವುದು ನಿದ್ದೆಯಿಂದಲೋ ಅಥವಾ ಸಾವಿನಿಂದಲೋ ಎಂಬ ಭಯ – ಸಂದಿಗ್ಧಗಳನ್ನೂ ಅವನು ಎದುರಿಸುತ್ತಾನೆ. ತಾಯಿ ಏಳುತ್ತಾಳೆ ಎಂಬ ಸಮಾಧಾನದಿಂದ ಮಾತ್ರ ಕೊನೆಯಾಗುವ ಕವಿತೆಯಲ್ಲಿ ಭಾರತ ಮಾತೆಯನ್ನು ಎಬ್ಬಿಸುವ ಆಶಯವೂ ಇದೆ ಎಂದು ವಿಮರ್ಶಕರು ಅರ್ಥೈಸುವುದು ಅಂಬಿಕಾತನಯದತ್ತರ ಕೆಲ ರಚನೆಗಳನ್ನು ನೆನಪಿಸಿದರೆ ಆಶ್ಚರ್ಯವಿಲ್ಲ.

ದೈವ – ನಿರ್ವಾಣಗಳ ಅನುಭಾವಿ ಜಗತ್ತಿನಲ್ಲಿ ಕೆಡುಕಿನ ಜಿಜ್ಞಾಸೆಯನ್ನೂ ಅವರು ಮಾಡುತ್ತಾರೆ. ದೇವನ ಪ್ರೀತಿಯಿಂದ ಗಳಿಸಿಕೊಳ್ಳುವ “ಎಚ್ಚರ”ದಿಂದಲೇ ಕೆಡುಕನ್ನು ಜಯಿಸಲು ಸಾಧ್ಯ ಎಂಬ ನಿರ್ಣಯ ತಲುಪುತ್ತಾರೆ. ಒಳ ಹೊರಗ ನಮಗ ಹಿರಿಹಿಗ್ಗ ಆಗುವ ಸ್ಥಿತಿಯಲ್ಲಿ / ಮೂರ್ಹೆಜ್ಜೆ ದಾಟಿದರೆ ಮುಂದಲ್ಲೆ ಗುಡಿಸಲವ / ಅಲ್ಲಿ ಮುನಿಗೋಳ ಅರಸೋತಿಗೆ / ತಂಗಮ್ಮ / ಅವರಂಥ ಸುಖವ ಅರಸರಿಯ ಸಾಲುಗಳಲ್ಲಿ ಇಂತಹ ಕೋಟಿರೂಪಾಯಿಯ ಆತ್ಯಂತಿಕ ಸ್ಥಿತಿಯನ್ನೂ ಸೀಮಿತವಾಗಿಸಿಕೊಳ್ಳುವ ಸಂಯಮ, ಆತ್ಮಸಂತೃಪ್ತಿ ಕಾಣುತ್ತದೆ. ಹಾಗೆ “ಕನ್ನಡಿಯೊಳಗೆಷ್ಟು ಕಂಡೀತು ಕನಕಾಚಲವು, ಕೊಡಕೆ ಹಿಡಿದೀತೆಷ್ಟು ಕಡಲ ನೀರು” ಎಂದು ಇಂತಹ ಅನ್ವೇಷಣೆಯನ್ನೂ ಸವಿನಯಪೂರ್ವಕವಾಗಿ ಮಾಡುವ ಅವರ ಇಂಗಿತ ಮಹೋನ್ನತವಾಗಿದೆ. ಕ್ರೈಸ್ತಧರ್ಮ ಭಾರತದ ಹಳ್ಳಿಗಳಲ್ಲಿ ತಳವೂರುತ್ತಿದ್ದ ಆ ಕಾಲದಲ್ಲಿ ಏಸು ಪ್ರಭುವಿನ ಸುತ್ತ ಸಹ ಅವರ ಕೆಲ ಕವಿತೆಗಳು ಕೇಂದ್ರೀಕೃತವಾಗಿವೆ ಮತ್ತು ಆ ಮೂಲಕ ಅನುಭಾವಿ ಕಾವ್ಯಕ್ಕೆ ಅಂಟಿಕೊಂಡಿರುವ ಮತ – ಧರ್ಮಗಳ ಧೂಳನ್ನು ಕೊಡವಿಕೊಂಡು ಧರ್ಮ ನಿರಪೇಕ್ಷವಾಗಿವೆ ಎಂಬುದು ಹೊಸ ಕಾಲದ ಓದುಗರಿಗೆ ಅವರನ್ನು ಆಪ್ತರಾಗಿಸುವ ಒಂದು ಅಂಶ.

ಪಡುವಣ ತೀರದ ಕನ್ನಡ ನಾಡಿನ / ಕಾರ್ಗಾಲದ ವೈಭವವೇನು / ಚೆಲ್ಲಿದರೆನಿತೂ ತೀರದ ನೀರಿನ / ಜಡದೇಹದ ಕಾರ್ಮುಗಿಲೇನು

ಕೆರೆಗಳನುಕ್ಕಿಸಿ ತೊರೆಗಳ ಸೊಕ್ಕಿಸಿ / ಗುಡ್ಡವ ಬೆಟ್ಟವ ಕೊರೆಕೊರೆದು / ಕಡಲಿನ ತೆರೆಗಳ ರಿಂಗಣಗುಣಿಯಿಸಿ / ಮೊರೆಮೊರೆವುದದೋ ಸುರಿಸುರಿದು

ಕುದುರೆ ಮೊಗದ ಕಡಿವಾಣದ ತೆರದಲಿ / ಮಿಂಚುಗಳವು ಥಳಥಳಿಸುವವು / ಗೊರಸಿನ ಘಟ್ಟನೆಯಂತಿರೆ ಥಟ್ಟನೆ / ಗುಡುಗುಗಳವು ಗುಡುಗಾಡಿಪವು

ಭಾಷೆಯ ಭಾವಾಭಿನಯ ಎನ್ನುವ ಪದಪುಂಜ ಕವಿತೆಯ ಆಸ್ವಾದನೆಯಲ್ಲಿ ಬರುತ್ತದೆ. ಆದರೆ ಕಡೆಂಗೋಡ್ಲು ಶಂಕರ ಭಟ್ಟರ ಈ ಸಾಲುಗಳಲ್ಲಿರುವುದು ಭಾಷೆಯ “ರುದ್ರ ಮನೋಹರ ನರ್ತನ!” ಹೊಸಗನ್ನಡ ಕಾವ್ಯದ ನವೋದಯ ಪಂಥದ ಉಗಮ ಸ್ಥಾನಗಳಲ್ಲಿ ಒಂದೆಂದು ಗುರುತಿಸಲಾಗುವ ದಕ್ಷಿಣ ಕನ್ನಡದ ಕಡೆಂಗೋಡ್ಲಿನಲ್ಲಿ ೧೯೦೪ರಲ್ಲಿ ಜನಿಸಿದ ಶಂಕರ ಭಟ್ಟರು ಪಂಜೆ ಹಾಗೂ (ಗೋವಿಂದ) ಪೈಗಳ ಪ್ರಭಾವದಲ್ಲಿ ಅರಳಿದವರು. ಅವರದೇ ಮಾದರಿ ಹಿಡಿದು ಮಾದ್ರಿಯ ಚಿತೆ, ಹೊನ್ನಿಯ ಮದುವೆ, ಮುರಲೀನಾದ ಹೆಸರಿನ ಕಥನ ಕವನಗಳನ್ನು ಬರೆದರು. ಬಹುಶ್ರುತ ಪ್ರತಿಭೆಯವರೂ, ಧೀರೋದ್ದಾತ್ತ ಪತ್ರಕರ್ತರೂ ಆಗಿದ್ದ ಶಂಕರ ಭಟ್ಟರ ಕಾವ್ಯ ರಚನೆಯಲ್ಲಿ ದೇಶದ ಸ್ಥಿತಿ – ಗತಿಗಳ ಒಂದು ಒಳಹರಿವು ಇದ್ದೇಇದೆ. ಉದಾಹರಣೆಗೆ ಘೋಷಯಾತ್ರೆ ಹಾಗೂ ವಸ್ತ್ರಾಪಹರಣ ಸಂಕಲನಗಳಲ್ಲಿ ಮೂಲ ವಸ್ತು ಮಹಾಭಾರತದ ಕತೆಯೇ ಆಗಿದ್ದರೂ ಪರಕೀಯ ಹಿಡಿತಕ್ಕೆ ಒಳಗಾದ ಭಾರತೀಯರ ಚಿತ್ರಣವನ್ನೂ ಅವು ನೀಡುತ್ತವೆ. ಗಾಂಧಿ ಸಂದೇಶ ಕಾವ್ಯ ವಂತೂ ಗಾಂಧೀಜಿಯವರ ಅಸಹಕಾರ ಚಳವಳಿಯ ಸುತ್ತಲೇ ಕೇಂದ್ರೀಕೃತವಾಗಿದೆ. ನಲ್ಮೆ, ಹಣ್ಣುಕಾಯಿ ಈ “ಗೀಳಿ”ನಿಂದ ಬಿಡಿಸಿಕೊಂಡಿರುವ ಕೆಲ ಮುಖ್ಯ ಸಂಕಲನಗಳು.

ಎಸ್.ವಿ. ಪರಮೇಶ್ವರ ಭಟ್ಟ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಹುಟ್ಟಿದ (೧೯೧೪) ಪರಮಶ್ವರ ಭಟ್ಟರು ಕನ್ನಡದ ಪ್ರಾಚೀನ ಕಾವ್ಯ ಪ್ರಕಾರಗಳನ್ನು ಮತ್ತು ಛಂದೋಪ್ರಭೇದಗಳನ್ನು ತಮ್ಮ ಕವಿತೆಗಳಲ್ಲಿ ಮರು ಪ್ರಯೋಗಿಸಿದ ಕಾರಣಕ್ಕಾಗಿ ಮಹತ್ವಪೂರ್ಣರಾಗುತ್ತಾರೆ. ಸಾಂಗತ್ಯ, ತ್ರಿಪದಿ, ಮುಕ್ತಕ, ಏಳೆ, ವಚನ ಪ್ರಕಾರಗಳನ್ನು ಅವರು ಕ್ರಮವಾಗಿ ತಮ್ಮ ಇಂದ್ರಚಾಪ – ಚಂದ್ರವೀಧಿ, ಸುರಗಿ ಸುರಹೊನ್ನೆ, ಇಂದ್ರಗೋಪ, ಉಪ್ಪುಕಡಲು – ಪಾಮರ ಕೃತಿಗಳಲ್ಲಿ ಬಳಸಿಕೊಂಡರು. ನಿನ್ನ ಕಡಲು ಉಪ್ಪಾದರೂ ಅದರೊಳಗೆ / ನಿನ್ನದೆಂಬ ಮುತ್ತುಂಟು ರತ್ನವುಂಟು / ನನ್ನ ಈ ಒಡಲು ಮುಪ್ಪಾದರೂ / ಇದರೊಳಗೆ ನೀನೆಂಬ ಮುತ್ತುಂಟು ರತ್ನವುಂಟು / ಇದು ಕಾರಣ ಆ ಕಡಲೂ ಭವ್ಯ, ಈ ಒಡಲೂ ಭವ್ಯ ಸದಾಶಿವ ಗುರು – ಮುಕ್ತಕದಲ್ಲಿ “ಸದಾಶಿವ ಗುರು” ಅವರ ಅಂಕಿತ.

ಅಷ್ಟೇನೂ ಪ್ರಾಚೀನ ಪ್ರಕಾರವಲ್ಲದ, ನಾಲ್ಕು ಪಾದಗಳ, ಹಾಡಲು ತಕ್ಕುದಾದ, ಮೃದು ಮಧುರ ಅಭಿವ್ಯಕ್ತಿಗೆ ವಾಹಕವಾದ ಸಾಂಗತ್ಯವನ್ನು ಮರು ಅನ್ವೇಷಿಸಿಕೊಂಡ ಎಸ್ ವಿ ಪಿ, ತಮ್ಮ ಸಹಜ ಕವಿತ್ವ, ಪದ ಚಮತ್ಕಾರ, ಹೊಸ ನುಡಿಗಟ್ಟಿನಲ್ಲಿಟ್ಟ ಲೋಕೋಕ್ತಿ, ಜಾಣ್ನುಡಿ, ಅರ್ಥಗರ್ಭಿತ ಹೇಳಿಕೆಗಳಿಂದಲೂ ಗಮನ ಸೆಳೆಯುತ್ತಾರೆ. ಕೆಲ ಉದಾಹರಣೆಗಳನ್ನು ನೋಡಬೇಕೆಂದರೆ,

ಸರಳತೆ ಸಾಲದು ಕಾರ್ಯದ ಸಿದ್ಧಿಗೆ
ವಕ್ರತೆ ಸಹ ಬೇಕು ನಮಗೆ
ಮಾಡಿದೆವಾದರೆ ಬೆರಳನು ನೆಟ್ಟಗೆ
ಹಿಡಿಯುವುದೇನನು? ಹೇಗೆ?

ಹರಿಕತೆ ಮುಗಿವಾಗ ತಟ್ಟೆಯ ಹುಡುಗನು
ಹತ್ತಿರ ಬಂದುದ ಕಂಡು
ಜಿಪುಣರು ಮೂವರೊಳೊಬ್ಬನು ಬಿದ್ದನು
ನಡೆದರಿಬ್ಬರು ಹೊತ್ತುಕೊಂಡು

ಮದನ ಕೈಗೊಂಬೆಯ ಬೇಲೂರ ಗುಡಿಯೊಳು
ಕೊರೆದವರಾರೆಂದು ಒದರಿ
ಕೇಳಿದ ರಭಸಕೆ ಶಾಲೆಯ ಮಕ್ಕಳು
ನಾವಲ್ಲವೆಂದರು ಹೆದರಿ!.