ಜಾನಪದ ಅಭಿಮಾನಿಗಳಾದ ಸರ್ವಸಮಾಜಕ್ಕೆ ಶರಣು-ಶರಣು.

ಕರ್ನಾಟಕ ಸಾಂಸ್ಕೃತಿಕ ಹಾಗೂ ರಾಜಕೀಯ ಕೇಂದ್ರವಾದ ದಾವಣಗೆರೆಯಲ್ಲಿ ನಡೆಯುತ್ತಿರುವ ೧೪ನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಲನದ ಸರ್ವಾಧ್ಯಕ್ಷರಾದ ಸನ್ಮಿತ್ರ ಡಾ. ಹಾ. ಮಾ. ನಾಯಕರೇ, ಉದ್ಘಾಟಕರಾದ ಕ.ವಿ.ವಿ.ಯ ಮಾನ್ಯ ಕುಲಪತಿಗಳಾದ ಡಾ. ಎಸ್. ಜಿ. ದೇಸಾಯಿ ಅವರೆ, ಜಾನಪದ ವಿದ್ವಾಂಸರೆ, ಜಾನಪದ ಕಲಾವಿದರೆ ಮತ್ತು ಅಭಿಮಾನಿ ಬಳಗವೇ, ನಿಮ್ಮೆಲ್ಲರಿಗೆ ನನ್ನ ಈ ‘ಹೊಸ್ತಿಲ ನಮಸ್ಕಾರ’ ಸ್ವಾಗತ, ಸುಸ್ವಾಗತ.

ಕರ್ನಾಟಕ ವಿಶ್ವವಿದ್ಯಾಲಯ ತನ್ನ ಸಾಂಸ್ಕೃತಿಕ, ಶೈಕ್ಷಣಿಕ, ವೈಜ್ಞಾನಿಕ ಸಾಧನೆಗಳಿಗೆ ಹೆಸರಾಗಿದೆ. ಪ್ರಶಾಂತವಾದ ಛೋಟಾಮಹಾಬಲೇಶ್ವರದ ವಾತಾವರಣದಲ್ಲಿ ನಿರ್ಮಾಣವಾಗಿ ಆಧುನಿಕ ಶಿಕ್ಷಣದ ಆದರ್ಶಸಂಸ್ಥೆಯಾಗಿರವ ಕರ್ನಾಟಕ ವಿಶ್ವವಿದ್ಯಾಲಯ ಕನ್ನಡಿಗರ ಹೆಮ್ಮೆಯ ಸಂಸ್ಥೆ, ಉತ್ತರ ಕರ್ನಾಟಕದ ಶಿಕ್ಷಣಕ್ಕೆ ಕಣ್ಣಾಗಿರುವ ಕ. ವಿ. ವಿ. ದ ಸಾಧನೆಗಳು ಅನೇಕ. ಮುಖ್ಯವಾಗಿ ಕನ್ನಡ ಸಾಹಿತ್ಯ, ಭಾಷೆ, ಸಂಸ್ಕೃತಿ ಜಾನಪದಗಳ ಅಧ್ಯಯನ, ಅಧ್ಯಾಪನ, ಪ್ರಕಟನ, ಸಂಶೋಧನ ಕಾರ್ಯಗಳ ಕೇಂದ್ರ ಬಿಂದು ಕನ್ನಡ ಅಧ್ಯಯನಪೀಠ. ಅದು ಕರ್ನಾಟಕ ವಿಶ್ವವಿದ್ಯಾಲಯದ ಪ್ರಥಮ ಮತ್ತು ಪ್ರತಿಷ್ಠಿತ ವಿಭಾಗ, ಕನ್ನಡ ಸಾಹಿತ್ಯ, ಭಾಷಾಶಾಸ್ತ್ರ, ಜಾನಪದಗಳನ್ನು ಸ್ನಾತಕ ಮತ್ತು ಸ್ನಾತಕೋತ್ತರ ಶಿಕ್ಷಣದಲ್ಲಿ ಅಳವಡಿಸಿರುವ ಜವಾಬ್ದಾರಿಯ ವಿಭಾಗ ಇದು. ಬಸವೇಶ್ವರ ಅಧ್ಯಯನ, ತಮಿಳು ಅಧ್ಯಯನ, ಭಾಷಾಂತರ, ವಚನ ಸಾಹಿತ್ಯ ಸಂಶೋಧನೆ, ಜಾನಪದ ಸಂಗೋಪನೆ ಮುಂತಾದ ಸಾಂಸ್ಕೃತಿಕ ಅವಶ್ಯಕತೆಗಳನ್ನು ಪೂರೈಸುವ ಸಂಸ್ಥೆ ಕನ್ನಡ ಅಧ್ಯಯನಪೀಠ. ಜಾನಪದ ವಸ್ತುಸಂಗ್ರಹಾಲಯ, ಹಸ್ತಪ್ರತಿ ಭಾಂಡಾರ, ಕನ್ನಡ ಪುಣ್ಯಪುರುಷರ ಸ್ಮಾರಕ ಪ್ರದರ್ಶನಾಲಯ, ಭಾಷಾಶಾಸ್ತ್ರ ಪ್ರಯೋಗಾಲಯ ಮುಂತಾದುವುಗಳಿಂದ ಜೀವಂತ ವಿಭಾಗವಾಗಿದೆ ಇದು. ಮೂವತ್ತು ಜನ ಅಧ್ಯಾಪಕರು, ಇನ್ನೂರು ಐವತ್ತು ವಿದ್ಯಾರ್ಥಿಗಳು ಇಪ್ಪತ್ತೈದು ಪಿಎಚ್.ಡಿ. ಸಂಶೋಧಕರು ಕಾರ್ಯನಿರತರಾಗಿರುವ ಜೇನುಗೂಡಿನಂತಿದೆ ಈ ಕನ್ನಡ ಅಧ್ಯಯನಪೀಠ.

ಅಖಿಲ ಕರ್ನಾಟಕ ಜಾನಪದ ಸಮ್ಮೇಲನ ಈ ಸಂಸ್ಥೆಯ ಮಹತ್ವದ ಸಾಧನೆ. ೧೯೭೦ರಂದು ಗೋಕಾಕದಲ್ಲಿ ನೆರವೇರಿದ ಪ್ರಥಮ ಜಾನಪದ ಸಾಹಿತ್ಯ ಮೇಳ ಈ ಸಮ್ಮೇಲನದ ಪ್ರಥಮ ಅಂಕುರ. ಮುಂದೆ ೧೯೭೧ರಲ್ಲೆ ಸ್ನಾತಕೋತ್ತರ ಮಟ್ಟದಲ್ಲಿ ಜಾನಪದ ಅಧ್ಯಯನ ಪ್ರಾರಂಭವಾಗಿ ೧೯೭೩ರಂದು ಪ್ರಥಮ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ಶ್ರೀ ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ನೆರವೇರಿತು. ಮುಂದೆ ಲಿಂಗೈಕ್ಯ ಜಯದೇವಿತಾಯಿ ಲಿಗಾಡೆ, ಡಾ. ದೇ. ಜವರೇಗೌಡ, ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ, ಶ್ರೀ ಜೋಳದರಾಶಿ ದೊಡ್ಡನಗೌಡ, ಶ್ರೀ ಸಿಂಪಿ ಲಿಂಗಣ್ಣ, ಶ್ರೀ ಎಚ್. ಎಲ್. ನಾಗೇಗೌಡ, ಶ್ರೀ ಎಲ್. ಆರ್. ಹೆಗಡೆ, ಶ್ರೀ ಎಂ. ಎಸ್. ಸುಂಕಾಪುರ, ಶ್ರೀ ಬಿ. ಬಿ. ಹೆಂಡಿ, ಶ್ರೀಮತಿ ಸಿ. ಪಾರ್ವತಮ್ಮ, ಡಾ. ಆರ್. ಸಿ. ಹಿರೇಮಠ ಮತ್ತು ಡಾ. ಜೀ. ಶಂ. ಪರಮಶಿವಯ್ಯ ಈ ಜಾನಪದ ಅಧ್ವರ್ಯುಗಳ ಅಧ್ಯಕ್ಷತೆಯಲ್ಲಿ ನೇರವೇರಿದ ನಮ್ಮ ಹದಿಮೂರು ಜಾನಪದ ಸಮ್ಮೇಳನಗಳು ಜಾನಪದದ ಸಾಹಿತ್ಯಿಕ, ವೈಜ್ಞಾನಿಕ ಆಚರಣೆಯ ಅನೇಕ ಮುಖ್ಯ ವಿಷಯಗಳ ತಲಸ್ಪರ್ಶಿಯಾದ ಸಂಶೋಧನೆ ಮತ್ತು ಅಧ್ಯಯನಕ್ಕೆ ದಾರಿಮಾಡಿಕೊಟ್ಟಿವೆ. ಮುಂದಿನ ಸಂಶೋಧನೆಗೆ ಅಧಿಕೃತ ಆಕರ ಗ್ರಂಥಗಳಾದ ಜಾನಪದ ಸಾಹಿತ್ಯದರ್ಶನದ ಸಂಪುಟಗಳು ಗಮನಾರ್ಹವಾದ ಕೊಡುಗೆ ಎಂಬುದು ನಿರ್ವಿವಾದ. ಶಿಷ್ಟಪದ ಕನ್ನಡ ಸಾಹಿತ್ಯ ಸಮ್ಮೇಲನಕ್ಕೆ ಸಮಾಂತರವಾಗಿ ನಮ್ಮ ನಾಡಿನಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಏಕೈಕ ಜಾನಪದ ಸಮ್ಮೇಳನವಿದು. ಕಾವೇರಿಯಿಂದ ಗೋದಾವರಿವರೆಗಿನ ಕನ್ನಡ ಭಾಗಗಳನ್ನು ಪ್ರತಿನಿಧಿಸುವ ವಿದ್ವಾಂಸರು, ಕಲಾವಿದರು, ಅಭಿಮಾನಿಗಳು ಭಾಗವಹಿಸುತ್ತ ಬಂದಿರುವುದು ಇದರ ಸಮಗ್ರತೆಯ ದ್ಯೋತಕವೆನಿಸಿದೆ. ಇಲ್ಲಿನ ವರೆಗೆ ವಿಶ್ವವಿದ್ಯಾಲಯದ ಕಕ್ಷೆಯೊಳಗೆ ಏರ್ಪಡಿಸಲಾಗುತ್ತಿದ್ದ ಈ ಸಮ್ಮೇಳನವನ್ನು ಇಂದು ಕರ್ನಾಟಕದ ಕೇಂದ್ರ ಬಿಂದುವಾದ ದಾವಣಗೆರೆಯಲ್ಲಿ ಹಮ್ಮಿಕೊಂಡಿರುವುದು ಸಮ್ಮೇಳನ ನಿಜವಾಗಿಯೂ ಅಖಿಲ ಕರ್ನಾಟಕದ್ದೆಂಬುದಕ್ಕೆ ಸಾಕ್ಷಿಯಾಗಿದೆ.

ಇಂಥ ಮಹತ್ವದ ೧೪ನೆಯ ಜಾನಪದ ಸಮ್ಮೇಳನಕ್ಕೆ ತಮ್ಮೆಲ್ಲರನ್ನೂ ಹೃದಯತುಂಬಿ ಸ್ವಾಗತಿಸಲು ಮಹದಾನಂದವಾಗುತ್ತಿದೆ. ತಮ್ಮೆಲ್ಲರ ಬರುವಿಕೆಯಿಂದ ಈ ಸಮ್ಮೇಳನ ಹೀಗೆ ಮೈದುಂಬಿಕೊಂಡು ನಿಂತಿರಲು ಕಾರಣವಾಗಿದೆ. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನಪೀಠ ಮತ್ತು ದಾವಣಗೆರೆಯ ಹೆಮ್ಮೆಯ ಶಿಕ್ಷಣ ಸಂಸ್ಥೆಯಾದ ಬಾಪೂಜಿ ವಿದ್ಯಾಸಂಸ್ಥೆಯ ಪದಾಧಿಕಾರಿಗಳ ಪರವಾಗಿ ತಮ್ಮೆಲ್ಲರಿಗೆ ಹಾರ್ದಿಕ ಸ್ವಾಗತವನ್ನು ಬಯಸುತ್ತೇನೆ. ನಮ್ಮ ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಗಮಿಸಿರುವ ಡಾ. ಹಾ. ಮಾ. ನಾಯಕರು ಒಂದು ರೀತಿಯಲ್ಲಿ ಅಚ್ಚ ಜಾನಪದರು, ಅಚ್ಚಳಿಯದ ಕನ್ನಡ ಅಭಿಮಾನಿಗಳು, ಎದೆಗುಂದದ ಹೋರಾಟಗಾರರು. ಸಂಸ್ಕೃತಿ, ಸಾಹಿತ್ಯಕ್ಷೇತ್ರದ ಸುಪರಿಚಿತ ವ್ಯಕ್ತಿಯಾಗಿರುವ ಡಾ. ನಾಯಕರು ಕರ್ನಾಟಕದ ಜಾನಪದ ಅಧ್ಯಯನಕ್ಕೆ ವೈಜ್ಞಾನಿಕ ದೃಷ್ಟಿಯನ್ನು ತೋರಿದ ಮುಂಚೂಣಿಗರಲ್ಲಿ ಒಬ್ಬರು.

‘ಅಧಟರ್ ಅಭಿಮಾನಿಗಳ್ ಅತ್ಯುಗ್ರರ್’ ಮುಂತಾಗಿ ನೃಪತುಂಗ ಸೂಚಿಸಿರುವ ಕನ್ನಡದ ಪ್ರತಿನಿಧಿ ಡಾ. ಹಾ. ಮಾ. ನಾಯಕ ಅವರ ಮಾರ್ಗದರ್ಶಕ ಹಾಗೂ ರಚನಾತ್ಮಕ ಸೂಚನೆಗಳನ್ನೊಳಗೊಂಡ ಅಧ್ಯಕ್ಷೀಯ ಭಾಷಣ ಜಾನಪದ ಇನ್ನೊಂದು ಮೈಲುಗಲ್ಲು ಆಗಲಿದೆ. ಜಾನಪದ ಅಭಿಮಾನಿಗಳೆಲ್ಲರ ಪರವಾಗಿ ಅವರಿಗೆ ತೆರೆದ ಬಾಹುಗಳ ಬಿಗಿಯಪ್ಪುಗೆಯ ಸ್ವಾಗತ.

ದಾವಣಗೆರೆಯ ಈ ಜಾನಪದ ಸಮ್ಮೇಲನವನ್ನು ಉದ್ಘಾಟಿಸಲು ಬಂದಿರುವ ಕರ್ನಾಟಕ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಎಸ್. ಜಿ. ದೇಸಾಯಿ ಅವರನ್ನು ಆದರಪೂರ್ವಕವಾಗಿ ಸ್ವಾಗತಿಸುತ್ತೇನೆ. ಒಂದು ರೀತಿಯಲ್ಲಿ ಈ ಸಮ್ಮೆಳನವೇ ಅವರು, ಅವರದೇ ಈ ಸಮ್ಮೇಳನ. ಕನ್ನಡಾಭಿಮಾನಿಗಳು, ಶಿಕ್ಷಣಪ್ರೇಮಿಗಳು, ಸಂಸ್ಕೃತಿವಂತರು ಆಗಿರುವ ಡಾ. ದೇಸಾಯಿ ಅವರು ಆದರಣೀಯ ಹಾಗೂ ಅನುಕರಣೀಯ ವ್ಯಕ್ತಿಗಳು. ವೃತ್ತಿಯಿಂದ ವೈದ್ಯರು, ಪ್ರವೃತ್ತಿಯಿಂದ ಸದುವಿನಯಶೀಲರು; ಹಾಗೆಯೇ ಆದರ್ಶ ಶಿಕ್ಷಕರು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯನ್ನು ಗಳಿಸಿ ತಮ್ಮ ವಿಶಾಲ ಅನುಭವ ಸತತ ಪರಿಶ್ರಮ ಹಾಗೂ ಜೀವನದ ಆದರ್ಶಗಳಿಂದ ಕರ್ನಾಟಕ ವಿಶ್ವವಿದ್ಯಾಲಯವನ್ನು ವ್ಯವಸ್ಥಿತರೀತಿಯಲ್ಲಿ ನಡೆಯಿಸಿಕೊಂಡು ಬಂದ ಕೀರ್ತಿ ಡಾ. ದೇಸಾಯಿ ಅವರದಾಗಿದೆ. ಅವರು ದೀಪಹಚ್ಚಿ ಬೆಳಗಿಸುವ ಈ ಜಾನಪದ ಸಮ್ಮೇಳನ ನಾಡಿಗೆಲ್ಲ ಸಾಂಸ್ಕೃತಿಕ ಬೆಳಕನ್ನು ಬೀರುವುದೆಂದು ನಂಬಿದ್ದೇನೆ. ಅವರಿಗೂ ಸ್ವಾಗತ, ಸುಸ್ವಾಗತ.

ಅಖಿಲ ಕರ್ನಾಟಕ ಜಾನಪದ ಸಮ್ಮೇಳನಕ್ಕೆ ಕರ್ನಾಟಕ ವ್ಯಾಪ್ತಿಯ ಸಮಗ್ರತೆಯನ್ನು ಒದಗಿಸುವಲ್ಲಿ ದಾವಣಗೆರೆಯ ಬಾಪೂಜಿ ವಿದ್ಯಾಸಂಸ್ಥೆ ಹಾಗೂ ದಾವಣಗೆರೆಯ ಮಹಾಜನರು ಕಾರಣೀಭೂತರಾದುದು ಸ್ಮರಣೀಯ ಸಂಗತಿ. ನವನಾಗರಿಕತೆಯ ಕೇಂದ್ರವಾದ ದಾವಣಗೆರೆ ಈ ಒಂದೆರಡು ದಿವಸ ಜಾನಪದ ಪ್ರಭಾವಲಯದಲ್ಲಿ ಶೋಭಿಸುವಂತಾದುದು ಗಮನಾರ್ಹ. ಹನ್ನೆರಡು ಸಮ್ಮೇಳನಗಳ ಪಟ್ಟವನ್ನು ದಾಟಿ, ಸೀಮೋಲ್ಲಂಘನವನ್ನು ಮಾಡಿ ಈ ಹದಿನಾಲ್ಕನೆಯ ಸಮ್ಮೇಳನವನ್ನು ಇಲ್ಲಿ ಇಂದು ಹೀಗೆ ಸಂಘಟಿಸಲು ಕಾರಣರಾದವರು ಶ್ರೀ ಶಾಮನೂರು ಶಿವಶಂಕರಪ್ಪ ಮತ್ತು ಅವರ ಮಿತ್ರರು. ಅವರೆಲ್ಲರ ಅನುಭವ, ಉದಾರತೆಗಳು ಸ್ಮರಣೀಯವಾದವುಗಳು. ಅವರೆಲ್ಲರನ್ನು ಈ ಸಮ್ಮೇಳನಕ್ಕೆ ಶರಣು ಮಾಡಿ ಸ್ವಾಗತಿಸುತ್ತೇನೆ.

ಜಾನಪದ ಕುಣಿತ-ವಾದ್ಯ-ಸಂಗೀತ ಎಂಬ ವಿಷಯವನ್ನು ಕುರಿತ ಮೂರು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಲು ಬಂದಿರುವ ಜಾನಪದ ವಿದ್ವಾಂಸರೆಲ್ಲರಿಗೂ ವಿವಿಧ ಕಲೆಗಳನ್ನು ಪ್ರದರ್ಶಿಸಲು ಆಗಮಿಸಿರುವ ಕರ್ನಾಟಕದ ವಿವಿಧ ಜಿಲ್ಲೆಗಳನ್ನು ಪ್ರತಿನಿಧಿಸುವ ಕಲಾಕಾರರಿಗೂ ಎದೆದುಂಬಿದ ಸ್ವಾಗತ. ಈ ಜಾನಪದ ಸಮ್ಮೇಳನವನ್ನು ಸಂಘಟಿಸುವಲ್ಲಿ ನೆರವಾದ ಸರ್ವರನ್ನು, ಈ ಸಮ್ಮೇಳನಕ್ಕೆ ಆಗಮಿಸಿರುವ ಜಾನಪದ ಆಸಕ್ತರನ್ನು ಆತ್ಮೀಯತೆಯಿಂದ ಬರಮಾಡಿಕೊಳ್ಳಲು ಹೆಮ್ಮೆಯೆನಿಸುತ್ತದೆ.

ಕೊನೆಯದಾಗಿ, ಮಾನ್ಯರೆ, ಜಾನಪದವೆಂಬುದು ಹಳ್ಳಿಗರ ಹಾಡು ಕುಣಿತ ಎಂಬುದಷ್ಟೇ ಅಲ್ಲದೆ ಅದೊಂದು ಅತ್ಯಂತ ವೈಜ್ಞಾನಿಕ ಅಧ್ಯಯನ; ಸಮಾಜಶಾಸ್ತ್ರ, ಧರ್ಮಶಾಸ್ತ್ರ, ಮಾನವಶಾಸ್ತ್ರ, ವೈದ್ಯಶಾಸ್ತ್ರ ಮುಂತಾದ ಎಲ್ಲ ವೈಜ್ಞಾನಿಕ ದೃಷ್ಟಿಕೋನದ ಅಭ್ಯಾಸಕ್ಕೆ ಇದು ವಸ್ತುವನ್ನೊದಗಿಸಿದೆ. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಈ ನೂತನ ದೃಷ್ಟಿ ವ್ಯಾಪಕವಾಗಿ ಹಬ್ಬಿ ಇದೊಂದು ವಿಶ್ವವಿದ್ಯೆಯೇ ಆಗಿದೆ. ಇಪ್ಪತ್ತೊಂದನೆಯ ತಂತ್ರಜ್ಞಾನಯುಗಮಾನಕ್ಕೆ ಧಾವಿಸುತ್ತಿರುವ ಇಂದಿನ ಮಾನವನ ಸಾಹಸ, ವೈಜ್ಞಾನಿಕ ಸಂಶೋಧನೆ, ತಾಂತ್ರಿಕ ಅಟಾಟೋಪಗಳ ಮಧ್ಯದಲ್ಲಿಯೂ ಮಾನವಜನಾಂಗದ ಉತ್ತಮಿಕೆಯ ಪಳೆಯುಳಿಕೆಯಾಗಿರವ ಈ ಜಾನಪದ ಎಲ್ಲ ವೈಚಾರಿಕರ ಮನಸ್ಸನ್ನು ಸೆಳೆಯುತ್ತಿದೆ, ಎಲ್ಲಂದದ ಸಂಶೋಧನೆಗೆ ತೆರವು ಮಾಡಿಕೊಡುತ್ತಿದೆ. ಮುಂದಿನ ಶತಮಾನದ ಮಾನವ ಎದುರಿಸಬೇಕಾಗಿರುವ ಭಯಂಕರ ಸಮಸ್ಯೆಗಳಿಗೆ ಶತಮಾನಗಳಿಂದ ಮಾನವೀಯ ನಡೆವಳಿಕೆಯ ಪ್ರಶಾಂತವಾದ ನದಿಯಾಗಿ ಹರಿದು ಬಂದಿರುವ ಜಾನಪದ ಪರಿಹಾರಗಳನ್ನು ಸೂಚಿಸಬಲ್ಲದು. ಮಾನವ ಸಮಾಜವನ್ನು ಪುನಾರಚಿಸುವ, ಪುರ್ನರಚಿಸುವ ದಾರಿಯಲ್ಲಿ ಮುನ್ನಡೆಯುತ್ತಿರುವ ನಮಗೆ ಜಾನಪದದ ನಡೆ-ನುಡಿ, ನ್ಯಾಯವ್ಯವಸ್ಥೆ, ಸಹೃದಯತೆ, ರಸಿಕತೆ ಸಮಾನತೆ ಮುಂತಾದ ಮಾನವೀಯ ಅಂಶಗಳು ಖಂಡಿತವಾಗಿ ನೆರವಾಗುತ್ತವೆ. ಆದರೆ ವಿಜ್ಞಾನ, ತಂತ್ರಜ್ಞಾನಗಳ ಬೆನ್ನುಹತ್ತಿ ಮಾರಕಾಸ್ತ್ರಗಳ ಸರ್ಪನೆರಳಿನಲ್ಲಿರುವ ಮಾನವ ಈ ಜಾನಪದ ಅಮೃತ ಸಂಜೀವಿನಿಯತ್ತ ಗಮನಹರಿಸುವನೆ ಎಂಬುದೇ ಇಂದಿನ ಪ್ರಶ್ನೆ. ಜೀವನ ಕ್ಷೇತ್ರ ಸಾಮಾಜಿಕ ಶಾಂತಿ, ವ್ಯಕ್ತಿತ್ವದ ಉನ್ನತಿ, ಕಲಾತ್ಮಕ ಬೆಳವಣಿಗೆ-ಅವೆಲ್ಲವುಗಳಿಗಿಂತ ಮುಖ್ಯವಾಗಿ ಜೀವನ ನೆಮ್ಮದಿಯನ್ನು ಮಾನವಸಮಾಜ ಕಂಡುಕೊಳ್ಳಲು ಈ ಜಾನಪದೀಯ ಅಧ್ಯಯನ, ಅನ್ವಯ ಹಾಗೂ ಅನುಸರಣೆ ದಾರಿತೋರುವುದೆನ್ನುವುದರಲ್ಲಿ ಸಂಶಯವಿಲ್ಲ. ಈ ಎರಡು ದಿನಗಳ ಜಾನಪದ ಸಮ್ಮೇಳನ ಈ ನಿಟ್ಟಿನಲ್ಲಿ ಮಾರ್ಗದರ್ಶಕವಾಗುವುದು ಎಂದು ಆಶಿಸುತ್ತೇನೆ.

ಮಾನ್ಯರೆ, ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನಪೀಠದ ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಂಶೋಧಕರ ಪ್ರತಿನಿಧಿಯಾಗಿ, ಬಾಪೂಜಿ ವಿದ್ಯಾಸಂಸ್ಥೆಯ ಮಿತ್ರನಾಗಿ ನಿಮ್ಮೆಲ್ಲರನ್ನು ಮತ್ತೊಮ್ಮೆ ಸ್ವಾಗತಿಸುತ್ತೇನೆ. ಶರಣು ಶರಣಾರ್ಥಿ.