ಸಮ್ಮೇಲನಾಧ್ಯಕ್ಷರಾದ ಡಾ. ಆರ್.ಸಿ. ಹಿರೇಮಠ ಅವರೆ, ಉದ್ಘಾಟಕರಾದ ಕುಲಪತಿ ಡಾ. ಎಸ್.ಜಿ. ದೇಸಾಯಿಯವರೆ, ಜಾನಪದ ಸಾಹಿತ್ಯ ವಿದ್ವಾಂಸರೆ, ಸಹೃದಯರೆ,

ಕರ್ನಾಟಕ ವಿಶ್ವವಿದ್ಯಾಲಯದ ಬೆಳಗಾವಿ ಆವರಣದಲ್ಲಿ ಪ್ರಥಮಬಾರಿಗೆ ಇಂಥ ಸಮ್ಮೇಲನವೊಂದು ಜರುಗುತ್ತಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ. ಈ ಸಮ್ಮೇಲನಕ್ಕೆ ತಮ್ಮೆಲ್ಲರನ್ನು ಸ್ವಾಗತಿಸುವ ಮೊದಲು, ಈ ಆವರಣದ ಪರಿಚಯ ಮಾಡಿಕೊಡುವುದು ಅವಶ್ಯವೆನಿಸಿದೆ.

ಈ ಆವರಣ ಅಸ್ತಿತ್ವಕ್ಕೆ ಬಂದುದ್ದು ೧೯೮೨ ಜೂನ್ ತಿಂಗಳಲ್ಲಿ. ಸ್ವಂತ ಕಟ್ಟಡವಿಲ್ಲದ, ಸ್ವಂತ ಗ್ರಂಥಾಲಯವಿಲ್ಲದ, ಸ್ವಂತದ ಅಧ್ಯಾಪಕವರ್ಗವೂ ಇಲ್ಲದ ಈ ಆವರಣ ಧಿಡೀರನೆ ಜನ್ಮ ತಳೆದದ್ದೇ ಒಂದು ವಿಸ್ಮಯ. ಸ್ನಾತಕೋತ್ತರ ಶಿಕ್ಷಣದ ಸೌಲಭ್ಯ ಇಲ್ಲಿಯ ವಿದ್ಯಾರ್ಥಿಗಳಿಗೆ, ಇಲ್ಲಿಯೇ ದೊರೆಯಬೇಕೆಂಬುದು ಇಲ್ಲಿಯ ಜನತೆಯ ಬಹುದಿನಗಳ ಬೇಡಿಕೆಯಾಗಿತ್ತೆಂಬುದು ನಿಜ. ಈ ಬೇಡಿಕೆಗೆ ಅನುಕೂಲವಾಗಿ ಪ್ರತಿ ಸ್ಪಂಧಿಸುವ ವಿಸ್ಮಯಕಾರಿಯಾಗಿ ಕಾರ್ಯಮಾಡಬಲ್ಲ ಶಕ್ತಿಯೊಂದು ಬೇಕಾಗಿತ್ತೆಂದು ತೋರುತ್ತದೆ. ಅಂಥ ವ್ಯಕ್ತಿತ್ವವುಳ್ಳ ಹಿಂದಿನ ಕುಲಪತಿಗಳಾದ ಡಾ. ಡಿ.ಎಂ. ನಂಜುಂಡಪ್ಪನವರ ಪ್ರಯತ್ನದ ಫಲವಾಗಿ ಹಲವು ಕೊರತೆಗಳ ಮಧ್ಯದಲ್ಲಿಯೂ ಈ ಆವರಣ ರೂಪುಗೊಂಡಿದ್ದನ್ನು ಮರೆಯುವಂತಿಲ್ಲ. ಬೆಳಗಾವಿಯ ಬೆಳಕಾಗಿರುವ ಕೆ.ಎಲ್.ಇ. ಮಹಾಸಂಸ್ಥೆ, ಅದರ ಮಹಾವಿದ್ಯಾಲಯಗಳಾದ ಲಿಂಗರಾಜ ಕಾಲೇಜು ಮತ್ತು ಆರ್.ಎಲ್.ಎಸ್. ಇನ್‌ಸ್ಟಿಟ್ಯೂಟಗಳ ಮಾಮರದ ತಂಪಾದ ನೆರಳಿನಲ್ಲಿ, ಆರ್.ಪಿ.ಡಿ. ಮತ್ತು ಗೋಗಟೆ ಕಾಲೇಜುಗಳ ಸದಾಶ್ರಯದಲ್ಲಿ ನಮ್ಮ ಈ ಆವರಣ ತನ್ನ ಕೈ, ಕಾಲು, ಕಣ್ಣುಗಳನ್ನು ಮೂಡಿಸಿಕೊಂಡು ಚಲನಶೀಲವಾಗಿದೆ. ಕನ್ನಡ, ಮರಾಠಿ, ಅರ್ಥಶಾಸ್ತ್ರ, ಗಣಿತ, ಭೂಗೋಳ, ವಿಜ್ಞಾನ, ವಾಣಿಜ್ಯ ವಿಜ್ಞಾನ ಮತ್ತು ಸಮಾಜಶಾಸ್ತ್ರ ಈ ವಿಷಯಗಳಲ್ಲೀಗ ಬೋಧನೆ ನಡೆಯುತ್ತಿದ್ದು ಸುಮಾರು ಎರಡುನೂರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ವರುಷ ಜರುಗಿದ ಸ್ನಾತಕೋತ್ತರ ಅಂತಿಮ ವರ್ಷದ ಪರೀಕ್ಷೆಯಲ್ಲಿ ಎಲ್ಲ ಆತಂಕಗಳನ್ನು ಎದುರುಸುತ್ತಲೂ ನಮ್ಮ ವಿದ್ಯಾರ್ಥಿಗಳು ಕರ್ನಾಟಕ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಎಲ್ಲ ಸೌಲಭ್ಯಗಳೊಂದಿಗೆ ಓದಿದ ವಿದ್ಯಾರ್ಥಿಗಳಿಗೆ ಸರಿಸಮನಾಗಿ, ಕೆಲವು ವಿಷಯಗಳಲ್ಲಿ ಅವರಿಗಿಂತ ಮಿಗಿಲಾಗಿಯೇ ಶ್ರೇಯಸ್ಸನ್ನು ಸಂಪಾದಿಸಿದ್ದಾರೆ. ಇಲ್ಲಿಯ ವಿದ್ಯಾರ್ಥಿಗಳ ಶಿಸ್ತು, ಸುಸಂಸ್ಕೃತ ವರ್ತನೆಗಳೂ ಒಂದು ಮಾದರಿಯನ್ನು ಹಾಕಿಕೊಡುವಂತಿದೆ. ಇದಕ್ಕೆಲ್ಲ ಸ್ಥಳೀಯ ಕಾಲೇಜುಗಳ ಅನುಭವಿಕ ಅಧ್ಯಾಪಕರ ಮಾರ್ಗದರ್ಶನ, ತಾತ್ಪೂರ್ತಿಕವೆಂದು ನೇಮಕಗೊಂಡ ಯುವ ಅಧ್ಯಾಪಕರ ಉತ್ಸಾಹಶೀಲ ದುಡಿಮೆ ಕಾರಣವಾಗಿದೆ.

ಪಾಠ- ಪ್ರವಚನಗಳ ಜೊತೆಗೆ ವಿಶೇಷೋಪಾನ್ಯಾಸಗಳನ್ನು ಏರ್ಪಡಿಸುವ, ತನ್ಮೂಲಿಕ ಜ್ಞಾನದ ಕ್ಷಿತಿಜವನ್ನು ವಿಸ್ತರಿಸುವ ಕಾರ್ಯವೂ ಬಹು ವ್ಯಾಪಕವಾಗಿ ಅಲ್ಲದಿದ್ದರೂ ಈ ಆವರಣದ ಸೌಕರ್ಯಗಳ ಹಾಗೂ ವ್ಯವಸ್ಥೆಯ ಪರಿಮಿತಿಯಲ್ಲಿ ನಡೆದಿದೆ. ಈ ಆವರಣ ಪ್ರಾರಂಭವಾದ ವರ್ಷದಲ್ಲಿ ಅಂದರೆ ೧೯೮-೨-೮೩ ರಲ್ಲಿ ಗುಜರಾತದ ಆನಂದ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕರಾದ ಪ್ರೊ. ಕೆ.ಡಿ. ಕುರ್ತಕೋಟಿಯವರು ಮೂರು ವಿಶೇಷೋಪನ್ಯಾಸಗಳನ್ನು ಇಲ್ಲಿ ನೀಡಿದರು, ಕಳೆದ ವರುಷ ಕನ್ನಡ ವಿಭಾಗದ ಡಾ. ಜಿ.ಎಸ್. ಕಾಪಸೆ ಅವರ ನಿರ್ದೇಶನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಹತ್ತುದಿನಗಳ ಕಾವ್ಯಕಮ್ಮಟ ಇಲ್ಲಿ ನೆರವೇರಿತು. ಡಾ. ಹಾ.ಮಾ. ನಾಯಕ, ಶ್ರೀ ಬಸವರಾಜ ಕಟ್ಟೀಮನಿ, ಚೆನ್ನವೀರ ಕಣವಿ, ಡಾ. ಎಂ.ಎಂ. ಕಲಬುರ್ಗಿ, ಡಾ. ಗಿರಡ್ಡಿ ಗೋವಿಂದರಾಜ ಮೊದಲಾದ ನಮ್ಮ ನಾಡಿನ ಉನ್ನತಮಟ್ಟದ ವಿದ್ವಾಂಸರು, ಕವಿಗಳು ಪ್ರತಿನಿತ್ಯ ಉಪನ್ಯಾಸಗಳನ್ನು ನೀಡಿದ್ದು, ಇನ್ನೂ ಹಸಿರಾಗಿಯೇ ಇದೆ. ಈ ವರ್ಷ ಇದೀಗ ನಡೆಯುತ್ತಿರುವ ಹನ್ನೆರಡನೆಯ ಜಾನಪದ ಸಮ್ಮೇಲನ ಈ ಆವರಣದ ಇತಿಹಾಸದಲ್ಲಿಯೇ ಒಂದು ಮಹತ್ವದ ದಾಖಲೆಯಾಗಿದೆ.

ಒಂದು ಬಗೆಯ ಅಸಹಾಯಕ ಸ್ಥಿತಿಯಲ್ಲಿಯೂ ಜ್ಞಾನಾರ್ಜನೆಯಲ್ಲಿ ಚೇತೋಹಾರಿಯಾಗಿ ಮುಂದುವರಿಯುತ್ತಿರುವ ಈ ಆವರಣ ವಯೋಮಾನದ ದೃಷ್ಟಿಯಿಂದ ಇನ್ನೂ ಎರಡು ವರುಷದ ಪುಟ್ಟ ಮಗು. ಮಾನ್ಯ ಕುಲಪತಿಗಳಾದ ಡಾ. ಎಸ್.ಜಿ. ದೇಸಾಯಿಯವರು ನಮ್ಮ ಆವರಣದ ಅಧ್ಯಾಪಕರನ್ನು, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ಜುಲೈ ತಿಂಗಳಲ್ಲಿ ಇಲ್ಲಿಗೆ ಬಂದಾಗ ನಾನು ಹೇಳಿದ ಮಾತನ್ನು ಮತ್ತೆ ನೆನಪಿಸಿಕೊಳ್ಳುವುದು ಅಪ್ರಸ್ತುತವೇನೂ ಆಗದು. ಡಾ. ಡಿ.ಎಂ. ನಂಜುಂಡಪ್ಪನವರು ಅಂಗವಿಕಲವಲ್ಲದ, ಅನಾರೋಗ್ಯದಿಂದ ಬಳಲದ ಆದರೂ ಹಲವು ಕೊರತೆಗಳನ್ನು ಹೊಂದಿದೆ, ಆ ದೃಷ್ಟಿಯಿಂದ ದಷ್ಟಪುಷ್ಟವಲ್ಲದ ಈ ಮಗುವನ್ನು ಡಾ. ದೇಸಾಯಿಯವರ ಉಡಿಯಲ್ಲಿ ಹಾಕಿಹೋದರು. ತಮಗೆಲ್ಲ ಗೊತ್ತಿರುವಂತೆ ಡಾ. ದೇಸಾಯಿಯವರು ಮಕ್ಕಳ ಆರೋಗ್ಯತಜ್ಞರು. ಅವರಿಂದ ಈ ಮಗು ಸರ್ವಾಂಗಸುಂದರವಾಗಿ ಬಲಸಂಪನ್ನವಾಗಿ ಬೆಳೆಯುವ ಭರವಸೆ ನಮಗೆಲ್ಲ ಇದೆ. ಈ ಆರು ತಿಂಗಳಲ್ಲಿ ಅವರು ಅಧ್ಯಾಪಕರ ನೇಮಕದಲ್ಲಿ, ಗ್ರಂಥಾಲಯದ ಅಭಿವೃದ್ಧಿಗೆ ಸಾಧ್ಯವಿದ್ದ ಎಲ್ಲ ಕ್ರಮಗಳನ್ನು ಕೈಕೊಂಡಿರುವರಲ್ಲದೆ, ಈ ಸಮ್ಮೇಲನ ಇಲ್ಲಿ ಜರುಗಬೇಕೆಂದು ನಾನೂ ಡಾ. ಕಲಬುರ್ಗಿಯವರೂ ಕೂಡಿ ಕೇಳಿಕೊಂಡಾಗ ತತ್‌ಕ್ಷಣವೇ ಸಮ್ಮತಿ ನೀಡಿದ್ದು ಅವರ ತ್ವರಿತವಾದ ಕ್ರಿಯಾಶೀಲತೆಗೆ ಒಂದು ಕುರುಹಾಗಿದೆ. ಸ್ವಾಭಾವಿಕವಾಗಿಯೇ ಹೊಸದಾಗಿರುವ ಒಂದು ಸಂಸ್ಥೆಯಲ್ಲಿ ಹಲವಾರು ಸಮಸ್ಯೆಗಳಿರುತ್ತವೆ. ಕ್ರಮೇಣವಾಗಿ ಬಿಡಬಹುದಾದ, ಬಿಡಿಸಿಕೊಳ್ಳಬಹುದಾದ ಸಮಸ್ಯೆಗಳನ್ನು ಕುರಿತು ಡಾ. ದೇಸಾಯಿಯವರು ಚಿತ್ತಸಮತೆಯಿಂದ ಆಲೋಚಿಸುತ್ತಿರುವುದು ಒಂದು ವಿಶೇಷವಾಗಿದೆ. ಅವರು ತಮ್ಮೆದುರಿಗೆ ಬಂದ ರೋಗಿಯನ್ನು ಡೈಗ್ನೋಸ್ ಮಾಡುವಂತೆ, ಸಮಸ್ಯೆಗಳನ್ನು ತಾಳ್ಮೆಯಿಂದ, ಸಹಾನುಭೂತಿಯಿಂದ ಪರಿಶೀಲಿಸುತ್ತಾರೆ. ತತ್‌ಕ್ಷಣವೇ ಸಾಧ್ಯವಿದ್ದ ಪರಿಹಾರವನ್ನು ಕಂಡುಹಿಡಿಯುತ್ತಾರೆ.  ನಿದಾನವಾಗಿ ಚಿಕಿತ್ಸೆಗೊಳಪಡಿಸಬೇಕಾದ ಸಂಗತಿಯಿದ್ದರೆ ಹಾಗೆ ಆ ದಿಶೆಯಲ್ಲಿ ಪ್ರಯತ್ನಶೀಲರಾಗುತ್ತಾರೆ. ಅಂತೂ ಅವರ ಚಿಕಿತ್ಸೆಯ ವಿಧಾನ ಈ ಸಂಸ್ಥೆ ಆರೋಗ್ಯಕರವಾಗಿ ಬೆಳೆಯುವುದರ ಸುಚನೆಯನ್ನು ನೀಡುತ್ತದೆ.

ಇದಿಷ್ಟು ಈ ಆವರಣಕ್ಕೆ ಸಂಬಂಧಿಸಿದ ವಿಷಯ. ಜಾನಪದ ಸಮ್ಮೇಲನ ಇಲ್ಲಿ ಜರುಗುತ್ತಿರುವುದು ಒಂದು ವಿಶಿಷ್ಟ ಕಾರ್ಯಕ್ರಮವಾದರೂ ಹಲವು ದೃಷ್ಟಿಗಳಿದ ಮಹತ್ವದ ಸಂಗತಿಯಾಗಿದೆ. ಕನ್ನಡದಲ್ಲಿ ಜಾನಪದ ಸಾಹಿತ್ಯದ ಸಮಾಲೋಚನೆ ಕಳಕಳಿಯಿಂದ ಪ್ರಾರಂಭವಾಗಿದ್ದು ೧೯೨೩—೨೫ರ ಅವಧಿಯಲ್ಲಿ, ಮಧುರಚಿನ್ನ ಮತ್ತು ಮಾಸ್ತಿಯವರು ಜಾನಪದ ವಿಷಯದಲ್ಲಿ ಸಮಾಲೋಚನೆ ಮಾಡಿದವರಲ್ಲಿ ಮೊದಲಿಗರು, ಅವರು ಅಂದು ತಮ್ಮ ನೂತನ ವಿಚಾರಗಳಿಂದ ಕನ್ನಡಿಗರ ಲಕ್ಷ್ಯವನ್ನು ಜಾನಪದ ಸಾಹಿತ್ಯದ ಕಡೆಗೆ ಹೊರಳಿಸಿದರು. ಈ ಕಾಲಮಾನವನ್ನು ಪರಿಗಣಿಸಿದರೆ ಜಾನಪದ ಸಾಹಿತ್ಯದ ಚಿಂತನೆಗೆ ಈಗ ೬೦ ವರ್ಷಗಳಾಗುತ್ತವೆ. ಅರವತ್ತು ವರುಷಗಳ ಕಾಲಮಾನ ಒಂದು ಸಂಸ್ಥೆಯ ಜೀವನದಲ್ಲಿ ವಜ್ರಮಹೋತ್ಸವಕ್ಕೆ ದಾರಿಮಾಡಿಕೊಡುತ್ತದೆ. ಜಾನಪದ ಸಾಹಿತ್ಯದ ಸಂಗ್ರಹದ ದೃಷ್ಟಿಯಿಂದಲೂ ಇಂದಿನದು ಮಹತ್ತ್ವದ ಸಂದರ್ಭವಾಗಿದೆ. ಹಲಸಂಗಿಯ ಗೆಳೆಯರು ಸಂಗ್ರಹಕಾರ್ಯದಲ್ಲಿ ಆದ್ಯರೆಂಬುದಕ್ಕೆ ಎರಡಿಲ್ಲ. ಅವರ  ಆ ಕಾರ್ಯ ಅದ್ವಿತೀಯವೂ ಆದರ್ಶಪ್ರಾಯವೂ ಆಗಿರುವುದನ್ನೂಕನ್ನಡ ವಿದ್ವಾಂಸರೆಲ್ಲ ಬಲ್ಲರು. ಹಲಸಂಗಿ ಗೆಳೆಯರ ಸಂಗ್ರಹಗಳಾದ, ಗರತಿಯ ಹಾಡು ಪ್ರಕಟವಾದದ್ದು ೧೯೩೧ ರಲ್ಲಿ. ’ಜೀವನ ಸಂಗೀತ’ ಬೆಳಕು ಕಂಡದ್ದು ೧೯೩೩ರಲ್ಲಿ;. ’ಮಲ್ಲಿಗೆ ದಂಡೆ’ ಮೂಡಿಬಂದದ್ದು ೧೯೨೫ ರಲ್ಲಿ, ಕೊನೆಯ ಸಂಗ್ರಹವಾದ ಕಾಪಸೆ ರೇವಪ್ಪನವರ ’ಮಲ್ಲಿಗೆ ದಂಡೆ’ಯನ್ನೇ ನಾವಿಂದು ಗಣನೆಗೆ ತೆಗೆದುಕೊಂಡರೆ, ಜನಪದ ಸಂಗ್ರಹ ಕಾರ್ಯಕ್ಕೀಗ ಸರಿಯಾಗಿ ೫೦ ವರ್ಷಗಳು. ಈ ಲೆಕ್ಕದಂತೆ ಇದು (೧೯೮೫) ಸುವರ್ಣ ಮಹೋತ್ಸವ ಆಚರಿಸುವ ವರ್ಷವಾಗುತ್ತದೆ. ಒಂದು ದೃಷ್ಟಿಯಿಂದ ವಜ್ರಮಹೋತ್ಸವ ಸಂದರ್ಭದಲ್ಲಿ, ಇನ್ನೊಂದು ದೃಷ್ಟಿಯಿಂದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ನೆರವೇರುತ್ತಲಿರುವ ಈ ಸಮ್ಮೇಲನಕ್ಕೆ ಸಾಂಕೇತಿಕ ಅರ್ಥವಿದೆಯೆಂದು ಭಾವಿಸಿದ್ದೇನೆ. ಅಷ್ಟಲ್ಲದೆ ಇದು ಕನ್ನಡ ಅಧ್ಯಯನಪೀಠದ ಹನ್ನೆರಡನೆಯ ಸಮ್ಮೇಲನವಾಗಿರುವುದೂ ಒಂದು ವಿಶೇಷ. ಹನ್ನೆರಡು ವರ್ಷಕ್ಕೆ ಒಂದು ಪಟ್ಟವೆನುತ್ತೇವೆ. ಯಾವುದೇ ಒಂದು ಮಹತ್ವದ ಸಾಧನೆಗೆ ಹನ್ನೆರಡು ವರ್ಷಗಳ ತಪಸ್ಸು ಬೇಕೆಂದು ಜ್ಞಾನಿಗಳು ಹೇಳುತ್ತಾರೆ. ಈ ದೃಷ್ಟಿಯಿಂದ ಈ ಸಮ್ಮೇಲನ ಅರ್ಥಪೂರ್ಣವೂ ಅಹುದು. ’ಆಕಾಶ ಜಾನಪದ’ ದಂತಹ ತೀರ ನವೀನವಾದ, ಕುತೂಹಲಕಾರಿಯಾದ ವಿಷಯವನ್ನು ಕುರಿತು ಆಲೋಚಿಸುವ ಈ ಸಮ್ಮೇಲನ ಹೊಸ ಕ್ಷಿತಿಜಗಳನ್ನು ತೆರೆದು ತೋರಿಸಬಲ್ಲುದೆಂದು ಭಾವಿಸಲಾಗಿದೆ.

ಪ್ರಸ್ತುತ ಸಮ್ಮೇಲನದ ಅಧ್ಯಕ್ಷತೆಯನ್ನು ಡಾ. ಆರ್.ಸಿ.ಹಿರೇಮಠ ಅವರು ವಹಿಸಿಕೊಳ್ಳಲು ದಯವಿಟ್ಟು ಒಪ್ಪಿಕೊಂಡಿರುವುದೂ ಕೂಡ ಉಲ್ಲೇಖನೀಯ ಸಂಗತಿಯಾಗಿದೆ. ವಾಸ್ತವವಾಗಿ ಡಾ. ಹಿರೇಮಠರು ಕರ್ನಾಟಕ ವಿಶ್ವವಿದ್ಯಾಲಯದ, ಕನ್ನಡ ಅಧ್ಯಯನ ಪೀಠದ ಶಿಲ್ಪಿಗಳು, ಸೃಷ್ಟಿಕರ್ತರು. ಈ ಸಾಹಿತ್ಯ ಸಮ್ಮೇಲನದ ಸೃಷ್ಟಿಕರ್ತರೂ ಕೂಡ ಅವರೇ. ಡಾ. ಆರ್.ಸಿ. ಹಿರೇಮಠರಿಗೂ ಈ ಸಮ್ಮೇಲನಕ್ಕೂ ಇರುವ ಅವಿನಾಭವ ಸಂಬಂಧ ಮದುರಚೆನ್ನರ ಪದ್ಯವೊಂದನ್ನು ನೆನಪಿಗೆ ತರುತ್ತದೆ.

ಈಶ ಕೃಪೆಯಿಂ ಪುಟ್ಟಿ ಮೊಗ್ಗದು
ಈಶ ಗರ್ಪಿತವಾಗಲು
ಈಶನೇತ್ರದ ಸೂರ್ಯಕಿರಣದ
ಬೆಳಕಿನಲಿ ತಾ ನರಳಿತು!

ಈ ಸಮ್ಮೇಲನ ಮೂಲತಃ ಡಾ. ಆರ್.ಸಿ. ಹಿರೇಮಠರ ಕೃಪೆಯಿಂದ ಪುಟ್ಟಿದ ಮೊಗ್ಗು. ಈ ಜ್ಞಾನನೇತ್ರದ ಸೂರ್ಯಕಿರಣದ ಬೆಳಕಿನಲ್ಲಿ ಅರಳಿ ಪ್ರಫುಲ್ಲಿತವಾಗುತ್ತಿರುತ್ತಿದೆ. ಇನ್ನೊಂದು ದೃಷ್ಟಿಯಿಂದಲೂ ಡಾ. ಆರ್.ಸಿ. ಹಿರೇಮಠ ಅಧ್ಯಕ್ಷತೆ ಗಮನಾರ್ಹವಾಗಿದೆ. ಡಾ. ಹಿರೇಮಠರು ಓದಿದ್ದು ಈ ಲಿಂಗರಾಜ ಕಾಲೇಜಿನಲ್ಲಿ, ಸ್ನಾತಕೋತ್ತರ ಪದವಿಯ ವ್ಯಾಸಂಗ ಮಾಡಿದ್ದೂ ಇಲ್ಲಿಯೇ. ಅಂದು ಇಲ್ಲಿ ವಿದ್ಯಾರ್ಥಿಯಗಿದ್ದ ಅವರು, ಇಂದು ಲಿಂಗರಾಜ ಕಾಲೇಜಿನ ಪರಿಸರದಲ್ಲಿ ಸ್ನಾತಕೋತ್ತರ ಅವರಣದ ಸಹಯೋಗದಲ್ಲಿ ಜರಗುತ್ತಿರುವ ಸಮ್ಮೇಲನದ ಅಧ್ಯಕ್ಷತೆ ವಹಿಸಿದ್ದುದ್ದು ವರ್ಧವರ್ಧನ ಚಾಯಿಲ್ಡ್ ಇಜ್ ಫಾದರ್ ಆಫ್ ಮ್ಯಾನ್ ಎಂಬ ಪಂಕ್ತಿಗೆ ಒಂದು ನಿದರ್ಶನವನ್ನು ನೀಡುವಂತಿದೆ. ಅಂದು ಡಾ. ಹಿರೇಮಠ ಅವರು ಚಾಯಿಲ್ಡ್ ಆಗಿದ್ದರು. ಈಗ ಫಾದರ್ ಅಷ್ಟೇ ಅಲ್ಲ ಗ್ರ‍್ಯಾಂಡ್‌ಫಾದರ್ ಕೂಡ ಆಗಿದ್ದಾರೆ. ಯಾಕೆಂದರೆ ಅವರು ಹಾಕಿಕೊಟ್ಟ ಕನ್ನಡದ ಸತ್ಪರಂಪರೆ ಅವರ ಶಿಷ್ಯರಿಂದ, ಪ್ರತಿಷ್ಠರಿಂದ ಮುಂದುವರೆದಿದೆ.

ಹೀಗೆ ಅನೇಕ ದೃಷ್ಟಿಯಿಂದ ಮಹತ್ತದ್ದಾದ ಈ ಸಮ್ಮೇಲನ ಬೆಂಗಳೂರು ಮಂಗಳೂರು, ಮೈಸೂರು, ಉಡುಪಿ, ಕಲಬುರ್ಗಿ, ಧಾರವಾಡ ಹೀಗೆ ಕರ್ನಾಟಕದ ವಿವಿಧ ಭಾಗಗಳಿಂದ ವಿದ್ವಾಂಸರನ್ನು, ಕಲಾಮೇಳಗಳನ್ನೂ ಬರಮಾಡಿಕೊಂಡು, ತನ್ನ ’ಅಖಿಲ ಕರ್ನಾಟಕ’ ಎಂಬ ವಿಶೇಷವನ್ನು ಸಾರ್ಥಕ ಮಾಡಿಕೊಂಡಿದೆ. ಈ ಎರಡು ದಿನಗಳ ವಿಶೇಷೋಪ ನ್ಯಾಸಗಳು ಮತ್ತು ರಂಗದರ್ಶನದ ಪ್ರದರ್ಶನಗಳು ಜನಪದ ಸಾಹಿತ್ಯಕ್ಕೆ ನವೀನ ಚೈತನ್ಯವನ್ನೂ, ಹೊಸತಿರುವನ್ನೂ ಕೊಡುವಲ್ಲಿ ಮಹತ್ವದ ಪಾತ್ರವಹಿಸುವವೆಂದು ಭಾವಿಸಲಾಗಿದೆ.

ಜನಪದ ಸಾಹಿತ್ಯ ಇಡೀ ಜನಾಂಗವನ್ನೂ ಪ್ರತಿನಿಧಿಸುವ ಸಾಹಿತ್ಯ. ಅದು ಎಲ್ಲ ಶಿಷ್ಟ ಸಾಹಿತ್ಯಗಳ ಜನನಿ. ಸಂಸ್ಕೃತಿ ಪರಂಪರೆಗಳನ್ನು ಜನಾಂಗದಿಂದ ಜನಾಂಗಕ್ಕೆ ಹಬ್ಬಿಸುವ, ಕಾಲಮಾನಕ್ಕೆ ತಕ್ಕಂತೆ ಪ್ರತಿಸ್ಪಂದಿಸುವ, ಪರಿವರ್ತನೆಗೊಳ್ಳುವ, ಪರಂಪರೆ ಪ್ರಗತಿಗಳಿಗೆ ಸೇತುವೆಯಾಗಿರುವ, ಜೀವನದ ಸಮಗ್ರ ಕ್ಷೇತ್ರವನ್ನು ತನ್ನ ತೆಕ್ಕೆಗೆ ಜಗ್ಗಿಸಿಕೊಳ್ಳುವ, ಭೂಮಿ-ಆಕಾಶಗಳನ್ನು ಒಂದು ಗೂಡಿಸುವ, ಕಲೆ-ವಿಜ್ಞಾನಗಳೆರಡನ್ನೂ ತನ್ನ ಪರಿಮಿತಿಯಲ್ಲಿ ಮೈಗೂಡಿಸಿಕೊಳ್ಳುವ ಈ ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಬೇಕಾದದ್ದು, ಸಂಶೋದನೆ ನಡೆಸಬೇಕಾದದ್ದು, ವಿಶ್ಲೇಷಣೆಗೆ ತೊಡಗಿಸಬೇಕಾದದ್ದು ಬೇಕಾದಷ್ಟಿದೆ. ಸಮಾಜಶಾಸ್ತ್ರ, ಮಾನವಿಕ ಶಾಸ್ತ್ರಗಳಂಥ ವಿಷಯಗಳಿಗೆ ಪೋಷಣೆ ನೀಡಬಲ್ಲ ಸಾಮಗ್ರಿಯೂ ಇಲ್ಲಿ ಸಾಕಷ್ಟಿದೆ. ನಮ್ಮ ಈ ಸಮ್ಮೇಲನಗಳು ಈ ನಿಟ್ಟಿನಲ್ಲಿ ಮಾಡಿದೆ. ಮಾಡುತ್ತಿರುವ ಕಾರ್ಯಗಳು ತುಂಬ ಮಹತ್ವದವೆಂದು ಬೇರೆ ಹೇಳಬೇಕಾಗಿಲ್ಲ. ಈ ಹಿಂದೆ ಕನ್ನಡೇತರ ವಿಷಯಗಳಲ್ಲಿ ಪರಿಣಿತರಾದವರನ್ನು ಬರಮಾಡಿಕೊಂಡಂತೆ ಈ ಸಮ್ಮೇಲನಕ್ಕೂ ಅಂಥ ತಜ್ಞರನ್ನು ಬರಮಾಡಿಕೊಳ್ಳಲಾಗಿದ್ದನ್ನು ತಾವು ಗಮನಿಸಬಹುದು. ಈ ಸಮ್ಮೇಲನದ ಸಂಘಟನೆಯಲ್ಲಿ ಕನ್ನಡದವರಾದ ಡಾ. ಎಸ್. ಜಿ. ಘಿವಾರಿ, ಭೌತವಿಜ್ಞಾನದವರಾದ ಪ್ರಿ. ಜಿ.ಡಿ. ಸೋಮಣ್ಣನವರು, ಅರ್ಥಶಾಸ್ತ್ರ-ವಾಣಿಜ್ಯ ಶಾಸ್ತ್ರಗಳ ಶ್ರೀ. ಡಿ.ಎ. ಹೆಗಡೆ, ಭೂಗಲ ವಿಜ್ಞಾನದ ಡಾ. ಟಿ.ಸಿ. ಶರ್ಮಾ ಅತ್ಯಂತ ಶ್ರದ್ಧೆಯಿಂದ ಸೌಹಾರ್ದತೆಯಿಂದ ಸಹಕರಿಸಿದ್ದೂ ಜಾನಪದ ಸಾಹಿತ್ಯದ ವಸ್ತು ವೈವಿಧ್ಯಕ್ಕೆ ಕುರುಹಾಗಿದೆ.

ಹೀಗೆ ಹಲವು ದೃಷ್ಟಿಗಳಿಂದ, ವೈಶಿಷ್ಟ್ಯಪೂರ್ಣವಾದ ಕನ್ನಡ ಅಧ್ಯಯನ ಪೀಠದ ತುರಾಯಿಯಂತಿರುವ, ಬೆಳಗಾವಿ ಆವರಣದ ಇತಿಹಾಸದಲ್ಲಿ ಮೈಲುಗಲ್ಲನ್ನು ನಿರ್ಮಿಸುವ ಈ ಸಮ್ಮೇಲನಕ್ಕೆ ಉದ್ಘಾಟಕರಾಗಿ ಆಗಮಿಸಿರುವ ಕುಲಪತಿಗಳಾದ ಮಾನ್ಯ ಡಾ. ಎಸ್. ಜಿ. ದೇಸಾಯಿಯವರನ್ನು, ಸಮ್ಮೇಲನ ನಿಯೋಜಿತ ಅಧ್ಯಕ್ಷರಾಗಿ ಬರಮಾಡಿರುವ ಪೂಜ್ಯ ಗುರುಗಳಾದ ಡಾ. ಆರ್.ಸಿ. ಹಿರೇಮಠ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತ ಬಯಸುತ್ತೇನೆ. ಹಾಗೆಯೇ ’ಆಕಾಶ ಜಾನಪದ’ ಕುರಿತು ವಿಶೇಷ ಉಪನ್ಯಾಸ ನೀಡಲುಬಂದ ಎಲ್ಲ ವಿದ್ವಾಂಸರನ್ನೂ, ಇಲ್ಲಿ ನೆರೆದ ಎಲ್ಲ ಹಿರಿಯರನ್ನೂ, ಸಹೃದಯರನ್ನೂ, ಅಕ್ಕ-ತಾಯಂದಿರನ್ನೂ, ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನೂ ಆತ್ಮೀಯತೆಯಿಂದ ಸ್ವಾಗತಿಸುತ್ತೇನೆ.