ಕರ್ನಾಟಕ ವಿಶ್ವವಿದ್ಯಾಲಯದ ಹೃದಯವಾದ ಕನ್ನಡ ಅಧ್ಯಯನಪೀಠದಲ್ಲಿ ನಡೆಯುತ್ತಿರುವ ಹದಿನಾರನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾದ ಹಾಗೂ ಜಾನಪದ ತಜ್ಞರಾದ ಡಾ. ಚಂದ್ರಶೇಖರ ಕಂಬಾರ ಅವರೇ, ಉದ್ಘಾಟಕರಾದ ಸುಪ್ರಸಿದ್ಧ ಜಾನಪದ ವಿದ್ವಾಂಸರಾದ, ಡಾ. ಜೀ.ಶಂ. ಪರಮಶಿವಯ್ಯನವರೇ, ಆಮಂತ್ರಿತ ಜಾನಪದ ವಿದ್ವಾಂಸರೇ ಹಾಗೂ ಜಾನಪದ ಅಭಿಮಾನಿಗಳೇ-

“ಅಖಿಲ ಕರ್ನಾಟಕ ಜಾನಪದ ಸಮ್ಮೇಳನ” ಪ್ರಾರಂಭವಾದದ್ದು ೧೯೭೩ರಲ್ಲಿ. ಆ ಮೇಲೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಿಲ್ಲದೆ ನಡೆದು ಬಂದ ಈ ಸಮ್ಮೇಳನ ಈಗ ಹದಿನಾರನೆಯ ಹೊಸ್ತಿಲನ್ನು ದಾಟುತ್ತಲಿದೆ. ವ್ಯಷ್ಟಿ ಪ್ರಜ್ಞೆಯ ಕೂಸಾದ ಶಿಷ್ಟ “ಸಾಹಿತ್ಯ ಸಮ್ಮೇಳನಕ್ಕೆ” ಸಮಾನವಾಗಿ ನಮ್ಮ ನಾಡಿನಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆಯುವ ಸಮಷ್ಟಿ ಪ್ರಜ್ಞೆಯ ಕೂಸಾದ ರಾಜ್ಯಮಟ್ಟದ ಏಕೈಕ ಜಾನಪದ ಸಮ್ಮೇಳನವಿದು. ಕನ್ನಡ ನಾಡಿನ ವಿವಿಧ ಪ್ರಾದೇಶಿಕ ಜನಪದಗಳ ವಿದ್ವಾಮಸರು, ಜನಪದ ಕಲಾವಿದರು ಇದರಲ್ಲಿ ಭಾಗವಹಿಸುತ್ತ ಬಂದುದು ಕನ್ನಡ ಅಧ್ಯಯನಪೀಠದ ಸಮಗ್ರ ದೃಷ್ಟಿಗೆ ದ್ಯೋತಕವಾಗಿದೆ.

ಈ ಸಮ್ಮೇಳನಗಳಲ್ಲಿ ಜಾನಪದ ಅಧ್ಯಯನಕ್ಕೆ ಅಗತ್ಯವಾದ ವಿಷಯಗಳನ್ನು ಆರಿಸಿ ಅವುಗಳನ್ನು ಕುರಿತು ಜಾನಪದ ವಿದ್ವಾಂಸರಿಂದ ಆಳವಾದ ಅಭ್ಯಾಸ ಮಾಡಲಾಗುತ್ತಿದೆ. ಈಗಾಗಲೇ ಜನಪದ ಸಾಹಿತ್ಯ, ಕಥೆ, ಬಯಲಾಟ-ಲಾವಣಿ, ಜಾನಪದ ವಾದ್ಯ ಸಾಹಿತ್ಯ, ಭಜನೆ-ಗೀಗೀ ಸಂಪ್ರದಾಯ ಸಾಹಿತ್ಯ, ಜನಪದ ವೃತ್ತಿಕಾರರು, ಆಯಗಾರರು, ಕರ್ನಾಟಕದ ಸ್ತ್ರೀ ಗ್ರಾಮದೇವತೆಗಳು, ಕರ್ನಾಟಕದ ಪುರುಷ ಗ್ರಾಮದೇವತೆಗಳು, ಜಾನಪದ ಹಬ್ಬಗಳು, ಏಳುಕೊಳ್ಳದ ಎಲ್ಲಮ್ಮ, ಆಕಾಶ ಜಾನಪದ, ಮೈಲಾರಲಿಂಗ, ಜನಪದ ಕುಣಿತ-ವಾದ್ಯ, ಸಂಗೀತ ಹಾಗೂ ಕಳೆದ ವರ್ಷ ಪುರಾಣ-ಐತಿಹ್ಯ-ದಂತಕತೆ-ಇವುಗಳ ಅಧ್ಯಯನ ನಡೆದುಹೋಗಿದೆ. ಈ ಸಲ ತೊಗಲು ಗೊಂಬೆಯಾಟ ಎಂಬ ವಿಷಯವನ್ನು ವಿಶೇಷ ಅಧ್ಯಯನಕ್ಕಾಗಿ ಆರಿಸಿದ್ದೇನೆ.

ಸಮ್ಮೇಳನದಲ್ಲಿ ಮಂಡಿಸಲಾದ ಈ ಸಂಪ್ರಬಂಧಗಳನ್ನು “ಜಾನಪದ ಸಾಹಿತ್ಯದರ್ಶನ’ಎಂಬ ಹೆಸರಿನಲ್ಲಿ ವಿಶ್ವವಿದ್ಯಾಲಯದ ಪ್ರಸಾರಾಂಗವು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದೆ. ಇವು ಜಾನಪದ ವೈಜ್ಞಾನಿಕ ಅಧ್ಯಯನಕ್ಕೆ ಅಧಿಕೃತ ಆಕರಗ್ರಂಥಗಳಾಗುತ್ತವೆ ಎಂಬುದು ನಿರ್ವಿವಾದ.

ಡಾ.ಶಿವರಾಮ ಕಾರಂತ ಅವರ ಕ್ಯಾರಿಸ್ಮಾಟಿಕ್ ಅಧ್ಯಕ್ಷತೆಯಲ್ಲಿ ಆರಂಭವಾದ ಈ ಸಮ್ಮೇಳನಕ್ಕೆ ಮುಂದಿನ ವರ್ಷಗಳಲ್ಲಿ ಕ್ರಮವಾಗಿ ಡಾ. ಜಯದೇವಿತಾಯಿ ಲಿಗಾಡೆ. ಡಾ. ದೇ. ಜವರೇಗೌಡ. ಗೋರೂರ ರಾಮಸ್ವಾಮಿ ಅಯ್ಯಂಗಾರ್, ಜೋಳದರಾಶಿ ದೊಡ್ಡನಗೌಡರು, ಸಿಂಪಿ ಲಿಂಗಣ್ಣ, ಡಾ.ಎಚ್. ಎಲ್. ನಾಗೇಗೌಡ, ಡಾ.ಎಲ್. ಆರ್.ಹೆಗಡೆ, ಡಾ.ಎಂ. ಎಸ್. ಸುಂಕಾಪುರ,ಡಾ. ಬಿ.ಬಿ.ಹೆಂಡಿ, ಡಾ.ಸಿ. ಪಾರ್ವತಮ್ಮ, ಡಾ. ಆರ್. ಸಿ. ಹಿರೇಮಠ, ಡಾ. ಜೀ.ಶಂ. ಪರಮಶಿವಯ್ಯ, ಡಾ. ಹಾ. ಮಾ. ನಾಯಕ, ಶ್ರೀ ಎಸ್.ಕೆ. ಕರೀಂಖಾನ ಇವರು ಅಧ್ಯಕ್ಷತೆ ವಹಿಸಿ ಜಾನಪದದ ವಿವಿಧ ಮುಖಗಳ ತಲಸ್ಪರ್ಶಿ ಅಧ್ಯಯನಕ್ಕೆ ಮಾರ್ಗದರ್ಶನ ನೀಡಿದರು. ಈ ಹಿಂದಿನ ಸಮ್ಮೇಳನಗಳು ಆರಂಭದ ನಾಲ್ಕುವರ್ಷ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿಯೇ ನಡೆದು ಮುಂದೆ ಗುಲಬರ್ಗಾ, ಇಳಕಲ್, ಗದಗ, ಅಂಕೋಲಾ, ಬನಹಟ್ಟಿ, ಲಕ್ಷ್ಮೇಶ್ವರ, ಸವದತ್ತಿ, ಬೆಳಗಾಂವ, ಕನ್ನಡ ಅಧ್ಯಯನಪೀಠ, ಧಾರವಾಡ, ದಾವಣಗೆರೆ, ಹೊನ್ನಾವರ ಈ ಪ್ರದೇಶಗಳಲ್ಲಿ ನಡೆದು ಈಗ ಪ್ರಶಾಂತವಾದ ಛೋಟಾ ಮಹಾಬಳೇಶ್ವರದ ವಾತಾವರಣದಲ್ಲಿ ನೆಲೆನಿಂತು ಕನ್ನಡ, ಭಾಷಾವಿಜ್ಞಾನ, ಜನಪದ ಸಾಹಿತ್ಯ ಮುಂತಾದ ವಿಷಯಗಳ ಅಧ್ಯಯನದಲ್ಲಿ ತೊಡಗಿರುವ, ಕನ್ನಡಿಗರ ಹೆಮ್ಮೆಯ ಸಂಸ್ಥೆಯಾದ ಕನ್ನಡ ಅಧ್ಯಯನಪೀಠದಲ್ಲಿ ಈ ೧೬ನೆಯ ಸಮ್ಮೇಳನ ನಡೆಯುವುದು ಅತ್ಯಂತ ಅಭಿಮಾನದ ಸಂಗತಿಯಾಗಿದೆ.

ಕನ್ನಡ ಅಧ್ಯಯನಪೀಠದ ಬೀಜ ವಿಭಾಗರೂಪದಲ್ಲಿ ಬಿತ್ತಿದವರು ಡಾ.ತೀನಂಶ್ರೀಯವರು, ಅದನ್ನು ಬೆಳೆಯಿಸಿ ಪೋಷಿಸಿದವರು ಡಾ. ಆರ್. ಸಿ.ಯವರು, ಅದರ ಫಲಪುಷ್ಪಗಳ ಅನುಭವವನ್ನು ಸಮಾಜಕ್ಕೆ ನೀಡಿದವರು ಡಾ. ಎಂ.ಎಸ್. ಸುಂಕಾಪುರ, ಡಾ.ಎಸ್.ಎಂ. ವೃಷಭೇಂದ್ರಸ್ವಾಮಿ, ಡಾ.ಎಂ. ಬಿ.ಕೊಟ್ರಶೆಟ್ಟಿ ಹಾಗೂ ಡಾ. ಎಂ. ಎಂ. ಕಲಬುರ್ಗಿಯವರು, ಈಗ ಆ ಜವಾಬ್ದಾರಿಯನ್ನು ನನ್ನ ಸಹೋದ್ಯೋಗಿಗಳ ಸಹಕಾರದಿಂದ ನಾನು ನಿರ್ವಹಿಸುತ್ತಿದ್ದೇನೆ. ಈ ಸಮ್ಮೇಳನದ ಕಾರ‍್ಯಾಧ್ಯಕ್ಷರಾದ ಡಾ. ಎಸ್. ಜಿ. ಇಮ್ರಾಪುರರೊಡನೆ ಹಾಗೂ ಕಾರ‍್ಯದರ್ಶಿಗಳಾದ ಶ್ರೀ. ಎಸ್.ಎಸ್. ಭದ್ರಾಪೂರ ಅವರೊಡನೆ ಪ್ರಸ್ತುತ ಸಮ್ಮೇಳನದ ಜವಾಬ್ದಾರಿ ನನಗೆ ಬಹು ಹಗುರವೆನಿಸಿದೆ.

ಪ್ರಸ್ತುತ ೧೬ನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನಕ್ಕೆ ಸವಾಧ್ಯಕ್ಷರಾಗಿ ಜಾನಪದ ತಜ್ಞರೂ, ಕವಿಗಳೂ, ನಾಟಕಕಾರರೂ, ವಿದ್ವಾಂಸರೂ ಆದ ಡಾ. ಚಂದ್ರಶೇಖರ ಕಂಬಾರ ಅವರು ಬಂದಿದ್ದಾರೆ. ಉದ್ಘಾಟಕರಾಗಿ ಜಾನಪದ ಅಧ್ವೈರ್ಯಗಳೂ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರೂ ಆಗಿರುವ ಡಾ. ಜೀ.ಶಂ. ಪರಮಶಿವಯ್ಯನವರು ಆಗಮಿಸಿದ್ದಾರೆ. ಕರ್ನಾಟಕದ ವಿವಿಧ ದಿಕ್ಕುಗಳಿಂದ ಜಾನಪದ ವಿದ್ವಾಂಸರು ತಮ್ಮ ಅಧ್ಯಯನದ ಅನುಭವಗಳನ್ನು ಮಂಡಿಸಲು ನಮ್ಮ ಆಮಂತ್ರಣವನ್ನು ಮನ್ನಿಸಿ ಬಂದಿದ್ದಾರೆ. ಜಾನಪದ ಕಲಾಕಾರರೂ ಬಂದಿದ್ದಾರೆ. ಅಷ್ಟೇ ಅಲ್ಲದೇ ಸಮ್ಮೇಳನದ ಇತರ ಸಮಾರಂಭದಲ್ಲಿ ಅಧ್ಯಕ್ಷರಾಗಿ ಭಾಗವಹಿಸಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರೂ, ಸಮಾಜ ವಿಜ್ಞಾನ ವಿದ್ವಾಂಸರೂ. ಆದ ಡಾ. ಅರ್ಥರ್ ಪುನೀತ ಅವರೂ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವ ಮಾನವ ವಿಜ್ಞಾನ ವಿದ್ವಾಂಸರೂ, ಕರ್ನಾಟಕ ವಿಶ್ವವಿದ್ಯಾಲಯದ ಮಾನವ ವಿಜ್ಞಾನ ವಿಭಾಗದ ಅಧ್ಯಕ್ಷರೂ ಆದ ಡಾ. ಕೆ. ಜಿ. ಗುರುಮೂರ್ತಿ ಅವರೂ ಆಗಮಿಸಿದ್ದಾರೆ. ಇಂಥ ಮಹತ್ವದ ಈ ಸಮ್ಮೇಳನಕ್ಕೆ ತಮ್ಮೆಲ್ಲರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಇಲ್ಲಿ ನೆರೆದ ಸಮಸ್ತ ಜಾನಪದ ಅಭಿಮಾನಿಗಳಿಗೆ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನಪೀಠದ ಅಧ್ಯಾಪಕರುಗಳ ವಿದ್ಯಾರ್ಥಿಗಳ ಹಾಗೂ ಇತರ ಸದಸ್ಯರ ವತಿಯಿಂದ ಹಾರ್ದಿಕ, ಸುಸ್ವಾಗತವನ್ನು ಬಯಸಿ ವಿರಮಿಸುತ್ತೇನೆ. ನಮಸ್ಕಾರ.

* * *