ನಾಡಿನುದ್ದಕ್ಕೂ ಹಾರುವ ಧ್ವಜದಡಿ
ತೆರೆದಿದೆ ಇತಿಹಾಸದ ಹಾದಿ
ಹಳೆಯ ನೆನಪುಗಳು ಹೊಸ ಭರವಸೆಗಳು
ನೆರಳು ತೂಗುತಿವೆ ಸಾಲಾಗಿ.

ಹಾಲೂಡುವ ಹೊಳೆ, ತೆನೆಯೆತ್ತಿದ ಬೆಳೆ
ಹಸಿರು ನಗುವ ಹೊಲ-ಗದ್ದೆಗಳು.
ನೇಗಿಲ ಸ್ಪರ್ಶಕೆ ಎದೆಯನು ತೆರೆಯದೆ
ಸೊರಗಿದ ಬಂಜರು ಭೂಮಿಗಳು.

ದುಡಿಯುವ ಜನಗಳ ಮೈಯ್ಯ ಬೆವರಿನಲಿ
ಬೆಳೆಯುವ ನಗರಾರಣ್ಯಗಳು
ಪ್ರಗತಿಯ ಹೆಸರೊಳು ಹಗಲೂ-ಇರುಳು
ಚಲಿಸುವ ಸಾವಿರ ಚಕ್ರಗಳು.

ಎಷ್ಟು ದುಡಿದರೂ ಏನು ಪಡೆದರೂ
ಬೆನ್ನಿಗಂಟಿರುವ ಹೊಟ್ಟೆಗಳು
ಭಾರಿ ಮಹಲುಗಳ ಚರಂಡಿಯಂಚಿಗೆ
ತತ್ತರಿಸುವ ಕೊಳೆಗೇರಿಗಳು.

ಹೆಜ್ಜೆ-ಹೆಜ್ಜೆಗೂ ಶಾಂತಿಯ ಕದಡುವ
ಮತ-ಮೌಢ್ಯದ ಬರಿ ತರಲೆಗಳು
ಕುರ್ಚಿಗಳಿಗೆ ಕಚ್ಚಾಡುವ ಬಣಗಳ
ಕೆಸರಿನ ಓಕುಳಿಯಾಟಗಳು.

ಜನಗಣಮನ ಅಧಿನಾಯಕ ಚಕ್ರದ
ಕೀಲನು ಕಳಚುವ ತಂತ್ರಗಳು
ಹಿಗ್ಗಾಮುಗ್ಗಾ ಜಗ್ಗುತ ಎಳೆಯುವ
ಹತೋಟಿ ತಪ್ಪಿದ ಕುದುರೆಗಳು.