ಇಂದಿನ ಜನತಂತ್ರಾತ್ಮಕ ವ್ಯವಸ್ಥೆಯಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಪೂರ್ವದ ಕೊನೆಯ ಗ್ರಾಮ ಹಲಗಲಿ ಅಂದು ಆಳರಸರ ಕಾಲದಲ್ಲಿ ಮುಧೋಳದ ಘೋರ್ಪಡೆ ಸಂಸ್ಥಾನಿಕರ ಅಧೀನಕ್ಕೊಳಪಟ್ಟಿತ್ತು. ಇಂದಿನ ಸಂದರ್ಭದಲ್ಲಿ ಗ್ರಾಮ ಪಂಚಾಯತ್, ಮಂಡಲ ಪಂಚಾಯತ್, ಮತ್ತೆ ಗ್ರಾಮ ಪಂಚಾಯತ್ ಹೀಗೆ ಹಲವು ಮಜಲುಗಳನ್ನು ದಾಟುತ್ತಾ ಬಂದು, ಆಧುನಿಕತೆಗೆ ತನ್ನನ್ನು ಸಂಪೂರ್ಣ ಒಡ್ಡಿಕೊಂಡಿದ್ದರೂ ಇಂದಿಗೂ ಕೂಡಾ ಅದು ಪುಟ್ಟ ಗ್ರಾಮವೇ ಆಗಿದೆ.

ಸ್ವಾತಂತ್ರ್ಯಾನಂತರದ ಇಷ್ಟು ದಿನಗಳ ನಂತರವೂ ಈ ಗ್ರಾಮ ಇಷ್ಟೊಂದು ಪುಟ್ಟ ಗ್ರಾಮವಾಗಿರಬೇಕಾದರೆ ಸ್ವಾತಂತ್ರ್ಯ ಪೂರ್ವದಲ್ಲಿ, ನೂರು ವರ್ಷಗಳ ಆಚೆ ಅಂದರೆ ಇಂದಿಗೆ ೧೫೩ ವರ್ಷಗಳ ಹಿಂದೆ (೧೮೫೭ರ ಸಂದರ್ಭದಲ್ಲಿ) ಹೇಗಿರಬಹುದೆಂದು ಯೋಚಿಸುವುದೇ ಆಶ್ಚರ್ಯಕರ ಸಂಗತಿ.

ಗ್ರಾಮ ಪುಟ್ಟದಿದ್ದರೇನಾಯಿತು. ಅಂದಿನ ಆಳರಸರು ತಂದ ಕರಾಳ ಶಾಸನದ ವಿರುದ್ಧ ಫೂತ್ಕರಿಸಿ, ಪ್ರತಿಭಟಿಸಿ “ನಿಮ್ಮ ಕರಾಳ ಶಾಸನವನ್ನು ನಾವು ಎಂದಿಗೂ ಒಪ್ಪುವುದಿಲ್ಲ”ವೆಂದೂ ಅಬ್ಬರಿಸಿ, ಆಳರಸರಿಗೆ ತಮ್ಮ ಕೈಲಾದಷ್ಟೂ ಏಟುಕೊಟ್ಟು ಅವರನ್ನು ಹಣ್ಣುಗಾಯಿ, ನೀರುಗಾಯಿ ಮಾಡಿ ತಮ್ಮ ಗಂಡಸುತನ ಪ್ರದರ್ಶಿಸಿದವರು ಈ ಪುಟ್ಟ ಗ್ರಾಮದ ಬೇಡ ಜನಾಂಗದವರು.

ಆಳರಸರು ಅವರನ್ನು ಬಂಧಿಸಿರಬಹುದು. ಗುಂಡಿಟ್ಟು ಕೊಂದಿರಬಹುದು. ಗಲ್ಲಿಗೇರಿಸಿರಬಹುದು. ಆದರೆ ಅಂದು ಹಲಗಲಿ ಬೇಡರಪಡೆ ಆಂಗ್ಲರ ವಿರುದ್ಧ ಸಿಡಿಸಿದ ಕಿಡಿ ನಂದದೇ ದೇಶಾದ್ಯಂತ ದಾವಾನಲವಾಗಿ ಉರಿದು ಬ್ರಿಟಿಷ ಸಾಮ್ರಾಜ್ಯವನ್ನೇ ಬೂದಿ ಮಾಡಿದ್ದು ಸುಳ್ಳೇನಲ್ಲ. ಅಂದು ಅವರು ಹೊತ್ತಿಸಿದ ಸ್ವಾತಂತ್ರ್ಯದ ಸಣ್ಣ ಹಣತೆ ಇಂದು ನಂದಾದೀಪವಾಗಿ ನಮಗೆ ದಾರಿ ತೋರುತ್ತಾ ಕರೆದೊಯ್ಯುತ್ತಿದೆ. ಆ ಪುಟ್ಟ ಹಣತೆಗೆ ಎಣ್ಣೆ, ಬತ್ತಿಯಾಗಿ ಜೀವತೆತ್ತವರು, ನೆತ್ತರು ಹರಿಸಿದವರ ಸಾಲಿನಲ್ಲಿ ಅನಕ್ಷರಸ್ಥರಾದ, ಯಾರ ಬೆನ್ನಾಸರೆಯೂ ಇಲ್ಲದ ಹಲಗಲಿ ಬೇಡರು ಮುಂಚೂಣಿಯಲ್ಲಿ ನಿಲ್ಲುತ್ತಾರೆ.

ಹೀಗಾಗಿ ಭಾರತೀಯ ಸ್ವಾತಂತ್ರ್ಯದ ಇತಿಹಾಸದಲ್ಲಿ ‘ಹಲಗಲಿ’ ಹಾಗೂ ‘ಹಲಗಲಿ ಬೇಡರು’ ಎಂಬ ಶಬ್ದಗಳ ತಮ್ಮದೇ ಆದ ಹೆಜ್ಜೆಗುರುತುಗಳನ್ನು ಮೂಡಿಸುತ್ತವೆ. ಇತಿಹಾಸದ ಪುಟಗಳಲ್ಲಿ ಒಂದಿಷ್ಟು ಸಾಲುಗಳನ್ನು ದಾಖಲಿಸುತ್ತವೆ. ಚಿರಸ್ಥಾಯಿಯಾಗಿ ನೆಲೆಸುತ್ತವೆ. ಬಾನಂಗಳದಲ್ಲಿ ಸ್ವಚ್ಛಂದವಾಗಿ ಇಂದು ಹಾರಾಡುತ್ತಿರುವ ನಮ್ಮ ಜನತಂತ್ರಾತ್ಮಕ ವ್ಯವಸ್ಥೆಯ ಪ್ರತೀಕವಾಗಿರುವ ತ್ರಿವರ್ಣಧ್ವಜದಲ್ಲಿ ಹಲಗಲಿಯದು ಒಂದಿಷ್ಟು ಪಾಲಿದೆ ಎಂದು ನೆನಪಿಸುತ್ತವೆ. ಹಾಗೆ ಹೇಳಿಕೊಳ್ಳುವದು, ಅಂಥ ಛಾತಿಯುಳ್ಳ ಗಂಡಸರನ್ನು ನೆನಪಿಸಿಕೊಳ್ಳುವುದೇ ಭಾರತೀಯರಿಗೆ ಅಭಿಮಾನದ ದ್ಯೋತಕ, ಹೆಮ್ಮೆಯ ಸಂಗತಿ.

ಹಲಗಲಿ ಗ್ರಾಮ

ಈ ಹಲಗಲಿ ಗ್ರಾಮಕ್ಕೆ ‘ಹಲಗಲಿ’ ಎಂದು ಹೆಸರು ಹೇಗೆ ಬಂತೆಂಬುದು ನಿರ್ದಿಷ್ಟವಾಗಿ ಮಾಹಿತಿಗಳು ದೊರೆಯುತ್ತಿಲ್ಲ. ಒಂದಿಷ್ಟು ಜನ ಹೇಳುವಂತೆ ಹಲವು ಕಲಿಗಳ ನಾಡು ಹಲಗಲಿಯಾಯಿತು. ಇನ್ನಷ್ಟು ಜನ ವಿದ್ವಾಂಸರು ಹಲಗಲಿ ಬಂಡಾಯವನ್ನೇ ದೃಷ್ಟಿಕೋನದಲ್ಲಿಟ್ಟುಕೊಂಡು ‘ಹಲ್ಲಾಗಲ್ಲಿ’ಯೇ ಇಂದಿನ ಹಲಗಲಿ ಎಂದು ಅಭಿಪ್ರಾಯಪಡುತ್ತಾರೆ. ಇವು ತೀರ ಇತ್ತೀಚಿನ ನಿಷ್ಪತ್ತಿಗಳೆಂಬುದು ಮತ್ತಷ್ಟು ಜನ ವಿದ್ವಾಂಸರ ವಾದ.

ಖ್ಯಾತ ಸಂಶೋಧಕ ಎಂ.ಎಂ. ಕಲಬುರ್ಗಿಯವರು ಈ ಗ್ರಾಮನಾಮ ನಿಷ್ಪತ್ತಿಯನ್ನು ವ್ಯಕ್ತಿನಾಮದಲ್ಲಿ ಹುಡುಕಬೇಕಾಗುತ್ತದೆ ಎಂದು ಅಭಿಪ್ರಾಯಪಡುತ್ತಾ ‘ಹಲಗ’ ಎಂಬ ವ್ಯಕ್ತಿಯ ಹೆಸರಿನಲ್ಲಿ ಈ ಗ್ರಾಮ ಯಾವದೋ ಒಂದು ಕಾಲಕ್ಕೆ ರೂಪತಾಳಿರಬಹುದೆಂದು ಹೇಳುತ್ತಾರೆ.

ಇದಕ್ಕೆ ಇಂಬುಗೊಡುವಂತೆ ಬೀಳಗಿ ತಾಲೂಕಿನಲ್ಲಿ ತೋಳಮಟ್ಟಿ, ತುಮ್ಮರಮಟ್ಟಿ, ಸುನಗ, ಅನಗವಾಡಿ, ಮನ್ನಿಕೇರಿ, ಜಾನಮಟ್ಟಿ ಎಂಬ ಹೆಸರಿನ ಗ್ರಾಮಗಳಿವೆ. ಆ ಗ್ರಾಮಸ್ಥರು ಇಂದಿಗೂ ಹೇಳುವುದು ತೋಳ, ತುಮರ, ಸುನಗ, ಅನಗ, ಜಿನಗ, ಮಣಗ ಎಂಬ ದೈತ್ಯರುಗಳು ಈ ಗ್ರಾಮಗಳನ್ನು ಹುಟ್ಟು ಹಾಕಿದ್ದರಿಂದ ಆ ದೈತ್ಯರ ಹೆಸರುಗಳೇ ಈ ಗ್ರಾಮಗಳಾಗಿ (ವ್ಯಕ್ತಿ ನಾಮಗಳೇ ಗ್ರಾಮನಾಮಗಳಾಗಿ) ಬಂದಿರುತ್ತವೆಂದು ಹೇಳುತ್ತಾರೆ. ಆ ದೈತ್ಯರ ಶಾಪವೇ ಈ ಗ್ರಾಮಗಳಿಗೆ ಕುಡಿಯುವ ನೀರಿನ ಅಭಾವ ಉಂಟುಮಾಡಿತ್ತೆಂದು ಹೇಳುತ್ತಾರೆ. ಶತಮಾನಗಳಿಂದ ಸತ್ಯವಾಗಿದ್ದ ಈ ನೀರಿನ ಅರಬು (Scarcity of water) ಕಳೆದ ದಶಕದವರೆಗೂ ಸಾಗಿ ಬಂದಿತ್ತು. ಹಾಗಾಗಿ ನೀರಿನ ತೊಂದರೆ ಅನುಭವಿಸಿದ್ದ ಹಲಗಲಿ ಗ್ರಾಮವೂ ಕೂಡಾ ಮೇಲೆ ವಿವರಿಸಿದ ಆರು ಜನ ದೈತ್ಯರೊಡನೆ ಏಳನೆಯವನಾದ ‘ಹಲಗ’ ನೆಂಬ ದೈತ್ಯನು ಈ ಹಲಗಲಿಯನ್ನು ಸಂಸ್ಥಾಪಿಸಿರಬೇಕೆಂದು ನಂಬಬೇಕಾಗುತ್ತದೆ. ಹಾಗಾಗಿ ಹಲಗನೆಂಬ ದೈತ್ಯನ ಕಾರಣಕ್ಕಾಗಿಯೇ ‘ಹಲಗಲಿ’ ಎಂಬುದು ಯಾವುದೋ ಒಂದು ಕಾಲಕ್ಕೆ ರೂಪತಾಳಿರಬೇಕೆಂದು ಊಹಿಸಬೇಕಾಗುತ್ತದೆ.

ಈ ವ್ಯಕ್ತಿನಾಮವೇ ಗ್ರಾಮನಾಮವಾಗಿ ರೂಪತಾಳಿರುವುದಕ್ಕೆ ಚನ್ನಬಸಪ್ಪ ಎನ್ನುವವರು ಬೇರೊಂದು ವಿವರಣೆ ನೀಡುತ್ತಾರೆ. ಹಲಗಲಿ ಬಂಡಾಯಯದಲ್ಲಿ ಆಂಗ್ಲರ ವಿರುದ್ಧ ಹೋರಾಟ ಮಾಡಿದವರು ‘ಜಡಗಾ – ಬಾಲ’ ಎಂಬ ಪರಾಕ್ರಮಿಗಳು. ಅವರ ಪೂರ್ವಜರ ಮೂಲಸ್ಥಳ ಸತ್ತಿಗೇರಿ – ಸಪ್ಪಡ್ಲ. (ಇಂದಿನ ಬೆಳಗಾವಿ ಜಿಲ್ಲೆಯ ಗ್ರಾಮಗಳು) ಇವರ ಪೂರ್ವಜರು ಈ ಕಡೆಗೆ ವಲಸೆ ಬಂದಾಗ ಇಲ್ಲಿ ಊರಿರಲಿಲ್ಲ. ಅವರೇ ಇಲ್ಲಿ ನೆಲೆನಿಂತು ಮನೆ ಮಾಡಿದರು. ಊರು ಕಟ್ಟಿದರು, ಮನೆ, ಊರಿನಿಂದ ಜನಸಂಖ್ಯೆ ಬೆಳೆಯಿತು. ಸತ್ತಿಗೇರಿ ಸಪ್ಪಡ್ಲದಿಂದ ವಲಸೆಬಂದ ಈ ವಂಶದ ಕುಡಿಯೇ ಬಂಡಾಯದ ಕಹಳೆ ಊದಿದ ಜಡಗಪ್ಪ. ಜಡಗಪ್ಪನ ಪೂರ್ವಜರಲ್ಲಿಯೇ (ವಲಸೆ ಬಂದವರಲ್ಲಿ) ‘ಹಲಗ’ನೆಂಬಾತನೇ ಮುಂದಾಳುವಾಗಿರಬಹುದು. ಆತ ನೆಲೆನಿಂತು ಸಂಸ್ಥಾಪಿಸಿದ ಗ್ರಾಮಕ್ಕೆ ‘ಹಲಗಲಿ’ ಎಂಬ ಹೆಸರು ಬಂದಿರಬಹುದೆಂದು ಅವರು ವಿವರಣೆ ನೀಡುತ್ತಾರೆ.

ಹೇಗಿದೆ ಹಲಗಲಿ?

ಮುಧೋಳ ತಾಲೂಕಿನ ಪೂರ್ವಭಾಗದ ಕೊನೆ ಹಳ್ಳಿಯಾಗಿರುವ ‘ಹಲಗಲಿ’ ಪಶ್ಚಿಮದ ಮೆಳ್ಳಿಗೇರಿ ಗ್ರಾಮ (ಮುಧೋಳ ತಾಲೂಕು)ದ ಸೀಮೆ ಹೊರತುಪಡಿಸಿದರೆ ಉಳಿದಂತೆ ಬೀಳಗಿ ತಾಲೂಕಿಗೇನೇ ತೀರಹತ್ತಿರವಾದ ಗ್ರಾಮ. ಊರ ಉತ್ತರಕ್ಕಿರುವ ಕೆರೆಯ ಅಂಗಳದಿಂದಲೇ ದಟ್ಟವಾದ ಹಾಗೂ ವಿಸ್ತಾರವಾದ ಕಾಡು ಪ್ರಾರಂಭಗೊಳ್ಳುತ್ತದೆ. ಇದೇ ಗುಡ್ಡದಲ್ಲಿ ಹಾಯ್ದು ಕಾಲು ದಾರಿಯಿಂದ ಬೀಳಗಿ ತಾಲೂಕಿನ ತೆಗ್ಗಿ, ಸಿದ್ದಾಪೂರ, ಬಿಸನಾಳ, ಯಡಹಳ್ಳಿ, ನಾಗರಾಳ (ಉತ್ತರದ ದಾರಿಯಿಂದ) ಗಳಿಗೆ ಅರಕೇರಿ, ಜಾನಮಟ್ಟಿ, ಸುನಗ (ಪೂರ್ವದ ಕಡೆಯಿಂದ)ಗಳಿಗೆ ಹೋಗಬಹುದಾಗಿದೆ.

ಈ ಗುಡ್ಡದಲ್ಲಿಯೇ ಮಾನವ ನಿರ್ಮಿತ ನಾನಾ ಬಗೆಯ ಚಿತ್ರಗಳಿರುವ ಕಲ್ಲುಗಳು ದೊರೆಯುತ್ತವೆ. ಅಲ್ಲಲ್ಲಿ ಮನುಷ್ಯರು ಅತ್ಯಂತ ಸಲೀಸಾಗಿ ಓಡಾಡಿಕೊಂಡಿರುವಷ್ಟು ವಿಶಾಲವಾದ ಸ್ಥಳಾವಕಾಶವಿರುವ ಗವಿಗಳೂ ಕಂಡುಬರುತ್ತವೆ. ಆಂಗ್ಲರ ವಿರುದ್ಧ ಸಂಚು ರೂಪಿಸುತ್ತಿದ್ದ ಜಡಗಾ ಮತ್ತು ಬಾಲ ದಟ್ಟವಾದ ಅರಣ್ಯ ಪ್ರದೇಶಗಳಲ್ಲಿರುವ ಈ ಗವಿಗಳಲ್ಲಿಯೇ ವಾಸಿಸುತ್ತಿದ್ದರೆಂದೂ, ಸಿರಿವಂತರ ವಿರುದ್ಧ ಸಿಡಿದೆದ್ದು ಬಡಜನತೆಯ ಪರವಾಗಿ ಧ್ವನಿ ಎತ್ತಿದ ಸಿಂದೂರಲಕ್ಷ್ಮಣನು ಕೂಡಾ ಈ ಗವಿಗಳಲ್ಲಿಯೇ ವಾಸಿಸುತ್ತಿದ್ದನೆಂದು ಹೇಳಲಾಗುತ್ತಿದೆ.

ಗ್ರಾಮಕ್ಕೆ ನೀರು ಪೂರೈಸುವ ಕೆರೆಗಳು

ಊರಿನ ಉತ್ತರಕ್ಕಿರುವ ಕೆರೆಯೇ ಗ್ರಾಮದ ಜನತೆಗೆ ಕುಡಿಯಲು ನೀರು ಪೂರೈಸುವ ಕೆರೆ. ಮಳೆಗಾಲದಲ್ಲಿ ಗುಡ್ಡದಿಂದ ಹರಿದು ಬರುವ ನೀರೇ ಇಲ್ಲಿ ಸಂಗ್ರಹಗೊಳ್ಳುತ್ತದೆ. ಆಧುನಿಕ ತಂತ್ರಜ್ಞಾನ ಬಳಸಿ ಕಟ್ಟುವ ಕೆರೆಗಳೇ ಕೆಲವೇ ದಿನಗಳಲ್ಲಿ ಮಾಯವಾಗಿ ಜನ ಜಾನವಾರುಗಳನ್ನು ಕೊಚ್ಚಿಕೊಂಡು ಹೋಗುತ್ತಿರುವ ಇಂದಿನ ದಿನಮಾನಗಳಲ್ಲಿ ಯಾವುದೋ ಕಾಲದಲ್ಲಿ ನಿರ್ಮಾಣಗೊಂಡು ಎಲ್ಲಿಯೂ ಒಂದಿಂಚೂ ಹಾನಿಗೊಳಗಾಗದೇ ಅಚಲವಾಗಿ ನಿಂತಿರುವ ಹಲಗಲಿ ಕೆರೆಯನ್ನು ನಿರ್ಮಿಸಿದ ಚಾಣಾಕ್ಷ ಶಿಲ್ಪಿಗಳ ಕರಚಮತ್ಕೃತಿ ನಿಜಕ್ಕೂ ಬೆರಗುಗೊಳಿಸುವಂತಹುದಾಗಿದೆ. ಇಲ್ಲಿ ಸಂಗ್ರಹಗೊಂಡ ನೀರು ವರ್ಷಪೂರ್ತಿ ಗ್ರಾಮಸ್ಥರಿಗೆ ಬಳಕೆಯಾಗುವಂತಹುದಾಗಿದೆ. ನೀರು ಕೆಟ್ಟು ಹೋಗಿದೆ, ಹೊಲಸಾಗಿವೆ ಎಂಬ ಮಾತೇ ಇಲ್ಲಿ ಬರದು. ಶುದ್ಧ ಸ್ಫಟಿಕದಂತೆ ಸದಾ ಕಂಗೊಳಿಸುತ್ತದೆ. ಇದಕ್ಕೆ ಗ್ರಾಮಸ್ಥರು ಕೊಡುವ ವಿವರಣೆ “ಎಲ್ಲಾ ವನಸ್ಪತಿ ಬೇರಿನ ಬುಡಕ ಹರ್ದು ಬರೂಮುಂದ ವನಸ್ಪತಿ ಸತ್ವಾ ಹೀರಕೊಂಡ ಬರ್ತೈತಿ, ಅದಕ್ಕ ನಮ್ಮೂರ ಕೆರೆ ನೀರು ಕೆಡೊದಿಲ್ಲ” ಎನ್ನುತ್ತಾರೆ.

ಆಶ್ಚರ್ಯದ ಸಂಗತಿ ಎಂದರೆ ಮಹಾರಾಜನ ಹೆಂಡತಿಯೊಬ್ಬಳು ಗರ್ಭಿಣಿಯಾದಾಗ ಆಕೆಗೆ ಹಲಗಲಿ ಕೆರೆಯ ನೀರನ್ನು ಕುಡಿಯುವ ಬಯಕೆಯಾಗಿತ್ತಂತೆ. “ಅಂಥಾ ನೀರು ನೋಡ್ರಿ ನಮ್ಮೂರ ಕೆರಿ ನೀರು” ಎಂದು ಹಲಗಲಿ ಗ್ರಾಮಸ್ಥರು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ.

ಇನ್ನುಳಿದಂತೆ ಊರ ದಕ್ಷಿಣದ ಪೂರ್ವಕ್ಕೆ ಚಿಕ್ಕೆರೆ (ಚಿಕ್ಕಕೆರೆ) ಹಾಗೂ ಪಶ್ಚಿಮದ ಭಾಗಕ್ಕೆ ಬಾಕಲಕುಂಟಿ (ಊರ ಬಾಗಿಲಿನ ಪಕ್ಕದಕುಂಟೆ ಆಡು ಮಾತಿನಲ್ಲಿ ಬಾಕಲಕುಂಟೆ ಯಾಗಿರಬಹುದು) ಕೆರೆಗಳಿದ್ದು ಕುಡಿಯುವ ನೀರಿನ ಕೆರೆ ತುಂಬಿ ಹೆಚ್ಚಾದ ನೀರು ಇಲ್ಲಿ ಸಂಗ್ರಹಗೊಂಡು ದನಕರುಗಳಿಗೆ ಬಳಕೆಯಾಗುತ್ತದೆ. ಮೇಯಲು ಗುಡ್ಡಕ್ಕೆ ಹೋದ ದನಕರುಗಳಿಗೆ ಕುಡಿಯಲು ಅನುಕೂಲವಾಗುವಂತೆ ಹಾಳಪೆಂಟಿಕೆರಿ, ಬುಡ್ಡೋಣಿ (ಪುಟ್ಟಡೋಣಿ) ನಿರ್ಮಿಸಿದ್ದು ಜಾನುವಾರುಗಳ ಮೇಲಿರುವ ಅವರ ಅಪಾರ ಕಾಳಜಿಯನ್ನು ಎತ್ತಿ ತೋರಿಸುವಂತಹದು.

ಹಲಗಲಿಯ ಜಮೀನುಗಳು

ಹಲಗಲಿಯ ಜಮೀನುಗಳನ್ನು ಮೂರು ವಿಧವಾಗಿ ವಿಂಗಡಿಸಲಾಗುತ್ತದೆ. ಕೆಂಪುಮಣ್ಣಿನ ಮಸಾರಿ ಜಮೀನುಗಳು, ಕಪ್ಪು ಮಣ್ಣಿನ ಎರೆ ಜಮೀನುಗಳು, ಕೆಂಪು ಮಣ್ಣು ಹಾಗೂ ಒಂದಿಷ್ಟು ಕಲ್ಲುಗಳಿಂದ ಕೂಡಿದ ಜಮೀನುಗಳನ್ನು ಮರಡಿ ಭೂಮಿಗಳೆಂದು ಕರೆಯಲಾಗುತ್ತದೆ.

ಕೆಂಪು ಮಣ್ಣಿನ ಮಸಾರಿ ಭೂಮಿಯನ್ನು ಮುಂಗಾರಿ ಹೊಲಗಳೆಂದು ಹೇಳಲಾಗುತ್ತದೆ. ಮುಂಗಾರಿ ಹಂಗಾಮಿನ ಬೆಳಗಳಾದ ಮುಂಗಾರಿ ಜೋಳ (ಕೆಂಪು ಜೋಳ,) ಸಜ್ಜೆ, ಶೇಂಗಾ, ಅಕ್ಕಡಿ ಕಾಳುಗಳಾದ ಹೆಸರು, ಅಲಸಂದೆ, ತೊಗರಿ, ಹುರಳಿ, ಅವರೆಗಳನ್ನು ಬೆಳೆಯುತ್ತಾರೆ. ಬೇಸಿಗೆಯಲ್ಲಿಯೇ ಮುಂಗಾರಿ ಭೂಮಿಯನ್ನು ಬೇಸಾಯಮಾಡಿ ಹದಗೊಳಿಸಿ ಇಟ್ಟಿರುತ್ತಾರೆ. ರೋಹಿಣಿ ಮಳೆಗೆ ಮುಂಗಾರಿ ಹಂಗಾಮಿನ ಬಿತ್ತನೆ ಕಾರ್ಯ (ಜುಲೈ ಹಾಗೂ ಆಗಷ್ಟ್ ತಿಂಗಳಿನವರೆಗೆ) ನಡೆದು ಆಗಷ್ಟ್, ನವೆಂಬರ್ ತಿಂಗಳಿನಲ್ಲಿ ಬೆಳೆಗಳ ಎಡೆ ಹೊಡೆಯುವ, ಕಳೆ ತೆಗೆಯುವ ಕೆಲಸ ನಡೆದಿರುತ್ತದೆ. ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಮುಂಗಾರು ಹಂಗಾಮಿನ ಎಲ್ಲ ಫಸಲುಗಳು ಕಟಾವಿಗೆ ಬರುತ್ತವೆ.

ಕೊಯ್ಯುವ, ತೆನೆಮುರಿಯುವ, ಕಣಮಾಡಿ ರಾಶಿ ಮಾಡುವ, ಬಳ್ಳಿ ಜಾಡಿಸುವ (ಅಕ್ಕಡಿ ಕಾಳಿನ ರಾಶಿ) ಎಲ್ಲ ಕೆಲಸಗಳು ಡಿಸೆಂಬರ್ ಕೊನೆ ಅಥವಾ ಜನವರಿ ಮೊದಲ ವಾರದಷ್ಟೊತ್ತಿಗೆ ಮುಗಿದುಬಿಡುತ್ತವೆ. ಮೇಲೆ ಹೇಳಿದ ಮರಡಿ ಭೂಮಿಗಳಲ್ಲಿಯೂ ಮುಂಗಾರಿ ಹಂಗಾಮಿನ ಬೆಳೆಗಳನ್ನೇ ಬೆಳೆಯುತ್ತಿರುವದರಿಂದ ಆ ಹೊಲಗಳು ಇದೇ ಸಂದರ್ಭದಲ್ಲಿ ಕಟಾವಿಗೆ ಬರುತ್ತವೆ.

ಬೇಸಗೆಯಲ್ಲಿಯೇ ಉಳುಮೆ ಮಾಡಟ್ಟಿರುವದರಿಂದ ಮಘಾ, ಉತ್ತರಾ, ಹಸ್ತಮಳೆಗಳು ಸುರಿದಾಗ ಸೆಪ್ಟೆಂಬರ್ ಕೊನೆವಾರ ಅಥವಾ ಅಕ್ಟೋಬರ್ ಮೊದಲು ಹಾಗೂ ಎರಡನೆಯ ವಾರದ ಸಂದರ್ಭದಲ್ಲಿ ಕಪ್ಪು ಮಣ್ಣಿನ ಎರೆ ಭೂಮಿಯಲ್ಲಿ ಹಿಂಗಾರಿ ಬೆಳೆಗಳಾಗ ಹತ್ತಿ, ಬಿಳಿಜೋಳ, ಗೋದಿ, ಕಡಲಿ, ಕುಸುಬೆ, ಅಗಸೆ ಮುಂತಾದವುಗಳನ್ನು ಬಿತ್ತನೆ ಮಾಡುತ್ತಾರೆ.

ಫೆಬ್ರವರಿಯಷ್ಟೊತ್ತಿಗೆ ಹಿಂಗಾರಿ ಬೆಳೆಗಳು ಕಟಾವಿಗೆ ಬರುತ್ತವೆ. ಮುಂಗಾರಿ ಜೋಳ, ಸಜ್ಜೆಗಳನ್ನು ಕೊಯ್ದರೆ ಹಿಂಗಾರಿ ಜೋಳವನ್ನು ಕಿತ್ತುತ್ತಾರೆ. ಮುಂಗಾರಿ ರಾಶಿ ಮಾಡಲು ಮಾಡಿದ ಕಣಗಳನ್ನೇ ಬಳಸಿಕೊಂಡು ಹಿಂಗಾರಿ ರಾಶಿ ಮಾಡುತ್ತಾರೆ. ಕುಸುಬೆಯನ್ನು ಕೊಯ್ದು ಸ್ಥಳದಲ್ಲಿಯೇ ಪೆಂಡಿ ಕಟ್ಟಿ ಇಟ್ಟಿರುತ್ತಾರೆ. ಅಲ್ಲಿಯೇ ಗುಡಾರ ಅಥವಾ ಗೋಣಿ ತಟ್ಟನ್ನು ಹಾಸಿ ಕುಸುಬೆ ಗಿಡಗಳ ಪೆಂಡೆಯನ್ನಿಟ್ಟು ಬಡಗಿಯಿಂದ ಧಳಿಸುತ್ತಾರೆ. ಉದುರಿದ ಕಾಳು ಹೊಟ್ಟನ್ನು ಬೇರ್ಪಡಿಸಲು ತೂರುತ್ತಾರೆ. ರಾಶಿ ಮುಗಿದ ನಂತರ ಕಾಳನ್ನು ಮನೆಯಲ್ಲಿ ಇರುವ ಬಳತ ಹಾಗೂ ಹೊರಗಿರುವ ಹಗೇವುಗಳಿಗೆ ತಂದು ಸಂಗ್ರಹಿಸುತ್ತಾರೆ. ಹೊಟ್ಟು ಹಾಗೂ ಕಣಿಕೆಯನ್ನು ಚಕ್ಕಡಿಯಲ್ಲಿ ತಂದು ಬಣಿಮೆ ಒಟ್ಟಿ, ಬಣವೆ ಗಾಳಿಗೆ ಅಲುಗಾಡದಂತೆ, ಮಳೆ ನೀರು ತಾಕದಂತೆ ಬಣವೆಗೆ ಮೇಲ್ಮುದ್ದಿ ಹಾಕುತ್ತಾರೆ, ತಾವು ತಿನ್ನುವ ಕಾಳಿನ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆಯೋ ಅದಕ್ಕಿಂತಲೂ ಹೆಚ್ಚಿನ ಕಾಳಜಿಯನ್ನು ಈ ಹೊಟ್ಟು ಹಾಗೂ ಮೇವಿನ ಬಗ್ಗೆ ವಹಿಸುತ್ತಾರೆ. ಅದು ಅವರ ಪಾಲಿಗೆ ಕೇವಲ ಕಣಿಕೆ ಹಾಗೂ ಹೊಟ್ಟಾಗಿರದೇ ತಾನು ದುಡಿದು ನಮಗೆ ಅನ್ನ ಹಾಕುವ ಬಸವಣ್ಣನ ಅನ್ನವೆಂದು ಗೌರವಿಸಿ ಅವುಗಳ ಬಗ್ಗೆ ಹೆಚ್ಚೆಚ್ಚು ನಿಗಾವಹಿಸುತ್ತಾರೆ.

ಅರಣ್ಯ ಸಂಪತ್ತು

ಒಂದು ಕಾಲಕ್ಕೆ ಹಲಗಲಿಯ ಕಾಡು ‘ಹಿರೀಗುಡ್ಡ’ ಎಂದು ಕರೆಯಿಸಿಕೊಳ್ಳುವಷ್ಟು ವಿಸ್ತಾರವಾದ ಹಾಗೂ ದಟ್ಟವಾದ ಕಾಡಾಗಿತ್ತೆಂದು ಹಿರಿಯರು ಹೇಳುತ್ತಾರೆ. ಹಲಗತ್ತಿ, ಬೇವು, ತುಗಲಿ, ಮಸವಾಳ, ಹುಣಸೆ, ಬಳುವಲ, ಅಂಟು ಸುರಿಸುವ ದಿಂಡಲ, ತುಗಲಿ, ಋತುಮಾನಕ್ಕೆ ತಕ್ಕಂತೆ ಹಣ್ಣುಬಿಡುವ ಜಾನಿ, ನಕರಿ, ಕವಳಿಗಳಲ್ಲದೇ ಸರ್ವರೋಗಗಳನ್ನು ಗುಣಪಡಿಸಲು ಬಲ್ಲ ಔಷಧೀಯ ಸಸ್ಯಗಳು ಇಲ್ಲಿನ ಅರಣ್ಯ ಸಂಪತ್ತುಗಳು. ಒಂದು ಕಾಲಕ್ಕೆ ಇಲ್ಲಿ ಶ್ರೀಗಂಧದ ಮರಗಳಿದ್ದವೆಂದು ಹೇಳುತ್ತಾರೆ.

ವನ್ಯಜೀವಿಗಳು

ಕೈಗೆ ಸಿಕ್ಕಿತೆಂದು ಅಂದುಕೊಳ್ಳುವದರೊಳಗಾಗಿ ಓಟಕೀಳುವ ಸಾಧುಪ್ರಾಣಿ ಮೊಲ, ಠಕ್ಕನರಿ, ಕಾಯುವವರ ಕಣ್ಣಿಗೆ ಮಣ್ಣು ತೂರಿ ಹೆಗಲ ಮೇಲೆ ಕುರಿಯನ್ನೇ ಹೊತ್ತುಕೊಂಡು ಹೋಗುವ ಬಲಿಷ್ಠ ತೋಳ, ಶತ್ರುಗಳ ಬರುವಿಕೆಯನ್ನು ಗಮನಿಸಿ ಕೂರಂಬಿತಿರುವ ತನ್ನ ಮೈಮೇಲಿನ ಮುಳ್ಳುಗಳನ್ನೇ ಶತ್ರುಗಳತ್ತ ತೂರಿಬಿಡುವ ಯೇದ (ಮುಳ್ಳುಹಂದಿ), ಮನಕ್ಕೆ ಮುದನೀಡುವ ಚಿಗರೆ, ಸಾರಂಗ, ಹೊಂಚು ಹಾಕಿ ಜನ ಜಾನುವಾರುಗಳ ಭೇದವೆಣಿಸದೇ ಕತ್ತು ಸೀಳಿ ತಿಂದು ಹಾಕುವ ರಕ್ತ ಪಿಪಾಸು ಚಿರತೆ, ಉಡ, ಅಳಿಲು, ಮುಂಗಲಿ, ವಿವಿಧ ಬಗೆಯ ಉರಗ ಸಂಕುಲ ಈಗಲೂ ಹಲಗಲಿಯ ಗುಡ್ಡದಲ್ಲಿ ಕಾಣುತ್ತವೆ.

ಪಕ್ಷಿ ಸಂಕುಲ

ಪುಟ್ಟ ಗುಬ್ಬಿ, ಕಾಗೆ, ಹಾಡುವ ಕೋಗಿಲೆ, ನರ್ತಿಸುವ ನವಿಲು, ಶಕುನದ ಹಕ್ಕಿ ಹಾಲಕ್ಕಿ, ಶುಭಕರವಾದ ರತ್ನ ಪಕ್ಷಿ, (ಕೆಂಬೂತ) ನೋಡಿದರೆನೇ ಅಪಶಕುನವೆಂದು ಭಾವಿಸುವ, ವಿಕಾರವಾಗಿ ಕಿರುಚುವ ಗೂಗೆ, ಹಗಲೆಲ್ಲಾ ನಿದ್ದೆಮಾಡುತ್ತಾ ಗಿಡಕ್ಕೆ ಜೋತು ಬೀಳುವ ಇಡೀರಾತ್ರಿ ಬೇಟೆಗೆ ತೆರಳುವ ಬಾವಲಿ, ಕರಕರ ಮರ ಕತ್ತರಿಸುವ ಬಡಿಗನ ಹಕ್ಕಿ, (ಮರಕುಟಗ,) ಗೊರವಂಕ, ಇಡಿಯಾಗಿ ಒಂದು ಪ್ರಾಣಿಯ ಕಳೇಬರ ತಿಂದು ಇನ್ನೊಂದು ಸಿಕ್ಕಬಹುದೇ ಎಂದು ದೂರದೃಷ್ಟಿ ಹರಿಸುವ ರಣಹದ್ದು, ಮುದ್ದಾದಗಿಳಿ, ಗೊರವಂಕ ಮುಂತಾದ ಪಕ್ಷಿ ಸಂಕುಲ ಹಲಗಲಿಯ ಕಾಡಿನಲ್ಲಿ ನೋಡಲು ಸಿಕ್ಕುತ್ತವೆ. ಮನಕ್ಕೆ ಮುದನೀಡುತ್ತವೆ. ದಿಗಿಲು ಬೀಳಿಸುತ್ತವೆ. ಭಯದಿಂದ ಬೆಚ್ಚಿಬೀಳುವಂತೆ ಮಾಡುತ್ತವೆ.

ಊರು ರಕ್ಷಿಸುವ ದೇವರುಗಳು

ಗೊಡಚಿಯಿಂದ ಬಂದ ನೆಲೆಸಿರುವ, ಗೊಡಚ್ಯಪ್ಪನೆಂದೇ ಪೂಜೆಗೊಳ್ಳುತ್ತಲಿರುವ ವೀರಭದ್ರೇಶ್ವರ, ಅಗಸೆಯ ಬಾಗಿಲಿಗೆ ಕುಳಿತಿರುವ ಹನುಮಂತದೇವರು, ಕೊಟ್ರ ಬಸಪ್ಪ (ಕೊಟ್ಟೂರು ಬಸವೇಶ್ವರ), ಊರದೇವತೆಗಳಾದ ದ್ಯಾಮವ್ವ, ದುರ್ಗವ್ವ, ನಾಗಲಿಂಗೇಶ್ವರ, ಯಮನೂರಪ್ಪ ಈ ದೇವರುಗಳೆಲ್ಲಾ ಊರ ರಕ್ಷಣೆಗೆ ನಿಂತು ತಮ್ಮನ್ನು ಸದಾಕಾಲ ಸಲುಹುತ್ತಿರುವ ಊರ ದೇವರುಗಳೆಲ್ಲಾ ಅವರು ಹೇಳಿಕೊಳ್ಳುತ್ತಾರೆ.

ಗುಡ್ಡದಲ್ಲಿಯ ದೇವರುಗಳು

ತಾವು ಪಶುಪಾಲನೆಗೆ ಹೋದಾಗ, ಬೇಟೆಗೆ ಹೋದಾಗ, ಅರಣ್ಯ ಸಂಪತ್ತುಗಳನ್ನು ಸಂಗ್ರಹಿಸಿಕೊಳ್ಳಲು ಹೋದಾಗ ತಮಗೇನೂ ಅಪಾಯವಾಗದಂತೆ ಕಾಪಾಡಲು ಅರಣ್ಯದಲ್ಲಿಯೂ ಈ ಜನ ದೇವರುಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಊರ ಕೆರೆಯ ಹತ್ತಿರವೇ ಮಜ್ಜಿಗಿ ಗಡಿಗೆವ್ವ, (ಪಾಂಡವರು ಪ್ರತಿಷ್ಠಾಪಿಸಿದ್ದೆಂದು ಅವರು ಹೇಳುತ್ತಾರೆ.) ಬಂದೆಲ್ಲವ್ವ (ಬನದ ಎಲ್ಲವ್ವ,) ಮಲಿಯವ್ವ (ಮಲೆ+ಅವ್ವ = ಬೆಟ್ಟದ ತಾಯಿ,) ಗಡ್ಡಿ ಈರಣ್ಣ ಹೀಗೆ ಹೆಸರಿಸುತ್ತ ಹೋಗುತ್ತಾರೆ.

ತಮ್ಮ ಕಷ್ಟ ಸುಖ, ನೋವು ನಲಿವುಗಳು ಎಲ್ಲದಕ್ಕೂ ಈ ದೇವರುಗಳೇ ಕಾರಣವೆಂದು ಬಲವಾಗಿ ನಂಬಿಕೊಂಡಿರುವ ಈ ಜನ ಅತ್ಯಂತ ಶ್ರದ್ಧೆ, ಭಯ, ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಹುಣ್ಣಿಮೆ, ಅಮವಾಸ್ಯೆ, ಮಂಗಳವಾರ, ಶುಕ್ರವಾರಗಳಂದು ನೈವೇದ್ಯ ತೋರಿಸಿ ಕಾಯಿ ಒಡೆದು ಹರಕೆ ತೀರಿಸುತ್ತಾರೆ.

ಇಷ್ಟೊಂದು ಭಯ, ಭಕ್ತಿ, ಶ್ರದ್ಧೆಯಿಂದ ಪೂಜಿಸಿದರೂ ಈ ದೇವರುಗಳನ್ನು ಅವರು ದೂರದ ಯಾವುದೋ ಲೋಕದಲ್ಲಿಟ್ಟು ಕಾಣಲು ಯತ್ನಿಸುವುದಿಲ್ಲ. ದೇವರು ತನ್ನ ತಂದೆಯಾಗಿ, ತಾಯಿಯಾಗಿ, ಅಣ್ಣನಾಗಿ, ಗೆಳೆಯನಾಗಿ ತಮ್ಮ ಪಕ್ಕದಲ್ಲಿಯೇ ಇದ್ದು ತಮಗೆ ನೆರವು ನೀಡುತ್ತಾನೆಂದು ಭಾವಿಸುವ ಜನ ಇವರು. ರಾಶಿ ತೂರುವಾಗ ಸರಿಯಾಗಿ ಗಾಳಿ ಬೀಸದಿದ್ದರೆ ಹಿರಿಯನೊಬ್ಬ ಹೇಳುತ್ತಾನೆ. “ಏ ತಮ್ಮಾ ಆ ಕರಿಮಾರಿ ಲಕ್ಷ್ಮೀಗಿ ಒಂದು ಊದಿನ ಕಡ್ಡಿ ಚುಚ್ಚಿ ಕೈ ಮುಗಿದ ಬಾ ಮಾರಾಯಾ ತಾನ ಗಾಳಿ ಬೀಸತೈತಿ” ಎಂದು. ಹುಡುಗ ಹೊಲದ ಬದುವಿನಲ್ಲಿರುವ ಲಕ್ಷ್ಮೀದೇವಿಗೆ ಉದಿನಕಡ್ಡಿ ಹಚ್ಚಿ ಕೈ ಮುಗಿದು ಬರುವಷ್ಟರಲ್ಲಿ ಕಾಕತಾಳೀಯವೆನ್ನುವಂತೆ ಗಾಳಿ ಬೀಸತೊಡಗುತ್ತದೆ. ರಾಶಿ ತೂರುವ ಯಜಮಾನ “ನಾ ಹೇಳ್ಲಿಲ್ಲಾ ಬಾಳ ಬೆರಿಕಿ ಅದಾಳೋ ಲಕ್ಷ್ಮವ್ವ” ಎಂದು ಹುರುಪಿನಿಂದ ಹೇಳುತ್ತಾನೆ. ಇಲ್ಲಿ ಲಕ್ಷ್ಮೀದೇವಿಯನ್ನು ಆತ ಕರಿಮಾರ್ಯಾಕಿ ಎಂದಿದ್ದೂ, ಲಸಮಿ ಎಂದು ಬೈದದ್ದೂ ದೇವರನ್ನು ಅಪಮಾನ ಪಡಿಸಲಿಕ್ಕಲ್ಲ. ತಮ್ಮ ಪ್ರಾರ್ಥನೆಗೆ ಆಕೆ ಖಂಡಿತವಾಗಿಯೂ ಒಲಿದೇ ಒಲಿಯುತ್ತಾಳೆ. ತನ್ನ ಕಷ್ಟ ಪರಿಹರಿಸುತ್ತಾಳೆ ಎಂಬ ಗಾಢವಾದ ಮುಗ್ಧ ಭಕ್ತಿ ಆತನದು. ಹಾಗಾಗಿ ದೇವರನ್ನು ಎಂದೂ ದೂರವಿಡದೇ ತಮ್ಮ ಕುಟುಂಬವನ್ನು ರಕ್ಷಿಸುವ, ಸಲುಹುವ ಕುಟುಂಬದ ಹಿತೈಷಿಯಾಗಿ ನೋಡುವಂತಹ ಪ್ರೀತಿ ಅವರದು.

ಹಲಗಲಿ ಗ್ರಾಮ ವ್ಯವಸ್ಥೆ

ಅಷ್ಟೇನು ದೊಡ್ಡದಲ್ಲದ ಹಲಗಲಿ ಗ್ರಾಮದಲ್ಲಿ ಶೇ. ೪೦ರಷ್ಟು ಜನಸಂಖ್ಯೆ ವಾಲ್ಮೀಕಿ ಜನಾಂಗದ್ದು. ಉಳಿದಂತೆ ರೆಡ್ಡಿಗಳು (ನಾಮದ ರೆಡ್ಡಿ, ವಿಭೂತಿ ರೆಡ್ಡಿ), ಲಿಂಗವಂತರು (ಶೀಲವಂತರು, ಬಣಜಿಗರು, ಪಂಚಮಸಾಲಿ), ವಿಶ್ವಕರ್ಮರು (ಬಡಿಗರು, ಪತ್ತಾರರು, ಕಮ್ಮಾರರು), ಗಾಣಿಗರು, ಕುಂಬಾರರು, ಕುರುಬರು, ಅಗಸರು, ಕ್ಷೌರಿಕರು, ಪರಿಶಿಷ್ಟರು (ಎಡಗೈನವರು ಮಾತ್ರ ಇಲ್ಲಿದ್ದಾರೆ.), ದಾಸರು, ಮುಸ್ಲಿಮರು (ಮುಲ್ಲಾಗಳು, ಪಿಂಜಾರರು), ಹಣಮರು (ಯಾದವರು), ನಾಲ್ಕಾರು ಮನೆಯಷ್ಟು ಬ್ರಾಹ್ಮಣರು ಇಷ್ಟೊಂದು ಜಾತಿಯ ಜನರನ್ನು ಹೊಂದಿದ ಊರಾಗಿದೆ.

ಜಾತಿ ವ್ಯವಸ್ಥೆಯಿಂದ ಈ ಊರು ಹೊರತಾಗಿಲ್ಲ. ಮೇಲ್ವರ್ಗ, ಕೆಳವರ್ಗ, ಸ್ಪೃಶ್ಯ, ಅಸ್ಪೃಶ್ಯತೆಯಿಂದ ಈ ಊರು ಇನ್ನೂ ಮೋಕ್ಷ ಹೊಂದಿಲ್ಲ. ಮೇಲ್ವರ್ಗದವರು ಕೆಳವರ್ಗದವರ ಮನೆಯ ಮದುವೆ, ಮುಂಜಿವೆ ಮುಂತಾದ ಕಾರ್ಯಕ್ರಮಗಳಲ್ಲಿ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಪಾಲ್ಗೊಂಡು ಅಕ್ಷತೆ ಹಾಕಿ ಬರುತ್ತಾರೆಯೇ ಹೊರತು ಅವರ ಮನೆಗಳಲ್ಲಿ ಕುಳಿತು ಊಟ ಮಾಡುವುದಿಲ್ಲ. ಬದಲಾಗಿ ಕೆಳವರ್ಗದವರೆಲ್ಲಾ ಉಲುಪಿ ಅಥವಾ ಸೀದಾ ಕೊಟ್ಟು ಬಿಡುತ್ತಾರೆ. (ಹಿಟ್ಟು, ಬೇಳೆ, ಬೆಲ್ಲ, ಎಣ್ಣೆ, ಬೆಣ್ಣೆ) ಕೆಳವರ್ಗದವರಿಂದ ಒಣ ಅಥವಾ ಬೇಯಿಸದ ವಸ್ತುಗಳನ್ನು ಸ್ವೀಕರಿಸಿದರೆ ತಮ್ಮ ಕುಲಾಚಾರ ಕೆಟ್ಟು ಹೋಗುವುದಿಲ್ಲ ಎಂಬುದು ಅವರ ನಂಬುಗೆ. ಆದರೆ ಸಾಮಾಜಿಕ ಚಟುವಟಿಕೆಗಳನ್ನು, ಊರಿನ ಎಲ್ಲ ಧಾರ್ಮಿಕ ಚಟುವಟಿಕೆಗಳನ್ನು ಒಟ್ಟಾಗಿಯೇ ನೆರವೇರಿಸುತ್ತಾರೆ. ಪ್ರತಿ ಕುಟುಂಬದ ನೋವು ನಲಿವಿನಲ್ಲಿಯೂ, ಸುಖ ದುಃಖಗಳಲ್ಲಿಯೂ ತಮ್ಮ ಕುಟುಂಬದ್ದೇ ಕಷ್ಟ ಸುಖ, ನೋವು ನಲಿವೆಂದು ಪರಿಗಣಿಸಿ ಅವೆಲ್ಲವುಗಳಲ್ಲಿಯೂ ಎಲ್ಲರೂ ಪಾಲುಗೊಳ್ಳುವುದು ಈ ಊರಿನ ವೈಶಿಷ್ಟ್ಯತೆ.

ಹೀಗಾಗಿ ಜಾತಿ ಯಾವುದೇ ಇರಲಿ, ಪ್ರತಿ ಕುಟುಂಬದವರು ಇನ್ನೊಂದು ಕುಟುಂಬದವರನ್ನು ದೊಡ್ಡಪ್ಪ, ದೊಡ್ಡವ್ವ, ಕಾಕಾ, ಚಿಗವ್ವ, ಅಣ್ಣಾ, ಅಕ್ಕಾ, ತಮ್ಮ, ತಂಗಿ, ಮಾವ, ಅತ್ತೆ, ಎಂದೇ ಕರೆದುಕೊಳ್ಳುತ್ತಾ ಇಲ್ಲಿ ಎಲ್ಲಾ ಕುಟುಂಬಗಳವರು ಎಲ್ಲಾ ಕುಟುಂಬದ ಸದಸ್ಯರಾಗಿ ಕರುಳಬಳ್ಳಿಯ ಸಂಬಂಧವನ್ನು ಕಟ್ಟಿಕೊಳ್ಳುತ್ತಾರೆ. ‘ಲೋಕವೇ ನನ್ನ ಮನೆ, ಮಾನವ ಕುಲವೇ ನನ್ನ ಕುಟುಂಬ’ ವೆನ್ನುವ ಭಾರತೀಯ ಪರಂಪರೆಯನ್ನು ತಮ್ಮೊಂದಿಗೆ ಯಾವತ್ತೂ ಬೆಸುಗೆ ಹಾಕಿಕೊಳ್ಳುತ್ತಾರೆ. ಅಂತಹ ಹೃದಯವಂತಿಕೆಯನ್ನು ಹೊಂದಿದವರು ಈ ಊರಿನ ಜನ.

ಗ್ರಾಮ ಪಂಚಾಯಿತಿ, ಸಹಕಾರಿ ಸಂಘಗಳು, ಊರಿನ ಆಡಳಿತ ಹಾಗೂ ಹಣಕಾಸಿನ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರೂ ಧಾರ್ಮಿಕ ಕಾರ್ಯಕ್ರಮಗಳು ಪರಂಪರಾಗತವಾಗಿ ನಡೆದುಕೊಂಡು ಬಂದ ಬಾಬುದಾರರ ಮುಖಾಂತರವೇ ನಡೆದುಕೊಂಡು ಬರುತ್ತಿವೆ. ಇಂತಹ ಮನೆಯಿಂದಲೇ ನಡೆಯಬೇಕೆಂಬ ಹಿಂದಿನ ಪದ್ಧತಿ ಹೇಗೆ ಬಂದಿದೆಯೋ ಅದೇ ಪದ್ಧತಿ ಇಂದಿಗೂ ಮುಂದುವರಿದುಕೊಂಡು ಬಂದಿದೆ. ಈ ಬಾಬುದಾರರು ಎಲ್ಲಾ ಜಾತಿಯವರಿದ್ದು ತಮಗೆ ಸಂಬಂಧಿಸಿದ ಕಾರ್ಯವನ್ನು ಆಯಾ ಸಂದರ್ಭಗಳಲ್ಲಿ ಚಾಚೂ ತಪ್ಪದೇ ಮಾಡುತ್ತಾರೆ. ಊರವರೆಲ್ಲರೂ ಅವರಿಗೆ ತಮ್ಮ ಅಂತಸ್ತು ಮರೆತು ನೆರವು ನೀಡುತ್ತಾರೆ.

ಹಬ್ಬ ಹರಿದಿನಗಳು

ಶ್ರಾವಣ ಮಾಸ ಈ ಊರಿನ ಜನತೆಗೆ ಅತ್ಯಂತ ಪವಿತ್ರ ತಿಂಗಳಾಗಿದೆ. ಮೇಲ್ವರ್ಗ, ಕೆಳವರ್ಗವೆಂಬ ತಾರತಮ್ಯವಿಲ್ಲದೇ ಎಲ್ಲಾ ಓಣಿಗಳಲ್ಲೂ ಆಯಾ ಓಣಿಯ ಗುದಿಗಳಲ್ಲಿಯೋ, ಚಾವಡಿಗಳಲ್ಲಿಯೋ ಶಿವಭಜನೆ ಮಾಡುತ್ತಾರೆ. ಶ್ರಾವಣ ಮಾಸ ಕೊನೆಗೊಂಡನಂತರ ಬೇರೆ ಬೇರೆ ಓಣಿಗಳವರು ನಿಗದಿಪಡಿಸಿದ ದಿನದಂದು ಅನ್ನ ಸಂತರ್ಪಣೆಯೊಂದಿಗೆ ಭಜನೆ ಮುಗಿಸುತ್ತಾರೆ. ಈ ಶ್ರಾವಣ ಮಾಸ ಹಾಗೂ ಕಾರ್ತಿಕ ಮಾಸಗಳಲ್ಲಿ ಗ್ರಾಮಸ್ಥರು ಮದ್ಯ – ಮಾಂಸಗಳನ್ನು ಸೇವಿಸುವದಿಲ್ಲ. ಅಷ್ಟು ಕಟ್ಟುನಿಟ್ಟಾಗಿ ವ್ರತಾಚರಣೆ ಮಾಡುತ್ತಾರೆ. ಕಾರ – ಹುಣ್ಣಿಮೆ, ಗುಳ್ಳವ್ವ, ಗಣೇಶನ ಹಬ್ಬ, ಮಹಾನವಮಿ, ದೀಪಾವಳಿ ಹಬ್ಬ, ಯುಗಾದಿಗಳನ್ನು ಎಲ್ಲಡೆಯಂತೆ ಆಚರಿಸುತ್ತಾರೆ. ಎಳ್ಳಾಅಮವಾಸ್ಯೆ ಮುಂದಿಟ್ಟುಕೊಂಡು ಬರುವ ಮಂಗಳವಾರ ಊರ ಮುಖ್ಯ ದೇವರು ವೀರಭದ್ರೇಶ್ವರನ ಕಾರ್ತಿಕೋತ್ಸವ. ಜೊತೆಗೆ ಗ್ರಾಮದಲ್ಲಿರುವ ಎಲ್ಲ ದೇವರುಗಳ ಕಾರ್ತಿಕೋತ್ಸವವೂ ನಡೆಯುತ್ತವೆ. ಗಂಡನ ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು, ನೆಂಟರಿಷ್ಟರನ್ನು ಕಾರ್ತಿಕೋತ್ಸವದ ಜಾತ್ರೆಗೆ ಕರೆತರುತ್ತಾರೆ. ವಿವಿಧ ರೀತಿಯ ಭಕ್ಷ ಬೋಜ್ಯ, ಪಕ್ವಾನ್ನಗಳನ್ನು ತಯಾರಿಸಿ ಉಂಡುಟ್ಟು ನಲಿಯುತ್ತಾರೆ. ಜಾತ್ರಾ ನಿಮಿತ್ಯವಾಗಿ ಕಬಡ್ಡಿ, ಸೆರೆಗೆರೆ, ಟಗರಿನ ಕಾದಾಟ, ಸಂಗ್ರಾಮ ಕಲ್ಲು ಎತ್ತುವ, ಗುಂಡು ಎತ್ತುವ, ಹಾರೆ ಎತ್ತುವ, ಹಗ್ಗ ಜಗ್ಗುವ ಸ್ಪರ್ಧೆಗಳು ಪ್ರಸಿದ್ಧ ಪೈಲವಾನರಿಂದ ಕುಸ್ತಿಗಳು ನಡೆಯುತ್ತವೆ. ಹೀಗೆ ಇಡೀ ಊರಿಗೆ ಊರೇ ಐದಾರು ದಿನಗಳ ಕಾಲವಾದರೂ (ಪ್ರತಿಧ್ವನಿ) ಹಿಡಿಯುತ್ತದೆ.

ದನ ಕರುಗಳಿಗೆ ಜಡ್ಡು ಜಾಪತ್ರೆ (ಕಾಲುಬೇನೆ, ಬಾಯಿಬೇನೆ, ಕುಂದು) ತಗುಲದಂತೆ ಕಾಪಾಡಲು ಬೇಸಗೆಯಲ್ಲಿ ಗ್ರಾಮದೇವತೆಗಳಿಗೆ ಕಟ್ಟುನಿಟ್ಟಾಗಿ ವಾರಾ ಹಿಡಿಯುವದು, ಸೋಮವಾರ ಎತ್ತುಗಳಿಗೆ ಕೊಳ್ಳ ಕಟ್ಟದಿರುವದು ಈ ಗ್ರಾಮಸ್ಥರ ಕಟ್ಟಾ ಆಚರಣೆ. ಮಳೆಗಾಲದಲ್ಲಿ ಉತ್ತರಿ ಮಳೆ ಸಂದರ್ಭದಲ್ಲಿ ಗುಡ್ದದ ಮೇಲಿರುವ ಮಳಿಯಪ್ಪ ಸ್ವಾಮಿಗೂ, ಗುಡ್ಡದಲ್ಲಿರುವ ಮಜ್ಜಿಗಿ ಗಡಿಗೆವ್ವನಿಗೂ ತಪ್ಪದೇ ‘ಪರು’ ಮಾಡುತ್ತಾರೆ. (ಊರವರೆಲ್ಲ ಸೇರಿ ಪಟ್ಟಿ ಮಾಡಿ ಜೋಳದ ನುಚ್ಚು, ಅಂಬಲಿ, ಸಾರು ಮಾಡಿ ದೇವರಿಗೆ ನೈವೇದ್ಯ ತೋರಿಸಿ ಸಾಮೂಹಿಕವಾಗಿ ಪ್ರಸಾದ ಸೇವಿಸುತ್ತಾರೆ) ಅಲಾಯಿ ಹಬ್ಬದಲ್ಲಿ ಅಲ್ಲಾ ದೇವರಿಗೂ ನೈವೇದ್ಯ ಕೊಟ್ಟು ಹಂಸೈ (ಹೆಜ್ಜೆ ಕುಣಿತ) ಆಡುವದು ಉಂಟು. (ಇದು ಕೆಳವರ್ಗದವರಿಗೆ ಮಾತ್ರ ಸೀಮಿತ)

ತಿಂಬುಂಬುವ ಜೀನಸುಗಳು

ಕೈರೊಟ್ಟಿ (ಎರಡೂ ಅಂಗೈಯಲ್ಲಿಯೇ ತಟ್ಟುತ್ತಾ ಕೇವಲ ನೀರು ಹಚ್ಚುತ್ತಾ ತಟ್ಟುತ್ತಾ ಮಣ್ಣಿನ ಹೆಂಚಿಗೆ ಸುಣ್ಣ ಸವರಿ ಅದರ ಮೇಲೆ ಬೇಯಿಸಲಾಗುತ್ತದೆ.), ಬಡದ ರೊಟ್ಟಿ (ಪರಾತ ಅಥವಾ ಕೊಮ್ಮಣಿಗೆಯಲ್ಲಿ ಎರಡು ಕೈಯಿಂದ ಧಪಧಪ ಬಡಿಯುತ್ತಾ ಹಿಟ್ಟು ಸವರುತ್ತಾ ತಟ್ಟಿ ಕಬ್ಬಿಣದ ಹೆಂಚಿನ ಮೇಲೆ ಹಾಕಿ ಬೇಯುತ್ತಿರುವಾಗ ಸಣ್ಣ ಬಟ್ಟೆ ತುಂಡಿನಿಂದ ನೀರು ಹಚ್ಚಿ ಬೇಯಿಸುವುದು), ಹುಳಿ ನುಚ್ಚು, ಸಪ್ಪನೆಯ ನುಚ್ಚು, ಪುಂಡಿ ಪಲ್ಲೆ, ತೊಪ್ಪಲು ಪಲ್ಲೆ, ಕಾರಬ್ಯಾಳಿ, ಮೆಣಸಿನಕಾಯಿ ಚಟ್ನಿ, ಮೊಸರು, ಮಜ್ಜಿಗೆ, ಹಾಲು ನಿತ್ಯದ ಆಹಾರ ಪದಾರ್ಥಗಳು.

ಚಪಾತಿ, ಸಜ್ಜಕ, ಕರಿಗಡಬು, ಪಾಯಸ, ಹೋಳಿಗೆ ಮುಂತಾದವುಗಳು ಹಬ್ಬ ಹರಿದಿನಗಳಲ್ಲಿ ಹಾಗೂ ಮನೆಗೆ ಬೀಗರು ಬಿಜ್ಜರು ಬಂದಾಗ ಮಾಡುವ ಆಹಾರ ಪದಾರ್ಥಗಳಾಗಿವೆ. ವಾರಾ ಹಿಡಿದಾಗ ಜೋಳದ ಕಡಬು ಅಥವಾ ಗೋದಿಯ ಎಲೆಗಡಬುಗಳನ್ನು ಕುದಿಯುವ ನೀರಿನಲ್ಲಿ ಕುದಿಸಿ ದೇವರಿಗೆ ಎಡೆ ತೋರಿಸಿ ಊಟ ಮಾಡುತ್ತಾರೆ.

ಕ್ರೀಡೆಗಳು

ಹಗ್ಗ ಜಗ್ಗುವುದು, ಸಂಗ್ರಾಮ ಕಲ್ಲು ಎತ್ತುವುದು, ಗುಂಡು ಕಲ್ಲು ಎತ್ತುವುದು, ಕಬ್ಬಿಣದ ಹಾರೆ (ಬಂಡಿ ಹಾರೆಗಳನ್ನು ಹೊರೆ ಕಟ್ಟಿ) ಎತ್ತುವುದು, ಸೆರೆಗೆರೆ, ಕಬಡ್ಡಿ (ಹೂತೂತು), ಕುಸ್ತಿ (ಅಳರಸರ ಕಾಲದಲ್ಲಿ ಮುಧೋಳ ಸಂಸ್ಥಾನದಲ್ಲಿ ಹಲಗಲಿಯ ಕುಸ್ತಿ ಪಟುಗಳನ್ನು ಪೋಷಿಸಿದ್ದರಂತೆ. ಹಲಗಲಿಯಲ್ಲಿಯ ಆರಿಬೆಂಚಿ ಎನ್ನುವವರ ಮನೆ ಕುಸ್ತಿಯವರ ಮನೆತನ ಎಂದೇ ಹೆಸರಾಗಿದೆ.) ಇಲ್ಲಿಯ ಗಂಡಸರ ಮೆಚ್ಚಿನ ಆಟಗಳಾದರೆ, ಲಗೋರಿ, ಚಿನ್ನಿದಾಂಡು, ಗಿಡಮಂಗನಾಟ, (ಮರಕೋತಿ ಆಟ) ಕಿರ್ರ, ಸರಬಡಿಗಿ, ಖೋಖೋ, ಮಕ್ಕಳಾಟಗಳಾಗಿವೆ. ಸಣ್ಣ ಹೆಣ್ಣು ಮಕ್ಕಳು ಕುಂಟಾಬಿಲ್ಲೆ, ಕಣ್ಣಾ ಮುಚ್ಚಾಲೆ, ಮಕ್ಕಳೂ ಮಹಿಳೆಯರು ಸೇರಿಯೇ ಅಂಡ್ಯಾಳ, ಪತ್ತಾಮನಿ, ಚಕ್ಕಾ, (Indoor Games) ಆಡುತ್ತಾರೆ.

ಹೋಳಿ ಹಬ್ಬದ ಸಂದರ್ಭದಲ್ಲಿ ಗಂಡಸರು ಬೆಳದಿಂಗಳಿನಲ್ಲಿ ಕುಳಿತು ಹೋಳಿ ಹಬ್ಬಕ್ಕೆ ಸಂಬಂಧಿಸಿದ ಅಶ್ಲೀಲ ಹಾಗೂ ದ್ವಂದ್ವಾರ್ಥ ಸೂಚಿಸುವ ಹಾಡುಗಳನ್ನು ಹಾಡಿ ಖುಷಿ ಪಡುತ್ತಾರೆ. ಶೀಗಿ ಹುಣ್ಣಿಮೆ ಹಾಗೂ ಗೌರಿ ಹುಣ್ಣಿಮೆ ಸಂದರ್ಭದಲ್ಲಿ ಮಹಿಳೆಯರು ಕಟ್ಟಿಗೆ ಕುಳಿತು ಬೆಳದಿಂಗಳಿನಲ್ಲಿ ಶೀಗಿ, ಗೌರಿಗೆ ಸಂಬಂಧಿಸಿದ ಹಾಡುಗಳ ಜೊತೆಗೆ ತಮ್ಮೂರು, ತಮ್ಮೂರ ದೇವರುಗಳ, ಭೂಮಿ ತಾಯಿ, ದುಡಿದು ಹಾಕುವ ಬಸವಣ್ಣ, ಪವಾಡ ಪುರುಷರು ಎಲ್ಲವುಗಳನ್ನು ಸುಶ್ರಾವ್ಯವಾಗಿ ಹಾಡಿ ಸಂತಸ ಪಡುತ್ತಾರೆ.