ಕಲಾವಿದರು

ವರ್ಷಕ್ಕೊಂದು ಬಾರಿ ನಡೆಯುವ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಐದಾರು ದಿನಗಳ ಕಾಲ ನಿತ್ಯವೂ ಒಂದೊಂದು ಓಣಿಯ ಕಲಾವಿದರು ನಾಟಕ ಪ್ರದರ್ಶನ ನೀಡುತ್ತಾರೆ. ಹವ್ಯಾಸಿ ಕಲಾವಿದರಾದ ಇವರು ಕೇವಲ ಜಾತ್ರೆಯ ಸಂದರ್ಭಕ್ಕೆ ನಾಟಕಕ್ಕೆ ಸೀಮಿತಗೊಳಿಸಿಕೊಂಡಿದ್ದರೂ ಅವರೆಲ್ಲಾ ನುರಿತ ಕಲಾವಿದರೇ ಆಗಿದ್ದಾರೆ. ‘ಹೇಮರಡ್ಡಿ ಮಲ್ಲಮ್ಮ’ ಎಂಬ ಬಯಲಾಟವನ್ನು ಇಲ್ಲಿಯವರು ಆಡುತ್ತಾ ನಾದಿನಲ್ಲೆಲ್ಲಾ ಪ್ರಖ್ಯಾತಿ ಪಡೆದಿದ್ದರು. ಭಜನಾ ಹಾಡುಗಾರರು, ತಬಲವಾದಕರು, ಹಾರ್ಮೋನಿಯಂ ವಾದಕರು ಈ ಊರಿನಲ್ಲಿ ಬೇಕಾದಷ್ಟು ಸಂಖ್ಯೆಯಲ್ಲಿದ್ದರೂ ಅವರೆಲ್ಲಾ ಕೃಷಿ ಹಾಗೂ ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿಕೊಂಡಿರುವುದರಿಂದ ಪ್ರಸಂಗ ಬಂದಾಗ ಪಾಲ್ಗೊಂಡು ಕೆಲಸ ಸಾಗು ಮಾಡಿಕೊಡುವ ಹವ್ಯಾಸಿ ಕಲಾವಿದರೇ ಹೊರತು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡವರಲ್ಲ.

ಸಾಕು ಪ್ರಾಣಿಗಳು

ಹಯನಕ್ಕಾಗಿ ಎಮ್ಮೆ, ಆಕಳು, ಆಡು, ಕುರಿ (ಉಣ್ಣೆಗಾಗಿಯೂ)ಗಳನ್ನು ಸಾಕಿದರೆ ಬೇಸಾಯಕ್ಕಾಗಿ ಎತ್ತು, ಕೋಣಗಳನ್ನು ಸಾಕುತ್ತಾರೆ. ಶ್ವಾನ ಪ್ರಿಯರಾದ ಇಲ್ಲಿಯ ಜನ ಮನೆಗೊಂದು ಬೇಟೆಯ ನಾಯಿ ಇರಲೇಬೇಕು ಎನ್ನುವ ಹವ್ಯಾಸಿಅಳು. ಹೊಟ್ಟೆಯಲ್ಲಿ ಕರುಳು ಇದೆಯೋ ಇಲ್ಲವೋ ಎನ್ನುವಂತಹ ಸಪೂರವಾಗಿರುವ ಈ ನಾಯಿ ಅತ್ಯಂತ ಎತ್ತರ, ಉದ್ದ, ನುಣುಪಾದ ಮೈ ಹೊಂದಿರುತ್ತದೆ. ಬಲಿಷ್ಟವಾದ ಸ್ನಾಯುಗಳನ್ನು ಹೊಂದಿ ಚಿಗರೆಗಿಂತಲೂ ವೇಗವಾಗಿ ಓಡಿಹೋಗಿ ಬೇಟೆಯನ್ನು ಹಿಡಿಯುತ್ತದೆಯಷ್ಟೇ ಅಲ್ಲ, ಹಿಡಿದ ಬೇಟೆಯನ್ನು ಬಾಯಲ್ಲಿ ಕಚ್ಚಿ ತಂದು ತನ್ನ ಯಜಮಾನನಿಗೆ ಒಪ್ಪಿಸುವಂತಹ ಸ್ವಾಮಿನಿಷ್ಟ ಪ್ರಾಣಿ. ಹೊರ ರಾಜ್ಯಗಳಲ್ಲಿಯೂ ಈ ನಾಯಿಗೆ ತುಂಬಾ ಬೇಡಿಕೆ ಇದೆ. ದೂರದ ಹೊಲಗಳಿಗೆ ಹೋಗಲು, ಪರಸ್ಥಳಕ್ಕೆ ಹೋಗಲು, ಲಗಳಿ ಹಾಕಿ ನೀರು ತರಲು ಅನೂಕೂಲವಾಗುವಂತೆ ಕುದುರೆಗಳನ್ನೂ ಸಾಕುತ್ತಾರೆ.

ಇಂಥ ಮುಗ್ಧತೆಯೇ ಸಾಕಾರವೆತ್ತಿ ನಿಂತಿರುವ ಹಲಗಲಿ ಗ್ರಾಮದಲ್ಲಿ ಬಂಡಾಯ ಹೇಗೆ ನಡೆಯಿತು? ಆಂಗ್ಲರ ವಿರುದ್ಧ ಸಮರ ಸಾರುವಂತಹ ಸಾಹಸಕ್ಕೆ ಈ ಅಮಾಯಕ ಜನ ಹೇಗೆ ಕೈ ಹಾಕಿದರು? ಬಂಡಾಯದ ಬೀಜಾಂಕುರವಾದದು ಹೇಗೆ? ಎಂಬ ಪ್ರಶ್ನೆಗಳ ಸಾಲೇ ಇಲ್ಲಿ ಧುತ್ತೆಂದು ಬಂದು ನಿಲ್ಲುತ್ತವೆಯಲ್ಲವೇ?

ಇಂದಿಗೂ ಹಲಗಲಿಯ ಸುತ್ತಲಿನಲ್ಲಿ ದಟ್ಟವಾಗಿಯೇ ಇರುವ ಕಾಡಿನಲ್ಲಿ ತಮ್ಮ ರಕ್ಷಣೆಗಾಗಿ ಹಾಗೂ ತಮ್ಮ ಮೂಲ ಉದ್ಯೋಗವನ್ನಾರಿಸಿಕೊಂಡಿದ್ದು ಬೇಟೆಯ ವೃತ್ತಿಯನ್ನೇ. ಕೃಷಿ ಮೂಲ ಉದ್ಯೋಗವಾದರೂ ಅವರು ಹೆಚ್ಚಿಗೆ ನೆಚ್ಚಿಕೊಂಡಿದ್ದು ಬೇಟೆಯ ವೃತ್ತಿಯನ್ನೇ. ಗಂಡಸರು ಬೇಟೆಯಲ್ಲಿ ತೊಡಗಿದರೆ ಹೆಂಗಸರು ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಿ ಊರೊಳಕ್ಕೆ ತಂದು ಮಾರಾಟ ಮಾಡುವವರಾಗಿದ್ದಾರು. ಬೇಟೆಯಾಡುವದರಲ್ಲಿ ಅತ್ಯಂತ ನಿಪುಣರಾದ ಈ ಬೇಡರು, ಮುಧೋಳ ಸಂಸ್ಥಾನಿಕರು ಈ ದಟ್ಟವಾದ ಅರಣ್ಯಕ್ಕೆ ಬೇಟೆಯಾಡಲು ಬಂದರೆ ಅವರೊಂದಿಗಿದ್ದು, ಅರಣ್ಯದಲ್ಲಿ ಸಂಚರಿಸುತ್ತಾ ಅವರಿಗೆ ಬೇಟೆಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು. ಇಂಥ ಸಂದರ್ಭದಲ್ಲಿಯೇ ಬಡಿಯಿತೊಂದು ಸಿಡಿಲು.

ನಿಶಸ್ತ್ರೀಕರಣ ಕಾಯ್ದೆ ಮತ್ತು ಹಲಗಲಿ ಬಂಡಾಯ

ಸೂರ್ಯ ಮುಳುಗದ ಸಾಮ್ರಾಜ್ಯ ನಮ್ಮದೆಂಬ ಬ್ರಿಟಿಷರ ಅಹಮ್ಮಿಕೆಯ ಅಭೇದ್ಯ ಕೋಟೆ ಗೋಡೆಯ ಒಂದೆರಡು ಕಲ್ಲುಗಳನ್ನು ಯಾರ ನೆರವಿಲ್ಲದೆ ಸಡಿಲಿಸಿದವರು ಹಲಗಲಿಯ ಬೇಡ ಬಂಟರು. ಅವರು ಕಲಿತವರಲ್ಲ. ಕಾನೂನಿನ ತಿಳುವಳಿಕೆಯೂ ಅವರಿಗಿದ್ದಿದ್ದಿಲ್ಲ. ಯಾವ ಅರಸೊತ್ತಿಗೆಯ, ಪಟೇಲರ, ಸಂಸ್ಥಾನಿಕರ, ದೇಸಾಯಿಗಳ, ದೇಶಪಾಂಡೆಗಳ ನೆರವೂ ಅವರಿಗಿದ್ದಿದಿಲ್ಲ. ಶಸ್ತ್ರಾಸ್ತ್ರಗಳನ್ನು ಆಂಗ್ಲರಿಗೆ ಒಪ್ಪಿಸುವದೆಂದರೆ ಮಗ್ಗುಲಲ್ಲಿಯ ಹೆಂಡತಿಯನ್ನು ಒಪ್ಪಿಸಿದಂತೆ ಎಂಬುದು ಅವರ ಗಟ್ಟಿಯಾದ ನಿಲವು. ಒಮ್ಮೆ ಗೆದ್ದು ಮತ್ತೊಂದು ಬಾರಿ ಆಂಗ್ಲರ ಪಿತೂರಿಗೆ ಬಲಿಯಾಗಿ, ನೇಣುಗಂಬವೇರಿ ಮಣ್ಣಲ್ಲಿ ಮಣ್ಣಾಗಿ ಹೋದವರು. ಇತಿಹಾಸದ ಪುಟಗಳಲ್ಲಿ ತಮ್ಮದೇ ಹೆಜ್ಜೆ ಗುರುತುಗಳನ್ನು ಮೂಡಿಸಿದವರು ಈ ಹಲಗಲಿಯ ಕಲಿಗಳು.

ಒಂದು ಶತಮಾನದ ಅವಧಿಯಲ್ಲಿ ಕಂಪನಿ ಸರಕಾರ ಇಡೀ ಭರತ ಭೂಮಿಯನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡು ಸಾಮ್ರಾಜ್ಯ ವಿಸ್ತರಿಸಿದ್ದು ಹಲವು ಕುಟಿಲ ನೀತಿಗಳ ಮೂಲಕ ರಾಜ ಮನೆತನದಲ್ಲಿ ಗದ್ದುಗೆಗಾಗಿ ಹೋರಾಟ ನಡೆದಾಗ ಮುಂದೊಂದು ದಿನ ತಮಗೆ ಅಪಾಯ ಕಾದಿದೆ ಎಂಬ ಅರಿವೂ ಇರದ ಅರಸರು ಬ್ರಿಟಿಷರಿಂದ ಸೈನಿಕ ಸಹಾಯ ಪಡೆಯುತ್ತಿದ್ದುದು ಕೂಡ ಪ್ರಮುಖ ಅಂಶ. ಸಹಾಯಕ ಸೈನ್ಯ ಪದ್ಧತಿಯ ಮೂಲಕ ನೆರವು ನೀಡಿ, ನೆರವು ಪಡೆದವರ ಖರ್ಚಿನಲ್ಲಿಯೇ ತಮ್ಮ ಸೈನ್ಯದ ಪೋಷಣೆಮಾಡಿ, ಹಲವಾರು ಷರತ್ತುಗಳನ್ನು ವಿಧಿಸಿ, ಷರತ್ತು ಉಲ್ಲಂಘನೆಯಾಯಿತೆಂದು ಕ್ಯಾತೆ ತೆಗೆದು ಆ ರಾಜನನ್ನು ಗದ್ದುಗೆಯಿಂದ ಇಳಿಸುವುದು ಒತ್ತಟ್ಟಿಗಾದರೆ, ಡಾಲ್‍ಹೌಸಿಯ ಸಂದರ್ಭದಲ್ಲಿ ದತ್ತಕ ಪದ್ಧತಿ ರದ್ಧತಿ ಇನ್ನೊಂದು ಬಗೆಯದು. ತಾವು ವಿಧಿಸಿದ ಕಪ್ಪನ್ನು ನೀಡಲಿಲ್ಲವೆಂದೋ ಅಥವಾ ಹೆಚ್ಚಿಸಲು ಒಪ್ಪಲಿಲ್ಲವೆಂದೋ ಹಲವಾರು ನೆಪವೊಡ್ಡಿ ಸಣ್ಣ ಸಣ್ಣ ರಾಜ್ಯಗಳನ್ನು ಕಂಪನಿ ಸರ್ಕಾರದ ನೇರ ಆಡಳಿತಕ್ಕೆ ಸೇರಿಸಿಕೊಂಡು ಸಾಮ್ರಾಜ್ಯ ವಿಸ್ತರಿಸಿಕೊಳ್ಳಲಾಯಿತು. ಅಂಥ ಸಂದರ್ಭಗಳಲ್ಲೆಲ್ಲಾ ಊಳಿಗಮಾನ್ಯ, ಪಾಳೆಗಾರಿಕೆ ವ್ಯವಸ್ಥೆಯ ಆ ಕಾಲದಲ್ಲಿ ರಾಜನ, ದಳವಾಯಿಯ ಪ್ರಜೆಗಳು ಸ್ವಾತಂತ್ರ್ಯ ಕಳೆದುಕೊಂಡು ತೀವ್ರ ಅಸಮಾಧಾನಕ್ಕೆ ಒಳಗಾಗಿದ್ದು ಸಹಜವಾಗಿತ್ತು. ಇಲ್ಲಿ ಎಲ್ಲರೂ ಎಲ್ಲರ ವಿರುದ್ಧ, ಹೋರಾಟ ಮಾಡುತ್ತಿದ್ದುದರಿಂದ ಬ್ರಿಟೀಷರು ಮಧ್ಯ ಪ್ರವೇಶಿಸಿ, ಮುನ್ನುಗ್ಗಿ ಎಲ್ಲರನ್ನೂ ಸದೆ ಬಡೆಯಲು ಸಾಧ್ಯವಾಯಿತು. ಒಂದು ಬುಡಕಟ್ಟು ಇನ್ನೊಂದು ಬುಡಕಟ್ಟಿನ ವಿರುದ್ಧ, ಒಂದು ಜಾತಿ ಇನ್ನೊಂದು ಜಾತಿಯ ವಿರುದ್ಧ, ದೇಶದ ವಿವಿಧ ವಿಭಾಗಗಳು ಪರಸ್ಪರ ರಾಚಯಿಕ ಪ್ರತ್ಯೇಕತೆ ಹಾಗೂ ದ್ವೇಷಾಸೂಯೆ ಹೊಂದಿದ್ದೇ ಅಲ್ಲದೇ, ಅವರು ನಮ್ಮ ದೇಶೀಯ ಸೈನ್ಯವನ್ನೇ ಬಳಸಿ ಹೆದರಿಕೆ, ಬೆದರಿಕೆಯಿಂದ ಅಳಿದರೆಂಬುದು ಇಲ್ಲಿ ಕಟು ಸತ್ಯ.

“ಬ್ರಿಟಿಷರ ಸಾರ್ವಭೌಮತ್ವದ ಅಡಿಪಾಯ ಹಿಂದೂಸ್ಥಾನವೆಂದು ಕರೆಯಲಾಗುವ ಈ ಭೌಗೋಳಿಕ ನೆಲೆಗಟ್ಟಿನೊಳಗೆ ಅಡಕವಾಗಿರುವ ಜನಾಂಗೀಯ, ಬುಡಕಟ್ಟಿನ, ಜಾತಿಯ, ಮತ ಧರ್ಮೀಯ ನಂಬಿಕೆಗಳ ಮತ್ತು ರಾಜ ಮಹಾರಾಜರ ಸ್ವಾಯತ್ತತೆಗಳ ನಡುವಿನ ನಿರಂತರ ವೈವಿಧ್ಯಗಳು ಬ್ರಿಟಿಷ ಚಕ್ರಾಧಿಪತ್ಯ ಸ್ಥಾಪನೆಗೆ ನೆರವಾದವು” ಎಂದು ಕಾರ್ಲ್ ಮಾರ್ಕ್ಸ್ ಒತ್ತಟ್ಟಿಗೆ ವಿಶ್ಲೇಷಿಸುತ್ತಾರೆ.

ಈ ದೇಶದ ಸ್ವಾತಂತ್ರ್ಯ ಹೋರಾಟವು ವಿದ್ರೋಹದ ಹೊಗೆ ಸೂಸುತ್ತಿತ್ತು ಎಂದರೂ ಗಾಂಧೀಜಿ ಮತ್ತು ಕಾಂಗ್ರೆಸ್ ಪಕ್ಷದ ನೇತೃತ್ವದ ಹೋರಾಟಗಳು ಹೇಗೆ ಮುಖ್ಯವೋ ಹಾಗೆಯೇ ೧೮೫೭ ಹಾಗೂ ಅದಕ್ಕಿಂತಲೂ ಮುಂಚೆಯೇ ನಡೆದ ಹೋರಾಟಗಳು ಕೂಡ ಅಷ್ಟೇ ಮುಖ್ಯವಾಗುತ್ತವೆ. ೧೮೫೭ ನಮ್ಮ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ನಾವು ಪರಿಗಣಿಸಿದರೂ ಪ್ಲಾಶೀ ಕದನದ ನಂತರ ೧೭೬೯ ರಿಂದ ೧೮೫೬ರವರೆಗಿನ ಈ ಮಧ್ಯದ ಅವಧಿಯಲ್ಲಿ ಉತ್ತರ ಭಾರತದಲ್ಲಿ ೨೩, ಮುಂಬೈ ಮತ್ತು ಪಶ್ಚಿಮ ಭಾರತದಲ್ಲಿ ೨೩ ಮತ್ತು ದಕ್ಷಿಣ ಭಾಗದಲ್ಲಿ ೧೯ ದಂಗೆಗಳಲ್ಲದೇ ಇನ್ನೂ ಗಣನೆಗೆ ತೆಗೆದುಕೊಳ್ಳದ ನೂರಾರು ಪ್ರತಿರೋಧಗಳು ನಡೆದು ಹೋಗಿವೆ ಎಂದು ಇತಿಹಾಸಕಾರ ತಿ.ತಾ. ಶರ್ಮಾ ತಮ್ಮ ಪುಸ್ತಕ ‘ವಿಕ್ರಾಂತ ಭಾರತ’ ದಲ್ಲಿ ಪಟ್ಟಿ ಮಾಡಿ ಹೇಳಿದ್ದಾರೆ. ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಸುರಪುರದ ವೆಂಕಟಪ್ಪ, ಸಂತಾಲರು, ಕೊಟ್ಟಾಯಂನ ಕೇರಳವರ್ಮ, ಉತ್ತರ ಅರ್ಕಾಟಿನ ಪಾಳೆಯಗಾರರು, ರಾಯಲ ಸೀಮೆಯ ಪಾಳೆಯಗಾರರು ಇವರೆಲ್ಲ ೧೮೫೭ ರ ಪೂರ್ವದ ಪಟ್ಟಿಯಲ್ಲಿ ಸೇರುತ್ತಾರೆ. ಇವೆಲ್ಲವನ್ನು ಕೇವಲ ದೊಂಬಿ, ದಂಗೆ ಗೆರಿಲ್ಲಾ ಸಮರಗಳೆಂದು ಗುರುತಿಸಿದರೂ ಕೂಡಾ ಎಲ್ಲ ದಂಗೆಗಳ ಸ್ವರೂಪ ಒಂದೇ ಬಗೆಯದು. ಅದು ಬಿಳಿಯರಿಗೆ ಅಧೀನರಾಗಿರಲು ಒಲ್ಲದವರು ತಮ್ಮ ಸ್ವಾತಂತ್ರ್ಯ ಉಳಿಸಿಕೊಳ್ಳಲು ನಡೆಸಿದ ಹಣಾಹಣಿ ಹೋರಾಟಗಳು ಎಂಬುದನ್ನು ಮರೆಯಲಾಗದು. ೧೮೫೭ರ ಪ್ರತಿರೋಧ ಇಡೀ ರಾಷ್ಟ್ರವೇ ಎದುರು ಬಿದ್ದ ಪ್ರಮಾಣದ್ದು ಎಂಬುವದೇ ಅದರ ವಿಶಿಷ್ಟತೆ. ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನೇ ಸಿಪಾಯಿಗಳ ಬಂಡಾಯ ದಂಗೆಯೆಂದು ಮೂದಲಿಸಿದವರು. ಈ ಮೊದಲಿನ ದಂಗೆಗಳನ್ನು ಗಣನೆಗೆ ತೆಗೆದುಕೊಳ್ಳದಿರುವದರಲ್ಲಿ ಆಶ್ಚರ್ಯವೇನು ಕಾಣದು.

ಮುನ್ನೂರು ಜನರನ್ನು ಹಲಗಲಿ ಬಂಡಾಯದಲ್ಲಿ ಸೆರೆಹಿಡಿಯಲಾಯಿತೆಂದು ದಾಖಲಿಸಿದರೂ ಕೂಡಾ ಬೆರಳಿಣಿಕೆಯಷ್ಟು ಜನರನ್ನು ಗುರುತಿಸಲು ಸಾಧ್ಯವಾಗಿದ್ದು ಮಾತ್ರ ತೀವ್ರ ವಿಷಾದನೀಯ ಸಂಗತಿ. ಬ್ರಿಟೀಷರು ದಂಗೆಗೆ ಸಂಬಂಧಿಸಿದಂತೆ ಚರಿತ್ರೆಗಳನ್ನು ಬರೆಯಲು ಭಾರತೀಯರಿಗೆ ಕೊನೆಯವರೆಗೂ ಅವಕಾಶವನ್ನು ಕೊಡಲೇ ಇಲ್ಲ. ಐವತ್ತು ವರ್ಷಗಳ ನಂತರ ಸಾವರ್ ಕರ್ ಅವರು ಕದ್ದು ಮುಚ್ಚಿ ಬರೆದರೆಂದು ಹೇಳಲಾಗುತ್ತಿದೆ. ಆಗ ಚರಿತ್ರೆ ಬರೆದವರೆಲ್ಲಾ ಬ್ರಿಟಿಷರು, ಅವರ ಸೈನ್ಯಾಧಿಕಾರಿಗಳು ಮಾತ್ರ, ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ನಾವು ಅರಿತುಕೊಳ್ಳಬೇಕಾದರೆ ಕೇವಲ ಅವರ ಬರಹಗಳು, ಸರಕಾರಿ ಹಾಗೂ ಮಿಲಿಟರಿ ದಾಖಲೆಗಳ ಮೂಲಕ ಮಾತ್ರ. ಅದು ಜನ ಸಾಮಾನ್ಯರಿಂದ ಸಾಧ್ಯವೇ? ಎಂದು ನಾವು ಕೂಡಾ ಇಲ್ಲಿ ಆಲೋಚಿಸಬೇಕಾಗುತ್ತದೆ. ಅದೇನೇ ಇರಲಿ ಬುಡಕಟ್ಟು ಜನಾಂಗಗಳಲ್ಲಿ ಪ್ರಬಲ ಜನಾಂಗವಾಗಿ ಎದ್ದು ಕಾಣುತ್ತಿರುವ ಬೇಡ, ಬೇಡರ, ವಾಲ್ಮೀಕಿ, ನಾಯಕ, ಹಳಬ ಹೀಗೆ ಹಲವಾರು ಹೆಸರುಗಳಿಂದ ಗುರ್ತಿಸಿಕೊಂಡಿರುವ ಬೇಡ ಜನಾಂಗದ ಕುರಿತಾಗಿ ಹಾಗೂ ಬ್ರಿಟೀಷರ ನಿಶಸ್ತ್ರೀಕರಣದ ಕಾಯ್ದೆಯ ವಿರುದ್ಧ ನಡೆದ ಹಲಗಲಿ ಬಂಡಾಯದ ಕುರಿತಾಗಿ ನನ್ನೆರಡು ಸಾಲುಗಳು.

೧೮೫೭ ರ ಶತಮಾನೋತ್ಸವದ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು (೧೬-೮-೧೯೫೭ ರಂದು) ಹೀಗೆ ಹೇಳುತ್ತಾರೆ. “ನಾವು ನಮ್ಮ ಇತಿಹಾಸದಲ್ಲಿ ಕಲಿಯಬೇಕಾದ ಮುಖ್ಯ ಸಾಧನವೆಂದರೆ, ನಮ್ಮನ್ನು ಹೊರಗಿನವರು ಯಾರೂ ಜಯಿಸಲಿಲ್ಲ. ನಮ್ಮನ್ನು ಸೋಲಿಗೆ ದೂಡಿದ್ದು ನಮ್ಮ ಆಂತರಿಕ ಶತ್ರುಗಳೇ. ಅಸಾಧಾರಣ ಪೌರುಷ. ಕೆಚ್ಚನ್ನು ಪ್ರದರ್ಶಿಸಿದ, ಎಣಿಕೆಗೆ ಸಿಗದಷ್ಟು ಜನರ (ಎಲ್ಲರ ಕಥೆ ಒಂದೇ) ಅಪಾರ ತ್ಯಾಗ ಮತ್ತು ಕಷ್ಟಗಳ ನಿಚ್ಚಳ ಅನುಭವ ೧೮೫೭ರ ಪ್ರಕರಣ ನಮಗೆ ರಾಷ್ಟ್ರೀಯತೆ ಕಲ್ಪನೆಯನ್ನು ನೀಡಿತು ಎಂಬುದು ಅದರ ಮಹತ್ವ. ಬ್ರಿಟಿಷರು ತಾಂತ್ರಿಕವಾಗಿ ನಮಗಿಂತಲೂ ಉತ್ತಮವಾಗಿದ್ದರೆಂದೋ, ಹೆಚ್ಚು ಶಿಸ್ತಿನಿಂದ ಕೂಡಿದ್ದರಿಂದಲೋ ನಾವು ಸೋತವರಲ್ಲ. ಅವರು ನಮ್ಮನ್ನು ತುಳಿಯಲು ಬಳಸಿದ್ದು ನಮ್ಮ ನಾಯಕತ್ವದಲ್ಲಿಯ ಒಡಕು, ಪರಸ್ಪರ ಸಂಚು, ಮತಧರ್ಮಾಧಾರಿತ, ಆರ್ಥಿಕಾಧಾರಿತ, ಜಾತಿ ಆಧಾರಿತ, ಪ್ರಾದೇಶಿಕ ಆಧಾರಿತ ಅಭಿಪ್ರಾಯ ಬೇಧಗಳ ಅತಿರೇಕಗಳ ಮೂಲಕ” ಎಂದು ಬಣ್ಣಿಸುತ್ತಾರೆ.

ಒಂದು ಮಾತನ್ನಿಲ್ಲಿ ಗಮನಿಸಬೇಕು, ಮಾಕ್ಸ್ ವಾದದಲ್ಲಿ ಕ್ರಾಂತಿ ಎಂದರೆ ಅಧಿಕಾರವೆನ್ನುವುದು ಒಂದು ವರ್ಗದಿಂದ ಇನ್ನೊಂದು ವರ್ಗಕ್ಕೆ ಹಸ್ತಾಂತರಗೊಳ್ಳುವುದೇ ಆಗಿದೆ. ೧೮೫೭ ರ ಸಂದರ್ಭದಲ್ಲಿ ಊಳಿಗಮಾನ್ಯ ವರ್ಗದಿಂದ ಹೊಸದೊಂದು ವರ್ಗಕ್ಕೆ ಅಧಿಕಾರ ಹಸ್ತಾಂತರವಾಗಬೇಕಾಗಿತ್ತು. ಅದು ಹಸ್ತಾಂತರಗೊಳ್ಳಲು ೧೯೪೭ರವರೆಗೂ ಅಂದರೆ ಒಂದು ಶತಮಾನದಷ್ಟು ಅವಧಿಯನ್ನು ನಾವು ಕಾಯಬೇಕಾಯಿತು. ಯಾವ ಉದ್ದೇಶಕ್ಕಾಗಿ ಗ್ರಾಮೀಣ ಪ್ರದೇಶದ ರೈತರು, ಕೂಲಿಗಳು, ನಿಮ್ನ ವರ್ಗದ, ಅತೀ ಶೋಶಣೆಗೊಳಗಾಗಿದ್ದ ಜನ ೧೮೫೭ ರ ಕಾಲಘಟ್ಟದಲ್ಲಿ, ನಂತರ ಗಾಂಧೀಜಿಯ ಕಾಲಘಟ್ಟದಲ್ಲಿ ಈ ಸ್ವಾತಂತ್ರ್ಯ ಸಂಗ್ರಾಮದ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರೋ, ಅದು ಸ್ವಾತಂತ್ರ್ಯ ಸಿಕ್ಕ ೬೦ ವರ್ಷಗಳ ನಂತರ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನೂರೈವತ್ತು ವರ್ಷಗಳ ನಂತರವಾದರೂ ಅವರ ಉದ್ದೇಶ ಈಡೇರಿದೆಯೇ ಎಂಬುದನ್ನು ಸ್ವಲ್ಪ ಗಂಭೀರವಾಗಿ ಆಲೋಚಿಸಬೇಕಾಗಿದೆ. ಅಭಿವೃದ್ಧಿಯಾಗಿದೆಯಾದರೂ ಬಡವ ಬಲ್ಲಿದರ ತಾರತಮ್ಯ ನಿಂತಿಲ್ಲ, ಜಾತಿಯ ಅಟ್ಟಹಾಸ, ಬಡರೈತನ ಆತ್ಮಹತ್ಯೆ, ಕೋಮುಜ್ವಾಲೆ ಹಿಂದಿಗಿಂತಲೂ ಹೆಚ್ಚು ಕಾಣಿಸಿಕೊಳ್ಳುತ್ತಿವೆ ಎಂಬುದು ಸುಳ್ಳೇನಲ್ಲ. ಇಂಥ ವಿಷವರ್ತುಲದಿಂದ ಹೊರಬರಬೇಕು ಎನ್ನುವ ಅವರ ನೂರೈವತ್ತು ವರ್ಷಗಳ ಮಹದಾಶೆ ಇನ್ನೂ ಕೈಕೊಂಡಿಲ್ಲವೆಂಬುದು ಬೆಳಕಿಗೆ ಬೆಳಕು ಅಂದಷ್ಟೇ ಸತ್ಯ.

ಸ್ವಾತಂತ್ರ್ಯ ಸಂಗ್ರಾಮಕ್ಕೆ ಹಲಗಲಿ ಬೇಡರ ಕೊಡುಗೆ

ರಾಮಾಯಣದ ಮೂಲ ಕರ್ತೃ ಮಹರ್ಷಿ ವಾಲ್ಮೀಕಿಯಿಂದ ಪ್ರಾರಂಭಗೊಳ್ಳುವ ಈ ಜನಾಂಗದ ಅಧ್ಯಾಯ ರಾಮನ ಬರುವಿಕೆಗಾಗಿ ಬೋರೆ ಹಣ್ಣುಗಳನ್ನಿಟ್ಟುಕೊಂಡು ಕಾಯುತ್ತಿದ್ದ ಶಬರಿ, ಪ್ರತ್ಯಕ್ಷವಾಗಿ ದ್ರೋಣಾಚಾರ್ಯರಿಂದ ಕಲಿಯದಿದ್ದರೂ ಅವರ ಕೃಪೆಯಿಂದಲೇ ಕಲಿತಿದ್ದೇನೆಂಬ ನಂಬಿಕೆಯಿಂದ ಗುರುದಕ್ಷಿಣೆಯಾಗಿ ಹೆಬ್ಬೆರಳನ್ನೇ ಕತ್ತರಿಸಿಕೊಟ್ಟ ಮಹಾಭಾರತದ ಏಕಲವ್ಯ, ಶಿವನಿಗಾಗಿ ಭಕ್ತಿಯಿಂದ ಕಣ್ಣನ್ನೇ ಕಿತ್ತುಕೊಟ್ಟ ಶಿವಭಕ್ತ ಬೇಡರ ಕಣ್ಣಪ್ಪ, ಮದ್ದಾನೆಯ ಮದವಡಗಿಸಿದ ಪಾಳೆಗಾರ ಮದಕರಿನಾಯಕ, ಬಿಚ್ಚುಗತ್ತಿ ಭರಮಪ್ಪ ನಾಯಕ, ಸುರಪುರದ ದೊರೆಗಳು, ಆಂಗ್ಲರು ಹೇರಿದ ಶಸ್ತ್ರಾಸ್ತ್ರ ನಿಷೇದ ಕಾಯ್ದೆಗೆ ಶಸ್ತ್ರಚಿಕಿತ್ಸೆ ಮಾಡಿದ ಹಲಗಲಿಯ ಬೇಡರು, ಸಿರಿವಂತಿಕೆ ಕೇವಲ ಕೆಲವೇ ಜನರ ಕಪಿಮುಷ್ಟಿಯಲ್ಲಿ ಕೂಡಿ ಬೀಳದೇ ಅದು ಇಲ್ಲದವರತ್ತ ಹರಿದು ಬರಬೇಕೆನ್ನುವ ಆದರ್ಶ ಹೊತ್ತು ಬಂಡೆದ್ದು, ಪಿತೂರಿಗೆ ಬಲಿಯಾದ ಸಿಂಧೂರ ಲಕ್ಷ್ಮಣ ಇವರೆಲ್ಲ ಈ ಬೇಡ ಜನಾಂಗದ ನಿರಭ್ರ ನೀಲಾಕಾಶದಲ್ಲಿ ಫಳಫಳನೆ ಹೊಳೆಯುವ ನಕ್ಷತ್ರಗಳು. ಹಿಂದುಳಿದ ವರ್ಗಕ್ಕೆ ವರ ನೀಡಿದ ‘ಬೈಬಲ್’ ಎಂದೇ ಹೆಸರಾದ ‘ಹಾವನೂರ ವರದಿ’ ಯ ಎಲ್.ಜಿ. ಹಾವನೂರ, ಬಡ ಮಕ್ಕಳಿಗೆ ಅನ್ನ, ಬಟ್ಟೆ ವಸತಿಯ ವ್ಯವಸ್ಥೆ ಮಾಡಿ ವಿದ್ಯಾರ್ಜನೆ ಮಾಡಿಸುತ್ತಿರುವ “ನಾಯಕ ಸ್ಟೂಡೆಂಟ್ಸ್ ಫೆಡರೇಶನ್” ನ ರೂವಾರಿಗಳೂ ಹಲವಾರು ಸಂಘ ಸಂಸ್ಥೆಗಳನ್ನು ಹುಟ್ಟುಹಾಕಿ ಬೆಳೆಸುತ್ತಿರುವ ಗೋಕಾಕದ ಜಾರಕಿಹೊಳಿ ಸಹೋದರರು. ಚಲನಚಿತ್ರ ನಟ ಶಶಿಕುಮಾರ ಕೂಡಾ ಈ ಜನಾಂಗದ ಧುರಿಣರೇ ಆಗಿದ್ದಾರೆಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಸದ್ಯಕ್ಕೆ ಕರ್ನಾಟಕದಿಂದ ಇಬ್ಬರು ಲೋಕಸಭಾ ಸದಸ್ಯರು, ಏಳು ಜನ ವಿಧಾನ ಸಭಾ ಸದಸ್ಯರು, (ವಿಸರ್ಜಿತ ವಿಧಾನಸಭೆ) ನಾಲ್ಕು ಜನ ವಿಧಾನ ಪರಿಷತ್ ಸದಸ್ಯರು ಈ ಜನಾಂಗವನ್ನು ಪ್ರತಿನಿಧಿಸುತ್ತಿದ್ದಾರೆ.

ಬೇಟೆಯಾಡಿಯೇ ಬದುಕು ಸಾಗಿಸುತ್ತಿದ್ದರಿಂದಲೇ ಈ ಜನಾಂಗಕ್ಕೆ ಬೇಡರೆಂದೂ, ವಾಲ್ಮೀಕಿ ಮಹರ್ಷಿ ಇವರ ಮೂಲ ಪುರುಷನಾಗಿದ್ದರಿಂದ ವಾಲ್ಮೀಕಿ ಜನಾಂಗದವರೆಂದೂ, ಊರಿನ ಸಾಮಾಜಿಕ ಆಡಳಿತಾತ್ಮಕ ವ್ಯವಹಾರಗಳಲ್ಲಿ ‘ನಾಯಕ’ (ಮುಖ್ಯಸ್ಥ) ರಾಗಿ ಪಾಲ್ಗೊಳ್ಳುತ್ತಿದ್ದರಿಂದ ನಾಯಕ ಜನಾಂಗವೆಂದೂ, ಅನೇಕ ಗ್ರಾಮಗಳಲ್ಲಿ ಉಳಿದೆಲ್ಲ ಜನಾಂಗಗಳು ಅಲ್ಲಿ ಹೊಸದಾಗಿ ಪ್ರವೇಶ ಮಾಡುವ ಮುನ್ನವೇ ಇವರು ಅಲ್ಲಿಯ ಮೂಲ ನಿವಾಸಿಗಳಾಗಿದ್ದರಿಂದ ಹೊಸದಾಗಿ ಪ್ರವೇಶ ಮಾಡಿದ ಜನ ಮೊದಲಿದ್ದ ಇವರನ್ನು ಹಳಬರೆಂದು ಕರೆದಿದ್ದರಿಂದ ಒಂದಿಷ್ಟು ಕಡೆ ಇವರನ್ನು ಹಳಬರೆಂದೂ ಗುರ್ತಿಸುತ್ತಾರೆ. ಅಲಲ್ಲಿ ಪಾಳೆಗಳನ್ನು ಕಟ್ಟಿಕೊಂಡು ಅದರಲ್ಲಿಯೇ ಪ್ರಬಲರಾಗಿದ್ದವರು ಅಲ್ಲಿಯ ಒಡೆತನವನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡು ಪಾಳೆಗಾರರಾಗಿ ಆಡಳಿತ ನಡೆಸಿದವರೂ ಇದೇ ಬೇಡ ಜನಾಂಗದವರೆಬುದನ್ನು ಇತಿಹಾಸದ ಪುಟಗಳಿಂದ ಅರಿಯುತ್ತೇವೆ.

ನಾಯಕ ಜನಾಂಗವನು ಅಭ್ಯಸಿಸುತ್ತಾ ಹೋದಂತೆ ಗ್ರಾಮ ನಾಯಕ ಹಾಗೂ ಮ್ಯಾಸನಾಯಕ ಎಂಬ ಎರಡು ಪಂಗಡಗಳು ನಮಗೆ ಎದ್ದು ಕಾಣುತ್ತವೆ. ಗ್ರಾಮ ನಾಯಕರು ಗ್ರಾಮವನ್ನು ಕಟ್ಟಿಕೊಂಡು, ಕೃಷಿಯನ್ನೇ ಮೂಲ ಉದ್ಯೋಗವನ್ನಾಗಿರಿಸಿಕೊಂಡು, ಬೇಟೆಯನ್ನು ಕೇವಲ ಹವ್ಯಾಸವನ್ನಾಗಿ ಇರಿಸಿಕೊಂಡು ಒಂದೆಡೆ ನೆಲೆ ನಿಂತವರಾಗಿರುತ್ತಾರೆ.

ಮ್ಯಾಸ ನಾಯಕರು ಸಂಪೂರ್ಣವಾಗಿ ಅಲೆಮಾರಿಗಳಾಗಿಯೇ ಉಳಿದು, ಬೇಟೆಯನ್ನೇ ಮೂಲ ಉದ್ಯೋಗವನ್ನಾಗಿರಿಸಿಕೊಂಡು, ಎಲ್ಲೋ ಅಷ್ಟಿಷ್ಟು ಕೃಷಿಯನ್ನು ಮಾಡಿಕೊಂಡರೆ ಮಾಡಿಕೊಂಡರು. ಇಲ್ಲದಿದ್ದರೆ ಇಲ್ಲ. ಹೀಗಾಗಿ ಮ್ಯಾಸನಾಯಕರು ನಿಂತಲ್ಲಿ ನೆಲೆ ನಿಲ್ಲದ ಅಲೆಮಾರಿಗಳಾಗಿರುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ.

ಈ ಬೇಡ ಜನಾಂಗದಲ್ಲಿ ಗೋಸಲೇರು, ಗುಜ್ಜಲಾರ, ಮುಂಬಾಲರ, ಹೊನ್ನುಂಗುರ, ಹೊನ್ನಛತ್ರ, ಮಲ್ಲಾರ ಹೀಗೆ ಇನ್ನೂ ಹತ್ತು ಹಲವಾರು ಒಳಪಂಗಡಗಳಿದ್ದು ತಮ್ಮದಲ್ಲದ ಪಂಗಡದವರೊಡನೆ ನೆಂಟಸ್ತನ ಮಾಡುತ್ತಾರೆ. ವರದಕ್ಷಿಣೆಯ ಪೆಡಂಭೂತ ಇವರಲ್ಲಿ ಹಣಿಕಿ ಹಾಕಿಲ್ಲ. ಬದಲಿಗೆ ಹೆಣ್ಣಿಗೆ ತೆರುವು (ವಧುದಕ್ಷಿಣೆ) ಕೊಡುತ್ತಾರೆ. (ಇತ್ತೀಚೆಗೆ ನಾಗರಿಕ ಸಮಾಜದ ವರದಕ್ಷಿಣೆಯ ದುರ್ಗಂಧದ ಗಾಳಿ ಈ ಸಮಾಜದ ಮೇಲೂ ಬೀಸಿ ಅವರೂ ಕೂಡ ವರದಕ್ಷಿಣೆ ಪಡೆಯತೊಡಗಿದ್ದಾರೆಂದು ವಿಷಾರದಿಂದ ಹೇಳುವುದಿಲ್ಲ ಅನಿವಾರ್ಯ).

ಮಹಾಭಾರತದಲ್ಲಿ ಅರ್ಜುನನಿಗೆ ಪಾಶುಪತಾಸ್ತ್ರ ನೀಡುವ ಸಂದರ್ಭದಲ್ಲಿ ಸಾಕ್ಷಾತ್ ಶಿವನೇ ಬೇಡನ ರೂಪ ಧರಿಸಿ ಬಂದಿದ್ದನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಈ ಜನಾಂಗ ತಮ್ಮ ಭಕ್ತಿಯನ್ನು ಪ್ರಕಟಿಸುವದೂ, ಆರಾಧಿಸುವದೂ ಕೇವಲ ಶಿವನನ್ನಷ್ಟೇ ಅಲ್ಲ, ಶ್ರೀಶೈಲದ ಮಲ್ಲಿಕಾರ್ಜುನನಿಂದ ಹಿಡಿದು ತಿರುಪತಿ ತಿಮ್ಮಪ್ಪ, ಶ್ರೀರಾಮಚಂದ್ರ, ಆಂಜನೇಯ, ದುರ್ಗಾ, ಲಕ್ಷ್ಮೀಯಿಂದ ಹಿಡಿದು ಶಬರಿಮಲೈ ಅಯ್ಯಪ್ಪನವರೆಗೆ ಇವರ ಭಕ್ತಿ ಸಮರ್ಪಣೆ. ಒಂದಿಷ್ಟು ಗ್ರಾಮಗಳಲ್ಲಿ ಹನುಮಂತ ದೇವರ, ದುರ್ಗಾದೇವಿಯ ಅರ್ಚಕರಾಗಿಯೂ ಹಲವಾರು ಕುಟುಂಬಗಳು ಪೂಜೆ ನಮಸ್ಕಾರ ಮಾಡಿಕೊಂಡು ಹೋಗುತ್ತಿರುವದನ್ನು ನಾವಿಂದು ಕಾಣುತ್ತೇವೆ.

ಹಲಗಲಿಯ ಬೇಡರು

ಭಾರತೀಯರು ಹೆಮ್ಮೆಯಿಂದ ಹೇಳಿಕೊಳ್ಳುವ ಸ್ವಾತಂತ್ರ್ಯ ಸಂಗ್ರಾಮಕ್ಕೆ, ಆಂಗ್ಲರು ಮೂದಲಿಸಿದ ಸಿಪಾಯಿಗಳ ಬಂಡಾಯಕ್ಕೆ ತಮ್ಮದೂ ಒಂದಿಷ್ಟು ಕೊಡುಗೆಯನ್ನು ಕಾಣಿಕೆಯನ್ನು ಸಮರ್ಪಿಸಿದ ಹಲಗಲಿಯ ಬೇಡ ಜನಾಂಗ ಆತ್ಮಾಭಿಮಾನ ಉಳ್ಳವರು. ಆಳ್ತನದಲ್ಲಿ ಗಟ್ಟಿಗರು. ನಿರಂತರ ಬೇಟೆಯಂತಹ ಹೋರಾಟದ ವೃತ್ತಿಯನ್ನೇ ಅವಲಂಬಿಸಿಕೊಂಡಿದ್ದ ಅವರು ಬೇಟೆಯನ್ನು ತಮಗೆ ನೆರವಾಗಲು ಬಗೆ ಬಗೆಯ ಬೇಟೆಯ ನಾಯಿಗಳನ್ನು ಸಾಕಿಕೊಂಡಿದ್ದರು. ಅಂದು ದಟ್ಟವಾದ ಕಾಡಿನಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದ ಚಿರತೆಗಳನ್ನು ಕೂಡಾ ಈ ಬೇಡರು ಸಾಕಿದ ನಾಲ್ಕಾರು ಬೇಟೆ ನಾಯಿಗಳು ಸೇರಿಕೊಂಡು ಅಟ್ಟಾಡಿಸಿಕೊಂಡು ಬೇಟೆಯಾಡುತ್ತಿದ್ದವಂತೆ. ದೇಶಾದ್ಯಾಂತ ಇಂದು ಹೆಸರು ವಾಸಿಯಾಗಿರುವ “ಮುಧೋಳ ಬೆಟೆ ನಾಯಿಗಳು” ಎಂದೇ ಕರೆಯಲ್ಪಡುವ ಈ ತಳಿಯ ನಾಯಿಗಳು ಹಲಗಲಿ ಬೇಡರೇ ಸಾಕಿದ ತಳಿಯೇ ಮುಂದುವರೆದುಕೊಂಡು ಬಂದಿದೆ ಎಂಬುದಿಲ್ಲಿ ಗಮನಾರ್ಹ ಅಂಶ. ಬರಬರುತ್ತಾ ಕಾಡು ಕಡಿಮೆಯಾಗ ತೊಡಗಿದಂತೆ ಬೇಟೆಯ ವೃತ್ತಿಯನ್ನು ಕೇವಲ ಹವ್ಯಾದವನ್ನಾಗಿರಿಸಿಕೊಂಡು ಈ ಜನಾಂಗ ಕೃಷಿ ಚಟುವಟಿಕೆಗಳಿದಿದ್ದಾಗಿ ತಿಳಿದು ಬರುತ್ತದೆ.

ಬೇಡರು ಬಳಸುತ್ತಿದ್ದ ಆಯುಧಗಳು

ಹಲಗಲಿ ಬೇಡರು ಬೇಟೆಯಾಡಲು ಬಳಸುತ್ತಿದ್ದ ಆಯುಧಗಳೆಂದರೆ, ಕೈಚೂರಿ, ಕಠಾರಿ, ಬಿಚ್ಚುಗತ್ತಿ, ಬಿಲ್ಲುಬಾಣ, ಚಾಪುಗೊಡಲಿ, ಖಡ್ಗ, ಬಾಕು, ದೂರದಿಂದಲೇ ಕ್ರೂರ ಮೃಗಗಳತ್ತ ಎಸೆಯಲು ಭರ್ಚಿ ಮುಂತಾದವುಗಳು. ಒಂದಿಷ್ಟು ಸ್ಥಿತಿವಂತರು ಕೋವಿಗಳನ್ನು ಇಟ್ಟುಕೊಂಡಿದ್ದರೆಂದು ತಿಳಿದು ಬರುತ್ತದೆ. ಕವಣೆಗಲ್ಲು ಬೀಸಿ ಹಾರುವ ಹಕ್ಕಿಯನ್ನೂ, ಓಡುವ ಜಿಂಕೆಯನ್ನೂ ಬೀಳಿಸಿದಂತಹ, ಒಂದು ನೊಗವನ್ನು ಭೂಮಿಗೆ ಲಂಬವಾಗಿ ನಿಲ್ಲಿಸಿ ನೊಗದ ರಂಧ್ರದಿಂದ ತೂರಿ ಹೋಗುವಂತೆ ಕವಣೆಗಲ್ಲು ಬೀಸುವಂತಹ ನಿಷ್ಣಾತ ಗುರಿಕಾರರಾಗಿದ್ದರೆಂದು ಗೊತ್ತಾಗುತ್ತದೆ. ಇಂತಹ ಆಯುಧಗಳನಿಟ್ಟುಕೊಂಡು ಯಾರ ಗೊಡವೆಗೂ ಹೋಗದೆ ತಮ್ಮಷ್ಟಕ್ಕೆ ತಾವು ಬದುಕುತ್ತಿದ್ದ ಬೇಡ ಜನಾಂಗದ ಸ್ವಾಭಿಮಾನವನ್ನು ೧೮೫೭ ರ ಸೆಪ್ಟೆಂಬರ್ ೧೧ ರಂದು ಬ್ರಿಟೀಷ್ ಸರಕಾರ ಜಾರಿಗೆ ತಂದ ಶಸ್ತ್ರಾಸ್ತ್ರ ನಿಷೇಧ ಕಾಯ್ದೆ ಕೆಣಕಿತಷ್ಟೇ ಅಲ್ಲ, ಸರಕಾರದ ವಿರುದ್ಧ ಬಂಡೇಳುವಂತೆ ಪ್ರಚೋದಿಸಿತು.

ಬಂಡಾಯದ ಪ್ರಮುಖರು

ಹಲಗಲಿಯ ಬಂಡಾಯದ ಘಟನಾವಳಿಗಳನ್ನು ಅರಿಯುವ ಪೂರ್ವದಲ್ಲಿ ಮುಂಚೂಣಿಯಲ್ಲಿ ನಿಂತು ಈ ಬಂಡಾಯವನ್ನು ಮುನ್ನಡೆಸಿ, ಸ್ವಾಭಿಮಾನ ಮೆರೆದ ಈ ಬೇಡ ಜನಾಂಗದ ಒಂದಿಷ್ಟು ಪ್ರಮುಖರನ್ನು ನೆನಪಿಸಿಕೊಳ್ಳುವುದು ಇಲ್ಲಿ ಹೆಚ್ಚು ಪ್ರಸ್ತುತವೆನಿಸುತ್ತದೆ.

. ಜಡಗಪ್ಪ ಜಡಗನ್ನವರ : ಹಲಗಲಿಯ ಬಂಡಾಯಕ್ಕೆ ಹಲಗಲಿಯ ಬೇಡರು ಆಂಗ್ಲರ ಶಸ್ತ್ರಾಸ್ತ್ರ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಲು ಹೊಳವು ಹಾಕಿದವನೇ ಈ ಜಡಗಪ್ಪ. ಬೆಳಗಾವಿ ಜಿಲ್ಲೆಯ ಸತ್ತಿಗೇರಿ ಗ್ರಾಮದಿಂದ ಹಲಗಲಿಗೆ ಈತನ ಪೂರ್ವಜರು ವಲಸೆ ಬಂದಿದ್ದರೆಂದು ಹೇಳಲಾಗುತ್ತಿದೆ. ದೈವಾಂಶ ಸಂಭೂತನಾಗಿದ್ದರಿಂದಲೇ ಸರಕಾರದ ವಿರುದ್ಧ ಬಂಡೇಳುವಂತಹ ಸಾಮರ್ಥ್ಯ ಇವನಿಗೆ ಲಭಿಸಿತ್ತೆಂದು ಹಲಗಲಿಯ ಮುಗ್ಧ ಜನರ ನಂಬಿಕೆ. ವಲಸೆ ಬಂದ ಮನೆತನದಲ್ಲಿ ಹುಟ್ಟಿ ಬೆಳೆದ ಜಡಗಪ್ಪ ಹಲಗಲಿಯ ದಟ್ಟ ಅರಣ್ಯ ಪ್ರದೇಶದಲ್ಲಿರುವ ಕಣಿ ಬಸವಣ್ಣನ ದೇವಸ್ಥಾನದ ಪಕ್ಕದಲ್ಲಿ ಒಂದಿಷ್ಟು ಕಾಡನ್ನು ಕಡಿದು, ಕೃಷಿ ಜಮೀನಾಗಿ ಪರಿವರ್ತಿಸಿ, ಉಳುಮೆ ಮಾಡಿಕೊಂಡಿದ್ದನೆಂದೂ, ಬ್ರಿಟಿಷರ ಕಾಟಕ್ಕೆ ಬೇಸತ್ತ ಆತ ಹೊಲದಲ್ಲಿಯೋ, ತೆಗ್ಗಿ ಗ್ರಾಮದ ಸರಹದ್ದಿನಲ್ಲಿರುವ ಗವಿಗಳಲ್ಲಿಯೋ, ವಾಸವಾಗಿರುತ್ತಿದ್ದ. ಬ್ರಿಟಿಷರ ವಿರುದ್ಧ ಹೋರಾಟ ನಡೆಸಲು ಅವಕಾಶಕ್ಕಾಗಿ ಕಾಯುತ್ತಿದ್ದ ಈತ ಶಸ್ತ್ರಾಸ್ತ್ರ ನಿಷೇಧ ಕಾಯ್ದೆಯನ್ನೇ ಒಂದು ಪ್ರಬಲ ಅಸ್ತ್ರವನ್ನಾಗಿರಿಸಿಕೊಂಡು ಇಡೀ ಬೇಡ ಜನಾಂಗವನ್ನು ಸಂಘಟಿಸಿ, ಆಂಗ್ಲರ ವಿರುದ್ಧ ಬಂಡೇಳುವಂತೆ ಪ್ರಚೋದಿಸಿ, ಮೊದಲ ಹಂತದಲ್ಲಿ ಯಶಸ್ವಿಯಾದವ. ಎರಡನೇ ಹಂತದಲ್ಲಿ ಆಂಗ್ಲರಿಗೆ ಸೆರೆಸಿಕ್ಕಿ ನೇಣಿಗೆ ಕೊರಳೊಡ್ಡಿದವ. ಹಲಗಲಿಯಲ್ಲಿ ಜಡಗಣ್ಣವರ ಎಂಬ ಮನೆತನ ಇಂದಿಗೂ ಇದೆ. ಆ ಕುಟುಂಬದಲ್ಲಿ ಜಡಗಪ್ಪ, ಜಡಗಣ್ಣ ಎಂದು ತಮ್ಮ ಮಕ್ಕಳಿಗೆ ಅತ್ಯಂತ ಪ್ರೀತಿ ಗೌರವದಿಂದ ಹೆಸರಿಡುವದು ಇಂದಿಗೂ ಕಂಡುಬರುತ್ತದೆ.

. ಬಾಲಪ್ಪ ಕೊಳ್ಳಣ್ಣವರ : ಹಲಗಲಿ ಬಂಡಾಯವೆಂದೊಡನೆ ಅಲ್ಲಿ ಕೋಲ್ಮಿಂಚಿನಂತೆ ಕಣ್ಣು ಕೋರೈಸುವ ಮುಖ್ಯವಾದ ಎರಡು ಹೆಸರುಗಳೆಂದರೆ “ಜಡಗಪ್ಪ ಹಾಗೂ ಬಾಲಪ್ಪ”. ಈ ಬಾಲಪ್ಪ ಕೊಳ್ಳಣ್ಣವರ ಎಂಬಾತ ಜಡಗಪ್ಪನ ಸೋದರಳಿಯ. ಜಡಗಪ್ಪನ ಸೋದರಿ ರಾಮವ್ವ ಎಂಬಾಕೆಯನ್ನು ಹಲಗಲಿಯ ಪಕ್ಕದ ಗ್ರಾಮ ಅರಕೇರಿಗೆ (ಸದ್ಯಕ್ಕೆ ಬೀಳಗಿ ತಾಲೂಕು) ಮದುವೆ ಮಾಡಿಕೊಡಲಾಗಿತ್ತು. ಆಕೆಯ ಮಗನೇ ಬಾಲಪ್ಪ. ಅರಕೇರಿ ಗ್ರಾಮದಲ್ಲಿ ಹಣುಮಂತ ದೇವರ ಪೂಜಾರಿಕೆ ಮಾಡಿಕೊಂಡಿದ್ದ ಮನೆತನ ಇವರದು. ಸೋದರ ಮಾವ ಹಲಗಲಿಯ ಜಡಗಪ್ಪನ ಮನೆಯಲ್ಲಿಯೇ ಬೆಳೆದುಕೊಂಡಿದ್ದ ಈತ ಸಹಜವಾಗಿಯೇ ಸೋದರ ಮಾವನಂತೆಯೇ ಅಂಗ್ರೇಜಿಯವರ ವಿರುದ್ಧ ಮನದಲ್ಲಿಯೇ ಕ್ರೋಧ ತುಂಬಿಕೊಂಡು ಕಿಡಿ ಕಾರುತ್ತಿದ್ದ. ಮಾವ ಬಂಡಾಯದ ಬಾವುಟ ಹಾರಿಸುತ್ತಿದ್ದಂತೆಯೇ ಆತನಿಗೆ ಹೆಗಲುಕೊಟ್ಟು ನೆರವಾಗಿ ನಿಂತ. ಒಂದರ್ಥದಲ್ಲಿ ಮಾವ, ಅಳಿಯ ಲವಕುಶರಂತೆ ಇದ್ದರಂತೆ. ಹೋರಾಟದಲ್ಲಿ ಜೊತೆಜೊತೆಯಾಗಿ ನಿಂತೇ ಶತ್ರು ಪಡೆಯ ವಿರುದ್ಧ ಸೆಣಸಿದ ಈ ಜೋಡಿ ನೇಣಿಗೆ ಕೊರಳೊಡ್ಡಿದ್ದು ಕೂಡಾ ಜೊತೆಜೊತೆಯಾಗಿಯೇ ಎಂಬುದು ಸ್ವಾತಂತ್ರ್ಯವನ್ನು ಪ್ರೀತಿಸುವವರ ಹೃದಯಾಂತರಾಳದಲ್ಲಿ ನಿರಂತರ ನೆನಪು. ಅರಕೇರಿ ಹಾಗೂ ಹಲಗಲಿ ಗ್ರಾಮಗಳಲ್ಲಿ ಕೊಳ್ಳಣ್ಣವರ ಎಂಬ ಹಲವಾರು ಕುಟುಂಬಗಳು ಇಂದಿಗೂ ಇವೆ. ಸ್ವಾತಂತ್ರ್ಯಕ್ಕಾಗಿ ಜೀವತೆತ್ತ ತಮ್ಮ ಹಿರಿಯ ಬಂಧುವನ್ನು ನೆನಪಿಸಿಕೊಳ್ಳುವದೇ ನಮ್ಮ ಸೌಭಾಗ್ಯವೆನ್ನುತ್ತವೆ. ಆ ಕುಟುಂಬಗಳು.

. ಹಣಮಪ್ಪ ಪೂಜೇರ : ಗೋಕಾಕ ತಾಲೂಕಿನ ಕಲ್ಲೊಳ್ಳಿ ಗ್ರಾಮ ಹಣಮಪ್ಪ ಪೂಜೇರನ ಹುಟ್ಟೂರು. ಅಲ್ಲಿ ಈತನದು ಹಣಮಂತ ದೇವರ ಪೂಜಾರಿಕೆ. ಗ್ರಾಮದ ಗೌಡರೊಂದಿಗೆ ಮನಸ್ತಾಪವಾಗಿ ಈತನೂ ಕೂಡ ಹಲಗಲಿಗೆ ವಲಸೆ ಬಂದವನೇ. ಅವನ ಪೂರ್ವಾಪರ ಇತಿಹಾಸವನ್ನು ಕೇಳಿಕೊಂಡ ಗ್ರಾಮದ ಪ್ರಮುಖರು ಇಲ್ಲಿಯೂ ಆತನಿಗೆ ಹಣಮಂತ ದೇವರ ಪೂಜಾರಿಕೆಯನ್ನು ಕೊಡಿಸಿದ್ದಲ್ಲದೇ, ಉಪಜೀವನಕ್ಕಾಗಿ ಒಂದಿಷ್ಟು ಜಮೀನನ್ನು ಕೊಟ್ಟಿದ್ದರು. ಜಡಗಣ್ಣವರ ಮನೆತನದ ಹೆಣ್ಣುಮಗಳೊಬ್ಬಳನ್ನು ಆತನಿಗೆ ಮದುವೆ ಮಾಡಿಕೊಟ್ಟದ್ದರಿಂದ, ಪೂಜಾರಿಕೆಯು ಲಭಿಸಿದ್ದರಿಂದ ಆತ ಇಲ್ಲಿಯೇ ನೆಲೆನಿಂತನಲ್ಲದೇ ಬೀಗರಾದ ಜಡಗಣ್ಣವರ ಬಂಧುಗಳು ಹಾರಿಸಿದ ಬಂಡಾಯದ ಬಾವುಟಕ್ಕೆ ಸೂತ್ರಧಾರನಾಗಿ ತಾನೂ ಕೈ ಜೋಡಿಸಿದ. ಬಂಡಾಯದ ನಂತರ ನಾಲ್ಕನೇ ತಲೆಮಾರಿನ ಪೂಜಾರಿ ಕುಟುಂಬಗಳು ಈಗಲೂ ಹಲಗಲಿಯಲ್ಲಿ ಹಣಮಂತ ದೇವರ ಪೂಜಾರಿಕೆ ವೃತ್ತಿಯನ್ನು ಮುಂದುವರೆಸಿಕೊಂಡು ಹೊರಟಿವೆ. ಅಂದು ಪೂಜಾರಿ ಹಣಮಪ್ಪ ಬಳಸುತ್ತಿದ್ದ ಆಯುಧಗಳು ಇದುವರೆಗೂ ಇವರ ಮನೆತನದಲ್ಲಿದ್ದವು. ಇತ್ತೀಚೆಗೆ ಅವುಗಳನ್ನು ಮುರಿಸಿ ಕೃಷಿ ಉಪಕರಣಗಳನ್ನು ಮಾಡಿಸಿದ್ದಾಗಿಯೂ, ಒಂದನ್ನು ಮಾತ್ರ ಜಗುಲಿಯ ಮೇಲಿಟ್ಟು ಪೂಜಿಸುತ್ತಿರುವುದಾಗಿಯೂ ಈ ಕುಟುಂಬದವರು ಹೇಳುತ್ತಾರೆ. ಈ ದೇಶದ ಸ್ವಾತಂತ್ರ್ಯವೇ ಅವರಿವರ ಕೈಗೆ ಸಿಕ್ಕು, ಹರಿದು, ಮುರಿದು, ಮುಕ್ಕಾಗಿ ಹೋಗುತ್ತಿರುವ ಇಂದಿನ ದಿನಮಾನಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಕೈಗೆತ್ತಿಕೊಂಡ ಆಯುಧಗಳದೇನು ಲೆಕ್ಕಬಿಡಿ ಎಂದು ಹೇಳುವುದಿಲ್ಲಿ ಅನಿವಾರ್ಯ.

. ಬೇಹುಗಾರ ಭೀಮಪ್ಪ ಚಿಕ್ಕಣ್ಣವರ : ಜಡಗಪ್ಪ, ಬಾಲಪ್ಪ ಹಣಮಪ್ಪ ಇವರ ಜೊತೆಗೇನೆ ಬರುವ ಇನ್ನೊಂದು ಹೆಸರು ಭೀಮಪ್ಪ ಚಿಕ್ಕಣ್ಣವರ ಎಂಬಾತನದು. ಈತ ಊರು ಒಳಹೊರಗೆ ಸುಳಿದಾಡುತ್ತ ಶತ್ರು ಪಕ್ಷದವರ ಚಲನವಲನದ ಮೇಲೆ ನಿಗಾ ಇಟ್ಟು ಹದ್ದಿನ ಕಣ್ಣಿನಿಂದ ಬೇಹುಗಾರಿಕೆ ನಡೆಸುತ್ತಿದ್ದನಂತೆ. ಕೋಟೆಯ ಮೇಲೆ ನಿಂತೇ ಆಂಗ್ಲ ಅಧಿಕಾರಿಯ ಆಗಮನವನ್ನು ಊಹಿಸಿ ಕವಣೆಗಲ್ಲು ಬೀಸಿ ಕುದುರೆಯ ಕಾಲು ಮುರಿದ, ಕುದುರೆ ಮುಗ್ಗರಿಸಿದೊಡನೆ ಕೆಳಗೆ ಬಿದ್ದ ಅಧಿಕಾರಿಯನ್ನು ಭೀಮಪ್ಪ ಬಂಧಿಸಿದ. ಅಷ್ಟೊತ್ತಿಗಾಗಲೇ ಬೇಡರ ಪಡೆಯವರು ಹಲವಾರು ಆಂಗ್ರೇಜಿಯವರ ರುಂಡಗಳನ್ನುರುಳಿಸಿದ್ದರು. ತನ್ನವರಿಗಾದ ಗತಿಯನ್ನು ಕಂಡು ಆಂಗ್ಲ ಅಧಿಕಾರಿ ಬಾಯಲ್ಲಿ ಹುಲ್ಲುಕಡ್ಡಿ ಕಚ್ಚಿದ. ಹುಲ್ಲುಕಡ್ಡಿ ಕಚ್ಚಿದನೆಂದರೆ ಶರಣಾಗತನಾಗಿದ್ದಾನೆ ಎಂದರ್ಥ. ಶರಣಾಗತರಾದವರನ್ನು ಕೊಲ್ಲುವಂತಿಲ್ಲ. ಅವರನ್ನು ಕ್ಷಮಿಸಬೇಕೆಂಬುದು ರಣನೀತಿ. ಭೀಮಪ್ಪ ತನ್ನ ರಣನೀತಿ ಪಾಲಿಸಿ ಅವರನ್ನು ಕ್ಷಮಿಸಿದ. ಅಧಿಕಾರಿ ಭೀಮಪ್ಪನನ್ನು ಕೇಳಿದನಂತೆ “ಈ ಊರಿನಲ್ಲಿ ನೀನೇ ಶೂರನೋ? ನಿನಗಿಂತ ಶೂರರಿದ್ದಾರೆಯೋ?” ಎಂಬ ಪ್ರಶ್ನೆಗೆ ಭೀಮಪ್ಪ “ಅಯ್ಯೋ! ನಾನು ಬಾಗ್ಲಾ ಕಾಯುವ ಆಳು, ನಮ್ಮಪ್ಪನಂತಹ ಶೂರರು ಊರೊಳಗಿದ್ದಾರೆ” ಎಂದನಂತೆ. ಪರಿಸ್ಥಿತಿಯ ಗಂಭೀರತೆಯನ್ನು ಅಭ್ಯಸಿಸಿದ ಅಧಿಕಾರಿ ಜಿಲ್ಲಾ ಕೇಂದ್ರಕ್ಕೆ ವಾಪಸಾದ. ರಣನೀತಿ ಪಾಲಿಸಿ ಭೀಮಪ್ಪ ಶತ್ರುವಿನ ಜೀವ ಉಳಿಸಿದ. ಹೆಚ್ಚಿನ ಸೈನ್ಯದೊಡನೆ ವಾಪಸ್ಸಾದ ಶತ್ರು ಮೋಸದಿಂದ ರಾತ್ರಿಯೇ ಊರಿಗೆ ನುಗ್ಗಿ ಬೆಂಕಿ ಇಟ್ಟು ಹಲವರ ಪ್ರಾಣ ತೆಗದು ರಣನೀತಿ ಮುರಿದ. ಆಂಗ್ಲರ ಮೋಸದ ಕೃತ್ಯಕ್ಕೆ ಇದೂ ಒಂದು ಸೇರ್ಪಡೆಯಷ್ಟೇ. ಭೀಮಪ್ಪ ಹಾಗೂ ಆತನ ಅನುಚರರ ಕೈಯಲ್ಲಿ ಹತರಾದ ಆಂಗ್ಲ ಸೈನಿಕರ ಶವಗಳನ್ನು ಜಿಲ್ಲಾ ಕೇಂದ್ರ ಸ್ಥಾನವಾದ ಕಲಾದಗಿಗೆ ಸಾಗಿಸಿ ಅಲ್ಲಿ ಶವ ಸಂಸ್ಕಾರ ಮಾಡಲಾಯಿತು. ಇಂದಿಗೂ ಕಲಾದಗಿಯಲ್ಲಿ ಮಡಿದ ಆಂಗ್ಲ ಸೈನಿಕರ ಸಮಾಧಿಗಳು ಹೆಸರಿನೊಂದಿಗೆ ನೋಡಲು ಸಿಕ್ಕುತ್ತವೆ.

. ರಾಮವ್ವ : ಜಡಗಪ್ಪನ ಸಹೋದರಿ ರಾಮವ್ವ. ಈಕೆಯನ್ನು ಅರಕೇರಿ ಗ್ರಾಮಕ್ಕೆ ಮದುವೆ ಮಾಡಿ ಕೊಟ್ಟಿದ್ದಾಗಿಯೂ, ಬಂಡಾಯದ ಸಂದರ್ಭದಲ್ಲಿ ವೈರಿಗಳೇ ಮೆಚ್ಚಿ ಅಹುದಹುದೆನ್ನುವಂತೆ ಅಣ್ಣ ಜಡಗಪ್ಪನಿಗೂ, ಮಗ ಬಾಲಪ್ಪನಿಗೂ ಹೆಗಲೆಣೆಯಾಗಿ ನಿಂತು ವೈರಿ ಪಡೆಯನ್ನು ಸದೆ ಬಡೆಯುವಲ್ಲಿ ಅಪ್ರತಿಮ ಸಾಹಸ ಮೆರೆದವಳೆಂದು ಹೇಳಲಾಗುತ್ತಿದೆ. ರಾಮವ್ವನ ಜೊತೆಗೆ ಹಣಮವ್ವ, ಲಗಮವ್ವ ಎಂಬ ಮಹಿಳೆಯರು ಕೂಡಾ ಹೋರಾಟದಲ್ಲಿ ಪಾಲ್ಗೊಂಡಿದ್ದಾಗಿ ತಿಳಿದು ಬರುತ್ತದೆ.

. ಬಾಲಾಜಿ ನಿಂಬಾಳಕರ್ : ಮೂಲತಃ ಹಲಗಲಿಯವನೂ, ಮುಧೋಳ ಸಂಸ್ಥಾನಿಕರ ಕುಲಬಾಂಧವನೂ ಆಗಿದ್ದ ಬಾಲಾಜಿ ನಿಂಬಾಳಕರ್ ಎಂಬಾತ ಮುಧೋಳ ಸಂಸ್ಥಾನದ ದಕ್ಷಿಣ ಭಾಗದ ಕೊನೆಯ ಹಳ್ಳಿ ‘ಹೊಸಕೋಟೆ’ ಗ್ರಾಮದ ಕಿಲ್ಲೇದಾರನಾಗಿದ್ದ. ಊರ ರಕ್ಷಣೆಗಾಗಿ ಮುಧೋಳ ಸಂಸ್ಥಾನಿಕರು ಕೋಟೆ ಹಾಗೂ ಭವ್ಯವಾದ ಕಿಲ್ಲೆಗಳನ್ನು (ಬತೇರಿ – ಹುಡೆ) ನಿರ್ಮಿಸಿದ್ದರಿಂದ ಈಗಲೂ ಆ ಗ್ರಾಮಕ್ಕೆ ಕಿಲ್ಲಾ ಹೊಸಕೋಟೆ ಎಂದೇ ಕರೆಯಲಾಗುತ್ತಿದೆ. ಒಂದಿಷ್ಟು ಸಾಹಸಿಯೂ, ಕಾನೂನು ತಿಳಿದವನೂ ಆಗಿದ್ದ ಈ ಬಾಲಾಜಿ ನಿಂಬಾಳಕರ್ ಈ ಶಸ್ತ್ರಾಸ್ತ್ರ ನಿಷೇಧ ಕಾನೂನು ನಮ್ಮೆಲ್ಲರನ್ನೂ ಕಟ್ಟೆ ಹಾಕುತ್ತದೆಂದು ಅರಿತವ. ಸಂಸ್ಥಾನದಲ್ಲಿ ಒಂದಿಷ್ಟು ಜನ ಈ ಕಾನೂನನ್ನು ಸಹಮತಿಸಿದ್ದರಿಂದ ಒಂದಿಷ್ಟು ಸಿಡಿಮಿಡಿಗೊಂಡವ. ಹೀಗಾಗಿ ಆತನೇ ಖುದ್ದಾಗಿ ಹಲಗಲಿಗೆ ಬಂದು ಬೇಡರನ್ನು ಸಂಘಟಿಸಿ ಕಾನೂನಿನ ಚಿತ್ರಣವನ್ನು ಅವರ ಮುಂದೆ ಇಡುತ್ತಾನೆ. ಅವರನ್ನು ಹುರಿದುಂಬಿಸಿ ಬಂಡಾಯದ ಕಣಕ್ಕಿಳಿಸುತ್ತಾನೆ. ಆದರೆ ಮುಂದೆ ನಡೆದ ಬಂಡಾಯದಲ್ಲಿ ಆತ ಪಾಲ್ಗೊಂಡನೋ, ಇಲ್ಲವೋ ಎಂಬ ಬಗ್ಗೆ ಖಚಿತ ಮಾಹಿತಿ ದೊರಕುತ್ತಿಲ್ಲ.

ಕುಂತಂತ್ರವೇ ಮೈವೆತ್ತಿ ಇಂಚಿಂಚಾಗಿ ನಮ್ಮನ್ನು ನುಂಗುತ್ತಾ ಬಂದ ಆಂಗ್ಲರು ಶಾಶ್ವತವಾಗಿ ಇಲ್ಲಿ ತಳ ಊರಬೇಕೆನ್ನುವ ಉದ್ದೇಶದಿಂದ ಹೊಸ ಹೊಸ ಕಾನೂನಿನ ಸಂಕೋಲೆಯಿಂದ ನಮ್ಮನ್ನು ಬಿಗಿಯತೊಡಗಿದರು. ಬಿಗಿತವನ್ನು ಸಡಿಲಿಸಿಕೊಳ್ಳಲು ಪ್ರಯತ್ನಿಸಿದ ನಮಗೆ ಆಸೆಯೊಡ್ಡಿದರು, ಹೆದರಿಸಿದರು, ಲಾಠಿಯಿಂದ ಹೊಡೆದರು, ಬೂಟಿನಿಂದ ಒದ್ದರು ಗುಂಡಿಕ್ಕಿ ಕೊಂದರು, ಗಲ್ಲಿಗೇರಿಸಿ ಅಟ್ಟಹಾಸಗೈದರು.

ಈ ಅಟ್ಟಹಾಸವನ್ನು ಮೆಟ್ಟಿ ನಿಲ್ಲಲು ೧೮೫೭ ಮೇ ೧೦ ರಂದು ಉತ್ತರ ಭಾರತದಲ್ಲಿ ಇಂಗ್ಲೀಷರ ವಿರುದ್ಧ ಭಾರತೀಯ ಸೈನಿಕರು ದಂಗೆ ಎದ್ದರು. ಅದುವೇ ನಮ್ಮ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ಇತಿಹಾಸದಲ್ಲಿ ನಾವು ದಾಖಲಿಸಿದರೂ ಕೂಡಾ ಅದನ್ನು ತೀರ ಅವಹೇಳನಕಾರಿ ರೀತಿಯಲ್ಲಿ ಆಂಗ್ಲರು “ಅದು ಕೇವಲ ಸಿಪಾಯಿಗಳ ದಂಗೆ” ಎಂದು ಮೂದಲಿಸಿದ್ದು ಕೂಡಾ ಅಷ್ಟೇ ವ್ಯಂಗವಾಗಿದೆ. ಈ ದಂಗೆಯನ್ನು ಅವರು ಮೇಲ್ನೋಟದಲ್ಲಿ ಎಷ್ಟೇ ಹಗುರವಾಗಿ ಕಂಡಿದ್ದರೂ ಕೂಡಾ ಕಂಪನಿ ಸರಕಾರ ಆಂತರಿಕವಾಗಿ ಹೆದರಿ ಗಡಗಡ ನಡುಗಿದ್ದು ಕೂಡಾ ಅಷ್ಟೇ ಸತ್ಯ. ಈ ಸಿಪಾಯಿ ದಂಗೆಯ ಪರಿಣಾಮವೇ ದಕ್ಷಿಣ ಭಾರತದಲ್ಲಿ ಕೂಡಾ ಹೋರಾಟಕ್ಕೆ ರೂಪಗೊಳ್ಳತೊಡಗಿತು.

ಆದರೆ ಕಂಪನಿ ಸರಕಾರ ತಂದ ಕಾನೂನುಗಳಾದ ದತ್ತಕ ಪದ್ಧತಿ ರದ್ದು, ಸಹಾಯಕ ಸೈನ್ಯ ಪದ್ಧತಿ, ನಿಶಸ್ತ್ರೀಕರಣ ಮುಂತಾದವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದ, ತಮ್ಮಷ್ಟಕ್ಕೆ ತಾವು ಬದುಕುತ್ತಾ ಯಾರ ಗೊಡವೆಗೂ ಹೋಗದ ಜನ, ಶಾಂತಿ ಪ್ರಿಯರಾದ ಹಲಗಲಿ ಬೇಡ ಜನಾಂಗ ಆಂಗ್ಲರ ವಿರುದ್ಧ ಸಮರಕ್ಕಿಳಿದ್ದಿದ್ದು ಆತ್ಮಗೌರವ ಎಂಥಾ ಶಾಂತಿ ಪ್ರಿಯರನ್ನೂ ಚುಚ್ಚಿ ಎಬ್ಬಿಸುತ್ತದೆನ್ನುವದಕ್ಕೊಂದು ಉದಾಹರಣೆ.