ನಿಶಸ್ತ್ರೀಕರಣ ಕಾಯ್ದೆ

೧೮೫೭ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಜಾರಿಗೆ ತಂದ ನಿಶಸ್ತ್ರೀಕರಣ ಕಾಯ್ದೆ ಅಥವಾ ಶಸ್ತ್ರಾಸ್ತ್ರ ನಿಯಂತ್ರಣ (Disarmament Act. of 11th September – ೧೮೫೭) ಕಾನೂನಿನ ಪ್ರಕಾರ ಇಂಗ್ಲೀಷರಲ್ಲದ, ಭಾರತದಲ್ಲಿ ವಾಸಿಸುವ ಎಲ್ಲರೂ ತಮ್ಮಲ್ಲಿರುವ ಶಸ್ತ್ರಾಸ್ತ್ರಗಳನ್ನು ಕಂಪನಿ ಸರಕಾರಕ್ಕೆ ಒಪ್ಪಿಸಬೇಕು. ಅಥವಾ ಹೊಸದಾಗಿ ಶಸ್ತ್ರಾಸ್ತ್ರಗಳನ್ನು ಖರೀದಿಸಬೇಕಾಗಿದ್ದಲ್ಲಿ ಕಂಪನಿ ಸರಕಾರದ ಪರವಾಣಿಗೆ (ಲೈಸನ್ಸ್) ಪಡೆದುಕೊಳ್ಳಬೇಕು. ಅನುಮತಿ ಇಲ್ಲದೆ ಆಯುಧ ಹೊಂದುವದು ಮಹಾ ಅಪರಾಧ. ಈ ಕಾನೂನು ಉಲ್ಲಂಘನೆಗೆ ಉಗ್ರ ಶಿಕ್ಷೆ ಹಾಗೂ ಭಾರೀ ಮೊತ್ತದ ದಂಡ ಕೂಡಾ. ಇದು ಸ್ವಾಭಿಮಾನಿ ಭಾರತೀಯರನ್ನು ಮಾನಸಿಕವಾಗಿ ಕಂಗೆಡಿಸುವಂತಹ ಕರಾಳ ಶಾಸನವಾಗಿತ್ತು.

ಹಲಗಲಿ ಬಂಡಾಯ

೧೮೫೭ ಸೆಪ್ಟೆಂಬರ ೧೧ ರಂದು ಜಾರಿಗೊಳಿಸಲ್ಪಟ್ಟ ಈ ಶಸ್ತ್ರಾಸ್ತ್ರ ನಿಷೇಧ ಕಾಯ್ದೆ ಬೆಳಗಾವಿ ಮ್ಯಾಜಿಸ್ಟ್ರೇಟ್ ಲೆ.ಕ.ಜೆ.ಬಿ. ಸೆಟನ್‍ಕರನ ಮೂಲಕ ಮುಧೋಳ ಸಂಸ್ಥಾನಕ್ಕೂ ಬಂದು ತಲುಪಿತು. ಸಂಸ್ಥಾನದಲ್ಲಿಯ ಕೆಲ ಸ್ವಾಭಿಮಾನಿ ಸೈನಿಕರು ಮೊದಮೊದಲು ಈ ಕಾನೂನನ್ನು ವಿರೋಧಿಸಿದರು ಕೂಡಾ ಪರಿಸ್ಥಿತಿಯೊಡನೆ ರಾಜಿ ಮಾಡಿಕೊಂಡು ಶಸ್ತ್ರಾಸ್ತ್ರಗಳನ್ನು ಒಪ್ಪಿಸಿಬಿಟ್ಟರು. ಇಲ್ಲಿ ಕುಂದಗಿರಿಯ ಕೃಷ್ಣರಾವ್ ಎಂಬ ಕಾರಭಾರಿ ಅತ್ಯಂತ ಚುರುಕಿನಿಂದ ಈ ರಾಜಿ ಕಾರ್ಯ ನಿಭಾಯಿಸಿದ್ದು ಭಯ, ಅಧಿಕಾರ, ಆಮಿಷಕ್ಕೊಳಗಾದ ಜನ ಆತ್ಮಗೌರವವನ್ನು ಹೇಗೆ ಒತ್ತೆ ಇಡುತ್ತಾರೆನ್ನುವದಿಲ್ಲಿ ಎದ್ದು ಕಾಣುತ್ತದೆ.

ಶಸ್ತ್ರಾಸ್ತ್ರಗಳನ್ನು ಕಂಪನಿ ಸರಕಾರಕ್ಕೆ ಒಪ್ಪಿಸಬೇಕೆನ್ನುವ ಸೂಚನೆ ಹಲಗಲಿಗೂ ಬಂತು ಶಸ್ತ್ರಾಸ್ತ್ರಗಳಿಂದ ಬೇಟೆಯನ್ನೇ ಮೂಲ ಉದ್ಯೋಗವನ್ನಾಗಿರಿಸಿಕೊಂಡು ಬದುಕುತ್ತಿದ್ದ ಹಲಗಲಿ ಬೇಡ ಬಂಟರಿಗೆ ಈ ಸೂಚನೆ ಅಪಥ್ಯವೆನಿಸಿತು. ಸೂಚನೆಯನ್ನು ಮೊದಮೊದಲು ನಯವಾಗಿ ತಳ್ಳಿಹಾಕಿದರು. ಕೃಷ್ಣರಾವ್ ಹಲವಾರು ಬಾರಿ ಸಂಧಾನಕ್ಕೆ ಯತ್ನಿಸಿದ. ಜಗ್ಗಿದಷ್ಟೂ ಸಂಧಾನದ ಹಗ್ಗ ಕಗ್ಗಂಟಾಗತೊಡಗಿತು. ಕೊನೆಗೂ “ಹತ್ಯಾರ ಕೊಡಲಾಕ ಹೆಂಗಸಾಗಿ ಬಳಿ ಇಟ್ಟಿಲ್ಲ ಕೈಯಾಗ/ಯಾಕ ಬಂದಿರಿ/ಜೀವ ಹೋದರು ಕೊಡುವುದಿಲ್ಲ ಸುಮ್ಮನ್ ಹೋಗರಿ ಈಗ/” ಎಂದು ಸಾರಾಸಗಟಾಗಿ ತಿರಸ್ಕರಿಸಿದ ಬೇಡರಪಡೆ ದೇಶ ಪ್ರೇಮಿಗಳ ಎದೆಯನ್ನು ಈ ಕೆಳಗಿನ ಮಾತುಗಳಿಂದ ಚುಚ್ಚುತ್ತದೆ.

“ಮುಗ್ಗಲದಾಗಿನ ಹೆಂಡತಿ ಕೊಟ್ಟಹಂಗ ಹೇಡಿ ಆದೇವ ಅಲ್ಲಾ/ ಸತ್ತ ಹೆಣಕ ಶೃಂಗಾರ ಮಾಡಿದ ಪರಿ ಅದೀತಲ್ಲಾ/” ಎಂದು ಹೇಳುತ್ತಾ ಕೈಯಲ್ಲಿಯ ಆಯುಧಗಳನ್ನು ಕೊಡುವದೆಂದರೆ. ಮಗ್ಗುಲದಲ್ಲಿಯ ಹೆಂದತಿಯನ್ನೇ ಕೊಟ್ಟಂತೆಂದು ಪೌರುಷತನದಿಂದ ಆಂಗ್ಲರ ಸವಾಲನ್ನು ಸ್ವೀಕರಿಸುತ್ತಾರೆ.

ಎಲ್ಲೆಲ್ಲಿ ಸಾಹಸ ಕಾರ್ಯಗಳು ಜರುಗುತ್ತಿದ್ದವೋ ಅಲ್ಲೆಲ್ಲಾ ನೆರವು ನೀಡುತ್ತಾ, ಎಲ್ಲರೊಂದಿಗೂ ಬೆಲ್ಲದಂತಿದ್ದ ಹಲಗಲಿಯ ಮುಗ್ಧ ಬೇಡರ ಮನೋಭಾವನೆಯನ್ನು, ಆತ್ಮಾಭಿಮಾನವನ್ನು ತಪ್ಪಾಗಿ ಅರ್ಥೈಸಿಕೊಂಡ ಕಂಪನಿ ಸರಕಾರ, ಇವರ ಮನೋಭಾವನೆಯನ್ನು ಸರಕಾರಕ್ಕೆ ಸರಿಯಾದ ರೀತಿಯಲ್ಲಿ ವಿವರಿಸಲಾರದ ಮಧ್ಯವರ್ತಿಗಳ ವೈಫಲ್ಯ, ೧೮೫೭ ನವೆಂಬರ್ ೨೯ ರಂದು ೬೦೦ ಅಶ್ವದಳ ಸೈನಿಕರೊಂದಿಗೆ ಹಲಗಲಿಯ ಮೇಲೆ ನುಗ್ಗಲು ಕಾರಣವಾಯಿತು. ಇವರ ದಾಳಿಗೆ ಹೆದರದ ಬೇಡರ ಪಡೆ ಆಂಗ್ಲರ ಮೇಲೆ ಮುಗಿಬಿದ್ದು ಪ್ರತಿ ಗುಂಡಿನ ಮಳೆಗರೆದರು. ಭರ್ಚಿ ಎಸೆದರು, ಕವಣೆಗಲ್ಲು ತೂರಿದರು. ಕುದುರೆ ಕಾಲು ಕಡಿದರು. ಉಭಯ ಬಣಗಳಲ್ಲಿ ಅಪಾರ ಸಾವು ನೋವು ಸಂಭವಿಸಿದರೂ ಬೇಡರ ಪಡೆ ಧೈರ್ಯ ಕಳೆದುಕೊಳ್ಳಲಿಲ್ಲ. ಅಪಾಯವನ್ನರಿತ ಲೆ.ಕ. ಸೆಟನ್‍ಕರ್ ಹೆಚ್ಚಿನ ಸೈನ್ಯಕ್ಕಾಗಿ ವಿನಂತಿಸಿಕೊಂಡಾಗ ಮರುದಿನವೇ ಲೆ.ಕ. ಮಾಲ್ಕಮ್ ಹೆಚ್ಚಿನ ಸೈನ್ಯದೊಂದಿಗೆ ನೆರವಿಗೆ ಧಾವಿಸಿದ. ಆಧುನಿಕ ಶಸ್ತ್ರಾಸ್ತ್ರ, ಅಪರಿಮಿತ ಬಲ ತಮ್ಮ ಮೇಲೆ ಬಂದೆರಗುತ್ತಿದ್ದರೂ ಹೆದರದೆ ಪ್ರತಿ ದಾಳಿ ಮಾಡಿದರು. ಈ ಪ್ರತಿ ದಾಳಿಯಲ್ಲಿ ಫಸ್ಟ್ ಅಸಿಸ್ಟೆಂಟ್ ಮ್ಯಾಜಿಸ್ಟ್ರೇಟ್ ವಿಲಿಯಂ ಹೆನ್ರಿ ಹೆವಲಾಕ್ (ಜಾನಪದರ ಆಡು ಭಾಷೆಯಲ್ಲಿ ಹೆಬಲಕ್) ಗುಂಡೇಟಿನಿಂದ ಅಸುನೀಗಿದ. ಯಾರೂ ಹಿಂದೆ ಸರಿಯದ ಈ ಸಮರದಲ್ಲಿ ಅಸಂಖ್ಯಾತ ಸಾವು ನೋವು ಸಂಭವಿಸಿದವು. ಹೆಣಗಳ ರಾಶಿಯೇ ಬಿದ್ದಿತು. ರಕ್ತ ಕಾಲುವೆಯಾಗಿ ಹರಿಯಿತು. ಪೂಜಾರಿ ಹಣಮಪ್ಪ, ಜಡಗಾ, ಬಾಲಾ, ರಾಮ, ಭೀಮ ಬೇಡರ ಪಡೆಯೇ ಮುಂಚೂಣಿಯಲ್ಲಿ ನಿಂತು ಹುರುಪು ತುಂಬುತ್ತಾ ಆದೇಶ ನೀಡುತ್ತಿದ್ದರು. ಇವರೆಲ್ಲರಿಂದ ಸೈ ಎನ್ನಿಸಿಕೊಂಡು ಶತ್ರುಗಳಿಗೆ ಮಾರಣಾಂತಿಕ ಪೆಟ್ಟುಕೊಟ್ಟು, ಹಣ್ಣಗಾಯಿ, ನೀರುಗಾಯಿಯಾಗಿ ಹೊಡೆದವಳು ರಾಮವ್ವ ಎಂಬ ಮಹಿಳೆ, ಜಡಗಪ್ಪನ ಸಹೋದರಿ, ಬಾಲಪ್ಪನ ತಾಯಿ. ಸಮಬಲದ ಈ ಹೋರಾಟದಲ್ಲಿ ಯಾರೂ ಗೆಲ್ಲಲ್ಲಿಲ್ಲ. ಯಾರೂ ಸೋಲಲಿಲ್ಲ.

ಕುತಂತ್ರಕ್ಕೆ ಇನ್ನೊಂದು ಹೆಸರೇ ಆಗಿರುವ ಆಂಗ್ಲರು ಸರಿ ರಾತ್ರಿಯಲ್ಲಿ ಊರಿಗೆ ಕೊಳ್ಳಿ ಇಟ್ಟರು. ಮದ್ದಿನ ಮನೆಗೆ ಸೆಗಣಿ ಇಟ್ಟರು. ಊರು ಹೊತ್ತಿ ಉರಿಯತೊಡಗಿತು. ಮಕ್ಕಳ ಚೇತ್ಕಾರ, ದನಕರುಗಳ ಅಂಬಾ ಎಂಬ ಆರ್ತನಾದಕ್ಕೆ ಓ ಗೊಟ್ಟು ಅವುಗಳ ರಕ್ಷಣೆಗೆ ಧಾವಿಸಿದ ಎಲ್ಲರನ್ನೂ ಕ್ರೂರಿ ಆಂಗ್ಲರು ಗುಂಡಿಕ್ಕಿ ಕೊಂದರು. ಅವರ ಕ್ರೂರತನಕ್ಕೆ ಇನ್ನೊಂದು ನಿದರ್ಶನವೆಂದರೆ ಪ್ರತಿ ದಾಳಿ ನಡೆಸಲು ಆಂಗ್ಲ ಸೈನಿಕರ ಬರುವಿಕೆಗೆ ಹಾದಿಕಾಯುತ್ತಾ ಹತ್ತಿಕಟ್ಟಿಗೆಯಲ್ಲಿ ಬಚ್ಚಿಟ್ಟುಕೊಂಡು ಇಪ್ಪತ್ಮೂರು ಜನರು ಆಂಗ್ಲರು ಹತ್ತಿ ಕಟ್ಟಿಗೆಗೆ ಬೆಂಕಿ ಹಚ್ಚಿದ್ದರಿಂದ ಒಟ್ಟಿಗೆ ಕರಕಲಾದ ದೃಶ್ಯ. ಊರನ್ನೆಲ್ಲ ಲೂಟಿ ಮಾಡಲಾಯಿತು. ಶಸ್ತ್ರ, ಆಭರಣಗಳಷ್ಟೇ ಅಲ್ಲ, ತಿಂಬುಂಬುವ ಜೀನಸುಗಳನ್ನು ಸೂರೆಮಾಡಲಾಯಿತು ಎಂದು ಲಾವಣಿಕಾರರು ಹೀಗೆ ವರ್ಣಿಸುತ್ತಾರೆ.

“ಕತ್ತಿ ಕುದರಿ ಮುತ್ತು ಮಾಣಿಕ್ಯಾ ಯಾವುದು ಬಿಡಲಿಲ್ಲಾ/ಬೆಳ್ಳಿ ಬಂಗಾರ ಹರಳಿನ ಉಂಗುರ ಹೊನ್ನ ಉಂಗುರ ಗೋಲಾ, ಕುಬಸಾ, ಸೀರಿ, ಹಪ್ಪಳ ಶೆಂಡಿಗೆ ಕುರ್ಚಿಗಿ, ಕುಡಗೋಲಾ/ಕೊಡಲಿ ಕುಂಟಿ ಮಸರು ಬೆಣ್ಣೆ ಹಾಲಾ”

ಈ ಸಮರದಲ್ಲಿ ಮುನ್ನೂರಕ್ಕೂ ಹೆಚ್ಚಿನ ಜನರನ್ನು ಬಂಧಿಸಿ ೧೮೫೭ನೇ ಡಿಸೆಂಬರ್ ೧೧ ರಂದು ಮುಧೋಳದ ಸಂತೆ ಸೇರುವ ಸ್ಥಳದಲ್ಲಿ ೧೯ ಜನರನ್ನು, ಡಿಸೆಂಬರ್ ೧೪ ರಂದು ಹಲಗಲಿಯಲ್ಲಿ ೧೩ ಜನರನ್ನು ಗಲ್ಲಿಗೇರಿಸಲಾಯಿತು.

ಅಂದು ಆಂಗ್ಲರು ಹಲಗಲಿಯ ಮೇಲೆ ದಾಳಿ ನಡೆಸಲು ಜಿಲ್ಲಾ ಕೇಂದ್ರ ಕಲಾದಗಿಯಿಂದ ದಂಡು (ಸೇನೆ) ತೆಗೆದುಕೊಂಡು ಬಂದ ಹಾದಿಯನ್ನು ಇಂದಿಗೂ ಹಲಗಲಿಯಲ್ಲಿ ದಂಡಿನ ಹಾದಿ ಎಂದೇ ಕರೆಯುತ್ತಾರೆ. ಸಮರ ನಡೆದ ಸ್ಥಳದಲ್ಲಿ ರಕ್ತ ಚಲ್ಲಾಡಿದ ಹೊಲಗಳಿಗೆ ರಗತ (ರಕ್ತ) ಮಾನೆ ಎಂದು ಕರೆಯುತ್ತಾರೆ.

ಯಾವ ಅರಸೊತ್ತಿಗೆಯ, ಸಮ್ಸ್ಥಾನಿಕರ ನೆರವಿಲ್ಲದೇ, ಕೇವಲ ತಮ್ಮ ಆತ್ಮಗೌರವಕ್ಕೆ, ಸ್ವಾಭಿಮಾನಕ್ಕೆ ಕೈ ಹಚ್ಚಿದ ಆಂಗ್ಲರ ವಿರುದ್ಧ ಸಮರ ಸಾರಿ ಮಣ್ಣಲ್ಲಿ ಮಣ್ಣಾಗಿ ಇಂದಿಗೆ ೧೫೩ ವರ್ಷ ಸಾಗುತ್ತಿದೆ. ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಮೂಲ್ಯ ಕೊಡುಗೆ ನೀಡಿ, ಇತಿಹಾಸದ ಪುಟಗಳಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿ ಚಿರಸ್ಮರಣೀಯರಾದ ಇವರನ್ನು ಕಡೆಗಣಿಸದೇ ನೆನಪಿಸಿಕೊಳ್ಳಬೇಕಾದದ್ದು, ನಮ್ಮ ಆದ್ಯ ಕರ್ತವ್ಯ ತಾನೆ ?

ಲಾವಣಿಯಲ್ಲಿ ಹಲಗಲಿ ಬಂಡಾಯ

ಆಧುನಿಕತೆಯ ಅಬ್ಬರದಲ್ಲಿ ಮರೆಯಾಗಿ ಹೋಗುತ್ತಿರುವ ಜಾನಪದ ಸಾಹಿತ್ಯವನ್ನು ನಮ್ಮ ಜನತೆಗೆ ನೆನಪಿನಲ್ಲುಳಿಯುವಂತೆ ಯತ್ನಿಸುತ್ತಿರುವ ಸಾಧನಗಳಲ್ಲಿ ಲಾವಣಿ ಹಾಗೂ ಗೀಗಿ ಹಾಡುಗಳು ಇಂದಿನ ಸಂದರ್ಭಗಳಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಜಾನಪದ ಸಾಹಿತ್ಯದಲ್ಲಿ ಒಂದು ವಿಶಿಷ್ಠ ಸ್ಥಾನ ಹೊಂದಿರುವ, ತಮ್ಮವೇಯಾದ ಛಾಪು ಒತ್ತಿದ, ವೈಶಿಷ್ಟ್ಯ ಪೂರ್ಣ ಹೆಜ್ಜೆ ಗುರುತುಗಳನ್ನು ಮೂಡಿಸಿರುವ ಈ ಗೀಗಿ ಪದ ಅಥವಾ ಲಾವಣಿಗಳು ಮಿನಿಸ್ಕರ್ಟ ಹಾಗೂ ಚೂಡಿದಾರಗಳ ಮಧ್ಯೆ ಹಣೆ ತುಂಬ ಕುಂಕುಮವಿಟ್ಟು, ಇಲಕಲ್ ಸೀರೆಯುಟ್ಟು, ತಲೆತುಂಬ ಸೆರಗನ್ನು ಹೊದ್ದ ಮುತ್ತೈದೆಯಂತೆ ಅಥವಾ ಜೀನ್ಸ್ ಪ್ಯಾಂಟ್, ಟೀಶರ್ಟ್‍ಗಳ ನಡುವೆ ಧೋತರ ರುಮಾಲುಗಳಂತೆ ಕಾಣುತ್ತೇವೆ ಎನ್ನುವದಿಲ್ಲಿ ಸ್ಪಷ್ಟ.

ಲಾವಣಿಗಳ ಕಾಲ ನಿರ್ಣಯ

ಇಂತಹ ಈ ಗೀಗಿ ಹಾಗೂ ಲಾವಣಿ ಪದಗಳು ಎಂದು ಹುಟ್ಟಿದವು ಎಂದು ಖಚಿತವಾಗಿ ಹೇಳುವುದು ಕೂಡಾ ತುಂಬ ಕಷ್ಟಕರ ಮಾತು. ಈ ಕುರಿತು ವಿದ್ವಾಂಸರಲ್ಲಿಯೂ ಕೂಡಾ ಬಹಳಷ್ಟು ಭಿನ್ನಾಭಿಪ್ರಾಯಗಳಿವೆ ಎಂಬ ಮಾತು ಸುಳ್ಳೇನಲ್ಲ. ಲಾವಣಿಯೊಂದನ್ನು ಗಮನಿಸಿದಾಗ ‘ಪುಟ್ಟಿ ಇಲ್ಲಿಗೆ ತುರಾಕಲ್ಕಿ ತಿಳಿಯಲು ಜಾಯಿರ ಒಟ್ಟು ಸಾವಿರದೊಂಬೈನೂರ ವರ್ಷದ ಮ್ಯಾಲ ಚಿಲ್ಲರ’ ಅಂದರೆ ಎರಡು ಸಾವಿರ ವರ್ಷದ ಪೂರ್ವದಲ್ಲಿಯೇ ಲಾವಣಿಗಳಿದ್ದವು ಎಂದು ನಾವು ತಿಳಿಯಬೇಕಾಗುತ್ತದೆ.

ಇನ್ನೊಂದು ಮೂಲದ ಪ್ರಕಾರ ಋಗ್ವೇದ ಹಾಗೂ ಬೌದ್ಧ ಸಾಹಿತ್ಯದಲ್ಲಿ ಬರುವ ಸಂವಾದಗಳಲ್ಲಿ ಲಾವಣಿಯ ಮೂಲವನ್ನು ನಾವು ಕಾಣಬಹುದೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಮರಾಠಿ ಪೋವಾಡಗಳ ಮೂಲಕ ಕನ್ನಡದಲ್ಲಿ ಲಾವಣಿ ಅಸ್ಥಿತ್ವಕ್ಕೆ ಬಂದವೆಂದು ೧೬ ಅಥವಾ ೧೭ನೇ ಶತಮಾನದಲ್ಲಿ ಲಾವಣಿಗೆ ಭೂಮಿಕೆ ಸಿದ್ಧವಾಯಿತೆಂದು ಅಭಿಪ್ರಾಯ ಪಡಲಾಗುತ್ತದೆ. ೧೭ನೇ ಶತಮಾನದಲ್ಲಿ ಗುಣಚಂದ್ರನು ಲಾವಣಿ ಕುರಿತು ಪ್ರಸ್ತಾಪ ಮಾಡಿ ಲಾವಣಿಯ ಛಂದೋ ಲಕ್ಷಣ ಹೇಳಿದ್ದರಿಂದ ಅಷ್ಟೊತ್ತಿಗಾಗಲೇ ಲಾವಣಿ ಸಾಹಿತ್ಯ ಅಸ್ತಿತ್ವದಲ್ಲಿತೆಂದು ಅಭಿಪ್ರಾಯ ಪಡಲಾಗುತ್ತಿದೆ.

ತಂಡ

ಒಂದು ತಂಡದಲ್ಲಿ ಮೂರು ಅಥವಾ ನಾಲ್ಕು ಜನರಿರುತ್ತಾರೆ, ಒಬ್ಬರು ಬಗಲಲ್ಲಿ ಡಪ್ಪು ಹಿಡಿದು ಹಾಡಿದರೆ, ಒಬ್ಬರು ತಾಳ, ಇನ್ನೊಬ್ಬರು ತುಂತಣಿ ಹಿಡಿದು ಗೊಗ್ಗರು ದನಿಯಿಂದ ಅವರಿಗೆ ಜೀಯ ಎಂದು ಸಾಥ್ ನೀಡುತ್ತಾರೆ. ಈ ಜೀಜೀ ಅಥವಾ ಗೀಯಗೀಯ ಗಾಗೀಯ ಗೀಯ ಎಂದು ಸ್ವರವೆಳೆಯುವದರಿಂದಲೇ ಇವುಗಳಿಗೆ ಗೀಗೀ ಅಥವಾ ಜೀಜೀ ಪದಗಳೆಂದು ಹೆಸರು.

ಹರದೇಶಿ ಗಂಡು ಹೆಚ್ಚೆಂದು ಹೇಳುವ ತಂಡವಾಗಿದೆ. ಗಣಪತಿ ಗಣನಾಥ| ಯಾರು ಇಲ್ಲ ನಿಮ್ಮ ಹೊರತ| ವಿದ್ಯದಲ್ಲಿ ಶಮರಂತ| ಎಂದು ಗಂಡು ದೇವರನ್ನ ಗಣಪತಿಯನ್ನು ಸುತ್ತಿಸಿ ಈ ಜಗತ್ತಿನಲ್ಲಿ ಗಂಡೇ ಹೆಚ್ಚೆಂದು ವಾದಿಸುತ್ತಾರೆ.

ನಾಗೇಶಿ ಸರಸೋತಿ ನಿಮ್ಮ ಸ್ತುತಿ / ಸಭಾದಾಗನಿಂತ ನಾ ನಾಗೇಶಿ ಚರಣಕ್ಕೆರಗಿ ಕೈಮುಗದ| ಕಾಯಿ ಒಡಿತೇವು ನಾವು ನಮಸ್ಕರಿಸಿ| ಎಂದು ಸರಸ್ವತಿಯನ್ನು ಪ್ರಾರ್ಥಿಸಿ, ಪ್ರಕೃತಿ ಅಥವಾ ಹೆಣ್ಣೇ ಹೆಚ್ಚೆಂದು ವಾದಿಸುವ ತಂಡವಿದಾಗಿದೆ.

ಬೈಲು ಲಾವಣಿ ಇಲ್ಲ ಮೂವರ ಸ್ಥಾನದಲ್ಲಿ ಯಾವುದೇ ವಾದ್ಯಗಳಿಲ್ಲದೆ ಹೆಚ್ಚೆಂದರೆ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಒಬ್ಬನೇ ಹಾಡುತ್ತಿರುತ್ತಾನೆ.

ಗೀಗೀ ಹಾಗೂ ಲಾವಣಿಯಲ್ಲಿ ವಿಷಯಗಳು ಗೀಗೀ ಹಾಗೂ ಲಾವಣಿ ಹಾಡುಗಾರರು ಕೇವಲ ಒಂದೇ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಸೀಮಿತಗೊಳ್ಳದೇ ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಯಾವುದೇ ವಿಷಯಗಳನ್ನು ಆಯ್ದುಕೊಂಡು ಸಮಗ್ರ ಅಧ್ಯಯನದೊಂದಿಗೆ ನಿರರ್ಗಳವಾಗಿ ಹಾಡಬಲ್ಲವರಿವರು. ೬ ಶಾಸ್ತ್ರ, ೧೮ ಪುರಾಣಗಳೊಂದಿಗೆ ಎಲ್ಲವನ್ನು ಅರಿತ ಪಂಡಿತರಿವರು.

          ದ್ರೌಪದಿ ಮ್ಯಾಲ ಕೀಚಕ ಇಟ್ಟಾನ ನೆದರಾ |
          ಕೊಪೆತರಲಾಕ ಹ್ವಾದಲ್ಲಿ ಹಿಡಿದಾನ ಪದರ ||
          ಕೊಸರಿಕೊಂಡ ಹ್ವಾದಾಳ ಸುಂದರಾ |
          ಅರ್ಜುನನ ಮುಂದ ಸುರಸ್ತಾಳ ಕಣ್ಣೀರಾ ||

ಹೀಗೆ ಮಹಾಭಾರತದಿಂದ ಹಿಡಿದು “ಹಲಗಲಿ ಅಂಬುವ ಹಳ್ಳಿ ಮುಧೋಳ ರಾಜ್ಯದಾಗ ಇತ್ತು. ಪೂಜಾರಿ ಹಣಮಾ ಬಾಲ ಜಡಗಾ ರಾಮಾ ಮಾಡ್ಯಾರ ಮಸಲತ್ತು||” ಎಂಬಲ್ಲಿಯವರೆಗೆ, ಗಾಂಧೀಜಿಯ ಸ್ವಾತಂತ್ರ್ಯ ಹೋರಾಟ, ಖಾದಿ ವಸ್ತ್ರ. ಲೋಕಕ್ಕೆ ಅನ್ನವಿಕ್ಕುವ ರೈತನ ಗುಣಗಾನ, ವಿನೋಬಾರ ಸರ್ವೋದಯ ಇವೆಲ್ಲವುಗಳು ಈ ಗೀಗೀ, ಲಾವಣಿ ಹಾಡುಗಾರರಿಗೆ ಕರತಲಾಮಲಕವಾಗಿರುವುದನ್ನು ನಾವಿಲ್ಲಿ ಗಮನಿಸಬಹುದಾಗಿದೆ.

ಆತ್ಮ, ಪರಮಾತ್ಮ, ಜೀವಾತ್ಮ, ದ್ವೈತ, ಅದ್ವೈತ, ವಿಶಿಷ್ಟಾದ್ವೈತಗಳು ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಾಗಿರುವ ಸಂದರ್ಭದಲ್ಲಿ ಆತ್ಮ ಈ ದೇಹದ ಒಡೆಯನಾಗಿ ಒಂದೊಂದೇ ಅವಯವಗಳನ್ನು ಹೇಗೆ ತನ್ನ ಅಂಕಿತದಲ್ಲಿಟ್ಟುಕೊಂಡು ಆಟವಾಡಿಸುತ್ತಾನೆ ಎಂಬುದನ್ನು ಇವರು ಹೀಗೆ ಬಣ್ಣಿಸುತ್ತಾರೆ.

          ಮಾಲಗಾರಣ್ಣನ ಮಾತ ಕೇಳಿರಿ ಮಾಡಿದನೊಂದು ತ್ವಾಟಾ |
          ದೇಹದೊಳಗೊಂದು ಭಾವಿ ತೋಡಿ ಹೂಡಿದಾನೊಂದುಆಟಾ ||” ಎಂದು

ಹೇಳುತ್ತಾ ಈ ಆತ್ಮವನ್ನು ಈ ತೋಟದ ಒಡೆಯನನ್ನಾಗಿಸಿಯೂ, ದೇಹವನ್ನು ಆತನ (ಮಾಲಗಾರ – ತೋಟಗಾರ) ಉಸ್ತುವಾರಿಯಲ್ಲಿರುವ ತೋಟವನ್ನಾಗಿಯೂ, ಆತನೇ ಈ ದೇಹದಲ್ಲಿ ಭಾವಿ ತೋಡಿ, ಉತ್ತಿ, ಬಿತ್ತಿ, ಬೆಳೆ ತೆಗೆಯುತ್ತಾನೆಂದು ವರ್ಣಿಸುತ್ತಾರೆ.

ನಮ್ಮ ಬದುಕಿನ ಎಲ್ಲಾ ಮಗ್ಗುಲುಗಳಾದ ನೋವು, ನಲಿವು, ಕೋಪ, ತಾಪ, ವಿರಹ, ಹಾಸ್ಯ, ಶೃಂಗಾರ ಎಲ್ಲವುಗಳತ್ತ ಗಮನ ಹರಿಸಿರುವ ಲಾವಣಿಕಾರರು “ಹಲಗಲಿಯ ಬಂಡಾಯ” ದತ್ತಲೂ ಗಮನಹರಿಸಿದ್ದಾರೆ.

ವಿಲಾಯಿತಿ (ಇಂಗ್ಲೆಂಡಿನಿಂದ)ಯಿಂದ ಹೊರಟ ಶಸ್ತ್ರಾಸ್ತ್ರ ನಿಷೇಧ ಕಾಯ್ದೆ, ಹಲಗಲಿ ಬೇಡರ ಪಡೆಯ ಮುಖಂಡರು, ಅಲ್ಲಿಯ ಆರ್ಥಿಕ ಸ್ಥಿತಿ, ಅವರಲ್ಲಿದ್ದ ಶಸ್ತ್ರಾಸ್ತ್ರಗಳ ಸಂಗ್ರಹ್, ಕಾನೂನಿನ ವಿರುದ್ಧ ಹೋರಾಟ, ಆಂಗ್ರೇಜಿಯವರ ದಾಳಿ, ಯುದ್ಧ ನಡೆದಾಗ ಹಾಗೂ ನಂತರದಲ್ಲಿ ಊರಿನ ಸ್ಥಿತಿ ಎಲ್ಲವನ್ನೂ ಮನ ಮುಟ್ಟುವಂತೆ ಲಾವಣಿಕಾರರು ವಿವರಿಸಿ ಹೋಗಿದ್ದಾರೆ.

ಮರೆಯಾಗಿ ಹೋಗಬಹುದಾಗಿದ್ದ ಈ ಲಾವಣಿ ಸಾಹಿತ್ಯವನ್ನು ವಿದೇಶದಿಂದ ಬಂದು, ಇಲ್ಲಿಯ ಕನ್ನಡ ಭಾಷೆ ಕಲಿತು, ಈ ಲಾವಣಿಗಳನ್ನು ಸಂಗ್ರಹಿಸಿ ಭಾರತೀಯ ಇತಿಹಾಸಕ್ಕೆ. ಕನ್ನಡ ಸಾಹಿತ್ಯಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟು ಹೋಗಿದ್ದಾರೆ. ಉಪಕರಿಸಿದ್ದಾರೆ ಜಾನ್ ಪ್ಲೀಟ್. ನಿಜಕ್ಕೂ ಭಾರತೀಯ ಇತಿಹಾಸದ ಹಾಗೂ ಕನ್ನಡ ಸಾಹಿತ್ಯದ ಓದುಗರು ಪ್ಲೀಟ್ ಮಹಾಶಯರಿಗೆ ಋಣಿಯಾಗಿರುತ್ತಾರೆ.

ಸಂಗ್ರಹಿಸಿದ ಲಾವಣಿಗಳಲ್ಲಿ ಹಲಗಲಿ ಬಂಡಾಯಕ್ಕೆ ಸಂಬಂಧಿಸಿದಂತೆ ಒಂದೊಂದೇ ಹೆಜ್ಜೆಗಳನ್ನಿಡುತ್ತಾ ಹೋಗೋಣ.

ವಿಲಾಯಿತಿಯಿಂದ ಬಂದ ಶಸ್ತ್ರಾಸ್ತ್ರ ನಿಷೇಧ ಕಾಯ್ದೆಯನ್ನು ಲಾವಣಿಕಾರನೊಬ್ಬ ತನ್ನ ಲಾವಣಿಯಲ್ಲಿ ಹೀಗೆ ಬಣ್ಣಿಸುತ್ತಾನೆ.

          ಹೊತ್ತ ಬಂದಿತು ಮತ್ತ ನೋಡಿರಿ ಕತ್ತಿ ಹಿಡುವ ಜನಕ
          ಶಿಸ್ತಿನ ಮಂದಿ ಭಂಟರ ಹಲಗಲಿ ಮುಟ್ಟಿಲಿಲ್ಲ ದಡಕ ||ಪಲ್ಲ||
          ವಿಲಾಯಿತಿ ಹುಕುಮ ಕಳವಿದರ ಕುಂಪಣಿ ಸರಕಾರಾ
          ಎಲ್ಲ ಜನರನಾ ತರಿಸಿ ಜೋರಿ ಮಾಡಬೇಕ ಹತಾರಾ
          ಕತ್ತಿ ಕಟಾರಿ ಕೈ ಚೂರಿ ಬಾಕು ಗುರ್ದಿ ಸುರಾಯಿಚಕ್ರಾ
          ಬಾಲಿಯ ಬರ್ಚಿ ಬಿಚ್ಚುಗತ್ತಿ ನೋಡ ಬಾಣ ಬಿಲ್ಲಿನವರಾ
          ಪಟಾತ ಪಿಸ್ತುಲ ಕರುಲಿ ತೇಗಾ ಚಾಪಗೊಡ್ಲಿ ಶಸ್ತ್ರಾ
          ತೋಪು ತುಬಾಕಿ ಹೊಡವು ಮದ್ದಗುಂಡ ಬಿಡಬ್ಯಾಡ್ರಿ ಚೂರಾ
          ಮುಚ್ಚಿ ಇಟ್ಟವರಿಗಿ ಮೂರು ವರ್ಷದ ಬೇಡಿ ಹಾಕರಿ ಪೂರಾ
          ಕೊಡದ ದಿಟಾಯಿ ಮಾಡಿದವರನಾ ಕಡದ ಹಾಕರಿ ತಾರಾ

ಕತ್ತಿ ಕಟಾರಿ, ಕೈಚೂರಿ, ಚಾಕು, ಗುರ್ದಿ, ಪಿಸ್ತೂಲ, ತೋಪು, ತುಪಾಕಿ ಇಂಥವೆಲ್ಲವುಗಳನ್ನು ಆಯುಧಗಳನ್ನಾಗಿ ಬಳಸುತ್ತಿದ್ದರೆಂದು ಲಾವಣಿಕಾರ ಹೇಳುತ್ತ ಇವೆಲ್ಲವುಗಳನ್ನು ಸರಕಾರಕ್ಕೆ ತಂದು ಒಪ್ಪಿಸಬೇಕೆಂದು ವಿಲಾಯಿತಿಯಿಂದ ಕಾಯ್ದೆ ಬರುತ್ತದೆಂದು ವಿವರಿಸುತ್ತಾನೆ. ಅವರ ಹತ್ತಿರ ಯಾವೊಂದು ಆಯುಧವನ್ನು ಬಿಡದೇ ವಶಪಡಿಸಿಕೊಳ್ಳಬೇಕಲ್ಲದೇ ಮುಚ್ಚಿ ಇಡುವವರಿಗೆ ಕೈಕೋಳ ಹಾಕಿ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ, ಕೊಡುವುದಿಲ್ಲವೆಂದು ಹಟ ಮಾಡುವವರನ್ನು ಕೊಂದು ಹಾಕಿರಿ ಎಂಬ ಕಾನೂನು ಎಂಥ ಕರಾಳ ಕಾನೂನಾಗಿತ್ತೆಂಬುದನ್ನಿಲ್ಲಿ ನಾವು ಆಲೋಚಿಸಬೇಕಾದ ಸಂಗತಿ.

ವಿದ್ವಾಂಸ ಡಾ. ವೀರೇಶ ಬಡಿಗೇರ “ದುಡಿವ ಜನರನ್ನು ಯಾಚಕರನ್ನಾಗಿ ಫಲಾನುಭಗಳನ್ನಾಗಿ, ನಿರಾಶ್ರಿತರನ್ನಾಗಿ ಮಾಡುವ ಕ್ರಿಯೆ ನಿಶಸ್ತ್ರೀಕರಣ ಕಾಯ್ದೆಯೊಳಗಿದೆ” ಎಂದು ಅಭಿಪ್ರಾಯ ಪಡುತ್ತಾರೆ.

ಕಾನೂನುಗಳು ಜನರನ್ನು ಸಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳಬೇಕೇ ಹೊರತು ಜನತೆಯನ್ನು ನಿಷ್ಕ್ರೀಯರನ್ನಾಗಿ ಮಾಡಬಾರದು. ಈ ಕಾನೂನು ಕೆಳ ಸಮುದಾಯಗಳ ಅಸ್ತಿತ್ವವನ್ನೇ ಹೊಸಕಿ ಹಾಕಲು ಯತ್ನಿಸಿದ್ದೇ ಈ ಸಮುದಾಯಗಳು ಸರಕಾರದ ವಿರುದ್ಧ ಹೋರಾಟಕ್ಕಿಳಿಯಲು ಮುಖ್ಯ ಕಾರಣವಾಯಿತು ಎಂಬುದು ಗಮನಾರ್ಹ ಅಂಶವಾತ್ತದೆ.

ಶಸ್ತ್ರಾಸ್ತ್ರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ ಬ್ರಿಟೀಷ್ ಸರ್ಕಾರ ಅಷ್ಟಕ್ಕೆ ಸುಮ್ಮನೇ ಕೂಡದೇ ಆ ಕಾಯ್ದೆಯನ್ನು ಜನತೆ ಒಪ್ಪಿಕೊಳ್ಳುವಂತೆ ಹಲವಾರು ಉಪಾಯಗಳನ್ನು ಕಂಡುಕೊಳ್ಳುತ್ತದೆ.

                   ಬೇಡಿದಾಕ್ಷಣ ತಾವು ತಂದು
                   ಕೊಡತಾರ ಹಿಡಿಹಿಡಿರ್ ಎಂದು
          ವತ್ನ ಕೊಡತೇವ ಅನ್ನರಿ ವೊಂದ್ ಒಂದು
          ತಂದು ಕೊಡತಾರತಮ್ಮ ಕುಸಿಲಿಂದು
                   ಬಂದಿತು ಹುಕುಂ ಹೀಂಗ ಎಂದು
                   ಡಂಗುರ ಸಾರಿದರ ಮುಂದು
          ಶೂರ ಶಿಪಾಯಿ ಜನರ ತಾವು ತಿಳಿದು
          ಅಳತಾರ ಕಣ್ಣಿಗೆ ನೀರ ತಂದು
          ಬಹಲ ಚಿಂತೆಯಾಗಿ ಅವರು ದುಃಖದಿಂದ ಬಿದ್ದರ ಅಣ್ಣನೆಲಕ

ಕಂಪನಿ ಸರಕಾರದ ಆದೇಶ ತಲುಪಿದ ತಕ್ಷಣವೇ ಜನತೆ ಆಯುಧಗಳನ್ನು ತೆಗೆದುಕೊಳ್ಳಿ, ತೆಗೆದುಕೊಳ್ಳಿ ಎಂದು ತಾವೇ ಭಯಪಟ್ಟು ತಂದು ಸರಕಾರಕ್ಕೆ ತಂದು ಒಪ್ಪಿಸುತ್ತಾರೆ. ಒಪ್ಪಿಸದಿದ್ದವರಿಗೆ ಆಸೆ, ಆಕಾಂಕ್ಷೆಗಳನ್ನು ಒಡ್ಡಿ ವತನಕೀ ಕೊಡುತ್ತೇವೆಂದು ಡಂಗುರದ ಮೂಲಕ ಜಾಹೀರಪಡಿಸಿದರೆ ಸಂತೋಷದಿಂದ ಆಯುಧಗಳನ್ನು ಸರಕಾರಕ್ಕೆ ಒಪ್ಪಿಸುತ್ತಾರೆಂಬುದು ಸರಕಾರದ ಆಲೋಚನೆ. ಆದರೆ ಇಲ್ಲಿ ಪರಿಣಾಮವೇ ಬೇರೆಯಾಗಿರುತ್ತದೆ. ಆಯುಧಗಳ ಮೇಲೆ ಅಪಾರ ಪ್ರೀತಿ, ಗೌರವ, ಕಾಳಜಿ ಇಟ್ಟುಕೊಂಡ ಶೂರ ಸಿಪಾಯಿ ಜನ ಕಣ್ಣೀರು ಸುರಿಸುತ್ತಾ, ತಮಗೆ ಬಮ್ದ ದುರ್ದೆಶೆಯನ್ನು ನೆನೆಯುತ್ತಾ ನೆಲಕ್ಕೆ ಬಿದ್ದು ಬೋರಾಡಿ ಅಳುವ ದೃಶ್ಯ ಎಂಥ ಮುಗ್ಧ ಮನಸ್ಸಿನ ಹಸುಗೂಸು ಕೂಡಾ ಈ ಕಾನೂನನ್ನು ವಿರೋಧಿಸಿ ಸಿಡಿದೇಳುವಮ್ತೆ ಮಾಡುತ್ತದೆ.

                   ಕೇಳುತಾ ಹುಕುಮಾ ಕೆಲವರ ತಂದ ಕೊಟ್ಟಾರ ಆವಾಗ
                   ಬಹಳ ಬೆಲಿವು ಹೆಚ್ಚಿನ ಹತಾರಾ ಮುಚ್ಚಿ ಇಟ್ಟರ ವೊಳಗ
          ಸಾಲ ಸಮದ ಮಾಡಿ ದನಕರ ಮಾರಿ ತಂದಿನ್ನಿ ಹಬ್ಬದಾಗ
          ನೋಡನೋಡ ಹ್ಯಾಂಗ್ ಕೊಡೂಣಮ್ತ ಹುಗದ ಇಟ್ಟಾರ ನೆಲದಾಗ
                   ಶೂರ ಚಟೆಗಾರರು ಜಾಯಿತಸಾಹೇಬ ಬಂದಾರ ಆವಾಗ
          ಸಂದಿಯಗೊಂದಿವೊಂದು ಉಳಿಯದ ಅಂಗ ಹೊಕ್ಕ ಹುಡಿಕ್ಯಾರ ಮನಿಯಾಗ
          ತೆಪ್ಪಿತು ಉಪಾಯಿ ಇನ್ನ ಮಾತರ ಮಾಡೂಣ ಅಂತರ ಹೆಂಗ
          ಒಬ್ಬರಕ ಒಬ್ಬರ ಜಾಡ ಹೇಳತಾರ ವರ್ಮ ಸಾಧಿಸಿದಂಗ
          ಜಾಡಿಸಿ ಹೋದವೊ ಎಲ್ಲಾ
          ನಾಡೋಳಗ ಏನೂ ಉಳಿಯಲಿಲ್ಲಾ
                   ಅಜ್ಜ ಮುತ್ಯಾರ ಹಿಡುವ ಪಿಸ್ತೂಲ
                   ಕಸದ ಓದಾರ ಕತ್ತಿಯ ಡಾಲಾ
          ಕವಚ ಬೆಳ್ಳಿಯ ಮಕಮಾಲಾ
          ರತ್ನದ ಹಿಡಿಕಿವು ಹೋದವು ಯೆಲ್ಲಾ

ಹೋದ ಹತ್ಯಾರಕ ಹೊಟಿಬ್ಯಾನಿ ಹಚಿಕೊಂಡ ನಿಂತಾರ ಸಾವುದಕ

ಆಯುಧಗಳಿಲ್ಲಿ ಕೇವಲ ಒಂದು ವಸ್ತುವಾಗಿ ಅವರಿಗೆ ಪರಿಗಣಿತವಾಗುವುದಿಲ್ಲ. ತಂದೆ, ಅಜ್ಜ, ಮುತ್ತಜ್ಜರು, ಠೀವಿಯಿಂದ ಹಿದಿದುಕೊಂಡಿದ್ದ ಆ ಆಯುಧಗಳ ಬಗ್ಗೆ ಅವರಿಗೆ ತಮ್ಮ ಪರಂಪರೆ, ಪ್ರತಿಷ್ಠೆ, ಗೌರವ, ಸ್ವಾಭಿಮಾನ ತುಂಬಿಕೊಂಡಿದೆ. ಆಯುಧಗಳನ್ನು ಒಪ್ಪಿಸಿದಲ್ಲಿ ಸ್ವರ್ಗದಲ್ಲಿರುವ ಹಿರಿಯರು ತನ್ನ ಬಗ್ಗೆ ಏನೆಂದು ಕೊಳ್ಳಬಹುದು? ಅಸಹ್ಯ ಪಟ್ಟುಕೊಳ್ಳಲಿಕ್ಕಿಲವೇ? ಎಂದು ಅಂತರಾತ್ಮವನ್ನು ಚುಚ್ಚುವ ಪ್ರಶ್ನೆ ಕೇಳಿಕೊಳ್ಳುತ್ತಾರೆ.

ರತ್ನದಿಂದ ಖಡ್ಗದ ಹಿಡಿಕೆಯನ್ನು ಮಾಡಿಸಿದ್ದು, ಬೆಳ್ಳಿಯ ಕವಚ ಹೊಂದಿದ್ದೆಂದು ಹೇಳುತ್ತಾ ಆಯುಧ ಖರೀದಿಸುವದರಲ್ಲಿಯೂ ತಮ್ಮ ಅಂತಸ್ತೇನು ಎಂಬುವದನ್ನು ಹೇಳಿಕೊಳ್ಳುತ್ತಾರೆ. ಜೊತೆಗೆ ದನಕರುಗಳನ್ನು ಮಾರಿ ತಾನು ಆಯುಧ ಖರೀದಿಸಿದ್ದೇನೆಂದು ತನ್ನ ಬಡತನವನ್ನು ಮರೆ ಮಾಚದೆ ಹೇಳುತ್ತಾರೆ. ಸಾಮಾನ್ಯ ಆಯುಧಗಳನ್ನು ಒಂದಿಷ್ಟು ಜನ ಸರಕಾರಕ್ಕೆ ಒಪ್ಪಿಸಿದರೆ, ಬೆಲೆಬಾಳುವ ಆಯುಧಗಳನ್ನು ನೆಲದಲ್ಲಿ ಹುಗಿದೋ ಅಥವಾ ಇನ್ನೆಲ್ಲೋ ಬಚ್ಚಿಟ್ಟು ಬಿಡುತ್ತಾರೆ. ಅದನ್ನು ಗಮನಿಸಿದ ಅಧಿಕಾರಿಗಳು ಪ್ರತಿ ಮನೆ ಮನೆ ಹೊಕ್ಕು ಶೋಧನೆ ನಡೆಸಿ ವಶಪಡಿಸಿಕೊಳ್ಳುತ್ತಾರೆ. ಹೀಗಾಗಿ ಒಂದೇ ಒಂದು ಆಯುಧ ನಾಡಿನೊಳಗೆ ಉಳಿಯಲಿಲ್ಲವೆಂದು ಅಲವತ್ತುಕೊಂಡದ್ದನ್ನು ಲಾವಣಿಕಾರ ವಿವರಿಸುತ್ತಾನೆ.

          ಹಲ್ಲ ಕಿತ್ತಿದ ಹಾಂವಿನ ಪರಿಯು ಆದೀತಲ್ಲಾ
          ರಂಡಿ ಮುಸುಕ ಹಾಕಿ ತಿರಗಿದರ ನಮ ಮಾನ ಉಳಿಯುವದಿಲ್ಲಾ
          ಮುಗ್ಗಲದಾಗಿನ ಹೇಣತಿ ಕೊಟ್ಟಂಗ ಆತಿ ಹೇಡಿ ಆದೇವಲ್ಲಾ
          ಸತ್ತ ಹೆಣಕ ಶೃಂಗಾರ ಮಾಡಿದ ಪರಿ ಆದಿತಲ್ಲಾ
          ಹಗಲಿ ಮನಿ ಹೊಕ್ಕು ಹಣಾವೋದರ ಕೇಳವರ ಯಾರ ಇಲ್ಲಾ
          ಪುಂಡಾ ಪಾಳೆಗಾರ ಪಚ್ಚ್ಯಾ ವಜೀರರು ಪಂತ ಹಿಡಿಯಲಿಲ್ಲಾ
          ದಂಡನ್ ಆಳುವ ದೊರಿ ದೌಲತರಂಜಿ ಕುಳಿತರಲ್ಲಾ

ಅಧಿಕಾರಿಗಳು ಮನೆ ಮನೆಗೆ ಹೋಗಿ ಶಸ್ತ್ರಾಸ್ತ್ರ ವಶಪಡಿಸಿಕೊಂಡೊಡನೆ ಸಾಮಾನ್ಯ ಜನರ ಸ್ಥಿತಿ ಹಲ್ಲು ಕಿತ್ತು ಹಾವಿನಂತಾಗುತ್ತದೆ. ಕೈಯಲ್ಲಿಯ ಆಯುಧಗಳನ್ನು ಒಪ್ಪಿಸುವುದೆಂದರೆ ಮಗ್ಗುಲಲ್ಲಿಯ ಹೆಂದತಿಯನ್ನೇ ಕೊಟ್ಟಂತೆಂದು ದುಃಖಿಸುತ್ತಾರೆ. ನಾವು ಏನಿದ್ದರೇನು, ನಾವೆಷ್ಟು ಬಲಾಢ್ಯರಿದ್ದರೇನು, ಎಷ್ಟು ಶೂರರಿದ್ದೇನು, ಕೈಯಲ್ಲಿ ಆಯುಧಗಳಿಲ್ಲದಿದ್ದರೆ ನಮ್ಮ ಶೂರತನಕ್ಕೆ. ಪೌರುಷತನಕ್ಕೆ ಬೆಲೆ ಏನು ಎಂದು ಪ್ರಶ್ನಿಸಿಕೊಳ್ಳುವ ಅವರು ಇದು ಸತ್ತ ಹೆಣವನ್ನು ಸಿಂಗರಿಸಿದಂತೆ ಎನ್ನುತ್ತಾರೆ.

ಇನ್ನು ಸಿರಿವಂತರ ಚಿಂತೆಯೇ ಬೇರೆ. ಹಗಲು ಹೊತ್ತಿನಲ್ಲಿಯೇ ಬೇರೆ ಯಾರಾದರೂ ಕೊಳ್ಳೆ ಹೊಡೆದು ದೋಚಿಕೊಂಡು ಹೋದರೆ ಅವರೂ ಏನೂ ಮಾಡುವಂತಿಲ್ಲ. ಎಲ್ಲವನ್ನೂ ನೋಡಿಯೂ ಸುಮ್ಮನಿರಬೇಕಷ್ಟೆ. ಯಾಕೆಂದರೆ ಕಳ್ಳರನ್ನೂ, ದರೋಡೆಕೋರರನ್ನು ಬೆದರಿಸಲು ಯಾರ ಹತ್ತಿರವೂ ಆಯುಧಗಳೇ ಇಲ್ಲವೆಂದ ಮೇಲೆ ಅವರನ್ನು ಬೆದರಿಸಲು ಹೇಗೆ ಸಾಧ್ಯ?

ಇಷ್ಟೆಲ್ಲಾ ನಾಡಿನಲ್ಲಿ ನಡೆದಾಗ್ಯೂ ಪಾಳೆಗಾರರು, ಬಾದಶಹಾಗಳು, ವಜೀರರು, ದಂಡನ್ನಾಳುವ ದೊರೆಗಳು, ಶ್ರೀಮಂತರು ಅಂಜಿ ಕುಳಿತರೇ ಹೊರತು ಈ ಕಾನೂನನ್ನು ಪ್ರಶ್ನಿಸಲಿಲ್ಲವೆಂಬುದಿಲ್ಲ ಸ್ಪಷ್ಟವಾಗುತ್ತದೆ.

ಆಳರಸರು ಹೊರಡಿಸಿದ ಈ ಕರಾಳ ಶಾಸನ ಎಲ್ಲ ಸಂಸ್ಥಾನಗಳಿಗೂ ತಲುಪಿದಂತೆ ಮುಧೋಳ ಸಂಸ್ಥಾನಕ್ಕೂ ತಲುಪುತ್ತದೆ. ಅಲ್ಲಿಂದ ಅದು ಹಲಗಲಿಗೂ ರವಾನೆಯಾಗುತ್ತದೆ.

          ಹಲಗಲಿ ಅಂಬುವ ಹಳ್ಳಿ ಮುಧೋಳ ರಾಜ್ಯದಾಗ ಇತ್ತು
          ಪೂಜೇರಿ ಹಣಮಾ ಬಾಲ ಜಡಗರಾಮ ಮಾಡ್ಯಾರ ಮಸಲತ್ತು
          ಕೈನ ಹತಾರ ಕೊಡಬಾರದೊ ನಾವು ನಾಲ್ಕು ಮಂದಿ ಜತ್ತು
          ಹತಾರ ಹೋದಿಂದ ಬಾರದ ನಮ್ಮ ಜೀವ ಸತ್ತ ಓಗದು ಗೊತ್ತು
          ಸುತ್ತಿನ ಹಳ್ಳಿ ಮತ್ತು ದೊರಿಗಳ ತಿಳಿಶೇರ ಹಿಂಗ ಅಂತು
          ಮಾಡರಿ ಜಗಳಾ ಕೂಡ್ ಇರತೇವು ಕುಮುಕಿ ಯಾವತ್ತು
          ಒಳಗಿಂದೊಳಗ ವಚನ ಕೊಟ್ಟರೊ ಬ್ಯಾಡರ್ ಎಲ್ಲ ಕಲತು
          ಕಾರಕೂನನ ಕಪಾಳ ಬಡದರ ಶಿಪಾಯ ನೆಲಕ ಬಿತ್ತು

ಮುಧೋಳದಿಂದ ಬಂದ ಶಾಸನದ ಕುರಿತು ಹಲಗಲಿಯಲ್ಲಿಯ ಬೇಡ ಪ್ರಮುಖರಾದ ಪೂಜಾರಿ ಹಣುಮ, ಬಾಲ, ರಾಮ ಎಂಬುವವರು ಸಮಾಲೋಚನೆ, ನಡೆಸಿ ಶಸ್ತ್ರಾಸ್ತ್ರಗಳನ್ನು ಆಂಗ್ಲರಿಗೆ ಒಪ್ಪಿಸುವದು ಬೇಡ ಎಂಬ ತೀರ್ಮಾನಕ್ಕೆ ಬರುತ್ತಾರೆ. ಸುತ್ತೂರಿನ ಗ್ರಾಮಗಳ ಪ್ರಮುಖರಿಗೂ ಮಾಹಿತಿ ನೀಡಿ ಶಸ್ತ್ರಾಸ್ತ್ರಗಳನ್ನು ಒಪ್ಪಿಸುವದು ಬೇಡ, ನೀವು ಕೊಡುವದಿಲ್ಲವೆಂದು ಹೇಳಿರಿ, ನಿಮ್ಮೊಂದಿಗೆ ನಾವಿದ್ದೇವೆ. ನಿಮಗೆ ನೆರವು ನೀಡುತ್ತೇವೆಂದು ಭರವಸೆ ಕೊಡುತ್ತಾರೆ. ಈ ಭರವಸೆಯಿಂದ ಪ್ರೇರೇಪಿತರಾದ ಸುತ್ತ ಮುತ್ತಲಿನ ಬೇಡ ಜನಾಂಗ ಇವರಿಗೆ ಗುಟ್ಟಾಗಿ ಬೆಂಬಲದ ಮಾತು ಕೊಡುತ್ತಾರೆ. ಶಸ್ತ್ರಾಸ್ತ್ರ ಕೇಳಿಕೊಂಡು ಬಂದ ಕಾರಕಾನನಿಗೆ ಕಪಾಳಕ್ಕೆ ಹೊಡೆಯುತ್ತಾರೆ. ಕಾರಕೂನನ ಕಪಾಳಕ್ಕೆ ಹೊಡೆದರೆ ಅಂಗ್ರೇಜಿ ಸಿಪಾಯಿ ನೆಲಕ್ಕೊರಗಿ ಬೀಳುವದನ್ನು ಕವಿ ವರ್ಣಿಸುತ್ತಾನೆ. ಕವಿ ಇಲ್ಲಿ ಕಾರಕೂನನನ್ನು, ಶಿಪಾಯಿಯನ್ನು ಅಪಮಾನಿಸುವದರ ವರ್ಣನೆ ತನ್ನ ನೆಲ, ತನ್ನ ಜನರನ್ನು ಪ್ರೀತಿಸುತ್ತಾನೆನ್ನುವದರ ದ್ಯೋತಕವು ಆಗಿದೆ ಕೂಡಾ.