ನಿರಾಶರಾದ ಆಂಗ್ಲರು

ತಮ್ಮ ಪ್ರಯತ್ನಗಳು ಕೈಗೂಡದಿದ್ದರೂ ನಿರಾಶರಾದ ಆಂಗ್ಲರು ಹೆದರಿಕೆಯ ಮುಖಾಂತರ, ಆಮಿಷಗಳನ್ನು ಒಡ್ಡುವ ಮೂಲಕ ಪುನಃ ಪುನಃ ಯತ್ನಿಸುತ್ತಲೇ ಇದ್ದರು ಸ್ಥಳೀಯ ಮುಖಂಡರುಗಳ ಮೂಲಕ ಸಂಧಾನಕ್ಕೂ ಯತ್ನಿಸುತ್ತಿದ್ದರು. ಒಟ್ಟಾರೆ ಈ ಜನರನ್ನು ಶಸ್ತ್ರಹೀನರನ್ನಾಗಿಸಿ ಅವರನ್ನು ದುರ್ಬಲಗೊಳಿಸುವದೇ ಅವರ ಮೂಲೋದ್ದೇಶ. ಇಂಥ ಸಂದರ್ಭದಲ್ಲಿ ಅಧಿಕಾರಿಯೊಬ್ಬ ಸೈನ್ಯ ಸಮೇತ ಬಂದು ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ತಾಕೀತು ಮಾಡಿದಾಗ ಹಲಗಲಿಯ ಬೇಡರ ಪಡೆಯ ಮುಖಂಡರ ಹಾಗೂ ಅಧಿಕಾರಿಯ ನಡುವೆ ನಡೆದ ಸಂಭಾಷಣೆಯನ್ನು ಲಾವಣಿಕಾರ ವರ್ಣಿಸುವ ರೀತಿ ಎಂಥ ರಣ ಹೇಡಿಗಳನ್ನು ಯುದ್ಧಕ್ಕೆ ಅಣಿಗೊಳಿಸುವ ವಂತಹುದಾಗಿದೆ.

          ಹತಾರ ಕೊಡಲಿಕೆ ಹೆಂಗಸರು ಆಗಿ ಬಳಿಯ ಇಟ್ಟಿಲ್ಲ ಕೈಯ್ಯಾಗ
          ಯಾವ ಬಂದೀರಿ ಜೀವಹೋದರು ಕೊಡುವುದಿಲ್ಲ ಸುಮ್ಮನ ಹೋಗರಿ ಈಗ
          ಅಂದ ಮಾತಯೆಲ್ಲ ಬಂದ ಹೇಳಿದಾನ ಆವಾಗ ಸಾಹೇಬಗ
          ಶಿಟ್ಟಿಲಿ ಮುಂಗೈ ಕಟ್ಟನೆ ಕಡಕೊಂಡ ಹುಕುಮ ಕೊಟ್ಟಾರ ಆಗ
          ಕುದರಿಯ ಮಂದಿ ಕೂಡಿ ಮುಟ್ಟಿತೋ ಹಲಗಲಿ ಸ್ಥಳದ ಮೇಗ
          ಒಳಗಿನ ಮಂದಿ ಒಟ್ಟರಲೆ ಹೊಡದರ ಮುಂಗಾರಿ ಮಳಿ ಸುರದಂಗ
          ಹೊರಗಿನ ಮಂದಿ ಗುಂಡ ಹತ್ತಿಕೆರ ತಿರಗ್ಯಾರ ಆವಾಗ
          ಕಾಗದ ಬರದ ಕಳವೆರ ಬೇಗನ ದಂಡ ಬರಲೆಂತ ಹಿಂಗ

ಆಯುಧಗಳನ್ನು ಒಪ್ಪಿಸಬೇಕೆಂದು ಕೇಳಲು ಬಂದ ಅಧಿಕಾರಿಗಳಿಗೆ ಉತ್ತರಿಸಿದ ಹಲಗಲಿಯ ಬೇಡರ ಪಡೆ “ನಿಮಗೆ ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ನಾವೇನು ಹೆಂಗಸರಂತೆ ಕೈಯಲ್ಲಿ ಬಳೆ ಇಟ್ಟಿಲ್ಲ. ನಮ್ಮ ಪ್ರಾಣ ಹೋದರೂ ನಾವು ಶಸ್ತ್ರಾಸ್ತ್ರಗಳನ್ನು ಕೊಡುವುದಿಲ್ಲ. ಸುಮ್ಮನೆ ಇಲ್ಲಿಂದ ಹೊರಟು ಹೋಗಿ” ಎಂದು ಅಬ್ಬರಿಸುತ್ತಾರೆ.

ಕಲಾದಗಿಗೆ ಮರಳಿದ ಅಧಿಕಾರಿ ಹಲಗಲಿಯಲ್ಲಿ ನಡೆದ ವಿದ್ಯಮಾನಗಳನ್ನೆಲ್ಲಾ ಸಾದ್ಯಂತವಾಗಿ ತನ್ನ ಮೇಲಾಧಿಕಾರಿಗೆ ವರದಿ ಸಲ್ಲಿಸುತ್ತಾನೆ. ಸಿಟ್ಟಿಗೆದ್ದ ಮೇಲಾಧಿಕಾರಿ ಹಲಾಲಿ ಮೇಲೆ ದಾಳಿ ಮಾಡಲು ಆಜ್ಞಾಪಿಸುತ್ತಾನೆ. ಆಂಗ್ಲರ ಸೈನ್ಯ ಕುದುರೆ ಏರಿ ಬಂದು ದಾಳಿ ಪ್ರಾರಂಭಿಸುವುದೊಂದೇ ತಡ, ಕೋಟೆಯ ಒಳಗಿದ್ದ ಬೇಡರ ಪಡೆ ಒಳಗಿನಿಂದಲೇ ಪ್ರತಿಯಾಗಿ ಗುಂಡಿನ ದಾಳಿ ಮಾಡುತ್ತಾರೆ. ಮುಂಗಾರು ಮಳೆಯಷ್ಟೇ ರಭಸವಾಗಿ ಒಳಗಿನಿಂದ ಸುರಿದ ಕಲ್ಲು, ಕವಣೆಗಳೇಟು, ಗುಂಡೇಟುಗಳಿಂದ ತತ್ತರಿಸಿದ ಆಂಗ್ಲರ ಪಡೆ ಬೆದರಿ, ದಿಕ್ಕೆಟ್ಟು ಕಲಾದಗಿಯತ್ತ ಪಲಾಯನ ಮಾಡುತ್ತದೆ. ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು, ಯುದ್ಧೋಪಕರಣಗಳನ್ನು ಕಳಿಸಿಕೊಡಲು ಕಾಗದ ಬರೆದು ಕಳಿಸಿದರೆಂಧು ಲಾವಣಿಕಾರ ಇಲ್ಲಿ ವಿವರಿಸುವದರೊಂದಿಗೆ ತಮ್ಮ ಶಸ್ತ್ರಾಸ್ತ್ರಗಳನ್ನುಳಿಸಿಕೊಳ್ಳಲು ತಮ್ಮ ಪ್ರಾಣವನ್ನೇ ಪಣ ಇಡಲು ಬೇಡರ ಪಡೆ ಸಿದ್ಧವಾಗಿತ್ತೆಂದು ಹೇಳುತ್ತಾನೆ.

ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯ ಕಳುಹಿಸಲು ಮಾಡಿಕೊಂಡ ಮನವಿಯನ್ನು ಒಪ್ಪಿಕೊಂಡ ಸರಕಾರ ಹಲಗಲಿಗೆ ಅತ್ಯಂತ ಪ್ರಮಾಣದ ಸೈನ್ಯ ಹಾಗೂ ಮದ್ದು ಗುಂಡುಗಳನ್ನು ಕ್ಷಿಪ್ರದಲ್ಲಿಯೇ ಕಳಿಸಿಕೊಡುತ್ತದೆ.

          ದಂಡ ಬಂತ ನೋಡ ತಯಾರಾಗಿ
          ಜಲದ ಮಾಡಿ ಬಂತ ಹಲಗಲಿಗೆ
          ಆರತಾಸ ರಾತ್ರ್ಯಾಗ ಹೋಗಿ
          ಊರಿಗಿ ಹಾಕಿದಾರ ಮುತ್ತಿಗೆ
          ಗುಂಡ ಹೊಡೆದಾರ ವಿಪರೀತ ಸೂರಿ ಆಗಿ
          ಅಂಜಿ ವೋಡಾಕ ಹತ್ತಿತ ಮುಂದ ಆಗಿ
          ಬೆನ್ನ ಹತ್ತಿ ನೋಡಿದಾರ ಇವರಾಗಿ
          ಬಿದ್ದಾವ ಹೆಣಗೋಳ ಸೂರಿ ಆಗಿ
          ಮುತ್ತಿಗಿ ಹಾಕಿ ಅವರು ಕತ್ತಿಲಿ ಕಡದರ ಅಂಜಲಿಲ್ಲ ಯಾತಯಾತಕ

ಯುದ್ಧ ನಡೆದರೂ ಅದಕ್ಕೊಂದು ನೀತಿಸಂಹಿತೆ ಇರುತ್ತದೆ. ಬೆಳಿಗ್ಗೆ ರಣಕಹಳೆ ಊದಿದ ನಂತರವೇ ಯುದ್ಧ ಪ್ರಾರಂಭಗೊಳ್ಳುವ, ಸಂಜೆ ಯುದ್ಧ ಮುಗಿಯತೆಂದು ಮತ್ತೊಂದು ಬಾರಿ ಕಹಳೆ ಊದಿದ ನಂತರ ಯಾರೂ ಯಾರ ಮೇಲೂ ದಾಳಿ ಮಾಡಿದಂತಹ ರಣನೀತಿ ಪಾರಂಪರಿಕವಾಗಿ ನಡೆದುಕೊಂಡು ಬಂದಿದ್ದು, ಆದರೆ ಸರಿ ರಾತ್ರಿಯಲ್ಲಿ ದಂಡು ತೆಗೆದುಕೊಂಡು ಬಂದು ಊರಿಗೆ ಮುತ್ತಿಗೆ ಹಾಕುವದೂ, ಗುಂಡಿನ ಮಳೆಗರೆಯುವದೂ ರಣನೀತಿ ಮುರಿಯುವದೂ ಅಲ್ಲದೇ ಅತ್ಯಂತ ನಿರ್ದಯತನವೂ, ಕ್ರೂರತನವೂ, ಮೋಸತನವೂ ಆಗಿರುವದಿಲ್ಲಿ ಎದ್ದು ಕಾಣುತ್ತದೆ. ಅಪರಾತ್ರಿಯಲ್ಲಿ ನಡೆದ ಗುಂಡಿನ ದಾಳಿಯಿಂದ ಅಮಾಯಕರ, ಮಕ್ಕಳ ಹೆಣಗಳು ರಾಶಿರಾಶಿಯಾಗಿ ನೆಲಕ್ಕುರುಳುತ್ತವೆ.

          ಅಗಸಿಗೆ ಬಂದು ನಿಂತಿತು
          ಹೆಬಲಕ್ಸಾಹೇಬಂದು ತಾವುನಿಂತು
          ಹೇಳತಾರ ಬುದ್ಧಿಯ ಮಾತು
          ಕೊಡತೇವ ಕವಲ ಹೊತ್ತು
          ಹೋಗಬ್ಯಾಡರಿ ವೆರ್ತಾ ನೀವು ಸತ್ತು
          ಯೆಂಬು ಮಾತಿಗೆ ನಂಬಿಗೆ ಸಾಲದ ಹಣಮ ಬಂದ ಮುಂದಕ
          ಜಡಗ ಹೇಳತಾನ ಹೊಡಿ ಇವರನಾ ಈಗ ಘಾತಕರೋ ಇವರಾ
          ಅಸವಸಘಾತಮಾಡಿ ನೆಂಬಿಗಿಲೆ ಮಾಡತಾರು ಫಿತುರಾ
          ಮೋಸ ಮಾಡಿ ಬಲದೇಶ ತಗೋತಾರ ಮುಂದನಮಗ ಗೋರಾ
          ಅಂದ ಹೊಡೆದಾರೊ ವೊಂದ ಗುಂಡಿಗೆ ಆದ ಸಾಹೇಬಟಾರಾ
          ಕಾರ್ ಸಾಹೇಬ ಬೆಂಕಿ ಚೂರ ಆಗಿ ತಾನು ಲೂಟಿ ಮಾಡ ಅಂದ ವೂರ
          ಹುರಿಪಿಲಿ ಹೊಡದರ ಮಳಿ ಆದ ಹಾಗಿ ಗುಂಡ ಸುರದಾವ ಬರಪೂರಾ
          ಹಣಮ ಹೇಳತಾನ ಗುಂಡ ಹೊಡದಕೆರೆ ಕೆಡವೂಣ ಅಷ್ಟು ಬರಪೂರಾ
          ಮುನ್ನೂರ ಮಂದಿಯನ್ನ ಮೇಗೆ ಬಿಟ್ಟ ಆಗ ನೋಡರಿ ಜೋರಾ

ಹೆನ್ರಿ ಹೆವಲಾಕ್ ಹಾಗೂ ವಿಲಿಯಂ ಕೆರ್ರ ಅವರುಗಳ ಮುಂದಾಳತ್ವದಲ್ಲಿ ಬಂದ ಸೈನ್ಯ ಹಲಗಲಿಯ ಅಗಸೆ ಬಾಗಿಲಿಗೆ ಬಂದು ನಿಲ್ಲುತ್ತದೆ. ವ್ಯರ್ಥವಾಗಿ ಪ್ರಾಣ ಕಳೆದುಕೊಳ್ಳದೇ ಶಸ್ತ್ರಾಸ್ತ್ರಗಳನ್ನು ಒಪ್ಪಿಸಬೇಕೆಂದು ಸಲಹೆ ಮಾಡಲಾಗುತ್ತದೆ. ಜಡಗನು ಹನುಮನಿಗೆ ಈ ಆಂಗ್ಲರು ವಿಶ್ವಾಸಘಾತಕರು, ಮೋಸ ಮಾಡಿ ಇಡೀ ದೇಶವನ್ನೇ ನುಂಗಿ ಹಾಕುವವರು, ನಂಬಿಸಿ ಘಾತ ಮಾಡುವವರು, ಫಿತೂರಿ ಮಾಡುವವರು, ಇವರಿಂದ ಮುಂದೆ ದೇಶಕ್ಕೆ ಅಪಾಯವಿದೆ, ಇವರನ್ನು ಬಿಡುವದು ಬೇಡ ಹೊಡೆ ಎಂದು ಹೇಳಿದ ತಕ್ಷಣವೇ ಹನುಮ ಹಾರಿಸಿದ ಗುಂಡಿಗೆ ಫಸ್ಟ್ ಅಸಿಸ್ಟೆಂಟ್ ಮ್ಯಾಜಿಸ್ಟ್ರೇಟ್ ವಿಲಿಯಂ ಹೆನ್ರಿ ಹೆವಲಾಕ್ ಬಲಿಯಾಗುತ್ತಾನೆ. ಹೆನ್ರಿ ಹೆವಲಾಕ್‍ನ ಸಾವಿನಿಂದ ಕುಪಿತನಾದ ವಿಲಿಯಂ ಕೆರ್ರ ಬೆಂಕಿಯುಂಡೆಯಂತಾಗಿ ದಾಳಿ ಹಾಗೂ ಊರ ಲೂಟಿಗೆ ಅಜ್ಞಾಪಿಸುತ್ತಾನೆ. ಎರಡು ಕಡೆಯಿಂದ ಗುಂಡಿನ ಸುರಿಮಳೆಯೇ ನಡೆಯುತ್ತದೆ.

          ಭೀಮನು ಇದರಿಗೆ ನಿಂತಾ
          ಐನೂರ ಮಂದಿಗೆ ಮಲತಾ
          ಬಾಲನು ಮಾಡಿದ ಕಸರತ್ತಾ
          ಕುದರಿಯ ಕಡದನೊ ಹತ್ತಾ
          ರಾಮನ ಕಡತ ವಿಪರೀತಾ
          ಕಾವಲಿ ಹರಿತೊ ರಕ್ತಾ
          ಸಾವಿರ ಆಳಿಗೆ ಒಬ್ಬ ಮಲತಾ
          ಕೂಗುತಾನೋ ಕಡಿಕಡೀರ್ಯಂತ
          ನಾಲ್ಕು ಮಂದಿ ಹೆಂಗ ಕಡದ ಸತ್ತರೊ ಭಂಟರನಸ್ಯಾರಿ ಜನಕ

ಐನೂರು ಜನ ಆಂಗ್ಲ ಸೈನಿಕರಿಗೆ ಭೀಮನೊಬ್ಬನೇ ಎದುರಾಗಿ ನಿಂತರೆ ಬಾಲನು ಸಾವಿರ ಜನರನ್ನು ಎದುರಿಸುತ್ತಾನೆ. ತಮ್ಮವರಿಗೆ ಹುರುಪು ತುಂಬುತ್ತಾ ಬಿಡಬೇಡಿರಿ, ಹೊಡಿಯಿರಿ, ಕಡಿಯಿರಿ ಎಂದು ಆದೇಶಿಸುತ್ತಲೇ ಶತ್ರು ಸೈನ್ಯದ ಮೇಲೆ ಮುಗಿಬಿದ್ದು ಶತ್ರುಗಳೊಂದಿಗೆ, ಅಸಂಖ್ಯಾತ ಸಂಖ್ಯೆಯಲ್ಲಿ ಶತ್ರುಗಳ ಕುದುರೆಗಳನ್ನು ಕಡಿದು ಹಾಕುತ್ತಾರೆ. ಹೀಗಾಗಿ ರಣಭೂಮಿ ತುಂಬಾ ರಕ್ತವೆನ್ನುವುದು ಕಾಲುವೆಯಾಗಿ ಹರಿಯುತ್ತಿತ್ತು ಎಂದು ರಣಭೂಮಿಯ ಭೀಕರ ಸನ್ನಿವೇಶವನ್ನು ವಿವರಿಸುತ್ತಾನೆ ಕವಿ. ಯುದ್ಧ ನಡೆದು ಹೆಣಗಳುರುಳಿ ರಕ್ತ ಹರಿದ ಹೊಲಗಳನ್ನೇ ಹಲಗಲಿಯ ಜನ “ರಗತ ಮಾಣೆ” ಎಂದು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

          ಯಾರು ಕೇಳಲಿಲ್ಲ ಆರು ಗುಂಡ ತಾಕಿ ಹಣಮ ಬಿದ್ದ ನೆಲಕ
          ಚೀರಿ ಅಳುತ ಜನ ಸುತ್ತಗಟ್ಟಿತೊ ಅಂಜಿಕೊಂಡ ಜೀವಕ
          ಶೂರವೊಬ್ಬ ಬಹಲ ಜೋರ ಮಾಡಿದವ ಹತಾರ ತುಗೊಳುದಕ
          ಯೇರಿ ಬರು ಕುದರಿ ಕಡದನೋ ಸ್ವಾರ ಬಿದ್ದ ನೆಲಕ
          ರಾಮಿ ಗುಂಡಿಲಿ ಡೋರ ಮಾಡಿ ಹೊಡೆದಳೊ ಮೂರ ಮಂದಿ ಶಿರಕ
          ಆರ ಕುದುರಿಯ ಕಡದ ಸಿಡದಳೊ ಬಾಲನ ಸೂರಾಯಕ

ಹೀಗೆ ನಡೆದ ಹಣಾಹಣಿಯಲ್ಲಿ ರಾಮವ್ವ ಎಂಬ ಮಹಿಳೆ (ಈಕೆ ಜಡಗಪ್ಪನ ಸಹೋದರಿ, ಬಾಲಪ್ಪನ ತಾಯಿ) ಹಣಮವ್ವ, ಲಗಮವ್ವ ಎಂಬ ಮಹಿಳೆಯರನ್ನು ಕೂಡಿಕೊಂಡು ಶತ್ರು ಪಡೆಯನ್ನು ಸದೆ ಬಡೆಯುವಲ್ಲಿ, ಶತ್ರುಗಳ ಕುದುರೆಗಳನ್ನು ಕೊಲ್ಲುವಲ್ಲಿ ಪ್ರಮುಖ ಪಾತ್ರವಹಿಸುತ್ತಾಳೆ. ಇದೇ ಸಂದರ್ಭದಲ್ಲಿ ಪೂಜಾರಿ ಹಣುಮನಿಗೆ ಒಂದರ ಮೇಲೊಂದರಂತೆ ಆರು ಗುಂಡುಗಳು ಬೀಳುತ್ತವೆ. ಹಣಮ ಸಾವರಿಸಿಕೊಳ್ಳುತ್ತಲೇ ವೈರಿ ಪಡೆಯ ಮೇಲೆ ಮುಗಿ ಬೀಳುತ್ತಾನೆಂದು ವರ್ಣಿಸುವ ರೀತಿ ಚಕ್ರವ್ಯೂಹದೊಳಗೆ ಸಿಲುಕಿ ಹೋರಾಡುತ್ತಿರುವ ಅಭಿಮನ್ಯುವನ್ನು ನೆನಪಿಗೆ ತರುತ್ತದೆ. ಕೌರವರ ಸೈನ್ಯದ ಮೋಸ ಹಾಗೂ ಫಿತೂರಿಯಿಂದ ಅಭಿಮನ್ಯುವನ್ನು ಕೊಂದ ರೀತಿಯಲ್ಲಿಯೇ ಆಂಗ್ಲರ ಪಿತೂರಿಗೊಳಗಾಗುತ್ತಾನೆ. ಇದೇ ಸಂದರ್ಭದಲ್ಲಿ ಜಡಗ ಬಾಲ ಸೆರೆಸಿಕ್ಕುತ್ತಾರೆ. ಅಂಗ್ಲರು ಊರನ್ನು ಲೂಟಿ ಮಾಡತೊಡಗುತ್ತಾರೆ.

          ಯಾರು ಯಾರ ಇಲ್ಲದ ಆದೀತು
          ಊರ ಎಲ್ಲಾ ಲೂಟಿ ಆಗಿ ಹೋತು
          ಮಂದಿ ಮನಿ ಹೊಕ್ಕ ಹುಡುಕಿತು
          ದನಾ ಕರಾ ಲಯಾ ಆದೀತು
          ಸಣ್ಣ ಕೂಸುಗಳು ಹೋದವು ಸತ್ತು
          ಬೆಂಕಿ ಹಚ್ಚ್ಯಾರ ಊರ ಸುಟ್ಟಿತು
          ನಷ್ಟ ಆತ ನೋಡಿರಿ ಈವತ್ತು
          ನಾ ಹೇಳತೀನ ಮಾತ
          ಇಷ್ಟೆಲ್ಲ ಆಳವಾಗಿ ಹೋದೀತೋ ಮುಟ್ಟಲಿಲ್ಲ ಯಾತ್ಯಾತಕ

ಊರಿಗೊದಗಿದ ಸ್ಥಿತಿಯನ್ನು ಕಂಡು ಕವಿ ಮಮ್ಮಲನೇ ಮರುಗುತ್ತಾನೆ. ಪ್ರಮುಖರನ್ನೆಲ್ಲ ಬಂಧಿಸಿದ ಮೇಲೆ ಹೇಳುವರು ಕೇಳುವವರು ಯಾರೂ ಇಲ್ಲದಂತಾದ ಮೇಲೆ ಆಂಗ್ಲ ಸೈನಿಕರು ಮನೆ ಮನೆ ಪ್ರವೇಶಿಸಿ, ಒಳಹೊಕ್ಕು ಇದ್ದುದ್ದೆಲ್ಲವನ್ನೂ ಲೂಟಿ ಮಾಡಿದ್ದಾರೆ. ಊರಿಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯಲ್ಲಿ ದನ ಕರುಗಳೂ, ಹಸುಗೂಸುಗಳು ಸುಟ್ಟು ಕರಕಲಾಗಿ ಜೀವ ತೆತ್ತ ಪ್ರಸಂಗವನ್ನು ಕವಿ ಇಲ್ಲಿ ಕಣ್ಣೀರು ಹಾಕುತ್ತಾ ಊರಿನ ಕೇಡನ್ನು, ಅದು ಪಾಳು ಬಿದ್ದು ನಾಶವಾಗಿ ಹೋದದ್ದನ್ನು ಶತ್ರುಗಳ ನಿರ್ದಯ ಹೃದಯ, ಊರಿನ ಕರುಣಾಜನಕ ಸ್ಥಿತಿಯನ್ನು ವಿವರಿಸುತ್ತಾನೆ.

          ಕತ್ತಿ ಕುದುರಿ ಮುತ್ತು ಮಾಣಿಕ್ಯ ಯಾವುದು ಬಿಡಲಿಲ್ಲ
          ಬೆಳ್ಳಿ ಬಮ್ಗಾರ ಹರಳಿನ ಉಂಗುರಾ ಹೊನ್ನ ಉಂಗುರ ಗೋಲಾ
          ಸರ್ಪಳಿ ಬುಗುಡಿ ಬಾವಲಿ ಬಿಡಲಿಲ್ಲ
          ಕಡಗ ನಡುವಿನ ಡಾಬಾ ನಡಕಟ್ಟು ರುಮಾಲಾ
          ಕುಬಸಾ, ಶೀರಿ ಹಪ್ಪಳ ಶೆಂಡಿಗಿ ಕುರ್ಚಿಗಿ ಕುಡಗೋಲಾ
          ಕೊಡಲಿ ಕೋಟಿಕುಡ ಕಬ್ಬಿಣ ಮೊಸರು ಬೆಣ್ಣೆ ಹಾಲಾ
          ಉಪ್ಪ ಎಣ್ಣೆ ಅರಿಶಿನ ಜೀರಗಿ ಅಕ್ಕಿ ಸಕ್ಕರಿ ಬೆಲ್ಲಾ
          ಗಂಗಾಳ ಚರಗಿ ಮಂಗಳಸೂತ್ರ ತಕ್ಕೊಂಡು ಹೋದರ ಬೀಸುಕಲ್ಲಾ

ಸುಲಿಗೆಕೋರರಿಗೆ ಈ ಊರಿನ ಯಾವ ವಸ್ತುವೂ ಸಾಲಲಿಲ್ಲವೆಂದು ಕವಿ ಹೇಳುತ್ತಲೇ ಊರಿನ ಸಿರಿವಂತಿಕೆಯನ್ನು ವರ್ಣಿಸುತ್ತಾನೆ. ಮುತ್ತು, ಮಾಣಿಕ್ಯ, ಬೆಳ್ಳಿ, ಬಂಗಾರ, ಸರಗಿ, ಸರಪಳಿ, ಬಾವಲಿ, ಉಂಗುರಗಳಿಂದ ತುಂಬಿದ ಮನೆಗಳು ಲೂಟಿಕೋರರ ಕೈಗೆ ಸಂಪೂರ್ಣವಾಗಿ ಖಾಲಿಯಾಗಿ ಹೋಗಿವೆ. ಕೃಷಿ ಸಲಕರಣೆಗಳನ್ನಲ್ಲದೇ ಹಾಲು, ಬೆಣ್ಣೆ, ತಿಂಬುಂಬುವ ಜೀನಸುಗಳನ್ನು ಕೂಡಾ ನಿರ್ದಾಕ್ಷಿಣ್ಯವಾಗಿ ಲೂಟಿ ಮಾಡಿ, ಊರಿಗೆ ಬೆಂಕಿ ಇಟ್ಟು ಊರನ್ನೇ ಸುಟ್ಟು ಹಾಕಿದ ಘಟನೆಗಳನ್ನು ಕರಳು ಮಿಡಿಯುವಂತೆ ಹೇಳುತ್ತಾ ಹೋಗುತ್ತಾನೆ. ಮಂಗಳ ಸೂತ್ರವೆನ್ನುವದು ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಪಾವಿತ್ರ್ಯದೊಂದಿಗೆ ವಿರಾಜಮಾನಗೊಳ್ಳುತ್ತದೆ. ಭಾರತೀಯ ನಾರಿಯರ ಸೌಭಾಗ್ಯದ ಸಂಕೇತವೇ ಆಗಿರುವ ಮಂಗಳ ಸೂತ್ರವನ್ನೇ ಆಂಗ್ಲ ಸೈನಿಕರು ಕಸಿದುಕೊಂಡು ಹೋಗಿರಬೇಕಾದರೆ ಅವರೆಂಥ ಅನಾಗರಿಕರು, ಸಂಸ್ಕೃತಿ ಹೀನರೆಂಬುದನ್ನು ಕವಿ ಇಲ್ಲಿ ಗುರುತಿಸುತ್ತಾನೆ.

ಅನ್ನ ದೇವರಿಗಿಂತ ಇನ್ನು ದೇವರಿಲ್ಲವೆನ್ನುವ ಸಂಸ್ಕೃತಿಯುಳ್ಳವರು ನಾವು. ಅಂಥದೇವರ ಸಮಾನವಾದ ತಿಂಬುಂಬುವ ಜೀನಸುಗಳಾದ ಹಾಲು, ಮೊಸರು, ಬೆಣ್ಣೆ, ಅಕ್ಕಿ, ಎಣ್ಣೆ, ಸಕ್ಕರೆ, ಅರಿಶಿನಗಳಂತಹವುಗಳನ್ನು ಕೂಡಾ ಕಿತ್ತುಕೊಂಡು ಹೋಗಿ, ಅತಿಥಿ ದೇವೋಭವ ಎನ್ನುವ ಸಂಸ್ಕಾರವಂತ ಜನಾಂಗವನ್ನೇ ಹೊಟ್ಟೆಗಿಲ್ಲದಂತೆ ಉಪವಾಸ ಕೆಡವಿದ್ದು, ಹಸುಗೂಸುಗಳನ್ನು ಹಾಲಿಲ್ಲದೇ ವಿಲಿವಿಲಿ ಒದ್ದಾಡಿಸಿದ್ದು ಅವರ ಹೀನ ಸಂಸ್ಕೃತಿಯಾಗಿದೆ ಎಂಬುದನ್ನು ಕವಿ ಸಾಬೀತುಪಡಿಸುತ್ತಾನೆ.

ಇಡೀ ಹಲಗಲಿಯ ಬಂಡಾಯ, ಬಂಡಾಯಕ್ಕೆ ಕಾರಣ, ಅಲ್ಲಿ ಸಾಹಸ ಮೆರೆದವರು, ಬಂಡಾಯದ ನಂತರದ ಊರಿಗೊದಗಿದ ಸ್ಥಿತಿ ಎಲ್ಲವನ್ನೂ ತನ್ನದೇ ಶೈಲಿಯಲ್ಲಿ ಹೇಳುತ್ತಾ ಹೋಗುವ ಲಾವಣಿಕಾರನ ಕಾವ್ಯ ಶೈಲಿ ಮೆಚ್ಚುವಂತಹದು. ಅವೆಲ್ಲಗಳನ್ನು ಸಂಗ್ರಹಿಸಿ ಇತಿಹಾಸಕ್ಕೆ ಸಮರ್ಪಿಸಿದ “ಪ್ಲೀಟ್”ರ ಸಾಹಸ ಸಣ್ಣದೇನಲ್ಲ.