ಒಂದು ದಿನ ಸಾಯಂಕಾಲ. ಸ್ವಾತಿ ತಿರುನಾಳ್‌ ಮಹಾರಾಜರು ಅರಮನೆಯಲ್ಲಿ ಒಬ್ಬರೇ ಕುಳಿತು ವೀಣೆ ನುಡಿಸುತ್ತಿದ್ದರು. ಶೋಕರಸ ಅಲೆಅಲೆಯಾಗಿ ಹೊರ ಹೊಮ್ಮುತ್ತಿತ್ತು. ಸುರುಟಿ ರಾಗದಲ್ಲಿ “ಅಲರ‍್ಶರಪರಿ ತಾಪಂ” ಎನ್ನುವ ನೃತ್ಯಗೀತೆಯನ್ನು ಅವರು ನುಡಿಸುತ್ತಿದ್ದರು. ತಾನು ಪ್ರತೀತಿಸುವವರು ಹತ್ತಿರ ಇಲ್ಲ ಎಂದು ದುಃಖವನ್ನು ಹೇಳಿಕೊಳ್ಳುವ ಹಾಡು ಅದು.

ನಾಯಕಿ ಯಾರು?

ನಾಟ್ಯಾಚಾರ್ಯ ವಡಿವೇಲು ಮತ್ತು ನರ್ತಕಿ ತಂಗಚ್ಚಿ ಮಹಾರಾಜರು ನುಡಿಸುತ್ತಿದ್ದ ಗೀತೆಯನ್ನು ಹೊರಗಿನಿಂದ ಆಲಿಸುತ್ತಿದ್ದರು. ಮಹಾರಾಜರ ಮನಸ್ಸಿಗೆ ಇಷ್ಟೊಂದು ಪರಿತಾಪವನ್ನುಂಟು ಮಾಡಿದ ನಾಯಕಿ ಯಾರಿರಬಹುದೆಂದು ಆಲೋಚಿಸಿದರು. ಎಷ್ಟು ಯೋಚಿಸಿದರೂ ಅವರಿಗೆ ಏನೂ ಹೊಳೆಯದಾಯಿತು. ಮಹಾರಾಜರನ್ನು ಈ ಶೋಕಭಾವದಿಂದ ವಿಮುಕ್ತಗೊಳಿಸುವುದು ಹೇಗೆ? ಕೊನೆಗೆ ನಾಟ್ಯಾಚಾರ್ಯ ವಡಿವೇಲುವಿಗೆ ಒಂದು ಆಲೋಚನೆ ಹೊಳೆಯಿತು. ತಂಗಚ್ಚಿಯನ್ನು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಬರುವಂತೆ ಹೇಳಿದರು. ಅದರಂತೆ ಆಕೆ ಬೇಗ ನೃತ್ಯಸಿದ್ಧತೆ ಮಾಡಿಕೊಂಡು ಬಂದಳು. ಮಹಾರಾಜರು ನುಡಿಸುತ್ತಿದ್ದ ಗೀತೆಗೆ ತಕ್ಕಂತೆ ನಾಟ್ಯವನ್ನು ಪ್ರಾರಂಭಿಸಿದಳು. ನರ್ತಿಸಿ ನರ್ತಿಸಿ ನರ್ತಕಿ ಬಳಲಿದಳು. ಭಾವಪರವಶರಾದ ಮಹಾರಾಜರ ವೀಣಾವಾದನ ನಿಲ್ಲಲೇ ಇಲ್ಲ. ವಡಿವೇಲುವಿಗೂ ನರ್ತಕಿಗೂ ದಿಕ್ಕೇ ತೋರದಂತಾಗಿ ನಿಂತಿದ್ದರು.

ನಾನೇ ಶ್ರೀ ಪದ್ಮನಾಭನಿಗಾಗಿ ಪರಿತಪಿಸುತ್ತಿದ್ದೆ”

ಎಷ್ಟೋ ಹೊತ್ತಾದ ಮೇಲೆ ವೀಣಾವಾದನ ನಿಂತಿತು. ನಾಟ್ಯಾಚಾರ್ಯರು ಮಹಾರಾಜರ ಹತ್ತಿರ ಬಂದು,

“ಮಹಾಸ್ವಾಮೀ, ತಮ್ಮ ಮನಸ್ಸಿಗೆ ಇಷ್ಟೊಂದು ಪರಿತಾಪವನ್ನುಂಟು ಮಾಡಿದ ನಾಯಕಿ ಯಾರು?” ಎಂದು ಕೇಳಿದರು. ಆಗ ಸ್ವಾತಿ ತಿರುನಾಳರು ಹೇಳಿದರು:

“ನೀವು ನನ್ನ ಪರಿತಾಪವನ್ನರಿಯಲು ಪ್ರಯತ್ನಿಸಿದಿರಿ. ನಾನು ಯಾವಳೋ ನಾಯಕಿಯನ್ನು ಕುರಿತು ವೇದನೆಯನ್ನನುಭವಿಸುತ್ತಿರಬಹುದೆಂದು ನೀವು ಭಾವಿಸಿದಿರಿ. ನಿಮ್ಮದು ತಪ್ಪು ಕಲ್ಪನೆ. ನಾನೇ ನಾಯಕಿಯಾಗಿ ಶ್ರೀ ಪದ್ಮನಾಭನಿಗಾಗಿ ಪರಿತಪಿಸುತ್ತಿದ್ದೆ”. ಆ ಮಾತನ್ನು ಕೇಳಿ ನಾಟ್ಯಾಚಾರ್ಯನೂ ನರ್ತಕಿಯೂ ತಲೆ ತಗ್ಗಿಸಿ ನಿಂತರು.

ಸ್ವತಃ ಸಂಗೀತ ಕೃತಿಗಳನ್ನು ರಚಿಸಿ ತಾವೇ ವೀಣೆಯಲ್ಲಿ ಅವುಗಳನ್ನು ನುಡಿಸಿ ಪದ್ಮನಾಭನ ಪಾದಪಂಕಜಗಳಿಗರ್ಪಿಸುತ್ತಿದ್ದ ಕಲೋಪಾಸಕರು ಸ್ವಾತಿ ತಿರುನಾಳ್‌ ಮಹಾರಾಜರು.

ಶ್ರೀ ಶಂಕರಾಚಾರ್ಯರು ಮತ್ತು ಸ್ವಾತಿ ತಿರುನಾಳರು

ಕ್ರಿ.ಶ. ಎಂಟನೇ ಶತಮಾನದಲ್ಲಿ ಜನಿಸಿದ ಶ್ರೀ ಶಂಕರಾಚಾರ್ಯರು ಕೇರಳಕ್ಕೆ ಭಾರತದಲ್ಲಿ ಅದ್ವಿತೀಯ ಸ್ಥಾನವನ್ನು ಕಲ್ಪಿಸಿಕೊಟ್ಟರು. ಭಾರತದ ನಾಲ್ಕು ಮೂಲೆಗಳಲ್ಲೂ ಸಂಚರಿಸಿ ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ದುಡಿದರು. ಕಿರಿದಾದ ಆಯುಷ್ಯ. ಆ ಆಯುಷ್ಯದಲ್ಲಿ ಧರ್ಮೋದ್ಧಾರಕ್ಕಾಗಿ ದುಡಿದು ಅತ್ಯದ್ಭುತ ಸಾಧನೆ ನಡೆಸಿದರು. ಶ್ರೀ ಶಂಕರರಂತೆ ಸ್ವಾತಿ ತಿರುನಾಳರು ಜನಿಸಿದುದೂ ಕೇರಳದಲ್ಲಿ, ಒಂದು ಸಾವಿರ ವರ್ಷಗಳ ನಂತರ. ಶಂಕರರು ಆಧ್ಯಾತ್ಮ ಪ್ರಪಂಚ; ಸ್ವಾತಿ ತಿರುನಾಳರದು ಕಲಾ ಪ್ರಪಂಚ. ಜೊತೆಗೆ ಸ್ವಾತಿ ತಿರುನಾಳರು ಒಂದು ರಾಜ್ಯದ ದೊರೆ. ಸ್ವಾತಿ ತಿರುನಾಳರು ಭಾರತ ಪರ್ಯಟನೆ ಮಾಡಲಿಲ್ಲ ನಿಜ. ಆದರೆ ಕುಳಿತಲ್ಲೇ ಭಾರತದ ಹೆಚ್ಚಿನ ಭಾಷೆಗಳನ್ನು ಕಲಿತಿದ್ದರು. ಭಾರತದ ಮೂಲೆ ಮೂಲೆಗಳಿಂದ ಬಂದ ಸಂಗೀತ, ನಾಟ್ಯ ಮುಂತಾದ ಲಲಿತ ಕಲೋಪಾಸಕರ ಆಶ್ರಯದಾತರಾಗಿದ್ದರು. ಕುಳಿತಲ್ಲೇ ಭಾರತೀಯ ಕಲೆಗಳ ಅಧ್ಯಯನ, ಭಾರತದ ದರ್ಶನ, ಭಾರತದ ಮಹಾವ್ಯಕ್ತಿಗಳ ಸಂದರ್ಶನ – ಇವು . ಸ್ವಾತಿ ತಿರುನಾಳರಿಗೆ ದೊರೆತವು. ಶ್ರೀ ಶಂಕರರ ಆಯುಷ್ಯದಂತೆಯೇ . ಸ್ವಾತಿ ತಿರುನಾಳರ ಆಯುಷ್ಯವೂ ಕಿರಿದು, ಇತರ ಸಾಧನೆಗಳೂ ಮರೆಯಲಾಗದಂತಹವು.

 

"ನಾವೇ ನಾಯಕಿಯಾಗಿ ಶ್ರೀ ಪದ್ಮನಾಭನಿಗಾಗಿ ಪರಿತಪಿಸುತ್ತಿದ್ದೆ"

ಕರ್ನಾಟಕ ಸಂಗೀತದ ತ್ರಿಮೂರ್ತಿಗಳು ಮತ್ತು . ಸ್ವಾತಿ ತಿರುನಾಳರು

ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧ, ಕರ್ಣಾಟಕ ಸಂಗೀತದ ಸುವರ್ಣ ಯುಗವಾಗಿತ್ತು. ತಿರುವಾರೂರಿನ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ಯಾಮಾಶಾಸ್ತ್ರಿಗಳು ಕರ್ಣಾಟಕ ಸಂಗೀತದ ತ್ರಿಮೂರ್ತಿಗಳಾಗಿದ್ದರು. ಈ ಮೂವರು ಮಹಾನುಭಾವರೂ ತಮ್ಮ ಅಸಂಖ್ಯಾತ ಶಿಷ್ಯ ಪರಂಪರೆಯನ್ನು ಬೆಳೆಸಿದ್ದ ಕಾಲ ಅದು. ಕರ್ಣಾಟಕ ಸಂಗೀತ ಒಂದು ಘಟ್ಟವನ್ನು ತಲುಪಿದ್ದ ಕಾಲದಲ್ಲಿ ಜನಿಸಿದವರು. ಸ್ವಾತಿ ತಿರುನಾಳ್‌ ರಾಮವರ್ಮ ಮಹಾರಾಜರು. ತ್ಯಾಗರಾಜರು ಎಂಬತ್ತು ವರ್ಷಗಳು ಜೀವಿಸಿದ್ದರು. ಶ್ಯಾಮಾಶಾಸ್ತ್ರಿಗಳು ಅರವತ್ತೈದು ವರ್ಷಗಳು ಜೀವಿಸಿದ್ದರು. ಮತ್ತು ಸ್ವಾಮಿ ದೀಕ್ಷಿತರು ಅರವತ್ತು ವರ್ಷಗಳು ಜೀವಿಸಿದರೆ, ಸ್ವಾತಿ ತಿರುನಾಳರು ಜೀವಿಸಿದ್ದುದ್ದು ಮೂವತ್ತನಾಲ್ಕು ವರ್ಷಗಳು ಮಾತ್ರ.

ತ್ಯಾಗರಾಜರಿಗೆ ಶ್ರೀ ನಾರದರೂ ದೀಕ್ಷಿತರಿಗೆ ಚಿದಂಬರನಾಥ ಯೋಗಿಯೂ ಶಾಸ್ತ್ರಿಗಳಿಗೆ ಸಂಗೀತ ಸ್ವಾಮಿಯೂ ನಾದವಿದ್ಯೋಪಾಸನೆಗೆ ಆಚಾರ್ಯರಾಗಿ ಲಭಿಸಿದ್ದಂತೆ ಸ್ವಾತಿ ತಿರುನಾಳರಿಗೆ ಸಂಗೀತ ವಿದ್ಯಾಪಾರಂಗತರೂ ಭಕ್ತಾಗ್ರೇಸರರೂ ಆದ ಮೇರುಸ್ವಾಮಿ ಎನ್ನುವ ಒಬ್ಬ ಯೋಗಿ ಗುರುವಾಗಿ ಲಭಿಸಿದ್ದರು.

ಸಣ್ಣ ಆಯುಷ್ಯದಲ್ಲಿ, . ಸ್ವಾತಿ ತಿರುನಾಳರು ತಮ್ಮ ಅಸಾಧಾರಣವಾದ ಮೇಧಾಶಕ್ತಿಯಿಂದ, ಹೃದಯವನ್ನೇ ಅರ್ಪಿಸಿಕೊಂಡ ಕಲೋಪಾಸನೆಯಿಂದ ಇವರಿಗೆ ಸಮಾನರಿಲ್ಲ ಎನ್ನಿಸಿಕೊಂಡರು. ಸಂಗೀತ ಪ್ರಪಂಚದ ಈ ತ್ರಿಮೂರ್ತಿಗಳ ಸಾಲಿನಲ್ಲಿ ಸ್ಥಾನ ಪಡೆದರು. ಕರ್ಣಾಟಕ ಸಂಗೀತ ಪ್ರಪಂಚದಲ್ಲಿ ಕೇರಳಕ್ಕೆ ಒಂದು ಸ್ಥಾನ ದೊರೆತದ್ದು . ಸ್ವಾತಿ ತಿರುನಾಳರಿಂದ. ಅದನ್ನು ಕೇರಳದಲ್ಲಿ ಹೆಚ್ಚು ಪ್ರಚಾರಕ್ಕೆ ತಂದವರೂ ಅವರೇ.

ಜನನ

ತಿರುವಾಂಕೂರಿನ ವಂಚಿ ರಾಜವಂಶ ಬಹುಕಾಲದವರೆಗೂ ಗಂಡು ಸಂತಾನವನ್ನು ಕಾಣದೆ ಕೊರಗನ್ನು ಅನುಭವಿಸುತ್ತಲೇ ಇತ್ತು. ಆದರೆ ೧೮೧೩ರ ಏಪ್ರಿಲ್‌ ೧೬ರಂದು . ಸ್ವಾತಿ ತಿರುನಾಳ್‌ ರಾಮವರ್ಮರು ಜನಿಸಿದ ನಂತರ ಆ ಕೊರಗು ನಿವಾರಣೆಯಾಯಿತು. ಎರಡು ವರ್ಷಗಳ ನಂತರ ಉತ್ರಂತಿರುನಾಳ್‌ ಮಾರ್ತಾಂಡವರ್ಮ ಎನ್ನುವ ಮತ್ತೊಬ್ಬ ಮಗನನ್ನೂ ಪಡೆದ ಬಳಿಕ ಆ ತಂದೆ-ತಾಯಿಗಳ ಸಂತೋಷಕ್ಕೆ ಎಣೆಯೇ ಇಲ್ಲದಂತಾಯಿತು.

ವಿದ್ಯಾಭ್ಯಾಸ

ಸ್ವಾತಿ ತಿರುನಾಳರಿಗೂ ಉತ್ರಂ ತಿರುನಾಳರಿಗೂ ತಂದೆಯೇ ಮೊದಲ ಗುರು. ಅವರೇ ಮೊದಲು ಅವರಿಗೆ ವಿದ್ಯೆ ಕಲಿಸಲು ಪ್ರಾರಂಭಿಸಿದರು. ಈ ಬಾಲಕರ ಹೆಚ್ಚಿನ ವಿದ್ಯಾಭ್ಯಾಸ ಪ್ರಾರಂಭವಾದದ್ದು ಅಣ್ಣನಿಗೆ ಏಳು ವರ್ಷ ಮತ್ತು ತಮ್ಮನಿಗೆ ಐದು ವರ್ಷ ಆಗಿದ್ದಾಗ. ಇಂಗ್ಲಿಷ್‌ ಭಾಷೆಯನ್ನು ಕಲಿಸಲು ತಂಜಾವೂರಿನ ಶೇಷ ಪಂಡಿತ ಸುಬ್ಬರಾವ್‌ ಎನ್ನುವವರು ನೇಮಕಗೊಂಡರು. ಮಲಯಾಳಂ, ಸಂಸ್ಕೃತ, ಪರ್ಷಿಯನ್‌ ಮೊದಲಾದ ಭಾಷೆಗಳನ್ನೂ ಕಲಿಸಲು ಏರ್ಪಾಟಾಯಿತು. ಜೊತೆಗೆ ಸಂಗೀತ, ಚಿತ್ರಕಲೆ ಮುಂತಾದ ಇತರ ಲಲಿತ ಕಲೆಗಳ ಅಧ್ಯಯನಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಸಿಂಹಾಸನಾರೋಹಣ

ಸ್ವಾತಿ ತಿರುನಾಳರಿಗೆ ಹದಿನಾರು ವರ್ಷಗಳು ತುಂಬುತ್ತಾ ಬಂದಿದ್ದವು. ಅಷ್ಟರಲ್ಲಿ ಅವರು ಹದಿನಾಲ್ಕು ಭಾಷೆಗಳಲ್ಲಿ ಪಾಂಡಿತ್ಯವನ್ನು ಗಳಿಸಿಕೊಂಡಿದ್ದರು. ಚಿತ್ರ ರಚನೆ, ಸಂಗೀತ ಮುಂತಾದ ಲಲಿತ ಕಲೆಗಳನ್ನೆಲ್ಲ ವಶಪಡಿಸಿಕೊಂಡಿದ್ದರು. ೧೮೨೯ರಲ್ಲಿ ತಮ್ಮ ಹದಿನಾರನೆಯ ವಯಸ್ಸಿನಲ್ಲಿ ತಿರುವಾಂಕೂರು ಸಂಸ್ಥಾನದ ಮಹಾರಾಜರಾಗಿ ಸಿಂಹಾಸನವನ್ನೇರಿದರು.

ರಾಜ್ಯಭಾರಕ್ಕೆ ಹೆಗಲು ಕೊಟ್ಟ ನಂತರ ಮಹಾರಾಜರಿಗೆ ತಮ್ಮ ಇಂಗ್ಲಿಷ್‌ ಮತ್ತು ಸಂಗೀತದ ಗುರುವಾಗಿದ್ದ ಸುಬ್ಬರಾವ್‌ ದಿವಾನರಾದರೆ ಕಲೆಯ ಬೆಳವಣಿಗೆಗೆ ಮತ್ತು ದಕ್ಷ ಆಳ್ವಿಕೆಗೆ ಅನುಕೂಲವಾಗಬಹುದೆಂದು ತೋರಿತ್ತು. ಆದರೆ ಆ ಕಾಲದಲ್ಲಿ ದಿವಾನರಾಗಿದ್ದ ವೆಂಕಟರಾವ್‌ರವರನ್ನು ಆ ಕೆಲಸದಿಂದ ನಿವೃತ್ತಿಗೊಳಿಸಬೇಕಾಗಿತ್ತು. ಅದು ತಿರುವಾಂಕೂರಿನ ರೆಸಿಡೆಂಟ್‌ ಆಗಿದ್ದ ಕರ್ನಲ್‌ ಮಾರಿಸ್‌ಗೆ ಒಪ್ಪಿಗೆಯಾಗಲಿಲ್ಲ.

ಶಿಷ್ಯ-ಗುರು ; ಮಹಾರಾಜ – ದಿವಾನ್‌

ಮಹಾರಾಜರ ಇಚ್ಛೆಯಂತೆ ಸುಬ್ಬರಾವ್‌ ದಿವಾನ್‌ ಹುದ್ದೆಯನ್ನು ವಹಿಸಿಕೊಂಡರು. ದಿವಾನರನ್ನು ಬದಲಿಸಿದಂತೆ ಮಹಾರಾಜರು ದಕ್ಷ ಆಡಳಿತಗಾರರನ್ನು ಆರಿಸಿ ಆಯಾ ಸ್ಥಾನಗಳಿಗೆ ನಿಯಮಿಸಿದರು. .ಸ್ವಾತಿ ತಿರುನಾಳರು ಆದರ್ಶ ರಾಜ್ಯದ ಸಮರ್ಥ ರಾಜನಾಗಬೇಕೆನ್ನುವ ಬಹು ದೊಡ್ಡ ಧ್ಯೇಯವಾದಿಯಾಗಿದ್ದರು. ಆ ಕಾಲದಲ್ಲಿ ದಿವಾನರ ಆಡಳಿತ ಕಛೇರಿ ಕೊಲ್ಲದಲ್ಲಿತ್ತು. ಮಹಾರಾಜರಿಗೆ, ದಿವಾನರ ಕಛೇರಿ ರಾಜಧಾನಿಯಿಂದ ದೂರವಿದ್ದರೆ ದಿವಾನರು ಸ್ವೇಚ್ಛೆಯಿಂದ ವರ್ತಿಸಬಹುದು; ಲಂಚ, ಅನ್ಯಾಯ, ಅನೀತಿಗಳಿಗೆ ಕೈಹಾಕಬಹುದು ಎನ್ನಿಸಿತು. ಮಹಾರಾಜರು ಆ ಕಛೇರಿಯನ್ನು ತಿರುವನಂತಪುರದ ಅರಮನೆಯ ಹತ್ತಿರಕ್ಕೆ ವರ್ಗಾಯಿಸಿದರು.

ದಿವಾನರ ಸ್ಥಾನವನ್ನು ಕಳೆದುಕೊಂಡ ವೆಂಕಟರಾವ್‌ಗೆ ತುಂಬ ಅಸಮಾಧಾನವಾಯಿತು. ಕೋಪ ಬಂದಿತು. ಅವರು ಕರ್ನಲ್‌ ಮಾರಿಸ್‌ರವರ ಸಹಾಯ ಬೇಡಿದರು. ತಮ್ಮ ದುಃಖವನ್ನು ತೋಡಿಕೊಂಡರು. ಕರ್ನಲ್‌ ಮಾರಿಸ್‌ಗೆ ವೆಂಕಟರಾವ್‌ ವಿಷಯದಲ್ಲಿ ಮೊದಲಿನಿಂದಲೂ ಒಳ್ಳೆಯ ಅಭಿಪ್ರಾಯವಿತ್ತು. ಅವನು ಮದರಾಸು ಗವರ್ನರರಿಗೆ ತಿರುವಾಂಕೂರು ಆಡಳಿತ ಕೆಡುತ್ತಿದೆ ಎಂದು ಬರೆದ.

ನಿಜವಾದ ಸಂಗತಿಯನ್ನು ತಿಳಿಯುವುದಕ್ಕಾಗಿ ಮದರಾಸಿನ ಗವರ್ನರ್ ಲೂಯಿಂಗ್‌ಟನ್‌ ಸ್ವತಃ ತಿರುವಾಂಕೂರು ರಾಜ್ಯವನ್ನು ಸಂದರ್ಶಿಸಿದರು. ಸಣ್ಣ ಹುಡುಗ ಸಿಂಹಾಸನವನ್ನೇರಿದ್ದಾನೆ, ಹೇಗೆ ತಾನೆ ದಕ್ಷತೆಯಿಂದ ರಾಜ್ಯಭಾರ ಮಾಡಿಯಾನು ? ಎಂದುಕೊಂಡು ಬಂದಿದ್ದ ಗವರ್ನರ್, ತಿರುವಾಂಕೂರು ರಾಜ್ಯವನ್ನು ಸಂದರ್ಶಿಸಿದ ಮೇಲೆ ತಮ್ಮ ಅಭಿಪ್ರಾಯವನ್ನು ಬದಲಿಸಿಕೊಳ್ಳಬೇಕಾಗಿ ಬಂದಿತು. ಮಹಾರಾಜರು ಲೂಯಿಂಗ್‌ ಟನ್‌ರವರನ್ನು ಸ್ವಾಗತಿಸಿದ ರೀತಿ, ಇಂಗ್ಲಿಷ್‌ ಭಾಷೆಯಲ್ಲೇ ಮಾತನಾಡಿದುದು, ಜೊತೆಗೆ ಆಡಳಿತದ ವಿಷಯದಲ್ಲಿ ಮಹಾರಾಜರಿಗಿದ್ದ ಉದಾತ್ತ ಧೋರಣೆ, ಪ್ರಜೆಗಳ ಹಿತಾಸಕ್ತಿ ಇವುಗಳನ್ನು ಕಂಡ ಗವರ್ನರರಿಗೆ ಅತ್ಯಾಶ್ಚರ್ಯವುಂಟಾಯಿತು. ವಯಸ್ಸು ಕಿರಿದಾದರೇನು? ಸಮರ್ಥ ಮಹಾರಾಜ ಎಂದು ತೃಪ್ತಿಪಟ್ಟುಕೊಂಡು ಹಿಂದಿರುಗಿದರು.

ಸ್ವಾತಿ ತಿರುನಾಳರು ತಿರುವಟ್ಟದ ನಾರಾಯಣ ಪಿಳ್ಳತಂಗಚ್ಚಿಯವರನ್ನು ಮದುವೆಯಾದರು. ಸುಂದರಿಯೂ ಸುಶೀಲೆಯೂ ಆಗಿದ್ದ ತಂಗಚ್ಚಿ, ಮಹಾರಾಜರ ಕಾರ್ಯಗಳಲ್ಲೆಲ್ಲ ಅನುಕೊಲೆಯಾಗಿದ್ದರು.

ಅಪರಾಧಿ ಗುರು

ಹೆಚ್ಚು ಹೆಚ್ಚು ದಕ್ಷರಾದ ಅಧಿಕಾರಿಗಳಿಗಾಗಿ ಮಹಾರಾಜರು ಅನ್ವೇಷಣೆ ಮಾಡುತ್ತಲೇ ಇದ್ದರು. ಮಲಬಾರ್ ಜಿಲ್ಲೆಯಲ್ಲಿ ಇಟ್ಟಿರಾರಿಚ್ಚನ್‌ ಕಂಡಪ್ಪನ್‌ ಎನ್ನುವ ತಹಸೀಲ್‌ದಾರರಿದ್ದರು. ಆಡಳಿತ ನೈಪುಣ್ಯದಲ್ಲಿ ತುಂಬ ಪ್ರಸಿದ್ಧರಾಗಿದ್ದರು. ಮಹಾಸಮರ್ಥರಾಗಿದ್ದುದರಿಂದ ಇವರನ್ನು “ಕಂಡವನ್‌ ಮೆನನ್‌” ಎಂದು ಕರೆಯಲಾಗುತ್ತಿತ್ತು. ಮಹಾರಾಜರು ಕಂಡವನ್‌ ಮೆನನ್ನರಿಗೆ ತಿರುವಾಂಕೂರಿನ ದಿವಾನ್‌ ಪೇಷ್ಕಾರ್ ಹುದ್ದೆಯನ್ನು ನೀಡಿದರು. ಕಂಡವನ್‌ ಮೆನನ್‌ ಭೂಸುಧಾರಣೆಗೆ ಸಂಬಂಧಪಟ್ಟ ನಕ್ಷೆ ತಯಾರಿಸಿದರು. ತಿರುವಾಂಕೂರಿನ ಆಡಳಿತಕ್ಕೆ ಸಂಬಂಧಪಟ್ಟಂತೆ ನಿಯಮ ಸಂಹಿತೆಯನ್ನು ತಯಾರಿಸಿದರು. ನ್ಯಾಯಾಲಯದ ನಿರ್ಮಾಣಕ್ಕೆ ಸಲಹೆ ಮಾಡಿದರು. ದಿವಾನರ ಕೆಲವು ಅಧಿಕಾರಿಗಳನ್ನು ಪ್ರತ್ಯೇಕಿಸಿ ನ್ಯಾಯಾಲಯಗಳಿಗೊಪ್ಪಿಸುವಂತೆ ಮಾಡಿದರು. ಇಂತಹ ಅನೇಕ ಮಹತ್ಕಾರ್ಯಗಳಿಂದಾಗಿ ಕಂಡವನ್ ಮೆನನ್‌ ರಾಜರ ಮತ್ತು ಪ್ರಜೆಗಳ ಅಪಾರ ಪ್ರೀತಿಗೆ ಪಾತ್ರರಾದರು. ಇದರಿಂದ ದಿವಾನ್‌ ಸುಬ್ಬರಾವ್‌ಗೆ ತುಂಬ ಅಸೂಯೆಯುಂಟಾಯಿತು.

ಇದ್ದಕ್ಕಿದ್ದಂತೆ ಒಂದು ದಿನ ಮಹಾರಾಜರಿಗೆ ಸುದ್ದಿ ಬಂದಿತು – ಕಂಡವನ್‌ ಮೆನನ್ ಸತ್ತು ಹೋದರು!

ಕಂಡವನ್ ಮೆನನ್ನರ ಸಾವಿಗೆ ಕಾರಣರಾದವರು ದಿವಾನ್‌ ಸುಬ್ಬರಾವ್‌ ಎಂದೂ ಅವರು ಪ್ರಜೆಗಳಿಂದ ಲಂಚ ಸ್ವೀಕರಿಸುತ್ತಿದ್ದಾರೆ ಎಂದೂ ಮಹಾರಾಜರಿಗೆ ದೂರುಗಳು ಬರತೊಡಗಿದವು. ಮಹಾರಾಜರಿಗೆ ಅತೀವ ವೇದನೆಯುಂಟಾಯಿತು. ತಮ್ಮ ಗುರುಗಳೂ ಸಂಸ್ಥಾನದ ಪ್ರಜೆಗಳ ಹಿತಚಿಂತನೆಯ ಹೊಣೆ ಹೊತ್ತವರೂ ಆದ ಸುಬ್ಬರಾವ್‌ ಇಂತಹ ನೀಚಕಾರ್ಯಕ್ಕೆ ಕೈಹಾಕಿರಬಹುದೇ ಎಂಬ ಯೋಚನೇ ಮಹಾರಾಜರ ಮನಸ್ಸನ್ನು ತಳಮಳಗೊಳಿಸಿತು. ವಿಧಿಯಿಲ್ಲದೆ ಸುಬ್ಬರಾವ್‌ರವರನ್ನು ಕೆಲಸದಿಂದ ತಾತ್ಕಾಲಿಕವಾಗಿ ತೆಗೆದುಹಾಕಿದರು.

ಮನೋವ್ಯಾಕುಲ

ಕಂಡವನ್ ಮೆನನ್ನರ ಮರಣ, ದಿವಾನ್‌ ಸುಬ್ಬರಾವ್ ಮೇಲಿನ ದೂರು, ಮಹಾರಾಜರ ಸಹೋದರಿಯ ಐದನೆಯ ಪುತ್ರನ ಮರಣ, ಆ ಮಗು ತೀರಿಕೊಂಡ ಕೆಲವೇ ದಿನಗಳಲ್ಲಿ ಮಹಾರಾಜರ ಸಹೋದರಿಯೂ ತೀರಿಕೊಂಡದ್ದು – ಇವೇ ಮುಂತಾದ ಘಟನೆಗಳು ಒಂದರ ಮೇಲೊಂದು ನಡೆದದ್ದು. ಮಹಾರಾಜರ ಮನಸ್ಸನ್ನು ತುಂಬ ವ್ಯಾಕುಲಕ್ಕೊಳಗು ಮಾಡಿದವು.

ಸುಬ್ಬರಾಯರು ದಿವಾನ್‌ ಪದವಿಗೆ ರಾಜೀನಾಮೆ ಕೊಟ್ಟರು. ಅವರ ಬದಲು ವೆಂಕಟರಾವ್‌ ಮತ್ತೆ ಬಂದರು. ಅವರೂ ರಾಜೀನಾಮೆ ಕೊಡಬೇಕಾಯಿತು.

ಮತ್ತೆ ಸುಬ್ಬರಾವ್‌

ಹಿಂದಿನ ಘಟನೆಗಳನ್ನೆಲ್ಲ ಮರೆತು ಮಹಾರಾಜರು ತಮ್ಮ ಗುರುಗಳಾದ ಸುಬ್ಬರಾವ್‌ ಅವರನ್ನೇ ಪುನಃ ದಿವಾನರನ್ನಾಗಿ ತೆಗೆದುಕೊಂಡರು. ಮಹಾರಾಜರ ಮನಸ್ಸು ಸಂತೃಪ್ತಿಗೊಳ್ಳುವಂತೆ ಸುಬ್ಬರಾವ್‌ ಹಗಲಿರುಳು ದುಡಿಯತೊಡಗಿದರು. ಇದೇ ಕಾಲದಲ್ಲಿ ಕಲ್ಲನ್‌ ಎನ್ನುವ ರೆಸಿಡೆಂಟ್ ಬಂದ. ಈತನ ಆಗಮನದ ಆನಂತರ ಮಹಾರಾಜರ ಮನಸ್ಸಿನ ಮೇಲೆ ಆಘಾತ ಪರಂಪರೆಗಳೇ ಉಂಟಾದವು.

ಕಲ್ಲನ್‌ ತಿರುವನಂತಪುರಕ್ಕೆ ಬಂದಾಗ ಒಬ್ಬನೇ ಬರಲಿಲ್ಲ. ತನ್ನ ಜೊತೆಯಲ್ಲಿ ಕೃಷ್ಣರಾವ್ ಎಂಬ ಒಬ್ಬ ಮಿತ್ರರನ್ನೂ ಕರೆದುಕೊಂಡು ಬಂದಿದ್ದ. ಅವರು ಆಂಧ್ರದವರು. ಕೃಷ್ಣರಾವ್ ತಿರುವನಂತಪುರಕ್ಕೆ ಬಂದ ಬಳಿಕ ಅಲ್ಲಿನ ದಿವಾನ್ ಪದವಿಯನ್ನು ತಾನು ಪಡೆಯಬೇಕೆನ್ನಿಸಿತು. ಇದಕ್ಕೆ ಕಲ್ಲನ್‌ ಸಹಾಯವೂ ಇತ್ತು. ಕೃಷ್ಣರಾವ್‌ಗೆ ದಿವಾನ್‌ ಕಛೇರಿಯಲ್ಲಿ ಸ್ಥಳ ಸಿಕ್ಕಿತು. ಕಲ್ಲನ್ ಮತ್ತು ಕೃಷ್ಣರಾವ್‌ ದಿವಾನ್‌ ಸುಬ್ಬರಾವ್‌ ಅವರ ಎಲ್ಲ ಕೆಲಸಗಳಿಗೂ ವಿಘ್ನ ತಂದೊಡ್ಡುತ್ತಿದ್ದರು. ಗತ್ಯಂತರವೇ ಇಲ್ಲದೆ ಸುಬ್ಬರಾವ್ ರಾಜೀನಾಮೆ ಸಲ್ಲಿಸಬೇಕಾಯಿತು.

ಆಸೆ ಫಲಿಸಿತು

ಕಲ್ಲನ್‌ ಮತ್ತು ಕೃಷ್ಣರಾವ್ ಮಹಾರಾಜರನ್ನು ಅವಗಣಿಸತೊಡಗಿದರು. ಸ್ವೇಚ್ಛೆಯಿಂದ ವರ್ತಿಸುತ್ತಿದ್ದರು. ಅರಮನೆಯ ಖಾಸಗಿ ವಿಷಯಗಳಿಗೆಲ್ಲ ಕಲ್ಲನ್‌ ತಲೆಹಾಕುತ್ತಿದ್ದ. ಇದರಿಂದ ಮಹಾರಾಜರ ಮನಸ್ಸು ಬಹಳಷ್ಟು ನೊಂದಿತು. ಪಾರತಂತ್ರ್ಯವನ್ನನುಭವಿಸಿಕೊಂಡು ಒಂದು ರಾಜ್ಯದ ಧರ್ಮರಾಜನಾಗಲು ಸಾಧ್ಯವಿಲ್ಲ ಎನ್ನಿಸಿತು. ಆದರೂ ಮನಸ್ಸು ತಡೆಯದೆ ಕೃಷ್ಣರಾವ್ ದಿವಾನರಾಗಿರುವುದು ತಮಗೆ ಸ್ವಲ್ಪವೂ ಇಷ್ಷವಿಲ್ಲವೆಂದು ಮಹಾರಾಜರು ಮದರಾಸು ಸರ್ಕಾರಕ್ಕೆ ಬರೆದು ತಿಳಿಸಿದರು. ಕೃಷ್ಣರಾವ್ ರಾಜೀನಾಮೆ ಸಲ್ಲಿಸಬೇಕಾಯಿತು.

ನುಂಗಿಕೊಂಡ ನೋವು

ಮತ್ತೆ ವೆಂಕಟರಾವ್ ದಿವಾನರಾದರು. ಈ ನೇಮಕವೂ ಮಹಾರಾಜರಿಗೆ ಅತೃಪ್ತಿಯನ್ನುಂಟು ಮಾಡಿತು. ಅದಕ್ಕೆ ಅನೇಕ ಕಾರಣಗಳಿದ್ದವು. ವೆಂಕಟರಾವ್‌ ತಮ್ಮ ಸಂಬಂಧಿಗಳಿಗೆಲ್ಲ ದೊಡ್ಡ ದೊಡ್ಡ ಉದ್ಯೋಗಗಳನ್ನು ಕೊಟ್ಟಿದ್ದು, ಪ್ರಜೆಗಳಿಂದ ಲಂಚ ಸ್ವೀಕರಿಸಿದ್ದು – ಇವೇ ಮುಂತಾದ ಅನ್ಯಾಯಗಳನ್ನು ಕಂಡು ಮಹಾರಾಜರ ಮನಸ್ಸು ರೋಸಿಹೋಯಿತು. ಇಷ್ಟರಲ್ಲಿ ಮಹಾರಾಜರ ಆರೋಗ್ಯವೂ ಕೆಡುತ್ತಾ ಬಂದಿತು. ಇನ್ನು ತಮ್ಮ ಕಾಲವನ್ನೆಲ್ಲ ಶ್ರೀ ಪದ್ಮನಾಭನ ಧ್ಯಾನದಲ್ಲಿ ಕಳೆಯದಿದ್ದರೆ ಮನಸ್ಸಿಗೆ ಸಮಾಧಾನ ದೊರೆಯಲಾರದು ಎನ್ನಿಸಿತು. ತಾನು ತಪ್ಪು ಮಾಡುತ್ತಿದ್ದೇನೆ ಎಂದು ತಿಳಿದ ಬಳಿಕ ವೆಂಕಟರಾವ್‌ ತಾವಾಗಿಯೇ ರಾಜೀನಾಮೆ ಸಲ್ಲಿಸಿದರು. ಕಲ್ಲನ್‌ನ ಕೋಟಲೆಯಿಂದ ಮಹಾರಾಜರು ಪಾರಾಗಬೇಕಿತ್ತು. ಅವನ ತೃಪ್ತಿಗಾಗಿ ಕೃಷ್ಣರಾವ್‌ರನ್ನು ಪುನಃ ದಿವಾನರನ್ನಾಗಿ ಮಾಡಬೇಕಾಗಿತ್ತು.

ಹೀಗೆ ಆಗಾಗ ಬದಲಾಗುತ್ತಿದ್ದ ದಿವಾನರು, ಆಗಾಗ ವರ್ಗವಾಗಿ ಬರುತ್ತಿದ್ದ ರೆಸಿಡೆಂಟ್ ಅಧಿಕಾರಿಗಳು, ಇವರ ಮಧ್ಯೆ ಸಿಕ್ಕಿದ ಮಹಾರಾಜರು ಮಾನಸಿಕವಾಗಿ ತುಂಬ ನಲುಗಿ ಹೋದರು. ತಮ್ಮನ್ನು ಹೊರಗಿನವರು ಯಾರೂ ಸಂದರ್ಶಿಸಕೂಡದು ಎಂದು ಕಟ್ಟಪ್ಪಣೆ ಮಾಡಿದರು. ಸದಾ ಏಕಾಂತವನ್ನು ಬಯಸಿದರು. ಪುರುಷಶಕ್ತಿಯನ್ನು ಮೀರಿದ ಮತ್ತೊಂದು ಶಕ್ತಿಯಿದೆ, ಅದು ಎಲ್ಲವನ್ನೂ ನಿಯಂತ್ರಿಸುತ್ತದೆ ಎನ್ನು ಭಾವನೆಯನ್ನು ತಳೆದ ಮಹಾರಾಜರು ಸಾಧ್ಯವಾದಷ್ಟು ಮಟ್ಟಿಗೂ ಸಂದರ್ಶನಗಳಿಂದ ದೂರವಿರತೊಡಗಿದರು. ತಮ್ಮ ಕೊನೆಯ ದಿನಗಳಲ್ಲಿ ಹೆಚ್ಚು ವೇಳೆಯನ್ನು ಕ್ಷೇತ್ರದರ್ಶನಗಳಿಗಾಗಿ ವಿನಿಯೋಗಿಸಿದರು. ಅಪರಿಮಿತವಾದ ದಾನಧರ್ಮಗಳನ್ನು ಮಾಡಿದರು. ಕೊನೆಗೆ ಕೊನೆಗೆ ಅರಮನೆಯ ಪೂಜಾಗೃಹವನ್ನು ಬಿಟ್ಟು ಹೊರಗೆ ಬರುವುದು ಅಪರೂಪವಾಯಿತು. ದಿನದಿಂದ ದಿನಕ್ಕೆ ದೇಹಸ್ಥಿತಿ ತೀರ ಹದಗೆಡುತ್ತಿತ್ತು. ಆದರೂ ಅದನ್ನು ಯಾರೊಡನೆಯೂ ಹೇಳಿಕೊಳ್ಳುತ್ತಿರಲಿಲ್ಲ. ಸ್ವಾತಿ ತಿರುನಾಳರ ಆರೋಗ್ಯದ ವಿಷಯವಾಗಿ ಅವರ ಸಹೋದರ ಉತ್ರಂ ತಿರುನಾಳರಿಗೆ ಹೆದರಿಕೆಯಾಯಿತು. ಅವರು ಅರಮನೆಯ ವೈದ್ಯರನ್ನು ಬರಮಾಡಿದರು. ಆದರೆ ಅರಮನೆಯ ವೈದ್ಯರನ್ನು ಬರಮಾಡಿದರು. ಆದರೆ ಆ ವೈದ್ಯರ ಸಂದರ್ಶನಕ್ಕೂ ಮಹಾರಾಜರು ಒಪ್ಪಲಿಲ್ಲ. ಕಾಯಿಲೆಗಳಿಂದ ದೇಹಕ್ಕೆ ನೋವು. ತಾವು ಜನಗಳ ಒಳ್ಳೆಯದಕ್ಕಾಗಿ ದುಡಿಯಬೇಕೆಂದು ಎಷ್ಟು ಮನಃಪೂರ್ವಕವಾಗಿ ಪ್ರಯತ್ನಿಸಿದರೂ ಬ್ರಿಟಿಷ್ ಅಧಿಕಾರಿಗಳು ಮತ್ತು ಸಂಸ್ಥಾನದ ಪ್ರಬಲರಾದ ಅಧಿಕಾರಿಗಳು ಅಡ್ಡಿ ಬಂದ ಕಾರಣ, ಅದು ಸಾಧ್ಯವಾಗಲಿಲ್ಲ ಎಂದು ಮನಸ್ಸಿಗೆ ನೋವು ಆದರೆ ಮಹಾರಾಜರು ತಮ್ಮ ನೋವನ್ನು ಯಾರಿಗೂ ತೋರ್ಪಡಿಸಿಕೊಳ್ಳುತ್ತಿರಲಿಲ್ಲ. ಅನನ್ಯ ಭಕ್ತಿಯಿಂದ ಭಗವದಾರಾಧನೆಯಲ್ಲಿ ತಲ್ಲೀನರಾಗಿರುತ್ತಿದ್ದರು. ೧೮೪೬ರ ಡಿಸೆಂಬರ್ ೨೬ರಂದು ಅನಂತಪದ್ಮನಾಭನಲ್ಲಿ ಐಕ್ಯರಾದರು.

 

ಸ್ವಾತಿ ತಿರುನಾಳರು ವೀಣೆ ನುಡಿಸುತ್ತಿರುವುದು.

ಮಾದರಿ ಸಂಸ್ಥಾನ

ಸ್ವಾತಿ ತಿರುನಾಳರದು ಹದಿನೆಂಟು ವರ್ಷದ ಆಳ್ವಿಕೆ. ಸಿಂಹಾಸನಕ್ಕೆ ಬಂದಾಗ ಅವರಿಗೆ ಹದಿನಾರೇ ವರ್ಷ. ಒಂದು ಕಡೆ ಬ್ರಿಟಿಷ್‌ ಅಧಿಕಾರಿಗಳು. ಭಾರತ ಇನ್ನೂ ಅವರ ಮುಷ್ಠಿಯಲ್ಲಿದ್ದ ಕಾಲ. ದೇಶೀಯ ಸಂಸ್ಥಾನಗಳನ್ನು ಆಳುತ್ತಿದ್ದ ರಾಜ ಮಹಾರಾಜರುಗಳು, ನವಾಬ ನೈಜಾಮರುಗಳು ಅವರ ಕೈಕೆಳಗೆ ಇದ್ದಂತೆ ನಡೆದುಕೊಳ್ಳಬೇಕಾಗಿತ್ತು. ಅವರಿಗೆ ಬೇಡವಾದವರನ್ನು ಮಂತ್ರಿಗಳನ್ನಾಗಿ, ಹಿರಿಯ ಅಧಿಕಾರಿಗಳನ್ನಾಗಿ ನೇಮಿಸುವಂತಿರಲಿಲ್ಲ. ಮತ್ತೊಂದು ಕಡೆ ಭಾರತೀಯರೇ, ತಿರುವಾಂಕೂರಿನವರೇ ಆದರೂ ತಮ್ಮ ಅಧಿಕರ, ಪ್ರತಿಷ್ಠೆ ಇವಕ್ಕೇ ಗಮನ ಕೊಡುವ ದಿವಾನರು. ಇವರ ನಡುವೆ ತಿರುವಾಂಕೂರನ್ನು ಒಂದು ಮಾದರಿ ಸಂಸ್ಥಾನವನ್ನಾಗಿ ಮಾಡಬೇಕು. ಬಹಳ ಕಷ್ಟದ ಕೆಲಸ. ಅದನ್ನು ಕಷ್ಟಪಟ್ಟು ಸಾಧಿಸಿದರು. ಸ್ವಾತಿ ತಿರುನಾಳರ ಆಳ್ವಿಕೆಯಲ್ಲಿ ಪ್ರಜೆಗಳೇನೋ ಅದೃಷ್ಟವಂತರಾಗಿದ್ದರು. ಆದರೆ ಮಹಾರಾಜರು ಅನುಭವಿಸಿದ ಕಷ್ಟ ಅವರಿಗೇ ಗೊತ್ತು.

ರಾಬರ್ಟ್‌ ಎನ್ನುವ ಒಬ್ಬ ಆಂಗ್ಲ ಭಾಷಾಧ್ಯಾಪಕನಿದ್ದ. ನಾಗರ‍್ಕೊಯಿಲ್‌ನಲ್ಲಿ ಒಂದು ಇಂಗ್ಲಿಷ್‌ ಶಾಲೆಯನ್ನು ನಡೆಸುತ್ತಿದ್ದ. ಆತನನ್ನು ಕರೆಸಿಕೊಂಡು ಮಹಾರಾಜರು ತಿರುವನಂತರಪುರದಲ್ಲಿ ೧೮೩೪ರಲ್ಲಿ ಒಂದು ಇಂಗ್ಲಿಷ್‌ ಶಾಲೆಯನ್ನು ಸ್ಥಾಪಿಸಿದರು. ಅನಂತರ ಎಷ್ಟೋ ಇಂಗ್ಲಿಷ್‌ ಶಾಲೆಗಳು ಪ್ರಾರಂಭವಾಗುವುದಕ್ಕೆ ಈ ಶಾಲೆ ಕಾರಣವಾಯಿತು. ರೆವರೆಂಡ್‌ ಫೀಟ್‌ ಎಂಬಾತ ಬರೆದ ಮಲಯಾಳ ವ್ಯಾಕರಣ ಪ್ರಕಟಣೆಗೆ ಮಹಾರಾಜರು ಹಣ ಕೊಟ್ಟು ಸಹಾಯ ಮಾಡಿದರು. ತಿರುವನಂತಪುರದಲ್ಲಿ ಒಂದು ಉಚಿತ ವಾಚನಾಲಯದ ಸ್ಥಾಪನೆಗೆ ಕಾರಣರಾದರು. ರೆವರೆಂಡ್‌ ಬೆಯ್ಲಿ ಬರೆದ ಇಂಗ್ಲಿಷ್‌ – ಮಲಯಾಳ ನಿಘಂಟಿನ ಪ್ರಕಟಣೆಯ ಭಾರವನ್ನೆಲ್ಲ ವಹಿಸಿಕೊಂಡರು. ತಿರುವನಂತಪುರದಲ್ಲಿ ಮೊಟ್ಟ ಮೊದಲು ಪಾಶ್ಯಾತ್ಯ ಪದ್ಧತಿಯ ಆಸ್ಪತ್ರೆಯನ್ನು ಸ್ಥಾಪಿಸಿದವರು ಸ್ವಾತಿ ತಿರುನಾಳರು. ಪಾಶ್ಚಾತ್ಯ ಶಿಕ್ಷಣ ಪಡೆದ ಲೆಫ್ಟಿನೆಂಟ್‌ ಹೌಸ್ಲಿ ಎನ್ನುವ ಇಂಜಿನಿಯರ್ ತಿರುವಾಂಕೂರಿನ ಇಂಜಿನಿಯರಾಗಿ ನೇಮಕಗೊಂಡ. ಆ ಕಾಲದಲ್ಲಿ ಕಟ್ಟಿದ ಸೇತುವೆಗಳಲ್ಲಿ ಪ್ರಧಾನವಾದುದು ಕರಮನ ಸೇತುವೆ. ಸ್ವಾತಿ ತಿರುನಾಳರ ಕಾಲದಲ್ಲಿ ಸರ್ಕಾರಿ ಮುದ್ರಣಾಲಯ ಸ್ಥಾಪನೆಗೊಂಡಿತು. ಪ್ರಜೆಗಳಿಗೆ ಕೃಷಿ ವಾಣಿಜ್ಯ ಮುಂತಾದ ವಿಭಾಗಗಳಲ್ಲೆಲ್ಲ ನಾನಾ ರೀತಿಯ ಸೌಲಭ್ಯಗಳು ದೊರೆತವು. ರಾಜ್ಯದಲ್ಲಿ ಎಷ್ಟು ಜನರಿದ್ದಾರೆ. ಗಂಡಸರು ಎಷ್ಟು ಮಂದಿ, ಹೆಂಗಸರು ಎಷ್ಟು ಮಂದಿ – ಎಲ್ಲ ಲೆಖ್ಖ ಬೇಡವೆ? ಸರ್ಕಾರಕ್ಕೆ ಈ ಅಂಕಿ – ಸಂಖ್ಯೆಗಳು ತಿಳಿದಿರಬೇಡವೇ? ಇಂತಹ ಜನಗಣತಿ ತಿರುವಾಂಕೂರಿನಲ್ಲಿ ನಡೆದೇ ಇರಲಿಲ್ಲ. ಈ ಮಹಾರಾಜರ ಕಾಲದಲ್ಲಿ ತಿರುವಾಂಕೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಜನಗಣತಿ ನಡೆಯಿತು. ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲು ಬಹು ಮಂದಿ ರಾಜ ಮಹಾರಾಜರುಗಳು ನ್ಯಾಯ-ಅನ್ಯಾಯ, ಪ್ರಜೆಗಳ ಹಿತ ಇವನ್ನು ಕುರಿತು ಯೋಚಿಸುತ್ತಿದ್ದುದು ಕಡಿಮೆ. ಆದರೆ . ಸ್ವಾತಿ ತಿರುನಾಳ್‌ ಮಹಾರಾಜರಿಗೆ ತಮ್ಮ ಸಂಸ್ಥಾನದಲ್ಲಿ ಉನ್ನತ ಮಟ್ಟದ ನ್ಯಾಯಾಲಯಗಳಿರಬೇಕು, ಜನರಿಗೆ ನ್ಯಾಯ ದೊರಕುತ್ತದೆ ಎಂಬ ಭರವಸೆ ಬೇಕು ಎನ್ನುವ ಉದ್ದೇಶವಿತ್ತು. ನ್ಯಾಯಶಾಸ್ತ್ರ ಮತ್ತು ರಾಜ್ಯಾಡಳಿತ ನೈಪುಣ್ಯವನ್ನು ಪಡೆದಿದ್ದ ಶಂಬರನಾಥ ಜೋಯಿಸರು ಎಂಬುವರು ಪಂಜಾಬಿಗೆ ಹೋಗಿ ರಣಜಿತ್ ಸಿಂಗ್‌ನ ಆಸ್ಥಾನವನ್ನು ಸೇರಿದ್ದರು. ಮಹಾ ಮೇಧಾವಿಯಾದ ಜೋಯಿಸರನ್ನು ಸ್ವಾತಿ ತಿರುನಾಳರು ತಮ್ಮ ರಾಜಧಾನಿಗೆ ಕರೆಸಿಕೊಂಡರು. ಅವರಿಗೆ ಅಪೀಲು ಕೋರ್ಟಿನ ನ್ಯಾಯಾಧೀಶರ ಹುದ್ದೆಯನ್ನು ನೀಡಿದರು.

ಹಿಂದಿನ ಕಾಲದಿಂದ ಬಂದ ಅನೇಕ ಕ್ರೂರ ಪದ್ಧತಿಗಳನ್ನು ತಪ್ಪಿಸಿದ ಕರುಣಾಳು ಮಹಾರಾಜರು ಸ್ವಾತಿ ತಿರುನಾಳರು. ತಿರುವಾಂಕೂರು ರಾಜ್ಯದಲ್ಲಿ ಅಪರಾಧ ಮಾಡಿದ ಸ್ತ್ರೀಯರ ತಲೆ ಬೋಳಿಸಿ ಗಡಿಪಾರು ಮಾಡುವ ಸಂಪ್ರದಾಯ ಆಚರಣೆಯಲ್ಲಿತ್ತು. ಆ ಪದ್ಧತಿಯನ್ನು . ಸ್ವಾತಿ ತಿರುನಾಳರು ರದ್ದು ಪಡಿಸಿದರು. ಕೆಟ್ಟ ಕೆಲಸ ಮಾಡಿದ ನಂಬೂದಿರಿ ಸ್ತ್ರೀಯರಿಗಾಗಿಯೇ ಪ್ರತ್ಯೇಕವಾದ ಒಂದು ಶಿಕ್ಷೆ ಜಾರಿಯಲ್ಲಿತ್ತು. ಶುಚೀಂದ್ರಂ ದೇವಾಲಯಕ್ಕೆ ಅಂತಹವರನ್ನು ಕರೆತರುತ್ತಿದ್ದರು. ಅಲ್ಲಿ ದೇವರ ಎದುರಿನಲ್ಲಿ ಕುದಿಯುವ ಎಣ್ಣೆಯೊಳಕ್ಕೆ ಕೈ ಹಾಕಿಸಿ ಪ್ರಮಾಣ ಮಾಡಿಸುತ್ತಿದ್ದರು. ಆ ರೀತಿಯ ದಂಡನೆಯನ್ನು ಸ್ವಾತಿ ತಿರುನಾಳರು ರದ್ದು ಪಡಿಸಿದರು. ಹೀಗೆ ಎಷ್ಟೆಷ್ಟೋ ಹೊಸ ಸುಧಾರಣೆಗಳು, ಸ್ಥಾಪನೆಗಳು, ಪರಿವರ್ತನೆಗಳು ಸ್ವಾತಿ ತಿರುನಾಳರ ಕಾಲದಲ್ಲಿ ಕಾರ್ಯರೂಪಕ್ಕೆ ಬಂದುವು.

ಎಂದರೋ ಮಹಾನುಭಾವುಲು

ಒಂದು ದಿನ ತ್ಯಾಗರಾಜರು ತಮ್ಮ ಶಿಷ್ಯರು ಹಾಡುತ್ತಿದ್ದುದನ್ನು ಆಲಿಸುತ್ತ ಕುಳಿತಿದ್ದರು. ಆ ಸಮಯದಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಅಲ್ಲಿಗೆ ಬಂದ. ಕೈಯಲ್ಲಿ ಒಂದು ತಂಬೂರಿ; ತಂಬೂರಿಯ ತುದಿಯಲ್ಲಿ ಒಂದು ಚಿನ್ನದ ಬಾವುಟ. ತ್ಯಾಗರಾಜರ ಶಿಷ್ಯರು ಹಾಡುತ್ತಿದ್ದುದನ್ನು ತಾನೂ ಕೇಳುತ್ತ ಕುಳಿತ. ಸ್ವಲ್ಪ ಹೊತ್ತು ಕಳೆದ ಬಳಿಕ. “ಸ್ವಾಮೀ, ತಮ್ಮ ಸನ್ನಿಧಿಯಲ್ಲಿ ಹಾಡುವುದಕ್ಕೆ ನನಗೆ ಅಪ್ಪಣೆಯನ್ನು ದಯಪಾಲಿಸುತ್ತೀರಾ?” ಎಂದು ತ್ಯಾಗರಾಜರನ್ನು ಕೇಳಿದ. ತ್ಯಾಗರಾಜರು ಒಪ್ಪಿಗೆ ನೀಡಿದರು. ಆತ ತನ್ನ ಕೋಕಿಲ ಕಂಠದಿಂದ ತಂಬೂರಿಯನ್ನು ಮೀಟುತ್ತ ಆರು ಕಾಲಗಳಲ್ಲಿ ಪಲ್ಲವಿಯನ್ನು ಹಾಡಿದ. ಅದನ್ನು ಕೇಳಿ ತ್ಯಾಗರಾಜರಿಗೆ ಅತ್ಯಂತ ಆನಂದವುಂಟಾಯಿತು. ಅವರು ಕುಳಿತಲ್ಲಿಂದ ಎದ್ದು ಬಂದರು.

“ಸ್ವಾಮೀ, ತಾವು ಯಾರು?”

“ನಾನೊಬ್ಬ ಕೇರಳೀಯ. ನನ್ನ ಹೆಸರು ಗೋವಿಂದ ಮಾರಾರ್. ಸ್ವಾತಿ ತಿರುನಾಳರ ಆಸ್ಥಾನದಲ್ಲಿ ಸಂಗೀತ ಸೇವೆ ಮಾಡಿಕೊಂಡಿದ್ದೇನೆ.”

“ನಿಮ್ಮ ತಂಬೂರಿಯಲ್ಲಿ ವೈಜಯಂತಿ……..”

“ಇದನ್ನು ಸ್ವಾತಿ ತಿರುನಾಳ್‌ ಮಹಾರಾಜರು ದಯಪಾಲಿಸಿದರು.”

ಏಳು ತಿಂಗಳ ತಂಬೂರಿಯನ್ನು ನುಡಿಸುತ್ತ ಆರು ಕಾಲಗಳಲ್ಲಿ ಪಲ್ಲವಿಯನ್ನು ಹಾಡುವುದು ಸಾಧಾರಣ ಸಂಗತಿಯೇ? ತ್ಯಾಗರಾಜರಿಗೆ ಗೋವಿಂದ ಮಾರಾರರ ವಿಷಯವಾಗಿ ಗೌರವ ತುಂಬಿ ಬಂದಿತು.

ಈ ಘಟನೆ ತ್ಯಾಗರಾಜರಿಂದ “ಎಂದರೋ ಮಹಾನುಭಾವುಲು” ಎನ್ನುವ ಕೀರ್ತನೆಯ ಸೃಷ್ಟಿಗೆ ಕಾರಣವಾಯಿತು. “ಈ ಲೋಕದಲ್ಲಿ ಎಷ್ಟೋ ಮಂದಿ ಮಹಾನುಭಾವರಿದ್ದಾರೆ. ಅವರನ್ನೆಲ್ಲ ನಾನು ಗೌರವಿಸುತ್ತೇನೆ” ಎನ್ನುವುದು ಆ ಕೀರ್ತನೆಯ ಸಾರಾಂಶ. ಇಂತಹ ವಿದ್ವಾಂಸರಿಗೆ ಆಶ್ರಯ ನೀಡಿದ ಆಸ್ಥಾನ ಸ್ವಾತಿ ತಿರುನಾಳರದು.

ಕಲಾ ಪ್ರೋತ್ಸಾಹ

೧೭೯೮ರಿಂದ ೧೮೩೨ರ ವರೆಗೆ ತಂಜಾವೂರನ್ನು ಆಳಿದ ಶರಭೋಜಿ ಮಹಾರಾಜರ ಆಸ್ಥಾನ ಉಜ್ಜಯಿನಿಯನ್ನಾಳಿದ ವಿಕ್ರಮಾದಿತ್ಯನ ಆಸ್ಥಾನದಂತಿತ್ತು. ಆ ಮಹಾರಾಜರು ತೀರಿಕೊಂಡನಂತರ ತಂಜಾವೂರಿನ ಆಸ್ಥಾನದ ವಿದ್ವಾಂಸರೆಲ್ಲ ಅನಾಥರಂತಾದರು. ಅವರಲ್ಲಿ ಬಹುಮಂದಿಗೆ ಸ್ವಾತಿ ತಿರುನಾಳರ ಆಸ್ಥಾನ ಆಶ್ರಯ ನೀಡಿತು. ಕಲೆಗೆ ಸಂಬಂಧಪಟ್ಟಂತೆ ಯಾವುದೇ ದೇಶದವನಿರಲಿ, ಯಾವುದೇ ವಾದ್ಯ ನಿಪುಣನಿರಲಿ ಅವನಿಗೆ ಸ್ವಾತಿ ತಿರುನಾಳರ ಆಸ್ಥಾನ ತೆರೆದ ಬಾಗಿಲಾಗಿತ್ತು. ದೇಶ ಭಾಷೆಗಳ ಭಿನ್ನ ಭೇದ ಸ್ವಾತಿ ತಿರುನಾಳರಿಗಿರಲಿಲ್ಲ. ಸ್ವತಃ ಹದಿನಾಲ್ಕು ಭಾಷೆಗಳ ಪರಿಶ್ರಮವಿದ್ದ ಮಹಾರಾಜರಿಗೆ ಯಾವ ಭಾಷೆಯ ವ್ಯಕ್ತಿಯೂ ಹತ್ತಿರದವನಾಗುತ್ತಿದ್ದ. ಯಾವ ಶ್ರೇಷ್ಠ ಕಲಾವಿದನೂ ಆಸ್ಥಾನದ ವಿದ್ವನ್ಮಣಿಗಳ ಸಾಲಿಗೆ ಸೇರುತ್ತಿದ್ದ. ಹಿಂದೂಸ್ಥಾನಿ ಹಾಡಿನಲ್ಲೂ ವೀಣಾವಾದನದಲ್ಲೂ ಪ್ರವೀಣರಾಗಿದ್ದ ರಂಗಯ್ಯಂಗಾರ್, ಸಾರಂಗಿವಾದ್ಯ ಪ್ರವೀಣ ಚಿಂತಾಮಣಿ ಭಾಗವತರು, ವೀಣಾವಾದನ ನಿಪುಣ ಚೇಲಾಪುರಂ ರಘುನಾಥ ಭಾಗವತರು, ತ್ಯಾಗರಾಜರ ಶಿಷ್ಯರಾಗಿದ್ದ ಕನ್ನಯ್ಯ ಭಾಗವತರು, ಸ್ವರಜಿತ್ತು ವಾದ್ಯ ನುಡಿಸುವ ತಂಜಾವೂರ್‌ ಸುಲೈಮಾನ್‌ ಸೇಠ್‌, ಮುತ್ತುಸ್ವಾಮಿ ದೀಕ್ಷಿತರ ಶಿಷ್ಯರಾದ ವಡಿವೇಲು, ಪೊನ್ನಯ್ಯ, ಚಿನ್ನಯ್ಯ, ತಂಜಾವೂರ್ ವೆಂಕಟರಾಮ ಭಾಗವತ್‌ರ, ಪಾಲಿಘಾಟು ಶೇಷಭಾಗವತರು, ಷಟ್ಕಾಲ ಗೋವಿಂದ ಮಾರಾರ್, ಕಲ್ಕುಳಂ ಭಾಸ್ಕರ ಭಾಗವತರು ಭೂತಪಾಂಡಿಸುಬ್ಬು ಭಾಗವತರು, ಪಾಳಯಂಕೋಟ್ಟು. ಅಣ್ಣಯ್ಯಸ್ವಾಮಿ ಭಾಗವತರು, ಕರಮನ ಅಣ್ಣಸ್ವಾಮಿ ಭಾಗವತರು, ಮಲಬಾರಿನ ಕೃಷ್ಣಮಾರಾರ್, ಚೊಳದೇಶದ ಕ್ಷೀರಾಬ್ಧಿಶಾಸ್ತ್ರಿ, ಮೈಸೂರಿನ ಅಲಾವುದ್ದೀನ್ ಎನ್ನುವ ಹಿಂದೂಸ್ಥಾನಿ ಗಾಯಕ, ಮೋಹಿನಿ ಅಟ್ಟದ ನೃತ್ಯ ಕಲಾವಿದೆ ರಾಮನಾಥ ಮಾಣಿಕ್ಯಂ, ಭರತನಾಟ್ಯದ ತಂಗಚ್ಚಿ-ಹೀಗೆ ಮಹಾರಾಜರ ಆಸ್ಥಾನ ಗಾಯಕರು, ವಾದ್ಯಪಟುಗಳು-ಒಬ್ಬರೇ? ಇಬ್ಬರೇ? ಅಸಂಖ್ಯಾತ.

“ಓಮನ ತಿಂಗಳ್‌ ಕಿಡಾವೋ………..” ಎಂದು ಪ್ರಾರಂಭವಾಗುವ ಗೀತೆ ಕೇರಳದ ಸುಪ್ರಸಿದ್ಧ ತೊಟ್ಟಿಲ ಹಾಡು. ಅದನ್ನು ರಚಿಸಿದ ಮಹಾಕವಿ ರವಿವರ್ಮ ತಂಬಿ; ಸ್ವಾತಿ ತಿರುನಾಳರ ಆಸ್ಥಾನ ಕವಿ. ತಂಬಿಯಲ್ಲದೆ ಕಿಳಿಮಾನೂರ್ ರಾಜರಾಜವರ್ಮ ಕೋಯಿ ತಂಬುರಾನ್‌, ಅರಿಪಾಡು ಕೊಚ್ಚುಪಿಳ್ಳ ವಾರಿಯರ್ ಮೊದಲಾದ ಒಂಬತ್ತು ಮಂದಿ ಮಹಾಕವಿಗಳು ಸ್ವಾತಿ ತಿರುನಾಳರ ಅಗ್ರಸ್ಥಾನದಲ್ಲಿದ್ದರು.

ಒಮ್ಮೆ ಅವರು ಪದ್ಮನಾಭಸ್ವಾಮಿಯ ದೇವಾಲಯಕ್ಕೆ ಹೋದರು. ಅಲ್ಲಿ ಹದಿನಾರು ವರ್ಷದ ಹುಡುಗನೊಬ್ಬ ಎತ್ತರದ ಧ್ವನಿಯಲ್ಲಿ ಹಾಡುತ್ತಿದ್ದ. ಮಹಾರಾಜರು ಅವನನ್ನು ಕರೆದು ಅವನ ವಿಷಯ ವಿಚಾರಿಸಿದರು. ಪಾಲ್‌ಘಾಟಿನಿಂದ ಜೀವನೋಪಾಯ ಹುಡುಕಿಕೊಂಡು ಬಂದ ಹುಡುಗ; ಅವನಿಗೆ ಯಾರಿಂದಲೂ ಸಂಗೀತ ಕಲಿಯುವ ಅವಕಾಶ ಸಿಕ್ಕಿರಲಿಲ್ಲ.

ತಾನೇ ಕಲಿತಷ್ಟು ಹಾಡುತ್ತಿದ್ದ ಎಂದು ತಿಳಿಯಿತು. ಅವನ ಕಂಠ ಮತ್ತು ಪ್ರತಿಭೆಗಳನ್ನು ಮೆಚ್ಚಿದ ಸ್ವಾತಿ ತಿರುನಾಳರು ಅವನನ್ನು ಅರಮನೆಗೆ ಕರೆದುಕೊಂಡು ಹೋದರು. ಅವನಿಗೆ ಒಂದು ಮನೆ ಕಟ್ಟಿಸಿಕೊಟ್ಟರು. ಸಂಗೀತದ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿದರು. ಪರಮೇಶ್ವರ ಭಾಗವತರ್ ಎಂಬ ಹೆಸರಿನ ಆ ಹುಡುಗ ಮುಂದೆ ದೊಡ್ಡ ಸಂಗೀತ ವಿದ್ವಾಂಸನಾದ. ಚಂಗನಚೇರಿ ಎಂಬ ಸ್ಥಳದಿಂದ ಬಂದ ಒಬ್ಬಾತನು ತಂದ ದಂತದ ವಿಗ್ರಹಗಳನ್ನು ಕಂಡು ದಂತದ ಕೆಲಸಗಾರರನ್ನೂ ಅವರ ಸಂಸಾರಗಳನ್ನೂ ಚಂಗನಚೇರಿಯಿಂದ ಕರೆಸಿ ತಿರುವನಂತಪುರದಲ್ಲಿ ಅವರು ನೆಲೆಸಲು ಎಲ್ಲ ಅನುಕೂಲಗಳನ್ನು ಮಹಾರಾಜರು ಮಾಡಿಕೊಟ್ಟರು.

ತುರ್ಕಿ, ವಲಯಾ, ಜಪಾನ್‌, ಚೀನ, ನೇಪಾಳ ಮುಂತಾದ ಬೇರೆ ಬೇರೆ ದೇಶಗಳಿಂದ ಶಸ್ತ್ರಾಸ್ತ್ರ ನಿಪುಣರನ್ನು ತಿರುವನಂತಪುರಕ್ಕೆ ಬರಮಾಡಿಕೊಂಡಿದ್ದರು. ಕೇರಳೀಯ ಯುದ್ಧ ಕಲೆಯಾದ “ಕಳರಿಪಯಟ್ಟು”, ದೃಶ್ಯಕಲೆಯಾದ “ಕಥಕಳಿ”, ಐಂದ್ರಜಾಲ, ಮಲ್ಲವಿದ್ಯೆ – ಹೀಗೆ ಯಾವುದೇ ಕ್ಷೇತ್ರವಿರಲಿ ಅವರೆಲ್ಲರಿಗೂ ಮಹಾರಾಜರಿಂದ ಪ್ರೋತ್ಸಾಹ ದೊರೆಯುತ್ತಿತ್ತು.

ಹರಿಕಥಾ ಕಾಲಕ್ಷೇಪ

ಈ ಗಾನ ಸಾಹಿತ್ಯ ಪ್ರಕಾರವನ್ನು ಕೇರಳದಲ್ಲಿ ಮೊತ್ತ ಮೊದಲು ಪ್ರಚಾರಕ್ಕೆ ತಂದವರು ಸ್ವಾತಿ ತಿರುನಾಳರು. ಈ ಸಾಹಿತ್ಯದ ಜನ್ಮಭೂಮಿ ಮಹಾರಾಷ್ಟ್ರ. ಇದನ್ನು ತಂಜಾವೂರಿನಲ್ಲಿ ಶರಭೋಜಿ ಮಹಾರಾಜರು ಪ್ರಚಾರಕ್ಕೆ ತಂದದ್ದು. ಮೇರುಸ್ವಾಮಿ ಎನ್ನುವ ಮಹಾರಾಷ್ಟ್ರದ ಬ್ರಾಹ್ಮಣನನ್ನು ಶರಭೋಜಿ ಮಹಾರಾಜರು ತಮ್ಮ ಆಸ್ಥಾನಕ್ಕೆ ಕರೆಸಿಕೊಂಡಿದ್ದರು. ಸ್ವಾತಿ ತಿರುನಾಳರು ಆ ಮೇರುಸ್ವಾಮಿಯನ್ನು ತಮ್ಮ ಆಸ್ಥಾನಕ್ಕೆ ಕರೆಸಿಕೊಂಡರು. ಅವರನ್ನು ಆಸ್ಥಾನದ ಭಾಗವತರನ್ನಾಗಿ ಮಾಡಿಕೊಂಡರು. ಭಾಗವತರ ಸ್ವರ ಮಾಧುರ್ಯವನ್ನು ಕಂಡು ಮಹಾರಾಜರು ಅವರಿಗೆ “ಕೋಕಿಲ ಕಂಠ” ಎನ್ನುವ ಬಿರುದನ್ನು ದಯಪಾಲಿಸಿದರು.

ಸ್ವಾತಿ ತಿರುನಾಳರ ಸಂಗೀತ ಕೃತಿಗಳು

ಕೀರ್ತನೆಗಳು, ಚೌಕವರ್ಣಗಳು, ತಾನವರ್ಣಗಳು, ನೃತ್ಯಗೀತೆಗಳು- ಹೀಗೆ ಸಾವಿರಕ್ಕಿಂತಲೂ ಹೆಚ್ಚು ರಚನೆಗಳುಂಟೆಂದು ನಂಬಿಕೆ. ಆದರೆ ಎಲ್ಲವೂ ದೊರಕಿಲ್ಲ. ಸಂಸ್ಕೃತದಲ್ಲಿ ೧೯೭, ಮಲಯಾಳದಲ್ಲಿ ೬೩, ಹಿಂದೂಸ್ಥಾನಿಯಲ್ಲಿ ೩೭, ತೆಲುಗಿನಲ್ಲಿ ೮, ಕನ್ನಡದಲ್ಲಿ ೧- ಇದುವರೆಗೆ ದೊರಕಿರುವ ರಚನೆಗಳು.

ಸಾಹಿತ್ಯ ಕೃತಿಗಳು

“ಭಕ್ತಿ ಮಂಜರಿ” ಸ್ವಾತಿಯವರ ಪ್ರಧಾನ ಕೃತಿ. ಇದರ ರಚನೆ ಸಂಸ್ಕೃತದಲ್ಲಿ. ಮಹಾವಿಷ್ಣುವನ್ನು ಕುರಿತ ಭಕ್ತಿ, ಈ ಗ್ರಂಥದ ವಸ್ತು. ನೂರು ಶ್ಲೋಕಗಳ ಹತ್ತು ಶತಕಗಳುಳ್ಳ ಗ್ರಂಥ.

“ಸ್ಯಾನಂದೂರು ಪುರವರ್ಣನ ಪ್ರಬಂಧಂ” – ಚಂಪೂ ಕಾವ್ಯ. ಇದರ ರಚನೆಯೂ ಸಂಸ್ಕೃತದಲ್ಲಿ. ಇದು ಸ್ವಾತಿ ತಿರುನಾಳ್‌ ಮಹಾರಾಜರ ಮಹಾಕಾವ್ಯ. ಶ್ರೀ ಅನಂತ ಪದ್ಮನಾಭ ಈ ಕಾವ್ಯದ ನಾಯಕ.

“ಶ್ರೀ ಪದ್ಮನಾಭ ಶತಕ”-ಪದ್ಮನಾಭನ ಸ್ತುತಿ ಈ ಶತಕದ ವಸ್ತು. ಪ್ರತಿ ಹತ್ತು ದಶಕಗಳಿಗೂ ಬೇರೆ ಬೇರೆ ಛಂದಸ್ಸನ್ನು ಅಳವಡಿಸಿದ್ದಾರೆ.

“ಅಜಾಮಿಳೋಪಾಖ್ಯಾನ ಮತ್ತು ಕುಚೇಲೋಪಾ ಖ್ಯಾನ”- ಇವೆರಡು ಅಖ್ಯಾನಗಳೂ ಹರಿಕಥಾ ಕಾಲಕ್ಷೇಪಕ್ಕಾಗಿ ರಚಿಸಿದ ಕೃತಿಗಳು. ಜಯದೇವ ಎಂಬಾತ ಹನ್ನೆರಡನೆಯ ಶತಮಾನದ ಕವಿ. ಅವನ ಪ್ರಸಿದ್ಧ ಕೃತಿ “ಗೀತ ಗೋವಿಂದ”. ಇದರಲ್ಲಿ ಇಪ್ಪತ್ತನಾಲ್ಕು ಅಷ್ಟಪದಿಗಳಿವೆ. ಈ ಅಷ್ಟಪದಿಗಳ ಮಾದರಿಯಲ್ಲಿ ಸ್ವಾತಿ ತಿರುನಾಳರು ಅಖ್ಯಾನಗಳನ್ನು ರಚಿಸಿದರು. ಅಟ್ಟ ಕಥೆಯೂ ಮಾದರಿಯಾಯಿತು.

ಉತ್ಸವ ವರ್ಣನ ಪ್ರಬಂಧ – ಈ ಗ್ರಂಥದ ರಚನೆ ಮಲಯಾಳದಲ್ಲಿ. ಇದರಲ್ಲಿ ಪದ್ಮನಾಭ ಕ್ಷೇತ್ರದಲ್ಲಿ ವರ್ಷಕ್ಕೆರಡು ಸಲ ಹತ್ತು ದಿನಗಳವರೆಗೆ ನಡೆಯುವ ಉತ್ಸವದ ವರ್ಣನೆಯಿದೆ. ಇದೂ ಹರಿಕಥಾ ಕಾಲಕ್ಷೇಪಕ್ಕಾಗಿ ರಚಿಸಿದ ಕೃತಿ.

ಸ್ವಾತಿ ತಿರುನಾಳರ ಸಂಗೀತ ಶೈಲಿ

ಸ್ವಾತಿ ತಿರುನಾಳರ ಸಂಸ್ಕೃತ ಕೀರ್ತನೆಗಳಲ್ಲಿ ಹೆಚ್ಚಿನವು “ಜಯದೇವ ಕಿಶೋರ”. “ಪರಮಪುರುಷ ಜಗದೀಶ್ವರ ಜಯ ಜಯ” ಎನ್ನುವ ಮಂಗಳಗೀತೆಗಳೂ ಸಂಕೀರ್ತನೆಗಳೂ ಆಗಿವೆ. ದ್ವಿಜಾವಂತಿ, ಲಲಿತಪಂಚಕ, ಪೂರ್ವ ಕಾಮೋದ ಮುಂತಾದ ರಾಗಗಳು ಕರ್ಣಾಟಕ ಸಂಗೀತದಲ್ಲಿ ಅಪೂರ್ವ ರಾಗಗಳು. ಆ ರಾಗಗಳಲ್ಲಿ “ಹಲವಾರು ಕೀರ್ತನೆಗಳನ್ನು ಸ್ವಾತಿಯವರು ರಚಿಸಿದ್ದಾರೆ. ಹಿಂದೂಸ್ಥಾನಿಯ ಧ್ರುವಪದ್‌, ಖಯಾಲ್‌, ಧ್ರುತಿ, ಗಜಲ್, ಟಪ್ಪ, ಖಡ ಮುಂತಾದ ರೀತಿಗಳನ್ನು ಅನುಸರಿಸಿ ಹರಿಕಥೆಗಳ ಮೂಲಕ ಅವುಗಳನ್ನು ಪ್ರಚಾರ ಮಾಡಿದರು. ಇದರ ಜೊತೆಗೆ ಮಹಾರಾಷ್ಟ್ರದಿಂದ ಸಾಕಿ, ದಿಂಡಿ, ಓವಿ, ಪಂಚಚಾಮರಂ, ಕೇಕಾವಲಿ ಎನ್ನು ಮಟ್ಟುಗಳಲ್ಲಿಯೂ ಅವರು ಕೃತಿಗಳನ್ನು ರಚಿಸಿದರು. ಸಾಧಾರಣವಾಗಿ ಇವರ ಕೃತಿಗಳಲ್ಲಿ “ಪದುಮನಾಭ” ಎನ್ನುವ ಅಂಕಿತ ಕಂಡುಬರುತ್ತದೆ. ಕೆಲವು ಕೃತಿಗಳಲ್ಲಿ “ಅಂಬುಜನಾಭ”, “ಕಮಲನಾಭ”, “ಪಂಕಜನಾಭ” ಮುಂತಾದ ಅಂಕಿತಗಳನ್ನೂ ಉಪಯೋಗಿಸಿರುವುದುಂಟು.

ಸ್ವಾತಿ ತಿರುನಾಳರಿಗಿಂತ ಮೊದಲು ತಿರುವಾಂಕೂರಿನಲ್ಲಿ ರೂಢಿಯಲ್ಲಿದ್ದದ್ದು ಸೋಪಾನ ಶೈಲಿಯ ಸಂಗೀತ. ಈ ಶೈಲಿ ನಿಧಾನ ಗತಿಯದು ಹಾಗೂ ಶಾಂತ ಈ ಶೈಲಿಗೆ ತನ್ನದೇ ಆದ ಒಂದು ವೈಶಿಷ್ಟ್ಯವಿದೆ. ಸ್ವಾತಿಯವರ ಅನೇಕ ರಚನೆಗಳು ಮೇಲುನೋಟಕ್ಕೆ ಸೋಪಾನ ಶೈಲಿಯಂತೆ ಕಂಡುಬರುತ್ತದೆ. ಆದರೆ ಅವು ಸೋಪಾನ ಶೈಲಿಗಿಂತ ಭಿನ್ನ ಮಾರ್ಗಗಳನ್ನು ಹಿಡಿದಿರುವುದು ಕಂಡು ಬರುತ್ತದೆ. ಸ್ವಾತಿ ತಿರುನಾಳರ ಸಂಗೀತ ಶೈಲಿಯಲ್ಲಿ ಒಂದು ಪ್ರತ್ಯೇಕತೆಯಿದೆ. ಸರಳ ರಚನೆಗಳನ್ನು ರಚಿಸಬಲ್ಲ ಸಂಗೀತಜ್ಞರಾಗಿದ್ದರು ಸ್ವಾತಿ ತಿರುನಾಳರು. ಅದೇ ರೀತಿಯಲ್ಲಿ ಜಟಿಲ ಕೃತಿಗಳನ್ನೂ ರಚಿಸಿ ಸಂಗೀತ ಸಾರ್ವಭೌಮರನ್ನು ಅಚ್ಚರಿಗೊಳಗು ಮಾಡಿದ್ದಾರೆ. “ಭಾವಯಾಮಿ ರಘುರಾಮ” ಎನ್ನುವುದು ಸ್ವಾತಿ ತಿರುನಾಳರ ಜನಪ್ರಿಯ ಕೃತಿಗಳಲ್ಲಿ ಒಂದು.

ನವರಾತ್ರಿಯ ಸಮಯದಲ್ಲಿ ಆಯಾ ದಿನಕ್ಕೆ ಸೂಕ್ತವಾಗಿ ಹಾಡುವಂತೆ ಕೀರ್ತನೆಗಳನ್ನು ಸ್ವಾತಿಯವರು ರಚಿಸಿದ್ದಾರೆ.

ಸ್ವಾತಿ ತಿರುನಾಳರ ಕೃತಿಗಳಲ್ಲಿ ಹೆಚ್ಚಿನವು ಸಂಸ್ಕೃತದಲ್ಲಿದ್ದುದರಿಂದ ಬಹುಬೇಗ ಅವು ಜನಪ್ರಿಯತೆಯನ್ನು ಗಳಿಸಲಿಲ್ಲ. ಅಲ್ಲದೆ ಸಾಮಾನ್ಯವಾಗಿ ಹಾಡುಗಳನ್ನು ರಚಿಸುವವರಿಗೆ ಶಿಷ್ಯರಿರುತ್ತಾರೆ. ಆ ಶಿಷ್ಯರು ಗುರುಗಳ ಹಾಡುಗಳನ್ನು ಕಲಿತು ಸಭೆಗಳಲ್ಲಿ ಹಾಡುತ್ತಾರೆ, ತಮ್ಮ ಶಿಷ್ಯರಿಗೆ ಕಲಿಸುತ್ತಾರೆ. ಹೀಗಾಗಿ ಹಾಡುಗಳು ಜನಪ್ರಿಯವಾಗುತ್ತವೆ. ಸ್ವಾತಿ ತಿರುನಾಳರು ಮಹಾರಾಜರಾಗಿದ್ದರು. ಅವರಿಗೆ ಶಿಷ್ಯರಿರಲಿಲ್ಲ. ಆದುದರಿಂದ ಅವರ ಹಾಡುಗಳು ಬೇಗ ಜನರಲ್ಲಿ ಪ್ರಚಾರವಾಗಲಿಲ್ಲ. ಆದರೆ ದಿನಗಳು ಉರುಳಿದಂತೆ ಸ್ವಾತಿ ತಿರುನಾಳರ ಕೀರ್ತನೆಗಳು ಕರ್ಣಾಟಕ ಸಂಗೀತಾಭ್ಯಾಸಿಗಳೆಲ್ಲರನ್ನು ಆಕರ್ಷಿಸುತ್ತ ಬಂದುವು.

ತ್ಯಾಗರಾಜರಿಗಾಗಿ –

ಅನೇಕ ಕಲಾಪಂಡಿತರಿಗೆ ಆಶ್ರಯದಾತರಾಗಿದ್ದ ಸ್ವಾತಿ ತಿರುನಾಳರಿಗೆ ಗಾನಚಕ್ರವರ್ತಿ ತ್ಯಾಗರಾಜರನ್ನು ಆಸ್ಥಾನಕ್ಕೆ ಬರಮಾಡಿಕೊಳ್ಳಬೇಕು. ಅವರನ್ನು ಗೌರವಿಸಬೇಕು ಎನ್ನುವ ಆಸೆಯುಂಟಾಯಿತು. ತ್ಯಾಗರಾಜರಾದರೋ ತಮ್ಮನ್ನು ಸಂಪೂರ್ಣವಾಗಿ ಭಗವಂತನಿಗರ್ಪಿಸಿ ಕೊಂಡಿದ್ದರು. ರಾಜಸ್ಥಾನ, ಬಿರುದುಬಾವಲಿಗಳು ಇತ್ಯಾದಿಗಳಲ್ಲಿ ಅವರಿಗೆ ಯಾವ ಆಸಕ್ತಿಯೂ ಇರಲಿಲ್ಲ. ಆದರೂ ಸ್ವಾತಿ ತಿರುನಾಳರಿಗೆ ಅವರನ್ನು ಒಮ್ಮೆಯಾದರೂ ಬರಮಾಡಿಕೊಳ್ಳಬೇಕು ಎನ್ನುವ ಹಂಬಲ ಹೆಚ್ಚುತ್ತಾ ಬಂದಿತು. ನಾಟ್ಯಾಚಾರ್ಯ ವಡಿವೇಲುವಿಗೆ ಪ್ರಭುಗಳ ಈ ಬಯಕೆಯನ್ನು ಈಡೇರಿಸಬೇಕೆನ್ನಿಸಿತು. ತಿರುವನಂತಪುರದಿಂದ ತಿರುವಾರೂರಿಗೆ ಹೊರಟರು. ತ್ಯಾಗರಾಜರ ನಿವಾಸಕ್ಕೆ ಹತ್ತಿರದ ಒಂದು ಮನೆಯಲ್ಲಿ ಇಳಿದುಕೊಂಡರು. ತ್ಯಾಗರಾಜರ ಶಿಷ್ಯರು ಅವರ ಹಾಡುಗಾರಿಕೆಯನ್ನು ಕೇಳಿ ಗುರುಗಳ ಹತ್ತಿರ ವಡಿವೇಲುವನ್ನು ತುಂಬ ಹೊಗಳಿದರು. ದಿನದಿನವೂ ಶಿಷ್ಯರ ಸ್ತುತಿಯನ್ನು ಕೇಳಿ ತ್ಯಾಗರಾಜರಿಗೂ ಕುತೂಹಲವುಂಟಾಯಿತು.

ಒಂದು ದಿನ ವಡಿವೇಲು ಹಾಡುತ್ತ ಕುಳಿತಿದ್ದರು. ತ್ಯಾಗರಾಜರು ಇದ್ದಕ್ಕಿದ್ದಂತೆ ಅಲ್ಲಿಗೆ ಆಗಮಿಸಿದರು. ವಡಿವೇಲುವಿನ ಹಾಡುಗಾರಿಕೆಯನ್ನು ಕೇಳಿ ಪುಳಕಗೊಂಡರು. ವಡಿವೇಲರ ಸಾಧನೆ ಫಲ ಕೊಟ್ಟಿತ್ತು. ತಮ್ಮೆದುರಿಗೆ ತ್ಯಾಗರಾಜರನ್ನು ಕಂಡು ವಡಿವೇಲರಿಗೆ ಅತ್ಯಂತ ಆನಂದವುಂಟಾಯಿತು. ತ್ಯಾಗರಾಜರಿಗೆ ಶಿರಬಾಗಿ ನಮಸ್ಕರಿಸಿದರು. ತ್ಯಾಗರಾಜರು ಕೇಳಿದರು:

“ಸ್ವಾಮಿ ತಮಗೆ ನನ್ನಿಂದ ಏನಾದರೂ ಆಗ ಬೇಕಾದ ಕಾರ್ಯವಿದೆಯೆ? ತ್ಯಾಗರಾಜರಿಂದ ಆಪ್ರಶ್ನೆ ಬಂದದ್ದೇ ತಡ, ವಡಿವೇಲರು ಹೇಳಿದರು:”

“ಸ್ವಾಮೀ, ತಾವು ತಿರುವನಂತಪುರಕ್ಕೆ ದಯಮಾಡಿಸಬೇಕು. ಪ್ರಭುಗಳ ಮನಸ್ಸಿಗೆ ಸಂತೋಷವನ್ನುಂಟು ಮಾಡಬೇಕು”.

ಅದಕ್ಕೆ ತ್ಯಾಗರಾಜರು ಮಂದಸ್ಮಿತರಾಗಿ ಹೇಳಿದರು:

“ನಿಮ್ಮ ಮಹಾರಾಜರೂ ನಾನೂ ಸಂಧಿಸುತ್ತೇವೆ. ಆದರೆ ಈ ಲೋಕದಲ್ಲಲ್ಲ.”

ಈ ಮಾತನ್ನು ಕೇಳಿ ವಡಿವೇಲು ತುಂಬ ನಿರಾಶರಾಗಿ ಹಿಂದಿರುಗಿದರು. ದೈವಸಂಕಲ್ಪ. ಈ ಘಟನೆ ನಡೆದು ಒಂದು ವಾರ ಕಳೆದಿತ್ತು. ಕರ್ಣಾಟಕ ಸಂಗೀತದ ತಪೋನಿಧಿಗಳಂತಿದ್ದ ತ್ಯಾಗರಾಜರೂ ಸ್ವಾತಿ ತಿರುನಾಳ್‌ ಮಹಾರಾಜರೂ ಪರಲೋಕದಲ್ಲಿ ಸಂಧಿಸಿದರು.

ಸ್ವಾತಿ ತಿರುನಾಳ್‌ ಸಂಗೀತ ಕಾಲೇಜು

ಈ ಕಾಲೇಜು ಸ್ಥಾಪನೆಗೊಂಡದ್ದು ೧೯೩೯ರಲ್ಲಿ. ತಿರುವಾಂಕೂರಿನ ಸ್ವಾತಿ ತಿರುನಾಳರ ಹೆಸರಿನಲ್ಲಿ ಮಹಾರಾಜ ಶ್ರೀ ಚಿತ್ತರ ತಿರುನಾಳ್‌ ಮತ್ತು ಮಹಾರಾಣಿ ಸೇತು ಪಾರ್ವತಿಬಾಯಿ ಇದನ್ನು ಸ್ಥಾಪಿಸಿದರು. ಈ ಕಾಲೇಜಿನ ಮೊದಲ ಪ್ರಿನ್ಸಿಪಾಲರಾಗಿದ್ದವರು ಗಾಯಕ ಶಿಖಾಮಣಿ ಮುತ್ತಯ್ಯ ಭಾಗವತರು. ಇಪ್ಪತ್ತೈದು ಸಂಗೀತ ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಕಾಲೇಜಿನಲ್ಲಿ ಇಂದು ನಾನೂರಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿದ್ದಾರೆ. ಗಾಯಕ, ಗಾಯಿಕ, ಗಾನಭೂಷಣ, ಗಾನ ಪ್ರವೀಣ, ನಟನ ಭೂಷಣಂ ಮುಂತಾದ ವಿವಿಧ ತರಗತಿಗಳುಳ್ಳ ಕಾಲೇಜಾಗಿ ಪ್ರಗತಿಯ ಹಾದಿಯಲ್ಲಿದೆ.

ಬದುಕಿದ್ದು ಕೆಲವೇ ವರ್ಷ –

ಸ್ವಾತಿ ತಿರುನಾಳ್‌ ಮಹಾರಾಜರು ರಾಜ್ಯ ರಕ್ಷಣೆಯ ಭಾರವನ್ನು ಹೊತ್ತದ್ದು ತಮ್ಮ ಹದಿನಾರನೆಯ ವಯಸ್ಸಿನಲ್ಲಿ. ಆ ವೇಳೆಗೆ ಸಂಸ್ಕೃತ, ಮಲಯಾಳಂ, ಹಿಂದಿ, ತೆಲುಗು, ತಮಿಳು, ಕನ್ನಡ, ಇಂಗ್ಲಿಷ್ ಮುಂತಾದ ಹದಿನಾಲ್ಕು ಭಾಷೆಗಳಲ್ಲಿ ನೈಪುಣ್ಯವನ್ನು ಪಡೆದಿದ್ದರು. ಬ್ರಿಟಿಷರ ಕೈಕೆಳಗೆ ಒಂದಲ್ಲ ಒಂದು ಕಾರಣದಿಂದ ಸದಾ ಮನಸ್ಸನ್ನು ಬಾಧಿಸುವ ರಾಜ್ಯಾಧಿಕಾರದ ನಿರ್ವಹಣೆ. ಅದರ ನಡುವೆ ಆತ್ಮಾನಂದವನ್ನು ಪಡೆಯುವುದಕ್ಕಾಗಿ ನಾದೋಪಾಸನೆ, ಗ್ರಂಥರಚನೆ, ಸಕಲ ಕಲಾ ಪ್ರೋತ್ಸಾಹ ಮೊದಲಾದವುಗಳಲ್ಲಿ ಮಗ್ನತೆ. ತಿರುವಾಂಕೂರು ಸಂಸ್ಥಾನದ ಆದರ್ಶ ರಾಜರಾಗಿ, ಕರ್ಣಾಟಕ ಸಂಗೀತದಲ್ಲಿ ಮಾತ್ರವಲ್ಲ. ಭಾರತೀಯ ಸಂಗೀತ ಪ್ರಪಂಚದಲ್ಲೂ ಶೋಭಾಯಮಾನರಾಗಿ ಬಾಳಿದರು. ತಮ್ಮ ಮೂವತ್ತನಾಲ್ಕನೆಯ ವಯಸ್ಸಿನಲ್ಲಿ ಅನಂತಪದ್ಮನಾಭನ ಅಡಿದಾವರೆಗಳಲ್ಲಿ ಐಕ್ಯವಾದರು.

ಅವರ ಸಾವಿನ ರೀತಿಯನ್ನು ಕುರಿತೂ ಒಂದು ಕಥೆ ಇದೆ. ಒಂದು ದಿನ ಉಷಃ ಕಾಲದಲ್ಲಿ ಪದ್ಮನಾಭ ಸ್ವಾಮಿ ದೇವಾಲಯದ ಆವರಣದಲ್ಲಿರುವ ನರಸಿಂಹ ಸ್ವಾಮಿಯ ಗುಡಿಯ ಅರ್ಚಕ, ಸ್ವಾತಿ ತಿರುನಾಳರನ್ನು ಕಂಡನಂತೆ. ಅಷ್ಟು ಹೊತ್ತಿನಲ್ಲಿ, ಪರಿವಾರದವರಿಲ್ಲದೆ ಮಹಾರಾಜರು ಬಂದುದನ್ನು ನೋಡಿ ಅವನಿಗೆ ಆಶ್ಚರ್ಯವಾಯಿತು. ದೇವಸ್ಥಾನದ ಹಿರಿಯ ಅಧಿಕಾರಿಗಳಿಗೆ ತಿಳಿಸಲು ಓಡಿದ. ಹಿಂದಕ್ಕೆ ಬಂದಾಗ ಮಹಾರಾಜರು ಗುಡಿಯ ಒಳಕ್ಕೆ ಹೊಕ್ಕು ಕಣ್ಮರೆಯಾದಂತೆ ಅವನಿಗೆ ಅನುಭವವಾಯಿತಂತೆ. ಸ್ವಲ್ಪ ಹೊತ್ತಿನಲ್ಲಿ ಸ್ವಾತಿ ತಿರುನಾಳರು ನಿಧನರಾದ ಸುದ್ದಿ ಬಂದಿತು.

 

ಕಡೆಯ ವರ್ಷಗಳನ್ನು ಅವರು ದೇವರ ಧ್ಯಾನ, ಪೂಜೆಗಳಲ್ಲಿ ಕಳೆದರು.

ಕಥೆ ನಿಜವೋ, ಅಲ್ಲವೋ, ಜನರು ಇನ್ನೂ ಅದನ್ನು ನೆನಪಿನಲ್ಲಿಟ್ಟು ಹೇಳುತ್ತಾರೆ.

ಆದರೆ ಸಾಧನೆ, ಕೊಡುಗೆ ಹಿರಿದು

ಹಿಂದೆಯೇ ಹೇಳಿದಂತೆ, ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲು ಪ್ರಜೆಗಳ ಹಿತ, ನ್ಯಾಯರಕ್ಷಣೆ ಇವುಗಳಿಗೆ ಗಮನಕೊಟ್ಟ ರಾಜರು ಬಹು ಸ್ವಲ್ಪ ಮಂದಿ. ಅವರಲ್ಲಿ ಸ್ವಾತಿ ತಿರುನಾಳ್‌ ಮಹಾರಾಜರು ಮೊದಲ ಪಂಕ್ತಿಗೆ ಸೇರುವವರು. ಎಂದೂ ತಮ್ಮ ಸುಖವನ್ನು ಅವರು ಗಣಿಸಲಿಲ್ಲ. ಪ್ರಜೆಗಳಿಗೆ ಒಳ್ಳೆಯದನ್ನು ಮಾಡಬೇಕೆಂದರೆ ಬ್ರಿಟಿಷ್‌ ಅಡ್ಡಿ, ಅಧಿಕಾರಿಗಳ ಅಡ್ಡಿ, ಇಷ್ಟಾದರೂ ಅವರು ಎಷ್ಟು ರೀತಿಗಳಲ್ಲಿ ಸಂಸ್ಥಾನವನ್ನು ಮುಂದಕ್ಕೆ ತಂದರು ಎಂಬುದನ್ನು ಕಂಡರೇ ಆಶ್ಚರ್ಯವಾಗುತ್ತದೆ. ಭಾಷೆಯ ಬೆಳವಣಿಗೆ, ಶಿಕ್ಷಣ, ಎಂಜಿನಿಯರಿಂಗ್‌, ವೈದ್ಯಕೀಯ ನೆರವು, ನ್ಯಾಯದ ರಕ್ಷಣೆ, ಕೃಷಿ, ವಾಣಿಜ್ಯ – ಎಲ್ಲದರ ಬೆಳವಣಿಗೆಗೆ ಗಮನ ಕೊಟ್ಟರು. ಸಮರ್ಥರಾದ ಅಧಿಕಾರಿಗಳನ್ನು ಆರಿಸಿ ಆರಿಸಿ ನೇಮಿಸಿದರು. ಅವರ ಮನಸ್ಸಿಗೆ ಸಮಾಧಾನವಿರಲಿಲ್ಲ. ಚಿಕ್ಕ ವಯಸ್ಸಿನಿಂದ ಅವರದು ನೈಜ, ಅಪಾರ ದೈವ ಭಕ್ತಿ. ವಡಿವೇಲು ಎಂಬ ಸಂಗೀತ ವಿದ್ವಾಂಸ ಅವರಿಗೆ ಅಚ್ಚು ಮೆಚ್ಚು. ಆದರೆ ಯಾವುದೋ ಕಾರಣದಿಂದ ಅವರಿಗೆ ಅಸಮಾಧಾನವಾಗಿ ಅವನನ್ನು ದೂರ ಮಾಡಿದರು. ಕೆಲವು ದಿನಗಳ ನಂತರ ಅವರ ಆಪ್ತರು ಮಹಾರಾಜರ ಅಸಮಾಧಾನವನ್ನು ಹೋಗಲಾಡಿಸಿದರು. ವಡಿವೇಲುವಿಗೆ ಮತ್ತೆ ರಾಜರ ಸಂದರ್ಶನ ಆಯಿತು. ಆತ ತುಂಬಾ ಸಂತೋಷದಿಂದ, ಮಹಾರಾಜರನ್ನು ಹೊಗಳಿ ಒಂದು ಹಾಡನ್ನು ಬರೆದು ಅದನ್ನು ನೃತ್ಯದಲ್ಲಿ ಅಳವಡಿಸಿ ಪ್ರದರ್ಶನ ಮಾಡಿಸಿದ. ಮಹಾರಾಜರು ಅವನ ವಿದ್ವತ್ತನ್ನು ಮೆಚ್ಚಿದರು ; ಆದರೆ ಆತನಿಗೆ ಹೇಳಿದರು : “ನಿನ್ನ ಹಾಡು ನನ್ನನ್ನು ಹೊಗಳಿದ್ದು ತಪ್ಪು, ದೇವರನ್ನು ಹೊಗಳಬೇಕು. ಅದಕ್ಕಿಂತ ಕಿರಿದಾದ ಉದ್ದೇಶವಿರುವ ಸಂಗೀತ ಒಳ್ಳೆಯ ಸಂಗೀತವಲ್ಲ.” ವಡಿವೇಲು, ತಾನು ಅನೇಕ ಮಹಾರಾಜರನ್ನು ಹೊಗಳಿ ಹಾಡಿದಾಗ ಅವರೆಲ್ಲ ಬಹುಮಾನಗಳನ್ನು ಕೊಟ್ಟರು ಎಂದ. ಮರುದಿನ ಪದ್ಮನಾಭಸ್ವಾಮಿಯನ್ನು ಸ್ತುತಿಸಿ ಸ್ವಾತಿ ತಿರುನಾಳರನ್ನು ಪದ್ಮನಾಭದಾಸ ಎಂದು ಕರೆದ. ಸ್ವಾತಿ ತಿರುನಾಳರಿಗೆ ಸಂತೋಷವಾಯಿತು. ಕಡೆಯ ವರ್ಷಗಳನ್ನಂತೂ ಅವರು ದೇವರ ಧ್ಯಾನ, ಪೂಜೆಗಳಲ್ಲಿ ಕಳೆದರು. ಆದರೂ ಸಂಗೀತವನ್ನು ಎಷ್ಟು ಚೆನ್ನಾಗಿ ಕಲಿತರು, ಎಷ್ಟು ಹಾಡುಗಳನ್ನು ರಚಿಸಿದರು ಎಂದು ಸ್ಮರಿಸಿದಾಗ ಬೆರಗಾಗುತ್ತೇವೆ. ಇಷ್ಟಲ್ಲದೆ ಎಷ್ಟು ಮಂದಿ ಕಲಾವಿದರಿಗೆ ಆಶ್ರಯವಾಗಿ ನಿಂತ ಹಿರಿಯರು ಇವರು ! ಅವರನ್ನೆಲ್ಲ ಭಾರತ ಸಂಸ್ಕೃತಿಗೆ ಉಳಿಸಿಕೊಟ್ಟರು ಎನ್ನಬಹುದು. ಹೀಗೆ, ಮೂವತ್ತನಾಲ್ಕು ವರ್ಷ ತುಂಬುವುದರಲ್ಲೇ ತೀರಿಕೊಂಡರೂ ಭಾರತದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ ಹಿರಿಯ ಚೇತನ ಸ್ವಾತಿ ತಿರುನಾಳರು.