ಆನಂದಕಂದರು ಧಾರವಾಡ ಬಿಟ್ಟು ಬೆಂಗಳೂರಿಗೆ ಹೋಗುವ ಸಂದರ್ಭ ಬಂದಿತು. ಆನಂದಕಂದರಿಗೆ ಕನ್ನಡದ ಖ್ಯಾತ ಕಾದಂಬರಿಕಾರರಾಗಿದ್ದ ದೇವುಡು ಅವರ ಸಂಪರ್ಕ ಮೊದಲೇ ಬಂದಿದ್ದು, ಇವರು ಬೆಂಗಳೂರಿಗೆ ಹೋಗಿ ಆರ್ಯವಿದ್ಯಾಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಮುಂದುವರಿಸಿದರು. ಬೆಂಗಳೂರಿಗೆ ಬಂದ ಮೇಲೆ ಇಲ್ಲಿಯೂ ಪತ್ರಿಕಾ ಸಂಪರ್ಕ ಒದಗಿ ಬಂತು. ‘ಜನಜೀವನ’ ಎಂಬ ದಿನಪತ್ರಿಕೆಯ ಸಂಪಾದಕರಾದ ಅಶ್ವತ್ಥ ನಾರಾಯಣರ ಪರಿಚಯವಾಗಿ ಈ ಪತ್ರಿಕೆಯ ಸಂಬಂಧವನ್ನು ಇರಿಸಿಕೊಂಡಿದ್ದರು. ಈ ಪತ್ರಿಕೆಗೆ ಅನೇಕ ಲೇಖನಗಳನ್ನು ಬರೆದರು.

ಆನಂದಕಂದರು ಕೆಲವೇ ದಿನಗಳಲ್ಲಿ ಇಲ್ಲಿಯ ಶಿಕ್ಷಕ ವೃತ್ತಿಗೂ ಶರಣು ಹೊಡೆಯುವ ಪ್ರಸಂಗವೊಂದು ಒದಗಿ ಬಂತು. ಆಗಿನ ಮೈಸೂರು ಸಂಸ್ಥಾನದ ಸಂಪ್ರದಾಯದಂತೆ ಅಲ್ಲಿಯ ವಿಶಿಷ್ಟ ವೇಷಭೂಷಣವನ್ನು ತೊಡಬೇಕಾಗಿತ್ತು. ಶಾಲೆಯ ಸಭೆಗೆ ಬರುವಾಗ ಕಡ್ಡಾಯವಾಗಿ ಮೈಸೂರು ಪೇಟವನ್ನು ಧರಿಸಲೇಬೇಕಿತ್ತು. ಆನಂದಕಂದರ ಬರಿತಲೆಯನ್ನು ಕಂಡ ಶಾಲಾ ಸಮಿತಿಯ ವ್ಯವಸ್ಥಾಪಕರು, ಪೇಟ ಧರಿಸಲು ಲೇಖಿ ಆಜ್ಞೆ ಮಾಡಿದರು. ಆನಂದಕಂದರ ಸ್ವಾಭಿಮಾನಕ್ಕೆ ಇದೊಂದು ಆಹ್ವಾನವಾಗಿತ್ತು. “ಬರೀ ತಲೆಯಿಂದ ಬರುವುದು ನನ್ನ ವ್ರತ. ನಾನು ಪೇಟ ಧರಿಸಲಾರೆ” ಎಂದು ಆನಂದಕಂದರು ಹಾಗೇ ಸಭೆಗೆ ಹೋದರು. ಈ ಮಾತು ಹಟಕ್ಕೆ ಬಿದ್ದು, ಆಡಳಿತ ಮಂಡಳಿ ನಿಷ್ಠುರವಾದಾಗ, ಆನಂದಕಂದರು ತಮ್ಮ ನೌಕರಿಯ ಮೇಲೆ ನೀರು ಬಿಟ್ಟು ಧಾರವಾಡದ ದಾರಿ ಹಿಡಿದರು.

ಆನಂದಕಂದರು  ತಮ್ಮ ಶಿಕ್ಷಕ ವೃತ್ತಿಗೆ ರಾಜೀನಾಮೆಯಿತ್ತು ಆ ಶಾಲೆಯಿಂದ ಹೊರಬಿದ್ದುದು ಮಹತ್ವವಲ್ಲ. ಅವರು ತಮ್ಮ ರಾಜೀನಾಮೆಯಲ್ಲಿ “ಈ ಬಗೆಯ ಅಸಂಸ್ಕೃತ ವಾತಾವರಣದಲ್ಲಿ ನಾನು ಇರುವುದೆಂದರೆ ನನಗೆ ಅಪಮಾನವೆನಿಸುತ್ತದೆ.” ಎಂದು ಬರೆದಿದ್ದರು. ಆನಂದಕಂದರ ಈ ಮಾತಿನಿಂದ ಇವರ ಮೇಲೆ ಮಾನಹಾನಿ ಮೊಕದ್ದಮೆ ಹಾಕುವಂತೆ ಭಯಪಡಿಸಿದ್ದರು. ಸ್ವಾಭಿಮಾನಿಗಳಾದ ಆನಂದಕಂದರು ಈ ಬೆದರಿಕೆಗೆ ಸೊಪ್ಪು ಹಾಕುವವರಾಗಿರಲಿಲ್ಲ. ಅಲ್ಲಿಯ ಅಂದಿನ ಸಂಸ್ಥಾನೀ ವಾತಾವರಣದಲ್ಲಿ ಸ್ವಾತಂತ್ಯ್ರಕ್ಕಿಂತ ಸಂಪ್ರದಾಯವೇ ಪ್ರಧಾನ್ಮತೆ ಪಡೆದಿದ್ದು ಆನಂದಕಂದರಿಗೆ ಸಹಿಸಿರಲಿಲ್ಲ.