ನಮ್ಮ ಹೊಸ ಪ್ರಪಂಚದ ಪ್ರಶ್ನೆಗಳಿಗೆ ಉತ್ತರಕೊಟ್ಟು ಬಾಳುವಷ್ಟು ಜೀವಾಳವು ಪುರಾತನವಾದ ಹಿಂದೂಮತದಲ್ಲಿರುವುದೇ?

ಪಾಶ್ಚಾತ್ಯರ ವಿದ್ಯೆ ಚಮತ್ಕಾರಗಳೆದುರಿಗೆ ತಲೆಯೆತ್ತಿ ನಿಲ್ಲುವಷ್ಟರ ಬೆನ್ನು ಮೂಳೆಯು ಆ ಆರ್ಷ ಸಂಸ್ಕೃತಿಗಿರುವುದೆ?

ತರಂಗ ತರಂಗವಾಗಿ ಬರುತ್ತಿರುವ ವೈಜ್ಞಾನಿಕ ಶಕ್ತಿಗಳ ಪ್ರವಾಹದಿಂದ ಮುಳುಗದೆ, ಕದಲದೆ ಉಳಿಯಲು ಬೇಕಾದ ಸತ್ವೋನ್ನತಿಯು ವೇದ ವೇದಾಂತಗಳಲ್ಲಿರುವುದೆ?

ನಲವತ್ತು ವರ್ಷಗಳ ಹಿಂದೆ ಪ್ರಪಂಚವು ಈ ಪ್ರಶ್ನೆಯನ್ನು ಕೇಳುತ್ತಿತ್ತು, ಹಿಂದೂ ಲೋಕವೂ ಕೇಳುತ್ತಿತ್ತು. ಆಗ ಆ ಪ್ರಶ್ನೆಯನ್ನು ಧೈರ್ಯದಿಂದ ದಿಟ್ಟಿಸಿ ನೋಡಿ ಅದಕ್ಕೆ ಹೌದು, ಉಂಟು ಎಂದು ಘಂಟಾಘೋಷವಾಗಿ ಪ್ರಪಂಚವೆಲ್ಲವೂ ಕೇಳುವಂತೆ ಪ್ರತ್ಯುತ್ತರ ಕೊಡಲು ಶ್ರೀ ವಿವೇಕಾನಂದ ಸ್ವಾಮಿಗಳವರು ಎದ್ದು ನಿಲ್ಲದೆ ಹೋಗಿದ್ದರೆ, ಹಿಂದೂ ಸಮಾಜವು ಇಂದು ಈಗಿನಷ್ಟಾದರೂ ನೂತನ ಚೇತನವನ್ನು ತೋರುವುದಕ್ಕೆ ಪ್ರತಿಯಾಗಿ ಮತ್ತಷ್ಟು ಕೆಳಗುಂದಿರುತ್ತಿತ್ತೆಂಬುದಕ್ಕೆ ಸಂಶಯವಿಲ್ಲ. ಲೋಕದಲ್ಲಿ ಯಾರ ಬಲವೂ – ಒಂದು ಪ್ರಾಣಿಯದೇ ಆಗಲಿ, ಒಂದು ಸಮಾಜದ್ದೇ ಆಗಲಿ – ಒಂದು ಕ್ಷಣವಿದ್ದಂತೆ ಮರುಕ್ಷಣವಿರಲಾರದು. ಬಲವು ಹೆಚ್ಚುತ್ತಿರಬೇಕು, ಇಲ್ಲವೆ ತಗ್ಗುತ್ತಿರಬೇಕು. ವಿವೇಕಾನಂದರ ಕಾಲಕ್ಕೆ ಹಿಂದೆ ಒಂದು ಮಹಾಶಂಕೆ – ಒಂದು ಮರಣಭೀತಿ – ಹಿಂದೂ ಸಮಾಜದ ಎದೆಗೆ ತಟ್ಟಿತ್ತು. ಅವರು ಆ ಭಯಕ್ಕೆ ಕಾರಣವಿಲ್ಲವೆಂದು ಭರವಸೆ ತೋರಿ, ಸಮಾಜದ ಆತ್ಮಶ್ರದ್ಧೆಯನ್ನು ಮರಳಿ ಬದುಕಿಸಿ, ಅದರ ಬಲೋತ್ಕರ್ಷಕ್ಕೆ ದಾರಿಮಾಡಿ, ಅದರ ಆಯುರೇಖೆಯನ್ನು ವಿಸ್ತಾರಪಡಿಸಿದರು.

ಹೀಗೆ ಸ್ವಮತ ಸಮಾಜಕ್ಕೆ ಆಯುರ್ದಾನಮಾಡುವ ಮಹಾಕಾರ್ಯದ ಉಪಾಂಗವಾಗಿ ಇತರ ಮತಗಳಿಗೂ ಅವರಿಂದ ಒಂದು ಉಪಕಾರ ನಡೆಯಿತು: ತಮ್ಮ ವೈದಿಕ ಪರಪಂಥಿಯು ಸತ್ತವನೆಂದು ಇತರ ಮತಗಳು ತಿಳಿಯಲಾಗದು. ಆ ಇತರ ಮತಗಳು ವಿಚಾರಮಾಡಬೇಕಾದ ಪ್ರಶ್ನೆಗಳೂ ಕಲಿಯಬೇಕಾದ ತತ್ತ್ವಗಳೂ ಇನ್ನೂ ಎಷ್ಟೋ ಇವೆ. ಈ ಭಾಗದಲ್ಲಿ ಅವುಗಳಿಗೆ ಹಿಂದೂ ಮತದಿಂದ ಸಹಾಯ ದೊರೆತೀತು – ಹೀಗೆಂದು ವಿವೇಕಾನಂದರು ಅನ್ಯಮತಗಳಿಗೂ ಎಚ್ಚರಿಕೆ ಕೊಟ್ಟು, ಅವುಗಳ ಆತ್ಮಪರಿಶೋಧನೆಗೆ ದಾರಿತೋರಿದರು.

ವೇದವೇದಾಂತದ ಕೊಂಡಾಟದಿಂದಲೆ ತೃಪ್ತರಾದ ಮತಾಭಿಮಾನಿ ಅವರಲ್ಲ. ವೈದಿಕ ತತ್ತ್ವಗಳು ಮೇರುಪರ್ವತದಂತಿದ್ದರೇನು ; ವೇದಮಾರ್ಗಿಗಳೆಂದು ಹೇಳಿಕೊಳ್ಳುವವವರ ಜೋವನವು ಪಾಚಿ ಬೆಳೆದ ಹಳ್ಳದ ನೀರಿನಂತಿರುವವರೆಗೂ ಅವರಿಗೆ ಉಳಿಗಾಲವಿಲ್ಲವೆಂಬುದನ್ನು ವಿವೇಕಾನಂದರು ಮರೆಯಲಿಲ್ಲ. ಮರೆಮಾಚಲಿಲ್ಲ. ಹಿಂದೂ ಸಮಾಜದ ಮೈಮೇಲೆ ಸಾವಿರಾರು ವರ್ಷಗಳ ವ್ಯಾಘಾತ ಚೇಷ್ಟಿತಗಳಿಂದ ಎಷ್ಟೋ ಗಂತಿಗಳೂ ಗೂನುಗಳೂ ಕಾಣಿಸಿಕೊಂಡಿವೆ; ಎಷ್ಟೋ ಧೂಳೂ ಕೊಳೆಯೂ ಕವಿದುಕೊಂಡಿದೆ. ಈ ವಿಚಾರಗಳನ್ನೆಲ್ಲ ಅದು ಪುರಾತನ ಸಂಪತ್ತೆಂದು ಭ್ರಮಿಸಿ, ಆದರಿಸಿ ಅಪ್ಪಿಕೊಂಡಿದೆ. ಇದೇ ಅವಸ್ಥೆಯಲ್ಲಿಯೇ ಅದು ಇನ್ನೂ ಕುಳಿತಿರುವುದಾದರೆ ಅದರ ಆರೋಗ್ಯವು ಮತ್ತೂ ಕೆಟ್ಟು ಅನುಕ್ರಮದಲ್ಲಿ ಅದು ತಾನಾಗಿ ನಶಿಸಬೇಕಾಗುವುದು. ಹಿಂದೂ ಸಮಾಜವು ತನ್ನ ತಮೋನಿದ್ರೆಯಿಂದ ಏಳಬೇಕು: ಕಣ್ದೆರೆದು ಸುತ್ತುಮುತ್ತಲಿನ ಪ್ರಪಂಚವನ್ನು ನೋಡಬೇಕು; ಕೈಕಾಲುಗಳನ್ನು ಕೊಡಹಿ ಓಡಾಡಬೇಕು; ಜಡತೆಯೇ ಶಾಂತಿಯೆಂಬುದನ್ನೂ ಜೀರ್ಣತೆಯೇ ಪೂಜ್ಯತೆಯೆಂಬುದನ್ನೂ ಬಿಡಬೇಕು; ಕೊಳಕು ಹುಣ್ಣುಗಳನ್ನು ತೊಳೆಯಬೇಕು; ಮಣಕು ಬೊಂತೆಗಳನ್ನು ಬಿಸಾಡಬೇಕು; ಕಿಟಕಿ ಬಾಗಿಲುಗಳನ್ನು ತೆರೆದು ಹೊರಗಿನ ಹೊಸ ಗಾಳಿ ಬೆಳಕುಗಳನ್ನು ತನ್ನ ಮನೆಯೊಳಕ್ಕೆ ಬರಮಾಡಿಕೊಳ್ಳಬೇಕು. ಇದು ಸಾರ್ಥಕವಾಗುವ ಬದುಕಿಗೆ ದಾರಿ. ಹೀಗೆಂದು ಸಾರಿ ಸಮಾಜ ಸುಧಾರಣೆಗಳ ಆವಶ್ಯಕತೆಯನ್ನು ತೋರಿಸಿಕೊಡಲು ವಿವೇಕಾನಂದರವರು ಸ್ವಲ್ಪವೂ ಹಿಂಜರಿದವರಲ್ಲ. ಸ್ವಧರ್ಮದ ಶ್ರೇಷ್ಠತೆಯನ್ನು ಪ್ರಕಾಶಪಡಿಸಲು ಉತ್ಸಾಹಿಗಳಾಗಿದ್ದಂತೆ ಸ್ವಸಮಾಜದ ದೋಷದೌರ್ಬಲ್ಯಗಳನ್ನು ತೋರಿಸಿ ಕೊಡುವುದಕ್ಕೂ ಅವರು ಮುಂದಾಳಾಗಿದ್ದರು.

ಈ ಮುಮ್ಮೊಗದ ಕೆಲಸಕ್ಕೆ ಬೇಕಾಗಿದ್ದ ಯೋಗ್ಯತೆ ಸಂಸ್ಕೃತ ಪಾಂಡಿತ್ಯ ಮಾತ್ರವಲ್ಲ, ಇಂಗ್ಲಿಷ್ ವಾಗ್ಮಿತೆ ಮಾತ್ರವಲ್ಲ, ಧರ್ಮಾಭಿಮಾನ ಮಾತ್ರವಲ್ಲ. ಈ ಶಕ್ತಿಗಳೆಲ್ಲವೂ ಬೇಕಿದ್ದುವು; ಅವುಗಳ ಜೊತೆಗೆ ಇನ್ನೂ ಕೆಲವು ಅಧಿಕಾರಗಳು ಅವಶ್ಯ ವಿದ್ದುವು. ಅವುಗಳಲ್ಲೆಲ್ಲಾ ದೊಡ್ಡದು ಧರ್ಮಮೂಲದ ನಿಶ್ಚಯಜ್ಞಾನ ಮತ್ತು ಅಂಥಾ ನಿಶ್ಚಯಜ್ಞಾನದೊಡನೆ ಬರುವ ಗಂಡೆದೆಯ ಧೈರ್ಯ. ಸ್ವಾಮಿ ವಿವೇಕಾನಂದರು ಸ್ವಾಭಾವಿಕವಾಗಿ ಅದ್ಭುತ ಪ್ರತಿಭಾಸಂಪನ್ನರು. ಅವರ ಬುದ್ಧಿ ವಿದ್ಯುದ್ವೇಗದಿಂದ ಸಂಚಾರ ಮಾಡತಕ್ಕದ್ದು; ಅದು ಒಮ್ಮೆ ಲೀಲೆಯಿಂದ ಸಮುದ್ರ ತಳಕ್ಕೆ ಧುಮುಕುವುದು; ಇನ್ನೊಮ್ಮೆ ಪಕ್ಷಿಯಂತೆ ಗಿರಿಶಿಖರಕ್ಕೆ ಹಾರುವುದು; ಮತ್ತೊಮ್ಮೆ ಹುಲ್ಲುಗಾವಲಿನ ಮೇಲೆ ಮಂದಮಾರುತದಂತೆ ಸುಳಿದಾಡುವುದು. ಒಂದು ತೀಕ್ಷ್ಣತೆ, ಒಂದು ಲಘುತೆ, ಒಂದು ಆವೇಶ, ಒಂದು ವಿಲಾಸ – ಇವು ಆ ಬುದ್ಧಿಯ ಗುಣಗಳು. ಅವರು ಸಂಸ್ಕೃತದಲ್ಲಿ ವ್ಯಾಕರಣ ತರ್ಕಶಾಸ್ತ್ರಗಳನ್ನು ಸಾಂಗವಾಗಿ ಅಭ್ಯಾಸ ಮಾಡಿದ್ದರು. ಹಾಗೆಯೇ ಇಂಗ್ಲೀಷಿನಲ್ಲಿ ಕಾವ್ಯ ಇತಿಹಾಸಗಳನ್ನೂ ವಿಜ್ಞಾನಶಾಸ್ತ್ರ ತತ್ತ್ವಮೀಮಾಂಸೆಗಳನ್ನೂ ವಿಸ್ತಾರವಾಗಿ ಪರಾಮರ್ಶಿಸಿ ಸ್ವಾಧೀನಪಡಿಸಿಕೊಂಡಿದ್ದರು. ಈ ಉಭಯ ವಿದ್ಯಾಪ್ರಾವೀಣ್ಯಕ್ಕೆ ಅನುರೂಪವಾದ ವಾಗ್ಧೋರಣೆ, ತದನುಗುಣವಾದ ಉತ್ತಾಲಧ್ವನಿ, ಉನ್ನತವಾದ ವರ್ಚಸ್ವಿಯಾದ ಗಂಭೀರಾಕಾರ, ಸಕಲ ಜನಮನೋಗ್ರಾಹಿಯಾದ ಹಾಸ್ಯ ವಿನೋದ ರಸಿಕತೆ, ಹೃದಯವಿದ್ರಾವಕವಾದ ಗಾನಮಾಧುರ್ಯ – ಇವೆಲ್ಲವೂ ಅವರಲ್ಲಿ ಸಮ್ಮಿಳಿತವಾಗಿದ್ದುವು. ಈ ನಾನಾಗುಣಶಕ್ತಿಗಳಿಗೆ ಕಿರೀಟಪ್ರಾಯವಾಗಿದ್ದುದು ಶ್ರೀರಾಮಕೃಷ್ಣ ಪರಮಹಂಸ ಗುರುಗಳ ಅನುಗ್ರಹ.

ಪರಮಹಂಸರವರು ಬ್ರಹ್ಮ ಸಾಕ್ಷಾತ್ಕಾರವನ್ನು ಪಡೆದಿದ್ದ ಮಹಾಮಹಿಮರು, ಜೀವನ್ಮುಕ್ತರು, ದಿವ್ಯದೃಷ್ಟಿಸಂಪನ್ನರು. ಇವರ ಪ್ರಸಾದದಿಂದ ಜೀವಸ್ವರೂಪ, ಭಗವತ್ಸ್ವರೂಪ, ಧರ್ಮಮೂಲಸ್ವರೂಪ – ಈ ರಹಸ್ಯಗಳು ವಿವೇಕಾನಂದರವರಿಗೆ ಕರತಲಾಮಲಕವಾಗಿದ್ದುವು. ವೇದಾಂತವು ಅವರಿಗೆ ಹೊರಗಿನಿಂದ ತೊಡುವ ಅಂಗರೇಖೆಯಾಗಲಿಲ್ಲ; ಒಳಗೇ ಸಂತತವಾಗಿ ಚಲಿಸುವ ಶ್ವಾಸವಾಯುವಾಯಿತು. ಜೀವನ ನಾನಾ ಅವಸ್ಥೆಗಳು, ಜೀವ ಜಗತ್ತುಗಳ ಸಂಬಂಧಗಳು, ಜೀವಕ್ಕೆ ಆಗಬೇಕಾದ ನಾನಾ ಸಂಸ್ಕಾರಗಳು – ಈ ಸೂಕ್ಷ್ಮಗಳು ಸಕಲ ಮತಧರ್ಮಗಳಿಗೂ ಮೂಲಭೂತವಾದ ವಿಚಾರಗಳು. ಇವುಗಳನ್ನು ಕುರಿತ ನಿಸ್ಸಂಶಯ ಜ್ಞಾನವು ವಿವೇಕಾನಂದರಿಗೆ ಗುರುಗಳು ಕರುಣಿಸಿದ್ದ ಆತ್ಮ ಸಾಕ್ಷಾತ್ಕಾರಬಲದಿಂದ ಫಲಿಸಿತ್ತು. ವಿವೇಕಾನಂದರ ಲೋಕಬೋಧನೆಯು ಗ್ರಂಥಭಂಡಾರದಿಂದ ಹೊರಟುದಲ್ಲ, ಶ್ರವಣ ಪರಿಚಯದಿಂದ ಬಂದುದು; ಅದು ಅವರ ಆಂತರಿಕಾನುಭವದಿಂದ – ಅವರ ಅಂತರಾತ್ಮ ವಿಕಸನದಿಂದ – ಗಿಡದಿಂದ ಹೂವು ಹುಟ್ಟುವಂತೆ ತಾನಾಗಿ ಹುಟ್ಟಿಬಂದುದು. ಆದುದರಿಂದಲೇ ಅದರಲ್ಲಿ ಒಂದು ಜೀವಧ್ವನಿ, ಒಂದು ಜೀವೋತ್ತೇಜಕ ಪ್ರಭೆ, ಒಂದು ಜೀವನೋಪಯುಕ್ತ ಶಕ್ತಿ – ಇವು ತುಂಬಿವೆ.

ವಿವೇಕಾನಂದರು ಸಂನ್ಯಾಸಿಯಾದರೂ ಜೀವವನ್ನು ತುಚ್ಛವೆಂದೆಣಿಸಿದವರಲ್ಲ. ಈ ಜಗತ್ತು ಭಗವಂತನದು; ಇದರ ಜೀವನವು ಭಗವಂತನದು; ಆದಕಾರಣ ಬದುಕಿನ ವಿಷಯದಲ್ಲಿ ನಮಗೆ ಆದರ ಗೌರವಗಳಿರಬೇಕು; ಬದುಕು ಕೆಡುಕೆನ್ನದಿರಿ; ಪೌರುಷದಿಂದ ಬದುಕಿರಿ, ತೇಜಸ್ಸಿನಿಂದ ಬದುಕಿರಿ, ನಗುಮುಖದಿಂದ ಬದುಕಿರಿ – ಹೀಗೆಂಬ ಜೀವನೋತ್ಸಾಹವು ವಿವೇಕಾನಂದರ ಭೇರಿಯಿಂದ ಧ್ವನಿತವಾಗುತ್ತಿದೆ.

ಇಂಥ ಮಹಾನುಭಾವರ ಜೀವಿತದ ಚಿತ್ರವನ್ನು ನಮ್ಮ ಶ್ರೀಮಾನ್ ಪುಟ್ಟಪ್ಪನವರು ಈ ಪುಸ್ತಕದಲ್ಲಿ ಚಿತ್ರಿಸಿರುವುದು. ಅವರದು ಕವಿಸಹಜವಾದ ವಾಣಿ. ಅವರ ಭಾವಪ್ರಪಂಚದಲ್ಲಿಯ ಭಕ್ತಿಗೋಪುರಗಳೂ, ಅಲ್ಲಿಯ ಉತ್ಸಾಹ ಪ್ರವಾಹದ ತರಂಗಮಾಲೆಗಳೂ, ಅಲ್ಲಿಯ ಸೂರ್ಯೋದಯದ ಸ್ವರ್ಣಾರುಣ ರಾಗಚ್ಛಾಯೆಗಳೂ ಈ ವಾಣಿಯಲ್ಲಿ ಮೂರ್ತೀಭವಿಸಿವೆ. ಅವರ ಇತರ ಕೃತಿಗಳಿಂದ ಕನ್ನಡಿಗರು ಸಂತುಷ್ಟರಾಗಿರುವಂತೆ ಇದರಿಂದಲೂ ಸಂತೋಷಿಸುವರೆಂದು ಹೇಳಬೇಕಾಗಿಲ್ಲ. ಅವರ ಲೇಖಣಿಯು ಎಂದಿಗೂ ಉಡುಗದಿರಲಿ; ಅದರ ಮಸಿಯು ಎಂದಿಗೂ ಮಾಸದಿರಲಿ.

ಡಿ.ವಿ. ಗುಂಡಪ್ಪ
೧೯೩೨