ಆ ಸಾಗರ ಮಹಾಯಾತ್ರೆ, ನಿಜವಾಗಿಯೂ ವಿಸ್ಮಯಗೊಳಿಸುವ ಒಂದು ಪ್ರಚಂಡ ಸಾಹಸವಾಗಿತ್ತು. ಅದರಲ್ಲಿ ವಿವೇಕಕ್ಕಿಂತಲೂ ಹೆಚ್ಚಾಗಿ ಧೂರ್ತತೆಯಿತ್ತೆಂದರೂ ತಪ್ಪಾಗುವುದಿಲ್ಲ. ತರುಣ ಸಂನ್ಯಾಸಿ ಕಣ್ಣು ಮುಚ್ಚಿಕೊಂಡು ಮುಂದೆ ನುಗ್ಗಿದ್ದನು. ಅಮೆರಿಕಾದಲ್ಲಿ ಮತಸಮ್ಮೇಳನವೊಂದು ನಡೆಯುತ್ತದೆ ಎಂದು ಕೇಳಿದ್ದನು. ಯಾವಾಗ? ಎಲ್ಲಿ? ಅದಕ್ಕೆ ಪ್ರತಿನಿಧಿಯಾಗಿ ಹೋಗಬೇಕಾದರೆ ನಿಯತ ವಿಧಾನವಿದೆಯೆ? ಎಂಬ ವಿಚಾರಗಳನ್ನು ನಿಷ್ಕೃಷ್ಟವಾಗಿ ತಿಳಿದುಕೊಳ್ಳಲು ಆತನ ಸಾಮಾನ್ಯ ಮಿತ್ರರಾಗಲಿ, ಪಂಡಿತರಾಗಲಿ, ರಾಜಮಿತ್ರರುಗಳಾಗಲಿ ಯಾರೊಬ್ಬರೂ ಪ್ರಯತ್ನಿಸಿರಲಿಲ್ಲ. ರಾಮಾಯಣದಲ್ಲಿ ರಾಮನು ಹನುಮಂತನನ್ನು ಕಳುಹಿಸಿದಂತೆ ಸರ್ವರೂ – ಹೋಗುವವನೂ ಕಳುಹಿಸುವವರೂ – ಸಂಪೂರ್ಣವಾಗಿ ಪೌರಾಣಿಕವಾಗಿಯೆ ನಡೆದುಕೊಂಡಿದ್ದರು! ಕಡೆಗೆ ಒಂದು ಪರಿಚಯ ಪತ್ರವನ್ನು ಕೂಡ ತೆಗೆದುಕೊಂಡು ಹೋಗಿರಲಿಲ್ಲ. ತಾನಲ್ಲಿಗೆ ಹೋಗಿ ಕಾಣಿಸಿಕೊಂಡರೆ ಸಾಕು ಎಲ್ಲ ಸರಿಹೋಗುತ್ತದೆ ಎಂಬ ಸಂಪೂರ್ಣ ನಿರ್ಭರತೆಯಿಂದ ಮುಂದುವರಿದಂತಿತ್ತು ಆ ದುರ್ದಮ್ಯ ಸಂನ್ಯಾಸಿ! ಅದಂತಿರಲಿ: ಉಡುಗೆ ತೊಡುಗೆ? ಖೇತ್ರಿಯ ಮಹಾರಾಜರು ನಿವೇದಿಸಿದ್ದ ವಸನಗಳೆಲ್ಲವೂ ಪ್ರಾಚ್ಯ ವೈಭವ ಪ್ರದರ್ಶಕಗಳಾಗಿದ್ದುವೆ ಹೊರತು ಅಮೆರಿಕಾದ ಚಳಿಯಿಂದ ಸ್ವಾಮಿಜಿಯನ್ನು ಕಾಪಾಡಲು ಸಂಪೂರ್ಣವಾಗಿ ಅನರ್ಹವಾಗಿದ್ದುವು! ಪುರಾಣ ಕಥೆಯನ್ನು ಬರೆಯುವ ಕವಿ ತನ್ನ ಕಥಾನಾಯಕನನ್ನು ಇದ್ದಕ್ಕಿಂತಲೂ ಹೆಚ್ಚು ಸಾಹಸ ಗರ್ಭಿತನನ್ನಾಗಿ ಮಾಡಿ ಹೊರಗಟ್ಟಲು ಆಶಿಸುವುದಿಲ್ಲವೆಂದು ತೋರುತ್ತದೆ!

೧೮೯೩ನೆಯ ಮೇ ೩೧ರಲ್ಲಿ ಬೊಂಬಾಯನ್ನು ಬಿಟ್ಟು ಕೊಲಂಬೊ, ಪಿನಾಂಗ್, ಸಿಂಗಪೂರ್, ಹಾಂಕಾಂಗ್, ಕಾಂಟನ್, ನಾಗಸಾಕಿ, ಯಾಕೋಹಾಮ, ಒಸಾಕ, ಟೋಕಿಯೊ ಮೊದಲಾದ ವಿವಿಧ ದೇಶದ, ವಿವಿಧ ಜನಾಂಗದ, ವಿವಿಧ ಸಂಸ್ಕೃತಿಯ ನಾಡುಗಳನ್ನೂ ನಗರಗಳನ್ನೂ ನೋಡಿ ದಾಟಿ, ಬ್ರಿಟಿಷ್ ಕೊಲಂಬಿಯಾದಲ್ಲಿರುವ ವಾಂಕೋವಾರನ್ನು ಸೇರಿದ ವಿವೇಕಾನಂದರು ರೈಲು ಹತ್ತಿ ಮೂರು ದಿನಗಳು ಪ್ರಯಾಣ ಮಾಡಿ ಚಿಕಾಗೊ ನಗರಕ್ಕೆ ಬಂದು ಮುಟ್ಟಿದರು.

ಪಾಶ್ಚಾತ್ಯ ವೈಜ್ಞಾನಿಕ ಯಂತ್ರನಾಗರಿಕತೆಯ ವೈಭವಕ್ಕೆ ಡಂಗು ಬಡಿದು ಅದರ ಮೆರುಗಿಗೆ ಕಣ್ಣು ಕೋರೈಸಿ ಹೋದ ಸ್ವಾಮಿಗಳ ಮನಸ್ಸನ್ನು ಪಾಠಕರೆ ಊಹಿಸಿಕೊಳ್ಳಿ. ಪರಿಚಯವಿಲ್ಲದ ಪರದೇಶ: ಹೋಗುವುದೆಲ್ಲಿಗೆ? ವ್ಯವಹಾರ ವಿಷಯದಲ್ಲಿ ಸಂಪೂರ್ಣವಾಗಿ ಅನಭಿಜ್ಞರಾದ ಅವರನ್ನು ಕೂಲಿಯಾಳುಗಳೆ ಮೊದಲಾದವರು ನಾನಾ ಪ್ರಕಾರವಾದ ಮೋಸಗಳಿಂದ ಸುಲಿಯತೊಡಗಿದರು. ಭಿನ್ನ ಸಂಸ್ಕೃತಿಯ, ಭಿನ್ನ ಭಾಷೆಯ, ಭಿನ್ನ ಮತಧರ್ಮದ, ಭಿನ್ನಾಹಾರದ, ಭಿನ್ನವಸನದ ಜನಗಳ ಮಧ್ಯೆ ಗೈರಿಕವಸನದ ಸಂನ್ಯಾಸಿ ದಂಡಕಮಂಡಲುಧಾರಿಯಾಗಿ ವಿಚಿತ್ರ ವ್ಯಕ್ತಿಯಾದನು. ಕುತೂಹಲಿಗಳಾದ ಜನರು ಸ್ವಾಮಿಜಿಯನ್ನೇ ನೋಡತೊಡಗಿದರು. ಹಾಸ್ಯ ಪರಿಹಾಸ್ಯ ಮಾಡಲು ಹಿಂಜರಿಯಲಿಲ್ಲ. ಕಡೆಗೆ ಅಪರಿಚಿತ ಪ್ರದೇಶದಲ್ಲಿ ಉತ್ತಮರ ಸಂಗವೆ ಲೇಸೆಂದು ಬಗೆದು ಒಂದು ಉತ್ತಮತರ ಶ್ರೇಣಿಯ ಹೋಟಲಿನಲ್ಲಿ ಇಳಿದುಕೊಂಡರು.

ಸರ್ವಧರ್ಮ ಸಮ್ಮೇಳನ ಕೂಡುವುದಕ್ಕೆ ಇನ್ನೂ ಮೂರು ತಿಂಗಳ ಕಾಲ ಅವಧಿ ಇದೆಯೆಂದು ಒಂದೆರಡು ದಿನಗಳಲ್ಲಿಯೇ ಗೊತ್ತಾಯಿತು. ಅಲ್ಲದೆ ಪ್ರತಿನಿಧಿಯಾಗಿ ಬರುವವರು ಪರಿಚಯ ಪತ್ರಗಳೊಡನೆ ಬಂದು ನಿಯಮಾನುಸಾರವಾಗಿ ಸೇರಬೇಕೆಂದೂ ತಿಳಿದುಬಂತು. ಅದರಲ್ಲಿಯೂ ಹಾಗೆ ಪ್ರತಿನಿಧಿಯಾಗಿ ಸೇರಲು ಗೊತ್ತಾದ ಸಮಯವೂ ಕಳೆದುಹೋಗಿದೆಯೆಂದು ಅರಿತ ಮೇಲಂತೂ ಸ್ವಾಮಿಜಿ ಹತಾಶರಾದರು! ಇಷ್ಟರಲ್ಲಿ ಹತ್ತಿರವಿದ್ದ ಹಣವೂ ಸವೆಯುತ್ತ ಬಂತು. ಹೋಟಲಿನವರೂ ಯದ್ವಾತದ್ವಾ ಹಣವನ್ನು ಕೇಳುತ್ತಿದ್ದರು. ಅಲ್ಲಿಯೇ ಇರುವುದಾದರೆ ಇನ್ನು ಹದಿನೈದು ದಿನಗಳಿಗೂ ಹಣ ಸಾಕಾಗುವಂತಿರಲಿಲ್ಲ. ಅಷ್ಟಾದರೂ ಭಗವಾನರ ಮಂಗಳಮಯ ಹಸ್ತ ಸರ್ವದಾ ತಮ್ಮನ್ನು ಪೊರೆಯುವುದೆಂಬುದರಲ್ಲಿ ನಂಬುಗೆ ನಷ್ಟವಾಗಲಿಲ್ಲ. ಆದರೂ ಸ್ವಲ್ಪ ಮಾತ್ರ ಸಂದೇಹದಿಂದ ವ್ಯಾಕುಲಚಿತ್ತರಾದರು. ವಿಚಲಿತ ಹೃದಯದಿಂದ ಕಿಂಕರ್ತವ್ಯಮೂಢರಾಗಿ, ಅನುಭವವಿಲ್ಲದ ಕೆಲವು ಬಿಸಿದಲೆಯ ಹುಡುಗರ ಮಾತು ಕೇಳಿ ತಾನು ಬಂದುದು ತಪ್ಪಾಯಿತೆಂದು ಆಲೋಚಿಸತೊಡಗಿದರು. ಕಡೆಗೆ ಬಹು ದೊಡ್ಡ ನಗರವಾದ ಚಿಕಾಗೊದಲ್ಲಿ ತಮಗೆ ಉಳಿಗತಿಯಿಲ್ಲೆಂದು ತಿಳಿದು, ಸಣ್ಣ ಊರಾಗಿ ಸುಸಂಸ್ಕೃತರಿಂದ ಕೂಡಿದ ಬೋಸ್ಟನ್ನಿಗೆ ರೈಲು ಹತ್ತಿ ಹೊರಟರು.

ಸ್ವಾಮಿಗಳಿಗೆ ಅನೇಕ ಸಮಯಗಳಲ್ಲಿ ಅನಿರೀಕ್ಷಿತವಾದ ದಿಕ್ಕುಗಳಿಂದ ಸಹಾಯ ಬಂದಿತ್ತು. ಇಲ್ಲಿಯೂ ಹಾಗೆಯೇ ಆಯಿತು. ವಿವೇಕಾನಂದರಂತಹವರು ಅಜ್ಞಾತರಾಗಿದ್ದಾಗಲೂ ಕೂಡ ಯಃಕಶ್ಚಿತರಾಗಿರಲಾರರು; ಕಣ್ಣಿಗೆ ಬೀಳದೆ ಹೋಗಲಾರರು. ರೈಲಿನಲ್ಲಿ ಪದ್ಮಾಸನ ಹಾಕಿ ಕುಳಿತ ಅವರು ಚಿಂತಾಮಗ್ನರಾಗಿದ್ದರು. ಹೇಗಾದರೂ ಮಾಡಿ ಅಮೆರಿಕಾ ದೇಶದಲ್ಲಿ ಜಯ ಹೊಂದಬೇಕು. ಅದಾಗದಿದ್ದರೆ ಇಂಗ್ಲೆಂಡಿಗೆ ಹೋಗಿ ಅಲ್ಲಿಯಾದರೂ ಪ್ರಯತ್ನಪಡಬೇಕು. ಅದೂ ಕೂಡ ಆಗದಿದ್ದರೆ ಸ್ವದೇಶಕ್ಕೆ ಹಿಂತಿರುಗಿ ಇನ್ನೊಂದು ಸಾರಿ ಗುರ್ವಾಜ್ಞೆ ದೊರಕುವವರೆಗೂ ಕಾಯಬೇಕು. ಇವೇ ಮೊದಲಾದ ಚಿಂತೆಗಳಲ್ಲಿ ಮುಳುಗಿ ಅಂತರ್ಮುಖಿಯಾಗಿ ಕುಳಿತಿದ್ದರು. ಎದುರಿನಲ್ಲಿ ಕುಳಿತಿದ್ದ ಒಬ್ಬ ಭದ್ರಮಹಿಳೆ ಸ್ವಾಮಿಜಿಯ ಅದ್ಭುತ ಪೋಷಾಕು, ಅಲೌಕಿಕ ತೇಜಸ್ಸು, ಅಪೂರ್ವ ಗಾಂಭೀರ್ಯ, ಅದೃಷ್ಟಪೂರ್ವ ಪ್ರಶಾಂತ ಮುಖಮುದ್ರೆ ಇವುಗಳನ್ನು ನೋಡಿ ಕುತೂಹಲದಿಂದ ಮಾತಾಡಿಸಿದಳು. ವ್ಯಕ್ತಿ ಪ್ರಾಚ್ಯದೇಶದ ಸಂನ್ಯಾಸಿಯೆಂದೂ ಧರ್ಮಪ್ರಚಾರಕ್ಕಾಗಿ ಅಮೆರಿಕಾಕ್ಕೆ ಬಂದಿರುವನೆಂದೂ ಎಲ್ಲ ವಿಷಯಗಳನ್ನೂ ತಿಳಿದ ಮೇಲೆ ಆಕೆ ತನ್ನ ಮನೆಗೆ ಬರುವಂತ ಸ್ವಾಮಿಜಿಗೆ ಆಹ್ವಾನವಿತ್ತಳು. ಅವರು ಆ ಘಟನೆಯಲ್ಲಿ ಗುರುದೇವನ ಕೃಪಾಹಸ್ತವನ್ನು ಕಂಡು ಒಪ್ಪಿದರು.

ಆ ಭದ್ರಮಹಿಳೆ ಸ್ವಾಮಿಜಿಯನ್ನು ಬೋಸ್ಟನ್ನಿನಲ್ಲಿದ್ದ ತನ್ನ ಸುಂದರ ಭವನಕ್ಕೆ ಕರೆದೊಯ್ದಳು. ಅಲ್ಲಿಂದ ತಮ್ಮ ಶಿಷ್ಯರೊಬ್ಬರಿಗೆ ಬರೆದ ಕಾಗದದಲ್ಲಿ ಅವರು ಹೀಗೆಂದು ಬರೆದಿದ್ದಾರೆ:‌

“ಇಲ್ಲಿಗೆ ಬರುವ ಮೊದಲು ನನಗಿದ್ದ ಹೊಂಗನಸುಗಳೆಲ್ಲ ಸಿಡಿದೊಡೆದು ಹೋಗಿರುತ್ತದೆ. ಎಡರುಗಳೊಡನೆ ಹೊಡೆದಾಡುತ್ತಿದ್ದೇನೆ. ಎಷ್ಟೋ ಸಾರಿ ಈ ದೇಶದಿಂದ ಹೊರಟುಹೋಗಲೇ ಎಂದೂ ಯೋಚಿಸುತ್ತಿದ್ದೇನೆ. ಆದರೆ ಮಾರ್ಗ ನನ್ನ ಕಣ್ಣಿಗೆ ಕಾಣಿಸದಿರಬಹುದು; ಶ್ರೀಗುರುದೇವನಿಗೆ ಅದು ಮರೆಯಾಗಿದೆಯೆ? ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ’. ಸೊಂಟಕಟ್ಟಿ ನಿಲ್ಲಬೇಕು. ವತ್ಸ, ಈಶ್ವರನು ನನ್ನನ್ನಿಲ್ಲಿಗೆ ಕರೆತಂದಿದ್ದಾನೆ. ಎಷ್ಟೋ ಕಷ್ಟ ಪರಂಪರೆಗಳಿಂದ ಪಾರಾಗಿ ಬಂದಿದ್ದೇನೆ. ನಿಕಟಬಂಧುಗಳು ನಿರಾಶರಾಗಿ ಮಡಿದುದನ್ನು ಸಹಿಸಿದ್ದೇನೆ. ಹಾಸ್ಯ ಪರಿಹಾಸ್ಯಗಳನ್ನು ಸಹಿಸಿದ್ದೇನೆ. ವತ್ಸ, ಪ್ರಪಂಚ ಒಂದು ಶಿಕ್ಷಾರಂಗ; ಇಲ್ಲಿ ತಾಳ್ಮೆ, ಸಹಾನುಭೂತಿ, ದೃಢತೆಗಳನ್ನು ಅಭ್ಯಾಸ ಮಾಡಬಹುದು. ಸತ್ತರೂ ಸಾಧನೆಯಲ್ಲಿಯೆ ಸಾಯುತ್ತೇನೆ.”

ಇದುವರೆಗೂ ವಿಘ್ನಗಳೊಡನೆ ಸಂಗ್ರಾಮ ಮಾಡದೆ ಯಾರೂ ಯಾವ ಮಹಾಕಾರ್ಯವನ್ನೂ ಸಾಧಿಸಿಲ್ಲ.

ದೇಶದ ವಾಯುಗುಣಕ್ಕೆ ಅನುಸಾರವಾಗಿ ಸ್ವಾಮಿಜಿ ಆ ಮಹಿಳೆಯ ಸೂಚನೆಯಂತೆ ತಮ್ಮ ಉಡುಪನ್ನು ಬದಲಾಯಿಸಿಕೊಂಡರು. ದಿನದಿನವೂ ತಮ್ಮಲ್ಲಿಗೆ ಬರುತ್ತಿರುವವರೊಡನೆ ಮಾತಾಡಿ ಆ ದೇಶದ ವಿಷಯಗಳನ್ನು ಸಂಗ್ರಹಿಸುತ್ತಿದ್ದರು.

ಆ ಭದ್ರಮಹಿಳೆ ಹಾರ್‌ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಗ್ರೀಕ್ ಭಾಷೆಯ ಪ್ರಸಿದ್ಧ ಅಧ್ಯಾಪಕರಾಗಿದ್ದ ಜೆ. ಎಚ್. ರೈಟ್ ಎಂಬುವರನ್ನು ಸ್ವಾಮಿಜಿಗೆ ಪರಿಚಯ ಮಾಡಿಕೊಟ್ಟಳು. ಅವರಿಬ್ಬರೂ ನಾಲ್ಕು ಗಂಟೆಗಳ ಕಾಲ ಒಂದು ಕೊಠಡಿಯಲ್ಲಿ ಮಾತಾಡುತ್ತಿದ್ದರು. ರೈಟ್ ಸಾಹೇಬರು ಸ್ವಾಮಿಜಿಯ ವಿದ್ವತ್ತು, ಪ್ರತಿಭೆಗಳನ್ನು ನೋಡಿ ಬೆರಗಾದರು. ಅಲ್ಲದೆ ಸ್ವಾಮಿಜಿ ಸರ್ವಧರ್ಮ ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ಹೋಗಲೇಬೇಕೆಂದೂ ಹೇಳಿದರು. ಸ್ವಾಮಿಜಿ ಅವರೊಡನೆ ನಡೆದ ಕಥೆಯೆಲ್ಲವನ್ನೂ ವಿಶದವಾಗಿ ಹೇಳಿದರು. ರೈಟ್ ಸಾಹೇಬರು ಆಶ್ಚರ್ಯದಿಂದ “ನಿಮ್ಮಿಂದ ಯೋಗ್ಯತಾ ಪತ್ರವನ್ನು ಕೇಳುವುದು, ಹೊಳೆಯುವುದಕ್ಕೆ ನಿನಗೆ ಅಧಿಕಾರವೇನೆಂದು ಸೂರ್ಯನನ್ನು ಕೇಳಿದಂತೆ!” ಎಂದು ಹೇಳಿ ಸ್ವಾಮಿಜಿಯನ್ನು ಧರ್ಮಸಭೆಯಲ್ಲಿ ಹಿಂದೂಧರ್ಮದ ಪ್ರತಿನಿಧಿಯನ್ನಾಗಿ ಮಾಡುವ ಕಾರ್ಯಭಾರವನ್ನು ತಾವೇ ವಹಿಸಿಕೊಂಡರು. ತರುವಾಯ ಧರ್ಮಸಭೆಗೆ ಪ್ರತಿನಿಧಿಗಳನ್ನು ಚುನಾಯಿಸುವ ಸಮಿತಿಗೆ ಅಧ್ಯಕ್ಷರಾಗಿದ್ದ ತಮ್ಮ ಸ್ನೇಹಿತರಿಗೆ ಒಂದು ಪರಿಚಯ ಪತ್ರವನ್ನು ಬರೆದು ಸ್ವಾಮಿಗಳ ಕೈಗೆ ಕೊಟ್ಟರು. ಆ ಪತ್ರದ ಕೊನೆಯ ಪಂಕ್ತಿ “ನಮ್ಮ ವಿದ್ವಾಂಸರೆಲ್ಲರನ್ನೂ ಮೂಟೆಕಟ್ಟಿದರೂ ಮೀರಿ ತೂಗುವ ಪುರುಷನೀತನು!” ಎಂದಿತ್ತು. ಪರಿಚಯ ಪತ್ರವನ್ನು ಕೊಟ್ಟುದಲ್ಲದೆ ಬೋಸ್ಟನ್ನಿನಿಂದ ಚಿಕಾಗೋಕ್ಕೆ ಒಂದು ಟಿಕೆಟ್ಟನ್ನೂ ಕೊಂಡುಕೊಟ್ಟು, ಅವರಿಗೆ ಬೇಕಾದ ಮನೆಗಳ ವಿಳಾಸಗಳನ್ನೂ ಬರೆದಿತ್ತರು. ಸ್ವಾಮಿಗಳು ಹರ್ಷದಿಂದ ಪುನಃ ಚಿಕಾಗೊ ನಗರಕ್ಕೆ ಹೊರಟರು.

ಆದರೆ ಈಶ್ವರನೊಡ್ಡಿದ ಸತ್ತ್ವಪರೀಕ್ಷೆ ಅಲ್ಲಿಗೇ ಮುಗಿಯಲಿಲ್ಲ. ಬೆಳಗಾಗುವುದಕ್ಕೆ ಸ್ವಲ್ಪ ಮುಂಚೆ ಕತ್ತಲು ಹೆಚ್ಚಿದಂತಾಗುವುದಿಲ್ಲವೆ? ಸ್ವಾಮಿಗಳಿಗೆ ಡಾಕ್ಟರ್ ಬರೋಸ್‌ರವರ ವಸತಿಯನ್ನು ತೋರಿಸಲು ರೈಲಿನಲ್ಲಿ ಅವರೊಡನೆ ಕುಳಿತಿದ್ದ ವ್ಯಾಪಾರಿಯೊಬ್ಬನು ಸಮ್ಮತಿಸಿದನು. ಆದರೆ ಚಿಕಾಗೊ ಸ್ಟೇಷನ್ನಿನಲ್ಲಿ ಇಳಿದಾಗ ಆತನಿಗೆ ಏನೋ ಕೆಲಸವಿದ್ದುದರಿಂದ ಆತನು ಹೊರಟುಹೋದನು. ಹೋಗುವ ಅವಸರದಲ್ಲಿ ಸ್ವಾಮಿಜಿಗೆ ಹಾದಿಯ ಪರಿಚಯ ಮಾಡಿಕೊಡಲು ಮರೆತುಬಿಟ್ಟನು. ಸಾಲದಿದ್ದಕ್ಕೆ ಬೇರೆ ರೈಟ್ ಸಾಹೇಬರು ಕೊಟ್ಟಿದ್ದ ವಿಳಾಸವೂ ಗಡಿಬಿಡಿಯಲ್ಲಿ ಕಳೆದುಹೋಗಿತ್ತು. ಯಾರನ್ನು ಮಾತಾಡಿಸಿದರೂ ಎಲ್ಲರೂ ಇವರನ್ನು ನೀಗ್ರೋ ಎಂದು ತಿಳಿದು ತಿರಸ್ಕರಿಸುತ್ತಿದ್ದರು. ಅಲ್ಲದೆ ಚಿಕಾಗೊ ನಗರದ ಆ ಭಾಗದಲ್ಲಿ ಜರ್ಮನರೆ ಹೆಚ್ಚಾಗಿರುವುದರಿಂದ ಒಬ್ಬರಿಗೂ ಸ್ವಾಮಿಜಿಯ ಮಾತು ಗೊತ್ತಾಗಲಿಲ್ಲ. ಅಷ್ಟರಲ್ಲಿ ಕತ್ತಲೂ ಆಯಿತು. ಮುಂದಿನ ಹಾದಿ ಕಾಣಲಿಲ್ಲ. ದೇವರೇ ಗತಿಯೆಂದು ರೈಲ್ವೆ ಸ್ಟೇಷನ್ನಿನ ಬಳಿ ಬಿದ್ದಿದ್ದ ಒಂದು ಖಾಲಿಯಾಗಿದ್ದ ದೊಡ್ಡ ಪೆಟ್ಟಿಗೆಯೊಳಗೆ ನುಗ್ಗಿ ಗುರುದೇವನನ್ನು ನೆನೆದು ಮಲಗಿದರು.

ಹೊರಗಡೆ ಕತ್ತಲೆ, ಕೊರೆಯುವ ಚಳಿ. ದಿನವೆಲ್ಲ ಊಟವಿಲ್ಲ. ನಾಳೆಯೆಂದರೆ ಅವರ ಹರಿಕಂಠ ಗರ್ಜನೆಯಿಂದ ಸಮಸ್ತ ಅಮೆರಿಕಾ ದೇಶವೇ ಎಚ್ಚರಗೊಳ್ಳಬೇಕು. ಇಂದಾದರೊ ಗತಿಯಿಲ್ಲದೆ ಪೆಟ್ಟಿಗೆಯಲ್ಲಿ ಮಲಗಿದ್ದಾರೆ. ಈಶ್ವರೇಚ್ಛೆ! ಬಹುಕಷ್ಟದಿಂದ ರಾತ್ರಿಯನ್ನು ಕಳೆದು ಬೆಳಗಾಗಲು ರಾಜಪಥದಲ್ಲಿ ಹೊರಟರು. ಬಹಳ ಹಸಿದಿದ್ದರಿಂದ ಬಾಗಿಲು ಬಾಗಿಲಿಗೆ ಹೋಗಿ ಏನಾದರೂ ಆಹಾರ ಪದಾರ್ಥ ದೊರಕೀತೆಂದು ಭಿಕ್ಷೆ ಬೇಡಿದರು. ಅವರ ಮೇಲಿನ ಜೀರ್ಣ ವಸನವನ್ನೂ ಯಾತನಾಕ್ಲಿಷ್ಟ ಮುಖಮಂಡಲವನ್ನೂ ನೋಡಿ ಯಾರೊಬ್ಬರ ಕರುಣೆಯೂ ಎಚ್ಚರಲಿಲ್ಲ. ಕೆಲವರು ಬೈದು ನೂಕಿದರು; ಕೆಲವರು ಬಾಗಿಲಿನಿಂದ ಬಲಪ್ರಯೋಗ ಮಾಡಿ ಓಡಿಸಿಬಿ‌ಟ್ಟರು; ಕೆಲವರು ಜುಗುಪ್ಸೆಯಿಂದ ಬಾಗಿಲು ಹಾಕಿಕೊಂಡರು. “ಸಹಸ್ರಾರು ವಿಧಾನಗಳಿಂದ ಧನಸಂಪಾದನೆ ಮಾಡುವ ಆ ಊರು”, ರೋಮೇಯ್ನ್ ರೊಲೆಂಡರು ಎದೆನೊಂದು ಹೇಳುತ್ತಾರೆ, “ಮಹಾಸಂತನಾದ ಫ್ರಾನ್ಸಿಸ್ ಸಾಧುವಿನ ರೀತಿಯೊಂದನ್ನು ಮಾತ್ರ ಒಪ್ಪುವುದಿಲ್ಲ! ಬುದ್ಧನ ಬಹಿರಂಗ ಭಿಕ್ಷಾಟನೆ ಅಲ್ಲಿಯ ಕಾನೂನಿಗೆ ವಿರುದ್ಧ!”

ಮನಸ್ಸಿಗೆ ಬಹಳ ನೋವಾಯಿತು. ಅಭಿಮಾನದಿಂದ ಶ್ರೀಗುರುದೇವನ ಮೇಲೆಯೂ ಸಿಟ್ಟಾದರು. ಕಡೆಗೆ ಹಸಿದು ಬಳಲಿ ಮುಂದುವರಿಯಲಾರದೆ ಬೀದಿಯ ಪಕ್ಕದಲ್ಲಿ ನಿರ್ಭಯಚಿತ್ತರಾಗಿ ಪೂರ್ಣ ಭರವಸೆಯಿಂದ ಶ್ರೀಗುರು ಮಾಡಿಸಿದಂತಾಗಲಿ ಎಂದು ಕುಳಿತುಬಿಟ್ಟರು.

ಅವರು ಕುಳಿತಿದ್ದ ಸ್ಥಳಕ್ಕೆ ಎದುರಿಗೆ ಒಂದು ದಿವ್ಯ ಪ್ರಾಸಾದ ಮೇಲೆದ್ದು ವಿರಾಜಿಸುತ್ತಿತ್ತು. ನೋಡುತ್ತಿದ್ದ ಹಾಗೆಯೆ ಅದರ ಹೆಬ್ಬಾಗಿಲು ತೆರೆಯಿತು. ರಮಣಿಯೊಬ್ಬಳು ಮೆಲ್ಲಮೆಲ್ಲನೆ ಬಂದು “ಮಹಾಶಯ, ನೀವು ಧರ್ಮಮಹಾಸಭೆಗೆ ಬಂದ ಪ್ರತಿನಿಧಿಯೇನು?” ಎಂದು ಪ್ರಶ್ನೆ ಮಾಡಿದಳು. ಸ್ವಾಮಿಜಿ ಆಕೆಯೊಡನೆ ಎಲ್ಲವನ್ನೂ ಹೇಳಿದ ತರುವಾಯ ದಯಾರ್ದ್ರಹೃದಯಿಯಾದ ಆ ಮಹಿಳೆ ಅವರನ್ನು ತನ್ನ ಮಂದಿರಕ್ಕೆ ಕರೆದೊಯ್ದು, ಸೇವಕರಿಗೆ ಅವರ ಶುಶ್ರೂಷೆ ಮಾಡುವಂತೆ ಅಪ್ಪಣೆಯಿತ್ತು, ಪ್ರಾತರ್ಭೋಜನವಾದ ಅನಂತರ ತಾನೇ ಸ್ವಾಮಿಜಿಯನ್ನು ಧರ್ಮಸಭೆಗೆ ಕರೆದೊಯ್ಯುವೆನೆಂದು ಹೇಳಿದಳು.

೧೮೯೩ನೆಯ ವರ್ಷದ ಸೆಪ್ಟೆಂಬರ್ ತಿಂಗಳು ೧೧ನೆಯ ಸೋಮವಾರ ಜಗತ್ತಿನ ಇತಿಹಾಸದಲ್ಲಿ ಸ್ಮರಣೀಯವಾಗಿರುತ್ತದೆ. ಪ್ರಾಚ್ಯ ಪಾಶ್ಚಾತ್ಯ ವಿಭಿನ್ನ ಮತ ಸಂಪ್ರದಾಯಗಳ ಸರ್ವಶ್ರೇಷ್ಠರಾದ ಪ್ರತಿನಿಧಿಗಳು ಒಂದೆಡೆ ಮಿಳಿತವಾಗಿದ್ದರು. ಆ ವಿರಾಟ್ ಸಭೆಯಲ್ಲಿ ಸಹಸ್ರ ಸಹಸ್ರ ಉನ್ಮುಖರಾದ ನರನಾರಿಯರ ಸಮ್ಮುಖದಲ್ಲಿ ತಮ್ಮ ಮಂಗಳಮಯ ಉದಾರ ಆಶೀರ್ವಾಣಿಯನ್ನು ಉಚ್ಚರಿಸಲೆಂದು ಶ್ರೀಸ್ವಾಮಿ ವಿವೇಕಾನಂದರು ವೇದಿಕೆಯ ಮೇಲೆ ವಾಸ್ತವಿಕವಾಗಲಿರುವ ಪವಿತ್ರತಮವಾದ ಮಹಾ ಸುವರ್ಣಸ್ವಪ್ನದಂತೆ ನಿಂತಿದ್ದಾರೆ!

ಕಣ್ಣಾರೆ ಕಂಡ ಶ್ರೀಮತಿ ಆನಿಬೆಸೆಂಟರು ಹೀಗೆಂದು ಬರೆದಿದ್ದಾರೆ:‌

“ಗೈರಿಕವಸನ ಭೂಷಿತ ಮಹಿಮಾಮಯ ಮೂರ್ತಿ. ಚಿಕಾಗೊ ನಗರದ ಭೂಮ ಮಲಿನ ಧೂಸರ ವಕ್ಷಸ್ಥಳದಲ್ಲಿ ಭಾರತೀಯ ಸೂರ್ಯನೂ ಮೂಡಿದಂತಿತ್ತು. ಉನ್ನತಶಿರ, ಮರ್ಮಭೇದಿಯಾದ ದೃಷ್ಟಿಪೂರ್ಣ ವಿಶಾಲನೇತ್ರದ್ವಯ, ಚಟುಲ ಚಂಚಲವಾದ ಓಷ್ಠಾಧರ. ಮನೋಹರವಾದ ಕಾಯಭಂಗಿ ಇವುಗಳಿಂದ ಕೂಡಿದ ಸ್ವಾಮಿ ವಿವೇಕಾನಂದರು ಸರ್ವಮತ ಸಮ್ಮೇಳನದ ಪ್ರತಿನಿಧಿಗಳಿಗಾಗಿ ಏರ್ಪಟ್ಟಿದ್ದ ವೇದಿಕೆಯ ಮೇಲೆ ಮೊತ್ತಮೊದಲು ನನ್ನ ದೃಷ್ಟಿಗೆ ಬಿದ್ದರು. ಅವರು ಸಂನ್ಯಾಸಿಗಳೆಂಬ ಖ್ಯಾತಿಯನ್ನು ಹಿಂದೆಯೆ ಕೇಳಿದ್ದೆ. ಆದರೆ ನೋಡಿದ ಕೂಡಲೆ, ಅವರನ್ನು ಸಂನ್ಯಾಸಿ ಎನ್ನುವುದಕ್ಕಿಂತ ಯೋದ್ಧ ಎನ್ನುವುದೆ ಯೋಗ್ಯ ಎಂದು ಕೊಂಡೆ. ಅಂತೂ ಕಡೆಗೂ ಯೋದ್ಧ ಸಂನ್ಯಾಸಿಯೆ ಆದರು! ಅವರ ವ್ಯಕ್ತಿತ್ವದಲ್ಲಿ ಸ್ವಜನ ಸ್ವದೇಶಾಭಿಮಾನಗಳು ತುಂಬಿ ತುಳುಕಾಡುತ್ತಿದ್ದುವು. ಮತಗಳಲ್ಲಿ ಪ್ರಾಚೀನತಮವಾದ ಮತದ ಪ್ರತಿನಿಧಿ ವಯಸ್ಸಿನಲ್ಲಿ ಎಲ್ಲ ಪ್ರತಿನಿಧಿಗಳಿಗಿಂತಲೂ ಕನಿಷ್ಠತಮನಾಗಿದ್ದರೂ ಪ್ರತಿಭೆಯಲ್ಲಿ ಯಾರಿಗೇನೂ ಕಡಿಮೆಯಾಗಿರಲಿಲ್ಲ. ಗರ್ವಿಷ್ಠ ಪಾಶ್ಚಾತ್ಯ ದೇಶಗಳಿಗೆ ಭಾರತಮಾತೆ ತನ್ನ ಯೋಗ್ಯತಮ ಪುತ್ರನನ್ನೇ ದೂತನನ್ನಾಗಿ ಕಳುಹಿಸಿ ಗೌರವಾನ್ವಿತೆಯಾದಳು. ದೂತನು ತನ್ನ ಪುಣ್ಯ ಜನ್ಮಭೂಮಿಯ ಸನಾತನ ಕೀರ್ತಿ ಗೌರವಗಳನ್ನು ಮರೆಯದೆ ಆಕೆಯ ಸಂದೇಶವನ್ನು ಸಾರಿದನು. ಆಶಿಷ್ಠನೂ ದೃಢಿಷ್ಠನೂ ಬಲಿಷ್ಠನೂ ಮೇಧಾವಿಯೂ ಆದ ಆತನು ಎಲ್ಲರನ್ನೂ ಮೀರಿ ಗಂಡರಗಂಡನಾಗಿ ಮುಂದೆ ನಿಂತು ತನ್ನ ಕೆಲಸವನ್ನು ಸಾಧಿಸಿದನು.‌

“ವೇದಿಕೆಯ ಮೇಲೆ ಮತ್ತೊಂದು ದೃಶ್ಯ: ಸ್ವಾಮಿಜಿ ಮಾತನಾಡಲು ಎದ್ದು ನಿಂತರು. ಅದೇ ಗಾಂಭೀರ್ಯ, ಅದೇ ಪ್ರತಿಭೆ, ಅದೇ ಶಕ್ತಿ ಎಲ್ಲವೂ ಇದ್ದುವು. ಆದರೆ ಆತನು ತಂದ ಆ ಧರ್ಮಸಂದೇಶದ ಸೌಂದರ್ಯದ ಸಮ್ಮುಖದಲ್ಲಿ, ಆ ಅಪ್ರತಿದ್ವಂದ್ವಿಯಾದ ಅತುಲನೀಯವಾದ ಪ್ರಾಚ್ಯ ಋಷಿಗಳ ಆಧ್ಯಾತ್ಮಿಕ ಸಂದೇಶದ ಮಹಿಮೆಯ ಸಮ್ಮುಖದಲ್ಲಿ, ಅವುಗಳೆಲ್ಲ ವಿನಮ್ರವಾಗಿದ್ದವು. ಅಲ್ಲಿ ನೆರೆದಿದ್ದ ಜನವಾರಿಧಿ ಮಂತ್ರಮುಗ್ಧವಾದಂತೆ ಆತನ ಕೊರಳ ದನಿಯನ್ನು ಕೇಳಲು ನೀರವವಾಗಿತ್ತು. ಒಂದು ಮಾತನ್ನೂ ಹಾಳಾಗಗೊಡಲಿಲ್ಲ; ಒಂದು ಸ್ವರವೂ ಮೋಘವಾಗಲಿಲ್ಲ.”

ಭಾಷಣಗಳು ಪ್ರಾರಂಭವಾದುವು. ಪ್ರತಿನಿಧಿಗಳು ಒಬ್ಬೊಬ್ಬರಾಗಿ ಎದ್ದುನಿಂತು ತಮ್ಮ ತಮ್ಮ ಮತಗಳನ್ನು ಪ್ರತಿಪಾದಿಸಿದರು. ಅಧ್ಯಕ್ಷರು ಸ್ವಾಮಿಜಿಯನ್ನು ಎರಡು ಮೂರು ಸಾರಿ ಮಾತಾಡುವಂತೆ ಕೇಳಿಕೊಂಡರು. ಆದರೆ ಸ್ವಾಮಿಜಿ ‘ಸ್ವಲ್ಪ ತಡೆಯಿರಿ; ಉಳಿದವರದಾಗಲಿ’ ಎಂದುಬಿಟ್ಟರು. ಅವರು ಇತರರಂತೆ ಉಪನ್ಯಾಸವನ್ನು ಸಿದ್ಧಪಡಿಸಿಕೊಂಡು ಹೋಗಿರಲಿಲ್ಲ. ಕಡೆಗೆ ಅವರ ಸರದಿಯೂ ಬಂತು. ಎದ್ದುನಿಂತರು. ಒಂದು ಸಾರಿ ದೃಷ್ಟಿ ಪ್ರಸಾರ ಮಾಡಿ ಆ ಮಹಾಸಭೆಯೆಲ್ಲವನ್ನೂ ನೋಡಿದರು. ಸರಸ್ವತಿದೇವಿಯನ್ನು ನೆನೆದರು; ಶ್ರೀಗುರುದೇವನನ್ನು ಸ್ಮರಿಸಿದರು. ಇದ್ದಕ್ಕಿದ್ದ ಹಾಗೆ ಅವರ ಹೃದಯದ ಅಂತರಾಳದ ಜ್ಞಾನಸೂರ್ಯನ ಜ್ಯೋತಿ ಮುಖಮಂಡಲದಲ್ಲಿ ಪ್ರಕಾಶಿಸಿತು. ಕಣ್ಣುಗಳು ಮಿಂಚಿದುವು. ದಕ್ಷಿಣೇಶ್ವರ ದೇವ ನಿಲಯದ ಪರಮ ಯೋಗೀಶ್ವರನ ದಿವ್ಯಶಕ್ತಿ ಅವರಲ್ಲಿ ಸಂಚರಿಸತೊಡಗಿತು.

ಆ ಮಹಾ ಸದಸ್ಯಮಂಡಳಿಯನ್ನು ಕುರಿತು “ಅಮೆರಿಕಾ ದೇಶದ ಭ್ರಾತೃ ಭಗಿನಿಯರೇ” ಎಂದು ಸಂಬೋಧಿಸಿದರು.

ಕೂಡಲೆ ಸಾವಿರಾರು ಸಿಡಿಲುಗಳು ಕೋಲಾಟವಾಡುವಂತೆ ದೊಡ್ಡ ಸದ್ದಾಯಿತು. ಸಹಸ್ರ ಸಹಸ್ರ ಜನರ ಕರತಾಡನದ ಮಹಾಧ್ವನಿಯಿಂದ ಮಂದಿರವೆಲ್ಲವೂ ಪ್ರತಿಧ್ವನಿತವಾಗಿ ಕಿವಿ ಕಿವುಡುಗಟ್ಟುವಂತಾಯಿತು. ನೆರೆದಿದ್ದವರೆಲ್ಲರಿಗೂ ಹುಚ್ಚು, ಸಂತಸದ ಹುಚ್ಚು! ಸ್ವಾಮೀಜಿ ವಿಸ್ಮಯಸ್ತಂಭಿತರಾದರು. ಈ ಬ್ರಹ್ಮನಿನಾದದ ಅರ್ಥವೇನು? ಆಗ ಗೊತ್ತಾಯಿತು, ವಾಣಿ ತಮಗೆ ಬೆಂಬಲವಾಗಿದ್ದಾಳೆಂದು. ಸಂಪೂರ್ಣವಾಗಿ ಎರಡು ನಿಮಿಷಗಳವರೆಗೆ ಉತ್ಸಾಹ ಘೋಷ ನಿಲ್ಲಲಿಲ್ಲ. ಉಳಿದವರೆಲ್ಲರೂ “ಮಹನೀಯರೇ, ಮಹಿಳೆಯರೇ” ಎಂದು ಮೊದಲಾಗಿ ಸಂಬೋಧಿಸಿದ್ದರು. ಆದ್ದರಿಂದ “ಭ್ರಾತೃ ಭಗಿನಿಯರೆ” ಎಂದು ಸಂಬೋಧನೆ ಅವರ ಹೃದಯಗಳನ್ನು ಹುಚ್ಚೆಬ್ಬಿಸಿತ್ತು.

ಸದ್ದೆಲ್ಲ ಅಡಗಿದ ಮೇಲೆ ಸ್ವಾಮೀಜಿ ಒಂದು ಸಣ್ಣ ಭಾಷಣ ಮಾಡಿದರು. ಮೊದಲು ಅಮೆರಿಕಾ ದೇಶದವರನ್ನು ಪುರಾತನವಾದ ಭಾರತವರ್ಷದ ಪರವಾಗಿಯೂ ಭಾರತೀಯರ ಪರವಾಗಿಯೂ ಪ್ರಾಚೀನತಮ ವೈದಿಕ ಸಂಪ್ರದಾಯದ ಸಂನ್ಯಾಸಿಗಳ ಪರವಾಗಿಯೂ ಪುಣ್ಯ ಸನಾತನ ಧರ್ಮದ ಪರವಾಗಿಯೂ ಮನೋಹರವಾದ ಶೈಲಿಯಲ್ಲಿ ಅಭಿನಂದಿಸಿದರು. ತರುವಾಯ ಸರ್ವಧರ್ಮ ಸಮನ್ವಯವನ್ನು ಸೂಚಿಸಿ ಭಾಷಣ ಮಾಡಿದರು. ಅದರಲ್ಲಿ –

ತ್ರಯೀ ಸಾಂಖ್ಯಂ ಯೋಗಃ ಪಶುಪತಿಮತಂ ವೈಷ್ಣವಮಿತಿ
ಪ್ರಭಿನ್ನೇ ಪ್ರಸ್ಥಾನೇ ಪರಮಿದಮದಃ ಪಥ್ಯಮಿತಿ ಚ |
ರುಚೀನಾಂ ವೈಚಿತ್ರ್ಯಾದೃಜುಕುಟಿಲ ನಾನಾ ಪಥಜುಷಾಂ |
ನೃಣಾಮೇಕೋ ಗಮ್ಯಸ್ತ್ವಮಸಿ ಪಯಸಾಮರ್ಣವ ಇವ ||‌

“ಭಿನ್ನ ಭಿನ್ನವಾದ ಪ್ರದೇಶಗಳಲ್ಲಿ ಜನಿಸಿದ ಭಿನ್ನಭಿನ್ನವಾದ ನದಿಗಳೆಲ್ಲವೂ ಹೇಗೆ ಕಟ್ಟಕಡೆಗೆ ಕಡಲನ್ನು ಸೇರುತ್ತವೆಯೊ ಹಾಗೆ ಮಾನವರ ವಿವಿಧ ಭಾವಜನ್ಯವಾದ ವಿವಿಧ ಮಾರ್ಗಗಳು ಬೇರೆಬೇರೆಯಾಗಿ ತೋರಿದರೂ ಋಜುಕುಟಿಲಧಾರಿಗಳಾಗಿ ಕಂಡುಬಂದರೂ ಕಟ್ಟಕಡೆಗೆ ನಿನ್ನನ್ನೇ ಸೇರುತ್ತವೆ.”

ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಂ |
ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ ||‌

“ಯಾರು ಯಾವ ರೂಪದಲ್ಲಿ ನನ್ನನ್ನು ಭಜಿಸುತ್ತಾರೊ ನಾನವರಿಗೆ ಆ ರೂಪದಲ್ಲಿ ದೊರಕುತ್ತೇನೆ. ಮನುಜರೆಲ್ಲರೂ ಕಟ್ಟಕಡೆಗೆ ನನ್ನಲ್ಲಿಯೆ ವಿಲೀನವಾಗುವ ಭಿನ್ನಭಿನ್ನ ಮಾರ್ಗಗಳಲ್ಲಿ ತೊಳಲುತ್ತಿದ್ದಾರೆ.”

ಎಂಬ ಎರಡು ಶ್ಲೋಕಗಳನ್ನು ಉದ್ಧರಿಸಿ ಹೇಳಿ ಅವುಗಳ ಭಾವಾರ್ಥವನ್ನು ಸುಲಲಿತವಾಗಿ ತಿಳಿಯಪಡಿಸಿದರು. ಉಳಿದವರಾರೂ ಸರ್ವಧರ್ಮ ಸಮನ್ವಯದ ಪ್ರಸ್ತಾಪವನ್ನೇ ಎತ್ತಿರಲಿಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಮತಧರ್ಮವೇ ಶ್ರೇಷ್ಠವೆಂಬರ್ಥದ ಉಪನ್ಯಾಸಗಳನ್ನು ಕೊಟ್ಟಿದ್ದರು. ಆದ್ದರಿಂದ ಸ್ವಾಮಿಗಳ ಉದಾರತಮ ವೇದವಾಣಿ ನೆರೆದಿದ್ದವರ ಬಗೆಗಳನ್ನು ತುಂಬಿ ಎದೆಗಳನ್ನು ಸೆರೆಗೈದಿತು.

ಸೆಪ್ಟೆಂಬರ್ ೧೯ನೆಯ ದಿನ ಸ್ವಾಮಿಗಳು “ಹಿಂದೂಧರ್ಮ” ಎಂಬ ಹೆಸರಿನ ತಮ್ಮ ಪ್ರಸಿದ್ಧ ಭಾಷಣವನ್ನು ಮಾಡಿದರು. ಅದರಲ್ಲಿ ಸರ್ವಮತಧರ್ಮ ಭಾವ ಸಂಸ್ಕಾರ ಗ್ರಾಸಿಯಾದ ವೇದಾಂತ ದರ್ಶನವನ್ನು ಎದೆಮುಟ್ಟುವಂತೆ ವಿವರಿಸಿದರು:‌

“ತತ್ತ್ವತಃ ಆತ್ಮವು ನಿತ್ಯಶುದ್ಧವಾದುದು, ನಿತ್ಯ ಮುಕ್ತವಾದುದು, ನಿತ್ಯ ಪವಿತ್ರವಾದುದು, ಸರ್ವ ಜೀವಿಗಳಲ್ಲಿಯೂ ಸಮಸ್ತ ವಿಶ್ವದಲ್ಲಿಯೂ ನೆಲೆಸಿರುವ ಅದು ಏಕವಾದರೂ ಜಡಬಂಧನದ ಉಪಾಧಿಯಿಂದ ಅನೇಕವಾದಂತೆ ತೋರುತ್ತಿದೆ. ಆ ಐಕ್ಯಾನುಭವವೆ ಮಾನವನ ಚರಮಲಕ್ಷ್ಯ!‌

“ಆತ್ಮವು ಹೊಸದಾಗಿ ಕರ್ತನೊಬ್ಬನಿಂದ ಸೃಷ್ಟಿಯಾದುದಲ್ಲ. ಅನಾದಿಯಾದುದು, ಅನಂತವಾದುದು. ಅದರ ಸುಖದುಃಖಗಳೆಲ್ಲ ಅದರ ಕರ್ಮದಿಂದಲೆ ಸಿದ್ಧಿಸುತ್ತದೆ. ನಾನು ನನ್ನದು ಎಂಬ ಅಹಂಕಾರ ತೊಲಗಬೇಕು. ಅಂದರೆ ವ್ಯಷ್ಟಿ ವಿನಾಶವೆಂದರ್ಥವಲ್ಲ; ವ್ಯಷ್ಟಿ ವಿಕಾಸಹೊಂದಿ ಸಮಷ್ಟಿಯಾಗುವುದೆಂದರ್ಥ. ಯಾವಾಗ ಕ್ಷುದ್ರ ಅಹಂಕಾರವು ತೊಲಗಿ, ಸ್ವಾರ್ಥತೆ ಮಾಯವಾಗುವುದೊ ಆಗ ಅನಂತತೆಯ ಅನುಭವವಾಗುತ್ತದೆ. ಆಗಲೆ ವ್ಯಷ್ಟಿ ತನ್ನ ಸ್ವಸ್ವರೂಪವನ್ನು ಹೊಂದಿ ಸಮಷ್ಟಿಯಾಗುತ್ತದೆ. ಆಗಲೆ ಮರಣ ತೊಲಗಿ ಅಮರತೆಯುಂಟಾಗುತ್ತದೆ. ಆಗಲೆ ದುಃಖವಳಿದು ಆನಂದವುಂಟಾಗುತ್ತದೆ. ಆಗಲೆ ಅಜ್ಞಾನ ತೊಲಗಿ ಮಾನವನು ಜ್ಞಾನದಲ್ಲಿ ಲೀನವಾಗುತ್ತಾನೆ. ನೂತನ ವಿಜ್ಞಾನಶಾಸ್ತ್ರವು ಜಡಾದ್ವೈತವನ್ನು ಸಾಧಿಸಿದೆ. ಜಡಶರೀರವು ಜಡಪ್ರಕೃತಿ ಸಮುದ್ರದಲ್ಲಿ ಮಿಂಚಿ ಮಾಯವಾಗುವ ಒಂದು ನಶ್ವರವಾದ ತರಂಗವೆಂಬುದನ್ನು ತೋರಿಸಿದೆ. ಅಂತೆಯೆ ಸನಾತನ ವೇದಾಂತವು ಚೇತನಾದ್ವೈತವನ್ನು ಸಾಧಿಸಿದೆ. ಜೀವನವು ವಿಶ್ವಾತ್ಮದಲ್ಲಿ ಹೊಳೆದಳಿಯುವ ಒಂದು ನಶ್ವರವಾದ ತೋರಿಕೆ ಮಾತ್ರವೆಂಬುದನ್ನು ಅನುಭವದಿಂದ ತೋರಿಸಿದೆ. ಹಿಂದೂ ದಾರ್ಶನಿಕರು ಕೆಚ್ಚೆದೆಯವರು. ಅವರು ಏಕೆ ಎಂಬ ಪ್ರಶ್ನೆಗೆ ನಾನರಿಯೆ ಎಂಬ ಉತ್ತರವನ್ನು ಧೈರ್ಯವಾಗಿ ಹೇಳಿಬಿಡುತ್ತಾರೆ. ಅವ್ಯಕ್ತವೇಕೆ ವ್ಯಕ್ತವಾಯಿತು? ತೋರಿಕೆಗಾದರೂ ಮುಕ್ತಾತ್ಮವೇಕೆ ಬಂಧಿತವಾಯಿತು? ಭರತ ಖಂಡದ ದಾರ್ಶನಿಕರು ಅದನ್ನು ಅನಿರ್ವಚನೀಯವೆಂದು ಹೇಳಿರುತ್ತಾರೆ. ಅನಿರ್ವಚನೀಯವಾದವು ಅಜ್ಞೇಯವಾದುದಲ್ಲ, ಏಕೆಂದರೆ ಅಜ್ಞಾನದ ಘೋರಾಂಧಕಾರವು ತೊಲಗಿ ಜ್ಞಾನಜ್ಯೋತಿ ಮೂಡಿದರೆ ಬ್ರಹ್ಮಸಾಕ್ಷಾತ್ಕಾರವಾಗುವುದು. ಅಜ್ಞಾನ ಹೇಗೆ ಬಂತು? ಅದನ್ನು ನಾವರಿಯೆವು. ಜ್ಞಾನದಿಂದ ಧ್ಯೇಯ ಸಾಧನೆ ಮಾಡುವುದನ್ನಂತೂ ನಾವು ಚೆನ್ನಾಗಿ ಬಲ್ಲೆವು. ಸಾಧನೆಯಿಂದ ಸಿದ್ಧಿ ಲಭಿಸಿಯೇ ಲಭಿಸುತ್ತದೆ.‌

“ಎಲೈ ಅಮೃತಪುತ್ರರಿರಾ, ಹಿಂದೂಗಳು ನಿಮ್ಮನ್ನು ಪಾಪಿಗಳೆಂದು ಎಂದಿಗೂ ಪರಿಗಣಿಸರು. ಪಾಪಿಗಳೇನು? ದೇವರ ಮಕ್ಕಳು ನೀವು; ಅಮೃತಪುತ್ರರು ನೀವು; ನಿತ್ಯ ವಿಮುಕ್ತರು ನೀವು; ಪರಮಪವಿತ್ರರು ನೀವು. ಮಾನವನನ್ನು ಪಾಪಿಯೆಂದು ಕರೆಯುವುದು ಮಹಾಪಾಪ! ಸಿಂಹಗಳೇ, ಹೊರಗೆ ಬನ್ನಿ, ಮೇಲೇಳಿ. ಕುರಿಗಳು ನಾವೆಂಬ ಮಾಯೆಯನ್ನು ಕೊಡಹಿಬಿಡಿ. ಅಮೃತಾತ್ಮರು ನೀವು; ಮುಕ್ತಾತ್ಮರು ನೀವು; ಧನ್ಯಾತ್ಮರು ನೀವು; ನಿತ್ಯಾತ್ಮರು ನೀವು. ನೀವು ಜಡರಲ್ಲ. ಶರೀರಗಳು ನೀವಲ್ಲ. ಜಡಪ್ರಕೃತಿ ನಿಮಗೆ ದಾಸಿ. ನೀವದಕ್ಕೆ ದಾಸರಲ್ಲ.‌

“ವೇದಗಳು ಬೋಧಿಸುವುದು ಪರಸ್ಪರ ವಿರುದ್ಧವಾದ ಪ್ರಕೃತಿ ನಿಯಮಗಳ ಸಮುಚ್ಚಯ ಮಾತ್ರವನ್ನಲ್ಲ; ಕಾರ್ಯಕಾರಣಗಳ ಕೊನೆಗಾಣದ ಸೆರೆಮನೆಯನ್ನಲ್ಲ; ಆದರೆ ಸಮಸ್ತ ಜಡಚೇತನಗಳಲ್ಲಿ ಅಂತರ್ಯಾಮಿಯಾಗಿರುವ ಏಕಮಾತ್ರ ಪರತತ್ವವನ್ನು.

ಭಯಾದಸ್ಯಾಗ್ನಿಸ್ತಪತಿ ಭಯಾತ್ತಪತಿ ಸೂರ್ಯಃ |
ಭಯಾದಿಂದ್ರಶ್ಚ ವಾಯುಶ್ಚ ಮೃತ್ಯುರ್ಧಾವತಿ ಪಂಚಮಃ ||‌

“ಯಾರ ಭಯದಿಂದ ಗಾಳಿ ಬೀಸುವುದೊ, ಬೆಂಕಿಯುರಿಯುವುದೋ, ಮುಗಿಲು ಮಳೆಗರೆವುದೊ, ಸಾವು ಕರ್ತವ್ಯವೆಸಗುವುದೊ ಅಂತಹ ಸರ್ವವ್ಯಾಪ್ತವೂ ಸರ್ವಶಕ್ತವೂ ಸರ್ವಶುದ್ಧವೂ ಕರುಣಾಮಯವೂ ನಿರಾಕಾರವೂ ಆದ ಸಚ್ಚಿದಾನಂದನನ್ನು ಸಾಕ್ಷಾತ್ಕಾರ ಮಾಡಲು ಸಿದ್ಧರಾಗಿ, ಅಮೃತಪುತ್ರರೆಂಬ ಹೆಸರಿಗೆ ಯೋಗ್ಯರಾಗಿ!”

ಈ ವೇದ ಗಂಭೀರವಾಣಿ ಅಮೆರಿಕದಲ್ಲೆಲ್ಲ ಮೊಳಗಿ ಬೆರಗುಗೊಳಿಸಿತು. ಅದರ ಪ್ರಭಾವ ಭವ್ಯಾದ್ಭುತವಾಗಿತ್ತು. ಹಿಮಾಲಯ ಪರ್ವತಧ್ವನಿ ಅಮೆರಿಕಾದಲ್ಲಿ ಮೊಳಗಿದಂತಿತ್ತು. ನಿನ್ನೆ ತಾನೆ ಅಜ್ಞಾತರೂ ಅನಾಥರೂ ಆಗಿದ್ದ ಸ್ವಾಮಿಜಿ ನಿಮಿಷಮಾತ್ರದಲ್ಲಿಯೆ ವಿಖ್ಯಾತರಾದರು. ಅವರ ಪರಿಚಯ ಲಾಭಕ್ಕಾಗಿ ಸ್ಪರ್ಧೆಯಾಗತೊಡಗಿತು. ವೃತ್ತಪತ್ರಿಕೆಗಳು ಅವರ ಕೀರ್ತಿಯನ್ನು ತುತ್ತೂರಿಯೂದಿ ಸಾರಿದುವು. ಮುಖ್ಯಪತ್ರಿಕೆಯೊಂದು ವಿವೇಕಾನಂದರನ್ನು ಕುರಿತು ಹೀಗೆಂದು ಬರೆಯಿತು: “ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರೇ ಶ್ರೇಷ್ಠತಮ ವ್ಯಕ್ತಿ. ಅವರ ಭಾಷಣವನ್ನು ಕೇಳಿದ ಮೇಲೆ ಇಂತಹ ಸುಸಂಸ್ಕೃತ ಜನಾಂಗಕ್ಕೆ ನಾವು ಧರ್ಮಪ್ರಚಾರಕರನ್ನು ಕಳುಹಿಸುವುದು ಶುದ್ಧ ಮೂರ್ಖತನವೆಂದೇ ಭಾವಿಸುತ್ತೇವೆ.”

ಮತ್ತೊಂದು ಪತ್ರಿಕೆ ಹೀಗೆಂದು ಬರೆಯಿತು:‌

“ವಿವೇಕಾನಂದರು ಧರ್ಮಮಹಾಸಭೆಯ ನಚ್ಚಿನ ಕಣ್ಣು. ಅವರ ಭದ್ರಾಕಾರವೂ ಅವರಾಡುವ ತತ್ತ್ವಗಳ ವೈಭವವೂ ಸರ್ವರನ್ನೂ ಸೆರೆಗೊಂಡಿವೆ. ಅವರು ವೇದಿಕೆಯ ಮೇಲೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋದರೆ ಸಾಕು, ಕೈಚಪ್ಪಾಳೆಗಳಿಂದ ಮಂದಿರವು ಕಂಪಿಸುತ್ತದೆ. ಆದರೆ ಅವರು ಮಾತ್ರ ಅಷ್ಟೊಂದು ಜನರ ಹೊಗಳಿಕೆಯನ್ನೂ ಬಾಲಕರಂತೆ ಸ್ವೀಕರಿಸುತ್ತಾರೆ. ಅಹಂಕಾರದ ಸುಳಿವು ಕೂಡ ಅವರಲ್ಲಿಲ್ಲ… ಧರ್ಮಸಭೆಯಲ್ಲಿ ವಿವೇಕಾನಂದರನ್ನು ಕಟ್ಟಕಡೆಯ ಉಪನ್ಯಾಸಕರನ್ನಾಗಿ ಮಾಡುತ್ತಾರೆ. ಸಭೆ ಮುಕ್ತಾಯವಾಗುವವರೆಗೆ ಜನರನ್ನು ಹಿಡಿದು ನಿಲ್ಲಿಸುವುದಕ್ಕೆ! ಬಿಸಿಲ ಬೇಗೆ ಹೆಚ್ಚಾದ ದಿನಗಳಲ್ಲಿ ಯಾರಾದರೂ ನೀರಸವಾಗಿ ಬಹಳ ಹೊತ್ತು ಮಾತಾಡಿದರೆ ಜನರು ತಂಡತಂಡವಾಗಿ ಮನೆಗೆ ಹೋಗಲು ಉಪಕ್ರಮಿಸುತ್ತಾರೆ. ಅದನ್ನು ತಿಳಿದಕೂಡಲೆ ಅಧ್ಯಕ್ಷರು ಎದ್ದುನಿಂತು ವಿವೇಕಾನಂದರು ಕಡೆಯಲ್ಲಿ ಒಂದು ಸಣ್ಣ ಭಾಷಣ ಮಾಡುವರೆಂದು ಹೇಳುತ್ತಾರೆ. ಕೂಡಲೆ ಜನರು ಶಾಂತರಾಗಿ ಕುಳಿತುಬಿಡುತ್ತಾರೆ. ಸಾವಿರಾರು ಜನರು ಬೀಸಣಿಗೆಗಳಿಂದ ಬೀಸಿಕೊಳ್ಳುತ್ತ, ವಿವೇಕಾನಂದರ ಹದಿನೈದೇ ನಿಮಿಷಗಳ ಭಾಷಣವನ್ನು ಕೇಳಲೆಂದು ಎರಡು ಮೂರು ಗಂಟೆಗಳ ಪರ್ಯಂತ ಇತರರ ನೀರಸ ಭಾಷಣಗಳನ್ನು ಕೇಳುತ್ತಾ ತಾಳ್ಮೆಯಿಂದ ನಿರೀಕ್ಷಿಸುತ್ತಾರೆ. ಎಲ್ಲ ಮುಗಿದ ಮೇಲೆ ಬೆಲ್ಲವಿರಬೇಕೆಂಬ ನೀತಿ ಅಧ್ಯಕ್ಷರಿಗೆ ಚೆನ್ನಾಗಿ ಗೊತ್ತು.”

ಈ ಮಧ್ಯೆ ಸ್ವಾಮಿಗಳ ಯಶೋಲಾಭವನ್ನು ನೋಡಿ ಕರುಬಿ, ಕೆಲವರು ಹೊಟ್ಟೆಯುರಿಯಿಂದ ಅವರ ಮೇಲೆ ಇಲ್ಲದ ಸಲ್ಲದ ನಿಂದೆಗಳನ್ನು ಹರಡಿದರು. ಸಂನ್ಯಾಸಿ ಸ್ತ್ರೀಸಂಗಲೋಲನೆಂದೂ ನೀತಿಗೆಟ್ಟವನೆಂದೂ ಜಾತಿಭ್ರಷ್ಟನೆಂದೂ ಸಮಾಜ ಬಿಟ್ಟವನೆಂದೂ ಇಂಡಿಯಾ ದೇಶದಲ್ಲಿರುವ ಭಿಕಾರಿಗಳ ಗುಂಪಿಗೆ ಸೇರಿದವನೆಂದೂ ಆತನು ನಿಜವಾದ ಹಿಂದೂಧರ್ಮದ ಪ್ರತಿನಿಧಿಯಲ್ಲವೆಂದೂ ಆತನು ಪ್ರತಿಪಾದಿಸುವ ತತ್ತ್ವವನ್ನು ಹಿಂದೂಗಳು ಸ್ವಪ್ನದಲ್ಲಿಯೂ ಕೂಡ ಅರಿಯರೆಂದೂ ಆತನು ಕೃತ್ರಿಮ ಜೀವಿಯೆಂದೂ ಮೋಸಗಾರನೆಂದೂ, ಕೆಲವು ಜನ ಪ್ರಾಚೀನ ಸಂಪ್ರದಾಯಕ್ಕೆ ಸೇರಿದ್ದ ಕ್ಷುದ್ರದೃಷ್ಟಿಯ ಪಾದ್ರಿಗಳೂ, ಇಂಡಿಯಾದಿಂದ ಪ್ರತಿನಿಧಿಗಳಾಗಿ ಅಲ್ಲಿಗೆ ಹೋಗಿದ್ದ ಕೆಲಮಂದಿ ಥಿಯಾಸಫಿ ಬ್ರಾಹ್ಮ ಸಮಾಜಗಳ ದೊಡ್ಡ ಮನುಷ್ಯರೂ ಮುಕ್ತಕಂಠದಿಂದ ಸಾರತೊಡಗಿದರು. ಥಿಯಾಸಫಿ ಸಂಘದ ನಾಯಕರೊಬ್ಬರು ವಿವೇಕಾನಂದರು ಅಮೆರಿಕಾಕ್ಕೆ ಹೋದ ಮೊದಲಿನಲ್ಲಿ ಅವರು ಕಷ್ಟಕ್ಕೆ ಸಿಕ್ಕಿಬಿದ್ದರೆಂಬುದನ್ನು ಕೇಳಿ, ಅಲ್ಲಿದ್ದ ತಮ್ಮ ಸ್ನೇಹಿತರೊಬ್ಬರಿಗೆ “ಅಂತೂ ಪಿಶಾಚಿ ಅಲ್ಲಿಗೆ ಬಂದಿದೆ; ಹೊಟ್ಟೆಗಿಲ್ಲದೆ ಸಾಯಲಿ!” ಎಂದು ಕಾಗದ ಬರೆದಿದ್ದರಂತೆ.

ಆ ಕೀರ್ತಿ ಸನ್ಮಾನಗಳ ಮಧ್ಯೆ ಸ್ವಾಮಿಜಿ ಮಾತೃಭೂಮಿಯನ್ನು ಒಂದು ನಿಮಿಷವಾದರೂ ಮರೆಯಲಿಲ್ಲ. ಕನ್ಯಾಕುಮಾರಿಯ ಬಂಡೆಯ ಮೇಲೆ ಕುಳಿತು ದೇಶಸೇವೆಗಾಗಿ ಧನಸಂಪಾದಿಸಲು ಪಶ್ಚಿಮದೇಶಗಳಿಗೆ ಹೋಗುತ್ತೇನೆ ಎಂದು ಮಾಡಿದ ಪೂಣ್ಕೆಯನ್ನು ಸರ್ವದಾ ನೆನಪಿನಲ್ಲಿಟ್ಟಿದ್ದರು. ಆದ್ದರಿಂದಲೇ ಧರ್ಮ ಮಹಾಸಭೆಯಲ್ಲಿ ಅವರು ಮಾಡಿದ ಒಂದು ಭಾಷಣದಲ್ಲಿ ನೆರೆದಿದ್ದ ಸಾವಿರಾರು ಕ್ರೈಸ್ತರನ್ನು ಸಂಬೋಧಿಸಿ ನಿರ್ಭೀತರಾಗಿ ಹೀಗೆಂದರು:‌

“ಕ್ರೈಸ್ತರು ಸದ್ವಿಮರ್ಶೆಗೆ ಸಿದ್ಧರಾಗಿರಬೇಕು. ನಿಮ್ಮಲ್ಲಿರುವ ಒಂದೆರಡು ಕುಂದುಕೊರತೆಗಳನ್ನು ಬಯಲಿಗೆಳೆದರೆ ನನ್ನನ್ನು ಮನ್ನಿಸುವಿರೆಂದು ನಂಬುತ್ತೇನೆ. ನೀವು ಕ್ರೈಸ್ತರು. ಭಾರತೀಯರ ಆತ್ಮ ಸಂರಕ್ಷಣೆಯ ಸಲುವಾಗಿ ಪಾದ್ರಿಗಳನ್ನು ಕಳುಹಿಸುತ್ತೀರಿ. ಹೊಟ್ಟೆಗಿಲ್ಲದೆ ಸಾಯುವವರ ದೇಹಸಂರಕ್ಷಣೆಯನ್ನೇಕೆ ಮಾಡಲು ಪ್ರಯತ್ನಿಸುವುದಿಲ್ಲ? ಇಂಡಿಯಾ ದೇಶದಲ್ಲಿ ಭಯಂಕರ ಕ್ಷಾಮಕಾಲದಲ್ಲಿ ಲಕ್ಷಾಂತರ ಜನರು ಹಸಿವೆಯಿಂದ ಮಡಿದರು. ಕ್ರೈಸ್ತರಾದ ನೀವು ಅವರಿಗಾವ ಸಹಾಯವನ್ನೂ ಮಾಡಲಿಲ್ಲ. ಆದರೆ ಇಂಡಿಯಾ ದೇಶದಲ್ಲಿ ಎಲ್ಲೆಲ್ಲಿಯೂ ಚರ್ಚುಗಳನ್ನು ಮಾತ್ರ ಕಟ್ಟುತ್ತಿದ್ದೀರಿ. ಇಂಡಿಯಾ ದೇಶಕ್ಕೆ ಬೇಕಾಗಿರುವುದು ನಿಮ್ಮ ಧರ್ಮೋಪದೇಶವಲ್ಲ. ಅವರಿಗೆ ಧರ್ಮೋಪದೇಶ ಅಜೀರ್ಣವಾಗುವಷ್ಟು ಬೇಕಾದರೂ ಇದೆ. ಹಸಿವೆಯಿಂದ ದಿನವೂ ಸಾಯುತ್ತಿರುವ ಭರತಖಂಡದ ಲಕ್ಷಾಂತರ ಜನಗಳು ಧರ್ಮ ಧರ್ಮ ಎಂದು ಒರಲುತ್ತಿಲ್ಲ. ಅನ್ನ ಅನ್ನ ಎಂದು ಒಣಗಿದ ಗಂಟಲಿಂದ ಕಿರುಚುತ್ತಿದ್ದಾರೆ. ಅವರು ಕೇಳುವುದು ಅನ್ನ. ನೀವು ಕೊಡುವುದು ಮಣ್ಣು. ಹಸಿವೆಯಿಂದ ಬಳಲಿ ಸಾಯುತ್ತಿರುವ ಜನಾಂಗಕ್ಕೆ ಧರ್ಮೋಪದೇಶ ಮಾಡುವುದು ಒಂದು ಮಹಾ ನೀಚಕಾರ್ಯ. ಹಸಿದವನಿಗೆ ವೇದಾಂತ ಬೋಧಿಸುವುದು ಒಂದು ಅಧಮಾಧಮ ಪಾಪ. ಇಂಡಿಯಾ ದೇಶದಲ್ಲಿ ಯಾವನಾದರೂ ಧನಾರ್ಜನೆಗಾಗಿ ಧರ್ಮಬೋಧೆ ಮಾಡಿದನೆಂದರೆ ಅವನನ್ನು ಮುಖದ ಮೇಲೆ ಉಗುಳಿ ಸಮಾಜದಿಂದ ಹೊರಗೆ ಕತ್ತು ಹಿಡಿದು ನೂಕುತ್ತಾರೆ. ಹಸಿದು ಸಾಯುವ ನನ್ನ ಸೋದರರ ಸಲುವಾಗಿ ನಿಮ್ಮಿಂದ ಸಹಾಯ ಬೇಡಲು ನಾನಿಲ್ಲಿಗೆ ಬಂದೆ. ಕ್ರೈಸ್ತಭೂಮಿಯಲ್ಲಿ ಕ್ರೈಸ್ತರಿಂದ ಕ್ರೈಸ್ತರಲ್ಲದವರಿಗೆ ಸಹಾಯ ದೊರಕುವುದು ದುರ್ಲಭವೆಂದು ನನ್ನ ಅನುಭವಕ್ಕೆ ಬಂದಿದೆ.”

ಅವರಿಗೆ ಯಶೋಲಾಭವಾದ ದಿನವೆ, ಚಿಕಾಗೊ ನಗರದ ಶ್ರೀಮಂತನೊಬ್ಬನು ಅವರನ್ನು ತನ್ನ ಮನೆಗೆ ಕರೆದೊಯ್ದನು. ಅಲ್ಲಿ ಅವರಿಗೆ ರಾಜಯೋಗ್ಯವಾದ ಅತಿಥಿಸತ್ಕಾರ ಸನ್ಮಾನಗಳು ದೊರೆತುವು. ಮಲಗಲು ಅವರಿಗೊಂದು ರಾಜಭವನ ಸದೃಶವಾದ ಕೊಠಡಿ ನೇರ್ಪಟ್ಟಿತ್ತು. ರಾತ್ರಿ ಹಂಸತೂಲಿಕಾತಲ್ಪದ ಮೇಲೆ ಪವಡಿಸಿದ್ದಾಗ ಇದ್ದಕ್ಕಿದ್ದ ಹಾಗೆ ಅವರಿಗೆ ಭಾರತವರ್ಷದ ದಾರಿದ್ರ್ಯದ ನೆನಪಾಯಿತು. ಅಮೆರಿಕಾ ಸಂಯುಕ್ತ ರಾಜ್ಯದ ಐಶ್ವರ್ಯಕ್ಕೂ ಭಾರತಾಂಬೆಯ ಬಡತನಕ್ಕೂ ಇರುವ ತಾರತಮ್ಯದ ಪಿಶಾಚ ವಿಕಟಾಕಾರವಾಗಿ ಅವರೆದುರು ನಿಂತಿತು. ಅರಳೆಯ ಹಾಸಿಗೆ ಮುಳ್ಳಿನ ಶಯ್ಯೆಯಂತೆ ತೋರಿತು. ಸುರಿಯುತ್ತಿದ್ದ ಕಂಬನಿಗಳಿಂದ ತಲೆದಿಂಬು ತೋಯ್ದುಹೋಯಿತು. ಮಲಗಲಾರದೆ ಮೇಲೆದ್ದು ಕಿಟಕಿಯ ಬಳಿಗೆ ಹೋಗಿ ಗಭೀರ ಘೋರಾಂಧಕಾರದ ನಿಶೆಯನ್ನು ನಿಟ್ಟಿಸುತ್ತ ನಿಂತರು. ಕಡೆಗೆ ದುಃಖವಶರಾಗಿ ರೋದಿಸುತ್ತಾ ನೆಲದ ಮೇಲೆ ಕುಳಿತು, “ಹೇ ಜಗಜ್ಜನನಿ, ನನ್ನ ಮಾತೃ ಭೂಮಿ ಬಡತನದಲ್ಲಿ ನರಳುತ್ತಿದೆ, ಕೀರ್ತಿಯಿಂದ ನನಗೆ ಆಗಬೇಕಾದುದೇನು? ಅಯ್ಯೋ ನಮಗೆಂತಹ ದುರವಸ್ಥೆ ಬಂದೊದಗಿದೆ? ಒಂದು ತುತ್ತು ಕೂಳಿಗೆ ಗತಿಯಿಲ್ಲವಲ್ಲ! ಇಲ್ಲಿಯಾದರೊ ಜನಗಳು ಐಶ್ವರ್ಯದಲ್ಲಿ ಓಲಾಡುತ್ತಿದ್ದಾರೆ. ಭಾರತೀಯರನ್ನು ಮೇಲೆತ್ತುವವರಾರು? ಹಸಿದವರಿಗೆ ಅನ್ನವಿಕ್ಕುವವರಾರು? ಹೇ ಜನಜ್ಜನನಿ, ನಮಗಾವುದಾದರೂ ದಾರಿ ತೋರು!” ಎಂದು ಪ್ರಾರ್ಥಿಸುತ್ತ ರಾತ್ರಿಯನ್ನು ಕಳೆದರಂತೆ.

ಇಷ್ಟರಲ್ಲಿ ಒಂದು ಸಂಘದವರು ಸಂಯುಕ್ತ ಸಂಸ್ಥಾನದಲ್ಲೆಲ್ಲ ತಿರುಗಿ ಉಪನ್ಯಾಸಗಳನ್ನು ಕೊಡುವಂತೆ ಸ್ವಾಮಿಜಿಯವರನ್ನು ಕೇಳಿಕೊಂಡರು. ಸ್ವಾಮಿಜಿ ಸಂತೋಷದಿಂದ ಒಪ್ಪಿಕೊಂಡು ನಗರನಗರಗಳಲ್ಲಿಯೂ ತಿರುಗಿ, ಅಮೆರಿಕಾ ದೇಶದ ಜನರಲ್ಲಿ ಭರತಖಂಡದ ಪರವಾಗಿದ್ದ ಅಜ್ಞಾನ ಕುಜ್ಞಾನಗಳನ್ನು ಪರಿಹರಿಸಿ, ಭಾರತವರ್ಷದ ಪುರಾತನ ಸಂಸ್ಕೃತಿಯ ಮಹಿಮೆ ಲಾವಣ್ಯಗಳನ್ನು ಬೆಳಗಿದರು. ಭಾರತಭೂಮಿಗೆ ಬಂದ ಮಹಾಶಯರಾದ ಪಾದ್ರಿಗಳು ಪಶ್ಚಿಮದೇಶಗಳಲ್ಲಿ ಹಿಂದೂಗಳಿಗೆ ವಿರೋಧವಾಗಿ ಇಲ್ಲದಸಲ್ಲದ ದೋಷಗಳನ್ನು ಹರಡಿದ್ದರು. ಹಿಂದೂಗಳು ಅನಾಗರಿಕರೆಂದೂ ನಗ್ನರೆಂದೂ ನರಮಾಂಸ ಭಕ್ಷಕರೆಂದೂ ನೀತಿಬಾಹಿರರೆಂದೂ ಪಾಶ್ಚಾತ್ಯರು ತಿಳಿಯುವಂತೆ ಮಾಡಿದ್ದರು. ಸ್ವಾಮಿಜಿ ಅವರ ಹುಳುಕನ್ನು ಹೊರಗೆಡಹಿ ಸತ್ಯವನ್ನು ಪ್ರಕಾಶಕ್ಕೆ ತಂದರು. ಅನೇಕರು ಅನೇಕ ವಿಧವಾದ ಒರಟೊರಟಾದ ಪ್ರಶ್ನೆಯನ್ನು ಕೇಳುತ್ತಿದ್ದರು. ಒಂದು ದಿನ ಮಹಿಳೆಯೊಬ್ಬಳು “ಸ್ವಾಮಿಜಿ, ಹಿಂದೂಗಳು ಮಕ್ಕಳನ್ನು ಮೊಸಳೆಗಳಿಗೆ ಎಸೆಯುತ್ತಾರಂತೆ, ಅದು ನಿಜವೆ?” ಎಂದು ಕೇಳಿದ್ದಕ್ಕೆ ಸ್ವಾಮಿಗಳು “ಹೌದು ತಾಯಿ, ನನ್ನನ್ನೂ ನನ್ನ ತಾಯಿ ಮೊಸಳೆ ಬಾಯಿಗೆ ಬಿಸಾಡಿದ್ದಳು. ಆದರೆ ನಾನು ಹೇಗೋ ತಪ್ಪಿಸಿಕೊಂಡು ಬದುಕಿದೆ” ಎಂದು ವ್ಯಂಗ್ಯಪರಿಹಾಸ್ಯದಿಂದ ಉತ್ತರವಿತ್ತರಂತೆ. ಹೀಗೆ ಒಂದೊಂದು ಸಾರಿ ಹಾಸ್ಯದಿಂದಲೂ ಒಂದೊಂದು ಸಾರಿ ಗಾಂಭೀರ್ಯದಿಂದಲೂ ಜನರು ಕೇಳಿದ ಅಜ್ಞಾನಜನ್ಯವಾದ ಪ್ರಶ್ನೆಗಳಿಗೆ ಉತ್ತರಕೊಟ್ಟು ಮೂಢತನವನ್ನು ಪರಿಹರಿಸುತ್ತಿದ್ದರು. ಸ್ವಾಮಿಗಳು ಪಶ್ಚಿಮದೇಶಗಳಿಗೆ ಕಾಲಿಟ್ಟುದು ಬರಿಯ ಸನಾತನ ಧರ್ಮಪ್ರಚಾರ ಮಾತ್ರಕ್ಕಲ್ಲ; ಜಗತ್ತನ್ನು ಎಚ್ಚರಗೊಳಿಸುವುದಕ್ಕೆ. ಆದ್ದರಿಂದ ಅವರು ಇತರ ಮತಸ್ಥರ ಸಂಕುಚಿತ ದೃಷ್ಟಿಯನ್ನು ಹರಿಹರಿದು ವಿಶಾಲಗೊಳಿಸಲು ಸ್ವಲ್ಪವೂ ಹಿಂಜರಿಯುತ್ತಿರಲಿಲ್ಲ. ಸತ್ಯವಾದಿಯಾದ ವಿವೇಕಾನಂದರು, ಇತರ ಉಪನ್ಯಾಸಕರಂತೆ ಅಮೆರಿಕಾದ ವೈಭವದೇವತೆಗೆ ಚಾಮರ ಬೀಸುವ ಕೆಲಸಕ್ಕಾಗಿ ಮಾತ್ರ ಹೋಗಿರಲಿಲ್ಲ; ಅವರ ಕೈಯಲ್ಲಿ ಪೊರಕೆಯೂ ಇತ್ತು, ಕಸ ಗುಡಿಸುವುದಕ್ಕೆ.

ಆದ್ದರಿಂದಲೆ ಪಾದ್ರಿಗಳಲ್ಲಿ ಬಹುಜನರು ಕುಪಿತರಾಗಿ ಸ್ವಾಮಿಜಿಯನ್ನು ಪತ್ರಿಕೆಗಳಲ್ಲಿ ಖಂಡಿಸತೊಡಗಿದರು. ಸ್ವಾಮಿಗಳಿಗೆ ಸ್ನೇಹಿತರಾಗಿದ್ದ ಇನ್ನೆಷ್ಟೋ ಜನ ಪಾದ್ರಿಗಳೂ ದೊಡ್ಡ ಮನುಷ್ಯರೂ ಆ ನಿಂದೆಗಳನ್ನು ಪ್ರತಿಭಟಿಸುವಂತೆ ಅವರಿಗೆ ಹೇಳಿದರು. ಆದರೆ ಸ್ವಾಮಿಜಿ ಕೆಸರಿಗೆ ಕಲ್ಲೆಸೆಯುವ ಕ್ಷುದ್ರತೆಗೆ ಮನಗೊಡಲಿಲ್ಲ. ತಾವು ಒಂದು ದಿನವೂ ಒಬ್ಬರನ್ನಾದರೂ ನಿಂದಿಸದ ಶ್ರೀರಾಮಕೃಷ್ಣ ಪರಮಹಂಸರ ಶಿಷ್ಯರೆಂಬುದನ್ನು ಮರೆಯಲಿಲ್ಲ.

ಆ ಸಂಘದವರು ಸ್ವಾಮಿಗಳ ಉಪನ್ಯಾಸಗಳಿಂದ ಬೇಕಾದಷ್ಟು ಹಣವನ್ನು ಸಂಪಾದಿಸಿದರೂ ಮೋಸ ಮಾಡತೊಡಗಿದರು. ೨೫೦೦ ಡಾಲರುಗಳು ಸಿಕ್ಕರೆ ೨೦೦ ಡಾಲರುಗಳನ್ನು ಕೊಡಹತ್ತಿದರು. ಇದನ್ನು ನೋಡಿ ಅವರು ಜುಗುಪ್ಸೆಯಿಂದ ಆ ಸಂಘದ ಸಹವಾಸವನ್ನೇ ಬಿಟ್ಟರು. ಅದೂ ಅಲ್ಲದೆ ಗಹನ ವಿಷಯಗಳನ್ನು ಕುರಿತು, ಬೀದಿಯ ದೊಂಬಿಗೆ ಉಪನ್ಯಾಸ ಮಾಡುವುದೂ ಅವರಿಗೆ ಸರಿಯೆಂದು ತೋರಲಿಲ್ಲ.

* * *

Roman”,��i”ȯ�� � black’>, ಪ್ರಮೋದದಾಸನು “ಸ್ವಾಮಿಜಿ, ನೀವು ಸಂನ್ಯಾಸಿಗಳು; ನೀವು ಶೋಕಾರ್ತರಾಗುವುದು ಅಷ್ಟೇನೂ ತರವಲ್ಲ” ಎಂದನು.

 

ಸ್ವಾಮಿಗಳು ಗಂಭೀರಭಾವದಿಂದ ಉತ್ತರಕೊಟ್ಟರು: “ಏನು ನೀವು ಹೇಳುವುದು? ಸಂನ್ಯಾಸಿಯಾದ ಮಾತ್ರಕ್ಕೆ ಹೃದಯವಿಲ್ಲವೆ? ನಿಜವಾದ ಸಂನ್ಯಾಸಿ ಇತರರಿಗಾಗಿ ಹೆಚ್ಚಾಗಿ ಮರುಗುವನು. ಅಲ್ಲದೆ ನಾವೆಲ್ಲ ಮನುಷ್ಯರಲ್ಲವೆ? ಅದರಲ್ಲಿಯೂ ಅವರಿಬ್ಬರೂ ನನ್ನ ಗುರುಭಾಯಿಗಳು. ನಾವೆಲ್ಲರೂ ಗುರುದೇವನ ಪದತಲದಲ್ಲಿ ಒಟ್ಟಿಗೆ ಕುಳಿತವರಲ್ಲವೆ? ಕಲ್ಲೆದೆಯ ಸಂನ್ಯಾಸಕ್ಕೆ ನನ್ನ ಧಿಕ್ಕಾರವಿರಲಿ!”

ಸಂಘಕ್ಕೆ ಮೇರುದಂಡಪ್ರಾಯರಾಗಿದ್ದ ಗೃಹೀಭಕ್ತವರ್ಯರ ನಿಧನದಿಂದ ಸಂಘ ಸ್ವಲ್ಪ ಕಷ್ಟಗಳಿಗೆ ಗುರಿಯಾಯಿತು. ಸ್ವಾಮಿಜಿ ಶೋಕಭಾರಾಕ್ರಾಂತರಾದ ಗುರುಭಾಯಿಗಳ ಬಂಧುಗಳನ್ನು ಸಂತವಿಡುವುದಕ್ಕೂ ಸಂಘದ ವ್ಯವಸ್ಥೆಗಳನ್ನು ಸರಿಪಡಿಸುವುದಕ್ಕೂ ಕಾಶಿಯಿಂದ ಕಲ್ಕತ್ತಾಕ್ಕೆ ತೆರಳಿದರು.

* * *