ಅಮೆರಿಕಾದ ನಾಗರಿಕತೆಗೆ ಯೂರೋಪು ಖಂಡದ ಮತ್ತು ಪ್ರಾಚ್ಯ ದೇಶಗಳ ನಾಗರಿಕತೆಯಲ್ಲಿ ಕಾಣಬರುವ ಆರ್ಷೇಯ ಸಹಜವಾದ ಗಾಂಭೀರ್ಯವಾಗಲಿ ತೂಕವಾಗಲಿ ಗುರೂದ್ದೇಶವಾಗಲಿ ಇನ್ನೂ ಬಂದಿರಲಿಲ್ಲ. ಆದರೆ ಹುಡುಗತನಕ್ಕೆ ಸ್ವಾಭಾವಿಕವಾದ ಉತ್ಸಾಹ, ಕುತೂಹಲ, ಚಂಚಲತೆ, ಲಘುಭಾವ, ಸಾಹಸ ಪ್ರಿಯತೆ ಇವುಗಳೆಲ್ಲ ಬೇಕಾದಷ್ಟಿದ್ದುವು. ಅಲ್ಲದೆ ಅನೇಕ ಜನಾಂಗಗಳ ವಿವಿಧ ರೀತಿಯ ರಕ್ತಸಂಮಿಶ್ರಣದಿಂದ ಅಲ್ಲಿಯ ಸಂಸ್ಕೃತಿಗೆ ಇನ್ನೂ ಒಂದು ಸುಸ್ಪಷ್ಟತೆಯಾಗಲಿ ಸ್ಥಿರತೆಯಾಗಲಿ ದೊರೆಕೊಂಡಿರಲಿಲ್ಲ. ಅಲ್ಲಿಯ ಸಂಸ್ಕೃತಿ ಇನ್ನೂ ಅರೆಬೆಂದ ಕೂಳಿನಂತಿತ್ತು.

ಹುಡುಗರಿಗೆ ಅವರ ಲಘುಬುದ್ಧಿ ಅವರಿಗೇ ತಿಳಿಯುವುದಿಲ್ಲ. ಜೊತೆಗೆ ವಿಜ್ಞಾನ ಜ್ಞಾನವು ದಾನ ಮಾಡುವ ಯಂತ್ರಗಳಿಂದ ಲಭಿಸುವ ಭೌತಶಕ್ತಿಯ ಮದಿರೆ ಮೆದುಳಿಗೇರಿತೆಂದರೆ ಉನ್ಮಾದಗ್ರಸ್ತರಾಗುತ್ತಾರೆ. ಇಂದ್ರಿಯ ಸುಖ ಸಂಪ್ರಾಪ್ತಿಯೊಂದಿಗೆ ಆತ್ಮ ಸಂಯಮವೂ ಛಂದೋಬದ್ಧವಾಗಿ ಹೆಜ್ಜೆಯಿಡದಿದ್ದರೆ ಬಾಳಿನ ತಲೆ ತಿರುಗಿ, ನಡಿಗೆ ತತ್ತರಿಸಿ, ಬದುಕು ಕುಸಿದುಬೀಳುತ್ತದೆ. ಅಮೆರಿಕಾದವರಿಗೆ ವಿಪುಲಸಂಪತ್ತೂ ಅಮಿತ ಯಂತ್ರಶಕ್ತಿಯೂ ಕೈವಶವಾಗಿದ್ದ ಹಾಗೆ ಬಹುಕಾಲದ ಸಂಸ್ಕೃತಿಯ ಸಂಯಮ, ಸ್ಥೈರ್ಯ, ಗಾಂಭೀರ್ಯ, ತಾಳ್ಮೆ, ವಿವೇಕಗಳು ಕೈವಶವಾಗಿರಲಿಲ್ಲ.

ಮೊದಮೊದಲು ಆ ದೇಶದ ಯಂತ್ರನಾಗರಿಕತೆಯ ಬೆಳಕನ್ನು ಕಂಡೊಡನೆ ಅದರ ತಳುಕಿಗೆ ಮರುಳಾಗಿ ಬೆರಗುಹೊಡೆದಂತಾಗಿದ್ದ ವಿವೇಕಾನಂದರಿಗೆ ಕೆಲದಿನಗಳಲ್ಲಿಯೆ ಗುಟ್ಟು ಗೊತ್ತಾಯಿತು. ಮೇಲುಗಡೆ ಗಟ್ಟಿಯಾಗಿ ತೋರುತ್ತಿದ್ದರೂ ಒಳಗಡೆ ಟೊಳ್ಳಿದೆ ಎಂದು.

ಸಿಂಹವು ಬೇಟೆಯಾಡುವುದನ್ನು ಕಂಡೊಡನೆ ನರಿಗಳೆಲ್ಲ ಸ್ತುತಿಪಾಠಕರಾಗಿ ಅದರ ಹಿಂದೆ ಪರಿವಾರ ಹೊರಡುತ್ತವೆ. ಸಿಂಹದ ಯಶೋಪ್ರಚಾರಕ್ಕಾಗಿಯಲ್ಲ; ಅದು ತಿಂದ ಮೇಲೆ ಉಳಿಯುವ ಚೂರುಪಾರುಗಳಿಗಾಗಿ! ಸಮುದ್ರತೀರದಲ್ಲಿ ಬೆಸ್ತನು ಮಾರಿಬಲೆಯನ್ನು ಬೀಸಿ ದಡಕ್ಕೆಳೆಯುವಾಗ ಹದ್ದು, ಗಿಡುಗ, ಕೊಕ್ಕರೆ, ಬೆಳ್ಳಕ್ಕಿ, ಕಾಗೆ ಮುಂತಾದವುಗಳೆಲ್ಲ ನೆರೆಯುವಂತೆ ವಿವೇಕಾನಂದರ ಸುತ್ತಲೂ ಕೆಲವರು ನೆರೆದರು. ತಮ್ಮ ಅಥವಾ ತಮ್ಮ ಪಂಗಡದ ಸ್ವಾರ್ಥಕ್ಕಾಗಿ ಅವರನ್ನು ಉಪಯೋಗಿಸಿಕೊಳ್ಳಲೂ ಪ್ರಯತ್ನಿಸಿದರು. ಗುಟ್ಟು ಗೊತ್ತಾದೊಡನೆ ಸ್ವಾಮಿಜಿ ನಿರ್ದಾಕ್ಷಿಣ್ಯವಾಗಿ ಮೈ ಕೊಡಹಿ, ಉಪಕಾರ ಮಾಡುವ ನೆವದಿಂದ ನೆತ್ತರು ಹೀರಲಿಕ್ಕೆ ಮೇಲೇರಿದ್ದ ಆ ಬಂದಿಳಿಕೆಗಳಿಂದ ಪಾರಾದರು. ಜಳ್ಳು ತೂರಿಹೋದ ಮೇಲೆ ಕೆಲವು ಗಟ್ಟಿ ಕಾಳು ಮಾತ್ರ ಉಳಿದುಕೊಂಡುವು.

ಈ ಮಧ್ಯೆ ಅವರು ಜ್ಞಾನಾಭಿವೃದ್ಧಿಗೆ ದೊರೆತ ಸಮಯಗಳನ್ನು ದುರುಪಯೋಗಪಡಿಸಲಿಲ್ಲ. ಪ್ರಾಚ್ಯಪಾಶ್ಚಾತ್ಯ ಸಂಸ್ಕೃತಿಗಳ ತಾರತಮ್ಯವನ್ನು ಪರಿಶೀಲಿಸಿದರು. ಅಲ್ಲಿಯ ಶಿಲ್ಪಕಲೆ, ವಿಜ್ಞಾನ, ಯಂತ್ರಕಲೆ ಮೊದಲಾದುವುಗಳನ್ನು ತಿಳಿಯಲು ಪ್ರಯತ್ನಿಸಿದರು. ಯಾವುದನ್ನು ನೋಡಿದರೂ ಚೆನ್ನಾಗಿ ಪರೀಕ್ಷಿಸದೆ ಬಿಡುತ್ತಿರಲಿಲ್ಲ. ಅವರ ಸಂಗವೇ ಜ್ಞಾನದಾಯಕವಾಗಿತ್ತೆಂದು ಆಗ ಅವರೊಡನೆ ಇದ್ದವರು ಹೇಳಿದ್ದಾರೆ. ಅಮೆರಿಕಾ ದೇಶದ ಸಾಮಾಜಿಕ ಮತ್ತು ರಾಜಕೀಯ ಜೀವನಗಳನ್ನು ಒಳಹೊಕ್ಕು ನೋಡತೊಡಗಿದರು. ಆ ದೇಶದ ವಿದ್ಯಾಭ್ಯಾಸದ ಕ್ರಮವನ್ನು ತಿಳಿದರು. ಪಾಶ್ಚಾತ್ಯರ ಇಂದ್ರಿಯಗಳು ಬಹಿರ್ಗತವಾಗಿರುವುದನ್ನೂ ಪ್ರಾಚ್ಯವು ಅಂತರ್ಮುಖಿಯಾಗಿರುವುದನ್ನೂ ಪ್ರತ್ಯಕ್ಷಾನುಭವದಿಂದ ಕಂಡು ಕೊಂಡರು. ತಮ್ಮ ಅನುಭವಗಳನ್ನೆಲ್ಲ ಕಾಗದದ ಮೂಲಕ ಪ್ರಾಚ್ಯ ಶಿಷ್ಯರಿಗೆ ತಿಳಿಸುತ್ತಲೆ ಇದ್ದರು. ಅವರನ್ನು ಹುರಿದುಂಬಿಸುತ್ತಲೆ ಇದ್ದರು. ಶಿಷ್ಯರೂ ಕಾಗದಗಳನ್ನು ಬರೆಯುತ್ತಲೆ ಇದ್ದರು.

ಸ್ವಾಮಿಗಳಿಗೆ ಅಮೆರಿಕಾ ದೇಶದ ಸ್ತ್ರೀಯರ ಧೀಶಕ್ತಿಯನ್ನು ಕಂಡು ಆಶ್ಚರ್ಯವಾಯಿತು. ಒಂದು ಕಾಗದದಲ್ಲಿ ಅವರು ಆ ದೇಶದ ಸ್ತ್ರೀಯರ ವಿಚಾರಗಳನ್ನೆಲ್ಲ ಹೊಗಳಿ ಬರೆದು, ತರುವಾಯ “ಭರತಖಂಡದ ಸ್ತ್ರೀಯರನ್ನು ಎಚ್ಚರಗೊಳಿಸಲು ಪ್ರಯತ್ನಿಸಲಾರಿರಾ! ಅವರು ಉನ್ನತಿಯನ್ನೈದಿದರೆ ದೇಶಕ್ಕೆ ಸುಖವುಂಟು. ಇಲ್ಲವಾದರೆ ನಮಗೆ ಈಗಿರುವ ಅಧೋಗತಿಯೆ ಪರಮಗತಿಯಾಗುವುದು… ನಿಶ್ಚಯ; ಧರ್ಮದ ವಿಷಯದಲ್ಲಿ ಈ ದೇಶವು ನಮಗಿಂತಲೂ ಬಹಳ ಕೆಳಗಿದೆ. ಆದರೆ ನಮ್ಮಲ್ಲಿರುವುದನ್ನು ಅವರಿಗೆ ಕೊಟ್ಟು, ಅವರಲ್ಲಿರುವ ಉತ್ತಮ ವಿದ್ಯೆಗಳನ್ನು ನಾವು ಸ್ವೀಕರಿಸುವುದು ನಮ್ಮ ಕರ್ತವ್ಯ” ಎಂದು ಬರೆದಿದ್ದಾರೆ.

ಆ ಸದ್ದುಗದ್ದಲಗಳ ನಡುವೆ, ಕೀರ್ತಿ ಪ್ರಶಂಸೆಗಳ ಕೋಲಾಹಲದಲ್ಲಿ ಸಂಭಾಷಣೆ ಉಪನ್ಯಾಸಗಳ ದಾಂದಲೆಯಲ್ಲಿ ಸ್ವಾಮಿಗಳು ಧ್ಯಾನ ಮೊದಲಾದ ಆಧ್ಯಾತ್ಮಿಕ ಸಾಧನೆಗಳನ್ನು ತಿಲಮಾತ್ರವೂ ಮರೆತಿರಲಿಲ್ಲ. ಅದನ್ನು ಕುರಿತು ಸೋದರಿ ನಿವೇದಿತೆಯವರು ಈ ರೀತಿ ಬರೆದಿದ್ದಾರೆ.‌

“ಮೇಲೆ ಮೇಲೆ ನೋಡಿದರೆ ಸ್ವಾಮಿಗಳು ತಪಸ್ಸು ಮಾಡುತ್ತಿದ್ದಂತೆ ಕಾಣುತ್ತಿರಲಿಲ್ಲ; ಆದರೆ ಅವರ ಜೀವಮಾನವೆಲ್ಲವೂ ಒಂದು ತಪಸ್ಯೆಯೆ ಆಗಿತ್ತು. ಉಳಿದವರಿಗೆ ಅಂತಹ ತಪಸ್ಯೆ ಕಠೋರವಾಗಿ ಪರಿಣಮಿಸುತ್ತಿತ್ತು. ಅವರು ಅಮೆರಿಕಾಕ್ಕೆ ಹೋದಾಗ ಮೊದಲು ಮೊದಲು ಚಿತ್ತವು ಧ್ಯಾನಸ್ಥವಾಗದಂತೆ ನೋಡಿಕೊಳ್ಳುವುದೆ ಕಠಿಣವಾಗುತ್ತಿತ್ತು. ‘ಅವರು ಧ್ಯಾನಕ್ಕೆ ಕುಳಿತರೆಂದರೆ ಎರಡು ನಿಮಿಷಗಳಲ್ಲಿಯೆ ಬಾಹ್ಯಪ್ರಜ್ಞಾಹೀನರಾಗಿಬಿಡುತ್ತಾರೆ. ಸೊಳ್ಳೆಗಳ ಹಿಂಡೇ ಮುತ್ತಿದರೂ ಕೂಡ ಅವರಿಗೆ ಗೊತ್ತಾಗುವುದಿಲ್ಲ’ ಎಂದು ಅದನ್ನು ಕಂಡ ಒಬ್ಬರು ಹೇಳಿದರು. ಅವರು ಅಮೆರಿಕಾಕ್ಕೆ ಹೋಗುವಾಗ ಈ ರೀತಿ ಧ್ಯಾನಸ್ಥರಾಗುವ ಅಭ್ಯಾಸವು ಅವರಲ್ಲಿ ಬೇರೂರಿತ್ತು. ಆ ರೈಲು ರಸ್ತೆಗಳು, ಟ್ರಾಂ ರಸ್ತೆಗಳು, ಶ್ರಮಜೀವನದ ಗಡಿಬಿಡಿ ಇವುಗಳ ಮಧ್ಯೆ ಅವರು ಎಷ್ಟೋ ಸಲ ಟ್ರಾಮಿನಿಂದ ಎಲ್ಲಿ ಇಳಿಯಬೇಕೋ ಅಲ್ಲಿ ಇಳಿಯದೆ, ಗಾಡಿಯಲ್ಲಿಯೇ ಕುಳಿತು, ಒಂದೆರಡು ಸುತ್ತು ಹಿಂದಕ್ಕೂ ಮುಂದಕ್ಕೂ ತಿರುಗುತ್ತಿದ್ದರು. ಗಾಡಿ ನಡೆಯಿಸುವವನು ದುಡ್ಡು ಕೇಳಿದಾಗಲೆ ಅವರಿಗೆ ಸ್ಮೃತಿಯುಂಟಾಗುತ್ತಿದ್ದುದು. ಅಂತಹ ಘಟನೆಗಳು ಒದಗಿದಾಗ ಅವರು ಬಹಳ ನಾಚುತ್ತಿದ್ದರು; ಮುಂದೆ ಹಾಗಾಗದಂತೆ ನೋಡಿಕೊಳ್ಳಬೇಕೆಂದು ಸಂಕಲ್ಪವನ್ನೂ ಮಾಡಿಕೊಳ್ಳುತ್ತಿದ್ದರು.”

ಅಮೆರಿಕಾದಲ್ಲಿ ಸ್ವಾಮಿಗಳು ಉಪನ್ಯಾಸಯಾತ್ರೆ ಮಾಡುತ್ತಿದ್ದಾಗ ಅವರಿಗೆ ಕೆಲವು ಘಟನೆಗಳು ಒದಗಿದುವು; ವಿಚಿತ್ರವಾದ ಅನುಭವಗಳು ದೊರೆತುವು.

ಮೇಧಾವಿಯಾದ ಇಂಗರ‍್ಸಾಲ್ ಎಂಬ ತೀವ್ರ ನಾಸ್ತಿಕವಾದಿಯ ಪರಿಚಯವಾಯಿತು. ಇಬ್ಬರಿಗೂ ಗೆಳೆತನ ಬೆಳೆಯಿತು. ಇಂಗರ್‌ಸಾಲನು ಸ್ವಾಮಿಗಳನ್ನು ಕುರಿತು “ಸ್ವಾಮಿಜಿ, ನಾಲ್ವತ್ತು ವರ್ಷಗಳ ಹಿಂದೆ ನೀವು ಇಲ್ಲಿಗೆ ಬಂದು ಹೀಗೆ ಧೈರ್ಯವಾಗಿ ಬೋಧಿಸಿದ್ದರೆ ನಿಮ್ಮನ್ನು ಗಲ್ಲಿಗೆ ಹಾಕುತ್ತಿದ್ದರು; ಕಡೆಗೆ ಕಲ್ಲಿನಿಂದಾದರೂ ಹೊಡೆದೋಡಿಸುತ್ತಿದ್ದರು” ಎಂದು ಹೇಳಿದನು.

ಸ್ವಾಮಿಜಿಗೆ ಆಶ್ಚರ್ಯವಾಯಿತು, ಅಮೆರಿಕಾದವರು ಅಷ್ಟೊಂದು ಸಣ್ಣ ಮನಸ್ಸಿನವರೇ ಎಂದು. ಆದರೆ ಇಂಗರ್‌ಸಾಲನ ಪ್ರತಿಭಟನೆಗೂ ಸ್ವಾಮಿಗಳ ಮತಬೋಧೆಗೂ ವ್ಯತ್ಯಾಸವಿತ್ತು. ಇಂಗರ್‌ಸಾಲನು ದೇವರು, ಮತ, ಭಕ್ತಿ ಮೊದಲಾದ ಅಭಿಪ್ರಾಯಗಳನ್ನು ಖಂಡಿಸುತ್ತಿದ್ದನು. ಆದರೆ ಹಿಂದೂ ಸಂನ್ಯಾಸಿ ಹೊಸ ಅಭಿಪ್ರಾಯಗಳನ್ನು ಹೇಳಿದರೂ ನವದೃಷ್ಟಿಯನ್ನು ತೋರಿದರೂ ಧರ್ಮಕ್ಕೆ ವಿರೋಧವಾಗಿ ಮಾತಾಡುತ್ತಿರಲಿಲ್ಲ. ಅಲ್ಲದೆ ಕ್ರಿಸ್ತ ಮತ್ತು ಕ್ರೈಸ್ತ ಧರ್ಮಗಳಲ್ಲಿ ಆತನಿಗಿದ್ದ ಗೌರವವನ್ನು ಕಂಡು ಎಲ್ಲರೂ ಸನ್ಮಾನಿಸುತ್ತಿದ್ದರು.

ಅವರಿಬ್ಬರಿಗೂ ಇದ್ದ ವ್ಯತ್ಯಾಸ ನಡೆದ ಒಂದು ಸಂಗತಿಯಿಂದ ತಿಳಿದುಬರುತ್ತದೆ. ಇಂಗರ್‌ಸಾಲನು ಸ್ವಾಮಿಜಿಯನ್ನು ಕುರಿತು ಒಂದು ಸಾರಿ ಹೀಗೆಂದನು: “ಈ ಪ್ರಪಂಚವೆ ಕಡೆಯದೆಂದೂ, ಶ್ರೇಷ್ಠತಮವಾದುದೆಂದೂ ನನ್ನ ನಂಬಿಕೆ. ಆದ್ದರಿಂದ ಕಿತ್ತಲೆಹಣ್ಣಿನ ರಸವನ್ನು ಹಿಂಡಿ ಕುಡಿಯುವಂತೆ ಅದರಿಂದ ದೊರಕಬಹುದಾದ ಸುಖಗಳನ್ನೆಲ್ಲ ಹೇಗಾದರೂ ಪಡೆಯುವುದೇ ಲೇಸು.”

ಸ್ವಾಮಿಜಿ “ಹಣ್ಣಿನ ರಸವನ್ನು ಚೆನ್ನಾಗಿ ಹಿಂಡಲು ಅದಕ್ಕಿಂತಲೂ ಒಳ್ಳೆಯ ಉಪಾಯ ನನಗೆ ಗೊತ್ತಿದೆ; ರಸವೂ ಹೆಚ್ಚಾಗಿ ದೊರಕುತ್ತದೆ. ನಾನು ಅಚ್ಯುತನೆಂದು ನಾನು ಬಲ್ಲೆ. ಆದ್ದರಿಂದ ನಾನು ಅವಸರ ಅವಸರವಾಗಿ ರಸವನ್ನು ಹಿಂಡಲು ಹೋಗಿ ಹಣ್ಣಿನಲ್ಲಿಯೆ ರಸವುಳಿಯುವಂತೆ ಮಾಡುವುದಿಲ್ಲ. ಮುಂದಿನ ನಾಶದ ಭಯ ನನಗಿಲ್ಲ; ಆದ್ದರಿಂದ ರಸವನ್ನು ಹಿಂಡುವುದರಲ್ಲಿಯೆ ನನಗೊಂದು ಸಂತೋಷ. ನನಗೆ ಯಾವ ಭಾರವೂ ಇಲ್ಲ. ಹೆಂಡಿರಿಲ್ಲ ಮಕ್ಕಳಿಲ್ಲ. ನಾನು ಜಗತ್ತನ್ನೆ ಪ್ರೀತಿಸಬಲ್ಲೆ; ನನಗೆ ಎಲ್ಲರೂ ಈಶ್ವರ ಸ್ವರೂಪರು. ಮನುಜರಲ್ಲಿ ನಾರಾಯಣನನ್ನು ನೋಡುವುದು ಎಂತಹ ಆನಂದಕರವಾದ ಅನುಭವ! ಈ ರೀತಿ ಹಣ್ಣನ್ನು ಹಿಂಡಿದರೆ ಒಂದು ತೊಟ್ಟು ರಸವೂ ಉಳಿಯದಂತೆ ಹಿಂಡಬಹುದಷ್ಟೆ!” ಎಂದರು.

ಅನೇಕ ಸಾರಿ ಹೋಟಲುಗಳಲ್ಲಿ ಅವರನ್ನು ನೀಗ್ರೋ ಎಂದು ತಿಳಿದು ಉಳಿದುಕೊಳ್ಳಲು ಸ್ಥಳ ಕೊಡುತ್ತಿರಲಿಲ್ಲ. ಆದರೆ ಮರುದಿನ ಅವರ ವಿಚಾರ ಗೊತ್ತಾದ ಮೇಲೆ ಹೋಟಲಿನ ಯಜಮಾನರು ಅವರಲ್ಲಿಗೆ ಓಡಿಹೋಗಿ ಕ್ಷಮೆ ಬೇಡುತ್ತಿದ್ದನು. ಒಂದು ದಿನ ನೀಗ್ರೋ ಜಾತಿಗೆ ಸೇರಿದ ಒಬ್ಬ ರೈಲಿನ ಕೂಲಿ ಸ್ವಾಮಿಗಳ ಬಳಿಗೆ ಬಂದು “ನೀವು ನಮ್ಮವರಂತೆ. ಬಹಳ ಹೆಸರುವಾಸಿಯಾಗಿರುವಿರಂತೆ. ನಿಮಗೆ ನಾನು ಹಸ್ತಲಾಘವ ಕೊಡಬೇಕೆಂದು ಬಹಳ ಆಸೆ” ಎಂದನು. ಸ್ವಾಮಿಜಿ “ಆಗಲಿ ಅಣ್ಣಾ” ಎಂದು ಹಸ್ತಲಾಘವ ಕೊಟ್ಟರು.

ಒಂದು ದಿನ ಸ್ವಾಮಿಗಳು ಉಪನ್ಯಾಸದಲ್ಲಿ ಯೋಗಶಕ್ತಿಗಳ ವಿಚಾರವಾಗಿ ಒಂದೆರಡು ಮಾತುಗಳನ್ನು ಹೇಳಿ, ಸಿದ್ಧನಾದವನಿಗೆ ಅವುಗಳೆಲ್ಲ ಲಭಿಸುವುವು ಎಂದರು. ಉಪನ್ಯಾಸಾನಂತರ ಅದನ್ನು ಕೇಳಿದ್ದ ಶ್ರೀಮಂತನೊಬ್ಬನು ಅವರ ಬಳಿಗೆ ಬಂದು “ಹಾಗಾದರೆ, ಸ್ವಾಮಿ, ನೀವು ಹೇಳುವುದೆಲ್ಲ ಸತ್ಯವಾದರೆ, ನನ್ನ ಮನಸ್ಸಿನಲ್ಲಿರುವುದನ್ನೂ ನನ್ನ ಹಿಂದಿನ ವಿಚಾರಗಳನ್ನೂ ಹೇಳಿ ನೋಡೋಣ” ಎಂದನು. ಸ್ವಾಮಿಜಿ ಒಂದೆರಡು ನಿಮಿಷಗಳು ಸುಮ್ಮನಿದ್ದರು. ಏನೋ ಕಾರ್ಯವನ್ನು ಮಾಡಲು ಹಿಂಜರಿಯುವವರಂತೆ ತೋರಿದರು. ತರುವಾಯ ಆ ಶ್ರೀಮಂತನನ್ನು ಎವೆಯಿಕ್ಕದೆ ನೋಡತೊಡಗಿದರು. ಅವರ ತೀಕ್ಷ್ಣದೃಷ್ಟಿ ಆತನ ಆತ್ಮವನ್ನು ಚುಚ್ಚುವಂತಿತ್ತು. ಇದ್ದಕ್ಕಿದ್ದ ಹಾಗೆ ಹಾಸ್ಯಕ್ಕಾಗಿ ಬಂದಿದ್ದ ಶ್ರೀಮಂತನು ಗಂಭೀರವಾಗಿ, ಹೆದರಿ, “ಅಯ್ಯೋ, ಸ್ವಾಮಿಜಿ, ಇದೇನು ನೀವು ಮಾಡುತ್ತಿರುವುದು? ನನ್ನಾತ್ಮವನ್ನು ಯಾರೊ ಕಡೆದಂತಾಗುತ್ತಿದೆ. ನನ್ನ ಗುಟ್ಟುಗಳೆಲ್ಲ ಬಯಲಾಗುವಂತಿದೆ” ಎಂದು ಕೂಗಿಕೊಂಡನು. ಆ ಶ್ರೀಮಂತನಿಗೆ ಯೋಗಶಕ್ತಿಗಳ ವಿಚಾರವಾಗಿ ಸ್ವಾಮಿಗಳು ಹೇಳಿದ್ದು ನಿಶ್ಚಯವೆಂದು ಗೊತ್ತಾಯಿತು. ಸ್ವಾಮಿಜಿ ಯೋಗ ಶಕ್ತಿಗಳನ್ನು ಉಪಯೋಗಿಸುತ್ತಲೂ ಇರಲಿಲ್ಲ; ಪ್ರದರ್ಶಿಸುತ್ತಲೂ ಇರಲಿಲ್ಲ. ಏಕೆಂದರೆ ಅ ಅದ್ಭುತ ಶಕ್ತಿಗಳೂ ಇತರ ಐಶ್ವರ್ಯಗಳಂತೆ ಮನಮೋಹಿಸಿ ಸಾಧಕನನ್ನು ಅಧೋಗತಿಗೆ ತರಬಹುದು ಎಂಬ ಶ್ರೀಗುರುದೇವನ ಬುದ್ಧಿವಾದವನ್ನು ಅವರು ಮರೆತಿರಲಿಲ್ಲ.

* * *

ಯಾವ ದಿನ ಚಿಕಾಗೊ ನಗರದ ಧರ್ಮಮಹಾಸಭೆಯ ವೇದಿಕೆಯ ಮೇಲೆ ನಿಂತು ಆಚಾರ್ಯದೇವನು ತನ್ನ ಸಿಂಹವಾಣಿಯಿಂದ ವೇದಸಂದೇಶವನ್ನು ಸಾರಿದನೋ ಅದೇ ದಿನವೇ ಭಾರತಾಂಬೆಯ ಹೃದಯ ಯಾವುದೋ ಒಂದು ಅನಿರ್ದಿಷ್ಟ ಆನಂದದಿಂದ ವಿಕಂಪಿಸಿತು. ಧರ್ಮಸಭೆಯಲ್ಲಿ ನೆರೆದಿದ್ದ ಸಹಸ್ರಾರು ಸದಸ್ಯರ ಕರತಾಡನಗಳ ಬ್ರಹ್ಮಾಂಡಭೇದಕ ಮಹಾನಿನಾದವು ಸಂಯುಕ್ತ ಸಾಮ್ರಾಜ್ಯದ ಪರ್ವತ ಕಂದರಗಳಲ್ಲಿ ಪ್ರತಿಧ್ವನಿತವಾಗಿ, ವಿಸ್ತಾರವಾದ ಮಹಾಸಾಗರವನ್ನು ದಾಟಿ, ವಿಂಧ್ಯ ಹಿಮಾಚಲ ಸಹ್ಯಪರ್ವತಗಳನ್ನು ತಾಗಿ, ಇಮ್ಮಡಿ ಮುಮ್ಮಡಿ ನಾಲ್ಮಡಿಯಾಗಿ ಮೊಳಗಿತು. ಭರತಖಂಡದ ಕೋಟ್ಯನುಕೋಟಿ ನಿವಾಸಿಗಳು ಅದನ್ನು ಆಲಿಸಿ ಅದರರ್ಥವನ್ನು ಅರಿಯದೆ ಬೆಪ್ಪುಬೆರಗಾದರು. ಇದ್ದಕ್ಕಿದ್ದ ಹಾಗೆ ವಿವೇಕಾನಂದರ ಯಶೋಜ್ಯೋತಿಯಿಂದ ಪೂರ್ವ ಪಶ್ಚಿಮ ದಿಗಂತಗಳೆರಡೂ ಒಂದೇ ತಡವೆ ದೇದೀಪ್ಯಮಾನವಾದುದನ್ನು ಕಂಡು ಭಾರತೀಯರು ವಿಸ್ಮಿತರಾದರು. ಅತ್ತ ಪುತ್ರನು ಮಾತೆಯ ಕೀರ್ತಿಯನ್ನು ಹರಡಿ ಕೀರ್ತಿವಂತನಾದರೆ ಇತ್ತ ಹೆತ್ತ ಮಾತೆ ಹಿಗ್ಗದಿರುವಳೆ? ಸ್ವಾಮಿ ವಿವೇಕಾನಂದರು ಪಶ್ಚಿಮದೇಶಗಳಲ್ಲಿ ಸನಾತನ ಧರ್ಮವನ್ನು ಸಾರಿ, ಜಯ ಡಿಂಡಿಮವನ್ನು ಬಡಿದು, ವಿಜಯ ವೈಜಯಂತಿಯನ್ನು ಗಗನಕ್ಕೆತ್ತಿ ಹಿಡಿದ ಮಂಗಳವಾರ್ತೆ ಭರತವರ್ಷದ ನಗರ ನಗರಗಳಲ್ಲಿಯೂ ಹಳ್ಳಿಹಳ್ಳಿಗಳಲ್ಲಿಯೂ ಹಬ್ಬಿತು. ಜನರು ಆನಂದದ ಅಟ್ಟಹಾಸದಿಂದ ಹುಚ್ಚುಹುಚ್ಚಾದರು.

ಅದುವರೆಗೆ ಭರತಖಂಡವೆಂದರೆ ಅರ್ಧ ಬರ್ಬರ ದೇಶವೆಂದೂ ಭಾರತೀಯರೆಂದರೆ ಅನಾಗರಿಕರೆಂದೂ ಪಾಶ್ಚಾತ್ಯರಲ್ಲಿ ಪ್ರತೀತಿಯಿತ್ತು. ವ್ಯಾವಹಾರಿಕ ವಿಚಾರಗಳಲ್ಲಿ, ವ್ಯಾಪಾರ ವಿಜ್ಞಾನ ಮೊದಲಾದುವುಗಳಲ್ಲಿ ಪ್ರಚ್ಯರಿಗಿಂತಲೂ ತಾವು ಮೇಲಾದವರೆಂದು ತಿಳಿದ ಪಾಶ್ಚಾತ್ಯರು ಧರ್ಮದೃಷ್ಟಿಯಿಂದಲೂ ತಾವೇ ಹೆಚ್ಚಿನವರೆಂಬುದನ್ನು ಸ್ಥಾಪಿಸಲು ಬಯಸಿ ಸರ್ವಧರ್ಮ ಸಮ್ಮೇಳನವನ್ನು ಹೂಡಿದ್ದರು. ಅತ್ತ ಮಾನವರು ತಾವೊಂದು ವ್ಯೂಹವನ್ನು ರಚಿಸಿದರೆ, ಇತ್ತ ಈಶ್ವರನು ತಾನೊಂದು ಪ್ರತಿವ್ಯೂಹವನ್ನು ರಚಿಸಿದನು. ಕರ್ಮಪ್ರಪಂಚದಲ್ಲಿ ಜಯ ಹೊಂದಿ ಹೆಮ್ಮೆಯಿಂದ ಮೆರೆಯುತ್ತಿದ್ದ ಅವರು ಧರ್ಮ ಪ್ರಪಂಚದಲ್ಲಿ ಸೋತು ಹಿಮ್ಮೆಟ್ಟಿ ತಲೆತಗ್ಗಿಸಬೇಕಾಯಿತು. ಬೆಳಕು ಬರುವುದು ಮೂಡುದೆಸೆಯಿಂದಲ್ಲವೆ? ಸ್ವಾಮಿ ವಿವೇಕಾನಂದರು ಪಶ್ಚಿಮದೇಶಗಳಿಗೆ ಅಂತಹ ವಿಷಮತಮ ಸಂದರ್ಭದಲ್ಲಿ ಹೋದುದು ಒಂದು ಮಹತ್ತರವಾದ ಐತಿಹಾಸಿಕ ಘಟನೆ. ಸಮೀಪ ಕಾಲೀನರಾದ ನಮಗೆ ಅದರ ಅಗಾಧತೆ ತೋರದಿರಬಹುದು; ಆದರೆ ನಿಜಾಂಶ ಮುಂದೆ ಗೊತ್ತಾಗುವುದು. ಚಿಕಾಗೊ ನಗರದ ಸರ್ವಧರ್ಮ ಸಮ್ಮೇಳನದ ಕೀರ್ತಿ ಚಿರವಾದುದು ವಿವೇಕಾನಂದರಿಂದಲೇ. ಹಾಗಲ್ಲದಿದ್ದಿದ್ದರೆ ಅದು ಈಗಾಗಲೆ ಜನರ ಸ್ಮೃತಿಪಥದಿಂದ ಬಿದ್ದು ಮಣ್ಣುಗೂಡಿ ಹೋಗುತ್ತಿತ್ತು. ದಕ್ಷಿಣೇಶ್ವರ ದೇವಾಲಯವು ಹೇಗೆ ಶ್ರೀರಾಮಕೃಷ್ಣರ ಆಗಮನಮಾತ್ರಕ್ಕಾಗಿ ಸ್ಥಾಪಿತವಾಯಿತೋ, ಹಾಗೆಯೆ ಸರ್ವಧರ್ಮ ಸಮ್ಮೇಳನವು ವಿವೇಕಾನಂದರ ಪ್ರಕಾಶ ಮಾತ್ರಕ್ಕಾಗಿ ಮೂಡಿತು ಎಂದರೆ ಅತಿಶಯೋಕ್ತಿಯಾಗಲಾರದು. ಭಾರತ ವರ್ಷದ ಖ್ಯಾತಿಯಂತಿರಲಿ ಎಲ್ಲ ಪ್ರಾಚ್ಯದೇಶಗಳ ಖ್ಯಾತಿಯೇ ಮುಳುಗುವಂತಿತ್ತು. ಆದ್ದರಿಂದ ವಿವೇಕಾನಂದರ ಜಯವು ಪಾಶ್ಚಾತ್ಯರ ಮೇಲೆ ಪ್ರಾಚ್ಯರಿಗಾದ ಧರ್ಮ ಜಯವೆಂತಲೇ ಭಾವಿಸಬೇಕು. ಆದ್ದರಿಂದಲೆ ತನ್ನ ಪ್ರಾಚೀನತಮ ಗೌರವವನ್ನು ಅಪಾಯದಿಂದ ಸಂರಕ್ಷಿಸಿದ ಪ್ರಿಯಪುತ್ರನ ವಿಜಯವಾರ್ತೆಯನ್ನು ಕೇಳಿ ಭಾರತಾಂಬೆ ವಿಜಯೋತ್ಸವಪರೆಯಾದಳು.

ನಗರ ನಗರಗಳಲ್ಲಿಯೂ ಗೌರವಸೂಚಕ ಸಭೆಗಳು ಏರ್ಪಟ್ಟುವು. ಮಹಾರಾಜರುಗಳು ವಿಶೇಷ ದರ್ಬಾರುಗಳನ್ನು ನೆರಪಿದರು. ಅಲ್ಲಲ್ಲಿ ಉತ್ಸವಗಳು ಜರುಗಿದುವು. ರಾಮನಾಡಿನ ದೊರೆಗಳಾದ ಭಾಸ್ಕರವರ್ಮ ಸೇತುಪತಿಗಳೂ ಖೇತ್ರಿಯ ರಾಜರಾದ ಅಜಿತಸಿಂಹರೂ ತಮ್ಮ ಗುರುಗಳ ಗೌರವಾರ್ಥವಾಗಿಯೂ ಪುನರುಜ್ಜೀವಿತವಾದ ಸನಾತನ ಧರ್ಮಾರ್ಥವಾಗಿಯೂ ರಾಜಸಭೆಗಳನ್ನು ಸೇರಿಸಿ, ನೆರೆದ ಜನಗಳಿಗೆ ಸ್ವಾಮಿಗಳ ದಿಗ್ವಿಜಯದ ಕಥೆಯನ್ನು ತಿಳಿಸಿದರು. ಬೆಂಗಳೂರು, ಮದರಾಸು, ಕಲ್ಕತ್ತಾ ಮೊದಲಾದ ದೊಡ್ಡ ದೊಡ್ಡ ನಗರಗಳಲ್ಲಿ ಪುರಜನರು ಕಲೆತು ಸ್ವಾಮಿಗಳಿಗೆ ಅಭಿನಂದನ ಪತ್ರಗಳನ್ನು ಕಳುಹಿಸಿದರು. ವೃತ್ತಪತ್ರಿಕೆಗಳು ಶುಭವಾರ್ತೆಯನ್ನು ದೇಶದ ಮೇಲೆಲ್ಲ ಮಳೆಗರೆದುವು. ಯುಗಾಚಾರ್ಯ ಶ್ರೀಮತ್ ಸ್ವಾಮಿ ವಿವೇಕಾನಂದರ ಹೆಸರು ಮನೆಮಾತಾಯಿತು.

ಆ ಸಾರ್ವಜನಿಕ ಪ್ರದರ್ಶನ ಮತ್ತು ಕೋಲಾಹಲಗಳಿಂದ ನಮ್ಮ ದೃಷ್ಟಿಯನ್ನು ಸ್ವಲ್ಪ ತಿರುಗಿಸಿ ಸದ್ದುಗದ್ದಲವಿಲ್ಲದ ವರಾಹನಗರದ ಮುರುಕು ಮನೆಯ ಮುದ್ದು ಮಠವನ್ನು ಪ್ರವೇಶಿಸಿ ಅಲ್ಲೇನಾಗುತ್ತಿದೆ ಎಂದು ನೋಡೋಣ. ಶ್ರೀಗುರುದೇವನ ಶಿಷ್ಯರು, ವಿವೇಕಾನಂದರ ಸೋದರ ಸಂನ್ಯಾಸಿಗಳು, ಮಠದ ಮಂದಿರದಲ್ಲಿ ಕಲೆತು ವಿಸ್ಮಯ ಸಂತೋಷಗಳಲ್ಲಿ ಓಲಾಡುತ್ತಿದ್ದಾರೆ; ಸಂನ್ಯಾಸಿಯೊಬ್ಬನು ಪಾಶ್ಚಾತ್ಯ ಜಡವಾದಿಗಳನ್ನು ಗೆದ್ದನಂತೆ! ಆತನಾರು? ನಮ್ಮ ನರೇಂದ್ರನೇ ಇರಬಹುದೆ? ಯಾರಾದರೂ ಆಗಲಿ ಸನಾತನ ಧರ್ಮಕ್ಕೆ ಗೌರವ ದೊರಕಿತಲ್ಲಾ, ಅಷ್ಟೇ ಸಾಕು!

ವಿವೇಕಾನಂದ ಎಂಬ ಹೆಸರು ಶಿಷ್ಯರಿಗೆ ಹೊಸದು. ಏಕೆಂದರೆ ನರೇಂದ್ರನು ಭಾರವರ್ಷದಲ್ಲಿ ಪರ್ಯಟನೆ ಮಾಡುತ್ತಿದ್ದಾಗ ಮನಸ್ಸು ಬಂದಂತೆ ಹೆಸರಿಟ್ಟುಕೊಳ್ಳುತ್ತಿದ್ದನು. ಒಂದು ದಿನ ವಿವಿದಿಷಾನಂದರಾಗುತ್ತಿದ್ದನು. ಇನ್ನೊಂದು ದಿನ ಸಚ್ಚಿದಾನಂದರಾಗುತ್ತಿದ್ದನು. ವಿವೇಕಾನಂದ ಎಂಬ ಹೆಸರನ್ನು ಸೋದರ ಸಂನ್ಯಾಸಿಗಳು ಕೇಳಿರಲೇ ಇರಲಿಲ್ಲ. ಅಲ್ಲದೆ ತಮ್ಮ ನಾಯಕನು ಎಲ್ಲಿದ್ದಾನೆ? ಏನು ಮಾಡುತ್ತಿದ್ದಾನೆ? ಎಂಬ ವಿಚಾರಗಳೆ ಅವರಿಗೆ ತಿಳಿದಿರಲಿಲ್ಲ.

ಕಡೆಗೆ ಅವರಿಗೂ ನಿಜಾಂಶ ಗೊತ್ತಾಯಿತು, ವಿವೇಕಾನಂದರು ನರೇಂದ್ರನೇ ಅಲ್ಲದೆ ಮತ್ತೆ ಯಾರೂ ಅಲ್ಲವೆಂದು. ಹರ್ಷೋನ್ಮತ್ತರಾದರು. ಹರ್ಷಕ್ಕೆ ಅವರ ಹೃದಯ ಸಾಕಾಗಲಿಲ್ಲ; ಉಕ್ಕಿಯುಕ್ಕಿ ಕಂಬನಿಗಳಾಗಿ ಹರಿಯಿತು. ಗುರುದೇವನ ಭವಿಷ್ಯವಾಣಿ ಸಿದ್ಧಿಸಿತೆಂದು ಕುಣಿದಾಡಿದರು. ಪಾಳ್ಮನೆ “ಜಯ ಗುರುದೇವ! ಜಯ ಭಗವಾನ್! ಜಯ ರಾಮಕೃಷ್ಣ! ಜಯ ಶ್ರೀಮಾತೆ!” ಎಂಬ ಜಯರವದಿಂದ ಕಂಪಿಸಿತು.

ಇರಲಿ! ಇತ್ತ ಮಾತೃಭೂಮಿ ಪುತ್ರನ ವಿಜಯವಾರ್ತೆಯ ಸಂಭ್ರಮದಲ್ಲಿ ಮುಳುಗಿ ತೇಲುತ್ತಿರಲಿ! ಅತ್ತ ವೀರಪುತ್ರನ ಜೈತ್ರಯಾತ್ರೆಯ ವೈಭವ ವೈವಿಧ್ಯಗಳನ್ನು ಸಂದರ್ಶಿಸಲು ಬನ್ನಿ!

* * *