ಅಮೆರಿಕಾ ದೇಶಕ್ಕೆ ಸ್ವಾಮಿ ವಿವೇಕಾನಂದರು ಹೋಗುವುದಕ್ಕೆ ಮೊದಲೇ ಭಾರತೀಯ ಸಂಸ್ಕೃತಿಯ ಮತ್ತು ತತ್ತ್ವಜ್ಞಾನದ ಪ್ರತ್ಯುಷೆಯ ಮಂದಶೀತಲಕಾಂತಿ ಅಲ್ಲಿಗೆ ಪ್ರವಹಿಸಿತ್ತು. ಭಗವದ್ಗೀತೆಯನ್ನೂ ಉಪನಿಷತ್ತುಗಳನ್ನೂ ಭಾಷಾಂತರಗಳಲ್ಲಿ ಓದಿ, ಅವುಗಳ ತತ್ತ್ವಾಮೃತ ಪಾನದಿಂದ ಪೂತರಾಗಿ ಬೆಳೆದಿದ್ದ ವಿಟ್‌ಮನ್, ಎಮರ್ಸನ್ ಮೊದಲಾದ ಮಹಾಕವಿಗಳೂ ತತ್ತ್ವಜ್ಞಾನಿಗಳೂ ತಮ್ಮ ದೇಶದವರಿಗೆ ಸಹ್ಯಾದ್ರಿ ವಿಂಧ್ಯ ಹಿಮಾಚಲಗಳ ಅರಣ್ಯವಾಣಿಯನ್ನು ಸ್ವಲ್ಪ ಮಟ್ಟಿಗೆ ಪರಿಚಯ ಮಾಡಿಕೊಟ್ಟಿದ್ದರು. ಆದ್ದರಿಂದಲೇ ವಿವೇಕಾನಂದರಿಗೆ ಸುಸ್ವಾಗತವೀಯುವ ಮಿತ್ರರೂ ಪ್ರಶಂಸಕರೂ ಅಲ್ಲಿ ಬಹುಬೇಗನೆ ದೊರಕಿದುದು. ಜಳ್ಳುಗಳೆಲ್ಲ ತೂರಿಹೋದ ಮೇಲೆ ತಳದಲ್ಲಿ ಕೆಲವು ನಿಜವಾಗಿಯೂ ಗಟ್ಟಿಯಾದ ಕಾಳುಗಳು ಉಳಿದುಕೊಂಡುವು.

ವಿವೇಕಾನಂದರು ಅಮೆರಿಕಾದ ಲಘುತ್ವಕ್ಕೆ ಕಣ್ಣು ತೆರೆದಂತೆಯೆ ಅದರ ಮಹತ್ವಕ್ಕೂ ಕುರುಡಾಗಿರಲಿಲ್ಲ. ಅಲ್ಲಿಯ ಕಾರ್ಪಣ್ಯ ಮತ್ತು ಸ್ವರ್ಣಮೋಹಗಳನ್ನು ಅಲ್ಲಗಳೆದಂತೆಯೆ ಔದಾರ್ಯ ಮತ್ತು ಸಮತಾ ಭಾವಗಳನ್ನು ಕೊಂಡಾಡಿದರು. ಅಲ್ಲಿಯವರ ಯತ್ನಶೀಲತೆ, ಸಾಹಸ, ಪರದುಃಖ ಕಾತರತೆಗಳನ್ನು ಭರತಖಂಡದ ನಿರ್ವಿಣ್ಣತೆ, ನಿರಾಶೆ, ದಯಾವಿಹೀನತೆಗಳೊಡನೆ ಹೋಲಿಸಿ ಕೆಂಡದ ಕಣ್ಣೀರು ಸುರಿಸಿದ್ದಾರೆ.

ಆ ದೇಶದಲ್ಲಿ ಹೆಂಗಸರಿಗಾಗಿದ್ದ ಮಾದರಿಯ ಸೆರೆಮನೆಯೊಂದನ್ನು ನೋಡಿಕೊಂಡು ಹೊರಗೆ ಬಂದಾಗ ತಮ್ಮ ದೇಶವನ್ನು ನಿರ್ದೇಶಿಸಿ, “ಅಯ್ಯೋ ಕಟುಕರಿರಾ, ಮನುಷ್ಯತ್ವದ ಮಹಿಮೆಯನ್ನು ಕುರಿತು ಹಿಂದೂ ಧರ್ಮದಂತೆ ಮತ್ತಾವ ಧರ್ಮವೂ ಬೋಧಿಸುವುದಿಲ್ಲ; ಆದರೆ ಹಿಂದೂ ಧರ್ಮದಂತೆ ಮತ್ತಾವ ಧರ್ಮವೂ ಹೀನದೀನ ದರಿದ್ರಾನಾಥರ ಕುತ್ತಿಗೆಯ ಮೇಲೆ ಕಾಲಿಟ್ಟು ತೊತ್ತಳದುಳಿಯುವುದಿಲ್ಲ! – ತಪ್ಪು ಹಿಂದೂ ಧರ್ಮದ್ದಲ್ಲ, ಧರ್ಮ ನಟರದು” ಎಂದು ನೊಂದು ನುಡಿದರಂತೆ.

ಆ ನೋವಿನಿಂದಲೇ ಲೇಖನಿಯ ಕಠಾರಿಯನ್ನು ತಮ್ಮ ಹೃದಯರಕ್ತದಲ್ಲಿ ಅದ್ದಿ, ಭಾರತೀಯ ಯುವಕರಿಗೆ ಹೀಗೆಂದು ಬರೆದಿದ್ದಾರೆ:‌

“ಓ ನನ್ನ ತರುಣ ಮಿತ್ರರಿರಾ, ಕಂಕಣಬದ್ಧರಾಗಿ ಸೊಂಟಕಟ್ಟಿ ನಿಲ್ಲಿ. ಮಹತ್ಕಾರ್ಯಕ್ಕಾಗಿಯೆ ದೇವರ ಕರೆ ಬಂದಿದೆ ನನಗೆ… ಮುಂದಿನ ಅಭ್ಯುದಯ ನಿಮ್ಮಲ್ಲಿದೆ – ದೀನರಲ್ಲಿ, ಸರ್ವಸಾಮಾನ್ಯರಲ್ಲಿ, ಶ್ರದ್ಧಾನ್ವಿತರಲ್ಲಿ. ಬಡವರಿಗಾಗಿ ಮರುಗಿ; ಕೈಯೆತ್ತಿ ಮೊರೆಯಿಡಿ; ನೆರವು ಬಂದೇ ಬರುತ್ತದೆ. ಈ ಒಂದು ಭಾವ ಭಾರವನ್ನು ಹೊತ್ತು ಹನ್ನೆರಡು ವರ್ಷಗಳ ಕಾಲ ಸುತ್ತಿದ್ದೇನೆ. ಧನಿಕರೆಂಬುವರ ಮತ್ತು ದೊಡ್ಡವರೆಂಬುವರ ಮನೆ ಮನೆಗೆ, ಬಾಗಿಲು ಬಾಗಿಲಿಗೆ ತೊಳಲಿದ್ದೇನೆ. ಎದೆಯ ನೆತ್ತರನ್ನು ದಾರಿಯುದ್ದಕ್ಕೂ ಸೋರಿಸುತ್ತಾ ಪ್ರಪಂಚಾರ್ಧವನ್ನೂ ದಾಟಿ ಈ ಪರಕೀಯ ಪ್ರದೇಶಕ್ಕೆ ಸಹಾಯ ಕೋರಲೆಂದು ಬಂದಿದ್ದೇನೆ… ದೇವರೇ… ನನಗೆ ನೆರವಾಗುತ್ತಾನೆ… ಈ ದೇಶದಲ್ಲಿಯೇ ಹಸಿವೆಯಿಂದಲೊ ಚಳಿಯಿಂದಲೊ ನಾನು ಸಾಯಬಹುದು; ಆದರೆ, ತರುಣರಿರಾ, ಈ ನನ್ನ ಹೃದಯ ಸಹಾನುಭೂತಿಯನ್ನೂ ಬಡವರಿಗಾಗಿರುವ ಹೋರಾಟವನ್ನೂ ಅಜ್ಞಾನಿಗಳಿಗಾಗಿ ಕೆಳಗೆ ಬಿದ್ದು ತುಳಿಸಿಕೊಳ್ಳುವವರಿಗಾಗಿರುವ ಮರುಕವನ್ನೂ ನಿಮಗೆ ದಾನ ಮಾಡಿ ಸಾಯುತ್ತೇನೆ… ಜಗದೀಶ್ವರನ ಚರಣತಲದಲ್ಲಿ ಮುಖವಿಟ್ಟು ಮಹಾಯಜ್ಞಕ್ಕೆ ಸಿದ್ಧರಾಗಿ; ಸಮಸ್ತ ಜೀವಮಾನವನ್ನೆ ಬಲಿದಾನಗೈಯಲು ಸಿದ್ಧರಾಗಿ… ಅಯ್ಯೋ ಮೂವತ್ತು ಕೋಟಿ ಮಾನವರು ದಿನದಿನವೂ ಅಧೋಗತಿಗಿಳಿಯುತ್ತಿದ್ದಾರೆ!… ಜಗದೀಶ್ವರನಿಗೆ ಜಯವಾಗಲಿ, ನಾವು ಗೆದ್ದೇ ಗೆಲ್ಲುತ್ತೇವೆ. ಸಾವಿರಾರು ಯೋಧರು ರಣರಂಗದಲ್ಲಿ ಮಡಿಯಬೇಕಾಗುತ್ತದೆ; ಸಾವಿರಾರು ಯೋಧರು ಮತ್ತೆ ಮುಂದೆ ನುಗ್ಗಿ ಬಿದ್ದವರ ಸ್ಥಾನದಲ್ಲಿ ನಿಂತು ಅನುವಾಗುತ್ತಾರೆ. ಶ್ರದ್ಧೆಯಿರಲಿ, ಸಹಾನುಭೂತಿಯಿರಲಿ, ಹೃದಯವಿರಲಿ. ಬಾಳು ತುಚ್ಛವಾಗಲಿ, ಸಾವೂ ತುಚ್ಛವಾಗಲಿ. ಮಹತ್ಕಾರ್ಯದಲ್ಲಿ ಸತ್ತರೇನಂತೆ, ಬದುಕಿದರೇನಂತೆ!… ಜಯ ಜಗದೀಶ್ವರನಿಗೆ ಎಂದು ಮುಂದೆ ನುಗ್ಗಿ. ಜಗದೀಶ್ವರನೆ ನಮ್ಮ ಸೇನಾಪತಿ, ಅವನೇ ಮಾರ್ಗದರ್ಶಿ. ಹಿಂದಿರುಗಿ ನೋಡಬೇಡಿ – ಮುಂದೆ – ಮುಂದೆ! – ಇನ್ನೂ ಮುಂದೆ!…”

ಅವರ ಸಿಡಿಲಾಳ್ತನ ಅವರ ಪತ್ರಗಳಲ್ಲಿತೋರುವಂತೆ ಮತ್ತೆಲ್ಲಿಯೂ ಅಷ್ಟು ಚೆನ್ನಾಗಿ ತೋರುವುದಿಲ್ಲ. ಇನ್ನೊಂದು ಕಾಗದದಲ್ಲಿ ಹೀಗೆಂದು ಬರೆದಿದ್ದಾರೆ:‌

“ಬೆಂಕಿಯಲ್ಲಿ ಮುಳುಗಿ, ಹೆದರಬೇಡಿ! ಬೆಂಕಿಯಲ್ಲಿ ಮುಳುಗಿ ಜನರನ್ನು ಈಶ್ವರನೆಡೆಗೆ ಮೇಲೆತ್ತಿ! ಶ್ರದ್ಧೆಯೊಂದಿದ್ದರೆ ಎಲ್ಲವೂ ಸರಿಹೋಗುತ್ತದೆ.‌

“ನಾನು ದಿನವೂ ನನ್ನ ಪ್ರಾರ್ಥನೆಯಲ್ಲಿ ನಿಮ್ಮ ಶ್ರೇಯಸ್ಸನ್ನು ಕೋರುತ್ತಿದ್ದೇನೆ. ನನಗಾಗಿ ನೀವು ಪ್ರಾರ್ಥಿಸಬೇಕು. ನಾವೆಲ್ಲರೂ ಸೇರಿ ಪ್ರಾರ್ಥಿಸೋಣ. ಭಯಂಕರ ದಾರಿದ್ರ್ಯದಿಂದ ಪುರೋಹಿತರ ದೌರಾತ್ಮ್ಯದಿಂದ ಅಧೋಗತಿಗಿಳಿದಿರುವ ಭರತಖಂಡದ ಲಕ್ಷೋಪಲಕ್ಷ ಜೀವಿಗಳ ಮೇಲ್ಮೆಗಾಗಿ ನಾವೆಲ್ಲರೂ ಪ್ರಾರ್ಥಿಸೋಣ. ನಾನು ತತ್ತ್ವವೇತ್ತನಲ್ಲ; ಧರ್ಮಗುರುವಲ್ಲ; ಮಹರ್ಷಿಯಲ್ಲ; ದರಿದ್ರರಿಗಾಗಿ ಮರುಗುವ ನಾನೊಬ್ಬ ದರಿದ್ರ. ದಾರಿದ್ರ್ಯ ಮೌಢ್ಯಗಳಲ್ಲಿ ಮುಳುಗಿ ನರಳುತ್ತಿರುವ ಭಾರತೀಯ ಸ್ತ್ರೀಪುರುಷರಿಗಾಗಿ ಗೋಳಿಡುವವರು ಯಾರಿದ್ದಾರೆ? ಮಾರ್ಗವೆಲ್ಲಿ? ಹೊರಗೆ ಹೋಗುವ ಹಾದಿ ಯಾವುದು? ಬೆಳಕಿಲ್ಲ; ವಿದ್ಯೆಯಿಲ್ಲ; ಬಾಗಿಲಿಂದ ಬಾಗಿಲಿಗಲೆದು ಅವರಿಗೆ ಬೆಳಕನ್ನು ನೀಡುವವರಾರು? ದರಿದ್ರಗಣವು ನಿಮ್ಮ ದೇವರಾಗಲಿ. ಅವರಿಗಾಗಿ ಮರುಗಿ; ಅವರಿಗಾಗಿ ಕೆಲಸ ಮಾಡಿ; ಅವರಿಗಾಗಿ ಪ್ರಾರ್ಥಿಸಿ, ಈಶ್ವರನು ದಾರಿ ತೋರುತ್ತಾನೆ. ಬಡವರಿಗಾಗಿ ಎದೆ ಕರಗಿ ಮನಮರುಗುವವನೆ ಮಹಾತ್ಮ; ಮರುಗದವನು ದುರಾತ್ಮ… ಹೊಗಳುವವರಿಲ್ಲದೆ, ಕರುಣಿಸುವವರಿಲ್ಲದೆ, ಅಳುವವರಿಲ್ಲದೆ, ಅಜ್ಞಾತರಾಗಿ ನಾವು ಸಾಯಬಹುದು. ಆದರೇನು? ಸಚ್ಚಿಂತೆಯೊಂದೂ ಹಾಳಾಗುವುದಿಲ್ಲ. ಇಂದಾಗಲಿ ನಾಳೆಯಾಗಲಿ ಅದು ಮೊಳೆತೇ ಮೊಳೆಯುವುದು… ಎಲ್ಲಿಯವರೆಗೆ ಲಕ್ಷಾಂತರ ಜನರು ದಾರಿದ್ರ್ಯದಲ್ಲಿ ಹೊರಳಾಡುವರೋ ಅಲ್ಲಿಯವರೆಗೆ, ಬಡವರ ರಕ್ತಪಾನದಿಂದ ವಿದ್ಯೆಯನ್ನು ಸಂಪಾದಿಸಿದ ಪ್ರತಿಯೊಬ್ಬ ವಿದ್ಯಾವಂತನನ್ನೂ ಆತನು ಋಣ ವಿಮೋಚನೆಗಾಗಿ ಪ್ರಯತ್ನ ಮಾಡದಿದ್ದರೆ, ನೀಚ ದ್ರೋಹಿಯೆಂದು ನಾನು ಕರೆಯುತ್ತೇನೆ… ಅಣ್ಣಗಳಿರಾ, ನಾವೇನೋ ಬಡವರು, ನಾವೇನೋ ಅಜ್ಞಾತರು! ಆದರೆ ಅಂತಹವರನ್ನೇ ಈಶ್ವರನು ತನ್ನ ಆಯುಧಗಳನ್ನಾಗಿ ಉಪಯೋಗಿಸುವುದು.‌

“ಸಾವು ಬಂದರೂ ಬೆದರದೆ ನನ್ನನ್ನು ಅನುಸರಿಸುವ ಯುವಕರು ಬೇಕು. ಜಯಾಪಜಯಗಳನ್ನು ನಾನು ಲೆಕ್ಕಿಸುವುದಿಲ್ಲ… ನನ್ನ ‘ಸಂಘವು’ ಪರಿಶುದ್ಧವಾಗಿರಲೇಬೇಕು; ಇಲ್ಲದಿದ್ದರೆ ನಗರದರ ಗೊಡವೆಯೆ ಬೇಡ.‌

“ಯಾವ ದಿನ ‘ಮ್ಲೇಚ್ಛ’ ಎಂಬ ಶಬ್ದವನ್ನು ಭಾರತೀಯರು ಕಲಿತರೋ ಆ ದಿನವೇ ಅವರ ಅಧೋಗತಿಗೆ ಪೀಠಿಕೆಯೂ ಆಯಿತು.‌

“ಪರಸ್ಪರ ಸೇವೆ ಸಹಾಯಗಳನ್ನು ಹಿಂದೂಗಳಿಗೆ ತಿಳಿಸುವ ‘ಸಂಘ’ವೊಂದು ಬೇಕೇಬೇಕಾಗಿದೆ.”

ಮೊದಮೊದಲು ಅಮೆರಿಕಾ ದೇಶದವರು ಸ್ವಾಮಿ ವಿವೇಕಾನಂದರ ಬಳಿಗೆ ಬಂದುದು ಅವರ ಆಧ್ಯಾತ್ಮಿಕ ವೈಭವವನ್ನು ಕಂಡಲ್ಲ: ಅವರ ಆಕಾರ, ವಾಕ್ಶಕ್ತಿ, ವಿನಯ ಮೊದಲಾದುವುಗಳನ್ನು ಕಂಡು. ಬಂದವರು ಶಿಷ್ಯರಂತೆ ಬರಲಿಲ್ಲ; ಕೆಲವರು ಪರೀಕ್ಷೆಗಾಗಿ ಬಂದರು, ಕೆಲವರು ತಮಾಷೆಗಾಗಿ ಬಂದರು, ಮತ್ತೆ ಕೆಲವರು ಏನೋ ಹೊಸತು, ನೋಡೋಣ ಒಂದು ಕೈ ಎಂದು ಬಂದರು. ಇನ್ನೂ ಕೆಲವರು ಅವರಿಂದ ಏನಾದರೂ ಉಪಯೋಗವಾಗಬಹುದೆಂದು ಯೋಚಿಸಿ ಬಂದರು. ಸ್ವಾಮಿಗಳಿಗೆ ಇದು ತಿಳಿಯದೆ ಇರಲಿಲ್ಲ. ಆದ್ದರಿಂದಲೆ ಅವರು ಕೆಲವು ದಿನಗಳಲ್ಲಿಯೆ ದೊಡ್ಡ ದೊಡ್ಡ ಸಭೆಗಳನ್ನು ನೆರಪಿ ಉಪನ್ಯಾಸ ಕೊಡುವುದನ್ನು ಬಿಟ್ಟು, ಸಣ್ಣ ಸಣ್ಣ ಗುಂಪುಗಳಿಗೆ ಸಂಭಾಷಣೆಯ ಮೂಲಕ ವಿಷಯಗಳನ್ನು ತಿಳಿಸತೊಡಗಿದರು. ಏಕೆಂದರೆ, ಗಹನವಾದ ವಿಷಯಗಳನ್ನು ಚೆನ್ನಾಗಿ ತಿಳಿಸಲು ಉಪನ್ಯಾಸದ ಮಾರ್ಗಕ್ಕಿಂತಲೂ ಪ್ರವಚನದ ಮಾರ್ಗವೆ ಉತ್ತಮವಾದುದು. ಅದರಲ್ಲಿಯೂ ಧರ್ಮದ ವಿಚಾರದಲ್ಲಿ ಬೀದಿಯ ಡಂಗುರದಿಂದ ಒಂದಿನಿತೂ ಪ್ರಯೋಜನವಿಲ್ಲ. ಎಲ್ಲಿ ಸಾಧನೆ ಇರುವುದೋ ಅಲ್ಲಿ ಗುರುವಿನ ನೇತೃತ್ವ ಇದ್ದೇ ತೀರಬೇಕು. ಅಂತೂ ಕಡೆಕಡೆಗೆ ನಿಜವಾಗಿಯೂ ಧರ್ಮದಲ್ಲಿ ಅಭಿರುಚಿಯುಳ್ಳ ಕೆಲಮಂದಿ ಯುವಕರು ಅವರ ಬಳಿಗೆ ಶಿಷ್ಯರಂತೆ ಬಂದರು. ಅವರಿಗಾಗಿ ದರ್ಶನ ಶಾಸ್ತ್ರಗಳನ್ನು ನಿಯಮಾನುಸಾರವಾಗಿ ಬೋಧಿಸತೊಡಗಿದರು.

ನ್ಯೂಯಾರ್ಕ್ ನಗರದಲ್ಲಿ ರಾಜಯೋಗದ ಅಧ್ಯಯನ ಮತ್ತು ಅಭ್ಯಾಸಗಳಿಗಾಗಿ ತರಗತಿಗಳು ನೇರ್ಪಟ್ಟುವು. ಅದೇ ಕಾಲದಲ್ಲಿ ಜ್ಞಾನಯೋಗದ ಉಪನ್ಯಾಸಗಳೂ ನಡೆದುವು. ಗಹನವಾದ ವೇದಾಂತ ತತ್ತ್ವ ವಿಚಾರಗಳನ್ನು ವೈಜ್ಞಾನಿಕ ಪಾರಿಭಾಷಿಕ ಶಬ್ದಗಳಲ್ಲಿ ಹುದುಗಿಸಿ ಪಾಶ್ಚಾತ್ಯರಿಂದ ಸುಲಭ ಗ್ರಾಹ್ಯವಾಗಿರುವ ರೀತಿಯಲ್ಲಿ ಸ್ವಾಮಿಗಳು ಬೋಧಿಸಿದರು. ಅದರಿಂದ ಅನೇಕ ವಿಜ್ಞಾನಶಾಸ್ತ್ರಜ್ಞರೂ ಮತ್ತು ವಿದ್ವಾಂಸರೂ ದಿನವೂ ಸ್ವಾಮಿಗಳ ತರಗತಿಗಳಿಗೆ ಬರುತ್ತಿದ್ದರು. ಆಧ್ಯಾತ್ಮಿಕ ವಿಚಾರಗಳನ್ನು ವೈಜ್ಞಾನಿಕವಾಗಿ ವಿವರಿಸುವುದು ಅವರಿಗೆ ತೀರಾ ಹೊಸದಾಗಿತ್ತು. ಸ್ವಾಮಿಗಳ ಧೀಸೂಕ್ಷ್ಮತೆಯನ್ನು ನೋಡಿ ಅವರಿಗೆಲ್ಲಾ ಆಶ್ಚರ್ಯವಾಯಿತು. ಈ ಉಪನ್ಯಾಸಗಳು ಕೆಲವು ದಿನಗಳಲ್ಲಿಯೆ ರಾಜಯೋಗ ಎಂಬ ಗ್ರಂಥರೂಪದಲ್ಲಿ ಹೊರಬಿದ್ದುವು. ಅದನ್ನು ಓದಿದ ಪ್ರಸಿದ್ಧ ಮನಃಶಾಸ್ತ್ರಜ್ಞರಾದ ವಿಲಿಯಂ ಜೇಮ್ಸ್ ಎಂಬುವರೂ ಸ್ವಾಮಿಗಳ ಬಳಿಗೆ ಬಂದು ಅವರ ಪರಿಚಯ ಮಾಡಿಕೊಂಡರು. ತರುವಾಯ ಅವರಿಬ್ಬರೂ ಆಜನ್ಮಮಿತ್ರರಾಗಿದ್ದರು.

ವೇದಾಂತವು ಮೆಲ್ಲಮೆಲ್ಲನೆ ಬೇರೂರುತ್ತ ಬಂದಿತ್ತು. ಸ್ವಾಮಿಗಳು ತಮ್ಮ ತರುವಾಯ ಆ ದೇಶದಲ್ಲಿ ತಾವು ಪ್ರಾರಂಭಿಸಿದ ಕೆಲಸವನ್ನು ಮುಂದುವರಿಸುವುದಕ್ಕಾಗಿ ಯೋಗ್ಯತಮ ಶಿಷ್ಯರನ್ನು ಸ್ವೀಕರಿಸಲಾರಂಭಿಸಿದರು. ಕೆಲವರಿಗೆ ಸಂನ್ಯಾಸವನ್ನೂ ಕೊಟ್ಟರು. ಮತ್ತೆ ಕೆಲವರು ಬ್ರಹ್ಮಚರ್ಯ ದೀಕ್ಷೆಯನ್ನೂ ಕೈಕೊಂಡರು. ಅವರಲ್ಲಿ ಕೆಲವರು ಶ್ರೀಮಂತ ಪಂಗಡಕ್ಕೆ ಸೇರಿ ಕೃತವಿದ್ದರೂ ಸುಸಂಸ್ಕೃತರೂ ಆಗಿದ್ದರು, ಇನ್ನು ಕೆಲವರು ಧೀಶಕ್ತಿ ಸಾಮರ್ಥ್ಯವನ್ನು ಪಡೆದ ಬುದ್ಧಿಮತಿಗಳಾಗಿದ್ದರು.

೧೮೯೫ನೆಯ ವರ್ಷದ ಜೂನ್ ತಿಂಗಳ ಹೊತ್ತಿಗೆ ಅವರು ಬಿತ್ತಿದ ವೇದಾಂತದ ಬೀಜವು ಮೊಳೆತು ಗಿಡವಾಯಿತು. ಸ್ವಾಮಿಗಳಿಗೆ ನಾಲ್ಕಾರು ಕಡೆಗಳಿಂದ ಧನಸಹಾಯವೂ ಬರಲಾರಂಭಿಸಿತು. ಆ ವರ್ಷದಲ್ಲಿ ಕೆಲಸವೂ ಅತಿಯಾಯಿತು; ವಿರಾಮವಿಲ್ಲದೆ ದಣಿದರು. ಅವರ ವೈದ್ಯುತಿಕ ಚಿರನೂತನ ಯೌವನವು ಕೂಡ ಬಳಲಿತು. ಒಂದೊಂದು ಸಾರಿ ಅವರಿಗೆ ಆ ಜೀವನವೇ ಸಾಕಾಗಿ ತೋರುತ್ತಿತ್ತು. ಸ್ನೇಹಿತರೊಬ್ಬರಿಗೆ ಬರೆದ ಕಾಗದದಲ್ಲಿ “ಸಾಕಪ್ಪಾ ಸಾಕು, ಈ ಜೀವನ. ಆ ನನ್ನ ಹರಕಲು ಬಟ್ಟೆ, ನನ್ನ ಬೋಳು ಮಂಡೆ, ಮರಗಳಡಿ ಮಲಗಿ ನಿದ್ರಿಸುವ ಆ ನನ್ನ ಸುಖ ಶಾಂತ ಜೀವನ, ಮಧುಕರ ವೃತ್ತಿಯಿಂದ ದೊರೆತ ನನ್ನ ಆ ಭಿಕ್ಷಾನ್ನ, ಅವುಗಳಿಗಾಗಿ ನಾನು ಹಾತೊರೆಯುತ್ತಿದ್ದೇನೆ” ಎಂದು ಬರೆದರು.

ಕೆಲಸದ ಸುಂಟರಗಾಳಿಯಲ್ಲಿ ಸಿಕ್ಕಿ ಬಳಲಿದ ಅವರು ಸ್ವಲ್ಪ ವಿಶ್ರಾಂತಿಗೆ ಎಳಸಿದರು. ದೇಹ ಬಳಲಿತ್ತು; ಮೆದುಳೂ ಕೂಡ ಆಯಾಸಗೊಂಡಿತ್ತು. ತಮ್ಮ ಉದ್ದಿಷ್ಟ ಕಾರ್ಯವೂ ಕ್ರಮಕ್ರಮೇಣ ಬೇರೂರಿತು. ತಮ್ಮ ಸಂದೇಶವನ್ನು ಸಾವಿರಾರು ಜನರು ಕೇಳಿದ್ದರು. ಅನೇಕರು ಸ್ವೀಕರಿಸಿದ್ದರು. ಬಹುಜನರು ಶಿಷ್ಯರಾಗಿಯೂ ಇದ್ದರು. ಮತ್ತೆ ಕೆಲವರು ವೇದಾಂತಕ್ಕಾಗಿ ಅರ್ಪಿತ ಪ್ರಾಣರಾಗಿ ತಮ್ಮಿಂದ ಸಂನ್ಯಾಸ ಮತ್ತು ಬ್ರಹ್ಮಚರ್ಯೆ ದೀಕ್ಷೆಗಳನ್ನೂ ತೆಗೆದುಕೊಂಡಿದ್ದರು. ತಮ್ಮ ಸಂದೇಶ ಆಗಲೇ ಇತರರ ಬಾಯಿಂದ ಮರುದನಿಯಾಗಲು ಪ್ರಾರಂಭವಾಗಿತ್ತು.

ಶಿಷ್ಯರಲ್ಲೊಬ್ಬನಿಗೆ ಸೆಂಟ್ ಲಾರೆನ್ಸ್ ನದಿಯ ನಡುವೆಯಿದ್ದ ಒಂದು ರಮಣೀಯವಾದ ದ್ವೀಪದಲ್ಲಿ ಸುಂದರ ಭವನವೊಂದಿತ್ತು. ಆ ಸ್ಥಳದ ಹೆಸರು “ಸಹಸ್ರದೀಪೋದ್ಯಾನ”. ಅಲ್ಲಿ ಯಾವ ವಿಧವಾದ ಗಲಭೆಗೂ ಅವಕಾಶವಿರಲಿಲ್ಲ. ಅದನ್ನು ಕಂಡು ಆ ಶಿಷ್ಯನು ಸ್ವಾಮಿಗಳಿಗೆ ವಾಸಿಸಲು ತನ್ನ ಆ ಶಾಂತಿನಿಕೇತನವನ್ನು ಕೊಟ್ಟನು. ತರುವಾಯ ಅವರು ಕೆಲವು ಜನ ಶಿಷ್ಯರೊಂದಿಗೆ ಅಲ್ಲಿಗೆ ಹೋದರು. ಅಲ್ಲಿಯ ಗುರುಶಿಷ್ಯರ ಜೀವನವನ್ನು, ತರುವಾಯ ಹರಿದಾಸಿ ಎಂದು ಹೆಸರು ಪಡೆದ ಮಿಸ್ ವಾಲ್ಡೋ ಎಂಬ ಮಹಿಳೆ ಚೆನ್ನಾಗಿ ವರ್ಣಿಸಿದ್ದಾಳೆ:‌

“ಯಾರು ಉಳಿದ ಹವ್ಯಾಸಗಳನ್ನೆಲ್ಲ ಒತ್ತಟ್ಟಿಗಿಟ್ಟು ವೇದಾಂತ ದರ್ಶನಾಧ್ಯಯನ ಮಾಡಲು ಕಾತರರಾಗಿರುವರೊ, ಯಾರು ನ್ಯೂಯಾರ್ಕ್ ನಗರಕ್ಕೆ ಮುನ್ನೂರು ಮೈಲಿಗಳ ದೂರದಲ್ಲಿರುವ ‘ಸಹಸ್ರದ್ವೀಪೋದ್ಯಾನ’ಕ್ಕೆ ಬರಲು ಹಿಂಜರಿಯುವುದಿಲ್ಲವೊ ಅಂತಹವರನ್ನು ಶಿಷ್ಯರನ್ನಾಗಿ ಸ್ವೀಕರಿಸುವೆನೆಂದು ಸ್ವಾಮಿಗಳು ಹೇಳಿದರು. ಹೆಚ್ಚು ಜನರು ತಮ್ಮನ್ನು ಹಿಂಬಾಲಿಸುವರೆಂಬ ನಂಬುಗೆ ಅವರಿಗಿರಲಿಲ್ಲ.‌

“ಆ ಭವನ ಮಿಸ್ ಡಿ – ಗೆ ಸೇರಿತ್ತು. ಅವರು ತಮ್ಮ ಗುರುಗಳ ಸೌಕರ್ಯಕ್ಕಾಗಿಯೂ ಇತರ ಶಿಷ್ಯರ ಉಪಯೋಗಕ್ಕಾಗಿಯೂ ಮನೆಯನ್ನು ವಿಸ್ತರಿಸಿ ಒಂದು ಗುಡಿಯನ್ನೂ ನಿರ್ಮಿಸಿದರು. ಭವನವು ಒಂದು ಎತ್ತರವಾದ ಸ್ಥಳದ ಮೇಲಿತ್ತು. ಅಲ್ಲಿಂದ ನೋಡಿದರೆ ಮರಗಿಡಗಳಿಂದ ತುಂಬಿದ ಹಸುರಾದ ಕಣಿವೆಯೂ, ನಡುನಡುವೆ ಸುತ್ತಿ ಸುತ್ತಿ ಬಳುಕಿ ಬಳುಕಿ ಮೊರೆದು ಮೊರೆದು ಹರಿಯುತ್ತಿದ್ದ ವಾಹಿನಿಯೂ, ವಾಹಿನಿಯ ನುಣ್ಣನೆಯ ಬೆಳ್ಳೆದೆಯ ಮೇಲೆ ರಂಜಿಸುವ ಹಸುರು ಮಣಿಗಳಂತೆ ಅಲ್ಲಲ್ಲಿ ರಮಣೀಯವಾಗಿ ಮೇಲೆದ್ದಿರುವ ಸುಂದರ ಶ್ಯಾಮಲ ದ್ವೀಪಸಂಕುಲಗಳೂ ಕಂಗಳಿಗೆ ಮನೋಹರವಾಗಿದ್ದುವು. ಬಹುದೂರ ದಿಗಂತದಲ್ಲಿ ಕ್ಲಾಯ್‌ಟನ್ ನಗರದ ಸೌಧಶಿಖರಗಳೂ ಕೆನಡಾ ರಾಜ್ಯದ ರೇವುಗಳೂ ಮಬ್ಬುಮಬ್ಬಾಗಿ ಅರೆನೆನಪಿರುವ ದೂರದ ಕನಸುಗಳಂತೆ ತೋರುತ್ತಿದ್ದುವು. ಕುಟೀರ ಒಂದು ಗುಡ್ಡದ ತಪ್ಪಲಿನಲ್ಲಿತ್ತು. ಗುಡ್ಡದ ಪಶ್ಚಿಮೋತ್ತರ ಭಾಗಗಳು ಇಳಿಜಾರಾಗಿ ಆಶ್ರಮದ ಅಂಗಳದವರೆಗೂ ಕಾಲು ಚಾಚಿದ್ದುವು. ಹೊಳೆ ಆ ಗುಡ್ಡದ ಪಕ್ಕದಲ್ಲಿಯೆ ಹರಿಯುತ್ತಿದ್ದುದರಿಂದ ಬಳಿಯಲ್ಲಿದ್ದ ಒಂದು ಗಿರಿ ಕಂದರದ ತುಂಬ ನೀರು ತುಂಬಿಕೊಂಡು ಒಂದು ಚಿಕ್ಕ ಕೊಲ್ಲಿಯಾಗಿತ್ತು. ಅದನ್ನೊಂದು ಸರೋವರವೆಂದರೂ ಎನ್ನಬಹುದು. ಕುಟೀರ ಅಕ್ಷರಶಃ ಬಂಡೆಯ ಮೇಲೆ ನಿಂತಿತ್ತು. ಅದರ ಸುತ್ತಲೂ ಗಜಾಕಾರವಾಗಿದ್ದ ದೊಡ್ಡ ಕರಿಬಂಡೆಗಳು ಮಲಗಿದ್ದುವು. ಹೊಸದಾಗಿ ನಿರ್ಮಿತವಾಗಿದ್ದ ಕುಟೀರದ ಭಾಗವಂತೂ ಬಂಡೆಗಳ ಮೇಲೆಯೆ ಒರಗಿಕೊಂಡಂತೆ ಇತ್ತು. ಅದರ ಉಪ್ಪರಿಗೆಯೆ ಉಪದೇಶಮಂದಿರವಾಯಿತು. ಅಲ್ಲಿ ಸ್ವಾಮಿಗಳು ದಿನವೂ ನಾಲ್ಕೈದು ಗಂಡೆಗಳವರೆಗೆ ತತ್ತ್ವಬೋಧನೆ ಮಾಡುತ್ತಿದ್ದರು. ಆ ಉಪ್ಪರಿಗೆಯಲ್ಲಿ ಉಪದೇಶ ಮಂದಿರದ ಪಕ್ಕದಲ್ಲಿ ಸ್ವಾಮಿಗಳ ನಿವಾಸಕ್ಕೆ ನೇರ್ಪಟ್ಟಿತ್ತು. ಅದು ಏಕಾಂತವಾಗಿರಲೆಂದು ಮಿಸ್ ಡಿ – ಯವರು ಅದಕ್ಕೊಂದು ಪ್ರತ್ಯೇಕವಾದ ಸೋಪಾನ ಶ್ರೇಣಿಯನ್ನು ಹೊರಗಡೆಯಿಂದ ಜೋಡಿಸಿದರು.‌

“ಗುರುವರ್ಯರು ತಮ್ಮ ಕೋಣೆಯ ಬಾಗಿಲು ಬಳಿಯಲ್ಲಿ ಕುಳಿತುಕೊಂಡು ನಮಗೆಲ್ಲ ಉಪದೇಶ ಮಾಡುತ್ತಿದ್ದರು. ಸಂಜೆಯಾಗಿ ಕತ್ತಲಾದರೂ ಒಬ್ಬರೂ ಅಲ್ಲಾಡುತ್ತಿರಲಿಲ್ಲ. ಶಕ್ತಿಪೂರ್ಣವಾದ ಗಭೀರ ಗುರುವಾಣಿಯನ್ನು ಕಿವಿಗೊಟ್ಟು ಕೇಳುತ್ತ ನಾವೆಲ್ಲ ಮೈಮರೆತು ಬಿಡುತ್ತಿದ್ದೆವು. ನಿಜವಾಗಿಯೂ ಅದೊಂದು ಈಶ್ವರ ನಿಲಯವೆ ಆಗಿತ್ತು. ಸುತ್ತಲೂ ಮರಗಳ ದಟ್ಟವಾದ ಹಸುರು ತಳಿರಿನ ಶ್ಯಾಮಲ ಮಂದಹಾಸ; ಆ ಶ್ಯಾಮಲ ಪರ್ಣಾರ್ಣವದಲ್ಲಿ ಮುಳುಗಿಹೋದ ಹಳ್ಳಿಯ ಮನೆಗಳು ನಮ್ಮ ಸ್ಮೃತಿಪಥದಿಂದಲೂ ಜಾರಿಹೋಗುತ್ತಿದ್ದುವು. ನಗರ ನಾಗರಿಕತೆಗಳಿಂದ ಅತಿದೂರವಾದ ಯಾವುದೊ ಒಂದು ಮಹಾನೀರವ ನಿಬಿಡಾರಣ್ಯದ ಮಧ್ಯೆ ಮಹರ್ಷಿಯೊಬ್ಬನ ಮುಂದೆ ಕುಳಿತಂತೆ ನಮಗೆ ಭಾಸವಾಗುತ್ತಿತ್ತು. ಲಕ್ಷ ಲಕ್ಷ ವೃಕ್ಷ ಶ್ರೇಣಿಗಳ ಆಚೆ ದಿಗಂತ ವಿಶ್ರಾಂತವಾಗಿದ್ದ ಪಸಲೆಯೊಂದು ಹಬ್ಬಿತ್ತು. ಅಲ್ಲಿದ್ದ ಕೆಲವು ಮನೆಮನೆಯ ಸೊಡರುಗಳು ಕವಿದು ಬರುತ್ತಿದ್ದ ಕಗ್ಗತ್ತಲೆಯಲ್ಲಿ ಮಿಣುಕುತ್ತಿದ್ದುವು. ಆದರೆ ಅವುಗಳು ಬಹುದೂರವಾಗಿದ್ದುದರಿಂದ ಚಿತ್ರಾರ್ಪಿತ ಸ್ವಪ್ನದಂತೆ ತೋರುತ್ತಿದ್ದುವೆ ಹೊರತು ವಾಸ್ತವದಂತೆ ಕಾಣುತ್ತಿರಲಿಲ್ಲ. ಮಾನುಷವಾಣಿಯೊಂದೂ ನಮ್ಮ ಕಿವಿಗೆ ಬೀಳುತ್ತಿರಲಿಲ್ಲ. ಕ್ರಿಮಿಕೀಟಗಳ ಕೀಚುದನಿ, ವನವಿಹಂಗಮಗಳ ನುಣ್ಚರ, ತಳಿರ ನಡುವೆ ತುಳಿದಾಡುವ ತಂಗಾಳಿಯ ಸುಯ್ದನಿ! ಕೆಲವು ಸಾರಿ ಮೂಡಿದ ತಿಂಗಳ ಮುದ್ದಾದ ಬೆಳ್ದಿಂಗಳ ಮನೋಹರವಾದ ಕಾಂತಿಯ ಇಂಪಿನಿಂದ ದೃಶ್ಯ ಸ್ವರ್ಗೀಯವಾಗುತ್ತಿತ್ತು. ನುಣ್ಣನೆ ನೀರಿನ ಸಣ್ಣ ಸಣ್ಣಲೆಗಳು ಕೌಮುದಿಯನ್ನು ಕನ್ನಡಿಸಿ ಕೋಟ್ಯನುಕೋಟಿ ಮಿಣುಕುಹುಳಗಳ ಮುಂದೆಯಂತೆ ಕಳಕಳಿಸಿ ಮಿಂಚುತ್ತಿದ್ದುವು. ಇಂತಹ ಅಲೌಕಿಕ ಸುಂದರ ಸಮ್ಮೋಹಕ ಸನ್ನಿವೇಶದಲ್ಲಿ, ‘ಮರೆತ ಲೋಕದ ಬಗೆಗೆ ಸುಳಿಸುವ ಮರೆವ ಲೋಕದಲಿ’ ನಮ್ಮ ಪ್ರಿಯ ಆಚಾರ್ಯ ದಿವ್ಯಸನ್ನಿಧಿಯಲ್ಲಿ, ಆತನ ಮಂಗಳಮಯವಾದ ಉಪದೇಶಗಳನ್ನು ಕೇಳುತ್ತ ನಾಲ್ಕು ವಾರಗಳನ್ನು ಕಳೆದೆವು. ಅದರ ಧನ್ಯತೆ, ಗಾಂಭೀರ್ಯ, ಆನಂದ, ಆವೇಶ ಇವುಗಳು ಅವರ್ಣನೀಯವಾಗಿವೆ.‌

“ಅವರ ಸಂಭಾಷಣೆಗಳನ್ನೆಲ್ಲ ಬರೆದಿಡಲಾಗಲಿಲ್ಲ. ಕೇಳಿದವರ ಎದೆಗಳಲ್ಲಿ ಮಾತ್ರ ಅವುಗಳು ಅಚ್ಚೊತ್ತಿದಂತೆ ನಿಂತಿವೆ. ನಾವೆಂದಿಗೂ ಅವುಗಳನ್ನು ಮರೆಯಲಾರೆವು. ನಮ್ಮ ಅಜ್ಞಾನವನ್ನು ಪರಿಹರಿಸುವಾಗ, ನಮ್ಮ ಸಂದೇಹಗಳನ್ನು ನಿವಾರಿಸುವಾಗ, ನಮ್ಮ ಪ್ರಶ್ನೆಗಳಿಗೆ ಉತ್ತರ ಹೇಳುವಾಗ, ನಮ್ಮನ್ನು ಸಂತೈಸುವಾಗ, ಹುರಿದುಂಬಿಸುವಾಗ, ಮೇಲೆತ್ತುವಾಗ ಗುರುವರ್ಯನ ಆತ್ಮವೆ ಆತನ ವಾಕ್ಕಿನಲ್ಲಿ ಹೊರಸೂಸುತ್ತಿತ್ತು. ಕೆಲವು ಸಾರಿ ನಾವೆಲ್ಲ ಎದುರಿಗೆ ಕುಳಿತಿರುವುದೆ ಅವರಿಗೆ ಮರೆತುಹೋಗುತ್ತಿತ್ತು. ಅವರ ಮನಸ್ಸಿನಲ್ಲಿ ಹರಿಯುತ್ತಿದ್ದ ಗಂಭೀರ ಚಿಂತಾಪ್ರವಾಹಕ್ಕೆ ಎಲ್ಲಿ ಭಂಗಬರುವುದೋ ಎಂದು ನಾವೆಲ್ಲ ಉಸಿರಾಡಲು ಕೂಡ ಬೆದರುತ್ತಿದ್ದೆವು. ಕೆಲವು ಸಾರಿ ಅವರು ಇದ್ದಕ್ಕಿದ್ದ ಹಾಗೆ ಮೇಲೆದ್ದು ಹಿಂದಕ್ಕೂ ಮುಂದಕ್ಕೂ ತಿರುಗುತ್ತ ಸಿಡಿಲಿನ ಹೊನಲನ್ನೆ ಹೊರಸೂಸುತ್ತಿದ್ದರು. ಅವರು ತಮಗೆ ತಾವೆ ಮಾತಾಡಿಕೊಳ್ಳುವಂತೆ ತೋರುತ್ತಿತ್ತು.‌

“ಸ್ವಾಮಿ ವಿವೇಕಾನಂದರ ಸಾನ್ನಿಧ್ಯವೆ ಒಂದು ಶಾಶ್ವತವಾದ ಧ್ಯಾನದಂತಿತ್ತು. ಅವರೊಡನೆ ಎಷ್ಟು ದಿನಗಳಿದ್ದರೂ ಬೇಸರವಾಗುತ್ತಿರಲಿಲ್ಲ. ಕೆಲವು ಸಾರಿ ಇದ್ದಕ್ಕಿದ್ದ ಹಾಗೆ ಧ್ಯಾನಪರ್ವತದ ಉನ್ನತೋನ್ನತ ಶಿಖರದಿಂದ ಕೆಳಗಿಳಿದು ಬಂದು ಆಟ, ತಮಾಷೆ, ಹಾಸ್ಯ, ನಕಲಿ ಇವುಗಳಿಂದ ನಮ್ಮನ್ನು ನಗೆಗಡಲಿನಲ್ಲಿ ಮುಳುಗಿಸಿಬಿಡುತ್ತಿದ್ದರು. ಕಂಡದ್ದೆಲ್ಲ ಉಪಮೆ; ಮಾಡಿದ್ದೆಲ್ಲ ಉದಾಹರಣೆಯಾಗಿ ಬಿಡುತ್ತಿತ್ತು. ಕೆಲವು ಹಿಂದೂ ಪುರಾಣಗಳಲ್ಲಿ ಬರುವ ಕಥೆಗಳನ್ನು ಸೊಗಸಾಗಿ ಹೇಳುತ್ತ ಹೇಳುತ್ತ ತತ್ತ್ವದುರ್ಗ ಪ್ರವೇಶ ಮಾಡಿ ಅದರ ಕೇಂದ್ರಸ್ಥಾನದವರೆಗೂ ನಮ್ಮನ್ನು ಎಳೆದೊಯ್ಯುತ್ತಿದ್ದರು. ಕಟ್ಟುಕತೆಗಳಿಂದ ಗಹನ ವಿಚಾರಗಳನ್ನು ಸುಲಭವಾದ ರೀತಿಯಿಂದ ತಿಳಿಸುವುದರಲ್ಲಿ ಅವರನ್ನು ಬಿಟ್ಟರೆ ಬೇರೊಬ್ಬರಿಲ್ಲ.‌

“ನಾವೆಲ್ಲರೂ ಒಟ್ಟು ಹನ್ನೆರಡು ಜನ ಶಿಷ್ಯರಿದ್ದೆವು. ಅದರಲ್ಲಿ ಒಬ್ಬರು ಸಂನ್ಯಾಸಿಗಳಾದರು. ಐದು ಮಂದಿ ಬ್ರಹ್ಮಚಾರಿಗಳಾದರು. ನಮ್ಮ ನಮ್ಮ ಕೆಲಸಗಳನ್ನು ನಾವು ನಾವೇ ಮಾಡಿಕೊಳ್ಳುತ್ತಿದ್ದೆವು. ಗುರುವರ್ಯರೂ ಕೂಡ ಎಷ್ಟೋ ಸಾರಿ ಅಡುಗೆ ಮಾಡಿ ಇಂಡಿಯಾ ದೇಶದ ರುಚಿರುಚಿಯಾದ ಪದಾರ್ಥಗಳನ್ನು ನಮಗೆ ಬಡಿಸುತ್ತಿದ್ದರು.‌

“ಪ್ರಾತಃಕಾಲ ನಾವೆಲ್ಲರೂ ಉಪದೇಶಮಂದಿರದಲ್ಲಿ ಸೇರುತ್ತಿದ್ದೆವು. ಒಂದೊಂದು ದಿನ ಒಂದೊಂದು ವಿಷಯವಾಗಿ ಪ್ರವಚನವಾಗುತ್ತಿತ್ತು. ಭಗವದ್ಗೀತೆ, ಉಪನಿಷತ್ತುಗಳು, ವ್ಯಾಸರ ವೇದಾಂತ ಸೂತ್ರಗಳು ಮೊದಲಾದ ಅಪರಿಚಿತವಾಗಿದ್ದ ಗಹನ ಗ್ರಂಥಗಳೂ ಗುರುಶ್ರೇಷ್ಠನ ವ್ಯಾಖ್ಯಾನ ಮಹಿಮೆಯಿಂದ ನಮಗೆ ತಿಳಿಯುತ್ತಿದ್ದುವು. ಒಂದು ದಿನ ಮಧ್ವಾಚಾರ್ಯರ ದ್ವೈತ ಸಿದ್ಧಾಂತವನ್ನು, ಇನ್ನೊಂದು ದಿನ ರಾಮಾನುಜಾಚಾರ್ಯರ ವಿಶಿಷ್ಟಾದ್ವೈತವನ್ನು, ಮತ್ತೊಂದು ದಿನ ಶಂಕರಾಚಾರ್ಯರ ಗಹನತಮ ಅದ್ವೈತವನ್ನು ವಿವರಿಸುತ್ತಿದ್ದರು. ಶಂಕರಾಚಾರ್ಯರ ತತ್ತ್ವಗಳನ್ನು ಗ್ರಹಿಸುವುದು ನಮ್ಮಿಂದಾಗಲಿಲ್ಲ. ಕಡೆಗೆ ನಾವೆಲ್ಲರೂ ರಾಮಾನುಜಾಚಾರ್ಯರ ವಿಶಿಷ್ಟಾದ್ವೈತದ ಭಕ್ತರಾದೆವು.‌

“ಕೆಲವು ಸಾರಿ ನಾರದ ಭಕ್ತಿಸೂತ್ರಗಳನ್ನು ಪಾಠ ಹೇಳುತ್ತಿದ್ದರು. ಆಗಲೆ ನಮಗವರು ಭಗವಾನ್ ಶ್ರೀರಾಮಕೃಷ್ಣಪರಮಹಂಸರ ಕಥೆಯನ್ನು ವಿಶದವಾಗಿ ಹೇಳಿದುದು. ಬರಬರುತ್ತಾ ನಮಗೆಲ್ಲರಿಗೂ ಜ್ಞಾನೋದಯವಾಯಿತು. ಇಂತು ದಿನಗಳ ಮೇಲೆ ದಿನಗಳುರುಳಿ ಹೋದುವು.”

ಸಹಸ್ರದ್ವೀಪೋದ್ಯಾನದಲ್ಲಿ ಸ್ವಾಮಿಗಳು ಮಾಡಿದ ಪ್ರವಚನಗಳಲ್ಲಿ ಕೆಲವನ್ನು ಮಾತ್ರ ಶಿಷ್ಯರು ಬರೆದಿಟ್ಟರು. ಪಾಠಕರ ಅವಗಾಹನೆಗಾಗಿ ಅವುಗಳಲ್ಲಿ ಕೆಲವು ಸೂತ್ರವಾಕ್ಯಗಳನ್ನು ಇಲ್ಲಿ ಉದಾಹರಿಸುತ್ತೇವೆ:‌

“ಧ್ಯೇರ್ಯವಿರಲಿ, ಶ್ರದ್ಧೆಯಿರಲಿ, ಯಾವ ಹಾದಿಯಾದರೆ ಏನು? ಭಕ್ತಿಯೊಂದಿದ್ದರೆ ಧ್ಯೇಯಸಿದ್ಧಿಯಾಗಲೇಬೇಕು.”

“ಸಣ್ಣ ಮನಸ್ಸಿರಬಾರದು. ಏಕಮುಖತೆ ಸಾಲದು. ಸರ್ವತೋಮುಖವಾದ ಸತ್ಯವನ್ನು ಸರ್ವತೋಮುಖವಾಗಿ ಗ್ರಹಿಸಬೇಕು.”

“ಕಡಲನ್ನು ನೋಡಿ; ಅಲೆಗಳಂತಿರಲಿ. ಸಣ್ಣದು ದೊಡ್ಡದೆಂದು ಭೇದ ಮಾಡಬೇಡಿ. ಪ್ರತಿಯೊಂದು ಕೀಟವೂ ಕ್ರಿಸ್ತನ ಒಡಹುಟ್ಟು. ಇದು ದೊಡ್ಡದು ಇದು ಚಿಕ್ಕದು ಎಂದು ಹೇಳುವುದು ಹೇಗೆ? ಸೃಷ್ಟಿಯ ವ್ಯೂಹದಲ್ಲಿ ಎಲ್ಲವೂ ಮುಖ್ಯ, ಅಮುಖ್ಯವೆಂಬುದಿಲ್ಲ. ಅದರದರ ಸ್ಥಾನದಲ್ಲಿ ಅದು ಮುಖ್ಯವಾದುದು!”

“ಆತ್ಮವು ಕಾಲದೇಶಾತೀತವಾದುದು; ಸರ್ವತ್ರವಾದುದು. ಈಶ್ವರ ಕೀರ್ತನೆ ಮಾಡುವ ಪ್ರತಿಯೊಂದು ಮುಖವೂ ನನ್ನ ಮುಖ; ನೋಡುವ ಪ್ರತಿಯೊಂದು ಕಣ್ಣೂ ನನ್ನ ಕಣ್ಣು, ನಾನು ಒಂದು ಸ್ಥಳದಲ್ಲಿಲ್ಲ; ನಾವು ಒಂದು ದೇಹವಲ್ಲ; ವಿಶ್ವವೇ ನಮ್ಮ ದೇಹ. ನಾವೆಲ್ಲ ಐಂದ್ರಜಾಲಿಕರು; ನಮ್ಮಿಚ್ಛೆಯಂತೆ ದೃಶ್ಯಗಳನ್ನು ಸೃಷ್ಟಿಸುತ್ತೇವೆ. ಈಗ ನಮ್ಮ ಮನಸ್ಸು ದೇಹಸ್ಥವಾಗಿದೆ; ಆದ್ದರಿಂದ ನಮಗೆ ಒಂದೇ ಶಿರಸ್ಸು. ಸಮಾಧಿಯಲ್ಲಿ ನಮಗೆ ಸಹಸ್ರಾರು ಶಿರಗಳಾಗುತ್ತವೆ.”

“ಆತ್ಮವಚ್ಯುತವೆಂದು ತಿಳಿದರೆ ಮರಣ ತೊಲಗಲೇಬೇಕು. ನಾನೂ ನನ್ನ ತಂದೆಯೂ ಒಂದೇ ಎಂದು ಯಾವಾಗಲೂ ಧ್ಯಾನಿಸಿ.”

“’ನಾನು ಪಾಪಿ’ ಎಂದು ಕುಗ್ಗುವುದಕ್ಕಿಂತಲೂ ಮಹಾಪಾಪವು ಬೇರೊಂದು ಇಲ್ಲ.”

“ನಿರ್ಭಯತೆಯೇ ಜೀವನದ ರಹಸ್ಯ. ಮುಕ್ತಿಯೆಂದರೆ ಭಯದ ವಿನಾಶ.”

“ದುರಾಲೋಚನೆ ದುರಾಚಾರದಷ್ಟೇ ಕೆಟ್ಟದ್ದು. ಕಾಮಶಕ್ತಿಯನ್ನು ಧರ್ಮಶಕ್ತಿಯನ್ನಾಗಿ ಪರಿವರ್ತಿಸಿದರೆ ಸಿದ್ಧಿಯಾಗದೆ ತಪ್ಪದು.”

“ಸುಮ್ಮನಿರಿ, ಬಂದುದೆಲ್ಲಾ ಬರಲಿ, ಹೋದುದೆಲ್ಲಾ ಹೋಗಲಿ. ಬರಿಯ ಸಹಿಷ್ಣುತೆಯೊಂದೆ ಇದ್ದರೆ ಸಾಲದು; ನಿಸ್ಪೃಹತೆಯೂ ಇರಬೇಕು. ಸೊಳ್ಳೆಯೊಂದು ಗೂಳಿಯ ಕೊಂಬಿನ ಮೇಲೆ ಬಹಳ ಹೊತ್ತು ಕುಳಿತು ಕೆಲಸ ಮಾಡಿತು. ಗೂಳಿ ಅಲ್ಲಾಡಲೆ ಇಲ್ಲ. ಕಡೆಗೆ ಸೊಳ್ಳೆಗೆ ಧರ್ಮಬುದ್ಧಿ ಹುಟ್ಟಿತ್ತು. ಅದು ಗೂಳಿಯನ್ನು ಕುರಿತು ‘ಸ್ವಾಮಿ, ಬಸವಣ್ಣನವರೇ, ದಯವಿಟ್ಟು ಕ್ಷಮಿಸಿ, ನನ್ನಿಂದ ನಿಮಗೆ ಬಹಳ ತೊಂದರೆಯಾಯಿತು’ ಎಂದಿತು. ಅದಕ್ಕೆ ಗೂಳಿ ‘ಇಲ್ಲ, ಪರವಾಗಿಲ್ಲ, ಬೇಕಾದರೆ ನಿನ್ನ ಬಂಧುಬಳಗವನ್ನೆಲ್ಲ ಕರೆದುಕೊಂಡು ಬಂದು ನನ್ನ ಕೊಂಬಿನ ಮೇಲೆಯೆ ಜೀವಿಸು. ನಾನೇನು ಬೇಡವೆನ್ನುವುದಿಲ್ಲ’ ಎಂದಿತು.”

“ಮನುಷ್ಯತ್ವದ ಮಹಿಮೆಯನ್ನು ಎಂದೆಂದಿಗೂ ಮರೆಯಬೇಡಿ. ನಮಗಿಂತಲೂ ಬೇರೆಯಾದ ದೇವರು ಹಿಂದಿರಲಿಲ್ಲ, ಮುಂದೆ ಬರುವುದಿಲ್ಲ. ಕ್ರಿಸ್ತ ಬುದ್ಧ ಕೃಷ್ಣ ರಾಮರೆಲ್ಲ ‘ಅಹಮಸ್ಮಿ’ ಎಂಬ ಮಹಾವಾರಿಧಿಯ ತರಂಗ ಮಾತ್ರಗಳು.”

“ಪಾಪಿಗಳೆಂದರೆ ಮಹಾತ್ಮರಿಗಾಗಿ ಪ್ರಕೃತಿ ನೀಡುವ ಮೂಲ್ಯ. ಪಾಪಿಗಳನ್ನು ನೋಡಿದಾಗ ಇದನ್ನು ಮರೆಯಬೇಡಿ. ಕರ್ಮಪ್ರಪಂಚದಲ್ಲಿ ಬಡವನ ಗೆಯ್ಮೆ ಶ್ರೀಮಂತನ ಭೋಗಕ್ಕೆ ಕಾರಣವಾಗುವಂತೆ, ಧರ್ಮಪ್ರಪಂಚದಲ್ಲಿ ಪಾಪಿಗಳು ಹೆಚ್ಚಿದರೆ ಅವತಾರಗಳು ಹುಟ್ಟುತ್ತವೆ. ಇಂಡಿಯಾ ದೇಶದ ಜನಗಳೆಲ್ಲ ಅಧೋಗತಿಗೆ ಇಳಿದಿದ್ದಾಗಲ್ಲವೆ ಬುದ್ಧದೇವನು ಮೂಡಿದುದು?‌

“’ಒಂದರಲ್ಲಿಯೆ ಚೆನ್ನಾಗಿ ಮುಂದುವರಿ’ ಎಂಬುದು ಹಿಂದಿನವರ ಮತ; ‘ಎಲ್ಲದರಲ್ಲಿಯೂ ಸಮತೆಯಿರಲಿ’ ಎಂಬುದು ಇಂದಿನವರ ಮತ.”

“ಇತರರ ಭಾವಗಳನ್ನು ನಷ್ಟಗೊಳಿಸಬೇಡಿ. ಅದರಿಂದ ಗುರುಶಿಷ್ಯರಿಬ್ಬರಿಗೂ ಕೇಡು.”

“ಬುದ್ಧಿ ಗ್ರಹಿಸಿದುದನ್ನು ಯುಕ್ತಿವಾದವು ಸಂಹರಿಸಬಹುದು, ಆದರೆ ಸಿದ್ಧಿಯಾದುದನ್ನು ಮಾತ್ರ ಯಾರೂ ಸಂಹರಿಸಲಾರರು. ಅದು ಶಾಶ್ವತವಾದುದು. ಮಾತು, ಮಾತು, ಮಾತು! ಬರಿಯ ಮಾತಿನಿಂದ ಉಪಯೋಗವಿಲ್ಲ. ಎಲ್ಲೆಲ್ಲಿಯೂ ಈಶ್ವರನನ್ನು ನೋಡುವ ಶಕ್ತಿಯನ್ನು ಅಭ್ಯಾಸ ಮಾಡಿ; ಮನುಷ್ಯ, ಮೃಗ, ಊಟ, ಕೆಲಸ, ಎಲ್ಲದರಲ್ಲಿಯೂ ಎಲ್ಲೆಲ್ಲಿಯೂ ಅವನೇ ಕಾಣಲಿ!”

* * *