ಸಹಸ್ರದ್ವೀಪೋದ್ಯಾನದಲ್ಲಿ ಶಿಕ್ಷಾಕಾರ್ಯ ಮುಗಿದ ಮೇಲೆ ಸ್ವಾಮಿಗಳು ನ್ಯೂಯಾರ್ಕ್ ನಗರಕ್ಕೆ ಹಿಂತಿರುಗಿ ಬಂದು ಇಂಗ್ಲೆಂಡಿಗೆ ಹೋಗಲು ಸಿದ್ಧವಾಗಲಾರಂಭಿಸಿದರು. ಆ ದೇಶದಿಂದ ಮೇಲಿಂದ ಮೇಲೆ ಆಹ್ವಾನ ಪತ್ರಗಳು ಈ ಹಿಂದೆಯೆ ಬಂದಿದ್ದುವು. ಆದರೆ ಸ್ವಾಮಿಜಿ ಹಿಡಿದ ಕೆಲಸವನ್ನು ಮುಗಿಸದೆ ಹೋಗಲು ಇಷ್ಟಪಟ್ಟಿರಲಿಲ್ಲ. ಸ್ವಾಮಿಗಳು ಯೂರೋಪಿಗೆ ಹೊರಡುವ ವಾರ್ತೆಯನ್ನು ಕೇಳಿ ನ್ಯೂಯಾರ್ಕ್ ನಗರದಲ್ಲಿ ಅವರ ಸ್ನೇಹಿತರಾಗಿದ್ದ ಕೆಲವು ಜನ ಶ್ರೀಮಂತರೂ ಯಾತ್ರೆಗೆ ಸಿದ್ಧವಾದರು. ಅವರೆಲ್ಲರೂ ಹೊರಟು ಮೊಟ್ಟಮೊದಲು ಯೂರೋಪ್ ಖಂಡದ ಪ್ರಸಿದ್ಧ ಭೋಗವಿಲಾಸ ಕ್ಷೇತ್ರವಾದ ಪ್ಯಾರಿಸ್ಸಿಗೆ ಬಂದರು. ಪ್ಯಾರಿಸ್ ನಗರದಲ್ಲಿ ನೆಪೋಲಿಯನ್ ಚಕ್ರವರ್ತಿಯ ಸ್ಮೃತಿಸ್ತೂಪವನ್ನು ನೋಡಿ ಸ್ವಾಮಿಗಳು ಬಹಳ ಹರ್ಷಗೊಂಡರು. ಅಲ್ಲಿ ದರ್ಶನೀಯವಾದ ಸ್ಥಳಗಳನ್ನೆಲ್ಲ ಹೋಗಿ ನೋಡಿದರು. ಅಲ್ಲಿಯ ಕೆಲವು ಕೃತವಿದ್ಯರೂ ಸುಸಂಸ್ಕೃತರೂ ಸ್ವಾಮಿಜಿಯ ಮಿತ್ರರಾದರು.

ಇಷ್ಟರಲ್ಲಿ ತಮ್ಮ ಭಾರತೀಯ ಶಿಷ್ಯರಿಂದ ಅವರಿಗೊಂದು ಕಾಗದ ಬಂತು. ಅದರಲ್ಲಿ ಕ್ರೈಸ್ತಪಾದ್ರಿಗಳು ಸ್ವಾಮಿಜಿಗೆ ವಿರೋಧವಾಗಿ ಇಲ್ಲದ ಸಲ್ಲದ ದೋಷಾರೋಪಣೆಗಳನ್ನು ಮಾಡಿ, ಜನರ ಮನಸ್ಸನ್ನು ತಿರುಗಿಸುತ್ತ ಇದ್ದಾರೆಂದು ಬರೆದಿತ್ತು. ಅದನ್ನು ಓದಿದ ಸ್ವಾಮಿಗಳು ತಮ್ಮ ಪ್ರತ್ಯುತ್ತರ ಪತ್ರದಲ್ಲಿ ಹೀಗೆಂದು ಬರೆದರು:‌

“ಪೊಳ್ಳು ಮಿಷನರಿಗಳ ಐಲು ಮಾತುಗಳನ್ನು ನೀನು ಅಷ್ಟೊಂದು ಅಗಾಧವಾಗಿ ಮನಸ್ಸಿಗೆ ತೆಗೆದುಕೊಂಡುದನ್ನು ನೋಡಿ ನನಗೆ ಆಶ್ಚರ್ಯವಾಯಿತು… ಭಾರತೀಯರು ನಾನು ಇಲ್ಲಿಯೂ ಅವರ ಆಹಾರವನ್ನೇ ತಿನ್ನಬೇಕೆಂದು ನಿಜವಾಗಿಯೂ ಬಯಸುವ ಪಕ್ಷದಲ್ಲಿ, ಒಬ್ಬ ಅಡಿಗೆಯವನನ್ನೂ ಸಾಕಾಗುವಷ್ಟು ಹಣವನ್ನೂ ಕಳಿಸುವಂತೆ ಹೇಳು. ಜಿಪುಣರ ಉದಾರೋಪದೇಶಗಳನ್ನು ಕೇಳಿ ನನಗೆ ನಗು ಬರುತ್ತದೆ. ನನ್ನ ಬ್ರಹ್ಮಚರ್ಯ ಮತ್ತು ತ್ಯಾಗಗಳಿಗೆ ಭಂಗವಾಗಿದೆಯೆಂದು ಮಿಷನರಿಗಳು ಹೇಳಿದರೆ ಅವರೆಲ್ಲ ಸುಳ್ಳುಗಾರರೆಂದು ಧೈರ್ಯವಾಗಿ ಹೇಳಿಬಿಡು… ಇನ್ನು ನನ್ನ ವಿಷಯ; ನಾನು ಯಾರ ಗುಲಾಮನೂ ಅಲ್ಲ. ನನಗೆ ಯಾವ ಅಪ್ಪಣೆಯೂ ಬೇಡ. ನನ್ನ ಜನ್ಮೋದ್ದೇಶವನ್ನು ನಾನರಿತಿದ್ದೇನೆ. ನಾನು ಎಷ್ಟರಮಟ್ಟಿಗೆ ಭಾರತವರ್ಷಕ್ಕೆ ಸೇರಿದವನೋ ಅಷ್ಟರಮಟ್ಟಿಗೆ ಪ್ರಪಂಚಕ್ಕೆ ಸೇರಿದವನೂ ಆಗಿದ್ದೇನೆ… ಯಾವ ದೇಶಕ್ಕೂ ನನ್ನ ಮೇಲೆ ಹಕ್ಕಿಲ್ಲ. ನಾನು ಯಾವುದಾದರೂ ಒಂದು ಜನಾಂಗದ ಗುಲಾಮನೇನು?… ಮಾನವ ದೈವಿಕ ಪೈಶಾಚಿಕ ಶಕ್ತಿಗಳನ್ನು ಮೀರಿದ ಶಕ್ತಿ ನನಗೆ ಬೆಂಬಲವಾಗಿದೆ. ನನಗೆ ಯಾರ ಸಹಾಯವೂ ಬೇಡ. ನಾನೇ ಇತರರಿಗೆ ನೆರವಾಗುವುದರಲ್ಲಿ ಜೀವಮಾನವನ್ನು ಕಳೆಯುತ್ತಿದ್ದೇನೆ. ನಾಲ್ಕು ಅಕ್ಷರಗಳನ್ನು ಕಲಿತು ಗರ್ವದಿಂದ ಉಬ್ಬಿ, ಹಿಂದೂಗಳಲ್ಲಿ ಮಾತ್ರವೇ ಲಭಿಸುವ, ಜಾತಿಭ್ರಾಂತರೂ ಮೂರ್ಖರೂ ದಯಾಹೀನರೂ ಕೃತ್ರಿಮ ಜೀವಿಗಳೂ ನಾಸ್ತಿಕ ಕ್ರಿಮಿಗಳೂ ಆದ ಹೇಡಿಗಳಂತೆ ನಾನೂ ಬಾಳಿ ಬದುಕಿ ಸಾಯಬೇಕೆಂಬೆ ಯೇನು? ಆ ಹೇಡಿತನ ನನಗೆ ಸೇರದು. ಆ ಹೇಡಿಗಳಿಗೂ ನನಗೂ ಯಾವ ಸಂಬಂಧವೂ ಇಲ್ಲ. ನಿಮ್ಮ ಮೆಳ್ಳೆಗಣ್ಣಿನ ರಾಜಕೀಯದಲ್ಲಂತೂ ನನಗಿನಿತೂ ನಂಬುಗೆಯಿಲ್ಲ. ಪರಮಾತ್ಮ ಮತ್ತು ಸತ್ಯ ಎರಡೇ ಜಗತ್ತಿನ ರಾಜನೀತಿಗಳು; ಉಳಿದುದೆಲ್ಲ ಬರಿಯ ಐಲು.”

ಪ್ಯಾರಿಸ್‌ನಿಂದ ಇಂಗ್ಲೆಂಡಿಗೆ ಹೊರಟರು. ಆಳರಸರ ನೆಲ ತಮಗೆ ಯಾವ ವಿಧವಾದ ಸ್ವಾಗತವನ್ನು ಕೊಡುವುದೊ ಎಂದು ಸ್ವಾಮಿಜಿ ಕುತೂಹಲಿಯಾದರು. ಮಿಸ್ಟರ್ ಸ್ಟರ್ಡಿ, ಮಿಸ್ ಮುಲ್ಲರ್ ಮೊದಲಾದ ಮಿತ್ರರು ಅವರನ್ನು ಎದುರುಗೊಂಡು ಸನ್ಮಾನ ತೋರಿದರು. ಮಿತ್ರರ ಮನೆಯೊಂದರಲ್ಲಿ ಅವರಿಗೆ ನಿವಾಸಸ್ಥಾನ ಏರ್ಪಟ್ಟಿತು. ಕೆಲವು ದಿನಗಳಲ್ಲಿಯೆ ಸ್ವಾಮಿಗಳು ಸದ್ದುಗದ್ದಲವಿಲ್ಲದೆ ತಮ್ಮ ಕಾರ್ಯಕ್ಕೆ ಕೈಹಾಕಿದರು. ಅವರ ವಿಷಯ ಮೆಲ್ಲಮೆಲ್ಲನೆ ಹಬ್ಬತೊಡಗಿತು. ಅವರ ಹೆಸರು ಆಗಲೆ ಸರ್ವಧರ್ಮಸಮ್ಮೇಳನದ ಮಹಾಪುರುಷನೆಂದು ಪ್ರಖ್ಯಾತವಾಗಿತ್ತು. ಆದ್ದರಿಂದ ಅವರ ಪರಿಚಯಾರ್ಥವಾಗಿ ಅನೇಕ ಜನರು ಗುಂಪು ಗುಂಪಾಗಿ ಬರತೊಡಗಿದರು. ವೃತ್ತಪತ್ರಿಕೆಯ ಪ್ರತಿನಿಧಿಗಳು ಬಂದು ನಾನಾ ಪ್ರಶ್ನೆಗಳನ್ನು ಕೇಳತೊಡಗಿದರು. ಪತ್ರಿಕೆಗಳು ಸ್ವಾಮಿಗಳ ವಾಕ್ಶಕ್ತಿ ಧೀಶಕ್ತಿಗಳನ್ನು ನುತಿಸಿ ಬರೆದುವು. ಅವರ ಸಂಭಾಷಣೆಗಳ ವಾರ್ತೆ ಹರಡಿತು. ‘ಹಿಂದೂ ಯೋಗಿ’ಯನ್ನು ನೋಡಲು ತಂಡೋಪತಂಡವಾಗಿ ಜನರು ಬಂದರು. ಸ್ಟರ್ಡಿ ಎಂಬಾತನಿಂದ ಸ್ವಾಮಿಗಳಿಗೆ ಬಹಳ ಉಪಕಾರವಾಯಿತು. ಆತನಿಗೆ ಹಿಂದೂಶಾಸ್ತ್ರಗಳಲ್ಲಿ ಮಮತೆಯಿತ್ತು. ಅಲ್ಲದೆ ಇಂಡಿಯಾ ದೇಶಕ್ಕೆ ಬಂದು ಹಿಮಾಲಯದ ಬಳಿ ಕೆಲವು ಯೋಗ ಸಾಧನೆಗಳನ್ನೂ ಆತನು ಮಾಡಿದ್ದನು. ಶ್ರೀಮಂತನೂ ಮೇಧಾವಿಯೂ ಮಾನನೀಯನೂ ಆದ ಆತನ ಪ್ರಭಾವದಿಂದ ಅನೇಕರು ಸ್ವಾಮಿಗಳಿಗೆ ಶಿಷ್ಯರಾದರು. ಸ್ವಾಮಿಗಳು ನ್ಯೂಯಾರ್ಕ್‌ನಲ್ಲಿ ಕೆಲಸ ಮಾಡಿದಂತೆಯೆ ಇಲ್ಲಿಯೂ ಅವಿರಾಮದಿಂದ ಕೆಲಸಕ್ಕೆ ತೊಡಗಿದರು.

ಪಿಕಡಿಲ್ಲಿಯಲ್ಲಿರುವ ‘ರಾಜಕುಮಾರ ಮಂದಿರ’ ಎಂಬಲ್ಲಿ ಅಕ್ಟೋಬರ್ ೨೨ನೆಯ ತಾರೀಖಿನಲ್ಲಿ ಉಪನ್ಯಾಸ ಏರ್ಪಟ್ಟಿತು. ಮಂದಿರವು ಜನರಿಂದ ಕಿಕ್ಕಿರಿದಿತ್ತು. ಸ್ವಾಮಿಜಿ “ಆತ್ಮಜ್ಞಾನ” ಎಂಬ ಉಪನ್ಯಾಸವನ್ನು ಮಾಡಿದರು. ಜನರು ಅದನ್ನು ಕೇಳಿ ಮುಗ್ಧರಾದರು.

‘ದಿ ಸ್ಟ್ಯಾಂಡರ್ಡ್’ ಎಂಬ ವೃತ್ತಪತ್ರಿಕೆ ಹೀಗೆಂದು ಬರೆಯಿತು: “…ರಾಮ ಮೋಹನರಾಯರಾದ ಮೇಲೆ ಕೇಶವಚಂದ್ರರ ಹೊರತು ಮತ್ತಾವ ಹಿಂದುವೂ ಆಂಗ್ಲೇಯ ವೇದಿಕೆಯ ಮೇಲೆ ನಿಂತು ಈ ರೀತಿ ಮಾತಾಡಿರಲಿಲ್ಲ. ‘ರಾಜಕುಮಾರ ಮಂದಿರ’ದಲ್ಲಿ ಉಪನ್ಯಾಸ ಮಾಡಿದ ಹಿಂದುವು ಜನರನ್ನು ತನ್ನ ವಾಗ್ವಿಲಾಸದಿಂದ ಆಕರ್ಷಿಸಿದ್ದಾನೆ. ಉಪನ್ಯಾಸದಲ್ಲಿ ಆತನು ನಮ್ಮ ಯಂತ್ರ, ಕಾರ್ಖಾನೆ ಮೊದಲಾದ ನೂತನ ನಿರ್ಮಾಣಗಳನ್ನು ಖಂಡಿಸಿದನು. ಪುಸ್ತಕಗಳಿಂದ ಆಗುತ್ತಿರುವ ಹಾವಳಿಯನ್ನು ತಿಳಿಸಿ, ಈಗಿನ ಗ್ರಂಥಗಳನ್ನೆಲ್ಲಾ ರಾಶಿ ಹಾಕಿದರೂ ಯೇಸುಕ್ರಿಸ್ತ ಅಥವಾ ಬುದ್ಧ ಮೊದಲಾದ ಮಹಾತ್ಮರ ನಾಲ್ಕು ವಚನಗಳ ಮುಂದೆ ನಿಲ್ಲಲಾರವು ಎಂದು ಹೇಳಿದನು. ಉಪನ್ಯಾಸ ಸ್ವರೂಪದಿಂದ ಅದು ಮೊದಲೆ ಸಿದ್ಧವಾದುದಲ್ಲವೆಂದು ತೋರುತ್ತದೆ; ಆದರೂ ಆಲಿಸಿದವರನ್ನು ಬಗೆ ಸೋಲಿಸಿತು.”

ಸ್ವಾಮಿಗಳ ಬಳಿಗೆ ಅನೇಕರು ಬಂದರು. ಅದೇ ಸಮಯದಲ್ಲಿಯೆ ಸೋದರಿ ನಿವೇದಿತಾ ಎಂಬ ನಾಮದಿಂದ ಸುಪ್ರಸಿದ್ಧವಾಗಿರುವ ಮಿಸ್ ಮಾರ್ಗರೆಟ್ ನೋಬಲ್ ಎಂಬಾಕೆಯೂ ಅಲ್ಲಿಗೆ ಬಂದುದು. ಆಕೆ ವಿವೇಕಾನಂದರ ವಿಶಾಲ ದೃಷ್ಟಿ, ಸರ್ವಧರ್ಮ ಸಮನ್ವಯ ತತ್ತ್ವ, ಶುಭ್ರಶೀಲ ಮೊದಲಾದವುಗಳನ್ನು ನೋಡಿ ಬೆರಗಾದಳು. ಮೊದಮೊದಲು ಆಕೆಗೆ ಸ್ವಾಮಿಗಳ ಮಾತು ರುಚಿಸುತ್ತಿರಲಿಲ್ಲ. ಗಹನ ತತ್ತ್ವ ವಿಚಾರಗಳು ಮೆದುಳಿಗೆ ಹಿಡಿಯುತ್ತಿರಲಿಲ್ಲ. ಸ್ವಾಮಿಗಳ ಮಾತಿನ ಅಭಿಪ್ರಾಯಗಳನ್ನು ಗ್ರಹಿಸಬೇಕಾದರೆ ಕೆಲವು ಮಾಸಗಳ ಕಾಲ ಹಿಡಿಯಿತೆಂದು ಆಕೆಯೆ ಹೇಳಿರುವಳು. “ಜೀವವೆಂದರೆ ಬ್ರಹ್ಮದ ಒಂದು ತೋರಿಕೆ” “ಜಡ ಮತ್ತು ಚೇತನಗಳೆರಡೂ ಒಂದೇ ಸತ್ಯದ ಇಕ್ಕೆಲಗಳು” “ಆತ್ಮವು ಜಡ ಚೇತನಾತೀತವಾದುದೆಂದು ಅನುಭವದಿಂದ ತಿಳಿಯುವುದೇ ಸಿದ್ಧಿ”, “ಮಾಯಾವಾದವು ಯಾವ ಸಮಸ್ಯೆ ಉಪಪತ್ತಿಯೂ ಅಲ್ಲ. ಅದು ಸಮಸ್ಯೆಯ ಸ್ಥಿತಿಸೂಚಕ ಮಾತ್ರವಾದ ಒಂದು ಮಾತು. ಸಮಸ್ಯೆಗಳಿಗೆ ಅನುಭವದಿಂದ ಅರ್ಥಗಳನ್ನು ಕಲ್ಪಿಸುವುದೆ ಮಾಯೆಯನ್ನು ಗೆಲ್ಲುವುದು.” “ಸ್ವಾರ್ಥತೆಯಿಂದ ಸತ್ಯವು ಮುಚ್ಚಿ ಹೋಗಿರುವುದು”. “ವಿಶ್ವವು ಒಂದು ದೊಡ್ಡ ಜೇಡರ ಬಲೆಯಂತೆ; ಮನಸ್ಸುಗಳು ಅಲ್ಲಲ್ಲಿರುವ ಜೇಡರ ಹುಳುಗಳು. ಏಕೆಂದರೆ ಮನಸ್ಸು ಭಿನ್ನಾಭಿನ್ನವಾಗಿರುವುದು.” ಇಂತಹ ಸೂತ್ರಗಳ ಅರ್ಥವನ್ನು ಅವರು ಗ್ರಹಿಸುವುದಾದರೂ ಹೇಗೆ?

ಬರಬರುತ್ತ ಮಂದಿರದಲ್ಲಿ ಜಾಗವೇ ಸಾಲದಾಯಿತು. ಕಡೆಗೆ ಅಲ್ಲಿದ್ದ ಕುರ್ಚಿಗಳು ಹೊರಗೆ ಸಾಗಿದುವು. ಎಲ್ಲರೂ ಸ್ವಾಮಿಗಳಂತೆಯೆ ಪದ್ಮಾಸನ ಹಾಕಿಕೊಂಡು ಕುಳಿತುಕೊಳ್ಳಲಾರಂಭಿಸಿದರು. ಅದನ್ನು ಕುರಿತು ಒಂದು ಪತ್ರಿಕೆಯ ಸುದ್ದಿಗಾರನು ಇಂತೆಂದು ಬರೆದನು:‌

“ಲಂಡನ್ ಮಹಾನಗರದ ಭದ್ರಮಹಿಳೆಯರು ಪದ್ಮಾಸನ ಹಾಕಿಕೊಂಡು ಗುರುವಿನ ಮುಂದೆ ಭಕ್ತಿಯಿಂದ ಕುಳಿತುಕೊಳ್ಳುವ ಶಿಷ್ಯರಂತೆ ಕುಳಿತು ಮೌನದಿಂದ ಕಿವಿಗೊಟ್ಟು ಉಪದೇಶವನ್ನು ಕೇಳುತ್ತಿರುವ ದೃಶ್ಯವು ನಿಜವಾಗಿಯೂ ಅಪೂರ್ವವಾದುದು. ಭರತಖಂಡದ ಪರವಾಗಿ ಇಂಗ್ಲಿಷರ ಹೃದಯದಲ್ಲಿ ಸ್ವಾಮಿಜಿ ಉದ್ರೇಕಗೊಳಿಸುತ್ತಿರುವ ಗೌರವ ಸಹಾನುಭೂತಿಗಳು ಇಂಡಿಯಾ ದೇಶದ ಪ್ರಗತಿಗೆ ನಿಜವಾಗಿಯೂ ಮಹಾಶಕ್ತಿದಾಯಕವಾಗಿವೆ.”

ಸ್ವಾಮಿಗಳ ವೇದಾಂತವಾರ್ತೆಯನ್ನು ಬಿಂಕದ ‘ಕಡಲರಾಣಿ’ಯೂ ಬೆರಗಾಗಿ ಕೇಳಿದಳು. ಸಾಧಾರಣವಾಗಿ ಗರ್ವಿಷ್ಠರೂ ಉದ್ಧತಶೀಲರೂ ದುರಭಿಮಾನಿಗಳೂ ಚಕ್ರಾಧಿಪತಿಗಳೆಂಬ ದುರಹಂಕಾರದಿಂದ ಮೆರೆದವರೂ ಆಗಿರುವ ಆಂಗ್ಲೇಯರು ಉದಾರ ಹೃದಯದ ಅಮೆರಿಕಾ ದೇಶದವರಂತೆ ಬಹುಬೇಗನೆ ಹೆರರ ಬಗೆಸಿರಿಗೆ ಮಣಿಯುವವರಲ್ಲ. ಅದರಲ್ಲಿಯೂ ಅವರ ಹಸ್ತಗತವಾಗಿರುವ ಭರತಖಂಡವೆಂದರೆ ಅವರಿಗೆ ತಿರಸ್ಕಾರ. ಅಜ್ಞಾನಕ್ಕಿಂತಲೂ ಜ್ಞಾನಗರ್ವವು ಘೋರತರ ತಿಮಿರ: ಜ್ಞಾನಗರ್ವಕ್ಕಿಂತಲೂ ಜ್ಞಾನದ ತಿರಸ್ಕಾರವು ಘೋರತಮ ತಿಮಿರ! ಅಂತಹ ಘೋರತಮ ತಿಮಿರವು ಸಾಮಾನ್ಯ ಆಂಗ್ಲೇಯ ಜನಗಳ ಹೃದಯಗಳಲ್ಲಿ ನೆಲೆಮನೆ ಮಾಡಿಕೊಂಡಿದೆ. ಆದ್ದರಿಂದಲೆ ಅವರು ಭಾರತವರ್ಷದ ಜ್ಞಾನವನ್ನು ಮೌಢ್ಯವೆಂದು ಪರಿಗಣಿಸಿಬಿಡುವರು. ಅಂಥವರನ್ನು ಸೆರೆಗೈದ ಸ್ವಾಮಿಗಳ ತೇಜಸ್ಸನ್ನು ಎಷ್ಟೆಂದು ಬಣ್ಣಿಸೋಣ. ಕಲಿಸಿದವರಿಗೆ ಗೌರವವಿರಲಿ! ಕಲಿತವರಿಗೆ ಇಮ್ಮಡಿಯಾದ ಗೌರವವಿರಲಿ!

ಸ್ವಾಮಿಗಳು ಇಂಗ್ಲೆಂಡಿನಲ್ಲಿ ಧರ್ಮಪ್ರಚಾರ ಕಾರ್ಯಪರರಾಗಿದ್ದಾಗಲೆ ಅಮೆರಿಕಾದ ಶಿಷ್ಯರಿಂದ ಕಾಗದಗಳು ಬರತೊಡಗಿದುವು. ಅವರು ಸ್ವಾಮಿಗಳನ್ನು ಹಿಂದಕ್ಕೆ ಬರುವಂತೆ ಪೀಡಿಸತೊಡಗಿದರು. ಅಲ್ಲಿ ಸ್ವಾಮಿಗಳು ನೆಟ್ಟುಬಂದ ಗಿಡವೂ ಮರವಾಗುತ್ತಿತ್ತು. ಸ್ವಾಮಿಗಳ ಪ್ರಚಾರಕಾರ್ಯಕ್ಕೆ ಸಹಾಯವಾಗಲು ಹಲವುಮಂದಿ ಉತ್ಸಾಹಶಾಲಿಗಳು ಮುಂದೆ ಬಂದಿದ್ದರು. ಬೋಸ್ಟನ್ ನಗರದ ಶ್ರೀಮಂತ ಮಹಿಳೆಯೊಬ್ಬಳು ಸಾಕಾಗುವಷ್ಟು ಧನಸಹಾಯ ಮಾಡಿದ್ದಳು. ಇತ್ತ ಆಂಗ್ಲೇಯ ಮಿತ್ರರು ಸ್ವಾಮಿಗಳನ್ನು ಇನ್ನೂ ಕೆಲವು ದಿನಗಳ ತನಕ ಇರುವಂತೆ ಬಲಾತ್ಕರಿಸಿದರು. ಕಡೆಗೆ ಸ್ವಾಮಿಗಳು ಬೇಸಗೆಯಲ್ಲಿ ಹಿಂತಿರುಗಿ ಬರುವೆನೆಂದು ತಮ್ಮ ಆಂಗ್ಲೇಯ ಮಿತ್ರರಿಗೆ ಭಾಷೆಕೊಟ್ಟು ಅಮೆರಿಕಾಕಕ್ಕೆ ಹಡಗು ಹತ್ತಿದರು.

ಸ್ವಾಮಿಗಳು ಇಂಗ್ಲೆಂಡಿನಲ್ಲಿದ್ದಾಗ ಸ್ವಾಮಿ ಕೃಪಾನಂದ, ಸ್ವಾಮಿ ಅಭಯಾನಂದ ಮತ್ತು ಮಿಸ್. ಇ. ವಾಲ್ಡೊ ಮೊದಲಾದ ಅಮೆರಕಾದ ಶಿಷ್ಯರು ಸುಮ್ಮನೆ ಕುಳಿತಿರಲಿಲ್ಲ. ವಾರವಾರಕ್ಕೂ ಸಭೆ ಸೇರಿ ವೇದಾಂತ ವಿಷಯಗಳನ್ನು ಚರ್ಚಿಸುತ್ತಲೂ, ಸಂಯುಕ್ತ ರಾಜ್ಯದಲ್ಲಿರುವ ಇತರ ನಗರಗಳಿಗೆ ಹೋಗಿ ಸ್ವಾಮಿಗಳ ಸಂದೇಶವನ್ನು ಸಾರುತ್ತಲೂ ಪ್ರಚಾರಕಾರ್ಯವನ್ನು ಮುಂದುವರಿಸಿದ್ದರು. ಎಲ್ಲೆಲ್ಲಿಯೂ ಜನರು ಅವರನ್ನು ವಿಶ್ವಾಸದಿಂದ ಬರಮಾಡಿಕೊಂಡು, ಅವರ ವೇದಾಂತ ಬೋಧೆಯನ್ನು ತಾಳ್ಮೆಯಿಂದ ಕೇಳಿ ತಮ್ಮ ಉತ್ಸಾಹವನ್ನು ಪ್ರದರ್ಶಿಸಿದ್ದರು. ೧೮೯೫ ನೆಯ ಡಿಸೆಂಬರ್ ೬ನೆಯ ತಾರೀಖಿನ ದಿನ ಸ್ವಾಮಿಗಳು ಲಂಡನ್ನಿನಿಂದ ನ್ಯೂಯಾರ್ಕ್ ನಗರಕ್ಕೆ ಮರಳಿದರು. ಬಂದವರು ಸ್ವಲ್ಪವೂ ಕಾಲಹರಣ ಮಾಡದೆ ತಮ್ಮ ಸುಪ್ರಸಿದ್ಧವಾದ ಕರ್ಮಯೋಗ ಉಪನ್ಯಾಸಗಳನ್ನು ಪ್ರಾರಂಭಿಸಿದರು.

ಸ್ವಾಮಿಗಳು ತಮ್ಮ ಭಾಷಣಗಳನ್ನು ಸಾಧಾರಣವಾಗಿ ಬರೆಯುತ್ತಿರಲಿಲ್ಲ; ನಿರರ್ಗಳವಾಗಿ ಹೊರಸೂಸಿಬಿಡುತ್ತಿದ್ದರು. ಆ ಅಮೂಲ್ಯವಾದ ಉಪದೇಶಗಳನ್ನು ಮುದ್ರಿಸಿ ಲೋಕಕ್ಕೆಲ್ಲ ಬೆಳಕು ದೊರಕುವಂತೆ ಮಾಡಬೇಕೆಂದು ಶಿಷ್ಯರು ಯೋಚಿಸಿದರು. ಆದ್ದರಿಂದ ಸ್ವಾಮಿಗಳ ಆಶುಭಾಷಣಗಳನ್ನು ಬರೆದುಕೊಳ್ಳಲು ಒಬ್ಬ ಕ್ಷಿಪ್ರಲಿಪಿಕಾರನನ್ನು ಗೊತ್ತುಮಾಡಿದರು. ಆ ಲಿಪಿಕಾರನು ಜಯಶೀಲನಾಗಲಿಲ್ಲ. ಸ್ವಾಮಿಜಿಯ ವಾಕ್ಪ್ರವಾಹದ ವೇಗವನ್ನು ಆತನು ಹಿಂಬಾಲಿಸಲಾರದಾದನು. ಅದರಲ್ಲಿಯೂ ಅಭಿಪ್ರಾಯಗಳು ಬಹು ಗಹನವಾದುದರಿಂದ ಆತನು ಕೈಸೋತನು; ಬಗೆಸೋತನು. ಇನ್ನೊಬ್ಬ ಕ್ಷಿಪ್ರಲಿಪಿಕಾರನನ್ನು ಗೊತ್ತುಮಾಡಿದರು. ಅವನ ಕೈಯಿಂದಲೂ ಸಾಗಲಿಲ್ಲ. ಕಡೆಗೆ ಆಗತಾನೆ ಇಂಗ್ಲೆಂಡಿನಿಂದ ನ್ಯೂಯಾರ್ಕಿಗೆ ಬಂದಿದ್ದ ಜೆ. ಜೆ. ಗುಡ್ವಿನ್ ಎಂಬ ಕ್ಷಿಪ್ರಲಿಪಿಕಾರನನ್ನು ಗೊತ್ತುಮಾಡಿದರು. ಆತನು ಸ್ವಾಮಿಗಳ ಮಾತುಗಳಲ್ಲಿ ಒಂದು ಸ್ವರವನ್ನಾದರೂ ಬಿಡದೆ ಬರೆಯಲು ಸಮರ್ಥನಾದನು. ಅಷ್ಟೇ ಅಲ್ಲ, ಸ್ವಾಮಿಗಳ ಶಿಷ್ಯನೂ ಆದನು. ಅವರ ಕೃತಿಗಳಲ್ಲಿ ಮುಕ್ಕಾಲುಮೂರುವೀಸಪಾಲು ಗುಡ್ವಿನ್ನನ ಕ್ಷಿಪ್ರಲಿಪಿಯಿಂದ ಸಂಗ್ರಹಿಸಲ್ಪಟ್ಟುದು. ಆತನು ಸದಾ ಅವರೊಡನೆಯೆ ಇದ್ದುಕೊಂಡು ಅವರ ಉಪನ್ಯಾಸಗಳಲ್ಲಿ ಒಂದನ್ನೂ ಬಿಡದೆ ಬರೆದಿಟ್ಟನು. ಸ್ವಾಮಿಜಿಗೆ ಅಚ್ಚುಮೆಚ್ಚಾಗಿದ್ದ ಆತನು ಅವರೊಂದಿಗೆ ಇಂಗ್ಲೆಂಡಿಗೆ ಹೋಗಿ ಅಲ್ಲಿಂದ ಭಾರತವರ್ಷಕ್ಕೆ ಬಂದು ಅಲ್ಲಿ ಮೃತನಾದನು. ಆತನು ತೀರಕೊಂಡಾಗ ಸ್ವಾಮಿಗಳು “ಇಂದು ನನ್ನ ಬಲಗೈ ಮುರಿದುಹೋಯಿತು. ನನಗಾದ ನಷ್ಟ ಅಷ್ಟಿಷ್ಟೆಂದು ಹೇಳಲಾಗದು” ಎಂದರಂತೆ.

ಕ್ರಿಸ್‌ಮಸ್ ರಜಾ ದಿನಗಳನ್ನು ಬೋಸ್ಟನ್ನಿನಲ್ಲಿ ಕಳೆದು ಸ್ವಾಮಿಗಳು ನ್ಯೂಯಾರ್ಕಿಗೆ ಬಂದರು. ಬಂದವರು ಹಾರ್ಡ್‌ಮನ್ ಹಾಲ್‌ನಲ್ಲಿಯೂ ಬ್ರೂಕ್‌ಲಿನ್ ನಗರದ ಆಧ್ಯಾತ್ಮಿಕ ಸಂಘದಲ್ಲಿಯೂ ಪೀಪಲ್ಸ್ ಚರ್ಚ್ ಎಂಬ ಕ್ರೈಸ್ತ ದೇವಮಂದಿರದಲ್ಲಿಯೂ ಉಪನ್ಯಾಸಗಳ ಮೇಲೆ ಉಪನ್ಯಾಸಗಳನ್ನು ಕೊಟ್ಟು ಜನರನ್ನು ಉತ್ತೇಜನಗೊಳಿಸಿದರು. ಜೊತೆಗೆ ಎಂದಿನಂತೆ ಉಪದೇಶಗಳೂ ನಡೆಯುತ್ತಿದ್ದುವು. ಜನರು ಅವರನ್ನು “ವಿದ್ಯುದ್ವಾಗ್ಮಿ” ಎಂದೂ, “ಬಿರುಗಾಳಿ ಸಂನ್ಯಾಸಿ” ಎಂದೂ ಕರೆದರು. “ಭಕ್ತಿಯೋಗ”, “ನನ್ನ ಆಚಾರ್ಯ”, “ಜೀವಾತ್ಮ ಮತ್ತು ಪರಮಾತ್ಮ” ಮೊದಲಾದ ವಿಷಯಗಳು ಜನರನ್ನು ಬೆರಗುಗೊಳಿಸಿ ಮರಳುಮಾಡಿಬಿಟ್ಟುವು. ವೃತ್ತಪತ್ರಿಕೆಗಳು ಮತ್ತೊಮ್ಮೆ ದೇಶದಲ್ಲೆಲ್ಲ ಭಾರತೀಯ ಸಂನ್ಯಾಸಿಯ ಕೀರ್ತಿಯನ್ನು ಉದ್ಘೋಷಿಸಿದುವು. ಹೃದಯಕ್ಕೆ ಆನಂದಕರವೂ ಬುದ್ಧಿಗೆ ತೃಪ್ತಿದಾಯಕವೂ ಆದ ಸ್ವಾಮಿಗಳ ವೇದಾಂತ ತತ್ತ್ವವು ಭಕ್ತರಿಗೆ ಜ್ಞಾನಿಗಳಿಗೂ ವಿಜ್ಞಾನಿಗಳಿಗೂ ಎಲ್ಲರಿಗೂ ಸಮರ್ಪಕವಾಗಿ ತೋರಿತು. ಅದರಲ್ಲಿಯೂ ಬೋಧಕನ ಅಸಾಧಾರಣ ಒಜೋಮಯ ವ್ಯಕ್ತಿತ್ವವೂ ಸಾಗರೋಪಮ ವಿಶಾಲಹೃದಯವೂ ಪರ್ವತೋಪಮ ಗಾಂಭೀರ್ಯವೂ ಗಗನೋಪಮ ನಿರ್ಮಲಾತ್ಮವೂ ಬೋಧನೆಗೆ ಬೆಂಬಲವಾಗಿ ಎಲ್ಲರನ್ನೂ ತಲೆದೂಗಿಸಿದುವು.

೧೮೯೬ನೆಯ ಫೆಬ್ರವರಿ ತಿಂಗಳಿನಲ್ಲಿ “ಸಾಂಖ್ಯ ಮತ್ತು ವೇದಾಂತ” “ಜ್ಞಾನಯೋಗ” ಮೊದಲಾದ ಉಪನ್ಯಾಸಗಳು ನಡೆದುವು. ಇದೇ ಸಮಯದಲ್ಲಿ ಸ್ವಾಮಿಗಳು ಮತ್ತೊಬ್ಬ ಶಿಷ್ಯನಿಗೆ ಸಂನ್ಯಾಸ ದೀಕ್ಷೆಯನ್ನು ಕೊಟ್ಟು ಆತನನ್ನು “ಯೋಗಾನಂದ” ಎಂದು ಕರೆದರು. ಮೊದಮೊದಲು ಸ್ವಾಮಿಜಿಯ ಪ್ರಶಂಸಕರಾಗಿದ್ದವರು ಈಗ ಆರಾಧಕರಾದರು. ಸ್ವಾಮಿ ಕೃಪಾನಂದರು ತಮ್ಮದೊಂದು ಪತ್ರದಲ್ಲಿ ಹೀಗೆಂದು ವಿನೋದವಾಗಿ ಬರೆದಿದ್ದಾರೆ:‌

“ಅದಿರಲಿ; ಮೊದಲು ಭಾರತಮಾತೆ ಸ್ವಾಮಿಜಿಯ ಮೇಲೆ ತನಗಿರುವ ಹಕ್ಕನ್ನು ಸ್ಥಾಪಿಸುವುದು ಶ್ರೇಯಸ್ಕರ. ಆಗಲೆ ಅವರ ಜೀವನಚರಿತ್ರೆಯನ್ನು ಸಂಯುಕ್ತ ಸಂಸ್ಥಾನಗಳ ರಾಷ್ಟ್ರೀಯ ವಿಶ್ವಕೋಶದಲ್ಲಿ ಸೇರಿಸಲು ಇಲ್ಲಿಯವರು ಹವಣಿಸುತ್ತಿದ್ದಾರೆ. ಅಂದಮೇಲೆ ಅವರು ಅಮೆರಿಕಾ ದೇಶದವರಾಗಿಬಿಡುವರು. ಹೋಮರ್ ಕವಿಯನ್ನು ನಾನು ಹೆತ್ತೆ ನಾನು ಹೆತ್ತೆ ಎಂದು ಏಳು ನಗರಗಳು ಹೋರಾಡಿದುವಂತೆ. ನಮ್ಮ ಆಚಾರ್ಯನಿಗೆ ಏಳು ದೇಶಗಳು ಹೊಡೆದಾಡಿಕೊಳ್ಳುವ ಕಾಲ ಬಂದೀತು. ಅಲ್ಲದೆ ಭಾರತಾಂಬೆ ತಾನು ಪಡೆದ ಯೋಗ್ಯತಮ ಮಹಾಪುರುಷರಲ್ಲಿ ಒಬ್ಬನನ್ನು ಕಳೆದುಕೊಳ್ಳುವ ಕಾಲವೂ ಬಂದೀತು!”

ನ್ಯೂಯಾರ್ಕಿನ ಕಾರ್ಯವನ್ನು ಪೂರೈಸಿ ಸ್ವಾಮಿಗಳು ಡೈಟ್ರಾಯ್ಟಿಗೆ ಹೋದರು. ಅಲ್ಲಿಂದ ಹಾರ್‌ವರ್ಡ್ ಯೂನಿವರ್ಸಿಟಿಯವರ ಆಮಂತ್ರಣವನ್ನು ಸ್ವೀಕರಿಸಿ ಅಲ್ಲಿಗೆ ತೆರಳಿ, ಮಾರ್ಚ್ ೨೫ನೆಯ ತಾರೀಖಿನ ದಿನ ತಮ್ಮ ಅಮೋಘವಾದ “ವೇದಾಂತದರ್ಶನ” ಎಂಬ ಉಪನ್ಯಾಸವನ್ನು ಕೊಟ್ಟರು. ಅದನ್ನು ಆಲಿಸಿದ ಅಧ್ಯಾಪಕರುಗಳು ಸಂನ್ಯಾಸಿಯ ವಿದ್ವತ್ತು ಪ್ರತಿಭೆಗಳಿಗೆ ಬೆರಗಾಗಿ ಯೂನಿವರ್ಸಿಟಿಯಲ್ಲಿ ಪ್ರಾಚ್ಯ ತತ್ತ್ವಶಾಸ್ತ್ರದ ಪೀಠವೊಂದನ್ನು ಸ್ಥಾಪಿಸುವುದಾಗಿಯೂ ವಿವೇಕಾನಂದರು ಅದಕ್ಕೆ ಮುಖ್ಯಾಧ್ಯಾಪಕರಾಗಬೇಕೆಂದೂ ಕೇಳಿಕೊಂಡರು. ಸ್ವಾಮಿಗಳು ಸಂನ್ಯಾಸಿಯಾದ್ದರಿಂದ ಅದನ್ನು ಸ್ವೀಕರಿಸಲಿಲ್ಲ. ಯೂನಿವರ್ಸಿಟಿಯವರು ಸ್ವಾಮಿಗಳ ಭಾಷಣವನ್ನು ಮುದ್ರಿಸಿದರು. ಅದಕ್ಕೆ ರೆವರೆಂಡ್ ಸಿ. ಸಿ. ಎವರೆಟ್, ಡಿ.ಡಿ., ಎಲ್.ಎಲ್.ಡಿ. ಎಂಬ ಅಧ್ಯಾಪಕರು ಒಂದು ಪ್ರಶಂಸನೀಯವಾದ ಮುನ್ನುಡಿಯನ್ನು ಬರೆದರು. ಅದರಲ್ಲಿ ಸ್ವಾಮಿ ವಿವೇಕಾನಂದರನ್ನು ಬಾಯಿಬಿಟ್ಟು ಹೊಗಳಿ “ಏಕಮೇವಾದ್ವಿತೀಯವಾದ ಸತ್ಯವನ್ನು ನಮಗೆ ಬೋಧಿಸಲು ಪ್ರಾಚ್ಯಕ್ಕೆ ತಕ್ಕ ಯೋಗ್ಯತೆಯಿದೆ. ಅದನ್ನು ಇಷ್ಟು ಪರಿಣಾಮಕಾರಿಯಾಗಿ ಬೋಧಿಸಿದುದಕ್ಕಾಗಿ ವಿವಾನಂದರಿಗೆ ನಾವು ಚಿರಋಣಿಗಳಾಗಿದ್ದೇವೆ” ಎಂದು ಬರೆದಿರುವರು.

ಸ್ವಾಮಿಗಳ ಉಪನ್ಯಾಸಗಳು ‘ರಾಜಯೋಗ’, ‘ಭಕ್ತಿಯೋಗ’, ‘ಕರ್ಮಯೋಗ’ ಎಂಬ ಮೂರು ಗ್ರಂಥಗಳಾಗಿ ಅಚ್ಚಾದುವು. ಅವುಗಳಲ್ಲಿ ಗಹನ ವಿಚಾರಗಳೆ ತುಂಬಿದ್ದರೂ ಕೂಡ ಬಹುಬೇಗನೆ ಮಾರಾಟವಾಗಿ ಪುನರ್ಮುದ್ರಿತವಾದುವು.

ವಿರಾಮವಿಲ್ಲದೆ ಕೆಲಸಮಾಡಿ ಸ್ವಾಮಿಗಳು ಬಹಳ ದಣಿದಿದ್ದರು. ನ್ಯೂಯಾರ್ಕ್ ನಗರದಲ್ಲಿ ತಮ್ಮ ಭಾಷಣಗಳನ್ನು ಮುಗಿಸಿ ಅಲ್ಲೊಂದು “ನ್ಯೂಯಾರ್ಕ್ ವೇದಾಂತ ಸಂಘ” ಎಂಬ ಹೆಸರಿನ ಒಂದು ಸಂಘವನ್ನು ಸ್ಥಾಪಿಸಿ ಶಿಷ್ಯರಿಗೆ ಕಾರ್ಯಮಾರ್ಗವನ್ನು ಬೋಧಿಸಿ ಸಹಸ್ರದ್ವೀಪೋದ್ಯಾನಕ್ಕೆ ತೆರಳಿದರು. ಒಂದು ಕಾಗದದಲ್ಲಿ ಅವರು ಹೀಗೆಂದು ಬರೆದಿದ್ದಾರೆ:‌

“ಹಿಂದೂ ಅಭಿಪ್ರಾಯವನ್ನು ಇಂಗ್ಲಿಷಿಗೆ ಹಾಕಿ, ಅದರ ಶುಷ್ಕ ತತ್ತ್ವಶಾಸ್ತ್ರದಿಂದಲೂ ಜಟಿಲ ಪುರಾಣದಿಂದಲೂ ವಿಲಕ್ಷಣ ಮನಶ್ಶಾಸ್ತ್ರದಿಂದಲೂ ಸರಳವಾದ ಸುಲಭವಾದ ಜನಪ್ರಿಯವಾದ ಮತ್ತು ಮೇಧಾವಿಗಳಿಗೂ ಒಪ್ಪಿಗೆಯಾಗಬಹುದಾದ ಧರ್ಮವೊಂದನ್ನು ಕಡೆದು ರೂಪುಗೊಳಿಸುವುದು ಎಂತಹ ಪ್ರಯಾಸವೆಂಬುದನ್ನು ಪ್ರಯತ್ನಿಸಿದವರೇ ಬಲ್ಲರು. ಅತೀಂದ್ರಿಯ ಗಹನವಾದ ಅದ್ವೈತವು ಜನರ ನಿತ್ಯಜೀವನದಲ್ಲಿ ಸುಂದರ ಕಾವ್ಯದಂತೆ ಪ್ರವೇಶಿಸಬೇಕು. ಸಿಕ್ಕಾದ ಪುರಾಣ ಕಥೆಗಳಿಂದ ಧರ್ಮಮೂರ್ತಿಗಳು ಹೊರಹಮ್ಮಿ ನಿಲ್ಲಬೇಕು. ಮಿದುಳು ಕದಡುವಂತಿರಲುವ ಯೋಗಸಂಕುಲಗಳಿಂದ ಕಾರ್ಯಕಾರಿಯಾದ ಮತ್ತು ವೈಜ್ಞಾನಿಕವಾದ ಮನಶ್ಶಾಸ್ತ್ರ ಮೂಡಬೇಕು. ಇದನ್ನೆಲ್ಲ ಮಕ್ಕಳಿಗೂ ಭಾವವಾಗುವಂತೆ ಬರೆಯಬೇಕು ಎಂಬುದೆ ನನ್ನ ಬಾಳಿನ ಹೆಗ್ಗುರಿ.”

ಗಹನವಾದ ವೇದಾಂತ ಜ್ಞಾನವನ್ನು ಸುಲಭ ರೀತಿಯಿಂದ ವಿವರಿಸಿ ಮಕ್ಕಳಿಗೂ ತಿಳಿಯುವ ಹಾಗೆ ಮಾಡಿ, ದೇಶದ ಮೇಲೆಲ್ಲ ಚೆಲ್ಲಿಬಿಡಬೇಕೆಂದು ಸ್ವಾಮಿಗಳು ನಿರ್ಧರಿಸಿದರು. ಇದುವರೆಗೆ ತತ್ತ್ವಶಾಸ್ತ್ರಗಳು, ವೇದಗಳು, ಉಪನಿಷತ್ತುಗಳು ಕೆಲವರು ಪಂಡಿತರ ಆಸ್ತಿಗಳಾಗಿದ್ದುವು; ಗುಪ್ತವಾಗಿದ್ದುವು; ಕ್ಲಿಷ್ಟವಾಗಿದ್ದುವು. ತತ್ತ್ವಜ್ಞಾನವು ಬರಿಯ ವಾದವಿವಾದಗಳಲ್ಲಿಯೆ ಪರಿಸಮಾಪ್ತಿ ಹೊಂದದೆ ಅದರ ಸಹಾಯ ಪ್ರಭಾವಗಳು ಪ್ರತಿಯೊಬ್ಬನ ದಿನಚರ್ಯೆಯಲ್ಲಿಯೂ ಕಾರ್ಯದಲ್ಲಿಯೂ ಮೈದೋರಬೇಕೆಂದು ಸ್ವಾಮಿಗಳು ಶಿಷ್ಯರಿಗೆ ಹೇಳುತ್ತಿದ್ದರು. ವೇದಾಂತ ಜ್ಞಾನವು ಉಳುವ ರೈತನನ್ನು ಮತ್ತೂ ಚೆನ್ನಾಗಿ ಉಳುವಂತೆ ಮಾಡುವುದು. ಉತ್ತಮವಾದ ಬಡಗಿಯನ್ನು ಉತ್ತಮತರನಾಗಿ ಮಾಡುವುದು. ವೇದಾಂತಿಯಾದ ಕುಂಬಾರನು ವೇದಾಂತಿಯಲ್ಲದ ಕುಂಬಾರನಿಗಿಂತಲೂ ಚೆನ್ನಾಗಿ ಮಡಕೆ ತಟ್ಟುವನು. ಹಾಗೆಯೆ ವೇದಾಂತ ಜ್ಞಾನದಿಂದ ಗುಡಿಸುವವನು ಚೆನ್ನಾಗಿ ಗುಡಿಸುವನು; ಬರೆಯುವವನು ಚೆನ್ನಾಗಿ ಬರೆಯುವನು; ಆಳುವವನು ಮತ್ತೂ ಚೆನ್ನಾಗಿ ಆಳುವನು.

೧೮೯೬ನೆಯ ಚೈತ್ರಮಾಸದಲ್ಲಿ ಸ್ವಾಮಿಗಳಿಗೆ ಭಾರತದಿಂದ ಆಹ್ವಾನಪತ್ರಗಳು ಬರತೊಡಗಿದುವು. ಅವರಿಗೂ ಮಾತೃಭೂಮಿಯ ಪುಣ್ಯ ಸಂದರ್ಶನವನ್ನು ಮಾಡಬೇಕೆಂಬ ಮನಸ್ಸಾಯಿತು. ಮೊದಲು ಇಂಗ್ಲೆಂಡಿಗೆ ಹೋಗಿ ಅಲ್ಲಿಯ ಕಾರ್ಯವನ್ನು ಸಾಂಗಗೊಳಿಸಿ, ತರುವಾಯ ಅಲ್ಲಿಂದ ಭಾರತವರ್ಷಕ್ಕೆ ಹೊರಡುವುದಾಗಿ ನಿರ್ಣಯಿಸಿದರು. ಸೋದರಿ ಹರಿದಾಸಿ, ಸ್ವಾಮಿ ಕೃಪಾನಂದ, ಅಭಿಯಾನಂದ, ಯೋಗಾನಂದ ಮೊದಲಾದ ಸಂನ್ಯಾಸಿಗಳನ್ನೂ ಇನ್ನೂ ಕೆಲವು ಬ್ರಹ್ಮಚಾರಿಗಳನ್ನೂ ಬಳಿಗೆ ಕರೆದು ಅವರು ಮಾಡಬೇಕಾದ ಕಾರ್ಯಕ್ರಮಗಳನ್ನೆಲ್ಲ ವಿಶದವಾಗಿ ತಿಳುಹಿದರು. ಅಲ್ಲದೆ ಅವರ ಸಹಾಯಕ್ಕಾಗಿ ಇಂಡಿಯಾದಿಂದ ಸ್ವಾಮಿ ಶಾರದಾನಂದರನ್ನು ಕರೆಯಿಸುವುದಾಗಿಯೂ ಹೇಳಿ, ತಮ್ಮನ್ನು ಲಂಡನ್ನಿನಲ್ಲಿ ಬಂದು ಕಾಣುವಂತೆ ತಮ್ಮ ಗುರುಭ್ರಾತೃವಿಗೆ ಕೂಡಲೆ ಒಂದು ಪತ್ರವನ್ನು ಬರೆದರು.

ಏಪ್ರಿಲ್ ೧೫ನೆಯ ತಾರೀಖಿನ ದಿನ ಸ್ವಾಮಿಗಳು ನ್ಯೂಯಾರ್ಕಿನಿಂದ ಇಂಗ್ಲೆಂಡಿಗೆ ಹಡಗು ಹತ್ತಿ ಹೊರಟರು. ಅಮೆರಿಕಾ ದೇಶದವರಿಗಿದ್ದ ಸ್ವಾಮಿ ವಿವೇಕಾನಂದರ ಪೂತಮಧುರ ಸಂಗವು ಪಾವನ ಮಧುರತರ ಸ್ಮೃತಿಯಾಗಿ ಅವರ ಹೃದಯಗಳಲ್ಲಿ ನಲಿದಾಡಿತು.

ಇಂಗ್ಲೆಂಡಿಗೆ ಬಂದ ಸ್ವಾಮಿಗಳು ಲಂಡನ್ನಿನಲ್ಲಿ ಸ್ವಾಮಿ ಶಾರದಾನಂದರನ್ನು ಕಂಡು ಬೆರಗುಗೊಂಡರು. ಶಾರದಾನಂದರು ಏಪ್ರಿಲ್ ತಿಂಗಳ ಆದಿಭಾಗದಲ್ಲಿಯೆ ಅಲ್ಲಿಗೆ ಬಂದು ಸ್ಟರ್ಡಿಯವರ ಅತಿಥಿಗಳಾಗಿದ್ದರು. ಸೋದರ ಸಂನ್ಯಾಸಿಗಳಿಬ್ಬರೂ ಪರಸ್ಪರ ದರ್ಶನದಿಂದ ಮೂಡಿದ ಸೊಗದ ಕಡಲೊಳಾಳ್ದರು. ಶಾರದಾನಂದರು ಸ್ವಾಮಿಜಿಗೆ ಸ್ವದೇಶದ ಸಮಾಚಾರಗಳನ್ನೆಲ್ಲ ಹೇಳಿದರು. ತಮ್ಮ ಗುರುಭ್ರಾತೃಗಳ ಯೋಗಕ್ಷೇಮವನ್ನೆಲ್ಲ ತಿಳಿಸಿದರು. ಆಲಂಬಜಾರಿನಲ್ಲಿ ನವಮಠ ಸ್ಥಾಪನೆಯಾದ ಶುಭವಾರ್ತೆಯನ್ನು ಹೆಮ್ಮೆಯಿಂದುಸುರಿದರು. ವೀರವೈರಾಗಿಗಳಿಬ್ಬರೂ ಆನಂದದಿಂದ ಕಂಬನಿಗರೆದರು.

ಮೇ ತಿಂಗಳ ಆದಿಭಾಗದಲ್ಲಿ ಸ್ವಾಮಿಜಿ ಜ್ಞಾನಯೋಗದ ಮೇಲೆ ಉಪನ್ಯಾಸಗಳನ್ನು ಕೊಡಲಾರಂಭಿಸಿದರು. ಅವರ ಭಾಷಣಗಳಿಗೆ ಎಂದಿನಂತೆ ಜನಗಳು ಬಂದು ಕಿಕ್ಕಿರಿಯುತ್ತಿದ್ದರು. ಮೇ ತಿಂಗಳ ಅಂತ್ಯಭಾಗದಲ್ಲಿ “Royal Institute of Painters” ಎಂಬ ಸಂಘದ ಪರವಾಗಿ “ಭಕ್ತಿಯೋಗ”, “ವೈರಾಗ್ಯ”, “ಆತ್ಮ ಸಾಕ್ಷಾತ್ಕಾರ”, “ಸಾರ್ವಭೌಮಿಕ ಧರ್ಮ” ಮೊದಲಾದ ಉಪನ್ಯಾಸಗಳನ್ನು ಮಾಡಿದರು. ದಿನದಿನಕ್ಕೂ ಜನರು ಹೆಚ್ಚು ಹೆಚ್ಚಾಗಿ ಬರಲಾರಂಭಿಸಿದರು. ಈ ಮಧ್ಯೆ ಅವರು ಅನೇಕ ಶ್ರೀಮಂತರ ಮನೆಗಳಲ್ಲಿ ಅನೇಕಾನೇಕ ಉಪಭಾಷಣಗಳನ್ನೂ ಕೊಟ್ಟರು. ಥಿಯಾಸೊಫಿ ಮಂದಿರದಲ್ಲಿ ಮಾತಾಡಬೇಕೆಂದು ಶ್ರೀಮತಿ ಹ್ಯಾನಿಬೆಸೆಂಟರು ಕೇಳಿಕೊಂಡಿದ್ದರಿಂದ ಅಲ್ಲಿಗೆ ಹೋಗಿ “ಭಾರತೀಯ ದೃಷ್ಟಿಯಿಂದ ಆತ್ಮವೆಂದರೇನು?” ಎಂಬುದರ ವಿಚಾರವಾಗಿ ಒಂದು ಪ್ರತಿಭಾಪೂರ್ಣವಾದ ಉಪನ್ಯಾಸವನ್ನು ಮಾಡಿದರು. “ಸೆಸೇಮ್ ಕ್ಲಬ್” ಎಂಬಲ್ಲಿ ‘ವಿದ್ಯಾಭ್ಯಾಸ’ ಎಂಬ ಉಪನ್ಯಾಸ ನೆರವೇರಿತು. ಅದರಲ್ಲಿ ಮನುಷ್ಯನ ಚಿತ್ತವು ಒಂದು ಮಹಾಜ್ಞಾನ ಸಾಗರವೆಂದೂ, ಭೂತಭವಿಷ್ಯದ್ವರ್ತಮಾನಗಳೂ ವ್ಯಕ್ತಾವ್ಯಕ್ತಗಳೂ ಅಲ್ಲಿ ಹುದುಗಿವೆಯೆಂದೂ, ವಿದ್ಯಾಭ್ಯಾಸದ ಕರ್ತವ್ಯ ಅಂತಹ ಅಡಗಿರುವ ಜ್ಞಾನವನ್ನು ಹೊರಗೆಡಹಲು ತಕ್ಕ ಸನ್ನಿವೇಶವನ್ನು ಕಲ್ಪಿಸುವುದರಲ್ಲಿ ಮಾತ್ರ ಇದೆಯೆಂದೂ ತಿಳಿಸಿದರು. ಉದಾಹರಣೆಗೆ ಆಕರ್ಷಣಶಕ್ತಿ ಭೂಮಿ ಹುಟ್ಟಿದಾಗಲಿಂದಲೂ ಇದ್ದೇ ಇದೆ. ಆದರೆ ಸೇಬಿನ ಹಣ್ಣು ಬಿದ್ದುದನ್ನು ನೋಡಿದ ನ್ಯೂಟನ್ನಿನ ಮನದಲ್ಲಿ ಅದು ಪ್ರಬುದ್ಧವಾಗಿ ನಿಯಮರೂಪದಲ್ಲಿ ಹೊರಬಿತ್ತು. ಅಂದರೆ ತಕ್ಕ ಸನ್ನಿವೇಶ ದೊರೆತುದರಿಂದ ಆ ಒಳಗಿದ್ದ ಜ್ಞಾನ ಹೊರಮೂಡಿತು.

ಸ್ವಾಮಿಗಳಿಗೆ ಲಂಡನ್ನಿನಲ್ಲಿ ಸಂಭವಿಸಿದ ಘಟನೆಗಳಲ್ಲಿ ವಿಶೇಷತಮವೂ ಚಿರಸ್ಮರಣೀಯವೂ ಆದ ಘಟನೆಯೆಂದರೆ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಮ್ಯಾಕ್ಸ್‌ಮುಲ್ಲರ್ ಅವರ ಪರಿಚಯ. ಮೇ ತಿಂಗಳು ೨೮ನೆಯ ತಾರೀಖಿನ ದಿನ ಮ್ಯಾಕ್ಸ್‌ಮುಲ್ಲರ್‌ರವರು ಸ್ವಾಮಿಗಳಿಗೆ ಒಂದು ಆಮಂತ್ರಣ ಪತ್ರವನ್ನು ಕಳುಹಿಸಿದರು. ಆ ಪರಿಚಯ ಮಧುರಾನುಭವದ ವಿಚಾರವಾಗಿ ಸ್ವಾಮಿಗಳೆ ಹೀಗೆಂದು ಬರೆದಿದ್ದಾರೆ:‌

“… ಪ್ರೊಫೆಸರ್ ಮ್ಯಾಕ್ಸ್‌ಮುಲ್ಲರ್‌ರವರು ಎಂತಹ ಅನನ್ಯ ಸಾಧಾರಣ ವ್ಯಕ್ತಿ! ಕೆಲವು ದಿನಗಳ ಹಿಂದೆ ನಾನವರನ್ನು ಹೋಗಿ ಕಂಡೆ. ಅವರನ್ನು ವಂದಿಸಲು ಹೋದೆನೆಂದು ಹೇಳುವುದೇ ಉಚಿತ; ಏಕೆಂದರೆ ಯಾರು ಶ್ರೀರಾಮಕೃಷ್ಣರನ್ನು ಭಕ್ತಿಯಿಂದ ಸಂಭಾವಿಸುತ್ತಾರೋ ಅವರು ಯಾವ ಜಾತಿಯವರೇ ಆಗಲಿ, ಯಾವ ಮತದವರೇ ಆಗಲಿ, ಯಾವ ಜನಾಂಗದವರೇ ಆಗಲಿ, ನನಗೆ ಪೂಜ್ಯರು. ಅವರೆಡೆಗೆ ಹೋಗುವುದೆಂದರೆ ನನಗೆ ಅದೊಂದು ತೀರ್ಥಯಾತ್ರೆ…‌

“‘ಕೇಶವಚಂದ್ರಸೇನನ ಧರ್ಮಜೀವನದಲ್ಲಿ ಪರಿವರ್ತನೆಯುಂಟಾದುದು ಯಾವ ಶಕ್ತಿಯ ಮಹಿಮೆಯಿಂದ’ ಎಂದು ಕೇಳಿದರು. ಏಕೆಂದರೆ ಅದನ್ನು ಕೇಳಿದಂದಿನಿಂದ ಅವರಿಗೆ ಶ್ರೀರಾಮಕೃಷ್ಣರ ಜೀವನ ಮತ್ತು ಉಪದೇಶಗಳಲ್ಲಿ ಕುತೂಹಲ ಹೆಚ್ಚಿತಂತೆ. ‘ಮಹಾಶಯ, ಶ್ರೀರಾಮಕೃಷ್ಣರನ್ನು ಈಗಾಗಲೆ ಅನೇಕರು ಆರಾಧಿಸುತ್ತಿದ್ದಾರೆ’ ಎಂದೆನು ನಾನು. ‘ಅಂತಹರಿಗಲ್ಲದೆ ಮತ್ತಾರಿಗೆ ಆರಾಧನೆ ಸಲ್ಲಬೇಕು?’ ಎಂದರವರು. ಪ್ರೊಫೆಸರವರು ದಯಾಮೂರ್ತಿ… ನಮ್ಮೊಡನೆ ಬಂದು ಆಕ್ಸ್‌ಫರ್ಡ್ ವಿದ್ಯಾಪೀಠದ ಕಾಲೇಜುಗಳನ್ನೂ, ಬೋಡ್ಲಿಯನ್ ಲೈಬ್ರರಿಯನ್ನೂ ತೋರಿಸಿದರು. ಕಡೆಗೆ ನಮ್ಮನ್ನು ರೈಲ್ವೇ ಸ್ಟೇಷನ್ನಿಗೂ ಬಂದು ಬೀಳ್ಕೊಂಡರು. ನಮಗಾಗಿ ಇಷ್ಟೊಂದು ತೊಂದರೆ ತೆಗೆದುಕೊಂಡುದೇಕೆ ಎಂದು ಕೇಳಿದ್ದಕ್ಕೆ ಅವರು ‘ಶ್ರೀರಾಮಕೃಷ್ಣ ಪರಮಹಂಸರ ಶಿಷ್ಯರ ಸಂಗ ಪ್ರತಿದಿನವೂ ದೊರಕುವುದು ದುರ್ಲಭ!’ ಎಂದರು.‌

“… ಮುದ್ದಾದ ಸಣ್ಣ ಕುಟೀರ. ಸುತ್ತಲೂ ಹೂದೋಟ. ಆ ನರೆತ ನವಿರಿನ ಮಹರ್ಷಿ! ಮುಖದಲ್ಲಿ ಏನು ಗಾಂಭೀರ್ಯ! ಏನು ಶಾಂತಿ! ಎಷ್ಟು ಕರುಣಾಯ ಮುಖಮಂಡಲ! ಎಪ್ಪತ್ತು ಮಾಗಿಗಳ ಪೆಟ್ಟನ್ನು ತಿಂದಿರುವ ಅವರ ನುಣ್ಣನೆಯ ಹಣೆ ಎಳೆಮಕ್ಕಳ ಲಲಾಟದಂತಿದೆ. ಮುಖದಲ್ಲಿರುವ ಒಂದೊಂದು ರೇಖೆಯೂ ಆತ್ಮವೈಭವದ ವೈಜಯಂತಿಗಳಂತಿವೆ. ಅವರ ಸಹಧರ್ಮಿಣಿ! ಆಕೆಯಾದರೊ ಎಂತಹ ಮಹಾನುಭಾವೆ!… ಆ ಮರಗಳು, ಆ ಹೂವುಗಳು, ಆ ನಿಶ್ಶಬ್ದ, ಆ ನೀಲ ನಿರ್ಮಲ ಗಗನ, ಅವುಗಳನ್ನೆಲ್ಲ ನೋಡಿದ ನನಗೆ ಭಾರತ ವರ್ಷದ ಸನಾತನ ಋಷ್ಯಾಶ್ರಮಗಳ ನೆನಪಾಯಿತು. ವಷಿಷ್ಠ ಅರುಂಧತಿಯರ ನೆನಪಾಯಿತು.‌

“… ‘ನೀವು ಬರುವುದಿಲ್ಲವೇ ನಮ್ಮ ದೇಶಕ್ಕೆ? ನಮ್ಮ ಪೂರ್ವಿಕರ ವೇದ ವೇದಾಂತಗಳನ್ನು ಬೆಳಕಿಗೆ ತಂದವರು ನೀವು. ನಿಮ್ಮನ್ನು ನಮ್ಮವರು ಸನ್ಮಾನಿಸಿ ಪೂಜಿಸುವರು’ ಎಂದೆನು. ಆ ವಯೋವೃದ್ಧ ಮಹರ್ಷಿಗಳ ಮುಖ ಮಿಂಚಿತು. ಅವರ ಕಣ್ಣುಗಳಲ್ಲಿ ಹನಿತುಂಬಿದುವು. ಒಯ್ಯೊಯ್ಯನೆ ತಲೆಯಾಡಿಸುತ್ತ ‘ಬಂದರೆ ನಾನು ಹಿಂದಕ್ಕೆ ಬೇರೆ ಬರುವುದಿಲ್ಲ. ನನ್ನ ಉತ್ತರಕ್ರಿಯೆಗಳನ್ನೆಲ್ಲ ನೀವೆ ಮಾಡಬೇಕಾಗುವುದು’ ಎಂದು ಮೆಲ್ಲಗೆ ಹೇಳಿದರು. ಮುಂದೆ ನಾನು ಮಾತಾಡಲಾರದವನಾದೆ. ಅವರ ಹೃದಯದ ಅನಿರ್ವಚನೀಯವಾದ ಅಂತರಾಳದಲ್ಲಿ ಏನಿದೆಯೊ ನನಗೇಕೆ? ಎಂದು ಸುಮ್ಮನಾದೆ. ಬಹುಶಃ ಅವರ ಪೂರ್ವಜನ್ಮದ ಮಹರ್ಷಿ ಜೀವನದ ಸ್ಮೃತಿ ಉಂಟಾಗಿರಬಹುದೆ? ಯಾರು ಬಲ್ಲರು?‌

“ಅವರ ಜೀವನವೇ ಜಗತ್ತಿಗೆ ಮಂಗಳದಾಯಕವಾಗಿದೆ. ಇನ್ನೂ ಅನೇಕ ವರ್ಷಗಳ ಕಾಲ ಹಾಗೆಯೆ ಆಗಿರಲಿ!”

ಪಂಡಿತವರ್ಯ ಮ್ಯಾಕ್ಸ್‌ಮುಲ್ಲರ್‌ರವರೂ ಸ್ವಾಮಿಗಳೂ ಆಜೀವ ಮಿತ್ರರಾದರು. ಸ್ವಾಮಿಗಳ ಪ್ರೇರಣೆ ಸಹಾಯಗಳಿಂದ ಪ್ರೊಫೆಸರ್ ಅವರು ‘ಶ್ರೀರಾಮಕೃಷ್ಣರ ಜೀವನ ಮತ್ತು ಉಪದೇಶ’ ಎಂಬ ಇಂಗ್ಲಿಷ್ ಗ್ರಂಥವನ್ನು ಪ್ರಚುರಪಡಿಸಿದರು.

ಇದೇ ಸಮಯದಲ್ಲಿ ಸೇವಿಯರ್ ದಂಪತಿಗಳೂ ಸ್ವಾಮಿಜಿಯ ಶಿಷ್ಯವರ್ಗಕ್ಕೆ ಸೇರಿದರು. ಆ ವೃದ್ಧ ದಂಪತಿಗಳಿಬ್ಬರೂ ಒಂದು ದಿನ ತಮ್ಮ ಸ್ನೇಹಿತರಿಂದ ವಿವೇಕಾನಂದರ ವಿಷಯವನ್ನು ಕೇಳಿ ತಿಳಿದುಕೊಂಡು ಸ್ವಾಮಿಗಳಲ್ಲಿಗೆ ಬಂದರು. ಸ್ವಾಮಿಗಳ ತತ್ತ್ವೋಪದೇಶವನ್ನು ಕೇಳಿದ ಮೇಲೆ ಅವರು “This is the man and this is the philosophy that we have been seeking in vain all through our life” ಎಂದುಕೊಂಡು ಅವರ ಗುರುತ್ವವನ್ನು ಸ್ವೀಕರಿಸಿದರು. ಅಷ್ಟೇ ಅಲ್ಲ; ಅವರಿಬ್ಬರೂ ಸ್ವಾಮಿಗಳೊಡನೆ ಇಂಡಿಯಾ ದೇಶಕ್ಕೂ ಬಂದು ನೆಲೆಸಿದರು. ಸ್ವಾಮಿಗಳು ಮಿಸೆಸ್ ಸೇವಿಯರ್ ಅವರನ್ನು ತಾಯಿ ಎಂದು ಸಂಬೋಧಿಸುತ್ತಿದ್ದರು. ಅವರಿಬ್ಬರೂ ಸ್ವಾಮಿಜಿಯನ್ನು ಗುರುವೆಂದೂ ಪುತ್ರನೆಂದೂ ಭಾವಿಸಿ ಪ್ರೀತಿಸುತ್ತಿದ್ದರು. ಸ್ವಾಮಿಗಳು ತಮ್ಮ ಆಂಗ್ಲೇಯ ಶಿಷ್ಯರಲ್ಲಿ ಸೋದರಿ ನಿವೇದಿತಾ, ಜೆ. ಜೆ. ಗುಡ್ವಿನ್, ಸೇವಿಯರ್ ದಂಪತಿಗಳು ಇವರುಗಳನ್ನು ಅಗ್ರಗಣ್ಯರನ್ನಾಗಿ ಭಾವಿಸಿದರು.

ಸ್ವಾಮಿಗಳ ಅವಿಶ್ರಾಂತತೆಯನ್ನು ಕಂಡ ಸೇವಿಯರ್ ದಂಪತಿಗಳೂ ಮಿಸ್ ಮುಲ್ಲರ್‌ರವರೂ ಸೇರಿ ಒಂದು ಒಳಸಂಚು ಮಾಡಿ ಗುರುಗಳನ್ನು ದೇಶಯಾತ್ರೆಗೆ ಕರೆದೊಯ್ದರು. ಯಾತ್ರಿಕರು ಪ್ಯಾರಿಸ್ಸಿನಲ್ಲಿ ಒಂದು ದಿನವಿದ್ದು ಅಲ್ಲಿಂದ ಪರ್ವತ ಕಂದರ ರಮ್ಯಸರೋವರ ನವವನಶ್ಯಾಮಲೆಯಾದ ಸ್ವಿಟ್ಜರ್ಲೆಂಡ್ ರಾಷ್ಟ್ರವನ್ನು ಪ್ರವೇಶಿಸಿ ಜಿನೀವಾಕ್ಕೆ ಹೋದರು. ಅಲ್ಲಿಯ ಮಂದ ಶೀತಲ ಸಮೀರಣ, ಸಲಿಲರಾಶಿಯ ಸುನೀಲವರ್ಣ, ನಿರ್ಮಲ ಸುನೀಲವ್ಯೋಮ, ಶ್ಯಾಮಲಕೋಮಲ ಸುಂದರ ವನರಾಜಿ ಇವುಗಳನ್ನೆಲ್ಲ ಸಂದರ್ಶಿಸಿದ ಸ್ವಾಮಿಗಳು ಭಾವಾವಿಷ್ಟರಾದರು.

ಸ್ವಾಮಿಗಳು ಪಯಣದ ಬಳಲಿಕೆಯನ್ನು ಕೂಡ ಲಕ್ಷ್ಯಮಾಡದೆ ಜಿನೀವ ನಗರದ ಪ್ರದರ್ಶನ ಶಾಲೆಗೆ ಹೋದರು. ಅಲ್ಲಿ ಎಲ್ಲರೂ ವಿನೋದಾರ್ಥವಾಗಿ ಒಂದು ಆಕಾಶಬುಟ್ಟಿ ವಿಮಾನದಲ್ಲಿ ಕುಳಿತು ಮೇಲೇರಿದರು. ಆಗ ತಾನೆ ಸಂಧ್ಯಾ ಸೂರ್ಯನು ಪಶ್ಚಿಮ ದಿಗಂತದಲ್ಲಿ ಹೊತ್ತಿಕೊಂಡು ಉರಿಯುವ ದೊಡ್ಡದೊಂದು ಮ್ಯಾಗ್ನೀಸಿಯಂ ಲೋಹದ ಉಂಡೆಯಂತೆ ದೇದೀಪ್ಯಮಾನವಾಗಿ ವಿರಾಜಿಸುತ್ತಿದ್ದನು. ದೃಶ್ಯ ಮನೋಜ್ಞವಾಗಿತ್ತು.

ತಟಾಕ ಪುಷ್ಕರಿಣಿ ಸರೋವರಗಳಿಂದ ಮೆರೆಯುವ ಜಿನೀವ ನಗರದ ರಮಣೋಯತೆ ದೇವಲೋಕದ ಅಪ್ಸರ ಸ್ತ್ರೀಯರ ಉದ್ಯಾನವನಗಳನ್ನೂ ನೋಡಿ ನಗುವಂತಿದೆ. ಅಲ್ಲಿ ಸರೋವರ ಸ್ನಾನವೆಂದರೆ ನವಚೇತನದಾಯಕವಾದ ಮಹತ್ಕಾರ್ಯ. ಸ್ವಾಮಿಗಳು ತಪ್ಪದೆ ದಿನಕ್ಕೆ ಎರಡಾವರ್ತಿಯಾದರೂ ಸ್ನಾನ ಮಾಡದೆ ಬಿಡುತ್ತಿರಲಿಲ್ಲ.

ಮಾರನೆಯ ದಿನ ಎಲ್ಲರೂ ಸೇರಿ ಚಿಲಾನ್ ದುರ್ಗವನ್ನು ನೋಡಲು ಹೋದರು. ಅಲ್ಲಿ ನಿಂತು ನೋಡಿದರೆ ನಾಲ್ವತ್ತು ಮೈಲಿಗಳ ದೂರದಲ್ಲಿ ಮೌಂಟ್ ಬ್ಲಾಂಕ್ ಪರ್ವತಶ್ರೇಣಿ ತೋರುತ್ತದೆ. ಸ್ವಾಮಿಗಳು ದೂರದರ್ಶಕ ಸುಲೋಚನಗಳ ಸಹಾಯದಿಂದ ಆ ಉನ್ನತೋನ್ನತ ತುಷಾರಾವೃತ ಶೃಂಗಶ್ರೇಣಿಗಳನ್ನು ನೋಡಿ ಹಿಮಾಲಯ ಭೂಧರ ಪಂಕ್ತಿಗಳನ್ನು ಸ್ಮರಿಸಿಕೊಂಡು ಹಿಗ್ಗಿದರು. ಕೆಲವು ದಿನಗಳಾದ ಮೇಲೆ ಹೇಸರುಗತ್ತೆಗಳ ಮೇಲೆ ಕುಳಿತು ಯಾತ್ರಿಕರು ಹೊರಟರು. ದಾರಿಯಲ್ಲಿ ಹಿಮಾಲಯ ಪರ್ವತಗಳಲ್ಲಿ ತಮಗಾದ ಅನುಭವಗಳ ಕಥೆಯನ್ನು ಸ್ವಾಮಿಜಿ ಮನೋಹರವಾಗಿ ಬಣ್ಣಿಸಿದರು. ಕೆಲವು ದಿನಗಳಾದ ಮೇಲೆ ಆಲ್ಫ್ಸ್ ಪರ್ವತಗಳ ಮಧ್ಯೆ ಇರುವ ಒಂದು ಹಳ್ಳಿಯಲ್ಲಿ ಎಲ್ಲರೂ ಬೀಡುಬಿಟ್ಟರು. ಸುತ್ತಲೂ ಶುಭ್ರಹಿಮವಿಭೂಷಿತ ಗಿರಿಶಿಖರ ಪಂಕ್ತಿಗಳು ಗಗನಚುಂಬಿತವಾಗಿದ್ದುವು. ಎಲ್ಲೆಲ್ಲಿಯೂ ನೀರವ; ಗ್ರಾಮಜೀವನದ ನಿರುಪಮ ಗಭೀರ ಶಾಂತಿ, ಪ್ರಪಂಚದ ಕಲ್ಮಶದ ಸುಳಿವು ಕೂಡ ಅಲ್ಲಿಲ್ಲ. ಸ್ವಾಮಿಗಳು ಧ್ಯಾನಾಸಕ್ತರಾದರು. ಯಾವುದೊ ಒಂದು ಅನಿರ್ವಚನೀಯ ಶಾಂತಿ ಅವರೆದೆಯನ್ನು ತುಂಬಿತ್ತು. ಜಗತ್ತೂ ಅದರ ಕಾರ್ಯಗಳೂ ಕರ್ಮಕೋಲಾಹಲವೂ ಸ್ವೀಯ ಪ್ರಚಾರಕಾರ್ಯವೂ ದಾರ್ಶನಿಕ ವಿಚಾರಗಳೂ ಎಲ್ಲವೂ ವಿಸ್ಮೃತವಾದುವು. ಹಿಮಾಲಯದ ಪ್ರಾಂತದಲ್ಲಿ ಅವರಿಗಾಗಿದ್ದ ಅನುಭವಗಳು ಮರಳಿದುವು. ಅವರ ವದನ ಮಂಡಲ ಆಧ್ಯಾತ್ಮಿಕ ಜ್ಯೋತಿಯಿಂದ ವಿರಾಜಿಸಿತು.

ಇಷ್ಟರಲ್ಲಿ ಮಹಾತತ್ತ್ವವೇತ್ತ ಪ್ರಾಚ್ಯಮನೀಷಿ ಪಾಲ್ ಡಾಯ್ಸನ್ ಎಂಬ ಕೀಲ್ ಯೂನಿವರ್ಸಿಟಿಯ ದಾರ್ಶನಿಕನಿಂದ ಸ್ವಾಮಿಗಳಿಗೆ ಒಂದು ಆಮಂತ್ರಣ ಪತ್ರ ಬಂತು. ಯಾತ್ರಿಕರು ಪರ್ವತಗಳಿಂದ ಕೆಳಗೆ ಧುಮುಕಿ ಪ್ರಸಿದ್ಧ ನಗರಗಳನ್ನು ನೋಡುತ್ತ ನೋಡುತ್ತ ಪಾಲ್ ಡಾಯ್ಸನ್ ಮಹಾಶಯನ ನಿವಾಸಸ್ಥಾನವಾದ ಕೀಲ್ ನಗರಕ್ಕೆ ಬಂದರು.

ಪ್ರೊಫೆಸರ್ ಡಾಯ್ಸನ್ನರು ಸ್ವಾಮಿಗಳನ್ನು ನೋಡಲು ಬಂದಾಗ ಅವರು ಯಾವುದೊ ಒಂದು ಕಾವ್ಯವನ್ನು ಮನಸ್ಸಿಟ್ಟು ಓದುತ್ತಿದ್ದರು. ಬಹಳ ಹೊತ್ತಾದರೂ ಡಾಯ್ಸನ್ನರೊಡನೆ ಮಾತಾಡಲಿಲ್ಲ. ತರುವಾಯ ತೆಕ್ಕನೆ ಎಚ್ಚತ್ತವರಂತೆ ಪ್ರಾಚ್ಯಮನೀಷಿಯನ್ನು ನೋಡಿ ಕ್ಷಮೆ ಬೇಡಿದರು. ಆದರೂ ಡಾಯ್ಸನ್ನರಿಗೆ ಅರ್ಥವಾಗಲಿಲ್ಲ. ಸ್ವಲ್ಪ ಬೇಸರವೂ ಆಗಿರಬಹುದು. ಸ್ವಲ್ಪ ಹೊತ್ತಿನಲ್ಲಿಯೆ ಸ್ವಾಮಿಗಳು ಸಂಭಾಷಣೆಯಲ್ಲಿ ತಾವು ಓದುತ್ತಿದ್ದ ಪದ್ಯಕಾವ್ಯದಿಂದ ಶ್ಲೋಕಗಳ ಮೇಲೆ ಶ್ಲೋಕಗಳನ್ನು ಉದಾಹರಿಸುತ್ತಿದ್ದುದನ್ನು ನೋಡಿ ಡಾಯ್ಸನ್ನರು ವಿಸ್ಮಿತರಾಗಿ, ಹಿಂದೆ ಒಂದು ಸಾರಿ ಖೇತ್ರಿ ಮಹಾರಾಜರು ಹೇಳಿದ್ದಂತೆ, “ಸ್ವಾಮಿಜಿ, ಇಂತಹ ಸ್ಮೃತಿಶಕ್ತಿ ನಿಮಗೆ ಹೇಗೆ ದೊರಕಿತು?” ಎಂದು ಕೇಳಿದರು. ತರುವಾಯ ಸ್ವಾಮಿಗಳು ಯೋಗಾಭ್ಯಾಸ ಧ್ಯಾನಧಾರಣೆಗಳನ್ನು ಕುರಿತು ಬಹಳ ಹೊತ್ತು ವಿವರಿಸಿದರು. ಅದಾದ ಮೇಲೆ ದರ್ಶನಶಾಸ್ತ್ರಗಳ ವಿಚಾರವಾದ ಸಂಭಾಷಣೆ ನಡೆಯಿತು. ಪ್ರೊಫೆಸರ್ ಡಾಯ್ಸನ್ನರು ಸ್ವಾಮಿಜಿಯ ಪ್ರತಿಭೆಯನ್ನು ಕೊಂಡಾಡಿದರು. ಅಲ್ಲದೆ ತಾವು ಮಾಡುತ್ತಿದ್ದ ಒಂದು ಸಂಸ್ಕೃತ ಗ್ರಂಥದ ಭಾಷಾಂತರವನ್ನು ಅವರಿಗೆ ತೋರಿಸಿ ಅವರಿಂದ ಯುಕ್ತವಾದ ಅನೇಕ ಸಲಹೆಗಳನ್ನೂ ಸ್ವೀಕರಿಸಿದರು.

ಡಾಯ್ಸನ್ ದಂಪತಿಗಳು ಸ್ವಾಮಿಗಳನ್ನು ಒಡಗೊಂಡು ಹೋಗಿ ಊರಿನಲ್ಲಿ ನೋಡತಕ್ಕ ಸ್ಥಳಗಳನ್ನೆಲ್ಲ ತೋರಿಸಿದರು. ಅಲ್ಲದೆ ಸ್ವಾಮಿಗಳು ಔತಣಕ್ಕೆ ಕರೆದು ಬಹಳವಾಗಿ ಉಪಚರಿಸಿದರು. ಕೆಲವು ದಿನಗಳಾದ ಮೇಲೆ ಸ್ವಾಮಿಜಿ ತಮ್ಮ ಕಾರ್ಯಸ್ಥಾಪನೆಗಾಗಿ ಲಂಡನ್ನಿಗೆ ಹಿಂತಿರುಗುವುದಾಗಿ ಹೇಳಿದರು. ಡಾಯ್ಸನ್ನರು ಅವರೊಡನೆ ಇನ್ನೂ ಅನೇಕ ಚರ್ಚೆಗಳನ್ನು ಮಾಡಿ ವಿಷಯಸಂಗ್ರಹ ಮಾಡಬೇಕೆಂದಿದ್ದರು. ಆದ್ದರಿಂದ ಸ್ವಾಮಿಜಿಯನ್ನು ಇನ್ನೂ ಕೆಲವು ದಿನಗಳ ತನಕ ಕೀಲ್ ನಗರದಲ್ಲಿಯೆ ಇರುವಂತೆ ಕೇಳಿಕೊಂಡರು. ಆದರೆ ಸ್ವಾಮಿಗಳು ತಮ್ಮ ಕಾರ್ಯಭಾರವನ್ನು ತಿಳಿಸಲು, “ಆಗಲಿ, ಸ್ವಾಮಿಜಿ, ನಾನು ನಿಮ್ಮನ್ನು ಹ್ಯಾಂಬರ್ಗ್‌ನಲ್ಲಿ ಬಂದು ಸೇರುತ್ತೇನೆ. ಅಲ್ಲಿಂದ ಇಬ್ಬರೂ ಸೇರಿ ಹಾಲೆಂಡ್ ಮಾರ್ಗವಾಗಿ ಲಂಡನ್ನಿಗೆ ಹೋಗೋಣ. ಅಲ್ಲಿಯಾದರೂ ನಿಮ್ಮೊಡನೆ ಕೆಲವು ದಿನಗಳನ್ನು ಸಂತೋಷದಿಂದ ಕಳೆಯಬೇಕೆಂದಿದ್ದೇನೆ” ಎಂದು ಹೇಳಿ ಬೀಳ್ಕೊಂಡರು.

ಕೀಲ್ ನಗರದಿಂದ ಹೊರಟು ಸೇವಿಯರ್ ದಂಪತಿಗಳು ಸ್ವಾಮಿಜಿಯೊಡನೆ ಹ್ಯಾಂಬರ್ಗಿಗೆ ಬಂದರು. ಆ ಕಿನ್ನರವನಮಯ ಪ್ರದೇಶದಲ್ಲಿ ಮೂರು ದಿನಗಳಿದ್ದು ಡಾಯ್ಸನ್ನರು ಬಂದೊಡನೆ ಅವರನ್ನು ಕೂಡಿ ಹಾಲೆಂಡ್ ದೇಶದ ಮುಖ್ಯ ಪಟ್ಟಣವಾದ ಆಮ್‌ಸ್ಟರ್ಡಾಮಿಗೆ ಹೋದರು. ಕಾಲುವೆಗಳೇ ಬೀದಿಗಳಾಗಿರುವ ವಿಚಿತ್ರ ನಗರದ ಪೆಂಪನ್ನು ಅವಲೋಕಿಸಿ ಅಲ್ಲಿ ಮೂರು ದಿನಗಳನ್ನು ಕಳೆದು ಎಲ್ಲರೂ ಲಂಡನ್ನಿಗೆ ಬಂದರು.

ಅಕ್ಟೋಬರ್ ನವೆಂಬರ್ ತಿಂಗಳುಗಳಲ್ಲಿ ಸ್ವಾಮಿಜಿ ವೇದಾಂತ ಸಂದೇಶವನ್ನು ದೃಢವಾಣಿಯಿಂದ ಸಾರತೊಡಗಿದರು. ಜನರು ಅವರ ವಾಕ್‌ಪ್ರವಾಹದಲ್ಲಿ ತೇಲಿಹೋದರು. ಅವರ ಮಾತುಗಳಲ್ಲಿ ಸ್ವಿಟ್ಜರ್ಲೆಂಡಿನ ಸೌಂದರ್ಯವೂ ಆಲ್ಫ್ಸ್ ಪರ್ವತಗಳ ಗಾಂಭೀರ್ಯವೂ ಜರ್ಮನ್ ಯಂತ್ರಶಾಲೆಗಳ ವಿಜ್ಞಾನವೂ ಮೈದೋರಿದುವು. ಅತಿ ಗಹನವೂ ಶ್ರೇಷ್ಠತಮವೂ ಆಗಿರುವ ಮಾಯಾವಾದವನ್ನು ಸುಲಭ ರೀತಿಯಿಂದ ವಿವರಿಸಿ ಹೇಳಿದರು. “Maya and Illusion”, “Maya and the Evolution of the Conception of God”, “Maya and Freedom”, “The Absolute and Manifestation”, “God in Everything”, “Realisation”, “Unity in Diversity”, “The Freedom of the Soul”, “The Practical Vedanta” ಎಂಬ ಪ್ರಚಂಡ ಭಾಷಣಗಳು ವೇದಾಂತ ದರ್ಶನದ ಜಯ ಡಿಂಡಿಮ ರವದಂತೆ ಇಂಗ್ಲೆಂಡಿನಲ್ಲಿ ಪ್ರತಿಧ್ವನಿತವಾದುವು.

ನವಂಬರ್ ತಿಂಗಳು ಮಧ್ಯಭಾಗದಲ್ಲಿ ಸ್ವಾಮಿಗಳು ಮಾತೃಭೂಮಿಗೆ ಹೊರಡಲು ಸನ್ನಾಹ ಮಾಡಲಾರಂಭಿಸಿದರು. ಸುದ್ದಿ ಹಬ್ಬಿತು. ಜನರು ಎಂದಿಗಿಂತಲೂ ಹೆಚ್ಚಾಗಿ ಬರತೊಡಗಿದರು. ಆಂಗ್ಲೇಯ ಶಿಷ್ಯರೆಲ್ಲರೂ ಸೇರಿ ಸ್ವಾಮಿಗಳಿಗೆ ವಿಜೃಂಭಣೆಯಿಂದ ಒಂದು ಬಿನ್ನವತ್ತಳೆಯನ್ನು ಅರ್ಪಿಸಿದರು.

ಡಿಸೆಂಬರು ೧೩ನೆಯ ತಾರೀಖಿನ ದಿನ ಸ್ವಾಮಿಗಳು ಸೇವಿಯರ್ ದಂಪತಿಗಳೊಡನೆ ಲಂಡನ್ ನಗರವನ್ನು ಬಿಟ್ಟರು. ಅವರ ಮನಸ್ಸೆಲ್ಲ ಮಾತೃಭೂಮಿಯ ಚಿಂತನೆಯಿಂದ ತುಂಬಿಹೋಗಿತ್ತು. ಹೊರಡುವ ದಿನ ಸ್ನೇಹಿತನೊಬ್ಬನು “ಸ್ವಾಮಿಜಿ, ನಾಲ್ಕು ವರ್ಷಗಳ ಕಾಲ ಪಶ್ಚಿಮ ದೇಶದ ಭೋಗಭೂಮಿಯಲ್ಲಿ ವಾಸಿಸಿದ ನಿಮಗೆ ಭಾರತವರ್ಷ ಈಗ ಹೇಗೆ ಕಾಣುತ್ತದೆ?” ಎಂದು ಕೇಳಿದುದಕ್ಕೆ ಸ್ವಾಮಿಜಿಗಳು “ನಾನಿಲ್ಲಿಗೆ ಬರುವುದಕ್ಕೆ ಮೊದಲು ಭಾರತ ಭೂಮಿಯನ್ನು ಪ್ರೀತಿಸುತ್ತಿದ್ದೆ. ಈಗಲಾದರೊ ಆ ಪುಣ್ಯಮಾತೃಭೂಮಿಯ ಮಣ್ಣಿನ ಹುಡಿ ಕೂಡ ನನಗೆ ಪವಿತ್ರವಾಗಿದೆ; ಬೀಸುವ ಗಾಳಿ ಪಾವನಕರವಾಗಿದೆ. ಈಗ ನನಗದು ನಿಜವಾದ ಪುಣ್ಯಭೂಮಿಯಾಗಿದೆ. ಯಾತ್ರಾಸ್ಥಾನವಾಗಿದೆ; ತೀರ್ಥಕ್ಷೇತ್ರವಾಗಿದೆ” ಎಂದು ಆವೇಶದಿಂದ ನುಡಿದರಂತೆ.

ಭಾರತವರ್ಷಾಭಿಮುಖವಾಗಿ ಹೊರಟ ಸ್ವಾಮಿಗಳು ಹರ್ಷಚಿತ್ತರಾದರು. ಬಹುದೂರದಿಂದ ಹೊರೆಯೊಂದನ್ನು ಹೊತ್ತುಕೊಂಡು ಗಿರಿಕಂದರ ಘೋರಾರಣ್ಯಗಳನ್ನು ಸುರಕ್ಷಿತವಾಗಿ ದಾಟಿಬಂದ ಪಯಣಿಗನೊಬ್ಬನು ಹೊಳೆಯ ದಡದ ಮರದ ತಣ್ಣೆಳಲಲ್ಲಿ ಮೂಟೆಯನ್ನು ಕೆಳಗಿಳುಹಿ, ಬೊಗಸೆಗೈಯಲ್ಲಿ ತಣ್ಣೀರನ್ನು ಕುಡಿದು, ತಂಬೆಲರಲ್ಲಿ ನಿಟ್ಟಿಸಿರೆಳೆದು ನಲಿಯುವಂತೆ ಸ್ವಾಮಿಗಳು ನಲಿದರು. ಘೋರ ಯುದ್ಧಕ್ಕಾಗಿ ವಿದೇಶಕ್ಕೆ ಹೋದ ಪುತ್ರನು ವಿಜಯಿಯಾಗಿ ಮನೆಗೆ ಹಿಂದಿರುಗಿ ಬರುವಾಗ ತನ್ನ ತಾಯಿಯನ್ನು ನೋಡುವೆನೆಂದು ಆನಂದದಿಂದ ಮೈಮರೆಯುವಂತೆ ಹಿಗ್ಗಿದರು.

ಲಂಡನ್ ಹಿಂದುಳಿಯಿತು. ಡೋವರ್ ಮಿಂಚಿಹೋಯಿತು. ರೈಲು ಕೆಲೆಯಿಂದ ಹೊರಟು ಫ್ರಾನ್ಸ್ ದೇಶದ ಮಾರ್ಗವಾಗಿ ಶುಭ್ರ ಸುಂದರ ಆಲ್ಫ್ಸ್ ಪರ್ವತವನ್ನು ಹಾದು ಮಿಲಾನ್ ನಗರಕ್ಕೆ ಬಂದಿತು. ಅಲ್ಲಿ ನೋಡಬೇಕಾದುವುಗಳನ್ನೆಲ್ಲಾ ನೋಡಿಕೊಂಡು ಗುಂಪು ಮುಂದೆ ಹೊರಟಿತು. ತರುವಾಯ ಪೀಸಾ, ಫ್ಲೋರೆನ್ಸ್ ಮೊದಲಾದ ಸುಂದರ ಇಟಲಿಯ ಸುಂದರ ಪುರಗಳನ್ನು ನೋಡುತ್ತಾ ಗುಂಪು ರೋಮ್ ಪಟ್ಟಣಕ್ಕೆ ಬಂದಿಳಿಯಿತು. ಆ ಪ್ರಸಿದ್ಧ ಪುರಾತನ ನಗರದ ಐತಿಹಾಸಿಕ ದೃಶ್ಯಗಳನ್ನೂ ಶಿಲ್ಪ ಚಿತ್ರ ಕಲಾಮಂಡಿತ ದಿವ್ಯ ಪ್ರಾಸಾದಗಳನ್ನೂ ನೋಡಿ ಮುಗಿಸುವುದರಲ್ಲಿ ಒಂದು ವಾರ ಕಳೆಯಿತು. ಅಲ್ಲಿಂದ ಸ್ವಾಮಿಗಳು ತಮ್ಮ ದಳದೊಡನೆ ಸೌಂದರ್ಯದೇವಿಯ ಲೀಲಾಭವನವೆಂದು ಲೋಕವಿಖ್ಯಾತವಾಗಿರುವ ನೇಪಲ್ಸ್ ನಗರಕ್ಕೆ ಹೋದರು. ‘ನೇಪಲ್ಸ್‌ನ್ನು ನೋಡಿ ಸಾಯಿ!’ ಆದ್ದರಿಂದ ಸ್ವಾಮಿಗಳು ಅಲ್ಲಿಯ ಚೆಲ್ವಿನ ನೆಲೆಬೀಡುಗಳನ್ನೆಲ್ಲ ತಿರುತಿರುಗಿ ನೋಡಿದರು! ವೆಸೂವಿಯಸ್ ಅಗ್ನಿಪರ್ವತವನ್ನು ನೋಡುವುದರಲ್ಲಿ ಒಂದು ದಿನವೆ ಕಳೆದು ಹೋಯಿತು. ಪಾಂಪೆಯನ್ನು ನೋಡುತ್ತ ಮತ್ತೊಂದು ದಿನ ಕಳೆಯಿತು. ಕಡೆಗೆ ಅಲ್ಲಿಂದ ಪುಣ್ಯಭೂಮಿಗೆ ಹೊರಡುವ ಶುಭ ಮುಹೂರ್ತವೂ ಬಂದಿತು.

೧೮೯೬ನೆಯ ಡಿಸೆಂಬರ್ ೩೦ನೆಯ ತಾರೀಖಿನ ದಿನ ಜಹಜು ಯುಗಾಚಾರ್ಯನನ್ನು ಹೊತ್ತುಕೊಂಡು ಹೆಮ್ಮೆಯಿಂದ ಪವಿತ್ರ ಭಾರತ ವರ್ಷದ ಕಡೆಗೆ ಸಾಗಿತು. ಕೆಳಗೆ ನೀರಿನ ನೀಲಿ, ಮೇಲೆ ಬಾನಿನ ನೀಲಿ; ಸುತ್ತ ದಿಗಂತದ ಬೇಲಿ; ನಡುವೆ ಬೈತ್ರವು ತೇಲಿ ಸೈವರಿದುದು.

೧೮೯೭ನೆಯ ಜನವರಿ ೧೫ನೆಯ ತಾರೀಖು. ಬಿತ್ತರದ ಪಡುಗಡಲಿನ ನೀರೆದೆಯ ಮೇಲೆ ದಟ್ಟೈಸಿದ ಕಗ್ಗತ್ತಲೆ ಮೆಲ್ಲಮೆಲ್ಲನೆ ಹರಿಯತೊಡಗಿತು. ಬಾಂದಳದಲ್ಲಿ ಗಣನೆಯಿಲ್ಲದೆ ಚುಕ್ಕಿಗಳು ಮಿಣುಮಿಣುಕಿ ಕಳೆಗೆಟ್ಟುವು. ತಣ್ಣನೆ ಕಡಲೆಲರು ತೀಡಿತು. ಮೂಡುದೆಸೆಯ ಹೆಣ್ಣು ನಸುಗಣ್ದೆರೆದಂತೆ ಮುಂಬೆಳಕು ಮೈದೋರಿತು. ಹಡಗು ಲಂಕೆಯ ಕಡಲ ತಡಿಗಾಗಿ ಮುಂಬರಿಯಿತು.

ಸೂರ್ಯೋದಯವಾಯಿತು. ಒಡನೊಡನೆ ಸಿಂಹಳದ್ವೀಪದ ಶ್ಯಾಮಲ ತಟಭೂಮಿ ಸ್ವಾಮಿಗಳ ದೃಷ್ಟಿಗೆ ಗೋಚರಿಸಿತು. ವೇಲಾಭೂಮಿ ಗುಲಾಬಿ ಬಣ್ಣದ ಕಾಂತಿಯಿಂದ ಪೂರ್ಣೋಜ್ವಲವಾಗಿತ್ತು. ಹಳದಿಯ ಮಳಲಿನ ಸಮುದ್ರತೀರವು ಗಾಳಿಗೊಲೆದು ಮುಗಿಲು ಮುಟ್ಟುವ ತೆಂಗಿನ ಮರದ ಸಾಲುಗಳ ಕಡುಹಸರು ಬಣ್ಣದ ಸಂಪದದಿಂದ ಮನೋಹರವಾಗಿ ಕಂಗೊಳಿಸಿತು. ಸ್ವಾಮಿಗಳು ಪುಲಕ ಬಹುಳೋತ್ಥಾನದಿಂದ ಸ್ವಲ್ಪ ಅಧೀರರಾದರು. ಉತ್ಕಂಠತೆಯ ಆವೇಗದಿಂದ ಅವರೆದೆ ತಲ್ಲಣಿಸಿತು. ಜಹಜು ಒಯ್ಯೊಯ್ಯನೆ ತೇಲಿಬಂದು ಕೊಲಂಬೊ ಬಂದರಿನಲ್ಲಿ ಲಂಗರು ಹಾಕಿತು. ತರಂಗಮಾಲೆಗಳ ಪರಸ್ಪರ ಸಂಘಾತಜನಿತವಾದ ಭೈರವ ಕಲ್ಲೋಲ ನಿನಾದದೊಡನೆ ಜಹಜಿನ ಪ್ರಚಂಡ ಗಂಭೀರ ವಂಶಿಧ್ವನಿ ಮಿಳಿತವಾಗಿ ವಿವೇಕಾನಂದರ ಪುಣ್ಯಾಗಮನ ವಾರ್ತೆಯನ್ನು ಘೋಷಿಸಿತು.

* * *