ಉರಿವ ಕಡುಬೇಸಗೆಯ ಕಾಳ್ಗಿಚ್ಚಿನಂತೆ, ನಲಿವ ಬಸಂತನ ಮೈಸಿರಿಯಿಂಪಿನಂತೆ, ಪೂಗಳ ಕಂಪಿನಿಂದ ಕುಸಿಕುಸಿದು ತೀಡುವ ಬನದೆಲರಂತೆ, ಪಸರಿಸುವ ಇರುಳ ಬೆಳ್ದಿಂಗಳಂತೆ, ಮೂಡಿಬರುವ ನೇಸರಿನ ಹೊಂಗದಿರಂತೆ ಯುಗಾಚಾರ್ಯ ಯೋಗಿವರ್ಯ ಶ್ರೀ ವಿವೇಕಾನಂದ ಸ್ವಾಮಿಗಳ ಪುಣ್ಯಾಗಮನ ವಾರ್ತೆ ಭಾರತವರ್ಷದಲ್ಲೆಲ್ಲಾ ಹಬ್ಬಿತು. ವಿದೇಶಗಳಲ್ಲಿ ವಿಜಯಿಯಾಗಿ ಹಿಂತಿರುಗಿ ಬರುವ ತನ್ನ ಮುದ್ದು ಮಗನನ್ನು ಎದುರುಗೊಳ್ಳಲು ಭಾರತ ಜನನಿ ಸಡಗರದಿಂದ ಸಿದ್ಧವಾದಳು. ನಗರ ನಗರಗಳಲ್ಲಿಯೂ ಸ್ವಾಗತ ಸಮಿತಿಗಳು ನೇರ್ಪಟ್ಟುವು. ಅಭಿನಂದನ ಪತ್ರಗಳು ರಚಿತವಾದುವು. ಬೀದಿಗಳೂ ಮಂದಿರಗಳೂ ಸಿಂಗಾರದಿಂದ ಮೆರೆದುವು. ಎಲ್ಲೆಲ್ಲಿಯೂ ಆನಂದದ ಕೋಲಾಹಲ ಮೇಲೆದ್ದಿತು.

ಆಚಾರ್ಯದೇವನು ಮೊದಲು ತನ್ನಲ್ಲಿಗೆ ಬರುವನೆಂಬ ಹೆಮ್ಮೆಯಿಂದ ಸಿಂಹಳ ದ್ವೀಪವು ಎದೆಯುಬ್ಬಿ ನಲಿಯಿತು. ಸ್ವಾಮಿಗಳು ಮೊದಲು ಕೊಲಂಬೊ ನಗರದಲ್ಲಿ ಇಳಿಯುವರೆಂಬ ಸುದ್ದಿಯನ್ನು ಕೇಳಿ ಮದರಾಸು ಮೊದಲಾದ ನಗರಗಳಿಂದ ಅನೇಕ ಮಂದಿ ಶಿಷ್ಯರು ಅವರನ್ನು ಎದುರುಗೊಳ್ಳಲು ಸಿಂಹಳಕ್ಕೆ ಬಂದಿದ್ದರು. ಅಲ್ಲದೆ ಇಬ್ಬರು ಸೋದರ ಸಂನ್ಯಾಸಿಗಳೂ ತಮ್ಮ ಗುರುಭ್ರಾತೃವನ್ನು ಎದುರುಗೊಳ್ಳಲು ಕೊಲಂಬೊದಲ್ಲಿ ಸಿದ್ಧವಾಗಿದ್ದರು. ಭರತಖಂಡದ ಬೇರೆ ಬೇರೆ ನೂರಾರು ನಗರಗಳಿಂದ ಸಾವಿರಾರು ಅಭಿನಂದನ ಸೂಚಕವಾದ ತಂತಿಗಳು ಕೊಲಂಬೋ ನಗರದಲ್ಲಿ ಆಚಾರ್ಯ ದೇವನ ಆಗಮನವನ್ನೆ ನಿರೀಕ್ಷಿಸುತ್ತಿದ್ದುವು.

ನಿರೀಕ್ಷಿತ ಶುಭದಿನ ಆವಿರ್ಭವಿಸಿತು. ಜನರು ತಂಡೊಪತಂಡವಾಗಿ ಸಮುದ್ರ ತೀರದಲ್ಲಿ ನೆರೆದು ಪಶ್ಚಿಮ ದಿಗಂತವನ್ನೆ ನೋಡುತ್ತಾ ನಿಂತರು. ಸಹಸ್ರ ಸಹಸ್ರ ಜನರ ದೃಷ್ಟಿ ತನ್ನ ಮೇಲೆ ಬಿದ್ದುದನ್ನು ಕಂಡು ಪಶ್ಚಿಮ ದಿಗ್ವನಿತೆ ನಸುನಾಚಿ ವಿಸ್ಮಿತಳಾದಳು. ಅದೋ ಅಲ್ಲಿ! ದೂರದ ಸಲಿಲಮಯ ದಿಗಂತದಲ್ಲಿ! ಜನರು ಕಣ್ಣರಳಿ ಕತ್ತೆತ್ತಿ ಎದೆಯುಬ್ಬಿ ನಿಮಿರಿ ನಿಂತು ನೋಡಿದರು! ಜಹಜು ಕಣ್ಣಿಗೆ ಬಿತ್ತು! ಜನರು ಉತ್ಸಾಹದಿಂದ ತುಳುಕಾಡತೊಡಗಿದರು. ಸಮುದ್ರ ತರಂಗಗಳೂ ಅವರೊಡನೆ ಸ್ಪರ್ಧೆ ಹೂಡಿದುವು. ಜಹಜು ನಿಮಿಷನಿಮಿಷಕ್ಕೂ ಹಿರಿದಾಗುತ್ತಾ ಬಂದು ಬಳಿಸಾರಿತು. ಶ್ರೀಸ್ವಾಮಿಗಳ ಗೈರಿಕೋಷ್ಣೀಷಮಂಡಿತ ಶಿರವು ಕಣ್ಣಿಗೆ ಬಿದ್ದ ಕೂಡಲೆ ಸಮುದ್ರತೀರದಲ್ಲಿ ನೆರೆದಿದ್ದ ವಿಪುಲ ಜನಸಂಗಮವು ಹರ್ಷೋಚ್ಚಲ ಕಂಠದಿಂದ ಜಯಧ್ವನಿಗೈಯಲಾರಂಭಿಸಿತು. ಉದಯಸೂರ್ಯನ ಪೀತಾಭಲೋಹಿತ ರಶ್ಮಿಮಾಲಾಸ್ನಾತ ಸಂನ್ಯಾಸಿ ವಿಸ್ಮಯ ವಿಮೂಢನಂತೆ ನಾವೆಯ ವೇದಿಕೆಯ ಮೇಲೆ ನಿಂತು ನೋಡಿದನು!

ಜಹಜು ಗಂತವ್ಯ ಸ್ಥಾನಸ್ಥವಾದ ತರುವಾಯ ಕೊಲಂಬೋ ನಗರದ ಹಿಂದೂ ಸಮಾಜದ ಮುಖಪಾತ್ರ ಸ್ವರೂಪರಾದ ಮಾನನೀಯ ಕುಮಾರಸ್ವಾಮಿಗಳು, ಸ್ವಾಮಿ ಶಿವಾನಂದ ನಿರಂಜನಾನಂದರೊಡನೆ ವಿವೇಕಾನಂದರನ್ನು ಎದುರುಗೊಂಡು ಅವರ ಕೊರಳಿಗೆ ಭಾರತಾಂಬೆಯ ಕೋಮಲ ಹಸ್ತಸದೃಶವಾದ ಮಲ್ಲಿಗೆ ಹೂಮಾಲೆಯೊಂದನ್ನು ಹಾಕಿದರು. ಆಮೇಲೆ ಸ್ವಾಮಿಜಿ ಯುಗಳಾಶ್ವಯೋಜಿತ ಹೇಮರೌಪ್ಯ ಮಣಿಖಚಿತ ದಿವ್ಯಶಕಟಾರೋಹಣ ಮಾಡಿ ನಗರ ಮಧ್ಯೆ ಪ್ರವೇಶ ಮಾಡಿದರು. ಬೀದಿಬೀದಿಗಳಲ್ಲಿ ಪತ್ರಪುಷ್ಪಪಲ್ಲವ ರಚಿತ ತೋರಣಗಳು ಮೆರೆದುವು. ಬಾವುಟಗಳು ಗಾಳಿಯಲ್ಲಿ ನಲಿದಾಡಿದುವು. ಮನೆ ಮನೆಗಳಲ್ಲಿ ಸಂಭ್ರಮ ಸೂಚಕ ದೃಶ್ಯಗಳು ಸಮನೋಹರವಾದುವು. ಶುಭಸೂಚಕ ಕೋಲಾಹಲವು ನಗರ ನಿವಾಸಿಗಳ ಆನಂದಕ್ಕೆ ಸಾಕ್ಷಿಯಾಯಿತು. ಕಟ್ಟಕಡೆಗೆ ಕುದುರೆಯ ಸಾರೋಟು “ದಾಲಚಿನ್ನಿ ತೋಟ”ದಲ್ಲಿ ಸ್ವಾಮಿಗಳ ಸ್ವಾಗತಕ್ಕಾಗಿ ನೇರ್ಪಟ್ಟ ಮಹಾಮಂಟಪದೆಡೆಗೆ ಹೋಗಿ ಮುಟ್ಟಿತು. ಸ್ವಾಮಿಗಳು ಕೆಳಗಿಳಿದರೊ ಇಲ್ಲವೊ ನೂರಾರು ಜನರು ಅವರ ಪದಧೂಳಿ ಗ್ರಹಣ ಮಾಡಲು ಮುಂದೆ ನುಗ್ಗಿದರು. ವಿವೇಕಾನಂದರು ಮಂಟಪವನ್ನು ಪ್ರವೇಶಿಸಿ ವೇದಿಕೆಯನ್ನೇರಿ ಹೂವಿನ ಸುರಿಮಳೆ ಸರಿಯ ನಡುವೆ ಕುಳಿತರು. ಜಯಘೋಷದಿಂದ ದೆಸೆಗಳು ಬಿರಿದುವು.

ಮಂಟಪವು ತೆಂಗಿನಗರಿಗಳಿಂದಲೂ ಕೆಂದಾವರೆ ಬೆಳ್ದಾವರೆಗಳಿಂದಲೂ ಹೂ ಮಾಲೆಗಳಿಂದಲೂ ಚೆಂದಳಿರ ಜೊಂಪೆಗಳಿಂದಲೂ ವಿವಿಧ ಲತಾವಿನ್ಯಾಸಗಳಿಂದಲೂ ಶೋಭಿತವಾಗಿ ವನದೇವಿಯ ಲೀಲಾಮಂದಿರದಂತೆ ರಮಣೀಯವಾಗಿತ್ತು. ಮಾನನೀಯ ಕುಮಾರಸ್ವಾಮಿಗಳು ಪ್ರಾಚ್ಯಪದ್ಧತಿಯಂತೆ ಸ್ವಾಮಿಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಅಭಿನಂದನ ಪತ್ರವನ್ನು ಓದಿದರು. ತರುವಾಯ ಸ್ವಾಮಿಗಳು ಕಿವುಡುಗೈವ ಕೋಲಾಹಲದ ಮಧ್ಯೆ ಎದ್ದುನಿಂತು ತಮ್ಮ ಅನನು ಕರಣೀಯ ಶಕ್ತಿಪೂರ್ಣ ಮನೋಹರಶೈಲಿಯಲ್ಲಿ ಒಂದು ಸಣ್ಣ ಭಾಷಣ ಮಾಡಿದರು. ಆ ಭಾಷಣದಲ್ಲಿ ನಡುವೆ ಪ್ರಾಸಂಗಿಕವಾಗಿ ಹೀಗೆಂದರು :‌

“ನಾನು ಮಹಾರಾಜನಲ್ಲ, ಧನ ಕುಬೇರನಲ್ಲ; ಅಥವಾ ಪ್ರಸಿದ್ಧ ರಾಜನೀತಿಜ್ಞನೂ ಅಲ್ಲ. ಕಪರ್ದಕಹೀನ ಭಿಕ್ಷುಕ ಸಂನ್ಯಾಸಿ ಮಾತ್ರ. ನೀವು ನನ್ನಂಥವನಿಗೆ ಈ ಪರಿ ಸ್ವಾಗತವಿತ್ತುದನ್ನು ನೋಡಿದರೆ ಭಾರತವರ್ಷದಲ್ಲಿ ಈಗಲೂ ಕೂಡ ಆಧ್ಯಾತ್ಮಿಕ ಸಂಪತ್ತಿಗೆ ಅಭಾವವಿಲ್ಲವೆಂದು ನನಗೆ ತೋರುತ್ತದೆ. ಯಃಕಶ್ಚಿತ್ ಸಂನ್ಯಾಸಿಯೊಬ್ಬನಿಗಾಗಿ ಇಷ್ಟೊಂದು ಪ್ರೀತಿಪೂರ್ವಕವಾದ ಭಕ್ತಿ ಶ್ರದ್ಧೆಗಳೇಕೆ? ಆದ್ದರಿಂದ, ಓ ಭಾರತಮಾತೆಯ ಪುತ್ರರಿರಾ, ನಿಮ್ಮ ಜನಾಂಗ ಜೀವನದ ವಿಶೇಷ ಗುಣ ಇನ್ನೂ ನಶಿಸಿಲ್ಲ. ನಾನಾ ಪ್ರಕಾರದ ಪ್ರತಿಕೂಲಗಳ ತುಮುಲದ ಮಧ್ಯೆ ನಿಮ್ಮ ಧರ್ಮಜೀವನ ಇನ್ನೂ ದೃಢವಾಗಿ ನಿಂತಿದೆ.”

ಸಂಭ್ರಮೋತ್ಸವ ಮುಗಿದ ಮೇಲೆ ಸ್ವಾಗತ ಸಮಿತಿಯವರು ಸ್ವಾಮಿಗಳನ್ನು ವಿಶ್ರಾಮ ಮಂದಿರಕ್ಕೆ ಕರೆದುಕೊಂಡು ಹೋದರು. ಮಂಟಪದಲ್ಲಿ ಅವರನ್ನು ನೋಡಲಾರದ ಜನರು ಅವರಿಳಿದಿದ್ದ ಬಂಗಲೆಯ ಸುತ್ತಲೂ ಬಂದು ಕವಿದರು. ಅದನ್ನು ತಿಳಿದು ಸ್ವಾಮಿಗಳು ಹೊರಗೆ ಬಂದು ನಿಂತು ಮೃದುಹಾಸರಂಜಿತ ವದನರಾಗಿ ನೆರೆದ ಮಂದಿಗಳನ್ನು ನೋಡಿ ಕೈಮುಗಿದರು. ಒಬ್ಬರ ಮೇಲೊಬ್ಬರು ನುಗ್ಗಿ ನೆರೆದವರೆಲ್ಲರೂ ಅವರ ಕಾಲುಗಳನ್ನು ಮುಟ್ಟಿ ನಮಸ್ಕಾರ ಮಾಡಿದರು. ಸ್ವಾಮಿಗಳು “ನಾರಾಯಣ! ನಾರಾಯಣ!” ಎಂದು ಹೇಳುತ್ತಾ ಪ್ರತಿಯೊಬ್ಬರನ್ನೂ ಆಶೀರ್ವದಿಸಿದರು.

ಜನವರಿ ೧೬ನೆಯ ತಾರೀಖಿನ ದಿನ ಅಪರಾಹ್ನದಲ್ಲಿ “ಫ್ಲೋರಲ್ ಹಾಲ್” ಎಂಬ ಮಂದಿರದಲ್ಲಿ ಸ್ವಾಮಿಗಳು “ಪುಣ್ಯಭೂಮಿ ಭಾರತವರ್ಷ” ಎಂಬ ಹೆಸರಿನ ದೀರ್ಘೋತ್ತೇಜಕ ಭಾಷಣ ಮಾಡಿದರು.

ಮಾರನೆಯ ದಿನ ಅವರು ತಮ್ಮನ್ನು ನೋಡಲು ಬಂದ ದರ್ಶಕ ವೃಂದದೊಡನೆ ಬಹಳ ಕಾಲ ಧರ್ಮಾಲೋಚನೆ ಮಾಡಿದರು. ಅಪರಾಹ್ನದಲ್ಲಿ ಊರಿನ ಶಿವಮಂದಿರ ಸಂದರ್ಶನಕ್ಕಾಗಿ ಹೋದರು. ದಾರಿಯಲ್ಲಿ ಜನರ ಗುಂಪು ಗುಂಪಾಗಿ ಕಲೆತು ಗುರುವರ್ಯರಿಗೆ ಪುಷ್ಪ ಫಲ ಮಾಲ್ಯ ಇತ್ಯಾದಿ ಕಾಣಿಕೆಗಳನ್ನು ಅರ್ಪಿಸಲಾರಂಭಿಸಿದರು. ಮನೆಮನೆಗಳಲ್ಲಿಯೂ ಮಂಗಳಾರತಿಗಳಾದುವು, ಹೂಮಳೆ ಸುರಿಯಿತು. ಸ್ವಾಮಿಗಳು ಶಿವಮಂದಿರದ ಬಳಿಗೆ ಬರಲು ನೆರೆದ ಜನರು “ಜಯ ಮಹಾದೇವಾ!” ಎಂಬ ಜಯಘೋಷವನ್ನು ಮಾಡಿ ಅವರಿಗೆ ಸ್ವಾಗತ ವಿತ್ತರು. ಶಿವಮಂದಿರವನ್ನು ನೋಡಿ ಪ್ರದಕ್ಷಿಣೆ ಮಾಡಿ, ಪುರೋಹಿತ ಜನರೊಡನೆ ಕೆಲವು ಮಾತುಗಳನ್ನು ಆಡಿ ಸ್ವಾಮಿಗಳು ಬಂಗಲೆಗೆ ಹಿಂತಿರುಗಿದರು. ಅಲ್ಲಿ ಅವರೆಡೆಗೆ ಬಂದ ಕೆಲವು ಜನ ಶಾಸ್ತ್ರಜ್ಞ ಬ್ರಾಹ್ಮಣ ಪಂಡಿತರೊಡನೆ ರಾತ್ರಿ ಬಹಳ ಹೊತ್ತಾಗುವವರೆಗೂ ಸ್ವಾಮಿಗಳು ಶಾಸ್ತ್ರ ಚರ್ಚೆ ಮಾಡಿದರು. ಮರುದಿನ ಕೊಲಂಬೊ ನಗರದ “ಪಬ್ಲಿಕ್ ಹಾಲ್”ನಲ್ಲಿ “ವೇದಾಂತ ದರ್ಶನ”ದ ಸಂಬಂಧವಾಗಿ ಒಂದು ಅಮೋಘವಾದ ಉಪನ್ಯಾಸ ಮಾಡಿದರು. ಮಧ್ಯೆ ಸ್ವಾಮಿಗಳ ಕಣ್ಣು ಪಾಶ್ಚಾತ್ಯರಂತೆ ಉಡುಗೆತೊಡಿಗೆಗಳನ್ನು ಧರಿಸಿದ್ದ ಕೆಲವು ಸದಸ್ಯರ ಮೇಲೆ ಬಿತ್ತು. ದುಃಖಿತ ಭಾವದಿಂದ ಅವರು ಜನರನ್ನು ಕುರಿತು ಮೂಢರಂತೆ ಪರಾನುಕರಣಪ್ರವೃತ್ತರಾಗುವುದು ಸರಿಯಲ್ಲವೆಂದು ಒತ್ತಿ ಹೇಳಿದರು.

ಜನವರಿ ೧೯ನೆಯ ತಾರೀಖಿನ ದಿನ ಸ್ವಾಮಿಗಳು ಸ್ಪೆಷಲ್ ರೈಲು ಹತ್ತಿ ಕ್ಯಾಂಡಿಗೆ ಹೊರಟರು. ಕ್ಯಾಂಡಿಯಲ್ಲಿ ಜನರು ತಮಗರ್ಪಿಸಿದ ಅಭಿನಂದನ ಪತ್ರಕ್ಕೆ ಸಂಕ್ಷಿಪ್ತ ಪ್ರತ್ಯುತ್ತರವನ್ನು ಕೊಟ್ಟು ಅಲ್ಲಿಂದ ಜಾಫ್ನಾಭಿಮುಖವಾಗಿ ಮುಂದುವರಿದರು. ಅಲ್ಲಿ ಪೆಂಪಿನ ಮೆರವಣಿಗೆ ಮುಗಿದ ನಂತರ ಜಾಫ್ನಾ ಕಾಲೇಜಿನ ಪ್ರಾಂಗಣದಲ್ಲಿ ಸಿದ್ಧವಾಗಿದ್ದ ಮನೋಹರವಾದ ಮಂಟಪದಲ್ಲಿ ಸ್ವಾಮಿಗಳು ನಗರದ ಅಭಿನಂದನ ಪತ್ರಕ್ಕೆ ಸಂಕ್ಷೇಪವಾಗಿ ಉತ್ತರ ಕೊಟ್ಟು ತರುವಾಯ ವೇದಾಂತ ವಿಚಾರವಾಗಿ ಒಂದು ಹೃದಯಗ್ರಾಹಿಯಾದ ಭಾಷಣ ಮಾಡಿದರು. ಇಲ್ಲಿಗೆ ಸ್ವಾಮಿಗಳ ಸಿಂಹಳ ಯಾತ್ರೆ ಪರಿಸಮಾಪ್ತಿ ಹೊಂದಿತು.

ಜಾಫ್ನಾದಿಂದ ಸ್ವಾಮಿಗಳು ತಮ್ಮ ಪಾಶ್ಚಾತ್ಯ ಶಿಷ್ಯವರ್ಗದೊಡನೆಯೂ ಗುರುಭ್ರಾತೃ ಸ್ವಾಮಿ ನಿರಂಜನಾನಂದರೊಡನೆಯೂ ಕೂಡಿ ಭಾರತವರ್ಷಾಭಿಮುಖವಾಗಿ ಯಾತ್ರೆ ಮಾಡಿದರು. ಸುದ್ದಿಯನ್ನು ಮೊದಲೆ ತಿಳಿದಿದ್ದ ರಾಮ ನಾಡಾಧಿಪ ರಾಜಾ ಭಾಸ್ಕರವರ್ಮ ಸೇತುಪತಿಗಳು ಸದಳಬಲರಾಗಿ ಗುರುಗಳನ್ನು ಎದುರುಗೊಳ್ಳಲು ಪಾಂಬಾನು ತೀರ ಪಟ್ಟಣಕ್ಕೆ ಬಂದರು. ವಿಪುಲ ಜನಸಂಘವು ಸಮುದ್ರತೀರದಲ್ಲಿ ಉದ್ಗ್ರೀವವಾಗಿ ಸ್ವಾಮಿಗಳನ್ನು ಪ್ರತೀಕ್ಷಿಸತೊಡಗಿತು. ಸ್ವಾಮಿಗಳು ಜಹಜಿನಿಂದ ಇಳಿದ ಕೂಡಲೆ ರಾಜಯೋಗ್ಯವಾದ ಸುಸಜ್ಜಿತವಾದ ತೇರೊಂದನ್ನು ಅಡರಿದರು. ಪ್ರಚಾರಶೀಲ ಹಿಂದೂ ಧರ್ಮದ ಪ್ರಥಮತಮ ಪ್ರತಿನಿಧಿ ಸ್ವಾಮಿ ವಿವೇಕಾನಂದರು ಭಾರತಭೂಮಿಯ ಮಣ್ಣನ್ನು ಮೆಟ್ಟಿದೊಡನೆಯೆ ನೆರದ ಜನರು ಜಯಧ್ವನಿ ಮಾಡಿದರು. ರಾಮನಾಡಿನ ದೊರೆಗಳು ಗುರುವರ್ಯರ ಚರಣಗಳಲ್ಲಿ ಬಿದ್ದು ನಮಿಸಿದರು. ಒಡನೊಡನೆಯೆ ಸಹಸ್ರ ಸಹಸ್ರ ಶಿರಗಳು ಭೂಮಿಸ್ಪರ್ಶ ಮಾಡಿದುವು. ಸಂಧ್ಯೆಯ ರಕ್ತಾಕ್ತಧೂಸರ ಗಗನ ತಳದ ಹಿನ್ನೆಲೆಯಲ್ಲಿ ಸಹಸ್ರ ಸಹಸ್ರ ಹೃದಯಗಳ ಸ್ವತಃಸ್ಫೂರ್ತ ಭಕ್ತಿವಿಗಳಿತವಾಗಿದ್ದ ಆ ಮಹಿಮಾಮಯ ದೃಶ್ಯವು ಭರತಖಂಡದ ಇತಿಹಾಸದಲ್ಲಿ ಒಂದು ಅಪೂರ್ವ ಘಟನೆ. ಸ್ವಾಮಿಗಳು ಮಹಾರಾಜರನ್ನು ಮತ್ತು ಪಕ್ಕದಲ್ಲಿದ್ದ ಇತರರನ್ನೂ ಮಣಿದೆತ್ತಿ ಆಶೀರ್ವಾದ ಮಾಡಿದರು. ತರುವಾಯ ಚಂದ್ರಾತಪಶೋಭಿತ ಸಮುದ್ರ ತೀರದಲ್ಲಿ ದೊರೆಗಳೂ ಜನಗಳೂ ಸೇರಿ ಅಭಿನಂದನ ಪತ್ರವನ್ನು ಅರ್ಪಿಸಿದರು. ಸ್ವಾಮಿಗಳು ಉತ್ತರಾನಂತರ ವಿಶ್ರಾಂತಿನಿಲಯಕ್ಕೆ ಕರೆದೊಯ್ಯಲ್ಪಟ್ಟರು. ಆಗ ದೊರೆಗಳ ಅಪ್ಪಣೆಯಂತೆ ತೇರಿನ ನೊಗದಿಂದ ಕುದುರೆಗಳನ್ನು ಬಿಚ್ಚಿದರು. ಆಮೇಲೆ ಸ್ವಯಂ ಮಹಾರಾಜರೂ ನೆರೆದ ಜನಗಳೂ ಸೇರಿ ತೇರನ್ನು ಎಳೆದರು. ಮರುದಿವಸ ಸ್ವಾಮಿಗಳು ಸುಪ್ರಸಿದ್ಧ ಶ್ರೀರಾಮೇಶ್ವರ ದೇವಮಂದಿರವನ್ನು ಹೋಗಿ ನೋಡಿದರು. ಅಲ್ಲಿಂದ ರಾಮನಾಡಿಗೆ ತೆರಳಿದರು. ಅಲ್ಲಿ ರಾಜರು ಬಹು ವಿಜೃಂಭಣೆಯಿಂದ ಸ್ವಾಗತವಿತ್ತರು. ಬಡಬಗ್ಗರಿಗೆ ಅನ್ನದಾನ ವಸ್ತ್ರದಾನಗಳನ್ನು ಮಾಡಿದರು. ಅಲ್ಲದೆ ಸ್ವಾಮಿಗಳು ಪಶ್ಚಿಮ ದೇಶಗಳಿಂದ ಭಾರತವರ್ಷಕ್ಕೆ ವಿಜಯಿಯಾಗಿ ಬಂದಾಗ ಯಾವ ಸ್ಥಳದಲ್ಲಿ ಮೊತ್ತಮೊದಲು ಕಾಲಿಟ್ಟರೋ ಅಲ್ಲಿ ಒಂದು ಸ್ಮೃತಿಸ್ತಂಭವನ್ನೂ ನೆಟ್ಟರು. ಅಲ್ಲಿಯ ಶಾಸನ ಹೀಗೆಂದಿದೆ:‌

“ಸತ್ಯಮೇವ ಜಯತೇ – ಈ ಸ್ಥಳದಲ್ಲಿ ಮಹಾತ್ಮಾ ಸ್ವಾಮಿ ವಿವೇಕಾನಂದರು ಪಾಶ್ಚಾತ್ಯ ಜಗತ್ತಿನಲ್ಲಿ ವೇದಾಂತ ಧರ್ಮದ ವಿಜಯ ವೈಜಯಂತಿಯನ್ನು ಸ್ಥಾಪಿಸಿ, ಅದ್ವಿತೀಯ ದಿಗ್ವಿಜಯಾನಂತರ ತಮ್ಮ ಆಂಗ್ಲೇಯ ಶಿಷ್ಯಗಣದೊಂದಿಗೆ ಬಂದು ಭರತಖಂಡದ ಮೃತ್ತಿಕೆಯಲ್ಲಿ ಮೊತ್ತಮೊದಲು ಪದಪಂಕಜ ಸ್ಥಾಪನೆ ಮಾಡಿದ ಪುಣ್ಯಸ್ಥಾನವನ್ನು ಚಿರಸ್ಮರಣೀಯವನ್ನಾಗಿ ಮಾಡುವ ಉದ್ದೇಶದಿಂದ ಈ ಸ್ಮೃತಿಸ್ತಂಭವನ್ನು ರಾಮನಾಡಾಧಿಪ ರಾಜಾ ಭಾಸ್ಕರವರ್ಮ ಸೇತುಪತಿಗಳು ಕ್ರಿ. ಶ. ೧೮೯೭ನೆಯ ವರ್ಷದ ಜನವರಿ ೨೬ನೆಯ ದಿನ ನಿರ್ಮಾಣ ಮಾಡಿಸಿದರು.”

ರಾಮನಾಡಿನಿಂದ ಹೊರಟ ಸ್ವಾಮಿಗಳು ಪರಮಕುಡಿ, ಮನಮಧುರೆ, ಮಧುರೆ, ತಿರುಚನಾಪಲ್ಲಿ ಮೊದಲಾದ ಊರುಗಳಲ್ಲಿ ಅಭಿನಂದಿತರಾಗಿ ಕುಂಭಕೋಣಕ್ಕೆ ಬಂದರು. ಊರಿನ ಜನಗಳು ಆನಂದಸಾಗರದಲ್ಲಿ ಮುಳುಗಿ ತೇಲುತ್ತಾ ಯುಗಾಚಾರ್ಯರಿಗೆ ಅಭಿನಂದನ ಪತ್ರವನ್ನು ಅರ್ಪಿಸಿದರು. ಮುಂದೆ ಮದರಾಸಿನಲ್ಲಿ ವಿರಾಮ ದೊರಕುವುದು ದುರ್ಲಭವೆಂದು ತಿಳಿದು ಸ್ವಾಮಿಗಳು ಕುಂಭಕೋಣದಲ್ಲಿ ಮೂರು ದಿನಗಳಿದ್ದು ಬಳಲಿಕೆಯನ್ನು ಪರಿಹರಿಸಿಕೊಂಡು ತರುವಾಯ ಮದರಾಸಾಭಿಮುಖವಾಗಿ ಸಾಗಿದರು.

ದಾರಿಯಲ್ಲಿ ರೈಲು ನಿಲ್ದಾಣಗಳಲ್ಲಿ ಜನರು ತಂಡೋಪತಂಡವಾಗಿ ನೆರೆದು ಸ್ವಾಮಿಗಳ ದರ್ಶನ ಮಾಡಿ “ಸ್ವಾಮಿ ವಿವೇಕಾನಂದ ಮಹಾರಾಜರಿಗೆ ಜೈ!” ಎಂದು ಘೋಷಿಸಿದರು. ಹಾದಿಯಲ್ಲಿ ಇನ್ನೊಂದು ಸಂಗತಿ ನಡೆಯಿತು. ಒಂದು ಸ್ಟೇಷನ್ನಿನಲ್ಲಿ ಜನರು ಕಿಕ್ಕಿರಿದು ಸ್ಟೇಷನ್ ಮಾಸ್ಟರಿಗೆ ರೈಲನ್ನು ಒಂದು ನಿಮಿಷದ ಮಟ್ಟಿಗಾಗಿ ನಿಲ್ಲಿಸಲು ಹೇಳಿದರು. ಆದರೆ ಅವರು ಸಮ್ಮತಿಸಲಿಲ್ಲ. ಕಡೆಗೆ ಹತಾಶರಾದ ಜನರು ರೈಲು ಕಂಬಿಗಳ ಮೇಲೆ ಮಲಗಿದರು. ರೈಲು ದೂರದಲ್ಲಿ ಬಂತು. ಸ್ಟೇಷನ್‌ಮಾಸ್ಟರು ದಿಗಿಲುಬಿದ್ದರು. ಹುಚ್ಚರಂತೆ ಹಿಂದೆ ಮುಂದೆ ಹರಿದಾಡಿದರು. ಗಾರ್ಡ್ ಇದನ್ನೆಲ್ಲಾ ದೂರದಿಂದಲೆ ನೋಡಿ, ಸಂಗತಿಯನ್ನು ತಿಳಿದುಕೊಂಡು, ರೈಲನ್ನು ನಿಲ್ಲಿಸಿದರು. ಆಗ ಸ್ವಾಮಿಗಳು ಹೊರಗೆ ಬಂದು ಜನರಿಗೆ ಸಂದರ್ಶನ ಕೊಟ್ಟು ಆಶೀರ್ವದಿಸಿದರು. ತರುವಾಯ ರೈಲು ಮದರಾಸಿಗೆ ಹೊರಟಿತು.

ಸ್ವಾಮಿಗಳು ಮದರಾಸಿಗೆ ಬರುವುದಕ್ಕೆ ಕೆಲವು ದಿನಗಳ ಹಿಂದೆಯೆ ಆ ನಗರದಲ್ಲಿ ಕೋಲಾಹಲ ಪ್ರಾರಂಭವಾಗಿತ್ತು. ಜನರೆಲ್ಲರೂ ಜಗದ್ವಿಖ್ಯಾತ ಸ್ವಾಮಿ ವಿವೇಕಾನಂದರ ಪುಣ್ಯಾಗಮನವನ್ನು ಕಾತರತೆಯಿಂದ ನಿರೀಕ್ಷಿಸುತ್ತಿದ್ದರು. ಯಾರ ಬಾಯಲ್ಲಿ ಕೇಳಿದರೂ ಅವರ ಹೆಸರೇ! ಎಲ್ಲೆಲ್ಲಿಯೂ ಅವರ ವಿಚಾರವೇ! ಶಾಲೆಗಳಲ್ಲಿ, ಕಾಲೇಜುಗಳಲ್ಲಿ, ಕೋರ್ಟುಗಳಲ್ಲಿ, ಬೀದಿಗಳಲ್ಲಿ, ಸಮುದ್ರತೀರದಲ್ಲಿ, ಎಲ್ಲಿ ಯಾರನ್ನು ಯಾರು ಸಂಧಿಸಿದರೂ ಮೊದಲು “ಸ್ವಾಮಿ ವಿವೇಕಾನಂದರು ಬರುವುದೆಂದು?” ಎಂದು ಕೇಳುತ್ತಿದ್ದರು. ಪ್ರೌಢಪರೀಕ್ಷೆಗಳಿಗಾಗಿ ದೂರದೇಶದಿಂದ ಮದರಾಸಿಗೆ ಬಂದ ವಿದ್ಯಾರ್ಥಿಗಳು ಪರೀಕ್ಷೆ ಮುಗಿದು ಬಹಳ ದಿನಗಳಾದರೂ ಸ್ವಾಮಿಗಳ ಆಗಮನವನ್ನು ಪ್ರತೀಕ್ಷಿಸುತ್ತ ಅಲ್ಲಿಯೆ ಇದ್ದರು. ಎಲ್ಲಿ ನೋಡಿದರೂ ತೋರಣಗಳು, ಬಾವುಟಗಳು, ಮಂಟಪಗಳು! ಎತ್ತ ತಿರುಗಿದರೂ “Long Live the Venerable Vivekananda!”, “Hail Servant of God”, “Hail Servant of the Great Sages of the Past”, “The Awakened India’s Hearty Greetings to the Swami Vivekananda”, “Hail, Harbinger of Peace”, “Hail, Sree Ramakrishna’s Worthy Son!” “Welcome, Prince of Man”, “ಏಕಂ ಸತ್ ವಿಪ್ರಾ ಬಹುಧಾ ವದಂತಿ”. “ಉತ್ತಿಷ್ಠತ ಜಾಗ್ರತ ಪ್ರಾಪ್ಯ ವರಾನ್ನಿಬೋಧತ” ಮೊದಲಾದ ಲಿಖಿತಗಳು ಕಣ್ಣಿಗೆ ಮೆರೆಯುತ್ತಿದ್ದುವು. ಸಮಸ್ತ ಮದರಾಸು ನಗರವೂ ಒಂದು ನೂತನ ಶೋಭೆಯಿಂದ ಬೆಳಗುತ್ತಿದ್ದಿತು.

ಫೆಬ್ರವರಿ ೬ನೆಯ ತಾರೀಖಿನ ದಿನ ಪ್ರಭಾತಕಾಲವಾಗುತ್ತಿರಲು ಜನರು ಗುಂಪು ಗುಂಪಾಗಿ ರೈಲ್ವೆ ಸ್ಟೇಷನ್ನಿನ ಕಡೆಗೆ ಹೊರಟರು. ರೈಲುಬಂಡಿ ಫ್ಲಾಟ್‌ಫಾರಂನಲ್ಲಿ ನಿಂತೊಡನೆಯೆ ಸಹಸ್ರ ಸಹಸ್ರ ಕಂಠೋತ್ಥಿತ ಜಯಧ್ವನಿ ಗಗನಮಂಡಲವನಂಡಲೆಯಿತು. ನಯನಾಭಿರಾಮ ಶ್ರೀ ವಿವೇಕಾನಂದರು ಗಾಡಿಯಿಂದ ಕೆಳಗಿಳಿದ ಕೂಡಲೆ ಸ್ವಾಗತ ಸಮಿತಿಯ ಸದಸ್ಯರು ಮುಂದೆ ಹೋಗಿ ಅವರ ಕೊರಳಿಗೆ ಹೂಮಾಲೆ ಹಾಕಿದರು. ಸ್ವಾಮಿಗಳು ಬಳಿಯಿದ್ದವರೊಡನೆ ಒಂದೆರಡು ನಿಮಿಷಗಳವರೆಗೆ ಮಾತಾಡಿ ತರುವಾಯ ಅಣಿಯಾಗಿದ್ದ ಕುದುರೆಗಾಡಿಯನ್ನು ಹತ್ತಿದರು. ನ್ಯಾಯಾಧೀಶ ಸುಬ್ರಹ್ಮಣ್ಯ ಅಯ್ಯರ್, ಸ್ವಾಮಿ ನಿರಂಜನಾನಂದ, ಸ್ವಾಮಿ ಶಿವಾನಂದ ಈ ಮೂವರೂ ಸ್ವಾಮಿಗಳ ಪಾರ್ಶ್ವದಲ್ಲಿ ಕುಳಿತಮೇಲೆ ಗಾಡಿ ಮೆಲ್ಲ ಮೆಲ್ಲನೆ ಹೊರಟಿತು. ತುಸುದೂರ ಹೋಗುವುದರಲ್ಲಿಯೆ ಯುವಕ ನಾಗರಿಕರು ಕುದುರೆಗಳನ್ನು ನೊಗಗಳಚಿ ತಾವೇ ಗಾಡಿಯನ್ನು ಎಳೆದರು. ಪಥಮಧ್ಯೆ ಮನೆಮನೆಗಳಲ್ಲಿಯೂ ಜನರು ನಿಂತು ಯುಗಾಚಾರ್ಯನ ತಲೆಯ ಮೇಲೆ ಹೂಮಳೆಗರೆದರು. ಅಲ್ಲಲ್ಲಿ ಕೆಲವು ಜನ ಪುರನಾರಿಯರು ಆರತಿ ಬೆಳಗಿದರು; ಕೆಲವು ಪೂಜಿಸಿದರು; ಕೆಲವರು ದರ್ಶನ ಮಾತ್ರದಿಂದ ಪುನೀತರಾಗಿ ಆನಂದಾಶ್ರುಗಳನ್ನು ಕರೆದರು. ಮಕ್ಕಳು, ತರುಣರು, ಯುವಕರು, ಮುದುಕರು, ಹೆಂಗಸರು, ಗಂಡಸರು ಮೊದಲಾಗಿ ನೂರಾರು ಸಾವಿರ ಜನ ಬೀದಿಬೀದಿಗಳಲ್ಲಿಯೂ ತಿರುಗಿದರು. ಕಿವುಡುಗೈವ ಗೆಲುವಿನುಲಿ ಮನೆಮನೆಗಳಿಂದ ಮರುದನಿಯಾಗಿ ಗಾಳಿಯಲ್ಲಿ ಹಬ್ಬಿ ಬಾನಿಗೇರಿತು. ಅಂತೂ ಕಟ್ಟಕಡೆಗೆ ಯುವಕರಿಂದ ಎಳೆಯಲ್ಪಟ್ಟ ಗಾಡಿ ಮೆಲ್ಲಮೆಲ್ಲಗೆ, ಬಹು ಮೆಲ್ಲಗೆ ವಿರಾಮಮಂದಿರಕ್ಕೆ ಹೋಯಿತು. ಮದರಾಸಿನಲ್ಲಿ ಹಿಂದೆಂದೂ ಮತ್ತಾರಿಗೂ ಅಂತಹ ಮೆರವಣಿಗೆ ನಡೆದಿರಲಿಲ್ಲ.

ಮರುದಿನ ಭಾನುವಾರ ಸ್ವಾಮಿಗಳ ಮೇಲೆ ಅಭಿನಂದನ ಪತ್ರಗಳ ಮಳೆಗರೆಯಿತು. ವೈದಿಕ ಸಭೆಯ ಪರವಾಗಿ, ಸಮಾಜ ಸಂಸ್ಕಾರ ಸಭೆಯ ಪರವಾಗಿ, ಮದರಾಸು ನಗರ ಸಭೆಯ ಪರವಾಗಿ, ಖೇತ್ರಿ ಮಹಾರಾಜರ ಪರವಾಗಿ, ಇನ್ನೂ ಮೊದಲಾದ ಸಂಘ ಸಮುದಾಯಗಳ ಪರವಾಗಿ ಸಂಸ್ಕೃತ ಇಂಗ್ಲೀಷ್ ಕನ್ನಡ ತಮಿಳು ತೆಲುಗು ಭಾಷೆಗಳಲ್ಲಿ ಇಪ್ಪತ್ತು ಅಭಿನಂದನ ಪತ್ರಗಳು ಅರ್ಪಿತವಾದುವು. ಸಭಾಸ್ಥಳದಲ್ಲಿ ದಶ ಸಹಸ್ರಾಧಿಕ ಜನರು ಕಲೆತಿದ್ದರು. ಅವರೆಲ್ಲರಿಗೂ ಮಂದಿರದಲ್ಲಿ ಸ್ಥಳವಿರಲಿಲ್ಲ. ಗುಲ್ಲುಹೆಚ್ಚಿತು. ಸ್ವಾಮಿಗಳು ಮಂದಿರದಿಂದ ಹೊರಬಿದ್ದು, ಒಂದು ಕುದುರೆ ಗಾಡಿಯನ್ನು ಹತ್ತಿ ಅದರ ಸಾರಥಿ ಸ್ಥಾನದಲ್ಲಿ ನಿಂತು ಕೃಷ್ಣಪರಮಾತ್ಮನು ಗೀತೆಯನ್ನು ರಣಮಧ್ಯೆ ಅರ್ಜುನನ ಸಾರಥಿಯಾಗಿ ಬೋಧಿಸಿದಂತೆ ಭಾಷಣ ಮಾಡತೊಡಗಿದರು. ಆದರೆ ಜನರ ಉತ್ಸಾಹ ಹೆಚ್ಚಿ ಕೋಟ್ಯನುಕೋಟಿ ಮಾನವ ಶಿರಗಳು ನಿಲ್ಲಲು ಜಾಗವಿಲ್ಲದೆ ಕುಣಿದಾಡತೊಡಗಿದುವು. ಆದ್ದರಿಂದ ಸ್ವಾಮಿಗಳು ಆ ದಿನ ಉತ್ತರ ಸ್ವರೂಪವಾದ ಒಂದು ಸಣ್ಣ ಭಾಷಣ ಮಾಡಿ ಬೇಗನೆ ಮುಗಿಸಿಬಿಟ್ಟರು.

ಮರುದಿನ “ವಿಕ್ಟೋರಿಯಾ ಹಾಲ್”ನಲ್ಲಿ ವೀರಾವೇಶದಿಂದ ಮಾಡಿದ “ನನ್ನ ಸಮರ ನೀತಿ” ಎಂಬ ಉಪನ್ಯಾಸದಲ್ಲಿ ಅವರು ತಮ್ಮ ಹೃದಯದ ಮುತ್ತಿನ ಚಿಪ್ಪನ್ನು ಜನರ ಮುಂದೆ ಒಡೆದು ಚೆಲ್ಲಿದ್ದಾರೆ. ಆ ಬಿಸಿಬಿಸಿಯಾಗಿದ್ದ ಭಾಷಣದಲ್ಲಿ ಗರ್ವಧ್ವನಿ ಸ್ವಲ್ಪಮಟ್ಟಿಗೆ ತೋರಿ ಬರಬಹುದು. ಆದರೆ ಅದು ಪಾಶ್ಚಾತ್ಯ ಪ್ರಪಂಚದಲ್ಲಿ ತಿರುಗಿ, ಅಧಿಕಾರಿಯಾಗಿ ಬಂದಿದ್ದ ಅವರ ಆತ್ಮಶ್ರದ್ಧೆ ಎಷ್ಟರ ಮಟ್ಟಿಗಿತ್ತು ಎಂಬುದನ್ನು ಸೂಚಿಸುತ್ತದೆ.

ಐದು ಸಾವಿರ ಜನರು ನೆರೆದು ಆ ಪಾಂಚಜನ್ಯವನ್ನು ಕಿವಿಗೊಟ್ಟು ಕೇಳಿದರಂತೆ.‌

“… ಪೂಜ್ಯತೆ ಗೌರವ ವಿಶ್ವಾಸಗಳ ವಿಚಾರ ಬೇರೆ; ಹೇಳಿದ್ದನ್ನೆಲ್ಲ ವಿಚಾರವಿಲ್ಲದೆ ವಿಮರ್ಶೆಯಿಲ್ಲದೆ ಕೇಳಿದೊಡನೆ ನುಂಗಿಬಿಡುವುದು ಬೇರೆ… ಸುಧಾರಕರು ತಿಳಿಯಲಿ, ನಾನು ಅವರಿಗಿಂತಲೂ ಒಂದು ಕೈ ಮಿಗಿಲಾದ ಸುಧಾರಕನೆಂದು. ಅವರು ಕೊಂಬೆಯ ತುದಿಗಳನ್ನು ಮಾತ್ರ ಕಸಿಮಾಡಲು ಯತ್ನಿಸುತ್ತಿದ್ದಾರೆ. ನಾನು ಬೇರನ್ನು ಸಹ ಕಸಿಮಾಡಲು ಹವಣಿಸುತ್ತಿದ್ದೇನೆ. ನಮ್ಮಿಬ್ಬರಿಗೆ ತಾರತಮ್ಯವಿರುವುದು ಸುಧಾರಣೆಯ ವಿಧಾನದಲ್ಲಿ. ಅವರದು ವಿನಾಶಮಾರ್ಗ, ನನ್ನದು ವಿರಚನಾ ಮಾರ್ಗ… ಅಶಿವ ಎಲ್ಲೆಲ್ಲಿಯೂ ಇರುತ್ತದೆ. ಅದು ವಾತರೋಗದಂತೆ ಒಂದು ಕಡೆಯಿಂದ ಓಡಿಸಿದರೆ ಮತ್ತೊಂದು ಕಡೆಗೆ ಹೋಗುತ್ತದೆ. ಕಾಲಿನಿಂದ ತಲೆಗೆ, ತಲೆಯಿಂದ ಕಾಲಿಗೆ… ಯಾರೋ ಒಬ್ಬಿಬ್ಬರು ಯಾವುದನ್ನೋ ಕೆಟ್ಟದ್ದು ಎಂದು ಭಾವಿಸಿದ ಮಾತ್ರಕ್ಕೆ ಜನಾಂಗವೆಲ್ಲವೂ ಅವರ ಹಿಂದೆ ಚಲಿಸಲೊಪ್ಪುವುದಿಲ್ಲ. ಆದ್ದರಿಂದ ಜನಾಂಗದ ಮನಸ್ಸನ್ನು ವಿದ್ಯಾಭ್ಯಾಸದಿಂದ ತಿದ್ದಬೇಕು…‌

“ಹಾಗಾದರೆ ನನ್ನ ಸಮರನೀತಿಯೇನು? ನಮ್ಮ ಪೂರ್ವದ ಮಹರ್ಷಿಗಳ ದಾರಿಯಲ್ಲಿ ನಡೆಯುವುದೆ ನನ್ನ ನೀತಿ… ಅವರು ಸಮಾಜಸೃಷ್ಟಿಕರ್ತರಾಗಿದ್ದರು; ಸರ್ವರಿಗೂ ಶಕ್ತಿ ಮತ್ತು ಶುದ್ಧ ಜೀವನಗಳನ್ನು ದಯಪಾಲಿಸುವವರಾಗಿದ್ದರು. ಅವರು ಅದ್ಭುತಕಾರ್ಯಗಳನ್ನು ಮಾಡಿದ್ದಾರೆ. ನಾವೂ ಮಾಡಬೇಕು. ಇಂದಿನ ಸನ್ನಿವೇಶ ಸ್ವಲ್ಪ ಬದಲಾಯಿಸಿದೆ. ಆದ್ದರಿಂದ ನಮ್ಮ ಕಾರ್ಯವಿಧಾನವನ್ನೂ ಸ್ವಲ್ಪ ಬದಲಾಯಿಸಿಕೊಂಡರಾಯಿತು. ಅಷ್ಟೇ ಹೊರತು ಬೇರೆಯಿಲ್ಲ. ಪ್ರತಿಯೊಂದು ಜನಾಂಗಕ್ಕೂ ಪ್ರತಿಯೊಬ್ಬ ವ್ಯಕ್ತಿಗಿರುವಂತೆ ಒಂದೊಂದು ಜೀವ ಗುಣವಿರುತ್ತದೆ. ಆ ಕೇಂದ್ರ ಜೀವಗುಣದ ಆಧಾರದ ಮೇಲೆ ಇತರ ಗುಣಗಳನ್ನು ಕಟ್ಟಬೇಕು… ಭರತಖಂಡದ ಜೀವಗುಣವೆಂದರೆ ಧರ್ಮ… ಜೀವಗುಣಗಳನ್ನು ಬಿಟ್ಟು ವರ್ತಿಸಲು ತೊಡಗಿದರೆ ಜನಾಂಗ ಸಾಯಬೇಕಾಗುತ್ತದೆ…‌

“ಆದ್ದರಿಂದ ಭರತಖಂಡದ ಬಾಳಿನಲ್ಲಿ ಧರ್ಮಕ್ರಾಂತಿಯಾಗದೆ ಉಳಿದ ಸುಧಾರಣೆಗಳಾಗುವುದಿಲ್ಲ. ಇಂಡಿಯಾದೇಶದಲ್ಲಿ ರಾಜಕೀಯ ಸಮತೆಯ ಅಥವಾ ಸಾಮ್ಯವಾದದ ಬೀಜಗಳನ್ನು ಬಿತ್ತಬೇಕಾದರೆ ಮೊದಲು ಧರ್ಮನದಿಯ ನೀರನ್ನು  ಅದರ ಮೇಲೆ ಹೊನಲಾಗಿ ಹಾಯಿಸಬೇಕು. ಆದ್ದರಿಂದ ಉಪನಿಷತ್ತಾದಿಗಳಲ್ಲಿರುವ ಮಹಾದ್ಭುತ ಸತ್ಯಗಳನ್ನು ಗ್ರಂಥಗಳಿಂದಲೂ ಮಠಗಳಿಂದಲೂ ವನಕುಟೀರಗಳಿಂದಲೂ ಪಂಗಡಗಳಿಂದಲೂ ಹಿಸುಗಿ ಹಿಂಡಿ ಹೊರಗೆಳೆದು, ಎಲ್ಲೆಲ್ಲಿಯೂ ಬಿತ್ತಿ, ದೇಶದ ಮೇಲೆ ಬೆಂಕಿಯ ಹೊಳೆ ಹರಿಯುವಂತೆ ಮಾಡಬೇಕು…‌

“ರಾಜಕೀಯ ವಿದ್ಯೆಯನ್ನು ತುತೂರಿಯೂದಿ ಸಾರಬಹುದು. ಆರ್ಥಿಕ ಮತ್ತು ಸಾಮಾಜಿಕ ವಿಷಯಗಳನ್ನು ಕತ್ತಿಹಿಡಿದು ಬೆಂಕಿ ಹಚ್ಚಿ ಬೋಧಿಸಬಹುದು. ಆದರೆ ಧರ್ಮಬೋಧೆ ನೀರವವಾಗಿ ನಡೆಯಬೇಕು, ಹೊತ್ತಾರೆ ಮಲರುವ ಗುಲಾಬಿ ಮೊಗ್ಗುಗಳ ಮೇಲೆ ಬೀಳುವ ಇಬ್ಬನಿಯಂತೆ ಧರ್ಮವೇ ಜಗತ್ತಿಗೆ ಭರತಖಂಡವು ನೀಡುವ ಕಾಣಿಕೆ…‌

“ಆದ್ದರಿಂದ, ಮಿತ್ರರಿರಾ, ಭಾರತೀಯ ತರುಣರನ್ನು, ಧರ್ಮ ಪ್ರಚಾರಕ್ಕೆ ತಯಾರುಮಾಡುವ ಸಂಸ್ಥೆಗಳನ್ನು ಸ್ಥಾಪಿಸಿ, ತರಬಿಯತ್ತು ಮಾಡಿ, ದೇಶ ವಿದೇಶಗಳಿಗೆ ಕಳುಹಿಸಬೇಕೆಂಬುದೇ ನನ್ನ ಮಹೋದ್ದೇಶಗಳಲ್ಲಿ ಒಂದಾಗಿದೆ. ನನಗೀಗ ಪುರುಷವೀರರು ಬೇಕು; ಉಳಿದುದೆಲ್ಲ ತಾನಾಗಿಯೆ ಸಿದ್ಧವಾಗುತ್ತದೆ. ಅಂದರೆ ಬಲಿಷ್ಠ, ದೃಢಿಷ್ಠ, ಆಶಿಷ್ಠ, ಮೇಧಾವಿಗಳಾದ ತರುಣಸಿಂಹರು ಬೇಕು. ಅಂತಹರು ಒಂದು ನೂರು ಜನರು ಮುಂದೆ ಬಂದರೆ ಅವರಿಂದ ಪ್ರಪಂಚವನ್ನೇ ಬದಲಾಯಿಸಬಹುದು…. ಶಕ್ತಿದಾಯಕವಾದ ನಿಮ್ಮ ಧರ್ಮದ ಪ್ರಚಂಡ ಸತ್ಯಗಳನ್ನು ಸರ್ವರಿಗೂ ಬೋಧಿಸಿ. ಆ ಅಮೃತಪಾನಕ್ಕಾಗಿ ಜಗತ್ತು ಗಂಟಲೊಣಗಿ ಕಾಯುತ್ತಿದೆ. ಜನರಿಗೆ ಶತಮಾನಗಳಿಂದಲೂ ನೈಚ್ಯ ಭಾವಗಳನ್ನು ಬೋಧಿಸಿದ್ದಾರೆ. ಅವರು ಕೈಲಾಗದ ಕ್ರಿಮಿಗಳೆಂದು ತಿಳಿಸಿದ್ದಾರೆ. ಸಾಮಾನ್ಯ ಜನರಿಗೆ ಅವರು ಮಾನವರೇ ಅಲ್ಲವೆಂದೂ ಉಪದೇಶಿಸಿದ್ದಾರೆ. ಅಂತಹ ಬೋಧನೆಯನ್ನು ಕೇಳಿ ಕೇಳಿ ಅವರೂ ಹೀನ ಮೃಗಗಳಾಗಿದ್ದಾರೆ. ಇದುವರೆಗೂ ಅವರ ಕಿವಿಗೆ ಅವರಾತ್ಮದ ಮಹಾ ಮಹಿಮೆಯ ಗಾನ ಕೇಳಿಸಿಯೇ ಇಲ್ಲ. ಅವರಿಗೂ ಕೊಂಚ ಗೊತ್ತಾಗಲಿ, ತಾವೂ ನಿತ್ಯ ಶುದ್ಧ ಬುದ್ಧ ಮುಕ್ತಾತ್ಮರೆಂದು… ನಮ್ಮ ನರಗಳಿಗೆ ವಜ್ರಸಾಣೆಯಾಗಲಿ. ನಮಗೀಗ ಬೇಕಾದುದು ಕಬ್ಬಿಣದ ಖಂಡಗಳು, ಉಕ್ಕಿನ ನರಗಳು. ಬಹುಕಾಲದಿಂದಲೂ ನಾವು ಕಣ್ಣೀರು ಕರೆದಿದ್ದೇವೆ. ಇನ್ನು ಸಾಕು, ಅಳು ಬೇಡ. ಮೇಲೆದ್ದು ನಿಂತು ಗಂಡಸರಾಗಿ. ನಮಗೆ ಬೇಕು ವೀರ ಧರ್ಮ; ವೀರ ನಿರ್ಮಾಣಕ ಧರ್ಮ. ಸತ್ಯಕ್ಕೆ ಅದೇ ಒರೆಗಲ್ಲು – ದೇಹವನ್ನಾಗಲಿ ಮನಸ್ಸನ್ನಾಗಲಿ ಆತ್ಮವನ್ನಾಗಲಿ ದುರ್ಬಲಗೊಳಿಸುವ ಪ್ರತಿಯೊಂದನ್ನೂ ವಿಷವೆಂದು ತಿಳಿದು ತಿರಸ್ಕರಿಸಿ. ಸತ್ಯವು ಬಲಕಾರಿ… ಉಪನಿಷತ್ತಿನ ಸತ್ಯಗಳು ನಿಮ್ಮ ಮುಂದಿವೆ. ಅವುಗಳನ್ನು ಅನುಷ್ಠಾನ ಮಾಡಿ. ಭರತಖಂಡದ ವಿಮೋಚನೆ ಸಮೀಪವಾಗುತ್ತದೆ…‌

“…ಮಹತ್ಕಾರ್ಯ ಮಾಡುವುದಕ್ಕೆ ಮೂರು ಗುಣಗಳು ಅತ್ಯಂತಾವಶ್ಯಕ. ಮೊದಲನೆಯದು ಹೃದಯವೇಧೆ, ಎಂದರೆ ಎದೆಮರುಕ… ಮೃಗಗಳಂತೆ ಬಾಳುತ್ತಿರುವ ಕೋಟ್ಯಂತರ ಸೋದರರಿಗಾಗಿ ನಿಮ್ಮೆದೆ ಮರುಗುತ್ತಿದೆಯೇ? ನಿಮಗೆ ಊಟ ಬೇಡವಾಗಿದೆಯೇ? ನಿದ್ದೆ ಬರುವುದಿಲ್ಲವೇ? ಅದಕ್ಕಾಗಿ ಹಗಲಿರುಳೂ ನೋಯುತ್ತಿದ್ದೀರಾ?… ಹಾಗಿದ್ದರೆ ನೀವು ಸುಧಾರಕ ಪಟ್ಟಕ್ಕೆ ಅರ್ಹರಾಗುವ ಮೊದಲನೆಯ ಮೆಟ್ಟಿಲನ್ನು ಹತ್ತಿದ್ದೀರಿ… ಎರಡನೆಯದಾಗಿ, ಬರಿದೆ ಮರುಗಿದರೆ ಸಾಲದು. ಮರುಕ ಕಾರ್ಯಕಾರಿಯಾಗಬೇಕು… ಮೂರನೆಯದು ಎಡರುಗಳನ್ನು ಜಯಿಸಿ ಮುಂಬರಿವ ಇಚ್ಛಾಶಕ್ತಿಯಿರಬೇಕು. ಜಗತ್ತೆಲ್ಲವೂ ನಿಮ್ಮ ಮೇಲೆ ಕತ್ತಿ ಕಟ್ಟಿದರೂ ಹೆದರದೆ ಸತ್ಯಕ್ಕಾಗಿ ಹೋರಾಡುತ್ತೀರಾ? ಹೆಂಡಿರು ಮಕ್ಕಳೇ ನಿಮಗೆ ಎದುರು ಬಿದ್ದರೆ? ನಿಮ್ಮ ಹಣವೆಲ್ಲ ಕೈಬಿಟ್ಟುಹೋಗಿ ಭಿಕಾರಿಗಳಾದರೆ? ಅಪಕೀರ್ತಿ ಬಂದರೆ? ಆಗಲೂ ಬಿಡದೆ ಮುಂಬರಿಯುತ್ತೀರೇನು?… ಹಾಗಿದ್ದರ ನೀವು ಸುಧಾರಕರಾಗಲು ಸರ್ವೋತ್ಕೃಷ್ಟರಾದ ಅಧಿಕಾರಿಗಳಾಗುತ್ತೀರಿ…”

ತರುವಾಯವೂ ಕ್ರಮವಾಗಿ ‘ಭಾರತೀಯ ಜೀವನದಲ್ಲಿ ವೇದಾಂತ ಪ್ರಯೋಗ’, ‘ಭರತಖಂಡದ ಮಹಾಪುರುಷರು’, ‘ನಮ್ಮ ಕಣ್ಣೆದುರಿನ ಕರ್ತವ್ಯ’ ‘ಭಾರತ ವರ್ಷದ ಮುಂದಿನ ಗತಿ’ ಮೊದಲಾದ ಉಪನ್ಯಾಸಗಳನ್ನು ಮಾಡಿ ಮದರಾಸಿನ ಜನಗಳ ಎದೆಯಲ್ಲಿ ಬೆಂಕಿಯನ್ನು ಚಿಮುಕಿಸಿದರು.

ಅನೇಕ ಜನರು ಅವರ ಬಳಿಗೆ ಬಂದು, ನಾನಾ ಪ್ರಶ್ನೆಗಳನ್ನು ಕೇಳತೊಡಗಿದರು. ಒಂದು ದಿನ ಒಬ್ಬರು “ಸ್ವಾಮೀಜಿ, ದ್ವೈತವಾದ, ವಿಶಿಷ್ಟಾದ್ವೈತವಾದ, ಅದ್ವೈತವಾದ ಈ ಮೂರೂ ಸತ್ಯ ಮತ್ತು ಒಂದು ಚರಮೋಪಲಬ್ಧಿಗೆ ನಮ್ಮನ್ನು ಕೊಂಡೊಯ್ಯುವ ಮಾರ್ಗದ ಸೋಪಾನಮಾತ್ರಗಳೆಂದು ಪೂರ್ವಾಚಾರ್ಯರು ಏಕೆ ಬೋಧಿಸಲಲ್ಲ?” ಎಂದು ಕೇಳಿದರು.

ಅದಕ್ಕೆ ಸ್ವಾಮಿಗಳು “ನಮಗೋಸ್ಕರವೆ ಅವರು ಹೇಳದೆ ಬಿಟ್ಟುದು; ಅದಕ್ಕಾಗಿಯೆ ನಾವು ಜನ್ಮವೆತ್ತಿದೆವು!” ಎಂದರು.

ಇಂತು ಯುಗಮಹರ್ಷಿ ಮದರಾಸಿನಲ್ಲಿ ಇರುತ್ತಿರಲಾಗಿ ಅತ್ತ ಜನ್ಮದಾತೆಯಾದ ವಂಗಮಾತೆ ಪುತ್ರನ ವಿರಹವನ್ನು ಸಹಿಸಲಾರದೆ ಆಮಂತ್ರಣ ಪತ್ರಗಳ ಮೇಲೆ ಆಮಂತ್ರಣ ಪತ್ರಗಳನ್ನು ಬರೆಯತೊಡಗಿದಳು. ಆಕೆಯ ಎದೆ ಹೆಮ್ಮೆಯಿಂದ ಸಿಡಿಯುವಂತಿತ್ತು. ಅಲ್ಲದೆ ಭಗವಾನ್ ಶ್ರೀರಾಮಕೃಷ್ಣರ ಜನ್ಮೋತ್ಸವವು ಬಳಿ ಸಾರಿ ಬಂದುದರಿಂದ ಸ್ವಾಮಿಗಳು ಮದರಾಸಿನಿಂದ ಹೊರಡಲುದ್ಯುಕ್ತರಾದರು. ರೈಲುಮಾರ್ಗವಾಗಿ ಹೊರಟರೆ ಹಾದಿಯಲ್ಲಿರುವ ಊರುಗಳಲ್ಲಿ ಸ್ವಾಮಿಗಳು ನಿಲ್ಲಬೇಕಾಗುವುದೆಂದೂ ಆಗಲೆ ಬಳಲಿದ್ದ ಅವರಿಗೆ ಬಳಲಿಕೆ ಇನ್ನೂ ಅತಿಯಾಗುವುದೆಂದೂ ತಿಳಿದ ಶಿಷ್ಯರೂ ಗುರುಗಳನ್ನು ಸಮುದ್ರ ಮಾರ್ಗವಾಗಿ ಕಲ್ಕತ್ತಾ ನಗರಕ್ಕೆ ಕರೆದೊಯ್ಯುವಂತೆ ನಿರ್ಣಯಿಸಿದರು. ಅದರಂತೆಯೆ ಜಹಜು ಹತ್ತಿ ಮದರಾಸನ್ನು ಬೀಳ್ಕೊಂಡರು.

ಹಡಗು ಕಿದಿರಪುರದ ರೇವಿನಲ್ಲಿ ನಿಂತಿತು. ಕಲ್ಕತ್ತಾ ನಗರ ಸ್ವಾಗತ ಸಮಿತಿಯಿಂದ ಕಳುಹಿಸಲ್ಪಟ್ಟ ಇಬ್ಬರು ಪ್ರತಿನಿಧಿಗಳು ಆಗಲೆ ಅಲ್ಲಿಗೆ ಬಂದಿದ್ದರು. ಅವರು ಸ್ವಾಮಿಗಳಿಗಾಗಿ ಒಂದು ಸ್ಪೆಷಲ್ ರೈಲು ಹೊರಡುವುದಾಗಿ ತಿಳಿಸಿದರು.

ಅಂದು ಸ್ಟೇಶನ್ನಿನಲ್ಲಿ ಕಲ್ಕತ್ತಾ ನಗರವೆ ಮೇಳಯಿಸಿತ್ತು. ರೈಲಿನ ವಂಶಿ ಧ್ವನಿ ಕೇಳಬಂದೊಡನೆಯೆ ಸಹಸ್ರ ಜನರು ಮಿಳಿತಕಂಠರಾಗಿ “ಜೈ ರಾಮಕೃಷ್ಣ ದೇವ ಕೀ ಜೈ! ಜೈ ವಿವೇಕಾನಂದ ಸ್ವಾಮಿಜಿ ಕೀ ಜೈ” ಎಂದು ಜಯಘೋಷ ಮಾಡಿದರು. ಈ ಶಬ್ದಾಘಾತದಿಂದ ನಿಲ್ದಾಣವೂ ಕಂಪಿಸಿತು. ಸ್ವಾಮಿಗಳು ರೈಲಿನಿಂದ ಕೆಳಗಿಳಿದು ನೆರೆದ ಮಹಾಜನ ವೃಂದಕ್ಕೆ ಕೈಮುಗಿದರು. ತರುವಾಯ ಬಾಬು ನರೇಂದ್ರನಾಥ ಸೇನರನ್ನು ಮುಂದಿಟ್ಟುಕೊಂಡು ಸ್ವಾಗತ ಸಮಿತಿಯ ಮುಖ್ಯಸ್ಥರು ಮುಂದೆ ಸಾಗಿ ಆಚಾರ್ಯವರ್ಯನನ್ನು ಎದುರುಗೊಂಡು ಆತನ ಕೊರಳಿಗೆ ವಿವಿಧ ಪುಷ್ಪಮಾಲಿಕೆಗಳನ್ನು ಹಾಕಿದರು. ತರುವಾಯ ಸ್ವಾಮಿಗಳು ಚಪಲ ಚಟುಲ ಚತುರಾಶ್ವಯೋಜಿತ ಶಕಟವನ್ನೇರಿ ಸೇವಿಯರ್ ದಂಪತಿಗಳನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಹೊರಟರು. ಆದರೆ ವಂಗ ಯುವಕರು ಗಾಡಿಯನ್ನು ಮುಂಬರಿಯಬಿಡಲಿಲ್ಲ. ಕುದುರೆಗಳನ್ನು ನೊಗಗಳಚಿ ತಾವೆ ಎಳೆದರು. ಮಧುರ ವಾದ್ಯಘೋಷ ಸಮೇತವಾಗಿ ಮೆರವಣಿಗೆ ರಿಪ್ಪನ್ ಕಾಲೇಜಿಗೆ ಹೊರಟಿತು. ದಾರಿಯುದ್ದಕ್ಕೂ ಧ್ವಜ ಪತಾಕೆಗಳೂ ಪುಷ್ಪಪರ್ಣಭೂಷಿತ ತೋರಣಗಳೂ ರಂಜಿಸಿದ್ದುವು.

ರಿಪ್ಪನ್ ಕಾಲೇಜಿನಲ್ಲಿ ಸ್ವಾಗತ ಸಮಿತಿಯವರು ಅಭಿನಂದನ ಪತ್ರವನ್ನು ವಿಜೃಂಭಣೆಯಿಂದ ಅರ್ಪಿಸಿದ ತರುವಾಯ ಸ್ವಾಮೀಜಿ ಒಂದು ಸಣ್ಣ ಭಾಷಣ ಮಾಡಿದರು. ತರುವಾಯ ಅವರೂ ಅವರ ಶಿಷ್ಯರೂ ಕಾಶಿಪುರದಲ್ಲಿದ್ದ ಗೋಪಾಲ ಲಾಲ ಶೀಲರ ತೋಟದಮನೆಗೆ ವಿಶ್ರಾಂತಿಗಾಗಿ ಹೋದರು. ಒಂದು ವಾರದವರೆಗೆ ಅವರು ಯಾವ ಉಪನ್ಯಾಸದ ಗೋಜಿಗೂ ಹೋಗದೆ ವಿರಾಮ ತೆಗೆದುಕೊಂಡರು. ಆದರೂ ಅವರಿಗೆ ವಿರಾಮವೆಲ್ಲಿ? ಜನರು ಮಂದೆ ಮಂದೆಯಾಗಿ ಅವರೆಡೆಗೆ ಬರತೊಡಗಿದರು. ನಿತ್ಯವೂ ನಾನಾ ವಿಷಯಕವಾದ ಧರ್ಮಚರ್ಚೆಗಳು ನಡೆಯುತ್ತಿದ್ದುವು.

೧೮೯೭ನೆಯ ವರ್ಷದ ಫೆಬ್ರವರಿ ೨೮ನೆಯ ತಾರೀಖಿನ ದಿನ ಸಾರ್ವಜನಿಕ ಸ್ವಾಗತೋತ್ಸವ ದಿನವಾಗಿ ಗೊತ್ತುಮಾಡಲ್ಪಟ್ಟಿತು. ಆ ದಿನ ನಗರ ಮಂದಿರದಲ್ಲಿ ಜನರು ತುಂಬಿದ್ದರು. ರಾಜರು, ಮಹಾರಾಜರು, ಸಂನ್ಯಾಸಿಗಳು, ಆಂಗ್ಲೇಯರು, ಪಂಡಿತರು, ಪುರಜನರು ಮೊದಲಾದ ಎಲ್ಲಾ ತರಗತಿಯ ಜನರೂ ಅಲ್ಲಿ ನೆರೆದಿದ್ದರು. ಅಭಿನಂದನಪತ್ರ ಪಠನ ಮುಗಿದ ನಂತರ ಮಾನವ ಮಿತ್ರ ಯುಗಾಚಾರ್ಯ ಯೋಗಿವರ್ಯನು ಕತ್ತಲನ್ನು ಓಡಿಸುತ್ತ ಮೂಡುವ ನೇಸರಿನಂತೆ ಮೇಲೆದ್ದು ನಿಂತನು. ನೆರೆದವರೆಲ್ಲರ ಎದೆದಾವರೆಗಳು ಮುದದಿಂದ ಅರಳಿದುವು. ಆ ದಿನದ ಅವರ ಉಪನ್ಯಾಸವು ಅನನ್ಯ ಸಾಧಾರಣವಾಗಿತ್ತು. ಶಕ್ತಿಪೂರ್ಣವಾಗಿತ್ತು. ಮಿಂಚು ಸಿಡಿಲುಗಳನ್ನು ಪುಡಿಮಾಡಿ ಸಿಡಿಮದ್ದಿನ ಮೇಲೆ ಎರಚಿದಂತಿತ್ತು. ಅವರಲ್ಲಿ ವೀರಾವೇಶಪೂರ್ಣವಾದ ದೇಶಭಕ್ತಿ ತುಂಬಿ ತುಳುಕುತ್ತಿತ್ತು. ಶ್ರೀರಾಮಕೃಷ್ಣರನ್ನು ಯುಗಾವತಾರರೆಂದು ಮೊತ್ತಮೊದಲು ಅವರು ಬಹಿರಂಗವಾಗಿ ಸಾರಿದುದು ಆ ಉಪನ್ಯಾಸದಲ್ಲಿಯೆ. ಭಾರತೀಯ ಜನಾಂಗವನ್ನೂ, ಧರ್ಮವನ್ನೂ ಉದ್ಧಾರ ಮಾಡಲು ಜನ್ಮವೆತ್ತಿದ ಆ ಮಹಾಪುರುಷರೇ ನಮ್ಮ ದೇಶದ ಚರಮಲಕ್ಷ್ಯವೆಂದು ಉದ್ಘೋಷಿಸಿದುದೂ ಆ ಭಾಷಣದಲ್ಲಿಯೇ. ಆ ಬೆಂಕಿಯುಗುಳುವ ಸಿಡಿಲೆರಚುವ ಮಾತುಗಳನ್ನು ಕೇಳಿದವರ ಎದೆಯಲ್ಲಿ ಮಲಗಿದ್ದ ಆತ್ಮಶಕ್ತಿ ಗೌರವಗಳು ಎಚ್ಚತ್ತುವು. ಆ ಸಿಡಿಲಾಳನ್ನು ನೋಡಿದವರ ಚೇತನದಲ್ಲಿ ಕೆಮ್ಮಿಂಚಿನ ಸಂಚಾರವಾಯಿತು.‌

“ಮಾನವನು ತನ್ನ ಮುಕ್ತಿಯ ಸಲುವಾಗಿ ಈ ಪ್ರಪಂಚದ ಬಂಧನ ಸಂಬಂಧಗಳೆಲ್ಲವನ್ನೂ ಒಂದೇ ಪೆಟ್ಟಿಗೆ ಕತ್ತರಿಸಿ ಬಿಡಬೇಕೆಂದು ಪ್ರಯತ್ನಿಸುತ್ತಾನೆ. ಹೆಂಡಿರು, ಮಕ್ಕಳು, ನೆಂಟರಿಷ್ಟರು, ಬಂಧುಮಿತ್ರರು ಮೊದಲಾದ ಮಾಯೆಗಳನ್ನು ಖಂಡಿಸಿ ಸಂಸಾರದಿಂದ ದೂರ, ಬಹುದೂರ, ಪಲಾಯನ ಮಾಡಬೇಕೆಂದು ಹವಣಿಸುತ್ತಾನೆ. ಆ ಪ್ರಯತ್ನದಲ್ಲಿ ದೇಹಗತ ಸಕಲ ಸಂಬಂಧಗಳನ್ನೂ, ಪುರಾತನ ಸಕಲ ಸಂಸ್ಕಾರಗಳನ್ನೂ, ಅಷ್ಟೇ ಏಕೆ ಮಾನವ ಸಹಜಲಕ್ಷಣಗಳನ್ನೂ ಕೂಡ ಬಿಟ್ಟು ಬಿಡಲು ಜೀವ ಬಿಟ್ಟು ಹೆಣಗುತ್ತಾನೆ. ಆದರೂ ಆತನ ಹೃದಯದ ಅಂತರಾಳದಲ್ಲಿ ಸದಾಸರ್ವದಾ ಮೃದುವಾದ ಅಸ್ಫುಟವಾದ ಧ್ವನಿಯೊಂದು ಮೊರೆಯುತ್ತಲೆ ಇರುತ್ತದೆ. ಆತನ ಕಿವಿಗಳಿಗೆ ಸದಾ ಸರ್ವದಾ ಯಾವುದೊ ಸ್ವರವು ಕೇಳಿಸುತ್ತಲೆ ಇರುತ್ತದೆ. ಎಲ್ಲೆಲ್ಲಿಯೂ ಯಾವಾಗಲೂ ಹಗಲಿರುಳೂ ಕೇಳಿಬರುವ ಆ ಮೆಲ್ಲುಲಿ ಇಂತು ನುಡಿಯುತ್ತದೆ: ‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ!’”

ಮಾನವಮಿತ್ರ ವಿವೇಕಾನಂದರೂ ಒಂದಾನೊಂದು ಕಾಲದಲ್ಲಿ ಆತ್ಮ ಮುಕ್ತಿಯ ಸಲುವಾಗಿ ಪ್ರಯತ್ನಪಡುತ್ತಿದ್ದರು. ಸಮಾಧಿಕಾಮಿಯಾದ ಸಾಧಕನು ಕನ್ಯಾಕುಮಾರಿಯ ಕಡಲ ನಡುಬಂಡೆಯ ಮೇಲೆ ಯೋಗಾರೂಢನಾಗಿ ಕುಳಿತಿದ್ದನು. ವರ್ತಮಾನ ಯುಗದ ವಿಶ್ವಾಮಿತ್ರನ ಧ್ಯಾನಭಂಗದ ಸಲುವಾಗಿ ಯೋಗ ಮಾಯೆ ಅಪ್ಸರಸ್ತ್ರೀಯರನ್ನು ಅಟ್ಟಲಿಲ್ಲ! ಆದರೆ ಮಾತೃಸ್ವರೂಪಳಾದ ನಿಖಿಲ ಭಾರತವರ್ಷವು ಆತನ ಯೋಗದೃಷ್ಟಿಗೆ ಗೋಚರಿಸಿದಳು. ಜನನಿ ಸಜಲನಯನೆಯಾಗಿದ್ದಾಳೆ. ಮಾತಿಲ್ಲ. ಮೈಯಲ್ಲಿ ಪರಕೀಯರ ಪದಾಘಾತದ ಚಿಹ್ನೆಗಳು! ಕೂಳಿಲ್ಲ, ಹರಿದ ಚಿಂದಿಯುಟ್ಟಿದ್ದಾಳೆ! ರೋಗ, ಶೋಕ, ದುಃಖ, ದೈನ್ಯ, ಅಜ್ಞಾನಗಳಿಂದ ಪ್ರಬಲ ಪೀಡಿತಳಾಗಿ ಜನನಿ ಪುತ್ರನನ್ನು ಸಹಾಯಕ್ಕೆ ಕರೆಯುತ್ತಿದ್ದಾಳೆ! ವಿವೇಕಾನಂದರಿಗೆ ನಿಜವಾಗಿಯೂ ಧ್ಯಾನಭಂಗವಾಯಿತು. ಗಳದಶ್ರುಲೋಚನರಾಗಿ ಮೇಲೆದ್ದು ನಿಂತು ತಾಯಿಯನ್ನು ಸಂಬೋಧಿಸಿ ನುಡಿದರು ಇಂತೆಂದು: “ಜನನೀ, ನನಗೆ ಮುಕ್ತಿ ಬೇಡ! ತಾಯೇ, ನಿನ್ನ ಸೇವೆಯೊಂದೆ ನನ್ನ ಜೀವನದ ಏಕಮಾತ್ರ ಅವಶಿಷ್ಟ ಕರ್ಮ!”

ಸ್ವಾಮಿಗಳು ಕಲ್ಕತ್ತಾಕ್ಕೆ ಬಂದ ಕೆಲವು ದಿನಗಳಲ್ಲಿಯೆ ಶ್ರೀರಾಮಕೃಷ್ಣ ಪರಮಹಂಸರ ಜನ್ಮತಿಥಿ ಬಳಿಸಾರಿತು. ದಕ್ಷಿಣೇಶ್ವರದ ಕಾಳಿಕಾ ದೇವಾಲಯವು ಮಹೋತ್ಸವದ ಮಂಗಳರಂಗವಾಗಿ ಪರಿಣಮಿಸಿತು. ಸ್ವಾಮಿಗಳು ತಮ್ಮ ಪ್ರಾಚ್ಯ ಪಾಶ್ಚಾತ್ಯ ಶಿಷ್ಯಗಣದೊಡನೆ ಪ್ರಾತಃಕಾಲದಲ್ಲಿ ಅಲ್ಲಿಗೆ ಹೋದರು. ವಿವೇಕಾನಂದರೂ ಉತ್ಸವದಲ್ಲಿ ಭಾಗಿಗಳಾಗುವರೆಂದು ತಿಳಿದು ಅವರನ್ನು ದರ್ಶಿಸಲು ಅನೇಕ ಜನರು ಅಲ್ಲಿ ನೆರೆದಿದ್ದರು. ಸಹಸ್ರ ಸಹಸ್ರ ಕಂಠೋತ್ಥಿತ “ಜಯ ರಾಮಕೃಷ್ಣ! ಜಯ ವಿವೇಕಾನಂದ!” ಎಂಬ ಧ್ವನಿ ಬಳಿಯ ಭಾಗೀರಥಿಯನ್ನೂ ಬೆಕ್ಕಸಗೊಳಿಸಿತು. ಎಲ್ಲೆಲ್ಲಿಯೂ ಆನಂದ; ಎಲ್ಲೆಲ್ಲಿಯೂ ಸಂಭ್ರಮ! ವಾದ್ಯಗಳ ಮಧುರಘೋಷ ಹಬ್ಬಿತು. ಸುಗಂಧ ದ್ರವ್ಯಗಳ ಧೂಮ ಸುವಾಸನೆಗಳು ನವಯುಗದ ಪ್ರಾಣೋದಯವನ್ನು ಸೂಚಿಸಿ ವಾಯುಮಂಡಲದಲ್ಲಿ ಪಸರಿಸಿದವು. ತರತರದ ಬಣ್ಣದ ರೆಕ್ಕೆಯ ಸಾವಿರಾರು ಬಣ್ಣದ ಚಿಟ್ಟೆಗಳ ಬಳಗದಂತೆ ನೋಟಕ್ಕೆ ತೋಟದ ಹೂವು ತಳಿರುಗಳು ನಲಿದವು. ಕೆಲವರು ಶ್ರೀಗುರುದೇವರ ಜೀವನ ಲೀಲೆಯ ವಿಚಾರವಾಗಿ ಒಂದು ಭಾಷಣ ಮಾಡುವಂತೆ ಸ್ವಾಮಿಗಳನ್ನು ಕೇಳಿಕೊಂಡರು. ಆದರೆ ಜನರ ಅಟ್ಟಹಾಸದ ಕೋಲಾಹಲದಲ್ಲಿ ಅದು ಅಸಾಧ್ಯವೆಂದು ತೋರಿದುದರಿಂದ ಅವರು ಸುಮ್ಮನಾದರು. ಹಬ್ಬ ಮುಗಿದ ಮೇಲೆ ಗುರುವರ್ಯರು ತಮ್ಮವರನ್ನು ಕೂಡಿ ಆಲಂಬಜಾರಿನ ಮಠಕ್ಕೆ ತೆರಳಿದರು.

ಪರಮಹಂಸರ ಜನ್ಮೋತ್ಸವವಾದ ಕೆಲದಿನಗಳ ಮೇಲೆ ಸ್ವಾಮಿಗಳು ವೇದಾಂತ ಧರ್ಮದ ವಿಚಾರವಾಗಿ ಮತ್ತೊಂದು ಉಪನ್ಯಾಸ ಮಾಡಿದರು. ಅದರಲ್ಲಿ ಸನಾತನಧರ್ಮದ ಶ್ರೇಷ್ಠತೆಯನ್ನು ಮನಸ್ಸಿಗೆ ಹಿಡಿಯುವಂತೆ ವಿವರಿಸಿ, ಆಧುನಿಕ ಸಮಾಜ ಪದ್ಧತಿಗಳಲ್ಲಿ ಕೆಲವನ್ನು ಅನಾರ್ಯಗಳೆಂದು ವಿಮರ್ಶಿಸಿದರು. ಇದಾದ ತರುವಾಯ ಅವರು ಉಪನ್ಯಾಸ ಮಾಡಲು ಕೈಹಾಕಲಿಲ್ಲ. ಗಣನೆಯಿಲ್ಲದಷ್ಟು ಅಭಿನಂದನ ಪತ್ರಗಳನ್ನು ಸ್ವೀಕರಿಸಿ, ಲೆಕ್ಕವಿಲ್ಲದಷ್ಟು ಭಾಷಣಗಳನ್ನು ಕೊಟ್ಟು ಅವರಿಗೂ ಬೇಸರವಾಯಿತು. ಅಲ್ಲದೆ ಉಪನ್ಯಾಸಗಳಿಂದ ಜನರಲ್ಲಿ ಉತ್ತೇಜನವೇನೊ ಉದ್ಭವಿಸಬಹುದು; ಆದರೆ ಅದು ಸ್ಥಾಯಿಯಾಗಿರಲಾರದು. ಇದನ್ನು ತಿಳಿದು ಸ್ವಾಮಿಗಳು ಉಪನ್ಯಾಸ ಮಾಡುವುದನ್ನು ಬಿಟ್ಟು ಉಪದೇಶ, ಪ್ರವಚನ ಮತ್ತು ಉಪಭಾಷಣಗಳಿಗೆ ಕೈಯಿಕ್ಕಿದರು. ಆ ಸಮಯದಲ್ಲಿ ಅವರೆಡೆಗೆ ನಾನಾ ಪರಿಯ ಜನಗಳು ಬಂದು ಹೋಗುತ್ತಿದ್ದರು. ಆದರೆ ಎಲ್ಲರೂ ಧರ್ಮೋಪದೇಶ ಪಡೆಯಲೆಂದು ಬರುತ್ತಿದ್ದಿಲ್ಲ. ಕೆಲವರು ಅವರನ್ನು ನೋಡುವುದಕ್ಕಾಗಿಯೆ ಬರುತ್ತಿದ್ದರು. ಮತ್ತೆ ಕೆಲವರು ಕೌತೂಹಲದಿಂದ ಬರುತ್ತಿದ್ದರು. ಇನ್ನೂ ಕೆಲವರು ಪರೀಕ್ಷೆಗಾಗಿ ಬರುತ್ತಿದ್ದರು. ಎಷ್ಟೋ ಜನ ಪಂಡಿತರೂ ವೇದದರ್ಶನ ಶಾಸ್ತ್ರವಿದರೂ ಚರ್ಚೆಗೋಸುಗವಾಗಿಯೆ ಅಲ್ಲಿಗೆ ಬರುತ್ತಿದ್ದರು.

ಒಂದು ದಿನ ಥಿಯಾಸಫಿ ಸಂಘದ ಯುವಕನೊಬ್ಬನು ಸ್ವಾಮಿಗಳಲ್ಲಿಗೆ ಬಂದು “ಸ್ವಾಮಿಜಿ, ನಾನು ಯಾವ ಯಾವ ಪಂಥಗಳನ್ನೋ ಅನುಸರಿಸಿ ನೋಡಿದೆನು; ಆದರೆ ನನಗಿನ್ನೂ ಸತ್ಯ ಹೊಳೆದಿಲ್ಲ. ಅದೇಕೆ?” ಎಂದನು.

ಸ್ವಾಮಿಗಳು ಅತ್ಯಂತ ಸಹಾನುಭೂತಿಯಿಂದ “ವತ್ಸ, ಭಯ ಬೇಡ, ನಾನೂ ಒಂದು ಸಮಯದಲ್ಲಿ ನಿನ್ನಂತೆಯೇ ಇದ್ದೆ. ನೀನು ಯಾವ ಯಾವ ಪಂಥಗಳನ್ನು ಅನುಸರಿಸಿದೆ? ಏನೇನು ಸಾಧನೆ ಮಾಡಿದೆ? ಹೇಳು, ನೋಡೋಣ” ಎಂದರು.

ಯುವಕನು ತಾನು ಥಿಯಾಸೊಫಿ ಸಂಘದವರಿಂದ ಮೂರ್ತಿ ಪೂಜೆಯ ಮೇಲ್ಮೆಯನ್ನು ಅರಿತು ಧ್ಯಾನಜಪದಲ್ಲಿ ಎಷ್ಟು ತಪಸ್ಸು ಮಾಡಿದರೂ ಏನೂ ಪ್ರಯೋಜನವಾಗಲಿಲ್ಲವೆಂದು ಹೇಳಿದನು.

ಸ್ವಾಮಿಗಳು “ವತ್ಸ, ನೀನು ನಾನು ಹೇಳುವುದನ್ನು ಕೇಳುವುದಾದರೆ, ಮೊದಲು ಕೊಠಡಿಯ ಬಾಗಿಲುಗಳನ್ನು ತೆರೆದು ಕಣ್ಣುಬಿಟ್ಟು ಹೊರಗೆ ನೋಡು. ಕಣ್ಣು ಮುಚ್ಚಿಕೊಳ್ಳುವುದರಿಂದ ಏನೂ ಉಪಯೋಗವಿಲ್ಲ. ನಿನ್ನ ನೆರೆಹೊರೆಯಲ್ಲಿ ಬೇಕಾದಷ್ಟು ದರಿದ್ರರೂ ಅನಾಥರೂ ದುಃಖಿಗಳೂ ಇದ್ದಾರೆ. ಅವರಿಗೆ ನೆರವಾಗು. ಹೊಟ್ಟೆಗಿಲ್ಲದವರಿಗೆ ಅನ್ನದಾನ ಮಾಡು; ಬಟ್ಟೆಗಿಲ್ಲದವರಿಗೆ ವಸ್ತ್ರದಾನ ಮಾಡು. ರೋಗಿಗಳಿಗೆ ಶುಶ್ರೂಷೆ ಮಾಡು. ಮೂರ್ಖರಿಗೆ ಬುದ್ಧಿ ಕಲಿಸು. ನೀನು ಓದು ಕಲಿತವನು. ಅಜ್ಞಾನಿಗಳಿಗೆ ಜ್ಞಾನದಾನ ಮಾಡು. ಆಗ ನಿನಗೆ ಶಾಂತಿ ಲಭಿಸುವುದು. ಪತಿತ ನಾರಾಯಣರ ಸೇವೆಯೇ ಪಾವನ ನಾರಾಯಣನ ಸೇವೆ!” ಎಂದರು.

ಯುವಕನು “ಆದರೆ, ಸ್ವಾಮಿಜಿ ರೋಗಿಗಳನ್ನು ಶುಶ್ರೂಷೆ ಮಾಡಲು ಹೋಗಿ, ಹೊತ್ತಿಗೆ ಸರಿಯಾಗಿ ಊಟ ನಿದ್ದೆಗಳಿಲ್ಲದೆ ನಾನೆ ಕಾಯಿಲೆ ಬಿದ್ದು ಕಷ್ಟಕ್ಕೊಳಗಾದರೆ” – ಎನ್ನುವಷ್ಟರಲ್ಲಿಯೆ ಸ್ವಾಮಿಗಳು ನೊಂದ ಕೇಸರಿಯಂತೆ ಮೇಲೆದ್ದು ಮೂದಲಿಕೆಯ ದನಿಯಿಂದ “ಸರಿ ಸರಿ! ನಿನ್ನ ಮಾತು ನಡತೆಗಳಿಂದಲೆ ಇಲ್ಲಿ ನೆರೆದವರಿಗೆಲ್ಲಾ ಅದು ಗೊತ್ತಾಗುತ್ತದೆ. ನಿನ್ನಂಥ ಸುಖಿಗಳು ಬಡಬಗ್ಗರಿಗಾಗಿ ತಮ್ಮ ಅಮೂಲ್ಯವಾದ ಆರೋಗ್ಯವನ್ನು ಕೆಡಿಸಿಕೊಳ್ಳುವುದಿಲ್ಲ! ನಾನು ಬಲ್ಲೆ!” ಎಂದರು.

ಇನ್ನೊಂದು ದಿನ ದೊಡ್ಡ ಪಂಡಿತರೊಬ್ಬರು ಸ್ವಾಮಿಗಳನ್ನು ಕುರಿತು “ಸ್ವಾಮಿಜಿ, ನೀವು ಸೇವೆ ಮಾಡಬೇಕು, ಸಹಾಯ ಮಾಡಬೇಕು, ಜಗತ್ತಿಗೆ ಉಪಕಾರ ಮಾಡಬೇಕು ಎಂದು ಬೋಧಿಸುತ್ತೀರಿ. ಇವೆಲ್ಲವೂ ಮಾಯೆಗೆ ಒಳಪಟ್ಟುವಲ್ಲವೆ? ವೇದಾಂತವು ಮಾಯಾತೀತವಾದ ಮುಕ್ತಿಯೆ ಚರಮ ಧ್ಯೇಯವೆಂದು ಸಾರುತ್ತಿರುವಾಗ ಮನಸ್ಸನ್ನು ಪೃಥ್ವಿಗೆಳೆಯುವ ಸೇವೆ ಸಹಾಯಗಳಿಂದ ಪ್ರಯೋಜನವೇನು?” ಎಂದರು.

ಸ್ವಾಮಿಜಿಯ ಕಣ್ಣು ಮಿಂಚಿದುವು. “ಮುಕ್ತಿಯನ್ನು ಪಡೆಯಬೇಕು ಎಂಬ ಅಭಿಪ್ರಾಯವೂ ಕೂಡ ಮಾಯೆಗೆ ಒಳಪಟ್ಟುದಲ್ಲವೆ? ಆತ್ಮ ನಿತ್ಯ ಮುಕ್ತವಾದುದೆಂದು ವೇದಾಂತ ಸಾರುವುದಿಲ್ಲವೆ? ಹಾಗೆಂದ ಮೇಲೆ ಮುಕ್ತಿಗಾಗಿ ಪ್ರಯತ್ನ ಪಡುವುದಾದರೂ ಏಕೆ?” ಎಂಬ ದೃಢವಾಣಿ ಮೊಳಗಿತು.

ಬಳಿಗೆ ಬಂದ ತರುಣರಿಗೆ ಸ್ವಾಮಿಗಳು ಬರಿಯ ತತ್ತ್ವಬೋಧನೆ ಮಾಡಿ ಕಳುಹಿಸುತ್ತಿರಲಿಲ್ಲ. ಕೆಲವು ಸಾರಿ ಚೆನ್ನಾಗಿ ಬೈದೂ ಕಳುಹಿಸುತ್ತಿದ್ದರು. ತರುಣರ ದೈಹಿಕ ದೌರ್ಬಲ್ಯವನ್ನೂ ಮಾನಸಿಕ ಕ್ಲೈಬ್ಯವನ್ನೂ ಬಾಲ್ಯವಿವಾಹ ಪದ್ಧತಿಯನ್ನೂ ತಿಕ್ತ ವಾಕ್ಯ ಪ್ರಯೋಗಗಳಿಂದ ವಿಮರ್ಶಿಸಿ ಬಿಡುತ್ತಿದ್ದರು. ಕೆಚ್ಚಿಲ್ಲದ ಪೆಚ್ಚೆದೆಗಳಲ್ಲಿ ಕಿಚ್ಚಿಡುತ್ತಿದ್ದರು. ನೆಚ್ಚುಗೆಟ್ಟವರನ್ನು ಹುರಿದುಂಬಿಸಿ ಕಾರ್ಯರಂಗಕ್ಕೆ ಎಳೆ ತರುತ್ತಿದ್ದರು. ತರುಣರ ಮುಂದೆ ಉನ್ನತೋನ್ನತ ಧ್ಯೇಯಗಳನ್ನು ಹಿಡಿದು ಅವರನ್ನು ಮೇಲೆತ್ತುತ್ತಿದ್ದರು. ಆದ್ದರಿಂದ ವಂಗ ಯುವಕರು ಸ್ವಾಮೀಜಿಯ ಬಳಿಗೆ ಗುಂಪು ಗುಂಪಾಗಿ ಬಂದರು.

ಒಂದು ದಿನ ಗೋರಕ್ಷಣೆಯ ಸಭೆಯ ಪ್ರಚಾರಕನೊಬ್ಬನು ಸ್ವಾಮಿಗಳ ಬಳಿಗೆ ಬಂದನು. ಸ್ವಾಮಿಗಳು “ನಿಮ್ಮ ಸಂಘದ ಉದ್ದೇಶವೇನು?” ಎಂದು ಕೇಳಿದರು.

ಪ್ರಚಾರಕನು “ಮುದಿಯಾಗಿ ರೋಗ ಹಿಡಿದ ಗೋಮಾತೆಗಳನ್ನು ಕಟುಕರ ಕೈಯಿಂದ ತಪ್ಪಿಸಿ ಪಿಂಜರಾಪೋಲುಗಳಿಗೆ ಕೊಂಡೊಯ್ದು ಸಲಹುವೆನು” ಎಂದನು.‌

“ಒಳ್ಳೆಯದು ನಿಮಗೆ ಧನಸಹಾಯ ಹೇಗೆ?”

“ಯಾರಾದರೂ ತಮ್ಮಂತಹ ಉದಾರಹೃದಯರು ಸಹಾಯ ಮಾಡುವರು.”

“ನಿಮ್ಮಲ್ಲೀಗ ಎಷ್ಟು ನಿಧಿ ಇದೆ?”

“ಮಾರ್ವಾಡಿಗಳಿಂದ ನಮಗೆ ಬಹಳ ಧನಸಹಾಯ ದೊರಕಿದೆ.”

“ಮಧ್ಯಪ್ರಾಂತ್ಯಗಳಲ್ಲಿ ಭಯಂಕರ ಕ್ಷಾಮಕಾಲವಾಗಿದೆಯಷ್ಟೆ? ಸರ್ಕಾರದವರ ಹೇಳಿಕೆಯಂತೆ, ೮,೦೦,೦೦೦ ಜನರು ಬರದಿಂದ ಸತ್ತಿರುವರು. ಅಲ್ಲಿ ಜನರಿಗಾಗಿ ನೀವೇನು ಮಾಡಿದ್ದೀರಿ?”

“ನಾವು ಕ್ಷಾಮಗೀಮದ ತಂಟೆಗೆ ಹೋಗುವುದೇ ಇಲ್ಲ. ಗೋರಕ್ಷಣೆಯೊಂದೇ ನಮ್ಮ ಕಾರ್ಯ”

“ಲಕ್ಷಲಕ್ಷ ಜನರು, ಸ್ವದೇಶಸ್ಥರು, ಸ್ವಮತಸ್ಥರು, ಹೊಟ್ಟೆಗಿಲ್ಲದೆ ನರಳಿ ಸಾಯುತ್ತಿರುವಾಗ ಅವರಿಗೆ ಒಂದು ತುತ್ತು ಕೂಳನ್ನಾದರೂ ನೀಡಬೇಕೆಂದು ನಿಮಗೆ ಮನಸ್ಸಾಗಲಿಲ್ಲವೆ?”

“ಅದಕ್ಕೆ ನಾವೇನು ಮಾಡುವುದು? ಅವರ ಕರ್ಮ, ಅವರ ಪಾಪ, ಬರಗಾಲ ಬಂತು.”

ಈ ಮಾತುಗಳನ್ನು ಕೇಳಿ ಸ್ವಾಮಿಗಳು ಬೆಂಕಿಯಾದರು. ಕಣ್ಣುಗಳನ್ನು ಕೆಂಪಗೆ ಮಾಡಿಕೊಂಡು ಇಂತೆಂದರು ಸಿಡಿಲಿನಂತೆ: “ಅಯ್ಯಾ, ಹಾಗಾದರೆ ನಿಮ್ಮ ಸಂಘದ ಗೋಜಿಗೆ ನಾನು ಬರುವುದೇ ಇಲ್ಲ. ಯಾರು ನರಳುವ ಸೋದರರಿಗಾಗಿ ಮರುಗಲಾರರೋ, ಯಾರು ತಮ್ಮ ಕಣ್ಣೆದುರಿನಲ್ಲಿಯೇ ಕೂಳಿಲ್ಲದೆ ಸಾಯುವವರನ್ನು ಕಂಡರೂ ಒಂದು ತುತ್ತನ್ನಾದರೂ ದಾನ ಮಾಡದೆ ವೃದ್ಧ ಮೃಗಪಕ್ಷಿಗಳಿಗಾಗಿ ಲಕ್ಷಲಕ್ಷ ಧನವ್ಯಯ ಮಾಡುವರೋ ಅಂಥವರನ್ನು ನಾನು ಮನ್ನಿಸಲಾರೆ. ಅವರ ಕರ್ಮವಂತೆ! ಅವರ ಪಾಪವಂತೆ! ಏನಯ್ಯ, ಹಾಗೆ ಹೇಳಲು ನಿಮಗೆ ನಾಚಿಕೆಯಾಗುವುದಿಲ್ಲವೆ? ಅದು ಅವರ ಕರ್ಮಫಲವಾದರೆ ನಿಮ್ಮದೂ ಹಾಗೆಯೆ! ನೀವೇಕೆ ಗೋವುಗಳನ್ನು ಸಲಹಬೇಕು? ಕಟುಕರ ಕೈಯಿಂದ ಕಡಿಸಿಕೊಳ್ಳುವುದೂ ಅವುಗಳ ಕರ್ಮಫಲ ಎಂದು ಸುಮ್ಮನಿದ್ದು ಬಿಡಬಾರದೆ?”

ಪ್ರಚಾರಕರು ಕಂಗೆಟ್ಟು “ಹೌದು ನೀವು ಹೇಳುವುದೇನೂ ಸರಿಯೆ. ಆದರೆ ನಮ್ಮ ಶಾಸ್ತ್ರಗಳು ಗೋವನ್ನು ಮಾತೆಯೆಂದು ಹೇಳಿವೆಯಲ್ಲಾ!” ಎಂದನು.

ಸ್ವಾಮಿಗಳು ಗಹಗಹಿಸಿ ನಕ್ಕು “ಹೌದು, ಹೌದು, ಅದೇನೊ ನಿಶ್ಚಯ! ಪಶುವೆ ನಿಮ್ಮ ತಾಯಿ! ಹಾಗಲ್ಲದೆ ಹೋದರೆ ನಿಮ್ಮಂಥ ಪ್ರತಿಭಾಶಾಲಿಗಳಾದ ಮಕ್ಕಳನ್ನು ಮತ್ತಾರು ಹೆತ್ತಾರು?” ಎಂದರು.

ಪ್ರಚಾರಕರು ಹೊರಟುಹೋದ ಮೇಲೆ ಸ್ವಾಮಿಗಳು ಅಲ್ಲಿದ್ದವರೊಡನೆ “ನೋಡಿ ಕರ್ಮತತ್ತ್ವದ ಎಂತಹ ಸದ್ವಿನಿಯೋಗವಾಗುತ್ತಿದೆ ನಮ್ಮ ದೇಶದಲ್ಲಿ? ಆದ್ದರಿಂದಲೆ ನಮ್ಮ ದೇಶ ಇಷ್ಟು ಮುಂದಕ್ಕೆ ಬಂದಿದೆ! ಅಯ್ಯೋ, ಅವರು ಮನುಷ್ಯರೆ, ಮನುಷ್ಯರಿಗಾಗಿ ಮರುಗದವರು?” ಎಂದರು. ದುಃಖ ಜುಗುಪ್ಸೆಗಳಿಂದ ಅವರ ದೇಹ ನಡುಗಿತು.

ಒಂದು ದಿನ ಕೆಲವು ಪಂಡಿತರು ಸ್ವಾಮಿಗಳೊಡನೆ ವಾಗ್ವಾದಕ್ಕಾಗಿ ಬಂದರು. ವಾದದ ನಡುವೆ ಸ್ವಾಮಿಗಳು ಬಾಯಿತಪ್ಪಿ ‘ಸ್ವಸ್ತಿ’ ಎನ್ನುವುದಕ್ಕೆ ಬದಲಾಗಿ ‘ಅಸ್ತಿ’ ಎಂದರು. ಒಡನೆಯೆ ಪಂಡಿತರುಗಳು ಕೈಚಪ್ಪಾಳೆ ಹೊಡೆದು ನಕ್ಕುಬಿಟ್ಟರು. ವ್ಯಾಕರಣದೋಷವೆಂದರೇನು ಸಾಮಾನ್ಯವೆ? ರೌರವನರಕ ಪ್ರಾಪ್ತಿ ಅದರಿಂದ! ಕೂಡಲೆ ಸ್ವಾಮಿಗಳು “ನಾನು ಪಂಡಿತರ ದಾಸ. ಮನ್ನಿಸಬೇಕು” ಎಂದರು. ಅವರ ದೈನ್ಯಭಾವವನ್ನು ನೋಡಿ ಪಂಡಿತರು ಅಪ್ರತಿಭರಾದರು.

ಅವರು ಹೊರಟುಹೋದ ಮೇಲೆ ಸ್ವಾಮಿಗಳು “ಪಶ್ಚಿಮದೇಶದ ನಾಗರಿಕ ವಿದ್ವಾಂಸರು ಮಾತಿನ ಅರ್ಥದ ಕಡೆಗೆ ದೃಷ್ಟಿಯಿಡುತ್ತಾರೆಯೆ ಹೊರತು, ವ್ಯಾಕರಣ ದೋಷಗಳ ಕಡೆ ಕಣ್ಣಿಡುವುದಿಲ್ಲ. ಆದರೆ ನಮ್ಮ ಪಂಡಿತರಿಗೆ ರಂಧ್ರಾನ್ವೇಷಣೆಯೊಂದೆ ಪರಮಕಾರ್ಯ. ತಿರುಳನ್ನು ಬಿಟ್ಟು ಸಿಪ್ಪೆಯನ್ನೆ ತಿನ್ನುತ್ತಾರೆ. ತನ್ನ ಬಾಲವನ್ನೆ ಕಚ್ಚಿಕೊಳ್ಳಲು ಹೋಗುವ ಶುನಕದಂತೆ ಅವರಿಗೆ ಯಾವ ಸಿದ್ಧಾಂತವೂ ಕರಗತವಾಗುವುದಿಲ್ಲ!” ಎಂದರು.

* * *