ಸ್ವಾಮಿ ವಿವೇಕಾನಂದರ ಜೀವಮಾನ ಒಂದು ದಿಗ್ವಿಜಯಗಳ ಪರಂಪರೆ, ಅದರಲ್ಲಿ ಸೋದರ ಸಂನ್ಯಾಸಿಗಳ ವ್ಯಷ್ಟಿದೃಷ್ಟಿಗಳನ್ನು ವಿಶಾಲಗೊಳಿಸಿ ಅವರಿಗೆ ಸಮಷ್ಟಿದೃಷ್ಟಿಯನ್ನು ದಯಪಾಲಿಸಿದ್ದೂ ಒಂದು.

ಪರಮಹಂಸರ ಸಂನ್ಯಾಸೀ ಶಿಷ್ಯರು ನರೇಂದ್ರನನ್ನೇನೋ ನಾಯಕನನ್ನಾಗಿ ಸ್ವೀಕರಿಸಿದರು. ಆದರೆ ನಾಯಕನ ಪ್ರಚಾರಕಾರ್ಯ ಮತ್ತು ಕರ್ಮಯೋಗಾದರ್ಶ ಮೊದಲಾದ ದೇಶೋದ್ಧಾರಕ ತತ್ತ್ವಗಳನ್ನು ಅವರು ಗ್ರಹಿಸಲಾರದೆ ಹೋಗಿದ್ದರು. ಧ್ಯಾನ ತಪಸ್ಸು ಮೊದಲಾದ ಸಾಧನೆಗಳಿಂದ ಮುಕ್ತಿಲಾಭ ಮಾಡಿಕೊಳ್ಳುವುದೇ ಜೀವನದ ಆದರ್ಶವೆಂದು ತಿಳಿದಿದ್ದ ಅವರು ಜಗತ್ತಿನ ಸುಖದುಃಖ, ಉನ್ನತಿ ಅವನತಿ ಇವುಗಳ ಕಡೆಗೆ ಕಣ್ಣೆತ್ತಿ ಕೂಡ ನೋಡದೆ ದೇಶಕಾಲಾತೀತವಾದ ಸಚ್ಚಿದಾನಂದ ಸಿದ್ಧಿಗಾಗಿ ಮಾತ್ರ ಹೆಣಗುತ್ತಿದ್ದರು. ಅಂತಹವರನ್ನು ಸ್ವಾಮಿಜಿ ಧರ್ಮಪ್ರಚಾರ, ವಿದ್ಯಾಪ್ರಚಾರ ಇತ್ಯಾದಿ ಕಾರ್ಯಗಳಲ್ಲಿ ನಿಯುಕ್ತರಾಗುವಂತೆ ಕೇಳಿಕೊಂಡರು. ನಾಯಕನ ಉಪದೇಶದ ಮರ್ಮವನ್ನು ತಿಳಿಯದೆ ಕೆಲವರು ಅತ್ತಿತ್ತ ಅಲೆಯತೊಡಗಿದರು. ಸಂನ್ಯಾಸಿಗಳಲ್ಲಿಯೆ ಭಿನ್ನಾಭಿಪ್ರಾಯದ ತುಮುಲವೆದ್ದಿತು. ಸ್ವಾಮಿಗಳು ಒಂದಿನಿತೂ ವಿಚಲಿತಚಿತ್ತರಾಗದೆ ತಮ್ಮ ಸದುದ್ದೇಶದ ತತ್ತ್ವವನ್ನು ಸೋದರ ಸಂನ್ಯಾಸಿಗಳಿಗೆ ಸಿದ್ಧಾಂತಪಡಿಸಲಾರಂಭಿಸಿದರು. ಯುಗಮಹರ್ಷಿಯ ಜಾಣ್ಮೆಯ ಹೊಂಬೆಳಕಿನಲ್ಲಿ ಶ್ರೀರಾಮಕೃಷ್ಣರ ಜೀವನ ಮತ್ತು ಉಪದೇಶಗಳು ಬೇರೊಂದು ರೀತಿಯಿಂದ ಹೊಳೆಯತೊಡಗಿದುವು. ತಾವೆಲ್ಲರೂ ಯುಗಧರ್ಮ ಪ್ರಚಾರಕಾರ್ಯದಲ್ಲಿ ಬದ್ಧಕಂಕಣರಾಗದಿದ್ದರೆ ಶ್ರೀ ಪರಮಹಂಸರ ಅವತಾರದ ಮಹೋದ್ದೇಶ ವಿಫಲವಾಗುವುದೆಂದು ತಿಳಿಸಿದರು.‌

“ಮಂದಿರ ಮತ್ತು ಪ್ರತಿಮೆಗಳಲ್ಲಿರುವ ಭಗವಂತನನ್ನು ಹೊರಗೆಳೆದು ‘ಯಾತ್ರ ಜೀವ ತತ್ರ ಶಿವ’ ಮಂತ್ರದಿಂದ ‘ವಿರಾಟ’ದ ಪೂಜೆಗೆ ಅನುವಾಗಬೇಕು. ಪ್ರಾಚೀನ ಕಾಲದ ಸಂನ್ಯಾಸಿಗಳಂತೆ ಗಿರಿಗುಹೆ ಕುಟೀರಗಳಲ್ಲಿ ವಾಸ ಮಾಡುತ್ತ ಕೇವಲ ಆತ್ಮ ಸಾಕ್ಷಾತ್ಕಾರಲಂಪಟರಾಗಿ ಮಾತ್ರ ಇರಬಾರದು. ಸಂಸಾರದ ಕರ್ಮಕ್ಷೇತ್ರದಲ್ಲಿ ಎದೆಗೊಟ್ಟು ನಿಂತು ಮಾನವರನ್ನು ಉತ್ತಮ ಕಾರ್ಯಗಳಿಗೆ ಪ್ರೇರಿಸಬೇಕು. ಕೋಟಿ ಕೋಟಿ ವ್ಯಕ್ತಿಗಳ ಹೃದಯದ ಅಜ್ಞಾನಾಂಧಕಾರವನ್ನು ದೂರ ಮಾಡಬೇಕು.”

ಸ್ವಾಮಿಜಿ ಸೋದರರಿಗೆ ಇಂತೆಲ್ಲ ಬೋಧಿಸಿ, ತಮ್ಮ ಜೀವನೋದ್ದೇಶವನ್ನು ತಿಳಿಯಪಡಿಸಿ, ಭರತಭೂಮಿಯ ಕಲ್ಯಾಣಕ್ಕಾಗಿ ಒಂದು ಅಭಿನವ ಸಂನ್ಯಾಸೀ ಸಂಪ್ರದಾಯವನ್ನು ಪ್ರತಿಷ್ಠೆ ಮಾಡಬೇಕೆಂದೂ, ಆ ಸಂಪ್ರದಾಯದ ಸಾಧುಗಳು ದೇಶದ ಮೇಲ್ಮೆಗಾಗಿ ತಮ್ಮ ತಮ್ಮ ಮುಕ್ತಿಲಾಭವನ್ನು ಪರಿತ್ಯಜಿಸಬೇಕೆಂದೂ, ಸಮಯ ಬಂದರೆ ಅವರು ಸಾನಂದದಿಂದ ನರಕದವರೆಗೂ ಹೋಗಲು ಸಿದ್ಧರಾಗಿರಬೇಕೆಂದೂ ತಿಳಿಸಿದರು. “ಬಹುಜನ ಸುಖಕ್ಕಾಗಿ, ಬಹುಜನ ಹಿತಕ್ಕಾಗಿ ಶ್ರೀರಾಮಕೃಷ್ಣರು ಅವತಾರವೆತ್ತಿದರು. ಅವರ ಶಿಷ್ಯರಾದ ನಾವು ಅಸ್ವಾರ್ಥತೆಯಿಂದ ಆತ್ಮೋದ್ಧಾರ ಮಾಡಿಕೊಳ್ಳದೆ ಹೋದರೆ, ಅವರು ಬೋಧಿಸಿದ ಮಹಾ ಯುಗಧರ್ಮವನ್ನು ಹರಡಲು ಅಸಮರ್ಥರಾದರೆ, ನಮಗೂ ಸಾಧಾರಣ ಮಾನವರಿಗೂ ಇರುವ ವ್ಯತ್ಯಾಸವೇನು?”

ಸ್ವಾಮಿಗಳ ಪ್ರಯತ್ನ ಫಲಕಾರಿಯಾಯಿತು. ಹನ್ನೆರಡು ವರ್ಷಗಳಿಂದಲೂ ಇದ್ದ ಜಾಗದಿಂದ ಅಲುಗಾಡದೆ ಪ್ರತಿದಿನವೂ ಪೂಜೆ, ಆರತಿ, ಅರ್ಚನೆ, ಧ್ಯಾನ, ಜಪತಪಗಳಲ್ಲಿ ಮಗ್ನರಾಗಿದ್ದ ಸ್ವಾಮಿ ರಾಮಕೃಷ್ಣಾನಂದರು ವೇದಾಂತಪ್ರಚಾರಕ್ಕಾಗಿ ದಕ್ಷಿಣದೇಶಕ್ಕೆ ಬಂದರು. ಸ್ವಾಮಿ ಅಖಂಡಾನಂದರು ಕ್ಷಾಮನಿವಾರಣೆಯ ಕಾರ್ಯಕ್ಕಾಗಿ ಮುರ್ಷಿದಾಬಾದಿಗೆ ಹೋದರು. ಅಭೇದಾನಂದ, ಶಾರದಾನಂದರು ಮೊದಲೆ ಪಶ್ಚಿಮದೇಶಗಳಿಗೆ ಹೋಗಿದ್ದರು. ಉಳಿದವರು ನಾಯಕನ ಇಷ್ಟದಂತೆ ನಡೆಯಲು ಸಿದ್ಧರಾದರು. ಇಂತು ದೀನಬಂಧು ಜಗದ್ವಿಖ್ಯಾತ ಶ್ರೀರಾಮಕೃಷ್ಣ ಸಂಘಕ್ಕೆ ಮಾನವ ಮಿತ್ರ ವಿವೇಕಾನಂದರು ಪವಿತ್ರತಮ ಪೀಠಿಕೆಯನ್ನು ಬರೆದರು.

ಬಹುದಿನಗಳ ಕಠೋರ ಪರಿಶ್ರಮದಿಂದ ಸ್ವಾಮಿಗಳ ವಜ್ರದೃಢ ದೇಹವೂ ಅಸ್ವಸ್ಥವಾಯಿತು. ಆದರೂ ಅದನ್ನು ಗಣನೆಗೆ ತಾರದೆ ಮಠದ ಬ್ರಹ್ಮಚಾರಿಗಳಿಗೂ ನವದೀಕ್ಷಿತ ಸಂನ್ಯಾಸಿಗಳಿಗೂ ಗೀತೆ ಉಪನಿಷತ್ತು ಮೊದಲಾದುವುಗಳನ್ನು ಪಾಠ ಹೇಳುತ್ತಿದ್ದರು. ಕೆಲವು ದಿನಗಳ ತನಕ ಯಾವ ಕಾರ್ಯವನ್ನೂ ಮಾಡದೆ ಮನಸ್ಸಿಗೂ ದೇಹಕ್ಕೂ ವಿರಾಮ ಕೊಡಬೇಕೆಂದು ವೈದ್ಯರು ಹೇಳಿದ್ದರು. ಕಲ್ಕತ್ತಾದಲ್ಲಿ ಇದ್ದರೆ ಅವರಿಗೆ ವಿರಾಮ ದೊರಕದೆಂದು ತಿಳಿದ ಶಿಷ್ಯರು ಅವರನ್ನು ಡಾರ್ಜಿಲಿಂಗಿಗೆ ಸಾಗಿಸಿದರು.

ಆದರೆ ಎರಡು ತಿಂಗಳಾದರೂ ಹೆಚ್ಚೇನೂ ಉಪಯೋಗವಾಗದೆ ಇದ್ದುದನ್ನು ಕಂಡು ಸ್ವಾಮಿಗಳು ಪುನಃ ಕಲ್ಕತ್ತಾಕ್ಕೆ ಬಂದರು.

ಬಂದ ಕೆಲವು ದಿನಗಳ ಮೇಲೆ ಸ್ವಾಮಿಗಳು ಕೆಲವು ಜನ ತರುಣರಿಗೆ ಬ್ರಹ್ಮಚರ್ಯ ಸಂನ್ಯಾಸದೀಕ್ಷೆಗಳನ್ನು ಕೊಡಬೇಕೆಂದು ನಿರ್ಣಯಿಸಿದರು. ಕೆಲವು ಜನ ಸೋದರ ಸಂನ್ಯಾಸಿಗಳು ನಾನಾ ಕಾರಣಗಳಿಂದ ಅದಕ್ಕೆ ಸಮ್ಮತಿಕೊಡಲಿಲ್ಲ. ಸ್ವಾಮಿಗಳು ಅವರನ್ನೆಲ್ಲ ಬಳಿಗೆ ಕರೆದು ಇಂತೆಂದರು: “ಪಾಪಿಗಳನ್ನು ಉದ್ಧರಿಸಲು ನಾವೇ ಅಳುಕಿದರೆ ಮತ್ತಾರು ಅವರನ್ನು ಮೇಲೆತ್ತಬೇಕು? ಅಲ್ಲದೆ ಯಾವನು ತನ್ನ ಹೀನ ಜೀವನವನ್ನು ಬಿಟ್ಟು ಉನ್ನತ ಜೀವನವನ್ನು ಹಿಡಿಯಲು ಯತ್ನಿಸುತ್ತಾನೊ ಅಂಥವನಿಗೆ ನಾವು ನೆರವಾಗಬೇಕು. ಒಬ್ಬನು ಪಾಪಿಯಾಗಿದ್ದರೂ ನೀವು ಆತನನ್ನು ತಿದ್ದಲಾರದೆಹೋದರೆ, ನಿಮಗೇಕೆ ಕಾಷಾಯವಸ್ತ್ರ? ನಿಮಗೇಕೆ ಆಚಾರ್ಯರ ವೇಷ?” ಅಂತೂ ಪತಿತಪಾವನ ಸ್ವಾಮಿಜಿಯ ಇಚ್ಛೆಯೆ ನೆರವೇರಿತು. ಶಾಸ್ತ್ರರೀತಿಯಿಂದ ನವಶಿಷ್ಯರಿಗೆ ದೀಕ್ಷೆಯನ್ನು ಕೊಟ್ಟು “ನೀವು ಮಾನವಜೀವನದ ಸರ್ವಶ್ರೇಷ್ಠ ವ್ರತವನ್ನು ಕೈಕೊಂಡಿರುವಿರಿ. ಧನ್ಯ ನಿಮ್ಮ ಜನ್ಮ! ಧನ್ಯ ನಿಮ್ಮ ವಂಶ! ಧನ್ಯ ನಿಮ್ಮನ್ನು ಹೆತ್ತವರು! ಕುಲಪವಿತ್ರವಾಯಿತು! ಜನನಿ ಕೃತಾರ್ಥೆಯಾದಳು!” ಎಂದು ಆಶೀರ್ವದಿಸಿದರು.

ತರುವಾಯ ಸ್ವಾಮಿಗಳು ನವದೀಕ್ಷಿತ ಸಂನ್ಯಾಸಿಗಳಿಗೆ ಸಂನ್ಯಾಸಧರ್ಮದ ಮಾಹಾತ್ಮ್ಯೆಯನ್ನು ವರ್ಣಿಸಿದರು. ಹೇಳುತ್ತ ಹೇಳುತ್ತ ಅವರ ವದನಮಂಡಲ ಅಗ್ನಿತುಲ್ಯತೇಜಃಪುಂಜವಾಯಿತು.‌

“ಬಹುಜನರ ಹಿತಕ್ಕೆ, ಬಹುಜನರ ಸುಖಕ್ಕೆ ಸಂನ್ಯಾಸಿಯ ಜನ್ಮ, ಹೆರವರಿಗಾಗಿ ಬಾಳನ್ನು ಬಾಳಬೇಕು. ನರಳುವ ಲಕ್ಷಾಂತರ ದುಃಖಿಗಳನ್ನು ಸಂತೈಸಬೇಕು. ಗೋಳಿಡುವ ಮಾತೆಯರ ಕಂಬನಿಗಳನ್ನು ತೊಡೆಯಬೇಕು. ಪತಿತರಾದವರನ್ನು ಮೇಲೆತ್ತಬೇಕು. ಅಜ್ಞಾನಿಗಳಿಗೆ ಜ್ಞಾನದಾನ ಮಾಡಬೇಕು. ಜೀವರ ವ್ಯಾವಹಾರಿಕ ಮತ್ತು ಪಾರಮಾರ್ಥಿಕ ಯೋಗಕ್ಷೇಮಗಳಿಗಾಗಿ ಜ್ಞಾನಜ್ಯೋತಿಯನ್ನು ಪಸರಿಸುವುದಕ್ಕಾಗಿಯೆ ಜನ್ಮವೆತ್ತುವನು ಸಂನ್ಯಾಸಿ! ನೀವು ಎಚ್ಚರಗೊಳ್ಳಿ! ಇತರರನ್ನೂ ಎಚ್ಚರಗೊಳಿಸಿ! ಏಳಿ! ಮೇಲೆಳಿ! ಗುರಿ ದೊರಕುವವರೆಗೂ ನಿಲ್ಲಬೇಡಿ! ಮುಂದೆ ನುಗ್ಗಿ! ಉತ್ತಿಷ್ಠತ, ಜಾಗ್ರತ, ಪ್ರಾಪ್ಯ ವರಾನ್ ನಿಬೋಧತ!”

ಯುಗಧರ್ಮಪ್ರಚಾರಕ್ಕಾಗಿ ಒಂದು ಸಂಘವನ್ನು ಸ್ಥಾಪಿಸಬೇಕೆಂದು ನಿಶ್ಚಯಿಸಿ, ಸ್ವಾಮಿಗಳು ೧೮೯೭ನೆಯ ಮೇ ತಿಂಗಳು ೧ನೆಯ ತಾರೀಖಿನ ದಿನ ಬಲರಾಮವಸು ಮಹಾಶಯನ ಮನೆಯಲ್ಲಿ ಗೃಹೀ ಮತ್ತು ಸಂನ್ಯಾಸೀ ಭಕ್ತರೆಲ್ಲರನ್ನೂ ಸೇರಿಸಿ ಇಂತೆಂದರು: “ನಾನಾ ದೇಶಗಳನ್ನು ಸಂಚರಿಸಿ ನೋಡಿದ್ದೇನೆ. ಸಂಘಬದ್ಧರಾಗದೆ ನಾವು ಯಾವ ಶಾಶ್ವತ ಕಾರ್ಯವನ್ನೂ ಮಾಡಲಾರೆವೆಂದು ನನಗೆ ತಿಳಿದುಬಂದಿದೆ. ಪ್ರಕೃತ, ನಮ್ಮ ದೇಶದಲ್ಲಿ ಬಹುಮತದ ತತ್ತ್ವವನ್ನು ಅಂಗೀಕರಿಸಿ ಅಂತಹ ಸಾಂಘಿಕ ಕಾರ್ಯಗಳನ್ನು ಮಾಡುವುದೂ ನನಗೆ ಸರಿಯೆಂದು ತೋರುವುದಿಲ್ಲ. ಯಾವೊತ್ತು ದೇಶದಲ್ಲಿ ವಿದ್ಯಾಭ್ಯಾಸ ಹರಡಿ, ಜನರು ಅಸ್ವಾರ್ಥರಾಗುವರೊ ಅಂದು ನಾವು ಸಂಘದಲ್ಲಿ ಬಹುಮತತ್ವದಂತೆ ಕೆಲಸ ಮಾಡಬಹುದು. ಆದ್ದರಿಂದ ಸದ್ಯಕ್ಕೆ ಸಂಘವು ಒಬ್ಬ ನಿರಂಕುಶ ನಾಯಕನ ಅಧಿಕಾರಕ್ಕೆ ಒಳಪಟ್ಟಿರಬೇಕು. ಸರ್ವರೂ ಆತನು ಹೇಳಿದಂತೆ ಕೇಳಬೇಕು.‌

“ನಾವು ಯಾರ ಹೆಸರಿನಲ್ಲಿ ಸಂನ್ಯಾಸ ಸ್ವೀಕಾರ ಮಾಡಿರುವೆವೊ ಆತನ ಹೆಸರಿನಲ್ಲಿಯೆ ಸಂಘ ಸ್ಥಾಪನೆಯಾಗಬೇಕು. ಯಾರ ಜೀವನಾದರ್ಶವು ಸಂಸಾರದ ಕಾರ್ಯಕ್ಷೇತ್ರದಲ್ಲಿ ಪ್ರವೇಶಿಸಿದೆಯೊ, ದೇಹಾವಸಾನನಂತರ ಇಪ್ಪತ್ತೇ ವರ್ಷಗಳಲ್ಲಿ ಯಾರ ಪಾವನ ನಾಮವು ಪೂರ್ವ ಪಶ್ಚಿಮಗಳಲ್ಲಿ ಹಬ್ಬಿದೆಯೊ, ಆ ಮಹಾಪುರುಷನ ಹೆಸರೇ ಈ ಸಂಘಕ್ಕೆ ಇರಲಿ. ನಾವೆಲ್ಲ ಪ್ರಭುವಿನ ದಾಸರು. ಈ ಕಾರ್ಯದಲ್ಲಿ ನೀವೆಲ್ಲ ನಮಗೆ ನೆರವಾಗುವಿರೆಂದು ನಂಬಿದ್ದೇನೆ.”

ಶ್ರೀಯುತ ಗಿರೀಶಚಂದ್ರ ಘೋಷ ಮೊದಲಾದ ಗೃಹೀಭಕ್ತರೆಲ್ಲರೂ ಸ್ವಾಮಿಗಳ ಹೇಳಿಕೆಯನ್ನು ಆನಂದದಿಂದ ಅನುಮೋದಿಸಿದರು. ಸಂಘಕ್ಕೆ ಶ್ರೀರಾಮಕೃಷ್ಣ ಪ್ರಚಾರ ಅಥವಾ ಶ್ರೀರಾಮಕೃಷ್ಣ ಮಿಷನ್ ಎಂದು ಹೆಸರಿಟ್ಟರು. ತರುವಾಯ ಸಂಘದ ಉದ್ದೇಶ ಇತ್ಯಾದಿಗಳನ್ನು ನಿರ್ಣಯಿಸಿದರು.

ಮಾನವರ ಹಿತಕ್ಕಾಗಿ ಶ್ರೀರಾಮಕೃಷ್ಣರು ಬೋಧಿಸಿರುವ ತತ್ತ್ವಗಳನ್ನು ಜೀವನದಲ್ಲಿ ಪ್ರತಿಪಾದಿಸಿ, ಬೋಧಿಸಿ, ಸಾಧಿಸಿ, ಜನರ ದೈಹಿಕ ಮಾನಸಿಕ ಮತ್ತು ಪಾರಮಾರ್ಥಿಕ ಉನ್ನತಿಗೆ ಸಹಾಯ ಮಾಡುವುದು ಸಂಘದ ಉದ್ದೇಶ.

ಜಗತ್ತಿನ ಸರ್ವಧರ್ಮಗಳೂ ಒಂದೇ ಅಖಂಡ ಸನಾತನ ಧರ್ಮದ ರೂಪಾಂತರ ಮಾತ್ರಗಳೆಂದು ತಿಳಿದು ಎಲ್ಲ ಧರ್ಮಾವಲಂಬಿಗಳ ಮಧ್ಯೆ ಆತ್ಮೀಯತೆಯನ್ನು ಸ್ಥಾಪಿಸಲು ಶ್ರೀರಾಮಕೃಷ್ಣರಿಂದ ಪ್ರಣೀತವಾದ ಸರ್ವಧರ್ಮ ಸಮನ್ವಯ ತತ್ತ್ವವನ್ನು ಪ್ರಚುರಪಡಿಸುವುದು ಸಂಘದ ವ್ರತ.

ಮಾನವರ ಇಹಪರ ಕಲ್ಯಾಣಗಳಿಗೆ ವಿದ್ಯಾದಾನ ಮಾಡುವುದು, ಕಲೆ ಮತ್ತು ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವುದು, ಜನಸಾಮಾನ್ಯರಲ್ಲಿ ಶ್ರೀರಾಮಕೃಷ್ಣರ ಜೀವನದೃಷ್ಟಿಯಿಂದ ವೇದಾಂತ ತತ್ತ್ವಪ್ರಚಾರ ಮಾಡುವುದು – ಈ ಮೂರು ಸಂಘದ ಕಾರ್ಯಮಾರ್ಗಗಳು.

ಭರತಖಂಡದ ನಗರ ನಗರಗಳಲ್ಲಿ ಸಂಚರಿಸಿ, ಜನರಿಗೆ ವಿದ್ಯಾದಾನ ಮಾಡಲು ಅಲ್ಲಲ್ಲಿ ಮಠ ಮತ್ತು ಆಶ್ರಮಗಳನ್ನು ಸ್ಥಾಪಿಸುವುದು ಸಂಘದ ಭಾರತವರ್ಷೀಯ ಕಾರ್ಯ.

ಭಾರತ ಬಹಿರ್ಭೂತ ದೇಶಗಳಿಗೆ ಸುಶಿಕ್ಷಿತ ಸಂನ್ಯಾಸಿಗಳನ್ನು ಧರ್ಮ ಪ್ರಚಾರಕ್ಕಾಗಿ ಕಳುಹಿಸಿ, ಅಲ್ಲಿಯೂ ಆಶ್ರಮಗಳನ್ನು ಸ್ಥಾಪಿಸಿ, ಜನಾಂಗಗಳಲ್ಲಿ ಪರಸ್ಪರ ಸಹಾನುಭೂತಿ ಮತ್ತು ಮೈತ್ರಿಗಳು ಬೆಳೆಯುವಂತೆ ಮಾಡುವುದು ಸಂಘದ ವಿದೇಶೀಯ ಕಾರ್ಯ.

ಸ್ವಾಮಿ ವಿವೇಕಾನಂದರೆ ಸಂಘಕ್ಕೆ ಸಾಧಾರಣ ಸಭಾಪತಿಗಳಾದರು. ಸ್ವಾಮಿ ಬ್ರಹ್ಮಾನಂದರು ಅಧ್ಯಕ್ಷರಾದರು. ಸ್ವಾಮಿ ಯೋಗಾನಂದರು ಉಪಾಧ್ಯಕ್ಷರಾದರು. ಬಾಬು ನರೇಂದ್ರನಾಥಮಿತ್ರ ಮಹಾಶಯನು ಕಾರ್ಯದರ್ಶಿಯಾದನು. ಪ್ರತಿ ಭಾನುವಾರವೂ ಎಲ್ಲರೂ ಬಲರಾಮವಸು ಮಹನೀಯನ ಮನೆಯಲ್ಲಿ ಸೇರಿ ಗೀತೆ ಉಪನಿಷತ್ತು ಮೊದಲಾದ ಶಾಸ್ತ್ರಗಳನ್ನು ಅಧ್ಯಯನ ಮಾಡುತ್ತಿದ್ದರು. ವ್ಯಾಖ್ಯಾನಗಳೂ ನಡೆಯುತ್ತಿದ್ದುವು. ನಡುನಡುವೆ ಕೀರ್ತನೆಗಳಾಗುತ್ತಿದ್ದುವು. ಸ್ವಯಂ ಸ್ವಾಮಿಜಿಯವರು ಹಾಡಿ ನೆರೆದವರನ್ನು ತಮ್ಮ ಕಿನ್ನರ ಕಂಠದಿಂದ ಸಂತೋಷಗೊಳಿಸುತ್ತಿದ್ದರು.

ಇನ್ನಾದರೂ ಸ್ವಾಮಿಗಳಿಗೆ ಆರೋಗ್ಯ ಸಂಪೂರ್ಣವಾಗಿ ಬಂದಿರಲಿಲ್ಲ. ಚಿಕಿತ್ಸಕರು ಪದೇ ಪದೇ ಹೇಳುತ್ತಿದ್ದರು, ಸ್ಥಳ ಬದಲಾವಣೆ ಮಾಡಬೇಕೆಂದು. ಆದ್ದರಿಂದ ಅವರು ಮೇ ತಿಂಗಳು ೬ನೆಯ ತಾರೀಖಿನ ದಿನ ತಮ್ಮ ಶಿಷ್ಯರೊಡಗೂಡಿ ಹಿಮಾಲಯ ಪ್ರಾಂತಗಳಲ್ಲಿರುವ ಆಲ್ಮೋರಕ್ಕೆ ಹೊರಟರು. ದಾರಿಯಲ್ಲಿ ಲಕ್ನೋ ನಗರದಲ್ಲಿ ಜನಗಳು ಸ್ವಾಮಿಗಳಿಗೆ ಪೆಂಪಿನಿಂದ ಸ್ವಾಗತವಿತ್ತರು. ಅಲ್ಲಿ ಒಂದು ರಾತ್ರಿ ಇದ್ದು ಮುಂದುವರಿದರು. ಆಲ್ಮೋರದಲ್ಲಿ ಸ್ವಾಮಿಗಳಿಗೆ ದೊರೆತ ಸ್ವಾಗತ ಮದರಾಸು ಕಲ್ಕತ್ತ ನಗರಗಳಲ್ಲಿ ದೊರೆತ ಸನ್ಮಾನದಂತೆಯೆ ಇತ್ತು.

ಆಲ್ಮೋರಕ್ಕೆ ಹೋದಮೇಲೆ ಸ್ವಾಮಿಗಳ ಆರೋಗ್ಯ ಹೆಚ್ಚಿತು. ಹಿಮಾಲಯ ಪರ್ವತಗಳ ಸುಂದರಶೀತಳ ನಿಮ್ನೋನ್ನತ ಪ್ರದೇಶಗಳಲ್ಲಿ ತಿರುಗಾಡುವುದು, ಕುದುರೆ ಸವಾರಿ ಮಾಡುವುದು, ಕುಸ್ತಿ ಮಾಡುವುದು ಮೊದಲಾದ ವ್ಯಾಯಾಮಗಳಿಂದ ಅಸ್ವಸ್ಥತೆ ಪರಾರಿಯಾಯಿತು. ಅಲ್ಲಿಂದ ಅವರು ತಮ್ಮ ಡಾಕ್ಟರಿಗೆ ಬರೆದ ಕಾಗದದಲ್ಲಿ “…ಏನಾದರಾಗಲಿ, ನನಗೀಗ ಭೀಮಬಲ ಬಂದಂತಿದೆ. ಡಾಕ್ಟರೇ, ನೀವು ಬಂದು ನೋಡಬೇಕು, ನಾನು ಶುಭ್ರತುಷಾರಾವೃತ ಶ್ವೇತ ಹಿಮಗಿರಿ ಶೃಂಗಗಳ ಮುಂದೆ ಪದ್ಮಾಸನ ಹಾಕಿಕೊಂಡು ಕುಳಿತು ಉಪನಿಷತ್ತುಗಳಿಂದ ‘ನ ತಸ್ಯ ಮೃತ್ಯುಃ ನ ಜರಾ ನ ವ್ಯಾಧಿಃ ಪ್ರಾಪ್ತಂ ಹಿ ಯೋಗಾಗ್ನಿಮಯಂ ಶರೀರಮ್’ ಎಂಬ ವಚನವನ್ನು ಘೋಷಿಸುತ್ತ ಧ್ಯಾನ ಮಾಡುವ ಮಹಿಮಾಮಯ ದೃಶ್ಯವನ್ನು!” ಎಂದು ಹೇಳಿದ್ದಾರೆ.

ಸ್ವಾಮಿಜಿ ಆಲ್ಮೋರದಲ್ಲಿದ್ದಾಗ ಪಂಜಾಬು ಮತ್ತು ಕಾಶ್ಮೀರ ಪ್ರಾಂತಗಳಿಂದ ಆಹ್ವಾನ ಪತ್ರಗಳು ಬರತೊಡಗಿದುವು. ಆದ್ದರಿಂದ ಅವರು ಪರ್ವತ ಪ್ರದೇಶಗಳಿಂದ ಕೆಳಗಿಳಿಯಬೇಕಾಯಿತು. ದಾರಿಯಲ್ಲಿ ನಗರ ನಗರಗಳಲ್ಲಿಯೂ ಅಭಿನಂದನೆಗಳನ್ನು ಸ್ವೀಕರಿಸುತ್ತಾ ಅಂಬಾಲಕ್ಕೆ ಬಂದು ಅಲ್ಲಿ ಒಂದು ವಾರವಿದ್ದರು. ಸಿಮ್ಲಾದಿಂದ ಸೇವಿಯರ್ ದಂಪತಿಗಳೂ ಬಂದು ಅವರನ್ನು ಸೇರಿದರು. ಅಲ್ಲಿ ದಿನದಿನವೂ ಧರ್ಮಚರ್ಚೆಗಳಾಗುತ್ತಿದ್ದುವು. ಮಹಮ್ಮದೀಯರು, ಬ್ರಾಹ್ಮ ಸಮಾಜದವರು, ಆರ್ಯ ಸಮಾಜಿಗಳು, ಹಿಂದುಗಳು ಎಲ್ಲರೂ ನೆರೆಯುತ್ತಿದ್ದರು.

ಅಂಬಾಲದಿಂದ ಸ್ವಾಮಿಗಳು ಅಮೃತಸರಕ್ಕೆ ಹೋದರು. ಅಲ್ಲಿಯೂ ಸುತ್ತಣ ನಗರಗಳಲ್ಲಿಯೂ ಭಾಷಣಗಳನ್ನು ಕೊಟ್ಟು ಪೂರೈಸಿ, ಕಾಶ್ಮೀರಾಭಿಮುಖವಾದರು. ಯಾತ್ರಿಕವೃಂದ ದೋಣಿಯನ್ನು ಹತ್ತಿ ಮನೋಹರ ಶ್ರೀನಗರಕ್ಕೆ ಹೊರಟಿತು. ನಾವೆ ಆ ಸುಂದರ ಪುರವನ್ನು ತಲುಪಿದಾಗ ಅನೇಕ ಶ್ರೀನಗರ ನಿವಾಸಿಗಳು ಆಚಾರ್ಯದೇವರನ್ನು ಬಹುಸಡಗರದಿಂದ ಎದುರುಗೊಂಡರು. ಮೂರು ದಿನಗಳಾದ ಮೇಲೆ ಕಾಶ್ಮೀರದ ಮಹಾರಾಜರು ಸ್ವಾಮಿಗಳನ್ನು ಬರಮಾಡಿಕೊಂಡು ಅತ್ಯಾದರದಿಂದ ಅತಿಥಿ ಸತ್ಕಾರ ಮಾಡಿದರು. ಸ್ವಾಮಿಗಳು ಕಾಶ್ಮೀರ ದೇಶದ ಸಾಧುಗಳು, ಅಧಿಕಾರಿಗಳು, ನಾಗರಿಕರು ಮೊದಲಾದವರೊಡನೆ ದರ್ಮಚರ್ಚೆ ಮಾಡಿ ತಮ್ಮ ಸಂದೇಶವನ್ನು ಹರಡಿದರು.

ಕೆಲವು ದಿನಗಳಾದ ಮೇಲೆ ಸ್ವಾಮಿಜಿಯವರನ್ನು ರಾವಲ್‌ಪಿಂಡಿಯಲ್ಲಿ ಸಂದರ್ಶಿಸುವೆವು. ಅಲ್ಲಿಯ ಪುರಜನರು ಅವರಿಗಿತ್ತ ಸ್ವಾಗತ ಮಹೋತ್ಸವವು ದರ್ಶನೀಯವಾಗಿತ್ತು. ಅವರ ನೂತನ ಮಂಗಳ ಸಂದೇಶವಾಣಿಯನ್ನು ಕೇಳಿ ಜನರು ಜಾಗ್ರತರಾದರು. ಅಲ್ಲಿಂದ ಯುಗಪ್ರವರ್ತಕನು ಜಮ್ಮೂ ನಗರದ ಮುಖಾಂತರ ಲಾಹೋರಿಗೆ ಬಂದನು. ಅಲ್ಲಿ ನಗರ ನಿವಾಸಿಗಳ ಸನ್ಮಾನವನ್ನು ಕೈಗೊಂಡು, “ನಮಗಿರುವ ಕರ್ತವ್ಯ” ಎಂಬ ಭಾಷಣ ಮಾಡಿದರು. ಮರುದಿವಸ ಲಾಹೋರಿನ ಕಾಲೇಜಿನಲ್ಲಿ ವೇದಾಂತ ವಿಚಾರವಾಗಿ ಉಪನ್ಯಾಸ ಮಾಡಿದರು. ಆ ಉಪನ್ಯಾಸದ ಮಹಿಮೆಯಿಂದಲೆ ಲಾಹೋರ್ ಕಾಲೇಜಿನಲ್ಲಿ ಗಣಿತಶಾಸ್ತ್ರದ ಅಧ್ಯಾಪಕರಾಗಿದ್ದ ಶ್ರೀಯುತ ತೀರ್ಥರಾಮ ಗೋಸ್ವಾಮಿಯವರು ಕೆಲವು ದಿನಗಳಲ್ಲಿಯೆ ರಾಮತೀರ್ಥರಾದರು. ವಿವೇಕಾನಂದರಂತೆಯೇ ಅವರೂ ಅಮೆರಿಕಾ ಮೊದಲಾದ ಪರದೇಶಗಳಿಗೆ ಹೋಗಿ ವೇದಾಂತ ಮತಬೋಧನೆ ಮಾಡಿ ಸ್ವದೇಶಕ್ಕೆ ಹಿಂತಿರುಗಿದರು. ಆದರೆ ದೇಶದ ದೌರ್ಭಾಗ್ಯದಿಂದ ಸ್ವಲ್ಪಕಾಲದಲ್ಲಿಯೇ ಜಗತ್ತಿನ ಕರ್ಮರಂಗದಿಂದ ಕಣ್ಮರೆಯಾದರು. ಸ್ವಾಮಿ ರಾಮತೀರ್ಥರಿಗೆ ವಿವೇಕಾನಂದರಲ್ಲಿ ಬಹಳ ಗೌರವ ಭಕ್ತಿಗಳಿದ್ದುವು. ಅಂತೆಯೆ ಆರ್ಯಸಮಾಜದ ಸ್ವಾಮಿಗಳಾದ ಅಚ್ಯುತಾನಂದ, ಪ್ರಕಾಶಾನಂದರಿಗೂ ಸ್ವಾಮಿಜಿ ಪ್ರಿಯತಮ ಸ್ನೇಹಿತರಾಗಿದ್ದರು.

ಡೆಹರಾಡೂನಿನಲ್ಲಿ ಆರೋಗ್ಯಲಾಭಕ್ಕಾಗಿ ಕೆಲವು ಕಾಲ ನಿಂತು, ಕೇಂದ್ರ ಮಹಾರಾಜರ ಆಹ್ವಾನವನ್ನು ಸ್ವೀಕರಿಸಿ ಸ್ವಾಮಿಗಳು ವೀರಭೂಮಿ ರಾಜಪುತ್ರ ಸ್ಥಾನಾಭಿಮುಖವಾಗಿ ಪ್ರಯಾಣ ಮಾಡಿದರು. ದೆಹಲಿ, ಆಗ್ರಾಗಳನ್ನು ಹಿಂದಿಕ್ಕಿ ಆಳ್ವಾರ್ ಸಂಸ್ಥಾನಕ್ಕೆ ಹೋದರು. ಪೂರ್ವ ಪರಿಚಿತವಾದ ಆ ನಗರ ಸ್ವಾಮಿಗಳನ್ನು ಆನಂದದಿಂದ ಅಪ್ಪಿತು. ಅಲ್ಲಿ ನಡೆದ ಒಂದು ಹೃದಯವಿದ್ರಾವಕವಾದ ಸಂಗತಿಯನ್ನು ಹೇಳದಿರುವುದು ಉಚಿತವಲ್ಲ. ಸ್ವಾಮಿಗಳು ರಾಜರ ಅತಿಥಿಯಾಗಿದ್ದರು. ಒಂದು ದಿನ ಬಡ ಮುದುಕಿಯೊಬ್ಬಳು ಅವರ ಬಳಿಗೆ ಬಂದು ತನ್ನ ಮನೆಗೆ ಊಟಕ್ಕೆ ಬಂದು ತನ್ನನ್ನು ಕೃತಾರ್ಥೆಯನ್ನಾಗಿ ಮಾಡಬೇಕೆಂದು ಕೇಳಿಕೊಂಡಳು. ಸ್ವಾಮಿಗಳು ಹಿಂದೆ ಅಜ್ಞಾತರಾಗಿ ಆಳ್ವಾರಿಗೆ ಬಂದಿದ್ದಾಗ ಆ ಮುದುಕಿ ಅತಿಥಿ ಸತ್ಕಾರ ಮಾಡಿದ್ದಳು. ಆದ್ದರಿಂದ ಆಕೆಯಲ್ಲಿ ಅವರಿಗೆ ಮಾತೃಭಾವವಿತ್ತು; ಬಹಳ ಸಲಿಗೆಯಿತ್ತು.

ಸ್ವಾಮಿಗಳು ಅಜ್ಜಿಯನ್ನು ಕುರಿತು “ಅಮ್ಮಾ, ನನಗೆ ದಪ್ಪ ದಪ್ಪ ಚಪಾತಿಗಳು ಬೇಕು. ಅಂದು ನಿನ್ನ ಮನೆಯಲ್ಲಿ ಕೊಟ್ಟಿದ್ದೆಯಲ್ಲಾ ಅಂತಹ ಚಪಾತಿಗಳು!” ಎಂದರು.

ಮುದುಕಿಯ ಎದೆ ಮುದದಿಂದ ನಲಿಯಿತು. ಹರುಷದ ಕಂಬನಿಗಳನ್ನು ಸುರಿಸುತ್ತ ಮನೆಗೆ ಹೋಗಿ ಜಗದ್ವಿಖ್ಯಾತ ಯುಗಪ್ರವರ್ತಕ ಯೋಗಿ ಸ್ವಾಮಿ ವಿವೇಕಾನಂದರಿಗಾಗಿ ತನ್ನ ಕೈಯಿಂದಲೆ ಚಪಾತಿಗಳನ್ನು ಮಾಡಿದಳು. ಸ್ವಾಮಿಗಳು ತಮ್ಮ ಕೆಲವು ಶಿಷ್ಯರೊಡನೆ ಆಕೆಯ ಬಡ ಜೋಪಡಿಗೆ ಹೋದರು.

ಮುದುಕಿ ಊಟವನ್ನು ಬಡಿಸುತ್ತಾ “ನಾನು ಬಡವೆ, ಶ್ರೀಮಂತರ ಭಕ್ಷ್ಯ, ಭೋಜ್ಯವನ್ನು ನಾನೆಲ್ಲಿಂದ ತರಲಿ? ನೀನೇ ಹೇಳು ಮಗೂ!” ಎಂದಳು.

ಸ್ವಾಮಿಗಳು ಅಜ್ಜಿ ಕೊಟ್ಟ ಆಹಾರವನ್ನು ಅಮರಲೋಕದ ಅಮೃತವೆಂದೇ ಎಣಿಸಿ ಭುಂಜಿಸುತ್ತ ತಮ್ಮ ಶಿಷ್ಯರನ್ನು ಕುರಿತು “ನೋಡಿ, ಈ ನನ್ನ ಅಜ್ಜಿಗೆ ನನ್ನ ಮೇಲೆ ಎಷ್ಟು ವಾತ್ಸಲ್ಯ! ಆಕೆಯ ಕೈಮುಟ್ಟಿದ ಚಪಾತಿಗಳು ಎಷ್ಟು ಸಾತ್ವಿಕವಾಗಿವೆ!” ಎಂದರು.

ಅಲ್ಲಿಂದ ಹೊರಟು ಬರುವಾಗ ಸ್ವಾಮಿಗಳು ಮುದುಕಿಗೆ ಗೊತ್ತಾಗದಂತೆ ಆಕೆಯ ಮಗನ ಕೈಯಲ್ಲಿ ಒಂದು ನೂರು ರೂಪಾಯಿಗಳ ನೋಟನ್ನು ಕೊಟ್ಟು ಬಂದರಂತೆ.

ಖೇತ್ರಿಯಲ್ಲಿ ಸ್ವಾಮಿಗಳಿಗೆ ಆದ ಸನ್ಮಾನ ಅನನ್ಯ ಸಾಧಾರಣವಾಗಿತ್ತು. ದಾರಿಯುದ್ದಕ್ಕೂ ಬಾವುಟಗಳು ತೋರಣಗಳು ಕಲಶಗಳು ಹಗಲು ದೀವಿಗೆಗಳು ಬೆಳ್ಗೊಡೆಗಳು ರಂಜಿಸಿದುವು. ಜನರು ಆನಂದ ಕೋಲಾಹಲದಿಂದ ಪ್ರಮತ್ತರಾಗಿದ್ದರು. ಮಹಾರಾಜರೇ ಸ್ವಾಮಿಗಳನ್ನು ವೈಭವದಿಂದ ತಮ್ಮ ದಿವ್ಯ ಭವನಕ್ಕೆ ಕರೆದೊಯ್ದು ಸತ್ಕರಿಸಿದರು. ಮರುದಿನ ಸ್ವಾಮಿಗಳು ವೇದಾಂತ ವಿಚಾರವಾಗಿ ಮಾತನಾಡಿದರು. ಮಹಾರಾಜರೇ ಸ್ವಯಂ ಅಧ್ಯಕ್ಷರಾಗಿ ನೆರೆದ ಜನರಿಗೆ ಸ್ವಾಮಿಗಳ ಪರಿಚಯ ಮಾಡಿಕೊಟ್ಟರು. ತರುವಾಯ ಸ್ವಾಮಿಜಿ “ಏಕಂ ಸತ್ ವಿಪ್ರಾ ಬಹುಧಾ ವದಂತಿ” ಎಂಬುದರ ಮೇಲೆ ಒಂದೂವರೆ ಗಂಟೆಯ ಹೊತ್ತು ಸುಲಲಿತವಾಗಿ ಭಾಷಣ ಮಾಡಿದರು. ಅಲ್ಲಿ ಕೆಲವು ದಿನಗಳು ಕಳೆದುವು. ಸ್ವಾಮಿಗಳು ಹೊರಡುವಾಗ ಮಹಾರಾಜರೆ ಅವರೊಡನೆ ಜಯಪುರದವರೆಗೆ ಬಂದು ಬೀಳ್ಕೊಟ್ಟರು. ಸ್ವಾಮಿಜಿ ಕೃಷ್ಣಘಡ ಅಜ್ಮೀರ್ ಜೋಧಪುರಗಳ ಮಾರ್ಗವಾಗಿ ಎಲ್ಲೆಲ್ಲಿಯೂ ವೇದಾಂತ ಸಂದೇಶವನ್ನು ಸಾರುತ್ತ ಪುನಃ ಕಲ್ಕತ್ತಾಕ್ಕೆ ಬಂದರು.

ಬಹುದಿನಗಳಿಂದಲೂ ಅವರ ಮನಸ್ಸಿನಲ್ಲಿ ಭಾಗೀರಥಿಯ ತೀರದಲ್ಲಿ ಒಂದು ಚಿರಸ್ಥಾಯಿಯಾದ ಮಠ ನಿರ್ಮಾಣ ಮಾಡಬೇಕೆಂಬ ಸಂಕಲ್ಪವಿತ್ತು. ಅದಕ್ಕಾಗಿ ಗಂಗೆಯ ಪಶ್ಚಿಮ ತೀರದಲ್ಲಿರುವ ಬೇಲೂರು ಗ್ರಾಮದಲ್ಲಿ ಒಂದು ಉಪಯುಕ್ತ ಸ್ಥಾನವನ್ನು ಗೊತ್ತುಮಾಡಿ, ಮಿಸ್ ಮುಲ್ಲರ್ ಎಂಬಾಕೆ ಕೊಟ್ಟ ಹಣದಿಂದ ಅದನ್ನು ಕೊಂಡುಕೊಂಡರು. ಒಂದು ವರ್ಷದೊಳಗಾಗಿ ಮಠ ಮೇಲೆದ್ದಿತು.

ಈ ಮಧ್ಯೆ ಸ್ವಾಮಿ ಶಾರದಾನಂದರು ಅಮೆರಿಕಾದಿಂದ ಬಂದರು. ಸ್ವಾಮಿ ಶಿವಾನಂದರು ಸಿಂಹಳದಲ್ಲಿ ವೇದಾಂತ ಪ್ರಚಾರ ಮಾಡಿ ಹಿಂತಿರುಗಿದರು. ದಿನಜಪುರದ ಕ್ಷಾಮಕಾರ್ಯವನ್ನು ಮುಗಿಸಿ ಸ್ವಾಮಿ ತ್ರಿಗುಣಾತೀತರೂ ಬಂದು ಸೋದರರನ್ನು ಸೇರಿದರು.

ಕೆಲವು ದಿನಗಳಲ್ಲಿ ಶ್ರೀರಾಮಕೃಷ್ಣರ ಜಯಂತ್ಯುತ್ಸವ ಸಮಾಗತವಾಯಿತು. ಆ ಮಹೋತ್ಸವದಲ್ಲಿ ಸ್ವಾಮಿಗಳು ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವರಲ್ಲದ ತಮ್ಮ ಶಿಷ್ಯರಿಗೆ ಮತ್ತು ಭಕ್ತರಿಗೆ ಯಜ್ಞೋಪವೀತವನ್ನು ಸ್ವತಃ ತಾವೇ ಸ್ವಯಂ ಶಾಸ್ತ್ರೀಯವಾಗಿ ದಾನಮಾಡಿದರು; ಗಾಯತ್ರಿ ಮಂತ್ರವನ್ನು ಉಪದೇಶಿಸಿದರು. ಪ್ರಾಚೀನ ಸಂಪ್ರದಾಯದವರ ಪ್ರತಿಭಟನೆಗೆ ಸ್ವಾಮಿಗಳು ಅಳುಕಲಿಲ್ಲ. ಮಾನವರೆಲ್ಲರೂ ದೇವರ ಮಕ್ಕಳು. ಎಲ್ಲರಲ್ಲಿಯೂ ನಾರಾಯಣನಿದ್ದಾನೆ. ಅಲ್ಲದೆ ದ್ವಿಜರಲ್ಲದವರನ್ನು ದ್ವಿಜರನ್ನಾಗಿ ಮಾಡಿ ಮೇಲೆತ್ತುವುದು ಆಚಾರ್ಯ ವರ್ಗದವರ ಕರ್ತವ್ಯ. ಎಲ್ಲರನ್ನೂ ಬ್ರಾಹ್ಮಣ ಸ್ಥಾನಕ್ಕೆ ತರಬೇಕು. ಹಾಗೆ ಮಾಡದಿದ್ದರೆ ಸ್ವಲ್ಪ ಕಾಲದಲ್ಲಿಯೆ ಶೂದ್ರಶಕ್ತಿ ಯುಗವನ್ನಾಳುವುದು. ತತ್ತ್ವತಃ ಶೂದ್ರ ಶಕ್ತಿಗಿಂತಲೂ ಬ್ರಾಹ್ಮಣಶಕ್ತಿ ಮೇಲಾದುದು. ಆದ್ದರಿಂದ ಉತ್ತಮತರ ಶಕ್ತಿ ದೇಶದಲ್ಲಿ ನೆಲೆಗೊಳ್ಳದಿದ್ದರೆ ಕೆಡುಕಾಗುವುದು. ಇದನ್ನರಿತೆ ಹಿಂದೆ ಬಂದ ಆಚಾರ್ಯರೂ ಮಹಾಪುರುಷರೂ ಬ್ರಾಹ್ಮಣರಲ್ಲದವರನ್ನೂ ಶಿಷ್ಯರನ್ನಾಗಿ ಸ್ವೀಕರಿಸಿ ದ್ವಿಜತ್ವವನ್ನು ದಯಪಾಲಿಸಿದರು.

ಜನವರಿ ತಿಂಗಳಲ್ಲಿ ಉತ್ತರಭಾಗದಲ್ಲಿ ಮಿಸ್ ಮಾರ್ಗರೆಟ್ ನೊಬಲ್ ಎಂಬಾಕೆ ಪಶ್ಚಾತ್ಯ ಸಮಾಜದ ಸಕಲ ಸಂಬಂಧಗಳನ್ನೂ ಛೇದಿಸಿ ಸ್ವಾಮಿಗಳ ಆಹ್ವಾನ ಪ್ರಕಾರ ಭರತಖಂಡಕ್ಕೆ ಬಂದರು. ಕೆಲವು ದಿನಗಳಾದ ಮೇಲೆ ಆ ಮಹಿಳೆಗೆ ಸ್ವಾಮಿಜಿ ಬ್ರಹ್ಮಚರ್ಯ ದೀಕ್ಷೆಯನ್ನು ಕೊಟ್ಟು ಬ್ರಹ್ಮಚಾರಿಣಿಯನ್ನಾಗಿ ಮಾಡಿದರು. ಅಂದಿನಿಂದ ಆಕೆಯ ಹೆಸರು “ಸೋದರಿ ನಿವೇದಿತಾ” ಎಂದಾಯಿತು. ಸೋದರಿ ನಿವೇದಿತಾ ಅಲ್ಲಲ್ಲಿ ಆದರ್ಶ ಬಾಲಿಕಾ ವಿದ್ಯಾಲಯಗಳನ್ನು ಸ್ಥಾಪಿಸಿ ಭರತಖಂಡದ ಸ್ತ್ರೀಯರ ಏಳಿಗೆಗೆ ಮುನ್ನುಡಿಯನ್ನು ಬರೆದರು. ಭಾರತೀಯ ಸಂಸ್ಕೃತಿಯ ವಿಚಾರವಾಗಿ ಅನೇಕಾನೇಕ ಉದ್ಗ್ರಂಥಗಳನ್ನು ಬರೆದು ನಮ್ಮ ದೇಶದ ಕೀರ್ತಿಯನ್ನು ಹೊರಗಡೆ ಬೆಳಗಿದರು.

ಇದಾದ ಎರಡು ತಿಂಗಳವರೆಗೆ ಮಠದ ತರುಣ ಸಂನ್ಯಾಸಿಗಳಿಗೂ ಬ್ರಹ್ಮಚಾರಿಗಳಿಗೂ ಐರೋಪ್ಯ ಶಿಷ್ಯರಿಗೂ ಸ್ವಯಂ ಸ್ವಾಮಿಜಿಯೇ ಶಿಕ್ಷಾಪ್ರದಾನ ಮಾಡಲು ತೊಡಗಿದರು. ಆದರೆ ಪ್ರಬಲ ಶಾರೀರಿಕ ಅಸ್ವಸ್ಥತೆಯ ದೆಸೆಯಿಂದ ವಾಯು ಪರಿವರ್ತನೆಗಾಗಿ ಅವರು ಡಾರ್ಜಿಲಿಂಗಿಗೆ ಹೋಗಬೇಕಾಯಿತು. ಅಲ್ಲಿ ಮೆಲ್ಲಮೆಲ್ಲನೆ ರೋಗ ಗುಣಮುಖವಾಗುತ್ತಿತ್ತು. ಅಷ್ಟರಲ್ಲಿ ಕಲ್ಕತ್ತಾ ನಗರದಲ್ಲಿ ಪ್ಲೇಗು ರೋಗ ಭೀಷಣಾಕಾರವನ್ನು ತಾಳಿದೆ ಎಂಬ ಸುದ್ದಿ ಅವರ ಕಿವಿಗೆ ಬಿತ್ತು. ದೀನ ಬಂಧು ಮಾನವಮಿತ್ರನು ಹೇಗೆ ತಾನೆ ವಿಶ್ರಾಂತಿ ಸುಖವನ್ನು ಅನುಭವಿಸುವನು? ಸ್ವಾಮಿಗಳು ಬೇಲೂರು ಮಠಕ್ಕೆ ಹಿಂತಿರುಗಿ ಬಂದು ತರುಣ ಸಂನ್ಯಾಸಿ ಮತ್ತು ಬ್ರಹ್ಮಚಾರಿಗಳಿಗೆ ರೋಗಿಗಳ ಸೇವಾಕಾರ್ಯವನ್ನು ಆರಂಭಿಸಲು ಹೇಳಿದರು.

ಅದನ್ನು ಕೇಳಿ ಸೋದರ ಸಂನ್ಯಾಸಿಗಳೊಬ್ಬರು “ಸ್ವಾಮಿಜಿ, ಸೇವಾಕಾರ್ಯಕ್ಕೆ ಬೇಕಾಗುವ ಹಣ ಬರುವುದೆಲ್ಲಿಂದ?” ಎಂದು ಕೇಳಿದರು.

ಸ್ವಾಮಿಗಳೂ ಸ್ವಲ್ಪವೂ ತಡವದೆ “ಎಲ್ಲಿಂದ? ಅದೇಕೆ? ಅವಶ್ಯಬಿದ್ದರೆ ಹೊಸದಾಗಿ ಕೊಂಡಕೊಂಡ ಮಠದ ಭೂಮಿಯನ್ನೇ ಮಾರುವುದು. ಸಾವಿರಾರು ಜನರು ನಮ್ಮ ಕಣ್ಣಿನ ಮುಂದೆಯೆ ನರಳುವಾಗ ನಮಗೆ ಮಠದಲ್ಲಿ ಸುಖ ವಾಸವೇನು? ನಾವು ಸಂನ್ಯಾಸಿಗಳು; ಮರದಡಿಯಲ್ಲಿ ಮಲಗಿ, ತಿರುಪೆಯಿಂದ ಹೊಟ್ಟೆ ಹೊರೆದುಕೊಳ್ಳಲು ಸಿದ್ಧರಾಗಬೇಕು” ಎಂದು ದೃಢತರ ವಾಣಿಯಿಂದ ನುಡಿದರು.

ಆದರೆ ಅದೃಷ್ಟವಶದಿಂದ ಮಠವನ್ನು ಮಾರುವ ಕಾಲ ಬರಲಿಲ್ಲ. ನಾಲ್ಕು ದಿಕ್ಕುಗಳಿಂದಲೂ ಧನಸಹಾಯ ಬಂದೊದಗಿತು. ನಗರದ ಬಳಿ ಒಂದು ವಿಶಾಲವಾದ ಸ್ಥಳವನ್ನು ಬಾಡಿಗೆಗೆ ತೆಗೆದುಕೊಂಡು ಅಲ್ಲಿ ಗುಡಿಸಿಲುಗಳನ್ನು ಹಾಕಿದರು. ಜಾತಿವರ್ಣ ಭೇದವಿಲ್ಲದೆ ಪ್ಲೇಗು ರೋಗಗ್ರಸ್ತರಾದ ಜನಗಳನ್ನು ಅಲ್ಲಿಗೆ ಒಯ್ದು ಕರ್ಮಯೋಗಿಗಳಾದ ತರುಣ ಸಂನ್ಯಾಸಿಗಳು ಹಿರಿಯ ಸಾಧುಗಳ ಮೇಲ್ವಿಚಾರಣೆಯಲ್ಲಿ ಅವರಿಗೆ ಶುಶ್ರೂಷೆ ಮಾಡತೊಡಗಿದರು. ಮತ್ತೆ ಕೆಲವರು ಗಲ್ಲಿಗಳಲ್ಲಿಯೂ ಮನೆಮನೆಗಳಲ್ಲಿಯೂ ತಿರುಗಿ ಜನಗಳಿಗೆ ಕ್ರಿಮಿನಾಷಕ ಔಷಧಿಗಳನ್ನು ಕೊಟ್ಟು ನೈರ್ಮಲ್ಯಬೋಧನೆ ಮಾಡಿದರು.

ನಗರದಲ್ಲಿ ರೋಗ ಸಂಪೂರ್ಣವಾಗಿ ಮಾಯವಾಗುವವರೆಗೂ ಸ್ವಾಮಿಗಳು ಅಲ್ಲಿಯೇ ಇದ್ದು, ತರುವಾಯ ಕೆಲವು ಜನ ಪ್ರಾಚ್ಯ ಪಾಶ್ಚಾತ್ಯ ಶಿಷ್ಯಗಣಗಳೊಡನೆ ಹಿಮಾಲಯ ಪ್ರಾಂತ್ಯದಲ್ಲಿರುವ ನೈನಿಟಾಲಿಗೆ ಹೋದರು. ಅಲ್ಲಿ ತಮ್ಮ ಪಾಶ್ಚಾತ್ಯ ಶಿಷ್ಯರಿಗೆ ಭಾರತೀಯ ಸಂಸ್ಕೃತಿಯ ವಿಚಾರವಾಗಿ ನಿತ್ಯವೂ ಬೋಧಿಸಿ ಅವರನ್ನು ಸೇವಾಕಾರ್ಯಕ್ಕೆ ತರಬಿಯತ್ತು ಮಾಡಿದರು. ಸ್ವಾಮಿಗಳು ಶಿಕ್ಷಕರಲ್ಲಿ ಅತುಲನೀಯವಾಗಿದ್ದರು. ಭಿನ್ನದೃಷ್ಟಿಯ ಯೂರೋಪೀಯ ಶಿಷ್ಯರಲ್ಲಿ ಭಾರತೀಯತೆ ಮೂಡುವಂತೆ ಮಾಡಿದುದು ಅಸಾಧಾರಣ ಕಾರ್ಯವೆಂದು ಹೇಳಬೇಕು. ನೈನಿಟಾಲಿನಲ್ಲಿದ್ದಾಗ ಸ್ವಾಮಿಗಳು ಅನುದಿನವೂ ಭರತಖಂಡದ ಕಲ್ಯಾಣವನ್ನು ಕುರಿತು ಧ್ಯಾನಿಸುತ್ತಿದ್ದರು. ಶಿಷ್ಯರ ಹೃದಯದಲ್ಲಿ ಸೇವಾಧರ್ಮವನ್ನು ತುಂಬುತ್ತಿದ್ದರು. ಅದನ್ನು ಕುರಿತು ಸೋದರಿ ನಿವೇದಿತಾ ಹೀಗೆಂದು ಬರೆದಿದ್ದಾರೆ: “ಸ್ವಾಮಿಜಿ ಸಂನ್ಯಾಸಿಯಾಗಿ ಪ್ರಪಂಚವನ್ನು ತ್ಯಜಿಸಿದ್ದರೂ ಭರತಭೂಮಿ ಅವರ ಹೃತ್ಕಮಲ ಕೋರಕವಾಗಿತ್ತು. ಭರತಮಾತೆ ಅವರ ಪ್ರೀತಿಮೂರ್ತಿಯಾಗಿದ್ದಳು. ಆಕೆಗಾಗಿ ಎದೆ ನೋಯುತ್ತಿದ್ದರು, ಅಳುತ್ತಿದ್ದರು. ಆಕೆಗಾಗಿಯೇ ಮಡಿದರು. ಅವರ ಒಂದೊಂದು ರಕ್ತನಾಳಗಳಲ್ಲಿಯೂ ಭರತಮಾತೆಯ ಭಕ್ತಿ ಸ್ಪಂದಿಸುತ್ತಿತ್ತು. ಆ ಭಕ್ತಿಯೇ ನಾಳ ನಾಳಗಳಲ್ಲಿಯೂ ನೆತ್ತರಾಗಿ ಹರಿಯುತ್ತಿತ್ತು. ಹೆಚ್ಚೇನು? ದೇಶಭಕ್ತಿ ಎಂಬುದು ಅವರ ಬಾಳಿನ ಬಾಳಾಗಿತ್ತು, ಉಸಿರಿನ ಉಸಿರಾಗಿತ್ತು.”

ನೈನಿಟಾಲಿನಿಂದ ಸ್ವಾಮಿಗಳು ಅಲ್ಮೋರಾಕ್ಕೆ ಬಂದರು. ಅಲ್ಲಿಯೂ ದಿನ ದಿನ ಶಿಷ್ಯರಿಗೆ ವಿಶ್ವತೋಮುಖವಾದ ಜ್ಞಾನವನ್ನು ಹೃದಯಂಗಮವಾಗಿ ನೀಡಿದರು. ಕೆಲವು ಸಾರಿ ತಾವೊಬ್ಬರೇ ಹಿಮಗಿರಿಗಳ ಸುಂದರ ನೀರವ ನಿಬಿಡಾರಣ್ಯಗಳಲ್ಲಿ ಧ್ಯಾನ ಮಾಡಲು ಹೋಗುತ್ತಿದ್ದರು. ಒಂದು ದಿನ ಅಡವಿಯಿಂದ ಸಂಜೆಯ ಸಮಯದಲ್ಲಿ ಹಿಂದಿರುಗಿ ಬಂದು ಪವಾಹಾರಿ ಬಾಬ ಮತ್ತು ಗುಡ್ವಿನ್‌ರವರ ನಿಧನವಾರ್ತೆಯನ್ನು ಕೇಳಿ ಬಹಳ ದುಃಖಿಸಿದರು. ಬಹಳ ಹೊತ್ತು ಒಂದು ಕಡೆ ಕುಳಿತು ಚಿಂತಾಮಗ್ನರಾದರು. ಎಷ್ಟು ಪ್ರಯತ್ನಪಟ್ಟರೂ ತಮ್ಮ ಪ್ರಿಯತಮ ಶಿಷ್ಯ ಗುಡ್ವಿನ್‌ರವರ ಚಿತ್ರ ಅವರೆದುರು ಸುಳಿಸುಳಿದು ಬರುತ್ತಿತ್ತು.

ಕೆಲವು ದಿನ ಕಳೆದ ಮೇಲೆ ಸ್ವಾಮಿಗಳು ಪುನಃ ಕಾಶ್ಮೀರಾಭಿಮುಖವಾಗಿ ಹೊರಟರು. ಹಾದಿಯಲ್ಲಿ ಗಗನಚುಂಬಿತ ಪೀತದಾರು ದೇವದಾರು ವೃಕ್ಷರಾಜಿಗಳ ಮನೋಹರ ದೃಶ್ಯ ಸಮೂಹಗಳನ್ನು ನೋಡುತ್ತಾ ನಡುನಡುವೆ “ಅಸತೋ ಮಾ ಸದ್ಗಮಯ, ತಮಸೋ ಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತಂ ಗಮಯ” ಮೊದಲಾದ ವೇದಮಂತ್ರಗಳನ್ನು ಹಾಡುತ್ತ ಹಾಡುತ್ತ ರಾವಲ್‌ಪಿಂಡಿಗೆ ಬಂದು, ಅಲ್ಲಿಂದ ಶ್ರೀನಗರಕ್ಕೆ ಹೋದರು. ಅಲ್ಲಿ ಕೆಲವು ದಿನಗಳು ಏಕಾಂತವಾಸವಾಗಿದ್ದುಕೊಂಡು ಧ್ಯಾನಮಗ್ನರಾಗಬೇಕೆಂದು ಅವರಿಗೆ ಮನಸ್ಸಾಯಿತು. ಕೂಡಲೆ ಹಿಂದುಮುಂದೆ ನೋಡದೆ ತಮ್ಮ ಶಿಷ್ಯರನ್ನು ಬಿಟ್ಟು ವನಗಳಲ್ಲಿ ಕಣ್ಮರೆಯಾದರು. ಅವರು ಹಿಂದಿರುಗಿದುದು ಒಂದು ವಾರದ ಮೇಲೆ!

ಸ್ವಾಮಿಗಳು ಕೆಲವು ಸಾರಿ ಸಂಪೂರ್ಣವಾಗಿ ಸಂಕಲ್ಪ ವಿವರ್ಜಿತ ಸಂನ್ಯಾಸಿಯಾಗಿಬಿಡುತ್ತಿದ್ದರು. ಅವರು ಮುಂದೇನು ಮಾಡುವರು? ಎಲ್ಲಿಗೆ ಹೋಗುವರು? ಎಂಬುದೇ ಶಿಷ್ಯರಿಗೆ ತಿಳಿಯುತ್ತಿರಲಿಲ್ಲ. ಸೋದರಿ ನಿವೇದಿತೆ ಹೀಗೆಂದು ಬರೆದಿದ್ದಾರೆ: “ಅವರಲ್ಲಿ ಈ ಗೊತ್ತುಗುರಿಯಿಲ್ಲದಿರುವಿಕೆ ಆಕಸ್ಮಿಕವಾದ ಗುಣವಾಗಿರಲಿಲ್ಲ. ಒಂದು ಸಾರಿ ಅವರು ತಾವಾಗಿಯೆ ನನಗೆ ತಂದು ತೋರಿಸಿದ ಒಂದು ಕಾಗದದ ವಿಚಾರದಲ್ಲಿ ನಾನಿತ್ತ ಪ್ರಾಪಂಚಿಕ ಬುದ್ಧಿವಾದವನ್ನು ಕೇಳಿ ಕನಲಿ ಜುಗುಪ್ಸೆಯಿಂದ ನನ್ನ ಮೇಲೆ ತಿರುಗಿಬಿದ್ದು ‘ಕ್ರಮ! ಯಾವಾಗಲೂ ಕ್ರಮ! ಅದಕ್ಕಾಗಿಯೆ ನೀವು ಪಾಶ್ಚಾತ್ಯರು ಒಂದು ಮತವನ್ನಾದರೂ ಸೃಷ್ಟಿಸಲಾರಿರಿ! ನಿಮ್ಮಲ್ಲಿ ಯಾರಾದರೂ ಮತಗಳನ್ನು ಸೃಷ್ಟಿಸಿದ್ದರೆ ಅವರು ಕ್ಯಾಥೋಲಿಕ್ ಸಾಧುಗಳಾಗಿರಬೇಕು. ಅವರು ಕಾರ್ಯಕ್ರಮಕ್ಕೆ ಗುಲಾಮರಾಗಿರಲಿಲ್ಲ. ಕ್ರಮದಾಸರಿಂದ ಎಂದಿಗೂ ಎಂದೆಂದಿಗೂ ಧರ್ಮ ಪ್ರಚಾರವಾಗಿಲ್ಲ’ ಎಂದು ನುಡಿದುದನ್ನು ನಾನೆಂದಿಗೂ ಮರೆಯಲಾರೆ.”

ಯಾತ್ರಿಕರು ನಾನಾ ತೀರ್ಥಗಳನ್ನು ಸಂದರ್ಶಿಸಿ ಅನೇಕಾನೇಕ ದೇವಾಲಯ ಸ್ತೂಪಗಳನ್ನು ನೋಡಿಕೊಂಡು, ದುರ್ಗಪರ್ವತಮಾರ್ಗವಾಗಿ ಆಗಸ್ಟು ೨ನೆಯ ತಾರೀಖಿನ ದಿನ ಅಮರನಾಥಕ್ಕೆ ಹೋದರು. ಅಮರನಾಥದ ಪವಿತ್ರ ಗುಹೆ ಕಣ್ಣಿಗೆ ಬೀಳುತ್ತಲೆ ಸ್ವಾಮಿಗಳ ದೇಹ ಭಕ್ತಿಯಿಂದ ಪುಳಕ ಕಂಟಕಿತವಾಯಿತು. ವಿಭೂತಿ ಲೇಪಿತ ಕಳೇಬರದ ಕೌಪೀನಧಾರಿಯಾದ ವಿವೇಕಾನಂದರು ಕಂಪಿತಪದದಿಂದ ವಿಶಾಲಗುಹೆಯ ನಡುವೆ ಪ್ರವೇಶ ಮಾಡಿದರು. ಸಮ್ಮುಖದಲ್ಲಿ ಚಿರತುಷಾರ ಮಂಡಿತ ಭಗವಾನ್ ಮಹಾದೇವನ ವಿಗ್ರಹ ರಾರಾಜಿಸಿತು. ಸ್ವಾಮಿಜಿ ಭಕ್ತಿಭಾವದಿಂದ ನೆಲದ ಮೇಲೆ ಬಿದ್ದು ಬಿದ್ದು ನಮಸ್ಕಾರ ಮಾಡಿ ಗಭೀರ ಧ್ಯಾನಸ್ಥರಾದರು. ಸೋದರಿ ನಿವೇದಿತೆ ಬಳಿಯಲ್ಲಿ ನಿಂತು ಆ ಮಹಿಮಾಮಯ ದೃಶ್ಯವನ್ನು ಎವೆಯಿಕ್ಕದೆ ನೋಡಿದರು. ಸ್ವಾಮಿಗಳು ಗುಹೆಯಿಂದ ಹೊರಗೆ ಬರುತ್ತಿದ್ದಾಗ ತುಷಾರೋಪಮ ಶ್ವೇತ ಪಾರಾವತ ಪಕ್ಷಿಗಳ ಸಮೂಹವೊಂದು ಅವರಿಗೆದುರಾಗಿ ಹಾರಿಬಂದಿತು. ಅದನ್ನು ನೋಡಿ ನಿವೇದಿತೆಯೊಡನೆ “ತಂಗಿ, ದೇವಾಧಿದೇವ ಮಹಾದೇವನು ಇಂದೆಮಗೆ ವರಪ್ರದಾನ ಮಾಡಿದ್ದಾನೆ” ಎಂದು ಗಂಭೀರವಿಶ್ವಾಸದಿಂದ ಹೇಳಿದರು.

ಆಗಸ್ಟು ೮ನೆಯ ತಾರೀಖಿನ ದಿನ ಯಾತ್ರಿಕವೃಂದ ಶ್ರೀನಗರವನ್ನು ತಲುಪಿತು. ಅಮರನಾಥಕ್ಕೆ ಹೋದಾಗಿನಿಂದ ಸ್ವಾಮಿಗಳು ತಮ್ಮ ಶಿಷ್ಯರೊಡನೆ ಜಗನ್ಮಾತೆಯಾದ ಕಾಳಿಯ ವಿಚಾರವನ್ನೆ ಪ್ರಸ್ತಾಪಿಸುತ್ತಿದ್ದರು. ರುದ್ರಪೂಜೆಯ ವಿಚಾರವಾಗಿ ಒಂದು ದಿನ ಮಾತಾಡುತ್ತ ‘ರುಂಡಮಾಲಾಮಂಡಿತಳಾದ ದುರ್ಗೆಯನ್ನು ನೋಡಲಾರದ ಅಂಜುಕುಳಿಗಳು ಆಕೆಯ ಕೊರಳಿಗೆ ಹೂಮಾಲೆಯನ್ನು ಹಾಕಿ ಆಕೆಯನ್ನು ಕರುಣಾಮಯಿ ಎಂದು ಕರೆಯುವರು; ಮೃತ್ಯುಪೂಜೆಯಿಲ್ಲದೆ ಅಮೃತತ್ವವು ಲಭಿಸದು’ ಎಂದು ಹೇಳಿದರು. ಇನ್ನೊಂದು ದಿನ ಶ್ರೀನಗರದ ಸಮೀಪದಲ್ಲಿ ಒಂದು ಪಾಳುಬಿದ್ದ ಕಾಳಿಕಾದೇವಾಲಯವನ್ನು ಪ್ರವೇಶ ಮಾಡಿ, ಗುಡಿಯ ದುರವಸ್ಥೆಯನ್ನು ನೋಡಿ ಬಹಳ ಮರುಗುತ್ತಿರಲು “ನೀನು ನನ್ನನ್ನು ಕಾಪಾಡುವಿಯೊ? ನಾನು ನಿನ್ನನ್ನು ಕಾಪಾಡುವೆನೊ?” ಎಂದು ತಾಯಿ ಹೇಳಿದಂತಾಯಿತು. ಅದನ್ನು ಕೇಳಿ ಅವರು ಗರ್ವಭಂಗವಾದ ಬಾಲಕನಂತಾಗಿ “ಹಾಗಾದರೆ ಇನ್ನು ದೇಶಾಭಿಮಾನವೆನಗಿಲ್ಲ. ನಾನೊಂದು ಶಿಶು ಮಾತ್ರ; ಎಲ್ಲ ಮಾತೆಯ ಕೆಲಸ” ಎಂದುಕೊಂಡರು.

ಕಾಶ್ಮೀರದ ಯಾತ್ರೆ ಪೂರೈಸಿತು. ಸ್ವಾಮಿಜಿ ಪ್ರಕೃತಿಯ ರಮ್ಯ ಲೀಲಾನಿಕೇತನವನ್ನು ಹಿಂದಿಕ್ಕಿ ಲಾಹೋರಿಗೆ ಬಂದು, ಅಲ್ಲಿಂದ ಅಕ್ಟೋಬರ್ ತಿಂಗಳ ಉತ್ತರಭಾಗದಲ್ಲಿ ಬೇಲೂರು ಮಠಕ್ಕೆ ತೆರಳಿದರು. ಪುನಃ ಕೆಲಸಕ್ಕೆ ತೊಡಗಿದರು. ಸೋದರಿ ನಿವೇದಿತೆಯಿಂದ ಸ್ಥಾಪಿತವಾದ ಸ್ತ್ರೀವಿದ್ಯಾಶಾಲೆಯನ್ನು ತೆರೆಯುವ ಸಮಾರಂಭವನ್ನು ಮಾಡಿದರು. “ಉದ್ಭೋಧನ” ಎಂಬ ವಂಗ ಮಾಸಪತ್ರಿಕೆಯನ್ನು ಹೊರಡಿಸಿದರು. ಪೂರ್ವ ವಂಗದೇಶದಲ್ಲಿ ವೇದಾಂತ ಪ್ರಚಾರ ಮಾಡಲು ಇಬ್ಬರು ಶಿಷ್ಯರನ್ನು ಕಳುಹಿಸಿದರು. ಇನ್ನಿಬ್ಬರು ಗುರುಭ್ರಾತೃಗಳನ್ನು ಗುಜರಾತಿನ ಕೆಲಸಕ್ಕೆ ಕಳುಹಿಸಿದರು. ಒಬ್ಬರನ್ನು ಸಿಂಹಳಕ್ಕೆ ಸಾಗಿಸಿದರು.

* * *