ಸ್ವಾಮಿಗಳ ಜೀವನೋದ್ದೇಶ ಒಂದು ಆಕಾರಕ್ಕೆ ಬಂದಿತು. ಶ್ರೀರಾಮಕೃಷ್ಣ ಮಹಾಸಂಘವನ್ನು ಸುವ್ಯವಸ್ಥೆಗೆ ತಂದರು. ಶಿಷ್ಯರಿಗೆ ತಮ್ಮ ಅಭಿಪ್ರಾಯಗಳನ್ನೆಲ್ಲ ಬೋಧಿಸಿ ಅವರನ್ನು ಕಾರ್ಯೋನ್ಮುಖರನ್ನಾಗಿ ಮಾಡಿದರು. ದೇಶದ ನಾನಾ ಭಾಗಗಳಲ್ಲಿ ಮಠ, ಆಶ್ರಮ, ಸೇವಾಶ್ರಮಗಳು ಸ್ಥಾಪಿತವಾದುವು. ಆದರೆ ಅವಿಶ್ರಾಂತ ಶ್ರಮದಿಂದ ಅವರ ವಜ್ರಕಾಯವೂ ಕೂಡ ಶಿಥಿಲವಾಗತೊಡಗಿತು. ವೈದ್ಯರು ಎಚ್ಚರಿಕೆಯಿಂದಿರುವಂತೆ ಹೇಳಿದರು.

ಆದರೂ ಅಮೆರಿಕಾದಿಂದ ಕಾಗದಗಳು ಬರತೊಡಗಿದುದರಿಂದ ಸ್ವಾಮಿಗಳು ಅಲ್ಲಿಯ ಕಾರ್ಯಸಂಸ್ಥಾಪನೆ ಮತ್ತು ಸುವ್ಯವಸ್ಥೆಗಳಿಗಾಗಿ ಪುನಃ ಪಶ್ಚಿಮ ದೇಶಗಳಿಗೆ ಹೋಗಬೇಕಾಯಿತು.

೧೮೯೯ನೆಯ ವರ್ಷದ ಜೂನ್ ೨೦ನೆಯ ದಿನ ಸ್ವಾಮಿ ತುರಿಯಾನಂದ, ಸೋದರಿ ನಿವೇದಿತೆಯರೊಡಗೂಡಿ ಇಂಗ್ಲೆಂಡಿಗೆ ಹೊರಟರು. ಜುಲೈ ೩೧ನೇ ತಾರೀಖಿನ ದಿನ ಲಂಡನ್ ನಗರವನ್ನು ಸೇರಿದರು. ಅಲ್ಲಿ ಕೆಲವು ದಿನಗಳಿದ್ದು ವಿಶ್ರಮಿಸಿಕೊಂಡು, ತರುವಾಯ ಅಟ್ಲಾಂಟಿಕ್ ಮಹಾಸಾಗರವನ್ನು ದಾಟಿದರು.

ದಾರಿಯಲ್ಲಿ ಸಮುದ್ರದ ಮೇಲೆ ನಡೆದ ಒಂದೆರಡು ಸಂಗತಿಗಳು ಸ್ವಾಮಿಗಳ ಸೌಂದರ್ಯೋಪಾಸನೆಯನ್ನು ಸೂಚಿಸುತ್ತವೆ. ಒಂದು ದಿನ ಸಮುದ್ರ ನಿಸ್ತರಂಗವಾಗಿತ್ತು. ಮನೋಹರ ಚಂದ್ರಕರೋಜ್ವಲ ರಜನಿಯಲ್ಲಿ ಗುರುದೇವನು ಹಡಗಿನ ವೇದಿಕೆಯ ಮೇಲೆ ಅತ್ತಿತ್ತ ಅಡ್ಡಾಡುತ್ತ ಶಿಷ್ಯರನ್ನು ಬಳಿಗೆ ಕರೆದು ಅವರಿಗೆ ಸೌಂದರ್ಯತತ್ತ್ವದ ವಿಷಯವನ್ನು ತಿಳಿಸಿದನು. ಹಾಗೆಯೆ ಶುಭ್ರ ಜ್ಯೋತ್ಸ್ನಾ ಸುಧೌತ ಸುನೀಲ ನೀರವ ಗಗನ ಸಾಗರಗಳನ್ನು ಬಹಳಹೊತ್ತು ನಿಟ್ಟಿಸಿ “ಮಾಯೆಯ ರಾಜ್ಯದಲ್ಲಿರುವ ಆ ದೃಶ್ಯಾವಳಿಗಳೆ ಇನಿತು ಸುಂದರವಾಗಿರುವಾಗ, ಮಾಯೆಯ ಹಿಂದಿರುವ ಆ ಸತ್ಯಸ್ವರೂಪ ಇನ್ನೆಷ್ಟು ಸುಂದರತರವಾಗಿರಬೇಕು!” ಎಂದರು.

ಇನ್ನೊಂದು ದಿನ, ಆಗ ತಾನೆ ಸಂಜೆಯಾಗಿದೆ. ಪಡುವಣ ಬಾನಿನ ಬೈಗುಗೆಂಪು ಮಾಸಿಹೋಗಿದೆ. ಚೆಲ್ವಿನ ತಿಂಗಳ ಬೆಳಕು ಸುತ್ತಲೂ ಹೆಚ್ಚುತ್ತಿದೆ. ಸ್ವಾಮಿಗಳು ನೀರವವಾಗಿ ನಿಂತಿದ್ದಾರೆ. ಎತ್ತ ನೋಡಿದರೂ ಅಪೂರ್ವ ಸೌಂದರ್ಯಮಯಿಯಾದ ರಜನಿಯ ರೂಪರಾಶಿ ಬೆಳಗುತ್ತಿದೆ. ಮೇಲೆ ನಿರ್ಮಲ ನೀಲಗಗನದಲ್ಲಿ ಸ್ವರ್ಣ ವರ್ಣ ಪೂರ್ಣಚಂದ್ರನು ತನ್ನ ಮನೋಹರ ಮಂದಹಾಸವನ್ನು ಚೆಲ್ಲುತ್ತಿದ್ದಾನೆ. ಸ್ವಾಮಿಗಳು ಒಳಗೆ ಕವನಗಳನ್ನು ಪಠಿಸುತ್ತಿದ್ದ ಶಿಷ್ಯರನ್ನು ಕೂಗಿ ಕರೆದು “ಕವಿತೆಯ ಸಾರವೇ ಸಮ್ಮುಖದಲ್ಲಿ ಚೆಲ್ಲಿ ಸೂಸುತ್ತಿರಲು ಒಳಗೆ ಕುಳಿತು ಕವಿತೆ ಯೋದುವುದರಿಂದ ಪ್ರಯೋಜನವೇನು?” ಎಂದು ಗಗನ ಜಲಧಿಗಳ ಅನಂತ ವಿಸ್ತಾರವನ್ನು ನಿರ್ದೇಶಿಸಿ ಕೈ ಬೀಸಿದರು.

ನ್ಯೂಯಾರ್ಕಿಗೆ ಹೋದ ದಿನವೇ ಮಧ್ಯಾಹ್ನ ಸ್ವಾಮಿಗಳು ಲೆಗೆಟ್ ದಂಪತಿಗಳೊಡನೆ ಅಲ್ಲಿಗೆ ನೂರೈವತ್ತು ಮೈಲಿ ದೂರದಲ್ಲಿರುವ ಅವರ ಹಳ್ಳಿಯ ಮನೆಗೆ ಹೋದರು. ಏಕೆಂದರೆ ಗುರುವರ್ಯರ ದೈಹಿಕ ಸ್ಥಿತಿಯನ್ನು ನೋಡಿ ಲೆಗೆಟ್ ದಂಪತಿಗಳು ಅವರನ್ನು ಪ್ರಚಾರಕಾರ್ಯಕ್ಕೆ ಕೈಹಾಕಗೊಡಲಿಲ್ಲ. ಅಷ್ಟೇ ಅಲ್ಲದೆ ಒಳ್ಳೆಯ ವೈದ್ಯರನ್ನು ಕರೆತಂದು ಸ್ವಾಮಿಗಳಿಗೆ ಚಿಕಿತ್ಸೆ ಮಾಡಿಸತೊಡಗಿದರು. ಇತ್ತಲಾಗಿ ಪ್ರಚಾರಕಾರ್ಯಕ್ಕಾಗಿ ನ್ಯೂಯಾರ್ಕಿನಿಂದ ಹೊರಟುಹೋಗಿದ್ದ ಸ್ವಾಮಿ ಅಭೇದಾನಂದರು ನಾಯಕನ ಆಗಮನವಾರ್ತೆಯನ್ನು ಕೇಳಿ ಹಿಂತಿರುಗಿ ಬಂದು ಸ್ವಾಮಿಜಿಯನ್ನು ಕಂಡರು. ಅವರಿಂದ ವೇದಾಂತ ಪ್ರಚಾರಕಾರ್ಯ ಸುಸೂತ್ರವಾಗಿ ನಡೆದಿರುವುದನ್ನು ಕೇಳಿ ಸ್ವಾಮಿಜಿ ಬಹಳ ಹರ್ಷಿತರಾದರು. ಕೆಲವು ದಿನಗಳಲ್ಲಿಯೆ ನ್ಯೂಯಾರ್ಕ್ ಪಟ್ಟಣದಲ್ಲಿ ವೇದಾಂತ ಸಂಘಕ್ಕೆ ಬೇಕಾದ ಮಹಾಸೌಧವೊಂದು ನಿರ್ಮಿತವಾಯಿತು. ಸ್ವಾಮಿ ಅಭೇದಾನಂದರೆ ಅದರ ಸಮಾರಂಭ ಮಹೋತ್ಸವವನ್ನು ಜರುಗಿಸಿದರು. ಸ್ವಾಮಿ ತುರೀಯಾನಂದರೂ ಅಭೇದಾನಂದರೊಡನೆ ಸೇರಿ ಪ್ರಚಾರ ಕಾರ್ಯಕ್ಕೆ ಕೈಹಾಕಿದರು. ನಗರಕ್ಕೆ ಅನತಿದೂರದಲ್ಲಿರುವ ಮೌಂಟ್ ಕ್ಲೇರ್ ಎಂಬ ಸ್ಥಳದಲ್ಲಿ ದಿನವೂ ಅವರು ಧರ್ಮೋಪದೇಶ ಮಾಡತೊಡಗಿದರು. ಅಲ್ಲದೆ ಅಲ್ಲಿಯ ಯೂನಿವರ್ಸಿಟಿಯಲ್ಲಿ ಶಂಕರಾಚಾರ್ಯರ ಮೇಲೆ ಒಂದು ಲೇಖನವನ್ನೂ ಬರೆದು ಓದಿದರು.

ನವೆಂಬರ್ ತಿಂಗಳು ೧೮ನೆಯ ಮಂಗಳವಾರ ಸ್ವಾಮಿಜಿ ಮರಳಿ ಕಾರ್ಯಕ್ಕಾರಂಭಿಸಿದರು. ಆ ದಿನ ನ್ಯೂಯಾರ್ಕ್ ನಗರದ ಮಹಾಜನರು ಅವರಿಗೆ ಬಹು ವಿಜೃಂಭಣೆಯಿಂದ ಸ್ವಾಗತವಿತ್ತರು. ಅಲ್ಲಿ ಅನೇಕ ಜನರು ನೆರೆದಿದ್ದರು. ಸ್ವಾಮಿಗಳು ರಸಪೂರ್ಣವಾದ ಭಾಷಣವೊಂದನ್ನು ಮಾಡಿ ಎಲ್ಲರನ್ನೂ ವೇದಾಂತ ಪ್ರಚಾರಕ್ಕೆ ನೆರವಾಗುವಂತೆ ಕೇಳಿಕೊಂಡರು. ನ್ಯೂಯಾರ್ಕಿನಲ್ಲಿ ಎರಡು ವಾರಗಳನ್ನು ಕಳೆದು ಅಲ್ಲಿಂದ ಕ್ಯಾಲಿಫೋರ್ನಿಯಾಕ್ಕೆ ಹೋದರು.

ವಿವೇಕಾನಂದರು ಎರಡನೆಯ ಸಾರಿ ಪಾಶ್ಚಾತ್ಯ ದೇಶಗಳಿಗೆ ಹೋದಾಗ ಮೊದಲನೆಯ ಸಾರಿ ಮರುಳಾಗಿದ್ದಂತೆ ಅವರ ನಾಗರಿಕತೆಯ ಬಾಹ್ಯ ಥಾಳಥಳ್ಯಕ್ಕೆ ಮಾರುಹೋಗಲಿಲ್ಲ. ಅವರ ದೃಷ್ಟಿ ಅದರ ಅಂತರಾಳವನ್ನು ಪ್ರವೇಶಿಸಿ ಅಲ್ಲಿದ್ದ ಅಶಾಂತಿ, ಕ್ರೌರ್ಯ, ಕಾರ್ಪಣ್ಯ, ಗರ್ವ, ರಕ್ತತೃಷ್ಣೆ ಇತ್ಯಾದಿಗಳನ್ನು ಕಂಡುಹಿಡಿಯಿತು. ಅನವಕುಂಠಿತಳಾದ ಪಾಶ್ಚಾತ್ಯ ಸಾಮ್ರಾಜ್ಯತಾ ಶಾಕಿನಿಯ ನೆತ್ತರು ಬಸಿಯುವ ಮುಖನಖಗಳನ್ನು ಕಂಡು ನಿಡುಸುಯ್ದರು.

ಭರತಖಂಡಕ್ಕೆ ಹಿಂತಿರುಗಿ ಬಂದ ಮೇಲೆ ಮಿತ್ರರೊಡನೆ “ತೋಳಗಳ ಮುಂದೆಯಾದರೂ ಅವರ ಮಧ್ಯೆ ಎಂತಹ ಸೌಂದರ್ಯವಿತ್ತು” ಎಂದೂ “ಪಾಶ್ಚಾತ್ಯ ಜೀವನ ನರಕಸದೃಶವಾಗಿ ಕಂಡುಬಂದಿತು” ಎಂದೂ ವಿವೇಕಾನಂದರು ಹೇಳಬೇಕಾಯಿತು.

ಜಡಸಂಪತ್ತಿನ ತಳುಕು ಅವರನ್ನು ಮೋಸಗೊಳಿಸಲಿಲ್ಲ. ಪಾಶ್ಚಾತ್ಯ ನಾಗರಿಕತೆಯ ಐಶ್ವರ್ಯಶಕ್ತಿ ಪ್ರದರ್ಶನದ ಹಿಂದುಗಡೆ ಅವಿತುಕೊಂಡಿರುವ ಭಯಂಕರಾಯಾಸ ಆತ್ಮನಾಶಕವಾಗಿ ತೋರಿತು. ನಗೆಯ ಪರದೆಯ ಹಿಂಗಡೆ ಅಳುಗೋಳು ಮನೆ ಮಾಡಿತ್ತು.‌

“ಪಾಶ್ಚಾತ್ಯರ ಜೀವನ ಮೇಲುಗಡೆ ಅಟ್ಟಹಾಸದಂತಿದ್ದರೂ ಒಳಗಡೆ ಗೋಳಿದೆ; ಅದು ಗೋಳಿನಲ್ಲಿಯೆ ಕೊನೆಗಾಣುತ್ತದೆ. ನಗೆ ನಲಿದಾಟಗಳೆಲ್ಲವೂ ಮೇಲೆಮೇಲೆ. ನಿಜವಾಗಿಯೂ ಅದರೊಳಗೆ ರುದ್ರದುಃಖದ ಬಾವು ಕೀವಾಗಿ ಸಿಡಿಯುತ್ತದೆ… ಇಲ್ಲಿ (ಇಂಡಿಯಾದಲ್ಲಿ) ಬಾಳು ಮೇಲೆಮೇಲೆ ನೋಡುವುದಕ್ಕೆ ವಿಷಣ್ಣವಾಗಿದ್ದರೂ ಅಂತರಂಗದಲ್ಲಿ ಪ್ರಸನ್ನವಾಗಿದೆ” ಎಂದು ಸೋದರಿ ನಿವೇದಿತಾಗೆ ಹೇಳಿದರಂತೆ.

ಅಲ್ಲದೆ ಯೂರೋಪಿನಲ್ಲಿ ೧೯೧೪ನೆಯ ಮಹಾಯುದ್ಧವಾಗುವುದಕ್ಕೆ ಹದಿನೆಂಟು ಸಂವತ್ಸರಗಳಿಗೆ ಮೊದಲು ಮಿತ್ರರಿಗೆ ಬರೆದಿದ್ದ ಕಾಗದಗಳಲ್ಲಿ “ಅಖಿಲ ಯೂರೋಪು ಖಂಡವೂ ಒಂದು ಜ್ವಾಲಾಮುಖಿಯ ಮೇಲೆ ಕುಳಿತಂತಿದೆ. ಧರ್ಮಧಾರಾಪ್ರವಾಹದಿಂದ ಆ ಬೆಂಕಿಯನ್ನು ಆರಿಸದಿದ್ದರೆ ಅದು ಆಸ್ಫೋಟಿಸದಿರುವುದಿಲ್ಲ… ಮತ್ತೊಂದು ನವಯುಗವನ್ನು ತರುವ, ಮುಂದೆ ಬರಲಿರುವ ಮಹಾವಿಪ್ಲವ ರಷ್ಯಾ ಅಥವಾ ಚೀನಾ ದೇಶಗಳಿಂದ ಉಕ್ಕುತ್ತದೆ. ಯಾವ ದೇಶದಿಂದ ಎಂದು ಸರಿಯಾಗಿ ಹೇಳಲಾರೆ. ಅಂತೂ ಅವೆರಡೂ ದೇಶಗಳಲ್ಲಿ ಯಾವುದಾದರೊಂದರಿಂದ ಮೊದಲಾಗುತ್ತದೆ… ಜಗತ್ತು ಈಗ ಮೂರನೆಯ ಘಟ್ಟದಲ್ಲಿದೆ. ಬ್ರಾಹ್ಮಶಕ್ತಿ ಕ್ಷಾತ್ರಶಕ್ತಿಗಳ ಆಳ್ವಿಕೆ ಪೂರೈಸಿ ಈಗ ವೈಶ್ಯ ಶಕ್ತಿ (ವ್ಯಾಪಾರಿಗಳು) ಆಳುತ್ತಿದೆ. ನಾಲ್ಕನೆಯ ಘಟ್ಟ ಶೂದ್ರಶಕ್ತಿಯದಾಗುತ್ತದೆ (ಎಂದರೆ ಕೆಲಸಗಾರರು, ಬೇಸಾಯಗಾರರು, ಸಾಮಾನ್ಯರು ಆಳುತ್ತಾರೆ. ಸಾಮ್ಯವಾದ ಪ್ರಚಾರವಾಗುತ್ತದೆ)” ಎಂದು ಮೊದಲಾಗಿ ಭವಿಷ್ಯ ಹೇಳಿದ್ದಾರೆ.

ವಿವೇಕಾನಂದರು ಕ್ಯಾಲಿಫೋರ್ನಿಯಾದಿಂದ ಬರೆದ ಕಾಗದಗಳಲ್ಲಿ ವೀರ ಯೋಧನ ಶರೀರಕ್ಲಾಂತಿಯೂ, ಆತ್ಮಶಾಂತಿ ಮತ್ತು ವಿಶ್ರಾಂತಿಗಳಿಗಾಗಿ ಅಸೀಮಾಕಾಂಕ್ಷೆಯೂ ಎದ್ದು ಕಾಣುತ್ತದೆ.‌

“ನನಗಾಗಿ ಪ್ರಾರ್ಥಿಸು, ನನ್ನ ಕರ್ಮವೆಲ್ಲ ಸವೆದುಹೋಗಲಿ ಎಂದು, ನನ್ನಾತ್ಮ ಸಂಪೂರ್ಣವಾಗಿ ಜಗಜ್ಜನನಿಯಲ್ಲಿ ಲೀನವಾಗಲಿ ಎಂದು… ಕ್ಷೇಮವಾಗಿದ್ದೇನೆ. ಚೆನ್ನಾಗಿ ಕ್ಷೇಮವಾಗಿದ್ದೇನೆ ಮನಸ್ಸಿನಲ್ಲಿ. ದೇಹದ ವಿಶ್ರಾಂತಿಗಿಂತಲೂ ಆತ್ಮದ ಶಾಂತಿಯನ್ನು ಹೆಚ್ಚಾಗಿ ಅನುಭವಿಸುತ್ತಿದ್ದೇನೆ. ರಣಗಳಲ್ಲೇನು? ಗೆಲ್ಲುತ್ತೇವೆ ಸೋಲುತ್ತೇವೆ! ನಾನು ಗಂಟುಮೂಟೆ ಕಟ್ಟಿಕೊಂಡು ಹೊರಡಲು ಸಿದ್ಧನಾಗಿ ಕಾಯುತ್ತಿದ್ದೇನೆ, ಮುಕ್ತಿದಾಯಕನಿಗಾಗಿ. ಶಿವಾ, ಓ ಶಿವಾ, ದೋಣಿಯನ್ನು ಆಚೆಯ ದಡಕ್ಕೆ ಸಾಗಿಸು… ನಾನೇನು ಬರಿ ಹಸುಳೆ! ಗಂಗಾತೀರದಲ್ಲಿ ದಕ್ಷಿಣೇಶ್ವರದಲ್ಲಿ ವಟತರು ತಲಚ್ಛಾಯೆಯಲ್ಲಿ ಶ್ರೀರಾಮಕೃಷ್ಣರ ಅಮೃತವಾಣಿಯನ್ನು ಮುಗ್ಧನಾಗಿ ಆಲಿಸುತ್ತಿದ್ದ ಅದೇ ಹುಡುಗನಾಗಿದ್ದೇನೆ ನಾನಿನ್ನೂ. ಅದೇ ನನ್ನ ನಿಜವಾದ ಸ್ವಭಾವ. ಅದೇ ನನ್ನ ನಿಜವಾದ ಸ್ಥಾನ. ಉಪನ್ಯಾಸಗಳೂ ಉಪದೇಶಗಳೂ ಕೆಲಸಗಳೂ ಪರೋಪಕಾರಗಳೂ ಸತ್ಕಾರ್ಯಗಳೂ ಎಲ್ಲವೂ ಬರಿಯ ಮೌಢ್ಯಗಳು… ಮತ್ತೆ ಕೇಳುತ್ತಿದ್ದೇನೆ ಆತನ ದಿವ್ಯವಾಣಿಯನ್ನು. ಬಂಧನಗಳೆಲ್ಲ ಕಳಚಿಬೀಳುತ್ತಿವೆ. ಒಲುಮೆ ಸಾಯುತ್ತಿದೆ. ಕೆಲಸ ರುಚಿಗೆಡುತ್ತಿದೆ. ಬಾಳಿನ ಮನಮೋಹಕ ಕಾಂತಿ ತೊಲಗುತ್ತಿದೆ. ಗುರುದೇವನ ವಾಣಿ ಕರೆಯುವುದು ಮಾತ್ರ ಕೇಳಿಸುತ್ತಿದೆ… ಸತ್ತವರು ಸತ್ತವರನ್ನು ಹೂಳಲಿ. ನೀನೆನ್ನ ಹಿಂಬಾಲಿಸು… ಬಂದೆ. ಓ ನನ್ನ ಪ್ರಿಯ ಮಧುರ ಪ್ರಾಣೇಶ, ಇದೋ ಬಂದೆ. ನನ್ನ ಮುಂದೆ ನಿರ್ವಾಣವಿದೆ… ಅದೇ ಶಾಂತಿ ಸಮುದ್ರ, ನಿಸ್ತರಂಗ, ನಿಸ್ಪಂದ… ಹುಟ್ಟಿ ಬಂದೆ, ಸಂತೋಷ. ಕಷ್ಟಪಟ್ಟೆ, ಸಂತೋಷ. ಎಡವಿ ಬಿದ್ದು ತಪ್ಪುಗೈದೆ, ಸಂತೋಷ ಶಾಂತಿ ಪ್ರವೇಶ ಮಾಡುತ್ತೇನೆ, ಸಂತೋಷ. ಮಹಾಸಂತೋಷ. ನಾನು ಯಾರನ್ನೂ ಬಂಧನದಲ್ಲಿಟ್ಟು ಹೋಗುವುದಿಲ್ಲ. ಯಾವ ಬಂಧನಗಳನ್ನೂ ಹೊತ್ತುಕೊಂಡು ಹೋಗುವುದಿಲ್ಲ… ಕೈಕಾಲು ಆಡಿಸಲೂ ಹೆದರಿಕೆಯಾಗುತ್ತದೆ. ಎಲ್ಲಿ ಆ ನಿಶ್ಚಲವಾದ ಅದ್ಭುತಶಾಂತಿಗೆ ಭಂಗ ಬರುತ್ತದೆಯೋ ಎಂದು. ಎಷ್ಟು ನಿಶ್ಚಲ ನೀರವವಾಗಿದೆ ಎಂದರೆ ಈ ಸರಶ್ಶಾಂತಿ, ಅದು ಮಾಯೆಯೆಂಬುದು ಚೆನ್ನಾಗಿ ಮನಸ್ಸಿಗೆ ಬರುತ್ತದೆ!… ನನ್ನ ಕೆಲಸದ ಹಿಂದೆ ಕೀರ್ತಿಯಾಸೆಯಿತ್ತು. ನನ್ನ ಪ್ರೀತಿಯ ಹಿಂದೆ ಅಹಂಭಾವವಿತ್ತು. ನನ್ನ ನೀತಿಯ ಹಿಂದೆ ಭೀತಿಯಿತ್ತು. ನನ್ನ ಚಲನೆಯ ಹಿಂದೆ ದರ್ಪಮೋಹವಿತ್ತು. ಈಗ ಅವೆಲ್ಲವೂ ಮಾಯವಾಗುತ್ತಿವೆ; ನಾನು ಸುಮ್ಮನೆ ತೇಲುತ್ತಿದ್ದೇನೆ… ಬಂದೆ ತಾಯೀ, ಬಂದೆ, ನಿನ್ನ ಬೆಚ್ಚನೆಯೆದೆಗೆ, ತೇಲುತ್ತೇನೆ ನೀನು ತೇಲಿಸಿದ್ದಲ್ಲಿಗೆ – ನೇರವಾದ ಅಪೂರ್ವವಾದ ಅನಿರ್ವಚನೀಯವಾದ ಸೀಮೆಗೆ ಬರುತ್ತೇನೆ, ನೋಟಗಾರನಾಗಿ, ಆಟಗಾರನಾಗಿ ಅಲ್ಲ. ಓ ಬರುತ್ತೇನೆ, ಕರೆದುಕೊ! ಎಂತಹ ಶಾಂತಿ! ನನ್ನ ಆಲೋಚನೆಗಳೆಲ್ಲ ನನ್ನ ಹೃದಯದ ಬಹುದೂರದ ಅಂತರಾಳದಿಂದ ಬರುವಂತೆ ತೋರುತ್ತಿವೆ. ಬಹುದೂರದ ನಸು ದನಿಯ ಪಿಸುಮಾತುಗಳಂತಿವೆ. ಶಾಂತಿ, ಸುಂದರ ಶಾಂತಿ, ಸರ್ವವ್ಯಾಪಿಯಾಗಿದೆ… ಬಂದೆ, ಗುರುದೇವ! ಜಗತ್ತು ಇದೆ; ಸುರೂಪವಾಗಿಯೂ ಅಲ್ಲ, ಕುರೂಪವಾಗಿಯೂ ಅಲ್ಲ. ಯಾವ ಭಾವವನ್ನೂ ಉದ್ರೇಕಿಸದೆ ನಿರ್ಭಾವವಾಗಿ ತಟಸ್ಥವಾಗಿದೆ. ಎಂತಹ ಧನ್ಯ ಶಾಂತಿಯಿದು! ಪ್ರತಿಯೊಂದೂ ಮಂಗಲವಾಗಿದೆ, ಸುಂದರವಾಗಿದೆ; ಏಕೆಂದರೆ ಮಾಯಾವಿಹೀನವಾಗಿದೆ, ನನ್ನ ಶರೀರವೂ ಸೇರಿ. ಓಂ ತತ್ ಸತ್!”

ಬತ್ತಳಿಕೆಯಿಂದ ಹೊರಬಿದ್ದು, ಕಿವಿಯವರೆಗೆ ಸೆಳೆದಿದ್ದ ಬಿಲ್ಲಿನ ಹೆದೆಯಿಂದ ಚಿಮ್ಮಿದ ಬಾಣವಿನ್ನೂ ಚಲಿಸುತ್ತಿತ್ತು. ಆದರೆ ಬಲಗುಂದಿದ ಅದರ ಚಲನೆ ಪಯಣದ ತುದಿಯನ್ನು ಸೂಚಿಸುತ್ತಿತ್ತು. ಗಾಳಿಯಲ್ಲಿ ತೂರಾಡಿ ತೇಲುತ್ತಿತ್ತು. ಹೆದೆಯಿಂದಲೂ ಪಾರಾಗಿ ಗುರಿಯನ್ನೂ ಲಕ್ಷಿಸದೆ.

ಕ್ಯಾಲಿಫೋರ್ನಿಯಾದಿಂದ ಸ್ವಾಮಿಗಳು ಲಾಸ್ ಎಂಜಲಿಸ್ ಎಂಬಲ್ಲಿಗೆ ಹೋಗಿ ಅಲ್ಲಿ ರೆವರೆಂಡ್ ಡಾಕ್ಟರ್ ಬೆಂಜಮಿನ್ ಫೇ ಮಿಲ್ಸ್ ಎಂಬ ಮಹಾ ವಿದ್ವಾಂಸನ ಅತಿಥಿಗಳಾಗಿ ನಿಂತರು. ಅಲ್ಲಿಯ ಚರ್ಚಿನಲ್ಲಿ ಸ್ವಾಮಿಗಳು ‘ಹಿಂದೂ ಧರ್ಮದಲ್ಲಿ ಮುಕ್ತಿಮಾರ್ಗ’ ಎಂಬ ಉಪನ್ಯಾಸವನ್ನು ಕೊಟ್ಟಾಗ ರೆವರೆಂಡ್ ಡಾಕ್ಟರ್ ಫೇ ಮಿಲ್ಸ್‌ರವರು ಅವರನ್ನು ನಿರ್ದೇಶಿಸಿ “A man of gigantic intellect, indeed, one to whom our greatest University Professors were as mere children” ಎಂದು ಮಾತಾಡಿದರು.

ಅಂತೂ ಸ್ವಾಮಿಗಳು ಅಮೆರಿಕಾ ಖಂಡದಲ್ಲೆಲ್ಲಾ ಸಂಚರಿಸಿ ಪುನಃ ನ್ಯೂಯಾರ್ಕ್ ನಗರಕ್ಕೆ ಬಂದರು. ಇಷ್ಟರಲ್ಲಿ ಪ್ಯಾರಿಸ್‌ನಲ್ಲಿ ಸರ್ವಧರ್ಮ ಸಮ್ಮೇಳನವೊಂದು ಸೇರುವುದೆಂದು ಸುದ್ದಿ ಹಬ್ಬಿತು. ಆದ್ದರಿಂದ ಪುನಃ ಅಟ್ಲಾಂಟಿಕ್ ಸಾಗರವನ್ನು ಹಾದು ಫ್ರಾನ್ಸ್ ದೇಶಕ್ಕೆ ಬಂದರು. ಆದರೆ ಸರ್ವಧರ್ಮ ಸಮ್ಮೇಳನವು ಧರ್ಮ ಚರಿತ ಸಭೆಯಾಗಿ ಮಾರ್ಪಾಡಾಯಿತು. ಕಾರಣವೇನೆಂದರೆ, ಕೆಲವು ಜನ ರೋಮನ್ ಕ್ಯಾಥೊಲಿಕ್ ಪಾದ್ರಿಗಳು ಚಿಕಾಗೋ ಧರ್ಮಸಭೆಯಲ್ಲಿ ತಮಗಾದ ಅಪಜಯವನ್ನು ಕಂಡು ಹೆದರಿ, ಪುನಃ ಪ್ಯಾರಿಸ್ಸಿನಲ್ಲಿ ಅಂತಹ ಇನ್ನೊಂದು ಅಪಜಯವನ್ನು ಪಡೆಯಲು ಇಷ್ಟಪಡಲಿಲ್ಲವಂತೆ! ಸ್ವಾಮಿಗಳು ಧರ್ಮಚರಿತ ಸಭೆಗೂ ಹೋಗಿ ಎರಡು ಉಪನ್ಯಾಸವನ್ನು ಕೊಟ್ಟು, ಯೂರೋಪು ಖಂಡದಲ್ಲೆಲ್ಲಾ ಸಂಚರಿಸಿ, ಭರತಖಂಡಕ್ಕೆ ಪತ್ತೆಯಿಲ್ಲದೆ ಹಿಂತಿರುಗಿದರು.

ಕ್ರಿಸ್ತಾಬ್ದ ೧೯೦೦ನೆಯ ವರ್ಷದ ಡಿಸೆಂಬರ್ ೯ನೆಯ ತಾರೀಖಿನ ದಿನ ಬೇಲೂರು ಮಠದ ಸಂನ್ಯಾಸಿಗಳು ರಾತ್ರಿಯ ಭೋಜನಕ್ಕೆ ಕುಳಿತಿದ್ದರು. ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿಯೊಬ್ಬನು ಓಡಿಬಂದು “ಯಾರೋ ಒಬ್ಬರು ಸಾಹೇಬರು ಬಂದಿದ್ದಾರೆ” ಎಂದನು. ಅಷ್ಟೊಂದು ರಾತ್ರಿಯಲ್ಲಿ ಮಠಕ್ಕೆ ಬಂದ ಸಾಹೇಬರು ಯಾರಿರಬಹುದೆಂದು ಕುತೂಹಲಪಟ್ಟು ಸಂನ್ಯಾಸಿಗಳು ಬೇಗ ಬೇಗ ಊಟ ಮಾಡಿಕೊಂಡು ಹೊರಗೆ ಬಂದರು. ನೋಡಲಾಗಿ “ಸ್ವಾಮಿಜಿ! ಸ್ವಾಮಿಜಿ! ಸ್ವಾಮಿಜಿ ಬಂದಿದ್ದಾರೆ!” ಎಂಬ ಸದ್ದು ಮಠವನ್ನು ತುಂಬಿತು. ಎಲ್ಲರಿಗೂ ಆನಂದವೇ ಆನಂದ!

ಸ್ವಾಮಿಗಳು ನಗುತ್ತ “ನನಗೆ ದೂರದಿಂದಲೆ ಊಟದ ಗಂಟೆ ಕೇಳಿಸಿತು. ಹೊತ್ತಾದರೆ ಎಲ್ಲಿ ಕೂಳು ಸೊನ್ನೆಯಾಗಿಬಿಡುವುದೊ ಎಂದು ಹೆದರಿ ಗೇಟನ್ನು ಹತ್ತಿ ಹಾರಿ ಓಡಿ ಓಡಿ ಬಂದೆ!” ಎಂದರು.

ಒಡನೆಯೆ ಶಿಷ್ಯರು ಎಲೆ ಹಾಕಿ ಕಿಚಡಿಯನ್ನು ಬಡಿಸಿದರು. ಸ್ವಾಮಿಗಳು ಸಾವಧಾನವಾಗಿ ನಾನಾ ಕಥೋಪಕಥನಗಳನ್ನು ಮಾಡುತ್ತ ಉಣತೊಡಗಿದರು. ಸುತ್ತಲೂ ಶಿಷ್ಯರು ಕಟ್ಟೆಕಟ್ಟಿ ನಿಂತಿದ್ದರು. ಸ್ವಾಮಿಗಳು ತಮ್ಮ ಯಾತ್ರೆಯ ಅನುಭವಗಳನ್ನು ಒಂದಾದ ಮೇಲೊಂದಾಗಿ ಹೇಳಿದರು. ಆ ರಾತ್ರಿಯೆಲ್ಲ ಮಠದಲ್ಲಿ ಒಬ್ಬರಿಗೂ ನಿದ್ದೆಯಿಲ್ಲ. ಎಲ್ಲರ ಹೃದಯಗಳೂ ಗುರುವರ್ಯನ ಅನಿರೀಕ್ಷಿತ ಆಗಮನದಿಂದ ಅತ್ಯುತ್ಸಾಹಗೊಂಡು ನಿದ್ದೆಗೈಯಲೊಲ್ಲದೆ ಹೋದುವು.

ಭಾರತವರ್ಷಕ್ಕೆ ಬಂದ ಕೆಲವು ದಿನಗಳಲ್ಲಿಯೆ ಅವಿಶ್ರಾಂತ ಕರ್ಮಯೋಗಿ ವಿವೇಕಾನಂದರು ಪುನಃ ಕರ್ಮರಂಗ ಚಕ್ರವ್ಯೂಹ ಪ್ರವೇಶ ಮಾಡಿದರು. ಜೆ.ಎಚ್. ಸೆವಿಯರ್‌ರವರು ತೀರಿಹೋದುದರಿಂದ, ಮಾಯಾವತಿಗೆ ಹೋಗಿ ಅಲ್ಲಿನ ಆಶ್ರಮದ ಕೆಲಸ ಕಾರ್ಯವನ್ನು ವಿಚಾರಿಸಿಕೊಂಡು ಮಿಸೆಸ್ ಸೆವಿಯರ್ ಅವರನ್ನು ಕಂಡು ಸಮಾಧಾನ ಮಾಡಲೆಂದು ಸ್ವಾಮಿಗಳು ಅಲ್ಲಿಗೆ ಹೋದರು. ಚಳಿಗಾಲವಾದುದರಿಂದ ದಾರಿಯಲ್ಲಿ ಶೀತತುಷಾರವೃಷ್ಟಿಗಳಿಂದ ಪೀಡಿತರಾಗಿ ಅವರೂ ಶಿಷ್ಯರೂ ಬಹು ಕಷ್ಟಸಾಹಸಗಳಿಂದ ಮಾಯಾವತಿಯನ್ನು ಸೇರಿದರು. ಸ್ವಾಮಿಜಿ ದೂರದಿಂದಲೆ ಬೆಟ್ಟದ ಮೇಲಿರುವ ಮಾಯಾವತಿಯ ಆಶ್ರಮವನ್ನು ಕಂಡು ಹರ್ಷಚಿತ್ತರಾದರು.

ಮಾಯಾವತಿಯಲ್ಲಿದ್ದಾಗ ಸ್ವಾಮಿಗಳು ತುಷಾರವೃಷ್ಟಿಯ ಭಯದಿಂದ ಹೊರಗೆ ತಿರುಗಾಡಲು ಹೋಗುತ್ತಿರಲಿಲ್ಲ. ಅಲ್ಲಿಯ ಅದ್ವೈತಾಶ್ರಮದಲ್ಲಿಯೆ ಇದ್ದುಕೊಂಡು ಶಿಷ್ಯರಿಗೆ ಉಪದೇಶ ಮಾಡುತ್ತಿದ್ದರು. ಕ್ರಮಕ್ರಮೇಣ ಅವರು ಹೆಚ್ಚುಹೆಚ್ಚಾಗಿ ಅಂತರ್ಮುಖಿಗಳಾಗುತ್ತಿದ್ದುದೂ ವಿರಾಮಕ್ಕೆ ಹಾತೊರೆಯುತ್ತಿದ್ದುದೂ ಶಿಷ್ಯರಿಗೆ ಗೊತ್ತಾಗದೆ ಇರಲಿಲ್ಲ. ಒಂದು ದಿನ ಆಶ್ರಮದಿಂದ ಅನತಿ ದೂರ ಮಾತ್ರ ಸಂಚರಿಸಿ ಆಯಾಸಗೊಂಡು ಬಳಿಯಿದ್ದ ಪ್ರಿಯಶಿಷ್ಯ ಸ್ವಾಮಿ ವಿರಜಾನಂದರ ಮೇಲೆ ಒರಗಿಕೊಂಡು ಅವರಿಗೆ ತಮ್ಮ ಜೀರ್ಣದೇಹವನ್ನು ತೋರಿಸುತ್ತ “ವತ್ಸ! ನೋಡು! ನಾನೆಷ್ಟು ಶಕ್ತಿಗುಂದಿ ಮುದುಕನಂತಿದ್ದೇನೆ! ಇಂತಹ ಪರ್ವತ ಕಂದರ ಪ್ರದೇಶಗಳಲ್ಲಿ ಇಪ್ಪತ್ತು ಇಪ್ಪತ್ತೈದು ಮೈಲಿಗಳನ್ನು ಮೊದಲು ಆಟವೆಂದು ತಿಳಿದು ಸಂಚರಿಸುತ್ತಿದ್ದೆ. ಈಗ ನೋಡು, ಇಷ್ಟು ದೂರ ಬಂದುದೆ ನನಗೆ ಸಾಕಾಗಿದೆ. ಇನ್ನೇನು, ವತ್ಸ, ನನ್ನ ಕಾಲ ಸಮೀಪಿಸುತ್ತಿದೆ!” ಎಂದರಂತೆ.

ಒಂದು ದಿನ ಸ್ವಾಮಿಗಳು, ಸ್ವಾಮಿ ಸ್ವರೂಪಾನಂದರನ್ನು ಬಳಿಗೆ ಕರೆದು ‘ಪ್ರಬುದ್ಧ ಭಾರತ’ ಮಾಸಪತ್ರಿಕೆಯನ್ನು ನಡೆಸುವ ವಿಚಾರದಲ್ಲಿಯೂ ಆಶ್ರಮದ ಮತ್ತು ಸಂಘದ ಕಾರ್ಯಗಳನ್ನು ಮಾಡುವ ವಿಚಾರದಲ್ಲಿಯೂ ಅನೇಕ ಬುದ್ಧಿವಾದಗಳನ್ನು ಹೇಳಿದರು: “ಕಠೋರ ಸಾಧನೆಗಳಿಂದ ದೇಹದ ಆರೋಗ್ಯವನ್ನು ಕೆಡಿಸಿಕೊಳ್ಳಬಾರದು. ನಮ್ಮನ್ನು ನೋಡಿ ನೀವೆಲ್ಲ ಕಲಿಯಬೇಕು. ಅನೇಕ ಗಂಟೆಗಳ ಕಾಲ ಧ್ಯಾನ ಮಾಡುವುದು ನಿಮ್ಮಿಂದ ಸಾಧ್ಯವಿಲ್ಲ. ಬೆಳಗ್ಗೆ ಒಂದು ಐದು ನಿಮಿಷ, ಸಾಯಂಕಾಲ ಒಂದು ಐದು ನಿಮಿಷಗಳವರೆಗೆ ಮನಸ್ಸನ್ನು ಸ್ಥಿರಗೊಳಿಸಿ ಕೇಂದ್ರೀಕರಿಸಿದರೆ ಸಾಕು. ಉಳಿದ ಕಾಲವನ್ನು ಕೆಲಸಕ್ಕಾಗಿಯೂ ದೇಶ ಸೇವೆಗಾಗಿಯೂ ಧಾರೆಯೆರೆಯಬೇಕು. ನನ್ನ ಶಿಷ್ಯರಿಗೆ ಸೇವೆಯೇ ತಪಸ್ಸು! ನಿಷ್ಕಾಮ ಕರ್ಮವೇ ಪವಿತ್ರತಮ ಸಾಧನೆ!”

ಸ್ವಾಮಿಗಳ ಇಷ್ಟದಂತೆ ಮಾಯಾವತಿಯ ಅದ್ವೈತಾಶ್ರಮದಲ್ಲಿ ಬಾಹ್ಯಪೂಜೆ ನಡೆಯಕೂಡದೆಂದಿತ್ತು. ಇತರ ಎಲ್ಲ ಆಶ್ರಮಗಳಲ್ಲಿಯೂ ಶ್ರೀಗುರುದೇವ ರಾಮಕೃಷ್ಣ ಆರಾಧಿಸಲ್ಪಡುತ್ತಿದ್ದರು. ಆದರೆ ಕೆಲವು ಶಿಷ್ಯರು ಗುಟ್ಟಾಗಿ ಒಂದು ದೇವರ ಕೋಣೆಯನ್ನು ಮಾಡಿ ಅಲ್ಲಿ ಗುರುಮಹಾರಾಜರನ್ನು ಪ್ರತಿಷ್ಠೆ ಮಾಡಿ ಪೂಜಿಸುತ್ತಿದ್ದರು. ದೈವವಶದಿಂದ ಒಂದು ದಿನ ಅದು ಸ್ವಾಮಿಗಳ ಕಣ್ಣಿಗೆ ಬಿತ್ತು. ಶಿಷ್ಯರನ್ನೆಲ್ಲ ಬಳಿಗೆ ಕರೆದು ಅವರೆದುರು ಬಾಹ್ಯಪೂಜೆಯನ್ನು ಕಠಿನವಾಗಿ ಖಂಡಿಸಿದರು. ಅದ್ವೈತಾಶ್ರಮದಲ್ಲಿ ಅಂತರಂಗದ ಸಾಧನೆಯೊಂದು ಹೊರತು ಬೇರೆ ಯಾವುದೂ ಇರಕೂಡದೆಂದು ಕಟ್ಟಪ್ಪಣೆ ಮಾಡಿದರು.

ಬೇಲೂರು ಮಠಕ್ಕೆ ಹಿಂತಿರುಗಿ ಬಂದ ಮೇಲೆ ಈ ವಿಚಾರವನ್ನು ಕುರಿತು ಹೇಳುತ್ತ “ಒಂದು ಆಶ್ರಮದಲ್ಲಿಯಾದರೂ ಬಾಹ್ಯಪೂಜೆಯಿರದಿರಲಿ ಎಂದುಕೊಂಡಿದ್ದೆ. ಆದರೆ ಅಲ್ಲಿ ಹೋಗಿ ನೋಡುತ್ತೇನೆ! ಏನು ನೋಡುವುದು? ಈ ಮುದುಕ (ಶ್ರೀರಾಮಕೃಷ್ಣ) ನನಗಿಂತಲೂ ಮೊದಲೇ ಅಲ್ಲಿಗೂ ಹೋಗಿ ನೆಲೆಸಿ ಬಿಟ್ಟಿದ್ದಾನೆ! ಹುಂ ಆಗಲಿ, ಆಗಲಿ! ಏನೇನು ಮಾಡುತ್ತಾನೋ ಮಾಡಲಿ!” ಎಂದರಂತೆ.

ದೊಡ್ಡವರ ಮಹಿಮೆ ದೊಡ್ಡ ದೊಡ್ಡ ಕಾರ್ಯಗಳಲ್ಲಿ ಹೇಗೆ ಪ್ರಕಾಶಕ್ಕೆ ಬರುವುದೊ ಹಾಗೆಯೆ ಅವರು ಮಾಡುವ ಸಣ್ಣ ಸಣ್ಣ ಕಾರ್ಯಗಳಿಂದಲೂ ಅದು ಬಯಲಿಗೆ ಬೀಳುವುದು. ಒಂದು ದಿನ ಸಣ್ಣ ಸಂಗತಿ ನಡೆಯಿತು. ಅದರಲ್ಲಿ ಸ್ವಾಮಿಗಳ ಹೃದಯದ ಸರಳತೆ, ಗಂಭೀರ ಮಾನವಪ್ರೀತಿ, ಅಸೀಮ ಶಿಷ್ಯ ಸ್ನೇಹ ಇವುಗಳು ನಮಗೆ ತಿಳಿಯಬರುತ್ತವೆ. ಆ ದಿನ ಬಹಳ ಹೊತ್ತಾದರೂ ಊಟ ತಯಾರಾಗಲೆ ಇಲ್ಲ. ಸ್ವಾಮಿಗಳು ರೇಗಿದರು. ಕಂಡಕಂಡವರನ್ನೆಲ್ಲ ಬೈದರು. ಬಾಣಸಿಗತನದಲ್ಲಿದ್ದ ಸ್ವಾಮಿ ವಿರಜಾನಂದರನ್ನು ತರಾಟೆಗೆ ತೆಗೆದುಕೊಳ್ಳುವುದಕ್ಕಾಗಿ ಅಡಿಗೆಮನೆಗೆ ನುಗ್ಗಿದರು. ಹೋಗಿ ನೋಡಲಾಗಿ ಹೊಗೆ ಕವಿದುಕೊಂಡು ಅಡಿಗೆಮನೆಯೆಲ್ಲ. ಕತ್ತಲಾಗಿತ್ತು. ಸ್ವಾಮಿಗಳು ಬಹುಕಷ್ಟದಿಂದ ಒಲೆಯ ಬಳಿ ಹೋದರು. ವಿರಜಾನಂದರು ಕಾಣಿಸಲಿಲ್ಲ. ಕರೆದರು, ಪ್ರತ್ಯುತ್ತರ ಬಂತು, ಸುತ್ತ ಮುತ್ತಿದ್ದ ಹೊಗೆಯ ನಡುವಿನಿಂದ. ವಿರಜಾನಂದರು ಉರಿಯಲೊಲ್ಲದ ಬೆಂಕಿಯನ್ನು ಊದಿ ಊದಿ ಉರಿಸಲು ಯತ್ನಿಸುತ್ತಿದ್ದರು. ಅದನ್ನು ನೋಡಿ ಸ್ವಾಮಿಗಳು ಸುಮ್ಮನೆ ಹೊರಗೆ ಬಂದರು. ಬಹಳ ಹೊತ್ತಾದ ಮೇಲೆ ವಿರಜಾನಂದರು ಊಟವನ್ನು ತಂದಾಗ ಸ್ವಾಮಿಜಿ ಸಿಟ್ಟಿಗೆದ್ದ ಬಾಲಕನಂತೆ “ನನಗೊಂದೂ ಬೇಡ; ಎಲ್ಲ ತೆಗೆದುಕೊಂಡು ಹೋಗು!” ಎಂದರು. ಶಿಷ್ಯನಿಗೆ ಗುರುಗಳ ಬಗೆ ಗೊತ್ತಿತ್ತು. ತಟ್ಟೆಯನ್ನು ಮುಂದಿಟ್ಟರು. ಸ್ವಾಮಿಗಳು ತಡಮಾಡದೆ ಕುಳಿತುಕೊಂಡು ಕೈ ಬಾಯ್ ಕಾಳಗ ಹೂಡಿದರು. ಒಂದೆರಡು ತುತ್ತು ಹೊಟ್ಟೆಗೆ ಬಿದ್ದಮೇಲೆ ಉಗ್ರ ಸ್ವರೂಪ ಮಹಾದೇವನು ಶಾಂತವಾದನು! ಮುಗುಳ್ನಗೆ ನಗುತ್ತ ಶಿಷ್ಯನನ್ನು ನೋಡಿ “ಓಹೋ ಈಗ ಗೊತ್ತಾಯಿತು, ನನಗೇಕೆ ಅಷ್ಟೊಂದು ಕೋಪ ಬಂದಿತ್ತೆಂದು, ಬಹಳ ಹಸಿದುಬಿಟ್ಟಿದ್ದೆ!” ಎಂದರು. ಗುರು ಶಿಷ್ಯರಿಬ್ಬರೂ ಚೆನ್ನಾಗಿ ನಕ್ಕು ಬಿಟ್ಟರು.

ಹಿಮಾಲಯದ ಪ್ರಬಲ ತುಷಾರವೃಷ್ಟಿಯಿಂದ ಸ್ವಾಮಿಗಳು ಮಾಯಾವತಿಯಲ್ಲಿ ಬಹುದಿನ ಬಂಧಿತರಾಗಿದ್ದರು. ಅಲ್ಲಿಯ ಅತಿಶೀತಲ ವಾಯುಗುಣ ಅವರಿಗೆ ಸರಿಬೀಳಲಿಲ್ಲ. ಆದ್ದರಿಂದ ಜನವರಿ ೨೪ನೆಯ ದಿನ ಬೇಲೂರು ಮಠಕ್ಕೆ ಹಿಂತಿರುಗಿ ಬಂದರು. ಕೆಲವು ದಿನಗಳಲ್ಲಿ ಪೂರ್ವ ವಂಗಪ್ರಾಂತ್ಯದ ಢಾಕಾ ಮೊದಲಾದ ನಗರಗಳಿಂದ ಕರೆಯ ಕಾಗದಗಳು ಬಂದುವು. ಜೊತೆಗೆ ಸ್ವಾಮಿಜಿಯ ತಾಯಿ ಭುವನೇಶ್ವರಿದೇವಿಯೂ ಪೂರ್ವ ವಂಗದೇಶದಲ್ಲಿರುವ ಪವಿತ್ರತೀರ್ಥಗಳಿಗೆ ಪುತ್ರನೊಡಗೂಡಿ ಯಾತ್ರೆ ಹೋಗಲು ಬಯಸಿದರು. ಇವೆಲ್ಲ ಕಾರಣಗಳಿಂದ ಸ್ವಾಮಿಜಿ ತಾಯಿಯೊಡಗೂಡಿ ಯಾತ್ರೆ ಹೋಗಲು ಬಯಸಿದರು. ಇವೆಲ್ಲ ಕಾರಣಗಳಿಂದ ಸ್ವಾಮಿಜಿ ತಾಯಿಯೊಡಗೂಡಿ ಕೆಲವು ಶಿಷ್ಯರನ್ನು ಕರೆದುಕೊಂಡು ಹದಿನೆಂಟನೆಯ ದಿನ ಢಾಕಾ ನಗರಕ್ಕೆ ಹೊರಟರು.

ಢಾಕಾ ನಗರದಲ್ಲಿ ಕೆಲವು ಉಪನ್ಯಾಸಗಳನ್ನು ಕೊಟ್ಟು, ತಾಯಿಯೊಡನೆ ತೀರ್ಥಗಳನ್ನು ಸಂಚರಿಸಿ ಪುನಃ ಅಸ್ವಸ್ಥರಾದ ಸ್ವಾಮಿಗಳು ಬೇಲೂರು ಮಠಕ್ಕೆ ಹಿಂತಿರುಗಿದರು. ಅವರ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತ ಬಂದಿತು. ಆದರೂ ದರ್ಶನಾರ್ಥಿಗಳ ಸಂಖ್ಯೆ ಮಾತ್ರ ಕುಗ್ಗುವುದಕ್ಕೆ ಬದಲಾಗಿ ಇಮ್ಮಡಿ ಇಮ್ಮಡಿ ನಾಲ್ಮಡಿಯಾಗಿ ಹಿಗ್ಗುತ್ತ ಬಂದಿತು. ಸ್ವಾಮಿಗಳು ಸ್ವಲ್ಪವೂ ಹಿಂದುಮುಂದು ನೋಡದೆ ಬಂದವರೆಲ್ಲರನ್ನೂ ಸಾದರದಿಂದ ಕಂಡು ಅವರ ಸಂದೇಹಗಳನ್ನು ಪರಿಹಾರ ಮಾಡುತ್ತಿದ್ದರು. ದೇಹ ಶಿಥಿಲವಾಗಿದ್ದರೂ ಅವರ ಆತ್ಮ ಮನಸ್ಸುಗಳು ಎಂದಿನಂತೆ ಚಿರಯೌವನಾನ್ವಿತವಾಗಿದ್ದುವು. ಅವರೊಂದು ಚಲಿಸುವ ಗುಡಿಯಾಗಿ ಹೋದಲ್ಲೆಲ್ಲ ಮಂಗಳವನ್ನು ಬೀರುತ್ತಿದ್ದರು. ಕೆಲವು ಸಾರಿ ಸಾವಧಾನವಾಗಿ ಪ್ರವಹಿಸುವ ದಿವಿಜ ನದಿಯ ಶ್ಯಾಮಲ ತೀರದಲ್ಲಿ ಕುಳಿತು ಧ್ಯಾನಮಗ್ನರಾಗುತ್ತಿದ್ದರು. ಕೆಲವು ಸಾರಿ ಮಠದ ಅಂಗಳದಲ್ಲಿ ಅತ್ತಿತ್ತ ಅಡ್ಡಾಡುತ್ತ ತಮ್ಮ ಕಾರ್ಯಗಳ ವ್ಯೂಹರಚನೆಯಲ್ಲಿ ತೊಡಗುತ್ತಿದ್ದರು. ಕೆಲವು ಸಾರಿ ತಮ್ಮೆಡೆಗೆ ಬಂದ ಅಜ್ಞಾತ ವ್ಯಕ್ತಿಗಳೊಡನೆ ಸಾದರದಿಂದ ಮಾತಾಡಿ ಅವರ ದುಃಖಗಳನ್ನು ಪರಿಹರಿಸುತ್ತಿದ್ದರು. ಮತ್ತೆ ಕೆಲವು ಸಾರಿ ಶಿಷ್ಯರಿಗೆ ಸಂನ್ಯಾಸ, ಜ್ಞಾನ, ಭಕ್ತಿ, ವೈರಾಗ್ಯ, ನಿಷ್ಕಾಮಕರ್ಮ ಇವುಗಳನ್ನು ಕುರಿತು ಬೋಧಿಸುತ್ತಿದ್ದರು. ಮಕ್ಕಳೊಡನೆ ಮಕ್ಕಳಾಗಿ, ಮುದುಕರೊಡನೆ ಮುದುಕರಾಗಿ, ಯುವಕರೊಡನೆ ಯುವಕರಾಗಿ, ಭಕ್ತರೊಡನೆ ಭಕ್ತರಾಗಿ, ಜ್ಞಾನಿಗಳೊಡನೆ ಜ್ಞಾನಿಗಳಾಗಿ, ಕರ್ಮಿಗಳೊಡನೆ ಕರ್ಮಿಯಾಗಿ ವರ್ತಿಸುತ್ತ ಸ್ವಾಮಿಗಳು ಕೆಲವು ಪರಿಣತ ಮಾಸಗಳನ್ನು ಕಳೆದರು.

ಜುಲೈ, ಆಗಸ್ಟ್ ತಿಂಗಳು ಜಾರಿದುವು. ಸ್ವಾಮಿಗಳು ಕೈಲಾದಷ್ಟು ವಿಶ್ರಾಂತಿ ತೆಗೆದುಕೊಂಡರು. ಆದರೂ ದೇಹ ಸಡಿಲವಾದ ಯಂತ್ರದಂತೆ ದಿನದಿನಕ್ಕೂ ಶಿಥಿಲವಾಗತೊಡಗಿತು. ಒಂದು ದಿನ ಅವರ ಶಿಷ್ಯರಾದ ಶರಶ್ಚಂದ್ರ ಚಕ್ರವರ್ತಿಗಳು ಯೋಗಕ್ಷೇಮವನ್ನು ವಿಚಾರಿಸಲು, ಸ್ವಾಮಿಗಳು “ವತ್ಸ! ಇನ್ನೇಕೆ ನನ್ನ ಆರೋಗ್ಯ ವಿಚಾರ? ದಿನದಿನಕ್ಕೂ ದೇಹ ಹೆಚ್ಚು ಹೆಚ್ಚಾಗಿ ಕುಸಿದುಬೀಳುತ್ತಿದೆ. ವಂಗದೇಶದಲ್ಲಿ ಹುಟ್ಟಿದ ಈ ದೇಹಕ್ಕೆ ರೋಗ ತಪ್ಪಲಿಲ್ಲ. ಈ ಪ್ರಾಂತದ ಆರೋಗ್ಯವೆ ಕೆಟ್ಟುಹೋಗಿದೆ. ಸ್ವಲ್ಪ ಕೆಲಸ ಮಾಡಿದರೆ ಸರಿ, ಆಗಲೇ ಖಾಯಿಲೆ! ಈ ದೇಹವಿರುವಲ್ಲಿಯವರೆಗೂ ನಿಮಗೆಲ್ಲರಿಗಾಗಿ ದುಡಿಯುತ್ತೇನೆ, ಕಡೆಗೂ ದುಡಿಯುತ್ತಲೇ ಮಡಿಯುತ್ತೇನೆ! ವತ್ಸ, ನನಗೆ ವಿಶ್ರಾಂತಿ ಎಂಬುದಿಲ್ಲ. ಭಗವಾನರು ಯಾವುದನ್ನು ‘ಕಾಳಿ’ ಎಂದು ಕರೆಯುತ್ತಿದ್ದರೊ ಅದು ಅವರ ಮಹಾಸಮಾಧಿಗೆ ಮೂರು ದಿನಗಳ ಮುನ್ನವೆ ನನ್ನ ಮೈಮೇಲೆ ಬಂದುಬಿಟ್ಟಿತು. ಅದು ನನ್ನನ್ನು ಸುಮ್ಮನಿರಲು ಬಿಡುವುದಿಲ್ಲ. ಕೆಲಸ! ಕೆಲಸ! ಕೆಲಸ! ದೇಹದ ಕಡೆಗೆ ಕಣ್ಣಿಡಲು ಕೂಡ ಸಮಯವಿಲ್ಲ!” ಎಂದು ಹೇಳಿ ಕಣ್ಣು ಮುಚ್ಚಿ ಚಿಂತಾಮಗ್ನರಾದರು.

ದುರ್ಗಾಪೂಜೆಯ ದಿನಗಳು ಬಂದುವು. ಸ್ವಾಮಿಗಳು ಎಲ್ಲ ಕರ್ಮಗಳನ್ನೂ ಪ್ರಾಚೀನ ಸಂಪ್ರದಾಯದ ರೀತಿಯಲ್ಲಿಯೇ ಮಾಡಿಸಿದರು. ತಾವೇ ಪೂಜೆಗಳಲ್ಲಿ ಭಾಗಿಯಾಗಿದ್ದರು. ಅದ್ವೈತವಾದಿಯಾದರೂ ಅವರು ಮೂರ್ತಿಪೂಜೆ ಮತ್ತು ದೇವ ದೇವಿಯರ ಆರಾಧನೆ ಇವುಗಳಲ್ಲಿ ಗಭೀರ ಸತ್ಯವಿದೆ ಎಂದು ಹೇಳುತ್ತಿದ್ದರು. ತಾವು ಹಿಂದೂ ಧರ್ಮವನ್ನು ನಷ್ಟಗೊಳಿಸಲು ಬಂದವರಲ್ಲ, ಅದಕ್ಕೆ ನೂತನ ಜ್ಯೋತಿಯನ್ನು ದಾನ ಮಾಡಲು ಬಂದವರು ಎಂದು ಹೇಳಿಕೊಳ್ಳುತ್ತಿದ್ದರು. “ಜೀರ್ಣಗೈಯಲು ನಾನು ಬರಲಿಲ್ಲ. ಪೂರ್ಣಗೈಯಲು ಬಂದಿಹೆನು” ಎಂಬುದವರ ಮಾರ್ಗವಾಗಿತ್ತು.

ಅಕ್ಟೋಬರ್ ತಿಂಗಳಲ್ಲಿ ಪುನಃ ಸ್ವಾಮಿಗಳ ಅಸ್ವಸ್ಥತೆ ಪ್ರಬಲವಾಯಿತು. ವೈದ್ಯರು ಯಾವ ವಿಧವಾದ ಮಾನಸಿಕ ಅಥವಾ ದೈಹಿಕ ಕಾರ್ಯಗಳನ್ನೂ ಮಾಡಕೂಡದೆಂದು ಬೆಸಸಿದರು. ಸ್ವಾಮಿಗಳು ಹಾಸಿಗೆ ಹಿಡಿದರು. ಸೋದರ ಮತ್ತು ಶಿಷ್ಯ ಸಂನ್ಯಾಸಿಗಳು ಬಹಳ ಎಚ್ಚರಿಕೆಯಿಂದ ಶುಶ್ರೂಷೆ ಮಾಡತೊಡಗಿದರು. ಯಾರೂ ಅವರೊಡನೆ ಗಹನ ವಿಷಯಗಳನ್ನು ಪ್ರಸ್ತಾಪಿಸಬಾರದೆಂದು ದರ್ಶನಾರ್ಥಿಗಳಿಗೆ ಕಟ್ಟಪ್ಪಣೆಯಿತ್ತರು. ಇಷ್ಟಾದರೂ ಕೂಡ ನಡುನಡುವೆ ಸ್ವಾಮಿಗಳು ಏನಾದರೂ ಕೆಲಸ ಮಾಡದೆ ಇರುತ್ತಿರಲಿಲ್ಲ. ಇಲ್ಲ, ತೋಟಕ್ಕೆ ಹೋಗಿ ಚಿಕ್ಕ ಮಕ್ಕಳಂತೆ ಹೂವಿನ ಗಿಡಗಳನ್ನು ನೆಡುವರು. ಇಲ್ಲ ಪದ್ಮಾಸನ ಹಾಕಿಕೊಂಡು ಧ್ಯಾನ ಮಾಡುವರು. ಇಲ್ಲ, ಕಲ್ಕತ್ತಾದಲ್ಲಿ ಸಂಸ್ಕೃತ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ವ್ಯೂಹರಚನೆಗೆ ಕೈಹಾಕುವರು. ಅದೂ ಆಗದೆ ಹೋದರೆ ವೇದೋಪನಿಷತ್ತುಗಳಿಂದ ಶ್ಲೋಕಗಳನ್ನು ಘೋಷಿಸಿ ಗಾನ ಮಾಡುವರು.

ಇದೇ ಸಮಯದಲ್ಲಿ ಕಲ್ಕತ್ತಾ ನಗರದಲ್ಲಿ ಭಾರತೀಯ ಕಾಂಗ್ರೆಸ್ಸು ನಡೆಯಿತು.. ಅಸ್ವಸ್ಥರಾದ ಸ್ವಾಮಿಗಳು ಅಲ್ಲಿಗೆ ಹೋಗದಿದ್ದರೂ ಕಾಂಗ್ರೆಸ್ಸಿಗೆ ಬಂದ ದೊಡ್ಡ ದೊಡ್ಡ ದೇಶಭಕ್ತರು ಬೇಲೂರು ಮಠಕ್ಕೆ ಬಂದು ಜಗದ್ವಿಖ್ಯಾತ ದೇಶಭಕ್ತ ಸಂನ್ಯಾಸಿಯನ್ನು ಕಂಡು ನಮಸ್ಕರಿಸಿ ಅನೇಕ ವಿಚಾರಗಳನ್ನು ಚರ್ಚೆ ಮಾಡಿ ತಿಳಿದುಕೊಂಡು ಧನ್ಯರಾಗಿ ಹೋದರು.

ಡಿಸೆಂಬರ್ ತಿಂಗಳ ಅಂತ್ಯಭಾಗದಲ್ಲಿ ಸ್ವಾಮಿಗಳ ರೋಗ ಸ್ವಲ್ಪ ಗುಣಮುಖವಾಯಿತು. ಅದಕ್ಕೆ ತಕ್ಕಂತೆ ಮತ್ತೊಂದು ಯಾತ್ರೆಯೂ ಸಿದ್ಧವಾಯಿತು. ಜಪಾನಿನಿಂದ ಒಕಾಕುರ ಎಂಬ ದೊಡ್ಡ ವಿದ್ವಾಂಸನು ಬೇಲೂರು ಮಠಕ್ಕೆ ಬಂದು ಸ್ವಾಮಿಗಳನ್ನು ಕಂಡು ಅವರೊಡನೆ ಕೆಲವು ದಿನಗಳನ್ನು ಕಳೆದನು. ಒಕಾಕುರನು ಸ್ವಾಮಿಗಳನ್ನು ತಮ್ಮೊಡನೆ ಬುದ್ಧಗಯೆಗೆ ಬರುವಂತೆ ಪ್ರಾರ್ಥಿಸಿದನು. ಸ್ವಾಮಿಗಳು ಒಪ್ಪಿದರು. ಒಕಾಕುರನೊಡನೆ ಸ್ವಾಮಿಗಳು ಬುದ್ಧಗಯೆಗೆ ಹೋಗಿ, ಅಲ್ಲಿಂದ ಕಾಶಿಗೆ ಪ್ರಯಾಣ ಮಾಡಿ, ಅಲ್ಲಿ ಕೆಲವು ದಿನಗಳಿದ್ದು, ಪುನಃ ಶ್ರೀರಾಮಕೃಷ್ಣರ ಜಯಂತ್ಯುತ್ಸವದ ಕಾಲಕ್ಕೆ ಸರಿಯಾಗಿ ಬೇಲೂರಿಗೆ ಬಂದರು. ಉತ್ಸವವೇನೊ ವಿಜೃಂಭಣೆಯಿಂದ ಜರುಗಿತು. ಆದರೆ ಎಲ್ಲರ ಹೃದಯದಲ್ಲಿಯೂ ಕಳವಳ ತುಂಬಿತ್ತು. ಸ್ವಾಮಿಗಳು ಹಾಸಿಗೆ ಹಿಡಿದು ಕೋಣೆಯಿಂದ ಹೊರಗೆ ಬರಲಾರದವರಾದರು.

೧೯೦೨ನೆಯ ಸಂವತ್ಸರದ ಮೇ, ಜೂನ್ ತಿಂಗಳ ಹೊತ್ತಿಗೆ ಕಾಯಿಲೆ ಸ್ವಲ್ಪ ವಾಸಿಯಾದರೂ ಸ್ವಾಮಿಗಳ ವೃತ್ತಿ ವರ್ತನೆಗಳು ಸಂಪೂರ್ಣವಾಗಿ ಬದಲಾಯಿಸಿದುವು. ಎಂದಿಗಿಂತಲೂ ಅತಿಶಯವಾಗಿ ಅಂತರ್ಮುಖಿಯಾಗಿರುತ್ತಿದ್ದರು. ಸರ್ವಕಾರ್ಯಗಳಲ್ಲಿಯೂ ಒಂದು ವಿಧವಾದ ಔದಾಸೀನ್ಯವನ್ನು ಪ್ರಕಾಶಗೊಳಿಸಲು ತೊಡಗಿದರು. ಆಚಾರ್ಯ, ಗುರು, ಶಿಕ್ಷಕ, ನಾಯಕ ಮೊದಲಾದ ಉಪಾಧಿಗಳು ಸಡಿಲವಾಗಿ ಕಳಚಿಬೀಳತೊಡಗಿದುವು. ಸಿಡಿಲಾಳು ಮೆಲ್ಲಮೆಲ್ಲನೆ ಬ್ರಹ್ಮದ ಚಿರ ಯೌವನದಲ್ಲಿ ಮುಳುಗತೊಡಗಿದನು. ಶ್ರೀರಾಮಕೃಷ್ಣರು “ಎಂದು ನರೇಂದ್ರನಿಗೆ ತನ್ನ ಸ್ವರೂಪ ತಿಳಿಯುವುದೋ ಅಂದು ದೇಹ ಬಿಡುವನು” ಎಂದು ಹೇಳಿದ್ದರು.

ಶಿಷ್ಯನೊಬ್ಬನು “ಪರಮಹಂಸರು ಹೀಗೆಂದು ಹೇಳಿದ್ದರಂತೆ, ಸ್ವಾಮಿಜಿ ನಿಮ್ಮ ಸ್ವರೂಪ ನಿಮಗೆ ಗೊತ್ತಾಗಿದೆಯೆ?” ಎಂದು ಕೇಳಿದನು.

ಸ್ವಾಮಿಜಿ “ಹೌದು ಗೊತ್ತಾಗಿದೆ” ಎಂದರು.

ಸ್ವಾಮಿಗಳ ಗಂಭೀರ ಭಾವವನ್ನು ನೋಡಿ ಮುಂದೆ ಯಾರಿಗೂ ಪ್ರಶ್ನೆ ಮಾಡಲು ಧೈರ್ಯ ಬರಲಿಲ್ಲ. ಸ್ವಾಮಿಗಳ ರೋಗ ಸ್ವಲ್ಪ ಹಿಮ್ಮೆಟ್ಟಿದುದರಿಂದ ಎಲ್ಲರೂ ಧೈರ್ಯಗೊಂಡರು. ಅವರೂ ಸೋದರ ಸಂನ್ಯಾಸಿಗಳೊಡನೆ ಹಾಸ್ಯ ಪರಿಹಾಸ್ಯ ಆಟಪಾಟಗಳಲ್ಲಿ ತೊಡಗಿದರು.

ಆದರೂ ಭಯಂಕರ ದಿನವು ಇರುಳಿನ ಕರಿಯ ನೆಳಲಂತೆ ಸದ್ದಿಲ್ಲದೆ ಹೆಜ್ಜೆಗಳನ್ನು ಇಡುತ್ತ ಬಳಿಸಾರಿತು. ಭಾರತೀಯ ಸೂರ್ಯದೇವನು ಮೆಲ್ಲಮೆಲ್ಲನೆ ಪಡುವೆಟ್ಟಿನೆಡೆಗ ಸರಿಯತೊಡಗಿದನು. ಮಹಾಸಮಾಧಿಗೆ ಇನ್ನೊಂದು ವಾರವಿದೆ ಎನ್ನುವಾಗ ಒಂದು ದಿನ ಆಚಾರ್ಯದೇವನು ಸ್ವಾಮಿ ಶುದ್ಧಾನಂದಜಿಯನ್ನು ಬಳಿಗೆ ಕರೆದು ಬಂಗಾಳಿ ಪಂಚಾಂಗವನ್ನು ತರುವಂತೆ ಹೇಳಿದನು. ಶುದ್ಧಾನಂದರು ಪಂಚಾಂಗವನ್ನು ತರಲು, ಪ್ರತಿದಿನದ ವಿಷಯಗಳನ್ನೂ ಓದಲು ಹೇಳಿದರು. ಶಿಷ್ಯರು ಓದಿದರು. ಗುರುವರ್ಯರ ಮುಖಭಾವವನ್ನು ನೋಡಿ, ಯಾವುದೊ ಒಂದು ವಿಶೇಷಕಾರ್ಯಕ್ಕೆ ದಿನವನ್ನು ಗೊತ್ತುಮಾಡುತ್ತಿದ್ದಾರೆಂದು ಅವರು ತಿಳಿದರು. ಶುದ್ಧಾನಂದರು ಜುಲೈ ನಾಲ್ಕನೆಯ ದಿನದ ವಿಷಯಗಳನ್ನು ಓದಿ ಪೂರೈಸಿ ಐದನೆಯ ದಿನಕ್ಕೆ ಕೈಹಾಕಿದರು.

ಸ್ವಾಮಿಗಳು “ಸಾಕು, ಅಲ್ಲಿಗೆ ಸಾಕು” ಎಂದರಂತೆ.

ಜುಲೈ ಒಂದನೆಯ ದಿನ ಸ್ವಾಮಿಗಳು ಸೋದರ ಶಿಷ್ಯರೊಡನೆ ಮಠದ ಅಂಗಳದಲ್ಲಿ ತಿರುಗಾಡುತ್ತಿದ್ದರು. ಆಗ ಅವರು ಗಂಗಾತೀರದ ಒಂದು ಸ್ಥಳವನ್ನು ಕೈಬೆರಳಿಂದ ತೋರಿಸುತ್ತ “ನಾನು ದೇಹ ಬಿಟ್ಟಮೇಲೆ ನನಗೆ ಅಲ್ಲಿಯೆ ಅಗ್ನಿ ಸಂಸ್ಕಾರ ಮಾಡಿ” ಎಂದರು. ಆದರೆ ಯಾರಿಗೂ ಯಾವ ಪ್ರಶ್ನೆಯನ್ನು ಕೇಳುವುದಕ್ಕೂ ಧೈರ್ಯ ಬರಲಿಲ್ಲ.

೧೯೦೨ನೆಯ ಸಂವತ್ಸರದ ಜುಲೈ ತಿಂಗಳು ೪ನೆಯ ತಾರೀಖಿನ ದಿನವೂ ಮೂಡಿತು. ಆಚಾರ್ಯದೇವನು ಆ ದಿನ ಪ್ರಾತಃಕಾಲ ಎಂದಿಗಿಂತಲೂ ಮುಂಚಿತವಾಗಿ ಎದ್ದು, ದೇವರ ಕೋಣೆಗೆ ಹೋಗಿ ಕಿಟಕಿ ಬಾಗಿಲುಗಳನ್ನೆಲ್ಲ ಹಾಕಿಕೊಂಡು ಧ್ಯಾನಮಗ್ನನಾದನು. ದೇವಮಂದಿರದಿಂದ ಹೊರಗೆ ಬಂದವರು ಕಾಳೀಪೂಜೆ ಮಾಡಬೇಕೆಂದು ಹೇಳಿದರು. ಅದೂ ನಡೆಯಿತು. ಸ್ವಾಮಿಜಿ ಪುನಃ ದೇವಮಂದಿರಕ್ಕೆ ಹೋಗಿ ಧ್ಯಾನಲೀನರಾದರು. ಬಹಳ ಹೊತ್ತಾದ ಮೇಲೆ ಹೊರಗೆ ಬಂದು “ಮನವೆ, ನಡೆ ನಿನ್ನ ಮನೆಗೆ” ಎಂಬರ್ಥದ ಗೀತೆಯೊಂದನ್ನು ಹಾಡುತ್ತ ಪ್ರಾಂಗಣದಲ್ಲಿ ತಿರುಗುತ್ತಿದ್ದರು. ಅವರ ವದನಮಂಡಲ ಅಲೌಕಿಕ ಜ್ಯೋತಿಯಿಂದ ಶೋಭಿಸುತ್ತಿತ್ತು. ಸ್ವಾಮಿ ಪ್ರೇಮಾನಂದರು ದೂರದಲ್ಲಿ ನಿಂತು ಎಲ್ಲವನ್ನೂ ನೋಡುತ್ತಿದ್ದರು.

ಯೋಗಾಚಾರ್ಯನು ಇದ್ದಕ್ಕಿದ್ದ ಹಾಗೆ ಒಂದು ಕಡೆ ನಿಂತು ನೀಲಾಕಾಶವನ್ನು ನೋಡುತ್ತ ತನ್ನೊಳು ತಾನೆ “ಇನ್ನೊಬ್ಬ ವಿವೇಕಾನಂದನು ಇದ್ದಿದ್ದರೆ, ಅವನಿಗೆ ತಿಳಿಯುತ್ತಿತ್ತು, ಈ ವಿವೇಕಾನಂದನು ಏನು ಮಾಡಿದ್ದಾನೆ ಎಂದು! ಆದರೆ – ಕಾಲಾಂತರದಲ್ಲಿ ವಿವೇಕಾನಂದರು ಇನ್ನೆಷ್ಟು ಜನ ಹುಟ್ಟುವರು!!” ಎಂದು ಕೊಂಡರು.

ಅದನ್ನು ಕೇಳಿ ಪ್ರೇಮಾನಂದರು ಚಕಿತರಾದರು. ಏಕೆಂದರೆ ಸ್ವಾಮಿಜಿ ಉಚ್ಚತಮ ಭಾವಭೂಮಿಕೆಯಲ್ಲಿ ಇದ್ದಾಗಲಲ್ಲದೆ ಮತ್ತಾವಾಗಲೂ ಹಾಗೆ ಮಾತಾಡುತ್ತಿರಲಿಲ್ಲ! ಅವರು ಆ ದಿನವೆ ದೇಹತ್ಯಾಗ ಮಾಡಲು ಸಂಕಲ್ಪಿಸಿ ಯೋಗಾರೂಢರಾಗಿದ್ದರೆಂಬುದು ಪ್ರೇಮಾನಂದರಿಗೆ ಹೊಳೆಯಲಿಲ್ಲ.

ನಿಯಮಿತ ಸಮಯದಲ್ಲಿ ಭೋಜನಕ್ಕೆ ಘಂಟಾಧ್ವನಿಯಾಯಿತು. ಸ್ವಾಮಿಗಳು ಎಂದಿನಂತೆ ಶಿಷ್ಯರೊಡನೆ ಸೇರಿ ನಾನಾ ವಿಧವಾದ ಹಾಸ್ಯ ಪರಿಹಾಸ್ಯಗಳನ್ನು ಮಾಡುತ್ತ ಊಟ ಮಾಡಿದರು. ಅದೇ ಅವರ ಕಟ್ಟಕಡೆಯ ಹಾಸ್ಯಪರಿಹಾಸ್ಯಗಳೆಂದು ಅರಿಯದೆ ಶಿಷ್ಯವೃಂದ ಗುರುಗಳಿಗೆ ಆರೋಗ್ಯ ಪ್ರಾಪ್ತವಾಯಿತೆಂದು ತಿಳಿದು ಬಹಳ ಹಿಗ್ಗಿದರು. ಊಟವಾದ ಮೇಲೆ ಕೆಲ ಹೊತ್ತು ವಿಶ್ರಾಂತಿ ತೆಗೆದುಕೊಂಡು, ತರುವಾಯ ಶಿಷ್ಯರಿಗೆ ಮೂರು ಗಂಟೆಗಳ ಕಾಲ ಲಘುಕೌಮುದಿ ಎಂಬ ಸಂಸ್ಕೃತ ವ್ಯಾಕರಣವನ್ನು ಪಾಠ ಹೇಳಿದರು. ನೀರಸವಾದ ಆ ಗ್ರಂಥವನ್ನು ಮೂರು ಗಂಟೆಗಳ ಕಾಲ ಪಾಠ ಹೇಳಿದರೂ ಯಾರೊಬ್ಬರಿಗೂ ಬೇಸರವಾಗಲಿಲ್ಲ. ಮಧ್ಯೆ ಮಧ್ಯೆ ಏನಾದರೂ ವಿನೋದಗಳು ಇದ್ದೇ ಇರುತ್ತಿದ್ದುವು.

ಅಪರಾಹ್ನವಾಯಿತು. ಸ್ವಾಮಿಗಳು ಪ್ರೇಮಾನಂದರನ್ನು ಜೊತೆಯಲ್ಲಿ ಕರೆದುಕೊಂಡು ಹೊರಗಡೆ ಅಡ್ಡಾಡಲು ಹೋದರು. ಪ್ರೇಮಾನಂದರು “ಸ್ವಾಮಿಜಿ, ವೇದಗಳನ್ನು ಓದುವುದರಿಂದ ಏನು ಉಪಕಾರ?” ಎಂದರು. ಸ್ವಾಮಿಜಿ “ಮೌಢ್ಯವಾದರೂ ನಷ್ಟವಾಗುತ್ತದೆ!” ಎಂದರು.

ಸಂಚಾರ ಮುಗಿಸಿಕೊಂಡು ಸ್ವಾಮಿಗಳು ಹಿಂತಿರುಗಿ ಬಂದರು. ನೇಸರು ಪಡುವಣ ದೆಸೆಯಲ್ಲಿ ತೊಳತೊಳಗಿ ಬೈಗುಗೆಂಪನ್ನು ಬೀರಿ ಮುಳುಗಿದನು. ಆಚಾರ್ಯದೇವನು ಶಿಷ್ಯಮಂಡಲಿಯನ್ನು ಬಳಿಗೆ ಕರೆದು ಉಪದೇಶ ಮಾಡಿದನು. ತರುವಾಯ ಒಬ್ಬರೊಬ್ಬರೂ ಆತನಿಗೆ ಅಡ್ಡಬಿದ್ದು ಧ್ಯಾನ ಮಾಡಲು ತೆರಳಿದರು. ಸ್ವಾಮಿಗಳು ಮೆಲ್ಲಮೆಲ್ಲನೆ ಮಹಡಿಯಲ್ಲಿದ್ದ ತಮ್ಮ ಕೊಠಡಿಗೆ ಹೋದರು.

ಬ್ರಹ್ಮಚಾರಿಯೊಬ್ಬನು ಸರ್ವದಾ ಸ್ವಾಮಿಗಳ ಜೊತೆ ಇರುತ್ತಿದ್ದನು. ಸ್ವಾಮಿಗಳು ಎಲ್ಲ ಕಿಟಕಿ ಬಾಗಿಲುಗಳನ್ನೂ ತೆರೆಯುವಂತೆ ಆತನಿಗೆ ಹೇಳಿದರು. ಹೊರಗಡೆ ಜನನಿಬಿಡ ಘೋರಾಂಧಕಾರ ಕವಿದಿತ್ತು. ಎದುರುಗಡೆ ಭಾಗೀರಥಿಯ ವಿಶಾಲ ವಕ್ಷಸ್ಥಳದಲ್ಲಿ ತೀರದಲ್ಲಿದ್ದ ಸೌಧಗಳ ಮಣಿದೀಪ ಮಾಲೆಗಳು ಪ್ರತಿಬಿಂಬಿಸಿ, ಮೃದುತರಂಗ ನೃತ್ಯದಲ್ಲಿ ಕಂಪಿಸುತ್ತಿದ್ದುವು. ಮೇಲುಗಡೆ ಅಗಣಿತ ನಕ್ಷತ್ರಪುಂಜಗಳನ್ನು ವಕ್ಷಸ್ಥಳದಲ್ಲಿ ಧರಿಸಿದ್ದ ಆಕಾಶ ನಿಸ್ತಬ್ಧವಾಗಿತ್ತು. ಕಳವಳದಿಂದ ಕೂಡಿದ ತಂಗಾಳಿ ಬಿರುಬಿರನೆ ಬೀಸುತ್ತಿತ್ತು. ಆತ್ಮಮಗ್ನ ವಿವೇಕಾನಂದರು ದಕ್ಷಿಣೇಶ್ವರದ ಕಡೆಗೆ ಕಣ್ಣಿಟ್ಟು ನೋಡಿದರು. ಕಗ್ಗತ್ತಲೆಯನ್ನು ಭೇದಿಸಿಕೊಂಡು ಹೋದ ಅವರ ದೃಷ್ಟಿಗೆ ಏನು ತೋರಿತು! ಯಾರು ಹೇಳುವರು? ದಕ್ಷಿಣೇಶ್ವರದ ಯುಗಾವತಾರನು ಕಾಣಿಸಿಕೊಂಡನೆ! ಯುಗಪ್ರವರ್ತಕ ಯೋಗೀಶ್ವರನ ಜ್ಞಾನ ದೃಷ್ಟಿಗೆ ಜಗತ್ತು ಒಂದು ತೆಳ್ಳನೆಯ, ಬಹು ತೆಳ್ಳನೆಯ, ಪರದೆಯಂತೆ ತೋರಿತು. ರಹಸ್ಯತಮ ಯವನಿಕೆಯ ಹಿಂದೆ ಯಾವ ಆನಂದನಿಕೇತನ ಕಾಣಿಸಿಕೊಂಡಿರಬಹುದು? ಪ್ರಸ್ತರ ಮೂರ್ತಿಯಂತೆ ನಿಂತಿದ್ದ ಸ್ವಾಮಿಜಿ ಬಹುಕ್ಷಣಗಳಾದ ಮೇಲೆ ತೆಕ್ಕನೆ ಎಚ್ಚತ್ತವರಂತೆ ಹಿಂತಿರುಗಿದರು. ಬಳಿಯಿದ್ದ ಬ್ರಹ್ಮಚಾರಿಗೆ ಹೊರಗೆ ಹೋಗಿ ಜಪ ಮಾಡುವಂತೆ ಹೇಳಿ ತಾವೂ ಒಂದು ಜಪಮಾಲೆಯನ್ನು ಹಿಡಿದು ಪದ್ಮಾಸನ ಹಾಕಿ ಕುಳಿತರು.

ಒಂದು ಗಂಟೆಯಾದ ಮೇಲೆ ಮೇಲೆದ್ದು ಬ್ರಹ್ಮಚಾರಿಯನ್ನು ಕರೆದು ಬಿಜ್ಜಣ ವಿಕ್ಕುವಂತೆ ಹೇಳಿ ಮಂಚದ ಮೇಲೆ ಮಲಗಿದು. ಜಪಮಾಲಾಹಸ್ತನಾದ ಮಹಾಪುರುಷನ ದೇಹ ನಿಸ್ಪಂದವಾಗಿತ್ತು. ಸ್ಥಿರವಾಗಿತ್ತು. ರಾತ್ರಿ ಒಂಭತ್ತು ಗಂಟೆ ಹೊಡೆಯಿತು. ಸ್ವಾಮಿಗಳ ಕೈ ಗಡಗಡ ನಡುಗಿದುವು. ನಿದ್ದೆಯಲ್ಲಿರುವ ಶಿಶುವಿನಂತೆ ಅಸ್ಫುಟವಾಗಿ ಅಳತೊಡಗಿದರು. ಒಡನೆಯೆ ಶಾಂತರಾಗಿ ಎದ್ದುಕುಳಿತರು. ಎರಡು ಸಾರಿ ದೀರ್ಘವಾಗಿ ನಿಟ್ಟುಸಿರುಬಿಟ್ಟರು. ಕೂಡಲೆ ಹಾಸಿಗೆಯ ಮೇಲೆ ಉರುಳಿದರು. ದಿಗಿಲುಬಿದ್ದ ಬ್ರಹ್ಮಚಾರಿ ಕಿಂಕರ್ತವ್ಯ ವಿಮೂಢನಾಗಿ ಮಹಡಿಯಿಂದ ಕೆಳಕ್ಕೆ ಹಾರಿ ಬಿದ್ದು ಓಡಿಹೋಗಿ ಹಿರಿಯ ಸಂನ್ಯಾಸಿಗಳಿಗೆ ಸುದ್ದಿಯನ್ನು ಒದರಿಬಿಟ್ಟನು. ಎಲ್ಲರೂ ಓಡಿಬಂದು ನೋಡಿದರು.

ಯೋಗಿವರ್ಯನು ಅನಂತ ನಿದ್ರೆಯಲ್ಲಿದ್ದನು! ಕವಿದಿದ್ದ ಕಗ್ಗತ್ತಲೆಯ ಅಂತರಾಳದಿಂದ ಬಂದು ಜಗನ್ಮಾತೆ ತನ್ನ ರಣಶ್ರಾಂತ ವೀರಪುತ್ರನನ್ನು ಎದೆಗಪ್ಪಿಕೊಂಡು ಹೋಗಿಬಿಟ್ಟಿದ್ದಳು! ಯೋಗಿ ಅಂತರ್ಧಾನವಾಗಿದ್ದನು; ಮಂತ್ರದ್ರಷ್ಟನು ಮಾಯವಾಗಿದ್ದನು! ಶ್ರೀರಾಮಕೃಷ್ಣರ ಪ್ರಿಯತಮ ಶಿಷ್ಯನು ಗುರುಚರಣಸ್ಥನಾಗಿದ್ದನು! ವೇದಾಂತ ತತ್ತ್ವಗತನಾಗಿದ್ದನು! ನರನಾಗಿ ಬಂದ ನರಮಹರ್ಷಿ ನಾರಾಯಣನಲ್ಲಿ ಮುಳುಗಿ ಕಣ್ಮರೆಯಾಗಿದ್ದನು!

ಬಾಂದಳದಲ್ಲಿ ಇದ್ದಕ್ಕಿದ್ದ ಹಾಗೆ ಬರಸಿಡಿಲು ಬಡಿದಂತಾಯಿತು. ಹೀಗಾಗುತ್ತದೆಂದು ಯಾರೂ ಕನಸಿನಲ್ಲಿಯೂ ಭಾವಿಸಿರಲಿಲ್ಲ. ಕೆಲವರು ಅವರ ಮರಣ ವಾರ್ತೆಯನ್ನು ನಂಬದೆ ಹೋದರು. ಕೆಲವರು ವಿಸ್ಮಯಸ್ತಂಭಿತರಾದರು. ಸಂನ್ಯಾಸಿಗಳೆಲ್ಲರೂ ಕಂಗೆಟ್ಟು, ಎದೆಗೆಟ್ಟು ಹೋದರು. ನೂರಾರು ದೂತರು ದುಃಖವಾರ್ತೆಯನ್ನು ಹರಡಲು ಹೊರಟರು. ತಂತಿಗಳು ಪೂರ್ವಾರ್ಧ ಪಶ್ಚಿಮಾರ್ಧ ಗೋಳಗಳಲ್ಲಿ ಸಂಚರಿಸತೊಡಗಿದುವು. ಲಕ್ಷ ಲಕ್ಷ ಜನಗಳು ವಾರ್ತೆಯನ್ನು ಕೇಳಿ, ನಂಬಲಾರದೆ “ಎಲ್ಲಿಯಾದರೂ ಉಂಟೆ?” ಎಂದು ಹೇಳಿ ಮೂಕರಾದರು. ಭರತಮಾತೆ ವಿಷಣ್ಣವದನೆಯಾದಳು.

ಬೆಳಗಾಗುತ್ತಲೆ ಬೇಲೂರು ಮಠ ಜನರಿಂದ ತುಂಬಿಹೋಯಿತು. ಎತ್ತಲೂ ಕಳವಳ! ಎಲ್ಲೆಲ್ಲಿ ನೋಡಿದರೂ ಶೋಕ! ಜನರು ಒಬ್ಬೊಬ್ಬರಾಗಿ ಬಂದು ಸ್ವಾಮಿಗಳ ದಿವ್ಯದೇಹ ದರ್ಶನ ಮಾಡಿದರು. ಕೆಲವರು ಆಚಾರ್ಯದೇವನು ಸಮಾಧಿಯಲ್ಲಿರಬಹುದೆಂದು ಆಲೋಚಿಸಿ, ಮೃತ್ಯುವನ್ನು ವಂಚಿಸಿ ಪ್ರಲೋಭನಗೊಳಿಸತೊಡಗಿದರು. ಪರೀಕ್ಷೆಗಾಗಿ ವೈದ್ಯರು ಬಂದರು. ಒಬ್ಬೊಬ್ಬರು ಒಂದೊಂದು ವಿಧವಾಗಿ ಹೇಳಿದರು. ಬರಬರುತ್ತ ದೇಹವು ನಿಷ್ಪಂದಶೀತಲವಾಯಿತು. ಸಹಸ್ರ ಜನರ ಕ್ರಂದನಧ್ವನಿಯೆದ್ದು ಬಹುದೂರದವರೆಗೂ ಹಬ್ಬಿ ಮರುದನಿಯಾಯಿತು.

ಸ್ವಲ್ಪ ಹೊತ್ತಿನ ಮೇಲೆ ದೇಹ ಮಹಡಿಯಿಂದ ಕೆಳಗಿಳಿಸಲ್ಪಟ್ಟಿತು. ಕಾಷಾಯ ವಸ್ತ್ರಗಳಿಂದ ಅದನ್ನು ಸುತ್ತಿದರು. ವಿವಿಧ ಪುಷ್ಪಮಾಲಿಕೆಗಳನ್ನು ತೊಡಿಸಿದರು. ಚಂದನವನ್ನು ಲೇಪಿಸಿದರು. ಮಂಗಳಾರತಿ ಬೆಳಗಿದರು. ಸುಗಂಧ ದ್ರವ್ಯಗಳನ್ನು ಉರಿಸಿದರು. ಶಂಖಧ್ವನಿಯೆದ್ದಿತು. ಗಂಟೆಗಳು ಕೂಗಿದುವು. ಕಡೆಗೆ ಶ್ಮಶಾನಯಾತ್ರೆ ಪ್ರಾರಂಭವಾಯಿತು. “ಜೈ ಗುರುಮಹಾರಾಜಕೀ ಜೈ! ಜೈ ಸ್ವಾಮಿಜಿ ಮಹಾರಾಜಕೀ ಜೈ!” ಎಂಬ ಮಹಾರವ ಅಂಬರಕ್ಕೇರಿತು.

ಭೀಷಣ ಸ್ಮಶಾನದಲ್ಲಿ ತಳತಳಿಸಿ ಮೇಲೆದ್ದು ಲೋಹಿತಾಗ್ನಿ ಜ್ವಾಲೆಗಳು ಮಿಥ್ಯೆಯನ್ನು ಭಸ್ಮೀಭೂತವನ್ನಾಗಿ ಮಾಡಿದುವು. ಅಷ್ಟುಹೊತ್ತಿಗೆ ಸೂರ್ಯದೇವನು ಅಸ್ತಗಿರಿಯ ಮಸ್ತಕದಲ್ಲಿ ಇಳಿದನು. ಮೆಲ್ಲಮೆಲ್ಲನೆ ಕತ್ತಲೆ ಕವಿಯಿತು. ಯುಗಮಹರ್ಷಿಯ ಅಲೌಕಿಕ ತೇಜೋಮಂಡಿತ ಕಾಯ ಮಾಯವಾಯಿತು. ಆತನ ಶಾಶ್ವತ ಧರ್ಮವಾಣಿ ಪೃಥ್ವಿಯ ಹೃದಯದಲ್ಲಿ ಚಿರಮುದ್ರಿತವಾಯಿತು.

* * *