ಕರೆಯುತಿದೆ ಯುಗಧರ್ಮವಾಣಿ, ಓ ಅಮೃತಪುತ್ರರಿರಾ, ಕಿವಿಗೊಟ್ಟು ಕೇಳಿ. ಕಂಗೆಟ್ಟವರಿಗೆ ಕಣ್ಬೆಳಕಾಗಿ, ನೆಚ್ಚುಗೆಟ್ಟವರಿಗೆ ಎದೆಗೆಚ್ಚಾಗಿ, ಜಡರಿಗೆ ಉತ್ಸಾಹವಾಗಿ, ಮೃತಪ್ರಾಯರಿಗೆ ಸಂಜೀವಾಮೃತವಾಗಿ, ತಾರಸ್ವರದಿಂದ ಕೂಗಿ ಕರೆಯುತ್ತಿದೆ ನವಯುಗಧರ್ಮವಾಣಿ. ಉಲ್ಲೋಲ ಕಲ್ಲೋಲವಾದ ಮಹಾಸಮುದ್ರ ತರಂಗದ ಪ್ರಚಂಡ ಘೋಷದಂತೆ, ನಿಶ್ಚಲವಾದ ನೀರವವಾದ ಭೂಮವಾದ ಮಹಾಪರ್ವತದ ಧ್ಯಾನ ಗಾಂಭೀರ್ಯದ ಅವ್ಯಕ್ತನಿನಾದದಂತೆ, ವೈಶಾಖಮಾಸದ ಮಧ್ಯಾಹ್ನದ ಲಕ್ಷಲಕ್ಷ ಸ್ವಪ್ನಗರ್ಭಿತಸುಪ್ತಿಯ ನಿಶ್ಶಬ್ಧತೆಯಲ್ಲಿ ಕೇಳಿಬರುವ ಅನಂತಾಕಾಶದ ಸುನೀಲ ಆಹ್ವಾನದಂತೆ, ಚೈತ್ರಾರಣ್ಯದ ಪಕ್ಷಿ ಸಂಕುಲದ ತುಮುಲ ಕಾಕಲಿಯಂತೆ, ಸುಂದರವಾಗಿ ಮನೋಹರವಾಗಿ ವೀರವಾಗಿ ರುದ್ರವಾಗಿ ಕರುಣವಾಗಿ ಕರೆಯುತ್ತಿದೆ ನವೀನ ಯುಗಧರ್ಮವಾಣಿ.

ಆ ಉದಾರವಾಣಿಯಲ್ಲಿ ಕಾಲದೇಶಜನ್ಯವಾದ ಸಂಕುಚಿತ ದೃಷ್ಟಿಯ ಅಪಸ್ವರವಿಲ್ಲ, ವೈರವಿಲ್ಲ, ಜುಗುಪ್ಸೆಯಿಲ್ಲ, ಅಸೂಯೆಯಿಲ್ಲ. ಮೂಢಬುದ್ಧಿಯ ಹ್ರಸ್ವತೆಯಿಲ್ಲ, ಅಂಧಶ್ರದ್ಧೆಯ ಕುಬ್ಜತೆಯಿಲ್ಲ. ಅದು ನಿರಂಕುಶವಾಗಿದೆ, ಸ್ವತಂತ್ರವಾಗಿದೆ, ವಿಚಾರಪೂರ್ವಕವಾಗಿದೆ, ನಿಯಮಸಂಯಮಶೀಲವಾಗಿದೆ. ಆ ಅಸೀಮವಾಣಿ ಇಂದ್ರಿಯಾನುಭವಗಳ ತೈಲದಿಂದ ಪೋಷಿತವಾದ ವಿಜ್ಞಾನಬುದ್ಧಿಯ ಬತ್ತಿಯ ತುದಿಹೊತ್ತಿ ಉರಿದು ತೊಳತೊಳಗುವ ಜ್ಞಾನಸಿದ್ಧಿಯ ಸೊಡರಿನಂತೆ ಸರ್ವರಿಗೂ ಜ್ಯೋತಿಃಪ್ರದವಾಗಿದೆ. ಅದು ವಾಣಿಯೂ ಅಹುದು; ಕಾಂತಿಯೂ ಅಹುದು. ಕಿವಿಗೆ ಕರೆದು ಎಚ್ಚರಿಸುವ ದನಿಯಾದರೆ, ಕಣ್ಣಿಗೆ ಹೊಳೆದು ಹಾದಿ ತೋರುವ ಬೆಳಕಾಗಿದೆ.

ಅದು ಒಂದು ವ್ಯಕ್ತಿಯ ವಾಣಿಯಲ್ಲ; ಒಂದು ಕಣ್ಣಿನ ಕಾಂತಿಯಲ್ಲ. ಅನೇಕ ಮಹಾಪುರುಷರ ಜೀವಜ್ಯೋತಿಗಳ ಸೂತ್ರಸಮಸ್ಟಿಯಾಗಿದೆ; ಬಹು ಜೀವನಗಳ ದರ್ಶನಗಳ ಗೋಷ್ಠಿಯಾಗಿದೆ. ಅದರಲ್ಲಿ ಪ್ರಾಚ್ಯ, ಪಾಶ್ಚಾತ್ಯ, ಹಿಂದೂ, ಕ್ರೈಸ್ತ, ಇಸ್ಲಾಮ್, ಬೌದ್ಧ, ಮತ, ತತ್ತ್ವ, ವಿಜ್ಞಾನ, ಕಲಾ, ಇಹ, ಪರ, ದೇಹ, ಆತ್ಮ, ನೂತನ, ಪುರಾತನ – ಎಲ್ಲವೂ ಸಮನ್ವಯಗೊಂಡಿದೆ. ಅದು ಯಾವುದೊಂದು ಮತಕ್ಕಾಗಲಿ, ಪಥಕ್ಕಾಗಲಿ ಸೇರಿಲ್ಲ. ಅದು ಒಂದು ಜನಾಂಗದ್ದಲ್ಲ; ಸರ್ವಕಾಲ ದೇಶಗತವಾದುದು.

ಆ ದಿವ್ಯದರ್ಶನದ ಕಾಮನಬಿಲ್ಲಿನಲ್ಲಿ ಉಪನಿಷತ್ತುಗಳಂತೆಯೆ ಯವನ ದಾರ್ಶನಿಕರ ತತ್ತ್ವಜ್ಞಾನವೂ ಒಂದು ಬಣ್ಣವಾಗಿ ಸೇರಿ ರಂಜಿಸುತ್ತಿದೆ. ವೇದದಂತೆಯೆ ಬೈಬಲ್ಲೂ, ಪ್ರಾಚೀನ ಶ್ರದ್ಧೆಯಂತೆಯೆ ಅರ್ವಾಚೀನ ವಿಜ್ಞಾನ ಬುದ್ಧಿಯೂ, ಅದರ ಮನೋಹರತೆಗೆ ಅಂಗಗಳಾಗಿವೆ. ರಾಮಮೋಹನರಾಯ ಮತ್ತು ಕೇಶವಚಂದ್ರಸೇನರ ವ್ಯಕ್ತಿತ್ವಗಳಂತೆಯೆ ನಾರಾಯಣಗುರು ಮತ್ತು ದಯಾನಂದ ಸರಸ್ವತಿಯರ ವ್ಯಕ್ತಿತ್ವಗಳೂ ವರ್ಣಜಾಲದಲ್ಲಿ ಹಾಸುಹೊಕ್ಕಾಗಿವೆ. ನ್ಯೂಟನ್, ಡಾರ್ವಿನ್, ಫ್ರಾಯ್ಡ್, ಐನ್‌ಸ್ಟೈನರುಗಳಂತೆಯೆ ಲೆನಿನ್, ಗಾಂಧಿ, ಟಾಲ್‌ಸ್ಟಾಯ್, ಠಾಕೂರರೂ ಅಲ್ಲಿ ಮನೆಮಾಡಿದ್ದಾರೆ. ಆ ದರ್ಶನ ನಿರಂಕುಶ ಮತಿಗಳನ್ನು ಸರ್ವದಾ ಆಹ್ವಾನಿಸುತ್ತದೆ. ದಾಸ್ಯಬುದ್ಧಿಯಿಂದ ಪಾರಾಗುವ ಮುಕ್ತ ಮತಿಗಳಿಗೆ ಅಲ್ಲಿ ಮಹಾಲಿಂಗನ ಸೌಖ್ಯವಿದೆ. ಅದು ಸ್ವತಂತ್ರಮತಿಗಳ ಧೀರ ಸಾಮ್ರಾಜ್ಯ. ಅಲ್ಲಿ ಸಾಕ್ಷಾತ್ಕಾರವಲ್ಲದೆ ಬಲಾತ್ಕಾರವಿಲ್ಲ. ಅಲ್ಲಿಯ ಹಾದಿ ಬುದ್ಧಿ; ಅಲ್ಲಿಯ ಗುರಿ ಸಿದ್ಧಿ.

ಆ ದರ್ಶನ ಪ್ರವೇಶ ಮಾಡಿದವರಿಗೆ ಜಾತಿಯಿಲ್ಲ, ಮತವಿಲ್ಲ! ಅಂಧಶ್ರದ್ಧೆಯೂ ಮಂದಬುದ್ಧಿಯೂ ಒಪ್ಪಿಕೊಳ್ಳುವ ಆ ಮತದಗ್ರಂಥದ ಅಥವಾ ಈ ಮತಾಚಾರ್ಯನ ಪರಮ ಪ್ರಾಮಾಣ್ಯದ ಗೊಡವೆಯೂ ಇಲ್ಲ. ಅಲ್ಲಿ ವರ್ಡ್ಸ್ ವರ್ತ್ ಕವಿಯಂತೆಯೆ ವೇದದ ಋಷಿವರ್ಯನೂ ಪೂಜ್ಯನು. ಅವನಿಗಿಂತ ಹೆಚ್ಚಲ್ಲ, ಅವನಿಗಿಂತ ಕಡಮೆಯಲ್ಲ. ಅವನ ಕವನವನ್ನು ಪರೀಕ್ಷಿಸಿದಂತೆಯೆ ಇವನ ಮಂತ್ರವನ್ನೂ ಪರೀಕ್ಷಿಸುತ್ತೇವೆ; ವಿಮರ್ಶಿಸುತ್ತೇವೆ; ಮತಿಯೊಪ್ಪಿದರೆ ಶ್ಲಾಘಿಸುತ್ತೇವೆ; ಪ್ರತಿಭೆಯೊಪ್ಪಿದರೆ ಪೂಜಿಸುತ್ತೇವೆ; ಇಲ್ಲದಿದ್ದರೆ ಗೌರವದಿಂದಲಾದರೂ ಕಿರುನಗೆಯಿಂದ ಕೆಲಕ್ಕೊತ್ತುತ್ತೇವೆ.

ಆ ದರ್ಶನಜ್ಯೋತಿಯಿಂದ ದೇದೀಪ್ಯಮಾನವಾದ ವ್ಯಕ್ತಿ ರಸಋಷಿಯಾಗುತ್ತಾನೆ. ಆತನ ನಾಡಿನಾಡಿಗಳಲ್ಲಿ ಆನಂದದ ಪ್ರವಾಹ ಹರಿಯುತ್ತದೆ. ಆತನು ಶಾಂತಮೂರ್ತಿಯಾಗುತ್ತಾನೆ. ಆತನು ಸಮುದ್ರತೀರದಲ್ಲಿ ನಿಂತು ನೋಡುತ್ತಿದ್ದರೆ, ಸಮುದ್ರವೆಲ್ಲ ಅವನ ರಕ್ತನಾಳಗಳಲ್ಲಿ ಪ್ರವಹಿಸಿ, ಅವನೊಳಗೈಕ್ಯವಾಗುತ್ತದೆ: ಅಗಸ್ತ್ಯನಾಗುತ್ತಾನೆ! ಅನಂತಾಕಾಶವನ್ನು ನಿಟ್ಟಿಸಿದರೆ ಮೈನೆತ್ತರೆಲ್ಲ ನೀಲಿಗಟ್ಟಿ ನೀಲವಾಗುತ್ತಾನೆ: ವಿಷ್ಣುವಾಗುತ್ತಾನೆ! ಕರ್ಕಶರೂಪದ ಪ್ರೇತಾಸ್ಥಿಪಂಜರದ ದಾರಿದ್ರ್ಯವನ್ನು ಕಂಡಾಗ ಪ್ರೇತಸ್ವರೂಪಿಯಾಗಿ ಬಡವರಿಗಾಗಿ ಮರುಗಿ, ಸಮತಾ ಸ್ಥಾಪನೆಗಾಗಿ ಅವರಿಗೆ ನೆರವಾಗುತ್ತಾನೆ: ಕಲ್ಕಿಯಾಗುತ್ತಾನೆ! ನೀಚ ಸ್ವಾರ್ಥಕ್ಕಾಗಿ ಧರ್ಮದ ಬಲೆಯನ್ನೊಡ್ಡುವ ಹೀನಕ್ಕೆ ಅವನೆಂದಿಗೂ ಇಳಿಯುವುದಿಲ್ಲ. ಸತ್ಯವೊಂದೇ ಆತನ ಬುದ್ಧಿಗೆ ಲಕ್ಷ್ಯವಾಗುತ್ತದೆ; ಶಿವವೊಂದೇ ಆತನ ಹೃದಯಕ್ಕೆ ಶ್ರದ್ಧೆಯಾಗುತ್ತದೆ; ಸೌಂದರ್ಯವೊಂದೇ ಆತನ ಆತ್ಮಕ್ಕೆ ಪರಮ ಪುರುಷಾರ್ಥವಾಗುತ್ತದೆ.

ಅಂತಹ ದರ್ಶನಲಾಭವೇ ಜೀವಿತದ ಚರಮೋದ್ದೇಶ. ಅದನ್ನು ಪಡೆಯಲು ಸರ್ವರೂ ಪ್ರಯತ್ನಿಸಬೇಕು. ಯಾವುದಾದರೊಂದು ಮತಸಂಸ್ಥೆಗೆ ಸದಸ್ಯನಾದ ಮಾತ್ರಕ್ಕೇ ಅದು ಲಭಿಸುವುದಿಲ್ಲ. ಬಹುಶಃ ಒಂದು ಮತ ಸಂಸ್ಥೆಗೆ ಸೇರುವುದು ಎಡರಾಗಿ ಪರಿಣಮಿಸಿದರೂ ಪರಿಣಮಿಸಬಹುದು. ಸಂಸ್ಥಾಬದ್ಧವಾದ ಸತ್ಯವು ಬಹುಬೇಗನೆ ಸಂಕುಚಿತವಾಗಿ ಕಳೆಗೆಟ್ಟು ಮಿಥ್ಯಾಚಾರಿಯಾಗುತ್ತದೆ. ಆದ್ದರಿಂದ ಪ್ರತಿಭೆ ನವನವೋನ್ಮೇಷಶಾಲಿಯಾಗಿರಲು ನಿರಂತರವೂ ಪ್ರಯತ್ನಿಸುತ್ತಿರಬೇಕು. ನಿರಂತರ ಪ್ರಯತ್ನವೇ ಜೀವನ; ತುದಿಮುಟ್ಟಿದೆವೆಂದು ನಿಲ್ಲುವುದೇ ಮೃತ್ಯು. ಸಲ ಸಲವೂ ತನ್ನನ್ನು ತಾನು ಮೀರಲೆಳಸುವುದೇ ಸಾಧನೆ. ಅನಂತವಾದ ಆತ್ಮವನ್ನು ಅನಂತವಾಗಿಯೇ ಸಾಧಿಸಬೇಕು. ಸಿದ್ಧಿ ಎಂದರೆ ಕಾಲದಲ್ಲಿ ಕೊನೆಮುಟ್ಟುವುದೆಂದಲ್ಲ; ಕಾಲವನ್ನೇ ನುಂಗಿ ಮೀರಿವುದು.

ಅಂತಹ ದರ್ಶನಸಿದ್ಧಿಗೆ ಜಗತ್ತಿನ ಮಹಾಪುರುಷರ ಆಶೀರ್ವಾದವೂ ಅತ್ಯಾವಶ್ಯಕ. ಅವರು ಯಾವ ಮತದವರೇ ಆಗಿರಲಿ; ಹಿಂದಿನವರಾಗಲಿ, ಇಂದಿನವರಾಗಲಿ; ಧರ್ಮಜ್ಞಾನಿಗಳಾಗಲಿ, ವಿಜ್ಞಾನಿಗಳಾಗಲಿ. ಆದರೆ ಯಾವ ಒಬ್ಬ ವ್ಯಕ್ತಿಗೂ ಆತನೆಷ್ಟೇ ಮಹತ್ತಾಗಿರಲಿ, ದಾಸರಾಗಿ ನಮ್ಮ ಬುದ್ಧಿ ಸ್ವಾತಂತ್ರ್ಯವನ್ನು ಬಲಿಗೊಡುವುದು ಅಪಾಯ. ಏಕೆಂದರೆ ಬುದ್ಧಿ ಸ್ವಾತಂತ್ರ್ಯವನ್ನು ಬಿಟ್ಟರೆ ನಾವು ಮೋಸಹೋಗಬಹುದು. ಇಟ್ಟುಕೊಂಡಿದ್ದರೆ ಒಂದೆಡೆ ಮೋಸಹೋದರೂ ಅಲ್ಲಿಂದ ಪಾರಾಗಿ ಮತ್ತೊಂದೆಡೆಗೆ ದಾಟಿ ಸತ್ಯಾನ್ವೇಷಣೆ ಮಾಡಬಹುದು.

ದಿನದಿನವೂ ಹೊಸ ಹೊಸ ಸಿದ್ಧಾಂತಗಳು ಹೊಮ್ಮಿ ದಾಳಿಯಿಡುತ್ತಿರುವ ಈ ನವೀನ ಕಾಲದಲ್ಲಿ, ತಾತ್ಕಾಲಿಕವಾಗಿ ಸತ್ಯವೆಂದಾಗಲಿ ಸಾಕೆಂದಾಗಲಿ ತೋರುವ ಯಾವುದಾದರೊಂದು ನಂಬಿಕೆಯನ್ನು ಹಿಡಿದು, ಬಾಗಿಲು ಮುಚ್ಚಿಕೊಂಡು, ಮನಸ್ಸು ನೆಮ್ಮದಿಯಾಗಿರುವುದು ದುಸ್ಸಾದ್ಯ. ಸಾಧ್ಯವಾದರೂ ಸತ್ಯದ ದೃಷ್ಟಿಯಿಂದ ಕ್ಷೇಮಕರವಲ್ಲ.

ಮತಪ್ರಪಂಚದಲ್ಲಿ ನೋಡಿದರೆ, ನೂರಾರುಮಂದಿ ಯೋಗಿಗಳೂ ಮಹರ್ಷಿಗಳೂ ಅವತಾರಗಳೂ ಪ್ರವಾದಿಗಳೂ ಮೆಸ್ಸಾಯಗಳೂ ಗುರುಗಳೂ ಜಗದ್ಗುರುಗಳೂ ಮಹಾತ್ಮರುಗಳೂ ಅಣಬೆಗಳಂತೆ ಮೂಡುತ್ತಿದ್ದಾರೆ. ಅವರಲ್ಲಿ ಪ್ರತಿಯೊಬ್ಬರೂ ವಿಶ್ವಮೈತ್ರಿಯನ್ನು ಬೋಧಿಸುತ್ತ ಮತ್ತೊಬ್ಬರನ್ನು ಖಂಡಿಸುತ್ತಾರೆ. ಒಬ್ಬೊಬ್ಬನೂ “ನಾನು ದೇವರನ್ನು ಕಂಡಿದ್ದೇನೆ, ನಾನೇ ದೇವರವತಾರವಾಗಿದ್ದೇನೆ, ಇತರರು ಕಂಡಿದ್ದು ದೇವರನ್ನಲ್ಲ – ಹುಚ್ಚಿನಿಂದ ಅವನಿಗೆ ಭ್ರಾಂತಿ ಹಿಡಿದಿದೆ. ನನ್ನ ಭ್ರಾಂತಿಯೇ ಇತರ ಎಲ್ಲರ ಭ್ರಾಂತಿಗಳಿಗಿಂತ ಸರ್ವೋತ್ಕೃಷ್ಟವಾದುದು. ಅತ್ತ ಕಡೆ ಹೋಗಬೇಡಿ! ಹೋದರೆ ನರಕಪ್ರಾಪ್ತಿ. ನನ್ನ ಬಳಿಗೆ ಬನ್ನಿ, ದಾನದಕ್ಷಿಣೆ ತನ್ನಿ, ನಿಮಗೆ ಮೋಕ್ಷ ಸ್ವತಃಸಿದ್ಧವಾಗುತ್ತದೆ” ಎಂದು ಆಘೋಷಿಸುತ್ತಾನೆ. ಕೆಲವರಂತೂ ಸ್ವರ್ಗದಲ್ಲಿ ಒಂದು ಸ್ಥಾನವನ್ನು ಕಾಯ್ದಿಡುವುದಕ್ಕಾಗಿ ಸಾವಿರಾರು ರೂಪಾಯಿಗಳ ಬೆಲೆಯನ್ನು ಪಾದಕಾಣಿಕೆಯಾಗಿ ಸ್ವೀಕರಿಸಿ ಕರಾರು ಪತ್ರವನ್ನೂ ಬರೆದುಕೊಡುತ್ತಿದ್ದಾರಂತೆ! ಮಂಕುಮಂದಿ ಮಂದೆ ಮಂದೆಯಾಗಿ ಅಂತಹವರೊಡ್ಡಿದ ಬಲೆಗೆ ಬೀಳುತ್ತಿದ್ದಾರೆ. ಮೊದಲನೆಯ ಠಕ್ಕನು ಮೊದಲನೆಯ ಬೆಪ್ಪನನ್ನು ಸಂಧಿಸಿದಾಗ ಮತ ಹುಟ್ಟಿತು ಎಂದು ಹೇಳಿದ ನಿರಂಕುಶಮತಿಯ ಮಾತು ಹೆಜ್ಜೆಹೆಜ್ಜೆಗೂ ಸಿದ್ಧಾಂತವಾಗುತ್ತಿದೆ.

ಠಕ್ಕರ ಬಲೆಗೆ ಹಿಂಡುಹಿಂಡಾಗಿ ನುಗ್ಗುವುದನ್ನು ನೋಡಿದರೆ ಜನರಲ್ಲಿ ಸತ್ಯದ ಮತ್ತು ಶಾಂತಿಯ ತೃಷ್ಣೆ ಪ್ರಬಲವಾಗಿದೆ ಎಂದು ಗೊತ್ತಾಗುತ್ತದೆ. ಆದರೆ ನಿಜವಾದ ಅಮೃತವಾವುದೆಂದು ಅರಿತು ಪಾನಮಾಡುವುದಕ್ಕೆ ಮತಿ ಅತ್ಯಂತಾವಶ್ಯಕ.

ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಪ್ರಪಂಚಗಳಲ್ಲಿಯೂ ಹೊಸ ಹೊಸ ಭಾವಗಳು ಪ್ರಚೋದಿತವಾಗುತ್ತಿವೆ. ರಾಜನು ಪ್ರತ್ಯಕ್ಷ ದೇವತೆ ಎಂಬ ಹಳೆಯ ನಂಬುಗೆ ಕಸದ ಬುಟ್ಟಿಗೆ ಬೀಳುತ್ತಿದೆ. ಬೀದಿಯ ಪಾಮರನೂ ಪ್ರಶ್ನೆ ಮಾಡಲು ತೊಡಗಿದ್ದಾನೆ. ಹಣವಂತನು ಬಡವರು ಎಂಬ ಭೇದಭಾವವೂ, ಧನಿಕರೂ ಅವರಿಂದ ಸುಪುಷ್ಟರಾಗಿದ್ದ ಪುರೋಹಿತವರ್ಗದವರೂ ಬೋಧಿಸುತ್ತಿದ್ದ ದಾರಿದ್ರ್ಯದ ಮಹಿಮೆಯೂ, ಪುರಾತನ ಮೌಢ್ಯಮಾತ್ರಗಳೆಂದು ಪರಿಗಣಿತವಾಗಿ, ಸಾಮ್ಯವಾದ ಸರ್ವತ್ರ ತಲೆಯೆತ್ತುತ್ತಿದೆ. ಸಮಾಜದಲ್ಲಿ ಮೇಲು ಜಾತಿ ಕೀಳು ಜಾತಿಗಳೆಲ್ಲ ತಲೆಕೆಳಕಾಗುತ್ತಿವೆ. ಸಂಪ್ರದಾಯಶರಣರಾದ ಪುರೋಹಿತರು ಸನಾತನ ಧರ್ಮವನ್ನು ಕಾಪಾಡಬೇಕೆಂದು ಎಷ್ಟು ಪ್ರಯತ್ನಿಸಿದರೂ ಅದು ನಿಲ್ಲುವಂತೆ ತೋರುವುದಿಲ್ಲ.

ಇದು ಕಲಿಯುಗವಲ್ಲವೇನು? ಒಂಟಿಕಾಲಿನ ಮೇಲೆ ನಿಂತ ಧರ್ಮ ಎಷ್ಟು ಕಾಲ ತಾನೆ ನೆಲಕ್ಕುರುಳದೆ ನೆಟ್ಟಗೆ ನಿಂತಿರಲಾಗುತ್ತದೆ! ಧರ್ಮಕ್ಕಾದರೂ ಕಾಲು ನೋಯುವುದಿಲ್ಲವೇನು?

ಇದುವರೆಗೆ ಪದದಲಿತರಾಗಿದ್ದ ಮಾನವಕ್ರಿಮಿಕೀಟಗಳಿಂದು ಮೃಗರಾಜನನ್ನು ಮುತ್ತಿ ಕೊಲ್ಲುತ್ತಿವೆ. ತನ್ನ ಬಲ್ಮೆಯಿಂದಲ್ಲ, ಅವುಗಳ ಬುದ್ಧಿಹೀನವಾದ ಶ್ರದ್ಧಾ ಭಕ್ತಿಗಳಿಂದ ತಾನಿದುವರೆಗೂ ಮೃಗರಾಜನಾಗಿದ್ದುದು ಎಂಬ ನನ್ನಿ ಸಿಂಹಕ್ಕೆ ಮಂದಟ್ಟಾಗುತ್ತಿದೆ.

ಈ ಗಡಿಬಿಡಿಯ ಸಂತೆಯಲ್ಲಿ ಬುದ್ಧಿಯ ದೀಪದಂಡವಿಲ್ಲದೆ, ವಿಚಾರದ ಉತ್ತರಮುಖಿಯಿಲ್ಲದೆ, ಋಜುಮಾರ್ಗದಲ್ಲಿ ಮುಂದುವರಿಯುವುದು ಅಸಾಧ್ಯ. ಮುಂದುವರಿಯದೆ ಹಿಂದೆ ಇದ್ದಲ್ಲಿಯೆ ಇರುತ್ತೇವೆ ಎನ್ನುವವರೆಲ್ಲ ಮುಳುಗಿ ಹೋಗುತ್ತಾರೆ; ಕೊಚ್ಚಿಹೋಗುತ್ತಾರೆ; ಶೂನ್ಯವಾಗುತ್ತಾರೆ; ನಿರ್ನಾಮವಾಗುತ್ತಾರೆ! ಬದುಕಿನಲ್ಲಿ ಆಸೆಯಿರುವ ಯಾರು ತಾನೆ ಹಾಗಾಗಲು ಹಾರೈಸುತ್ತಾರೆ? ಯಾವನಾದರೊಬ್ಬನು ಹಾರೈಸಿದರೂ ಸಮಸ್ತ ಜನಾಂಗವೂ ಹಾರೈಸುವುದಿಲ್ಲ. ಆದ್ದರಿಂದ ಜನಾಂಗದ ಶ್ರೇಯಸ್ಸಿಗಾಗಿ ವಕ್ರಬುದ್ಧಿಯನ್ನು ತಿದ್ದಬೇಕು.

ಪೂಜ್ಯರಾದ ಜಗದ್ಗುರುಗಳನ್ನು ಯಾರೋ ಒಬ್ಬರು ಕೇಳಿದರಂತೆ: “ಅಂತ್ಯಜರೇ ಮೊದಲಾದ ಶೂದ್ರವರ್ಗದವರು ಉತ್ತಮ ಜಾತಿಯವರ ಕೋಟಲೆಯನ್ನು ತಡೆಯಲಾರದೆ ಅನ್ಯಮತಗಳಿಗೆ ಸೇರುತ್ತಿದ್ದಾರೆ. ಅನ್ಯಮತಗಳು ಬೆಳೆಯುತ್ತಾ ಬಂದರೆ ಹಿಂದೂಮತ ನಶಿಸುತ್ತದೆ. ಆದ್ದರಿಂದ ಅವರ ಮತವನ್ನು ತ್ಯಜಿಸದಂತೆಯೂ ತ್ಯಜಿಸಿದವರನ್ನು ಮತ್ತೆ ಮತಕ್ಕೆ ಸೇರಿಸಿಕೊಳ್ಳುವಂತೆಯೂ ಧರ್ಮಶಾಸ್ತ್ರವನ್ನು ತುಸು ಬದಲಾಯಿಸಿದರೆ ಮೇಲಲ್ಲವೆ?”

ಜಗದ್ಗುರುಗಳು ಅಪ್ಪಣೆ ಕೊಡಿಸಿದರಂತೆ: “ಸರ್ವರೂ ಹಿಂದೂಧರ್ಮವನ್ನು ತ್ಯಜಿಸಿದರೂ ಚಿಂತೆಯಿಲ್ಲ. ಒಬ್ಬನೇ ಒಬ್ಬ ಬ್ರಾಹ್ಮಣನು ವೈತರಣಿ ನದಿಯಲ್ಲಿ ಸಂಧ್ಯಾವಂದನೆ ಮಾಡುತ್ತಿರುವವರೆಗೂ ಸನಾತನ ಧರ್ಮಕ್ಕೆ ಚ್ಯುತಿಯಿಲ್ಲ!”

ಆ ಒಬ್ಬ ಬ್ರಾಹ್ಮಣನು ಬ್ರಹ್ಮಚಾರಿಯಾಗಿದ್ದರೆ ಅವನು ಮಡಿದೊಡನೆಯೆ ಸನಾತನ ಧರ್ಮವೂ ಪೂರೈಸುತ್ತದೆ. ಸಂಸಾರಿಯಾಗಿದ್ದರೆ ಅಬ್ರಾಹ್ಮಣ ಸ್ತ್ರೀಯ ಸಂಪರ್ಕದಿಂದ ವಿಧರ್ಮಿಯಾಗುತ್ತಾನೆ. ಅಂತೂ ಸನಾತನ ಧರ್ಮಕ್ಕೆ ಉಳಿಗತಿಯಿಲ್ಲ!

ಇತಿಹಾಸಬುದ್ಧಿ ಒಂದು ತಿಲಮಾತ್ರವಿರುವ ಶುದ್ಧ ಶುಂಠನೂ ಆ ಪವಿತ್ರ ಪಾದರು ಅಪ್ಪಣೆ ಕೊಡಿಸಿದಂತೆ ಗಳಪನೆಂದು ತೋರುತ್ತದೆ. ಆದರೂ ಅಂತಹ ಪ್ರತಿಭಾಶಾಲಿಗಳಾದ ಜಗದ್ಗುರುಗಳೆ ನಮ್ಮ ಸಮಾಜಸೂತ್ರವನ್ನು ಹಿಡಿದು ನಡೆಸುತ್ತಿದ್ದಾರೆ ಎಂಬುದನ್ನು ನೆನೆದರೆ ಸಮಾಜರಥದ ಕ್ಷೇಮದ ವಿಚಾರದಲ್ಲಿ ಆಶಂಕೆ ಹುಟ್ಟಿ ಹೆದರಿಕೆಯಾಗುತ್ತದೆ. ಆದ್ದರಿಂದಲೆ ಜನಾಂಗದ ಶ್ರೇಯಸ್ಸಿಗಾಗಿ ವಕ್ರ ಬುದ್ಧಿಯ ವ್ಯಕ್ತಿಯನ್ನು ಚತುರೋಪಾಯಗಳಿಂದಲೂ ತಿದ್ದಬೇಕು.

ಮತ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಪ್ರಪಂಚಗಳಲ್ಲಿ ಆಗುತ್ತಿರುವಂತೆಯೆ ವಿಜ್ಞಾನ ಪ್ರಪಂಚದಲ್ಲಿಯೂ ನವಾನ್ವೇಷಣೆಗಳೂ ನವಾವಿಷ್ಕಾರಗಳೂ ನವಸಿದ್ಧಾಂತಗಳೂ ಮೂಡುತ್ತಿವೆ. ಆದರೆ ಆ ಪ್ರಪಂಚದ ನೆಲ ಉಳಿದ ನೆಲಗಳಿಗಿಂಗಲೂ ಕೊಂಚಮಟ್ಟಿಗೆ ಗಟ್ಟಿಯಾಗಿದೆ. ಏಕೆಂದರೆ ಅಲ್ಲಿ ಭಾವಭ್ರಾಂತಿಗೆಡೆಯಿಲ್ಲ; ಬುದ್ಧಿಗೆ ಮಾತ್ರ ಸ್ಥಾನವಿದೆ. ವಿಜ್ಞಾನದ ಕೆಲವು ಸಿದ್ಧಾಂತಗಳು ಹಳೆ ಮತದ ಹಳೆ ನಂಬುಗೆಗಳಿಗೆ ನೇರವಾಗಿ ವಿರೋಧವಾಗುತ್ತಿವೆ. ಡಾರ್ವಿನ್ನನ ಪರಿಣಾಮವಾದ ಮನುಷ್ಯನು ಭಗವಂತನ ಪ್ರತ್ಯೇಕವಾದ ಸೃಷ್ಟಿಯಾಗಿ ಆತನ ಪಟ್ಟದ ಮಗುವಾಗಿದ್ದಾನೆ ಎಂಬ ನಂಬುಗೆಗೆ ಎದುರುಬೀಳುತ್ತದೆ. ಖಗೋಳ ಶಾಸ್ತ್ರದ ನವಾನ್ವೇಷಣೆಗಳಿಂದ ನಮ್ಮ ಪೃಥ್ವಿ ವಿಶ್ವದಲ್ಲೊಂದು ಕಃಪದಾರ್ಥವಾಗಿ ಪರಿಣಮಿಸಿಬಿಟ್ಟಿದೆ. ಇತ್ತೀಚೆಗೆ ಐನ್‌ಸ್ಟೈನನ ಸಾಪೇಕ್ಷ ವಾದವೂ, ಮತ್ತು ಕ್ವಾಂಟಮ್ ಸಿದ್ಧಾಂತವೂ ವಿಶ್ವರಚನೆಯ ವಿಚಾರದಲ್ಲಿ ಇದುವರೆಗಿದ್ದ ಮಾನವ ಭಾವನೆಗಳನ್ನೆಲ್ಲ ಬದಲಾಯಿಸಿಬಿಟ್ಟಿವೆ. ಅಷ್ಟೇ ಅಲ್ಲ, ಮನುಷ್ಯನ ಮನಸ್ಸು ಇದುವರೆಗೆ ಆರಾಧಿಸುತ್ತಿದ್ದ ಚಿಂತಾವಿಗ್ರಹಗಳನ್ನು ಒಡೆದು ಹಾಕಿ, ಬೇರೆಯ ಹಾದಿ ಹಿಡಿಯಬೇಕಾಗುತ್ತದೆಂದು ತೋರುತ್ತದೆ. ದೇವತೆಗಾಗಿ ಕಟ್ಟಿದ ಗುಡಿಯ ಬಲಿಪೀಠದಲ್ಲಿ ಆ ದೇವತೆಯನ್ನೇ ಯಜ್ಞಪಶುವನ್ನಾಗಿ ಮಾಡಿ ಬಲಿಗೊಡುವ ಕಾಲ ಬಂದಿದೆ. ದೇವತೆಯ ಗುಡಿಯೆ ಅದರ ಗೋರಿಯೂ ಆಗುವಂತೆ ತೋರುತ್ತಿದೆ! ನಮ್ಮ ಜ್ಞಾನದೇವತಾಮೂರ್ತಿ ಸೊನ್ನೆಯೊಳಗೆ ಪ್ರಶ್ನಾರ್ಥಕ ಚಿಹ್ನೆಗಳ ಮಧ್ಯೆಯಿರುವ ಆಶ್ಚರ್ಯಚಿಹ್ನೆಯಾಗಿದೆ. ಆದರೂ ಧೀರಮಾನವನು ಸತ್ಯಾನ್ವೇಷಣೆಯ ಸಾಹಸದಲ್ಲಿ ಭೀತನಾಗದೆ ಮುಂದೆ ನುಗ್ಗುತ್ತಿದ್ದಾನೆ.

ಅಸೀಮ ಸಾಹಸ ಕ್ಷುಬ್ಧವಾದ ಪ್ರಪಂಚ ಜೀವನ ವಾಹಿನಿಯ ಪ್ರವಾಹ ಉಕ್ಕಿ ಉಕ್ಕಿ ಬರುತ್ತಿರುವ ಇಂತಹ ಭೀಷ್ಮ ಸನ್ನಿವೇಶದಲ್ಲಿ “ಸಾಕು ಮಾಡೋ ಜನ್ಮ ಸಾಕು ಮಾಡೋ”, “ಹಿಗ್ಗುವೆ ಯಾಕೋ ಈ ದೇಹಕೆ” ಎಂದು ರಾಗಪೂರ್ಣವಾಗಿ ರೋದಿಸುತ್ತ, “ಅಂತ್ಯಜನು ಊರಿನ ಹೊರಗಿರಬೇಕು. ಹಗಲಿನಲ್ಲಿ ಕಾಣಿಸಿಕೊಳ್ಳಬಾರದು. ರಾತ್ರಿಯಲ್ಲಿಯೇ ಸಂಚರಿಸಬೇಕು. ಅವನು ಲೋಹದ ಪಾತ್ರೆಗಳನ್ನು ಉಪಯೋಗಿಸಬಾರದು, ಮೃತ್ಪಾತ್ರೆಗಳನ್ನೇ ಉಪಯೋಗಿಸಬೇಕು. ಉಚ್ಚವರ್ಣದವನು ಹೆಣಗಳಿಗೆ ಹೊದಿಸಿ ಮಸಣದಲ್ಲಿ ಬಿಸುಟ ಬಟ್ಟೆಗಳನ್ನು ಮಾತ್ರ ಅವನು ಉಟ್ಟುಕೊಳ್ಳಬೇಕು” ಎಂದು ಮೊದಲಾಗಿ ಮನುಧರ್ಮಶಾಸ್ತ್ರದಿಂದ ಶ್ಲೋಕಗಳನ್ನು ಉದ್ಧರಿಸಿ ಪಂಡಿತ ಮಂಡಲಿಯಲ್ಲಿ ವಾದಿಸುತ್ತ, ಕ್ಲೀಬ ಧರ್ಮವನ್ನು ಬೋಧಿಸುತ್ತ, ಸ್ವಾರ್ಥ ಸುಖಗಳನ್ನು ಮಾತ್ರ ಜಾಗರೂಕತೆಯಿಂದ ಸಾಧಿಸುತ್ತ, ಮಳೆ ಬರಿಸುವುದಕ್ಕಾಗಿ ಪರ್ಜನ್ಯ ಜಪ ಮಾಡುತ್ತ, ಅಕಾಲದಲ್ಲಿ ದೇವತಾ ತೃಪ್ತಿಗಾಗಿ ಯುಗಾದಿ ಹಬ್ಬಗಳನ್ನು ಮಾಡುತ್ತ, ಪುಣ್ಯಕ್ಷೇತ್ರಗಳಿಗೆ ಯಾತ್ರೆ ಹೋಗಿ ಅಂಟುರೋಗಗಳನ್ನು ಹಬ್ಬಿಸುತ್ತ, ಪೂರ್ವವೈಭವವನ್ನೇ ನೆನೆದು ಹಿಗ್ಗುತ್ತ ವರ್ತಮಾನಯುಗವನ್ನು ಹಳಿಯುತ್ತ ನಮ್ಮ ನಾಡಿನ ಸೆರೆಯಲ್ಲಿಯೇ ನಾವು ತೊತ್ತಿನ ಬಾಳು ಬಾಳೋಣವೇನು? ಆತ್ಮ ಗೌರವವಿರುವವರಾರೂ “ಇಲ್ಲ! ಇಲ್ಲ!” ಎಂದು ಗರ್ಜಿಸದಿರುವುದಿಲ್ಲ.

ಆದ್ದರಿಂದ ಸರ್ವರೂ, ಮುದುಕರಾಗಲಿ, ಹುಡುಗರಾಗಲಿ, ಪ್ರತಿಭಾಶಾಲಿಯಾಗಲಿ ಅಲ್ಲದಿರಲಿ, ಈ ನವಯುಗ ಚಕ್ರಪರಿವರ್ತನೆಗೆ ಹೆಗಲು ಕೊಡಲು ಸಿದ್ಧರಾಗಬೇಕು. ಹನುಮಂತನು ಗಿರಿಗಳನ್ನೇ ಕಿತ್ತುತಂದು ಅಡಕುತ್ತಿದ್ದರೆ ಅಳಿಲುಗಳು ಮಳಲು ಕಣಗಳನ್ನೇ ತಂದು ಚೆಲ್ಲಬಹುದು. ಸೇತುಬಂಧಕ್ಕೆ ಎರಡೂ ಬೇಕು. ಶ್ರೀರಾಮನ ಸಮದೃಷ್ಟಿಗೆ ದೊಡ್ಡದು ಚಿಕ್ಕದೆಂಬ ಪಕ್ಷಪಾತವಿಲ್ಲ. ಅವನು ನೋಡುವುದು ಕೈತೋಳನ್ನಲ್ಲ, ಎದೆಯಾಳವನ್ನು. ಆದ್ದರಿಂದ ಖಾದಿಯೋ ಕಾವಿಯೋ ಯಾವುದಾದರೊಂದು ಹಾದಿಯನ್ನು ಹಿಡಿದು ಬಾಳು ಸಾರ್ಥಕವಾಗುವಂತೆ ಮಾಡಬೇಕು. ಸ್ವಾರ್ಥದ ಕ್ರಿಮಿಜೀವನ ಎಷ್ಟುಕಾಲ ತಾನೇ ಸೊಗಸುತ್ತದೆ? ಇಂದೋ ನಾಳೆಯೋ ಬೇಸರದ ಬೇಗೆಗೆ ಬೆಂದು ಬಾಳು ಮರುಭೂಮಿಯಾಗುತ್ತದೆ. ಆದರೆ ಮಹತ್ಕಾರ್ಯವೊಂದರಲ್ಲಿ ಭಾಗಿಯಾಗುವ ಆನಂದ ಚಿರಂತನವಾದುದು. ಆ ಪ್ರಯತ್ನದಲ್ಲಿ ಸೋತರೂ ಹೆಮ್ಮೆ, ಸತ್ತರೂ ಹೆಮ್ಮೆ, ಮಹತ್ತಾಗಿ ಸೋಲುವುದೂ ಗೆಲುವಿನ ಮಹತ್ಕಾರ್ಯಕ್ಕಾಗಿ ತೇದು ವಿನಿಯೋಗಿಸಿ, ತುದಿಯಲ್ಲಿ ಸಿರಿಯಿಲ್ಲದೆ ಹೆಸರಿಲ್ಲದೆ ಅಜ್ಞಾತವಾಗಿ ಅನಾಮಧೇಯವಾಗಿ ಜೀವನರಂಗದಿಂದ ಜುಣುಗಿ ಹೋಗುವುದರಲ್ಲಿಯೂ ಒಂದು ಮಹಾನಂದವಿದೆ. ಅಂತ್ಯದಲ್ಲಿ ಪುರುಷಾರ್ಥವೊಂದೂ ನಿಷ್ಪ್ರಯೋಜನವಾಗುವುದಿಲ್ಲ, ನಿರ್ಲಕ್ಷಿತವಾಗುವುದಿಲ್ಲ, ವಿನಷ್ಟವಾಗುವುದಿಲ್ಲ. ಪುರುಷಾರ್ಥಗಳ ಪರಮಪಾವನನಿಧಿಯಾದ ಪರಮಾತ್ಮನ ಬ್ರಾಹ್ಮೀಗರ್ಭದಲ್ಲಿ ಸರ್ವವೂ ಚಿರಂತನವಾಗಿರುತ್ತದೆ, ನಿತ್ಯವಾಗಿರುತ್ತದೆ. ಸರ್ವವೂ ಸರ್ವದರಲ್ಲಿಯೂ ಸರ್ವವ್ಯಾಪಿಯಾಗಿ ಸರ್ವಸ್ವವಾಗಿರುತ್ತದೆ.

ಇಂತಹ ಬುದ್ಧಿಯುತವಾದ ಶ್ರದ್ಧೆಯಿಂದ ದೀಪ್ತರಾದ ವೀರ ತರುಣರು ಸಂಘ ಬದ್ಧರಾಗಿ ಸೇವಾಧರ್ಮವನ್ನೂ ಆತ್ಮೋದ್ಧಾರವನ್ನೂ ಕೈಕೊಳ್ಳಲು ಅನುಕೂಲವಾಗುವಂತೆ ಶ್ರೀಸ್ವಾಮಿ ವಿವೇಕಾನಂದರು ಶ್ರೀರಾಮಕೃಷ್ಣ ಮಹಾಸಂಘವನ್ನು ನಿರ್ಮಿಸಿದರು. ದೇಶದ ತರುಣರನ್ನೆಲ್ಲ ಸಂಬೋಧಿಸಿ ಕೈಬೀಸಿ ಕರೆದರು. ಆ ಯುಗವಾಣಿಯನ್ನು ಕೇಳಿ ಉತ್ಸಾಹಿತರಾಗಿ ಅನೇಕ ನಿಃಸ್ವಾರ್ಥ ಯುವಕರು ತರುಬಿ ಬಂದು ಸಂಘಬದ್ಧರಾಗಿ ಗೈರಿಕವಸನಧಾರಿಗಳಾಗಿ ದೇಶವಿದೇಶಗಳಲ್ಲಿ ಸರ್ವತೋಮುಖವಾದ ಕಾರ್ಯಕಲಾಪಗಳಲ್ಲಿ ತೊಡಗಿದ್ದಾರೆ. ಲೋಪದೋಷಗಳಿದ್ದರೂ ನ್ಯೂನಾತಿರಿಕ್ತಗಳಿದ್ದರೂ ಅಪ್ರತಿಭರಾಗದೆ ಗುರುದೇವನ ಮತ್ತು ಯುಗಾಚಾರ್ಯನ ಉದಾತ್ತ ಧರ್ಮವಾಣಿಯ ಕಟ್ಟಾಣತಿಯನ್ನು ಸ್ಥಿರಸಂಕಲ್ಪದಿಂದ ಪರಿಪಾಲಿಸುತ್ತಿದ್ದಾರೆ.

ಆದರೂ ಸ್ವಾಮಿ ವಿವೇಕಾನಂದರ ಆಹ್ವಾನವಾಣಿಗೆ ಎಷ್ಟು ಜನರು ಬಂದು ನೆರೆಯಬೇಕಾಗಿದ್ದಿತೋ ಅಷ್ಟು ಜನರು ನೆರೆದಿಲ್ಲ ಎಂದು ತೋರಬಹುದು. ಹಾಗೆ ಭಾವಿಸಿದರೆ ತಪ್ಪಾಗುತ್ತದೆ. ಶ್ರೀರಾಮಕೃಷ್ಣ ಮಹಾಸಂಘದ ಸಂನ್ಯಾಸಿ ಸದಸ್ಯತ್ವವೊಂದರಲ್ಲಿಯೇ ಕೊನೆಗೊಂಡಿಲ್ಲ ಆ ಯುಗವಾಣಿಯ ವ್ಯಾಪ್ತಿ. ಸಂಘ ಒಂದು ಶಾಖೆ; ಒಂದು ಮಹಾಶಾಖೆ. ಇತರ ಶಾಖೆಗಳೂ ಅನೇಕ ಇವೆ. ಮಹಾತ್ಮಾಗಾಂಧಿಯವರ ಅಹಿಂಸಾಪೂರ್ಣವಾದ ರಾಜಕೀಯ ರಣದುಂದುಭಿಯನ್ನು ಆಲಿಸಿ ಕಠಿಣ ಸತ್ಯಾಗ್ರಹಕ್ಕೆ ಸಹಸ್ರ ಸಹಸ್ರವಾಗಿ ನುಗ್ಗಿದ ದೇಶಭಕ್ತರ ಮತ್ತು ತರುಣ ವೀರರ ಹೃದಯಖಡ್ಗಗಳ ಧಾರಾತೀಕ್ಷ್ಣತೆಯಲ್ಲಿ ವಿವೇಕಾನಂದರ ಸಿಂಹವಾಣಿಯ ಸಾಣೆಯ ಪ್ರಭಾವವಿದ್ದುದನ್ನು ಕಣ್ಣಿದ್ದವರೆಲ್ಲ ಕಾಣಬಹುದು.

ಸ್ವಾಮಿ ವಿವೇಕಾನಂದರ ‘ಉತ್ತಿಷ್ಠತ ಜಾಗ್ರತ ಪ್ರಾಪ್ಯ ವರಾನ್ನಿಬೋಧತ’ ಎಂಬ ಕರೆ ವ್ಯರ್ಥವಾಗಿಯೂ ಇಲ್ಲ, ವ್ಯರ್ಥವಾಗುವುದೂ ಇಲ್ಲ. ಅದು ವ್ಯರ್ಥವಾದರೆ ಭರತಭೂಮಿ ಭಸ್ಮವಾದಂತೆ! ಭಾರತೀಯ ಸಂಸ್ಕೃತಿ ಮೃತವಾದಂತೆ! ಜಗಜ್ಜೀವನದ ಧರ್ಮಸರಸ್ಸು ಬತ್ತಿಹೋದಂತೆ!

ಅಲ್ಲದೆ ವಿವೇಕಾನಂದರಲ್ಲಿಯೇ ಆ ಯುಗವಾಣಿ ಪರಿಸಮಾಪ್ತವಾಗಿಲ್ಲ. ವಿವೇಕಾನಂದರು ಆ ಚಿರಂತನ ನವ್ಯವಾದ ಮಹಾವಾಣಿಯಲ್ಲಿ ಒಂದು ಮುಖ್ಯವಾದ ತಾನ ಮಾತ್ರವಾಗಿದ್ದಾರೆ. ನವಯುಗ ಶಕ್ತಿದೇವತೆಯಾದ ಮಹಾಕಾಳಿಗೆ ಸಹಸ್ರಾರು ಬಾಹುಗಳಿವೆ. ಶ್ರೀರಾಮಕೃಷ್ಣರಂತೆಯೇ ಸ್ವಾಮಿ ವಿವೇಕಾನಂದರೂ ಆ ಭೀಮಬಾಹುಗಳಲ್ಲಿ ಒಂದಾಗಿದ್ದಾರೆ. ಆ ಶಕ್ತಿದೇವತೆಯ ಪ್ರಕಾಶ ವಿಧಾನಗಳಿಗೆ ಇತಿಮಿತಿಯನ್ನು ಕಲ್ಪಿಸುವುದು ಶಠಭ್ರಾಂತಿಯಾಗುತ್ತದೆ. ವಿವೇಕಾನಂದರೇ ಹೇಳಿದ್ದಾರೆ: “ವೇದಗಳ ಕೊನೆಯ ಅಧ್ಯಾಯವಿನ್ನೂ ಬರೆಯಲ್ಪಟ್ಟಿಲ್ಲ; ಮಹರ್ಷಿಗಳ ಆಗಮನಕ್ಕೆ ಕೊನೆಯಂಕದ ಪರದೆಯಿನ್ನೂ ಬಿದ್ದಿಲ್ಲ. ಹೊಸ ಮಂತ್ರಗಳೂ ಮೂಡುತ್ತವೆ; ಹೊಸ ಋಷಿಗಳೂ ಆವಿರ್ಭವಿಸುತ್ತಾರೆ” ಎಂದು. ಅವರು ತಿದ್ದಿದ ತಪ್ಪಿನಿಂದ ಅವರಿಗೇ ಮಂಗಳಾರತಿ ಎತ್ತುವುದು ಸುಬುದ್ಧಿಯಲ್ಲ.

ಶ್ರೀರಾಮಕೃಷ್ಣ – ವಿವೇಕಾನಂದರಿಗೆ ಪೂರ್ವದಲ್ಲಿಯೂ ಅವರ ತರುವಾಯವೂ ಅನೇಕ ಮಹಾವ್ಯಕ್ತಿಗಳು ನವಯುಗವಾಣಿಗೆ ತಮ್ಮ ಕೊರಳ ದನಿಯನ್ನು ಸೇರಿಸಿದ್ದಾರೆ ಮತ್ತು ಸೇರಿಸುತ್ತಿದ್ದಾರೆ. ಸ್ವಲ್ಪ ಸ್ಥೂಲವಾಗಿ ಹೇಳುವುದಾದರೆ, ಅವರು ಧರ್ಮಪ್ರಪಂಚದಲ್ಲಿ ಕೊರಳೆತ್ತಿದಂತೆ ರವೀಂದ್ರನಾಥ ಠಾಕೂರರು ಕಲಾಪ್ರಪಂಚದಲ್ಲಿಯೂ ಮಹಾತ್ಮಾ ಗಾಂಧಿಯವರು ರಾಜಕೀಯ ಸಾಮಾಜಿಕ ಪ್ರಪಂಚದಲ್ಲಿಯೂ ಕೊರಳೆತ್ತಿದ್ದಾರೆ. ಆ ಇಬ್ಬರ ಸಂದೇಶಗಳನ್ನು ಗೌರವಾಶ್ಚರ್ಯೋತ್ಸಾಹಗಳಿಂದ ಲೋಕವಿನ್ನೂ ಕಿವಿಗೊಟ್ಟಾಲಿಸುತ್ತಿದೆ.

[1]

ಭರತಖಂಡದಲ್ಲಿ ಮಾತ್ರವೆ ಅಲ್ಲದೆ ಹೊರಗೂ ಆ ಶಕ್ತಿದೇವತೆಯ ತೋಳುಗಳು ಕೆಲಸ ಮಾಡುತ್ತಿವೆ. ಸಾಮ್ರಾಜ್ಯತಾ ಶಾಕಿನಿಗಳು ರಕ್ತಪಿಪಾಸೆಯಿಂದಲೂ ನಗ್ನ ಕ್ರೌರ್ಯದಿಂದಲೂ ಜೀವನ ಸೌಖ್ಯದ ಹೊಟ್ಟೆಯನ್ನು ಸೀಳಿ, ನೆತ್ತರನ್ನು ಹೀರಿ, ಕರುಳಿನ ಜಯಮಾಲೆಗಳಿಂದ ಮೆರೆಯುತ್ತಿದ್ದರೂ, ಅಲ್ಲಲ್ಲಿ ದೀನ ಶಾಂತಿಯ ದೇವದೂತರು ಎದೆಗೆಡದೆ ಸಮಸ್ತ ಪ್ರಪಂಚದ ಸ್ನೇಹ ಶಾಂತಿಗಳಿಗೆ ಸನ್ನಾಹ ನಡೆಸುತ್ತಿದ್ದಾರೆ. ಲೋಕದ ಬಾಳು ಬದುಕಬೇಕಾದರೆ ಸರ್ವರೂ ಅವರ ಉದ್ಯಮದಲ್ಲಿ ಭಾಗಿಗಳಾಗಿ ಅವರಿಗೆ ನೆರವಾಗಬೇಕು. ಧರ್ಮಪ್ರಪಂಚದಲ್ಲಿ ಮಾತ್ರವೇ ಅಲ್ಲದೆ, ಸರ್ವಪ್ರಪಂಚಗಳಲ್ಲಿಯೂ ಸಹನೆ, ಸ್ನೇಹ, ಸೌಹಾರ್ದ, ಸಮತಾಭಾವಗಳನ್ನು ಬಿತ್ತಿ, ಶಾಂತಿಯ ನಂದನ ರಚನೆಯ ತಪಸ್ಸಿನ ಅಗ್ನಿಕುಂಡದಲ್ಲಿ ಬಾಳನ್ನು ಬೆಳೆಸಬೇಕು.

ಗುರುದೇವ ಶ್ರೀರಾಮಕೃಷ್ಣ ಪರಮಹಂಸರು ಜನ್ಮವೆತ್ತಿ ಇಂದಿಗೆ ಒಂದು ಶತಮಾನವಾಯಿತು. ನಾಳೆಯ ಹೊತ್ತಾರೆ ಮತ್ತೊಂದು ಶತಮಾನವು ಆಶಾಪೂರ್ಣವಾಗಿ ಉದಯವಾಗುತ್ತದೆ. ಆ ಶತಮಾನವು ಸಾರ್ಥಕವಾಗುವಂತೆ ಗೈಯುವುದು ಎಲ್ಲರ, ನಮ್ಮೆಲ್ಲರ, ಕರ್ತವ್ಯ.

* * *

 [1] ಕಾವ್ಯ, ತತ್ವ, ಯೋಗ, ರಾಜಕೀಯ, ಇಹ, ಪರ, ಪ್ರಾಚೀನ, ಅರ್ವಾಚೀನ, ಆಗಾಮಿಕ – ಈ ಎಲ್ಲದರಲ್ಲಿಯೂ ಸರ್ವತೋಮುಖವಾಗಿ ಸರ್ವಪರಿಪೂರ್ಣವಾಗಿ ಜಗನ್ನೇತ್ರಗಳಿಗೆ ಕೇಂದ್ರವಾಗತೊಡಗಿದ್ದಾರೆ, ಪಾಂಡುಚೆರಿಯ ಪೂರ್ಣಯೋಗಿ ಶ್ರೀ ಅರವಿಂದರು. ಹಾಗೆಯೆ ಇನ್ನೊಂದು ರೀತಿಯಿಂದ ಅರುಣಾಚಲದ ಶ್ರೀರಮಣ ಮಹರ್ಷಿಗಳೂ ಲೋಕಕ್ಕೆ ಆಶೀರ್ವಾದರೂಪವಾಗಿ ಸಿದ್ಧಿಸಿಂಹಾಸನವನ್ನು ಅಲಂಕರಿಸಿದ್ದಾರೆ.