ಕ್ರಿಸ್ತಾಬ್ದ ೧೮೯೩ನೆಯ ಸಂವತ್ಸರದ ಜನವರಿ ತಿಂಗಳು

[1]. ಮಾಗಿಯ ಕಾಲದ ಒಂದು ದಿನ. ಇನ್ನೂ ಉಷಃಕಾಲ. ಮೂಡಣ ದೆಸೆವೆಣ್ಣು ದರೋನ್ಮೀಲಿತ ನಯನೆಯಾಗಿದ್ದಾಳೆ. ಕತ್ತಲೆಯ ಮೊತ್ತವು ಮೆಲ್ಲಮೆಲ್ಲನೆ ಹಿಂಜರಿಯತೊಡಗಿದೆ. ಎಚ್ಚೆತ್ತ ಹಕ್ಕಿಗಳ ಸವಿಗೊರಲಿನ ಇಂಚರವು ಪ್ರಶಾಂತ ವಾಯುಮಂಡಲದಲ್ಲಿ ತರಂಗಗಳನ್ನು ಎಬ್ಬಿಸುತ್ತಿದೆ. ಮಾಗಿಯ ಮುಗಿಲಿನಿಂದ ಬಿಳಿಯ ಮಂಜಿನ ಸೋನೆ ಎಡೆಬಿಡದೆ ಸುರಿಯುತ್ತಿದೆ.

ಇಂತಹ ಸಮಯದಲ್ಲಿ ಕನ್ಯಾಕುಮಾರಿಯ ಪವಿತ್ರ ದೇವಾಲಯದಲ್ಲಿದ್ದ ನಿರುದ್ವಿಗ್ನಜೀವಿಗಳಾದ ಪೂಜಾರಿಗಳು ದೇವಸ್ಥಾನದ ಬಾಗಿಲುಗಳನ್ನು ತೆರೆದು ಆ ದಿನದ ಕಾರ್ಯಗಳಲ್ಲಿ ಎಂದಿನಂತೆ ತೊಡಗಿದ್ದರು. ನಾನಾ ಕಾರ್ಯಭಾರಗಳಲ್ಲಿ ತೊಡಗಿದ್ದ ಅವರು ಇದ್ದಕ್ಕಿದ್ದ ಹಾಗೆ ಚಕಿತರಾಗಿ ಕೈಲಿದ್ದ ಕೆಲಸಗಳನ್ನು ಹಾಗೆಯೆ ನಿಲ್ಲಿಸಿಬಿಟ್ಟು ದೇಗುಲದ ಹೆಬ್ಬಾಗಿಲ ಕಡೆಗೆ ನೋಡತೊಡಗಿದರು.

ಸಂನ್ಯಾಸಿಯೊಬ್ಬನು ಶಾಂತಗತಿಯಿಂದ ದೇವಾಲಯ ಪ್ರವೇಶ ಮಾಡುತ್ತಿದ್ದುದು ಅವರ ಕಣ್ಣಿಗೆ ಬಿತ್ತು. ಒಳಗೆ ಬಂದ ಆ ಭವ್ಯಮೂರ್ತಿ ಎಡಬಲಗಳನ್ನು ನಿರೀಕ್ಷಿಸದೆ ನೆಟ್ಟಗೆ ಗರ್ಭಗುಡಿಯ ಮುಂದೆ ಹೋಗಿ ದೇವರಿಗೆ ದಂಡ ಪ್ರಣಾಮ ಮಾಡಿ ಎದ್ದು ನಿಂತನು. ದೇವರ ಮುಂದೆ ಹೊತ್ತಿಸಿದ ದೀಪಗಳ ಬೆಳಕಿನಲ್ಲಿ ಆ ಮಹಾಪುರುಷನ ದಿವ್ಯತೇಜಸ್ಸನ್ನು ಅವಲೋಕಿಸಿದ ಪೂಜಾರಿಗಳು ವಿಸ್ಮಯ ಮೂಕರಾದರು. ಅವರ ಜೀವಮಾನದಲ್ಲಿ ಅಂತಹ ವ್ಯಕ್ತಿಯನ್ನು ಅವರು ಕಂಡಿರಲಿಲ್ಲ. ಪುಣ್ಯಕ್ಷೇತ್ರವಾದ ಕನ್ಯಾಕುಮಾರಿಗೆ ಅನೇಕ ಸಂನ್ಯಾಸಿಗಳೂ ಸಂಸಾರಿಗಳೂ ಎಲ್ಲ ಬಂದಿದ್ದರು. ಆದರೆ ಆ ದಿನ ಅರ್ಚಕರು ನೋಡಿದ ವ್ಯಕ್ತಿ ಅಪಾರ್ಥಿವ ತೇಜೋವಂತನಾಗಿದ್ದನು.

ಸುಮಾರು ಮೂವತ್ತು ಸಂವತ್ಸರಗಳ ವರ್ಷವಸಂತಗಳಿಂದ ತಾಡಿತವಾಗಿ, ಐದೂಮುಕ್ಕಾಲು ಅಡಿಗಳಷ್ಟು ಎತ್ತರವಾಗಿ ದೀರ್ಘದೇಹಿಯಾಗಿದ್ದ ಆತನ ಚಪ್ಪಟೆಚೌಕದ ಭುಜಪ್ರದೇಶವೂ ವಿಸ್ತಾರವಾಗಿದ್ದ ಎದೆಯೂ ನಾನಾ ವ್ಯಾಯಾಮ ಕ್ರೀಡೆಗಳಲ್ಲಿ ಪಳಗಿ ಸುಪುಷ್ಟವಾಗಿ ಬಲಿಷ್ಠವಾಗಿದ್ದ ತೋಳುಗಳೂ ಆತನಿಗೆ ಜಟ್ಟಿಯ ಮೈಕಟ್ಟು ಕೊಟ್ಟು, ನೋಡಿದವರೆದೆಯಲ್ಲಿ ಗೌರವ ಮಿಶ್ರವಾದ ಭೀತಿ ಮೂಡುವಂತೆ ಮಾಡುತ್ತಿದ್ದುವು. ಸ್ವಲ್ಪಮಟ್ಟಿಗೆ ಭಾರವಾಗಿ ಸ್ಥೂಲವಾಗಿದ್ದರೂ ಆ ವಜ್ರಶರೀರದಲ್ಲಿ ಆಲಸ್ಯಕ್ಕಾಗಲಿ ತಾಮಸಕ್ಕಾಗಲಿ ಎಡೆಯಿದ್ದಂತೆ ಕಾಣುತ್ತಿರಲಿಲ್ಲ. ಎಣ್ಣೆಗೆಂಪಾಗಿ ಅಗಲವಾಗಿದ್ದ ಆತನ ಮುಖದಲ್ಲಿ ಧೀರಲಲಾಟವೂ ದಿಟ್ಟ ಹುಬ್ಬುಗಳೂ ದಾರ್ಢ್ಯಸೂಚಕವಾದ ಮೊರಡುಗಲ್ಲವೂ ಕರ್ರಗೆ, ತೀಕ್ಷ್ಣವಾಗಿ ನಿರಂತರಾನ್ವೇಷಕವಾಗಿ, ಕಮಲದಳಗಳನ್ನು ನೆನಪಿಗೆ ತರುವ ಅದ್ಭುತ ತೇಜೋನ್ವಿತ ವಿಶಾಲನೇತ್ರದ್ವಯವೂ ಪೂಜ್ಯಭಾವವನ್ನು ಉದ್ದೀಪನಗೊಳಿಸುತ್ತಿದ್ದುವು. ಆ ದೃಷ್ಟಿಯಲ್ಲಿ ದಾರ್ಢ್ಯದೊಡನೆ ಕರುಣೆಯೂ ಮೋಹದೊಡನೆ ಭೀಷಣತೆಯೂ ವ್ಯಂಗ್ಯದೊಡನೆ ಹಾಸ್ಯವೂ ವಿಶಾಲಭಾವದೊಡನೆ ಗಂಭೀರಜ್ಞಾನವೂ ಸಮ್ಮಿಳಿತವಾಗಿದ್ದುವು. ಅದು ಸರ್ವವ್ಯಾಪಿಯೂ ಸರ್ವತೋಮುಖವೂ ಆಗಿ ಅಂತರಂಗದ ಐಶ್ವರ್ಯದ ಸಮುಜ್ವಲ ಕಾಂತಿಗೆ ಸಾಕ್ಷಿಯಾಗಿತ್ತು; ದ್ವಂದ್ವಗಳಿಗೊಂದು ಸಮನ್ವಯ ರಂಗವಾಗಿತ್ತು. ಕಾಷಾಯವಸ್ತ್ರಧಾರಿಯೂ ದಂಡಧಾರಿಯೂ ಬ್ರಹ್ಮವನ ವಿಹಾರಿಯೂ ಆಗಿದ್ದ ಆತನ ಆತ್ಮಶ್ರೀ ಓಜಸ್ವಿಯಾದ ಸುಂದರ ಗಂಭೀರ ವದನದಿಂದ ಹೊರಸೂಸುತ್ತಿತ್ತು. ಕಾವಿಯ ರುಮಾಲನ್ನು ಸುತ್ತಿದ್ದ ಆತನು ಅರ್ಚಕರ ಚಕಿತದೃಷ್ಟಿಗೆ ಛದ್ಮವೇಷದ ರಾಜ ಪುರುಷನಂತೆ ತೋರಿದನು.

ಧ್ಯಾನಾರೂಢನಾಗಿ ಮಾತೆಯ ಮುಂದೆ ನಿಂತಿದ್ದ ಆ ಮಾನವಕೇಸರಿ ಸ್ವಲ್ಪ ಹೊತ್ತಿನಲ್ಲಿ ಮೈತಿಳಿದು, ನಿಟ್ಟುಸಿರುಬಿಟ್ಟು, ದೇವಾಲಯದ ಸಮಸ್ತ ಭಾಗಗಳನ್ನೂ ತೀಕ್ಷ್ಣಾನ್ವೇಷಕ ದೃಷ್ಟಿಯಿಂದ ಈಕ್ಷಿಸಿ ಹೊರಹೊರಟನು. ಆತನ ಪ್ರಶಾಂತ ಗಂಭೀರ ಹೃದಯದಲ್ಲಿ ಯಾವುದೋ ಒಂದು ಮಹೋದ್ವೇಗದ ಲಹರಿ ತಾಂಡವವಾಡುತ್ತಿದ್ದಂತೆ ತೋರುತ್ತಿತ್ತು. ಪೂಜಾರಿಗಳು ಬಾಗಿಲವರೆಗೂ ಓಡಿ ಬಂದು ಆತನು ಹೋಗುತ್ತಿದ್ದ ದಾರಿಯನ್ನೇ ನಿಟ್ಟಿಸುತ್ತಾ ಮನಸ್ಸಿನಲ್ಲಿಯೆ ನಮಿಸಿದರು. ಆತನು ಸಮುದ್ರಾಭಿಮುಖವಾಗಿ ಹೋಗುತ್ತಿದ್ದನು. ಅರ್ಚಕರು ನೋಡುತ್ತಿದ್ದ ಹಾಗೆಯೇ ಹಿಮಾವರಣದಲ್ಲಿ ಕಣ್ಮರೆಯಾದನು. ಅರ್ಚಕರು ಒಬ್ಬರ ಮುಖವನ್ನು ಒಬ್ಬರು ನೋಡುತ್ತ “ಯಾರಿವನು?” ಎಂದರು.

ಗುಡಿಯಿಂದ ಹೊರಟ ಆ ಸಂನ್ಯಾಸಿ ಸಮುದ್ರತೀರಕ್ಕೆ ಬಂದನು. ಕನ್ಯಾಕುಮಾರಿಯ ಸಮುದ್ರ ತೀರ! ಭಾರತಮಾತೆಯ ಪವಿತ್ರ ಪಾದಗಳ ತುತ್ತತುದಿ! ವೇದಭೂಮಿಯ ಕೊನೆ! ಸಂನ್ಯಾಸಿ ಭಾವಪರವಶನಾಗಿ ನಿಂತು ಸುತ್ತಲೂ ದೃಷ್ಟಿ ಪ್ರಸಾರ ಮಾಡಿದನು: ಮುಂದುಗಡೆ ವಿಸ್ತಾರವಾದ, ಅನಂತವಾದ, ಮೇರೆಯರಿಯದ ಮಹಾಸಮುದ್ರ! ಅಲ್ಲೋಲಕಲ್ಲೋಲವಾದ ಮಹಾತರಂಗಗಳ ರುದ್ರರಮಣೀಯ ವಿನ್ಯಾಸದಿಂದ ಶೋಭಿಸುತ್ತಿರುವ ಅಪಾರ ವಾರಿಧಿ! ಹಿಂದುಗಡೆ ವೇದಮಾತೆಯ ನೆಲೆಬೀಡಾದ ಬಿತ್ತರದ ಭರತಖಂಡ! ಭಿನ್ನಭಿನ್ನ ಜಾತಿಗಳ, ಭಿನ್ನಭಿನ್ನ ಭಾಷೆಗಳ, ಭಿನ್ನಭಿನ್ನ ರುಚಿಗಳ, ಆದರೂ ಏಕಾಭಿನ್ನ ಸಂಸ್ಕೃತಿಯ ಜನಸಮುದಾಯವನ್ನು ಹೊತ್ತಿರುವ ಪುರಾಣ ಪ್ರಸಿದ್ಧವಾದ ಪುರಾತನ ಭಾರತವರ್ಷ!

ಆಗತಾನೆ ಪೂರ್ವದಿಗಂತದಲ್ಲಿ ಅರುಣೋದಯವಾಗುತ್ತಿತ್ತು. ನಲಿನಲಿಯುತ್ತಿದ್ದ ಕಡಲೊಡೆದು ತೆರೆಗಳು ಮುಂಬೆಳಕಿನಲ್ಲಿ ಮಿಂಚುತ್ತಿದ್ದುವು. ಶೈಶಿರ ಪ್ರಭಾತದ ಶೀತಲ ಸಮೀರಣನು ಸುಯ್ಯೆಂದು ತೀಡುತ್ತಿದ್ದನು. ಅನೇಕಾನೇಕ ಸಮುದ್ರಪಕ್ಷಿಗಳು ಹಿಂಜರಿಯುತ್ತಿದ್ದ ಮಂಜಿನಲ್ಲಿ ಹಾರಾಡತೊಡಗಿದ್ದುವು. ತೀರದ ಕಲ್ಪವೃಕ್ಷಗಳಲ್ಲಿ ಚಿರಮರ್ಮರ ನಾದಮಾಡುತ್ತಿದ್ದ ತೆಂಗಿನಗರಿಗಳಲ್ಲಿ ವಿವಿಧ ನೆಲವಕ್ಕಿಗಳು ಇಂಚರಗೈಯ್ಯಲು ಪ್ರಾರಂಭಿಸಿದ್ದುವು. ಆ ಮಧುರ ಸುಂದರ ಶಾಂತ ಸನ್ನಿವೇಶದಲ್ಲಿ ಸಂನ್ಯಾಸಿ ಆವೇಶವಶನಾದನು. ಆ ತಪಸ್ವಿಯ ಕಾಂತಿ ಮಿಗಿಲಾಗುತ್ತಿದ್ದ ಪ್ರಭಾತ ಪ್ರಕಾಶದೊಡನೆ ಸ್ನೇಹ ಬೆಳೆಸುತ್ತಿತ್ತು.

ಸಂನ್ಯಾಸಿ ನಿಂತು ನೋಡಿದನು. ಅನತಿ ದೂರದಲ್ಲಿ ಕಡಲಿನಿಂದ ಗಜಾಕಾರವಾಗಿ ಮೇಲೆದ್ದು ಒಂದು ಹೆಬ್ಬಂಡೆ ಹಿಂಜರಿದ ಮಂಜಿನಿಂದ ಮೂಡಿದಂತೆ ತೋರಿತು. ಯೋಗಿವರ್ಯನು ಮನಸ್ಸಿನಲ್ಲಿ ಏನು ನೆನೆದನೋ? ಮಕರ ನಕ್ರ ತಿಮಿಂಗಿಲಮಯವಾಗಿದ್ದ ಆ ಭಯಂಕರವಾದ ಅಂಬುಧಿಯಲ್ಲಿ ಧುಮುಕಿದನು. ತರಂಗಗಳ ನಡುವೆ ದಿಟ್ಟತನದಿಂದ ಈಜತೊಡಗಿದನು. ಆಗತಾನೆ ಸಮುದ್ರತೀರಕ್ಕೆ ಬಂದ ಒಬ್ಬಿಬ್ಬರು ಕಾಷಾಯಧಾರಿಯ ಧೂರ್ತತನವನ್ನು ನೋಡಿ ನಡುಗಿದರು. ಅವರು ನೋಡುತ್ತಿದ್ದ ಹಾಗೆಯೇ ಕೆಚ್ಚೆದೆಯ ಸಂನ್ಯಾಸಿ ನಿರ್ದಿಷ್ಟ ಶಿಲಾರೋಹಣ ಮಾಡಿ, ಮಹಾ ಬಂಡೆಯ ತಗ್ಗು ಉಬ್ಬುಗಳಲ್ಲಿ ಅದೃಶ್ಯವಾದನು. ತೀರದಲ್ಲಿನ ಜನರು ಒಬ್ಬರ ಮುಖವನ್ನು ಒಬ್ಬರು ನೋಡಿ “ಯಾರಿವರನು?” ಎಂದು ವಿಸ್ಮಿತರಾದರು.

ಆರ್ಯಭೂಮಿಯ ತುತ್ತತುದಿಯ ಅರೆಬಂಡೆಯನ್ನು ಏರಿದ ಸಂನ್ಯಾಸಿ ಮರಳಿ ನಿಂತು ನೋಡಿದನು. ಮಹಾಪರ್ವತವೊಂದರ ತುತ್ತತುದಿಯ ಹಿರಿಯ ಬಂಡೆಯ ಮೇಲೆ ನಿಂತ ವನಕೇಸರಿ ಸುತ್ತಲಿರುವ ನಿಮ್ಮ ಪ್ರದೇಶಗಳನ್ನು ಎವೆಯಿಕ್ಕದೆ ದಿಟ್ಟಿಸುವಂತೆ ಆ ಸಂನ್ಯಾಸಿ ಮರಳಿ ನಿಂತು ನೋಡಿದನು. ಕೋಟ್ಯನುಕೋಟಿ ಭಾವನೆಗಳ ನಿರಂತರ ನೃತ್ಯದಲ್ಲಿ ಆತನು ಭಾವಾವೇಶವಶನಾದನು!

ಬಲಗಡೆ ಸಮುದ್ರ, ಎಡಗಡೆ ಸಮುದ್ರ, ಹಿಂದುಗಡೆ ಸಮುದ್ರ, ಮುಂದುಗಡೆ ವಿಸ್ತಾರವಾದ ತನ್ನ ಜನ್ಮಭೂಮಿ. ಮೇಲುಗಡೆ ಅನಂತವಾದ ನೀಲಾಕಾಶ. ಆ ಮಹಾವಸ್ತುಗಳ ನಡುವೆ ತಾನು! ಸಂನ್ಯಾಸಿ ಕಡಲ ನಡುಬಂಡೆಯ ಮೇಲೆ ನಿಂತು ಸುತ್ತಲೂ ನೋಡಿದನು. ಸಮುದ್ರಾಕಾಶಗಳ ಆಲಿಂಗನಸ್ಥಾನವಾದ ಬಹುದೂರ ಪೂರ್ವದಿಗಂತದಿಂದ ಕಿಶೋರ ಕಮಲಮಿತ್ರನು ತಳತಳಿಸಿ ಮೂಡಿದನು. ಬಾಲಸೂರ್ಯನ ಕೋಮಲ ಕಿರಣಗಳ ಅರುಣಜ್ಯೋತಿ ಕಡಲಿನ ತೆರೆತೆರೆಗಳಲ್ಲಿ ಹಬ್ಬಿ ಪ್ರತಿಬಿಂಬಿಸಿ ಮಿಂಚಿದುದು, ತೆರೆಗಳ ಶಿಖರಭಾಗದ ಬೆಳ್ನೊರೆಯೊಬ್ಬುಳಿ ಕೋಟ್ಯನುಕೋಟಿ ಮುತ್ತುಗಳ ಮುದ್ದೆಯಂತೆ ಶೋಭಿಸಿತು. ನೀಲಸ್ಫಟಿಕ ವರ್ಣದ ಪೆರ್ದೆರೆಗಳು ನಾಲ್ದೆಸೆಗಳಿಂದಲೂ ಬಂದು ಸಂನ್ಯಾಸಿ ನಿಂತಿದ್ದ ಬಂಡೆಗೆ ಮುದ್ದಿನಿಂದ ಮುತ್ತು ಕೊಟ್ಟುವು. ಅನತಿದೂರದ ತೀರದಲ್ಲಿ ನಿಬಿಡ ಕಲ್ಪದ್ರುಮ ವನ ಶ್ರೇಣಿಗಳ ಹರಿತ ಸೌಂದರ್ಯವು ಪ್ರಾತಃಸೂರ್ಯನ ದರಲೋಹಿತ ರಾಗದಲ್ಲಿ ನವ ಚೇತನವನ್ನು ಪಡೆದು ರಂಜಿಸಿತು. ರಾಜಯೋಗಿಯ ಕಣ್ಣುಗಳು ಮಿಂಚಿದುವು. ವದನವು ಆತ್ಮೈಶ್ವರ್ಯದ ತೇಜಸ್ಸಿನಿಂದ ಪ್ರಫುಲ್ಲಿತವಾಯಿತು. ಪೂತನೂತನ ಭಾವದಿಂದ ಎದೆಯರಳಿತು. ವಿಕಂಪಿತ ದೇಹನಾಗಿ ಒಯ್ಯನೆ ಕುಳಿತು ಪದ್ಮಾಸನಾರೂಢನಾಗಿ ಧ್ಯಾನಮಗ್ನನಾಗಿಬಿಟ್ಟನು.

ಸುತ್ತಲೂ ಕಡಲಿನ ತೆರೆಗಳು ಮೊರೆದುವು. ಆದರೆ ಆತನ ಹೃದಯದಲ್ಲಿ ಭಾವ ತರಂಗಗಳು ಇನ್ನೂ ಅತಿಶಯವಾಗಿ ಮೊರೆಯತೊಡಗಿದುವು. ಭಾರತ ವರ್ಷದ ತುತ್ತತುದಿಯ ಬಂಡೆಯ ಮೇಲೆ ಕುಳಿತ ಆ ದೇಶಭಕ್ತ ವೀರಸಂನ್ಯಾಸಿ ಮಾತೃಭೂಮಿಯ ಭೂತಭವಿಷ್ಯದ್ವರ್ತಮಾನಗಳನ್ನು ಕುರಿತು ಚಿಂತಿಸತೊಡಗಿದನು. ಒಂದು ಗಂಟೆಯಾಯಿತು; ಎರಡು ಗಂಟೆಯಾಯಿತು; ಹೊತ್ತೇರಿತು; ಬಿಸಿಲೇರಿತು. ಆದರೂ ಆತನು ಚಲಿಸಲಿಲ್ಲ. ಒಮ್ಮೆ ಚಿಂತೆಗಳ ಭರದಲ್ಲಿ ನಡುನಡುವೆ ನಿಟ್ಟುಸಿರು ಬಿಡುವನು. ಒಮ್ಮೆ ಧ್ಯಾನಾಸಕ್ತನಾದ ಮತ್ತೊಬ್ಬ ಮಹಾಬುದ್ಧನೋ ಎಂಬಂತೆ ಆತನ ವದನದಲ್ಲಿ ಜ್ಯೋತಿ ತಾಂಡವವಾಡುವುದು. ಒಮ್ಮೆ ಮಹಾವೀರ ನೋಪಾದಿಯದಲ್ಲಿ ಮಲೆಯುವನು; ಒಮ್ಮೆ ಹಸುಳೆಯಂತೆ ದೀನನಾಗುವನು. ಒಮ್ಮೆ ಕಂಬನಿ ತುಂಬಿದ ಕಣ್ಣುಗಳನ್ನು ವಿಶಾಲವಾಗಿ ತೆರೆದು ಅನಂತವಾದ ಜಲನಿಧಿಯನ್ನು ಅನಿಮಿಷ ನಯನವಾಗಿ ನಿಟ್ಟಿಸುವನು. ಒಮ್ಮೆ ಕನ್ಯಾಕುಮಾರಿ ರಾಮೇಶ್ವರಗಳಿಂದ ಕೈಲಾಸ ಬದರಿಕಾಶ್ರಮಗಳ ಪರ್ಯಂತ ಹಬ್ಬಿರುವ ಪುಣ್ಯ ಭೂಮಿಯಾದ ಮಹಾಭಾರತವರ್ಷವನ್ನು ತೀಕ್ಷ್ಣದೃಷ್ಟಿಯಿಂದ ಅವಲೋಕಿಸುವನು. ನಡುನಡುವೆ “ಹೇ ಜನನಿ, ಹೇ ಭಾರತಮಾತೆ, ಹೇ ನನ್ನ ಜನನಿ, ಹೇ ನನ್ನ ಭಾರತ ಮಾತೆ” ಎಂದು ಉದ್ಘೋಷಿಸಿ ಕಂಬನಿಗರೆವನು. ಒಮ್ಮೆ ಹರ್ಷ, ಒಮ್ಮೆ ದುಃಖ; ಒಮ್ಮೆ ಸರಳತೆ, ಒಮ್ಮೆ ಗಾಂಭೀರ್ಯ; ಒಮ್ಮೆ ಮುನಿಸು, ಒಮ್ಮೆ ಶಾಂತಿ; ಹೀಗೆ ನಾನಾ ಭಾವಗಳಿಂದ ಆ ತೇಜಸ್ವಿಯಾದ ಸಂನ್ಯಾಸಿ ಕಡಲಿನೆದೆಯ ಬಡಬ ನಂತಾದನು.

ಸಂನ್ಯಾಸಿ ಮರಳಿ ನಿಮೀಲಿತ ನಯನನಾದನು. ಭರತಖಂಡದ ಪೂರ್ವೋತ್ತರ ವರ್ತಮಾನಗಳೆಲ್ಲವೂ ಆತನ ಮನದಲ್ಲಿ ಚಲನಚಿತ್ರಗಳಂತೆ ಮಿಂಚತೊಡಗಿದುವು. ಸನಾತನಳಾದ ಭಾರತಾಂಬೆಯ ಯುಗಯುಗಾಂತರಗಳ ಕಾಲಮಹಾ ಗರ್ಭವು ಗೋಚರವಾಗತೊಡಗಿತು. ಆಕೆಯಲ್ಲಿ ಹುಟ್ಟಿ ಬೆಳೆದ ಮಹಾ ತತ್ತ್ವಗಳು, ಮಹಾ ವ್ಯಕ್ತಿಗಳು, ಮಹಾ ರಾಜ್ಯಗಳು, ಮಹಾ ಚಕ್ರವರ್ತಿಗಳು, ಮಹಾ ಕವಿ ವರ್ಯರು, ಮಹಾ ಯೋಗಿಗಳು ಎಲ್ಲವೂ ಎಲ್ಲರೂ ಒಬ್ಬೊಬ್ಬರಾಗಿ ಒಂದೊಂದಾಗಿ ಸಂನ್ಯಾಸಿಯ ಬಗೆಗಣ್ಣಿಗೆ ಹೊಳೆಯತೊಡಗಿದುವು. ಎಲ್ಲವೂ ಆ ಜನಾಂಗ ನಿರ್ಮಾಪಕನು ಕಂಡ ದಿವ್ಯ ದರ್ಶನಗಳಾಗಿದ್ದುವು. ಮನು, ವ್ಯಾಸ, ಶಂಕರಾಚಾರ್ಯ, ಬುದ್ಧ, ರಾಮ, ಚೈತನ್ಯ; ಕರ್ಣಾಟಕ, ವಂಗ, ಕೇರಳ, ರಾಜಪುತ್ರ ಸ್ಥಾನ, ಮಹಾರಾಷ್ಟ್ರ; ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ; ಹಿಂದೂ, ಮುಸಲ್ಮಾನ, ಪಾರಸಿಕ, ಕ್ರೈಸ್ತ; ಧರ್ಮ, ಅರ್ಥ, ಕಾಮ, ಮೋಕ್ಷ ಇವೆಲ್ಲವುಗಳ ಎಡೆಬಿಡದ ಮೆರವಣಿಗೆ ಚಾಗಿಯ ಬಗೆಯಲ್ಲಿ ಸಾಗಿಹೋಯಿತು. ಶಿಲ್ಪಿವರ್ಯನೊಬ್ಬನು ಮೊರಡಾದ ಒಂದು ಕಾಡುಬಂಡೆಯಲ್ಲಿ ತನ್ನ ಇಷ್ಟವಿಗ್ರಹವನ್ನು ಸಂದರ್ಶಿಸುವಂತೆ ಅಧೋಗತಿಗಿಳಿದ ಭರತಖಂಡದಲ್ಲಿ ಸಂನ್ಯಾಸಿ ಸಂಪದ್ಯುಕ್ತವಾದ ಸುಸಂಸ್ಕೃತ ಭಾವೀ ಭರತಖಂಡವನ್ನು ಸಂಕಲ್ಪಿಸಿದನು. ಭಾವಾವೇಶದಿಂದ ಆತನ ತನು ಕಂಪಿಸಿತು. ಸನಾತನ ಧರ್ಮದ ಪುನರುಜ್ಜೀವನವೂ ಆರ್ಯ ಸಂಸ್ಕೃತಿಯ ಪುನರುತ್ಥಾನವೂ ತನ್ನ ಜೀವನದ ಧ್ಯೇಯಗಳಾಗಬೇಕೆಂದು ನಿರ್ಧರಿಸಿದನು. ಧರ್ಮವು ಭಾರತೀಯರ ರಕ್ತನಾಳಗಳಲ್ಲಿ ಪ್ರವಹಿಸುವುದನ್ನು ಕಂಡು ತನ್ನಲ್ಲಿ ತಾನೆ “ಭಾರತವರ್ಷವು ಪುನರುಜ್ಜೀವಿತವಾಗುವುದು. ಸನಾತನ ಆರ್ಯ ಸಂಸ್ಕೃತಿ ನೂತನ ಸಂಸ್ಕಾರಗಳನ್ನು ಪಡೆದು ಮರಳಿ ತಲೆಯೆತ್ತುವುದು! ಹೇ ಜನನಿ, ನಿನಗೆ ಜಯವಾಗಲಿ!” ಎಂದುಕೊಂಡನು.

ಇದ್ದಕ್ಕಿದ್ದ ಹಾಗೆ ಆ ತೇಜಸ್ವಿ ಎದ್ದುನಿಂತನು, ಉನ್ನತಪರ್ವತದ ಮೇಲೆ ಉನ್ನತತರ ಶಿಖರವು ಎದ್ದುನಿಲ್ಲುವಂತೆ! ಆತನ ಹೃದಯವನ್ನು ತುಂಬಿ ತುಳುಕುತ್ತಿದ್ದ ಭಾವಗಳು ಹೊರಸೂಸತೊಡಗಿದುವು. ದಿಗ್ದಿಗಂತಗಳನ್ನು ನೋಡಿದನು. ನೀಲಾಕಾಶವನ್ನು ನೋಡಿದನು. ಸುಮಧುರ ಗಂಭೀರವಾಣಿಯಿಂದ ಸಮಸ್ತ ವಿಶ್ವವನ್ನೆ ಸಂಬೋಧಿಸಿದನು:‌

“ಹೇ ಜನನಿ, ಆರ್ಯಮಾತೆ, ಪುಣ್ಯಭೂಮೀ, ನಿನ್ನ ಸುಂದರ ವದನವನ್ನು ಕುರೂಪಗೈದ ಮಕ್ಕಳ ಪಾಪವನ್ನು ಮನ್ನಿಸು. ನಿನ್ನವರು ತಪ್ಪಿದರು. ಅಖಂಡಳಾದ ನಿನ್ನಲ್ಲಿ ಭೇದಗಳನ್ನು ಕಲ್ಪಿಸಿ ಕೆಟ್ಟರು. ಧರ್ಮವನ್ನು ಮರೆತುಬಿಟ್ಟರು. ಗೊಡ್ಡು ಪದ್ಧತಿಗಳನ್ನೆ ಧರ್ಮವೆಂದು ಭ್ರಮಿಸಿ, ಅದರಂತೆ ಆಚರಿಸಿ, ನಿನ್ನನ್ನು ಪರಕೀಯರಿಗೆ ಮಾರಿದರು. ದಾಸಿಯನ್ನಾಗಿ ಮಾಡಿದರು. ಅನಾಥೆಯನ್ನಾಗಿ ಮಾಡಿದರು. ಅಮ್ಮಾ, ತ್ರಿಲೋಕಸುಂದರಿ, ನಿನ್ನನ್ನು ಕುರೂಪಿಯನ್ನಾಗಿ ಮಾಡಿದರು. ಮಕ್ಕಳ ಪಾಪವನ್ನು ಮನ್ನಿಸು! ಮನ್ನಿಸು! ಬಗೆಗೆಟ್ಟ ಅವರಿಗೆ ಸನ್ಮತಿಯನ್ನು ನೀಡು! ಎಲ್ಲಿ ನಿನ್ನ ಐಶ್ವರ್ಯ? ಎಲ್ಲಿ ನಿನ್ನ ವಿದ್ವತ್ತು? ಎಲ್ಲಿ ನಿನ್ನ ಆತ್ಮಧರ್ಮ? ಪುರೋಹಿತರ ದೌರಾತ್ಮ್ಯದಿಂದ, ಜಾತಿಭೇದದ ಕ್ರೌರ್ಯದಿಂದ, ಮೇಲೆದ್ದವರ ಅಹಂಕಾರದಿಂದ, ಕೆಳಗೆ ಬಿದ್ದವರ ಹೇಡಿತನದಿಂದ, ಪಂಡಿತರ ಸ್ವಾರ್ಥ ಬುದ್ಧಿಯಿಂದ, ಪಾಮರರ ಮೂರ್ಖತನದಿಂದ, ನಿನ್ನ ಸುಂದರ ಸುರಮಂದಿರವು ರುದ್ರ ಶ್ಮಶಾನವಾಯಿತೆ! ಎಲೈ ಕಂಬನಿಗಳೆ, ಮೂಕಾಶ್ರುಬಿಂದುಗಳೆ, ಮಾತೆಯ ಪಾದಗಳನ್ನು ತೊಳೆಯುವಿರಾ? ಮಕ್ಕಳ ಪಾಪಗಳನ್ನು ತೊಳೆಯುವಿರಾ? ಶ್ಮಶಾನಸದೃಶವಾದ ಭರತಖಂಡವನ್ನು ಮತ್ತೊಮ್ಮೆ ಸುರಮಂದಿರವನ್ನಾಗಿ ಮಾಡುವಿರಾ?‌

“ಇರಲಿ, ನಾವೇನು ಮಾಡಿದ್ದೇವೆ? ಸಂನ್ಯಾಸಿಗಳು ನಾವೇನು ಮಾಡಿದ್ದೇವೆ? ಭಾರತಮಾತೆಯ ತೊಡೆಯ ಮೇಲೆ ಚಕ್ಕಂದದಿಂದ ನಲಿದಾಡುವ ಸಂನ್ಯಾಸಿಗಳು, ನಾವೇನು ಮಾಡಿದ್ದೇವೆ? ಕಾಷಾಯ ವಸ್ತ್ರಧಾರಿಗಳಾಗಿ ಮೂರ್ಖಜನರ ತಾಮ ಸಾತಿಥ್ಯದಿಂದ ಉದರಪೋಷಣೆ ಮಾಡಿಕೊಳ್ಳುತ್ತಾ ಅಲೆಯುತ್ತಿರುವ ಲಕ್ಷಾಂತರ ಸಂನ್ಯಾಸಿಗಳು, ನಾವೇನು ಮಾಡಿದ್ದೇವೆ? ತತ್ತ್ವಬೋಧನೆ! ತತ್ತ್ವಬೋಧನೆ! ಚಿಃ ಚಿಃ ಬೈರಾಗಿಗಳೆ, ನಿಮ್ಮ ತತ್ತ್ವಬೋಧನೆಗೆ ಬೆಂಕಿ ಇಡಲಿ! ಹೊಟ್ಟೆಗಿಲ್ಲದೆ ಕಂಗೆಟ್ಟಿರುವ ದೇಶದಲ್ಲಿ ನಿಮ್ಮ ತತ್ತ್ವಬೋಧನೆ! ಅಯ್ಯೋ ಕಪಟವೃತ್ತಿಯೆ! ನಾವೇನು ಮಾಡುತ್ತಿದ್ದೇವೆ! ಅನ್ನವಿಲ್ಲದ, ವಸ್ತ್ರವಿಲ್ಲದ ಕುರಿಗಳಿಗೆ ವೇದಾಂತ ಬೋಧನೆ ಮಾಡುತ್ತಿದ್ದೇವೆ! ಆಹಾ! ವೇದಮಾತೆ, ನಿನ್ನ ಸಂನ್ಯಾಸಿಗಳ ಲೀಲೆಯನ್ನು ನೋಡು! ನೋಡಿ ನಲಿ! ನಲಿ! ಕಾಲಡಿಯ ಭೂಮಿಯನ್ನೂ ಹಿಡಿಯಲಾರದ ಅಶಕ್ತರಿಗೆ ಅನಂತಾಕಾಶವನ್ನು ತೋರಿಸಿದ್ದೇವೆ! ಸಹೋದರರೆ, ಸಂನ್ಯಾಸಿಗಳೆ, ನಮಗಿಂದು ಬರಿಯ ತತ್ತ್ವದಿಂದ ಮುಕ್ತಿ ದೊರಕದು. ಅನ್ನ ಬೇಕು, ವಸ್ತ್ರ ಬೇಕು, ಜನ ಬೇಕು, ಧನ ಬೇಕು!‌

“ನಾನೊಬ್ಬ ಬಡ ಸಾಧು. ನಾನೇನು ಮಾಡಬಲ್ಲೆ? ನನಗೆ ಧನವೆಲ್ಲಿಂದ ದೊರಕುವುದು?”

ಸಂನ್ಯಾಸಿ ನಿಷ್ಪಂದ ನೀರವವಾಗಿ ನಿಂತು ಸಾಗರವನ್ನು ದುರದುರನೆ ನೋಡಿದನು. ಪಶ್ಚಿಮ ದಿಕ್ಕಿನ ಕಡೆಗೆ ತಿರುಗಿ ಬಹುಕಾಲ ನಿಟ್ಟಿಸಿದನು. ನೈರಾಶ್ಯದ ಚಿಹ್ನೆಗಳು ಕ್ರಮಕ್ರಮವಾಗಿ ಮುಖದಿಂದ ಅಳಿಸಿಹೋದುವು. ಫಕ್ಕನೆ ಯಾರನ್ನೊ ಕಂಡವನಂತೆ ಬೆಚ್ಚಿಬಿದ್ದು ಕೈಮುಗಿದುಕೊಂಡು ಹೇಳತೊಡಗಿದನು:‌

“ಹೇ ಗುರುದೇವ, ಹೇ ಗುರುದೇವ, ನಿನ್ನ ಕೃಪೆಯೊಂದಿರಲಿ! ನನಗೆಲ್ಲ ಸಾಧ್ಯವಾಗುವುದ. ಸಮಸ್ತ ಭರತಖಂಡವನ್ನು ಸಂಚರಿಸಿ ಅದರ ಹೃದಯವನ್ನು ಅರಿತಿದ್ದೇನೆ. ನೂತನ ಚೇತನಶಕ್ತಿ ಅದರ ಅಂತರಾಳದಲ್ಲಿ ಅಡಗಿದೆ. ಅದನ್ನು ಎಚ್ಚರಿಸಲು ಪ್ರಯತ್ನಪಡುತ್ತೇನೆ. ಸೊಂಟ ಕಟ್ಟಿ ನಿಲ್ಲುತ್ತೇನೆ. ಅರಸರ ಅರಮನೆಗಳಲ್ಲಿ ಸೆಜ್ಜೆಗಳ ಮೇಲೆ ಪವಡಿಸಿದ್ದೇನೆ; ತಿರುಕರ ಗುಡಿಸಲುಗಳಲ್ಲಿ ನೆಲದ ಮೇಲೆ ಮಲಗಿದ್ದೇನೆ. ಭಾರತಮಾತೆಯನ್ನು ಆಪಾದಮಸ್ತಕವಾಗಿ ಅರಿತಿದ್ದೇನೆ. ಈ ಮಹಾ ಸಮುದ್ರವನ್ನು ದಾಟುವೆನು. ಪಶ್ಚಿಮದೇಶಗಳಿಗೆ ಹೋಗುವೆನು. ಐಶ್ವರ್ಯದಲ್ಲಿ ಓಲಾಡುತ್ತಿರುವ ಪಶ್ಚಿಮ ದೇಶಗಳಿಗೆ ಹೋಗುವೆನು. ನನ್ನ ಮೇಧಾಶಕ್ತಿಯಿಂದ ಧನಾರ್ಜನೆ ಮಾಡುವೆನು. ಮಾತೆಯ ಉದ್ಧಾರಕ್ಕೆ ಯತ್ನ ಮಾಡುವೆನು. ಹೇ ಜನನಿ, ಸಂನ್ಯಾಸಧರ್ಮಕ್ಕೆ ವಿರುದ್ಧವಾಗಿ ಧನ ಸಂಪಾದನೆ ಮಾಡುವೆನು. ದರಿದ್ರ ನಾರಾಯಣರ ಸೇವೆ ಮಾಡುವೆನು. ಹೇ ಗುರುದೇವ, ಹೇ ಗುರುದೇವ, ನಿನ್ನ ಕೃಪೆಯನ್ನು ನೀಡು, ನನಗೆ ನೆರವಾಗು! ನೆರವಾಗು!”

ಇಂತೆಂದು ದೇಶಭಕ್ತ ವೈರಾಗಿ ಮೌನವಾಗಿ ಗಗನದೆಡೆಗೆ ಶೂನ್ಯದೃಷ್ಟಿಯನ್ನಟ್ಟಿದ್ದನು. ಮಾಗಿಯ ನೇಸರು ಮೇಲೇರಿ ಸೌಮ್ಯಾತಪವು ವೈರಾಗಿಯನ್ನು ಮೀಯಿಸಿತ್ತು. ಆತನ ಕಾವಿಯ ತಲೆಯುಡೆಯನ್ನು ಕಡಲೆಲರು ಒಯ್ಯನೆ ಓಸರಿಸಿ ಕೆಳಗೆಸೆಯಿತು. ಕಡಲ್ವಕ್ಕಿಗಳು ಸುತ್ತಲೂ ಹಾರಾಡಿದುವು. ಶರಧಿಯ ತರಂಗಗಳು ಸಂನ್ಯಾಸಿಯನ್ನು ಸಂತವಿಡುವಂತೆ ನಾಲ್ಕು ದಿಕ್ಕುಗಳಿಂದಲೂ ಮುತ್ತಿಬಂದು ಬಂಡೆಗೆ ಬಡಿಯುತ್ತಿದ್ದುವು. ಉದ್ವೇಗವು ಕಡಮೆಯಾಗಿ ರಾಜಯೋಗಿ ದೃಢ ಚಿತ್ತಾನ್ವಿತನಾದನು. ಮುಖದಲ್ಲಿ ದಿಟ್ಟತನದ ರೇಖೆಗಳು ತೋರಿದುವು. ಮರಳಿ ಆತನ ವಾಣಿ ದೂರದ ಗುಡುಗಿನಂತೆ ಗಂಭೀರವಾಗಿ ಮೊಳಗಿತು :‌

“ನನ್ನ ಸಂನ್ಯಾಸ! ನನ್ನ ಆತ್ಮ ಕಲ್ಯಾಣ! ನನ್ನ ಮುಕ್ತಿ! ಚಿಃ ಚಿಃ ಸ್ವಾರ್ಥತೆಯೆ, ದೂರ ಸರಿ! ಭರತಖಂಡದ ಉದ್ಧಾರಕ್ಕಾಗಿ ಕೋಟಿ ಜನ್ಮಗಳನ್ನೆತ್ತಿ ಬರುವೆನು! ದರಿದ್ರನಾರಾಯಣರ ಸೇವೆಗಾಗಿ ನನ್ನ ಸ್ವಂತ ಆತ್ಮಮುಕ್ತಿಯನ್ನು ಈಡಾಡುವೆನು! ಜಗತ್ತಿನಲ್ಲಿ ಕ್ರಿಮಿಯೊಂದು ಕಷ್ಟದಲ್ಲಿರುವವರೆಗೆ ನಾನು ಸುಖವನ್ನು ಬಯಸೆನು. ಕೀಟವೊಂದು ಬಂಧನದಲ್ಲಿರುವವರೆಗೆ ನನಗೆ ಮುಕ್ತಿಬೇಡ! ಮಾತೃದೇವೋ ಭವ! ಪಿತೃದೇವೋ ಭವ! ಅತಿಥಿದೇವೋ ಭವ! ಅಲ್ಲ, ಅಲ್ಲ, ದರಿದ್ರದೇವೋ ಭವ! ಮೂರ್ಖದೇವೋ ಭವ! ಪಾಪಿದೇವೋ ಭವ! ಮೂರ್ಖರೆನ್ನ ದೇವರು! ದರಿದ್ರರೆನ್ನ ದೇವರು! ಪಾಪಿಗಳೆನ್ನ ದೇವರು! ನಾನವರ ಸೇವೆಗಾಗಿ ನನ್ನಾತ್ಮವನ್ನು ಧಾರೆ ಯೆರೆಯುವೆನು! ಗುರುದೇವ! ಗುರುದೇವ!”

ಸಂನ್ಯಾಸಿ ಸೆರೆಮನೆಯಿಂದ ಹೊರಗೆ ಬಂದವನಂತೆ ಒಂದೆರಡು ನಿಟ್ಟುಸಿರೆಳೆದು, ಹಿಂದಕ್ಕೂ, ಮುಂದಕ್ಕೂ ಅಡ್ಡಾಡತೊಡಗಿದನು. ನಯನಗಳು ನವ ಜ್ಯೋತಿಯನ್ನು ಚೆಲ್ಲಿದುವು. ಪುನಃ ವ್ಯೋಮವನ್ನೂ ಸಮುದ್ರವನ್ನೂ ಭಾರತ ವರ್ಷವನ್ನೂ ದೃಷ್ಟಿಸಿ, ಪಶ್ಚಿಮದ ಕಡೆಗೆ ತಿರುಗಿ ನಿಂತನು. ತುಸು ಹೊತ್ತು ದುರದುರನೆ ನಿಟ್ಟಿಸಿ ಹೇಳತೊಡಗಿದನು :‌

“ನನಗಿಂದು ತಿಳಿಯಿತು ನನ್ನ ಜನ್ಮೋದ್ದೇಶ! ಪಶ್ಚಿಮ ದೇಶಗಳಿಗೆ ಹೋಗುವೆನು. ಅಲ್ಲಿ ಭೋಗವಾದಿಗಳ ಹೃದಯದಲ್ಲಿ ಸನಾತನ ವೇದಧರ್ಮದ ಉಪನಿಷತ್ ಪ್ರಖರಜ್ಯೋತಿಯನ್ನು ಬೀರುವೆನು. ಅವರು ಭಾರತಾಂಬೆಗೆ ತಲೆಬಾಗಿ ಆಕೆಗೆ ನೆರವಾಗುವಂತೆ ಮಾಡುವೆನು. ಆಕೆಯ ದುರ್ಗತಿಯನ್ನು ಪರಿಹರಿಸಲೆಳಸುವೆನು. ಭಾವಸಮಾಧಿ ಅಲ್ಲಿರಲಿ! ನಿರ್ವಿಕಲ್ಪಸಮಾಧಿ ಸದ್ಯಕ್ಕೆ ಒತ್ತಟ್ಟಿಗಿರಲಿ! ನನ್ನಾತ್ಮ ಮುಕ್ತಿ ಸದ್ಯಕ್ಕೆ ಮುಕ್ತಾಯವಾಗಿರಲಿ! ನಿಜವಾದ ಧರ್ಮವನ್ನು ಜಗತ್ತಿಗೆ ಬೋಧಿಸುವೆನು. ಜಗತ್ತನ್ನು ಎಚ್ಚರಿಸುವೆನು. ಭರತಖಂಡವನ್ನು ಮೇಲೆತ್ತುವೆನು. ಹೇ ಜನನಿ, ಪುಣ್ಯಭೂಮಿ, ಆರ್ಯಮಾತೆ, ವೇದಪೂಜಿತೆ, ನನ್ನನ್ನು ಆಶೀರ್ವದಿಸು! ಹೇ ಗುರುದೇವ, ಕೃಪಾಕರ, ನನಗೆ ಶಕ್ತಿಯನ್ನು ನೀಡು!”

ಹೀಗೆಂದ ಸಂನ್ಯಾಸಿ ಕಲ್ಲಿನ ಮೇಲೆ ಕಲ್ಲಾಗಿ ನಿಂತುಬಿಟ್ಟನು. ಆತನ ಸುಂದರ ಗಂಭೀರ ಮೂರ್ತಿಯನ್ನು ಕಂಡು ಸಮುದ್ರರಾಜನು ನಮಸ್ಕರಿಸಿದನು, ಬಾನ್ದೇವಿ ಕೈಮುಗಿದಳು, ಭಾರತಾಂಬೆ ಕಂಬನಿತುಂಬಿ ಕಂಪಿತ ಹಸ್ತದಿಂದ ಹರಸಿದಳು. ಶ್ರೀಗುರುದೇವನು ಮಂದಸ್ಮಿತನಾಗಿ ತನ್ನ ಶಕ್ತಿವರ್ಧಕ ಕೃಪಾಕಟಾಕ್ಷವನ್ನು ಬೀರಿದನು.

ಸಂನ್ಯಾಸಿ ಅಲುಗಾಡದೆ ನಿಂತನು. ಆತನ ಆತ್ಮವು ವಿಶಾಲ ವಿಶ್ವದಲ್ಲಿ ಸಂಚರಿಸುತ್ತಿತ್ತು. ಸಮುದ್ರಪಕ್ಷಿಗಳು ಒಂದು ಮುಖವನ್ನು ಒಂದು ನೋಡಿ ವಿಸ್ಮಯದಿಂದ “ಯಾರಿವನು?” ಎಂದು ಹಾಡಿದುವು!

ಯಾರಿವನು?

* * *[1] ಅದೇ ಸಂವತ್ಸರದ ಏಪ್ರಿಲ್ ತಿಂಗಳಿನಲ್ಲಿ ಮುಂದೆ ಮಹಾತ್ಮರಾಗಲಿರುವ ಗಾಂಧಿಯವರು ಮೊತ್ತಮೊದಲು ದಕ್ಷಿಣ ಆಫ್ರಿಕಕ್ಕೆ ಹೋದುದು ಮತ್ತು ಶ್ರೀ ಅರವಿಂದರು ಇಂಗ್ಲೆಂಡಿನಲ್ಲಿ ಕೃತವಿದ್ಯರಾಗಿ ಭಾರತಕ್ಕೆ ಆಗಮಿಸಿದುದು.