ವಿಶಾಲ ಮರುಭೂಮಿಯ ಕರ್ಮಹೀನ ಮೃತ್ಯುಶಾಂತಿ, ಅಪಾರ ಸಮುದ್ರದ ನಿರಂತರೋತ್ಸಾಹಪೂರ್ಣ ಕರ್ಮಮಯಕ್ರಾಂತಿ, ಅನಂತಾಕಾಶದ ವಿಪುಲ ನೀಲ ಧ್ಯಾನಗಾಂಭೀರ್ಯ, ಮೇಘಚುಂಬಿತ ಮಹಾಪರ್ವತಶ್ರೇಣಿಯ ತಪೋಮಯ ಶಿಲಾಸ್ಥೈರ್ಯ, ದಿಗಂತವ್ಯಾಪಿಯಾದ ಮಹಾರಣ್ಯರಾಜಿಯ ಸುಂದರ ಸ್ವಚ್ಛಂದ ಭೋಗೋನ್ಮಾದ ಇವುಗಳೆಲ್ಲ ಹಾಸುಹೊಕ್ಕಾದಂತಿದ್ದ ಸ್ವಾಮಿ ವಿವೇಕಾನಂದರ ಬೃಹನ್ಮಹಾವ್ಯಕ್ತಿತ್ವದ ವಿರಚನೆಯಲ್ಲಿ ಅನೇಕ ಶಕ್ತಿಗಳೂ ವ್ಯಕ್ತಿಗಳೂ ಅನುಭವಗಳೂ ಸನ್ನಿವೇಶಗಳೂ ಸೂತ್ರಗಳಾಗಿ ಭಾಗವಹಿಸಿವೆ. ಆ ಸೂತ್ರಗಳಲ್ಲಿ ಪರಂಪರೆಯಾಗಿ ಹರಿದು ಬರುವ ವಂಶಗುಣವೂ ಒಂದಾಗಿದೆ. ಸ್ವಾಮಿ ವಿವೇಕಾನಂದರ ವ್ಯಕ್ತಿತ್ವದ ಹೃದಯದ ಎರಡು ಪಕ್ಕಗಳಲ್ಲಿ ಎರಡು ಶ್ವಾಸಕೋಶಗಳಿವೆ: ಒಂದು ಮಹತ್ಯಾಗಿ, ಮತ್ತೊಂದು ರಸಯೋಗಿ. ಮೊದಲನೆಯದಕ್ಕೆ ಪಿತಾಮಹನೂ ಎರಡನೆಯದಕ್ಕೆ ಪಿತನೂ ಮೂಲವಾಗಿದ್ದಾರೆ.

ವಿವೇಕಾನಂದರ ತಂದೆ ವಿಶ್ವನಾಥದತ್ತನು ಇನ್ನೂ ಹಸುಳೆಯಾಗಿದ್ದಾಗಲೆ ಆತನ ಪಿತನಾದ ದುರ್ಗಾಚರಣದತ್ತನು ಶ್ರೀಮಂತನಾಗಿದ್ದರೂ ಸಂಸಾರದಲ್ಲಿ ಸಂತೃಪ್ತನಾಗದೆ ಸತ್ಯದ ಉತ್ತುಂಗ ಶೃಂಗದ ಅಮೃತಸರೋವರದ ಅನ್ವೇಷಣೆಗಾಗಿ ಗೃಹ ತ್ಯಾಗಮಾಡಿ ಸಂನ್ಯಾಸಿಯಾಗಿ ಕಣ್ಮರೆಯಾಗಿದ್ದನು. ಸಾಧು ಸಂನ್ಯಾಸಿಗಳಲ್ಲಿ ತನಗೆ ಗೌರವವಿದ್ದರೂ ತನ್ನ ಪತಿ ಗೃಹತ್ಯಾಗ ಮಾಡಿದುದರಿಂದ ಶೋಕಾಕುಲೆಯಾದ ವಿಶ್ವನಾಥನ ತಾಯಿ ಮಗನನ್ನು ಕಣ್ಣೀರಿನಲ್ಲಿ ಮೀಯಿಸಿ ಸಲಹಿದಳು. ಚಿಕ್ಕಂದಿನಿಂದಲೂ ಮಾತೆಯ ಮನೋವ್ಯಥೆಯನ್ನು ನೋಡಿ ಮರುಗಿ ಅದಕ್ಕೆ ಕಾರಣವಾಗಿದ್ದ ತಂದೆಯ ಗೃಹತ್ಯಾಗಕ್ಕೆ ಆಧಾರವಾಗಿದ್ದ ಮನೋಭಾವದ ವಿಚಾರದಲ್ಲಿ ದ್ವೇಷದಿಂದಲೂ ಜುಗುಪ್ಸೆಯಿಂದಲೂ ಹಾಸ್ಯಬುದ್ಧಿಯಿಂದಲೂ ಬೆಳೆದ ವಿಶ್ವನಾಥದತ್ತನು ಆಗತಾನೆ ವಂಗದೇಶದಲ್ಲಿ ಪ್ರಚಾರವಾಗುತ್ತಿದ್ದ ಅನಾತ್ಮ ವಿಜ್ಞಾನ ತತ್ತ್ವ ಪ್ರಧಾನವಾಗಿದ್ದ ಹತ್ತೊಂಬತ್ತನೆಯ ಶತಮಾನದ ಆಂಗ್ಲೇಯ ವಿದ್ಯಾಭ್ಯಾಸದ ಪ್ರಭಾವದಿಂದ ಸ್ವಲ್ಪ ಚಾರ್ವಾಕ ಲಕ್ಷಣಗಳುಳ್ಳ ಸಂದೇಹವಾದಿಯಾದನು.

ಆತನಿಗೆ ಆತ್ಮ, ಪರಲೋಕ, ಸಂಯಮ, ತಪಸ್ಸು, ಸಂನ್ಯಾಸ ಮುಂತಾದವುಗಳ ವಿಚಾರದಲ್ಲಿ ಸಂಪೂರ್ಣವಾದ ಅಪನಂಬುಗೆ ಇರದಿದ್ದರೂ ಹೆಚ್ಚು ವಿಶ್ವಾಸವಿರಲಿಲ್ಲ. ಲೋಕದಲ್ಲಿ ಮಿಕ್ಕುಮೀರುವಷ್ಟು ಕಷ್ಟಸಂಕಟಗಳಿವೆ; ಸ್ವಲ್ಪಮಟ್ಟಿಗೆ ಸುಖವೂ ಇದೆ. ಕಷ್ಟಪಡಲಿ ಸುಖಪಡಲಿ ಕೆಲವು ವರ್ಷಗಳಲ್ಲಿ ಮೃತ್ಯು ಎಲ್ಲವನ್ನೂ ಅಳಿಸಿ ಬಿಡುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಸುಖಪಡುವುದೆ ಜಾಣ್ಮೆ. ಸಂಯಮ, ಸಂನ್ಯಾಸ, ಬ್ರಹ್ಮಚರ್ಯ, ತ್ಯಾಗ, ಸಾಧನ ಇತ್ಯಾದಿ ಸಂಕೋಲೆಗಳಿಂದ ಜೀವನವನ್ನೇಕೆ ಬಿಗಿದು ನೋಯಿಸಬೇಕು? ಅದರಲ್ಲಿಯೂ ಸಂದೇಹಾಸ್ಪದವಾದ ಸ್ವರ್ಗ ಸುಖಕ್ಕಾಗಿ ವಾಸ್ತವವೂ ಸುಲಭವೂ ಸ್ಪಷ್ಟವೂ ಸ್ವಾಭಾವಿಕವೂ ಆದ ಇಹಲೋಕದ ಸುಖಗಳನ್ನು ತ್ಯಜಿಸುವುದು ಬರಿಯ ಪೆಚ್ಚು! ಸಮಾಜದ ಕಟ್ಟಿಗೂ ಸರಕಾರದ ಕಟ್ಟಳೆಗೂ ಸಿಟ್ಟುಬಾರದಂತೆ ಅಲ್ಪಸ್ವಲ್ಪ ವ್ಯಯಮಾತ್ರದಿಂದ ಸಾಧ್ಯವಾಗುವುದಾದರೆ ಆ ಸುಖಗಳನ್ನೇಕೆ ಅನುಭವಿಸಬಾರದು? – ಈ ರೀತಿಯ ಮನೋಧರ್ಮದಿಂದ ಕೃತವಿದ್ಯನೂ ನಿರಂಕುಶಮತಿಯೂ ತೇಜಸ್ವಿಯೂ ಆಗಿ ವಕೀಲಿಯ ವೃತ್ತಿಯನ್ನು ಕೈಕೊಂಡ ವಿಶ್ವನಾಥದತ್ತನು ಆತ್ಮ ವಿಚಾರದಂತೆ ಅನಾತ್ಮವಿಚಾರದಲ್ಲಿಯೂ ಕೃಪಣನಾಗದೆ ರಾಜರಸಿಕನಂತೆ ಉದಾರವಾಗಿ ಚೆನ್ನಾಗಿ ಬಾಳತೊಡಗಿದನು.

ಆತನು ಕಲ್ಕತ್ತಾ ನಗರದ ನಿವಾಸಿಗಳಿಗೆ ಸುಪರಿಚಿತ ವ್ಯಕ್ತಿಯಾಗಿದ್ದನು. ಸ್ವತಂತ್ರಿಯೂ ಬಂಧುವತ್ಸಲನೂ ಆಶ್ರಿತಪಾಲಕನೂ ಆಗಿದ್ದ ವಿಶ್ವನಾಥನ ವಿಶಾಲ ಭವನವು ಧನ ಜನ ಪೂರ್ಣವಾಗಿತ್ತು. ಯಾವ ಸುಖಕ್ಕೂ ಅಲ್ಲಿ ಅಭಾವವಿರಲಿಲ್ಲ. ಬಡಬಗ್ಗರು ಆತನ ಭವನಕ್ಕೆ ಹೋಗಿ ಎಂದಿಗೂ ಹಸಿದ ಹೊಟ್ಟೆಯಿಂದ ಅಥವಾ ಬರಿಯ ಕೈಯಿಂದ ಹಿಂತಿರುಗುತ್ತಿರಲಿಲ್ಲ. ಸಾಧು ಸಂನ್ಯಾಸಿಗಳಿಗೂ ಆತನ ಆಸ್ಥಾನವೆಂದರೆ ರಾಜಾಶ್ರಯವಾಗಿತ್ತು. ಅವರ ಜೀವನ ರೀತಿಯಲ್ಲಿ ತನಗೆ ಆದರ ವಿರದಿದ್ದರೂ ಸಾಧುಗಳನ್ನು ಕಂಡರೆ ಆತನಿಗೆ ಬಹಳ ಗೌರವ. ಹೆಚ್ಚೇನು? ಕಾಯಸ್ಥವೆಂಬ ಕ್ಷತ್ರಿಯಕುಲಕ್ಕೆ ಸೇರಿದ್ದ ವಕೀಲ ವಿಶ್ವನಾಥದತ್ತನು ಕಲ್ಕತ್ತಾ ನಗರದಲ್ಲಿ ಸರ್ವಮಾನ್ಯ ಶ್ರೀಮಂತನಾಗಿದ್ದನು.

ರಾಜ್ಞೀಭಾವದಲ್ಲಿ ತನ್ನ ಪತಿ ವಿಶ್ವನಾಥದತ್ತನಿಗೆ ಹೊಯಿಕೈಯಾಗಿದ್ದ ಭುವನೇಶ್ವರೀದೇವಿ, ವಿವೇಕಾನಂದರ ತಾಯಿ, ಹೆಂಗಸರಿಗೊಪ್ಪುವ ಸ್ವಭಾವಕ್ಕೆ ತಕ್ಕಂತೆ ಅತಿ ಭಕ್ತಿಪರಾಯಣೆಯಾಗಿದ್ದಳು. ಒಂದಿನಿತು ಚಾರ್ವಾಕನಾಗಿದ್ದ ತನ್ನ ಪತಿಯ ಭಕ್ತಿಹೀನತೆಗೆ ತಾನೇ ಹೊಣೆಯಾಗಿ ದಂಪತಿಗಳಿಬ್ಬರ ಭಕ್ತಿಯನ್ನೂ ತಾನೊಬ್ಬಳೇ ಕೈಕೊಂಡು ಪ್ರಾಯಶ್ಚಿತ್ತ ಮಾಡುತ್ತಿದ್ದಳೆಂಬಂತೆ ಈಶ್ವರಾರಾಧನೆ ಮಾಡುತ್ತಿದ್ದಳು. ವಿಶ್ವನಾಥನ ಪ್ರಣಯದ ಬಹುಮುಖತೆ ಮತ್ತು ಅನೇಕಾಗ್ರತೆಗಳೂ ಭುವನೇಶ್ವರಿಯ ಅಗಾಧ ಧಾರ್ಮಿಕತೆಗೆ ಕಾರಣಗಳಾಗಿದ್ದರೂ ಇರಬಹುದು.

ಹೆಣ್ಣು ಮಕ್ಕಳಾಗಿದ್ದರೂ ಭುವನೇಶ್ವರೀದೇವಿ ಗಂಡುಮಗುವಿಗಾಗಿ ಹಾತೊರೆಯುತ್ತಿದ್ದಳು. ಆ ಅಭೀಷ್ಟಸಿದ್ಧಿಗಾಗಿ ತನ್ನ ಮನೆಯಲ್ಲೆ ಪರಮೇಶ್ವರನಿಗೆ ಪೂಜೆ ನೈವೇದ್ಯಗಳನ್ನು ನಿವೇದಿಸುತ್ತಿದ್ದುದಲ್ಲದೆ ಕಾಶಿಯಲ್ಲಿದ್ದ ತನ್ನ ಬಂಧುವೊಬ್ಬಳಿಗೆ ವೀರೇಶ್ವರ ದೇವರಿಗೆಂದು ಮುಡಿಪು ಕಾಣಿಕೆಗಳನ್ನು ಆಗಾಗ ಕಳುಹಿಸುತ್ತಿದ್ದಳು.

ಇಂತಿರಲು ಒಂದಿರುಳು ಆಕೆಗೊಂದು ಕನಸು ಬಿತ್ತು. ಕನಸಿನಲ್ಲಿ ತುಷಾರ ಧವಳ ರಜತಭೂಧರ ಕಾಂತಿಯುತನಾದ ಕೈಲಾಸೇಶ್ವರನು ಆಕೆಯ ಕಂಗಳಿಗೆ ಗೋಚರವಾದನು! ಆಕೆ ಅಶ್ರುಜಲಪೂರ್ಣೆಯಾಗಿ ಭಾವಾವೇಶವಶಳಾಗಿ ಪೂರ್ಣೋನ್ಮೀಲಿತ ನಯನೆಯಾಗಿ ಆ ಮಹಾದಿವ್ಯಮೂರ್ತಿಯನ್ನು ನೋಡ ತೊಡಗಿದಳು. ನೋಡುತ್ತಿದ್ದ ಹಾಗೆಯೇ ಮೆಲ್ಲಮೆಲ್ಲನೆ ದೃಶ್ಯ ಬದಲಾಯಿಸಿತು. ಭಕ್ತಳ ಹೃದಯವನ್ನು ಅಪೂರ್ವ ಆನಂದದಲ್ಲಿ ತೇಲಿಸುತ್ತ ಆ ಶಂಕರಮೂರ್ತಿ ಒಂದು ಶಿಶುವಿನ ರೂಪವನ್ನು ಧಾರಣೆ ಮಾಡಿ ಭುವನೇಶ್ವರೀ ಜನನಿಯ ತೊಡೆಯ ಮೇಲೆ ಬಂದು ನಲಿಯತೊಡಗಿತು! ದಿವ್ಯಾನಂದ ಕಂಟಕಿತ ದೇಹಳಾದ ಭುವನೇಶ್ವರಿ ದೇವಿ ಬೆಚ್ಚಿಬಿದ್ದಳು. ನಿದ್ರಾಭಂಗವಾಯಿತು. ಮೇಲೆದ್ದು “ಹೇ ಶಿವ, ಹೇ ಶಂಕರ, ಹೇ ಕರುಣಾಮಯ” ಎಂದು ಹೇಳುತ್ತ ಭಕ್ತಿಭಾವದಿಂದ ಪುನಃ ಪುನಃ ಅಡ್ಡ ಬಿದ್ದಳು. ಬೆಳಗಾಗಲು ರಾತ್ರಿ ನಡೆದ ಸಂಗತಿಯನ್ನು ತನ್ನ ಪತಿಯಾದ ವಿಶ್ವನಾಥದತ್ತನಿಗೆ ತಿಳಿಸಿದಳು. ಆತನೂ ಆಕೆಯ ಸರಳಸ್ವಭಾವದ ಹರ್ಷಕ್ಕಾಗಿ ಹರ್ಷಿತನಾದನು.

ಕ್ರಿಸ್ತಶಕ ೧೮೬೩ನೆಯ

[1] ಸಂವತ್ಸರದ ಜನವರಿ ತಿಂಗಳು ೧೨ನೆಯ ತೇದಿ, ಮಾಗಿಯ ಚಳಿಕುಳಿರ ಹಿಟ್ಟುಮಂಜು ದಟ್ಟೈಸಿ ಬೀಳುತ್ತಿದ್ದ ಪುಷ್ಯ ಸಂಕ್ರಾಂತಿಯ ಪುಣ್ಯಪ್ರಭಾತದಲ್ಲಿ ಕಲ್ಕತ್ತಾ ಮಹಾನಗರದ ನರನಾರಿಯರು ಗುಂಪುಗುಂಪಾಗಿ ಚಳಿಯಲ್ಲಿ ನಡುಗುತ್ತ ಮಕರಸಪ್ತಮಿಯ ಸ್ನಾನಕ್ಕಾಗಿ ಭಾಗೀರಥಿಗೆ ಹೋಗುತ್ತಿದ್ದರು. ಸಾವಿರಾರು ಗುಡಿಗಳ ಸಾವಿರಾರು ಗಂಟೆಗಳು ಹಬ್ಬದ ಹೆಮ್ಮೆಯನ್ನು ಸೂಚಿಸುತ್ತಿದ್ದುವು. ಆ ಮಂಗಳ ಸಮಯದಲ್ಲಿ, ಸೂರ್ಯೋದಯಕ್ಕೆ ಆರು ನಿಮಿಷಗಳ ಪೂರ್ವದಲ್ಲಿ, ಎಂದರೆ ಆರುಗಂಟೆ ಮೂವತ್ತಮೂರು ನಿಮಿಷ ಮೂವತ್ತಮೂರು ಸೆಕೆಂಡುಗಳಿಗೆ ಸರಿಯಾಗಿ ಕೃಷ್ಣಪಕ್ಷದ ಸಪ್ತಮಿಯ ಪುಣ್ಯ ಮುಹೂರ್ತದಲ್ಲಿ ಭುವನೇಶ್ವರೀದೇವಿ ವಿಶ್ವವಿಜಯಿಯಾಗಲಿರುವ ಮಗನೊಬ್ಬನನ್ನು ಹೆತ್ತಳು. ವಿಶ್ವನಾಥದತ್ತನ ದಿವ್ಯಮಂದಿರವು ಹರ್ಷ ಕೋಲಾಹಲದಿಂದ ಪ್ರತಿಧ್ವನಿತವಾಯಿತು. ಮನೆಮನೆಯಲ್ಲಿಯೂ ಪುಣ್ಯ ಸಂಕ್ರಾಂತಿ ಹಬ್ಬದ ಆನಂದೋತ್ಸವ ನವಜಾತ ಶಿಶುವಿಗೆ ಸಾದರ ಸ್ವಾಗತವೀಯುವಂತೆ ಲಕ್ಷಲಕ್ಷ ಬಾಲಕರು ಕಲಕಲರವಗೈಯುತ್ತಿದ್ದರು. ಇಂತಹ ಶುಭ ದಿವಸದಲ್ಲಿ ಮಂಗಳ ಮುಹೂರ್ತದಲ್ಲಿ ಮುಂದೆ ಯುಗಪ್ರವರ್ತಕನಾಗಲಿರುವ ಶ್ರೀ ಸ್ವಾಮಿ ವಿವೇಕಾನಂದ ಮಹಾಪುರುಷನು ಜನ್ಮವೆತ್ತಿದನು.

ಶಿಶುವಿಗೆ ನಾಮಕರಣದ ಕಾಲವು ಬಳಿಸಾರಿತು. ಕೆಲವರು ಅಜ್ಜನಾದ ದುರ್ಗಾಚರಣಗತ್ತನ ಜ್ಞಾಪಕಾರ್ಥವಾಗಿ ಮಗುವಿಗೆ ದುರ್ಗಾದಾಸನೆಂದು ಹೆಸರಿಡಲು ಯತ್ನಿಸಿದರು. ಆದರೆ ಭುವನೇಶ್ವರೀದೇವಿ ತಾನು ಕಾಶಿಯ ವೀರೇಶ್ವರನಿಗೆ ಅರ್ಪಿಸಿದ ಪೂಜೆಗಳನ್ನೂ ತಾನು ಕಂಡ ಸ್ವಪ್ನವನ್ನೂ ನೆನೆದು ಮಗನನ್ನು ವೀರೇಶ್ವರ ಎಂದು ಕರೆದಳು. ಅನ್ನಪ್ರಾಶನ ಸಮಯದಲ್ಲಿ ಬಾಲಕನ ಪ್ರಚಲಿತ ನಾಮವು ನರೇಂದ್ರನಾಥ ಎಂದಾಯಿತು.

ಬಾಲಕ ನರೇಂದ್ರನಾಥನು ಬಹಳ ತುಂಟನಾಗಿದ್ದನು. ಸ್ವಾತಂತ್ರ್ಯದಲ್ಲಿ ಅವನಿಗೆ ಬಹಳ ಪ್ರೀತಿ. ಶಾಸನವಾಕ್ಯ ಪ್ರಯೋಗಕ್ಕೆ ಭಯಪ್ರದರ್ಶನಕ್ಕೆ ಅವನು ಮಣಿಯುತ್ತಿರಲಿಲ್ಲಿ. “ಶಿವ ಶಿವ” ಎಂದು ಹೇಳಿ ತಲೆಯಮೇಲೆ ನೀರನ್ನು ಚಿಮುಕಿಸಿದರೆ ಮಾತ್ರ ಅವನು ಮಂತ್ರಮುಗ್ಧನಾದವನಂತೆ ತಟಸ್ಥನಾಗಿಬಿಡುತ್ತಿದ್ದನು. ಮಗನಿಗೆ ಸ್ನಾನಮಾಡಿಸುತ್ತಿದ್ದಾಗಲಂತೂ ತಾಯಿ ಬಹುಪೀಡಿತಳಾಗುತ್ತಿದ್ದಳು. ಅವನ ತುಂಟತನವನ್ನು ತಡೆಯಲಾರದೆ ಭುವನೇಶ್ವರೀದೇವಿ “ಮಗನನ್ನು ಕೊಡು ಎಂದು ನಾನು ಬೇಡಿದರೆ ಶಿವನು ಮಂಗನನ್ನು ಕೊಟ್ಟಿದ್ದಾನೆ. ತಾನೇ ಮಗನಾಗಿ ಬರುವ ಬದಲು ತನ್ನ ಗಣದಲ್ಲಿದ್ದ ಯಾವುದೋ ಒಂದು ತಂಟಲಮಾರಿ ಭೂತವನ್ನು ಕಳುಹಿಸಿಬಿಟ್ಟಿದ್ದಾನೆ” ಎನ್ನುವಳು. ಮಗನು ಯಾವುದಕ್ಕೂ ಹೆದರದೆ ಇದ್ದರೂ ಒಂದು ವಿಷಯದಲ್ಲಿ ಮಾತ್ರ ಅವನಿಗೆ ತುಂಬ ಭೀತಿಯಿರುವುದನ್ನು ಆಕೆ ಕಂಡುಹಿಡಿದಿದ್ದಳು. ನರೇಂದ್ರನು ಬಹಳ ತಂಟೆ ಮಾಡಿದರೆ “ನೋಡು, ಬಿಲೇ, (ತಾಯಿ ಮಗನನ್ನು ಕರೆಯುತ್ತಿದ ಮುದ್ದಿನ ಹೆಸರು) ನೀನು ಹೀಗೆಲ್ಲಾ ತಂಟೆ ಮಾಡಿದರೆ ಶಿವನು ನಿನ್ನನ್ನು ಕೈಲಾಸಪರ್ವತಕ್ಕೆ ಸೇರಿಸುವುದೇ ಇಲ್ಲ” ಎಂದು ಹೇಳುತ್ತಿದ್ದಳು. ಅದನ್ನು ಕೇಳಿ ಬಾಲಕನು ಸಭಯ ದೃಷ್ಟಿಯಿಂದ ಮಾತೆಯ ಮುಖವನ್ನೇ ನೋಡುತ್ತ ಸುಮ್ಮನಾಗಿಬಿಡುತ್ತಿದ್ದನು.

ಅಕ್ಕಂದಿರಿಬ್ಬರನ್ನು ಪೀಡಿಸುವುದೆಂದರೆ ನರೇಂದ್ರನಿಗೆ ಬೆಲ್ಲ ತಿಂದಂತೆ. ಹಿಂದಿನಿಂದ ಬಂದು ಅವರಿಬ್ಬರಿಗೂ ಒಂದೊಂದು ಗುದ್ದು ಕೊಟ್ಟು ಓಡಿಬಿಡುವನು. ಆಗ ಆ ಬಾಲಿಕೆಯರು ಅವನನ್ನು ಅಟ್ಟಿಕೊಂಡು ಹೋದರೆ ಅವನು ಓಡಿಹೋಗಿ ಕೊಳಕಾದ ಚರಂಡಿಯಲ್ಲಿ ನಿಂತು ಕೈಯಲ್ಲಿ ಕೆಸರನ್ನು ಹಿಡಿದುಕೊಂಡು “ಬನ್ನಿ ಈಗ, ನೋಡೋಣ” ಎಂದು ಹಲ್ಲುಕಿರಿದು ಪರಿಹಾಸ್ಯ ಮಾಡುವನು. ಪಾಪ, ಅರಿಯದ ಹುಡುಗಿಯರು ಅವನ ಹತ್ತಿರ ಹೋದರೆ ಮೈಲಿಗೆ ಯಾಗುವುದೆಂದು ಅವನನ್ನು ಬಾಯಿಂದಲೆ ಬೈಯುತ್ತ ಹಿಂತಿರುಗಿಬಿಡುತ್ತಿದ್ದರು.

ತಾಯಿ ಮಗನನ್ನು ತೊಡೆಯಮೇಲೆ ಕೂರಿಸಿಕೊಂಡು “ನರೇನ್, ನೀನು ದೊಡ್ಡವನಾದ ಮೇಲೆ ಏನಾಗಬೇಕೆಂದು ಮನಸ್ಸು ಮಾಡಿಕೊಂಡಿದ್ದೀಯೆ?” ಎಂದು ಕೇಳಿದರೆ ಬಾಲಕನು ತಲೆಯೆತ್ತಿ ತಾಯಿಯ ಮೊಗವನ್ನು ನೋಡುತ್ತ “ಅಮ್ಮಾ, ಜೋಡು ಕುದುಗೆ ಗಾಡಿ ಹೊಡೆಯುವ ‘ಕೋಚ್‌ಮ್ಯಾನ್’ ಆಗಬೇಕೆಂದು ಮಾಡಿಕೊಂಡಿದ್ದೇನೆ” ಎಂದು ಅಮ್ಮನನ್ನು ನಗಿಸುತ್ತಿದ್ದನು. ‘ಕೋಚ್‌ಮ್ಯಾನ್’ ಕೆಲಸವೆಂದರೆ ಸಾಮಾನ್ಯವೇ? ಎತ್ತರವಾದ ಸ್ಥಳದಲ್ಲಿ ಕುಳಿತು ಬಣ್ಣ ಬಣ್ಣದ ಬಟ್ಟೆ ಹಾಕಿಕೊಂಡು ತೇಜಸ್ವಿಯಾದ ಅಶ್ವದ್ವಯಗಳ ವಾಗೆಯನ್ನು ಎಡದ ಕೈಲಾಂತು, ಚಬುಕವನ್ನು ಬಲದ ಕೈಯಲ್ಲಿ ಹಿಡಿದು, ಕಾಲಿನಿಂದ ಅಲಾರಂ ಗಂಟೆಯನ್ನು ಒತ್ತಿ ಎಂತೆಂತಹ ದೊಡ್ಡಮನುಷ್ಯರನ್ನೂ ದಾರಿಬಿಟ್ಟುಕೊಡುವಂತೆ ಮಾಡುತ್ತ ಕಲ್ಕತ್ತಾ ಮಹಾನಗರದ ಮಹಾಬೀದಿಗಳಲ್ಲಿ ಪರಿಧಾವಿಸುವುದೆಂದರೆ ಅದೇನು ಪ್ರಾಕೃತವೆ? ಶ್ರೀಕೃಷ್ಣನು ಕೂಡ ಅರ್ಜುನನ ‘ಕೋಚ್‌ಮ್ಯಾನ್’ ಆಗಿರಲಿಲ್ಲವೆ?

ನರೇಂದ್ರನಾಥನು ಅನೇಕ ಸಾರಿ ಅಮ್ಮನ ಅಂಕದ ಮೇಲೆ ಮುದ್ದಿನ ಮುದ್ದೆಯಂತೆ ಮುದ್ದಾಗಿ ಕುಳಿತುಕೊಂಡು ಅನನ್ಯ ಮನಸ್ಕನಾಗಿ ಆಕೆ ಮುದ್ದಿನಿಂದ ಹೇಳುತ್ತಿದ್ದ ರಾಮಾಯಣ ಭಾರತದ ಕತೆಗಳನ್ನು ಆಲಿಸುತ್ತಿದ್ದನು. ರಾಮಾಯಣವನ್ನು ಕೇಳುತ್ತ ಕೇಳುತ್ತ ಸರಳ ಶಿಶುಹೃದಯವು ಭಕ್ತಿಯಿಂದ ಪೂರ್ಣವಾಗುತ್ತಿತ್ತು. ಕತೆಯನ್ನು ಕೇಳಿದ ಆತನು ಒಂದು ದಿನ ಸೀತಾರಾಮರ ಒಂದು ವಿಗ್ರಹವನ್ನು ಕೊಂಡುಕೊಂಡು ಬಂದು ಆರಾಧಿಸತೊಡಗಿದನು.

ತಾಯಿ ಮತ್ತೊಂದು ದಿನ ಸೀತಾರಾಮರ ವಿವಾಹ ವಿಚಾರವನ್ನು ಹೇಳಿ ಅವರಿಗೆ ಬಂದೊದಗಿದ ಕಷ್ಟಪರಂಪರೆಗಳನ್ನು ವಿವರಿಸಿದಳು. ನರೇಂದ್ರನ ಸುಕುಮಾರ ಚಿತ್ತದ ಮೇಲೆ ಆ ಗಂಭೀರಭಾವವು ಅಂಕಿತವಾಗಿ ಹೋಯಿತು. ನಾನಾ ಚಿಂತೆಗಳಿಂದ ಆಕುಲನಾದ ಬಾಲಕನು ಅಶ್ರುಪೂರ್ಣಲೋಚನನಾಗಿ ತಾಯಿಯ ಬಳಿಗೆ ಬಂದು ಅಳತೊಡಗಿದನು. ತಾಯಿ ಅಳುವ ಕಾರಣವನ್ನು ಕೇಳಿದಳು. ನರೇಂದ್ರನು ಕ್ರಂದನ ಕಂಪಿತ ಕಂಠದಿಂದ “ಅಮ್ಮಾ, ನಾನು ಸೀತಾರಾಮರನ್ನು ಹೇಗೆ ಪೂಜಿಸಲಿ? ಸೀತೆ ರಾಮನ ಹೆಂಡತಿಯಲ್ಲವೆ?” ಎಂದನು. ಸ್ನೇಹವಿಕಲೆಯಾದ ಜನನಿ ತನ್ನ ಪ್ರಿಯತಮ ಪುತ್ರನನ್ನು ಎತ್ತಿಕೊಂಡು ಮುತ್ತು ಕೊಡುತ್ತ “ಮಗು, ಸೀತಾರಾಮರ ಪೂಜೆ ಮಾಡುವುದು ಬೇಡ. ನಾಳೆಯಿಂದ ಶಿವಪೂಜೆ ಮಾಡಬಹುದು” ಎಂದು ಸಂತೈಸಿದಳು.

ಆ ದಿನ ಸಾಯಂಕಾಲ ಮುಚ್ಚಂಜೆಯ ಅಂಧಕಾರ ಬರಬರುತ್ತ ನಿಬಿಡವಾಯಿತು. ತಲೆಯ ಮೇಲೆ ಆಕಾಶ – ಅಸಂಖ್ಯ ಉಜ್ವಲ ಜ್ಯೋತಿಷ್ಕಮಂಡಲೀ ಪರಿಶೋಭಿತ ಶ್ಯಾಮಲ ಆಕಾಶ! ಮನೆಯ ಬೋಳು ಮಹಡಿತಯ ಮೇಲೆ ನರೇಂದ್ರನು ಸೀತಾರಾಮರ ವಿಗ್ರಹದ ಎದುರು ಕುಳಿತಿದ್ದಾನೆ. ಆದರ್ಶ ದಾಂಪತ್ಯ ಪ್ರೇಮದ ಸರ್ವಶ್ರೇಷ್ಠ ಆದರ್ಶಜೀವಿಗಳನ್ನು ಕೈಯಲ್ಲಿ ಹಿಡಿದುಕೊಂಡು ಸಂಶಯ ಸಂಕುಲ ಚಿತ್ತನಾಗಿ ಭಾವೀ ಸಂನ್ಯಾಸಿಯಾದ ವಿವೇಕಾನಂದನು ಕುಳಿತಿದ್ದಾನೆ! ಒಂದು ಕಡೆ ಗಾಢವಾದ ಸೀತಾರಾಮರ ಮೇಲಿನ ಭಕ್ತಿ; ಮತ್ತೊಂದು ಕಡೆ ತೀವ್ರ ವಿವಾಹವಿತೃಷ್ಣೆ. ಮಗುವಿನ ಮುದ್ದು ಎದೆ ಕದಡಿ ಹೋಯಿತು. ಆದರೇನು? ವಿವಾಹಿತ ಜೀವನ ಉನ್ನತವಾದರೇನು? ಪವಿತ್ರವಾದರೇನು? ಅದು ಆತನ ಆದರ್ಶವಲ್ಲ. ವಿಗ್ರಹವನ್ನು ಮೇಲೆತ್ತಿ ಮಹಡಿಯಿಂದ ಬೀದಿಗೆ ಎಸೆದನು. ಅದು ನುಚ್ಚುನೂರಾಯಿತು. ಬಾಲಕನು ವಿಜಯಿಯಾದ ವೀರನಂತೆ ಗರ್ವಿತಪದ ವಿನ್ಯಾಸದಿಂದ ಮಹಡಿಯನ್ನು ಬಿಟ್ಟನು.

ವಿನೋದಕರವಾಗಿ ಲಘುವಾಗಿ ತೋರುವ ಈ ಬಾಲಲೀಲೆಯ ಘಟನೆಯಲ್ಲಿ ಭವಿಷ್ಯತ್ತಿನ ಛಾಯೆ ಸುಳಿದಾಡುತ್ತಿದೆ. ಮುಂದೆ ನರೇಂದ್ರನ ಜೀವನದಲ್ಲಿ ಬಂದೊದಗಲಿರುವ ಸಂಸಾರ ಮತ್ತು ಸಂನ್ಯಾಸಾದರ್ಶಗಳ ಪರಸ್ಪರ ಗದಾಯುದ್ಧಕ್ಕೆ ಈ ಸಂಗತಿ ಒಂದು ಪ್ರತಿಮೆಯಂತಿದೆ. ಬುದ್ಧಿ ನಿರ್ಣಯಿಸುವ ಮೊದಲೆ ಹೃದಯ ಹಾದಿ ಸೂಚಿಸುತ್ತದೆ ಎಂಬ ಜಾಣ್ಣುಡಿಗೆ ಇದೊಂದು ಸಾಕ್ಷಿಯಾಗಿದೆ.

ವಿಶ್ವನಾಥದತ್ತನ ಮನೆಗೆ ನಾನಾ ಜಾತಿಯ ಜನಗಳು ಬರುತ್ತಿದ್ದರು. ಫಕೀರರೂ ಸಾಧುಗಳೂ ಅಲ್ಲಿಗೆ ಬಂದಾಗ ನರೇಂದ್ರನು ಅವರು ಮಾಡುತ್ತಿದ್ದ ಧ್ಯಾನ ಜಪತಪಗಳನ್ನು ಕುತೂಹಲದಿಂದ ನೋಡುತ್ತಿದ್ದನು. ತಾನೂ ಅವರಂತೆಯೆ ಭಸ್ಮ ಜಟಾಧಾರಿಯಾಗಿ ಶಿವಧ್ಯಾನ ಮಾಡಬೇಕೆಂದು ರಹಸ್ಯವಾಗಿ ಯೋಚಿಸುತ್ತಿದ್ದನು. ಅದರಂತೆಯೆ ಅವನು ಎಷ್ಟೋ ಆವರ್ತಿ ಧ್ಯಾನಲೀಲೆಯಲ್ಲಿ ತೊಡಗುತ್ತಿದ್ದನು. ಒಂದು ದಿನ ಆತನು ತನ್ನ ಶಿವವಿಗ್ರಹದ ಮುಂದೆ ಶಿವಯೋಗಿಯ ವೇಷವನ್ನು ತಳೆದು ತಪಸ್ವಿಗಳಂತೆ ಕಾಲಮೇಲೆ ಕಾಲು ಹಾಕಿಕೊಂಡು ಕುಳಿತಿದ್ದನು. ಉಟ್ಟಿದ್ದ ಪಂಚೆಯನ್ನು ಹರಿದು ಕೌಪೀನವನ್ನಾಗಿ ಮಾಡಿಕೊಂಡಿದ್ದನು. ಮೈಗೆಲ್ಲಾ ಒಲೆಯ ಬೂದಿಯನ್ನು ದಟ್ಟವಾಗಿ ಮೆತ್ತಿಕೊಂಡಿದ್ದನು. ಅಷ್ಟರಲ್ಲಿ ಭುವನೇಶ್ವರೀದೇವಿ ಅಲ್ಲಿಗೆ ಬಂದು ಮಗನ ವೇಷವನ್ನು ಕಂಡು “ಇದೇನು ನರೇನ್? ಏನಾಗಬೇಕೆಂದು ಹೀಗೆ ಮಾಡಿಕೊಂಡಿದ್ದೀಯೆ?” ಎಂದಳು. ಮಗನು ಸ್ವಲ್ಪವೂ ಅಪ್ರತಿಭನಾಗದೆ “ನೋಡಮ್ಮ, ನಾನು ಶಿವ! ನಾನು ಶಿವ!” ಎಂದು ಸಂತಸದಿಂದ ಹೇಳಿದನು. ಅದನ್ನು ಆಲಿಸಿದ ತಾಯಿಯ ಎದೆ ಯಾವುದೊ ಒಂದು ಅನಿರ್ದಿಷ್ಟ ಆಶಂಕೆಯಿಂದ ಕಂಪಿತವಾಯಿತು. ಅಜ್ಜನಂತೆ ಮೊಮ್ಮಗನೂ ಎಲ್ಲಿಯಾದರೂ ಸಂನ್ಯಾಸಿಯಾಗಿಬಿಡುವನೊ ಎಂದು ಆಕೆ ಬೆದರಿದಳು. ಸರ್ವದಾ ಭಾವ ಗೋಪನಾಭ್ಯಸ್ಥೆಯೂ ದೃಢಚಿತ್ತೆಯೂ ಆದ ಭುವನೇಶ್ವರಿ ಶಿವಸ್ಮರಣೆ ಮಾಡಿ ತಾತ್ಕಾಲಿಕವಾದ ಸ್ನೇಹದ ದೌರ್ಬಲ್ಯವನ್ನು ಹೃದಯದಿಂದ ದೂರ ಮಾಡಿದಳು. “ಭಗವಂತನ ಇಚ್ಛೆಯಿದ್ದಾಂತಾಗಲಿ! ಅದನ್ನು ತಡೆಯಲು ನಾನು ಯಾರು?” ಎಂದುಕೊಂಡು ಸುಮ್ಮನಾದಳು.

ಸುಮಾರು ಒಂದು ಗಂಟೆ ಕಳೆದ ಮೇಲೆ ಶಿವಯೋಗಿಯ ವೇಷಧಾರಣೆ ಮಾಡಿದ್ದ ನರೇಂದ್ರನು ಮತ್ತೆ ತಾಯಿಯ ಬಳಿಗೆ ಓಡಿಬಂದು “ಇದೇನಮ್ಮಾ? ಒಂದು ಗಂಟೆ ಶಿವಧ್ಯಾನ ಮಾಡಿದರೂ ನನ್ನ ತಲೆಯ ಮೇಲೆ ಶಿವಜಟೆ ಬೆಳೆದೇ ಇಲ್ಲ!” ಎಂದನು. ಹಿರಿಯರು ಹುಡುಗನಿಗೆ ವಿನೋದಕ್ಕಾಗಿ ಶಿವಧ್ಯಾನ ಮಾಡಿದರೆ ಶಿವಜಟೆ ಬೆಳೆಯುತ್ತದೆ ಎಂದು ಹೇಳಿದ್ದರು. ತಾಯಿಯ ಹೃದಯ ಆಶಂಕೆಯಿಂದ ವಿಕಂಪಿಸಿತು. “ಶಿವಜಟೆ ಬಳೆಯುವುದಕ್ಕೆ ಬಹಳ ಕಾಲ ಹಿಡಿಯುತ್ತದೆ” ಎಂದು ಆ ಕತೆ ಈ ಕತೆ ಹೇಳಿ ಸಮಾಧಾನಪಡಿಸಿದಳು. ಬಾಲಕನು ಚಿಂತಾಮಗ್ನನಾದನು. ತಾಯಿ ಆಗಾಗ “ನೀನು ತಂಟೆ ಮಾಡಿದ್ದುದರಿಂದಲೇ ಶಿವನು ನಿನ್ನನ್ನು ಕೈಲಾಸದಿಂದ ಅಟ್ಟಿಬಿಟ್ಟಿದ್ದಾನೆ!” ಎಂದು ತನ್ನನ್ನು ಗದರಿಸುತ್ತಿದ್ದುದು ನೆನಪಿಗೆ ಬಂದು, “ಅಮ್ಮ, ನಾನು ಹಿಂದೆ ಸಂನ್ಯಾಸಿಯಾಗಿದ್ದೆ ಎಂದು ತೋರುತ್ತದೆ. ನಾನು ಸರಿಯಾಗಿ ನಡೆದುಕೊಂಡರೆ ಶಿವನು ನನ್ನನ್ನು ಮತ್ತೆ ಕೈಲಾಸಕ್ಕೆ ಕರೆಯಿಸಿಕೊಳ್ಳುತ್ತಾನೇನು?” ಎಂದು ಪ್ರಶ್ನೆ ಮಾಡಿದನು. ತಾಯಿ ಸ್ವಲ್ಪ ಭೀತಳಾಗಿ “ಹೌದಪ್ಪ!” ಎಂದು ಬೇರೆ ವಿಚಾರವಾಗಿ ಮಾತೆತ್ತಿದಳು.

ಮತ್ತೊಂದು ದಿನ ಬಾಲಕರೆಲ್ಲರೂ ಆಟದ ಮನೆಯಲ್ಲಿ ಆಡುತ್ತಿದ್ದಾಗ ನರೇಂದ್ರನು ಧ್ಯಾನಮಗ್ನನಾಗಿ ಕುಳಿತನು. ಇತರ ಬಾಲಕರೆಲ್ಲರೂ ಆಟಕ್ಕಾಗಿ ಅವನಂತೆಯೆ ಮಾಡಿದರು. ಸ್ವಲ್ಪ ಹೊತ್ತಾಯಿತು. ಬಾಲಕನೊಬ್ಬನು ಕಣ್ಣು ಬಿಟ್ಟು ನೋಡಲು ನರೇಂದ್ರನ ಮುಂದೆ ದೊಡ್ಡದಾದ ಸರ್ಪವೊಂದು ಹೆಡೆಯೆತ್ತಿ ನಿಂತಿತ್ತು. ಹುಡುಗನು “ಹಾವು! ಹಾವು!” ಎಂದು ಕೂಗಿಕೊಂಡನು. ಹುಡುಗರೆಲ್ಲರೂ ಚೀತ್ಕಾರ ಮಾಡುತ್ತಾ ಮೇಲೆದ್ದು ಹಿಂದಕ್ಕೆ ಚಿಮ್ಮಿದರು. ನರೇಂದ್ರನು ಮಾತ್ರ ಬಾಹ್ಯಜ್ಞಾನ ಶೂನ್ಯನಾಗಿ ಕುಳಿತೇ ಇದ್ದನು. ಕೋಲಾಹಲವಾಯಿತು. ಸುದ್ದಿ ಮನೆಯವರಿಗೆ ಮುಟ್ಟಿತು. ತಂದೆ – ತಾಯಿ ಮೊದಲಾದವರೆಲ್ಲರೂ ಅಲ್ಲಿಗೆ ಓಡಿಬಂದರು. ಅಷ್ಟು ಹೊತ್ತಿಗೆ ಚಂದ್ರೋದಯವಾಯಿತು. ನರೇಂದ್ರನಾಥನ ಕೈಶೋರ ಲಾವಣ್ಯ ಸ್ನಿಗ್ಧ ತರುಣ ಸುಂದರ ಮುಖಮಂಡಲದಲ್ಲಿ ಚಂದ್ರರಶ್ಮಿ ಪ್ರತಿಫಲಿತವಾಗಿ ಅದನ್ನು ಸ್ವರ್ಗೀಯ ವಿಭಾ ವಿಕೀರ್ಣವನ್ನಾಗಿ ಮಾಡಿತ್ತು. ದೇಹ ಸ್ಪಂದಹೀನ. ಕುಮಾರಯೋಗಿ ಪದ್ಮಾಸನದಲ್ಲಿ ಧ್ಯಾನಮಗ್ನನಾಗಿದ್ದನು. ಸಮ್ಮುಖದಲ್ಲಿ ವಿಷಧರ ಸರ್ಪವು ಭೀಷಣವಾದ ತನ್ನ ಫಣಿಯನ್ನು ವಿಸ್ತರಿಸಿಕೊಂಡು ಮಂತ್ರಮುಗ್ಧವಾದಂತೆ ನಿಶ್ಚಲವಾಗಿ ನಿಂತಿತ್ತು. ಅದನ್ನು ನೋಡಿ, ಬಂದವರೆಲ್ಲರೂ ಕಿಂಕರ್ತವ್ಯವಿಮೂಢರಾಗಿ ನಿಂತುಬಿಟ್ಟರು. ಸ್ವಲ್ಪ ಹೊತ್ತಿನಲ್ಲಿಯೆ ಸರ್ಪ ಅಂತರ್ಹಿತವಾಯಿತು. ಹುಡುಕಿದರೆ ಅದು ಸಿಕ್ಕಲಿಲ್ಲ. ಮೈತಿಳಿದ ಬಾಲಕನು ಸರ್ಪದ ವಿಷಯವನ್ನು ಕೇಳಿ ವಿಸ್ಮಿತನಾಗಿ “ನನಗೆ ಸರ್ಪದ ಕತೆ ಏನೂ ಗೊತ್ತಿಲ್ಲ. ನಾನೊಂದು ಅಪೂರ್ವ ಆನಂದವನ್ನು ಉಪಭೋಗಿಸುತ್ತಿದ್ದೆ” ಎಂದನು. ಅನೇಕ ಮಹಾಪುರುಷರ ಜೀವನಚರಿತ್ರೆಗಳನ್ನು ನೋಡಿದರೆ ಇಂತಹ ಅದ್ಭುತಗಳು ಜರುಗುವುದು ನಮಗೆ ಅಷ್ಟೇನೂ ಆಶ್ಚರ್ಯವಾಗಿ ತೋರುವುದಿಲ್ಲ. ಅಷ್ಟೇಕೆ? ನರೇಂದ್ರನಾಥನು ನಿದ್ದೆ ಮಾಡುವಾಗ ಪ್ರತಿದಿನವೂ ಮಂಡಲಾಕಾರವಾದ ದಿವ್ಯ ಜ್ಯೋತಿಯೊಂದು ದೂರದಿಂದ ಬಂದು ಆತನ ಭ್ರೂಮಧ್ಯೆ ತಲ್ಲೀನವಾಗುತ್ತಿತ್ತಂತೆ! ಇನ್ನೊಂದು ಸಾರಿ ಜ್ಯೋತಿಃಪುರುಷನೊಬ್ಬನು ಕಾಣಿಸಿಕೊಂಡು ಆತನ ದೇಹದಲ್ಲಿ ಐಕ್ಯವಾದನಂತೆ! ಅಪಾರ್ಥಿವ ಪುರುಷರ ವಿಷಯದಲ್ಲಿ ಅಪಾರ್ಥಿವ ಅದ್ಭುತಗಳು ಜರುಗುವುದರಲ್ಲಿ ವಿಶೇಷವೇನಿದೆ?

ಆಜನ್ಮಬ್ರಹ್ಮಚಾರಿಯೂ ಮಹಾವೀರನು ಚಿರಂಜೀವಿಯೂ ಕಾಮರೂಪಿಯೂ ವಜ್ರಶರೀರಿಯೂ ಶ್ರೀರಾಮಚಂದ್ರನ ಪರಮಭಕ್ತನೂ ಆದ ಹನುಮಂತದೇವನಲ್ಲಿ ನರೇಂದ್ರನಿಗೆ ಅತಿಶಯವಾದ ಭಕ್ತಿ. ಬ್ರಹ್ಮಚರ್ಯವೊಂದರಿಂದಲೆ ಆತನು ಅಮರನಾದನೆಂದೂ ದುಸ್ಸಾಧ್ಯವಾದ ಕಾರ್ಯಗಳನ್ನು ಸಾಧಿಸಿದನೆಂದೂ ಬಾಲಕನು ತಿಳಿದಿದ್ದನು. ಒಂದು ದಿನ ಮಹಾವೀರನ ಚರಿತ್ರೆಯನ್ನು ಹರಿಕಥೆ ಹೇಳುತ್ತಿದ್ದ ದಾಸರ ಬಳಿಗೆ ಹೋಗಿ ನರೇಂದ್ರನು “ಮಹಾಶಯ, ನಾನು ಮಹಾವೀರನನ್ನು ನೋಡಬೇಕು! ಅವನು ಇರವುದೆಲ್ಲಿ?” ಎಂದು ಪ್ರಶ್ನೆ ಮಾಡಿದನು. ತರಳನ ಗಂಭೀರ ಹೃದಯದ ಗಭೀರತರ ಭಾವಗಳನ್ನು ಅರಿಯಲಾರದ ಆ ದಾಸರು ಮುಗುಳ್ನಗೆಯಿಂದ “ಹುಂ, ಬಾಳೆಯ ತೋಟದಲ್ಲಿ ಹುಡುಕಿದರೆ ಸಿಕ್ಕಬಹುದು!” ಎಂದು ಬಿಟ್ಟರು. ಅವನು ಆ ದಿನ ಬಾಳೆಯ ತೋಟದಲ್ಲಿ ರಾತ್ರಿ ಕತ್ತಲಾಗುವವರೆಗೂ ಕಾದು ಹನುಮಂತನನ್ನು ಕಾಣದೆ ಬಂದುಬಿಟ್ಟನು.

ನರೇಂದ್ರನಿಗೆ ಆರು ವರ್ಷವಾಗಲು ಅವನನ್ನು ಶಾಲೆಗೆ ಕಳುಹಿಸಿದರು. ಸ್ವತಂತ್ರಜೀವಿಗಳಾದ ಬಾಲಕರಿಗೆ ಪಾಠಶಾಲೆ ಎಂದರೆ ಅದೊಂದು ಜೈಲು! ನರೇಂದ್ರನಿಗೂ ಅದೇ ಅನುಭವವುಂಟಾಯಿತು. ಆದರೆ ಅಲ್ಲಿಯೂ ಅವನ ವ್ಯಕ್ತಿತ್ವ ಪ್ರಕಾಶಕ್ಕೆ ಬರದೆ ಬಿಡಲಿಲ್ಲ. ಸಮವಯಸ್ಕರಾದ ಸಹಪಾಠಿಗಳ ಸಂಗ ಅವನಿಗೆ ಹರ್ಷದಾಯಕವಾಗಿತ್ತು. ಶೀಘ್ರದಲ್ಲಿಯೆ ಅವನ ನೇತೃತ್ವದಲ್ಲಿ ಒಂದು ಚಿಕ್ಕ ತುಂಟರ ಗುಂಪು ತಯಾರಾಯಿತು. ಕ್ರೀಡಾಮತ್ತ ಬಾಲಕನಿಕರದ ಹಾಸ್ಯ ಪರಿಹಾಸ್ಯ ಕೌತುಕ ಕೋಲಾಹಲಗಳಿಗೆ ದತ್ತಭವನ ನೆಲೆಬೀಡಾಯಿತು.

ನರೇಂದ್ರನು ಎಲ್ಲೆಲ್ಲಿಯೂ ನಾಯಕವ್ಯಕ್ತಿ. ಆಟದಲ್ಲಿ ಹೇಗೆ ಅವನು ಎಲ್ಲರಿಗೂ ಮುಂದಾಳಾಗಿ ಇರುತ್ತಿದ್ದನೊ ಹಾಗೆಯೆ ಪಾಠದಲ್ಲಿಯೂ ಇರುತ್ತಿದ್ದನು. ಆತನ ಸ್ಮರಣ ಬುದ್ಧಿಶಕ್ತಿಗಳು ಅದ್ಭುತವಾಗಿದ್ದುವು. ಚಿಕ್ಕ ವಯಸ್ಸಿನಲ್ಲಿಯೆ ತಾಯಿಯ ಬಾಯಿಂದ ಕೇಳಿದ ರಾಮಾಯಣ ಭಾರತಗಳ ಭಾಗಗಳನ್ನು ಅವನು ಕಂಠಪಾಠ ಮಾಡಿಬಿಟ್ಟಿದ್ದನು. ಕುಸ್ತಿ ಆಡುವುದೆಂದರೆ ಅವನಿಗೆ ಬಹಳ ಆಸಕ್ತಿ. ಗರಡಿಯ ಮನೆಗಳಲ್ಲಿ ಯಾರೂ ನರೇಂದ್ರನನ್ನು ಮರೆಯುವ ಹಾಗಿರಲಿಲ್ಲ. ಗೋಲಿಯಾಟ, ಹಾರಾಟ, ಓಡುವುದು, ಮುಷ್ಟಿಯುದ್ಧ, ಮಲ್ಲಕಾಳಗ ಇವುಗಳಲ್ಲೆಲ್ಲ ಅವನು ನಿಪುಣನಾಗಿದ್ದನು. ಆತನ ಹೃದಯದಲ್ಲಿ ಕರುಣೆ ಅಪಾರವಾಗಿತ್ತು. ಸಣ್ಣ ಹುಡುಗರಿಗೆ ಅಪಾಯ ಕಾಲದಲ್ಲಿ ಆತನು ತನ್ನ ಕ್ಷೇಮವನ್ನು ಸ್ವಲ್ಪವೂ ಗಣನೆಮಾಡದೆ ಸಹಾಯ ಮಾಡುತ್ತಿದ್ದನು. ಬಡಬಗ್ಗರಿಗೆ ಮನೆಯಲ್ಲಿ ಏನು ಕೈಗೆ ಸಿಕ್ಕಿದರೆ ಅದನ್ನು ಕೊಟ್ಟುಬಿಡುತ್ತಿದ್ದನು. ಮನೆಯವರು ಬೈದರೆ ತನ್ನ ವಸ್ತ್ರಗಳನ್ನೆ ಹಿಂದುಮುಂದು ನೋಡದೆ ದಾನಮಾಡುತ್ತಿದ್ದನು. ಮುಂದೆ ಶ್ರೀ ಸ್ವಾಮಿ ವಿವೇಕಾನಂದರಲ್ಲಿ ತೋರಿಬಂದ ಗುಣಗಳೆಲ್ಲವೂ, ಗಾಂಭೀರ್ಯ, ಸರಳತೆ, ಸತ್ಯ, ಧೈರ್ಯ, ಅಸ್ವಾರ್ಥತೆ, ಪ್ರೇಮ, ಕರುಣೆ, ದಯೆ, ಸೇವಾಶಕ್ತಿ ಮೊದಲಾದ ಮಹಾಗುಣಗಳೆಲ್ಲವೂ ನರೇಂದ್ರನಾಥನಲ್ಲಿ ಬೀಜರೂಪದಲ್ಲಿ ಹುದುಗಿಕೊಂಡು ಮೆಲ್ಲಮೆಲ್ಲನೆ ಮೊಳೆಯುತ್ತಿದ್ದುವು.

ಪಾಠಶಾಲೆಯಲ್ಲಿ ನರೇಂದ್ರನಿಗೆ ಬಹಳ ವಿಪತ್ತುಗಳು ಬಂದೊದಗಿದುವು. ಅವನ ಸ್ವಾತಂತ್ರ್ಯ ಸಂಕುಚಿತವಾಗುತ್ತ ಹೋಯಿತು. ಬಹಳ ಹೊತ್ತು ಒಂದೇ ಕಡೆ ಕುಳಿತರಿಯನವನು. ಒಂದು ಸಾರಿ ನಿಂತುಕೊಳ್ಳುವುದು; ಒಂದು ಸಾರಿ ಕುಳಿತು ಕೊಳ್ಳುವುದು; ಒಮ್ಮೆ ಹೊರಗೆ ಹೋಗುವುದು; ಒಮ್ಮೆ ಇನ್ನೇನೂ ತೋರದಿದ್ದರೆ ಕೈಲಿದ್ದ ಪುಸ್ತಕವನ್ನು ಹರಿದು ಹಾಕುವುದು; ಹೀಗೆಲ್ಲ ಮಾಡುತ್ತ ಅವನು ಪಂಜರಬದ್ಧವಾದ ಕಾನನ ಕೇಸರಿಯಂತೆ ಆಡುತ್ತಿದ್ದನು. ಉಪಾಧ್ಯಾಯರಿಗೂ ಕೂಡ ಕಷ್ಟಕ್ಕಿಟ್ಟುಕೊಂಡಿತು. ಪ್ರತಿಭಾಶಾಲಿಯಾದ ನರೇಂದ್ರನಾಥನು ತಂಟಲು ಮಾರಿಯಾಗಿದ್ದರೂ ಆತನಲ್ಲಿ ನ್ಯಾಯವಿಚಾರತೆ, ಔದಾರ್ಯ, ಕ್ಷಮೆ, ಶಕ್ತಿ ಇತ್ಯಾದಿ ಗುಣಗಳು ಅಪಾರವಾಗಿದ್ದುವು. ಒಂದು ದಿನ ಅವನು ಕುದುರೆಗಾಡಿಯ ಅಡಿಯಲ್ಲಿ ಸಿಕ್ಕಿ ಸಾಯುವುದರಲ್ಲಿದ್ದ ತನ್ನ ಒಬ್ಬ ಸಂಗಾತಿಯನ್ನು ಧೈರ್ಯದಿಂದ ಹೊರಗೆಳೆದು ಸಲಹಿದನು. ಮತ್ತೊಂದು ದಿನ ಜ್ವರದಿಂದ ಪೀಡಿತನಾಗಿ ಬೀದಿಯಲ್ಲಿ ಕುಳಿತುಬಿಟ್ಟ ಬಾಲಕನೊಬ್ಬನನ್ನು ಸುರಕ್ಷಿತವಾಗಿ ಅವನ ಮನೆಗೆ ಸಾಗಿಸಿದನು. ಧೂರ್ತತನವಂತೂ ಕೆಚ್ಚೆದೆಯ ನರೇಂದ್ರನ ಜನ್ಮಸಿದ್ಧವಾದ ಹಕ್ಕಾಗಿತ್ತು. “ಹಾಗಲ್ಲದಿದ್ದರೆ ನಾನು ಕಾಸಿಲ್ಲದೆ ಕಡಲನ್ನು ದಾಟುತ್ತಿದ್ದೆನೆ? ಭಿಕಾರಿಯಾಗಿಯೆ ಭೂಪ್ರದಕ್ಷಿಣೆ ಮಾಡುತ್ತಿದ್ದೆನೆ?” ಎಂದು ಶ್ರೀಸ್ವಾಮಿ ವಿವೇಕಾನಂದರು ಆಮೇಲೆ ತಮ್ಮ ಶಿಷ್ಯರೊಡನೆ ಹೇಳುತ್ತಿದ್ದರು.

ಆಗಲೆ ಅನೇಕರು ಬಾಲಕನ ಮಹಿಮಾಮಯ ಭವಿಷ್ಯತ್ತನ್ನು ಕಂಡಿದ್ದರು. ಕ್ರಿಸ್ತಾಬ್ದ ೧೮೬೯ರಲ್ಲಿ ನರೇಂದ್ರನ ಅಜ್ಜನಾದ ಕಾಳೀಪ್ರಸಾದದತ್ತನು ಆಸನ್ನ ನಿರ್ವಾಣನಾಗಿ ಹಾಸಿಗೆಯ ಮೇಲೆ ಮಲಗಿದ್ದನು. ತಾನು ಸಾಯುವ ಕಾಲದಲ್ಲಿ ತನ್ನ ಬಂಧುವರ್ಗದವರೆಲ್ಲರನ್ನೂ ನೋಡಬೇಕೆಂಬ ಆಸೆ ಆತನಿಗೆ ಇದ್ದುದರಿಂದ, ಮನೆಯವರೆಲ್ಲರೂ ಅವನ ಮೃತ್ಯುಶಯ್ಯೆಯ ಸುತ್ತಲೂ ಸೇರಿದ್ದರು. ನರೇಂದ್ರನು ಎಷ್ಟೋ ಸಾರಿ ಆತನಿಂದ ಮಹಾಭಾರತವನ್ನು ಕೇಳಿ ಆನಂದಿಸಿದ್ದನು. ಕಡೆಗಾಲದಲ್ಲಿ ಅಜ್ಜನನ್ನು ಬೀಳ್ಕೊಳ್ಳಲು ಅವನೂ ತನ್ನ ಅಕ್ಕಂದಿರೊಡನೆ ಹಾಸಿಗೆಯ ಬಳಿ ಬಂದು ನಿಂತನು. ಕಾಳೀಪ್ರಸಾದನ ಜೀವನಶಕ್ತಿ ಕ್ರಮಶಃ ಕ್ಷೀಣವಾಗುತ್ತ ಬಂದಿತು. ಸಾಯುವ ಮುನ್ನ ಆತನು ನರೇಂದ್ರನ ಕಡೆಗೆ ಸಸ್ನೇಹದೃಷ್ಟಿ ಪ್ರಸಾರ ಮಾಡಿ “ವತ್ಸ, ಒಂದು ಮಹಿಮಾಮಯ ಭವಿಷ್ಯತ್ತು ನಿನಗಾಗಿ ಕಾದುಕೊಂಡಿದೆ. ನೀನು ದೊಡ್ಡ ಮನುಷ್ಯನಾಗುವೆ!” ಎಂದು ಹೇಳಿ ಪ್ರಾಣಬಿಟ್ಟನು. ಆ ಮುದುಕನು ಸಾಯುವ ಕಾಲದಲ್ಲಿ ಆಡಿದ ಆ ಭವಿಷ್ಯದ್ವಾಣಿ ನಿರರ್ಥವಾಗಲಿಲ್ಲ.

ಬುದ್ಧಿ ಎಷ್ಟರಮಟ್ಟಿಗೆ ತೀಕ್ಷ್ಣವಾಗಿತ್ತೊ ಅದಕ್ಕೆ ಇಮ್ಮಡಿಯಾದ ಹೃದಯ ವೈಶಾಲ್ಯ ನರೇಂದ್ರನದಾಗಿತ್ತು. ಆತನು ಎಷ್ಟರಮಟ್ಟಿಗೆ ತೀವ್ರ ಸಂನ್ಯಾಸಿಯಾಗಿದ್ದನೊ ಅದಕ್ಕೆ ಇಮ್ಮಡಿಯಾಗಿ ರಸಋಷಿಯಾಗಿದ್ದನು. ಯೋಗ ಸಾಧನೆ ಷಡ್ದರ್ಶನಗಳಲ್ಲಿ ಆತನಿಗೆ ಎಷ್ಟು ಆಸಕ್ತಿಯಿದ್ದಿತೊ ಅಷ್ಟೇ ಆಸಕ್ತಿ ಸಂಗೀತ, ಸೌಂದರ್ಯ, ಕಲೆ, ಸಾಹಿತ್ಯ ಮೊದಲಾದುವುಗಳಲ್ಲಿ ಇತ್ತು. ಭದ್ರರೂಪಿ ಯಾದ ಆತನಿಗೆ ಚಿಕ್ಕಂದಿನಿಂದಲೂ ಗಾನಕಲೆಯಲ್ಲಿ ಅಭಿರುಚಿಯಿತ್ತು. ಅದನ್ನು ನೋಡಿ ವಿಶ್ವನಾಥದತ್ತನು ಮಗನಿಗೆ ಗಾನವಿದ್ಯೆಯನ್ನು ಶಾಸ್ತ್ರೀಯವಾಗಿ ಬೋಧಿಸಲು ಒಬ್ಬ ಗಾಯಕನನ್ನು ಗೊತ್ತುಮಾಡಿದ್ದನು. ವಿಶ್ವವಿಖ್ಯಾತರಾದ ಮೇಲೆಯೂ ಕೂಡ ಶ್ರೀ ಸ್ವಾಮಿ ವಿವೇಕಾನಂದರು ತಮ್ಮ ಶ್ರೀಕಂಠದ ಮಂಜುಳ ವಾಣಿಯಿಂದ ಎಷ್ಟೋ ಜನ ಭಕ್ತರನ್ನು ಭಾವಾವಿಷ್ಟರನ್ನಾಗಿ ಮಾಡುತ್ತಿದ್ದರು. ಶಾಲೆಯಲ್ಲಿ ಸಂಸ್ಕೃತ, ಇಂಗ್ಲೀಷು, ಇತಿಹಾಸ ಈ ಮೂರರಲ್ಲಿ ನರೇಂದ್ರನಿಗೆ ಅತ್ಯಂತ ಅನುರಕ್ತಿ. ಗಣಿತವೆಂದರೆ ಮಾತ್ರ ತೀವ್ರವಾದ ವಿರಕ್ತಿ, ಅದನ್ನು “ಕೋಮಟಿಗಳ ಕವಡು ಬಿಜ್ಜೆ” ಎಂದು ಕರೆಯುತ್ತಿದ್ದರಂತೆ.

ಹದಿನಾಲ್ಕನೆಯ ವರ್ಷದಲ್ಲಿ ನರೇಂದ್ರನಿಗೆ ಉದರವಾಯು ರೋಗವೆಂಬ ಹೊಟ್ಟೆಯ ಜಾಡ್ಯ ಹಿಡಿಯಿತು. ಬಹಳ ದಿನಗಳವರೆಗೆ ಕಾಯಿಲೆ ಗುಣವಾಗಲೇ ಇಲ್ಲ. ದೃಢಕಾಯನಾಗಿದ್ದ ಬಾಲಕನು ಅಸ್ಥಿ ತುಂಬಿದ ಚರ್ಮದ ಮೂಟೆಯಂತಾಗಿ ಬಿಟ್ಟನು. ಅದೇ ಸಮಯದಲ್ಲಿ ವಿಶ್ವನಾಥದತ್ತನು ಯಾವುದೊ ಒಂದು ಕಾರ್ಯಭಾರದಿಂದ ಮಧ್ಯಪ್ರಾಂತಗಳಲ್ಲಿರುವ ರಾಯಪುರಕ್ಕೆ ಹೋದನು. ವಾಯು ಪರಿವರ್ತನೆಯಿಂದ ಮಗನು ರೋಗವಿಮುಕ್ತನಾಗಬಹುದೆಂದು ಯೋಚಿಸಿ ಸಂಸಾರವೆಲ್ಲವನ್ನೂ ಅಲ್ಲಿಗೆ ಕರೆಯಿಸಿಕೊಂಡನು. ತಂದೆ ಬಗೆದಂತೆಯೆ ನರೇಂದ್ರನು ಕ್ರಮಕ್ರಮೇಣ ಆರೋಗ್ಯಶಾಲಿಯಾಗುತ್ತ ಬಂದನು.

ರಾಯಪುರದಲ್ಲಿ ಪಾಠಶಾಲೆ ಇಲ್ಲದಿದ್ದರೂ ವಿಶ್ವನಾಥದತ್ತನು ತಾನೇ ಸ್ವಂತವಾಗಿ ಮಗನಿಗೆ ನಾನಾ ಗ್ರಂಥಗಳನ್ನು ಪಾಠ ಹೇಳಲು ತೊಡಗಿದನು. ಮಗನ ಪ್ರತಿಭೆ ಆತನಿಗೆ ತಿಳಿಯದೆ ಹೋಗಿರಲಿಲ್ಲ. ಆದ್ದರಿಂದ ಪಠ್ಯಪುಸ್ತಕಗಳನ್ನು ಮಾತ್ರವೆ ಅಲ್ಲದೆ ಇತಿಹಾಸ, ದರ್ಶನ ಮತ್ತು ಸಾಹಿತ್ಯ ಸಂಬಂಧವಾದ ನಾನಾವಿಧ ಪುಸ್ತಕಗಳನ್ನು ಪುತ್ರನಿಗೆ ಓದಿಸಲಾರಂಭಿಸಿದನು.

ರಾಯಪುರದಲ್ಲಿ ಕೃತವಿದ್ಯರಾದ ವ್ಯಕ್ತಿಗಳೆಲ್ಲರೂ ವಿಶ್ವನಾಥದತ್ತನ ಭವನಕ್ಕೆ ಪ್ರತಿದಿನವೂ ವಿಚಾರಕ್ಕಾಗಿ ಬರುತ್ತಿದ್ದರು. ತಮ್ಮ ಚರ್ಚೆಯಲ್ಲಿ ಭಾಗಿಯಾಗುವಂತೆ ವಿಶ್ವನಾಥನು ಮಗನಿಗೂ ಹೇಳುತ್ತಿದ್ದನು. ನರೇಂದ್ರನು ಉತ್ಸಾಹದಿಂದ ಅವರ ವಾಗ್ವಾದಗಳಲ್ಲಿ ಸೇರುತ್ತಿದ್ದನು. ಒಂದು ಸಾರಿ ಖ್ಯಾತನಾಮನಾದ ವಂಗ ಲೇಖಕನೊಬ್ಬನು ರಾಯಪುರಕ್ಕೆ ಬಂದನು. ಆತನು ವಿಶ್ವನಾಥದತ್ತನ ಮನೆಯಲ್ಲಿಯೆ ಇಳಿದುಕೊಂಡಿದ್ದನು. ಒಂದು ದಿನ ಆತನು ಸಾಹಿತ್ಯ ಸಂಬಂಧವಾದ ತನ್ನ ಅಭಿಪ್ರಾಯಗಳನ್ನು ಸಂಭಾಷಣೆಯ ಮೂಲಕ ತಿಳಿಯಪಡಿಸುವೆನೆಂದು ಹೇಳಿದನು. ದತ್ತ ಭವನವೆ ಸಂಭಾಷಣೆಯ ಸ್ಥಾನವಾಯಿತು. ನರೇಂದ್ರನೂ ತಂದೆಯಿಂದ ಆಹೂತನಾಗಿ ಅಲ್ಲಿಗೆ ಬಂದನು. ಆ ಪ್ರಸಿದ್ಧ ಲೇಖಕನು ನರೇಂದ್ರನ ಪ್ರಶ್ನೆಗಳನ್ನು ಕೇಳಿ ವಿಸ್ಮಿತನಾದನು. ಬಾಲಕನು ಪ್ರಸಿದ್ಧ ವಂಗಸಾಹಿತ್ಯದ ಬಹು ಭಾಗವನ್ನು ಆಗಲೆ ಓದಿಬಿಟ್ಟಿರುವನು ಎಂಬ ವಿಚಾರ ಆತನಿಗೆ ಹೊಳೆಯಿತು. ಆಗ ಆತನು ನರೇಂದ್ರನನ್ನು ಕುರಿತು “ವತ್ಸ, ನಿನ್ನಿಂದ ನಮ್ಮ ವಂಗಸಾಹಿತ್ಯ ಮಾನನೀಯವಾಗುವುದು!” ಎಂದನು.

ರಾಯಪುರದಲ್ಲಿರುವಾಗಲೆ ನರೇಂದ್ರನು ಬಾಣಸಿಗತನದ ಕುಶಲಕಲೆಯಲ್ಲಿ ಅತಿ ನಿಪುಣನಾದನು. ಕಾಲೇಜಿನಲ್ಲಿ ಓದುವಾಗಲೂ ಆತನು ಅನೇಕ ಸಾರಿ ತನ್ನ ಸ್ನೇಹಿತ ಬಂಧುವರ್ಗದವರಿಗೆ ತನ್ನ ಪಾಕಕೌಶಲವನ್ನು ತೋರಿಸುತ್ತಿದ್ದನು. ಮುಂದೆ ನರೇಂದ್ರನು ಲೋಕಮಾನ್ಯ ಸ್ವಾಮಿ ವಿವೇಕಾನಂದರಾದಾಗಲೂ ಬಾಣಸಿಗ ತನವನ್ನು ಮಾತ್ರ ಬಿಟ್ಟರಿಲಿಲ್ಲ. ತಾವೇ ಎಷ್ಟೋ ಸಾರಿ ಅಡಿಗೆ ಮಾಡಿ ಶಿಷ್ಯವರ್ಗಕ್ಕೆ ಹೊಟ್ಟೆಯಾರ ಉಣಬಡಿಸಿ ಸಂತೋಷಪಡಿಸಿ ತಾವೂ ಸಂತೋಷ ಪಡುತ್ತಿದ್ದರು.

ಎರಡು ವರ್ಷಗಳಲ್ಲಿ ನರೇಂದ್ರನ ಮಾನಸಿಕ ಮತ್ತು ಶಾರೀರಕ ಶಕ್ತಿಗಳು ವಿಚಿತ್ರ ಪರಿವರ್ತನೆ ಹೊಂದಿ ಅಭಿವೃದ್ಧಿಯಾದುವು. ಆತನು ಮರಳಿ ಕಲ್ಕತ್ತಾಕ್ಕೆ ಬಂದನು. ಬಹುದಿನಗಳಾದಮೇಲೆ ಆತನ ಮಂಗಳಮೂರ್ತಿಯನ್ನು ಸಂದರ್ಶಿಸಿದ ಸ್ನೇಹಿತರೂ ಬಂಧುವರ್ಗದವರೂ ಅತ್ಯಾನಂದಿತರಾದರು. ಪುನಃ ಆತನು ಮೆಟ್ರೊಪೋಲಿಟನ್ ಇನ್‌ಸ್ಟಿಟ್ಯೂಷನ್ನಿಗೆ ಸೇರಲು ಹೋದನು. ಆದರೆ ಎರಡು ವರ್ಷಗಳು ಗೈರುಹಾಜರಾಗಿದ್ದ ಅವನನ್ನು ಮೆಟ್ರಿಕ್ಯುಲೇಷನ್ ತರಗತಿಗೆ ಸೇರಿಸಲು ಮೊದಮೊದಲು ಸ್ವಲ್ಪ ಕಠಿಣವಾಯಿತು. ಆದರೆ ಅವನ ಗುಣಗಳಿಗೆ ಮುಗ್ಧರಾದ ಉಪಾಧ್ಯಾಯರುಗಳ ಸಹಾಯದಿಂದ ನರೇಂದ್ರನು ಕಡೆಗೆ ಮೆಟ್ರಿಕ್ಯುಲೇಷನ್ ತರಗತಿಗೆ ಸೇರಿದನು. ಆ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ನರೇಂದ್ರನು ಪ್ರಥಮ ತಮ ಶ್ರೇಣಿಯಲ್ಲಿ ಉತ್ತೀರ್ಣನಾದನು. ಮೆಟ್ರೊಪೋಲಿಟನ್ ಇನ್‌ಸ್ಟಿಟ್ಯೂಷನ್ನಿನಲ್ಲಿ ಆ ಶ್ರೇಣಿಯಲ್ಲಿ ಉತ್ತೀರ್ಣನಾದವನು ಅವನೊಬ್ಬನೇ. ಬಾಲಕನು ಶಾಲೆಯ ಗೌರವವನ್ನು ಕಾಪಾಡಿದನೆಂದು ಸರ್ವ ಶಿಕ್ಷಕರೂ ಆತನನ್ನು ಬಹುವಾಗಿ ಕೊಂಡಾಡಿದರು.

ಅದೇ ವರ್ಷ ಮತ್ತೊಂದು ಸಂಗತಿ ನಡೆಯಿತು. ಶಾಲೆಯ ಶಿಕ್ಷಕರೊಬ್ಬರು ವರ್ಗ ಮಾಡಲ್ಪಟ್ಟರು. ಹುಡುಗರೆಲ್ಲರೂ ಸೇರಿ ಅವರಿಗೆ ವಿನಯಾಭಿನಂದನೆಗಳನ್ನು ಅರ್ಪಿಸಬೇಕೆಂದು ನಿರ್ಣಯಿಸಿದರು. ಆ ವಿನಯಾಭಿನಂದನೆಯ ಮಹಾ ಸಭೆಗೆ ದೇಶವಿಖ್ಯಾತ ವಾಗ್ಮೀಪ್ರವರ ಸುರೇಂದ್ರನಾಥ ವಂದ್ಯೋಪಾಧ್ಯಾಯರು ಅಧ್ಯಕ್ಷರಾಗಿ ಆಹ್ವಾನಿಸಲ್ಪಟ್ಟರು. ಅವರ ಸಮ್ಮುಖದಲ್ಲಿ ವೇದಿಕೆಯ ಮೇಲೆ ನಿಂತು ಮಾತಾಡಲು ಎಲ್ಲ ಬಾಲಕರೂ ಅಳುಕಿದರು. ಕಡೆಗೆ ಎಲ್ಲರೂ ಸೇರಿ ನರೇಂದ್ರನಾಥನನ್ನೇ ಭಾಷಣಕಾರನನ್ನಾಗಿ ಗೊತ್ತುಮಾಡಿದರು. ನರೇಂದ್ರನು ಸ್ವೀಯ ಸುಮಧುರ ಕಂಠದಿಂದ ಸುಲಲಿತವಾದ ಆಂಗ್ಲೇಯ ಭಾಷೆಯಲ್ಲಿ ಅರ್ಧಗಂಟೆಯ ಹೊತ್ತು ಪೂರ್ವೋಕ್ತ ಶಿಕ್ಷಕ ಮಹಾಶಯರ ಗುಣಾವಳಿಯನ್ನು ಪ್ರಶಂಸೆ ಮಾಡಿದನು. ಸುರೇಂದ್ರನಾಥರು ಕಿಶೋರವಾಗ್ಮಿಯನ್ನು ಬಹುವಾಗಿ ಹೊಗಳಿದರು. ಹದಿನಾರು ಹದಿನೇಳು ವಯಸ್ಸಿನ ಬಾಲಕನೊರ್ವನು ದೇಶವಿನುತ ವಾಗ್ಮೀ ಪ್ರವರ ಶ್ರೀ ಸುರೇಂದ್ರನಾಥರ ಮುಂದೆ ನಿಂತು ಭಾಷಣ ಮಾಡುವುದೆಂದರೆ, ಎಷ್ಟು ದೃಢತೆಯಿರಬೇಕು! ಎಷ್ಟು ಆತ್ಮ ನಿರ್ಭರತೆಯಿರಬೇಕು! ಎಷ್ಟು ಎದೆಗಚ್ಚಿರಬೇಕು!

ನರೇಂದ್ರನು ಜನಿಸಿದನು, ಬೆಳೆದನು, ವಿದ್ಯಾರ್ಜನೆ ಮಾಡಿದನು, ವಿದ್ವನ್ಮಣಿಯಾದನು, ಶ್ರೀ ಸ್ವಾಮಿ ವಿವೇಕಾನಂದರಾದನು, ಲೋಕಕಲ್ಯಾಣತ್ತಾದನು, ನವಯುಗಪ್ರವರ್ತಕನಾದನು, ಧರ್ಮಗುರುವಾದನು, ಸರ್ವಧರ್ಮಸಮನ್ವಯಾಚಾರ್ಯನಾದನು, ವಿಶ್ವವಿಖ್ಯಾತನಾದನು, ಸರ್ವಜನವಂದಿತನಾದನು, ಭಾರತ ವರ್ಷದ ಚಿರನೂತನ ಚೇತನ ಪುನರುತ್ಥಾನ ಕಾರಣನಾದನು, ಆಚಂದ್ರಾರ್ಕ ಚಿರಸ್ಥಾಯಿಯಾದನು! ಇದರ ರಹಸ್ಯವೇನು?

ಮಹಾಪುರುಷರ ಜ್ಯೋತಿರ್ಮಯ ಜೀವನದ ಅಸ್ತಿಭಾರದ ರಹಸ್ಯವನ್ನು ಅರಿಯಬೇಕಾದರೆ ನಮ್ಮ ದೃಷ್ಟಿ ಅವರ ಶೈಶವ ಕೈಶೋರ ಕೌಮಾರ್ಯಗಳ ಕಡೆಗೆ ತಿರುಗಬೇಕು. ಅವರ ಬಾಳನ್ನು ತಿದ್ದಿದ ಬಾಲ್ಯಕಾಲದ ಮುದ್ದಾದ ಸನ್ನಿವೇಶಗಳನ್ನು ಪರಿಶೀಲಿಸಬೇಕು. ಅವರ ಮಾತಾಪಿತೃಗಳ ಬಂಧುಮಿತ್ರರ ಸುಸ್ನೇಹಮಯವಾದ ಆವರಣ ಸನ್ನಿವೇಶ ಪ್ರವೇಶಮಾಡಿ ನೋಡಬೇಕು: “ಮಕ್ಕಳ ಸ್ಕೂಲ್ ಮನೇಲಲ್ವೆ?”

ಎಳೆವರೆಯದ ಅನುಭವಗಳ ಚಿರಮುದ್ರೆಯ ಪರಿಣಾಮವು ಜೀವಜ್ಯೋತಿಗಳ ಉತ್ತರೋತ್ತರ ಜೀವಮಾನದಲ್ಲಿ ನಮಗೆ ಚೆನ್ನಾಗಿ ಗೋಚರವಾಗುವುದು. ಸಿದ್ಧಾರ್ಥನು ಕಂಡ ಮೂರು ಹೃದಯ ವಿದ್ರಾವಕವಾದ ದೃಶ್ಯಗಳ ಪರಿಣಾಮ ಪ್ರಭಾವಗಳು ಕರುಣಾಮಯನಾದ ಶ್ರೀ ಗೌತಮಬುದ್ಧನ ಜೀವನಚರಿತ್ರೆಯಲ್ಲಿ ಚೆನ್ನಾಗಿ ಒಡೆದು ಮೂಡಿರುತ್ತವೆ. ಬಾಲ್ಯದ ಶಕ್ತಿಯುತವಾದ ವೀರ ಸನ್ನಿವೇಶಗಳೂ ಪ್ರಭಾವಗಳೂ ಯೋಧಾಗ್ರಣಿ ನೆಪೋಲಿಯನ್ನನನ್ನು ಸಿಡಿಲಾಳನ್ನಾಗಿ ಮಾಡಿರುತ್ತವೆ. ಕವಿವರ್ಮ ವರ್ಡ್ಸ್‌‌ವರ್ತ್ ಎಂಬ ಆಂಗ್ಲೇಯ ಕಾವ್ಯರ್ಷಿಯ ಲಲಿತ ಗೀತೆಗಳಲ್ಲಿ ಆತನ ಬಾಲ್ಯವು ಸರ್ವದಾ ಮಂದಹಾಸವನ್ನು ಬೀರುತ್ತಿರುತ್ತದೆ. ಭರತಖಂಡದ ಚಕ್ರಾಧಿಪತ್ಯ ಸಂಸ್ಥಾಪಕರಲ್ಲಿ ಅದ್ವಿತೀಯರಾಗಿರುವ ಸುಭಟವರೇಣ್ಯ ಶ್ರೀ ಶಿವಪ್ರಭುವಿನ ಹೃದಯದಲ್ಲಿ ವೀರಮಾತೆ ಜೀಜಾಬಾಯಿಯ ಕೋಮಲ ಕಠೋರ ಪ್ರಭಾವಗಳು ತಾಂಡವವಾಡುತ್ತಿವೆ. ಅಂತೆಯೇ ಸುಮ ಕೋಮಲ ವಜ್ರಕಠೋರ ಹೃದಯದ ಶ್ರೀ ಸ್ವಾಮಿ ವಿವೇಕಾನಂದರಲ್ಲಿ ವಿಶ್ವನಾಥದತ್ತ – ಭುವನೇಶ್ವರೀ ದೇವಿಯರ ಗುಣಗಣಗಳನ್ನು ಸಂದರ್ಶಿಸುತ್ತೇವೆ. “ನನ್ನ ಸಫಲ ಜೀವನಕ್ಕಾಗಿ ಶ್ರೀಭುವನೇಶ್ವರೀ ಮಾತೆಗೆ ಚಿರಋಣಿಯಾಗಿದ್ದೇನೆ” ಎಂದು ಸ್ವಾಮಿಜಿ ಆಗಾಗ ಹೇಳುತ್ತಿದ್ದರು.

ಶ್ರೀ ವಿವೇಕಾನಂದರ ತಂದೆಯಾದ ವಿಶ್ವನಾಥದತ್ತನು ರಾಜವ್ಯಕ್ತಿ. ರೂಪದಲ್ಲಿಯೂ ಆತ್ಮದಲ್ಲಿಯೂ ಆತನು ಪುರುಷಸಿಂಹನಾಗಿದ್ದನು. ಆತನ ವಿಶಾಲ ಹೃದಯದಲ್ಲಿ ಕ್ಷುದ್ರತೆಗೆ ಎಡೆಯಿರಲಿಲ್ಲ. ಆತನ ಮಹಾ ಔದಾರ್ಯದಲ್ಲಿ ಕೃಪಣತೆಗೆ ತಾವಿರಲಿಲ್ಲ. “ಎಂದಿಗೂ ದರ್ಪಕ್ಕೆ ಮಣಿಯಬೇಡ; ಎಂದಿಗೂ ವಿಸ್ಮಯವನ್ನು ತೋರಬೇಡ” ಎಂದು ಆತನು ನರೇಂದ್ರನಿಗೆ ಉಪದೇಶ ಮಾಡುತ್ತಿದ್ದನು. “ಒಂದೇ ಭಾವವು ಅನೇಕ ಭಾಷೆಗಳಲ್ಲಿ ಮೈದೋರುವಂತೆ ಒಂದೇ ಸತ್ಯವು ಅನೇಕ ಮತಗಳಲ್ಲಿ ಮೈದೋರಿದೆ. ಎಲ್ಲ ಮತಗಳೂ ಒಂದೇ ಸತ್ಯದ ದೃಷ್ಟಿ ಭೇದಗತವಾದ ದಿವ್ಯದರ್ಶನಗಳು.” “ಯಾವನು ತನ್ನ ಪೂರ್ವಿಕರ ಸನಾತನ ಇತಿಹಾಸದಲ್ಲಿ ನಂಬುಗೆಡುವನೋ ಆತನಿಗೆ ಎಲ್ಲಿಯೂ ಗೌರವ ದೊರಕದು. ಪರಕೀಯರು ನೆಲವನ್ನು ಗೆದ್ದರೆ ಗೆದ್ದಂತಾಗುವುದಿಲ್ಲ. ಆದರೆ ಆ ಜನರ ಸಂಸ್ಕೃತಿಯನ್ನು ಗೆದ್ದರೆಂದರೆ, ಅವರ ಮಾನಸಿಕ ಐಶ್ವರ್ಯವನ್ನು ಸುಲಿದುಕೊಂಡರೆಂದರೆ, ಸರ್ವನಾಶವಾಗುವುದೇ ನಿಶ್ಚಯ!” ಎಂದು ಮೊದಲಾಗಿ ಮಗನಿಗೆ ಬುದ್ಧಿ ಹೇಳುತ್ತಿದ್ದನು.

ವಿಶ್ವನಾಥದತ್ತನ ಮನೆಯಲ್ಲಿ ಅನೇಕ ನಿರುದ್ಯೋಗಿಗಳಾದ ಬಂಧುಗಳು ಕಾಲಹರಣ ಮಾಡುತ್ತಿದ್ದರು. ಗೃಹಪತಿ ಅವರಲ್ಲಿ ಕೆಲವರಿಗೆ ಸಿಗರೇಟು, ನಶ್ಯ ಮೊದಲಾದವುಗಳನ್ನು ಉಪಯೋಗಿಸುವ ಅಭ್ಯಾಸವಿರುವುದನ್ನು ಅರಿತು ಒಬ್ಬೊಬ್ಬರಿಗೂ ಸ್ವಲ್ಪ ಸ್ವಲ್ಪ ಹಣ ಸಹಾಯ ಮಾಡುತ್ತಿದ್ದನು. ಅದನ್ನು ನೋಡಿ ನರೇಂದ್ರನು ಕುಪಿತನಾಗಿ ಒಂದು ದಿನ ತಂದೆಯ ಬಳಿಗೆ ಬಂದು “ಬಾಬಾ, ನೀನು ನಿರುದ್ಯೋಗಿಗಳಿಗೆ ಸೋಮಾರಿತನವನ್ನು ಕಲಿಸುವುದಲ್ಲದೆ ನಶ್ಯ ಬೀಡಿಗಳಿಗೆ ದುಡ್ಡುಕೊಟ್ಟು ಅವರನ್ನು ಕೆಡಿಸುತ್ತಿದ್ದೀಯೆ” ಎಂದನು. ಮಗನ ಮಾತನ್ನು ಕೇಳಿ ಮುಗುಳ್ನಗೆ ನಗುತ್ತಾ ಉದಾರ ಹೃದಯಿಯಾದ ಪಿತನು “ಬಾಬಾ, ನೀನು ಹೇಳುವುದೇನೊ ಒಂದು ದೃಷ್ಟಿಯಿಂದ ಸರಿಯೇ. ಆದರೆ ಸ್ವಲ್ಪ ಸಾವಧಾನವಾಗಿ ವಿಚಾರಿಸಿ ನೋಡು. ಇವರು ಯಾವ ಬಗೆಯಿಂದಲೂ ಹಣ ಸಂಪಾದನೆ ಮಾಡಲಾರದೆ, ಬಾಳಿನ ಕೋಟಲೆಗಳಿಗೆ ತುತ್ತಾಗಿ, ಜೀವನದಲ್ಲಿ ಬೇಸರ ಹುಟ್ಟಿ, ಕಂಗೆಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕ ಬದಲಾಗಿ ನನ್ನ ಆಶ್ರಯವನ್ನು ಹಾರೈಸಿ ಬಂದಿರುತ್ತಾರೆ. ಮಗುವೇ, ನೊಂದ ಎದೆಯವರಿವರು; ಬೆಂದ ಬಾಳಿವರದು; ನೆಚ್ಚುಗೆಟ್ಟವರಿವರು; ಲೋಕಬಿಟ್ಟವರಿವರು. ಮೂರು ಕಾಸಿನ ಸಿಗರೇಟಿನಿಂದ ಜೀವನದ ತಾಪವನ್ನು ಕ್ಷಣಕಾಲವಾದರೂ ಇವರು ಮರೆಯಬಹುದಾದರೆ, ದುಷ್ಟವೆನಿಸಿದರೂ ಕ್ಷಣಿಕವಾದರೂ ಅದರಿಂದ ಯಾವುದೊ ಒಂದು ಆನಂದವನ್ನು ಇವರು ಹೊಂದಬಹುದಾದರೆ, ಅದನ್ನೇಕೆ ನಾವು ತಡೆಯಬೇಕು? ನಮ್ಮ ನೀತಿಧರ್ಮಗಳಿಂದ ಅವರನ್ನೇಕೆ ಪೀಡಿಸಬೇಕು?” ಎಂದು ಸಸ್ನೇಹವಾಣಿಯಿಂದ ನುಡಿದನು. ತಂದೆಯ ವಾಣಿಯ ಸಾದರತೆಯನ್ನೂ ಗಂಭೀರತೆಯನ್ನೂ ಆತನ ಔದಾರ್ಯದ ಅಗಾಧತೆಯನ್ನೂ ನೋಡಿ ನರೇಂದ್ರನು ಮೂಕನಾದನು. ಚಿರಸ್ಮರಣೀಯವಾದ ಈ ಸಂಗತಿಯನ್ನು ವಿವೇಕಾನಂದರು ತಮ್ಮ ಜೀವಮಾನದಲ್ಲಿ ಒಂದು ಸಲವಾದರೂ ಮರೆತಿರಲಿಲ್ಲ.

ನರೇಂದ್ರನು ತಂದೆಯ ಬಳಿಗೆ ಬಂದು “ಬಾಬಾ, ನೀನು ಮಿತಿಯಿಲ್ಲದೆ ಧನವ್ಯಯ ಮಾಡುತ್ತಿದ್ದೀಯೆ. ನನಗೆ ಏನು ಇಟ್ಟಿರುವೆ? ಏನು ಕೊಟ್ಟಿರುವೆ?” ಎಂದನು. ತಂದೆ ಮಗನನ್ನು ನೋಡುತ್ತ ಹೆಮ್ಮೆಯಿಂದ “ಹೋಗು, ಕನ್ನಡಿಯ ಮುಂದೆ ನಿಂತು ನೋಡು!” ಎಂದನು. ಪುತ್ರನು ಪಿತನ ಅಭಿಪ್ರಾಯವನ್ನು ಅರಿತು ಸುಮ್ಮನಾದನು. ಶ್ರೀ ವಿವೇಕಾನಂದರ ಸುಂದರ ಗಂಭೀರವೂ ಭದ್ರಾಕಾರವೂ ತೇಜಸ್ವಿಯೂ ಸಿಂಹಪ್ರಾಯವೂ ಆದ ಮಹಾವ್ಯಕ್ತಿತ್ವವು ಶ್ರೀಯುತ ವಿಶ್ವನಾಥದತ್ತ ದತ್ತವಾದುದೆಂದು ನಾವು ನೆನಪಿನಲ್ಲಿಡಬೇಕು. ಧನ್ಯ ಶ್ರೀಮಂತ ವಿಶ್ವನಾಥದತ್ತ!

ಧನ್ಯೆ ಶ್ರೀಮತಿ ಭುವನೇಶ್ವರೀದೇವಿ! ತಾಯಿಯ ಮುದ್ದು ತುಟಿಗಳಿಂದ ಹೊರಸೂಸುವ ಮುದ್ದಿನ ಮೆಲ್ನುಡಿಗಳು ಸುಮಧುರ ಮಂಜುಳವಾದುವು. ಮೂಡುದೆಸೆಯ ಮುಂಬೆಳಗಿನಲ್ಲಿ ಬೀಸಿ ಬರುವ ಸುಸಿಲುಸಿರಿನಿಂದ ತಲೆದೂಗುವ ಮಲ್ಲಿಗೆಯ ಹಸುರುಹೊದರಿನಲ್ಲಿ ನನೆಕೊನೆಯೇರಿರುವ ಕುಡಿಗೊನರುಗಳಿಂದ ಒಯ್ಯೊಯ್ಯನೆ ಕಳಗುದುರಿ ಚಳಿಗಾಲದ ಕುಳಿರಹನಿಗಳಿಂದ ನಳನಳಿಸುವ ಹೊಸ ಹಸುರಿನ ಹಸಲೆಯನ್ನು ಚುಂಬಿಸುವ ಅಚ್ಚಲರುಗಳಂತೆ ತಾಯಿಯ ಮುದ್ದಿನ ಮಾತುಗಳು ಎಳೆ ಮಕ್ಕಳ ಮೆಲ್ಲೆದೆಗಳ ಮೇಲೆ ಬೀಳುತ್ತವೆ. ಅವುಗಳಿಗೆ ವೇದವಾಕ್ಯಗಳ ಪ್ರಭುತ್ವವಿಲ್ಲ; ಶಾಸ್ತ್ರಸೂತ್ರಗಳ ಕಾಠಿಣ್ಯ ಸೂಕ್ಷ್ಮತೆಗಳಿಲ್ಲ; ಕಾವ್ಯಗಳ ಮೋಹಪ್ರಲೋಭನಗಳಿಲ್ಲ. ಆದರೂ ಅವುಗಳ ಕಾರ್ಯ ವೇದ ಶಾಸ್ತ್ರ ಕಾವ್ಯಗಳ ಕಾರ್ಯವನ್ನು ಮೀರುತ್ತದೆ. ತಾಯಿಯ ಮಾತುಗಳಲ್ಲಿ ಮಗುವಿನ ಹೃದಯದ ಅಂತರಾಳದಲ್ಲಿ ಅಡಗಿ ಹೊರಡಲು ಸಮಯವನ್ನೆ ಹೊಂಚುತ್ತಿರುವ ಗೂಢಶಕ್ತಿಗಳನ್ನು ಹೊರಗೆಳೆಯುವ ಸಾಮರ್ಥ್ಯವಿದೆ. ಆ ದೃಷ್ಟಿಯಿಂದ ನೋಡಿದರೆ ಜನಾಂಗ ನಿರ್ಮಾಪಕರು ತಾಯಂದಿರೇ. ಜನಾಂಗ ವಿನಾಶಕರೂ ಅವರೇ, ದೇಶವು ಭೀರುಗಳಿಂದ ತುಂಬಿದ್ದರೆ ಅದಕ್ಕೆ ಅವರೇ ಕಾರಣ ಅಥವಾ ದೇಶವು ವೀರರಿಂದ ತುಂಬಿದ್ದರೂ ಆ ಕೀರ್ತಿಗೆ ಮಾತೆಯರೇ ಅರ್ಹರು. ದೇಶದ ಮೇಲ್ಮೆ ಕೀಳ್ಮೆಗಳೆಲ್ಲ ತಾಯಂದಿರ ಕೈಲಿವೆ.‌

“ತಾಯಿಯನ್ನು ಪೂಜಿಸದ ಪಾಪಿಯೊಬ್ಬನೂ ಕೀರ್ತಿವಂತನಾಗಿಲ್ಲ!” ಎಂದು ವಿವೇಕಾನಂದರು ಹೇಳುತ್ತಿದ್ದರು. ಭರತಖಂಡದಲ್ಲಿ ಪೂಜ್ಯತಮಳಾದ ಮಾತೆಗೆ ಅಗ್ರಸ್ಥಾನ ದೊರೆತಿರುವುದು. ಸತಿಯತನಕ್ಕಿಂತಲೂ ತಾಯ್ತನವೆ ಶ್ರೇಷ್ಠತರವಾದುದೆಂದು ಪರಿಗಣಿಸಲ್ಪಟ್ಟಿದೆ. ಸತಿಯಲ್ಲಿ ಸ್ವಲ್ಪವಾದರೂ ಭೋಗವಾಸನೆ ಇರುವುದು; ತಾಯಿಯಾದರೋ ತ್ಯಾಗಮೂರ್ತಿ. ಮಾತೆಯೇ ಗೃಹದೇವತೆ; ಆಕೆಯ ವಾಣಿಯೇ ದೇವವಾಣಿ; ಆಕೆಯ ಇಚ್ಛೆಯೇ ದೇವೇಚ್ಛೆ! ಹಿಂದುಗಳ ಸತಿಯತನದ ಕಲ್ಪನೆ ಶ್ರೇಷ್ಠತರವಾದುದೇ ಸರಿ. ಆದರೆ ಅವರ ತಾಯ್ತನದ ಕಲ್ಪನೆ ಶ್ರೇಷ್ಠತಮವಾದುದು! ಆದ್ದರಿಂದಲೆ ಅವರು ಜಗದಾದಿ ಚೈತನ್ಯ ತತ್ತ್ವವನ್ನು ಜಗನ್ಮಾತೆಯೆಂದು ಆರಾಧಿಸುವರು. ತಾಯಿ ಮಕ್ಕಳ ಸಂಬಂಧವು ಅತ್ಯಂತ ನಿಕಟವಾದ ಮಾನವೀಯ ಸಂಬಂಧವೂ ಅತ್ಯಂತ ನಿಕಟತಮವಾದ ದೈವಿಕ ಚಿರಸಂಬಂಧವೂ ಆಗಿರುತ್ತದೆ. ಅಹೇತುಕ ಪ್ರೇಮವನ್ನು ನೋಡಬೇಕಾದರೆ ಮಾತೆಯನ್ನು ನೋಡಿ. ಅಸ್ವಾರ್ಥತೆಯನ್ನು ನೋಡಬೇಕಾದರೆ ಜನನಿಯನ್ನು ನೋಡಿ. ತಾಯಿ ಭೂಮಿಯ ದೇವರು!

ಶ್ರೀಮತಿ ಭುವನೇಶ್ವರೀದೇವಿ ತನ್ನ ಮಗನ ಮಹಿಮೆಯನ್ನು ಆತನು ಹುಟ್ಟುವುದಕ್ಕೆ ಮುನ್ನವೇ ಅರಿತಿದ್ದಳು. ಆಕೆಗೆ ತೋರಿದ ಅತಿಮಾನುಷ ಅನುಭವಗಳೇ ಅದಕ್ಕೆ ಸಾಕ್ಷಿ. ಮಗುವಿಗೆ ಮಹಾಭಾರತ ರಾಮಾಯಣಗಳಲ್ಲಿ ಬರುವ ವೀರ ಪುಂಗವರ ಕಥೆಗಳನ್ನು ಹೇಳಿ ನರೇಂದ್ರನನ್ನು ಹುರಿದುಂಬಿಸುತ್ತಿದ್ದಳು. ಆತನನ್ನು ಅನಾವಶ್ಯಕವಾಗಿ ಬೆದರಿಸುತ್ತಿರಲಿಲ್ಲ. ಆತನ ಶ್ರದ್ಧೆಯನ್ನು ಹಾಳು ಮಾಡುವ ಯಾವ ಕಾರ್ಯವನ್ನೂ ಮಾಡುತ್ತಿರಲಿಲ್ಲ. ಒಂದು ದಿನ ನರೇಂದ್ರನು ಹನುಮಂತನು ಬಾಳೆಯ ತೋಟದಲ್ಲಿ ಹುಡುಕಿದರೆ ಸಿಕ್ಕಬಹುದು ಎಂದು ಹೇಳಿದ ದಾಸರ ಲಘು ವಾಕ್ಯಗಳನ್ನು ನಂಬಿ, ಹಾಗೆಯೆ ಮಾಡಿ, ರಾತ್ರಿ ಮನೆಗೆ ಬಂದು ಎಲ್ಲವನ್ನೂ ತಾಯಿಗೆ ತಿಳಿಸಲು, ಮಗನ ಶ್ರದ್ಧೆಯನ್ನು ಕಂಡು ಮೆಚ್ಚಿ ಭುವನೇಶ್ವರೀ ದೇವಿ ಅದನ್ನು ಖಂಡಿಸಲು ಇಚ್ಛಿಸದೆ “ಮಗೂ ಹನುಮಂತನು ಅಲ್ಲಿರುವುದೇನೋ ಸತ್ಯ! ಆದರೆ ಇಂದು ಬಹುಶಃ ಶ್ರೀರಾಮಚಂದ್ರನು ಹೇಳಿದ ಯಾವುದೋ ಒಂದು ಕಾರ್ಯವನ್ನು ಮಾಡಲು ಹೋಗಿರಬಹುದು. ಅದಕ್ಕೇ ಬರಲಿಲ್ಲ. ಇನ್ನೊಂದು ದಿನ ಸಿಕ್ಕುವನು” ಎಂದು ಹೇಳಿ ಸಂತವಿಟ್ಟಳು.[2] ಮಗನಿಗೆ ಸಮಯ ಸಿಕ್ಕಿದಾಗಲೆಲ್ಲ ಸರಸವಾದ ಕಥೆಗಳ ಮುಖಾಂತರ ಬುದ್ಧಿ ಹೇಳುತ್ತಿದ್ದಳು: ಸತ್ತರೂ ಸತ್ಯವನ್ನು ಬಿಡಬೇಡ; ಪರಿಶುದ್ಧನಾಗಿರು; ಗಂಭೀರವಾಗಿರು. ಇತರರ ಭಿನ್ನಾಭಿಪ್ರಾಯಗಳಿಗೆ ಗೌರವವನ್ನು ಕೊಡು. ಹೆರರ ಸ್ವಾತಂತ್ರ್ಯಕ್ಕೆ ಅಡ್ಡ ಬರಬೇಡ. ಕೋಮಲ ಹೃದಯಿಯಾಗಿರು. ಆದರೆ ಸಮಯ ಬಂದಲ್ಲಿ ಕಠೋರನಿಶ್ಚಲವಾಗಿರಲು ಹಿಂಜರಿಯಬೇಡ.”

ಈ ಬುದ್ಧಿವಾದಗಳ ಪ್ರಭಾವವನ್ನು ವಿವೇಕಾನಂದರ ಆಚರಣೆಯಲ್ಲಿ ನಾವು ನೋಡಬಹುದು. ನಾನಾ ಜನಾಂಗಗಳಿಗೆ ನಾನಾ ದೇಶಗಳಿಗೆ ಸೇರಿದ್ದ ತಮ್ಮ ಶಿಷ್ಯರೆಲ್ಲರಿಗೂ ಕೆಲಸಕ್ಕೆ ಬಾರದ ಒಂದು ಶುಷ್ಕ ನಿಯಮವನ್ನು ಆರೋಪಿಸದೆ ಅವರವರ ಪ್ರಕೃತಿಗೆ ಅನುಗುಣವಾಗಿ ಅವರವರು ನಡೆಯಬಹುದೆಂದು ಅನುಮತಿ ಕೊಟ್ಟರು. ಹೆರವರ ಸ್ವಾತಂತ್ರ್ಯಕ್ಕೆ ಅವರೆಂದೂ ಅಡ್ಡ ಬಂದುದಿಲ್ಲ. ಅವರ ಸ್ವಾತಂತ್ರ್ಯಪ್ರಿಯತೆಗೂ ಮಹಾ ಕರುಣೆಗೂ ಭುವನೇಶ್ವರೀಮಾತೆಯು ಕಾರಣಳು.

ವಿವೇಕಾನಂದರು ತಮ್ಮ ಮಾತೆಯನ್ನು ಅಕ್ಷರಶಃ ಪೂಜಿಸುತ್ತಿದ್ದರು. ತಾಯಿಯ ಬಡತನವನ್ನು ನೋಡಿಯೆ ಅವರು ತಮ್ಮ ಸಂನ್ಯಾಸ ಸ್ವೀಕಾರವನ್ನು ಮುಂದೆಮುಂದಕ್ಕೆ ತಳ್ಳಿದ್ದರು. ಪಾಶ್ಚಾತ್ಯ ದೇಶಗಳಿಂದ ಅವರು ಹಿಂದಿರುಗಿದ ಮೇಲೆಯೂ ಒಂದು ದಿನ ತಮ್ಮ ಮಾತೆ ರೋಗಸ್ಥಳಾದಂತೆ ಕನಸು ಬಿದ್ದಾಗ ಎಷ್ಟು ಉದ್ವಿಗ್ನರಾದರೆಂಬುದನ್ನು ಆಗ ಅವರ ಜೊತೆಯಲ್ಲಿದ್ದವರು ಬಲ್ಲರು. ತಂತಿಯ ಮೂಲಕ ತಾಯಿ ಸುಖವಾಗಿರುವುದನ್ನು ತಿಳಿದ ಮೇಲೆಯೇ ಅವರು ಶಾಂತರಾದರು.

ತಾಯಿಯಾದ ಭುವನೇಶ್ವರಿ ಸಿಂಹಿಣಿಯಾದುದರಿಂದಲೇ ಪುರುಷಸಿಂಹನನ್ನು ಪಡೆದಳು. ನಾರಿಯರಿಗೆ ಸಹಜವಾದ ಕೋಮಲತೆಯಿದ್ದರೂ ಆಕೆಯ ಹೃದಯದಲ್ಲಿ ಬೇಕಾದಷ್ಟು ದೃಢತೆಯಿತ್ತು. ಆಕೆಯ ಕಣ್ಣಮುಂದೆಯೆ ನರೇಂದ್ರನು ಹುಟ್ಟಿ ಬೆಳೆದು ಲೋಕವಿಖ್ಯಾತನಾಗಿ ಮಡಿದನು. ವಿವೇಕಾನಂದರು ದೇಹ ಪರಿತ್ಯಾಗ ಮಾಡಿದಮೇಲೆ ಒಂಬತ್ತು ವರ್ಷಗಳು ಬದುಕಿದ್ದಳು. ವಿಶ್ವ ವಿಖ್ಯಾತನಾದ ಪುತ್ರನ ರುದ್ರಚಿತೆಯ ಬಳಿಯಲ್ಲಿಯೇ ದಿಟ್ಟತಾಯಿ ನಿಂತಿದ್ದಳು. ಪೂತ ಭಾಗೀರಥಿಯ ತೀರದಲ್ಲಿ ತನ್ನ ಪುತ್ರನ ಚಿತಾ ಪಾರ್ಶ್ವದಲ್ಲಿಯೇ ಆ ತೇಜಸ್ವಿನೀ ರಮಣಿ ನಿಂತು, ತಾನೇ ಹಾಲೆರೆದು ಸಾಕಿ ಸಲಹಿದ ಮುದ್ದು ಮಗನ ಕೋಮಲಕಾಯವನ್ನು ದಹಿಸುತ್ತ ಮೇಲೆದ್ದ ರಕ್ತಾಗ್ನಿಜ್ವಾಲೆಗಳನ್ನು ನಿಶ್ಚಲಚಿತ್ತೆಯಾಗಿ ನೋಡುತ್ತ, ಎಲ್ಲರೂ ಹಾಡುತ್ತಿದ್ದ ನಿಧನ ಗೀತೆಯೊಡನೆ ತನ್ನ ವಾಣಿಯನ್ನೂ ಮಿಳಿತಮಾಡಿದುದನ್ನು ನೆನೆದರೆ ಯಾರಿಗಾದರೂ ರೋಮಾಂಚವಾಗದಿರದು! ಧನ್ಯೆ ಶ್ರೀಮತಿ ಭುವನೇಶ್ವರೀದೇವಿ!

ಕ್ರಿಸ್ತಾಬ್ದ ೧೯೧೧ನೆಯ ಜುಲೈ ೨೫ನೆಯ ತಾರೀಖಿನ ದಿನ ಪುರಿಗೆ ಯಾತ್ರೆ ಹೋಗಿದ್ದ ಸಮಯದಲ್ಲಿ ಜಗದ್ವಿಖ್ಯಾತ ಸ್ವಾಮಿ ವಿವೇಕಾನಂದರ ದಿವ್ಯ ಜನನಿಯಾದ ಶ್ರೀಮತಿ ಭುವನೇಶ್ವರೀ ಮಾತೆ ಶ್ರೀ ಜಗನ್ನಾಥನ ಸನ್ನಿಧಿಯಲ್ಲಿ ಶರೀರ ಪರಿತ್ಯಾಗ ಮಾಡಿದಳು. ಮಹಾಪುರುಷನೊಬ್ಬನನ್ನು ಜಗತ್ತಿಗೆ ದಾನ ಮಾಡಿದ ಆ ಪಾವನಮಾತೆಯ ಪವಿತ್ರನಾಮ ಸರ್ವದಾ ಸರ್ವತ್ರ ಸ್ಮರಣೀಯವಾಗಿರಲಿ!

* * *[1] ಸುಮಾರು ಇಪ್ಪತ್ತೇಳು ವರ್ಷ ವಯಸ್ಸಿನ ಶ್ರೀರಾಮಕೃಷ್ಣರು ದಕ್ಷಿಣೇಶ್ವರದಲ್ಲಿ ಆತ್ಮಸಾಕ್ಷಾತ್ಕಾರದ ಅಗ್ನಿತೀರ್ಥದಲ್ಲಿ ಮಗ್ನರಾಗಿದ್ದರು. ವಂಗಕವಿ ರವೀಂದ್ರನಾಥಠಾಕೂರರು ಎರಡು ವರ್ಷದ ಹಸುಳೆಯಾಗಿದ್ದರು. ಮಹಾತ್ಮಾ ಗಾಂಧಿಯವರ ಜನನಕ್ಕೆ ಇನ್ನೂ ಆರು ವರ್ಷಗಳ ಕಾಲಾಂತರವಿತ್ತು. ಸಿಪಾಯಿದಂಗೆ ನಡೆದು ಆರು ವರ್ಷವಾಗಿತ್ತು. ಈಸ್ಟ್ ಇಂಡಿಯಾ ಕಂಪನಿ ಕೈಯಿಂದ ಭರತಖಂಡವು ಇಂಗ್ಲೆಂಡ್ ರಾಣಿಯ ಕೈಸೇರಿ ಐದು ವರ್ಷವಾಗಿತ್ತು.

[2] ಪ್ರತಿಕೃತಿಯ ದೃಷ್ಟಿಯಿಂದ ಆ ಸಮಾಧಾನ ಅಸತ್ಯವಾಗಿ ತೋರಿದರೂ ಪ್ರತಿಮಾದೃಷ್ಟಿಯಿಂದ ಸತ್ಯವನ್ನೆ ಸೂಚಿಸುತ್ತದೆ.