ಭರತಖಂಡದ ಕುಬೇರಕಥೆಯನ್ನು ಬಹುಕಾಲದಿಂದಲೂ ಕೇಳಿ ಕೇಳಿ, ಅದರ ಅಲಕಾವತಿಯನ್ನು ಕೊಳ್ಳೆಹೊಡೆದು, ಹೊನ್ನು ರನ್ನಗಳ ಹೊಳೆಗಳನ್ನು ತಡೆಗಟ್ಟಿ ತಂತಮ್ಮ ದೇಶಗಳ ಮೇಲೆ ಹರಿಯಿಸಬೇಕೆಂಬ ಹೇರಾಸೆಯಿಂದ ಪಾಶ್ಚಾತ್ಯದೇಶಗಳು ಪರಸ್ಪರ ಸ್ಪರ್ಧೆ ಹೂಡಿದ ಆ ಸಮುದ್ರಸಾಹಸದ ಫಲರೂಪವಾಗಿ ಹೊಸ ಹೊಸ ಭೂಭಾಗಗಳೂ ವಿಪುಲಸಂಪತ್ತೂ ಅವರ ಕೈವಶವಾದುವು. ಸಾಹಸದಿಂದ ಸಂಪತ್ತು ಹೆಚ್ಚಿದರೆ ಸಂಪತ್ತಿನಿಂದ ಸಾಹಸ ಹೆಚ್ಚುತ್ತದೆ. ಅವುಗಳೆರಡೂ ಸೇರಿ ಸಂಸ್ಕೃತಿಯ ಕಲ್ಪವೃಕ್ಷಕ್ಕೆ ಬೆಳೆ ನೀರು ಹೊಯ್ಯುತ್ತವೆ. ತನ್ನ ಸುವರ್ಣ ಕಿರೀಟ ಕಾಂತಿಯಿಂದ ಪಾಶ್ಚಾತ್ಯ ಸಾಹಸಿಗಳನ್ನು ಸಂಮೋಹಿಸಿದ ಭರತಮಾತೆ, ಅವರ ತಕ್ಕಡಿ ಮತ್ತು ಕೋವಿಗಳಿಗೆ ಸೋತಂತೆ, ಆ ಕೋವಿ ತಕ್ಕಡಿಗಳನ್ನು ಅನಿವಾರ್ಯವಾಗಿ ಹಿಂಬಾಲಿಸಿದ ಅವರ ಸಂಸ್ಕೃತಿಗೂ ಮನಸೋಲಬೇಕಾಯಿತು.

ಆ ಕಥೆ ಕರ್ಣಾರ್ಜುನರ ಯುದ್ಧದಂತೆ ಭೀಷಣವಾಗಿದ್ದರೂ ಅದರ ವರ್ಣನೆಯಂತೆ ಹೃದಯಂಗಮವಾಗಿದೆ.

ಕ್ರಿಸ್ತಾಬ್ದ ೧೬೦೦ರಲ್ಲಿ ಹುಟ್ಟಿದ ಈಸ್ಟ್ ಇಂಡಿಯಾ ಕಂಪನಿ ಎಂಬ ಇಂಗ್ಲೀಷರ ವಾಣಿಜ್ಯ ಸಂಘವು ೧೬೧೩ರಲ್ಲಿ ಚಕ್ರವರ್ತಿ ಜಹಾಂಗೀರನಿಂದ ಅಪ್ಪಣೆ ಪಡೆದು ಸೂರತ್ತಿನಲ್ಲಿ ಮೊತ್ತಮೊದಲು ತನ್ನ ವ್ಯಾಪಾರಕೋಠಿಯನ್ನು ಸಂಸ್ಥಾಪಿಸಿತು.

ಮೂರು ವರ್ಷಗಳ ತರುವಾಯ ಮಚಲೀಪಟ್ಟಣದಲ್ಲಿ, ಹದಿನೇಳು ವರ್ಷಗಳ ತರುವಾಯ ಮಹಾನದಿಯ ನದೀಮುಖದ ಹರಿಹರಪುರದಲ್ಲಿ, ಏಳು ವರ್ಷಗಳ ತರುವಾಯ ಮದ್ರಾಸಿನಲ್ಲಿ, ಹತ್ತು ವರ್ಷಗಳ ತರುವಾಯ ಹೂಗ್ಲಿಯಲ್ಲಿ, ಹತ್ತೊಂಬತ್ತು ವರ್ಷಗಳ ತರುವಾಯ ಬೊಂಬಾಯಿಯಲ್ಲಿ, ಹದಿನೇಳು ವರ್ಷಗಳ ತರುವಾಯ (೧೬೮೬) ಕಲ್ಕತ್ತೆಯಲ್ಲಿ – ಮಹಾತಂತ್ರಿಗಳಾದ ಆಂಗ್ಲೇಯ ವಣಿಗ್ವರರು ತಮ್ಮ ವಾಣಿಜ್ಯದುರ್ಗಗಳನ್ನು ಬಲಿದರು. ಅಂತು ಹದಿನೇಳನೆಯ ಶತಮಾನ ಕೊನೆಗಾಣುವುದರೊಳಗಾಗಿ ಇಂಗ್ಲೀಷರು ಇಂಡಿಯಾ ದೇಶದ ತೀರ ಪ್ರದೇಶದ ಬಹುಮುಖ್ಯ ಸ್ಥಾನಗಳನ್ನು ವಶಪಡಿಸಿಕೊಂಡು ವ್ಯಾಪಾರಕ್ಕೂ ಮತ್ತು ಇತರ ಕಾರ್ಯಗಳಿಗೂ ಸುಸೂತ್ರವಾಗಿ ಕೈಹಾಕಿದರು. ವ್ಯಾಪಾರನಿಮಿತ್ತದಿಂದ ನಮ್ಮ ನೆಲದಲ್ಲಿ ಕಾಲಿಟ್ಟ ಇಂಗ್ಲೀಷರು, ಡಚ್ಚರು ಮತ್ತು ಫ್ರೆಂಚರನ್ನು ಅನುಸರಿಸಿ, ರಾಜ್ಯ ಕಟ್ಟುವುದಕ್ಕೂ ಮನಸ್ಸು ಮಾಡಿದರು. ಆಗಣ ಭಾರತವರ್ಷದ ರಾಜಕೀಯ ರಂಗದಲ್ಲಿದ್ದ ಅವ್ಯವಸ್ಥೆ ಮತ್ತು ದುರವಸ್ಥೆಗಳೂ ಅವರ ಉದ್ಯಮಾಗ್ನಿಗೆ ತುಪ್ಪವನ್ನು ಹೊಯ್ದವು.

ಕಂಪನಿಯವರಿಗೆ ರಾಜ್ಯ ಕಟ್ಟಲು ಇಚ್ಛೆಯಿರಲಿಲ್ಲ. ವ್ಯಾಪಾರ ಮಾತ್ರ ಅವರ ಆಸೆಯಾಗಿದ್ದಿತು. ಏನೋ ಸನ್ನಿವೇಶದ ಅಂಕುಶದ ತಿವಿತಕ್ಕೆ ಸಿಕ್ಕಿ ಮನಸ್ಸಿಲ್ಲದ ಮನಸ್ಸಿನಿಂದ ನಮ್ಮ ಉದ್ಧಾರಕ್ಕಾಗಿ ಅವರು ರಾಜ್ಯಸ್ಥಾಪನೆ ಮಾಡಬೇಕಾಯಿತು – ಎಂದು ಮೊದಲಾಗಿ ಯಾರೂ ಭಾವಿಸದಿರಲಿ. ಸನ್ನಿವೇಶವೇನೋ ಸ್ವಲ್ಪಮಟ್ಟಿಗೆ ಅವರ ಉದ್ಯಮಕ್ಕೆ ಪ್ರೋತ್ಸಾಹ ಕೊಟ್ಟಿತೆಂಬುದು ನಿಜ. ಆದರೆ ಅದು ಮುಖ್ಯವಲ್ಲ. ಅವರು ೧೬೮೮ರಲ್ಲಿ ಮಾಡಿಕೊಂಡ ನಿರ್ಣಯವನ್ನು ನೋಡಿದರೆ ಗುಟ್ಟು ಬಯಲಿಗೆ ಬೀಳುತ್ತದೆ: “ಎಂತಹ ನಾಗರಿಕ ಮತ್ತು ಸೈನಿಕ ಸಂಸ್ಥೆಗಳನ್ನು ನಿರ್ಮಿಸಬೇಕೆಂದರೆ, ಇಂಡಿಯಾ ದೇಶದಲ್ಲಿ ಆಂಗ್ಲೇಯ ಚಕ್ರಾಧಿಪತ್ಯವೊಂದು ಶಾಶ್ವತವಾಗಿ ನಿಲ್ಲುವಂತಿರಬೇಕು” ಎಂದು ಹೇಳುತ್ತದೆ ಆ ನಿರ್ಣಯ.

ಅನೇಕ ನೆವಗಳನ್ನು ಕಾರಣ ಮಾಡಿಕೊಂಡು, ಇಂಗ್ಲೀಷರು, ಪೋರ್ಚುಗೀಸರ, ಡಚ್ಚರ ಮತ್ತು ಫ್ರೆಂಚರ ಪ್ರಾಬಲ್ಯವನ್ನು ಮುರಿದು, ಶಿಥಿಲವಾಗುತ್ತಿದ್ದ ಭಾರತೀಯ ರಾಜಕೀಯ ಬಲಗಳನ್ನು ಚತುರೋಪಾಯಗಳಿಂದ ನೆಲಕ್ಕೆ ತಳ್ಳಿ, ನೇರವಾಗಿ ವಕ್ರವಾಗಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸತ್ಯವಾಗಿ ಅಸತ್ಯವಾಗಿ ಧಾರ್ಮಿಕವಾಗಿ ಅಧಾರ್ಮಿಕವಾಗಿ, ಬೆಳ್ಳಗೊಮ್ಮೆ ಕೆಂಪಗೊಮ್ಮೆ, ಹಗಲೊಮ್ಮೆ ಇರುಳೊಮ್ಮೆ ನಾನಾ ತಂತ್ರ ಕುತಂತ್ರಗಳಿಂದಲೂ ನಿರಂತರ ರಾಜಕೀಯ ವಿದ್ಯೆ ಮತ್ತು ಸಮರ ನೀತಿಯ ಪ್ರಭಾವದಿಂದಲೂ ಪ್ರಯಾಸದಿಂದಲೂ ನಿರುಪಮ ಸಾಹಸದಿಂದಲೂ ಶ್ರೇಷ್ಠತರವಾದ ಹತ್ತೊಂಬತ್ತನೆಯ ಶತಮಾನವು ಅರ್ಧಮುಕ್ಕಾಲು ಮುಗಿಯುವುದರೊಳಗಾಗಿ ಭರತಖಂಡದಲ್ಲಿ ಬ್ರಿಟಿಷ್ ಚಕ್ರಾಧಿಪತ್ಯದ ವಿಜಯ ವೈಜಯಂತಿಯನ್ನು ನೆಟ್ಟು ಮುಗಿಲು ಮುಟ್ಟುವಂತೆ ಎತ್ತಿ ಹಿಡಿದರು.

ಇಂಗ್ಲೀಷರು ಸಿಪಾಯಿ ದಂಗೆ ಎಂದೂ, ಭಾರತೀಯರು ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದೂ ಕರೆಯುವ ೧೮೫೭ನೆಯ ರಾಷ್ಟ್ರೀಯ ಕ್ರಾಂತಿ ನಿಷ್ಕರುಣೆಯಿಂದ ಪದದಲಿತವಾದಮೇಲೆ ಅದುವರೆಗೆ ಕಂಪೆನಿಯ ವಶದಲ್ಲಿದ್ದ ಭರತಖಂಡವು ೧೮೫೮ರಲ್ಲಿ ಇಂಗ್ಲೆಂಡ್ ರಾಣಿಯ ಸ್ವಂತ ಆಡಳಿತಕ್ಕೆ ಹೋಯಿತು. ಅಂದಿನಿಂದ ಚಕ್ರವರ್ತಿನಿ ಎಂಬ ಬಿರುದುವೊತ್ತ ಆ ಮಹಾರಾಜ್ಞಿ ಪಶುಬಲಿಯಾದ ಮೇಲೆ ಯಜ್ಞಾಂತ್ಯದಲ್ಲಿ ಶಾಂತಿಪಾಠ ಹೇಳುವಂತೆ ಕರುಣೆಯ, ಭರವಸೆಯ, ರಕ್ಷಣೆಯ, ಔದಾರ್ಯದ, ಆಶೀರ್ವಾದದ, ಶಾಂತಿಯ ಉದಾತ್ತ ನಿರೂಪಣೆಯನ್ನು ಹೊರಡಿಸಿ ಇಂಡಿಯಾ ದೇಶವನ್ನು ಭಾರತೀಯರ ಒಳ್ಳೆಯದಕ್ಕಾಗಿ ಆಳತೊಡಗಿದಳು.

ಆ ಮಹಾ ನಿರೂಪದ ಒಕ್ಕಣೆಯ ಸಾರವಿದು:‌

“ಇರುವ ರಾಜ್ಯವನ್ನು ಇನ್ನೂ ವಿಸ್ತರಿಸಬೇಕೆಂಬಾಸೆ ನಮಗಿಲ್ಲ…. ದೇಶೀಯ ರಾಜರುಗಳ ಹಕ್ಕುಬಾಧ್ಯತೆಗಳನ್ನೂ ಗೌರವವನ್ನೂ ನಮ್ಮ ಹಕ್ಕು ಬಾಧ್ಯತೆ ಗೌರವಗಳಿಗೆ ಸರಿಸಮವೆಂದು ಭಾವಿಸಿ ಗೌರವಿಸುತ್ತೇವೆ…. ಮತಭೇದವೆಣಿಸದೆ ಸರ್ವರಿಗೂ ಸಮಾನತೆಯಿರಬೇಕೆಂದೂ ಕಾನೂನಿನ ದೃಷ್ಟಿಯಲ್ಲಿ ಮತದ ನೆವದಿಂದಾಗಲಿ ಆಚಾರದ ನೆವದಿಂದಾಗಲಿ ಯಾರೊಬ್ಬರಿಗೂ ಪಕ್ಷಪಾತವನ್ನಾಗಲಿ ಅಥವಾ ಪಕ್ಷಘಾತವನ್ನಾಗಲಿ ಮಾಡಕೂಡದೆಂದೂ ನಮ್ಮ ರಾಜಚಿತ್ತವಿದೆ ಯೆಂದೂ ಸಾರುತ್ತೇವೆ… ನಮ್ಮ ಪ್ರಜೆಗಳಿಗೆ ಅವರು ಯಾವ ಜನಾಂಗದವರಾಗಲಿ ಯಾವ ಧರ್ಮದವರಾಗಲಿ ವಿದ್ಯಾಸಾಮರ್ಥ್ಯ ಕರ್ತವ್ಯ ಬುದ್ಧಿಗಳಿದ್ದರೆ, ಭೇದವಿಲ್ಲದೆ ಸ್ಥಾನಮಾನ ಗೌರವಾಧಿಕಾರಗಳು ದೊರೆಯುತ್ತವೆಂದೂ ಎಲ್ಲರೂ ತಿಳಿಯುವಂತೆ ಸಾರುತ್ತೇವೆ.”

ಈ ಕೊಟ್ಟ ಮಾತುಗಳಲ್ಲಿ ಕೆಲವು ನೆರವೇರಿವೆ. ಮತ್ತೆ ಕೆಲವು ಇನ್ನೂ ಸಾರ್ಥಕವಾಗುವುದರಲ್ಲಿವೆ.

ಅಂತೂ ಜಗನ್ನಿಯಂತೃ ಶಕ್ತಿ ಕಡಲರಾಣಿಯ ಮತ್ತು ಭಾರತಾಂಬೆಯ ಜೀವನ ಸೂತ್ರಗಳನ್ನು ಹೆಣೆದುಬಿಟ್ಟಿತು. ಒಂದು ದೃಷ್ಟಿಯಿಂದ ಅದನ್ನು ನಮ್ಮ ದೌರ್ಬಲ್ಯದ ಸೂಚನೆಯೆಂದು ಭಾವಿಸಿ ಮರುಗಿದರೂ, ಮತ್ತೊಂದು ದೃಷ್ಟಿಯಿಂದ ಅದನ್ನು ನಮ್ಮ ಪುಣ್ಯಕ್ಕೂ ಮತ್ತು ಪುರೋಭಾಗ್ಯಕ್ಕೂ ಕಾರಣವಾದ ಮಂಗಲ ಘಟನೆ ಎಂದು ತಿಳಿದು ಹಿಗ್ಗಬೇಕಾಗುತ್ತದೆ. ಉಷ್ಣವಲಯದ ಬಿಸಿಲಿಗೆ ಬತ್ತಿ, ಹರಿಯದೆ ನಿಂತುಹೋಗಿ, ಪಾಚಿ ಹಬ್ಬಿ, ಹುಳುವಾಗಿ, ಕೊಳಕಾದ ಹೊಲೆಗೆರೆಯಂತಿದ್ದ ಭಾರತದ ಬಾಳಿಗೆ ನವೀನವಾದ ಶೈತ್ಯವನ್ನೂ ಚೈತನ್ಯವನ್ನೂ ಕಾರ್ಯೋತ್ಸಾಹ ನೈಪುಣ್ಯಗಳನ್ನೂ ಮೂಢಮತ ವಿಧ್ವಂಸಕವಾದ ವೈಜ್ಞಾನಿಕ ಮತಿಯನ್ನೂ ಒಳಗೊಂಡ ಪಾಶ್ಚಾತ್ಯ ಜೀವನ ಪರ್ವತದ ನಿರ್ಝರಿಣಿಯ ಹೊಸ ನೀರು ಧುಮುಕಿದಂತಾಯಿತು! ಈ ಪ್ರವಾಹದ ರಭಸದಲ್ಲಿ ಪಾಚಿಯೊಡನೆ ಹಲ ಕೆಲವು ತಾವರೆ ಹೂವುಗಳೂ ಕೊಚ್ಚಿಹೋಗುವುದನ್ನು ನೋಡುತ್ತೇವೆ. ಆದರೆ ಅದು ಅನಿವಾರ್ಯ. ಅಲ್ಲದೆ, ನಿರ್ಮಲವಾದ ಜೀವನದಿಂದ ಮತ್ತೆ ಮೊದಲಿಗಿಂತಲೂ ಮನೋಹರವಾದ ತಾವರೆ ಹೂವುಗಳು ಮೂಡುವುದನ್ನೂ ಕಾಣುತ್ತೇವೆ.

ಅದನ್ನೊಂದು ಪುಣ್ಯ ನವಜೀವನ ಗರ್ಭಿತವಾದ ಸುಮುಹೂರ್ತವೆಂದು ಒಪ್ಪಿಕೊಳ್ಳಲೇಬೇಕಾಗುತ್ತದೆ: ೧೮೩೫ನೆಯ ಮಾರ್ಚಿ ೭ನೆಯ ತೇದಿ. ಶ್ರೀ ರಾಮಕೃಷ್ಣ ಪರಮಹಂಸರು ಹುಟ್ಟುವುದಕ್ಕೆ ಇನ್ನೂ ಸ್ವಲ್ಪ ಹೆಚ್ಚು ಕಡಿಮೆ ಒಂದು ಸಂವತ್ಸರ ವಿತ್ತು. ಗೌವರ್ನರ್ ಜನರಲ್ ಲಾರ್ಡ್ ವಿಲಿಯಂ ಬೆಂಟಿಂಕನ ಆಳ್ವಿಕೆಯಲ್ಲಿ ಲಾರ್ಡ್ ಮೆಕಾಲೆಯ ಸಲಹೆಯಂತೆ ಇಂಗ್ಲಿಷು ಭಾಷೆ ಸಮಸ್ತ ಭರತಖಂಡದ ರಾಜಭಾಷೆಯಾಗಬೇಕೆಂದು ನಿರ್ಣಯವಾಯಿತು. ಮೆಕಾಲೆ ವಿಸ್ತಾರದಲ್ಲಿಯೂ ವಿಜೃಂಭಣೆಯಲ್ಲಿಯೂ ವಿಶೇಷಾಟೋಪ ಗರ್ಜನೆಗಳಲ್ಲಿಯೂ ಸಮುದ್ರವನ್ನು ಹೋಲುತ್ತಿದ್ದರೂ ಆತನಲ್ಲಿ ಅದರ ಗಾಂಭೀರ್ಯವಾಗಲಿ ಆಳವಾಗಲಿ ಇರಲಿಲ್ಲ. ಸುಸಂಸ್ಥಿತವಾದ ರಾಜಕೀಯರಂಗದಲ್ಲಿ ಅಂತಹ ಎರಡನೆಯ ದರ್ಜೆಯವರೇ ಬಹುಬೇಗನೆ ಮೇಲಕ್ಕೇರುತ್ತಾರೆ. ಅವರ ಮಾತೂ ನಡೆಯುತ್ತದೆ. ಕೈಯೆತ್ತುವುದರಿಂದಲೂ ಕೈಚಪ್ಪಾಳೆಯಿಂದಲೂ ಓಟುಗಳಿಂದಲೂ ಶ್ರೇಷ್ಠತೆಯನ್ನು ಗೊತ್ತು ಮಾಡುವ ಈ ಯುಗದಲ್ಲಿ ವೀಣೆಗಿಂತಲೂ ಡಮರುಗಳಿಗೇ ಶೀಘ್ರವಾಗಿ ಪಟ್ಟಾಭಿಷೇಕವಾಗುವುದರಲ್ಲಿ ಆಶ್ಚರ್ಯವೇನಿಲ್ಲ.

ಮೆಕಾಲೆ ತನ್ನ ಪ್ರಸಿದ್ಧವಾದ ವರದಿಯಲ್ಲಿ “ಐರೋಪ್ಯ ಸಾಹಿತ್ಯ ಮತ್ತು ವಿಜ್ಞಾನಗಳನ್ನು ದೇಶೀಯ ಜನರಲ್ಲಿ ಪ್ರಚಾರ ಮಾಡುವುದು ಬ್ರಿಟಿಷ್ ಸರ್ಕಾರದ ಮಹೋದ್ದೇಶವಾಗಬೇಕು. ಮತ್ತು ವಿದ್ಯಾಭ್ಯಾಸಕ್ಕಾಗಿ ವ್ಯಯಮಾಡುವ ಹಣವನ್ನೆಲ್ಲ ಇಂಗ್ಲಿಷ್ ವಿದ್ಯಾಭ್ಯಾಸಕ್ಕೆ ಮಾತ್ರ ವಿನಿಯೋಗಿಸಿದರೆ ಉತ್ತಮೋತ್ತಮ ಫಲವಾದೀತು.” “ಉತ್ತಮ ಐರೋಪ್ಯ ಸಾಹಿತ್ಯದ ಒಂದು ಪುಟ್ಟ ಪುಸ್ತಕ ಭಂಡಾರ ಇಂಡಿಯಾ ಮತ್ತು ಅರೇಬಿಯಾ ದೇಶಗಳ ಸರ್ವ ಸಾಹಿತ್ಯ ಸಮೂಹಕ್ಕಿಂತಲೂ ಘನತರವಾದುದು.” “ಇಂಗ್ಲಿಷ್ ಭಾಷೆಯನ್ನೂ ಪಾಶ್ಚಾತ್ಯ ಸಂಸ್ಕೃತಿಯನ್ನೂ ಯಾರು ಅರಿಯುತ್ತಾರೊ ಅವರು ಸರ್ವದೇಶದ ಸರ್ವಕಾಲದ ಸಮಸ್ತ ಶ್ರೇಷ್ಠ ಜನಾಂಗಗಳ ಅತ್ಯಂತ ಶ್ರೇಷ್ಠತಮ ಮಾನಸಿಕ ಸಂಪತ್ತಿಗೆ ಹಕ್ಕುದಾರರಾಗುತ್ತಾರೆ” ಎಂದು ಮೊದಲಾಗಿ ಅಲಂಕಾರೋಜ್ವಲವಾಗಿ ಕೂಗಾಡಿಬಿಟ್ಟಿದ್ದಾನೆ.

ಮೇಲಿನ ಉದ್ಗಾರದ ಕೆಲವಂಶದಲ್ಲಿ ಮೆಕಾಲೆಯ ವಿದ್ವತ್ತು ದೂರದೃಷ್ಟಿಗಳು ವ್ಯಕ್ತವಾಗುವಂತೆ ಉಳಿದಂಶದಲ್ಲಿ ಭ್ರಾಂತಿ, ಮೂರ್ಖತೆ, ಸ್ವದೇಶ ಸ್ವಭಾಷೆ ಸ್ವಸಂಸ್ಕೃತಿಯ ಮೋಹಾಂಧತೆಯಿಂದ ಹುಟ್ಟಿದ ಕುಬ್ಜದೃಷ್ಟಿಗಳು ರಾರಾಜಿಸುತ್ತವೆ. ಇಂಡಿಯಾ ಅರೇಬಿಯಾ ಸಾಹಿತ್ಯಗಳ ವಿಚಾರದಲ್ಲಿ ಅವನು ಸಂಪೂರ್ಣವಾಗಿ ಅಲ್ಲದಿದ್ದರೂ ಬಹುಮಟ್ಟಿಗೆ ಅಜ್ಞಾನಿ. ಅಜ್ಞಾನದ ಮಾತುಗಳನ್ನು ನಾವು ಲೆಕ್ಕಿಸದಿರಬಹುದು. ಆದರೆ ಇಂಗ್ಲಿಷ್ ಭಾಷಾ ಪರಿಚಯದ ವಿಚಾರದಲ್ಲಿ ಅವನ ಮಾತುಗಳನ್ನು ನಾವೀಗಲೂ ಒಪ್ಪಿಕೊಳ್ಳಬೇಕಾಗುತ್ತದೆ.

ಹೀಗೆ ಭಾರತವರ್ಷವೆಲ್ಲವೂ ಬ್ರಿಟಿಷ್ ರಾಜ್ಯಭಾರ ಸೂತ್ರದಿಂದ ಒಂದುಗೂಡಿದಂತೆ ಇಂಗ್ಲಿಷ್ ಭಾಷಾಸೂತ್ರದಿಂದಲೂ ಒಂದಾಯಿತು. ನಮ್ಮ ದೇಶಕ್ಕೆ ಪ್ರಾಯಶಃ ಹಿಂದೆ ಎಂದೂ ಇಂತಹ ಏಕರಾಜ್ಯ ಮತ್ತು ಏಕಭಾಷೆಗಳ ಐಕಮತ್ಯ ದೊರೆತಿರಲಿಲ್ಲ. ಆ ಒಂದು ವಿಚಾರದಲ್ಲಿ ನಾವು ಪೆಚ್ಚು ತಿಂದೆವೆಂದು ಬ್ರಿಟಿಷ್ ರಾಜ್ಯತಂತ್ರಜ್ಞರು ಹಿಂದೆಯೂ ಹೇಳಿಕೊಂಡಿದ್ದಾರೆ; ಇಂದೂ ಹೇಳಿಕೊಳ್ಳುತ್ತ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಈ ದೃಷ್ಟಿಯಿಂದ ಲಾರ್ಡ್ ಮೆಕಾಲೆಗೆ ಭರತಖಂಡವು ಚಿರಋಣಿ!

ಪಾಶ್ಚಾತ್ಯ ಸಂಸ್ಕೃತಿಯ ಮೋಹಿನಿ ಯಾವ ದಿನ ಭಾರತೀಯರ ನಯನ ಸಮ್ಮುಖದಲ್ಲಿ ಸುರಂಜಿತ ಸುರಚಾಪದಂತೆ ವಿವಿಧ ವೈಚಿತ್ರ್ಯಮಯ ದೃಶ್ಯಗಳಿಂದ ನಲಿದಾಡತೊಡಗಿದಳೋ ಆ ದಿನವೇ ಭರತಖಂಡದ ಇತಿಹಾಸದಲ್ಲಿ ಒಂದು ನವೀನ ಅಧ್ಯಾಯ ಆರಂಭವಾಯಿತು. ಪ್ರಾಚ್ಯ ಪಾಶ್ಚಾತ್ಯ ಆದರ್ಶಗಳ ಪರಸ್ಪರ ಸಂಘರ್ಷಣೆ ಮೊತ್ತಮೊದಲು ಆರಂಭವಾದುದು ವಂಗದೇಶದಲ್ಲಿ. ಅದರಲ್ಲಿಯೂ ಭಾರತವರ್ಷದ ನವರಾಜಧಾನಿಯಾಗಿದ್ದ ಕಲ್ಕತ್ತಾ ನಗರದಲ್ಲಿ. ಈ ಎರಡು ಸಂಸ್ಕೃತಿಗಳ ಪರಸ್ಪರ ಕ್ರಿಯೆ ಪ್ರತಿಕ್ರಿಯೆಗಳು ವಂಗದೇಶದಲ್ಲಿ ಪ್ರಬಲಾಕಾರವನ್ನು ಧಾರಣೆಮಾಡಿದುವು. ನಿಶ್ಚಲವಾಗಿದ್ದ ಹಿಂದೂ ಸಮಾಜವು ಸಮಾಜ ಸಂಸ್ಕಾರಕರ ಪ್ರಹಾರಗಳಿಂದ ಅಲ್ಲೋಲಕಲ್ಲೋಲವಾಯಿತು.

ಭಾರತವರ್ಷದಲ್ಲಿ ಆಂಗ್ಲೇಯ ಸಾಮ್ರಾಜ್ಯವು ಸಂಸ್ಥಾಪಿತವಾಗುತ್ತಿದ್ದಾಗಲೆ ಕ್ರೈಸ್ತಧರ್ಮ ಪ್ರಚಾರಕ್ಕಾಗಿ ಕ್ರೈಸ್ತಪಾದ್ರಿಗಳು ಹಿಂಡು ಹಿಂಡಾಗಿ ಇಂಗ್ಲೆಂಡಿನಿಂದ ಇಂಡಿಯಾ ದೇಶಕ್ಕೆ ನುಗ್ಗತೊಡಗಿದರು. ಬಂದವರು ಮೊದಮೊದಲು ವಿದ್ಯಾ ಪ್ರಚಾರಕ್ಕೆ ಕೈಹಾಕಿದರು. ಕ್ರಮೇಣ ವಿದ್ಯೆಯ ಜೊತೆಗೆ ಮತಬೋಧನೆ ಮಾಡಲಾರಂಭಿಸಿದರು. ಅಲ್ಲಲ್ಲಿ ವಿದ್ಯಾಲಯಗಳನ್ನು ನಿರ್ಮಿಸಿದರು. ಓದು ಕಲಿಯಲು ಶಾಲೆಗೆ ಬಂದ ಮಕ್ಕಳ ಎಳೆಯೆದೆಗಳ ಮೇಲೆ ಕ್ರೈಸ್ತಮತದ ಮುದ್ರೆಯನ್ನು ಮೆಲ್ಲಮೆಲ್ಲನೆ ಒತ್ತತೊಡಗಿದರು. ತರುವಾಯ ಭಾರತಮಾತೆಯ ತರುಣ ಪುತ್ರರ ಹೃದಯಗಳಲ್ಲಿ ಸ್ವಧರ್ಮ ವಿದ್ವೇಷದ ವಿಷಬೀಜಗಳನ್ನು ಬಿತ್ತುವ ಸಾಹಸಕ್ಕೆ ಕೈಯಿಟ್ಟರು. ಪ್ರಾಚೀನ ಹಿಂದೂ ಸಮಾಜವು ಸನಾತನ ಕಾಲದಿಂದಲೂ ಯಾವ ಯಾವ ಆಚಾರ ವ್ಯವಹಾರ ರೀತಿ ನೀತಿಗಳನ್ನು ಪವಿತ್ರ ಎಂದು ಪರಿಗಣಿಸುತ್ತಿದ್ದಿತೋ ಅವುಗಳೆಲ್ಲವೂ ಭಯಾವಹವಾದ ಪೈಶಾಚಿಕತಾಪೂರ್ಣವಾದುವು ಎಂದು ಸಾರಿದರು. ಹಿಂದೂ ಮತವನ್ನು ಅನುಸರಿಸಿದರೆ ಇಹಲೋಕದ ಸುಖದಿಂದಲೂ ವಂಚಿತರಾಗಿ ಪರಲೋಕದಲ್ಲಿ ಅನಂತ ನರಕಭಾಜನರಾಗುವರು ಎಂದು ಬೋಧಿಸಿದರು. ಹಿಂದೂಧರ್ಮವನ್ನು ನಿಂದಿಸುವುದಕ್ಕೆ ಇದ್ದ ಹಾದಿಗಳಲ್ಲಿ ಒಂದನ್ನಾದರೂ ಬಿಡಲಿಲ್ಲ. ಘನೀಕೃತವಾದ ದುರ್ನೀತಿಯೆ ಹಿಂದೂಧರ್ಮ, ಮೈಗೊಂಡ ದುರಾಚಾರವೆ ಹಿಂದೂಧರ್ಮ, ಪಾಪದ ಮುದ್ದೆಯೆ ಹಿಂದೂಧರ್ಮ ಎಂದು ಬಾಯಿಗೆ ಬಂದಂತೆಲ್ಲ ಶಪಿಸತೊಡಗಿದರು.

ಪ್ರಾಚೀನ ಸಮಾಜವು ಮಾತ್ರ ನಿಶ್ಚಲವಾಗಿತ್ತು! ಏನೊಂದು ಮಾತನ್ನೂ ಅಡಲಿಲ್ಲ. ಬಾಯಲ್ಲಿಯೇ ಶಪಿಸುತ್ತ, ಒಳಗೊಳಗೆ ಗೊಣಗುಡುತ್ತ, ಸಾಮಾನ್ಯಜನರು ಅಂತೂ ಇಂತೂ ಮುಂಡದ ಮೇಲೆ ರುಂಡಗಳನ್ನು ಇಟ್ಟುಕೊಂಡಿದ್ದರು. ಶ್ರೀಮಂತರು ಅಶ್ಲೀಲವಾದ ಅಮೋದಪ್ರಮೋದಗಳಲ್ಲಿ ತೊಡಗಿದ್ದರು. ಬ್ರಾಹ್ಮಣ ಪಂಡಿತ ವರ್ಗದವರು ಶ್ರೀಮಂತೋಪಾಸನೆ ದೇಶಾಚಾರ ಲೋಕಾಚಾರ ಸ್ತ್ರೀಆಚಾರ ಇವೇ ಮೊದಲಾದವುಗಳನ್ನು ಪರಿಪಾಲಿಸುತ್ತಾ ನಿಶ್ಚಿಂತಾಲಸ್ಯದಿಂದ ಜೀವನಯಾಪನ ಪರಾಯಣರಾಗಿದ್ದರು. ಈ ಸಮಯದಲ್ಲಿ ಮೇಧಾವಿಯಾದ ಮಹಾಪುರುಷನೊಬ್ಬನು ಆವಿರ್ಭೂತವಾದನು. ಬಂಗಾಳಿಗಳು ಮಂಜು ಮುಸುಕಿದ ತಮ್ಮ ಕಣ್ಗಳನ್ನು ನಸುದೆರದು ನೋಡಿದರು. ರಿಕ್ತಗಗನದಲ್ಲಿ ರಕ್ತಾಲೋಕಮಂಡಿತವಾದ ಒಂದು ಮಹಾ ಜ್ವಾಲಾನಕ್ಷತ್ರ: ಮಹಾಮನೀಷಿಯಾದ ರಾಜಾ ರಾಮಮೋಹನರಾಯ!

ಕ್ರಿ.ಶ. ೧೮೧೪ರಲ್ಲಿ ರಾಮಮೋಹನರಾಯರು ರಾಮಪುರದಿಂದ ಕಲ್ಕತ್ತಾಕ್ಕೆ ಬಂದು ಆತ್ಮೀಯ ಸಭಾ ಎಂಬ ಸಭೆಯನ್ನು ಸ್ಥಾಪಿಸಿ ವೇದಾಂತ ವಿಚಾರ ಮಾಡಲು ತೊಡಗಿದನು. ವಂಗದೇಶದಲ್ಲಿ ಸಾರ್ವಜನಿಕವಾಗಿ ಮತ್ತು ಬಹಿರಂಗವಾಗಿ  ವೇದಾಂತಾಲೋಚನೆಗೆ ಪ್ರಾರಂಭವಾದುದು ಅದೇ ಮೊತ್ತಮೊದಲು. ರಾಮಮೋಹನರಾಯರು ದೇಶದ ದುರವಸ್ಥೆಯನ್ನು ತಿಳಿದು ಸ್ವಭಾವವನ್ನು ಪರಿಶೀಲಿಸಿ ಅನುಕೂಲ ಪ್ರತಿಕೂಲಗಳನ್ನು ಸಮಾಲೋಚಿಸಿ ಕರ್ತವ್ಯಕಾರ್ಯಕ್ಕೆ ಕೈಹಾಕಿದನು. ಜೊತೆಗೆ ಆಂಗ್ಲೇಯ ವಿದ್ಯಾಪ್ರಚಾರ ಮಾಡುವುದಕ್ಕೂ ಕಂಕಣಬದ್ಧನಾಗಿ ನಿಂತನು. ಒಂದು ಕಡೆ ಸಮಾಜದ ಧರ್ಮಸಂಸ್ಕಾರಕ್ಕಾಗಿ ವೇದಾಂತ ಪ್ರಚಾರ ಮಾಡುತ್ತ ಮೂರ್ತಿಪೂಜೆ ನಿಷ್ಪ್ರಯೋಜನವೆಂದು ಅದನ್ನು ತಿರಸ್ಕರಿಸಿದನು. ಮತ್ತೊಂದು ಕಡೆ ವೇದಾಂತದಲ್ಲಿ ಹೇಳಿರುವುದು ಏಕೇಶ್ವರವಾದವೊಂದೇ ಎಂದು ಘೋಷಣ ಮಾಡಿದನು. ಇದರಿಂದ ಮಲಗಿ ನಿದ್ರಿಸುತ್ತಿದ್ದ ಪ್ರಾಚೀನ ಹಿಂದೂ ಸಮಾಜ ಮೈತಿಳಿದು ಪ್ರತಿಭಟಿಸಲು ಮೇಲೆದ್ದಿತು. ಆಂಗ್ಲೇಯ ವಿದ್ಯಾಪ್ರಚಲನಕ್ಕೆ ವಿರುದ್ಧವಾಗಿ ಅನೇಕರು ಸಾಹಸ ಮಾಡಿದರು. ಆದರೆ ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ರಾಜಾ ರಾಮಮೋಹನರಾಯನು ಒಂದಿನಿತೂ ಎದೆಗೆಡಲಿಲ್ಲ.

ಯಾವಾಗ ರಾಮಮೋಹನನು ವೇದಾಂತ ಪ್ರಚಾರ ಮಾಡತೊಡಗಿ ಸನಾತನ ಧರ್ಮಚ್ಯುತರಾಗಲಿದ್ದ ಯುವಕರಲ್ಲಿ ಕೆಲವರನ್ನು ತನ್ನ ಕಡೆಗೆ ಸೆಳೆಯತೊಡಗಿದನೋ ಆಗ ಕ್ರೈಸ್ತಪಾದ್ರಿಗಳು ಭೀತರಾದರು. ವೇದಾಂತ ತತ್ತ್ವವು ಯೇಸುರಾಜ್ಯ ಸ್ಥಾಪನೆಗೆ ದೊಡ್ಡ ಕಂಟಕವೆಂದು ತಿಳಿದು ಅದನ್ನು ಎದುರಿಸಿ ಖಂಡಿಸಲೆಳಸಿದರು. ರಾಯನೂ ಧೀರಭಾವದಿಂದ ಮಿಷನರಿಗಳ ಅಯುಕ್ತವಾದ ಮತಗಳನ್ನೆಲ್ಲ ಒಂದೊಂದಾಗಿ ಖಂಡಿಸತೊಡಗಿದನು. ರಾಯನಿಗೂ ಪಾದ್ರಿಗಳಿಗೂ ಬಂದೊದಗಿದ ವಿಖ್ಯಾತವಾದ ಈ ವೇದಾಂತ ಯುದ್ಧವು ಪ್ರಸಿದ್ಧವಾದ ಒಂದು ಐತಿಹಾಸಿಕ ಘಟನೆಯಾಗಿದೆ. ರಾಯನ ಮೇಲೆ ಕ್ರೈಸ್ತಪಾದ್ರಿಗಳು ಮಾತ್ರವಲ್ಲದೆ ಸ್ವದೇಶಿಯರೂ ಕತ್ತಿಕಟ್ಟಿದರು. ಸಹಗಮನ ಪದ್ಧತಿಯನ್ನು ನಿಲ್ಲಿಸಲು ರಾಮಮೋಹನನು ಸೊಂಟಕಟ್ಟಿ ನಿಂತುದನ್ನು ಕಂಡು ಪ್ರಾಚೀನ ಸಮಾಜ ಮುಖಪಾತ್ರಸ್ವರೂಪನಾದ ರಾಧಕಾಂತನು ವಿರುದ್ಧವಾಗಿ ಆಂದೋಳನ ಮಾಡತೊಡಗಿದನು. ೧೮೨೯ರಲ್ಲಿ ನಿಯಮಿತ ರೂಪದಿಂದ ಮಂತ್ರಾಲೋಚನೆ ಮಾಡಲೋಸುಗ ಕೆಲವು ಜನ ಬಂಧುಮಿತ್ರರ ಸಂಗದಿಂದ “ಬ್ರಹ್ಮಸಭೆ”ಯನ್ನು ಸ್ಥಾಪಿಸಿ, ಅದ್ವಯ ಬ್ರಹ್ಮತತ್ತ್ವದ ಆಲೋಚನೆಯ ಜೊತೆಗೆ ಸಮಾಜ ಸುಧಾರಣೆಗೂ ರಾಮಮೋಹನನು ಕೈಯಿಟ್ಟನು. ರಾಧಾಕಾಂತನು ಬ್ರಹ್ಮಸಭೆಗೆ ಪ್ರತಿವಾದ ಸ್ವರೂಪವಾದ “ಧರ್ಮಸಭೆ”ಯನ್ನು ಸ್ಥಾಪಿಸಿದನು. ಕಡೆಗೂ ಪ್ರಾಚೀನ ಸಮಾಜದ ಪ್ರಯತ್ನ ವಿಫಲವಾಯಿತು. ೧೮೨೯ನೆಯ ಇಸವಿ ಡಿಸೆಂಬರ್ ೮ನೆಯ ತಾರೀಖಿನ ದಿನ ರಾಮಮೋಹನನ ಅವಿಶ್ರಾಂತ ಯತ್ನದಿಂದ ಸಹಗಮನ ನಿವಾರಣೆ ಸರಕಾರದ ಕಾಯಿದೆಯಾಯಿತು.

ಇತ್ತ ಕಾಲೇಜುಗಳಲ್ಲಿ ಓದುತ್ತಿದ್ದ ಹಿಂದೂ ತರುಣರು ಪಾಶ್ಚಾತ್ಯ ಶಿಕ್ಷಾದೀಕ್ಷಿತರಾಗಿ ಸ್ವೇಚ್ಛಾಚಾರಿಗಳಾಗಿ ಪುಂಡೆದ್ದರು. ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವಾಚ್ಛಂದ್ಯವನ್ನು ಹಿಡಿದರು; ಅಭಕ್ಷ್ಯಭಕ್ಷಣ, ಸುರಾಪಾನ, ಮುಸಲ್ಮಾನರ ದುಖಾನೆಗಳಲ್ಲಿ ಮಾಂಸಾಹಾರ ಮಾಡುವುದು ಇತ್ಯಾದಿ ದುರಾಚಾರಗಳನ್ನು ಸದಾಚಾರಗಳೆಂದು ಸಾಧಿಸುತ್ತ ಹಿರಿಯರನ್ನು ಹಂಗಿಸತೊಡಗಿದರು. ಕಾಲೇಜುಗಳಲ್ಲಿ ಕ್ರೈಸ್ತ ಅಧ್ಯಾಪಕರು ದುರಾಚಾರಿಗಳಾದ ಯುವಕರಿಗೆ ಉತ್ತೇಜನಕಾರಿಗಳಾದರು. ಫ್ರಾನ್ಸ್ ದೇಶದ ಮಹಾ ವಿಪ್ಲವದ ಅಗ್ನಿಜಲವನ್ನು ತಂದು ವಂಗ ಯುವಕರಿಗೆ ಪ್ರತಿಭಾಶಾಲಿಗಳಾದ ಅಧ್ಯಾಪಕರು ಮನೋಹರವಾಗಿ ಪಾನಮಾಡಿಸಿದರು. ನಾಸ್ತಿಕ್ಯ ಹಬ್ಬಿತು. ತರುಣರು ಮತ್ತರಾದರು. ಕ್ರಾಂತಿ ಸರ್ವತ್ರ ಚಲಿಸತೊಡಗಿತು. ‘ಹಿಂದೂ’ ಎಂದು ಹೆಸರಿದ್ದುದೆಲ್ಲ ಕುಸಂಸ್ಕಾರವೆಂದೂ, ‘ಇಂಗ್ಲೀಷು’ ಎಂದುದೆಲ್ಲ ಸುಸಂಸ್ಕಾರವೆಂದೂ ವಾದಿಸಿ ಕುಸಂಸ್ಕಾರ ಭಂಜನಾರ್ಥವಾಗಿಯೂ ಸುಸಂಸ್ಕಾರ ರಂಜನಾರ್ಥವಾಗಿಯೂ ತರುಣರು ಹೆಂಡದ ಹೊಳೆಯಲ್ಲಿ ಧುಮಕತೊಡಗಿದರು. ಕಲ್ಕತ್ತಾ ನಗರವನ್ನು ಬಿಟ್ಟು ಬೇರೆ ಬೇರೆ ನಗರಗಳಿಗೆ ಹೋದ ಕೃತವಿದ್ಯರಾದ ವಿದ್ಯಾರ್ಥಿಗಳು ತಮ್ಮ ವಿನೂತನ ಧರ್ಮವನ್ನು ಅಲ್ಲಿಯೂ ಸಾರಿದರು. ವಿಷವಾತವು ದೇಶದ ಮೇಲೆಲ್ಲ ಬೀಸಿತು. ಇದನ್ನು ಕಂಡು ರಾಜಾ ರಾಮಮೋಹನರಾಯನು ದಿಗಿಲುಬಿದ್ದನು. ಕಾಲೇಜುಗಳಲ್ಲಿ ನೀತಿಬೋಧೆಯನ್ನು ಉಪಕ್ರಮಿಸಿದನು. ಆದರೆ ಅಷ್ಟರಲ್ಲಿಯೆ ಆತನು ವಿಲಾಯಿತಿಗೆ ಹೋಗಿ ಅಲ್ಲಿ ಕಾಲವಾದನು.

ರಾಮಮೋಹನರಾಯನು ಮಡಿದಮೇಲೆ ಆತನ “ಬ್ರಹ್ಮಸಭೆ” ರಾಮಚಂದ್ರ ವಿದ್ಯವಾಗೀಶನ ಅಧಿಕಾರದಲ್ಲಿ ಹಾಗೂ ಹೀಗೂ ಜೀವಧಾರಣೆ ಮಾಡಿಕೊಂಡಿತ್ತು. ೧೮೪೩ರಲ್ಲಿ ಅದು ಮಹರ್ಷಿ ದೇವೇಂದ್ರನಾಥ ಠಾಕೂರರ ಕೈಗೆ ಬಿತ್ತು. ಅವರು “ಬ್ರಾಹ್ಮಧರ್ಮ” ಎಂಬ ಅಭಿನವ ಧರ್ಮವನ್ನು ಬೋಧಿಸಿ, ಆ ಸಭೆಗೆ “ಬ್ರಾಹ್ಮಸಮಾಜ” ಎಂಬ ಹೆಸರನ್ನಿಟ್ಟರು. ಬ್ರಾಹ್ಮಧರ್ಮವು ಸ್ವಲ್ಪ ದೇಶೀ ಸ್ವಲ್ಪ ವಿದೇಶೀ ಆದರ್ಶಗಳ ಸಮುಚ್ಚಯವಾಗಿತ್ತು. ಅಂತೂ ಮಹರ್ಷಿಗಳ “ಬ್ರಾಹ್ಮಧರ್ಮ” ಪ್ರಚಾರವು ಕ್ರೈಸ್ತಮತಕ್ಕೆ ಸೇರುವುದರಲ್ಲಿದ್ದ ಬಹುಮಂದಿ ಯುವಕರನ್ನು ತನ್ನ ಕಡೆಗೆ ಸೆಳೆಯಿತು. ಆಗ ವಂಗ ಸಾಹಿತ್ಯ ಪ್ರಪಂಚದಲ್ಲಿ ವಿಖ್ಯಾತರಾಗಿದ್ದ ಅಕ್ಷಯಕುಮಾರದತ್ತ ಮತ್ತು ರಾಜನಾರಾಯಣ ವಸು ಎಂಬ ಇಬ್ಬರು ಪ್ರತಿಭಾಶಾಲಿಗಳು ಮಹರ್ಷಿಗಳೊಡನೆ ಸೇರಿಕೊಂಡರು. ಅದರಿಂದ ಬ್ರಾಹ್ಮ ಸಮಾಜದ ಶಕ್ತಿ ಪ್ರಭಾವಗಳು ಮತ್ತಷ್ಟು ಮಿಗಿಲಾದುವು. ಕ್ರೈಸ್ತಪಾದ್ರಿಗಳು ನೋಡುತ್ತಾರೆ. ಯೇಸುರಾಜ್ಯಕ್ಕೆ ಹೋಗುವ ಹೆದ್ದಾರಿಯಲ್ಲಿ ಬ್ರಾಹ್ಮ ಸಮಾಜವೆಂಬ ದೊಡ್ಡ ಪರ್ವತವು ಅಡ್ಡ ಬಂದು ನಿಂತಿದೆ! ಸರಿ, ಮರಳಿ ಹೋರಾಟಕ್ಕೆ ಪ್ರಾರಂಭವಾಯಿತು. ಕ್ರೈಸ್ತಪಾದ್ರಿಗಳು ಮೂವರು ಪ್ರತಿಭಾಶಾಲಿಗಳ ಮುಂದೆ ತಲೆಯೆತ್ತಿ ನಿಲ್ಲಲಾರದೆ ಹಿಂತಿರುಗಿದರು.

ಇದೇ ಸಮಯದಲ್ಲಿ ಮತ್ತೊಬ್ಬ ಶಕ್ತಿಶಾಲಿಯಾದ ಪುರುಷನು ವಂಗಸಮಾಜದಲ್ಲಿ ಮೂಡಿದನು. ಆತನೇ ವೀರಸಿಂಹ ಗ್ರಾಮದ ಸಿಂಹಶಿಶು! ಪಂಡಿತ ಈಶ್ವರಚಂದ್ರ ವಿದ್ಯಾಸಾಗರ! ವಿದ್ಯಾಸಾಗರನು ಪಾಶ್ಚಾತ್ಯ ನವನಾಗರಿಕತೆಯ ತಳುಕಿಗೆ ಮರುಳಾಗಲಿಲ್ಲ. ಪರದುಃಖಾ ಕಾತರಹೃದಯನಾದ ಈತನು ಇತರರಂತೆ ಧ್ವಂಸ ಮಾರ್ಗಾವಲಂಬಿಯಾಗದೆ ನಿರ್ಮಾಣ ಮಾರ್ಗಸ್ಥನಾದನು. ಪೋಷಕ ವೀಥಿಯಲ್ಲದೆ ನಾಶಕಮಾರ್ಗವು ಈತನಿಗೆ ಸರಿಬೀಳಲಿಲ್ಲ. ಬಾಲವಿಧವೆಯರ ಅಸಹನೀಯ ಕ್ಲೇಶಗಳನ್ನು ನೋಡಿದ ಈತನು ಹಿಂದೂ ಶಾಸ್ತ್ರಪದ್ಧತಿಯಂತೆ ವಿಧವಾ ವಿವಾಹ ದುರಾಚಾರವಲ್ಲ ಎಂಬ ತತ್ತ್ವಸಮರ್ಥನೆಗೆ ಕೈಹಾಕಿದನು. ಈತನ ಪ್ರಯತ್ನ ಸಾಹಸಗಳಿಂದ ವಿಧವಾ ವಿವಾಹ ಸರಕಾರದಿಂದ ನಿಯಮಬದ್ಧವಾಗಿ ಕಾಯಿದೆಯಾಯಿತು. ಇದರಿಂದ ಪ್ರಾಚೀನ ಸಮಾಜದಲ್ಲಿ ಗಲಭೆಯೆದ್ದಿತು. ಎಲ್ಲರ ದೃಷ್ಟಿಯೂ ವಿದ್ಯಾಸಾಗರ ಕಡೆಗೆ ತಿರುಗಿತು. ಎಲ್ಲರೂ ಆತನ ಮೇಲೆಯೆ ಕತ್ತಿ ಕಟ್ಟಲಾರಂಭಿಸಿದರು. ಈ ಮಧ್ಯೆ ಜನಗಳ ದೃಷ್ಟಿಗಮನಗಳು “ಬ್ರಾಹ್ಮಸಮಾಜ”ದಿಂದ ಸ್ವಲ್ಪ ಪರಾಙ್ಮುಖವಾದುವು.

೧೮೫೯ರಲ್ಲಿ ಯಾವ ದಿನ ಶ್ರೀಯುತ ಕೇಶವಚಂದ್ರಸೇನನು ತನ್ನ ಬಂಧುವರ್ಗ ಸಹಿತ ಬ್ರಾಹ್ಮಸಮಾಜವನ್ನು ಸೇರಿದನೋ ಅಂದಿನಿಂದ ಸಂಸ್ಕಾರಯುಗದಲ್ಲಿ ಒಂದು ನೂತನ ಅಧ್ಯಾಯ ಪ್ರಾರಂಭವಾಯಿತು. ಕೇಶವನು ಆಂಗ್ಲೇಯ ಸಮಾಜ ಪದ್ಧತಿಗಳನ್ನು ಚಾಚೂ ತಪ್ಪದೆ ಅನುಕರಣ ಮಾಡತೊಡಗಿದನು. ಸ್ತ್ರೀಸ್ವಾತಂತ್ರ್ಯ, ಯಜ್ಞೋಪವೀತ ಪರಿತ್ಯಾಗ, ಅಸವರ್ಣ ವಿವಾಹ ಮೊದಲಾದ ವಿನೂತನ ಮತಗಳನ್ನು ಬ್ರಾಹ್ಮಸಮಾಜದಲ್ಲಿ ಚಲಾಯಿಸಿದನು. ಮಹರ್ಷಿ ದೇವೇಂದ್ರನಾಥನು ತತ್ತ್ವವಿಚಾರ ಮಾಡುವುದರಲ್ಲಿ ಆಸಕ್ತನಾಗಿದ್ದನೆ ಹೊರತು ಆತನಿಗೆ ಸಮಾಜಸಂಸ್ಕಾರ ಕಾರ್ಯದಲ್ಲಿ ಅಷ್ಟೇನೂ ಅಭಿರುಚಿಯಿರಲಿಲ್ಲ. ಆತನಿಗೆ ಕೇಶವಚಂದ್ರಸೇನನ ನೂತನ ಮತಗಳು ಸರಿಬೀಳಲಿಲ್ಲ. ಆದರೂ ಆತನನೇನೂ ಮಾಡಲಾರದವನಾದನು. ಏಕೆಂದರೆ, ಕೇಶವನು ಅಸಾಧಾರಣ ವಾಗ್ಮಿಯಾಗಿದ್ದನು. ಆತನ ವಾಗ್ಝರಿಯ ಪ್ರಚಂಡ ಪ್ರವಾಹದ ವೇಗದಲ್ಲಿ ವಂಗದೇಶದ ಇಂತಹ ಸಂಸ್ಥೆಗಳು ಕೊಚ್ಚಿಹೋದುವು. ಯುವಕ ಬಂಗಾಳವು ಕೇಶವನ ಹಸ್ತಗತವಾಯಿತು. ಕೇಶವಚಂದ್ರನ ಸಾಹಸದಿಂದ ಅಸವರ್ಣ ವಿವಾಹವೂ ಸರಕಾರದಿಂದ ಅಂಗೀಕೃತವಾಗಿ ಕಾಯಿದೆಯಾಗಿ ಹೋಯಿತು. ಮಹರ್ಷಿಗಳಿಗೆ ಇದೆಲ್ಲ ಸರಿಬೀಳಲಿಲ್ಲ. ಬ್ರಾಹ್ಮಸಮಾಜವು ಒಡೆದು ಎರಡಾಯಿತು. ಮಹರ್ಷಿಗಳ ಪಕ್ಷ “ಆದಿ ಸಮಾಜ”ವಾಯಿತು. ಕೇಶವಚಂದ್ರನ ಪಕ್ಷ “ಭಾರತವರ್ಷೀಯ ಬ್ರಾಹ್ಮಸಮಾಜ”ವಾಯಿತು.

ಈ ಗಲಭೆಯಲ್ಲಿ ಪ್ರಾಚೀನ ಸಮಾಜದವರಾದ ಪಂಡಿತರು ಶಾಸ್ತ್ರಿಗಳು ಏನು ಮಾಡಿಯಾರು? “ಹರಿಸಭಾ” “ಧರ್ಮಸಭಾ” ಮೊದಲಾದವುಗಳನ್ನು ಸ್ಥಾಪಿಸಿ, ವಾಗ್ವಾದ ಭೂರಿಭೋಜನ ಸಂಕೀರ್ತನೆ ದಾನ ಮೊದಲಾದ ಮಹಾಕಾರ್ಯಗಳಿಂದ ತಮ್ಮ ಅಪ್ರತಿಹತ ಪ್ರತಿಭಟನೆಯನ್ನು ಪ್ರದರ್ಶಿಸಿದರು! ಒಂದು ಕಡೆ ಆದಿ ಸಮಾಜ, ಭಾರತವರ್ಷೀಯ ಬ್ರಾಹ್ಮಸಮಾಜ; ಒಂದು ಕಡೆ ಹರಿಸಭೆ ಧರ್ಮ ಸಭೆಗಳು; ಒಂದು ಕಡೆ ಕ್ರಿಸ್ತಸಭೆಗಳು, ಇತ್ತ ಮಹರ್ಷಿ ಕೇಶವರು; ಅತ್ತ ಪಾದ್ರಿಗಳು, ಇವರ ಮಧ್ಯೆ ಪಂಡಿತ ಈಶ್ವರಚಂದ್ರ ವಿದ್ಯಾಸಾಗರನೆ ಮೊದಲಾದ ಸ್ವತಂತ್ರ ವ್ಯಕ್ತಿಗಳು. ವಂಗಸಮಾಜವು ಅಲ್ಲೋಲಕಲ್ಲೋಲವಾಗಿ ಕಂಗೆಟ್ಟು ಗಡಿಬಿಡಿಯ ಮುದ್ದೆಯಾಯಿತು.

ಈ ರೀತಿ ವಂಗಸಮಾಜವು ಪ್ರಬಲವಾದ ಆಂದೋಳನಗಳ ಕ್ರಿಯೆ ಪ್ರತಿಕ್ರಿಯೆಗಳ ಬಿರುಗಾಳಿಯಲ್ಲಿ ಸಿಕ್ಕಿಬಿದ್ದು ವಿಕ್ಷೋಭಿತವಾಗುತ್ತಿರುವಾಗ ಕಲ್ಕತ್ತಾ ನಗರದ ಬಳಿಯಿರುವ ರಾಣಿ ರಾಸಮಣಿಯ ದಕ್ಷಿಣೇಶ್ವರ ದೇವಾಲಯದಲ್ಲಿ ಅಖ್ಯಾತನೂ ಅಜ್ಞಾತನೂ ಆದ ಪೂಜಾರಿ ಬ್ರಾಹ್ಮಣನೊಬ್ಬನು ಲೋಕಲೋಚನಗಳ ಅಂತರಾಳದಲ್ಲಿರುವ ತ್ರೈಲೋಕ್ಯಕಂಪನಕಾರಿಯಾದ ಮಹಾ ಧರ್ಮಶಕ್ತಿಯನ್ನು ಪಡೆದು ಜಗದಂಬೆಯ ಕೃಪೆಯ ಆಶ್ರಯದಲ್ಲಿ ಮೆಲ್ಲಮೆಲ್ಲನೆ ತಲೆಯೆತ್ತಲಾರಂಭಿಸಿದನು. ಈ ಮಹಾಪುರುಷನೆ ಶ್ರೀರಾಮಕೃಷ್ಣ ಪರಮಹಂಸದೇವ! ವಿಲಾಯಿತಿಯಿಂದ ಹಿಂದಿರುಗಿ ಬಂದವನೂ ಪ್ರಖ್ಯಾತನಾಮ ವಾಗ್ಮಿಯೂ ಧರ್ಮಪ್ರಚಾರಕನೂ ಸಮಾಜಸುಧಾರಕಾಗ್ರಣಿಯೂ ಭಕ್ತಚೂಡಾಮಣಿಯೂ ಆಗಿದ್ದ ಕೇಶವಚಂದ್ರ ಸೇನನು ಆತನ ಪದತಲದಲ್ಲಿ ಕುಳಿತನು. ಆಜನ್ಮ ಮೂರ್ತಿಪೂಜಾದ್ವೇಷಿಯೂ ದೃಢಹೃದಯಿಯೂ ಆದ ಕೇಶವನು ಶ್ರೀರಾಮಕೃಷ್ಣರನ್ನು ಸಂದರ್ಶಿಸಿದ ಮೇಲೆ ಮೃಣ್ಮಯಿ ವಿಗ್ರಹದಲ್ಲಿ ಚಿನ್ಮಯಿ ಮಾತೆಯನ್ನು ಕಂಡು ಮೂರ್ತಿಪೂಜೆಗೆ ತೊಡಗಿ ಅದನ್ನು ಇತರರಿಗೂ ಬೋಧಿಸತೊಡಗಿದನು. ಶ್ರೀಯುತ ವಿಜಯಕೃಷ್ಣ ಗೋಸ್ವಾಮಿ ಮೊದಲಾದವರು ಆತನ ಪ್ರಭಾವದಿಂದ ಬ್ರಾಹ್ಮಸಮಾಜ ಪರಿತ್ಯಾಗ ಮಾಡಿದರು.

ವಿಲಾಯಿತಿ ಪ್ರತ್ಯಾಗತನಾಗಿದ್ದ ಪ್ರತಾಪಚಂದ್ರ ಮುಜುಮದಾರ ಮಹಾಶಯನು ಆತನ ಸನ್ನಿಧಿಯಲ್ಲಿ ಕುಳಿತು ಬೆರಗಾಗಿ ಹೀಗೆಂದು ಬರೆದನು: “ನನ್ನ ಮನಸ್ಸು ಇನ್ನೂ ಆ ಮಹಾಪುರುಷನ ಸಾನ್ನಿಧ್ಯದ ಜ್ಯೋತಿರ್ಮಯ ರಾಜ್ಯದಲ್ಲಿ ಸಂಚರಿಸುತ್ತಿದೆ. ಆತನು ಹೋದೆಡೆಯಲ್ಲೆಲ್ಲ ಬೆಳಕನ್ನು ಬೀರುತ್ತಾನೆ. ಆ ರಹಸ್ಯ ಪುರುಷನ ಸಂಸರ್ಗದಿಂದ ನನಗುಂಟಾದ ಆ ಅನಿರ್ವಚನೀಯ ರಹಸ್ಯಪೂರ್ಣ ಭಾವನೆಗಳು ಇನ್ನೂ ನನ್ನ ಹೃದಯದಲ್ಲಿ ತುಂಬಿ ತುಳುಕುತ್ತಿವೆ. ನನಗೂ ಆತನಿಗೂ ಇರುವ ಸಾದೃಶ್ಯವಾದರೂ ಏನು? ನಾನು ಯೂರೋಪೀಯ ಭಾವಾಪನ್ನನು, ನಾಗರಿಕನು, ಸ್ವಾಭಿಮಾನಿ, ಅರ್ಧಸಂದೇಹವಾದಿ, ಸುಶಿಕ್ಷಿತ ಯುಕ್ತಿವಾದಿ. ಆತನೋ ದರಿದ್ರನು, ವರ್ಣಜ್ಞಾನಹೀನನು, ನಯರುಚಿಹೀನನು, ಮೂರ್ತಿ ಪೂಜಕ ಬಂಧುಹೀನ ಹಿಂದೂ ಭಕ್ತನು! ನಾನೇಕೆ ಆತನ ಚರಣತಳದಲ್ಲಿ ಹಸುಳೆಯಂತೆ ಕುಳಿತು ಆತನ ಮಾತುಗಳನ್ನು ಕೇಳಿ ಮುಗ್ಧನಾಗಬೇಕು? ನಾನು, ಡಿಸ್ರೇಲಿ ಫಾಸೆಟ್ ಸ್ಟಾನ್ಲಿ ಮ್ಯಾಕ್ಸ್‌ಮುಲ್ಲರ್ ಮೊದಲಾದ ಐರೋಪ್ಯ ಮನೀಷಿ ಮತ್ತು ಧರ್ಮಪ್ರಚಾರಕರ ವಾಗ್ವಿಲಾಸವನ್ನು ಕೇಳಿ ಬೆರಗಾದ ನಾನು, ಆತನ ಪದತಲದಲ್ಲಿ ಕುಳಿತುಕೊಳ್ಳಬೇಕೇಕೆ? ನಾನು, ಪರಮಕ್ರಿಸ್ತಭಕ್ತನಾದ ನಾನು, ಕ್ರೈಸ್ತಪಾದ್ರಿಗಳ ಸ್ನೇಹಿತನೂ ಪ್ರಶಂಸಕನೂ ಆದ ನಾನು, ಯುಕ್ತಿಪಂಥಿಯಾದ ಬ್ರಾಹ್ಮಸಮಾಜಕ್ಕೆ ಸೇರಿದ ನಾನು, ಆತನಿಗೇಕೆ ಮರುಳಾಗಬೇಕು! ಅದರಲ್ಲಿಯೂ ನಾನೊಬ್ಬನೇ ಅಲ್ಲ, ನನ್ನಂತೆಯೇ ಇರುವ ನೂರಾರು ಜನರು ಆತನೆಡೆಗೆ ಬರುತ್ತಿದ್ದಾರೆ…. ಅದು ಹೇಗಾದರೂ ಇರಲಿ. ಎಲ್ಲಿಯವರೆಗೆ ಆತನು ನಮ್ಮ ಬಳಿ ಜೀವಂತನಾಗಿರುವನೋ ಅಲ್ಲಿಯವರೆಗೆ ಆತನ ಪಾದಗಳ ಬಳಿ ಸಂತೋಷದಿಂದ ಕುಳಿತು ಪವಿತ್ರತೆ, ವೈರಾಗ್ಯ, ಸಂಸಾರ ನಿರಾಸಕ್ತಿ, ಆಧ್ಯಾತ್ಮಿಕತೆ, ಭಗವತ್ಪ್ರೇಮ ಮೊದಲಾದ ಧರ್ಮ ಕಥಾಶ್ರವಣ ಮಾಡುತ್ತೇವೆ.”

ದಕ್ಷಿಣೇಶ್ವರದ ಕಾಳಿಯ ಗುಡಿಯಲ್ಲಿ ಭಾಗೀರಥಿಯ ತೀರದಲ್ಲಿ ಪಂಚವಟಿಯ ಮೂಲದಲ್ಲಿ ಇದ್ದ ಶಕ್ತಿಸಾಧಕನೂ ನಿರ್ವಿಕಲ್ಪ ಸಮಾಧಿಸ್ಥನೂ ಮಹಾ ಯೋಗಿಯೂ ಭಕ್ತಚೂಡಾಮಣಿಯೂ ವೈಷ್ಣವ ಶಾಕ್ತ ಕ್ರೈಸ್ತ ಮುಸಲ್ಮಾನ ಇತ್ಯಾದಿ ವಿಭಿನ್ನ ಧರ್ಮಮಾರ್ಗಗಳಲ್ಲಿ ಸಿದ್ಧಪುರುಷನೂ ಆದ ಶ್ರೀರಾಮಕೃಷ್ಣ ಪರಮಹಂಸರ ಪ್ರಭಾವವು ಬ್ರಾಹ್ಮಸಮಾಜದ ಮೇಲೆ ಚೆನ್ನಾಗಿ ಮುದ್ರಿತವಾಯಿತು. ಕೇಶವಚಂದ್ರನ ಧರ್ಮಜೀವನದಲ್ಲಿ ಒಂದು ವಿಚಿತ್ರ ಪರಿವರ್ತನೆಯಾಯಿತು. ಆತನು ತನ್ನ ಸಮಾಜದಲ್ಲಿ ಪರಮಹಂಸರ ಉಪದೇಶ ಪ್ರಚಾರ ಮಾಡಲಾರಂಭಿಸಿದನು. ತನ್ನ ಅನುಯಾಯಿಗಳಿಗೆ ಪರಮಹಂಸರ ಜೀವನದ ಉನ್ನತಾದರ್ಶವನ್ನು ತೋರಿದನು. ಬ್ರಾಹ್ಮಸಮಾಜಕ್ಕೆ ಅದುವರೆಗೂ ಅಪರಿಚಿತವಾಗಿದ್ದ ವೈರಾಗ್ಯ ಸಂಯಮ ಸಾಧನೆಗಳನ್ನು ಬೋಧಿಸತೊಡಗಿದನು. ಇದರಿಂದ ಭಾರತವರ್ಷೀಯ ಬ್ರಾಹ್ಮಸಮಾಜವೂ ಕವಲೊಡೆಯಿತು. ಏಕೆಂದರೆ ಅನೇಕರಿಗೆ ಸಾಧನೆ ಭಜನೆ ಯೋಗ ಧ್ಯಾನಗಳು ಅಷ್ಟೇನೂ ಇಂಪಾಗಿ ತೋರಲಿಲ್ಲ! ವಿಜಯಕೃಷ್ಣಗೋಸ್ವಾಮಿಯ ನೇತೃತ್ವದಲ್ಲಿ ಸಾಧಾರಣ ಬ್ರಾಹ್ಮಸಮಾಜವು ಏರ್ಪಟ್ಟಿತು. ಕೇಶವಚಂದ್ರನ ನೇತೃತ್ವದಲ್ಲಿ ಎಲ್ಲ ಧರ್ಮಗಳೂ ಸತ್ಯ, ಮತವಿರುವಂತೆ ಪಥವಿರುವುದು ಎಂಬ ಶ್ರೀರಾಮಕೃಷ್ಣರ ಉಪದೇಶಗಳನ್ನು ಒಳಗೊಂಡ ನವವಿಧಾನ ಎಂಬ ಸಮಾಜವು ಸ್ಥಾಪಿತವಾಯಿತು. ಅಲ್ಲಿ ಎಲ್ಲರೂ ಪರಮಾತ್ಮನನ್ನು ಶ್ರೀರಾಮಕೃಷ್ಣರಂತೆ ‘ಮಾತೆ’ ಎಂದು ಸಂಬೋಧಿಸಿ ಆರಾಧಿಸಲು ತೊಡಗಿದರು.

ಇತ್ತ ೧೮೭೦ರಲ್ಲಿ ಬ್ರಾಹ್ಮಧರ್ಮಕ್ಕೆ ವಿರುದ್ಧವಾಗಿ ಅನೇಕ ಚಳವಳಿಗಳು ಮೂಡಿದುವು. ಪರಿವ್ರಾಜಕ ಸಂನ್ಯಾಸಿಯಾಗಿದ್ದ ಶ್ರೀಕೃಷ್ಣಪ್ರಸನ್ನಸೇನನು ನಗರ ನಗರಗಳಿಗೂ ಹೋಗಿ ತನ್ನ ವಾಕ್ಶಕ್ತಿಯಿಂದ ಬ್ರಾಹ್ಮಧರ್ಮವನ್ನು ಪ್ರತಿಭಟಿಸಿದನು. ಕಲ್ಕತ್ತಾನಗರದಲ್ಲಿ ಶಶಧರ ತರ್ಕಚೂಡಾಮಣಿ ಎಂಬ ಪಂಡಿತನು ಹಿಂದೂಶಾಸ್ತ್ರಗಳ ಮೇಲೆ ಸನಾತನ ಪದ್ಧತಿಯಂತೆ ವ್ಯಾಖ್ಯಾನಮಾಡಲಾರಂಭಿಸಿದನು. ರಾಜಾ ಕಮಲಕೃಷ್ಣ ಪ್ರತಿಷ್ಠಿತವಾದ “ಸನಾತನ ಧರ್ಮರಕ್ಷಿಣೀ ಸಭಾ” ಎಂಬ ಸಂಸ್ಥೆ ನೂತನ ಶಕ್ತಿಯಿಂದ ತಲೆಯೆತ್ತಿತು. ಹಿಂದೂಧರ್ಮದ ಶ್ರೇಷ್ಠತೆಯ ಸಲುವಾಗಿ ಎಲ್ಲೆಲ್ಲಿಯೂ ಉಪನ್ಯಾಸಗಳು ಮತ್ತು ಪ್ರಬಂಧಾದಿಗಳು ಮೈದೋರಿದುವು. ಹೀಗಾಗಿ ಬ್ರಾಹ್ಮಧರ್ಮದ ಪ್ರಭಾವವು ಕುಂದುತ್ತ ಬಂದಿತು.

ಇದೇ ಸಮಯದಲ್ಲಿ ಸುರೇಂದ್ರನಾಥ ಬ್ಯಾನರ್ಜಿ ಮತ್ತು ಆನಂದಮೋಹನ ವಸು ಇವರಿಬ್ಬರ ನಾಯಕತ್ವದಲ್ಲಿ ರಾಜಕೀಯ ಆಂದೋಲನವೂ ಪ್ರಾರಂಭವಾಯಿತು. ಜನರ ಮನಸ್ಸು ಧರ್ಮದಿಂದ ರಾಜಕೀಯದ ಕಡೆಗೆ ತಿರುಗಿತು. ಸಮಾಜ ಸುಧಾರಣೆಗಳ ಕೋಟಲೆಗಳಲ್ಲಿ ಸಿಕ್ಕಿ ಕಂಗೆಟ್ಟ ಜನರು ರಾಜನೀತಿಯ ಸಹಾಯದಿಂದ ಸಮಾಜದ ಸಮಸ್ಯೆಯನ್ನು ಬಿಡಿಸತೊಡಗಿದರು. ಹೀಗೆ ನೂರಾರು ನವಶಕ್ತಿಗಳ ಸಂಗಮದಲ್ಲಿ ಸಿಕ್ಕಿ ಹಿಂದಕ್ಕೂ ಮುಂದಕ್ಕೂ ತಿರುಗಿ ತಿರುಗಿ, ಬೇಸತ್ತು, ಕಂಗೆಟ್ಟು, ಸಮಸ್ಯೆಗಳ ಮೇಲೆ ಸಮಸ್ಯೆಗಳೂ ಸಂದೇಹಗಳ ಮೇಲೆ ಸಂದೇಹಗಳೂ ಪುಂಜೀಭೂತವಾಗಿ ಬರುತ್ತಿದ್ದುದನ್ನು ಕಂಡು, ಅಳುಕಿ, ಸಮಾಜ ರಥವು ಮುಂದುಗಾಣದೆ ಮುಗ್ಗರಿಸಿ ಮುಂಬರಿಯುತ್ತಿರಲು, ಸಾಂಸಾರಿಕ ಆಂದೋಳನಗಳ ಕ್ರಿಯೆ ಪ್ರತಿಕ್ರಿಯೆಗಳ ಮಂಥನದಿಂದ ವಂಗಸಮಾಜದ ಜಠರದಿಂದ ಮತ್ತೊಬ್ಬ ಮಹಾ ಪುರುಷನು ಆವಿರ್ಭವಿಸಿದನು. ಆತನೆ ಜಗದ್ವಿಖ್ಯಾತ ಸ್ವಾಮಿ ವಿವೇಕಾನಂದ!

[1][1] ಹಿನ್ನೆಲೆಯ ವಿವರವಾದ ವರ್ಣನೆಗೆ ಪಾಠಕರು ಇದೇ ಲೇಖಕನ ‘ಶ್ರೀರಾಮಕೃಷ್ಣ ಪರಮಹಂಸ’ ಎಂಬ ಗ್ರಂಥದ ಪೀಠಿಕೆಯನ್ನು ನೋಡಬಹುದು