ಭಾರತೀಯ ತರುಣರ ಜೀವನವಾಹಿನಿ ಪಾಶ್ಚಾತ್ಯ ಸಂಸ್ಕರತಿಯ ತಿಲೋತ್ತಮೆಯ ರಮಣೀಯ ನರ್ತನಲೀಲೆಯನ್ನು ಸಂದರ್ಶಿಸಿದೊಡನೆ ಹುಚ್ಚುಹೊಳೆಯಾಗಿ ಹರಿಯತೊಡಗಿತೆಂದು ಹಿಂದಿನ ಅಧ್ಯಾಯದಲ್ಲಿ ಹೇಳಿದ್ದೇವೆ. ಅದನ್ನು ಕಂಡು ಮುದುಕರಾದ ಹಿರಿಯರು ದಿಗಿಲುಬಿದ್ದರೆಂಬುದನ್ನೂ ತಿಳಿಸಿದ್ದೇವೆ. ತರ್ಕ ಚೂಡಾಮಣಿ ಎಂಬ ಬಿರುದಿನ ಸಂಪ್ರದಾಯಮತಿ ಶಶಧರ ಪಂಡಿತನಿಗೆ ಗಾಬರಿಯಾದಂತೆ ಉಜ್ವಲ ಸ್ಫೂರ್ತಿಯಿಂದಲೂ ತೀಕ್ಷ್ಣ ಬುದ್ಧಿಯಿಂದಲೂ ಸ್ವತಂತ್ರ ವಿಚಾರದಿಂದಲೂ ಮಹಾ ವಿದ್ವತ್ತಿನಿಂದಲೂ ನಿರಂಕುಶಮತಿಯಾಗಿದ್ದ ರಾಮಮೋಹನರಾಯನಿಗೂ ಆ ಶಂಕೆಯುಂಟಾಯಿತೆಂದು ನಮಗೆ ಗೊತ್ತಾಗಿದೆ. ತಾರುಣ್ಯದ ಬೆಳವಣಿಗೆಯನ್ನು ಚಂಚಲತೆ ಎಂದು ಕರೆದು ಎಲ್ಲ ಹಾಳಾಗುತ್ತಿದೆ ಎಂದು ಚಚ್ಚಿಕೊಂಡು ಕೂಗಿಕೊಳ್ಳುವುದು ಸಹಜವಾದುದು, ಬೆಳವಣಿಗೆ ಮುಕ್ತಾಯವಾದ ಮುದಿತನಕ್ಕೆ! ನೂತನವು ಮುಂದಕ್ಕೆ ನುಗ್ಗಿದರೆ ಪುರಾತನವು ಹಿಂದಕ್ಕೆ ಜಗ್ಗುತ್ತದೆ. ಬಹುಶಃ ಪ್ರಗತಿಗೆ ಆ ಎರಡು ಶಕ್ತಿಗಳೂ ಬೇಕೆಂದು ತೋರುತ್ತದೆ. ಜೀವನ ರಥದ ಚಲನೆಯಲ್ಲಿ ಯೌವನವು ಚಕ್ರದಂತೆ ಉರುಳುತ್ತಿದ್ದರೆ ಮುದಿತನವು ಬಿರಿಯಂತೆ ಅದನ್ನು ತಡೆತಡೆದು, ಹಿಡಿಹಿಡಿದು, ಮುಗ್ಗರಿಸಿ ಮೂಗು ಮುರಿದುಕೊಳ್ಳದಂತೆ ಹುಷಾರಾಗಿ ಮುಂದಕ್ಕೆ ಬಿಡುತ್ತದೆ. ಬಾಳಿನ ಇಳಿಜಾರಿನಲ್ಲಿ ಬಿರಿಯಿಲ್ಲದೆ ತೇರು ನಡೆಯುವುದೂ ಅಪಾಯಕರವೆಂದೂ ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಬರಿಯ ಬಿರಿಯ ಮೇಲೆ ಇದುವರೆಗೆ ಯಾವ ತೇರೂ ಮುಂದುವರಿದಿಲ್ಲ. ಗಾಲಿ ಬಿರಿಯ ಉಪಯೋಗವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಹಾಗೆಯೆ ಬಿರಿಯೂ ತನ್ನ ಸ್ಥಾನವನ್ನೂ ಮಾನವನ್ನೂ ನಿಷ್ಕೃಷ್ಟವಾಗಿ ತಿಳಿದುಕೊಂಡರೆ ಲೇಸು.

ಈ ದೃಷ್ಟಿಯಿಂದ ನೋಡಿದರೆ ತರುಣ ಭಾರತೀಯರಲ್ಲಿ ವ್ಯಕ್ತವಾದ ವಿಶೃಂಖಲತೆಯೂ ನವೀನತಾಪ್ರೇಮವೂ ಸ್ವತಂತ್ರಭಾವವೂ ಅರ್ಥಪೂರ್ಣವಾಗುವುದಲ್ಲದೆ ಪ್ರಶಂಸನೀಯವಾಗುತ್ತದೆ. ಬೈಬಲ್ಲಿನ, ಚರ್ಚಿನ ಮತ್ತು ಐತಿಹ್ಯದ ಕುರುಡು ನಂಬುಗೆಯ ಮೊಟ್ಟೆಯ ಚಿಪ್ಪನ್ನು ಕುಕ್ಕಿ ಒಡೆದು ನಮ್ಮೆಡೆಗೆ ಹಾರಿ ಬಂದ ಪಾಶ್ಚಾತ್ಯದ ವಿಚಾರಪಕ್ಷಿ ಮತಮೌಢ್ಯದ ಮೊಟ್ಟೆಯನ್ನು ಬಿರಿದು ಹಾರುವ ವಿಜ್ಞಾನ ವಿದ್ಯೆಯನ್ನು ಪ್ರಾಚ್ಯಕ್ಕೂ ಕಲಿಸಿದುದರ ಫಲವಾಗಿ ಭಾರತವರ್ಷದಲ್ಲಿಯೂ ವಿಚಾರದ ಪಕ್ಷಿಶಿಶು ಗರಿಗೆದರಿ ಹಾರಿಯಾಡಲು ರೆಕ್ಕೆ ಬಡಿಯಲಾರಂಭಿಸಿತು.

ಪಾಶ್ಚಾತ್ಯರಲ್ಲಿ ಹದಿನೆಂಟನೆಯ ಶತಮಾನವು ಪ್ರಬೋಧ ಯುಗವೆಂದೂ ಹತ್ತೊಂಬತ್ತನೆಯ ಶತಮಾನವು ವಿಜ್ಞಾನಯುಗವೆಂದೂ ಪ್ರಸಿದ್ಧವಾಗಿವೆ. ಅಲ್ಲಿ ಆ ಇನ್ನೂರು ವರ್ಷಗಳಲ್ಲಿ ರಾಜಕೀಯ ಪ್ರಪಂಚದಲ್ಲಿಯೂ ಮಾನಸಿಕ ಪ್ರಪಂಚದಲ್ಲಿಯೂ ಸಂಭವಿಸಿರುವ ಸುಧಾರಣೆಗಳನ್ನೂ ಪರಿವರ್ತನೆಗಳನ್ನೂ ವಿಪ್ಲವಗಳನ್ನೂ ಪರಿಶೀಲಿಸಿದರೆ ಅದನ್ನು ಸ್ವಾತಂತ್ರ್ಯ ಸಾಧನೆಯ ಯುಗವೆಂದು ಕರೆದರೂ ಕರೆಯಬಹುದು. ಅದು ಮಹಾವ್ಯಕ್ತಿಗಳ ಮಹದಾಲೋಚನೆಗಳ ಕಾಲ. ಧೀರ ಸಂಶೋಧಕರು ಪ್ರಚಂಡ ಪ್ರಯೋಗಗಳನ್ನು ಹೂಡಿದ ಮಾನನೀಯ ಕಾಲ. ಮಾನವನು ಚಕ್ರವರ್ತಿಗಳ ನಿರಂಕುಶ ಪ್ರಭುತ್ವದಿಂದಲೂ ಅಂಧಶ್ರದ್ಧೆ ಮತ್ತು ಸಂಪ್ರದಾಯಗಳ ಮೋಹ ಬಂಧನದಿಂದಲೂ ಸ್ವೀಯ ಮಾನಸಿಕ ದುರ್ಬಲತೆ ಮತ್ತು ಪಕ್ಷಪಾತಗಳ ವಜ್ರಪಂಜರದಿಂದಲೂ ಮುಕ್ತನಾಗಿ ನಿರಂಕುಶಮತಿಯಾಗಲು ಪ್ರಯತ್ನಿಸಿದ ಆ ಕಾಲವು ಗೌರವಾರ್ಹವಾಗಿದೆ.

ವಿಜ್ಞಾನ ಸಂಶೋಧನೆಯ ಮಹಿಮೆಯಿಂದ ಮನುಷ್ಯನ ದೃಷ್ಟಿದಿಗಂತವು ವಿಶಾಲವಾಯಿತು. ಪ್ರಶ್ನೆಯ ಮೇಲೆ ಪ್ರಶ್ನೆ, ಸಂದೇಹದ ಮೇಲೆ ಸಂದೇಹ, ಸಿದ್ಧಾಂತದ ಮೇಲೆ ಸಿದ್ಧಾಂತಗಳು ಪುಂಖಾನುಪುಂಖವಾಗಿ ಚಿಮ್ಮಿದುವು. ಪುರಾತನವು ನೂತನದ ಆಘಾತದಿಂದ ತತ್ತರಿಸಿತು. ಜನರಲ್ಲಿ ಅಂಧಶ್ರದ್ಧೆಗೆ ಬದಲು ವಿಚಾರ ಬುದ್ಧಿ ಪ್ರಬುದ್ಧವಾಯಿತು. ಹಳೆಯ ಸಂಪ್ರದಾಯ, ಆಚಾರ ಮತ್ತು ಪ್ರಮಾಣಗಳೆಲ್ಲವೂ ಮತಿಯ ಒರೆಗಲ್ಲಿನಲ್ಲಿ ಮೋರೆ ತೀಡಿಸಿಕೊಳ್ಳಬೇಕಾಯಿತು. ಅನುಭವ, ಆಲೋಚನೆ ಮತ್ತು ಕಾರ್ಯಗಳಲ್ಲಿ ಸ್ವಾತಂತ್ರ್ಯವು ತಲೆದೋರಿ ಭಕ್ತಿಯ ಕಿರೀಟವು ಯುಕ್ತಿಗಾಯಿತು. ವಿಜ್ಞಾನಶಾಸ್ತ್ರವೂ ತತ್ತ್ವಶಾಸ್ತ್ರವೂ ಪರೀಕ್ಷೆ, ವಿಮರ್ಶೆ ಮತ್ತು ವಿಚಾರ ಇವುಗಳನ್ನೆ ಪ್ರಧಾನ ಕರಣಗಳನ್ನಾಗಿ ಸ್ವೀಕರಿಸಿದುವು. ಸತ್ಯವು ಜಗದ್ಗುರುಗಳಿಂದಾಗಲಿ ಪುರೋಹಿತರಿಂದಾಗಲಿ ಕೃಪೆಗಾಗಲಿ ಕ್ರಯಕ್ಕಾಗಲಿ ಕೊಂಡುಕೊಳ್ಳುವ ವಸ್ತುವಲ್ಲವೆಂದೂ, ವಿಚಾರಪೂರ್ಣವಾದ ನಿಷ್ಪಕ್ಷಪಾತವಾದ ಸಾಹಸದಿಂದ ವ್ಯಕ್ತಿ ತನಗೆ ತಾನೇ ಸ್ವತಃ ಕಂಡುಕೊಳ್ಳಬೇಕಾದುದೆಂದೂ ನಿರ್ಣಯವಾಯಿತು. ದೇವತೆಗಳಲ್ಲಿಯೂ ಮತದಲ್ಲಿಯೂ ಇದ್ದ ನಂಬುಗೆ ಸಡಿಲವಾಯಿತು. ಅದುವರೆಗೆ ಸ್ವರ್ಗದ ಕಡೆಗೂ ಅಲೌಕಿಕದ ಕಡೆಗೂ ತಿರುಗಿದ್ದ ದೃಷ್ಟಿ ಈಗ ಮರ್ತ್ಯದ ಕಡೆಗೂ ಪ್ರಕೃತಿಯ ಕಡೆಗೂ ತಿರುಗಿತು. ಘಟನೆಗಳಿಗೆಲ್ಲ ಪ್ರಕೃತಿ ನಿಯಮಗಳೆ ಕಾರಣವೆಂದು ಗೊತ್ತಾಗಿ ಅಪ್ರಾಕೃತವಾದುದೆಲ್ಲವೂ ತಿರಸ್ಕೃತವಾಯಿತು. ಮಾನವನ ಯುಕ್ತಿ ಅಥವಾ ವಿಚಾರಬುದ್ಧಿಯೆ ಸರ್ವಶಕ್ತವಾದುದೆಂದೂ ಸರ್ವಶ್ರೇಷ್ಠವಾದುದೆಂದೂ ಪೂಜ್ಯವಾಯಿತು. ಜನರಿಗೆ ಪ್ರಕೃತಿಯಲ್ಲಿ ಎಂದಿಗಿಂತಲೂ ಹೆಚ್ಚು ಕುತೂಹಲ ಹುಟ್ಟಿತು. ಸಂಸ್ಕೃತಿಯಲ್ಲಿಯೂ ಪ್ರಗತಿಯಲ್ಲಿಯೂ ಉತ್ಸಾಹ ಹೆಚ್ಚಿತು. ಕನಸಿಗಿಂತಲೂ ನನಸಿಗೆ ಹೆಚ್ಚು ಪುರಸ್ಕಾರ ದೊರೆಯಿತು. ಧರ್ಮಕ್ಕಿಂತಲೂ ಕರ್ಮವೆ ಯಶಸ್ವಿಯಾಯಿತು. ಮಂತ್ರಕ್ಕಿಂತಲೂ ಯಂತ್ರವೆ ವಂದನೀಯವಾಯಿತು. ಶ್ರುತಿಗಿಂತಲೂ ಮತಿಯೆ ಸರ್ವೋಚ್ಚ ಪದವಿಗೇರಿತು.

ಮನಸ್ಸು ಮಾನವನ ಸರ್ವಸ್ವವೆಂದೂ ಮತಿ ಪರಮಪ್ರಮಾಣವೆಂದೂ ಹೃದಯವಾಣಿ ಮಿಥ್ಯೆಯೆಂದೂ ಪ್ರಕೃತಿ ಘಟನೆಗಳನ್ನು ಪ್ರಕೃತಿ ನಿಯಮಗಳಿಂದಲೆ ವಿವರಿಸಬಹುದೆಂದೂ ಬುದ್ಧಿ ದೃಢವಾದ ಮೇಲೆ ವೈಜ್ಞಾನಿಕರು ಸೃಷ್ಟಿಯ ಸರ್ವ ಕರ್ಮಗಳನ್ನೂ ಸಕಲ ಮರ್ಮಗಳನ್ನೂ ಯಾಂತ್ರಿಕವಾಗಿ ವಿವರಿಸಲು ಕಂಕಣಬದ್ಧರಾಗಿ ನಿಂತರು. ಜಡವಾದ, ನಾಸ್ತಿಕವಾದ, ನಿರೀಶ್ವರವಾದ ಮೊದಲಾದ ನೂರಾರು ವಾದಗಳು ಹೆಡೆಯೆತ್ತಿದುವು. ಮೊದಮೊದಲು ಪುರಾತನ ಪುರೋಹಿತ ವರ್ಗದವರು, ಸನಾತನ ಧರ್ಮದ ಹೆಸರಿನಲ್ಲಿ, ತಮ್ಮ ನಿರಂಕುಶ ಸ್ವಾಸ್ಥ್ಯಕ್ಕೆ ಕುಠಾರ ಸ್ವರೂಪವಾದ ಆ ಪ್ರಚಂಡ ನವಶಕ್ತಿಯನ್ನು ನಿರ್ಮೂಲ ಮಾಡಲು ಸಾಹಸಗೈದರು.

ಭೂಮಿ ವಿಶ್ವದ ಕೇಂದ್ರವಲ್ಲ, ಸೂರ್ಯನ ಸುತ್ತಲೂ ತಿರುಗುವ ಕ್ಷುದ್ರಗ್ರಹಗಳಲ್ಲಿ ಒಂದು – ಎಂದವರನ್ನು ವಿಚಾರಣೆಗೆ ಗುರಿಮಾಡಿ ಕೆಲವರನ್ನು ಸೆರೆಯಲ್ಲಿಟ್ಟು ಮತ್ತೆ ಕೆಲವರನ್ನು ಚಿತ್ರಹಿಂಸೆ ಮಾಡಿ ಕೊಂದರು. ಸ್ವತಂತ್ರವಾಗಿ ಕ್ರೈಸ್ತ ಶ್ರುತಿಗೆ ವಿರೋಧವಾಗಿ ಆಲೋಚನೆ ಮಾಡಿದ ಮೇಧಾವಿಗಳನ್ನು ನಾನಾ ರೀತಿಗಳಿಂದ ಪೀಡಿಸಿದರು. ಪುರಾತನಿಗಳು ಏನು ಮಾಡಿದರೂ ನೂತನದ ತಲೆ ಕೆಡಲಿಲ್ಲ. ಖಗೋಳಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ ಮತ್ತು ಮನಃಶಾಸ್ತ್ರಗಳು ಅಪ್ರತಿಹತವಾಗಿ ಮೇಲೆದ್ದುವು. ತತ್ತ್ವಶಾಸ್ತ್ರಜ್ಞರೂ ವಿಜ್ಞಾನದ ಹೊಸ ಹೊಸ ಅನ್ವೇಷಣೆ, ಆವಿಷ್ಕಾರ ಮತ್ತು ಸಿದ್ಧಾಂತಗಳನ್ನು ಸ್ವೀಕರಿಸಿ ತಮ್ಮ ಮಹಾ ತತ್ತ್ವಮಂದಿರಗಳನ್ನು ಕಟ್ಟಿದರು. ರಾಜ್ಯಶಾಸ್ತ್ರಜ್ಞರು ವ್ಯಕ್ತಿಯ ಹಕ್ಕುಬಾಧ್ಯತೆಗಳನ್ನೂ ಪರಮ ಸ್ವಾತಂತ್ರ್ಯವನ್ನೂ ಕುರಿತು ಸಾರಿದರು. ಕವಿಗಳು ನವಯುಗದ ನವದೃಷ್ಟಿಯ ಸುವಿಚಾರ ಪೂರ್ವಕವಾದ ಮಹಾಮಂತ್ರವನ್ನು ಸುಮಧುರ ವೀರವಾಣಿಯಿಂದ ಹಾಡಿದರು. ಪಾಮರ ಜನಗಳು ಯುಗ ಯುಗದ ನಿದ್ರೆಯಿಂದ ಎಚ್ಚತ್ತು ಕಣ್ದೆರೆದರು. ಮಾನಸಿಕ ಕ್ರಾಂತಿ ಸಾಮಾನ್ಯ ಜನಜೀವನಕ್ಕೂ ಕಿಡಿಯಿಟ್ಟಿತು. ಫ್ರಾನ್ಸ್ ದೇಶದಲ್ಲಿ ಪ್ರಚಂಡವಾಗಿಯೂ ಇತರೆಡೆಗಳಲ್ಲಿ ಸಾಧಾರಣವಾಗಿಯೂ ರಾಜಕೀಯ ಮಹಾವಿಪ್ಲವಗಳಾದುವು. ಮನುಷ್ಯರೆಲ್ಲರೂ ಜನ್ಮತಃ ಸ್ವತಂತ್ರರು, ಸಮಾನರು, ಸೋದರರು – ಎಂಬ ಉದಾರ ತತ್ತ್ವ ಸರ್ವತ್ರ ಹಬ್ಬಿತು. ಪ್ರಗತಿ ಎಂಬ ಮಹಾ ಕುದುರೆಯ ನಾಗಾಲೋಟದಿಂದ ಮೇಲೆದ್ದ ಕೆಂಧೂಳಿ ಮುಗಿಲು ಮುಗಿಲಾಗಿ ಪಾಶ್ಚಾತ್ಯ ಜಗತ್ತನ್ನೆಲ್ಲ ಮುಸುಗಿ ಬಿಟ್ಟಿತು.

ಇಂತಹ ವಿಪ್ಲವಗರ್ಭದ ರಕ್ತಾಗ್ನಿಯಲ್ಲಿ ಆಗತಾನೆ ಮಿಂದು ಬೆಂದು ಬಂದುದಾಗಿತ್ತು ಭಾರತವರ್ಷಕ್ಕೆ ಬಿಜಯಂಗೈದ ಪಾಶ್ಚಾತ್ಯ ಸಂಸ್ಕೃತಿ! ಅದರ ಕಾವಿಗೆ ನಮ್ಮವರ ಎಳೆನೆತ್ತರು ಕುದಿಯದೆ ಇದ್ದಿದ್ದರೆ ಅದು ಜನಾಂಗದ ಜೀವನ ಸೂಚನೆಯಾಗುತ್ತಿರಲಿಲ್ಲ, ಶವದ ಸೂಚನೆಯಾಗುತ್ತಿತ್ತು. ಉದ್ಧಾರದಲ್ಲಿ ನೆಚ್ಚಿರುವ ಪ್ರತಿಯೊಬ್ಬರಿಗೂ ತರುಣ ರಕ್ತದ ಕುದಿದಾಟವು ಆಶಾಜನಕವಾಗಬೇಕು, ಅಭಿಮಾನದ ವಿಷಯವಾಗಬೇಕು.

ಇಲ್ಲಿ ಭಾರತೀಯ ತರುಣರ ಪರವಾಗಿ ನಾಲ್ಕು ಮಾತುಗಳನ್ನು ಹೇಳಲೇ ಬೇಕಾಗುತ್ತದೆ.

ಪುರಾತನವಾದುಲೆಲ್ಲ ಪವಿತ್ರವಾದುದು, ಆದ್ದರಿಂದ ಸತ್ಯವಾದುದು ಎಂಬ ಭಾವನೆ ನಮ್ಮವರ ತಲೆಗಳಲ್ಲಿ ಇಲ್ಲಣ ತುಂಬಿದ ಜೇಡರ ಬಲೆಯಾಗಿತ್ತು, ಯಾವ ಕಾಲಕ್ಕೊ ಯಾವ ದೇಶಕ್ಕೊ ಎಂದೋ ಒಪ್ಪುವಂತೆ ಯಾರೋ ಬರೆದಿಟ್ಟಿದ್ದ ಸಮಾಜದ ಕಟ್ಟುನಿಟ್ಟುಗಳನ್ನೂ ಕಟ್ಟುಕತೆಗಳನ್ನೂ ಸ್ವಲ್ಪವೂ ವಿಚಾರ ಮಾಡದೆ ನಂಬಿಕೊಂಡು, ಮತದ ಹೆಸರಿನಲ್ಲಿ ಮಾನವ ಸಹೋದರರನ್ನು ಕೋಟಲೆಗೊಳಿಸಿ, ಇಲ್ಲದ ಸಲ್ಲದ ಭೇದಭಾವಗಳನ್ನು ನೂತನ ಧರ್ಮವೆಂದು ಭ್ರಮಿಸಿದ್ದರು. ಪುರಾತನ ಪೌರಾಣಿಕ ಜ್ಞಾನವನ್ನು ಸನಾತನ ವಿಜ್ಞಾನವೆಂದು ಭಾವಿಸಿ ಹೊಸದನ್ನು ವಿಷದಂತೆ ಕಾಣತೊಡಗಿದ್ದರು. ಸಹಗಮನಾದಿ ಭೀಷಣ ಮೃಗೀಯ ಪದ್ಧತಿಗಳನ್ನು ಶಾಸ್ತ್ರೋಕ್ತವೆಂದು ಪ್ರತಿಪಾದಿಸುತ್ತಾ ಪಂಡಿತರೆನಿಸಿಕೊಂಡವರು ಮಾನವ ಸಹಜವಾದ ಕರುಣೆ ಕಣ್ಣೀರುಗಳಿಂದಲೂ ವಿಮುಕ್ತರಾಗಿದ್ದರು. ಅನೇಕ ವಿಚಾರಗಳಲ್ಲಿ ಅನೇಕರು ದ್ವಾಪರಯುಗದವರಾಗಿದ್ದರು. ಕಲಿಯುಗವನ್ನು ಅಧರ್ಮದ ಯುಗವೆಂದೂ ವಿನಾಶದ ಯುಗವೆಂದೂ ಹಳಿಯುತ್ತಾ ತಮ್ಮ ದೃಷ್ಟಿಯನ್ನೆಲ್ಲಾ ದ್ವಾಪರ ಕೃತ ತ್ರೇತಾಯುಗಗಳ ಕಡೆಗೆ ತಿರುಗಿಸಿ ಪುರಾತನವನ್ನು ಸ್ತೋತ್ರ ಮಾಡುವುದುರಲ್ಲಿಯೆ ತಲ್ಲೀನರಾಗಿದ್ದರು. ನಾಡಿನ ಬಾಳು ಮುಂದಿನ ಆಸೆಯಿಂದ ಮುಮ್ಮೊಗವಾಗಿರುವುದಕ್ಕೆ ಬದಲಾಗಿ ಹಿಂದನ ಮೆರುಗನ್ನೇ ಉತ್ಪ್ರೇಕ್ಷಿಸಿ ನೆನೆಯುತ್ತಾ ಹಿಮ್ಮೊಗವಾಗಿತ್ತು. ರಾಷ್ಟ್ರಜೀವನ ಶರೀರದ ಶ್ವಾಸಕೋಶಗಳಿಗೆ ಕ್ಷಯರೋಗ ತಗುಲಿದಂತಿತ್ತು.

ದೇಶವು ದುರವಸ್ಥೆಗಿಳಿದಿದ್ದುದನ್ನು ಕಂಡು, ಅದಕ್ಕೆ ಬಹುಮಟ್ಟಿಗೆ ತಮಗೆ ಹಿಂದಿದ್ದ ಹಿರಿಯರೇ ಕಾರಣರೆಂದು – ಸರಿಯಾಗಿಯೋ ತಪ್ಪಾಗಿಯೋ ಭಾವಿಸಿ – ತರುಣರು ದಂಗೆಯೆದ್ದು, ತಮ್ಮನ್ನು ದುಃಸ್ಥಿತಿಗೆ ತಂದ ಹಳೆಯ ಪ್ರಾಚ್ಯ ವಿಧಾನಗಳನ್ನು ಮೂಲೆಗೆ ತಳ್ಳಿ, ಪಾಶ್ಚಾತ್ಯರನ್ನು ಜಗದ್ವಿಜಯಿಗಳನ್ನಾಗಿ ಮಾಡಿದ ಹೊಸ ವಿಜ್ಞಾನ ವಿಧಾನವನ್ನು ಕೈಕೊಳ್ಳಲೆಂದು ಸ್ವತಂತ್ರಮತಿಗಳಾದುದು ಭಾರತಾಂಬೆಯ ಪುಣ್ಯೋದಯವಲ್ಲದೆ ಮತ್ತೇನು? ಇಂದು ನಮ್ಮ ದೇಶದಲ್ಲಿ ಏನಾದರೂ ಜೀವವಾಡುತ್ತಿದ್ದರೆ ಅದಕ್ಕೆ ಅಂದಿನ ತರುಣರ ‘ನಿರಂಕುಶಮತಿ’ ಬಹುಮಟ್ಟಿಗೆ ಕಾರಣವಾಗಿದೆ.

ಹೇಳಿದೊಡನೆ ನಂಬುವವರು ಕೆಲವರು, ಹೇಳಿದುದು ಸಕಾರಣವಾಗಿದ್ದರೆ ಮಾತ್ರ ನಂಬುವವರು ಕೆಲವರು; ಹೇಳಿದುದನ್ನು ತಮ್ಮ ಸ್ವಂತ ಅನುಭವಕ್ಕೆ ತಂದುಕೊಂಡಮೇಲೆ ನಂಬುವವರು ಮತ್ತೆ ಕೆಲವರು. ಮೊದಲನೆಯದು ಶ್ರದ್ಧೆ, ಭಕ್ತಿ. ಎರಡನೆಯದು ವಿಚಾರ, ಬುದ್ಧಿ, ಯುಕ್ತಿ. ಮೂರನೆಯದು ಪ್ರತ್ಯಕ್ಷಾನುಭವ, ಸಾಕ್ಷಾತ್ಕಾರ. ಈ ಪ್ರಮಾಣಗಳಲ್ಲಿ ಕಡೆಯದನ್ನು ಪ್ರತ್ಯಕ್ಷವೆಂದೂ ನಡುವಣದನ್ನು ಅನುಮಾನವೆಂದೂ ಮೊದಲೆಯದನ್ನು ಶಬ್ದವೆಂದೂ ಕರೆಯುತ್ತಾರೆ. ಪ್ರಾಸಪ್ರೀತಿಗಾಗಿ ಮೊದಲನೆಯದನ್ನು ‘ಶ್ರುತಿ’ ಎಂದೂ, ಎರಡನೆಯದನ್ನು ‘ಮತಿ’ ಎಂದೂ, ಮೂರನೆಯದನ್ನು ‘ಅನುಭೂತಿ’ ಎಂದೂ ಕರೆದರೆ ತಪ್ಪಾಗುವುದಿಲ್ಲ.

ವೇದ, ಬೈಬಲ್ಲು, ಕೊರಾನು ಮೊದಲಾದ ಧರ್ಮಗ್ರಂಥಗಳು ಶ್ರುತಿವರ್ಗಕ್ಕೆ ಸೇರಿವೆ. ಅವುಗಳನ್ನು ನಂಬುವವರಿಗೆ ಅವುಗಳಿಗಿಂತಲೂ ಹೆಚ್ಚಿನ ಪ್ರಾಮಾಣ್ಯವಿನ್ನಿಲ್ಲ. ಆಯಾ ಮತದವರು ಅವರವರ ಶ್ರುತಿಗಳನ್ನು ದೇವರೇ ಹೇಳಿದನೆಂದೋ ಹೇಳಿಸಿದನೆಂದೋ ನಂಬುತ್ತಾರೆ. ಆ ನಂಬಿಕೆಗೆ ನಂಬಿಕೆಯೊಂದನ್ನಲ್ಲದೆ ಇನ್ನಾವ ಹೆಚ್ಚಿನ ಕಾರಣವನ್ನೂ ಅವರು ಕೊಡುವುದಿಲ್ಲ. ಕಾರಣಗಳನ್ನು ಕೊಡುವುದಕ್ಕೆ ಅವರು ಪ್ರಯತ್ನಿಸುವುದೂ ಇಲ್ಲ. ಅಷ್ಟೇಕೆ? ಸ್ವತಃ ಸಿದ್ಧವಾದುದಕ್ಕೆ ಕಾರಣಗಳನ್ನೇಕೆ ಹುಡುಕಬೇಕು? ಸತ್ಯನಿಧಿಯಾದ ದೇವರಿಂದ ಬಂದಿರುವ ಗ್ರಂಥಗಳಲ್ಲಿ ಅಸತ್ಯವಿರುವುದಾದರೂ ಹೇಗೆ? – ಎಲ್ಲಿಯಾದರೂ ಶ್ರುತಿ ನಮ್ಮ ಅನುಭವಕ್ಕೆ ವಿರುದ್ಧವಾಗಿದ್ದರೆ, ಅದು ಅನುಭವದ ದೋಷವೇ ಹೊರತು ಶ್ರುತಿಯ ತಪ್ಪಲ್ಲ. ಶ್ರುತಿ ಎಂದಿಗೂ ತಪ್ಪಾಗುವುದಿಲ್ಲ. ಆದ್ದರಿಂದ ಅನುಭವವನ್ನು ಶ್ರುತಿಗೆ ಹೊಂದಿಕೊಳ್ಳುವಂತೆ ಬೇಗಬೇಗನೆ ತಿದ್ದಿಕೊಳ್ಳಬೇಕು. ಹಾಗೆ ಮಾಡದಿದ್ದರೆ ಶ್ರುತಿಯನ್ನು ನಂಬುವವರಿಂದ ನಿನಗೆ ನರಕಸೃಷ್ಟಿಯಾಗುತ್ತದೆ! – ನಾನು ನರಕವನ್ನೇ ನಂಬುವುದಿಲ್ಲ! ಹಾಗಾದರೆ ಇಲ್ಲಿಯೇ ಅದರ ಅನುಭವವನ್ನು ನಿನಗೆ ದಯಪಾಲಿಸುತ್ತಾರೆ! – ಈ ವಾದವು ನಾಗರಿಕತೆಯ ಶೈಶವಾವಸ್ಥೆಯಲ್ಲಿದ್ದ ಹಿಂದಿನವರಿಗೂ ಆ ಸ್ಥಿತಿಯಲ್ಲಿಯೇ ಇರುವ ಇಂದಿನವರಿಗೂ, ಮಕ್ಕಳಂತೆ ಮಿದುಳಿರುವ ಸರಳ ಹೃದಯದ ಹಿರಿಯರಿಗೂ ಸರಿಹೋಗಬಹುದು. ಆದರೆ ವಿಚಾರಮತಿಗಳಿಗೆ ಸರಿಹೋಗುವುದೂ ಇಲ್ಲ; ಸಾಕಾಗುವುದೂ ಇಲ್ಲ. ಮತಿಯ ಸಹಾಯವಿಲ್ಲದೆ ಬರಿಯ ಇಂತಹ ಶ್ರುತಿಯ ಆಧಾರದ ಮೇಲೆ ನಿಂತಿರುವ ಮತಗಳೆಲ್ಲವೂ ವಿಜ್ಞಾನಶಾಸ್ತ್ರ ಮುಂದುವರಿದ ಹಾಗೆ ಕೃಶವಾಗಿ ಕೊನೆಗೆ ಸಂಪೂರ್ಣವಾಗಿ ಲಯಹೊಂದಿದರೂ ಹೊಂದಬಹುದು.

ವೈಜ್ಞಾನಿಕವಾದ ಆಧುನಿಕ ಶಾಸ್ತ್ರಗಳೆಲ್ಲ ಮತಿಯ ಆಧಾರದ ಮೇಲೆ ನಿಂತಿವೆ. ಪ್ರತಿಯೊಂದಕ್ಕೂ ಕಾರಣಗಳನ್ನು ಹುಡುಕಿ ತಿಳಿಯಲೆಳಸುವುದು ಮತಿಯ ಲಕ್ಷಣ. ಸತ್ಯನಿರ್ಣಯದ ವಿಚಾರದಲ್ಲಿ ಮತಿ ಮೊಂಡಾಟ ಮಾಡುವುದಿಲ್ಲ. ತನ್ನ ಸಿದ್ಧಾಂತವೇ ಪರಮಸತ್ಯವೆಂದೂ ಅದು ವಾದಿಸುವುದಿಲ್ಲ. ಅದರ ಸ್ವಭಾವ ಆರಾಧನೆಯಲ್ಲ, ಶೋಧನೆ. ಅತ್ಯಂತ ಪುರಾತನವಾದುದು ಅತ್ಯಂತ ಸತ್ಯವಾದುದೆಂದು ಅದು ಒಪ್ಪುವುದಿಲ್ಲ. ನಿಜವಾಗಿಯೂ ಅದಕ್ಕೆ ಪುರಾತನ ನೂತನ ಎಂಬ ಭೇದಬುದ್ಧಿಯಿಲ್ಲ. ಹಳೆಯದಾಗಲಿ ಹೊಸದಾಗಲಿ ವಿಚಾರಪೂರ್ವಕವಾಗಿದ್ದರೆ ಅದು ಒಪ್ಪಿಕೊಳ್ಳುತ್ತದೆ. ಹಳೆಯದಕ್ಕಿಂತಲೂ ಹೊಸದು ಹೆಚ್ಚು ಸಕಾರಣವಾಗಿದ್ದರೆ ಹಳೆಯ ವಿಗ್ರಹವನ್ನು ಇತಿಹಾಸದ ಪೆಟ್ಟಿಗೆಗೆ ಹಾಕಿ ಹೊಸ ಮೂರ್ತಿಯನ್ನು ವೇದಿಕೆಯ ಮೇಲೆ ಇಡಲು ಸಿದ್ಧವಾಗುತ್ತದೆ. ಯಾವ ದೇಶದಿಂದಲೆ ಬರಲಿ, ಯಾವ ನೆಪದಿಂದಲೆ ಬರಲಿ, ಶ್ರುತಿಯ ಸೆರೆಗೆ ಸಿಲುಕದ ಮತಿ ‘ನಿರಂಕುಶಮತಿ’ ಅಥವಾ ‘ಸ್ವತಂತ್ರಮತಿ’. ಮಾನವ ಸಂಸ್ಕೃತಿಯ ಪ್ರಗತಿಗೆ ಅದೊಂದು ತೇಜಸ್ವಿಯಾದ ತೇಜಿ.

‘ಅನುಭೂತಿ’ಯು ಶ್ರುತಿ ಮತ್ತು ಮತಿಗಳಿಂದಲೂ ಹೆಚ್ಚಾದ, ಅಪ್ರತಿಹತವಾದ ಮತ್ತು ಸ್ವತಃಸಿದ್ಧವಾದ ಪ್ರಮಾಣ. ಏಕೆಂದರೆ ಅಲ್ಲಿ ಸತ್ಯವು ಸ್ವಸಂವೇದ್ಯವಾಗುತ್ತದೆ. ಆದರೂ ಅದರ ವ್ಯಾಪನೆಗೆ ಮಿತಿಯಿದೆ. ಅನುಭವವನ್ನು ಪಡೆದ ವ್ಯಕ್ತಿಗೇನೋ ಆ ಸತ್ಯವು ನಿರ್ವಿವಾದವಾಗುತ್ತದೆ. ಆದರೆ ಇತರರು ಆ ಅನುಭೂತಿಯನ್ನು ಒಪ್ಪಿದರೆ ಒಪ್ಪಬಹುದು; ಬಿಟ್ಟರೆ ಬಿಡಬಹುದು. ಒಂದು ವೇಳೆ ಕೆಲವು ಸರಳ ಹೃದಯಿಗಳು ಆ ಅನುಭೂತಿಯನ್ನು ಒಂದಿನಿತೂ ವಿಮರ್ಶೆ ಮಾಡದೆ, ಪರೀಕ್ಷಿಸದೆ, ಮತಿಯ ಒರೆಗಲ್ಲಿಗೆ ಹಚ್ಚದೆ ಭಕ್ತಿಯಿಂದ ಸ್ವೀಕರಿಸಿದರೆ ಅಂಥವರಿಗೆ ಆ ‘ಅನುಭೂತಿ’ಯೇ ‘ಶ್ರುತಿ’ಯಾಗಿಬಿಡುತ್ತದೆ. ಆದರೆ ಹಾಗೆ ಒಪ್ಪಿಕೊಳ್ಳದ ವಿಚಾರಪ್ರೇಮಿಗಳಾದ ಮತಿವಂತರೂ ಇರುತ್ತಾರೆ. ಅಂಥವರು ‘ಅನುಭೂತಿ’ಯು ‘ಮತಿಗೆ’ ವಿರುದ್ಧವಾಗಿದ್ದರೆ ಅದನ್ನು ತಿರಸ್ಕರಿಸುತ್ತಾರೆ. ವಿರುದ್ಧವಲ್ಲದಿದ್ದರೆ ಒಪ್ಪಿಕೊಳ್ಳುತ್ತಾರೆ. ಆದರೆ ವಾಸ್ತವವಾಗಿ ನಿಜವಾದ ಮತಿಗೆ ನಿಜವಾದ ಅನುಭೂತಿ ವಿರುದ್ಧವಾಗಿರುವುದಿಲ್ಲ. ಅನುಭೂತಿ ಮತಿಗೆ ಪೂರಕವಾಗುತ್ತದೆ. ಅವೆರಡಕ್ಕೂ ಇರುವ ವ್ಯತ್ಯಾಸ ರೂಪಾಂತರವೇ ಹೊರತು ಜಾತ್ಯಂತರವಲ್ಲ. ಕಾಂತಿ ಉಷ್ಣಕ್ಕೆ ವಿರೋಧಿಯಲ್ಲ; ಅವೆರಡಕ್ಕೂ ಇರುವ ಭೇದವೆಂದರೆ ವಿದ್ಯುತ್ಕಣಗಳ ವೇಗ ತಾರತಮ್ಯ ಮಾತ್ರ. ಆದ್ದರಿಂದ ಮತಿಗೆ ಅವಿರುದ್ಧವಾದ ಅನುಭೂತಿ ಶ್ರುತಿಯ ಪಟ್ಟಕ್ಕೇರಲು ಯೋಗ್ಯವಾಗುತ್ತದೆ.

ಈ ತತ್ತ್ವಸಂವಿಧಾನವನ್ನು ಸ್ವಲ್ಪ ಕಷ್ಟಪಟ್ಟು ನಿರಾಲಸ್ಯವಾದ ಮಾನಸಿಕ ಶ್ರಮದಿಂದ ಅರಿಯುವ ವಾಚಕರಿಗೆ ನಮ್ಮ ದೇಶದಲ್ಲಿ ಉಂಟಾದ ಪ್ರಾಚ್ಯ ಪಾಶ್ಚಾತ್ಯ ಸಂಸ್ಕೃತಿಗಳ ಸಂಘರ್ಷಣೆಯೂ, ಪುರಾತನ ನೂತನಗಳಿಗುಂಟಾದ ಹಣಾಹಣಿಯೂ, ಕಟ್ಟಕಡೆಗೆ ಕದನದ ಕೊನೆಯಲ್ಲಿ ಕೌಲಾಗುವಂತೆ ಬಂದೊದಗಿದ ಸಮನ್ವಯ ಸಂದೇಶವೂ ವಿಶದವಾಗಿ ಅರ್ಥವಾಗುತ್ತದೆ. ಪುರಾತನಿಗಳು ಶ್ರುತಿಯನ್ನು ಹಿಡಿದು ನೂತನಿಗಳು ಮತಿಯನ್ನು ಹಿಡಿದು ಹೋರಾಡುತ್ತಿರಲು ಶ್ರುತಿಯ ಭಕ್ತಿಯನ್ನೂ ಮತಿಯ ಯುಕ್ತಿಯನ್ನೂ, ಹೆಣ್ಣು ಗಂಡು ಎರಡು ವಿದ್ಯುಚ್ಛಕ್ತಿಗಳನ್ನೂ ಒಟ್ಟು ಸೇರಿಸುವಂತೆ, ತನ್ನ ಸಾಧನೆಯಲ್ಲಿ ಸಂಗಮಗೈದು ಅನುಭೂತಿಯ ಸಮನ್ವಯಜ್ಯೋತಿಯನ್ನು ಪ್ರಜ್ವಲಿಸುತ್ತಾ ಮಹಾಪುರುಷನೊಬ್ಬನು ಮೂಡಬೇಕಾಯಿತು. ಹಾಗೆ ಆವಿರ್ಭವಿಸಿದ ಪರಮಹಂಸರಲ್ಲಿಗೆ ಶ್ರುತಿಯ ಭಕ್ತರೂ ಮತಿಯ ಭಕ್ತರೂ ಇಬ್ಬರೂ ಬಂದು ತಮ್ಮ ತಮ್ಮ ಅರ್ಧ ಸತ್ಯಗಳನ್ನು ತಿದ್ದಿಕೊಳ್ಳಬೇಕಾಯಿತೆಂಬುದನ್ನು ಶ್ರೀರಾಮಕೃಷ್ಣ ಪರಮಹಂಸರ ಜೀವನಚರಿತ್ರೆಯಲ್ಲಿ ನೋಡಿದ್ದೇವೆ.

ನರೇಂದ್ರನಾಥನ ತಾರುಣ್ಯವು ಮೇಲೆ ವರ್ಣಿಸಿರುವ ರಣರಂಗದ ಮಧ್ಯೆ ಬೆಳಯುತ್ತಾ ಅದರ ನೂತನತೆ, ಅದರ ಉತ್ಸಾಹ, ಅದರ ಪ್ರತಿಭಟನೆ, ಅದರ ಧೂರ್ತತೆ, ಅದರ ಸಾಹಸಪ್ರಿಯತೆ, ಅದರ ಸತ್ಯಾನ್ವೇಷಣೆ, ಅದರ ನಿರ್ವಂಚನೆ, ಅದರ ನಿರಂಕುಶಮತಿ, ಅದರ ಪ್ರಯೋಗಶೀಲತೆ ಇತ್ಯಾದಿ ಗುಣಗಣಗಳೆಲ್ಲವನ್ನೂ ಹೀರಿಕೊಂಡು ತೋಳುತಟ್ಟಿ ಮಲೆಯುವ ಜಗಜಟ್ಟಿಯಾಗುತ್ತಿತ್ತು.

೧೮೭೯ರಲ್ಲಿ ಪ್ರವೇಶಪರೀಕ್ಷೆ ಉತ್ತೀರ್ಣನಾಗಿ ಕಾಲೇಜನ್ನು ಪ್ರವೇಶಿಸಿದಾಗ ನರೇಂದ್ರನಾಥನಿಗೆ ಹದಿನೆಂಟನೆಯ ವರ್ಷವಾಗಿದ್ದಿತು. ಅಲ್ಲಿಯೂ ನಾಯಕವ್ಯಕ್ತಿ ನರೇಂದ್ರನು ಬಾಲಕರ ಕಣ್ಣಾದನು. ವಿದ್ಯಾರ್ಥಿಗಳು ಆತನ ಪ್ರತಿಭೆಗೂ ಸೂಕ್ಷ್ಮ ಬುದ್ಧಿಗೂ ಮರುಳಾದರು. ಅಷ್ಟೇ ಅಲ್ಲದೆ ಆತನ ಮಧುರ ಸಂಗೀತದ ಮೋಹಿನೀ ಶಕ್ತಿಯೂ ಸಬಲದೃಢ ದೀರ್ಘ ದೇಹದ ಸ್ನಿಗ್ಧ ಲಾವಣ್ಯವೂ ಸಹಪಾಠಿಗಳನ್ನು ಆತನೆಡೆಗೆ ಎಳೆತಂದುವು. ಆತನ ಅಸಾಧಾರಣ ದೈಹಿಕ ಸೌಂದರ್ಯವನ್ನೂ ಸಮುಜ್ವಲ ಮರ್ಮಭೇದಿಯಾದ ದೃಷ್ಟಿಪೂರ್ಣ ವಿಶಾಲ ನೇತ್ರಗಳನ್ನೂ ನೋಡಿ ಸಹಾಧ್ಯಾಯಿಗಳು ಮುಗ್ಧರಾಗುತ್ತಿದ್ದರು ಎಂಬುದನ್ನು ಕಂಡವರನೇಕರು ಈಗಲೂ ಹೇಳುತ್ತಾರೆ. ನರೇಂದ್ರನ ವ್ಯಂಗ್ಯ ವಾಕ್ಯಗಳಿಂದ ಅನೇಕರು ಜರ್ಜರಿತ ಹೃದಯರಾಗುತ್ತಿದ್ದರಂತೆ. ತಪ್ಪು ತೋರಿದರೆ ಆತನು ಯಾರನ್ನೂ ಉಳಿಸುತ್ತಿರಲಿಲ್ಲ. ಇತರರನ್ನು ಪರಿಹಾಸ್ಯಕ್ಕೆ ಈಡುಮಾಡುವಾಗ ಆತನಲ್ಲಿ ಮಾತ್ಸರ್ಯ ಮೊದಲಾದ ನೀಚಭಾವಗಳು ಇರುತ್ತಿರಲಿಲ್ಲ. ತಮ್ಮ ತಪ್ಪನ್ನು ಹೊರಗೆಡಹಿದುದಕ್ಕಾಗಿ ಯಾರಾದರೂ ತನ್ನನ್ನು ನಿಂದಿಸಿದರೆ ಅಥವಾ ಇಲ್ಲದ ಸಲ್ಲದ ದೋಷಾರೋಪಣೆ ಮಾಡಿದರೆ ಅದನ್ನು ಗಣನೆಗೆ ತರುತ್ತಿರಲಿಲ್ಲ. ಅಪರಿಚಿತರನ್ನು ಎವೆಯಿಕ್ಕದೆ ನೋಡುವುದು, ಮುಗುಳ್ನಗೆ ನಗುವುದು, ಅವರನ್ನೇ ನೋಡುತ್ತಿದ್ದು ಅವರನ್ನು ತನ್ನ ಕಡೆಗೆ ತಿರುಗಿಸುವುದು, ಕೋಮಲವಾದ ಅಂಗಭಂಗಿಯಿಂದ ಮೆರೆಯುವುದು, ತರಳೆಯರಂತೆ ಬಳುಕಿ ನಡೆಯುವುದು ಮೊದಲಾದುವುಗಳನ್ನು ಕಂಡಲ್ಲಿ ಖಂಡಿಸದೆ ಇರುತ್ತಿರಲಿಲ್ಲ. ನರೇಂದ್ರನಲ್ಲಿ ಸಹಪಾಠಿಗಳಿಗೆ ಒಂದು ವಿಧವಾದ ಗೌರವವಿತ್ತು. ಕುಸ್ತಿ, ಕ್ರಿಕೆಟ್ಟು, ಚೆಂಡಾಟ ಮೊದಲಾದುವುಗಳಲ್ಲಿ ಮುಂದಾಳಾಗಿದ್ದ ನರೇಂದ್ರನು ಮಾನಸಿಕ ದೈಹಿಕ ಶಕ್ತಿಗಳಲ್ಲಿ ಯಾರಿಗೇನು ಕಡಿಮೆಯಾಗಿರಲಿಲ್ಲ.

ಗಂಭೀರ ಪ್ರಕೃತಿಯುಳ್ಳವನಾಗಿದ್ದರೂ ಎಷ್ಟೋ ಸಾರಿ ಹಾಸ್ಯ ಪರಿಹಾಸ್ಯಗಳಲ್ಲಿ ತೊಡಗುತ್ತಿದ್ದನು. ಮನಸ್ಸು ಬಂದರೆ ಅವನ ಲೇವಡಿಯ ಮುಂದೆ ಯಾರ ಕೈಯೂ ಸಾಗುತ್ತಿರಲಿಲ್ಲ. ತೀಕ್ಷ್ಣ ಬುದ್ಧಿಯುಳ್ಳ ಆತನು ಸ್ವಲ್ಪ ಕಾಲದಲ್ಲಿಯೆ ನಿರ್ದಿಷ್ಟ ಪಾಠಗಳನ್ನು ಗ್ರಹಿಸಿಬಿಡುತ್ತಿದ್ದನು. ಉಳಿದ ಕಾಲವನ್ನು ಸಂಗೀತ ಹಾಸ್ಯ ಪರಿಹಾಸ್ಯಗಳಲ್ಲಿ ಕಳೆಯುತ್ತಿದ್ದನು. ನರೇಂದ್ರನ ಸಂಗಮವೆಂದರೆ ವಿದ್ಯಾರ್ಥಿಗಳಿಗೊಂದು ಹಬ್ಬವಾಗುತ್ತಿತ್ತು.

ಆದರೆ ಆತನ ಮಿತ್ರರಿಗೆ ಅಗೋಚರವಾಗಿ, ಹಾಸ್ಯಪ್ರಮೋದಗಳ ಹಿಂದೆ ಆತ್ಮದ ಅಂತರಾಳದಲ್ಲಿ, ಸಿಡಿಲು ಮಿಂಚು ಮುಗಿಲು ಕವಿದ ಪ್ರಲಯ ಸನ್ನಾಹವಾಗುತ್ತಿತ್ತು.

ಚಲನೆಯೆ ಚೇತನದ ಚಿಹ್ನೆ. ನಿರಂತರವಾಗಿ ಎಚ್ಚತ್ತಿರುವುದೆ ನಿಜವಾದ ಎಚ್ಚರಿಕೆಯ ಕುರುಹು. ಬುದ್ಧಿ ಸದಾ ನೂತನ ವಿಚಾರಗಳಲ್ಲಿ ತೊಡಗುತ್ತಿರುವುದೆ ಆತ್ಮಪ್ರಗತಿಯ ಪ್ರಥಮ ಸೋಪಾನ. ವಿಚಾರವಿಲ್ಲದ ಬುದ್ಧಿ ಮೃತಬುದ್ಧಿಯೇ ಸರಿ. ಯಾವ ತರುಣನ ಬುದ್ಧಿ ತತ್ತ್ವವಿಚಾರಗಳಲ್ಲಿ ತೊಡಗಿ, ಗಮನವು ಜೀವನದ ಚರಮೋದ್ದೇಶದ ಕಡೆಗೆ ತಿರುಗುವುದೋ ಆತನ ಹೃದಯದ ಐಶ್ವರ್ಯ ಬೆಳೆದು ನಳನಳಿಸುತ್ತದೆ. ತರುಣರು ಜೀವನದ ಸಮಸ್ಯೆಗಳನ್ನು ಧೈರ್ಯವಾಗಿ ಸಂಧಿಸಬೇಕು. ಹೃದಯದ ಅಂತರಾಳದ ನಿಗೂಢ ಪ್ರಶ್ನೆಗಳಿಗೆ ತಕ್ಕ ಉತ್ತರಗಳನ್ನು ಸಾಹಸದಿಂದ ಹುಡುಕಬೇಕು. ಸೋಲಿಗೆ ಅಂಜದೆ ವಿಚಾರಮಾರ್ಗದಲ್ಲಿ ಮುಂದುವರಿಯಬೇಕು. ಜ್ಞಾನವೃಕ್ಷವನ್ನು ಹಿಡಿದು ಚೆನ್ನಾಗಿ ಅಲುಗಾಡಿಸಬೇಕು. ಅದರಲ್ಲಿ ನಿಷ್ಪ್ರಯೋಜಕವಾದ ಶುಷ್ಕ ಶಾಖೆಗಳಿದ್ದರೆ, ಹಣ್ಣೆಲೆಗಳಿದ್ದರೆ ಕೆಳಗುದುರಿ ಬೀಳಲಿ. ಬಲವಾದ ಕೊಂಬೆಗಳು ಹಸುರೆಲೆಗಳು ಹೊಸ ಹೂವುಗಳು ಚೆನ್ನಾಗಿ ಬದುಕಿ ಬಾಳಲಿ. ಸತ್ಯವು ಕೆಣಕಿದಂತೆಲ್ಲ ವಿಶಾಲವಾಗುವುದು, ಕೆಣಕಿದಂತೆಲ್ಲ ತಳತಳಿಸುವುದು, ಹೊಗೆಯಾಡುವ ಬೆಂಕಿಯಂತೆ, ಬೂದಿಮುಚ್ಚಿದ ಕೆಂಡದಂತೆ.

ನರೇಂದ್ರನಾಥನ ವಿಚಾರಶಕ್ತಿ ವಿಪುಲವಾದಂತೆಲ್ಲ ಆತನ ಸಂದೇಹಗಳೂ ಹೆಚ್ಚಿದುವು. ಪ್ರಶ್ನೆಗಳೂ ಸಮಸ್ಯೆಗಳೂ ಒಂದಾದ ಮೇಲೊಂದು ಬಂದು ಆತನ ಚಿತ್ತವನ್ನು ಮುತ್ತಿದುವು. ಹೊಸ ಹೊಸ ದರ್ಶನಶಾಸ್ತ್ರಗಳನ್ನು ಓದಿದಂತೆಲ್ಲ ಹಳೆಯ ಕುರುಡು ನಂಬಿಕೆಗಳು ಸಿಡಿದೊಡೆದು ಹಾರಿಹೋದುವು. ಪಾಶ್ಚಾತ್ಯ ವಿಜ್ಞಾನ ತತ್ತ್ವಶಾಸ್ತ್ರಗಳ ಪ್ರಭಾವದಿಂದ ಆತನ ಹೃದಯದಲ್ಲಿ ಸಂಶಯಗಳ ತುಮುಲಯುದ್ಧ ಆರಂಭವಾಯಿತು. ಜನ್ಮತಃ ಆತನಲ್ಲಿದ್ದ ಸಂಸ್ಕಾರ ಮತ್ತು ವಿಶ್ವಾಸಗಳು ನಷ್ಟವಾದುವು. ಆತ್ಮಜೀವನ ನೂತನ ಜ್ಞಾನದ ಸಂದಿಗ್ಧತೆಯ ಆಘಾತದಿಂದ ತತ್ತರಿಸಿತು. ಡೇಕಾರ್ಟ್‌ನ ಅಹಂವಾದ, ಹ್ಯೂಮ್‌ನ ನಾಸ್ತಿಕ ನಿರೀಶ್ವರವಾದ, ಸ್ಪೆನ್ಸರದ ಅಜ್ಞೇಯವಾದ ಇತ್ಯಾದಿ ವಿಭಿನ್ನ ದರ್ಶನಗಳ ಚಿಂತಾರಣ್ಯದ ನಡುವೆ ಬಗೆ ಬಟ್ಟೆಗೆಟ್ಟ ನರೇಂದ್ರನು ಸತ್ಯದ ಲಾಭಕ್ಕಾಗಿ ವ್ಯಾಕುಲಚಿತ್ತನಾದನು.

ಪಂಚೇಂದ್ರಿಯ ಗ್ರಾಹ್ಯವಾದ ಜಡಜಗತ್ತಿನ ಅಂತರಾಳದಲ್ಲಿ ಸೂತ್ರಧಾರನಾದ ಶಕ್ತಿಪುರುಷನೊಬ್ಬನು ಇದ್ದಾನೆಯೆ? ಈ ಮಾನವ ಜೀವನದ ಉದ್ದೇಶವೇನು? ನಾವೇಕೆ ಬಂದೆವು? ಎಲ್ಲಿಗೆ ಹೋಗುವೆವು? ಈ ಗಮನಾಗಮನವಾದರೂ ಏಕೆ? ಇದಕ್ಕೆ ಆದಿಯೆಲ್ಲಿ? ಅಂತ್ಯವೆಲ್ಲಿ? ಇವುಗಳನ್ನು ತಿಳಿಯಲಳವೇ? ಅನುಭವಿಸಲಳವೇ? ಇವೇ ಮೊದಲಾದ ಅತೀಂದ್ರಿಯ ಲೋಕದ ರಹಸ್ಯಪೂರ್ಣವಾದ ಸಮಸ್ಯೆಗಳು ಒಂದಾದ ಮೇಲೊಂದು ಮೂಡತೊಡಗಿದುವು. ತತ್ತ್ವಶಾಸ್ತ್ರಗಳ ದಂಡಕಾರಣ್ಯದಲ್ಲಿ ತೊಳಲಿ ತೊಳಲಿ ಬಳಲಿ ಕಡೆಗೆ ನರೇಂದ್ರನು ವಿಜ್ಞಾನ ಮತ್ತು ತತ್ತ್ವಶಾಸ್ತ್ರಗಳು ಬುದ್ಧಿಯನ್ನು ಚುರುಕು ಮಾಡುತ್ತವೆಯೇ ಹೊರತು ಸಿದ್ಧಿಯನ್ನು ದಾನ ಮಾಡಲಾರವು ಎಂಬ ನಿಜವನ್ನು ತಿಳಿದನು. ಆದ್ದರಿಂದ ಸತ್ಯಾನ್ವೇಷಣೆಗಾಗಿ ಆಗಿನ ಕಾಲದ ಪ್ರಸಿದ್ಧ ಧರ್ಮಪ್ರಚಾರಕರ ಬಳಿಗೆ ಹೋಗತೊಡಗಿದನು. ಸ್ವಲ್ಪ ದಿನಗಳಲ್ಲಿಯೆ ‘ಬ್ರಾಹ್ಮಸಮಾಜ’ವನ್ನೂ ಸೇರಿದನು. ಆದರೆ ಧರ್ಮಪ್ರಚಾರಕರ ವಾದವಿವಾದಗಳಿಂದ ಆತನ ಎದೆಗೆ ಯಾವ ಬೆಳಕೂ ಬರಲಿಲ್ಲ. ‘ಈಶ್ವರನಿರುವುದು ನಿಜವೇ? ಆತನಿರುವುದು ಸತ್ಯವಾದರೆ ನಾನವನನ್ನು ನೋಡಲೇಬೇಕು’ ಎಂಬ ಚಿಂತೆ ಜ್ವಾಲೆಯೋಪಾದಿಯಲ್ಲಿ ಆತನ ಹೃದಯವನ್ನು ಆಕ್ರಮಿಸಿತು.

ಪ್ರಚಂಡ ಈಶ್ವರ ದರ್ಶನಾಕಾಂಕ್ಷೆಯಿಂದ ಪೀಡಿತನಾದ ನರೇಂದ್ರನು ಒಂದು ದಿನ ಮಹರ್ಷಿ ದೇವೇಂದ್ರನಾಥ ಠಾಕೂರರ ಭವನಕ್ಕೆ ಹೋದನು. ಮಹರ್ಷಿಗಳು ತಮ್ಮ ಆಫೀಸು ಕೋಣೆಯಲ್ಲಿ ಕುಳಿತಿದ್ದರು. ನರೇಂದ್ರನು ಹಿಂದು ಮುಂದು ನೋಡದೆ ಬಾಗಿಲನ್ನು ನೂಕಿ ಒಳಹೊಕ್ಕು ಋಷಿವರ್ಯರ ಮುಂದೆ ನಿಂತನು. ಧ್ಯಾನದಲ್ಲಿದ್ದ ಮಹರ್ಷಿಗಳು ಬೆಚ್ಚಿಬಿದ್ದು ಮೈತಿಳಿದು ಮಾತನಾಡುವುದಕ್ಕೆ ಮುನ್ನವೆ ನರೇಂದ್ರನು “ಮಹಾಶಯಾ, ನೀವು ದೇವರನ್ನು ನೋಡಿದ್ದೀರಾ?” ಎಂದು ದಿಟ್ಟದನಿಯಿಂದ ಪ್ರಶ್ನೆ ಮಾಡಿಬಿಟ್ಟನು. ಮಹರ್ಷಿಗಳು ಬಾಲಕನನ್ನು ಎವೆಯಿಕ್ಕದೆ ನೋಡಿದರು. ತೇಜಸ್ವಿಯಾದ ನರೇಂದ್ರನ ವದನ ಅರ್ಥಗರ್ಭಿತವಾಗಿ ಜಾಜ್ವಲ್ಯಮಾನವಾಗಿತ್ತು. ಕಣ್ಣುಗಳು ಮಿಂಚುತ್ತಿದ್ದುವು. ತೆರೆದಿದ್ದ ಬಾಯನ್ನು ಮುಚ್ಚಿರಲಿಲ್ಲ. ಮಹರ್ಷಿಗಳು ಪ್ರಶ್ನೆಯ ಅಗಾಧತೆಗೂ ವಾಣಿಯ ಗಂಭೀರತೆಗೂ ವಿಸ್ಮಯಸ್ತಂಭಿತರಾದರು. ಅವರ ಎದೆ ಅಳಿಮಸಗಿದಂಬುಧಿಯಂತೆ ಅಲ್ಲೋಲಕಲ್ಲೋಲವಾಯಿತು. ಒಂದು ಸಲ ಪ್ರತ್ಯುತ್ತರವೀಯಲು ಯತ್ನಿಸಿದರು; ಆಗಲಿಲ್ಲ. ಎರಡನೆಯ ಸಲ, ಮೂರನೆಯ ಸಲ, ಆದರೂ ಆಗಲಿಲ್ಲ. ಮಾತುಗಳು ಸೋತುಹೋದುವು. ಕೊನೆಗೆ ನರೇಂದ್ರನ ಉಜ್ವಲ ವಿಶಾಲ ನೇತ್ರದ್ವಯವನ್ನು ಅನಿಮಿಷ ನಯನರಾಗಿ ಈಕ್ಷಿಸುತ್ತ ಮಹರ್ಷಿಗಳು “ವತ್ಸ, ನಿನಗೆ ಯೋಗಿಯ ಕಣ್ಣುಗಳಿವೆ!” ಎಂದರು.

ನರೇಂದ್ರನು ಹತಾಶನಾದನು. ಯಾರೂ ಸತ್ಯವನ್ನು ತಿಳುಹಲಾರದೆ ಹೋದರು. ಧರ್ಮಪ್ರಚಾರಕರ ನಾನಾ ಪ್ರಕಾರವಾದ ಅಸಂಬದ್ಧ ಪ್ರಲಾಪಗಳಿಂದಲೂ ಚರ್ವಿತಚರ್ವಣಲಬ್ಧ ಸಾಮಾನ್ಯ ಜ್ಞಾನದಿಂದಲೂ ನರೇಂದ್ರನ ಆಧ್ಯಾತ್ಮಿಕ ಪಿಪಾಸೆ ತಣಿಯಲಿಲ್ಲ. ಇನ್ನೂ ದಿನದಿನವೂ ಅದು ವರ್ಧಿತವಾಗುತ್ತ ಹೋಯಿತು. ಬ್ರಾಹ್ಮ ಸಮಾಜಕ್ಕೇನೊ ಹೋಗುವುದನ್ನು ಬಿಡಲಿಲ್ಲ. ಪ್ರತಿ ಭಾನುವಾರವೂ ಸಮಾಜದಲ್ಲಿ ಜರುಗುತ್ತಿದ್ದ ಉಪಾಸನೆಗಳಲ್ಲಿ ನರೇಂದ್ರನ ಮಧುರಕಂಠದಿಂದ ನೆರೆದವರು ಹರ್ಷಿತರಾಗುತ್ತಿದ್ದರು.

ಆಧ್ಯಾತ್ಮಿಕ ತೃಷ್ಣೆ ಹೆಚ್ಚಿದಂತೆಲ್ಲ ಆತನ ಅನ್ವೇಷಣೆಯೂ ಹೆಚ್ಚಿತು. ಅನೇಕ ವ್ಯಕ್ತಿಗಳನ್ನು ಸಂದರ್ಶಿಸಿ ಪ್ರಶ್ನೆ ಮಾಡಿದನು. ಒಬ್ಬೊಬ್ಬರು ಒಂದೊಂದು ರೀತಿಯಾಗಿ ಹೇಳಿಬಿಟ್ಟರು. ಧರ್ಮನಟರಲ್ಲಿ ನರೇಂದ್ರನಿಗೆ ನಂಬುಗೆಗೆಟ್ಟಿತು. ಅನೇಕ ಗ್ರಂಥಗಳಲ್ಲಿ ಸತ್ಯವನ್ನು ಹುಡುಕಿದನು. ಭಗವದ್ಗೀತೆಯನ್ನು ಓದಿದನು. ಓದುವಾಗಲೇನೋ ಆತನ ಮೈಯಲ್ಲಿ ಮಿಂಚಿನ ಹೊನಲು ಹರಿಯುತ್ತಿತ್ತು. ಆದರೆ ಎದೆ ಶಾಂತವಾಗಲಿಲ್ಲ. ಸನಾತನ ಧರ್ಮ, ವೇದಗಳು, ಉಪನಿಷತ್ತುಗಳು, ಷಡ್ದರ್ಶನಗಳು, ಕಾಂಟ್, ಹೇಗಲ್, ಅರಿಸ್ಟಾಟಲ್, ಪ್ಲೇಟೋ, ವ್ಯಾಸ, ವಾಲ್ಮೀಕಿ, ವರ್ಡ್ಸ್‌ವರ್ತ್, ಷೆಲ್ಲಿ ಎಲ್ಲವೂ ಪರ್ಯಾಯಕ್ರಮದಿಂದ ಮುಗಿದುವು. ಏನೂ ಪ್ರಯೋಜನವಾಗಲಿಲ್ಲ.

ಇನ್ನೇನು ಮಾಡುವುದು? ದಾರುಣವಾದ ಹೃದಯದ ತೃಷ್ಣೆಯನ್ನು ತವಿಸುವುದೆಂತು? “ಸಂಶಯಾತ್ಮಾ ವಿನಶ್ಯತಿ.” ಸಂದೇಹಗಳನ್ನು ಛಿದ್ರಿಸುವುದೆಂತು? ಛಿದ್ರಿಸುವರಾರು? ಯಾರೂ ಇಲ್ಲವೆ?

ಜಗಜ್ಜೀವನದ ಅನಂತ ಕಾಲಪಥದಲ್ಲಿ ಮಹಾಪುರುಷರು ಜ್ಯೋತಿರ್ಧಾರಿಗಳಾಗಿ ಅಲ್ಲಲ್ಲಿ ನಿಂತಿದ್ದಾರೆ. ಅವರ ಜೀವನ ಚರಿತ್ರೆಗಳು ನಿರಾಶೆಯ ಕತ್ತಲೆಯಲ್ಲಿ ಆಶಾಕಿರಣಗಳಾಗುತ್ತವೆ. ನರೇಂದ್ರನಲ್ಲಿ ಅಂತಹ ಒಬ್ಬೊಬ್ಬರ ಜೀವನ ಚರಿತ್ರೆಗಳನ್ನು ಓದಿದಂತೆಲ್ಲ ಒಂದೊಂದು ಆದರ್ಶ ಉದ್ದೀಪನವಾಗುತ್ತಿತ್ತು. ಅವುಗಳಲ್ಲಿ ಎರಡು ಆದರ್ಶಗಳಂತೂ ಅವನ ಆತ್ಮವನ್ನು ಪ್ರಬಲವಾಗಿ ಆಕ್ರಮಿಸಿ ಎಳೆದಾಡತೊಡಗಿದ್ದುವು. ಒಂದು ಚಿತ್ರದಲ್ಲಿ ನರೇಂದ್ರನು ಸಂಸಾರಿ, ಭೋಗಿ; ಪ್ರಪಂಚದ ಸುಖಗಳನ್ನೂ ಸಂಪತ್ತನ್ನೂ ವಿಪುಲವಾಗಿ ಸಂಪಾದಿಸಿ ಎಲ್ಲರ ವಿಶ್ವಾಸಕ್ಕೂ ಗೌರವಕ್ಕೂ ಪಾತ್ರನಾಗಿ ದೊಡ್ಡಮನುಷ್ಯನಾಗಿದ್ದಾನೆ. ಮತ್ತೊಂದು ಚಿತ್ರದಲ್ಲಿ ಆತನು ಸಂನ್ಯಾಸಿ, ತ್ಯಾಗಿ; ಸುಖ ಸಂಪತ್ತುಗಳನ್ನೆಲ್ಲ ತಿರಸ್ಕರಿಸಿ ಕಾವಿಯುಟ್ಟು, ಆತ್ಮಸಾಕ್ಷಾತ್ಕಾರದ ಮಹಾಸಾಧನೆಯೊಂದರಲ್ಲಿಯೇ ಮಗ್ನನಾಗಿ, ಅಜ್ಞಾತತೆಯ ಮತ್ತು ಅನಾಮಧೇಯತೆಯ ವಿರಾಡಭಿಮಾನದ ಮಹಾನಂದವನ್ನು ಅನುಭವಿಸುತ್ತಿದ್ದಾನೆ. ಅನಿಶ್ಚಯತೆಯ ತೂಗುಯ್ಯಾಲೆಯಲ್ಲಿ ನರೇಂದ್ರನು ತೂಗಿ ತೂಗಿ ಬಳಲಿದನು.

ಪ್ರತಿ ರಾತ್ರಿಯೂ ಜಗತ್ತೆಲ್ಲವೂ ನೀರವವಾಗಿರುವಾಗ ತನ್ನ ಹಾಸಗೆಯ ಮೇಲೆ ಕೈಮುಗಿದು ಕುಳಿತು ಮಾರ್ಗದರ್ಶನಕ್ಕಾಗಿ ಭಗವಂತನನ್ನು ತೀವ್ರ ವೇಧೆಯಿಂದ ಪ್ರಾರ್ಥಿಸಲಾರಂಭಿಸಿದನು! “ದಾರಿ ತೋರೆನಗೆ, ದೇವದೇವ, ನೂರಾರು ಹಾದಿಗಳು ಸೇರುವೆಡೆ ಕತ್ತಲೆಯಲ್ಲಿ ಕಣ್ಣು ಕಾಣದೆ ನಿಂತು ಭೀತನಾಗಿದ್ದೇನೆ. ಲೋಕದ ಪ್ರಲೋಭನಗಳೂ ಹೃದಯದ ಅಶಾಂತಿಯೂ ದಿನ ದಿನವೂ ಹೆಚ್ಚಾಗುತ್ತಿವೆ. ನೂರಾರು ಪರಸ್ಪರ ವಿರುದ್ಧ ಬೋಧನೆಯಿಂದ ಮನಸ್ಸು ಕದಡಿಹೋಗಿದೆ. ಶಾಂತಿ ಬರುವ ಬದಲು ಮತೀಯ ಭ್ರಾಂತಿ ಹೆಚ್ಚುತ್ತಿದೆ. ಹಾಳಾಗುವ ಮೊದಲು, ಹುಡಿಯಲ್ಲಿ ಹೊರಳಿ ಬೀಳುವ ಮೊದಲು ರಕ್ಷಿಸೆನ್ನನು, ದೇವದೇವ!”

ಒಂದು ದಿನ ಕಾಲೇಜಿನಲ್ಲಿ ಇಂಗ್ಲೀಷು ಪಾಠ ನಡೆಯುತ್ತಿತ್ತು. ಅಧ್ಯಾಪಕರು ಆಂಗ್ಲೇಯ ಕವಿಗಳಲ್ಲಿ ಋಷಿಸದೃಶನಾದ ವರ್ಡ್ಸ್‌ವರ್ತ್ ಮಹಾಕವಿಯ ಕಾವ್ಯವನ್ನು ಪಾಠ ಹೇಳುತ್ತಿದ್ದರು. ಋಷಿಕವಿ ತನಗುಂಟಾಗಿದ್ದ ಭಾವಸಮಾಧ್ಯವಸ್ಥೆಯನ್ನು ವರ್ಣಿಸುವ ಪಂಕ್ತಿಗಳನ್ನು ವಿವರಿಸುವ ಸಮಯದಲ್ಲಿ ಅಧ್ಯಾಪಕರು ಆ ಮಹಾವಸ್ಥೆಯ ಅನಿರ್ವಚನೀಯತೆಯನ್ನು ಹೇಳಿ, ಅಂತಹ ಅವಸ್ಥೆಯನ್ನು ನೋಡಬೇಕಾದರೆ ದಕ್ಷಿಣೇಶ್ವರದಲ್ಲಿರುವ ಪರಮಹಂಸ ಶ್ರೀರಾಮಕೃಷ್ಣರ ಬಳಿಗೆ ಹೋದರೆ ಚೆನ್ನಾಗಿ ವಿಶದವಾಗುತ್ತದೆ ಎಂದು ವ್ಯಾಖ್ಯಾನ ಮಾಡಿದರು.

[1] ನರೇಂದ್ರನಾಥನು ಪರಮಹಂಸರ ಹೆಸರನ್ನು ಕೇಳಿದುದು ಅದೇ ಮೊತ್ತಮೊದಲು. ಐರೋಪ್ಯ ಅಧ್ಯಾಪಕರ ಬಾಯಿಂದ ಬಂದ ಈ ಮಾತುಗಳು ಆತನ ಚಿತ್ತದಲ್ಲಿ ಚಿರಮುದ್ರಿತವಾದುವು.

ಆತನ ಹೃದಯದಲ್ಲಿ ಭಕ್ತಿ ಮತ್ತು ಸಂಶಯಗಳ ಪ್ರಚಂಡ ತುಮುಲ ಯುದ್ಧಕ್ಕೆ ಆರಂಭವಾಗಿತ್ತು. ಧರ್ಮಪ್ರಚಾರಕರ ಶುಷ್ಕವಾಕ್ಯಗಳು ಆತನ ಬೆಂದೆದೆಯನ್ನು ತಣಿಸಲಾರದೆ ಹೋಗಿದ್ದುವು. ಆದ್ದರಿಂದಲೇ ಆತನು ಭಗವಾನ್ ಶ್ರೀರಾಮಕೃಷ್ಣರ ಬಳಿಗೆ ಹೋಗಲು ನಿರ್ಧರಿಸಿದನು. ಆದರೆ ಪರೀಕ್ಷೆ ಬಳಿ ಸಾರಿ ಬಂದುದರಿಂದ ಕೂಡಲೆ ಅಲ್ಲಿಗೆ ಹೋಗಲು ಆಗಲಿಲ್ಲ.

ಈ ಮಧ್ಯೆ ೧೮೮೧ನೆಯ ನವೆಂಬರು ತಿಂಗಳಲ್ಲಿ ಒಂದು ಸಂಗತಿ ಜರುಗಿತು. ಕಲ್ಕತ್ತಾ ನಗರದ ಸಿಮ್ಲಾಪಳ್ಳಿಯಲ್ಲಿ ವಾಸಿಸುತ್ತಿದ್ದ ಸುರೇಂದ್ರನಾಥಮಿತ್ರನು ತನ್ನ ಮನೆಯಲ್ಲಿ ಜರುಗಲಿದ್ದ ಯಾವುದೊ ಒಂದು ಉತ್ಸವಕ್ಕೆ ಶ್ರೀರಾಮಕೃಷ್ಣರನ್ನು ಆಹ್ವಾನಿಸಿದ್ದನು. ಆ ದಿನ ಉತ್ಸವಕ್ಕೆ ಹಾಡಲು ಯಾರೂ ದೊರಕದಿರಲು ತನ್ನ ಬಂಧುವೂ ನೆರೆಯವನೂ ಆದ ನರೇಂದ್ರನಾಥನನ್ನು ಸಂಗೀತಕ್ಕಾಗಿ ಕರೆತಂದನು. ನರೇಂದ್ರನ ಅಮರವಾಣಿಯ ಮಧುರ ವೀಚಿಗಳು ಅಲ್ಲಿ ನೆರೆದಿದ್ದವರೆಲ್ಲರನ್ನೂ, ವಿಶೇಷವಾಗಿ ಪರಮಹಂಸರನ್ನು, ಆನಂದಾಂಬುಧಿಯಲ್ಲಿ ಓಲಾಡಿಸಿದುವು. ಗುರುದೇವನು ತರುಣನನ್ನು ಮೇಲಿಂದ ಮೇಲೆ ಹೊಗಳಿ ದಕ್ಷಿಣೇಶ್ವರಕ್ಕೆ ಒಂದು ದಿನ ಬಂದು ಹೋಗುವಂತೆ ಆತನನ್ನು ಆಹ್ವಾನಿಸಿದರು. ನೆರೆತ ನವಿರಿನ ಸನಾತನ ಪ್ರಾಚೀನವು ಸಿರಿಜವ್ವನದ ನೂತನ ಅರ್ವಾಚೀನವನ್ನು ಭವತಾರಿಣಿಯ ಪ್ರಶಾಂತ ಮಂದಿರದಲ್ಲಿ ಸಾಧಿಸಲು ತನ್ನೆಡೆಗೆ ಆಹ್ವಾನಿಸಿತು: ದಿವ್ಯ ಆಹ್ವಾನ!

* * *[1] ವರ್ಡ್ಸ್‌ವರ್ತ್ ಮಹಾಕವಿಯಲ್ಲಿ ವಿವೇಕಾನಂದರಿಗೆ ಪರಮಾದರವಿದ್ದಿತಂತೆ. ಹಾಗೆಯೆ ನೆಪೋಲಿಯನ್ ಮಹಾಯೋಧನನ್ನೂ ಬಹಳವಾಗಿ ಹೊಗಳುತ್ತಿದ್ದರಂತೆ.