ಪ್ರತಿಯೊಬ್ಬ ಮಹಾಪುರುಷನ ಜೀವನದಲ್ಲಿಯೂ – ಬಹುಶಃ ಸಾಮಾನ್ಯನ ಜೀವನದಲ್ಲಿಯೂ – ಒಂದು ಸಂಧಿಕಾಲ ಬರುತ್ತದೆ. ಚಿಕ್ಕಂದಿನಲ್ಲಿ ತಂದೆತಾಯಿಗಳಿಂದಲೂ ಇತರರಿಂದಲೂ ವಿಮರ್ಶೆಯಿಲ್ಲದೆ ವಿಚಾರವಿಲ್ಲದೆ ಸಂಶಯವಿಲ್ಲದೆ ಸ್ವೀಕರಿಸಿದ ಭಾವನೆ, ಆಲೋಚನೆ, ಶ್ರದ್ಧೆ, ಕಥೆ, ನಂಬುಗೆ ಇತ್ಯಾದಿಗಳ ‘ಶ್ರುತಿ’ಗೂ ತರುವಾಯ ತಾರುಣ್ಯದಲ್ಲಿ ಬುದ್ಧಿ ಪ್ರಬುದ್ಧವಾದ ಮೇಲೆ ಮೂಡುವ ವಿಮರ್ಶೆಯ ವಿಚಾರದ ಸಂಶಯದ ಪ್ರತಿಭಟನೆಯ ‘ಮತಿ’ಗೂ ಗದಾಯುದ್ಧವಾಗುವ ಕ್ರಾಂತಿಕಾಲದಿಂದ ಬುದ್ಧಿಯಿರುವವರು ಯಾರೂ ತಪ್ಪಿಸಿಕೊಳ್ಳಲಾರರು. ಅಂತಹ ಮಾನಸಿಕ ಕ್ರಾಂತಿ ಹೊಸಬಾಳಿಗೆ ಕಾರಣವಾಗುತ್ತದೆ. ಹಾಗೆ ಎರಡನೆಯ ಸಾರಿ ಹೊಸತಾಗಿ ಹುಟ್ಟಿದವರೆಲ್ಲರೂ ನಿಜವಾಗಿ ದ್ವಿಜರಾಗುತ್ತಾರೆ.

ವಸಂತ ಸಮಯದಲ್ಲಿ ಸಸ್ಯಪ್ರಪಂಚದಲ್ಲಿ ನವಚೇತನ ತೋರುವಂತೆ ಯೌವನೋದಯದಲ್ಲಿ ತಾರುಣ್ಯವು ಅನಂತವಿರಹದಿಂದ, ಅನಂತಾಕಾಂಕ್ಷೆಯಿಂದ, ಅನಂತಸಾಮರ್ಥ್ಯದ ಶ್ರದ್ಧೆಯಿಂದ ಉಜ್ವಲವಾಗಿ ಅಸೀಮ ಸಾಹಸೋನ್ಮುಖವಾಗುತ್ತದೆ. ಹೊಸದಾಗಿ ಕೋಡುಮೂಡುತ್ತಿರುವ ಎಳೆಯ ಗೂಳಿ ತನ್ನ ಜೊತೆಯ ಗೂಳಿಗಳನ್ನೂ ಹುತ್ತವನ್ನೂ ಮರವನ್ನೂ ಕಡೆಗೆ ಗಾಳಿಯನ್ನೂ ಕೂಡ ತಿವಿಯುವಂತೆ ಯುವಕನು ಹೊಸದಾಗಿ ಹೊರದೋರುವ ತನ್ನ ಮತಿಯ ನಖಗಳಿಂದ ಹಳೆಯ ನಂಬುಗೆಗಳನ್ನು ಪರಚುತ್ತಾನೆ; ಹಳೆಯ ವಿಗ್ರಹಗಳ ಹೊಟ್ಟೆಯನ್ನು ಸೀಳುತ್ತಾನೆ; ಹಳೆಯ ಶ್ರುತಿಗಳನ್ನು ಕೆಣಕಿ ಕೆರಳಿಸಿ ತಲೆ ಬಿರಿಯುವಂತೆ ಅಪ್ಪಳಿಸುತ್ತಾನೆ! ಪರಿಣಾಮವಾಗಿ ಟೊಳ್ಳುಗುಳ್ಳೆಗಳೆಲ್ಲ ಒಡೆದುಹೋಗುತ್ತವೆ; ಗಟ್ಟಿ ಮುತ್ತುಗಳು ಉಳಿದುಕೊಳ್ಳುತ್ತವೆ.

ನರೇಂದ್ರನ ಜೀವನದಲ್ಲಿ ಅಂತಹ ಸಂಧಿಕಾಲ ಬಂದೊದಗಿತ್ತು. ಆತನ ಬಲಿಷ್ಠಮತಿಯ ಕಿಶೋರಕೇಸರಿಗೆ ಅಂತಹ ವಜ್ರನಖತತಿ ಮೊಳೆದೋರಿತ್ತು. ಮುಕ್ತಿರಾಹು ನಿರ್ದಯ ನಿಶ್ಚಯತೆಯಿಂದ ಅವನ ಆತ್ಮವನ್ನು ಬೆನ್ನಟ್ಟಿಯಟ್ಟಿ ಬರುತ್ತಿತ್ತು!

ಕಾಲೇಜು, ವಿದ್ಯಾಭ್ಯಾಸ, ಮಿತ್ರಗೋಷ್ಠಿ, ಬಂಧುಸ್ನೇಹ, ಸಂಗೀತಾಭ್ಯಾಸ, ತತ್ತ್ವಶಾಸ್ತ್ರಾಧ್ಯಯನ ಇವುಗಳೊಂದರಿಂದಲೂ ಆ ರಾಹು ವಂಚಿತವಾಗಲಿಲ್ಲ; ಹಿಂದಿರುಗಲಿಲ್ಲ. ಹಳುವಿನವರು ಕಾಡಿನಲ್ಲಿರುವ ಜಂತುಗಳನ್ನು ಬಿಲ್ಲಿಗೆ ಅಟ್ಟುವಂತೆ ಅದು ನರೇಂದ್ರನನ್ನು ದಕ್ಷಿಣೇಶ್ವರದ ದೇವಕಿರಾತನೆಡೆಗೆ ಎಬ್ಬತೊಡಗಿತ್ತು.

ಪರೀಕ್ಷೆ ಪೂರೈಸಿತು. ವಿಶ್ವನಾಥದತ್ತನು ಮಗನ ಮದುವೆಯ ವಿಚಾರವಾಗಿ ಪ್ರಸ್ತಾಪಿಸತೊಡಗಿದನು. ಆಜನ್ಮ ವಿವಾಹವಿತೃಷ್ಣನಾದ ನರೇಂದ್ರನಿಗೆ ವಿಷಮಾಪತ್ತಿ ಬಂದೊದಗಿತು. ಧೈರ್ಯದಿಂದ ತಂದೆಯ ಅಭಿಮತವನ್ನು ವಿರೋಧಿಸಿದನು. ವಿಶ್ವನಾಥನು ಇತರ ಬಂಧುಗಳ ಮುಖಾಂತರ ಮಗನಿಗೆ ಬುದ್ಧಿ ಹೇಳಿಸಿದನು. ಶ್ರೀರಾಮಕೃಷ್ಣ ಪರಮಹಂಸರ ಗೃಹೀಭಕ್ತರಲ್ಲಿ ಶ್ರೇಷ್ಠನಾದ ರಾಮಚಂದ್ರದತ್ತ ಮಹಾಶಯನೂ ವಿಶ್ವನಾಥದತ್ತನಿಂದ ಪ್ರೇರಿತನಾಗಿ ನರೇಂದ್ರನಿಗೆ ಮದುವೆ ಮಾಡಿಕೊಳ್ಳುವಂತೆ ಬುದ್ಧಿ ಹೇಳಿದನು. ಆದರೆ ತರುಣನ ತೀವ್ರ ವೈರಾಗ್ಯವನ್ನೂ ಆಧ್ಯಾತ್ಮಿಕ ಪಿಪಾಸೆಯನ್ನೂ ಕಂಡು ಆತನು “ಸತ್ಯಲಾಭಕ್ಕಾಗಿ ನೀನು ಅಲ್ಲಿ ಇಲ್ಲಿ ಅಲೆಯುವುದೇಕೆ? ನಿನಗೆ ನಿಜವಾಗಿಯೂ ಧರ್ಮಾಕಾಂಕ್ಷೆಯಿದ್ದರೆ ದಕ್ಷಿಣೇಶ್ವರಕ್ಕೆ ಹೋಗು. ಪರಮಹಂಸರು ನಿನಗೆ ಸತ್ಯಾನುಭವ ನೀಡುತ್ತಾರೆ” ಎಂದನು. ನರೇಂದ್ರನು “ಅನೇಕ ಧರ್ಮ ಪ್ರಚಾರಕರು ನನಗೆ ಈಗಾಗಲೆ ಸತ್ಯವನ್ನು ನೀಡಿದ್ದಾರೆ! ಹಾಗೆಯೆ ನಿಮ್ಮ ಪರಮಹಂಸನೂ ನೀಡುವುದು!” ಎಂದನು. ಅದಕ್ಕೆ ರಾಮಚಂದ್ರದತ್ತನು “ನೀನು ಒಂದು ಸಾರಿ ಪರೀಕ್ಷಿಸು” ಎಂದನು.

೧೮೮೨ನೆಯ ಸಂವತ್ಸರದ ಚೈತ್ರಮಾಸ. ಶಿಶಿರಋತುವಿನ ಆಟೋಪ ಆಗ ತಾನೆ ಅಡಗಿ ವಸಂತನು ಭೂಮಿಗೆ ಕಾಲಿಟ್ಟಿದ್ದಾನೆ. ನವಚೇತನಾನ್ವಿತಳಾದ ಭೂದೇವಿ ನವಸೌಂದರ್ಯದಿಂದ ಮೆರೆಯುತ್ತಿದ್ದಾಳೆ. ದಕ್ಷಿಣೇಶ್ವರ ದೇವಾಲಯದ ಮುಂದುಗಡೆ ಮಂದಗಾಮಿನಿಯಾದ ಮಂದಾಕಿನಿ ಪ್ರವಹಿಸುತ್ತಿದ್ದಾಳೆ. ಶ್ರೀರಾಮಕೃಷ್ಣ ಪರಮಹಂಸರು ದಕ್ಷಿಣೇಶ್ವರ ದೇವಾಲಯದ ಪ್ರಾಕಾರಾಂತರ್ಗತವಾಗಿರುವ ತಮ್ಮ ಕೋಣೆಯಲ್ಲಿ ಕುಳಿತಿದ್ದಾರೆ. ಯುವಕ ವೃದ್ಧ ಶಿಷ್ಯ ಸರ್ವರೂ ಸುತ್ತಲೂ ಕುಳಿತು ಅಮೃತಮಯವಾದ ಅವರ ಮರಣಹರಣವಾಣಿಯನ್ನು ಅನನ್ಯಮನಸ್ಕರಾಗಿ ಕೇಳುತ್ತ ಚಿತ್ರಾರ್ಪಿತ ಪ್ರತಿಮೆಗಳಂತಿದ್ದಾರೆ. ನರೇಂದ್ರನು ಮೂರು ನಾಲ್ಕು ಮಂದಿ ಗೆಳೆಯರೊಡನೆ ಕೊಠಡಿಯನ್ನು ಪ್ರವೇಶಿಸಿ ಒಂದು ಮೂಲೆಯಲ್ಲಿ ಕುಳಿತನು.

ಪರಮಹಂಸರು ತಮ್ಮ ಶಿಷ್ಯಶ್ರೇಷ್ಠನ ಪ್ರಥಮಾಗಮನವನ್ನು ಈ ರೀತಿಯಾಗಿ ವರ್ಣಿಸಿದ್ದಾರೆ:‌

“ನರೇಂದ್ರನು ಪಶ್ಚಿಮದ್ವಾರದಿಂದ ಮಂದಿರಪ್ರವೇಶ ಮಾಡಿದನು. ಆತನ ಮುಖದಲ್ಲಿ ಒಂದು ವಿಧವಾದ ದಿವ್ಯ ನಿರ್ಲಕ್ಷತೆ ರಂಜಿಸುತ್ತಿತ್ತು. ಬಟ್ಟೆಬರೆಗಳ ಮೇಲೆ ಆತನ ದೃಷ್ಟಿಯಿದ್ದಂತೆ ತೋರಲಿಲ್ಲ. ಇತರರಂತಲ್ಲದೆ ಅಂತರ್ಮುಖಿಯಾಗಿ ಕಂಡುಬಂದನು. ಆತನ ನೇತ್ರಗಳು ಧ್ಯಾನಾಸಕ್ತನ ನೇತ್ರಗಳಂತೆ ಅಂತರಂಗವಿಹಾರಿಗಳಾಗಿದ್ದುವು. ಕಲ್ಕತ್ತಾ ನಗರದ ಜಡಜೀವನದ ನಡುವೆ ಅಂತಹ ಆಧ್ಯಾತ್ಮಿಕಜೀವಿ ಇರುವುದನ್ನು ಕಂಡು ನನಗೆ ಪರಮಾಶ್ಚರ್ಯವಾಯಿತು. ನೆಲದ ಮೇಲೆ ಹಾಸಿದ್ದ ಚಾಪೆಯ ಮೇಲೆ ಕೂತುಕೊಳ್ಳುವಂತೆ ಅವನಿಗೆ ಹೇಳಿದೆ. ಆತನ ಜೊತೆಯಲ್ಲಿ ಬಂದಿದ್ದ ತರುಣರು ಭೋಗಾಸಕ್ತರಾಗಿ ಕಂಡುಬಂದರು. ನನ್ನ ಕೋರಿಕೆಯಂತೆ ಆತನಿಗೆ ಗೊತ್ತಿದ್ದ ಕೆಲವು ಬಂಗಾಳಿ ಗೀತೆಗಳನ್ನು ಹಾಡಿದನು. ಗಾನದಲ್ಲಿ ಯೋಗಿಯ ವಾಣಿಯೂ ಭಕ್ತನ ಹೃದಯವೂ ತುಂಬಿ ತುಳುಕುತ್ತಿದ್ದುವು. ಆವೇಶದ ಆವೇಗವನ್ನು ತಡೆಯಲಾರದೆ ಸಮಾಧಿಸ್ಥನಾಗಿಬಿಟ್ಟೆ.”

ಮುಂದಾದುದನ್ನು ಸ್ವಾಮಿ ವಿವೇಕಾನಂದರೆ ಈ ರೀತಿ ವರ್ಣಿಸಿದ್ದಾರೆ:‌

“ಸರಿ, ನಾನು ಹಾಡಿದೆ. ತುಸುಹೊತ್ತಾದ ಮೇಲೆ ಆತನು ತಟಕ್ಕನೆ ಮೇಲೆದ್ದು ನನ್ನ ಕೈಹಿಡಿದು ಉತ್ತರದಿಕ್ಕಿನ ವರಾಂಡಕ್ಕೆ ಕರೆದೊಯ್ದು ಕೋಣೆಯ ಬಾಗಿಲನ್ನು ಮುಚ್ಚಿದನು. ಹೊರಗಡೆ ಒಂದು ತೆರೆಮರೆಯಿದ್ದುದರಿಂದ ಅಲ್ಲಿ ನಾವಿಬ್ಬರೇ ಏಕಾಂತದಲ್ಲಿದ್ದೆವು. ಏನಾದರೂ ತತ್ತ್ವೋಪದೇಶ ಮಾಡಬಹುದೆಂದು ಭಾವಿಸಿದೆ. ಆದರೆ ಆತನ ಕಾರ್ಯವನ್ನು ಕಂಡು ಬೆಚ್ಚುಬೆರಗಾದೆ! ನನ್ನನ್ನು ಹಿಡಿದುಕೊಂಡು ಎಡೆಬಿಡದೆ ಕಂಬನಿ ಸೂಸುತ್ತ ಚಿರಪರಿಚಿತನೆಂಬಂತೆ ಸಲುಗೆಯಿಂದ “ಬರಲು ಇಷ್ಟು ತಡಮಾಡುವುದೆ? ನನ್ನನ್ನು ಈ ಪರಿ ಕಾಯಿಸಲು ನಿನಗೆ ಹೇಗೆ ಮನಸ್ಸು ಬಂತು? ಪ್ರಾಪಂಚಿಕರ ಮಾತು ಕೇಳಿ ಕೇಳಿ ನನ್ನ ಕವಿ ಇನ್ನೇನು ಬೆಂದುಹೋಗುವುದರಲ್ಲಿದೆ. ಅಯ್ಯೋ ನಾನು ಏದುತ್ತಿದ್ದೇನೆ. ನನ್ನ ಅಂತರಂಗದ ಅನುಭವಗಳನ್ನು ಅಧಿಕಾರಿಯೊಬ್ಬನು ಸಿಕ್ಕಿದರೆ ಸಾಕು, ಕೊಡಬೇಕೆಂದು ಕಾತರನಾಗಿದ್ದೇನೆ” ಎಂದು ಮುಂತಾಗಿ ಹೇಳುತ್ತ ಬಿಕ್ಕಿ ಬಿಕ್ಕಿ ಅಳತೊಡಗಿದನು. ತರುವಾಯ ಕೈಮುಗಿದು ನನ್ನೆದುರು ನಿಂತು “ನಾನು ಬಲ್ಲೆ. ನೀನು ಸಪ್ತರ್ಷಿ ಮಂಡಲದ ಋಷಿ, ನರ ರೂಪದ ನಾರಾಯಣ. ಜೀವರ ಕಲ್ಯಾಣಾರ್ಥವಾಗಿ ದೇಹಧಾರಣೆ ಮಾಡಿ ಅವತರಿಸಿರುವೆ” ಎಂದು ಮೊದಲಾಗಿ ಸಂಬೋಧಿಸತೊಡಗಿದನು.‌

“ನಾನಂತೂ ಆತನ ನಡತೆಯನ್ನು ನೋಡಿ ಬೆಚ್ಚು ಬೆರಗಾದೆ. ‘ನನಗೇನು ಮರುಳೆ? ನಾನು ಯಾರನ್ನು ನೋಡಲು ಬಂದಿದ್ದೇನೆ? ಇವನು ಬರಿಯ ಹುಚ್ಚನಾಗಿರಬೇಕು. ಇದೇನಿದು? ನಾನು ವಿಶ್ವನಾಥದತ್ತನ ಪುತ್ರ ನರೇಂದ್ರನಾಥದತ್ತ, ನನ್ನನ್ನು ನರನಾರಾಯಾಣ ಎಂದು ಕರೆಯುತ್ತಿದ್ದಾನಲ್ಲಾ!’ ಎಂದುಕೊಂಡೆ. ಹೇಳುವಷ್ಟು ಹೇಳಿಕೊಂಡುಬಿಡಲಿ ಎಂದು ಸುಮ್ಮನಿದ್ದೆ. ಇದ್ದಕ್ಕಿದ್ದ ಹಾಗೆ ನನ್ನನ್ನು ಅಲ್ಲಿಯೇ ಇರುವಂತೆ ಹೇಳಿ ಕೋಣೆಯೊಳಗೆ ನುಗ್ಗಿ ಮಿಠಾಯಿ ಸಕ್ಕರೆ ಬೆಣ್ಣೆ ಮೊದಲಾದುವುಗಳನ್ನು ತೆಗೆದುಕೊಂಡುಬಂದು ತಾನೇ ತಿನ್ನಿಸತೊಡಗಿದನು. ‘ಹೊರಗೆ ಗೆಳೆಯರಿದ್ದಾರೆ, ಅವರೊಡನೆ ತಿನ್ನುತ್ತೇನೆ’ ಎಂದು ಎಷ್ಟು ಹೇಳಿದರೂ ಕೇಳಲಿಲ್ಲ. ‘ಅವರಿಗೆ ಆಮೇಲೆ ಕೊಟ್ಟರಾಯಿತು’ ಎಂದು ಹೇಳಿ, ನಾನೆಲ್ಲವನ್ನೂ ಪೂರೈಸಿದ ಮೇಲೆಯೇ ಕೈಬಿಟ್ಟನು. ತರುವಾಯ ಮರಳಿ ಕೈಹಿಡಿದುಕೊಂಡು ‘ಬೇಗ ಬರುತ್ತೇನೆ ಎಂದು ಮಾತುಕೊಡು’ ಎಂದನು. ಆತನ ಅಟಮಟವನ್ನು ತಡೆಯಲಾರದೆ ‘ಹೂಂ, ಆಗಲಿ’ ಎಂದುಸುರಿ ಆತನೊಡನೆ ಗೆಳೆಯರಿದ್ದ ಕೊಠಡಿಗೆ ಬಂದೆ.‌

“ಬಂದವನು ಕುಳಿತುಕೊಂಡು ಆತನನ್ನೇ ಪರೀಕ್ಷಿಸತೊಡಗಿದೆ. ಸರಿಯಾಗಿ ಮಾತಾಡುತ್ತಿದ್ದನು. ಇತರರೊಡನೆ ಒಂದಿನಿತೂ ಕುಂದಿಲ್ಲದೆ ಆಚರಿಸುತ್ತಿದ್ದನು. ಮಾತಿನಿಂದಲೂ ನಡತೆಯಿಂದಲೂ ಆತನು ತ್ಯಾಗಮೂರ್ತಿಯಾಗಿ ಕಂಡುಬಂದನು.”

ಆ ದಿನವೂ ನರೇಂದ್ರನು ಇತರ ಧರ್ಮಪ್ರಚಾರಕರಿಗೆ ಹಾಕಿದ ಪ್ರಶ್ನೆಯನ್ನೇ ಹಾಕಿದನು: “ಮಹಾಶಯ, ತಾವು ದೇವರನ್ನು ನೋಡಿದ್ದೀರಾ?”

ಮಹಾಪುರುಷನ ಮೃದುಹಾಸ್ಯರಂಜಿತ ಪ್ರಶಾಂತವದನಮಂಡಲವು ಅಪೂರ್ವ ಕಾಂತಿಶಾಂತಿಗಳಿಂದ ಶೋಭಿಸಿತು. “ಹೌದು, ನೋಡಿದ್ದೇನೆ; ನೋಡುತ್ತಿದ್ದೇನೆ. ನಿಮ್ಮೆಲ್ಲರನ್ನು ನೋಡುವುದಕ್ಕಿಂತಲೂ ಇನ್ನೂ ಅತಿಶಯವಾಗಿ ಶಾಶ್ವತವಾಗಿ ನೋಡುತ್ತಿದ್ದೇನೆ. ಬೇಕಾದರೆ ನಿನಗೂ ತೋರಿಸುತ್ತೇನೆ. ದೇವರನ್ನು ನೋಡಬಹುದು; ಅವನೊಡನೆ ಮಾತಾಡಬಹುದು, ನಾನೀಗ ನಿಮ್ಮೊಡನೆ ಮಾತಾಡುವಂತೆ. ಆದರೆ ದೇವರು ಯಾರಿಗೆ ಬೇಕಾಗಿದ್ದಾನೆ? ಹೆಂಡಿರು ಮಕ್ಕಳು ಹೊನ್ನು ಮಣ್ಣುಗಳಿಗಾಗಿ ಜನರು ಕೊಡಗಟ್ಟಲೆ ಕಣ್ಣೀರು ಸುರಿಯುತ್ತಾರೆ. ಆದರೆ ದೇವರಿಗಾಗಿ ಯಾರು ಹಾಗೆ ಮಾಡುವರು? ದೇವರಿಗಾಗಿ ಎದೆಮುಟ್ಟಿ ಅತ್ತರೆ ಆತನು ತೋರಿಯೇ ತೋರುತ್ತಾನೆ” ಎಂಬ ಉತ್ತರ ಸಿಡಿಲಿನಂತೆ ಮೊಳಗಿತು. ನರೇಂದ್ರನು ಮುಗ್ಧನಾದನು; ಮಾರುಹೋದನು. ಏನಾದರೂ ಆಗಲಿ, ಜಗತ್ತಿನಲ್ಲಿ ದೇವರನ್ನು ನೋಡಿದ್ದೇನೆ ಎನ್ನುವವನು ಒಬ್ಬನಾದರೂ ಲಭಿಸಿದನಲ್ಲಾ! ಎಂದು ಸಂತೃಪ್ತನಾದನು. ಆದರೂ ತನ್ನೊಡನೆ ಜರುಗಿದ ಆತನ ನಡತೆಯನ್ನು ನೆನೆದು, ಮನಶ್ಶಾಸ್ತ್ರದ ತತ್ತ್ವಗಳನ್ನು ಓದಿದ್ದ ನರೇಂದ್ರನು, ಪರಮಹಂಸರನ್ನು ಸಂಪೂರ್ಣೋನ್ಮತ್ತ ನಲ್ಲದಿದ್ದರೂ ಅರೆ ಮರುಳಾಗಿರಬೇಕೆಂದು ಭಾವಿಸಿ ಬೀಳ್ಕೊಂಡನು.

ನರೇಂದ್ರನು ಮನೆಗೆ ಹಿಂತಿರುಗಿ ಬಂದನು. ದಕ್ಷಿಣೇಶ್ವರದ ಹುಚ್ಚು ಪೂಜಾರಿ ಆತನ ಮನಸ್ಸೆಲ್ಲವನ್ನೂ ತುಂಬಿಬಿಟ್ಟಿದ್ದನು. ತರುಣನ ಸೂಕ್ಷ್ಮಬುದ್ಧಿ ಗುಡಿಯ ಪೂಜಾರಿಯ ವಿಚಿತ್ರ ವ್ಯಕ್ತಿತ್ವವು ತಂದೊಡ್ಡಿದ ಸಮಸ್ಯೆಯನ್ನು ಭೇದಿಸಲಾರದೆ ಪರಾಜಿತವಾಗಿ ಹೋಯಿತು. ಒಂದು ಸಾರಿ ಪೂಜಾರಿ ಬರಿಯ ಹುಚ್ಚನೆಂದು ತರ್ಕಿಸುವನು; ಮತ್ತೊಂದು ಸಾರಿ ಯಾರ ಪವಿತ್ರ ಸಂಗದಿಂದ ಕೇಶವಚಂದ್ರಸೇನ, ವಿಜಯಕೃಷ್ಣಗೋಸ್ವಾಮಿ ಮೊದಲಾದ ಪ್ರಸಿದ್ಧ ಆಚಾರ್ಯವರ್ಗದವರ ಧರ್ಮಜೀವನದಲ್ಲಿ ಅದ್ಭುತ ಪರಿವರ್ತನೆಗಳುಂಟಾದುವೋ ಅಂತಹವನನ್ನು ಹುಚ್ಚನೆನ್ನುವುದೆಂತು ಎಂದು ಚಿಂತಿಸುವನು. ಅಂತೂ ಯಾವ ತೀರ್ಮಾನವೂ ಮನಸ್ಸಿಗೆ ಹೊಳೆಯದೆ ಹೋಯಿತು. ಕಡೆಗೆ ಅವನು ಯಾರೇ ಆಗಲಿ ಚೆನ್ನಾಗಿ ಪರೀಕ್ಷಿಸದ ಹೊರತು ಈಶ್ವರದರ್ಶಿಯೆಂದೂ ಮಹಾಪುರುಷನೆಂದೂ ಸುಮ್ಮನೆ ಪರಿಗಣಿಸಬಾರದು ಎಂದು ನಿರ್ಣಯಿಸಿದನು. ಆದರೂ ಆ ಮರುಳು ಪೂಜಾರಿಯಲ್ಲಿ ಯಾವುದೊ ಒಂದು ಪ್ರಬಲತರ ಆಕರ್ಷಣಶಕ್ತಿಯಿರುವುದೆಂದು ನರೇಂದ್ರನು ಅನುಭವದಿಂದ ತಿಳಿದನು. ಗುರುದೇವನ ಅಪೂರ್ವ ತ್ಯಾಗ, ಶಿಶು ಭಾವ, ಅಭಿಮಾನ ಶೂನ್ಯವಾದ ಆಚರಣೆ, ವಿನಯ ನಮ್ರ ಮಧುರ ವಾಕ್ಯಸರಣಿ, ಎಲ್ಲಕ್ಕೂ ಮಿಗಿಲಾಗಿ ಆತನ ರಹಸ್ಯಮಯ ನಿಷ್ಕಾಮ ವಾತ್ಸಲ್ಯ – ಇವುಗಳು ನರೇಂದ್ರನ ಹೃದಯವನ್ನು ಸೆರೆಗೈದುವು. ಅಂತೂ ಪರೀಕ್ಷಿಸದೆ ಮರುಳನೊಬ್ಬನನ್ನು ಮಹಾಪುರುಷನೆಂದು ಭ್ರಮಿಸಿ ಜೀವನಾದರ್ಶವನ್ನಾಗಿ ಸ್ವೀಕರಿಸಿಬಿಡಬಾರದೆಂದು ದೃಢನಿಶ್ಚಯ ಮಾಡಿಕೊಂಡನು.

ಬ್ರಾಹ್ಮಸಮಾಜಕ್ಕೆ ಸೇರಿದ್ದ ನರೇಂದ್ರನಾಥನು ಸಗುಣನಿರಾಕಾರ ಬ್ರಹ್ಮೋಪಾಸನೆ ಮಾಡುವೆನೆಂದೂ, ಮೂರ್ತಿಪೂಜೆಯನ್ನು ನಿರಾಕರಿಸುವೆನೆಂದೂ ಅಂಧಶ್ರದ್ಧೆಗೆ ಶರಣಾಗೆನೆಂದೂ ಪ್ರಮಾಣಪತ್ರಿಕೆಯನ್ನೂ ಬರೆದುಕೊಟ್ಟು ಪ್ರತಿಜ್ಞೆ ಮಾಡಿದ್ದನು. ಪಾಶ್ಚಾತ್ಯ ತತ್ತ್ವಶಾಸ್ತ್ರ ತರ್ಕಶಾಸ್ತ್ರಗಳಲ್ಲಿ ಕೃತವಿದ್ಯನಾದ ಆತನು ಗೊಡ್ಡು ಸಂಪ್ರದಾಯಕ್ಕೆ ಮಾರುಹೋಗುವವನಾಗಿರಲಿಲ್ಲ. ಪ್ರತಿಯೊಂದನ್ನೂ ಚೆನ್ನಾಗಿ ವಿಮರ್ಶಿಸಿಯೇ ಸ್ವೀಕರಿಸಬೇಕೆಂದು ಆತನ ಮತವಾಗಿತ್ತು. ಈ ಎಲ್ಲ ಕಾರಣಗಳಿಂದ ಆತನಿಗೆ ಪ್ರಾಚೀನ ದೇವತೆಗಳಾದ ಕಾಳಿ, ಹರಿ, ಕೃಷ್ಣ ಮೊದಲಾದುವುಗಳಲ್ಲಿ ನಂಬುಗೆಯಿರಲಿಲ್ಲ. ಪರಮಹಂಸರು ಜಗದಂಬೆಯಾದ ಕಾಳಿಯ ವಿಚಾರವಾಗಿ ಭಕ್ತಿಯಿಂದ ಹೇಳಿದ ಮಾತುಗಳನ್ನು ಕೇಳಿದ ಆತನು ಒಳಗೊಳಗೇ ನಗುತ್ತ “ಎಲ್ಲ ಶುದ್ಧ ಮೂರ್ಖತನ! ಸ್ವಲ್ಪ ದಿನಗಳು ಹೋಗಲಿ; ಮುದುಕನಿಗೆ ತನಗೆ ತಾನೇ ಗೊತ್ತಾಗುವುದು, ಅವನ ಕಾಳಿ ಬರಿಯ ಕಟ್ಟುಕಥೆಯೆಂದು!” ಎಂದು ಅಂದುಕೊಂಡನು. ಆದರೂ, ಮನಸ್ಸು ಹೀಗೆಲ್ಲ ಸಂದೇಹಪಟ್ಟರೂ ಕೂಡ ನರೇಂದ್ರನ ಹೃದಯ ಮರುಳು ಪೂಜಾರಿಯ ಕಡೆಗೆ ಮರಳಿ ಮರಳಿ ಹೋಗಲೆಳಸಿತು.

ಒಂದು ತಿಂಗಳು ಕಳೆಯಿತು. ಮರುಳು ಪೂಜಾರಿಯನ್ನು ನೋಡುವ ಹುಚ್ಚು ನರೇಂದ್ರನಿಗೆ ಹೆಚ್ಚಾಯಿತು. ಕಡೆಗೆ ದಕ್ಷಿಣೇಶ್ವರಾಭಿಮುಖವಾಗಿ ಒಬ್ಬನೇ ಹೊರಟನು. ಆ ದ್ವಿತೀಯ ಸಂದರ್ಶನದ ವಿಚಾರವಾಗಿ ಸ್ವಾಮಿ ವಿವೇಕಾನಂದರೇ ಹೀಗೆಂದು ಬರೆದಿದ್ದಾರೆ:‌

“ನಾನು ಮಂದಿರ ಪ್ರವೇಶಮಾಡುವಾಗ ಆತನು ಹಾಸಿಗೆಯ ಮೇಲೆ ಕುಳಿತಿದ್ದನು. ನನ್ನನ್ನು ಕಂಡು ಬಹಳ ಆನಂದಪಟ್ಟು ವಾತ್ಸಲ್ಯಪೂರಿತವಾದ ಧ್ವನಿಯಿಂದ ನನ್ನನ್ನು ಬಳಿಗೆ ಕರೆದು ಹಾಸಿಗೆಯ ಒಂದು ಪಕ್ಕದಲ್ಲಿ ಕುಳಿತುಕೊಳ್ಳುವಂತೆ ಮಾಡಿದನು. ಮರುಕ್ಷಣದಲ್ಲಿಯೆ ಆತನು ಭಾವಾವಿಷ್ಟನಾಗಿ ಮೆಲ್ಲಮೆಲ್ಲನೆ ನನ್ನ ಬಳಿಗೆ ಸಾರಿದನು. ಹಿಂದಿನಂತೆಯೆ ಏನಾದರೂ ವಿಚಿತ್ರವರ್ತನೆಗಳಲ್ಲಿ ತೊಡಗಬಹುದೆಂದಿದ್ದೆ. ಎವೆಯಿಕ್ಕುವುದರಲ್ಲಿಯೆ ಅತಿ ನಿಕಟವರ್ತಿಯಾಗಿ ತನ್ನ ಬಲಗಾಲನ್ನು ನನ್ನ ಮೇಲಿಟ್ಟನು. ಆ ಸ್ಪರ್ಶದಿಂದ ನನಗೊಂದು ವಿಚಿತ್ರ ನೂತನ ಅನುಭವವುಂಟಾಯಿತು. ನಾನು ಕಣ್ಣು ತೆರೆದುಕೊಂಡೆ ಇದ್ದೆ; ಮೈತಿಳಿದೆ ಇದೆ; ಇದ್ದಕ್ಕಿದ್ದ ಹಾಗೆ ಮಂದಿರದ ಭಿತ್ತಿಗಳೂ ಅಲ್ಲಿದ್ದ ವಸ್ತುಗಳೂ ಎಲ್ಲವೂ ಕಂಪಿಸಿ ಕಂಪಿಸಿ ವಿದ್ಯುದ್ವೇಗದಿಂದ ಮಾಯವಾದವು. ಒಡನೆಯೆ ನನ್ನೊಡನೆ ಸಮಸ್ತ ಬ್ರಹ್ಮಾಂಡವೂ ಯಾವುದೋ ಒಂದು ಅನಿರ್ವಚನೀಯವಾದ ರಹಸ್ಯತಮ ಶೂನ್ಯದಲ್ಲಿ ತಲ್ಲೀನವಾಗಲಾರಂಭಿಸಿತು. ಆ ಭಯಂಕರವಾದ ಅನುಭವವನ್ನು ಸಹಿಸಲಾರದೆ ಅತ್ಯಂತ ಭೀತನಾದೆ. ಮೃತ್ಯುಮುಖನಾಗುತ್ತಿರುವಂತೆ ನನಗೆ ಭಾಸವಾಯಿತು. ಹಾಗಲ್ಲದೆ ಮತ್ತೇನು? ಅಹಂಕಾರದ ಸಂಪೂರ್ಣ ವಿಸ್ಮೃತಿಯೆಂದರೆ ಸಾವಿಗೇನು ಕಡಿಮೆಯಲ್ಲ. ತಡೆಯಲಾರದೆ ಕೂಗಿಕೊಂಡೆ: ‘ಅಯ್ಯೋ, ಇದೇನು ನೀವು ಮಾಡುತ್ತಿರುವುದು? ಮನೆಯಲ್ಲಿ ನನಗೆ ತಾಯಿತಂದೆಗಳಿದ್ದಾರೆ!’ ಎಂದು ಗಟ್ಟಿಯಾಗಿ ಕೂಗಿಕೊಂಡೆ. ನನ್ನ ಕೂಗನ್ನು ಕೇಳಿ ಆತನು ಗಹಗಹಿಸಿ ನಕ್ಕು ನನ್ನೆದೆಯ ಮೇಲೆ ತನ್ನ ಕೈಗಳನ್ನು ಎಳೆಯುತ್ತ ‘ಇರಲಿ, ಈಗ ಸಾಕು. ಆಗುವುದೆಲ್ಲ ಮುಂದೆ ಆಗುವುದು’ ಎಂದನು. ಒಡನೆಯೆ ಆ ಮಹಾ ಭಯಂಕರ ಅನುಭವವು ಮಾಯವಾದುದನ್ನು ಕಂಡು ನಾನು ಆಶ್ಚರ್ಯದಿಂದ ಮೂಕನಾದೆ. ನಾನು ನಾನಾಗಿಯೆ ಇದ್ದೆ. ಎಲ್ಲ ಮೊದಲಿನಂತೆಯೇ ಇತ್ತು.‌

“ನನ್ನಂತಹ ದೃಢಚಿತ್ತನನ್ನು ಕೂಡ ತನ್ನ ಇಚ್ಛೆಯ ಲೀಲಾಮಾತ್ರದಿಂದ ಅವಸ್ಥಾಂತರಕರಿಸಲು ಸಮರ್ಥನಾದ ಈತನನ್ನು ಹುಚ್ಚನೆಂದು ತಳ್ಳಿಬಿಡುವುದೆಂತು ಎಂದು ಆಲೋಚಿಸತೊಡಗಿದೆ. ಪ್ರಥಮ ಸಂದರ್ಶನದಲ್ಲಿ ನಡೆದ ಆತನ ವರ್ತನೆಯನ್ನು ನೆನೆದರೆ ಅವನು ಹುಚ್ಚನಲ್ಲವೆಂದಾದರೂ ಹೇಳುವುದು ಹೇಗೆ? – ಅವತಾರ ಪುರುಷನೆಂಬ ಮಾತಂತೂ ಇರಲಿ, ಅದು ದೂರದ ಮಾತು. ನನ್ನ ಬಗೆ ಕದಡಿತು. ಶಿವಸದೃಶ ಪರಿಶುದ್ಧಾತ್ಮನಾದ ಆ ವಿಚಿತ್ರ ವ್ಯಕ್ತಿಯ ಗುಟ್ಟನ್ನು ಅರಿಯದಾದೆ. ನಾನು ಕಂಡ ಅನುಭವದ ತತ್ತ್ವವಂತೂ ನನಗೆ ಬಗೆಹರಿಯಲೇ ಇಲ್ಲ. ಯುಕ್ತಿಪಂಥಿಯನಾಗಿದ್ದ ನನ್ನ ಮಾನಸಿಕ ಅಹಂಕಾರವು ಆ ಮಹಾಪುರುಷನ ದುರ್ಜ್ಞೇಯ ವರ್ತನೆಗಳ ಆಘಾತದಿಂದ ತತ್ತರಿಸಿ ಹಿಮ್ಮೆಟ್ಟಿತು. ಆದರೂ ಹೇಗಾದರೂ ಮಾಡಿ ರಹಸ್ಯವನ್ನು ಭೇದಿಸಲೇಬೇಕೆಂದು ಮನಸ್ಸು ಗಟ್ಟಿ ಮಾಡಿಕೊಂಡೆ.‌

“ಆ ದಿನವೆಲ್ಲ ನನ್ನ ಮನದಲ್ಲಿ ವಿಧವಿಧವಾದ ಸಾವಿರಾರು ಆಲೋಚನೆಗಳು ತಾಂಡವವಾಡತೊಡಗಿದುವು. ಆದರೆ ಆತನು ಮಾತ್ರ ಸ್ವಲ್ಪ ಹೊತ್ತಿನಲ್ಲಿಯೆ ಬೇರೊಬ್ಬ ವ್ಯಕ್ತಿಯಾದನು. ಆತನ ರೀತಿಯ ಬದಲಾಯಿತು. ಮುನ್ನಿನಂತೆಯೆ ನನ್ನೊಡನೆ ಬಹಳ ಸಲಿಗೆಯಿಂದ ವರ್ತಿಸಲಾರಂಭಿಸಿದನು. ಬಹಳಕಾಲದಿಂದಲೂ ಕಣ್ಮರೆಯಾಗಿ ಹೋಗಿದ್ದ ಗೆಳೆಯನನ್ನು ಮರಳಿ ಕಂಡವನಂತೆ. ಎಷ್ಟು ಆದರದಿಂದ ನನಗೆ ಎಷ್ಟೆಷ್ಟು ಉಪಚಾರ ಮಾಡಿದರೂ ಆತನು ತೃಪ್ತನಾಗಲಿಲ್ಲ. ಆತನ ಆತಿಥ್ಯಕ್ಕೆ ನಾನು ಮುಗ್ಧನಾಗಿಹೋದೆ. ಅಷ್ಟರಲ್ಲಿ ಸಂಜೆಯಾಯಿತು. ಹೊರಡಲು ಅಪ್ಪಣೆ ಕೇಳಿದೆ. ಮರಳಿ ಶೀಘ್ರದಲ್ಲಿಯೆ ಬರುವೆನೆಂದು ಮಾತು ಕೊಟ್ಟ ಮೇಲೆಯೆ ಆತನು ಮನಸ್ಸಿಲ್ಲದ ಮನಸ್ಸಿನಿಂದ ವಿಷಣ್ಣವದನನಾಗಿ ನನ್ನನ್ನು ಬೀಳ್ಕೊಟ್ಟನು.”

ನರೇಂದ್ರನಾಥನು ಶ್ರೀರಾಮಕೃಷ್ಣರ ಬಳಿಗೆ ಬರುವುದಕ್ಕೆ ಪೂರ್ವದಲ್ಲಿಯೆ ಅವರು ತನ್ನ ಶಿಷ್ಯನ ಬರುವಿಕೆಯನ್ನು ಅರಿತಿದ್ದರು. ಅಲ್ಲದೆ ಇತರರೊಡನೆ ಅದನ್ನು ಕುರಿತು ಪ್ರಸ್ತಾಪಿಸಿಯೂ ಇದ್ದರು. ಶಿಷ್ಯನು ಹೇಗೆ ಗುರುವನ್ನು ಪರೀಕ್ಷಿಸದೆ ಸ್ವೀಕರಿಸಲಿಲ್ಲವೋ ಹಾಗೆಯೇ ಭಗವಾನರೂ ಶಿಷ್ಯನನ್ನು ಪರೀಕ್ಷಿಸದೆ ಸ್ವೀಕರಿಸಲಿಲ್ಲ. ಅವರು ಯಾರಿಗಾಗಿಯೋ ಕಾದುಕೊಂಡಿದ್ದುದೇನೊ ನಿಶ್ಚಯ. ಅವರ ಯೋಗದೃಷ್ಟಿಗೆ ಯಾರೊ ಒಬ್ಬರು ಗೋಚರವಾಗಿದ್ದುದೂ ನಿಶ್ಚಯ!

[1] ಅವರು ನರೇಂದ್ರನನ್ನು ಪ್ರಥಮ ಸಂದರ್ಶನದಲ್ಲಿಯೆ ಗುರುತಿಸಿದುದೂ ನಿಶ್ಚಯ! ಆದರೆ ಕೆಲವು ಸಾರಿ, ತಾವು ಸಮಾಧಿಯಲ್ಲಿ ಕಂಡ ಪುರುಷನು ಈತನೆ ಹೌದೊ ಅಲ್ಲವೊ ಎಂದು ಸಂದೇಹಪಡುತ್ತಿದ್ದರು. ಆ ಸಂದೇಹನಿವೃತ್ತಿಗಾಗಿ ಅವರು ತಮ್ಮ ಶಿಷ್ಯನನ್ನು ಪರೀಕ್ಷಿಸದೆ ಬಿಡಲಿಲ್ಲ. ಆತನ ಅಂತರಂಗ ಬಹಿರಂಗಗಳೆರಡನ್ನೂ ಪರೀಕ್ಷಿಸಿ, ತಾನು ಸಮಾಧಿಯಲ್ಲಿ ಕಂಡಾತನು ಈತನೇ ಹೌದೆಂದು ಚೆನ್ನಾಗಿ ತಿಳಿದಮೇಲೆಯೆ ಅವರು ನರೇಂದ್ರನನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು.

ಮೂರನೆಯ ಸಾರಿ ನರೇಂದ್ರನು ಅಲ್ಲಿಗೆ ಬಂದಾಗ ತಮ್ಮ ಸಂದೇಹ ಪರಿಹಾರ ಮಾಡಿಕೊಂಡರು. ಸಮಾಧಿಯಲ್ಲಿ ತಾವು ಕಂಡ ನರಮಹರ್ಷಿ ಈತನೇ ಹೌದಾಗಿದ್ದರೆ ಮೈಮುಟ್ಟಿ ಸಮಾಧ್ಯವಸ್ಥೆಯನ್ನು ನೀಡಿದಾಗ ಕೂಗಿಕೊಂಡನೇಕೆ? ತಾವೇ ಎಲ್ಲಿಯಾದರೂ ಬಗೆದಪ್ಪಿನಿಂದ ತಪ್ಪಾಗಿ ಗುರುತಿಸಿರಬಹುದೇ? ಇವೇ ಮೊದಲಾದ ಸಂಶಯಗಳು ಅವರಲ್ಲಿ ಮೂಡಿದ್ದುವು. ಮೂರನೆಯ ಸಾರಿ ನರೇಂದ್ರನು ಬಂದಾಗ ಗುರುದೇವನು ಎಂದಿನಂತೆಯೆ ಆತನನ್ನು ಮುಟ್ಟಿದನು. ಬಾಹ್ಯಪ್ರಜ್ಞೆ ತಪ್ಪಿ ನರೇಂದ್ರನು ಭಾವದಲ್ಲಿದ್ದನು. ಆಗ ಠಾಕೂರರು ತಮಗೆ ಉಚಿತ ಮತ್ತು ಆವಶ್ಯಕವೆಂದು ತೋರಿದ ಅನೇಕ ಪ್ರಶ್ನೆಗಳನ್ನು ಹಾಕಿದರು. ನರೇಂದ್ರನು ಅವುಗಳೆಲ್ಲಕ್ಕೂ ಸಂದೇಹ ಪರಿಹಾರಕವಾದ ಯೋಗ್ಯವಾದ ಉತ್ತರಗಳನ್ನು ಕೊಟ್ಟನು. ಉತ್ತರಗಳಿಂದ ನರೇಂದ್ರನು ಧ್ಯಾನಸಿದ್ಧನಾದ ಮಹಾಯೋಗೀಶ್ವರನೆಂಬುದು ಅವರಿಗೆ ತಿಳಿಯಿತಂತೆ. ಅಲ್ಲದೆ ಆತನ ಭವಿಷ್ಯತ್ತೆಲ್ಲ ಅವರಿಗೆ ವಿಶದವಾಗಿ, ನರೇಂದ್ರನು ಯೋಗದಿಂದ ದೇಹಪರಿತ್ಯಾಗ ಮಾಡುವನೆಂಬುದನ್ನೂ ಅವರು ಅರಿತರಂತೆ.

ದಕ್ಷಿಣೇಶ್ವರದ ಅಲೌಕಿಕ ದೈವಿಕ ಪುರುಷನ ಬಳಿಗೆ ಬಂದಾಗಲೆಲ್ಲ ನರೇಂದ್ರನಿಗೆ ಅದ್ಭುತದ ಮೇಲೆ ಅದ್ಭುತ ಅನುಭವಗಳಾಗಲಾರಂಭಿಸಿದುವು. ಅವನು ಬೆರಗಾದನು. ಯಾವನಾದರೊಬ್ಬನು ಶಕ್ತಿಶಾಲಿಯಾದ ಮಹಾಪುರುಷನೆಂದು ತಿಳಿದೊಡನೆಯೆ ಆತನು ಹೇಳಿದುದನ್ನೇ ನಿರ್ವಿಚಾರವಾಗಿ ಸ್ವೀಕರಿಸಿಬಿಡುವುದು ಸಾಮಾನ್ಯ ಮನುಷ್ಯರ ಸ್ವಭಾವ. ಆದರೆ ಸುತೀಕ್ಷ್ಣ ಬುದ್ಧಿವಂತನಾದ ನರೇಂದ್ರನು ತುಂಬ ಎಚ್ಚರಿಕೆಯಿಂದಿದ್ದನು. ಪ್ರತ್ಯಕ್ಷ ಪ್ರಮಾಣವಿಲ್ಲದೆ ಏನೊಂದನ್ನೂ ಸ್ವೀಕರಿಸಬಾರದೆಂದೂ ದೃಢನಿಶ್ಚಯ ಮಾಡಿಕೊಂಡನು. ಗುರುವಿನ ಬಳಿ ಅಪ್ರಿಯ ಭಾಜನನಾದರೂ ಚಿಂತೆಯಿಲ್ಲ ಸತ್ಯವನ್ನು ಮಾತ್ರ ಬಿಟ್ಟುಕೊಡಬಾರದೆಂದು ಮನಸ್ಸು ಮಾಡಿದನು. ತನಗೊದಗಿದ ಅಲೌಕಿಕಾನುಭವಗಳನ್ನು ಮನಃಶಾಸ್ತ್ರೀಯವಾಗಿ ವಿವರಿಸಲು ಹೊರಟನು. ಹುಚ್ಚು ಪೂಜಾರಿ ಮಾಟಗಾರನಾಗಿರಬಹುದೇ? ಆತನು ತನ್ನ ಮೇಲೆ ಪ್ರಯೋಗಿಸಿದ ವಿದ್ಯೆ ಸಮ್ಮೋಹನ ವಿದ್ಯೆಯಾಗಿರಬಾರದೇಕೆ? ಆದರೆ ಉತ್ತರಕ್ಷಣದಲ್ಲಿಯೇ ತನ್ನಂತಹ ದೃಢ ಸಬಲ ಸುತೀಕ್ಷ್ಣ ಚಿತ್ತಾನ್ವಿತನೂ ಕೃತವಿದ್ಯನೂ ಆದ ಅರ್ಧಸಂದೇಹವಾದಿ ಒಬ್ಬ ಕ್ಷುದ್ರ ಪುರೋಹಿತನ ಸಮ್ಮೋಹನ ವಿದ್ಯೆಗೆ ಠಕ್ಕುಗೊಳ್ಳುವುದಾದರೂ ಹೇಗೆ? ಎಂದು ವಿಚಾರಪರನಾದನು. ಕಡೆಗೆ ಇತರರೊಡನೆ ತನ್ನ ಸಂದೇಹಗಳನ್ನು ಕುರಿತು ಪ್ರಸ್ತಾಪಿಸಿ ಅವರ ಅಭಿಪ್ರಾಯಗಳನ್ನೂ ತಿಳಿಯತೊಡಗಿದನು. ಕೆಲವರು ಪೂಜಾರಿಗೆ ಹುಚ್ಚು ಹಿಡಿದಿದೆ ಎಂದರು; ಮತ್ತು ಕೆಲವರು ಆತನು ಅಲೌಕಿಕ ಸಿದ್ಧಪುರುಷ ಎಂದರು; ಇನ್ನು ಕೆಲವರು ಅವನದೆಲ್ಲ ಬರಿಯ ನಟನೆ ಎಂದರು; ಉಳಿದ ಕೆಲವರು ಆತನು ಅವತಾರಪುರುಷ ಎಂದರು. ಹೀಗೆ ನಾನಾ ಜನರು ನಾನಾ ವಿಧವಾಗಿ ಹೇಳತೊಡಗಿದರು. ವಾಗ್ಮಿವರ್ಯ ಸೂಕ್ಷ್ಮಮತಿ ಮಾನನೀಯ ಕೇಶವಚಂದ್ರನು ಮರುಳು ಪೂಜಾರಿಯನ್ನು ಮುಕ್ತಕಂಠದಿಂದ ಸ್ತೋತ್ರ ಮಾಡಲಾರಂಭಿಸಿದ್ದನು. ವಿಜಯಕೃಷ್ಣ ಗೋಸ್ವಾಮಿ ಮೊದಲಾದ ಧರ್ಮಜೀವಿಗಳು ಹುಚ್ಚನ ಪದಪ್ರಾಂತದಲ್ಲಿ ಕುಳಿತು ಅಮೃತ ಮಧುರ ಧರ್ಮೋಪದೇಶವನ್ನು ಕೈಕೊಳ್ಳುತ್ತಿದ್ದರು. ಪ್ರತಾಪಚಂದ್ರ ಮಜುಮದಾರ ಮೊದಲಾದ ಪಾಶ್ಚಾತ್ಯ ಪ್ರತ್ಯಾಗತ ಮೇಧಾವಿಗಳು ಪೂಜಾರಿಯ ಮಾತುಗಳಿಗೆ ಮರುಳಾಗುತ್ತಿದ್ದರು. ಇದೆಲ್ಲವೂ ನರೇಂದ್ರನಿಗೆ ಗೊತ್ತಿತ್ತು. ಆತನು ಬ್ರಾಹ್ಮ ಸಮಾಜಕ್ಕೂ ಹೋಗುತ್ತಿದ್ದನು; ದಕ್ಷಿಣೇಶ್ವರಕ್ಕೂ ಹೋಗಿಬರುತ್ತಿದ್ದನು. ಉಗ್ರ ಬ್ರಾಹ್ಮ ಸಮಾಜಿಯಾಗಿದ್ದ ಪಂಡಿತ ಶಿವನಾಥ ಶಾಸ್ತ್ರಿಗೆ ಇದು ಸರಿಬೀಳಲಿಲ್ಲ. ಆತನು ನರೇಂದ್ರನಿಗೆ ದಕ್ಷಿಣೇಶ್ವರಕ್ಕೆ ಹೋಗಬಾರದೆಂದು ಬೋಧಿಸಿದನು. ಅಷ್ಟೇ ಅಲ್ಲದೆ ಪರಮಹಂಸರ ಸಮಾಧ್ಯವಸ್ಥೆಗಳನ್ನು ನಿರ್ದೇಶಿಸಿ “ಅದೇನು ಸಮಾಧಿ? ಸ್ವಲ್ಪ ವಿಚಾರಿಸಿದರೆ ಎಲ್ಲ ಗೊತ್ತಾಗುವುದು. ಅದೊಂದು ನರಗಳ ಜಾಡ್ಯವಿರಬೇಕು. ಕಠೋರತರ ಶಾರೀರಕ ಅಭ್ಯಾಸಗಳಿಂದ ಪರಮಹಂಸನ ತಲೆ ಕೆಟ್ಟುಹೋಗಿದೆ” ಎಂದನು. ನರೇಂದ್ರನು ಸಂಶಯಗಳ ತುಮುಲದಲ್ಲಿ ಸಿಕ್ಕಿ ಗಂಭೀರ ಚಿಂತಾಮಗ್ನನಾದರೂ ಎದೆಗೆಡದೆ ಪರೀಕ್ಷಿಸಲು ಸಿದ್ಧನಾದನು.

ನರೇಂದ್ರನು ಪರಮಹಂಸರಿಂದ ಬಹಳ ಆಕರ್ಷಿತನಾದರೂ ಪ್ರಯತ್ನಪೂರ್ವಕವಾಗಿ ಆಕರ್ಷಣೆಯಿಂದ ಹೊರಗಿರಲು ಸಾಧಿಸುತ್ತಿದ್ದನು. ಪರಮಹಂಸರಾದರೋ ಶಿಷ್ಯನ ಜ್ಯೋತಿರ್ಮಯ ಭಾವೀ ಜೀವಮಾನವನ್ನೂ ಆತನಿಂದ ಒದಗಬೇಕಾದ ಲೋಕಕಲ್ಯಾಣವನ್ನೂ ಆತನ ಜನ್ಮೋದ್ದೇಶವನ್ನೂ ಯೋಗದೃಷ್ಟಿಯಿಂದ ಮೊದಲೇ ತಿಳಿದವರಾದುದರಿಂದ ನರೇಂದ್ರನ ಮೇಲೆ ಸ್ವಾರ್ಥಶೂನ್ಯವಾದ ಅಹೇತುಕಪ್ರೇಮವನ್ನು ಬೀರಿದರು. ಸರ್ವಧರ್ಮಗಳನ್ನೂ ತಮ್ಮ ಅಮೋಘವಾದ ತಪಸ್ಸು ಮತ್ತು ಸಾಧನೆಗಳಿಂದ ಅರಿತ ಅವರ ಉಪದೇಶಮಾರ್ಗ ಇತರ ಹಾದಿಗಳಿಂದ ಬೇರೆಯಾಗಿತ್ತು. ಅವರು ನಾಶಕಮಾರ್ಗಗಾಮಿಗಳಾಗಿರಲಿಲ್ಲ; ಪೋಷಕ ಪಥಾವಲಂಬಿಯಾಗಿದ್ದರು. ಸರ್ವಧರ್ಮಗಳೂ ಸತ್ಯ, ಮತವಿರುವಂತೆ ಪಥ ಎಂದು ಅನುಭವದಿಂದ ಅರಿತ ಅವರು ಯಾವ ಭಾವವನ್ನೂ ಖಂಡಿಸದೆ, ಯಾರ ನಂಬುಗೆಯನ್ನೂ ಕೆಡಿಸದೆ, ಅವರವರ ಸಂಸ್ಕಾರ ಅಭಿರುಚಿಗಳಿಗೆ ತಕ್ಕಂತೆ ಅವರವರಿಗೆ ಉಪದೇಶ ಕೊಡುತ್ತಿದ್ದರು. ಆದ್ದರಿಂದ ಅವರು ಎರೆಮಣ್ಣಿನಿಂದ ತನಗೆ ಬೇಕಾದ ಆಕೃತಿಯ ಮಡಕೆಗಳನ್ನು ಮಾಡುವ ಕುಶಲನಾದ ಕುಂಬಾರನಂತೆ ಜನರ ಮನಸ್ಸುಗಳನ್ನು ತಿದ್ದಲು ಸಮರ್ಥರಾಗಿದ್ದರು. ಎಂತಹ ಕೊಂಕು ಎದೆಯೂ ಅವರ ದಿವ್ಯಪ್ರಭಾವದಿಂದ ಬಹುಬೇಗನೆ ನೆಟ್ಟಗಾಗುತ್ತಿತ್ತು. ಆದ್ದರಿಂದ ನರೇಂದ್ರನೂ ಕೆಲವು ದಿನಗಳಲ್ಲಿಯೆ ಮೆಲ್ಲಮೆಲ್ಲನೆ ಅವರ ಹಾದಿಗೆ ಬಂದುದನ್ನು ನಾವು ನೋಡಲಿದ್ದೇವೆ.

ಬ್ರಾಹ್ಮಸಮಾಜಕ್ಕೆ ಸೇರಿದ್ದ ನರೇಂದ್ರನು ಸಗುಣ ನಿರಾಕಾರ ಬ್ರಹ್ಮೋಪಾಸಕನಾಗಿದ್ದನೆಂಬುದನ್ನು ನಾವು ಹಿಂದೆಯೆ ತಿಳಿದಿದ್ದೇವೆ. ಆದ್ದರಿಂದ ಆತನಿಗೆ ಮೂರ್ತಿಪೂಜೆಯಲ್ಲಿ ತುಂಬಾ ತಿರಸ್ಕಾರವಿತ್ತು. ತರುವಾಯ ಸ್ವಾಮಿ ಬ್ರಹ್ಮಾನಂದರಾದ ರಾಖಾಲಚಂದ್ರಘೋಷನೂ ನರೇಂದ್ರನಾಥನೊಡನೆ ಬ್ರಾಹ್ಮಸಮಾಜಕ್ಕೆ ಸೇರಿದ್ದನು. ಆತನು ಗುಟ್ಟಾಗಿ ಕಾಳಿಯ ಮಂದಿರವನ್ನು ಪ್ರವೇಶಿಸಿ ದೇವಿಯ ವಿಗ್ರಹದ ಮುಂದೆ ಸಾಷ್ಟಾಂಗ ಪ್ರಣಾಮ ಮಾಡುತ್ತಿದ್ದುದು ನರೇಂದ್ರನ ಕಣ್ಣಿಗೆ ಬಿತ್ತು. ಅವನು ಕಿಡಿಕಿಡಿಯಾದನು. ರಾಖಾಲನನ್ನು ಮೋಸಗಾರನೆಂದೂ ಮಿಥ್ಯಾವಾದಿಯೆಂದೂ ಠಾಕೂರರ ಮುಂದೆಯೆ ಬೈಯತೊಡಗಿದನು. ಏಕೆಂದರೆ ಬ್ರಾಹ್ಮಸಮಾಜಕ್ಕೆ ಸೇರಿದವರು ಯಾರೆ ಆಗಲಿ ಮೂರ್ತಿಗಳ ಮುಂದೆ ನಿಂತು ಕೈಮುಗಿಯಬಾರದೆಂಬ ಕಟ್ಟಳೆಯಿತ್ತು. ರಾಖಾಲನೂ ತಲೆತಗ್ಗಿಸಿಬಿಟ್ಟನು. ಆದರೆ ಗುರುಗಳು ಅವನ ಸಹಾಯಕ್ಕೆ ಬಂದು ನರೇಂದ್ರನನ್ನು ಕುರಿತು “ನೀನು ಬಯ್ಯುವುದೇಕೆ? ಯಾರಲ್ಲಿ ಭಕ್ತಿಯಿದೆಯೋ ಅವರು ಮೂರ್ತಿಪೂಜೆ ಮಾಡಿದರೇನು ತಪ್ಪು? ನಿನಗೆ ಇಷ್ಟವಿಲ್ಲದಿದ್ದರೆ ನೀನು ಮಾಡಬೇಡ. ಇತರರ ಭಾವನಷ್ಟ ಮಾಡಲು ನಿನಗೇನು ಅಧಿಕಾರ?” ಎಂದರು. ನರೇಂದ್ರನು ಚಿಂತಿತಭಾವದಿಂದ ನಿರಸ್ತನಾದನು.

ಸಗುಣನಿರಾಕಾರ ಬ್ರಹ್ಮದಲ್ಲಿ ನರೇಂದ್ರನಿಗೆ ಪ್ರೀತಿಯಿದ್ದುದನ್ನು ಕಂಡು ಭಗವಾನರು ಆತನಿಗೆ ಮೊದಮೊದಲು ನಿರಾಕಾರ ಬ್ರಹ್ಮೋಪದೇಶವನ್ನು ಕೊಡುತ್ತಿದ್ದರು. ಏಕೆಂದರೆ ಯಾರು ಮುಂದೆ ಲೋಕದಲ್ಲೆಲ್ಲ ಸರ್ವ ಧರ್ಮ ಸಮನ್ವಯ ತತ್ತ್ವವನ್ನು ಪ್ರಚಾರ ಮಾಡಲು ಜನ್ಮಧಾರಣೆ ಮಾಡಿರುವನೋ ಅಂತಹವನು ಯಾವುದಾದರೂ ಒಂದೇ ಸಣ್ಣ ಭಾವವನ್ನು ಮಾತ್ರ ಹಿಡಿದು ಬಿಟ್ಟರೆ ಜಗತ್ತಿಗೆ ಕೆಡುಕಾಗುವುದು ಎಂಬುದನ್ನು ತಿಳಿದು ಅವರು ನರೇಂದ್ರನಿಗೆ ಸರ್ವ ಭೂಮವೂ ಸರ್ವಮತಗ್ರಾಸಿನಿಯೂ ಆದ ವೇದಾಂತೋಕ್ತ ಸಾಧನಮಾರ್ಗವನ್ನು ಬೋಧಿಸಲು ತೊಡಗಿದರು. ನರೇಂದ್ರನೂ ಮೊದಮೊದಲು ಅದನ್ನು ತಿರಸ್ಕಾರ ಪೂರ್ವಕವಾಗಿ ಖಂಡಿಸತೊಡಗಿದನು. ಗುರುದೇವನು ‘ತತ್ತ್ವಮಸಿ’ ಎಂಬ ತತ್ತ್ವವನ್ನು ನಿರೂಪಿಸಿ ‘ಸರ್ವವೂ ಬ್ರಹ್ಮ, ನೀನೂ ಬ್ರಹ್ಮ’ ಎಂದು ಹೇಳಿದರೆ, ನರೇಂದ್ರನು ನಗುತ್ತ ‘ನಾನೂ ಬ್ರಹ್ಮ! ಇದು ಬರಿಯ ಶಿಶುಪ್ರಲಾಪವಲ್ಲದೆ ಮತ್ತೇನೂ ಅಲ್ಲ’ ಎಂದುಬಿಡುವನು.

ಗುರು ಶಿಷ್ಯ ಸಂಬಂಧವು ರಹಸ್ಯತಮವಾದುದು. ನಿಜವಾಗಿ ಸಿದ್ಧಪುರುಷನಾದ ಗುರು ಪರಮಾತ್ಮನ ಪ್ರತಿನಿಧಿ. ಆದ್ದರಿಂದಲೆ ಗುರುವಿಲ್ಲದೆ ಯಾವ ಸಿದ್ಧಿಯೂ ದೊರಕದೆಂದು ಶಾಸ್ತ್ರಗಳು ಸಾರುತ್ತಿವೆ. ಪರಿಪಕ್ವವಾದ ಸಂಸ್ಕಾರವುಳ್ಳ ನರನಿಗೆ ಗುರು ಯಾವ ರೂಪದಿಂದಾದರೂ ಬರಬಹುದು. ಒಂದು ಪುಸ್ತಕ ಗುರುವಾಗಬಹುದು. ಒಂದು ರಮಣೀಯ ದೃಶ್ಯ ಗುರುವಾಗಬಹುದು. ಬ್ರದರ್ ಲಾರೆನ್ಸ್ ಎಂಬುವವನಿಗೆ ಎಲೆಗಳಿಲ್ಲದೆ ಬರಲು ಬರಲಾಗಿ ನಿಂತಿದ್ದ ಚಳಿಗಾಲದ ಮರವೊಂದು ಗುರುವಾಯಿತಂತೆ. ದೈವಿಕ ಗುರು ಶಿಷ್ಯನ ಅಂತರಂಗದಲ್ಲಿ ಗುಪ್ತವಾಗಿರುವ ಸಮಸ್ತ ಶಕ್ತಿಗಳನ್ನೂ ಈಚೆಗೆ ಎಳೆಯಬಲ್ಲನು.

ಶ್ರೀರಾಮಕೃಷ್ಣ ನರೇಂದ್ರನಾಥ ಗುರು ಶಿಷ್ಯ ಸಂಬಂಧವೂ ಅದ್ಭುತವಾದುದು. ಅದರಲ್ಲಿ ಒಂದು ಎರಡು ಮೂರು ನಾಲ್ಕು ಎಂದು ಲೆಕ್ಕ ಮಾಡಿ ಬರೆಯಬಹುದಾದ ಘಟನೆಗಳು ಅಷ್ಟೇನೂ ಹೆಚ್ಚಾಗಿಲ್ಲ. ಏಕೆಂದರೆ ಅದು ಅನಿರ್ವಚನೀಯವಾದ ಸಾಧನೆ ಸಿದ್ಧಿಗಳ ರಹಸ್ಯ ಕಥೆ! ಸ್ವಾಮಿ ವಿವೇಕಾನಂದರಲ್ಲಿ ತೋರಿಬರುವ ಸ್ವಾರ್ಥಶೂನ್ಯತೆ, ತೀವ್ರ ವೈರಾಗ್ಯ, ಅಮಿತಶಕ್ತಿ, ಅಹೇತುಕ ಭಕ್ತಿ, ಸುತೀಕ್ಷ್ಣ ಬುದ್ಧಿ, ಗಭೀರಸಿದ್ಧಿ ಇವುಗಳಿಂದ ನಾವು ಅದರ ಮಹಿಮೆಯನ್ನು ಸ್ವಲ್ಪ ಮಾತ್ರ ತಿಳಿಯಬಹುದು. ಪರಮಹಂಸರು ಹಾಲಿನ ಬಿಣ್ಪಿನಿಂದ ಕೆಚ್ಚಲು ಬಿರಿಯುತ್ತಿರುವ ಹಸು ತನ್ನ ಕರುವಿನ ಬರವನ್ನೆ ಕಾತರತೆಯಿಂದ ಹಾರೈಸುವಂತೆ ತಮ್ಮ ಅಂತರಂಗ ಶಿಷ್ಯರ ಆಗಮನವನ್ನು ವ್ಯಾಕುಲತೆಯಿಂದ ಇದಿರುನೋಡುತ್ತಿದ್ದರು. ಅದರಲ್ಲಿಯೂ ನರೇಂದ್ರನು ಬರುವುದು ಒಂದೆರಡು ದಿವಸ ತಡವಾದರೆ “ನರೇಂದ್ರ! ನರೇಂದ್ರ! ಅವನೆಲ್ಲಿ? ಇನ್ನೂ ಬರಲಿಲ್ಲವಲ್ಲಾ” ಎಂದು ಅತ್ಯುದ್ವಿಗ್ನರಾಗುತ್ತಿದ್ದರು. ಎಷ್ಟೋ ಸಾರಿ ತಾವೇ ಆತನನ್ನು ಹುಡುಕಿಕೊಂಡು ಕಲ್ಕತ್ತಾ ನಗರಕ್ಕೇ ಹೋಗಿ ಬಿಡುತ್ತಿದ್ದರು. ಒಂದು ಸಾರಿ ನರೇಂದ್ರನು ಒಂದೆರಡು ದಿನಗಳಾದರೂ ದಕ್ಷಿಣೇಶ್ವರಕ್ಕೆ ಬರಲಿಲ್ಲ. ಪರಮಹಂಸರು ಕಲ್ಕತ್ತಾಕ್ಕೆ ತಾವೆ ಹೊರಟರು. ಆ ದಿನ ಭಾನುವಾರವಾದ್ದರಿಂದ ನರೇಂದ್ರನು ಸಾಧಾರಣ ಬ್ರಾಹ್ಮ ಸಮಾಜದ ಸಂಧ್ಯೋಪಾಸನೆಗೆ ಹೋಗಿದ್ದನು. ಪರಮಹಂಸರು ಆಹ್ವಾನಿತರಾಗದೆ ಅಲ್ಲಿಗೆ ಹೋಗುವುದು ಅಷ್ಟೇನೂ ಮರ್ಯಾದೆಯಲ್ಲವೆಂದು ಅರಿತಿದ್ದರೂ ನರೇಂದ್ರನನ್ನು ನೋಡುವ ಮಹದಾಕಾಂಕ್ಷೆಯ ನಿಮಿತ್ತವಾಗಿ ಬ್ರಾಹ್ಮಸಮಾಜದ ಮಂದಿರಕ್ಕೆ ಹೋದರು. ಅಲ್ಲಿ ಭಕ್ತರೆಲ್ಲರೂ ಸೇರಿ ವೇದಿಕೆಯ ಮೇಲೆ ಕುಳಿತು ಮಾತಾಡುತ್ತಿದ್ದ ಆಚಾರ್ಯನ ಉಪದೇಶವನ್ನು ಆಲಿಸುತ್ತಿದ್ದರು. ನರೇಂದ್ರನು ಭಜನ ಮಂಡಲಿಯ ನಡುವೆ ಮತ್ತೊಂದು ವೇದಿಕೆಯ ಮೇಲೆ ಕುಳಿತಿದ್ದನು. ಅಷ್ಟರಲ್ಲಿ ಪರಮಹಂಸರು ಅರ್ಧ ಬಾಹ್ಯಾವಸ್ಥಿತರಾಗಿ “ನರೇನ್! ನರೇನ್!” ಎಂದು ಕರೆಯುತ್ತ ಮಂದಿರದೊಳಕ್ಕೆ ನುಗ್ಗಿದರು. ಕುಳಿತಿದ್ದವರೆಲ್ಲರೂ ಎದ್ದುನಿಂತರು. ಗಲಭೆಯಾಯಿತು. ವೇದಿಕೆಯ ಮೇಲಿದ್ದ ಆಚಾರ್ಯನು ಉಪದೇಶವನ್ನು ನಿಲ್ಲಿಸಬೇಕಾಯಿತು. ಅಷ್ಟರಲ್ಲಿ ನರೇಂದ್ರನು ಪರಮಹಂಸರ ಬಳಿಗೆ ಬಂದನು. ಅವರು ಸಮಾಧಿಸ್ಥರಾಗಿದ್ದರು. ಅದನ್ನು ನೋಡುವುದಕ್ಕೆ ಸುತ್ತಲಿಂದಲೂ ಜನರು ಮುತ್ತಿದರು. ಅಷ್ಟು ಹೊತ್ತಿಗೆ ಯಾರೋ ದೀಪಗಳನ್ನು ಆರಿಸಿಬಿಟ್ಟರು. ಗಡಿಬಿಡಿ ಅತಿಯಾಯಿತು. ನರೇಂದ್ರನು ಪರಮಹಂಸರನ್ನು ಹಿಂಬಾಗಿಲಿನಿಂದ ಹೊರಗೆ ಸಾಗಿಸಿ, ಒಂದು ಗಾಡಿಯನ್ನು ಗೊತ್ತುಮಾಡಿ ಅವರೊಡನೆ ದಕ್ಷಿಣೇಶ್ವರಕ್ಕೆ ಹೋದನು.

ಅಲ್ಲಿಗೆ ಹೋದ ಮೇಲೆ ಗುರುಗಳನ್ನು ತರಾಟೆಗೆ ತೆಗೆದುಕೊಂಡನು. “ಹೊತ್ತು ಗೊತ್ತಿಲ್ಲದೆ ನೀವು ನನ್ನನ್ನು ಹುಡುಕಿಕೊಂಡು ಬಂದುದೇಕೆ? ನೋಡಿದವರು ಏನನ್ನುವರು? ನೀವು ಹೀಗೆ ಧ್ಯಾನ ಜಪಗಳನ್ನೆಲ್ಲಾ ಬಿಟ್ಟು ನನ್ನನ್ನೇ ಕುರಿತು ಚಿಂತಿಸುತ್ತಿದ್ದರೆ ಮುಂದಿನ ಜನ್ಮದಲ್ಲಿ ನನ್ನ ಹಾಗೆಯೇ ಆಗಿಬಿಡುವಿರಿ. ಭರತ ರಾಜನು ತನ್ನ ಮುದ್ದಿನ ಜಿಂಕೆಯ ಮರಿಯನ್ನು ಕುರಿತು ಚಿಂತಿಸಿ ಚಿಂತಿಸಿ ಕಡೆಗೆ ಮರುಜನ್ಮದಲ್ಲಿ ಜಿಂಕೆಯಾದಂತೆ!” ಎಂದು ಮೊದಲಾಗಿ ಗದರಿಸಿದನು. ಪರಮಹಂಸರು ಮಾತನಾಡಲಿಲ್ಲ. ಚಿಂತೆಗೊಳಗಾದರು. ಸ್ವಲ್ಪ ಹೊತ್ತಾದ ಮೇಲೆ ಕಾಳಿಯ ಮಂದಿರಕ್ಕೆ ಹೋದರು.

ಹಿಂದಿರುಗಿ ಬಂದು “ನರೇನ್, ನರೇನ್, ತಾಯಿ ನನಗೆಲ್ಲಾ ಹೇಳಿದಳು: ‘ಅವನಿನ್ನೂ ಚಿಕ್ಕ ಹುಡುಗ, ಅನುಭವ ಸಾಲದು, ಸುಮ್ಮನೆ ಅವನ ಮಾತನ್ನು ಕಟ್ಟಿಕೊಂಡು ನೀನೇಕೆ ವ್ಯಸನ ಮಾಡುವುದು? ಅವನಲ್ಲಿ ನಿನಗೆ ನಾರಾಯಣನು ತೋರುವುದರಿಂದಲೇ ನೀನು ಅವನಿಂದ ಆಕರ್ಷಿತನಾಗಿದ್ದೀಯೆ’ ಎಂದು ಹೇಳಿದಳು. ನಿನ್ನಲ್ಲಿ ನಾರಾಯಣನನ್ನು ನಾನು ಕಾಣಲಾರದ ಮರುದಿನ ನಿನ್ನ ಮುಖವನ್ನು ನಾನು ನೋಡುವುದೇ ಇಲ್ಲ” ಎಂದರು.

ನರೇಂದ್ರನ ಶಕ್ತಿಸಾಮರ್ಥ್ಯಗಳನ್ನೂ ಮಹಿಮೆಯನ್ನೂ ಕುರಿತು ಪರಮಹಂಸರು ಎಲ್ಲರೊಡನೆಯೂ ನಿರ್ದಾಕ್ಷಿಣ್ಯವಾಗಿ ಪ್ರಸ್ತಾಪಿಸುತ್ತಿದ್ದರು. ಒಂದು ದಿನ ಕೇಶವಚಂದ್ರ, ವಿಜಯಕೃಷ್ಣಗೋಸ್ವಾಮಿ ಮೊದಲಾದವರು ದಕ್ಷಿಣೇಶ್ವರಕ್ಕೆ ಬಂದಿದ್ದರು. ನರೇಂದ್ರನೂ ಅಲ್ಲಿ ಒಂದು ಕಡೆ ಕುಳಿತಿದ್ದನು. ಸ್ವಲ್ಪ ಹೊತ್ತಾದ ಮೇಲೆ ಕೇಶವ, ವಿಜಯ ಮೊದಲಾದವರು ಹೊರಟುಹೋದರು. ಪರಮಹಂಸರು ಅಲ್ಲಿ ನೆರೆದಿದ್ದ ಭಕ್ತವೃಂದವನ್ನು ನಿರ್ದೇಶಿಸಿ ನರೇಂದ್ರನನ್ನು ತೋರಿಸುತ್ತ “ನೋಡಿ, ಇವನ ಮುಂದೆ ಅವರೆಲ್ಲ ಎಲ್ಲಿ? ಕೇಶವ ವಿಜಯರಲ್ಲಿ ಜ್ಞಾನ ಒಂದು ಸೊಡರಿನಂತೆ ಮಿಣುಕುತ್ತದೆ; ಇವನಲ್ಲಿ ಜ್ಞಾನ ಸೂರ್ಯನಂತೆ ಪ್ರಜ್ವಲಿಸುತ್ತಿದೆ” ಎಂದರು. ಅದನ್ನು ಕೇಳಿದ ನರೇಂದ್ರನು ತಟಕ್ಕನೆ ತನ್ನ ಸ್ಥಾನವನ್ನು ಬಿಟ್ಟೆದ್ದು ಮುಂದೆ ಬಂದು ಪ್ರತಿಭಟಿಸಿದನು. “ನೀವು ಹೇಳುವುದೇನು, ಮಹಾಶಯ! ಜಗದ್ವಿಖ್ಯಾತ ಕೇಶವಸೇನರೆಲ್ಲಿ? ಶಾಲೆಯ ಹುಡುಗನಾದ ನಾನೆಲ್ಲಿ? ಕೇಳಿದವರು ನಿಮ್ಮನ್ನು ಮರುಳು ಎನ್ನದಿರುವುದಿಲ್ಲ!” ಎಂದನು. ಪರಮಹಂಸರು ಮುಗುಳ್ನಗೆ ನಗುತ್ತ ಸರಳಭಾವದಿಂದ “ನಾನೇನು ಮಾಡಲಿ ಹೇಳು; ತಾಯಿ ತೋರಿದಳು, ನಾನು ಹೇಳಿಬಿಟ್ಟೆ” ಎಂದರು. ನರೇಂದ್ರನು ಸಂದಿಗ್ಧ ಭಾವದಿಂದ “ತಾಯಿ ಹೇಳಿದಳೋ, ಅಥವಾ ನಿಮ್ಮ ತಲೆಯ ಮರುಳ್ತನವೊ – ನನಗೆ ಹೇಗೆ ಗೊತ್ತಾಗಬೇಕು? ನಾನಾಗಿದ್ದರೆ ಅದನ್ನು ಮರುಳ್ತನವೆಂದು ಮೂಲೆಗೊತ್ತುತ್ತಿದ್ದೆ” ಎಂದುಬಿಟ್ಟನು.

ನರೇಂದ್ರನನ್ನು ನೋಡಿದಂದಿನಿಂದ ಆತನು ಅದ್ವೈತ ವೇದಾಂತ ರಹಸ್ಯಗಳಲ್ಲಿ ಸಿದ್ಧಿ ಹೊಂದಲು ಯೋಗ್ಯತಮನಾದ ಅಧಿಕಾರಿಪುರುಷನೆಂದು ಪರಮಹಂಸರು ತಿಳಿದಿದ್ದರು. ನರೇಂದ್ರನಿಗೆ ಮಾತ್ರ ‘ಅಹಂ ಬ್ರಹ್ಮಾಸ್ಮಿ’, ‘ಶಿವೋsಹಂ’, ‘ತತ್ತ್ವಮಸಿ’ ಮೊದಲಾದ ಮಾತುಗಳನ್ನು ಕೇಳಿದರೆ ಆಗುತ್ತಿರಲಿಲ್ಲ. ಆದರೂ ಭಗವಾನರು ಆತನು ದಕ್ಷಿಣೇಶ್ವರಕ್ಕೆ ಬಂದಾಗಲೆಲ್ಲ ಅಷ್ಟಾವಕ್ರ ಸಂಹಿತೆ ಮೊದಲಾದ ಅದ್ವೈತದರ್ಶನ ಸಂಬಂಧವಾದ ಗ್ರಂಥಗಳನ್ನು ತಮಗೆ ಓದಿ ಹೇಳುವಂತೆ ಮಾಡುತ್ತಿದ್ದರು. ನರೇಂದ್ರನು ಗ್ರಂಥವನ್ನು ಓದಿ ಹೇಳುತ್ತ ಹೇಳುತ್ತ ಮಧ್ಯೆ ಮಧ್ಯೆ ಜುಗುಪ್ಸೆಯನ್ನು ಸೂಚಿಸಿ “ನಾನೂ ಬ್ರಹ್ಮ, ನೀನೂ ಬ್ರಹ್ಮ, ಎಲ್ಲವೂ ಬ್ರಹ್ಮ! ಎಲ್ಲ ಬರಿಯ ಕಾಡುಹರಟೆ! ಇದನ್ನೆಲ್ಲ ಬರೆದ ಋಷಿಗಳಿಗೆ ತಲೆ ಕೆಟ್ಟಿತ್ತೆಂದೇ ತೋರುತ್ತದೆ!” ಎಂದು ಸ್ವಲ್ಪವೂ ಹಿಂದುಮುಂದು ನೋಡದೆ ಅಣಕಿಸುತ್ತಿದ್ದನು. ತಟಕ್ಕನೆ ಶಿಷ್ಯನ ಭಾವಭಂಗ ಮಾಡಲು ಇಷ್ಟಪಡದೆ ಪರಮಹಂಸರು “ಅವರ ಮತ ನಿನಗೆ ಸೇರದೆ ಹೋಗಬಹುದು. ಅಂದಮಾತ್ರಕ್ಕೆ ಅವರನ್ನು ನಿಂದಿಸುವುದೇಕೆ? ಪರಮಾತ್ಮನ ಅನಂತತ್ವಕ್ಕೆ ಮೇರೆಯನ್ನೇಕೆ ಕಲ್ಪಿಸುವುದು? ಪರಮಾತ್ಮನನ್ನು ಕುರಿತು ಧ್ಯಾನಮಾಡು. ಆತನು ಯಾವ ಮಾರ್ಗವನ್ನು ನಿನಗೆ ತೋರಿಸುವನೋ ಅದರಲ್ಲಿ ಶ್ರದ್ಧೆಯಿಂದ ಮುಂದುವರಿ! ಸುಮ್ಮನೆ ಈ ವಿಧವಾದ ರಂಧ್ರಾನ್ವೇಷಣೆಯಿಂದ ಏನು ಪ್ರಯೋಜನ!” ಎನ್ನುತ್ತಿದ್ದರು. ನರೇಂದ್ರನು ಮಾತ್ರ ತನಗೆ ಮಿಥ್ಯೆಯೆಂದು ತೋರಿದುದನ್ನು ಸತ್ಯವೆನ್ನಲು ಮನಸ್ಸಿಲ್ಲದ ಅದ್ವೈತ ವೇದಾಂತವನ್ನು ಮನಬಂದಂತೆ ಪರಿಹಾಸ್ಯ ಮಾಡುತ್ತಿದ್ದನು.

ಶಿಷ್ಯನು ಮಾರ್ಗವು ಜ್ಞಾನಮಾರ್ಗವೆಂದೂ ಅದ್ವೈತವೇ ಆತನನ್ನು ಉನ್ನತೋನ್ನತ ಸಿದ್ಧಿಗೆ ಕೊಂಡೊಯ್ಯುವುದೆಂದೂ ಗುರುಗಳು ಚೆನ್ನಾಗಿ ಅರಿತಿದ್ದರು. ಒಂದು ದಿನ ಜೀವಬ್ರಹ್ಮರ ಐಕ್ಯವನ್ನು ಶಿಷ್ಯನಿಗೆ ಯುಕ್ತಿಯಿಂದ ತಿಳಿಸಲು ಪ್ರಯತ್ನಪಟ್ಟರು. ಕಡೆಗೂ ಶಿಷ್ಯನು ಶರಣಾಗತನಾಗಲಿಲ್ಲ. ಪ್ರತಾಪಚಂದ್ರ ಹಾಜರನೊಡನೆ ಕೋಣೆಯಿಂದ ಹೊರಗೆ ಬಂದು ಸಿಗರೇಟು ಸೇದುತ್ತಾ “ಜೀವಬ್ರಹ್ಮರು ಒಂದೆಯಂತೆ! ಅದು ಹೇಗಾದೀತು? ಹೂಜಿಯೂ ಬ್ರಹ್ಮ! ನೀರೂ ಬ್ರಹ್ಮ! ಸಿಗರೇಟು ಬ್ರಹ್ಮ! ಹೊಗೆಯೂ ಬ್ರಹ್ಮ! ನಾನೂ ಬ್ರಹ್ಮ! ನೀನೂ ಬ್ರಹ್ಮ! ಎಲ್ಲಾದರೂ ಉಂಟೆ, ಇದಕ್ಕಿಂತ ಹೆಚ್ಚಾದ ಮರುಳ್ತನ? ಪಿತ್ತ ನೆತ್ತಿಗೇರಿದ್ದರೇ ಸರಿ ಇದನ್ನು ಒಪ್ಪುವುದು!” ಎಂದು ಹರಟುತ್ತಿದ್ದನು. ಹಾಜರನೂ ನರೇಂದ್ರನೊಡನೆ ಸೇರಿ ಅದ್ವೈತವನ್ನು ಅಣಕಿಸಲಾರಂಭಿಸಿದನು. ಪರಮಹಂಸರು ಒಳಗಿನಿಂದಲೇ ನರೇಂದ್ರನ ಮಾತುಗಳನ್ನೂ ಅವನು ಗಹಗಹಿಸಿ ನಗುವುದನ್ನೂ ಕೇಳಿ, ಬಟ್ಟೆಯನ್ನು ಕಂಕುಳಲ್ಲಿಟ್ಟುಕೊಂಡು ಹೊರಗೆ ಬಂದು, ಮುಗುಳ್ನಗೆ ನಗುತ್ತ, “ಓಹೋ! ಏನು ಮಾತಾಡುತ್ತಿದ್ದೀರಿ!” ಎಂದು ಹೇಳುತ್ತ ನರೇಂದ್ರನನ್ನು ಮುಟ್ಟಿದರು. ಅವನು ಸಮಾಧಿಸ್ಥನಾದನು. ಸ್ವಾಮಿ ವಿವೇಕಾನಂದರು ಆ ಘಟನೆಯ ವಿಚಾರವಾಗಿ ಹೀಗೆಂದು ಬರೆದಿರುವರು:‌

“ಆ ಐಂದ್ರಜಾಲಿಕ ಸ್ಪರ್ಶದಿಂದ ನನ್ನ ಬಗೆಯೆ ಬೇರೆಯಾಯಿತು. ಬ್ರಹ್ಮವಲ್ಲದ ವಸ್ತು ವಿಶ್ವದಲ್ಲಿ ಬೇರೊಂದಿಲ್ಲದಿರುವುದನ್ನೂ ಸರ್ವವೂ ಬ್ರಹ್ಮಮಯವಾದುದನ್ನೂ ಕಂಡು ನಾನು ವಿಸ್ಮಯಸ್ತಂಭಿತನಾದೆ. ನನ್ನ ಮನಸ್ಸೇನೋ ತಿಳಿಯಾಗಿಯೇ ಇತ್ತು. ಆ ಭಾವವು ಎಷ್ಟು ಹೊತ್ತು ಇರುವುದೊ ನೋಡಬೇಕೆಂದು ಸುಮ್ಮನಾದೆ. ಆ ದಿನವೆಲ್ಲಾ ಹಾಗೆಯೇ ಇತ್ತು. ಮನೆಗೆ ಹಿಂತಿರುಗಿದೆ. ಅಲ್ಲಿರುವ ವಸ್ತುಗಳೆಲ್ಲ ಬ್ರಹ್ಮವಾಗಿ ತೋರಿದುವು! ಊಟ ಮಾಡಲು ಕುಳಿತೆ. ಅನ್ನ, ಬಟ್ಟಲು, ಬಾಣಸಿಗ ಎಲ್ಲವೂ ಬ್ರಹ್ಮವಾಗಿ ಕಂಡುಬಂದುವು. ಒಂದೆರಡು ತುತ್ತುಗಳನ್ನು ತಿಂದು ಮಂಕುಹಿಡಿದವನಂತೆ ಸುಮ್ಮನೆ ಕುಳಿತುಬಿಟ್ಟೆ. ನಮ್ಮ ಅಮ್ಮ ‘ಏಕೆ ಸುಮ್ಮನೆ ಕುಳಿತಿರುವೆ? ಊಟ ಮಾಡು’ ಎಂದಳು. ನಾನು ಬೆಚ್ಚಿಬಿದ್ದು ಉಣ್ಣತೊಡಗಿದೆ. ಉಣ್ಣುವಾಗಲೂ ಮಲಗುವಾಗಲೂ ಕಾಲೇಜಿಗೆ ಹೋಗುವಾಗಲೂ ಸರ್ವದಾ ಅದೇ ಅವಸ್ಥೆಯಲ್ಲಿ ಬಾಹ್ಯಪ್ರಜ್ಞಾಹೀನನಾಗಿರುತ್ತಿದ್ದೆ. ದಾರಿಯಲ್ಲಿ ಹೋಗುತ್ತಿರುವಾಗ ಎದುರುಗಡೆಯಿಂದ ಗಾಡಿಗಳು ಬಂದರೆ ಅರುಗಾಗುವಂತೆ ಮನಸ್ಸಾಗುತ್ತಿರಲಿಲ್ಲ. ಗಾಡಿಯೂ ನಾನೂ ಒಂದೇ ವಸ್ತುವಾಗಿ ತೋರುತ್ತಿತ್ತು. ಇಂದ್ರಿಯಗಳೆಲ್ಲ ಜಡವಾದಂತೆ ತೋರಿದುವು. ಊಟದಲ್ಲಿ ನನಗೆ ಮೊದಲಿನಂತೆ ರುಚಿ ತೋರುತ್ತಿರಲಿಲ್ಲ. ಯಾರೋ ತಿಂದಂತೆ ಭಾಸವಾಗುತ್ತಿತ್ತು. ಕೆಲವು ಸಾರಿ ಊಟಕ್ಕೆ ಕುಳಿತಾಗ, ನಡುವೆ ನಿದ್ರಿಸಿ, ಮರಳಿ ಎಚ್ಚತ್ತು ಉಣ್ಣುತ್ತಿದ್ದೆ. ಹೀಗಾಗಿ ಕೆಲವು ದಿನ ಮಿತಿಮೀರಿ ತಿನ್ನುತ್ತಿದ್ದೆ. ಅಂತೂ ಇದರಿಂದ ಯಾವ ರೋಗವೂ ಬರಲಿಲ್ಲ. ಇದನ್ನೆಲ್ಲಾ ಕಂಡು ಅಮ್ಮ ಬೆದರಿದಳು. ಯಾವುದೋ ರೋಗವಿರಬೇಕೆಂದು ಭಾವಿಸಿದಳು. ನಾನು ಬಹುದಿನ ಬಾಳೆನೆಂದು ಹೆದರಿದಳು. ಈ ಅವಸ್ಥೆ ಸ್ವಲ್ಪ ಕಡಿಮೆಯಾದ ಮೇಲೆ ಲೋಕವೆಲ್ಲ ಒಂದು ಕನಸಿನಂತೆ ತೋರ ತೊಡಗಿತು. ಕಾರ್ನ್‌ವಾಲೀಸ್ ಚೌಕದ ಮಾರ್ಗವಾಗಿ ಕಾಲೇಜಿಗೆ ಹೋಗುವಾಗ ಅಲ್ಲಿದ್ದ ತಂತಿಯ ಕಂಭಗಳಿಗೆ ತಲೆಯನ್ನು ಬಡಿದು ಅವು ಸತ್ಯವೋ ಸ್ವಪ್ನವೋ ಎಂಬುದನ್ನು ಪರೀಕ್ಷಿಸುತ್ತಿದ್ದೆ. ಹೀಗೆಯೇ ಕೆಲವು ದಿನಗಳು ಹೋದುವು. ಎಲ್ಲ ಸರಿಯಾದ ಮೇಲೆ ನಾನು ಕಂಡದ್ದು ಅದ್ವೈತ ಸಿದ್ಧಿಯ ಕ್ಷಣಿಕದರ್ಶನವಾಗಿರಬೇಕೆಂದು ಆಲೋಚಿಸಿದೆ. ಶಾಸ್ತ್ರಗಳ ಮಾತು ಸುಳ್ಳಾಗಿರದೆಂದು ಊಹಿಸಿದೆ. ಈ ಅನುಭವವಾದ ಮೇಲೆ ಅದ್ವೈತ ದರ್ಶನದ ಸಿದ್ಧಾಂತಗಳಲ್ಲಿ ನನಗಿದ್ದ ಸಂದೇಹ ತೊಲಗತೊಡಗಿತು.”

ಈ ರೀತಿ ಸಮಯ ದೊರೆತಾಗೆಲ್ಲ ನರೇಂದ್ರನು ದಕ್ಷಿಣೇಶ್ವರಕ್ಕೆ ಬಂದು ಭಗವಾನರ ಪದಪ್ರಾಂತದಲ್ಲಿ ಕುಳಿತು ಅವರ ಉಪದೇಶಾಮೃತ ಪಾನಮಾಡಿ ದಿನೇದಿನೇ ವಿಕಸಿತವಾಗುತ್ತಿದ್ದನು. ಮೊದಲಿದ್ದ ಆತನ ಅಭಿಪ್ರಾಯಗಳೆಲ್ಲ ಮೆಲ್ಲಮೆಲ್ಲನೆ ಪರಿವರ್ತನೆ ಹೊಂದತೊಡಗಿದುವು. ಗುರುವರ್ಯನ ಸಹಾಯದಿಂದ ಧ್ಯಾನಸಾಧನೆಗಳಲ್ಲಿಯೂ ಸ್ವಲ್ಪಸ್ವಲ್ಪವಾಗಿ ಕಾಲಿಟ್ಟನು. ಬಾಲ್ಯದಿಂದಲೂ ಆತನಲ್ಲಿ ಸಹಜವಾಗಿದ್ದ ವಿವಾಹ ವಿತೃಷ್ಣೆ, ವೈರಾಗ್ಯ, ತ್ಯಾಗಬುದ್ಧಿಗಳು ಅಭಿವೃದ್ಧಿ ಹೊಂದಿದುವು.

ಒಂದು ಸಾರಿ ಶಿಷ್ಯನಿಗೆ ತಮ್ಮ ಮೇಲಿದ್ದ ಪ್ರೇಮವನ್ನು ಪರೀಕ್ಷಿಸಬೇಕೆಂದು ಪರಮಹಂಸರು ಒಂದು ಆಟ ಹೂಡಿದರು. ಒಂದು ದಿನ ನರೇಂದ್ರನು ದಕ್ಷಿಣೇಶ್ವರಕ್ಕೆ ಬಂದ ಗುರುಗಳಿಗೆ ನಮಸ್ಕಾರ ಮಾಡಿದನು. ಗುರುಗಳು ಮಾತಾಡಲಿಲ್ಲ. ಶಿಷ್ಯನನ್ನು ಕಣ್ಣೆತ್ತಿ ನೋಡಲಿಲ್ಲ. ಅವರು ಧ್ಯಾನಮಗ್ನರಾಗಿರಬೇಕೆಂದು ನರೇಂದ್ರನು ಊಹಿಸಿ ಆ ದಿನವೆಲ್ಲ ಹಾಜರ ಮೊದಲಾದವರೊಡನೆ ಹರಟಿ ಮನೆಗೆ ಹೋದನು. ಒಂದು ವಾರವಾದಮೇಲೆ ಪುನಃ ದಕ್ಷಿಣೇಶ್ವರಕ್ಕೆ ಬಂದನು. ಗುರುಗಳ ಭಾವ ಹಿಂದಿನಂತೆಯೇ ಇತ್ತು. ಆ ದಿನವೂ ಹಾಜರನೊಡನೆ ಹರಟೆ ಹೊಡೆದು ಸಂಜೆಯ ಹೊತ್ತಿಗೆ ಮನೆಗೆ ಹೋದನು. ಹೀಗೆಯೇ ಅನೇಕ ದಿನಗಳು ಕಳೆದುವು. ಗುರುಗಳು ತನ್ನೊಡನೆ ಮಾತಾಡದಿದ್ದರೂ ತನ್ನನ್ನು ಗಣನೆಗೆ ತಾರದೆ ಇದ್ದರೂ ನರೇಂದ್ರನು ಮಾತ್ರ ದಕ್ಷಿಣೇಶ್ವರಕ್ಕೆ ಬಂದು ಅವರಿಗೆ ನಮಸ್ಕಾರ ಮಾಡುವುದನ್ನು ಬಿಡಲಿಲ್ಲ. ಅವರು ನರೇಂದ್ರನ ಯೋಗಕ್ಷೇಮವನ್ನು ಇತರರಿಂದ ಗುಟ್ಟಾಗಿ ತಿಳಿದುಕೊಳ್ಳುತ್ತಿದ್ದರು.

ಒಂದು ದಿನ ಪರಮಹಂಸರು ನರೇಂದ್ರನನ್ನು ಬಳಿಗೆ ಕರೆದು “ನಾನು ನಿನ್ನೊಡನೆ ಮಾತಾಡದಿದ್ದರೂ ನಿನ್ನನ್ನು ಲಕ್ಷಿಸದಿದ್ದರೂ ನೀನು ಮಾತ್ರ ಇಲ್ಲಿಗೆ ಬಂದು ಹೋಗುವುದನ್ನು ಬಿಟ್ಟಿಲ್ಲವಲ್ಲ; ಅದೇನು?” ಎಂದು ಕೇಳಿದರು. ಅದಕ್ಕೆ ನರೇಂದ್ರನು “ಮಹಾಶಯ, ನಿಮ್ಮ ಮಾತುಗಳಿಗಾಗಿ ಮಾತ್ರವೇ ನಾನು ಇಲ್ಲಿಗೆ ಬರುತ್ತಿಲ್ಲ. ನಿಮ್ಮನ್ನು ಕಂಡರೆ ಬಹಳ ಆದರ. ಅದಕ್ಕಾಗಿ ನಿಮ್ಮನ್ನು ನೋಡಲು ಬರುತ್ತೇನೆ” ಎಂದನು. ಶಿಷ್ಯನ ಮಾತನ್ನು ಕೇಳಿ ಗುರುವಿಗೆ ಮೇರೆಯಿಲ್ಲದ ಸಂತಸವಾಯಿತು. “ಅಯ್ಯಾ, ನಿನ್ನನ್ನು ಪರೀಕ್ಷಿಸಬೇಕೆಂದು ನಾನು ಹಾಗೆ ಮಾಡಿದೆ. ಇನ್ನಾರಾಗಿದ್ದರೂ ಇಲ್ಲಿಗೆ ಬರುವುದನ್ನೇ ಬಿಟ್ಟುಬಿಡುತ್ತಿದ್ದರು” ಎಂದರು.

ನರೇಂದ್ರನು ಬಿ.ಎ. ಪರೀಕ್ಷೆಗೆ ಓದುತ್ತಿರುವಾಗಲೆ ತಂದೆಯ ಅಭಿಲಾಷೆಯಂತೆ ಒಬ್ಬ ಪ್ರಸಿದ್ಧ ವಕೀಲನ ಕೈಕೆಳಗೆ ವಕೀಲಿತನವನ್ನು ಅಭ್ಯಾಸ ಮಾಡುತ್ತಿದ್ದನು. ಅದೇ ಸಮಯದಲ್ಲಿ ವಿಶ್ವನಾಥದತ್ತನು ಮಗನ ಮದುವೆಯ ವಿಚಾರವಾಗಿ ಮರಳಿ ಚಳವಳಿ ಮಾಡತೊಡಗಿದನು. ವೈರಾಗ್ಯವು ನರೇಂದ್ರನ ಹುಟ್ಟುಗುಣವಾಗಿತ್ತು. ಶ್ರೀರಾಮಕೃಷ್ಣರ ಸಂಗದಿಂದ ಅದು ಮತ್ತಷ್ಟು ಪರಿಪುಷ್ಟಿ ಹೊಂದಿತ್ತು. “ಸಂನ್ಯಾಸವೇ ಮಾನವ ಜೀವನದ ಸರ್ವೋಚ್ಚವಾದ ಆದರ್ಶ. ಆತ್ಮ ಕಲ್ಯಾಣಾಕಾಂಕ್ಷಿಗಳು ಅನಿತ್ಯವಾದ ಸಂಸಾರದ ಸುಖಲಾಲಸೆಗಳಿಗಾಗಿ ಅತ್ತಿತ್ತ ಅಲೆದಾಡುವುದು ಹುಚ್ಚುತನ” ಎಂದು ಆತನು ತನಗೆ ಸಂಸಾರಿಯಾಗುವಂತೆ ಬುದ್ಧಿ ಹೇಳಲು ಬಂದ ಸಹಾಧ್ಯಾಯಿಯಾದ ಬಂಧುವೊಬ್ಬನಿಗೆ ಹೇಳಿದನು.

* * *[1] ‘ಶ್ರೀರಾಮಕೃಷ್ಣ ಪರಮಹಂಸ’ ಎಂಬ ಗ್ರಂಥದಲ್ಲಿ ೧೬೨ನೆಯ ಪುಟವನ್ನು ನೋಡಿ.