ಮಾಯಾ ಪ್ರಪಂಚದ ಬಂಧನಗಳು ವಜ್ರೋಪಮ ಕಠಿಣವಾದುವು. ಜಗತ್ತಿನ ಅಜ್ಞಾನತಿಮಿರ ಘನನಿಬಿಡವಾದುದು. ಇಂದ್ರಿಯ ಚಾಪಲ್ಯ ವಿಲಯಾಗ್ನಿ ಸದೃಶವಾದುದು. ಪ್ರಲೋಭನಗಳ ಸೆಳೆತ ದುರ್ನಿವಾರ್ಯವಾದುದು. ಮಾಯಾಬಂಧನಗಳ ಗಹನ ದುರ್ಭೇದ್ಯವಾದ ನಿಬಿಡಾರಣ್ಯವನ್ನು ಕಡಿದು ಉರುಳಿಸಲು ಪರಶುರಾಮ ಕುಠಾರೋಪಮ ಆತ್ಮಶಕ್ತಿ ಚಿಚ್ಛಕ್ತಿಗಳು ಬೇಕು; ಅವಿಶ್ರಾಂತ ಸಾಹಸ ಬೇಕು; ದೃಢನಿಶ್ಚಲವಾದ ಏಕಾಗ್ರತೆ ಬೇಕು. ನಿರಂತರ ಸಾಧನೆಯಿಂದಲ್ಲದೆ ಸಿದ್ಧಿ ಲಭಿಸದು. ಕೇವಲ ಸೌಜನ್ಯವೆ ಸಿದ್ಧಿಯ ಪರಮ ಚಿಹ್ನೆ.

ಶ್ರೀರಾಮಕೃಷ್ಣರು ತಮ್ಮ ಶಿಷ್ಯರಿಗೆ ಬರಿಯ ಉಪದೇಶಗಳನ್ನು ಮಾತ್ರವೇ ಕೊಟ್ಟು ಸುಮ್ಮನಾಗುತ್ತಿರಲಿಲ್ಲ. ಆ ಉಪದೇಶಗಳನ್ನು ಅನುಷ್ಠಾನಕ್ಕೆ ತರಲು ಬೇಕಾಗುವ ಆತ್ಮಶಕ್ತಿಯನ್ನೂ ದಾನಮಾಡುತ್ತಿದ್ದರು. ಅದರಲ್ಲಿಯೂ ನರೇಂದ್ರನಿಗೆ ತಮ್ಮ ಶಕ್ತಿಯನ್ನೆಲ್ಲ ಧಾರೆಯೆರೆದಿದ್ದರು. ಆದ್ದರಿಂದಲೆ ಆತನು ಶ್ರೀ ಸ್ವಾಮಿ ವಿವೇಕಾನಂದರಂತಹ ಸಿಡಿಲಾಳಾದದ್ದು. ಪರಮಹಂಸರ ಶಕ್ತಿಯನ್ನು ಸ್ವಲ್ಪವಾದರೂ ಅರಿಯದೆ ನರೇಂದ್ರನ ಸಾಮರ್ಥ್ಯವನ್ನು ಅಳೆಯಲಾಗುವುದಿಲ್ಲ. ಸಂತತವಾದ ಸಾಹಸದಿಂದ ಅವರು ಕಾಮಿನಿ ಕಾಂಚನಗಳನ್ನು ಸಂಪೂರ್ಣವಾಗಿ ತ್ಯಜಿಸಿದ್ದರು. ಸ್ತ್ರೀಪುರುಷರೆಂಬ ಲಿಂಗಭೇದವನ್ನು ವಿವಿಧ ವಿಚಿತ್ರ ಸಾಧನೆಗಳಿಂದ ಚಿತ್ತದಿಂದ ಕಿತ್ತೊಗೆದಿದ್ದರು. ಸ್ತ್ರೀಯರೆಲ್ಲ ಜಗನ್ಮಾತೆಯ ಪ್ರತಿಬಿಂಬಗಳೆಂಬುದನ್ನು ಹೃತ್ಪೂರ್ವಕವಾಗಿ ಅನುಭವದಿಂದ ತಿಳಿದಿದ್ದರು. ಶಾಕ್ತ, ವೈಷ್ಣವ, ಶೈವ, ಬೌದ್ಧ, ಮುಸಲ್ಮಾನ, ಕ್ರೈಸ್ತ ಮೊದಲಾದ ಮತಧರ್ಮ ಮಾರ್ಗಗಳೆಲ್ಲವೂ ಏಕಮಾತ್ರ ಧ್ಯೇಯವಾದ ಪರಮಾತ್ರನೆಡೆಗೆ ಸಾಧಕನನ್ನು ಕೊಂಡೊಯ್ಯುತ್ತವೆ ಎಂಬುದನ್ನು ಪ್ರತ್ಯಕ್ಷಾನುಭವದಿಂದ ತಿಳಿದಿದ್ದರು. ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಮೊದಲಾದ ದರ್ಶನಗಳೆಲ್ಲವೂ ವಿವಿಧ ಭಾವಗಳಿಗೆ, ವಿವಿಧ ದೃಷ್ಟಿಗಳಿಗೆ ತೋರಿಬರುವ ಏಕಮೇವಾದ್ವಿತೀಯವಾದ ಕೇವಲ ಸತ್ಯದ ವಿವಿಧರೂಪಗಳೆಂಬುದನ್ನು ಸ್ವತಃ ಸಿದ್ಧಿಯಿಂದ ಅರಿತ ಅಪಾರ್ಥಿವ ದೈವಿಕ ಮಹಾಪುರುಷರಾಗಿದ್ದರು. ಸಗುಣ ಬ್ರಹ್ಮಕ್ಕೆ ನಾವು ಯಾವ ಯಾವ ಗುಣಗಳನ್ನು ಆರೋಪಿಸಬಹುದೋ ಆ ಎಲ್ಲ ಗುಣಗಳನ್ನೂ ಸಂಪೂರ್ಣವಾಗಿ ಪಡೆದಿದ್ದರು. ಅಲ್ಲದೆ ನಿರ್ಗುಣ ಬ್ರಹ್ಮದಂತೆ ನಿಸ್ಪೃಹರಾಗಿದ್ದ ಜ್ಞಾನಿಯಾಗಿದ್ದರು; ಭಕ್ತರಾಗಿದ್ದರು; ಕರ್ಮಯೋಗಿಯಾಗಿದ್ದರು. ಆಧ್ಯಾತ್ಮಿಕ ವಿಚಾರಗಳಲ್ಲಿ ಅವರಿಗೆ ಎಷ್ಟು ಬುದ್ಧಿಸೂಕ್ಷ್ಮತೆಯಿತ್ತೋ ಅಷ್ಟೇ ಬುದ್ಧಿ ಸೂಕ್ಷ್ಮತೆ ವ್ಯಾವಹಾರಿಕ ವಿಷಯಗಳಲ್ಲಿಯೂ ಅವರಿಗಿತ್ತು. ಶಿರವನ್ನು ಗಗನತಲದಲ್ಲಿಟ್ಟು ಪಾದಗಳನ್ನು ಭೂತಲದಲ್ಲಿಟ್ಟ ಸರ್ವ ಭೂಮ ವ್ಯಕ್ತಿಗಳಾಗಿದ್ದರವರು. ಅಂತಹ ದಿವ್ಯ ಗುರುಗಳ ಶಿಷ್ಯತ್ವ ನರೇಂದ್ರನಿಗೆ ಲಭಿಸಿತು. ಆದ್ದರಿಂದಲೆ ನಿತ್ಯಸಿದ್ಧನಾದ ಆತನಿಗೆ ಬಹುಬೇಗನೆ ಸ್ವರೂಪಜ್ಞಾನವುಂಟಾಯಿತು.

ಒಂದು ದಿನ ಶ್ರೀರಾಮಕೃಷ್ಣರು ನರೇಂದ್ರನಾಥನನ್ನು ಪಂಚವಟಿಗೆ ಕರೆದುಕೊಂಡು ಹೋಗಿ “ನೋಡು, ಕಠೋರ ಸಾಧನೆಗಳಿಂದ ನನಗೆ ಅನೇಕ ಅಲೌಕಿಕ ಶಕ್ತಿಗಳು ದೊರಕಿವೆ; ಅಣಿಮಾದಿ ಅಷ್ಟಸಿದ್ಧಿಗಳು ಲಭಿಸಿವೆ. ಆದರೆ ಅವುಗಳಿಂದ ನನಗೇನೂ ಉಪಯೋಗವಿಲ್ಲ. ಜಗನ್ಮಾತೆಯ ಅನುಜ್ಞೆಯನ್ನು ಪಡೆದು ಅವುಗಳನ್ನೆಲ್ಲ ನಿನಗೆ ಕೊಡಬೇಕೆಂದು ಯೋಚಿಸಿದ್ದೇನೆ. ಆಕೆಯ ಕೃಪೆಯಿಂದ ನೀನು ಲೋಕದಲ್ಲಿ ಬಹಳ ಕಾರ್ಯಗಳನ್ನು ಮಾಡುವೆಯೆಂದು ನನಗೆ ತಿಳಿದುಬಂದಿದೆ. ನಿನ್ನಲ್ಲಿ ಈ ಶಕ್ತಿಗಳಿದ್ದರೆ ಬೇಕಾದಾಗ ಉಪಯೋಗಿಸಿಕೊಳ್ಳಬಹುದು. ನಿನಗೆ ಸಮ್ಮತವೆ?” ಎಂದರು.

ನರೇಂದ್ರನು “ಮಹಾಶಯ, ಆ ಶಕ್ತಿಗಳಿಂದ ಬ್ರಹ್ಮಸಾಕ್ಷಾತ್ಕಾರಕ್ಕೆ ಸಹಾಯವಾಗುವುದೇ?” ಎಂದು ಕೇಳಿದನು.

ಗುರುಗಳು “ಇಲ್ಲ, ಆದರೆ ಈಶ್ವರ ದರ್ಶನವಾದಮೇಲೆ ಭೂಮಿಯಲ್ಲಿ ಆತನ ಕೆಲಸಗಳನ್ನು ಮಾಡಲು ಅವುಗಳಿಂದ ತುಂಬಾ ಸಹಾಯವಾಗುತ್ತದೆ” ಎಂದರು.

ಶಿಷ್ಯನು “ಹಾಗಾದರೆ ಅವು ನನಗೆ ಬೇಡ. ಮೊದಲು ಈಶ್ವರದರ್ಶನವಾಗಲಿ; ಆಮೇಲೆ ಅವು ಬೇಕೋ ಬೇಡವೊ ಎಂಬುದನ್ನು ನಿರ್ಣಯಿಸುವೆನು. ನನಗೀಗಲೆ ಈ ಶಕ್ತಿಗಳು ಸಿಕ್ಕಿಬಿಟ್ಟರೆ ನಿಜವಾದ ಧ್ಯೇಯವನ್ನು ಮರೆತುಬಿಟ್ಟು ಸ್ವಾರ್ಥತೆಯಿಂದ ಅಡ್ಡಹಾದಿಗೆ ಬೀಳಬಹುದು” ಎಂದನು.

ಈ ಅಲೌಕಿಕ ಶಕ್ತಿಗಳ ವಿಚಾರವಾಗಿ ಸರ್ವದಾ ಉದಾಸೀನರಾಗಿರಬೇಕೆಂದು ಶ್ರೀರಾಮಕೃಷ್ಣರು ತಮ್ಮ ಶಿಷ್ಯರಿಗೆ ಸಾರಿಸಾರಿ ಹೇಳುತ್ತಿದ್ದರು.

ಯಾವನಾದರಾಗಲಿ ಚೆನ್ನಾಗಿ ಪರೀಕ್ಷಿಸದೆ ಯಾರನ್ನೂ ಗುರುವಾಗಿ ಸ್ವೀಕರಿಸಿ ಬಿಡಬಾರದೆಂದೂ ಪರಮಹಂಸರು ತಮ್ಮ ಶಿಷ್ಯರಿಗೆ ಹೇಳುತ್ತಿದ್ದರು. ಅದರಂತೆಯೇ ನರೇಂದ್ರನು ಭಗವಾನರನ್ನೂ ಪರೀಕ್ಷಿಸದೆ ಬಿಡಲಿಲ್ಲ. ಗುರುಗಳು ಹೊನ್ನು ಮಣ್ಣುಗಳನ್ನು ಒಂದೇ ಸಮನಾಗಿ ಭಾವಿಸಿದವರಾಗಿದ್ದರು. ಒಂದು ಕೈಯಲ್ಲಿ ಚಿನ್ನವನ್ನೂ ಮತ್ತೊಂದು ಕೈಯಲ್ಲಿ ಮಣ್ಣನ್ನೂ ಹಿಡಿದುಕೊಂಡು ಭಾಗೀರಥಿಯ ತೀರದಲ್ಲಿ ಕುಳಿತು ಅವೆರಡನ್ನೂ ಸಮದೃಷ್ಟಿಯಿಂದ ನೋಡಿ ಹೊಳೆಯಲ್ಲಿ ಬಿಸುಟು ಸಾಧನೆಮಾಡಿದ್ದರು. ಸುವರ್ಣ ರೌಪ್ಯಗಳ ಸ್ಪರ್ಶದ ಮಾತ್ರದಿಂದ ಅವರ ದೇಹ ಕಂಪಿಸಿ ಸೆಡೆದುಕೊಳ್ಳುತ್ತಿತ್ತು. ನರೇಂದ್ರನು ಅದು ಬರಿಯ ಅಭಿನಯವೋ ಸತ್ಯವೋ ಎಂಬುದನ್ನು ಕಂಡುಹಿಡಿಯಲು ಸಿದ್ಧನಾದನು.

ಒಂದು ದಿನ ಆತನು ದಕ್ಷಿಣೇಶ್ವರಕ್ಕೆ ಬಂದಾಗ ಪರಮಹಂಸರು ಕಲ್ಕತ್ತಾಕ್ಕೆ ಹೋಗಿದ್ದರು. ಕೋಣೆಯಲ್ಲಿ ಯಾರೂ ಇರಲಿಲ್ಲ. ಆತನು ತನ್ನ ಜೇಬಿನಿಂದ ಒಂದು ರೂಪಾಯಿ ತೆಗೆದು ಅವರ ಹಾಸಗೆಯ ಕೆಳಗೆ ಹುದಿಗಿಸಿಟ್ಟು ಧ್ಯಾನ ಮಾಡಲು ಪಂಚವಟಿಗೆ ಹೋದನು. ಸ್ವಲ್ಪ ಹೊತ್ತಾದಮೇಲೆ ಗುರುಗಳು ಹಿಂತಿರುಗಿ ಬಂದು ತಮ್ಮ ಹಾಸಗೆಯ ಮೇಲೆ ಕುಳಿತುಕೊಳ್ಳಲು ಹೋದರು. ಲಘು ಪ್ರವಾಹದ ವಿದ್ಯುಚ್ಛಕ್ತಿಯ ಸ್ಪರ್ಶಮಾತ್ರದಿಂದ ಹಿಂದಕ್ಕೆ ಚಿಮ್ಮುವ ಬಾಲಕನಂತೆ ಪರಮಹಂಸರು ಹಾಸಗೆಯಿಂದ ನೆಗೆದು ನಿಂತು ನೋವಿನಿಂದಲೂ ವಿಸ್ಮಯದಿಂದಲೂ ಸುತ್ತಲೂ ನೋಡತೊಡಗಿದರು. ಅಷ್ಟರಲ್ಲಿ ಅಲ್ಲಿಗೆ ಬಂದ ನರೇಂದ್ರನು ದೂರ ನಿಂತು ಅವರ ಪೇಚಾಟವನ್ನು ನೀರವವಾಗಿ ನೋಡುತ್ತಿದ್ದನು. ಕಿಂಕರನೊಬ್ಬನು ಓಡಿಬಂದು ಹಾಸಗೆಯನ್ನು ಚೆನ್ನಾಗಿ ಕೊಡವಿ ನೋಡಲು ರೂಪಾಯಿ ಟಣ್ಣೆಂದು ನೆಲದಮೇಲೆ ಬಿತ್ತು. ಗುರು ಕಿಂಕರರಿಬ್ಬರೂ ಬೆರಗಾದರು. ನರೇಂದ್ರನು ಮಾತ್ರ ಮೆಲ್ಲಗೆ ಅಲ್ಲಿಂದ ನುಣುಚಿಕೊಂಡನು. ಗುರುಗಳಿಗೆ ವಿಷಯವೆಲ್ಲಾ ತಿಳಿದಮೇಲೆ ನರೇಂದ್ರನು ತಮ್ಮನ್ನು ಪರೀಕ್ಷಿಸಿದುದಕ್ಕಾಗಿ ಆತನನ್ನು ಕೊಂಡಾಡಿದರು.

೧೮೮೪ರಲ್ಲಿ ಬಿ.ಎ. ಪರೀಕ್ಷೆ ಮುಗಿಯಿತು. ರಜಾದಿನಗಳು ಬಂದುವು. ಪರೀಕ್ಷೆಗಾಗಿ ಶ್ರಮಪಟ್ಟಿದ್ದ ಮತ್ತು ಪಡದಿದ್ದ ವಿದ್ಯಾರ್ಥಿಗಳೆಲ್ಲರೂ ಆಮೋದ ಪ್ರಮೋದ ಮಗ್ನರಾದರು. ಕಲ್ಕತ್ತಾಕ್ಕೆ ಎರಡು ಮೈಲಿ ದೂರದಲ್ಲಿರುವ ವರಾಹ ನಗರದಲ್ಲಿದ್ದ ಸಹಾಧ್ಯಾಯಿಯಾದ ಬಂಧುವೊಬ್ಬನು ನರೇಂದ್ರನನ್ನೂ ಮತ್ತು ಕೆಲವು ಸ್ನೇಹಿತರನ್ನೂ ತನ್ನ ಮನೆಗೆ ಆಹ್ವಾನಿಸಿದನು. ಗೆಳೆಯರೆಲ್ಲರೂ ನೆರೆದರು. ತಿಂಡಿತೀರ್ಥಗಳು ಮುಗಿದುವು. ಹಾಸ್ಯಕಲರವದಿಂದ ಮಂದಿರವೆಲ್ಲ ತುಂಬಿ ಹೋಯಿತು. ನರೇಂದ್ರನನ್ನು ಹಾಡುವಂತೆ ಕೇಳಿಕೊಂಡರು. ಸ್ವರ್ಗೀಯ ಮಧುರವಾದ ಆತನ ಸುಂದರವಾಣಿ ಇಂಪಾಗಿ ಮೇಲೆದ್ದಿತು. ಅಷ್ಟು ಹೊತ್ತಿಗೆ ಯಾರೋ ಒಬ್ಬನು ಕೋಣೆಯೊಳಗೆ ಬಂದು ವಿಶ್ವನಾಥದತ್ತನು ಹೃದ್ರೋಗದಿಂದ ಮೃತನಾದನೆಂಬ ಭಯಂಕರ ವಾರ್ತೆಯನ್ನು ತಿಳಿಸಿದನು. ಮಂದಿರವು ಸಿಡಿಲು ಬಿದ್ದಂತಾಗಿ ನೀರವವಾಯಿತು. ಉಜ್ವಲಾಲೋಕಪ್ರದೀಪ್ತ ಮಂದಿರವು ನರೇಂದ್ರನ ಕಣ್ಣಿಗೆ ಕತ್ತಲೆಯ ನೆಲೆಬೀಡಾಗಿ ತೋರಿತು. ಬೇಬಬೇಗನೆ ಅಲ್ಲಿಂದ ಹೊರಟು ಮರುಳ್ಗೊಂಡವನಂತೆ ಮನೆಗೆ ಬಂದನು. ಅಭಿಮಾನಧನನಾಗಿಯೂ ಗೌರವಗರ್ವಗಳಲ್ಲಿ ಹಿಮಾಚಲ ಸದೃಶನಾಗಿಯೂ ಇದ್ದ ಪಿತನ ಕಳೇಬರವು ಸೆಜ್ಜೆಯ ಮೇಲೆ ಬಿದ್ದಿತು. ಅಕ್ಕತಮ್ಮಂದಿರೂ ತಾಯಿಯೂ ಸುತ್ತಲೂ ಕುಳಿತು ಬಿದ್ದು ಬಿದ್ದು ರೋದಿಸುತ್ತಿದ್ದರು. ನರೇಂದ್ರನ ದೃಢಹೃದಯವೂ ಕರಗಿಹೋಯಿತು. ಆತನ ನೇತ್ರಗಳಿಂದ ಮುಕ್ತಾಶ್ರು ಬಿಂದುಗಳು ಹರಿಯತೊಡಗಿದುವು.

ರಾಜಮಂದಿರವಾಗಿದ್ದ ದತ್ತಭವನವು ದಾರಿದ್ರ್ಯದ ಕ್ಲೇಶಗಳಿಗೆ ತುತ್ತಾಯಿತು. ಉದಾರಿಯಾಗಿದ್ದ ವಿಶ್ವನಾಥದತ್ತನು ನಾಳೆಯ ಕಡೆಗೆ ಕಣ್ಣಿಟ್ಟವನೇ ಅಲ್ಲ. ಸಂಪಾದಿಸಿದ ಹಣವನ್ನೆಲ್ಲ ಹಿಂದುಮುಂದು ನೋಡದೆ ಖರ್ಚು ಮಾಡಿದ್ದನು. ಆದ್ದರಿಂದ ಅವನು ತೀರಿಕೊಂಡ ಮರುದಿನವೇ ಕ್ಷಾಮದೇವತೆ ಮನೆಯೊಳಗೆ ನುಗ್ಗಿದಳು. ಉತ್ತರಕ್ರಿಯೆಗಳಿಗೂ ಕೂಡ ಬೇಕಾದಷ್ಟು ಸೌಭಾಗ್ಯವಿರಲಿಲ್ಲ. ಭುವನೇಶ್ವರೀ ಮಾತೆ ಕಂಗೆಟ್ಟಳು. ನರೇಂದ್ರನೂ ಆಕಸ್ಮಿಕವಾಗಿ ಬಂದೊದಗಿದ ಪೆಟ್ಟಿಗೆ ತತ್ತರಿಸಿ ನಡೆಗೆಟ್ಟನು. ಪ್ರಪಂಚದ ವಿಕಾರ ಕರ್ಕಶವದನವು ಅವನೆದುರು ರುದ್ರಶ್ಮಶಾನದ ರುದ್ರತರ ಪಿಶಾಚದಂತೆ ಹಲ್ಲುಕಿರಿದು ನಿಂತಿತು. ಆ ಗೋಳನ್ನು ಸ್ವಾಮಿ ವಿವೇಕಾನಂದರೆ ಹೀಗೆಂದು ಹೇಳಿಕೊಂಡಿದ್ದಾರೆ:‌

“ಪಿತೃಮರಣದ ದುಃಖವನ್ನು ಅತ್ತು ಪೂರೈಸುವುದರೊಳಗೆ ಚಾಕರಿಯನ್ನು ಹುಡುಕಿಕೊಂಡು ಬೀದಿಬೀದಿಗಳಲ್ಲಿ ಅಲೆಯಬೇಕಾಯಿತು. ಹೊಟ್ಟೆಗನ್ನವಿಲ್ಲ; ಕಾಲಿಗೆ ಮೆಟ್ಟಿಲ್ಲ; ಆಫೀಸಿನಿಂದ ಆಫೀಸಿಗೆ ಅರ್ಜಿಯೊಂದನ್ನು ಕೈಲಿ ಹಿಡಿದುಕೊಂಡು ರುದ್ರನಿದಾಘಸೂರ್ಯನ ತೀಕ್ಷ್ಣಾತಪದಲ್ಲಿ ತೊಳಲಿದೆ. ಕೆಲವು ಸಲ ಮಾತ್ರ ನನ್ನೊಡನೆ ಯಾರಾದರೂ ಒಬ್ಬಿಬ್ಬರು ಗೆಳೆಯರು ಬರುತ್ತಿದ್ದರು. ಆದರೆ ಎಲ್ಲೆಲ್ಲಿಯೂ ಎಲ್ಲರೂ ನನ್ನನ್ನು ಹೊರಗೆ ತಳ್ಳಿ ಬಾಗಿಲು ಮುಚ್ಚಿಕೊಂಡರು. ಅಸ್ವಾರ್ಥವಾದ ಸಹಾನುಭೂತಿ ಜಗತ್ತಿನಲ್ಲಿ ದೊರೆಯುವುದು ಅತಿ ವಿರಳವೆಂದೂ ದರಿದ್ರರಿಗೆ ಅಶಕ್ತರಿಗೆ ಅನಾಥರಿಗೆ ಲೋಕವು ಎಡೆಗೊಡದೆಂದೂ ನನಗಾಗ ಗೊತ್ತಾಯಿತು. ಯಾರು ಮೊದಲು ನನಗೆ ನೆರವಾಗಲು ಹೆಮ್ಮೆಪಡುತ್ತಿದ್ದರೊ ಅಂತಹ ಸೌಭಾಗ್ಯಶಾಲಿಗಳೆ ನನಗೆ ವಿಮುಖವಾದರು. ಇದನ್ನೆಲ್ಲಾ ನೋಡಿದ ನನಗೆ ಜಗತ್ತು ಪಿಶಾಚ ಕೃತ್ಯವೆಂದು ತೋರಿತು. ಒಂದು ದಿನ ಚಾಕರಿಗಾಗಿ ತಿರುತಿರುಗಿ ದಣಿದು ಬಂದು ಅಕ್ಬರ್‌ಲೋನಿ ಸ್ಮಾರಕಸ್ತೂಪದ ತಣ್ಣೆಳಲಿನಲ್ಲಿ ಕುಳಿತುಕೊಂಡೆ. ಅಲ್ಲಿಗೆ ಬಂದ ನನ್ನ ಮಿತ್ರರಲ್ಲಿ ಒಬ್ಬನು ಪರಮಾತ್ರನು ಕೃಪಾಸಾಗರನೆಂಬ ಅರ್ಥದ ಒಂದು ಗೀತೆಯನ್ನು ಹಾಡತೊಡಗಿದನು. ಬಹುಶಃ ನನ್ನನ್ನು ಸಂತೈಸಲಿರಬೇಕು. ಅವನ ಕೀರ್ತನೆ ನನಗೆ ಶಿರೋಘಾತವಾಗಿ ಪರಿಣಮಿಸಿತು. ನಿಸ್ಸಹಾಯರಾಗಿದ್ದ ನನ್ನ ಮಾತಾ ಸೋದರ ಸೋದರಿಯರನ್ನು ನೆನೆದು ನಾನು ರೇಗಿಬಿದ್ದೆ. ನೈರಾಶ್ಯದಿಂದಲೂ ಕೋಪದಿಂದಲೂ ಮಿತ್ರನನ್ನು ಕುರಿತು ‘ಸಾಕು, ನಿಲ್ಲಿಸುತ್ತೀಯೋ ಇಲ್ಲವೋ ಆ ನಿನ್ನ ಅನಿಷ್ಟ ಗೀತೆಯನ್ನು. ನಿನ್ನ ಗೀತೆಗಳು ಬೆಳ್ಳಿಯ ಚಮಚವನ್ನು ಬಾಯಲ್ಲಿಟ್ಟುಕೊಂಡು ಹುಟ್ಟುತ್ತಾರಲ್ಲಾ ಅವರಿಗೆ ಇಂಪಾಗಿರಬಹುದು. ನಾನೂ ಹಿಂದೆ ನಿನ್ನಂತೆಯೇ ಯೋಚಿಸಿ ಬಣ್ಣದ ಕನಸುಗಳನ್ನು ಕಟ್ಟುತ್ತಿದ್ದೆ. ಆದರೆ ಇಂದು ಜೀವನದ ಕಠೋರ ನಿಷ್ಕರುಣ ಸತ್ಯಗಳ ಮುಂದೆ ಅವೆಲ್ಲ ಬರಿಯ ಹಾಸ್ಯದಂತಿವೆ’ ಎಂದು ಕೂಗಿದೆ. ನನ್ನ ಮಿತ್ರನು ಬಹಳ ನೊಂದುಕೊಂಡಿರಬಹುದು.‌

“ಕೆಲವು ಸಾರಿ ಮನೆಯಲ್ಲಿ ಸಾಕಾದಷ್ಟು ಅನ್ನವಿಲ್ಲದಿದ್ದರೆ ಗೆಳೆಯರ ಮನೆಯಲ್ಲಿ ಊಟ ಮಾಡಿದೆನೆಂದು ತಾಯಿಗೆ ಸುಳ್ಳು ಹೇಳುತ್ತಿದ್ದೆ. ಕೆಲವು ಸಾರಿ ಊಟಕ್ಕೆ ಕರೆದಿದ್ದಾರೆ ಎಂದು ಹೇಳಿ ಹೊರಗೆ ಹೋಗುತ್ತಿದ್ದೆ. ಆದರೆ ಆತ್ಮಗೌರವದ ಸಂರಕ್ಷಣಾರ್ಥವಾಗಿ ಗುಟ್ಟನ್ನು ಯಾರೊಡನೆಯೂ ಬಿಚ್ಚುತ್ತಿರಲಿಲ್ಲ. ಹೀಗಾಗಿ ಎಷ್ಟೋ ದಿನಗಳು ಹೊಟ್ಟೆಗಿಲ್ಲದೆ ಇರುತ್ತಿದ್ದೆ. ಇದರ ಮಧ್ಯೆ ಶ್ರೀಮಂತರಾಗಿದ್ದ ನನ್ನ ಮಿತ್ರರು ಸಂಗೀತಕ್ಕಾಗಿ ನನ್ನನ್ನು ವನಭೋಜನಗಳಿಗೆ ಕರೆಯುತ್ತಿದ್ದರು. ನಾನು ಬರುವುದಿಲ್ಲ ಎಂದರೆ ಮನೆಯ ಗುಟ್ಟು ಬಯಲಾಗುವುದೆಂಬ ಭಯ. ಆದ್ದರಿಂದ ಅವರೊಡನೆ ಹೋಗಿ ಹಾಡಿ ಅವರಂತೆ ಸಂತೋಷವನ್ನು ನಟಿಸುತ್ತಿದ್ದೆ. ಒಬ್ಬ ಮಿತ್ರನಿಗೆ ಮಾತ್ರ ಹೇಗೋ ನಮ್ಮ ದುರವಸ್ಥೆ ಗೊತ್ತಾಗಿ ಹೆಸರು ಹಾಕದೆ ನನ್ನ ತಾಯಿಗೆ ಧನವನ್ನು ಕಳುಹಿಸುತ್ತಿದ್ದನು.‌

“ನನ್ನ ಹಳೆಯ ಗೆಳೆಯರಲ್ಲಿ ಕೆಲವರು ಕೆಟ್ಟ ಕೆಟ್ಟ ವಿದ್ಯೆಗಳಿಂದ ಹಣ ಸಂಪಾದನೆ ಮಾಡುತ್ತಿದ್ದರು. ಅವರು ನನ್ನನ್ನೂ ಗುಂಪಿಗೆ ಸೇರುವಂತೆ ಕರೆದರು. ಒಬ್ಬಿಬ್ಬರು ನನ್ನ ಗತಿಯನ್ನು ನೋಡಿ ಕನಿಕರಪಟ್ಟರು. ಶ್ರೀಮಂತಳಾದ ಸುಂದರಿಯೊಬ್ಬಳು ನನ್ನನ್ನು ದುರ್ಮಾರ್ಗ ಪ್ರವರ್ತಕನಾಗುವಂತೆ ಪ್ರೇರಿಸಲೆಳಸಿದಳು. ಬೇಕಾದಷ್ಟು ಹಣ ಸಹಾಯ ಮಾಡುವಂತೆಯೂ ಭರವಸೆಯಿತ್ತಳು. ಮತ್ತೊಬ್ಬ ಸ್ತ್ರೀಯೂ ಹಾಗೇ ಮಾಡಿದಳು. ಗುರುದೇವನ ಆಶೀರ್ವಾದ ಬಲದಿಂದ ಮಹಾಮಾಯೆಯ ಪ್ರಲೋಭನಗಳಿಗೆ ವಶನಾಗಲಿಲ್ಲ.‌

“ಇಷ್ಟಾದರೂ ನನಗೆ ಈಶ್ವರ ಕೃಪೆಯಲ್ಲಿ ನಂಬುಗೆ ತೊಲಗಲಿಲ್ಲ. ಪ್ರತಿ ದಿನವೂ ಹಾಸಗೆಯಿಂದ ಏಳುವಾಗ ಆತನ ನಾಮಸ್ಮರಣೆ ಮಾಡಿ ಚಾಕರಿ ಷಿಕಾರಿಗೆ ಹೊರಡುತ್ತಿದ್ದೆ. ಒಂದು ದಿನ ನನ್ನ ತಾಯಿ ನಾನು ಮಾಡುತ್ತಿದ್ದ ಈಶ್ವರನಾಮ ಸ್ಮರಣೆಯನ್ನು ಕೇಳಿ ‘ಸಾಕಪ್ಪ, ನೀನೆಂತಹ ಮಂಕು! ಬಾಲ್ಯದಿಂದಲೂ ಈಶ್ವರ! ಈಶ್ವರ! ಎಂದು ಕೂಗುತ್ತಿದ್ದೀಯೆ. ಈಶ್ವರನು ನಿಜವಾಗಿಯೂ ಇರುವನೆ? ಇದ್ದರೆ ಮನುಜರ ಗೋಳನ್ನು ಕೇಳನೇಕೆ? ನನ್ನ ಗೋಳನ್ನು ಕೇಳನೇಕೆ? ದಯಾಸಾಗರದನ ದೃಷ್ಟಿಯಲ್ಲಿ ಇಷ್ಟೊಂದು ಶೋಕದುಃಖಗಳೇಕೆ?’ ಅಂದಳು. ಆಗ ನನಗೆ ಪಂಡಿತ ಈಶ್ವರಚಂದ್ರ ವಿದ್ಯಾಸಾಗರರ ಮಾತುಗಳು ನೆನಪಿಗೆ ಬಂದುವು. ‘ಈಶ್ವರನಲ್ಲಿ ಸೌಜನ್ಯವಿದ್ದರೆ, ಕೃಪೆಯಿದ್ದರೆ, ಲಕ್ಷಾಂತರ ಜನಗಳು ಹೊಟ್ಟೆಗಿಲ್ಲದೆ ಸಾಯುವುದೇಕೆ?’ ಎಂಬ ತಿಕ್ತ ಪರಿಹಾಸ್ಯದ ಮಾತುಗಳು ನನ್ನ ಹೃದಯದ ಗುಹೆಯಲ್ಲಿ ಪ್ರತಿಧ್ವನಿತವಾದುವು. ಈಶ್ವರನನ್ನು ನಿಂದಿಸಿದೆ. ಅದೇ ಸಮಯದಲ್ಲಿ ಹೊಂಚಿ ನೋಡಿ ಸಂಶಯವೂ ಮೆಲ್ಲನೆ ನನ್ನೆದೆಗೆ ಕಾಲಿಟ್ಟಿತು.‌

“ಸರಿ, ನನ್ನ ಪದ್ಧತಿಯಂತೆ ಮನಸ್ಸನ್ನು ಬಿಚ್ಚಿ ಹೇಳತೊಡಗಿದೆ. ಈಶ್ವರನು ಇಲ್ಲವೆಂದೂ, ಒಂದು ವೇಳೆ ಇದ್ದರೂ ಅವನ ಕೈಯಲ್ಲಿ ಏನೂ ಸಾಗದೆಂದೂ, ಅವನನ್ನು ಕರೆಯುವುದರಿಂದ ಪ್ರಯೋಜನವಿಲ್ಲವೆಂದೂ ಭಕ್ತಿಯೆಂಬುದು ಬರಿಯ ಹುಚ್ಚೆಂದೂ ಎಲ್ಲರೊಡನೆಯೂ ಸಾರಿ ವಾದಿಸತೊಡಗಿದೆ. ಸರಿ, ಇನ್ನೇನು? ಹಬ್ಬಿತು ಗುಲ್ಲು ಊರಲ್ಲೆಲ್ಲ; ನಾನು ನಾಸ್ತಿಕನೆಂದೂ ಕುಡುಕನೆಂದೂ ದುರಾಚಾರಿಯೆಂದೂ ಕುಖ್ಯಾತ ಸ್ತ್ರೀಪುರುಷಮಿತ್ರನೆಂದೂ ಎಲ್ಲರೂ ಡಂಗುರ ಹೊಯ್ಯಲಾರಂಭಿಸಿದರು. ನನ್ನ ನೊಂದೆದೆ ಮತ್ತಷ್ಟು ರೇಗಿತು. ನಾನು ಬಾಯಿ ಬಿಟ್ಟು ಸಾರಿಬಿಟ್ಟೆ: ನಾಸ್ತಿಕ್ಯವೇ ಸರಿಯೆಂದೂ, ಕುಡಿದರೆ ತಪ್ಪಿಲ್ಲವೆಂದೂ, ದುಃಖಮಯವಾದ ಜಗತ್ತಿನಲ್ಲಿ ದುರ್ನೀತಿಯಿಂದ ಸುಖವೊದಗುವ ಪಕ್ಷದಲ್ಲಿ ದುರ್ನೀತಿಯೆ ಲೇಸೆಂದೂ ಸಾರಿಬಿಟ್ಟೆ.‌

“ಅಂತೂ ಈ ಸುದ್ದಿ ಅತ್ತ ಬಿದ್ದು ಇತ್ತ ಬಿದ್ದು ಶ್ರೀಗುರುದೇವನ ಕಿವಿಗೂ ಆತನ ಭಕ್ತರ ಕಿವಿಗೂ ಬಿತ್ತು. ಅವರಲ್ಲಿ ಕೆಲವರು ನನ್ನೆಡೆಗೆ ಬಂದು ಸುದ್ದಿಯಲ್ಲಿ ಸ್ವಲ್ಪವಾದರೂ ನಿಜವಿರಬೇಕೆಂದು ಸೂಚಿಸಿದರು. ನನಗೆ ಆತ್ಮಗೌರವ ಭಂಗವಾದಂತಾಗಿ, ನರಕದ ಭಯದಿಂದ ಈಶ್ವರನನ್ನು ಗುಲಾಮರಂತೆ ಓಲೈಸುವುದು ಬರಿಯ ಹೇಡಿತನವೆಂದೂ ಈಶ್ವರನಿರುವುದು ಸುಳ್ಳೆಂದೂ ಪಾಶ್ಚಾತ್ಯ ತತ್ತ್ವಜ್ಞರ ನಾಸ್ತಿಕವಾದವೆ ಸತ್ಯವೆಂದೂ ವಾದಿಸಿ ಸಾಧಿಸಿದೆ. ಅವರೆಲ್ಲರೂ ನನ್ನ ಗತಿ ಮುಗಿಯಿತೆಂದೂ ನಾನು ಕೆಟ್ಟುಹೋದೆನೆಂದೂ ಪತಿತನಾದೆನೆಂದೂ ಹತಾಶರಾಗಿ ಹೊರಟುಹೋದರು. ನಾನೂ ನಲಿದೆ! ಗುರುದೇವನೂ ಈ ಸುದ್ದಿಯನ್ನು ನಂಬುವನೆಂದು ಯೋಚಿಸಿದೆ. ಒಂದು ವಿಧವಾದ ಧರ್ಮಮುನಿಸಿನಿಂದ ನನ್ನೆದೆ ಕುದಿಯಿತು. ಕೀರ್ತಿಯಪಕೀರ್ತಿಗಳು ಇಂತಹ ಪೊಳ್ಳಾದ ಕ್ಷುದ್ರವರ್ತಮಾನಗಳ ಮೇಲಿರುವ ಪಕ್ಷದಲ್ಲಿ ಅವುಗಳ ಗೊಡವೆಯೆ ನನಗೇಕೆ? ಎಂದುಕೊಂಡೆ. ಆದರೆ ಗುರುದೇವನು ಆ ಸುದ್ಧಿಯನ್ನು ಉದಾಸೀನನಾಗಿ ಕೇಳಿ ತಿರಸ್ಕರಿಸಿದುದನ್ನು ತಿಳಿದು ವಿಸ್ಮಿತನಾದೆ. ಭವನಾಥನು ಕಂಬನಿಗರೆಯುತ್ತಾ ನನ್ನ ದುರ್ದಶೆಯನ್ನು ಹೇಳಲು ಅವರು ‘ಮಹಾಶಯ, ನಾನು ಕನಸಿನಲ್ಲಿಯೂ ಕೂಡ ಅದನ್ನು ನಂಬಲಾರೆ’ ಎಂದರು. ಭವನಾಥನು ಅದನ್ನು ಸತ್ಯವೆಂದೂ ಸಾಧಿಸಲು ಮುಂದುವರಿಯಲು ಅವರು ಕುಪಿತರಾಗಿ, ‘ಮೂರ್ಖ, ಸುಮ್ಮನಿರು! ಜಗನ್ಮಾತೆ ನನಗೆಲ್ಲ ಹೇಳಿದ್ದಾಳೆ, ಅದು ಬರಿಯ ಸುಳ್ಳೆಂದು. ನೀನಿನ್ನು ಹಾಗೆ ಮಾತಾಡಿದರೆ ನಿನ್ನ ಮುಖವನ್ನೇ ನಾನು ನೋಡೆ’ ಎಂದು ಗರ್ಜಿಸಿದಂತೆ.‌

“ಇಷ್ಟಾದರೂ ಈಶ್ವರನಲ್ಲಿ ನನಗಿದ್ದ ನಂಬುಗೆ ಕೆಡಲಿಲ್ಲ. ಅದರಲ್ಲಿಯೂ ಶ್ರೀರಾಮಕೃಷ್ಣರ ನೆನಪು ನನ್ನನ್ನು ಬೀಳಗೊಡಲಿಲ್ಲ. ಈಶ್ವರ ಸಾಕ್ಷಾತ್ಕಾರ ಮಾಡದೆ ಜನ್ಮ ಸಾರ್ಥಕವಾಗದು. ಕಷ್ಟನಷ್ಟಗಳ ತುಮುಲದಲ್ಲಿಯೆ ಮಹಾತ್ತಾದುದನ್ನು ಸಾಧಿಸಬೇಕು. ಹೀಗೆ ಶ್ರದ್ಧೆ ಸಂಶಯಗಳ ದ್ವಂದ್ವಯುದ್ಧದಲ್ಲಿ ದಿನಗಳು ಕಳೆದುವು. ನಮ್ಮ ಬಡತನ ಎಂದಿನಂತೆಯೆ ಇತ್ತು.‌

“ಬೇಸಗೆ ಕಳೆಯಿತು. ಮಳೆಯ ದಿನಗಳು ಬಂದುವು. ನನ್ನ ಚಾಕರಿ ಷಿಕಾರಿ ಮಾತ್ರ ಮುಗಿಯಲಿಲ್ಲ. ಒಂದು ದಿನ ತೊಳಲಿ ಹಾದಿಯಲ್ಲಿ ಬರುತ್ತಿದ್ದಾಗ ಬಳಲಿ ಕುಳಿತೆ. ಸ್ವಲ್ಪಹೊತ್ತು ನನಗೆ ಪ್ರಜ್ಞೆ ಬರಲಿಲ್ಲ. ನೂರಾರು ಚಿಂತೆಗಳು ಸ್ವಪ್ನಸ್ಥ ಚಿತ್ತದಲ್ಲಿ ಮಿಂಚಿಹೋದುವು. ಇದ್ದಕ್ಕಿದ್ದ ಹಾಗೆ ಯಾವುದೋ ದಿವ್ಯಶಕ್ತಿಯೊಂದು ನನ್ನೆದೆಯ ಮೇಲ್ಮುಸುಕನ್ನು ತೆಗೆದೊಗೆದಂತೆ ಅನುಭವವಾಯಿತು. ಸಂಶಯಗಳು ತೂರಿಹೋದುವು. ಜಗತ್ತಿನ ಸುಖದುಃಖಗಳ ಅರ್ಥವು ಮನಸ್ಸಿಗೆ ಹೊಳೆಯಿತು. ಮೇಲೆದ್ದು ಮನೆಗೆ ಹೊರಟೆ. ಯಾವುದೋ ಶಕ್ತಿ ದೇಹದಲ್ಲಿ ಪ್ರವಹಿಸುತ್ತಿತ್ತು. ಬಗೆ ತಿಳಿಯಾಗಿತ್ತು. ಆಗಲೆ ರಾತ್ರಿ ಕಳೆದು ಮುಂಬೆಳಕು ಮೈದೋರುತ್ತಿತ್ತು.‌

“ಅಜ್ಜನಂತೆ ಸಂನ್ಯಾಸಿಯಾಗಲು ಮನಸ್ಸು ಮಾಡಿದೆ. ಅದಕ್ಕಾಗಿ ಒಂದು ದಿನವನ್ನು ಗೊತ್ತುಮಾಡಿದೆ. ಆ ದಿನವೇ ಗುರುದೇವನು ಕಲ್ಕತ್ತಾಕ್ಕೆ ಬರುವನೆಂಬ ಸಮಾಚಾರವೂ ತಿಳಿಯಿತು. ಶುಭಸೂಚನೆ! ಗುರ್ವಾಶೀರ್ವಾದವನ್ನು ಕೈಕೊಂಡು ಸಂನ್ಯಾಸಿಯಾಗುವೆನೆಂದು ಭಾವಿಸಿದೆ. ಗುರುದೇವನು ನನ್ನನ್ನು ನೋಡಿದ ಕೂಡಲೆ ದಕ್ಷಿಣೇಶ್ವರಕ್ಕೆ ಬರುವಂತೆ ಹೇಳಿದನು. ನಾನು ಏನೇನೊ ಸಬೂಬುಗಳನ್ನು ತಂದೊಡ್ಡಿದೆ. ಬಿಡಲಿಲ್ಲ. ಕಡೆಗೆ ಅವರ ಜೊತೆಯಲ್ಲಿ ಗಾಡಿಯ ಮೇಲೆ ಕುಳಿತು ದಕ್ಷಿಣೇಶ್ವರಕ್ಕೆ ಹೋದೆ. ಅಲ್ಲಿ ನನ್ನನ್ನು ಬಳಿಗೆ ಕರೆದು ಅತ್ಯಾದರದಿಂದ ನನ್ನನ್ನು ನೋಡುತ್ತಾ ಭಕ್ತಿರಸಪೂರ್ಣವಾದ ಕೀರ್ತನೆಯೊಂದನ್ನು ಗಾನ ಮಾಡಿದರು.‌

“ತಡೆಯದಾದೆ, ನಿರಂತರ ಅಶ್ರುಧಾರಾಪೂರ್ವಕವಾಗಿ ರೋದಿಸತೊಡಗಿದೆ. ಆ ಕೀರ್ತನೆ ನನಗೆ ಚೆನ್ನಾಗಿ ಅರ್ಥವಾಯಿತು. ನನ್ನ ಸಂಕಲ್ಪ ಗುರುದೇವನಿಗೆ ಆಗಲೆ ತಿಳಿದಿತ್ತು. ಅಲ್ಲಿದ್ದ ಭಕ್ತರು ನಮ್ಮಿಬ್ಬರ ರೀತಿಯನ್ನು ನೋಡಿ ಬೆರಗಾದರು. ಗುರುದೇವನು ಅವರನ್ನು ನಿರ್ದೇಶಿಸಿ ‘ಅದೆಲ್ಲಾ ನಿಮಗೇಕೆ? ಏನೋ, ನಮ್ಮ ನಮ್ಮ ಮಾತು’ ಎಂದರು. ರಾತ್ರಿಯಾಯಿತು. ಎಲ್ಲರೂ ಹೊರಟುಹೋದರು. ಗುರುದೇವನು ನನ್ನನ್ನು ಕುರಿತು ‘ನಾನು ಬಲ್ಲೆ, ನೀನು ಜಗನ್ಮಾತೆಯ ಕಾರ್ಯಕ್ಕಾಗಿ ಬಂದಿದ್ದೀಯೆ. ಪ್ರಾಪಂಚಿಕನಾಗಿರಲು ನಿನ್ನಿಂದ ಸಾಧ್ಯವಿಲ್ಲ. ಆದರೂ ನನಗಾಗಿ ಇನ್ನೂ ಕೆಲವು ದಿನಗಳ ತನಕ ನೀನು ಇಲ್ಲಿಯೇ ಇರಬೇಕು’ ಎಂದು ಹೇಳುತ್ತ ಅಳತೊಡಗಿದರು.‌

“ಮರುದಿನ ಮನೆಗೆ ಬಂದೆ. ವಕೀಲನ ಆಫೀಸಿನಲ್ಲಿ ಕೆಲಸ ಮಾಡಿ ಒಂದೆರಡು ಕಾಸು ತರುತ್ತಿದ್ದೆ. ಆದರೆ ಅದು ತಾಯಿ ತಮ್ಮಂದಿರ ಹೊಟ್ಟೆಗೂ ಬಟ್ಟೆಗೂ ಸಾಲುತ್ತಿರಲಿಲ್ಲ.”

ಎಲ್ಲಿಯಾದರೂ ವಿಶ್ವನಾಥದತ್ತನು ಬ್ಯಾಂಕಿನಲ್ಲಿ ದೊಡ್ಡದೊಂದು ನಿಧಿಯನ್ನು ಸಂಗ್ರಹಿಸಿಟ್ಟು ಹೋಗಿದ್ದರೆ? ಬಹುಶಃ  – ಬಹುಶಃ ನರೇಂದ್ರನಾಥದತ್ತನು ಸ್ವಾಮಿ ವಿವೇಕಾನಂದನಾಗುತ್ತಿದ್ದನೋ ಇಲ್ಲವೋ ಹೇಳಬಲ್ಲವರಾರು? ಐಶ್ವರ್ಯವು ಭೋಗಪ್ರೇರಕವಾಗಿರುವಂತೆ ದಾರಿದ್ರ್ಯವು ತ್ಯಾಗಪ್ರೇರಕವಾಗುತ್ತದೆ. ವಿಧಿಯ ವಿಧಾನಗಳು ಬಹುವಿಧವಾಗಿವೆ.

ಅದು ಬರಿಯ ವಿನೋದದ ಊಹೆ ಮಾತ್ರವಲ್ಲ. ನರೇಂದ್ರನ ಜೀವನದಲ್ಲಿ ಸಕಾಲಕ್ಕೆ ಬಂದೊದಗಿದ ಸನ್ನಿವೇಶಗಳ ವ್ಯೂಹರಚನೆಯನ್ನು ಗಮನಿಸಿದರೆ ಸಂದೇಹಕ್ಕೂ ಆಸ್ಪದವಿರುವುದಿಲ್ಲ.

ವಿಶ್ವನಾಥದತ್ತನು ಮಗನಿಗೆ ಮದುವೆ ಮಾಡಬೇಕೆಂದು ಅನೇಕ ಸಾರಿ ಹವಣಿಸಿದ್ದನು. ಭೋಗಿಯಾಗಿದ್ದ ಆತನಿಗೆ ತ್ಯಾಗಜೀವನದಲ್ಲಿ ಅಷ್ಟೇನೂ ವಿಶ್ವಾಸವಿರಲಿಲ್ಲ ಎಂಬುದನ್ನು ನಾವು ಹಿಂದೆಯೆ ತಿಳಿದಿದ್ದೇವೆ. ಆದ್ದರಿಂದ ತನ್ನ ಕುಮಾರನು ಸಂನ್ಯಾಸಿಯಾಗುತ್ತಾನೆಂಬ ಆಶಂಕೆ ತೋರಿದ್ದರೂ ಕೂಡ ಸಾಕು, ಅವನು ಅದಕ್ಕೆ ತನ್ನಿಂದ ಸಾಧ್ಯವಾಗುವ ಎಲ್ಲಾ ಅಡಚಣೆಗಳನ್ನೂ ತಂದೊಡ್ಡದೆ ಬಿಡುತ್ತಿರಲಿಲ್ಲ. ಮಗನು ಆಗಾಗ ದಕ್ಷಿಣೇಶ್ವರದ ಪರಮಹಂಸರ ಬಳಿಗೆ ಹೋಗಿ ಬರುತ್ತಿದ್ದುದು ಅವನಿಗೆ ಗೊತ್ತಿದ್ದರೂ ಅದನ್ನು ಲಘುವಾಗಿ ಭಾವಿಸಿಬಿಟ್ಟನು. ಇತರ ಅನೇಕರು ಹೋಗಿಬರುವಂತೆ ತನ್ನ ಮಗನೂ ಹೋಗಿಬರುತ್ತಿದ್ದಾನೆ ಎಂದು ತಿಳಿದು ಸುಮ್ಮನಾದನು. ಅದೂ ಅಲ್ಲದೆ ಆಗ ನರೇಂದ್ರನೂ ಪರಮಹಂಸರ ಶಿಷ್ಯತ್ವವನ್ನು ಹೃತ್ಪೂರ್ವಕವಾಗಿ ಒಪ್ಪಿಕೊಂಡಿರಲೂ ಇಲ್ಲ.

ವಿಶ್ವನಾಥದತ್ತನಿಗೆ ತನ್ನ ಮಗನು ತನಗಿಂತಲೂ ಸಮರ್ಥನೂ ಗಣ್ಯನೂ ಆದ ವಕೀಲನಾಗುತ್ತಾನೆ ಎಂಬ ಮಹತ್ವಾಕಾಂಕ್ಷೆ ಇದ್ದಿತೆ ಹೊರತು ಜಗದ್ವಿಖ್ಯಾತ ಸ್ವಾಮಿ ವಿವೇಕಾನಂದರಾಗುತ್ತಾನೆ ಎಂಬ ಹೆದರಿಕೆ ಇನಿತೂ ಇರಲಿಲ್ಲ. ಆತನಿಗೆ ಹಠಾತ್ತಾಗಿ ಹೃದ್ರೋಗದಿಂದ ಮರಣ ಸಂಭವಿಸದಿದ್ದರೆ ನರೇಂದ್ರನಿಗೆ – ತರುವಾಯ ಏನಾದರಾಗಲಿ – ಮದುವೆಯಾಗದೆ ಇರುತ್ತಿರಲಿಲ್ಲ.

ವಿಶ್ವನಾಥನು, ಸಾಯುವುದಕ್ಕೆ ಕೆಲವು ದಿನಗಳ ಹಿಂದೆ, ಶ್ರೀಮಂತ ಬಂಧುವೊಬ್ಬನ ಕುಮಾರ್ತಿಯನ್ನು, ವಿಪುಲ ವರದಕ್ಷಿಣೆಯೊಂದಿಗೆ, ನರೇಂದ್ರನಿಗೆ ತಂದುಕೊಳ್ಳಲು ನಿಶ್ಚಯ ಮಾಡಿದ್ದನಂತೆ. ಹಿಂದೆ ಅನೇಕ ಸಾರಿ ತಂದೆಯ ಮಾತನ್ನು ನಿರಾಕರಿಸಿದ್ದ ನರೇಂದ್ರನೂ ತಂದೆಯ ಪೀಡನೆಯನ್ನು ತಡೆಯಲಾರದೆ ಕಟ್ಟಕಡೆಗೆ ಮದುವೆ ಮಾಡಿಕೊಳ್ಳಲು ಒಪ್ಪಿಗೆಯನ್ನೂ ಕೊಟ್ಟಿದ್ದನಂತೆ. ಯೌವನೋದಯವಾಗುತ್ತಿದ್ದ ನರೇಂದ್ರನಿಗೂ ಅದರಲ್ಲಿ ಸಂಪೂರ್ಣವಾದ ಅಸಮ್ಮತಿಯಿತ್ತೆಂದೂ ಹೇಳಲಾಗುವುದಿಲ್ಲ; ಮಾವನು ಹೆಚ್ಚು ವರದಕ್ಷಿಣೆ ಕೊಡುತ್ತಾನೆ; ಆ ಧನದಿಂದ ತನ್ನನ್ನು ಇಂಗ್ಲೆಂಡಿಗೆ ಓದಲು ಕಳುಹಿಸುತ್ತಾರೆ; ದೊಡ್ಡ ಮನುಷ್ಯನಾಗುವುದಕ್ಕೆ ಒಳ್ಳೆಯ ಅವಕಾಶ ದೊರೆತಂತಾಗಿದೆ – ಎಂಬ ಭಾವನೆಗಳ ಪ್ರಲೋಭನದಿಂದ ನರೇಂದ್ರನು ಹೇಗೆ ತಾನೆ ತಪ್ಪಿಸಿಕೊಳ್ಳುತ್ತಾನೆ?

ತಂದೆಯೊಂದು ಕಡೆ ಮದುವೆ ಮಾಡಲು ಪ್ರಯತ್ನಿಸುತ್ತಿದ್ದರೆ ದಕ್ಷಿಣೇಶ್ವರದ ಪೂಜಾರಿಯೊಂದು ಕಡೆ ಅದನ್ನು ತಡೆಯಲು ಎಡೆಬಿಡದೆ ಸಾಹಸ ಮಾಡುತ್ತಿದ್ದನು. ನರೇಂದ್ರನಿಗೆ ಮದುವೆ ನಿಶ್ಚಯವಾದ ವಾರ್ತೆಯನ್ನು ಕೇಳಿದೊಡನೆ ಪರಮಹಂಸರು ಎದೆಕುದಿಯತೊಡಗಿದರು. ಗುಡಿಯೊಳಕ್ಕೆ ಹೋಗಿ ತಮ್ಮ ಜಗನ್ಮಾತೆ ಕಾಳಿಕಾದೇವಿಗೆ ಮೊರೆಯಿಟ್ಟು ಪ್ರಾರ್ಥಿಸಿದರು: “ನರೇಂದ್ರನು ಒಂದು ವ್ಯಕ್ತಿಯ ಪ್ರೇಮಕ್ಕೆ ಬಲಿಯಾಗದಿರಲಿ, ಸಮಸ್ತ ಜಗತ್ತಿನ ವಿಶ್ವಾಸ ಗೌರವಗಳಿಗೆ ಗುರಿಯಾಗಲಿ ಎಂದು!” ಅಷ್ಟೂ ಸಾಲದೆ ಮದುವೆಗೆ ಸನ್ನಾಹವಾಗುತ್ತಿದ್ದುದನ್ನು ಕೇಳಿ, ನರೇಂದ್ರನ ವಿವಾಹಕ್ಕೆ ತಮ್ಮ ಇಚ್ಛೆ ಪ್ರತಿಕೂಲವಾಗುತ್ತದೆ ಎಂದು ಮುನಿದೂ ಹೇಳಿದರಂತೆ! ಪುತ್ರನ ವಿವಾಹ ಮಹೋತ್ಸವದ ಸನ್ನಾಹದ ನಡುವೆಯೆ ವಿಶ್ವನಾಥದತ್ತನು ತೀರಿಕೊಂಡನು.

ಅಂತೂ ನರೇಂದ್ರನ ಜೀವಮಾನದ ಒಂದು ಒಳ್ಳೆಯ ಸಂಧಿಸಮಯದಲ್ಲಿ ತಂದೆ ಹಠಾತ್ತಾಗಿ ತೀರಿಹೋಗಿ ನಿಯತಿಯ ಲೀಲಾಮುಖವು ಇಂಗ್ಲೆಂಡಿನ ಕಡೆಗಿದ್ದುದು ದಕ್ಷಿಣೇಶ್ವರದ ಕಡೆಗೆ ತಿರುಗಿತು. ಸಂಪಾದನೆ ಮಾಡುವ ತಂದೆ ತೀರಿಹೋದ ಮೇಲೆ ಮಗನಿಗೆ ಹೆಣ್ಣು ಕೊಡುವವರೂ ಸ್ವಲ್ಪ ಹಿಂಜರಿದರು; ನರೇಂದ್ರನೂ ವಿಮುಖನಾದನು. ವಿಪುಲ ವರದಕ್ಷಿಣೆ ಕೊಟ್ಟು ನರೇಂದ್ರನನ್ನು ವಿದ್ಯಾರ್ಜನೆಗಾಗಿ ಇಂಗ್ಲೆಂಡಿಗೆ ಕಳುಹಿಸುವುದಂತಿರಲಿ, ಆತನಿಗೂ ಆತನ ತಾಯಿ ಸಹೋದರಿಯರಿಗೂ ಹೊಟ್ಟೆಗೂ ಕೊಡಲೊಲ್ಲದೆ ಹೋದರು. ಸಿರಿಯಲ್ಲಿ ಓಲಾಡಿದ ಮನೆ ಬಡತನದಲ್ಲಿ ತೇಲಾಡತೊಡಗಿತು. ತಂದೆಯ ಸಾವು, ಮನೆಯ ದಾರಿದ್ರ್ಯ, ಬಂಧುಗಳ ದ್ರೋಹ, ಮಿತ್ರರ ತಿರಸ್ಕಾರ, ಮಾತೆಯ ಸಂಕಟ, ಸೋದರ ಸೋದರಿಯರ ಅನಾಥದಶೆ, ಗಾಯಗೊಂಡ ಸ್ವಾಭಿಮಾನ ಇವುಗಳೆಲ್ಲವೂ ಸೇರಿ, ಬೇಟೆನಾಯಿ ಹಳುವಿನಲ್ಲಿರುವ ಪ್ರಾಣಿಯನ್ನು ಒಡೆಯನಿರುವಲ್ಲಿಗೆ ತರುಬುವಂತೆ ನರೇಂದ್ರನನ್ನು ದಕ್ಷಿಣೇಶ್ವರಕ್ಕೆ ಕತ್ತು ಹಿಡಿದು ನೂಕಿದುವು. ಜಗತ್ತಿನ ಕ್ರೌರ್ಯ ಸಮುದ್ರದಲ್ಲಿ ಶ್ರೀರಾಮಕೃಷ್ಣರೊಬ್ಬರೆ ಕರುಣೆಯ ದ್ವೀಪವಾಗಿ ಕಂಡುಬಂದರು, ನರೇಂದ್ರನ ನೊಂದೆದೆಗೆ!

ಒಂದು ಸಾರಿ ನರೇಂದ್ರನು ಶ್ರೀರಾಮಕೃಷ್ಣರಲ್ಲಿಗೆ ಬಂದು ತನಗೆ ಧನಪ್ರಾಪ್ತಿಯಾಗುವ ಸಲುವಾಗಿ ಜಗದಂಬೆಯನ್ನು ಬೇಡುವಂತೆ ಹೇಳಿದನು. ಅದಕ್ಕೆ ಅವರು “ನಾನು ಹಾಗೆಲ್ಲಾ ಬೇಡಲಾರೆ. ನೀನೇ ಹೋಗಿ ಬೇಡು. ಆಕೆಯನ್ನು ತಿರಸ್ಕರಿಸಿದುದರಿಂದಲೇ ನಿನಗೆ ಈ ಕಷ್ಟಗಳು ಬಂದಿವೆ” ಎಂದರು. ನರೇಂದ್ರನು “ನನಗೆ ಆಕೆಯ ಪರಿಚಯವಿಲ್ಲ. ನನ್ನ ಪರವಾಗಿ ನೀವೇ ಪ್ರಾರ್ಥಿಸಿ, ನೀವು ಬೇಡಲೇಬೇಕು” ಎಂದು ಹಠ ಹಿಡಿದನು. ಪರಮಹಂಸರು ಮುದ್ದಿನಿಂದ “ವತ್ಸ, ನಿನಗಾಗಿ ನಾನು ಎಷ್ಟೋಸಾರಿ ಪ್ರಾರ್ಥಿಸಿದ್ದೇನೆ. ಆದರೆ ನಾನೇನು ಮಾಡಲಿ? ನಿನಗೆ ಆಕೆಯಲ್ಲಿ ನಂಬುಗೆಯಿಲ್ಲ. ಅದರಿಂದ ಆಕೆ ಸುಮ್ಮನಿದ್ದಾಳೆ. ಆಗಲಿ ನೋಡೋಣ. ಈವೊತ್ತು ಮಂಗಳವಾರ. ರಾತ್ರಿ ಕಾಳಿಯ ಗುಡಿಗೆ ಹೋಗಿ ಅಡ್ಡಬಿದ್ದು ಬೇಕಾದುದನ್ನು ಕೇಳಿಕೋ. ಅವಳು ದಯಪಾಲಿಸದೆ ಬಿಡುವುದಿಲ್ಲ. ಆಕೆ ಸಚ್ಚಿದಾನಂದಮಯಿ, ಸರ್ವಶಕ್ತಳು, ಜಗನ್ಮಾತೆ, ಆಕೆಯಿಂದಾಗದ ಕಾರ್ಯವಿಲ್ಲ” ಎಂದರು.

ನಡುರಾತ್ರಿ! ನೀರವ! ನರೇಂದ್ರನು ತಾಯಿಯ ವಿಗ್ರಹದ ಮುಂದೆ ಕೈಮುಗಿದು ನಿಂತಿದ್ದಾನೆ. ವಿಗ್ರಹವು ಸಚೇತನವಾಗಿ ಕಾಣುತ್ತಿದೆ. ನರೇಂದ್ರನು ಭಕ್ತಿಪ್ರೇಮಗಳ ಸುಳಿಗೆ ಸಿಕ್ಕಿ ಭಾವವಶನಾದನು. “ದೇವಿ, ವಿವೇಕವನ್ನು ಕೊಡು! ವೈರಾಗ್ಯವನ್ನು ಕೊಡು! ಜ್ಞಾನಭಕ್ತಿಗಳನ್ನು ಕೊಡು! ತಾಯೆ, ನಿನ್ನ ಶಾಶ್ವತ ದರ್ಶನವನ್ನು ದಯಪಾಲಿಸು” ಎಂದು ಬೇಡಿದನು. ಆತ್ಮದಲ್ಲಿ ಶಾಂತಿಯುಂಟಾಯಿತು. ಪ್ರಪಂಚವನ್ನು ಮರೆತುಬಿಟ್ಟನು. ಜಗನ್ಮಾತೆಯೊಬ್ಬಳೇ ಅತನ ಹೃದಯದಲ್ಲಿ ರಂಜಿಸಿದಳು.

ನರೇಂದ್ರನು ಹಿಂತಿರುಗಿ ಬಂದನು. ಗುರುಗಳು “ಧನಪ್ರಾಪ್ತಿಗಾಗಿ ಪ್ರಾರ್ಥಿಸಿದೆಯಾ?” ಎಂದು ಕೇಳಿದರು. ನರೇಂದ್ರನು “ಇಲ್ಲ. ಓಹೋ ಮರೆತುಬಿಟ್ಟೆ, ಮಹಾಶಯ! ಈಗೇನು ಮಾಡುವುದು?” ಎಂದನು. “ಹೋಗು ಮತ್ತೊಂದು ಸಾರಿ ಬೇಡು” ಎಂದರು ಗುರುಗಳು. ಶಿಷ್ಯನು ಹೋದನು. ಆದರೆ ಎರಡನೆ ಸಾರಿಯೂ ಹಿಂದಿನಂತೆಯೆ ಮಾಡಿಬಿಟ್ಟನು. ಗುರುಗಳು “ಹುಚ್ಚ! ಸ್ವಲ್ಪ ಸ್ಥಿರಚಿತ್ತನಾಗಿ ಈ ಒಂದೆರಡು ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡು ಬೇಡಲಾಗಲಿಲ್ಲವೇ? ಹೋಗು ಬೇಗ” ಎಂದರು. ಈ ಸಾರಿ ನರೇಂದ್ರನು “ಥೂ! ನಾನೇನು ಕೆಲಸಕ್ಕೆ ಬಂದುಬಿಟ್ಟಿದ್ದೇನೆ. ಚಕ್ರವರ್ತಿಯ ಹತ್ತಿರ ಹೋಗಿ ಎರಡು ಬದನೇಕಾಯಿ ಕೇಳುವುದೆ? ನಾನೆಂತಹ ಮೂರ್ಖ!” ಎಂದುಕೊಂಡು ತಾಯಿಗೆ ನಮಸ್ಕಾರ ಮಾಡಿ ಜ್ಞಾನಭಕ್ತಿವೈರಾಗ್ಯಗಳನ್ನು ಬೇಡಿ ಹಿಂತಿರುಗಿದನು. ಹಿಂತಿರುಗಿ ಬರುವಾಗ ತಾನು ಮೋಸಹೋದೆನೆಂದು ತಿಳಿದು ಗುರುದೇವನ ಬಳಿಗೆ ಬಂದು “ಮಹಾಶಯ, ನಾನೆಲ್ಲ ಬಲ್ಲೆ. ಎಲ್ಲ ನಿಮ್ಮ ಮಾಯೆ. ನನ್ನ ಮನೆಯಲ್ಲಿ ಬಡತನ ಹೋಗುವಂತೆ ನನಗೀಗ ವರವನ್ನು ನೀಡಿ” ಎಂದನು. ಪರಮಹಂಸರು “ಅದು ನನ್ನಿಂದಾಗದ ಕೆಲಸ. ನೀನೆಂತಹ ಜಾಣ! ನಿನ್ನನ್ನೇ ಬೇಡು ಎಂದರೆ ಕೆಲಸಕ್ಕೆ ಬಾರದ ವರಗಳನ್ನು ಬೇಡಿ, ಈಗ ನನ್ನನ್ನು ಬೇಡುವೆಯಲ್ಲಾ! ನಾನೇನು ಮಾಡಲಿ?” ಎಂದರು. ಶಿಷ್ಯನು ಬಿಡಲಿಲ್ಲ. ಕಡೆಗೆ ಗುರುಗಳು “ಆಗಲಿ, ನಿನ್ನ ಮನೆಯವರಿಗೆ ಇನ್ನು ಮುಂದೆ ಹೊಟ್ಟೆಗೆ ಬಟ್ಟೆಗೆ ಸಾಕಾಗುವಷ್ಟು ಧನ ದೊರೆಯುವುದು” ಎಂದರು.

ನರೇಂದ್ರನು ಸಂಕಟಕಾಲದಲ್ಲಿ ತನ್ನ ತಾಯಿಯನ್ನೂ ಸೋದರ ಸೋದರಿಯರನ್ನೂ ಕೈಬಿಡಲಿಲ್ಲ. ಅವರ ಕಷ್ಟವನ್ನೂ ಬಹುಮಟ್ಟಿಗೆ ಪರಿಹರಿಸಿದ ತರುವಾಯವೆ ತಾನು ಸಂನ್ಯಾಸಿಯಾದುದು. ಸಂನ್ಯಾಸಿಯಾದ ಮೇಲೆಯೂ ಮುಂದೆ ಜಗದ್ವಿಖ್ಯಾತ ವಿವೇಕಾನಂದರಾದ ಮೇಲೆಯೂ ಆತನು ಆಗಾಗ ತನ್ನ ಪೂರ್ವಾಶ್ರಮದ ಮನೆಗೆ ಹೋಗಿ, ತಾಯಿಗೆ ಮಣಿದು, ಯೋಗಕ್ಷೇಮವನ್ನು ವಿಚಾರಿಸಿ ಸಹಾಯ ಮಾಡುತ್ತಿದ್ದನು.

ನರೇಂದ್ರನಿಗೆ ವಿದ್ಯಾಸಾಗರ ಪಾಠಶಾಲೆಯಲ್ಲಿ ಒಂದು ಉಪಾಧ್ಯಾಯರ ಕೆಲಸ ಲಭಿಸಿ, ಹಾಗೂ ಹೀಗೂ ಮನೆಯ ಬಡತನ ಒಂದಿನಿತು ಕಡಿಮೆಯಾಯಿತು. ಆತನ ಜೀವನದಲ್ಲಿ ಒಂದು ನೂತನ ಅಧ್ಯಾಯ ಪ್ರಾರಂಭವಾಯಿತು.

* * *