ಶ್ರೀರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ಗುರುಶಿಷ್ಯ ಸಂಬಂಧದಲ್ಲಿ ಒಂದು ಅಲೌಕಿಕತೆಯಿದೆ. ಅದು ಪ್ರಾಕೃತವಾಗಿಲ್ಲ; ಯೌಗಿಕವಾಗಿದೆ. ಅದು ಮಾಡಿದ ಉಪದೇಶದಂತಿಲ್ಲ; ನೀಡಿದ ಆದೇಶದಂತಿದೆ. ಅದು ಎರಡು ವ್ಯಕ್ತಿಗಳಲ್ಲಿರುವ ಪರಿಚಯ ಮಾತ್ರದಂತಿಲ್ಲ; ಎರಡು ವ್ಯಕ್ತಿತ್ವಗಳ ವಿದ್ಯುದಾಲಿಂಗನದಿಂದ ಹೊಮ್ಮಿದ ಅದ್ವಯವಾದ ಆತ್ಮಜ್ಯೋತಿಯಂತಿದೆ. ಅವರಿಬ್ಬರೂ ಒಂದೇ ಶಕ್ತಿಯ ಎರಡು ಮುಖಗಳಂತಿದ್ದಾರೆ. ಒಬ್ಬರನ್ನು ಬಿಟ್ಟರೆ ಇನ್ನೊಬ್ಬರು ನಮ್ಮ ಭಾಗಕ್ಕಾದರೂ ಅಪೂರ್ಣವಾಗುತ್ತಾರೆ.

ಮೊದಲು ಆಕಸ್ಮಿಕವಾಗಿ ನರೇಂದ್ರನ ಮೇಲೆ ಎರಗಿದ ಪರಮಹಂಸರ ಗರುಡ ದೃಷ್ಟಿ ಅವನನ್ನು ನುಂಗಿ ನೊಣೆಯುವವರೆಗೂ ಸುಮ್ಮನಾಗಲಿಲ್ಲ. ನರೇಂದ್ರನನ್ನು ಕಂಡೊಡನೆ ಅವನನ್ನು ಗುರುತಿಸಿದುದೂ, ಅವನ ಮಹಿಮೆಯ ಮಹತ್ವವನ್ನೂ ವಿಸ್ತಾರವನ್ನೂ ತಿಳಿದುದೂ, ಅವನಿಗಾಗಿ ಭ್ರಾಂತರಾದಂತೆ ತೋರಿದುದೂ ಯಾವುದೋ ಒಂದು ನಾವರಿಯಲಾರದಿರುವ ರಹಸ್ಯವನ್ನು ಸೂಚಿಸುತ್ತದೆ. ಯಾರ ಇಚ್ಛಾಮಾತ್ರದಿಂದ ಪಶುಫಲಕಗಳ ಮಧ್ಯೆ ದೇವತ್ವ ಪ್ರಾಪ್ತಿಯಾಗುವುದೋ, ಯಾರ ಸ್ಪರ್ಶಮಾತ್ರದಿಂದ ಸಾಧನಹೀನನಿಗೆ ಸಮಾಧಿ ಲಭಿಸುವುದೋ, ಯಾರ ಕೃಪಾಕಟಾಕ್ಷಮಾತ್ರದಿಂದ ಮುಹೂರ್ತವೊಂದರಲ್ಲಿಯೆ ಇಷ್ಟದರ್ಶನವಾಗುವುದೋ, ಯಾರು ಅಖಿಲ ಆಧ್ಯಾತ್ಮಿಕ ಅನುಭವ ಸಮೂಹದ ಸಮಷ್ಟಿ ಸ್ವರೂಪರಾಗಿರುವರೋ, ಯಾರು ಸಕಲ ಧರ್ಮಗಳ ಮತ್ತು ಸಕಲ ಮತಗಳ ಧರ್ಮ ಪಿಪಾಸುಗಳ ಚಿತ್ತದಲ್ಲಿ ಶಾಂತಿಯನ್ನು ಸೂಸುವರೋ ಆತನ ಇಚ್ಛೆಯನ್ನು ಅಲ್ಪ ಬುದ್ಧಿ ಮಾನವರು ಅರಿಯುವುದಾದರೂ ಎಂತು?

ಅಂತೂ ದೇವಗಂಗೆಯ ಮಹಾಮಕರವು ನೀರು ಕುಡಿಯಲು ಬಂದ ಕಿಶೋರ ಕೇಸರಿಯನ್ನು ಭದ್ರವಾಗಿ ಹಿಡಿದುಕೊಂಡಿತು. ಸಿಂಹದ ಮರಿ ತಪ್ಪಿಸಿಕೊಳ್ಳಲು ಎಷ್ಟು ಪ್ರಯತ್ನಪಟ್ಟರೂ ಪ್ರಯೋಜನವಾಗಲಿಲ್ಲ. ಒಮ್ಮೆ ಕಚ್ಚಿದ ಮಕರಕ್ಕೆ ತನ್ನ ಕೊಂಕುದಾಡೆಗಳನ್ನು ಕಳಚಿ ಬಿಚ್ಚಿ ಬಾಯ್ದೆರೆದು ಆ ಸಿಂಹಶಾಬಕವನ್ನು ಬಿಟ್ಟು ಬಿಡಲೂ ಸಾಧ್ಯವಾಗಲಿಲ್ಲ. ಹೋರಾಡುತ್ತಾ ಎರಡೂ ಅಮೃತ ನದಿಯ ಪವಿತ್ರ ತೀರ್ಥದಲ್ಲಿ ಮಗ್ನವಾಗುವುದನ್ನು ನೋಡುತ್ತೇವೆ.

ಉರಿಯಬೇಕಾದರೆ ಉರಿಯ ನಡುವೆ ಹೋಗುವುದಕ್ಕಿಂತಲೂ ಬೇರೆ ಉಪಾಯವಿಲ್ಲ. ಕಾದು ಕೆಂಪಗಾಗಬೇಕಾದರೆ ಕೆಂಡದ ಮಧ್ಯೆ ಬಹಳ ಹೊತ್ತು ಇದ್ದರಾಯಿತು! ತಪಸ್ವಿಗಳ ಸಾನ್ನಿಧ್ಯವೆ ಪರಮತಪಸ್ಸು. ಪರಮಹಂಸರ ಸಂಗ, ಸಹವಾಸ, ಸಂಭಾಷಣೆ, ಸೇವೆ ಮತ್ತು ಸಾನ್ನಿಧ್ಯ ಇವುಗಳ ಪರಿವೇಷದಲ್ಲಿ ನರೇಂದ್ರನೂ ಇನ್ನೂ ಇತರ ಅಂತರಂಗ ಶಿಷ್ಯರೂ ಸತ್ಯ ಸಾಕ್ಷಾತ್ಕಾರದ ಸಾಧನಕ್ಕೆ ತೊಡಗಿದರು. ಹಾಗೆಂದರೆ, ಉಪವಾಸ ಮಾಡುತ್ತಿದ್ದರೆಂದಾಗಲಿ, ಒಂಟಿ ಕಾಲಿನಲ್ಲಿ ನಿಂತು ತಪಸ್ಸು ಮಾಡುತ್ತಿದ್ದರೆಂದಾಗಲಿ, ಮುಳ್ಳಿನ ಹಾಸಗೆಯ ಮೇಲೆ ಮಲಗಿ ಅಥವಾ ತಲೆಕೆಳಗಾಗಿ ನೇತಾಡಿ ಅಥವಾ ತಲೆಗೆ ಮೊಳೆ ಹೊಡೆದುಕೊಂಡು ಅಥವಾ ನಾಲಗೆಗೆ ದಬ್ಬಣ ಚುಚ್ಚಿಕೊಂಡು ಅಥವಾ ಮೈಗೆ ಬೂದಿ ಬಳಿದುಕೊಂಡು ಸ್ನಾನ ಮಾಡದೆ ಕೊಳಕಿನ ಬಣಬೆಗಳಾಗಿ ಭೀಷಣ ರೀತಿಯಿಂದ ವರ್ತಿಸುತ್ತಿದ್ದರೆಂದಾಗಲಿ ಭಾವಿಸಬಾರದು. ಶ್ರೀರಾಮಕೃಷ್ಣ ಪರಮಹಂಸರು ಅಂತಹ ಧರ್ಮದ ಸರ್ಕಸ್ಸಿಗೆ ಮ್ಯಾನೇಜರಾಗಿರಲಿಲ್ಲ. ಅವರ ಬೋಧನೆಯಲ್ಲಿ ನಾಗರಿಕತೆಯಿದ್ದಂತೆ ಅವರ ಸಾಧನ ವಿಧಾನದಲ್ಲಿ ಸಂಸ್ಕೃತಿಯಿತ್ತು. ನೋವೆ ಸಾಧನೆ ಎಂಬುದು ಅವರ ಮಂತ್ರವಾಗಿರಲಿಲ್ಲ. ಸಂಕಟವೆ ಸಂಯಮವೆಂದು ಅವರು ಎಂದೂ ಉಪದೇಶ ಮಾಡಿಲ್ಲ.

ಯುಕ್ತಿಪೂರ್ಣವಾದ ತತ್ತ್ವಶಾಸ್ತ್ರದ ಸಿದ್ಧಾಂತಗಳಿಂದ ತೃಪ್ತಿ ಹೊಂದದ ನರೇಂದ್ರನ ಮನೋತೃಷ್ಣೆ ಸತ್ಯದ ಹೃದಯರಕ್ತವನ್ನು ಹೀರಿ ಸವಿಯುವ ಉತ್ಕಟಾಭಿಲಾಷೆಯಿಂದ ಅಲ್ಲಿಗಿಲ್ಲಿಗೆ ಹೋಗಿ, ಅತ್ತಯಿತ್ತ ಅಲೆದು, ಕಡೆಗೆ ಪರಮಹಂಸರಲ್ಲಿಗೆ ನಡೆದು ಹೇಗೆ ಹೆಡೆಮುಚ್ಚಿತೆಂಬುದನ್ನು ನಾವು ಹಿಂದಿನ ಅಧ್ಯಾಯಗಳಲ್ಲಿ ಅರಿತಿದ್ದೇವೆ. ಅಧ್ಯಯನಕ್ಕೂ ವಾದಕ್ಕೂ ಜಿಜ್ಞಾಸೆಗೂ ಬುದ್ಧಿಯ ಕಸರತ್ತಿಗೂ ಕೈವಶವಾಗದ ಜಗತ್ತೊಂದು ಇದೆ ಎಂಬರಿವು ಶ್ರೀರಾಮಕೃಷ್ಣರ ಸ್ಪರ್ಶಮಾತ್ರದಿಂದ ಉಂಟಾದ ಶಾಶ್ವತ ಸೂಚಕವಾದ ಕ್ಷಣಿಕ ದರ್ಶನದಿಂದ ಆತನಿಗೆ ಎಂದು ಸ್ಫುರಿಸಿತೋ ಅಂದಿನಿಂದ ಆ ಗುರುದೇವನ ಆತ್ಮಜ್ವಾಲೆಗೆ ತಾನೊಂದು ಪತಂಗವಾಗಿಬಿಟ್ಟನು. ಸಮಯ ದೊರೆತಾಗಲೆಲ್ಲಾ ನರೇಂದ್ರನು ದಕ್ಷಿಣೇಶ್ವರಕ್ಕೆ ಬಂದು, ಪಂಚವಟಿಯ ಸಾಧನರಂಗದಲ್ಲಿ ಗುರುವರ್ಯನ ನೇತೃತ್ವದಲ್ಲಿ, ಜನ, ಧ್ಯಾನ ಯೋಗಸಾಧನೆಗಳಲ್ಲಿ ನಿರತನಾಗಿ, ಬುದ್ಧಿಯ ಸಿಡಿಮದ್ದಿಗೆ ಭಾವದ ಕಿಡಿಯಿಟ್ಟು, ಸಿದ್ಧಿಯ ವಿದ್ಯುಜ್ಜ್ಯೋತಿ ಹೊರಹೊಮ್ಮುವಂತೆ ಮಾಡಲು ಪ್ರಯತ್ನಶೀಲನಾದನು.

ಹೀಗಿರುತ್ತಿರಲು ೧೮೮೫ನೆಯ ವರ್ಷದ ಮಧ್ಯಭಾಗದಲ್ಲಿ ಪರಮಹಂಸರ ಗಂಟಲುರೋಗ ದಿನೇದಿನೇ ವೃದ್ಧಿಹೊಂದಿತು. ಭಕ್ತಗಣವು ಚಿಕಿತ್ಸೆಗಾಗಿ ಅವರನ್ನು ಕಲ್ಕತ್ತಾಕ್ಕೆ ಕೊಂಡೊಯ್ದಿತು. ರಾಖಾಲ ನರೇಂದ್ರ ಮೊದಲಾದ ಬಾಲಕ ಭಕ್ತರೂ ಬಲರಾಮ, ರಾಮಚಂದ್ರ, ಗಿರೀಶ, ಈಶಾನ ಮೊದಲಾದ ಗೃಹೀಭಕ್ತರೂ ಗುರುವರ್ಯರ ಸೇವೆಗೆ ನಿಂತರು. ಸ್ವಲ್ಪ ದಿನಗಳಾದ ಮೇಲೆ ಕಲ್ಕತ್ತಾದ ಹವಾ ಸರಿಹೋಗದೆಂಬ ವೈದ್ಯರ ಹೇಳಿಕೆಯ ಮೇರೆಗೆ ಪರಮಹಂಸರು ಕಲ್ಕತ್ತಾ ನಗರಕ್ಕೆ ಒಂದು ಮೈಲಿ ದೂರದಲ್ಲಿರುವ ಕಾಶೀಪುರದ ಒಂದು ತೋಟದ ಮನೆಗೆ ಸಾಗಿಸಲ್ಪಟ್ಟರು. ಬಾಲಕ ಭಕ್ತಗಣವು ಮನೆಮಾರುಗಳನ್ನು ತ್ಯಜಿಸಿ, ಮನೆಯವರ ಮುನಿಸಿಗೆ ಗುರಿಯಾಗಿ ಗುರುಸೇವೆಗೆ ನಿಂತಿತು. ನರೇಂದ್ರನೂ ತನ್ನ ಉಪಾಧ್ಯಾಯ ವೃತ್ತಿಯನ್ನು ಬಿಟ್ಟುಬಂದನು. ಅನೇಕರು ತಮ್ಮ ಮಕ್ಕಳನ್ನು ಹಿಂದಕ್ಕೆಳೆಯಲು ಪ್ರಯತ್ನಪಟ್ಟರು. ಆದರೆ ಸಾಧ್ಯವಾಗಲಿಲ್ಲ.

ಚಿಕಿತ್ಸೆಯಿಂದ ಪ್ರಯೋಜನವಾಗಲಿಲ್ಲ. ದಿನದಿನಕ್ಕೂ ರೋಗ ಪ್ರಬಲವಾಗುತ್ತಾ ಹೋಯಿತು. ಶಿಷ್ಯರೆಲ್ಲ ಅಮಂಗಳವನ್ನು ನೆನೆಯತೊಡಗಿ ವಿಷಣ್ಣವದನರಾದರು. ಪರಮಹಂಸರು ಉಳಿದ ಶಿಷ್ಯರೆಲ್ಲರ ಸೇವೆಯನ್ನು ಸ್ವೀಕರಿಸಿದರೂ ನರೇಂದ್ರನನ್ನು ಮಾತ್ರ ಸೇವೆ ಮಾಡಲು ಬಿಡುತ್ತಿರಲಿಲ್ಲ. ಆದ್ದರಿಂದ ಆತನು ಹೊರಗಿನ ಕಾರ್ಯಗಳನ್ನೆಲ್ಲ ನೋಡಿಕೊಳ್ಳುತ್ತಿದ್ದನು. ಕಾಶೀಪುರವು ಸ್ವಲ್ಪದಿನಗಳಲ್ಲಿಯೆ ಯಾತ್ರಾಸ್ಥಳವಾಯಿತು. ಸಾವಿರಾರು ಮಂದಿ ಭಕ್ತರೂ ಧರ್ಮಪಿಪಾಸುಗಳೂ ಬರತೊಡಗಿದರು. ಅದು ರೋಗಿ ನಿವಾಸವೂ ಶುಶ್ರೂಷಾಗಾರವೂ ಮಾತ್ರವಲ್ಲದೆ ತಪಸ್ವಿಗಳ ಮಠವೂ ವಿದ್ಯಾರ್ಥಿಗಳ ವಿಶ್ವವಿದ್ಯಾನಿಲಯವೂ ಆಯಿತು. ನರೇಂದ್ರನು ಶ್ರೀಗುರು ಪ್ರದರ್ಶಿತ ಸಾಧನ ಮಾರ್ಗದಲ್ಲಿ ಎಂದಿಗಿಂತಲೂ ಅತಿಶಯ ಯತ್ನಶೀಲನಾಗಿ ಮುಂದುವರಿಯತೊಡಗಿದನು. ಆ ಪ್ರಬಲೋತ್ಸಾಹ, ಆ ಕಠೋರ ಇಂದ್ರಿಯ ನಿಗ್ರಹ, ಆ ಪರಿಪೂರ್ಣ ವಿಶ್ವಾಸ  – ಇವುಗಳು ವರ್ಣನಾತೀತವಾದುವು. ಅವನ್ನು ನೋಡಿ ಸಿದ್ಧ ಸಾರ್ವಭೌಮನಾದ ಗುರುವರ್ಯನೂ ಆನಂದಿತನಾದನು.

ಒಂದು ದಿನ ಇದ್ದಕ್ಕಿದ್ದ ಹಾಗೆ ನರೇಂದ್ರನು ಕಣ್ಮರೆಯಾದನು. ಎಲ್ಲೆಲ್ಲಿ ಹುಡುಕಿದರೂ ಸಿಕ್ಕಲಿಲ್ಲ. ಶಿಷ್ಯರೆಲ್ಲ ಕಳವಳಗೊಂಡರು. ಪರಮಹಂಸರು ಮಾತ್ರ, ನಿಮಗೆ ಕಳವಳ ಬೇಡ, ಅವನು ಎಲ್ಲಿಗೆ ಹೋದರೂ ಇಲ್ಲಿಗೆ ಬಂದೇ ಬರುತ್ತಾನೆ ಎಂದು ಹೇಳಿ ಎಲ್ಲರನ್ನೂ ಸಂತೈಸಿದರು.

ನರೇಂದ್ರನು, ನಿಶೆಯಲ್ಲಿ ಯಾರಿಗೂ ಹೇಳದೆ, ಇನ್ನಿಬ್ಬರು ಶಿಷ್ಯರೊಡನೆ ಬುದ್ಧಗಯೆಗೆ ಹೋಗಿದ್ದನು. ಅಲ್ಲಿಗೆ ಹೋಗಿ ಬೋಧಿಸತ್ವನ ಮಂದಿರ ದರ್ಶನ ಮಾಡಿದನು. ಅಲ್ಲಿಯೇ ಭಗವಾನ್ ಬುದ್ಧದೇವನು ಜನ್ಮಜರಾವ್ಯಾಧಿ ಮರಣಾ ಕ್ಲಿಷ್ಟ ಜೀವರಾಶಿಗಳ ದುಃಖನಿವಾರಣೆಗಾಗಿ ನಿರ್ಯಾಣ ಹೊಂದಿದ್ದು! ನರೇಂದ್ರನು ಬೋಧದ್ರುಮ ಮೂಲದಲ್ಲಿರುವ ಪ್ರಸ್ತರಾಸನದ ಮೇಲೆ ಕುಳಿತು ಧ್ಯಾನಸ್ಥನಾದನು. ಜೊತೆಯಲ್ಲಿದ್ದ ಗುರುಭ್ರಾತರಿಬ್ಬರೂ ತಮ್ಮ ಧ್ಯಾನಾನಂತರದಲ್ಲಿ ಕಣ್ಣುಬಿಟ್ಟು ನೋಡಿದರೆ, ಆತನು ಶಿಲಾವಿಗ್ರಹದಂತೆ ಸ್ಪಂದಹೀನ ನಿಶ್ಚಲನಾಗಿದ್ದನು! ಬಹುಕ್ಷಣಗಳಾದ ಮೇಲೆ ಆತನು ಅರೆಮೈ ತಿಳಿದು ಅಳತೊಡಗಿದನು. ಮತ್ತೆ ಧ್ಯಾನಸ್ಥನಾದನು. ಆತನು ಏನು ತಿಳಿದನೋ, ಏನು ಕಂಡನೋ, ಯಾರು ಬಲ್ಲರು? ಮೂರು ದಿನಗಳು ಹೀಗೆ ಕಠೋರ ತಪಸ್ಸನ್ನು ಮಾಡಿ ಕಾಶೀಪುರದ ತೋಟದ ಮನೆಗೆ ಹಿಂತಿರುಗಿ ಬಂದನು. ಭಕ್ತರು ತಮ್ಮ ಪ್ರಾಣಸ್ವರೂಪಿಯಾದ ನರೇಂದ್ರನನ್ನು ನೋಡಿ ಆನಂದಮಗ್ನರಾದರು. ಬುದ್ಧಗಯೆಯಿಂದ ಬಂದ ನರೇಂದ್ರನು ನಿರ್ವಿಕಲ್ಪಸಮಾಧಿ ಪ್ರಾಪ್ತಿಗಾಗಿ ಪರಮಹಂಸರನ್ನು ಬಿಟ್ಟು ಅಲ್ಲಿ ಇಲ್ಲಿ ಅಲೆಯುವುದು ನಿರರ್ಥಕವೆಂದು ತಿಳಿದು, ಶ್ರೀಗುರು ಸನ್ನಿಧಿಯಲ್ಲಿಯೇ ಘೋರ ಸಾಧನೆಗಳನ್ನು ಮಾಡತೊಡಗಿದನು.

ಒಂದು ದಿನ ರಾತ್ರಿ ಕಾಶೀಪುರದ ತೋಟದಲ್ಲಿ ಪ್ರಜ್ವಲಿತ ಅಗ್ನಿಕುಂಡದ ಮುಂದೆ ನರೇಂದ್ರನು ಧ್ಯಾನಮಗ್ನನಾಗಿದ್ದಾನೆ. ಇದ್ದಕ್ಕಿದ್ದ ಹಾಗೆ ತನ್ನ ದೇಹದಲ್ಲಿ ಯಾವುದೋ ಒಂದು ಪ್ರಚಂಡ ಶಕ್ತಿ ಸಂಚಾರವಾದಂತಾಯಿತು. ಸ್ಪರ್ಶಮಾತ್ರದಿಂದ ಇತರರ ಮನೋರಾಜ್ಯದಲ್ಲಿ ಆಮೂಲಪರಿವರ್ತನೆಯನ್ನುಂಟುಮಾಡುವಂತಹ ಶಕ್ತಿ! ಅದನ್ನು ಪರೀಕ್ಷಿಸಿ ನೋಡಲೆಳಸಿ ಬಾಲಸುಲಭ ಚಪಲತಾವಶನಾದ ಆತನು ಹಿಂದುಮುಂದೆ ನೋಡದೆ ಪಕ್ಕದಲ್ಲಿ ಧ್ಯಾನಮಗ್ನನಾಗಿ ಕುಳಿತಿದ್ದ ಗುರುಭಾಯಿಯೊಬ್ಬನನ್ನು ಮುಟ್ಟಿದನು. ಆತನು ವಿದ್ಯುತ್ಪ್ರವಾಹವನ್ನು ಮುಟ್ಟಿದವನಂತೆ ನಡನಡ ನಡುಗಿದನು. ಅಷ್ಟೇ ಅಲ್ಲ; ದ್ವೈತವಾದಿಯೂ ಸಗುಣ ಸಾಕಾರೇಶ್ವರ ಭಕ್ತನೂ ಆಗಿದ್ದ ಆತನು ಒಂದು ನಿಮಿಷದಲ್ಲಿಯೆ ಅದ್ವೈತವಾದಿಯೂ ಜ್ಞಾನಯೋಗಿಯೂ ಆಗಿಬಿಟ್ಟನಂತೆ! ಯೋಗದೃಷ್ಟಿಯಿಂದ ಅದನ್ನು ಕೂಡಲೆ ಅರಿತ ಪರಮಹಂಸರು ನರೇಂದ್ರನನ್ನು ಬಳಿಗೆ ಕರೆಯಿಸಿ “ಸಂಗ್ರಹಿಸುವುದರೊಳಗಾಗಿ ವ್ಯಯಮಾಡುವೆಯೇನು? ಏನು ಕೆಲಸ ಮಾಡಿರುವೆ? ಆತನ ಭಾವ ನಷ್ಟ ಮಾಡಿ ಬಟ್ಟೆಯಲ್ಲಾ!” ಎಂದು ಎಚ್ಚರಿಸಿದರಂತೆ.

ಹಾಗೆಯೆ ಮತ್ತೊಂದು ದಿನ. ನೀರವ ಗಂಭೀರ ರಾತ್ರಿ. ಪರಮಹಂಸರು ರೋಗಶಯ್ಯೆಯಲ್ಲಿ ಪವಡಿಸಿದ್ದಾರೆ. ಪಕ್ಕದಲ್ಲಿ ನರೇಂದ್ರನು ನಿಂತಿದ್ದಾನೆ. ಕೋಣೆಯಲ್ಲಿ ಮತ್ತಾರೂ ಇಲ್ಲ. ಇಂದು ನರೇಂದ್ರನು ಹೇಗಾದರೂ ಮಾಡಿ ಗುರುಗಳಿಂದ ನಿರ್ವಿಕಲ್ಪ ಸಮಾಧಿಯನ್ನು ಅನುಗ್ರಹಿಸಿಕೊಳ್ಳಬೇಕೆಂದು ದೃಢನಿಶ್ಚಯ ಮಾಡಿಕೊಂಡು ಬಂದಿದ್ದಾನೆ. ಭಯ ವಿಸ್ಮಯ ಸಂಭ್ರಮಗಳ ಆವೇಗಭರದಿಂದ ಆತನ ಬಾಯಿಯಿಂದ ನುಡಿಗಳು ಹೊರಡದಿವೆ. ಅಂತರ್ಯಾಮಿಯಾದ ಮಹಾ ಪುರುಷನು ಶಿಷ್ಯನ ಮನೋಭಾವವನ್ನು ತಿಳಿದು ಮೆಲ್ಲನೆ ಕಣ್ದೆರೆದು ಮುದ್ದಿನ ನೋಟವನ್ನು ಬೀರಿ “ಏನಪ್ಪಾ ನರೇನ್, ನಿನಗೇನು ಬೇಕಾಗಿದೆ?” ಎಂದರು. ಸುಯೋಗವು ಲಭಿಸಿತೆಂದು ಹಿಗ್ಗಿ ನರೇಂದ್ರನು “ಗುರುದೇವ, ನಿಮ್ಮಂತೆ ನಾನೂ ಸರ್ವದಾ ನಿರ್ವಿಕಲ್ಪ ಸಮಾಧಿಯಲ್ಲಿ ಮುಳುಗಿರಬೇಕೆಂಬುದೆ ನನ್ನ ಮಹದಭಿಲಾಷೆ!” ಎಂದನು.

ಗುರುದೇವನು ಸ್ವಲ್ಪ ಅಧೀರನಾಗಿ “ಮರಳಿ ಮರಳಿ ಅದೇ ಕತೆ ಹೇಳಲು ನಿನಗೆ ನಾಚಿಕೆಯಾಗದೆ? ಇಷ್ಟು ಕಾಲ ಮಹಾವಟವೃಕ್ಷದಂತೆ ಬೆಳೆದಿರುವೆ; ಸಾವಿರಾರು ಜನರಿಗೆ ಶಾಂತಿಛಾಯೆಯನ್ನು ನೀನು ನೀಡಬೇಕಾಗಿದೆ. ಅದನ್ನು ಬಿಟ್ಟು ಸ್ವಂತ ಮುಕ್ತಿಗಾಗಿ ಬಾಯಿ ಬಾಯಿ ಬಿಟ್ಟು ಕಾತರನಾಗಿಹೆಯಲ್ಲಾ! ಎಂತಹ ಕ್ಷುದ್ರ ಆದರ್ಶ ನಿನ್ನದು!” ಎಂದರು.

ನರೇಂದ್ರನ ವಿಶಾಲ ನೇತ್ರಗಳು ಅಶ್ರುಜಲಪೂರ್ಣವಾದುವು. ಆತನು ಅಭಿಮಾನದಿಂದ ಹೇಳತೊಡಗಿದನು: “ನಿರ್ವಿಕಲ್ಪ ಸಮಾಧಿ ದೊರಕುವವರೆಗೂ ನನ್ನ ಮನಸ್ಸಿಗೆ ಶಾಂತಿಯಿರದು. ಅದು ದೊರಕುವವರೆಗೆ ನಾನು ಏನನ್ನೂ ಮಾಡುವುದಿಲ್ಲ.”

“ಎಲ್ಲ ನಿನ್ನಿಚ್ಛೆಯೆಂದು ತಿಳಿದೆಯೊ? ಜಗದಂಬೆ ಕತ್ತು ಹಿಡಿದು ಬಗ್ಗಿಸಿ ಕೆಲಸ ಮಾಡಿಸುವಳು.”

ನರೇಂದ್ರನು ಮರಳಿ ಮರಳಿ ಕಂಬನಿಗರೆಯುತ್ತ ಗುರುದೇವನನ್ನು ಬೇಡತೊಡಗಿದನು. ಕಡೆಗೆ ಪರಮಹಂಸರು “ಆಗಲಿ, ನಿರ್ವಿಕಲ್ಪ ಸಮಾಧಿ ದೊರಕುತ್ತದೆ” ಎಂದರು. ಇದಾದ ಒಂದೆರಡು ದಿನಗಳ ಮೇಲೆ ಸಂಜೆಯ ಹೊತ್ತಿನಲ್ಲಿ ಧ್ಯಾನಕ್ಕೆ ಕುಳಿತ ನರೇಂದ್ರನು ನಿರ್ವಿಕಲ್ಪಸಮಾಧಿಯ ಗಂಭೀರ ಜಲಧಿಯಲ್ಲಿ ಧುಮುಕಿದನು! ಇಂದ್ರಿಯಗ್ರಾಹ್ಯವಾದ ಪ್ರಪಂಚವು ಆತನ ಸಮ್ಮುಖದಿಂದ ಅಂತರ್ಹಿತವಾಯಿತು. ದೇಶಕಾಲ ನಿಮಿತ್ತಾತೀತವಾದ ನಿಜಬೋಧಸ್ವರೂಪವಾದ ಆತ್ಮವು ಸ್ವಮಹಿಮೆಯಿಂದ ವಿರಾಜಿಸಿತು. ಅದೆಂತಹ ಅವಸ್ಥೆ? ಮಾನವೀಯ ಭಾಷೆಗೆ ನಿಲುಕತಕ್ಕುದಲ್ಲ.

ನರೇಂದ್ರನನ್ನು ನೋಡಿ ಬಾಲಭಕ್ತರು ಗಾಬರಿಯಾದರು. ಶೂನ್ಯತೆ ಆತನ ಸುತ್ತಲೂ ಸುಳಿದಾಡುತ್ತಿತ್ತು. ಹೆಸರು ಕೂಗಿ ಕರೆದರು. ಮೈಯಲ್ಲಾಡಿಸಿ ನೋಡಿದರು. ಎಚ್ಚರವಿಲ್ಲ. ನಿಶ್ಚಲ, ನಿಷ್ಪಂದ, ನೀರವ, ಗಭೀರ! ಕಂಗೆಟ್ಟರು. ಗುರುಗಳ ಬಳಿಗೆ ಓಡಿದರು. ಪರಮಹಂಸರು ಶಾಂತಗಂಭೀರ ಮೂರ್ತಿಯಾಗಿದ್ದರು:‌

“ಇರಲಿ, ಇರಲಿ, ಇದಕ್ಕಾಗಿ ನನ್ನನ್ನು ಬಹಳವಾಗಿ ಕಾಡಿಸಿದ್ದಾನೆ. ಸುಮ್ಮನಿರಿ!” ಎಂದರು. ಶಿಷ್ಯರು ಧೈರ್ಯಗೊಂಡು ನರೇಂದ್ರನ ಬಳಿಗೆ ಬಂದರು.

ರಾತ್ರಿ ಒಂಬತ್ತು ಗಂಟೆಯಾದ ಮೇಲೆ ಬಾಹ್ಯಪ್ರಜ್ಞೆಯ ಚಿಹ್ನೆಗಳು ಮೆಲುಮೆಲನೆ ತೋರತೊಡಗಿದುವು. ಬಾಲಭಕ್ತರು ಹರ್ಷಿತರಾದರು. ಒಬ್ಬನು ಮಂಗಳ ವಾರ್ತೆಯನ್ನು ಶ್ರೀರಾಮಕೃಷ್ಣರಿಗೆ ತಿಳಿಸಲು ಓಡಿದನು. ಉಳಿದವರು “ನರೇನ್, ನರೇನ್!” ಎಂದು ಕೂಗುತ್ತಾ ಉಪಚರಿಸತೊಡಗಿದರು. ಕಲಕಲರವವು ಬರಬರುತ್ತ ಹೆಚ್ಚಾಯಿತು. ನರೇಂದ್ರನು ಯಾವುದೋ ಒಂದು ಅನಿರ್ವಚನೀಯವಾದ ಆನಂದವಾಹಿನಿಯಲ್ಲಿ ಬಹುದೂರದಿಂದ ಕೆಳಗಿಳಿದು ಬರುವವನಂತೆ ತೋರಿದನು. ಮುಖದಲ್ಲಿ ಕಾಂತಿ ಶಾಂತಿಗಳು ಮೈದೋರಿದುವು.

ಸ್ವಲ್ಪ ಹೊತ್ತಾದ ಮೇಲೆ ಆತನು “ಅಯ್ಯೋ ಏನಾಗಿಹೋಯಿತು? ನನ್ನ ದೇಹವೆಲ್ಲಿ?” ಎಂದು ಕೂಗಿಕೊಂಡನು.‌

“ಇಲ್ಲಿದೆ! ಇಲ್ಲಿದೆ!” ಎಂದು ಹತ್ತಾರು ವಾಣಿಗಳು ಕೂಗಿಕೊಂಡವು; ಹತ್ತಾರು ಕೈಗಳು ನರೇಂದ್ರನ ದೇಹವನ್ನು ಮುಟ್ಟಿದುವು!

ನರೇಂದ್ರನು ಮೈತಳೆದನು. ಅಪಾರ್ಥಿವ ಜ್ಯೋತಿ ನಯನಗಳಲ್ಲಿ ತಾಂಡವವಾಡುತ್ತಿತ್ತು. ವದನರಂಗದಲ್ಲಿ ಬ್ರಹ್ಮಾನಂದವು ಪ್ರತಿಬಿಂಬಿಸಿ ನಲಿದಿತ್ತು. ನರೇಂದ್ರನು ತೇಜೋಮೂರ್ತಿಯಾಗಿದ್ದನು. ಬಾಲಕ ಭಕ್ತರ ಸಂಭ್ರಮ ಎಲ್ಲೆ ಮೀರಿತು.

ನರೇಂದ್ರನು ಶ್ರೀರಾಮಕೃಷ್ಣರ ಬಳಿಗೆ ಬಂದು ದಂಡಪ್ರಣಾಮ ಮಾಡಿದನು. ಗುರುವರ್ಯರು ಮಂದಸ್ಮಿತವದನರಾಗಿ ಪ್ರಿಯತಮ ಶಿಷ್ಯನನ್ನು ಕೃಪಾಪೂರ್ಣ ದೃಷ್ಟಿಯಿಂದ ನೋಡುತ್ತ “ಜಗದಂಬೆ ನಿನಗೆಲ್ಲವನ್ನೂ ತೋರಿಸಿದಳಷ್ಟೆ? ಇನ್ನು ಅದಕ್ಕೆ ಬೀಗ ಹಾಕಿದೆ. ಬೀಗದಕ್ಕೆ ನನ್ನಲ್ಲಿದೆ. ನೀನು ಮಾಡಬೇಕಾಗಿರುವ ಕೆಲಸವೆಲ್ಲವನ್ನೂ ಮುಗಿಸಿದ ಮೇಲೆ ಬೀಗ ತೆಗೆಯುವೆನು” ಎಂದರು.

ಆ ದಿನ ಎಲ್ಲೆಲ್ಲಿಯೂ ಆನಂದ. ಹಗಲಿರುಳೆಲ್ಲ ಗಾನ, ಭಜನೆ. ನರೇಂದ್ರನು ಭಾವೋನ್ಮತ್ತನಾಗಿ ಕೀರ್ತನೆಗಳನ್ನು ಹಾಡಿದ್ದೂ ಹಾಡಿದ್ದೆ! ಭಕ್ತರನ್ನು ಪುಳಕಿತರನ್ನಾಗಿ ಮಾಡಿದ್ದೂ ಮಾಡಿದ್ದೆ! ಇತ್ತ ಪರಮಹಂಸರು ಜಗಜ್ಜನನಿಯೊಡನೆ “ಅಮ್ಮಾ, ಅವನ (ನರೇಂದ್ರನ) ಅದ್ವೈತಾನುಭೂತಿಯ ಮೇಲೆ ನಿನ್ನ ಮಾಯಾವರಣವನ್ನು ದಯಮಾಡಿ ಬೀಸು. ಅವನಿಂದ ನಾನು ಮಾಡಿಸಬೇಕೆಂದ ಕೆಲಸ ಬಹಳವಿದೆ” ಎಂದು ಬೇಡುತ್ತಿದ್ದರು.

೧೮೮೬ನೆಯ ಜುಲೈ ತಿಂಗಳ ಉತ್ತರಭಾಗದಲ್ಲಿ ಪರಮಹಂಸರ ಗಂಟಲು ರೋಗ ಕ್ರಮಶಃ ಭೀಷಣವಾಗತೊಡಗಿತು. ಬರಬರುತ್ತಾ ಮಾತು ಕಿರಿದಾಯಿತು. ಆಹಾರವೆಂದರೆ ಬಾರ್ಲಿಯ ಗಂಜಿ. ಅದನ್ನೂ ಕುಡಿಯಲಾಗುತ್ತಿರಲಿಲ್ಲ. ಅಷ್ಟಾದರೂ ಬಾಲಕ ಭಕ್ತರನ್ನು ಮುದ್ದಿನಿಂದ ಬಳಿಗೆ ಕರೆದು ಬುದ್ಧಿಯ ಮಾತುಗಳನ್ನು ಹೇಳುತ್ತಿದ್ದರು. ದೂರದಿಂದ ಬಂದ ನೂತನ ಭಕ್ತರಿಗೆ ಉಪದೇಶ ಮಾಡುತ್ತಿದ್ದರು.

ಒಂದು ಸಾರಿ ನರೇಂದ್ರನಾಥನನ್ನು ಬಳಿಗೆ ಕರೆದು “ನರೇನ್, ಇವರೆಲ್ಲ ನನ್ನ ಮಕ್ಕಳು. ಅವರೆಲ್ಲರಿಗಿಂತಲೂ ನೀನು ಬುದ್ಧಿವಂತ, ಶಕ್ತಿವಂತ. ಅವರ ಸಂರಕ್ಷಣೆಯ ಭಾರ ನಿನ್ನ ಮೇಲಿದೆ. ಅವರನ್ನೆಲ್ಲ ಸನ್ಮಾರ್ಗದಲ್ಲಿ ನಡೆಸಿ, ಕಾಪಾಡು. ನಾನು ಶೀಘ್ರದಲ್ಲಿಯೆ ದೇಹತ್ಯಾಗ ಮಾಡುವೆನು” ಎಂದರು.

ಪುನಃ ಮೌನವಾಗಿ ಕಂಬನಿಗರೆಯುತ್ತ ನಿಂತಿದ್ದ ಶಿಷ್ಯಶ್ರೇಷ್ಠನನ್ನು ಸಂಬೋಧಿಸಿ “ಅಪ್ಪಾ, ನಿನಗಿಂದು ನನ್ನ ಸರ್ವಸ್ವವನ್ನೂ ಕೊಟ್ಟುಬಿಟ್ಟಿದ್ದೇನೆ. ನಾನಿನ್ನು ಏನೊಂದಿಲ್ಲದ ಫಕೀರ!” ಎಂದರು.

ನರೇಂದ್ರನಿಗೂ ಗುರುವರ್ಯರ ಲೀಲಾವಸಾನಕಾಲವು ಬಳಿಸಾರಿತೆಂದು ತಿಳಿಯಿತು. ಆತನು ಭಾವಾವೇಗವನ್ನು ದಮನ ಮಾಡಲು ಅಸಮರ್ಥನಾಗಿ ಮಕ್ಕಳಂತೆ ಅಳುತ್ತಾ ಅಲ್ಲಿಂದ ಹೊರಗೆ ಹೋದನು.

ಭೀಷಣ ದಿನ ಸನ್ನಿಹಿತವಾಯಿತು. ೧೮೮೬ನೆಯ ವರ್ಷದ ಆಗಸ್ಟು ತಿಂಗಳು ೧೬ನೆಯ ಭಾನುವಾರ ಮೃತ್ಯುಲೀಲಾಮುಖವಾದ ಮಹಾಪುರುಷನ ಶಯ್ಯೆಯ ಸುತ್ತಲೂ ಮುತ್ತಿಕೊಂಡು, ಅಸಹನೀಯ ಶೋಕಭಾರಾಕ್ರಾಂತ ಸ್ತಂಭಿತಹೃದಯರಾದ ಭಕ್ತಶಿಷ್ಯರೆಲ್ಲರೂ ನವಯುಗಾವತಾರನ ಮಹಾಸಮಾಧಿಯನ್ನು ಪ್ರತೀಕ್ಷಿಸುತ್ತಿದ್ದಾರೆ. ಯಾರ ಯಾರ ಹೃದಯಗಳಲ್ಲಿ ಯಾವ ಯಾವ ಭಾವಗಳು ಸಂಚರಿಸುತ್ತಿದ್ದುವೊ ಅದನ್ನು ಅವರವರೆ ಬಲ್ಲರು!

ನರೇಂದ್ರನೂ ಯೋಚಿಸುತ್ತಿದ್ದಾನೆ: “ಪರಮಹಂಸರನ್ನು ಎಲ್ಲರೂ ಭಗವಂತನ ಅವತಾರವೆಂದು ನಂಬಿದ್ದಾರೆ. ನನಗೆ ಮಾತ್ರ ಅದು ಇನ್ನೂ ಒಂದು ಸಮಸ್ಯೆಯಾಗಿದೆ; ಈಗಲಾದರೂ ಗುರುವರ್ಯರು ನನ್ನ ಸಂಶಯವನ್ನು ಪರಿಹರಿಸಿದರೆ ಸರಿ, ಇಲ್ಲವಾದರೆ ನಾನು ನಂಬಲಾರೆ.” ಹೀಗೆಂದು ನರೇಂದ್ರನು ಯೋಚಿಸುತ್ತಿದ್ದಾಗಲೆ ಅಂತರ್ಯಾಮಿಯಾದ ಭಗವಾನರು ಮೆಲ್ಲನೆ ಕಣ್ದೆರೆದು ಪೂರ್ಣದೃಷ್ಟಿಯಿಂದ ನರೇಂದ್ರನನ್ನು ನೋಡುತ್ತಾ “ಏನಪ್ಪಾ ನರೇನ್! ನಿನಗಿನ್ನೂ ವಿಶ್ವಾಸ ಹುಟ್ಟಲಿಲ್ಲವೆ? ಯಾರು ರಾಮನೊ, ಯಾರು ಕೃಷ್ಣನೊ ಅವನೇ ಈಗ ರಾಮಕೃಷ್ಣನಾಗಿದ್ದಾನೆ – ನಿನ್ನ ವೇದಾಂತ ದೃಷ್ಟಿಯಿಂದಲ್ಲ” ಎಂದರು.

[1]

ನರೇಂದ್ರ ಬೆಚ್ಚಿಬಿದ್ದನು. ಮನೆಗೆ ಸಿಡಿಲು ಬಡಿದಿದ್ದರೂ ಅವನಂತು ಬೆಚ್ಚುತ್ತಿರಲಿಲ್ಲ.

ಕ್ರಮೇಣ ಬ್ರಾಹ್ಮಮುಹೂರ್ತ ಬಳಿ ಸಾರಿತು. ಲೀಲಾಮಯ ದೀನಬಂಧು ಶ್ರೀರಾಮಕೃಷ್ಣ ಪರಮಹಂಸದೇವನು ಮಹಾಸಮಾಧಿಯೋಗದಿಂದ ನಶ್ವರ ದೇಹತ್ಯಾಗ ಮಾಡಿದನು. ಆತನ ಅಂತಿಮ ವಾಣಿ ನರೇಂದ್ರನ ಹೃದಯದಲ್ಲಿ ಚಿರಮುದ್ರಿತವಾಯಿತು.

ರುದ್ರಸ್ಮಶಾನ! ಪ್ರಶಾಂತ ಶ್ಮಶಾನ! ಸತ್ಯತರ ಶ್ಮಶಾನ! ಚಂದನ ಮರಗಳ ಇಂಧನ ರಾಶಿಯ ಮಹಾಚಿತೆ ನೇರ್ಪಟ್ಟಿದೆ. ಶ್ರೀಗುರುದೇವನ ಮೃತದೇಹ ಸೂಡಿನ ಮೇಲಿದೆ. ಸ್ವಲ್ಪ ಹೊತ್ತಿನಲ್ಲಿಯೆ ಭಯಭರಿತ ಭಕ್ತಿಯಿಂದ ಭಗವಾನ್ ಅಗ್ನಿ ದೇವನು ಪ್ರಜ್ವಲಿಸಲಾರಂಭಿಸಿದನು. ಅರುಣ ನೀಲ ಹರಿದ್ರ ಶ್ಯಾಮಲಾದಿ ನಾನಾ ವರ್ಣ ವಿರಾಜಿತ ಅಗ್ನಿಜ್ವಾಲೆಯಗಳು ಶಂಕರ ಭಯಂಕರವಾಗಿ ರಂಜಿಸಿದುವು. ಸಾವಿರಾರು ಜನ ಭಕ್ತರ ಮತ್ತು ಶಿಷ್ಯರ ಘನಘೋಷ ಸದೃಶವಾದ ಜಯನಾದ ಗಗನಮಂಡಲವನ್ನೆ ತುಂಬಿ ದಿಕ್ತಟದ ಭಿತ್ತಿಗಳಿಂದ ಪ್ರತಿಧ್ವನಿತವಾಯಿತು. ಅಸಂಖ್ಯಾಲೋಚನೆಗಳ ಆವೇಗಭರದಿಂದ ನೀರವವಾಗಿ ನಿಂತಿದ್ದ ನರೇಂದ್ರನೂ ಭಕ್ತರ ಜಯಘೋಷದಲ್ಲಿ ಸೇರಿದನು. ಜಯರವದಿಂದ ನಿಶ್ಚಲಶ್ಮಶಾನ ಸಮಸ್ತವೂ ಕಂಪಿಸಿತು:

ಜಯ ಭಗವಾನ್!
ಜಯ ರಾಮಕೃಷ್ಣ!
ಜಯ ಗುರುದೇವ![1] ಬ್ರಾಹ್ಮಸಮಾಜದ ಸದಸ್ಯನೂ ವಿಚಾರವಾದಿಯೂ ಆಗಿದ್ದ ಪಂಡಿತ ಶಿವನಾಥಶಾಸ್ತ್ರಿ ಒಂದು ಸಾರಿ, ಶ್ರೀರಾಮಕೃಷ್ಣರು ರೋಗದಿಂದ ನರಳುತ್ತಿದ್ದ ಅವರ ಅಂತ್ಯದ ದಿನಗಳಲ್ಲಿ ದಕ್ಷಿಣೇಶ್ವರಕ್ಕೆ ಹೋಗಿದ್ದಾಗ ಮಾತುಮಾತಾಡುತ್ತಾ ಹೀಗೆ ವಿನೋದವಾಗಿಯಾದರೂ ಮನಃಪೂರ್ವಕವಾಗಿ ಹೇಳಿದನಂತೆ:‌

“ಒಂದೇ ಗ್ರಂಥಕ್ಕೆ ಅನೇಕ ಮುದ್ರಣಗಳಾಗುವಂತೆ ಸರ್ವಶಕ್ತನಾದ ಜಗದೀಶ್ವರನಿಗೂ ಅನೇಕ ಮುದ್ರಣಗಳಾಗಿವೆ. (ಅವತಾರಗಳು ಎಂದು ಭಾವ). ಹಾಗೆಯೆ ನಿಮ್ಮ ಶಿಷ್ಯರು ನಿಮ್ಮನ್ನೂ ಪರಮಾತ್ಮನ ಒಂದು ಹೊಸ ಮುದ್ರಣವನ್ನಾಗಿ ಮಾಡುತ್ತಿದ್ದಾರೆ” ಎಂದು. (ಶ್ರೀರಾಮಕೃಷ್ಣರನ್ನು ಅವತಾರಪುರುಷ ಎಂಬುದಾಗಿ ಸಾರುತ್ತಿದ್ದಾರೆ ಎಂದು ಧ್ವನಿ.)

ಪರಮಹಂಸರು ಮೃದುಹಾಸ್ಯಮುಖರಾಗಿ:‌

“ನೋಡಪ್ಪಾ, ಊಹಿಸಿಕೊಂಡರೆ ನಗು ಬರುತ್ತದೆ. ಸರ್ವಶಕ್ತನಾದ ಜಗದೀಶ್ವರನು ಗಂಟಲು ರೋಗದಿಂದ ನರಳಿ ಸಾಯುತ್ತಿದ್ದಾನಂತೆ! ಅವರೆಂತಹ ಮಂಕುಗಳಾಗಿರಬೇಕು ಹಾಗೆ ಸಾರುವುದಕ್ಕೆ?” ಎಂದರಂತೆ.

(ಪಂಡಿತ ಶಿವನಾಥಶಾಸ್ತ್ರಿಯ Men I Have Seen ಎಂಬ ಪುಸ್ತಕದಿಂದ)