ದಕ್ಷಿಣೇಶ್ವರದ ಮಹಾಕಾಳಿಯ ಭಕ್ತಭೈರವನು ತನ್ನ ಶಿಷ್ಯಗಣಾಗ್ರಣಿಯ ಧೀರ ಲಲಾಟಕ್ಕೆ ರಕ್ತಚಂದನವಿಟ್ಟು, ಕೈಗೆ ಕಂಕಣಕಟ್ಟಿ, ಮಹಾಸಮಾಧಿಯಲ್ಲಿ ಮುಳುಗಿ ಕಣ್ಮರೆಯಾದನು. ಕಣ್ಣಿನ ಬೆಳಕು ಎದೆಯ ಬೆಳಕಾಯಿತು. ನರೇಂದ್ರನ ನಾಯಕತ್ವದಲ್ಲಿ ಪರಮಹಂಸರಿಂದ ಸಂನ್ಯಾಸ ಸ್ವೀಕಾರ ಮಾಡಿದ್ದ ಹನ್ನೆರಡು ಮಂದಿ ತರುಣರು, ಬಾಡಿಗೆಗೆ ಗೊತ್ತುಮಾಡಿದ್ದ ಅವಧಿ ಇನ್ನೊಂದು ವಾರವಿದ್ದುದರಿಂದ ಅದುವರೆಗೂ, ಕಾಶಿಪುರದ ತೋಟದ ಮನೆಯಲ್ಲಿ ಒಟ್ಟಾಗಿ ಸೇರಿ, ಗುರುದೇವನ ಪಾವನ ಪ್ರೇಮದ ಸ್ಮೃತಿಯ ತೊಟ್ಟಿಲಲ್ಲಿ ಸಾಧನನಿರತರಾದರು.

ಆದರೆ ಕೆಲವು ದಿನಗಳಲ್ಲಿಯೆ ಆ ಮನೆಯನ್ನು ಬಿಡಬೇಕಾಗಿ ಬಂದುದರಿಂದ ಬಾಲಕ ಸಂನ್ಯಾಸಿಗಳು ಆಶ್ರಯಹೀನರಾದರು. ಅಂತೂ ಗೃಹೀಭಕ್ತರಲ್ಲಿ ಒಬ್ಬನಾಗಿದ್ದ ಸುರೇಂದ್ರನಾಥಮಿತ್ರ ಮಹಾಶಯನ ಔದಾರ್ಯದಿಂದ ವರಾಹನಗರದಲ್ಲಿ ಹಾಳುಮನೆಯೊಂದನ್ನು ಬಾಡಿಗೆಗೆ ತೆಗೆದುಕೊಂಡು ಅಲ್ಲಿಗೆ ಶ್ರೀರಾಮಕೃಷ್ಣರ ದೇಹಾವಶಿಷ್ಟ ಭಸ್ಮಾಸ್ಥಿಪೂರ್ಣವಾದ ತಾಮ್ರಕಲಶವನ್ನು ಮಸ್ತಕದಲ್ಲಿ ಧರಿಸಿಕೊಂಡು ಹಿಂದಿನ ದಿನಗಳನ್ನು ನೆನೆದು ಕಂಬನಿಗರೆಯುತ್ತ ಬಾಲ ಸಂನ್ಯಾಸಿಗಳು ತೆರಳಿದರು. ವರಾಹನಗರದ ಆ ಹಾಳುಮನೆ ಭಾವೀ ನವಯುಗ ಪ್ರವರ್ತಕ ಸಂನ್ಯಾಸಿಗಳ ಕಠೋರ ತಪೋರಂಗವಾಯಿತು.

ಅನೇಕ ಜನ ಸಂಸಾರಿಗಳು ಬಾಲ ಸಂನ್ಯಾಸಿಗಳನ್ನು ಸಂಸಾರಕ್ಕೆ ಹಿಂತಿರುಗುವಂತೆ ಪ್ರೇರಿಸತೊಡಗಿದರು. ಭಯಪ್ರದರ್ಶನವನ್ನೂ ಮಾಡಿದರು. ಆದರೆ ನರೇಂದ್ರನ ನಿರಂತರೋತ್ಸಾಹದಿಂದಲೂ ಸಿಂಹಸದೃಶವಾದ ಸಮುಜ್ವಲ ವ್ಯಕ್ತಿತ್ವದಿಂದಲೂ ಮೋಹಿತರಾದ ಬಾಲಕ ಸಂನ್ಯಾಸಿಗಳು ಸಂಸಾರಿಗಳ ತಿಕ್ತವಾಕ್ಯ ಪ್ರಯೋಗಗಳಿಂದ ಅಪ್ರತಿಭರಾಗಲಿಲ್ಲ. ದಿನ ದಿನವೂ ನರೇಂದ್ರನೂ ತನ್ನ ಮಾತುಗಳಿಂದ ಅವರೆದೆಗೆ ಶಕ್ತಿಯನ್ನು ಸುರಿಯುತ್ತಿದ್ದನು. ಶ್ರೀರಾಮಕೃಷ್ಣ ಪರಮಹಂಸ ದೇವನ ಉನ್ನತಾದರ್ಶವನ್ನು ಅವರ ಮುಂದೆ ಹಿಡಿದು ಉತ್ತೇಜನಗೊಳಿಸುತ್ತಿದ್ದನು. ಯೇಸುಕ್ರಿಸ್ತನು ಸ್ವರ್ಗಾರೋಹಣ ಮಾಡಿದ ಮೇಲೆ ಆತನ ಶಿಷ್ಯರು ಹೇಗೆ ಕಷ್ಟಪರಂಪರೆಗಳ ತುಮುಲದಲ್ಲಿ ಹೋರಾಡಿ ಜಯಶೀಲರಾದರೆಂಬ ಕಥೆಯನ್ನು ಹೇಳುವನು. ಬುದ್ಧದೇವನ ನಿರ್ಯಾಣಾನಂತರ ಆನಂದ ಮೊದಲಾದ ಆತನ ಶಿಷ್ಯರು ಹೇಗೆ ಪ್ರತಿಕೂಲಗಳ ಕರಾಳದಂಷ್ಟ್ರಗಳನ್ನು ಮುರಿದು ಸಂಘ ಸಂಸ್ಥಾಪನೆ ಮಾಡಿದರೆಂಬ ಚರಿತ್ರೆಯನ್ನು ಹೇಳುವನು. ತೀವ್ರ ವೈರಾಗಿಯಾದ ಶ್ರೀ ಶಂಕರಾಚಾರ್ಯರ ಉದಾಹರಣೆಯನ್ನು ಕೊಡುವನು. ಜ್ಞಾನ ಭಕ್ತಿ ವೈರಾಗ್ಯಗಳ ಮಹಿಮೆಯನ್ನು ತನ್ನ ಅನನುಕರಣೀಯವಾದ ಶೈಲಿಯಲ್ಲಿ ವಿವರಿಸುವನು. “ಉತ್ತಿಷ್ಠತ ಜಾಗ್ರತ ಪ್ರಾಪ್ಯವರಾನ್ನಿಬೋಧತ” ಎಂದು ಗರ್ಜಿಸುವನು. ಇಂತು ನರೇಂದ್ರನು ಗುರುದೇವದತ್ತವೂ ಸ್ವಭಾವಸಿದ್ಧವೂ ಆದ ತನ್ನ ಅಲೌಕಿಕ ಪ್ರೇಮಪಾಶದಿಂದ ಸೋದರ ಸಂನ್ಯಾಸಿಗಳನ್ನು ಭದ್ರವಾಗಿ ಬಿಗಿದನು.

ಇದೇ ತಕ್ಕ ಸಮಯವೆಂದು ತಿಳಿದು ನರೇಂದ್ರನ ಬಂಧುವೊಬ್ಬನು ವಿಶ್ವನಾಥದತ್ತನ ಭವನವನ್ನು ಅಪಹರಿಸಬೇಕೆಂದು ಒಂದು ಮೊಕದ್ದಮೆ ಹೂಡಿದನು. ಅದಕ್ಕಾಗಿ ನರೇಂದ್ರನು ಆಗಾಗ ಕಲ್ಕತ್ತಾಕ್ಕೆ ಹೋಗಿ ಬರುತ್ತಿದ್ದನು. ಅಂತೂ ಗುರುದೇವನ ಕೃಪೆಯಿಂದ ಮೊಕದ್ದಮೆಯಲ್ಲಿ ನರೇಂದ್ರನಿಗೆ ಜಯವಾಯಿತು. ಕೋರ್ಟಿನಲ್ಲಿ ನರೇಂದ್ರನ ವಾಗ್ವಿಜೃಂಭಣೆಯನ್ನು ಕೇಳಿದ ಪ್ರಸಿದ್ಧ ವಕೀಲನೊಬ್ಬನು ತರುಣನನ್ನು ಕುರಿತು “ಮಹಾಶಯ, ನೀನೇಕೆ ಲಾಯರಾಗಬಾರದು?” ಎಂದನಂತೆ!

ದೇವರು ಅವತರಿಸಿ ಅಜ್ಞಾನದ ಕತ್ತಲೆ ಮುತ್ತಿರುವ ನೀರಸಾಚಾರಗಳ ಶುಷ್ಕ ಕಾನನಕ್ಕೆ ಬೆಂಕಿಯಿಟ್ಟು ಜೀವನವನ್ನು ಉಜ್ವಲಗೈಯುತ್ತ ಮುಂದುವರಿದರೆ, ಪೂಜಾರಿ ಅನಿವಾರ್ಯವಾಗಿ ಅವನನ್ನು ಹಿಂಬಾಲಿಸಿ, ಪಂಚಪಾತ್ರೆಯ ತೀರ್ಥದಿಂದ ಆ ಜ್ವಾಲೆಯನ್ನು ಆರಿಸಿ, ಬೂದಿಯನ್ನು ಒಟ್ಟುಮಾಡಿ, ಅದರ ಪವಿತ್ರತೆಯನ್ನು ಸಾರಿ, ಹಂಚಿ, ಲಾಭ ಪಡೆಯುತ್ತಾನೆ. ಕೆಲವು ಸಾರಿ ಆರಿಹೋದ ಬೆಂಕಿಯನ್ನು ಪುನರುದ್ದೀಪನಗೊಳಿಸುವ ಗೋಜಿಗೆ ಹೋಗದೆ ಬೂದಿಗಾಗಿ ತನ್ನ ನೆತ್ತರನ್ನೂ ಚೆಲ್ಲಿ ಇತರರಿಂದಲೂ ಚೆಲ್ಲಿಸುತ್ತಾನೆ.

ವರಾಹನಗರದ ಹಾಳ್ಮನೆಯ ಮಠದಲ್ಲಿದ್ದ ಶ್ರೀರಾಮಕೃಷ್ಣರ ಭಸ್ಮಾವಶೇಷಕ್ಕಾಗಿ ಗೃಹೀಭಕ್ತರಿಗೂ ಸಂನ್ಯಾಸೀ ಶಿಷ್ಯರಿಗೂ ಭಿನ್ನಾಭಿಪ್ರಾಯ ಒಂದು ಹೋರಾಟವಾಗುವುದರಲ್ಲಿತ್ತು. ನರೇಂದ್ರನು ತನ್ನ ಸಂನ್ಯಾಸೀ ಸೋದರರನ್ನು ಕುರಿತೆಂದನು: “ಸೋದರರಿರಾ, ಮನುಷ್ಯರಂತೆ ವರ್ತಿಸಿ. ಗುರುದೇವನ ಉಪದೇಶವನ್ನು ಅನುಷ್ಠಾನಕ್ಕೆ ತರುವುದು ಬಿಟ್ಟು, ಬೂದಿಗಾಗಿ ಹೋರಾಡುವುದು ಯೋಗ್ಯ ಲಕ್ಷಣವಲ್ಲ. ಬೂದಿ ಅವರಿಗಿರಲಿ! ನಮಗೆ ಬೇಕಾದುದು ಬುದ್ಧಿ! ಗುರುದೇವನ ಬೋಧೆಯಂತೆ ನಡೆದುಕೊಳ್ಳಲಾರದವರು ಆತನ ಭಸ್ಮಾಸ್ಥಿಗಳನ್ನು ಎಷ್ಟು ಪೂಜಿಸಿದರೇನು ಪ್ರಯೋಜನ? ಶ್ರೀರಾಮಕೃಷ್ಣ ಪರಮಹಂಸರ ಶಿಷ್ಯರು ತಮ್ಮ ಗುರುಗಳ ಹೆಣಬೂದಿಗಾಗಿ ಕದನ ಮಾಡಿದರೆಂದು ಲೋಕವಾಡಿಕೊಳ್ಳುವಂತೆ ಮಾಡದಿರಿ. ಗುರೂಪದೇಶದಂತೆ ಬಾಳಿದರೆ ಜಗತ್ತು ನಮ್ಮ ಪದತಲಕ್ಕೆರಗಬೇಕಾಗುತ್ತದೆ!”

ನಾಯಕನ ಬುದ್ಧಿವಾದದಂತೆ ಆಮೇಲೆ ಯೋಗೋದ್ಯಾನ ಎಂಬ ಹೆಸರು ಪಡೆದ ರಾಮಚಂದ್ರದತ್ತರ ತೋಟದಲ್ಲಿ, ಪರಮಹಂಸರ ಭಸ್ಮಾವಶೇಷವನ್ನು ಸ್ಥಾಪಿಸಿ, ತರುವಾಯ ಸಮಾಧಿಮಂದಿರವನ್ನು ನಿರ್ಮಿಸಿದರು.

ಆದರೆ ವರಾಹನಗರಕ್ಕೆ ಹಿಂತಿರುಗಿದ ಮೇಲೆ ನರೇಂದ್ರನಿಗೆ ಗೊತ್ತಾಯಿತು, ಸಂಸಾರಿಗಳಿಗೆ ಸಿಕ್ಕಿದುದು ಅವಶೇಷದಲ್ಲಿ ಅರೆಪಾಲು ಮಾತ್ರವೆಂದು! ಇನ್ನರ್ಧವನ್ನು ಶಶಿ (ರಾಮಕೃಷ್ಣಾನಂದರು) ಮುಚ್ಚಿಟ್ಟಿದ್ದನು. ನರೇಂದ್ರನು ಕರುಣೆಯ ಮುಗುಳುನಗೆ ಬೀರಿ ಸುಮ್ಮನಾದನು. ಆ ವಿಚಾರವನ್ನು ತಿಳಿದ ಗೃಹೀಭಕ್ತರೂ ಹಾಗೆಯೆ ಕಿರುನಗೆ ಬೀರಿ ಸುಮ್ಮನಾದರಂತೆ.

ಈ ಸಮಯದಲ್ಲಿ ನರೇಂದ್ರನ ಹೃದಯದಲ್ಲಿ ಆತನ ಜನ್ಮೋದ್ದೇಶ ಮೂರ್ತಿಗೊಳ್ಳಲು ತೊಡಗಿದ್ದಿತು. ಗುರುಭಾಯಿಗಳಿಗೆ ಆತನು ವಿರೋಧಾಭಾಸಗಳ ಪಿಂಡಿಯಾಗಿ ತೋರುತ್ತಿದ್ದನಂತೆ.

ಒಂದು ಸಾರಿ ಜ್ಞಾನಿಯಂತೆ ತೋರುವನು; ಒಂದು ಸಾರಿ ಭಕ್ತನಂತೆ ಆಡುವನು. ಒಂದು ಸಾರಿ ಸೇವೆಯೆ ಚರಮ ಲಕ್ಷ್ಯವೆಂದು ಬೋಧಿಸುವನು; ಮತ್ತೊಂದು ಸಾರಿ ಧ್ಯಾನಸಮಾಧಿಗಳೇ ಉನ್ನತಾದರ್ಶವೆಂದು ವಾದಿಸುವನು. ಒಂದು ಸಾರಿ ಅತ್ಯಂತ ನಮ್ರತೆಯಿಂದ ತನ್ನ ಬಳಿಗೆ ಬಂದ ಭಕ್ತರಿಂದ ಸಲಹೆಗಳನ್ನು ಕೇಳುವನು. ಇನ್ನೊಂದು ಸಾರಿ ಅಧಿಕಾರವಾಣಿಯಿಂದ ಮಾತಾಡುವನು.

ದಿನಗಳ ಮೇಲೆ ದಿನಗಳು ಉರುಳಿಹೋದುವು. ನಡುನಡುವೆ ಶ್ರೀಗುರು ದೇವನ ಗೃಹೀಭಕ್ತರಾದ ಬಲರಾಮವಸು, ಸುರೇಂದ್ರನಾಥಮಿಶ್ರ, ಗಿರೀಶಚಂದ್ರ ಘೋಷ, ನಾಗಮಹಾಶಯ, ಮಾಸ್ಟರ್ ಮಹಾಶಯ ಮೊದಲಾದವರು ಮಠಕ್ಕೆ ಬಂದು ತರುಣ ಸಂನ್ಯಾಸಿಗಳೊಡನೆ ಪರಮಹಂಸರ ವಿಚಾರವಾಗಿ ಸಂವಾದ ಮಾಡುತ್ತಿದ್ದರು. ನರೇಂದ್ರನ ಯುಕ್ತಿಪೂರ್ಣವಾದ ಸಂಭಾಷಣೆಗಳನ್ನು ಕೇಳಿ ಅವರೆಲ್ಲರೂ ಹರ್ಷಿತರಾಗುತ್ತಿದ್ದರು.

ಹೀಗೆ ಇರುತ್ತಿರಲು ಒಮ್ಮೆ ಸಂನ್ಯಾಸಿಗಳಲ್ಲಿ ಒಬ್ಬರಾದ ಪ್ರೇಮಾನಂದರ ತಾಯಿಯಿಂದ ತಮ್ಮೂರಿಗೆ ಬರುವಂತೆ ಆಹ್ವಾನ ಬಂದಿತು. ಆಕೆ ಶ್ರೀರಾಮಕೃಷ್ಣರ ಭಕ್ತೆ ಯಾದುದರಿಂದಲೂ ತಮ್ಮ ಗುರುಭಾಯಿಯ ಜನನಿಯಾದುದರಿಂದಲೂ ತರುಣ ಸಂನ್ಯಾಸಿಗಳೆಲ್ಲರೂ ಆಹ್ವಾನವನ್ನು ಮನ್ನಿಸಿ ಆಂಟ್ಪುರಕ್ಕೆ ತೆರಳಿದರು. ಕಲ್ಕತ್ತಾಕ್ಕೆ ದೂರವಾಗಿದ್ದ ಆ ಗ್ರಾಮದ ಪ್ರಶಾಂತ ಸನ್ನಿವೇಶದಲ್ಲಿ, ಹಳ್ಳಿಗರ ಮೈತ್ರಿಯ ಮಾಧುರ್ಯದಲ್ಲಿ ಪ್ರೇಮಾನಂದರ ಮಾತೃದೇವತೆಯ ಆದರಾತಿಥ್ಯಗಳಲ್ಲಿ ಬಾಲಕ ಸಂನ್ಯಾಸಿಗಳು ಕೆಲದಿನಗಳು ಸುಖಶಾಂತಿಯಿಂದ ಕಳೆದರು.

ಅಲ್ಲಿ, ತತ್ಕಾಲದಲ್ಲಿ ಸಾಧಾರಣವಾಗಿ ಕಂಡುಬಂದಿದ್ದರೂ, ನಿಜವಾಗಿಯೂ ಮಹತ್ತಾಗಿರುವ ಒಂದು ಸಂಗತಿ ಜರುಗಿತು. ಮುಂದಿನ ಶ್ರೀರಾಮಕೃಷ್ಣ ಮಹಾ ಸಂಘಕ್ಕೂ ಅದರ ಬೃಹತ್ತಾದ ಸೇವಾಕಾರ್ಯಕ್ಕೂ ನರೇಂದ್ರನು ಒಂದು ಸಣ್ಣ ಪೀಠಿಕೆ ಹಾಕಿದನು.

ಶ್ರೀರಾಮಕೃಷ್ಣ ಭಕ್ತಿಯಲ್ಲಿ ಶಿಷ್ಯರೆಲ್ಲರೂ ಸಮಾನರಾಗಿದ್ದರೂ ಮೇಧಾಶಕ್ತಿಯಲ್ಲಾಗಲಿ ರಚನಾಪ್ರತಿಭೆಯಲ್ಲಾಗಲಿ ಅವರಲ್ಲಿ ಯಾರೊಬ್ಬರೂ ನರೇಂದ್ರನಿಗೆ ಎಣೆಯಾಗಿರಲಿಲ್ಲ. ಪರಮಹಂಸರ ಸಾನ್ನಿಧ್ಯ ಲಭಿಸದಿದ್ದರೆ ಉಳಿದವರು ಸಾಮಾನ್ಯರಾಗುತ್ತಿದ್ದರೂ ನರೇಂದ್ರನು ಯಾವುದಾದರೊಂದು ರೀತಿಯಲ್ಲಿ ಮಹಾಕಾರ್ಯ ಸಾಧನೆ ಮಾಡಿ ಕೀರ್ತಿ ಶಿಖರಕ್ಕೇರಿ ಜಗದ್ವಿಖ್ಯಾತನಾಗುತ್ತಿದ್ದನು ಎಂಬುದರಲ್ಲಿ ಸಂದೇಹವಿಲ್ಲ. ಅಂತಹ ಪ್ರತಿಭೆ ಆತನಲ್ಲಿ ಹುಟ್ಟುಗುಣವಾಗಿತ್ತು. ಆದ್ದರಿಂದಲೆ ಪರಮಹಂಸರು, ಕೆಲವರು ಅವನಿಗಿಂತಲೂ ಹಿರಿಯರಾಗಿದ್ದರೂ ಕೂಡ, ಇತರ ಶಿಷ್ಯರ ಯೋಗಕ್ಷೇಮವನ್ನೂ ಮಾರ್ಗದರ್ಶನವನ್ನೂ ಆತನಿಗೊಪ್ಪಿಸಿ ಹೋದುದು.

ಪರಮಹಂಸರ ಮಹಾಸಮಾಧಿಯ ನಂತರ ಅವರ ಇತರ ಶಿಷ್ಯರು ಗುರುದೇವನ ನೆನಹಿನ ಹಕ್ಕಿಯ ರೆಕ್ಕೆಯಿಂಬಿನಲ್ಲಿ ಬೆಚ್ಚಗೆ ಕುಳಿತು ಅಡಗಿ ಬಿಡಲು ಹವಣಿಸುತ್ತಿದ್ದರು. ಆತ್ಮಧ್ಯಾನದ ಸೋಮಪಾನದ ವಿಸ್ಮೃತಿಯಲ್ಲಿ ಲೋಕವನ್ನು ಇಲ್ಲಗೈಯಲು ಎಳಸುತ್ತಿದ್ದರು. ಅಜ್ಞಾತದ ಏಕಾಂತದ ಅನಾಮಧೇಯದ ಸಮಾಧಿಯಾನಂದದಲ್ಲಿ ಮಗ್ನರಾಗಿಬಿಡಬೇಕೆಂದು ಹಾರೈಸುತ್ತಿದ್ದರು. ಅಂತಹ ಹಾರೈಕೆಯ ಮೋಹಿನಿ ನರೇಂದ್ರನನ್ನು ಕೂಡ ಒಮ್ಮೊಮ್ಮೆ ಕೈಬೀಸಿ ಕರೆಯುತ್ತಿತ್ತು. ಆದರೆ ಮಹಾಗುರುವಿನ ಮಹಾ ಶಿಷ್ಯಕೇಸರಿ ಧರ್ಮಮೋಹದ ನಿದ್ರೆ ತನ್ನನ್ನು ಆಕ್ರಮಿಸದಂತೆ ಮತ್ತೆ ಮತ್ತೆ ಕೇಸರವನ್ನು ಕೊಡಹಿ ಕೊಡಹಿ ಗರ್ಜಿಸುತ್ತಾ ಯಾವಾಗಲೂ ಎಚ್ಚರವಾಗಿರುತ್ತಿತ್ತು. ಅಲ್ಲದೆ ಆ ಚಳಿನಿದ್ದೆ ತನ್ನ ಗುರುಭಾಯಿಗಳ ಹೃದಯಜೀವನವನ್ನು ಹೆಪ್ಪುಗಡಿಸದಂತೆ ಬಹು ಪ್ರಯತ್ನದಿಂದ ತನ್ನ ಎದೆಯುಸಿರ ಬಿಸಿಯನ್ನು ಅವರೆದೆಗೆ ಊದಿ ಊದಿ ಪೊರೆಯುತ್ತಿದ್ದನು.

ಆಂಟ್ಪುರದಲ್ಲಿ ನರೇಂದ್ರನು ತನ್ನ ಮಹಾ ಮೇಧಾಶಕ್ತಿಯ ದೀವಿಗೆಯಿಂದ ಇತರ ಶಿಷ್ಯರ ಎದೆಯ ಹಣತೆಯ ಬತ್ತಿಗಳಿಗೆ ದೀಪ ಹೊತ್ತಿಸುತ್ತಿದ್ದನು. ಜಗತ್ತಿನ ವಿವಿಧ ಮತಗಳ ಸಾಮ್ಯ ತಾರತಮ್ಯಗಳನ್ನು ಕುರಿತು ಶಾಸ್ತ್ರೀಯವಾಗಿ ಮಾತಾಡುತ್ತಿದ್ದನು. ವಿಜ್ಞಾನಶಾಸ್ತ್ರದ ನವೀನ ಆವಿಷ್ಕಾರಗಳನ್ನು ಕುರಿತು ಹೃದಯಂಗಮವಾಗಿ ಹೇಳುತ್ತಿದ್ದನು; ಜಗತ್ತಿನ ಇತಿಹಾಸದ ಕಥಾ ಪ್ರಪಂಚವನ್ನು ಕಲ್ಪನೆಯ ಕಣ್ಣಿಗೆ ಕಟ್ಟುವಂತೆ ಸಜೀವವಾಗಿ ಚಿತ್ರಿಸುತ್ತಿದ್ದನು! ತಾನು ಗಭೀರವಾಗಿ ಅಧ್ಯಯನ ಮಾಡಿ ಅರಿತ ಸಮಾಜಶಾಸ್ತ್ರ ಮನಶ್ಶಾಸ್ತ್ರಗಳನ್ನು, ಆಲಿಸುವವರು ಬೆರಗಾಗುವಂತೆ, ಅದ್ಭುತ ರೀತಿಯಿಂದ ವಿವರಿಸುತ್ತಿದ್ದನು. ಮನಸ್ಸು ಜಡವಾಗದಂತೆ, ಎದೆಯ ಬೆಂಕಿ ಆರದಂತೆ ನೋಡಿಕೊಳ್ಳುತ್ತಾ ಸಹೋದರ ಸಂನ್ಯಾಸಿಗಳನ್ನು ವಾದಕ್ಕೆ ಕರೆದು ಗರಡಿಯಾಚಾರ್ಯನು ಶಿಷ್ಯಸಾಧಕರನ್ನು ತರಬಿಯತ್ತು ಮಾಡುವಂತೆ ಮಾಡುತ್ತಿದ್ದನು. ಸ್ವಂತಮುಕ್ತಿಯ ಸಾಧನೆಯ ಸಂಕುಚಿತ ಆದರ್ಶಕ್ಕೆ ಬದಲಾಗಿ ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’ ಎಂಬ ಲೋಕೋತ್ತರವಾದ ಮಹಾ ಸಂಘ ಮಂತ್ರವನ್ನು ಉಪದೇಶಿಸಿ, ಅವರೆಲ್ಲರನ್ನೂ ಮಧುರ ಸ್ವಾರ್ಥತೆಯಿಂದ ಪರೋಪಕಾರದ ಹೊರಬಯಲಿಗೆಳೆಯುತ್ತಿದ್ದನು.

೧೮೮೬ನೆಯ ಕ್ರಿಸ್‌ಮಸ್ ತಿಂಗಳಲ್ಲಿ, ಬಾಬೂರಾಮನ (ಪ್ರೇಮಾನಂದರ) ಹೆತ್ತಮ್ಮನ ಮನೆಯಲ್ಲಿ, ಆಂಟ್ಪುರದಲ್ಲಿ ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’ ಎಂಬ ಮಂತ್ರದ ದೀಕ್ಷಾಕಾರ್ಯವು ನೆರವೇರಿ, ಶ್ರೀರಾಮಕೃಷ್ಣ ಮಹಾಸಂಘದ ಬೆಳೆಗೆ ಬಿತ್ತನೆಯಾಯಿತು.

ಸಾಯಂಕಾಲ ಕತ್ತಲಾಗುತ್ತಿತ್ತು. ಸಂನ್ಯಾಸಿಗಳೆಲ್ಲರೂ ಸೇರಿ ದೊಡ್ಡ ದೊಡ್ಡ ಕುಂಟೆ ಕಟ್ಟಿಗೆಗಳನ್ನು ಆಯ್ದು ತಂದು ಬೆಂಕಿ ಹೊತ್ತಿಸಿ ಒಂದು ಧುನಿ ಮಾಡಿದರು. ತಾರತಮ್ಯದಿಂದ ಸುತ್ತಲೂ ಮುತ್ತಿದ್ದ ಕತ್ತಲೆಯನ್ನೆ ಮನೋಹರಗೈಯುತ್ತಾ ಲೇಲಿಹ್ಯಮಾನವಾದ ಜ್ವಾಲಾಜಿಹ್ವೆಗಳಿಂದ ಅಗ್ನಿ ಉರಿಯತೊಡಗಿತು. ನೆತ್ತಿಯ ಮೇಲೆ ವಿಶಾಲ ಭಾರತರಾತ್ರಿಯ ಅನಂತ ಗಗನವಿತಾನವು ಅಸಂಖ್ಯ ನಕ್ಷತ್ರಗಳಿಂದ ಖಚಿತವಾಗಿ ಚಿರತೆಯ ಚರ್ಮದಂತೆ ರಮ್ಯವಾಗಿತ್ತು. ಅನಿರ್ವಚನೀಯವಾದ ಗ್ರಾಮ್ಯ ಶಾಂತಿ ಸರ್ವತ್ರ ವ್ಯಾಪಿಸಿತ್ತು. ಧ್ಯಾನ ಪ್ರಾರಂಭವಾಗಿ ದೀರ್ಘಕಾಲ ಸಾಗಿತು. ಅದು ಪೂರೈಸಿದ ಮೇಲೆ ಸಂಘನಾಯಕ ನರೇಂದ್ರನು ಆ ಮೂಕ ರಜನಿಯ ಮೌನವನ್ನು ಯೇಸುಕ್ರಿಸ್ತನ ಕಥನದಿಂದ ವಾಙ್ಮಯವನ್ನಾಗಿ ಮಾಡಿದನು…ಕ್ರಿಸ್ತನಿಗೂ ಆತನ ಶಿಷ್ಯರಿಗೂ ಇದ್ದ ಸಂಬಂಧವನ್ನು ಹೇಳುತ್ತಿದ್ದಾಗ ನೆರೆದವರೆಲ್ಲರಿಗೂ ತಮಗೂ ಪರಮಹಂಸರಿಗೂ ಇರುವ ಸಂಬಂಧದ ನೆನಪು ಬರುವಂತಾಯಿತು…ಯೇಸುಕ್ರಿಸ್ತನನ್ನು ಶಿಲುಬೆಗೆ ಹಾಕಿದ ದಾರುಣ ದುಃಖದ ಮಹಾಘಟನೆಯನ್ನು ಆಲಿಸುತ್ತಾ ಕೇಳುತ್ತಿದ್ದವರು ಕಂಬನಿಗರೆದರು…ಕ್ರಿಸ್ತನ ಶಿಷ್ಯರಿಗೆ ಬಂದೊದಗಿದ ಕಷ್ಟಪರಂಪರೆಗಳನ್ನೂ ಅವರ ಸಾಹಸವನ್ನೂ ಜಯವನ್ನೂ ಭಾವನೋಜ್ವಲವಾಗಿ ವಿವರಿಸಿ ನರೇಂದ್ರನು ನೆರೆದಿದ್ದ ಸೋದರ ಸಂನ್ಯಾಸಿಗಳಿಗೆ ತಾವೆಲ್ಲರೂ ಅವರಂತೆ ವರ್ತಿಸಿ ಲೋಕಸೇವೆಗೆ ಕಂಕಣಬದ್ಧರಾಗಿರಬೇಕೆಂದು ಹುರಿದುಂಬಿಸಿದನು…ಉಜ್ವಲವಾಗಿದ್ದ ಅಗ್ನಿ ಜ್ವಾಲೆಯ ದೀಪ್ತಿಯಿಂದ ಎಲ್ಲರ ವದನಗಳೂ ಮಿಂಚಿದುವು. ಉರಿವ ಬೆಂಕಿಯ ಚಟಪಟಧ್ವನಿಯಿಂದ ಮಾತ್ರ ಭಗ್ನವಾಗುವಂತಿದ್ದ ಆ ನಿಶಾನೀರವತೆಯಲ್ಲಿ ಸಂಘವು ತ್ಯಾಗಸೇವಾ ಧರ್ಮದೀಕ್ಷೆಯಿಂದ ಚಿರಮುದ್ರಿತವಾಯಿತು.

ಎಲ್ಲ ಮುಗಿದ ಮೇಲೆ ಅವರಿಗೆ ಗೊತ್ತಾಯಿತಂತೆ – ಅದು ಕ್ರಿಸ್‌ಮಸ್ ಸಂಧ್ಯೆ ಎಂದು!

ಆಂಟ್ಪುರದಿಂದ ಮರಳಿ ವರಾಹನಗರಕ್ಕೆ ಹಿಂತಿರುಗುವ ಮೊದಲು ಅವರೆಲ್ಲರೂ ತಾರಕೇಶ್ವರ ಕ್ಷೇತ್ರಕ್ಕೆ ಯಾತ್ರೆ ಹೋಗಿ ತ್ಯಾಗೀಕುಲಚಕ್ರವರ್ತಿ ಶಿವನಿಗೆ ಆರಾಧನೆಗೆ ಸಲ್ಲಿಸಿದರು.

ಹೀಗೆ ತರುಣ ಸಂನ್ಯಾಸಿಗಳು ಜಪತಪಸಾಧನಗಳಿಂದಲೂ ಶಾಸ್ತ್ರಾಧ್ಯಯನದಿಂದಲೂ ನರೇಂದ್ರನ ಸಹವಾಸದಿಂದಲೂ ಗುರುದೇವನ ಕೃಪೆಯಿಂದಲೂ ಆಶಿಷ್ಠರೂ ದೃಢಿಷ್ಠರೂ ಬಲಿಷ್ಠರೂ ಮೇಧಾವಿಗಳೂ ಆಗುತ್ತಿದ್ದಾಗಲೆ ಅವರಲ್ಲಿ ಕೆಲವರಿಗೆ ತೀರ್ಥಯಾತ್ರಾಭಿಲಾಷೆಯುಂಟಾಯಿತು. ಪರಿವ್ರಾಜಕ ಜೀವನವು ಸಂನ್ಯಾಸಿಗಳಿಗೆ ಯೋಗ್ಯವಾದುದು. ಅದರಲ್ಲಿಯೂ ದೇಶಸೇವೆಯಲ್ಲಿ ನಿರತರಾಗಲಿರುವ ತ್ಯಾಗಿಗಳಿಗೆ ಅದರಿಂದ ಮಹೋಪಕಾರವಿದೆ. ದೇಶದ ಸ್ಥಿತಿಯನ್ನು ಗ್ರಂಥಗಳಿಂದಲೂ ಪ್ರಯಾಣಿಕರ ದುರಾಗ್ರಹಪೂರ್ವಕವಾದ ಹೇಳಿಕೆಗಳಿಂದಲೂ ಪರೋಕ್ಷವಾಗಿ ತಿಳಿಯುವ ಬದಲು ಪ್ರತ್ಯಕ್ಷವಾಗಿ ನೋಡುವುದೇ ಮೇಲು. ಅಲ್ಲದೆ ಆಯಾ ಊರುಗಳಲ್ಲಿ ಅಜ್ಞಾತರಾಗಿರುವ ತಪಸ್ವಿಗಳು ಮತ್ತು ಮಹಾತ್ಮರು ಇವರ ಪರಿಚಯವೂ ಸಂಗಲಾಭವೂ ದೊರೆಕೊಳ್ಳುವುದು. ಅದೂ ಅಲ್ಲದೆ ಸಂನ್ಯಾಸಿಯಾದವನು ಒಂದೇ ಸ್ಥಳದಲ್ಲಿ ಬಹಳ ದಿನಗಳಿರುವುದರಿಂದ ಸ್ಥಳ ಮೋಹ ಬದ್ಧನಾಗಬಹುದೆಂಬ ಶಂಕೆಯಿಂದ ಆತನು ಜನಭರಿತವಾದ ನಗರಗಳಲ್ಲಿ ಬಹಳ ದಿನಗಳಿರದೆ ಮುಂದುವರಿಯುತ್ತಿರಬೇಕೆಂದೂ ವಿಧಿಸಲ್ಪಟ್ಟಿದೆ.

ಒಂದು ದಿನ ನರೇಂದ್ರನು ಕಾರ್ಯಾರ್ಥವಾಗಿ ಕಲ್ಕತ್ತಾಕ್ಕೆ ಹೋಗಿ ಹಿಂದಕ್ಕೆ ಬರುವಷ್ಟರಲ್ಲಿ ಶಾರದನು (ಸ್ವಾಮಿ ತ್ರಿಗುಣಾತೀತ) ಯಾರಿಗೂ ಹೇಳದೆ ಎಲ್ಲಿಗೊ ಹೊರಟುಹೋಗಿದ್ದನು. ಅನುಭವ ಸಾಲದ ಬಾಲಕನು ಏನೇನು ಕಷ್ಟಗಳಿಗೆ ಗುರಿಯಾಗುವನೊ ಎಂಬ ಆಶಂಕೆಯಿಂದ ನೊಂದುಕೊಂಡು ರಾಖಾಲನನ್ನು ಕುರಿತು “ಅವನನ್ನು ಹೋಗಲೇಕೆ ಬಿಟ್ಟೆ? ನೋಡು, ರಾಜಾ, ನಾನು ಯಾವ ಭೀಷಣಾವಸ್ಥೆಯಲ್ಲಿ ಸಿಕ್ಕಿಬಿದ್ದಿದ್ದೇನೆ? ಅಲ್ಲಿ ಒಂದು ಸಂಸಾರವನ್ನು ಬಿಟ್ಟು ಬಂದೆ: ಈಗ ಇಲ್ಲಿ ಮತ್ತೊಂದು ಗುರುತರವಾದ ಸಂಸಾರಕ್ಕೆ ಬಲಿಯಾಗಿದ್ದೇನೆ. ಆ ಹುಡುಗನಿಗಾಗಿ ನಾನು ಬಹಳ ಕಾತರನಾಗಿದ್ದೇನೆ” ಎಂದನು. ಅಷ್ಟರಲ್ಲಿ ಯಾರೋ ಒಂದು ಪತ್ರವನ್ನು ತಂದುಕೊಟ್ಟರು. ಅದು ಶಾರದನ ಪತ್ರವಾಗಿತ್ತು. ಅದರಲ್ಲಿ ಹೀಗೆಂದು ಬರೆದಿತ್ತು: “ನಾನು ಕಾಲು ನಡಿಗೆಯಲ್ಲಿಯೆ ಬೃಂದಾವನಕ್ಕೆ ಹೊರಟಿದ್ದೇನೆ. ಇಲ್ಲಿಯೆ ವಾಸವಾಗಿದ್ದರೆ ನನ್ನ ಮನಸ್ಸು ಬೇರೆಯಾಗಬಹುದು. ಮೊದಮೊದಲು ಕನಸಿನಲ್ಲಿ ತಂದೆತಾಯಿಗಳನ್ನು ಕಾಣುತ್ತಿದ್ದೆ; ಕಡೆಗೆ ಮೂರ್ತಿ ಮತ್ತಾದ ಮಾಯೆಯಿಂದ ಪ್ರಲೋಭಿತನಾದೆ. ನಾನೆಷ್ಟೊ ಪ್ರಯತ್ನಪಟ್ಟೆ. ಆದರೂ ಎರಡು ಸಾರಿ ಮನೆಗೆ ಹೋಗಿ ನೆಂಟರಿಷ್ಟರ ಮೊಗ ನೋಡಬೇಕಾಗಿ ಬಂತು. ಇವೆಲ್ಲ ಕಾರಣಗಳಿಂದ ಇಲ್ಲಿರುವುದು ನನಗೆ ಸರಿತೋರುವುದಿಲ್ಲ. ಅದಕ್ಕಾಗಿ ನಾನು ದೂರದೇಶಕ್ಕೆ ಹೋಗುವೆನು.”

ಪತ್ರವನ್ನು ಓದಿದ ಮೇಲೆ ರಾಖಾಲನು “ನೋಡು, ಅದಕ್ಕಾಗಿಯೇ ಅವನು ಹೋದುದು. ನಾನೂ ತೀರ್ಥಯಾತ್ರೆ ಹೋಗಬೇಕೆಂದು ಮನಸ್ಸು ಮಾಡಿದ್ದೇನೆ” ಎಂದನು.

ಎಲ್ಲರೂ ತೀರ್ಥಯಾತ್ರೆಗೆ ಹೊರಟರೆ ಮಠದ ಗತಿ! ನರೇಂದ್ರನು ವ್ಯಾಕುಲಚಿತ್ತನಾದನು. ಕಡೆಗೆ “ಹೋದರೆ ಹೋಗಲಿ! ಅವರ ಮನಸ್ಸಿನ ಮೇಲೆ ಅಧಿಕಾರ ಪ್ರಯೋಗ ಮಾಡಲು ನಾನಾರು?” ಎಂದುಕೊಂಡನು. ಅಷ್ಟೇ ಅಲ್ಲದೆ ಆತನಿಗೂ ಸೋದರ ಸಂನ್ಯಾಸಿಗಳ ಸಂಗದ ಮಧುರ ಮಾಯೆಯಿಂದ ವಿದೂರನಾಗಬೇಕೆಂಬುವ ಅಭಿಲಾಷೆ ಉಂಟಾಯಿತು. ಒಂದು ದಿನ ಗುರುಭ್ರಾತೃವೃಂದವನ್ನು ಬಳಿಗೆ ಕರೆದು, ಅವರಿಗೆ ತನ್ನ ಇಚ್ಛೆಯೆಲ್ಲವನ್ನೂ ತಿಳಿಸಿ, ಪರಿವ್ರಾಜಕ ವೇಷವನ್ನು ಧರಿಸಿ, ದಂಡ ಕಮಂಡಲುಧಾರಿಯಾಗಿ ಶ್ರೀಸ್ವಾಮಿ ವಿವೇಕಾನಂದರು, ನರೇಂದ್ರತನವನ್ನು ಬಿಸುಟು, ವರಾಹನಗರದ ಮಠದಿಂದ ಹೊರಬಿದ್ದರು, ೧೮೮೮ರಲ್ಲಿ.

ನೇಸರು ಮೂಡಿದರೆ ಸಾರಿಹೇಳಬೇಕೆ? ಸ್ವಾಮಿಜಿ ಎಲ್ಲಿಗೆ ಹೋದರೂ ಅವರ ತಪ್ತಕಾಂಚನವರ್ಣದ ದೀರ್ಘತಪೋಜ್ವಲ ತನುಸೌಂದರ್ಯವನ್ನು ನೋಡಿ ಜನ ಮುಗ್ಧರಾದರು. ಯಾಯಾವರ ವೃತ್ತಿಯಿಂದ ಕಾಲಯಾಪನೆ ಮಾಡುತ್ತ, ದೇವಾಲಯ ಅನ್ನಸತ್ರಗಳಲ್ಲಿ ಮಲಗಿ ನಿದ್ರಿಸುತ್ತ, ಪವಿತ್ರ ಸ್ಥಳಗಳನ್ನು ನೋಡುತ್ತ ನೋಡುತ್ತ ಕಡೆಗೆ ಹಿಂದೂಗಳ ಪವಿತ್ರತಮ ಸ್ಥಾನವಾಗಿರುವ ಶ್ರೀ ಕಾಶಿಗೆ ಬಂದರು.

ತಂಗಲು ಯಾವ ಗೊತ್ತಾದ ಸ್ಥಾನವೂ ಅಲ್ಲಿರಲಿಲ್ಲ. ಭಿಕ್ಷಾನ್ನದಿಂದ ಉದರ ಪೋಷಣೆ ಮಾಡುತ್ತ, ದೇವಸ್ಥಾನಗಳನ್ನು ಸಂದರ್ಶಿಸುತ್ತ, ಶಾಸ್ತ್ರ ಚರ್ಚೆ ಧ್ಯಾನ ಜಪ ತಪ ಸಾಧುಸಂಗ ಇತ್ಯಾದಿ ನಿತ್ಯಕರ್ಮಗಳಲ್ಲಿ ಮಗ್ನರಾಗಿದ್ದರು. ಸಂಧ್ಯಾಕಾಲದಲ್ಲಿ ಭಾಗೀರಥಿಯ ತೀರದ ಸೋಪಾನಗಳ ಮೇಲೆ ಕುಳಿತು ಸಾಯಂಕಾಲೀನ ಕರ್ಮೋಪಾಸನೆಗಳಲ್ಲಿ ತೊಡಗಿರಲು ವಾಹಿನಿಯ ಕಲಕಲ ಮಧುರ ನಿನಾದವು ಅವರ ಬಗೆಯಲ್ಲಿ ಹಳೆಯ ನೆನಹುಗಳನ್ನು ತರುತ್ತಿತ್ತು. ಆ ಗಂಗಾ ತೀರ! ಆ ದಕ್ಷಿಣೇಶ್ವರ! ಆ ಅದ್ಭುತ ಪ್ರೇಮಿಕ ಪುರುಷ! ಅಂದಿನ ಆ ಸವಿಗನಸು ಸಿಡಿದೊಡೆದುಹೋಯಿತು! ಆತನು ಇಂದು ಶ್ರೀರಾಮಕೃಷ್ಣರ ಮುದ್ದಿನ ಮಗು ನರೇಂದ್ರನಲ್ಲ; ಶ್ರೀರಾಮಕೃಷ್ಣ ಸಂಘದ ನಾಯಕ ಸ್ವಾಮಿ ವಿವೇಕಾನಂದ! ಜಗತ್ತು ಆತನಿಂದ ನವಯುಗ ಧರ್ಮಬೋಧೆಯನ್ನು ಕೈಕೊಳ್ಳಲು ಕಾದುಕೊಂಡಿದೆ! – ಎಂತಹ ಗುರುತರಭಾರ ಆತನ ಹೆಗಲ ಮೇಲಿದೆ! ಆತನು ಮೂರ್ತಿ ಮತ್ತಾದ ಯುಗಧರ್ಮ! ಮುಡಿಗೆದರಿದ ನಂಜುಗೊರಲನ ತಲೆನವಿರಡವಿಯಲ್ಲಿ ಬಟ್ಟೆಗೆಟ್ಟು ಬಾಂದೊರೆ ಸದ್ದು ಮಾಡುತ್ತ ಹೋರಾಡಿ ಹೊರಗೆ ಚಿಮ್ಮಲು ಹಾದಿ ಹುಡುಕುವಂತೆ ಯುಗಧರ್ಮವು ಆತನೆದೆಯಲ್ಲಿ ಹೊರಹೊಮ್ಮಲೆಳಸಿ ಹೋರಾಡುತ್ತಿದೆ! ಆ ಕಾರ್ಯಭಾರದಿಂದ ಆದಷ್ಟು ಬೇಗನೆ ಮುಕ್ತಿ ಹೊಂದಲೋಸುಗ ಸಂನ್ಯಾಸಿ ಶ್ರೀಗುರುಚರಣದಲ್ಲಿ ಅವನತಮಸ್ತಕನಾಗಿದ್ದಾನೆ.

ಒಂದು ದಿನ ಸ್ವಾಮಿಜಿಗೆ ಕಾಶಿಯಲ್ಲಿ ಒಂದು ದೊಡ್ಡ ಅಧಿಕಾರದಲ್ಲಿದ್ದ ಭೂದೇವಮುಖ್ಯೋಪಾಧ್ಯಾಯನೆಂಬ ವಂಗಪಂಡಿತನ ಪರಿಚಯವಾಯಿತು. ಆತನು ಅದ್ಭುತ ಧೀಶಕ್ತಿಶಾಲಿಯಾದ ತರುಣ ಸಂನ್ಯಾಸಿಯೊಡನೆ ಧರ್ಮ, ಸಮಾಜನೀತಿ, ಭರತಖಂಡದ ಉದ್ಧಾರ ಮೊದಲಾದುವುಗಳನ್ನು ಕುರಿತು ಮಾತಾಡಿ ಮುಗ್ಧನಾಗಿ ಅಲ್ಲಿದ್ದವರೊಡನೆ ಈ ತರುಣನಲ್ಲಿ ಇಷ್ಟೊಂದು ಗಂಭೀರ ಅಂತರ್ದೃಷ್ಟಿ ವಿಪುಲ ಜ್ಞಾನಗಳಿರುವುದು ಆಶ್ಚರ್ಯ. ಮುಂದೆ ಈತನೊಬ್ಬ ಮಹದ್ವ್ಯಕ್ತಿಯಾಗುವುದರಲ್ಲಿ ಸಂದೇಹವಿಲ್ಲ ಎಂದನು. ಈ ನಡುವೆ ಸ್ವಾಮಿಜಿ ಶ್ರೀಮತ್ ತ್ರೈಲಿಂಗಸ್ವಾಮಿಗಳನ್ನು ಹೋಗಿ ಕಂಡು ಅನುಗೃಹೀತರಾದರು. ಹಾಗೆಯೆ ಶ್ರೀಮತ್ ಸ್ವಾಮಿ ಭಾಸ್ಕರಾನಂದರ ಕೀರ್ತಿಯನ್ನು ಕೇಳಿ ಅವರಲ್ಲಿಯೂ ಹೋದಾಗ ಭಾಸ್ಕರಾನಂದ ಸ್ವಾಮಿಗಳು ತಮ್ಮ ಶಿಷ್ಯರಿಗೆ ಉಪದೇಶ ಮಾಡುತ್ತಿದ್ದರು: “ಕಾಮಿನಿ ಕಾಂಚನಗಳನ್ನು ಸಂಪೂರ್ಣವಾಗಿ ತ್ಯಾಗ ಮಾಡಲು ಯಾರೂ ಸಮರ್ಥರಾಗರು” ಎಂದು. ಸ್ವಾಮಿಜಿಯವರು ವಿನೀತಭಾವದಿಂದ “ಮಹಾರಾಜ್, ಕಾಮಿನಿ ಕಾಂಚನಗಳನ್ನು ಸಂಪೂರ್ಣವಾಗಿ ತ್ಯಾಗ ಮಾಡಿದ ಸಂನ್ಯಾಸಿಗಳು ಎಷ್ಟೋ ಮಂದಿ ಇದ್ದಾರೆ. ಅದೇ ಸಂನ್ಯಾಸಿ ಜೀವನದ ಪ್ರಥಮ ಸಾಧನ. ಅಂತಹ ಮಹಾ ಪುರುಷನೊಬ್ಬನನ್ನು ನಾನು ನೋಡಿದ್ದೇನೆ” ಎಂದು ಶ್ರೀರಾಮಕೃಷ್ಣ ಪರಮಹಂಸರ ಹೆಸರನ್ನು ಹೇಳಿದರು. ಭಾಸ್ಕರಾನಂದ ಸ್ವಾಮಿಗಳು ನಗುತ್ತ “ನೀನಿನ್ನೂ ಹುಡುಗ. ನೀನಿದನ್ನೆಲ್ಲಾ ತಿಳಿಯಲಾರೆ” ಎಂದುಬಿಟ್ಟರು. ಸ್ವಾಮಿಜಿ ಸುಮ್ಮನಾಗಲಿಲ್ಲ; ತಮ್ಮ ಗುರುಗಳ ಅಮಲಚರಿತ್ರೆಗೆ ಕಳಂಕ ಬರಬಾರದೆಂದು ವಿರ್ಭೀತ ದೃಢಭಾವದಿಂದ ಪ್ರತಿವಾದ ಹೂಡಲು ಉದ್ಯತರಾದರು. ತೇಜಸ್ವಿಯಾದ ತರುಣ ಸಂನ್ಯಾಸಿಯ ಯುಕ್ತಿಪೂರ್ಣವಾದ ವಚನಗಳನ್ನು ಕೇಳಿ ಅಲ್ಲಿ ನೆರೆದಿದ್ದ ಭಕ್ತರೂ ಸ್ವಯಂ ಭಾಸ್ಕರಾನಂದರ ಸ್ವಾಮಿಗಳೂ ವಿಸ್ಮಿತರಾದರು. ಭಾಸ್ಕರಾನಂದರು ತಮ್ಮ ಶಿಷ್ಯರನ್ನು ಕುರಿತು “ಈತನ ಕಂಠದಲ್ಲಿ ಸರಸ್ವತಿ ನೆಲೆಸಿದ್ದಾಳೆ. ಈತನ ಹೃದಯದಲ್ಲಿ ಜ್ಞಾನಜ್ಯೋತಿ ಥಳಿಸುತ್ತಿದೆ” ಎಂದರು. ಆದರೆ ಸ್ವಾಮಿಜಿ ಗುರುನಿಂದೆಯಾದ ಸ್ಥಳದಲ್ಲಿ ಇರಬಾರದೆಂದು ಅಲ್ಲಿಂದ ಹೊರಟುಹೋದರು.

ಕಾಶಿಯಿಂದ ಸ್ವಾಮಿಜಿ ಅಯೋಧ್ಯೆಗೆ ಹೋದರು. ಪುರಾಣ ಪ್ರಸಿದ್ಧರೂ ಅಲಘುಪರಾಕ್ರಮಿಗಳೂ ಆದ ಸೂರ್ಯವಂಶದ ಮಹಾಚಕ್ರವರ್ತಿಗಳ ರಾಜಧಾನಿಯಾಗಿತ್ತು ಅಂದು ಆ ಅಯೋಧ್ಯೆ! ಸೀತಾರಾಮರ ಚರಣಧೂಳಿಯಿಂದ ಪವಿತ್ರೀಕೃತವಾದ ಆ ದಿವ್ಯ ಪ್ರದೇಶದಲ್ಲಿ ಸಂಚರಿಸಲು ಯಾರು ತಾನೆ ಕಷ್ಟನಷ್ಟಗಳನ್ನು ಅನುಭವಿಸರು? ಆಜನ್ಮಬ್ರಹ್ಮಚಾರಿಯಾದಿ ಹನುಮಂತದೇವನ ಸ್ಪರ್ಶದಿಂದ ಮಂಗಳವಾದ ಆ ನೆಲದಲ್ಲಿ ತಿರುಗುವವರು ಯಾರು ತಾನೆ ಪೂತರಾಗರು? ಇವೇ ಮೊದಲಾದ ದಿವ್ಯಭಾವಗಳ ಮಾಧುರ್ಯವನ್ನು ಆಸ್ವಾದಿಸುತ್ತ ಸ್ವಾಮಿಜಿ ಲಕ್ನೋ ಮಾರ್ಗವಾಗಿ ಆಗ್ರಾಕ್ಕೆ ಬಂದರು. ಅಲ್ಲಿ ತಾಜಮಹಲಿನ ಸ್ವರ್ಗೀಯ ಸೌಂದರ್ಯವನ್ನೂ ಅಲೌಕಿಕ ಕೌಶಲ್ಯವನ್ನೂ ನೋಡಿ ಭಾವಪರವಶರಾದರು. ಮೊಗಲ್ ಬಾದಷಹರ ದುರ್ಗಪ್ರಾಸಾದಗಳನ್ನೂ ಇನ್ನೂ ಅನೇಕ ಐತಿಹಾಸಿಕ ದೃಶ್ಯಗಳನ್ನೂ ನೋಡಿಕೊಂಡು ಶ್ರೀಕೃಷ್ಣಲೀಲಾಸ್ಥಾನವಾದ ಬೃಂದಾವನಕ್ಕೆ ಹೊರಡರು. ಹೊರಡುವಾಗ ನಿಮಿಷನಿಮಿಷಕ್ಕೂ ದೂರದೂರವಾಗುತ್ತಿದ್ದ ಹಾಲ್ಗಲ್ಲಿನ ಬಿಳಿಗನಸಿನಂತೆ ಹೊಳೆಯುತ್ತಿದ್ದ ತಾಜಮಹಲನ್ನು ತಿರುತಿರುಗಿ ನೋಡಿ ನಿಟ್ಟುಸಿರುಬಿಟ್ಟರು.

ದಾರಿಯಲ್ಲಿ ಒಂದು ದಿನ ತೊಳತೊಳಲಿ ಹಸಿದು ಬಳಲಿ ಬಾಯಾರಿ ಗೋಧೂಳಿಯ ಸಮಯಕ್ಕೆ ಸರಿಯಾಗಿ ಒಂದು ಕ್ಷುದ್ರಗ್ರಾಮದ ಬಳಿಗೆ ಬಂದರು. ಅಲ್ಲಿದ್ದ ಒಬ್ಬನಿಂದ ಸ್ವಲ್ಪ ನೀರು ಕೇಳಿದರು. ಆತನು ತಾನು ಪಂಚಮನೆಂದು ಹೇಳಿದನು. ಅದನ್ನು ಕೇಳಿ ಸ್ವಲ್ಪದೂರ ಮುಂದುವರಿದ ಸ್ವಾಮಿಗಳು, ಜ್ಞಾನಿಯಾಗಿದ್ದರೂ ಭೇದಬುದ್ಧಿಯನ್ನು ತೋರಿದೆನಲ್ಲಾ ಎಂದು ಮರುಗಿ, ಹಿಂತಿರುಗಿ ಬಂದು ಪಂಚಮನಿಂದ ನೀರನ್ನು ಕುಡಿದು ಬೃಂದಾವನಕ್ಕೆ ತೆರಳಿದರು.

ಬೃಂದಾವನ! ಭರತಖಂಡದ ಕವಿಜನವಂದಿತ ಬೃಂದಾವನ! ಸುಂದರ ಗೋಪೀಜನ ಮನಮೋಹನ ಲೀಲಾರಂಗವದು! ಶ್ರೀಕೃಷ್ಣನ ವೇಣುವಿನ ಮಂಜು ನಿನಾದವನಾಲಿಸಿ ಬಳುಕಿ ಬಳುಕಿ ಮೆಲುಮೆಲ್ಲನೆ ಹರಿಯುವ ಯಮುನೆಯ ಶ್ಯಾಮಲ ತೀರವದು! ಸ್ವಾಮಿಗಳು ಯಮುನಾನದಿಯನ್ನು ಕಂಡೊಡನೆಯೆ ಅವರೆದೆ ನಲಿಯತೊಡಗಿತು. ಎಲ್ಲಿ ನೋಡಿದರಲ್ಲಿ ವ್ರಜಗೋಪಿಕೆಯರು! ಬಾಲ ಗೋಪರೊಡನೆ ನಲಿದಾಡುವ ಆ ಭೂಮಾಪುರುಷ ಶ್ರೀಕೃಷ್ಣನ ಕಾಮಗಂಧ ವಿಹೀನವಾದ ಪ್ರೇಮಲೀಲಾಭಿನಯದ ಪುಣ್ಯಸ್ಮೃತಿ! ಸಂನ್ಯಾಸಿಯ ಹೃದಯ ಶ್ರೀಕೃಷ್ಣ ಪ್ರೇಮೋನ್ಮತ್ತವಾಯಿತು. ಯಮುನೆಯ ದಡದಲ್ಲಿಯೂ ಬೃಂದಾವನದ ಕುಂಜಕುಂಜಗಳಲ್ಲಿಯೂ ಭಾವಾವೇಶದಿಂದ ಪರಿಭ್ರಮಣ ಮಾಡತೊಡಗಿದರು.

ಮೂಡುವೆಣ್ಣಿನ ಮುಗುಳುನಗೆಯಂತೆ ನರುಗೆಂಪನಾಂತ ಮುಂಬೆರಗು ಮೂಡಣ ಬಾಂದಳದಲ್ಲಿ ಮಿರುಗುತ್ತಿತ್ತು. ಹಾದಿ ನಡೆದು ನಡೆದು ಬೃಂದಾವನದಿಂದ ಬದರಿಕಾಶ್ರಮಾಭಿಮುಖವಾಗಿ ಹೊರಟ ಸ್ವಾಮಿಜಿ ಹಸಿವು ನೀರಡಿಕೆಗಳಿಂದ ಬಳಲಿ ಹಾತರಾಸವೆಂಬ ರೈಲ್ವೆ ಸ್ಟೇಷನ್ನಿನ ಬಳಿಯಿದ್ದ ಒಂದು ವಿಶಾಲ ವೃಕ್ಷದ ಬುಡದಲ್ಲಿ ಕುಳಿತಿದ್ದರು. ಸ್ಟೇಷನ್ ಮಾಸ್ಟರಾಗಿದ್ದ ಶ್ರೀಯುತ ಶರಚ್ಚಂದ್ರ ಗುಪ್ತನು ಅಲ್ಲಿಗೆ ಬಂದು, ಸಂನ್ಯಾಸಿಯ ಪ್ರಭಾತಾರುಣ ರಾಗರಂಜಿತ ಶ್ರೀದೇಹದ ದಿವ್ಯಕಾಂತಿಯನ್ನು ನೋಡಿ ಮುಗ್ಧನಾಗಿ, ಮೆಲ್ಲಮೆಲ್ಲನೆ ಬಳಿ ಸಾರಿ, ವಿನಯ ನಮ್ರ ವಚನದಿಂದ “ತಾವು ಬಹಳ ಬಳಲಿರುವಂತೆ ತೋರುತ್ತದೆ, ನನ್ನ ಆತಿಥ್ಯವನ್ನು ಸ್ವೀಕರಿಸುವಿರಾದರೆ ಕೃತಾರ್ಥನಾಗುವೆನು” ಎಂದನು. ಸ್ವಾಮಿಜಿ ಮರು ಮಾತಾಡದೆ ದರಸ್ಮಿತ ಕರುಣಸ್ನಿಗ್ಧದೃಷ್ಟಿಯಿಂದ ಶರತ್‌ಗುಪ್ತನನ್ನು ನೋಡಿ ಮೇಲೆದ್ದು ಆತನನ್ನು ಹಿಂಬಾಲಿಸಿದರು.

ಶಾಸ್ತ್ರಗಳು ಹೇಳುತ್ತವೆ, ನಿಜವಾಗಿಯೂ ಈಶ್ವರದರ್ಶನಾಕಾಂಕ್ಷಿಯಾದ ಭಕ್ತನ ಬಳಿಗೆ ಗುರು ತಾನೆಯೆ ಬರುವನೆಂದು. ಶರಚ್ಚಂದ್ರಗುಪ್ತನಿಗೂ ಹಾಗೆಯೇ ಆಯಿತು. ಆತನು ಸ್ವಾಮಿಜಿಯ ಮುಂದೆ ಕೈಮುಗಿದು ನಿಂತು “ನನಗೆ ಆತ್ಮಜ್ಞಾನವನ್ನು ಕರುಣಿಸಬೇಕು” ಎಂದನು. ಸ್ವಾಮಿಗಳು ಮಾತಾಡಲಿಲ್ಲ. ಸ್ವಲ್ಪ ಹೊತ್ತು ಅವನ ಮುಖವನ್ನೆ ನೋಡುತ್ತ “ಹಾಗಾದರೆ ನಿನ್ನ ಸುಂದರ ವದನಕ್ಕೆ ಬೂದಿ ಬಳಿದುಕೊಂಡು ಎಲ್ಲವನ್ನೂ ತ್ಯಜಿಸಿ ನನ್ನೆಡೆಗೆ ಬರುವೆಯ?” ಎಂದರು. ಗುಪ್ತನು “ಸ್ವಾಮಿಜಿ, ನಾನು ನಿಮ್ಮ ಆಜ್ಞಾನುವರ್ತಿಯಾದ ಕಿಂಕರನು; ನೀವೇನು ಹೇಳಿದರೂ ಅದನ್ನು ಮಾಡಲು ಸಿದ್ಧನಾಗಿದ್ದೇನೆ” ಎಂದನು. ಸ್ವಾಮಿಜಿ ವಿಸ್ಮಿತರಾಗಿ “ಇದೀಗ ತ್ಯಾಗ!” ಎಂದರು.

ಒಂದು ದಿನ ಸ್ವಾಮಿಜಿ ಖಿನ್ನಮನಸ್ಕರಾಗಿರುವುದನ್ನು ಕಂಡು ಶರಚ್ಚಂದ್ರನು ಅದರ ಕಾರಣವನ್ನು ಕೇಳಿದನು. “ವತ್ಸ, ಒಂದು ಮಹಾಕಾರ್ಯಭಾರ ನನ್ನ ಹೆಗಲ ಮೇಲೆ ಕುಳಿತಿದೆ. ಕ್ಷುದ್ರಶಕ್ತಿಯುಳ್ಳ ನನ್ನಿಂದ ಅದು ಸಾಧ್ಯವೇ ಎಂದು ಚಿಂತೆ. ಶಿಥಿಲವಾಗಿರುವ ಸನಾತನ ಧರ್ಮದ ಲುಪ್ತ ಗೌರವವನ್ನು ಪುನರುದ್ಧಾರ ಮಾಡಬೇಕಾಗಿದೆ. ಅಯ್ಯೋ, ಅಧಃಪತಿತವಾದ ಧರ್ಮದ ಅವಸ್ಥೆ ಶೋಚನೀಯವಾಗಿದೆ! ಎಂತಹ ಭಯಂಕರ ನಿರಶನ ಕ್ಲಿಷ್ಟವಾದ ದುರವಸ್ಥೆಗೆ ಭಾರತಾಂಬೆ ಇಳಿದುಬಿಟ್ಟಿದ್ದಾಳೆ! ಧರ್ಮದ ವೈದ್ಯುತಶಕ್ತಿಯಿಂದ ಆಕೆ ಮರಳಿ ಸಂಜೀವಿತಳಾಗಬೇಕು. ಮಾತೆಯ ಆಧ್ಯಾತ್ಮಿಕತೆಯಿಂದ ಸಮಸ್ತ ಜಗತ್ತನ್ನೂ ಜಯಿಸಬೇಕು. ಆದರೆ ಅದಕ್ಕೆ ಉಪಾಯವೇನು? ಉಪಾಯವೇನು?” ಹೇಳುತ್ತ ಹೇಳುತ್ತ ಸ್ವಾಮಿಜಿಯ ಜ್ಯೋತಿರ್ಮಯ ವಿಶಾಲ ನೇತ್ರಗಳು ವ್ಯಥಿತ ಕರುಣೆಯಿಂದ ಪ್ರೋಜ್ವಲವಾದುವು. ಶರಚ್ಚಂದ್ರನು “ನಿಮಗೆ ನಾನಾವ ರೀತಿಯಲ್ಲಿ ನೆರವಾಗಬಲ್ಲೆ?” ಎಂದನು. ಸಂನ್ಯಾಸಿ ಮನುಷ್ಯನ ಅಂತಃಶಕ್ತಿಯನ್ನು ಪರೀಕ್ಷಿಸಬೇಕೆಂದು “ದಂಡ ಕಮಂಡಲು ಧಾರಿಯಾಗಿ ಈ ಮಹಾಕಾರ್ಯಕ್ಕೆ ನೆರವಾಗಬಲ್ಲೆಯೇನು? ಮನೆಮನೆಗೆ ತಿರುಗಿ ಭಿಕ್ಷೆ ಎತ್ತಬಲ್ಲೆಯೇನು? ತ್ಯಾಗಜೀವಿಯಾಗಬಲ್ಲೆಯೇನು?” ಎಂದು ಕಂಠೀರವ ಕಂಠವಾಣಿಯಿಂದ ಕೇಳಿದರು. “ಆಗಲಿ! ಎಲ್ಲವನ್ನೂ ಮಾಡಬಲ್ಲೆ!” ಎಂಬ ಪ್ರತ್ಯುತ್ತರ ಪ್ರಶ್ನೆಯಂತೆಯೆ ಪ್ರತಿಧ್ವನಿತವಾಯಿತು. “ಹಾಗಾದರೆ ಹೋಗು. ನಿನ್ನ ಕೈಕೆಳಗಿರುವ ಸ್ಟೇಷನ್ನಿನ ಕೂಲಿಯಾಳುಗಳ ಮನೆಗಳಲ್ಲಿ ಭಿಕ್ಷೆಬೇಡಿ ತೆಗೆದುಕೊಂಡು ಬಾ”. ಶರಚ್ಚಂದ್ರನು ಹಿಂದು ಮುಂದು ನೋಡದೆ ಜೋಳಿಗೆಯನ್ನು ಬಗಲಿಗೆ ಹಾಕಿಕೊಂಡು ಕೂಲಿಗಳ ಮನೆಯಲ್ಲಿ ತಿರುಪೆಯೆತ್ತಲು ಹೊರಟನು.

ಕೆಲವು ದಿನಗಳಲ್ಲಿ ಶರಚ್ಚಂದ್ರನು ತಂದೆತಾಯಿಗಳ ಸಮ್ಮತದಿಂದ ಸಂನ್ಯಾಸ ಸ್ವೀಕಾರ ಮಾಡಿ ಸ್ವಾಮಿ ಸದಾನಂದರಾಗಿ ಸ್ವಾಮಿಜಿಯೊಡನೆ ಬದರಿ ಕೇದಾರಗಳಿಗೆ ಹೊರಟರು. ಆದರೆ ಮಧ್ಯಮಾರ್ಗದಲ್ಲಿಯೇ ಸಂನ್ಯಾಸಜೀವನದ ಕಠನತೆಗೆ ಹೊಸಬರಾದ ಸ್ವಾಮಿ ಸದಾನಂದರು ಕಾಯಿಲೆ ಬಿದ್ದರು. ಸ್ವಾಮಿಜಿ ಬಹುಕಷ್ಟದಿಂದ ಅವರನ್ನು ಹೃಷಿಕೇಶಕ್ಕೆ ತಂದು, ಅಲ್ಲಿಂದ ಹಾತರಾಸಕ್ಕೆ ಸಾಗಿಸಿ, ಅವರ ತಂದೆತಾಯಿಗಳ ವಶದಲ್ಲಿ ಬಿಟ್ಟು, ಕಲ್ಕತ್ತಾದಿಂದ ಸೋದರ ಸಂನ್ಯಾಸಿಗಳು ಕಾಗದ ಬರೆದುದರಿಂದ ಕಾರ್ಯಾರ್ಥವಾಗಿ ವರಾಹನಗರದ ಮಠಕ್ಕೆ ಮರಳಿ ಬಂದರು. ಸ್ವಲ್ಪ ದಿನಗಳಾದ ಮೇಲೆ ರೋಗಮುಕ್ತರಾದ ಸದಾನಂದರೂ ಅಲ್ಲಿಗೆ ಬಂದು ಶ್ರೀರಾಮಕೃಷ್ಣ ಸಂಘಕ್ಕೆ ಸೇರಿಕೊಂಡರು.

ಗೃಹೀಭಕ್ತರೂ ಸಂನ್ಯಾಸೀ ಶಿಷ್ಯರೂ ಭಕ್ತರೂ ಬಹುದಿನಗಳಾದ ಮೇಲೆ ತಮ್ಮ ನರೇಂದ್ರನನ್ನು ಕಂಡು ಅತ್ಯಾನಂದಿತರಾದರು. ಸ್ವಾಮಿಜಿ ಎಂದಿನಂತೆ ತಮ್ಮ ನೂತನ ಅನುಭವಜನ್ಯವಾದ ವಿದ್ಯೆಯನ್ನು ಸೋದರ ಸಂನ್ಯಾಸಿಗಳಿಗೆ ದಾನಮಾಡತೊಡಗಿದರು. ಅವರಿಗಾಗಲೆ ಭರತಖಂಡದ ಉತ್ತರಭಾಗದ ನಾನಾ ಜನಗಳ ಆಚಾರ ವ್ಯವಹಾರ ರೀತಿನೀತಿಗಳು ಪ್ರತ್ಯಕ್ಷಾನುಭವಕ್ಕೆ ಬಂದಿದ್ದುವು. ಅವು ಮೇಲೆ ಮೇಲೆ ನೋಡುವುದಕ್ಕೆ ಬೇರೆಬೇರೆಯಾಗಿ ಕಂಡರೂ ಒಂದಕ್ಕೊಂದು ವಿರೋಧಿಗಳಾಗಿ ಕಂಡರೂ ಒಳಹೊಕ್ಕು ನೋಡಿದರೆ ಒಂದೇ ಧರ್ಮಸಮುದ್ರದ ಭಿನ್ನಭಿನ್ನ ತರಂಗಗಳು ಎಂಬುದಾಗಲೆ ಅವರ ಮನಸ್ಸಿಗೆ ಬಂದಿತ್ತು. ದೇಶೋದ್ಧಾರವಾಗಬೇಕಾದರೆ ಪಾಶ್ಚಾತ್ಯ ಭಾವಾಪನ್ನ ಶಿಕ್ಷಿತವ್ಯಕ್ತಿಗಳ ನಡುವೆ ತಾವು ಕೆಲಸ ಮಾಡುವುದಕ್ಕಿಂತಲೂ ಅತಿಶಯತರವಾಗಿ ಜನಸಾಮಾನ್ಯರ ನಡುವೆ ಕೆಲಸ ಮಾಡಬೇಕೆಂದು ಭಾವಿಸಿದ್ದರು. ಅಜ್ಞಾನಜನ್ಯವಾದ ವಿಭಿನ್ನ ಸಂಪ್ರದಾಯಗಳೂ ಕ್ಷುದ್ರಕ್ಷುದ್ರ ಕೃತ್ರಿಮ ಜಾತಿ ವಿಭಾಗಗಳೂ ಅರ್ಥಹೀನವಾದ ವಿವಿಧ ದೇಶಾಚಾರಗಳೂ ತಮ್ಮ ಉಗ್ರತೆಯನ್ನು ಬಿಟ್ಟು ಸಾಧುವಾದರೆ ಸಮಸ್ತ ಭಾರತ ವರ್ಷವೂ ಏಕಾಖಂಡವಾಗಿ ಉನ್ನತಿ ಹೊಂದುವುದು ಎಂದವರು ನಿಸ್ಸಂದೇಹವಾಗಿ ತಿಳಿದಿದ್ದರು.

ಸ್ವಲ್ಪ ದಿನಗಳಾದ ಮೇಲೆ ೧೮೮೯ರಲ್ಲಿ ಸ್ವಾಮಿಜಿ ಮರಳಿ ವರಾಹನಗರದ ಮಠವನ್ನು ಬಿಟ್ಟು ವಿಖ್ಯಾತ ಸಾಧುವಾಗಿದ್ದ ಪವಾಹಾರಿ ಬಾಬನನ್ನು ನೋಡಲು ಗಾಜಿಪುರಕ್ಕೆ ಹೋದರು. ಶ್ರೀರಾಮಕೃಷ್ಣ ಪರಮಹಂಸರನ್ನು ಅವತಾರ ಪುರುಷರೆಂದು ನಂಬಿದ್ದ ಬಾಬನು ಅವರ ಶಿಷ್ಯನಾದ ಸ್ವಾಮಿ ವಿವೇಕಾನಂದರನ್ನು ಸಾದರದಿಂದ ಬರಮಾಡಿಕೊಂಡನು. ಸ್ವಾಮಿಜಿಗೆ ಬಾಬನು ಮಹಾಯೋಗೀಶ್ವರನಾಗಿ ತೋರಿದರು. ಬಾಬನ ಪೂಜಾಪಾತ್ರೆಗಳನ್ನು ಕಳ್ಳನೊಬ್ಬನು ಒಂದು ದಿನ ಕದ್ದುಕೊಂಡು ಓಡಲಾಗಿ, ಆ ಯೋಗಿ ಇನ್ನುಳಿದ ಪಾತ್ರೆಗಳನ್ನೂ ಎತ್ತಿಕೊಂಡು ಅವನ ಹಿಂದೆ ಓಡಿದನಂತೆ. ಕಳ್ಳನು ಸಿಕ್ಕಿಬೀಳುವೆನೆಂದು ತಿಳಿದು ಇನ್ನೂ ವೇಗವಾಗಿ ಓಡಿದನು. ಕಡೆಗೂ ಸಾಧು ಅವನನ್ನು ಹಿಡಿದು, ಅವನು ಗಡಗಡ ನಡುಗುತ್ತಾ ಅಂಗಲಾಚಿಕೊಳ್ಳುತ್ತಿರಲು, ತಾನು ತಂದ ಉಳಿದ ಪಾತ್ರೆಗಳನ್ನೂ ಅವನ ಕೈಯಲ್ಲಿ ಕೊಟ್ಟು “ಅಪ್ಪಾ, ಭಯಪಡಬೇಡ, ತೆಗೆದುಕೊ. ಇವೆಲ್ಲ ನಿನ್ನವು. ನಿನಗೆ ಅವುಗಳ ಅಗತ್ಯ ಬಹಳವಾಗಿರಬೇಕು. ನನಗಾದರಷ್ಟಿಲ್ಲ” ಎಂದನು. ಕಳ್ಳನು ಆತನ ಶಿಷ್ಯನಾಗಿ ಸಂನ್ಯಾಸ ದೀಕ್ಷೆಯನ್ನು ಕೈಕೊಂಡನಂತೆ! ಇನ್ನೊಂದು ದಿನ ಸರ್ಪವೊಂದು ಬಾಬನನ್ನು ಕಡಿಯಲು “ಪ್ರಿಯನು ದೂತನನ್ನು ಕಳುಹಿಸಿದ್ದಾನೆ” ಎಂದನಂತೆ! ಸ್ವಾಮಿಜಿ ಬಾಬನನ್ನು ಬಹಳವಾಗಿ ಮೆಚ್ಚಿದರು. ಅವರ ಹೃದಯದಲ್ಲಿ ಇನ್ನೂ ಅನೇಕಾನೇಕ ಆಲೋಚನೆಗಳೂ ಸುಳಿದಿರಬಹುದು.

ಇದ್ದಕ್ಕಿದ್ದ ಹಾಗೆ ಒಂದು ದಿನ ಸ್ವಾಮಿಜಿ ಗಾಜಿಪುರದಿಂದ ವರಾಹನಗರಕ್ಕೆ ಮರಳಿದರು. ಪುನಃ ಅಲ್ಲಿಂದ ಹೊರಟು ಕಾಶಿ ಪ್ರಯಾಗ ಇತ್ಯಾದಿ ತೀರ್ಥಗಳನ್ನು ತಿರುಗಿ, ಮತ್ತೆ ಗಾಜಿಪುರಕ್ಕೆ ಬಂದರು. ಅಲ್ಲಿ ಪ್ರತಿದಿನವೂ ಪವಾಹಾರಿ ಬಾಬನಲ್ಲಿಗೆ ಹೋಗಿಬರತೊಡಗಿದರು. ಮೆಲ್ಲಮೆಲ್ಲನೆ ಅವರ ಮನಸ್ಸು ಪವಾಹಾರಿ ಬಾಬನ ಕಡೆಗೆ ಒಲಿಯತೊಡಗಿತು. ಬಾಬನಿಂದ ದೀಕ್ಷಾಗ್ರಹಣ ಮಾಡಲು ಮನಸ್ಸು ಮಾಡಿದರು. ಆದರೆ ಬಗೆ ಕದಡಿತು. ಇಬ್ಭಾಗವಾಯಿತು. ಶ್ರೀರಾಮಕೃಷ್ಣನೋ ಅಥವಾ ಪವಾಹಾರಿ ಬಾಬನೋ? ಹೀಗೆಂದು ತರ್ಕಿಸಿದರು: “ಭಗವಾನ್ ಶ್ರೀರಾಮಕೃಷ್ಣರ ಅಹೇತುಕ ಕೃಪೆಗೆ ಅಧಿಕಾರಿಯಾದರೂ ಇದುವರೆಗೆ ನನಗೆ ಚಿರಶಾಂತಿ ದೊರಕಿಲ್ಲ. ಸದಾ ಬ್ರಹ್ಮಸ್ಥನಾಗಿರುವ ಭಾಗ್ಯ ದೊರಕಿಲ್ಲ. ಬಹುಶಃ ಪವಾಹಾರಿ ಬಾಬನಿಂದ ಸಹಾಯ ಲಭಿಸಬಹುದು. ಆತನೇನೊ ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಲು ಹಿಂಜರಿಯುತ್ತಿದ್ದಾನೆ. ಆದರೂ ಆತನ ಶಿಷ್ಯನಾಗಿ ಸಾಧನೆ ಮಾಡಿ ನೋಡುವೆನು.” ಈಶ್ವರ ದರ್ಶನಾಕಾಂಕ್ಷೆಯ ಆವೇಗದಲ್ಲಿ ಸ್ವಾಮಿಜಿ ‘ಜಗದಂಬೆ ನಿನಗೆಲ್ಲವನ್ನೂ ತೋರಿಸಿದಳಷ್ಟೆ? ಇನ್ನು ಅವಕ್ಕೆ ಬೀಗ ಹಾಕಿದೆ. ಬೀಗದ ಕೈ ನನ್ನಲ್ಲಿದೆ. ನೀನು ಮಾಡಬೇಕಾಗಿರುವ ಕೆಲಸವೆಲ್ಲವನ್ನೂ ಮುಗಿಸಿದ ಮೇಲೆ ಬೀಗ ತೆಗೆಯುತ್ತೇನೆ’ ಎಂದ ಗುರುವಾಣಿಯನ್ನು ಮರೆತುಬಿಟ್ಟರೆಂದು ತೋರುತ್ತದೆ.

ಗಭೀರನಿಶಿಯಲ್ಲಿ ಸ್ವಾಮಿಜಿ ಪವಾಹಾರಿ ಬಾಬನ ಗುಹೆಗೆ ಹೊರಡಲು ಉದ್ಯುಕ್ತರಾದರು. ಯಾವುದೋ ಶಕ್ತಿ ಅವರನ್ನು ಹಿಂದೆಳೆಯುವಂತಾಯಿತು. ಕಾಲು ಮುಂಬರಿಯಲಿಲ್ಲ. ದೇಹ ಭಾರವಾಯಿತು. ವಿಹ್ವಲಹೃದಯರಾಗಿ ನೆಲದ ಮೇಲೆ ಕುಳಿತುಬಿಟ್ಟರು. ಶ್ರೀರಾಮಕೃಷ್ಣರ ಅಸೀಮಪ್ರೇಮ, ಗಭೀರಸಾದರತೆ, ಸಸ್ನೇಹ ವ್ಯವಹಾರಗಳು ಒಂದೊಂದಾಗಿ ಪರ್ಯಾಯ ಕ್ರಮದಿಂದ ಸ್ಮೃತಿಪಥದಲ್ಲಿ ಸುಳಿದುವು. ಕಡೆಗೆ ತಮ್ಮನ್ನು ತಾವೇ ನಿಂದಿಸಿಕೊಂಡರು. ಕಗ್ಗತ್ತಲು ದಟ್ಟಯಿಸಿದ್ದ ಆ ಕೋಣೆ ಇದ್ದಕ್ಕಿದ್ದ ಹಾಗೆ ದಿವ್ಯಾಲೋಕ ಪ್ರದೀಪ್ತವಾಯಿತು. ಸ್ವಾಮಿಜಿ ನೋಡಿದರು: ಎದುರಿನಲ್ಲಿ ತಮ್ಮ ಜೀವನದ ಆದರ್ಶವಾದ ದಕ್ಷಿಣೇಶ್ವರದ ದೇವಮಾನವನು ನಿಂತಿದ್ದಾನೆ! ಆತನ ಉಜ್ವಲವಾದ ವಿಶಾಲ ನೇತ್ರದ್ವಯ ಸ್ನೇಹ ಸಕರುಣ ವ್ಯಥಿತವಾದ ಭರ್ತ್ಸನೆಯಿಂದ ತುಂಬಿದೆ! ವಿವೇಕಾನಂದರು ವಿಸ್ಮಯಾನಂದ ಮೂಕರಾದರು. ಕಲ್ಲಿನ ಬೊಂಬೆಯಂತೆ ಕುಳಿತುಬಿಟ್ಟರು. ಬೆಳಗಾಯಿತು. ರಾತ್ರಿ ಕಂಡ ದರ್ಶನ ಬರಿಯ ಮನೋದೌರ್ಬಲ್ಯ ಜನ್ಯವಾದುದೆಂಬ ತರ್ಕಿಸಿ ಪುನಃ ಆಗಾಮಿಕ ರಜನಿಯಲ್ಲಿ ಪವಾಹಾರಿಯ ಬಳಿಗೆ ಹೋಗಲು ಸಂಕಲ್ಪ ಮಾಡಿದರು. ಆ ದಿನವೂ ಅದೇ ರೀತಿಯಲ್ಲಿ ಹಿಂದಿನ ರಾತ್ರಿ ನೋಡಿದ ಜ್ಯೋತಿರ್ಮಯ ಮೂರ್ತಿ ಎದುರು ನಿಂತಿತು! ಹೀಗೆಯೆ ಇಪ್ಪತ್ತೊಂದು ರಾತ್ರಿಗಳು ಕಳೆದುವು. ಆ ನೀರವ ಜ್ಯೋತಿರ್ಮೂರ್ತಿ ಎದುರಿಗೆ ಬಂದು ನಿಲ್ಲುತ್ತಿತ್ತು. ಕಡೆಯ ದಿನ ಸ್ವಾಮಿಜಿ ನೆಲದ ಮೇಲೆ ಬಿದ್ದು ಆರ್ತಸ್ವರದಿಂದ “ಇಲ್ಲ. ನಾನಿನ್ನು ನಿನ್ನನ್ನಗಲಿ ಹೋಗೆನು. ಹೇ ರಾಮಕೃಷ್ಣ, ನೀನೇ ನನ್ನ ಏಕಮಾತ್ರ ಆಚಾರ್ಯ! ನಾ ನಿನ್ನ ದಾಸ! ನನ್ನ ಅಪರಾಧವನ್ನು ಮನ್ನಿಸು, ಹೇ ಪ್ರಭೋ” ಎಂದು ಬೇಡಿದರು.

ಸ್ವಾಮಿ ಅಭೇದಾನಂದರು ಕಾಶಿಯಲ್ಲಿ ರೋಗಗ್ರಸ್ತರಾಗಿರುವ ಸುದ್ದಿಯನ್ನು ಕೇಳಿ ವಿವೇಕಾನಂದರು ಅಲ್ಲಿಗೆ ಹೊರಟರು. ಅಭೇದಾನಂದರ ಶುಶ್ರೂಷೆಗೆ ಪ್ರೇಮಾನಂದಜಿಯವರನ್ನು ನೇಮಿಸಿ, ತಾವು ಪ್ರಮೋದದಾಸ ಮಿತ್ರನೆಂಬ ನಿಷ್ಠಾವಂತನಾದ ಸಂಸ್ಕೃತ ವಿದ್ವಾಂಸನ ಮನೆಯಲ್ಲಿ ಇಳಿದುಕೊಂಡು ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು. ಕೆಲವು ದಿನಗಳಲ್ಲಿಯೇ ಅಭೇದಾನಂದರ ರೋಗ ವಾಸಿಯಾಗುತ್ತ ಬಂತು ಅಷ್ಟರಲ್ಲಿ ಕಲ್ಕತ್ತಾದಿಂದ ಶ್ರೀರಾಮಕೃಷ್ಣ ಪರಮಹಂಸ ದೇವನ ಶ್ರೇಷ್ಠತಮ ಗೃಹೀಭಕ್ತರಾದ ಬಾಬು ಬಲರಾಮವಸು ಮಹಾಶಯನೂ, ಬಾಬು ಸುರೇಂದ್ರನಾಥಮಿತ್ರ ಮಹಾಶಯನೂ ಕಾಲವಾದರೆಂಬ ಕಠೋರವಾರ್ತೆ ಬಂದಿತು. ಗುರುಭ್ರಾತೃವಿಯೋಗ ವ್ಯಥೆಯಿಂದ ಸ್ವಾಮಿಜಿ ವಿಲಾಪಿಸುತ್ತಿದ್ದುದನ್ನು ನೋಡಿ, ಪ್ರಮೋದದಾಸನು “ಸ್ವಾಮಿಜಿ, ನೀವು ಸಂನ್ಯಾಸಿಗಳು; ನೀವು ಶೋಕಾರ್ತರಾಗುವುದು ಅಷ್ಟೇನೂ ತರವಲ್ಲ” ಎಂದನು.

ಸ್ವಾಮಿಗಳು ಗಂಭೀರಭಾವದಿಂದ ಉತ್ತರಕೊಟ್ಟರು: “ಏನು ನೀವು ಹೇಳುವುದು? ಸಂನ್ಯಾಸಿಯಾದ ಮಾತ್ರಕ್ಕೆ ಹೃದಯವಿಲ್ಲವೆ? ನಿಜವಾದ ಸಂನ್ಯಾಸಿ ಇತರರಿಗಾಗಿ ಹೆಚ್ಚಾಗಿ ಮರುಗುವನು. ಅಲ್ಲದೆ ನಾವೆಲ್ಲ ಮನುಷ್ಯರಲ್ಲವೆ? ಅದರಲ್ಲಿಯೂ ಅವರಿಬ್ಬರೂ ನನ್ನ ಗುರುಭಾಯಿಗಳು. ನಾವೆಲ್ಲರೂ ಗುರುದೇವನ ಪದತಲದಲ್ಲಿ ಒಟ್ಟಿಗೆ ಕುಳಿತವರಲ್ಲವೆ? ಕಲ್ಲೆದೆಯ ಸಂನ್ಯಾಸಕ್ಕೆ ನನ್ನ ಧಿಕ್ಕಾರವಿರಲಿ!”

ಸಂಘಕ್ಕೆ ಮೇರುದಂಡಪ್ರಾಯರಾಗಿದ್ದ ಗೃಹೀಭಕ್ತವರ್ಯರ ನಿಧನದಿಂದ ಸಂಘ ಸ್ವಲ್ಪ ಕಷ್ಟಗಳಿಗೆ ಗುರಿಯಾಯಿತು. ಸ್ವಾಮಿಜಿ ಶೋಕಭಾರಾಕ್ರಾಂತರಾದ ಗುರುಭಾಯಿಗಳ ಬಂಧುಗಳನ್ನು ಸಂತವಿಡುವುದಕ್ಕೂ ಸಂಘದ ವ್ಯವಸ್ಥೆಗಳನ್ನು ಸರಿಪಡಿಸುವುದಕ್ಕೂ ಕಾಶಿಯಿಂದ ಕಲ್ಕತ್ತಾಕ್ಕೆ ತೆರಳಿದರು.

* * *