ಹಕ್ಕಿಗೆ ಗೂಡಿನ ಸಣ್ಣ ಬಾಳು ಸಾಲದೆಹೋಗಿ ಬೇಸರವಾಯಿತು. ಒಂದೆರಡು ಸಾರಿ ಸುತ್ತಮುತ್ತಲಿನ ಹತ್ತಿರದ ಬನಗಳಲ್ಲಿ ಹಾರಾಡಿ ರುಚಿಯರಿತ ರೆಕ್ಕೆಗಳಿಗೆ ಮಹಾರಣ್ಯಯಾತ್ರೆ ಹಗಲಿರುಳಿನ ಹೆಗ್ಗನಸಾಯಿತು. ಆತ್ಮದ ಅಕ್ಷಿಪಕ್ಷಿಗೆ ಅನಂತಾಕಾಶದ ಸುನೀಲ ಆಹ್ವಾನದ ಮಧುರ ಆಕರ್ಷಣೆಯಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವಾಯಿತು. ವಿವೇಕಾನಂದರ ಹೃದಯದಲ್ಲಿ ಪ್ರಚಂಡ ಶಕ್ತಿ ನಿರ್ಝರಿಣಿಯೊಂದು ವಿಶಾಲ ಜಗಜ್ಜೀವನ ಸಮುದ್ರ ಲಗ್ನಕ್ಕಾಗಿ ಮಸಗಿ ತುಳುಕಿ ಕುದಿದು ಹೋರಾಡತೊಡಗಿತು.

ಕಾರ್ಯ ಮುಗಿದ ಮೇಲೆ ಸ್ವಾಮಿಜಿ ಸಮಸ್ತ ಭಾರತಭ್ರಮಣ ಕೃತ ಸಂಕಲ್ಪರಾಗಿ ಭಾಗೀರಥಿಯ ಪಶ್ಚಿಮತೀರದಲ್ಲಿ ವಾಸಮಾಡುತ್ತಿದ್ದ ಶ್ರೀಮಾತೆ ಶಾರದಾ ಮಣಿದೇವಿಯವರನ್ನು ಕಂಡು ನಮಿಸಿ, “ಜನನಿ, ಎಲ್ಲಿಯವರೆಗೆ ಶ್ರೀಗುರು ಈಪ್ಸಿತ ಕಾರ್ಯವನ್ನು ಮಾಡಿ ಮುಗಿಸಲಾರೆನೋ ಅಲ್ಲಿಯವರೆಗೆ ನಾನು ಹಿಂತಿರುಗೆನು. ನೀವು ಆಶೀರ್ವಾದ ಮಾಡಿದರೆ ನನ್ನ ಸಂಕಲ್ಪ ಸಿದ್ಧಿಯಾಗುತ್ತದೆ” ಎಂದು ಬೇಡಿದರು. ಕರುಣಾಮಯಿಯಾದ ಶ್ರೀಜನನಿ ವೀರಪುತ್ರನ ತಲೆಯಮೇಲೆ ತನ್ನ ಕಲ್ಯಾಣ ಹಸ್ತವನ್ನಿಟ್ಟು ಶ್ರೀಗುರುದೇವನ ನಾಮಗ್ರಹಣ ಪೂರ್ವಕವಾಗಿ ಆಶೀರ್ವದಿಸಿದಳು.

ನವಶಕ್ತಿಯನ್ನು ಪಡೆದು ಬಂಧನಮುಕ್ತ ಕೇಸರಿಯಂತೆ ಸ್ವಾಮಿಜಿ ತಮ್ಮ ಮಹಾಪರ್ಯಟನೆಗೆ ಹೊರಟು, ಸ್ವಾಮಿ ಅಖಂಡಾನಂದರೊಡನೆ ಹಿಮಾಲಯ ಪರ್ವತದ ತಪ್ಪಲಿನಲ್ಲಿರುವ ಆಲ್ಮೋರಕ್ಕೆ ಬಂದರು. ಅಲ್ಲಿ ಕೆಲವು ದಿನಗಳು ಪ್ರಸಿದ್ಧನಾದೊಬ್ಬ ಸಂನ್ಯಾಸಿಯೊಡನೆ ವಾಸಿಸುತ್ತಿದ್ದರು. ಸ್ವಲ್ಪದಿನಗಳಲ್ಲಿ ಶಾರದಾನಂದ ಕೃಪಾನಂದರೂ ಅಲ್ಲಿಗೆ ಬಂದು ತಮ್ಮ ನಾಯಕನನ್ನು ಸೇರಿದರು. ಇಂತು ವರಾಹನಗರದ ಮಠದ ಸಂನ್ಯಾಸಿಗಳೆಲ್ಲ ಕಠೋರ ತಪಶ್ಚರ್ಯೆಗಾಗಿ ಹೊರಗೆ ಹೊರಟು ಕೆಲವರು ಹೃಷೀಕೇಶ ಹರಿದ್ವಾರಗಳಲ್ಲಿಯೂ ಕೆಲವರು ಹಿಮಾಲಯದ ನಿರ್ಜನ ನೀರವ ಗುಹಾಪ್ರಾಂತಗಳಲ್ಲಿಯೂ ವಾಸಿಸತೊಡಗಿದರು.

ಧೀರ ಹಿಮಾಲಯಗಳ ವೈರಾಗ್ಯೋದ್ದೀಪಕ ಮನೋಹರ ಗಾಂಭೀರ್ಯವು ಸ್ವಾಮಿಜಿಯ ಮನಸ್ಸನ್ನು ಅಂತರ್ಮುಖಿಯನ್ನಾಗಿ ಮಾಡಿತು. ಸೌಂದರ್ಯವು ದೇವರ ಕಣ್ಣಲ್ಲವೆ? ಒಂದು ದಿನ ರಾತ್ರಿ ಸ್ವಾಮಿಜಿ ಗುರುಭ್ರಾತೃಗಳಿಗೆ ಹೇಳದೆ ತಪಸ್ಸು ಮಾಡಲು ಹಿಮಮಯವಾದ ಗಿರಿಗುಹೆಗಳಲ್ಲಿ ಕಣ್ಮರೆಯಾದರು. ಶ್ವೇತವರ್ಣ! ಶ್ವೇತವರ್ಣ! ಎಲ್ಲೆಲ್ಲಿಯೂ ಶುಭ್ರ ತುಷಾರ ಶ್ವೇತವರ್ಣ! ನಿರ್ಜನ, ನೀರವ! ಸಮಾಧಿಸ್ಥವಾದ ಚಳಿವೆಟ್ಟಿನ ಗಂಭೀರಮೌನ! ವಿವೇಕಾನಂದರ ಧ್ಯಾನ ಸ್ತಿಮಿತ ಲೋಚನಗಳಲ್ಲಿ ಸತ್ಯದ ಶಾಶ್ವತಜ್ಯೋತಿಯ ಮಿಂಚಿನ ಹೊನಲು ಹರಿಯಿತು.

ಆದರೆ ಯಾವುದೋ ಒಂದು ಶಕ್ತಿ ಅವರನ್ನು ಹಿಮಾಲಯದ ಪರ್ವತ ಶ್ರೇಣಿಯ ಶುಭ್ರ ತುಷಾರಮಯ ನೀರವ ಗಂಭೀರ ಪ್ರಶಾಂತ ಶಿಖರಗಳಿಂದ ಗಡಿಬಿಡಿ ತುಂಬಿದ ಭಾರತವರ್ಷದ ನಿಮ್ನ ಪ್ರದೇಶಗಳಿಗೆ ಹಿಡಿದೆಳೆಯಿತು. ದೇಶಭಕ್ತ ಸಂನ್ಯಾಸಿ ಕಾರ್ಯಭಾರವನ್ನು ನೆನೆದು ಸಮಾಧಿ ಸುಖವನ್ನು ಮೂಲೆಗೊತ್ತಿ ಕೆಳಗಿಳಿದನು.

ಅಲ್ಲಿಂದ ಸ್ವಾಮಿಜಿ ಸೋದರ ಸಂನ್ಯಾಸಿಗಳೊಡನೆ ತುಹಿನಗಿರಿಯ ಶುಭ್ರ ರಮಣೀಯತೆಯನ್ನು ಅನುಭವಿಸುತ್ತ ಗರ್ವಾಲ್ ಪ್ರಾಂತವನ್ನು ಪ್ರವೇಶಿಸಿದರು. ಅಲ್ಲಿಂದ ಅಲಕನಂದೆಯ ತೀರದಲ್ಲಿರುವ ಕರ್ಣಪ್ರಯಾಗದ ಮಾರ್ಗವಾಗಿ ರುದ್ರ ಪ್ರಯಾಗಕ್ಕೆ ಬಂದರು. ಅಲ್ಲಿರುವ ಬಣ್ಣನೆಗೆ ನಿಲುಕದಿಹ ಚೆಲ್ವಿನ ನೋಟಗಳ, ನೀರೋಟಗಳ, ಪಸುರ್ದೋಟಗಳ ಶಾಂತಿ ಸೌಂದರ್ಯಗಳನ್ನು ಆಸ್ವಾದಿಸುತ್ತ ನೋಡುತ್ತ ಸೌಂದರ್ಯ ದೇವತೆಯ ಕಣ್ಣಿನಂತೆ ಮೆರೆಯುತ್ತಿರುವ ಸುಂದರ ಶ್ರೀನಗರಕ್ಕೆ ಬಂದರು. ಅಲ್ಲಿಂದ ಬದರಿಕಾಶ್ರಮಕ್ಕೆ ಹೋಗಿ ಬರುವಾಗ ಹಾದಿಯಲ್ಲಿ ಟೆಹರಿ ಸಂಸ್ಥಾನಕ್ಕೆ ಬಂದಿಳಿದರು. ಅಷ್ಟರಲ್ಲಿ ಸ್ವಾಮಿ ಅಖಂಡಾನಂದರು ಅಸ್ವಸ್ಥರಾದುದರಿಂದ ಎಲ್ಲರೂ ಡೆಹರಾಡೂನಿಗೆ ಬಂದರು. ಅಖಂಡಾನಂದರು ಸ್ವಸ್ಥರಾದರು. ಮುಂದೆ ಪವಿತ್ರ ಕ್ಷೇತ್ರವಾದ ಹೃಷೀಕೇಶ! ವ್ಯಾಸರಾಶ್ರಮವಿದ್ದುದಲ್ಲಿಯೆ! ಅಲ್ಲಿಯೆ ವೇದಗಳನ್ನು ಸಂಗ್ರಹಿಸಿದುದು! ಹೃಷೀಕೇಶವು ತುಹಿನಶೈಲಗಳ ಪದತಳದಲ್ಲಿರುವ ಮನೋಹರವಾದ ಪ್ರದೇಶ. ಗಂಗೆಯ ತೀರದ ಪಾವನ ಕುಟೀರ! ಸಾವಿರಾರು ಸಾಧುಗಳ, ನೂರಾರು ಯೋಗಿಗಳ, ಲಕ್ಷಾಂತರ ಯಾತ್ರಿಕರ ಮೇಳಭೂಮಿ! ಸ್ವಾಮಿಗಳು ಅದರ ವಿಚಾರವಾಗಿ ಹೀಗೆಂದು ಬರೆದಿರುತ್ತಾರೆ:‌

“ಹೃಷೀಕೇಶದಲ್ಲಿರುವ ಗಂಗೆಯ ಚಿತ್ರ ನೆನಪಿನಲ್ಲಿದೆಯೆ? ಎಂತಹ ನಿರ್ಮಲ ನೀಲಾಭ ಸಲಿಲ! ಸುಳಿಗಳಿಂದ ತಪ್ಪಿಸಿಕೊಂಡು ಸುಳಿದಾಡುವ ಹೊಳೆ ಹೊಳೆಯುವ ಮೀನುಗಳು! ಆ ಅಪೂರ್ವ ಸುಸ್ವಾದ ಹಿಮಶೀತಲ ವಾರಿ! ಆ ಅದ್ಭುತವಾದ ‘ಹರ! ಹರ!’ ಎಂಬ ತರಂಗವಾಣಿ! ಆ ನೀರವ ಗಿರಿ ನಿರ್ಝರಗಳ ‘ಹರ! ಹರ! ಹರ!’ ಎಂಬ ಪ್ರತಿಧ್ವನಿ! ಆ ವಿಪಿನವಾಸ, ಆ ಮಧುಕರೀ ಭಿಕ್ಷೆ; ಆ ಗಂಗೆಯ ವಿಶಾಲ ವಕ್ಷಸ್ಥಳದಿಂದ ಮೇಲೆದ್ದಿರುವ ಸಣ್ಣ ಸಣ್ಣ ದ್ವೀಪಗಳಂತಹ ಬಂಡೆಗಳು! ಅವುಗಳ ಮೇಲೆ ಕುಳಿತು ಬೊಗಸೆ ಬೊಗಸೆಯಾಗಿ ನೀರೀಂಟುವ ದೃಶ್ಯ! ಅಲ್ಲಿಯ ಮತ್ಸ್ಯಗಳಿಗೆ ಎಷ್ಟು ನಿರ್ಭರತೆ? ಆ ಗಂಗೆಯ ಪ್ರೀತಿ! ಆ ಗಂಗೆಯ ಮಹಿಮೆ! ಆ ಗಂಗೆಯ ವೈರಾಗ್ಯಪ್ರದ ಸ್ಪರ್ಶ! ಪಶ್ಚಿಮದೇಶಗಳಿಗೆ ಹೋಗುವಾಗ ನಾನೂ ಸ್ವಲ್ಪ ಗಂಗಾಜಲವನ್ನು ತೆಗೆದುಕೊಂಡು ಹೋಗಿದ್ದೆ, ಗೊತ್ತಾಯಿತೆ! ನಡುನಡುವೆ ಒಂದೊಂದು ಹನಿಯನ್ನು ಬಾಯಿಗೆ ಹಾಕಿಕೊಳ್ಳುತ್ತಿದ್ದೆ. ಆ ಪಾಶ್ಚಾತ್ಯ ಜನಗಳ ಗೊಂದಲದ ನಡುವೆ, ಅವರ ನವನಾಗರಿಕತೆಯ ಕಲ್ಲೋಲದ ನಡುವೆ, ಆ ಕೋಟಿ ಕೋಟಿ ಮಾನವನ ಉನ್ಮತ್ತಪ್ರಾಯವಾದ ದ್ರುತಪದ ಸಂಚಾರದ ನಡುವೆ, ಮನಸ್ಸು ಸ್ವಲ್ಪ ಸ್ಥಿರವಾಗುತ್ತಿತ್ತು. ಆ ಜನ, ಆ ಧೂಳಿ, ಆ ಹೋರಾಟ, ಆ ವಿಲಾಸ ಕ್ಷೇತ್ರ, ಆ ಅಮರಾವತಿ ಸದೃಶವಾದ ಪ್ಯಾರಿಸ್, ನ್ಯೂಯಾರ್ಕ್, ಬರ್ಲಿನ್, ರೋಮ್ ಎಲ್ಲವೂ ನಿಮಿಷಮಾತ್ರದಲ್ಲಿಯೆ ಮಾಯವಾಗಿ, ಕೇಳುತ್ತಿತ್ತು ಕಿವಿಗಳಿಗೆ ಆ ‘ಹರ! ಹರ! ಹರ!’ ತರಂಗ ವಾಣಿ; ತೋರುತ್ತಿತ್ತು ಕಂಗಳಿಗೆ ಆ ಹಿಮಾಲಯ ವಕ್ಷಸ್ಥ ವಿಜನ ವಿಪಿನ; ಆ ಕಲ್ಲೋಲಿನಿಯಾದ ಸುರತರಂಗಿಣಿಯ ರಮ್ಯರಮಣೀಯವಾದ ಸ್ವರ್ಗೀಯ ದೃಶ್ಯ! ಕರೆಯುತ್ತಿತ್ತು ನನ್ನನ್ನು ಅದೇ ‘ಹರ! ಹರ! ಹರ!’ ಎಂಬ ತೆರೆತೆರೆಗಳ ಮುದ್ದಿನ ಜೋಗುಳದಿಂಪು!”

ಹೃಷೀಕೇಶದಲ್ಲಿ ಸ್ವಾಮಿಗಳು ಪುನಃ ಕಠೋರ ಸಾಧನೆಗಳನ್ನು ಮಾಡಲು ಪ್ರಾರಂಭಿಸಿದರು. ಆದರೆ ಗುರುದೇವನ ಇಚ್ಛೆ ಬೇರೆಯಾಗಿತ್ತು; ಸ್ವಾಮಿಜಿ ಕಾಯಿಲೆ ಬಿದ್ದರು. ದಿನದಿನಕ್ಕೂ ರೋಗ ಪ್ರಬಲವಾಯಿತು. ಕಡೆಗೆ ಭೀಷಣಾವಸ್ಥೆಯನ್ನೂ ಹೊಂದಿತು. ಮಾತು ನಿಂತುಹೋಯಿತು. ಸೋದರ ಸಂನ್ಯಾಸಿಗಳು ನಾಯಕನಿಗೆ ಅಂತಿಮ ಕಾಲ ಸಮೀಪಿಸಿತೆಂದು ಶೋಕೋದ್ವೇಗಗಳಿಂದ ಅಧೀರರಾಗಿ ಕಂಗೆಟ್ಟು ಭಗವನ್ನಾಮಸ್ಮರಣೆ ಮಾಡತೊಡಗಿದರು. ಅಷ್ಟರಲ್ಲಿ ಯಾರೋ ಹೊರಗಡೆ ಬಂದಂತೆ ತರಗೆಲೆಗಳ ಸದ್ದಾಯಿತು. ಅಪರಿಚಿತ ಸಂನ್ಯಾಸಿಯೊಬ್ಬನು ಕುಟೀರ ಪ್ರವೇಶ ಮಾಡಿ, ಗೋಳಾಡುತ್ತಿದ್ದ ಸಂನ್ಯಾಸಿಗಳಿಂದ ವಿಷಯವೆಲ್ಲವನ್ನೂ ತಿಳಿದು, ತನ್ನ ಜೋಳಿಗೆಯಿಂದ ಯಾವುದೊ ಒಂದು ಔಷಧಿಯನ್ನು ತೆಗೆದು, ಪ್ರಜ್ಞಾಹೀನರಾಗಿ ದರಿದ್ರಶಯ್ಯೆಯಲ್ಲಿ ಪವಡಿಸಿದ್ದ ಸ್ವಾಮಿಗಳ ಬಾಯಲ್ಲಿ ಹಾಕಿ, ಬಂದಂತೆಯೆ ಹೊರಟುಹೋದನು. ಸ್ವಾಮಿಗಳಿಗೆ ಸ್ವಲ್ಪ ಹೊತ್ತಾದ ಮೇಲೆ ಪ್ರಜ್ಞೆ ಬಂತು. ಬಹುಕಷ್ಟದಿಂದ ಮಾತಾಡಿದರು. ಗುರುಭಾಯಿಯೊಬ್ಬನು ಅವರ ಮುಖದ ಬಳಿ ಕಿವಿಯೊಡ್ಡಿ ಆಲಿಸಿದನು. “ಸೋದರರಿರಾ, ನಿಮಗೆ ಭಯ ಬೇಡ; ನಾನು ಸಾಯುವುದಿಲ್ಲ” ಎಂದು ಕೇಳಿಸಿತು. ಸ್ವಲ್ಪ ಹೊತ್ತಿನಲ್ಲಿ ಸ್ವಾಮಿಜಿ ಎದ್ದು ಕುಳಿತುಕೊಂಡು “ನಾನು ಜ್ವರಮೂರ್ಛೆಯಲ್ಲಿದ್ದಾಗ ಕಂಡೆ. ನಾನು ಮಾಡಬೇಕಾದ ಕಾರ್ಯ ಬಹಳವಿದೆ. ಅದು ಪೂರೈಸುವವರೆಗೂ ದೇಹತ್ಯಾಗ ಮಾಡೆ” ಎಂದರು.

ಸುಸ್ವಸ್ಥರಾದ ಮೇಲೆ ಸ್ವಾಮಿಜಿ ಹಿಮಾಲಯದಿಂದ ಕನ್ಯಾಕುಮಾರಿಯವರೆಗೂ ಭಾರತವರ್ಷವನ್ನೆಲ್ಲ ಸಂಚರಿಸಬೇಕೆಂಬ ಸಂಕಲ್ಪ ಮಾಡಿ, ಸೋದರ ಸಂನ್ಯಾಸಿಗಳನ್ನು ಬಳಿಗೆ ಕರೆದು, “ನಾನು ಇಲ್ಲಿಂದ ಹೊರಟು ಏಕಾಂಗಿಯಾಗಿ ಸಂಚರಿಸಬೇಕೆಂದು ಮನಸ್ಸು ಮಾಡಿದ್ದೇನೆ. ಆದ್ದರಿಂದ ನಿಮ್ಮಲ್ಲಿ ಯಾರೊಬ್ಬರೂ ನನ್ನನ್ನು ಹಿಂಬಾಲಿಸಬಾರದು” ಎಂದರು. ಸ್ವಾಮಿ ಅಖಂಡಾನಂದರು ತಾವು ಅವರ ಸೇವಾರ್ಥವಾಗಿ ಜೊತೆಯಲ್ಲಿರುತ್ತೇನೆ ಎಂದಾಗ ಸ್ವಾಮಿಜಿ “ನಿನ್ನ ಸ್ನೇಹಬಂಧವೂ ನನ್ನ ಕಾರ್ಯಕ್ಕೆ ಅಂತರಾಯ ಸ್ವರೂಪವಾಗಿದೆ. ಯಾರ ಸಂಗವು ಸ್ನೇಹಭಾವವನ್ನು ಉದ್ರೇಕಗೊಳಿಸುವುದೋ ಅವರ ಜೊತೆ ತರವಲ್ಲ. ಸೋದರ ಸಂನ್ಯಾಸಿಗಳ ಮಮತೆಯೂ ಒಂದು ವಿಧವಾದ ಮಾಯೆಯೆ. ಆದ್ದರಿಂದ ನೀವಾರೂ ಅನುಸರಿಸಬಾರದು” ಎಂದು ನಾನಾ ಪ್ರಕಾರವಾಗಿ ವಾದಿಸಿ ಅಲ್ಲಿಂದ ಹೊರಟು, ಸಾಧುಗಳ ಪವಿತ್ರಾಸ್ಥಿಗಳಿಂದಲೂ ವೀರ ಸತಿಯರ ಶೋಣಿತದಿಂದಲೂ ಪೂತವಾದ, ಪ್ರತಾಪಸಿಂಹ ಪದ್ಮಿನಿಯರ ದೇಶವಾದ, ರಾಜಪುತ್ರಸ್ಥಾನವನ್ನು ಪ್ರವೇಶಿಸಿದರು.

ಇಂತು ೧೮೯೧ರಲ್ಲಿ ಅನಿಶ್ಚಿತ ನಾಮಧೇಯರಾಗಿದ್ದ ಸ್ವಾಮಿಜಿ ಈ ನಮ್ಮ ಮಹಾಭಾರತ ಮಹಾಮಾನವ ಸಾಗರದಲ್ಲಿ ಮಗ್ನರಾಗಿ ಸೋದರಸಂನ್ಯಾಸಿಗಳ ದೃಷ್ಟಿಗೆ ಮರೆಯಾಗಿಬಿಟ್ಟರು. ಅವರಿಗಿನ್ನೂ ಯಾವ ಹೆಸರೂ ನಿಶ್ಚಿತವಾಗಿರಲಿಲ್ಲ. ಅವರ ಪರ್ಯಟನಕ್ಕೆ ಗೊತ್ತಾಗಲಿ ಗುರಿಯಾಗಲಿ ಇರಲಿಲ್ಲ. ಉದ್ದೇಶವೂ ಇತ್ತೆಂದು ಹೇಳಲಾಗುವುದಿಲ್ಲ ಅಥವಾ ಇದ್ದರೂ ಅರೂಪವಾಗಿತ್ತೆಂದು ಹೇಳಬೇಕಾಗುತ್ತದೆ. ಆದ್ದರಿಂದ ಎಲ್ಲಿಯೆಂದರೆ ಅಲ್ಲಿ, ಯಾವಾಗೆಂದರೆ ಆಗ, ಯಾರೊಡನೆಂದರೆ ಅವರೊಡನೆ ಯಃಕಶ್ಚಿತ್ ಕಾಷಾಯಧಾರಿಮಾತ್ರರಾಗಿ ಅನೇಕರ ಮಧ್ಯೆ ತಾವೂ ಒಬ್ಬರಾಗಿ ತಿರುಗಿದರು. ಆದರೆ ಕಣ್ಣುಬಿಟ್ಟುಕೊಂಡು ತಿರುಗಿದರು.

ಆ ಮಹಾಯಾತ್ರೆ ಮಹಾಫಲಗರ್ಭಿತವಾಗಿತ್ತು. ಬಹುಶಃ ಸ್ವಾಮಿಗಳಿಗೂ ಕೂಡ ಅದರ ಸಂಪೂರ್ಣ ಪ್ರಭಾವವು ವೇದ್ಯವಾಗಿರದಿದ್ದರೂ ಇರಬಹುದು. ನರೇಂದ್ರನ ವ್ಯಕ್ತಿತ್ವ ಪರಿಚಯಕ್ಕೆ ಪಾಶ್ಚಾತ್ಯ ವಿದ್ಯಾ ಪ್ರಭಾವದ ಅರಿವೂ ಪ್ರಾಚ್ಯ ವಿದ್ಯಾ ಪ್ರತಿನಿಧಿ ಸ್ವರೂಪವಾದ ಶ್ರೀರಾಮಕೃಷ್ಣ ಪರಮಹಂಸರ ಪ್ರಭಾವದ ಅರಿವೂ ಅವಶ್ಯಕವಾಗಿರುವಂತೆಯೆ ದೇಶಭಕ್ತ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವದ ಪರಿಚಯಕ್ಕೆ ಅವರ ಭಾರತ ಪರ್ಯಟನದ ಅರಿವೂ ಆವಶ್ಯಕ. ಏಕೆಂದರೆ ಆ ಮಹಾಯಾತ್ರೆಯ ಕಾಲದಲ್ಲಿಯೆ ಅವರ ಕುದಿಯುತ್ತಿದ್ದ ತರುಣ ರಕ್ತವು ಭಾರತ ಮಾತೆಯ ದುಃಖ ದಾರಿದ್ರ್ಯಗಳ ದರ್ಶನ ಸ್ಪರ್ಶನಗಳ ದೆಸೆಯಿಂದ ಉಕ್ಕಿಬಂದ ಕಣ್ಣೀರಿನಿಂದ ಒಂದಿನಿತು ತೆಳುವಾಗಿ ಹದಗೊಂಡುದು. ಆ ಕಾಲದಲ್ಲಿಯೆ ಸಮಾಧಿಯ ಮರ್ಮಸುಖದಿಂದ ವಿಮುಖವಾಗಿ ಅವರ ಆತ್ಮವು ಲೋಕಾನುಗ್ರಹದ ಕರ್ಮಜೀವನದ ಕಡೆಗೆ ಒಲೆದೊಲಿದು ಕಂಕಣಬದ್ಧವಾದುದು. ಆ ಕಾಲದಲ್ಲಿಯೆ ದೇಶದ ದೌರ್ಬಲ್ಯವನ್ನೂ ದಾರಿದ್ರ್ಯವನ್ನೂ ದುಸ್ಥಿತಿಯನ್ನೂ ದಾಸ್ಯವನ್ನೂ ಕಂಡು ಕಂಡು ಕೆಂಪಾದ ಅವರ ಕಣ್ಗಳಿಂದ, ಅವುಗಳನ್ನೆಲ್ಲ ದಹಿಸಲೆಂದು, ದಳ್ಳುರಿ ದಾಳಿಯಿಡತೊಡಗಿದುದು.

ಭಾರತವರ್ಷದಲ್ಲಿ ಆಗ ತಾನೆ ಮೊಳೆದೋರುತ್ತಿದ್ದ ರಾಷ್ಟ್ರೀಯತೆಯ ಮತ್ತು ಸ್ವಾತಂತ್ರ್ಯದ ಭಾವದೀಪಾಂಕುರವು, ಸಂನ್ಯಾಸಿಯಾಗಿದ್ದರೂ ಸುಮಾರು ಇಪ್ಪತ್ತೆಂಟು ವಯಸ್ಸಿನ ವಂಗ ತರುಣ ನರೇಂದ್ರನಾಥದತ್ತನೂ ಆಗಿದ್ದ ಸ್ವಾಮಿಜಿಯ ಎದೆಯ ಬತ್ತಿಗೆ ತಗುಲಿ, ಅಲ್ಲಿ ಬೆಂಕಿ ಹೊತ್ತಿಸದಿರಲಿಲ್ಲ.

ಇಂದು ತಿರುಕರೊಡನೆ ತಿರುಕನಾಗಿ, ನಾಳೆ ಶ್ರೀಮಂತರೊಡನೆ ಅವರ ಗೌರವಕ್ಕೂ ಪೂಜೆಗೂ ಪಾತ್ರನಾಗಿ, ಇಂದು ಬಡವರ ಗುಡಿಸಲಿನಲ್ಲಿ ಬಡವನಾಗಿ ಮಲಗಿ, ನಾಳೆ ರಾಜರ ಮನೆಗಳಲ್ಲಿ ದೊರೆಗೆ ದೊರೆಯಾಗಿ ಬಾಳಿ, ಇಂದು ಪಂಡಿತರೊಡನೆ ಕಲೆತು ಕಲಿತು, ನಾಳೆ ಪಾಮರರೊಡನೆ ಮಿಳಿತವಾಗಿ ಅವರ ಜೀವನದ ನಾಡಿಯನ್ನು ಪರೀಕ್ಷಿಸಿ ತಿಳಿದು, ಇಂದು ಸನ್ಮಾನಿತನಾಗಿ ಪುರಸ್ಕೃತನಾಗಿ, ನಾಳೆ ಅವಮಾನಿತನಾಗಿ ತಿರಸ್ಕೃತನಾಗಿ, ಇಂದು ಸರಕಾರದ ಪಕ್ಷವಾಗಿರುವ ಅಧಿಕಾರಿಗಳ ಸೇವಾ ಶುಶ್ರೂಷೆಗಳನ್ನು ಸ್ವೀಕರಿಸುತ್ತಾ, ನಾಳೆ ರಾಜದ್ರೋಹಿಗಳೆಂದೆನಿಸಿಕೊಳ್ಳುವ ಮಹಾ ದೇಶಭಕ್ತರ ಪ್ರಿಯ ಅತಿಥಿಯಾಗಿ ವಿಷಯಗಳನ್ನು ಸಂಗ್ರಹಿಸುತ್ತಾ ಅನಾಮಧೇಯನೂ ಅಜ್ಞಾತನೂ ಆದ ವೀರ ಸಂನ್ಯಾಸಿ ಸಮಸ್ತ ಭಾರತದ ಮನೋಮೂರ್ತಿಯಾಗುತ್ತಿದ್ದನು; ಭಾರತವರ್ಷದ ಮಹಾ ಆತ್ಮದ ಅವತಾರಸ್ವರೂಪಿಯಾಗಿ ಸ್ವಾಮಿ ವಿವೇಕಾನಂದರಾಗುತ್ತಿದ್ದರು.

ಸ್ವಾಮಿಜಿ ಆಳ್ವಾರ್ ಸಂಸ್ಥಾನದಲ್ಲಿ ದೊಡ್ಡ ಮನುಷ್ಯರೊಬ್ಬರ ಅತಿಥಿಯಾಗಿದ್ದಾಗ ಅವರ ಧಾರ್ಮಿಕ ವ್ಯಕ್ತಿತ್ವಕ್ಕೆ ಮನಸ್ಸು ಸೋತು ಮೌಲ್ವಿಯೊಬ್ಬನು ಅವರನ್ನು ತನ್ನ ಮನೆಗೆ ಊಟಕ್ಕೆ ಕರೆಯಬೇಕೆಂದು ಮನಸ್ಸು ಮಾಡಿದನು.

ಆದರೆ ಸ್ವಾಮಿಜಿ ಮ್ಲೇಚ್ಛರ ಮನೆಯಲ್ಲಿ ಊಟಮಾಡುವರೋ ಇಲ್ಲವೋ ಎಂಬ ಸಂದೇಹವುಂಟಾಯಿತು. ಮತ್ತೆ ಸ್ವಾಮಿಜಿ ಜ್ಞಾನಿ; ಅವರಿಗೆ ಈ ಭೇದಗಳು ಇಲ್ಲ ಎಂದುಕೊಂಡನು. ಆದರೆ ಸ್ವಾಮಿಜಿಯೇನೋ ಒಪ್ಪಬಹುದು. ಮನೆಯ ಯಜಮಾನ ಶಂಭುನಾಥನು ಒಪ್ಪದಿದ್ದರೆ! ಮೌಲ್ವಿ ಪಂಡಿತನ ಬಳಿಗೆ ಹೋಗಿ “ಪಂಡಿತಜಿ, ನಾನು ಸ್ವಾಮಿಜಿಯನ್ನು ಊಟಕ್ಕೆ ಕರೆಯಬೇಕೆಂದು ಇದ್ದೇನೆ. ದಯಮಾಡಿ ತಾವು ಅಪ್ಪಣೆ ಕೊಡಬೇಕು. ಬ್ರಾಹ್ಮಣರಿಂದ ಅಡಿಗೆ ಮಾಡಿಸುತ್ತೇನೆ. ಬ್ರಾಹ್ಮಣರಿಂದಲೆ ಬಡಿಸುತ್ತೇನೆ. ಬ್ರಾಹ್ಮಣರಿಂದಲೆ ಬಟ್ಟಲು ತೊಳೆಯಿಸುತ್ತೇನೆ. ಈ ಯವನನು ದೂರದಲ್ಲಿ ಕುಳಿತು ಅವರು ಪ್ರಸಾದ ಸ್ವೀಕಾರ ಮಾಡುವುದನ್ನು ಮಾತ್ರ ನೋಡುತ್ತಾನೆ” ಎಂದನು. ಇದನ್ನು ಕೇಳಿ ಅಲ್ಲಿದ್ದವರೆಲ್ಲರೂ ನಕ್ಕರು. ಪಂಡಿತನು ಮೌಲ್ವಿಯ ಕೈಯನ್ನು ಹಿಡಿದುಕೊಂಡು “ಸಾಹೇಬ್, ಏನು ನೀವು ಹೇಳುವುದು? ಸ್ವಾಮಿಜಿ ಸಂನ್ಯಾಸಿ, ಸಂನ್ಯಾಸಿಗೆ ಜಾತಿಯೆಂದರೇನು? ಅದಕ್ಕೆ ನಾನೇನೂ ಅಡ್ಡಿ ಮಾಡೆನು. ನಿಮ್ಮಂತಹ ಮನೆಯಲ್ಲಿ ನಾನು ಕೂಡ ಉಣಬಲ್ಲೆ! ಇನ್ನು ಮುಕ್ತರಾದ ಸ್ವಾಮಿಜಿಯ ಮಾತೇನು?” ಎಂದನು. ಅಂತೂ ಮೌಲ್ವಿಯ ಇಚ್ಛೆ ಸಾಂಗವಾಗಿ ನೆರವೇರಿತು.

ಮಹಾಸಾಧುವೊಬ್ಬನು ನಗರದಲ್ಲಿದ್ದಾನೆ ಎಂಬ ಸುದ್ದಿ ಸಂಸ್ಥಾನದ ದಿವಾನರ ಕಿವಿಗೆ ಬಿತ್ತು. ಅವರು ಆಂಗ್ಲೇಯ ಸಂಸ್ಕೃತಿಯ ಬಲೆಗೆ ಸಿಕ್ಕಿಬಿದ್ದಿದ್ದ ತಮ್ಮ ಮಹಾರಾಜರಾದ ಮಂಗಳಸಿಂಗರು ತೇಜಸ್ವಿಯಾದ ಸಾಧುವಿನ ಪ್ರಭಾವದಿಂದಾದರೂ ಬೇರೆಯ ಹಾದಿಗೆ ತಿರುಗಬಹುದೆಂದು ಯೋಚಿಸಿ ಅವರಿಗೆ ಸ್ವಾಮಿಜಿಯ ಪರಿಚಯ ಮಾಡಿಸಿದರು.‌

“ಸ್ವಾಮಿಜಿ, ನೀವು ದೊಡ್ಡ ಪಂಡಿತರು. ಬೇಕಾದಷ್ಟು ಧನಾರ್ಜನೆ ಮಾಡುವ ಶಕ್ತಿಯಿದೆ. ಆದರೂ ಫಕೀರರಂತೇಕೆ ಅಲೆಯುವುದು?” ಎಂದು ಮಂಗಳಸಿಂಗರು ಕೇಳಿದರು.‌

“ಮಹಾರಾಜ, ನೀನು ರಾಜನ ಕರ್ತವ್ಯಗಳನ್ನು ತ್ಯಜಿಸಿ ಫರಂಗಿಯವರೊಡನೆ ಸೇರಿ, ಯಾವಾಗಲೂ ಬೇಟೆಯಲ್ಲಿ ಕಾಲ ಕಳೆಯುವುದೇಕೆ?” ಎಂದರು ಸ್ವಾಮಿಗಳು. ಬಳಿಯಲ್ಲಿಯೆ ನಿಂತಿದ್ದ ಅಧಿಕಾರಿಗಳು ಸ್ತಂಭಿತರಾದರು. ‘ಏನು ಧೈರ್ಯ ಈ ಸಾಧುವಿಗೆ’ ಎಂದುಕೊಂಡರು. ಮಹಾರಾಜನು ಸ್ವಲ್ಪ ಚಿಂತಿಸಿ, “ಏತಕ್ಕೆ ಹಾಗೆ ಮಾಡುವೆನೊ ನಾನರಿಯೆ. ಅಂತೂ ಅದರಲ್ಲಿ ನಮಗೆ ಇಚ್ಛೆ” ಎಂದನು.‌

“ಅದೇ ನನ್ನ ಫಕೀರತನಕ್ಕೂ ಕಾರಣ!” ಎಂದರು ಸ್ವಾಮಿಗಳು.‌

“ಬಾಬಾಜಿ, ನನಗೆ ಮೂರ್ತಿಪೂಜೆಯಲ್ಲಿ ನಂಬುಗೆಯಿಲ್ಲ. ನನ್ನ ಗತಿ ಏನಾಗುವುದು?” ಎಂದು ಮಂಗಳಸಿಂಗರು ದರಹಸಿತರಾದರು.‌

“ಏನು ನನ್ನೊಡನೆ ಸರಸವಾಡುವಿರೇನು?”

“ಇಲ್ಲ ಸ್ವಾಮಿಜಿ, ಹಾಗಲ್ಲ. ನನಗೆ ನಿಜವಾಗಿಯೂ ನಂಬುಗೆಯಿಲ್ಲ. ಕಲ್ಲು, ಮರ, ಲೋಹಗಳನ್ನು ನಾನು ಪೂಜಿಸಲಾರೆ. ಅದರಿಂದ ನನಗೆ ಪರಲೋಕದಲ್ಲಿ ದುರ್ಗತಿಯುಂಟಾಗುವುದೇ?”

“ಇರಲಿ, ತಪ್ಪೇನು ಅದರಿಂದ! ಅವರವರ ಭಾವದಂತೆ ಅವರವರು ಪೂಜಿಸಲಿ.” ಬಳಿಯಿದ್ದ ಅಧಿಕಾರಿಗಳು ಬೆರಗಾದರು. ಸ್ವಾಮಿಜಿ ಮೂರ್ತಿಗಳ ಮುಂದೆ ಭಾವಾವಿಷ್ಟರಾಗಿ ಕಂಬನಿಗರೆದುದನ್ನು ನೋಡಿದ್ದರವರು. ಆದ್ದರಿಂದ ಮೂರ್ತಿಪೂಜೆಯ ಪರವಾಗಿ ವಾದಿಸುವರೆಂದು ತಿಳಿದಿದ್ದರು.

ಇದ್ದಕ್ಕಿದ್ದ ಹಾಗೆ ಸ್ವಾಮಿಜಿ ಗೋಡೆಗೆ ತಗುಲಿ ಹಾಕಿದ್ದ ಒಂದು ಭಾವಚಿತ್ರವನ್ನು ನೋಡಿ “ಅದಾರ ಚಿತ್ರ?” ಎಂದು ಕೇಳಿದರು. ದಿವಾನರು “ಮಹಾರಾಜರದು” ಎಂದರು. ಪ್ರಶ್ನೆಯ ರಹಸ್ಯವನ್ನು ಅರಿಯಲಾರದೆ ಎಲ್ಲರೂ ವಿಸ್ಮಿತರಾದರು. ಸ್ವಾಮಿಜಿ ಆ ಚಿತ್ರವನ್ನು ಕೈಲಿ ಹಿಡಿದುಕೊಂಡು “ಇದರ ಮೇಲೆ ಉಗುಳಿರಿ!” ಎಂದು ದಿವಾನರಿಗೆ ಹೇಳಿದರು. ಅವರೆದೆಗೆ ಸಿಡಿಲು ಬಡಿದಂತಾಯಿತು. “ನಿಮ್ಮಲ್ಲಿ ಯಾರಾದರೂ ಇದರ ಮೇಲೆ ಉಗುಳಿರಿ!” ಎಂದು ಸ್ವಾಮಿಜಿ ಗರ್ಜಿಸಿದರು. ಎಲ್ಲರೂ ಬೆದರಿದರು. ದಿವಾನರು “ಬಾಬಾಜಿ, ನೀವು ಹೇಳುವುದು ಏನು ಮಾತು? ಅದು ನಮ್ಮ ರಾಜರ ಚಿತ್ರ. ಅದರ ಮೇಲೆ ಹೇಗೆ ಉಗುಳುವುದು?” ಎಂದರು.‌

“ಆದರೇನು? ಇಲ್ಲಿ ನಿಮ್ಮ ಮಹಾರಾಜರು ಕುಳಿತಿಲ್ಲ! ಇದರಲ್ಲಿ ಅವರ ರಕ್ತವಿಲ್ಲ; ಮಾಂಸವಿಲ್ಲ! ಇದು ಬರಿಯ ಚಿತ್ರ! ಆದರೂ ನೀವು ಈ ಚಿತ್ರವನ್ನು ಮಹಾರಾಜರೆಂದೇ ಗೌರವಿಸುತ್ತೀರಿ. ಈ ಚಿತ್ರಕ್ಕೆ ಅವಮಾನ ಮಾಡಿದರೆ ಮಹಾರಾಜರಿಗೆ ಅವಮಾನ ಮಾಡಿದಂತಾಗುವುದೆಂದು ನಿಮ್ಮ ಭಾವ” ಎಂದು ಮಂಗಳಸಿಂಗರ ಕಡೆಗೆ ತಿರುಗಿ ಹೇಳತೊಡಗಿದರು: “ಮಹಾರಾಜ, ನೋಡಿದೆಯಾ; ಒಂದು ರೀತಿಯಲ್ಲಿ ನೋಡಿದರೆ ಈ ಚಿತ್ರ ನೀನಲ್ಲ. ಇನ್ನೊಂದು ರೀತಿಯಿಂದ ನೋಡಿದರೆ ನೀನು ಚಿತ್ರದಲ್ಲಿರುವೆ. ಆದ್ದರಿಂದ ನಿನ್ನ ಅಧಿಕಾರಿಗಳು ಅದನ್ನು ನೋಡಿದಾಗ ನಿನ್ನನ್ನು ನೆನೆಯುವರು. ಹಾಗೆಯೆ ಭಕ್ತರಿಗೆ ವಿಗ್ರಹವನ್ನು ನೋಡಿದಾಗ ಪರಮಾತ್ಮನ ನೆನಪಾಗುವುದು. ಅವರು ವಿಗ್ರಹ ಸೂಚಿಸುವ ಈಶ್ವರನನ್ನು ಪೂಜಿಸುವರೇ ಹೊರತು ವಿಗ್ರಹವನ್ನೇ ಪೂಜಿಸುವುದಿಲ್ಲ. ಯಾವ ಭಕ್ತನೂ ‘ಎಲೈ ಕಲ್ಲೇ, ಎಲೈ ಕಬ್ಬಿಣವೇ, ನನ್ನನ್ನು ಪೊರೆ’ ಎಂದು ಬೇಡುವುದಿಲ್ಲ. ಅವರವರ ಭಾವದಂತೆ ಅನಂತಭಾವಮಯನಾದ ದೇವರು ಅವರವರಲ್ಲಿ ತೋರುತ್ತಾನೆ.”

ಹೇಳುತ್ತ ಹೇಳುತ್ತ ಸ್ವಾಮಿಜಿಯ ವದನಮಂಡಲ ದಿವ್ಯತೇಜಸ್ಸಿನಿಂದ ರಂಜಿಸಿತು. ಮಹಾರಾಜರು ವಿನಯನಮ್ರ ವಚನದಿಂದ “ಸ್ವಾಮಿಜಿ, ತಮ್ಮ ಕೃಪೆಯಿಂದ ಮೂರ್ತಿಪೂಜೆಯ ರಹಸ್ಯ ನನಗಿಂದು ತಿಳಿಯಿತು. ನಿಮ್ಮಿಂದ ನನ್ನ ಕಣ್ಣು ತೆರೆದಂತಾಗಿದೆ” ಎಂದರು. ಸ್ವಾಮಿಗಳು ಹೊರಡಲೆಂದು ಮೇಲೇಳಲು ದೊರೆಗಳು “ಮಹಾರಾಜ್, ನನ್ನ ಮೇಲೆ ಕೃಪೆಯಿರಬೇಕು” ಎಂದರು. ಸ್ವಾಮಿಗಳು ನಸುನಗುತ್ತ “ಭಗವಂತನೊಬ್ಬನೇ ಕೃಪೆ ಮಾಡಲು ಸಮರ್ಥ. ನೀನು ಭಕ್ತಿಭಾವದಿಂದ ಆತನ ಚರಣತಲದಲ್ಲಿ ಶರಣಾಗತನಾದರೆ ಎಲ್ಲವೂ ಸರಿಹೋಗುತ್ತದೆ” ಎಂದು ಆಶೀರ್ವದಿಸಿದರು.

ಸ್ವಾಮಿಜಿ ಹೊರಟುಹೋದ ಮೇಲೆ ಮಂಗಳಸಿಂಗರು ತಮ್ಮ ದಿವಾನರನ್ನು ಕುರಿತು, “ನಾನಿಂದಿನವರೆಗೂ ಇಂತಹ ಮಹಾಪುರುಷನನ್ನು ಕಂಡಿಲ್ಲ. ಆತನು ನನ್ನಾಲಯದಲ್ಲಿಯೇ ಇನ್ನೂ ಕೆಲವು ದಿನಗಳ ತನಕ ಇರುವಂತೆ ಹೇಗಾದರೂ ಮಾಡು” ಎಂದರು. ಅದಕ್ಕೆ ದಿವಾನರು ಆತನು “ಬೆಂಕಿಯ ಮುದ್ದೆ! ಸಿಡಿಲಾಳು! ನಮ್ಮ ಬೇಡಿಕೆಗೆ ಲಕ್ಷ್ಯ ಕೊಡುವನೋ ಇಲ್ಲವೋ ಸಂದೇಹ” ಎಂದರು.

ಆಳ್ವಾರಿನಿಂದ ಜಯಪುರಕ್ಕೆ ಹೋಗಿದ್ದ ಸ್ವಾಮಿಜಿ ಅಲ್ಲಿಂದ ಮನೋಹರವಾದ ಆಬೂ ಪರ್ವತಗಳಿಗೆ ಹೋದರು. ಅಲ್ಲಿ ಕೋಟಾ ಮಹಾರಾಜರ ಮಂತ್ರಿಗಳ ಭವನದಲ್ಲಿ ಇಳಿದುಕೊಂಡಿದ್ದಾಗ ಖೇತ್ರಿ ಮಹಾರಾಜರ ಅಂತರಂಗ ಸಚಿವರ ಪರಿಚಯವಾಯಿತು. ಆತನು ಸಾಧುವಿನ ವ್ಯಕ್ತಿತ್ವವನ್ನು ನೋಡಿ ಮುಗ್ಧನಾಗಿ ಈ ವಿಚಾರವನ್ನು ತಮ್ಮ ಮಹಾರಾಜರಿಗೆ ತಿಳಿಸಿದನು. ಮಹಾರಾಜರೂ ಬಂದು ಕಂಡು ಮುಗ್ಧರಾದರು. ಅವರು ಕೇಳಿದ ಮೊದಲನೆಯ ಪ್ರಶ್ನೆ “ಸ್ವಾಮಿಜಿ, ಜೀವನವೆಂದರೇನು?” “ಆತ್ಮ ಸ್ವಭಾವತಃ ವಿಕಾಸವಾಗಲೆಳಸುತ್ತಿರುವುದು; ಬಾಹ್ಯಪ್ರಕೃತಿ ಅದನ್ನು ಕೆಳಗೊತ್ತುತ್ತಿರುವುದು. ಈ ಜಡಚೇತನಗಳ ಹೋರಾಟದ ವ್ಯಾಪಾರವೆ ಜೀವನ” ಎಂದು ಹೇಳಿದ ಸ್ವಾಮಿಗಳಿಗೆ ಇನ್ನೂ ಅನೇಕ ಪ್ರಶ್ನೆಗಳನ್ನು ಹಾಕಿ ವಿಸ್ಮಯದಿಂದ ಕೇಳುತ್ತ ಕುಳಿತರು.

ಕೆಲವು ದಿನಗಳಲ್ಲಿಯೆ ಸ್ವಾಮಿಜಿ ಖೇತ್ರಿಗೆ ಹೋದರು. ಅಲ್ಲಿ ಮಹಾರಾಜರು ಸ್ವಾಮಿಗಳಿಂದ ದೀಕ್ಷೆ ತೆಗೆದುಕೊಂಡು ಅವರ ಶಿಷ್ಯರಾದರು. ಆಗ ಖೇತ್ರಿಯ ಆಸ್ಥಾನದಲ್ಲಿ ಒಬ್ಬ ಮಹಾಪಂಡಿತನಿದ್ದನು. ಆತನ ಬಳಿ ಸ್ವಾಮಿಜಿ ಪಾಣಿನಿ ಸೂತ್ರಗಳ ಮೇಲೆ ಪತಂಜಲಿ ಬರೆದಿರುವ ಮಹಾಭಾಷ್ಯವನ್ನು ಅಧ್ಯಯನ ಮಾಡಿದರು. ಪಂಡಿತನು ಕೆಲವು ದಿನಗಳಾದ ಮೇಲೆ “ಸ್ವಾಮಿಜಿ, ನನ್ನಲ್ಲಿರುವುದೆಲ್ಲಾ ಮುಗಿದುಹೋಯಿತು. ಇಂತಹ ಪ್ರತಿಭೆ ಮಾನವರಿಗೆ ಇದೆಯೆಂದು ನಿಮ್ಮನ್ನು ತಿಳಿಯದಿದ್ದರೆ ನಾನು ನಂಬುತ್ತಿರಲಿಲ್ಲ” ಎಂದನು. ಸ್ವಾಮಿಜಿ ಪಂಡಿತನಲ್ಲಿ ಅಧ್ಯಾಪಕಭಾವವನ್ನು ಶಾಶ್ವತವಾಗಿ ಇಟ್ಟಿದ್ದರು.

ಖೇತ್ರಿ ಮಹಾರಾಜರು ಸ್ವಾಮಿಜಿಯಲ್ಲಿಟ್ಟಿದ್ದ ಭಕ್ತಿ ವರ್ಣನಾತೀತವಾದುದು. ಸ್ವಾಮಿಜಿಯೂ ಖೇತ್ರಿ ಮಹಾರಾಜರಲ್ಲಿ ಅತ್ಯಂತ ಪ್ರೀತಿಯನ್ನು ಇಟ್ಟಿದ್ದರು. ಅವರ ಪತ್ರಾವಳಿಗಳಲ್ಲಿ ಬಹುಭಾಗ ಖೇತ್ರಿ ಮಹಾರಾಜರಿಗೆ ಬರೆದ ಪತ್ರಗಳು. ಒಂದು ದಿನ ರಾಜರು ಸ್ವಾಮಿಜಿಯೊಡನೆ ಏಕಾಂತದಲ್ಲಿರುವಾಗ “ಗುರುದೇವ, ನನಗೊಂದು ಗಂಡುಮಗು ಆಗುವಂತೆ ಆಶೀರ್ವಾದ ಮಾಡಬೇಕು” ಎಂದು ಪ್ರಾರ್ಥಿಸಿದರು. ಅದನ್ನು ಕೇಳಿ ಸ್ವಾಮಿಜಿ ಚಿಂತಾಮಗ್ನರಾದರು. ಮಹಾರಾಜರು ಪುನಃ ಪುನಃ ಕಾತರರಾಗಿ ಬೇಡಿಕೊಂಡರು. ಕಡೆಗೆ ಸ್ವಾಮಿಜಿ “ಶ್ರೀ ಗುರುದೇವನ ಕೃಪೆಯಿಂದ ನಿನ್ನ ಮನೋರಥ ಪೂರ್ಣವಾಗಲಿ” ಎಂದು ಹರಸಿದರು.

ಒಂದು ದಿನ ಆಸ್ಥಾನದ ಸುಪ್ರಸಿದ್ಧ ಗಾಯಕಿಯೊಬ್ಬಳು ತಾನು ಒಂದೇ ಒಂದು ಗೀತೆಯನ್ನು ಸ್ವಾಮಿಗಳ ಮುಂದೆ ಹಾಡುವಂತೆ ಕರುಣಿಸಬೇಕೆಂದು ಅಂಗಲಾಚಿ ಬೇಡಿಕೊಂಡಳು. ಮೊದಲು ಮೊದಲು ಸ್ವಾಮಿಗಳು ಒಪ್ಪಲಿಲ್ಲ. ತರುವಾಯ ಆಕೆ ಮತ್ತೆ ಮತ್ತೆ ಬೇಡಿಕೊಂಡು ಭಕ್ತಿ ಪ್ರದರ್ಶನ ಮಾಡಲು ಸ್ವಾಮಿಗಳು ಒಪ್ಪಿದರು. ಕಡೆಗೆ ಗಾಯಕಿ ಬಂದು ಯತಿಚಕ್ರೇಶನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಪಾದ ರೇಣುವನ್ನು ಶಿರಸಾವಹಿಸಿ ವೀಣೆಯನ್ನು ಮಿಡಿದು ಹಾಡತೊಡಗಿದಳು. ಆ ಗೀತೆ ದೇಶವಿನುತ ಭಕ್ತಕವಿ ಸೂರದಾಸನದಾಗಿತ್ತು:

ನೋಡದಿರೆನ್ನಯ ದೋಷವ, ದೊರೆಯೆ
ಸಮದರ್ಶಿಯು ನೀನಲ್ಲವೆ, ಹರಿಯೆ ||

ಗುಡಿಯೊಳು ಮೂರ್ತಿಯು ಕಬ್ಬಿಣವೊಂದು,
ಕಟುಕನ ಕತ್ತಿಯು ಮತ್ತೊಂದು;
ಪರುಸವೇದಿ ತಾ ಸೋಂಕಿದರೆರಡೂ
ತಳತಳಿಸದೆ ಚೆಂಬೊನ್ನಾಗಿ?

ಯಮುನೆಯೊಳಿರುವುದು ನೀರ್ಪನಿಯೊಂದು,
ಕೊಚ್ಚೆಯೊಳಿರುವುದು ಮತ್ತೊಂದು;
ಆ ಹನಿಯೆರಡೂ ಮಂಗಳವಾಗವೆ
ಗಂಗೆಯ ಸೇರಲು ತೀರ್ಥದಲಿ?

ಸ್ವಾಮಿಜಿ ಆ ಸುಮಧುರ ಗಾನದ ಇಂಗಿತವನ್ನರಿತು ಕುಡುಕ ಚಾಂಡಾಲನನ್ನು ಎದುರುಗೊಂಡ ಮಹಾ ಅದ್ವೈತಿ ಶಂಕರಾಚಾರ್ಯರಂತಾದರು. ತಮ್ಮ ಅಜ್ಞಾನವನ್ನು ತಾವೆ ಹಳಿದುಕೊಂಡರು. ಪರಮಹಂಸರು ಪ್ರತಿಯೊಬ್ಬ ಸ್ತ್ರೀಯೂ ಜಗನ್ಮಾತೆಯ ಪ್ರತಿಬಿಂಬವೆಂದು ಹೇಳುತ್ತಿದ್ದ ಮಾತುಗಳು ನೆನಪಿಗೆ ಬಂದುವು. ಅಂದಿನಿಂದ ಆ ಗಾಯಕಿಯನ್ನು ತಾಯಿ ಎಂದು ಸಂಬೋಧಿಸತೊಡಗಿದರು. ಆಕೆಯೂ ಸ್ವಾಮಿಜಿಯನ್ನು ಪುತ್ರನಂತೆ ಕಂಡಳು.

ಸ್ವಾಮಿಜಿ ಖೇತ್ರಿಯಿಂದ ಹೊರಟು ಕಾಲುನಡಿಗೆಯಲ್ಲಿಯೆ ಗುಜರಾತಿನ ಮರುಮಯ ಪ್ರದೇಶಗಳನ್ನು ಅತಿಕ್ರಮಿಸಿ ಅಹಮದಾಬಾದು, ಲಿಂಬಡಿ, ಜುನಾಗಡ, ಭೋಜ, ಪ್ರಭಾಸ, ಸೋಮನಾಥ ಮೊದಲಾದುವುಗಳ ಮಾರ್ಗವಾಗಿ ಪೋರ್ಬಂದರಿಗೆ ಬಂದರು. ದಾರಿಯಲ್ಲಿ ಬಡಜನಗಳ ಗುಡಿಸಲುಗಳಲ್ಲಿ ತಂಗುತ್ತಿದ್ದರೂ ಅವರಿಗೆ ತಮ್ಮ ಅದ್ವಿತೀಯ ಪಾಂಡಿತ್ಯ, ಇಂಗ್ಲೀಷು ಭಾಷಾಜ್ಞಾನ ಮೊದಲಾದವುಗಳನ್ನು ತಿಲಮಾತ್ರವೂ ತೋರಿಸದೆ ಸಾಮಾನ್ಯ ಬೈರಾಗಿಗಳಂತೆ ಇರುತ್ತಿದ್ದರು. ಈ ವಿಧಾನದ ಅನುಭವಗಳಿಂದ ಅವರಿಗೆ ಐಶ್ವರ್ಯದಲ್ಲಿ ಓಲಾಡುವ ರಾಜಕುಮಾರರಿಂದ ಹಿಡಿದು ದಾರಿದ್ರ್ಯದಲ್ಲಿ ಒದ್ದಾಡುವ ಶ್ರಮ ಜೀವಿಗಳವರೆಗೆ ಇರುವ ಎಲ್ಲ ಜೀವನಾವಸ್ಥೆಗಳ ಪರಿಚಯವೂ ಲಭಿಸಿತು.

ಪೋರ್ಬಂದರಿನಲ್ಲಿ ಸ್ವಾಮಿಜಿ ಆಸ್ಥಾನಪಂಡಿತ ಶಂಕರಪಾಂಡುರಂಗನ ಬಳಿ ಅನೇಕ ಸಂಸ್ಕೃತ ಗ್ರಂಥಗಳನ್ನು ಅಧ್ಯಯನ ಮಾಡಿದರು. ಅಲ್ಲದೆ ಫ್ರೇಂಚ್ ಭಾಷೆಯನ್ನೂ ಕಲಿತುಕೊಂಡರು. ಪಾಂಡುರಂಗಜಿ ಸ್ವಾಮಿಗಳ ಪವಿತ್ರ ಚಾರಿತ್ರ್ಯ ಮತ್ತು ಧೀಶಕ್ತಿಗಳನ್ನು ನೋಡಿ ಒಂದು ದಿನ ಅವರನ್ನು ಕುರಿತು “ಸ್ವಾಮಿಜಿ, ನೀವು ಪಾಶ್ಚಾತ್ಯ ದೇಶಗಳಿಗೆ ಹೋಗಿ ಸನಾತನ ಧರ್ಮವನ್ನು ಬೋಧಿಸಿದರೆ ನಮ್ಮ ಧರ್ಮಕ್ಕೆ ಮಹೋಪಕಾರವಾದಂತೆ ಆಗುತ್ತದೆ” ಎಂದರು. ಸ್ವಾಮಿಜಿ ಸ್ವಲ್ಪ ಹೊತ್ತು ಯೋಚಿಸಿ “ಒಂದು ದಿನ ಪ್ರಭಾತದ ಸಮುದ್ರ ತೀರದಲ್ಲಿ ನಿಂತು ದೂರ ದಿಗಂತದಲ್ಲಿ ಮಿಂಚುತ್ತಿದ್ದ ಆಲೋಕಮಂಡಿತ ಮಸ್ತಕದ ತರಂಗಮಾಲೆಗಳ ನೃತ್ಯ ಭಂಗಿಯನ್ನು ನೋಡುತ್ತಿದ್ದೆ. ಆಗ ಒಂದು ಯೋಚನೆ ನನ್ನ ಬಗೆಗೆ ಬಂತು. ನಾನೂ ಒಂದು ದಿನ ಈ ವೀಚಿವಿಕ್ಷೋಭಿತ ಸಿಂಧುವನ್ನು ದಾಟಿ ದೂರದೇಶಗಳಿಗೆ ಹೋಗುವೆನೆಂದು. ಅಂದರೆ ಅದು ಯಾವ ರೀತಿಯಲ್ಲಿ ಸಾಧ್ಯವಾಗುವುದೊ ನಾನರಿಯೆ” ಎಂದರು.

ಪೋರ್ಬಂದರಿನಿಂದ ಹೊರಟ ಯತಿ ಸಾರ್ವಭೌಮನು ದ್ವಾರಕೆ, ಮಾಂಡಲಿ, ಪಾಲಿಟಾನ ಮೊದಲಾದ ಸ್ಥಾನಗಳನ್ನು ನೋಡಿಕೊಂಡು, ಅನೇಕಾನೇಕ ಅನುಭವಗಳನ್ನು ಪಡೆದು, ೧೮೯೨ನೆಯ ಜುಲೈ ತಿಂಗಳ ಅಂತ್ಯಭಾಗದಲ್ಲಿ ಬೊಂಬಾಯಿ ನಗರಕ್ಕೆ ಬಂದಿಳಿದನು. ಅಲ್ಲಿ ಒಬ್ಬ ಪ್ರಸಿದ್ಧ ಬ್ಯಾರಿಷ್ಟರನ ಮನೆಯಲ್ಲಿ ಅತಿಥಿಯಾಗಿ ವೇದಾಧ್ಯಯನ ನಿರತರಾಗಿದ್ದರು. ಘಟನಾಕ್ರಮದಿಂದ ಅದೇ ಸಮಯದಲ್ಲಿ ಸ್ವಾಮಿ ಅಭೇದಾನಂದರೂ ಬೊಂಬಾಯಿಗೆ ಬಂದರು. ಸೋದರ ಸಂನ್ಯಾಸಿಗಳಿಬ್ಬರೂ ಸಂಧಿಸಿದರು. ಆ ಸಮಯದಲ್ಲಿ ಅಭೇದಾನಂದರ ಕಣ್ಣಿಗೆ ಸ್ವಾಮಿಜಿ ಪ್ರಜ್ವಲಿಸುವ ದಾವಾಗ್ನಿಯಂತೆ ತೋರಿದರಂತೆ. ಸಿಡಿಲು ಮಿಂಚು ಬಿರುಗಾಳಿಗಳನ್ನು ಗಬ್ಬದೊಳಾಂತ ಮುಂಗಾರಿನಂತೆ ತೋರಿದರಂತೆ. ಅವರು ಅಭೇದಾನಂದರನ್ನು ಕುರಿತು “ನನಗೀಗ ಅನಂತಶಕ್ತಿ ಮೂಡಿರುವಂತೆ ಅನುಭವವುಂಟಾಗಿದೆ. ಎಂದು ಸಿಡಿಯುವೆನೊ ನಾನರಿಯೆ!” ಎಂದರಂತೆ.

ಬೊಂಬಾಯಿಯಿಂದ ಪುಣೆಗೆ ಬಂದು ಅಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರ ಜೊತೆಯಲ್ಲಿ ಕೆಲದಿನಗಳಿದ್ದು ಅಲ್ಲಿಂದ ಮಹಾಬಲೇಶ್ವರಕ್ಕೆ ಹೋದರು. ಅಲ್ಲಿ ಶಿಷ್ಯರಾಗಿದ್ದ ಲಿಂಬಡಿ ಮಹಾರಾಜರು ಅವರನ್ನು ಕಂಡು “ಸ್ವಾಮಿಜಿ, ನೀವೇಕೆ ಸುಮ್ಮನೆ ಕಾಲುನಡಿಗೆಯಲ್ಲಿ ತಿರುತಿರುಗಿ ತೊಂದರೆ ಪಡುವುದು? ನನ್ನೊಡನೆ ಲಿಂಬಡಿಗೆ ಬನ್ನಿ. ನಿಮಗೆ ಬೇಕಾದ ಸಹಾಯ ಮಾಡುತ್ತೇನೆ” ಎಂದರು. ಅದಕ್ಕೆ ಸ್ವಾಮಿಜಿ “ಈಗಾಗದು, ಮಹಾರಾಜ; ನನಗಿನ್ನೂ ಕೆಲಸ ಬಹಳವಿದೆ. ಅದನ್ನು ಮುಗಿಸದ ಹೊರತೂ ನನಗೆ ಶಾಂತಿ ಲಭಿಸದು. ಗುರುಕೃಪೆಯಿಂದ ಅದು ಮುಗಿದ ಮೇಲೆ ನಿನ್ನೆಡೆಗೆ ಬರುತ್ತೇನೆ” ಎಂದು ಬೀಳ್ಕೊಂಡರು. ಆದರೆ ಲಿಂಬಡಿ ರಾಜರಿಗೆ ಆ ಸುದಿನ ಲಭಿಸಲಿಲ್ಲ.

ಪುಣೆಯಿಂದ ಸ್ವಾಮಿಜಿ ಕನ್ನಡನಾಡಿಗೆ ಕಾಲಿಟ್ಟರು. ಬೆಳಗಾವಿಯಲ್ಲಿ ಹತ್ತು ದಿವಸಗಳಿದ್ದರು. ಅಲ್ಲಿರುವಾಗಲೆ ಒಂದು ದಿನಪತ್ರಿಕೆಯಲ್ಲಿ ಕಲ್ಕತ್ತಾ ನಗರದ ಒಬ್ಬನು ಹೊಟ್ಟೆಗಿಲ್ಲದೆ ಸತ್ತನೆಂಬ ಸುದ್ದಿಯನ್ನು ಓದಿ ಎದೆ ಹಿಂಡಿದಂತಾಗಿ “ಅಯ್ಯೋ ನನ್ನ ದೇಶವೆ! ಅಯ್ಯೋ ನನ್ನ ದೇಶವೇ!” ಎಂದು ನರಳಿದರಂತೆ. ಭರತಖಂಡದ ದುಃಖ ದಾರಿದ್ರ್ಯದ ನೇಗಿಲಿನ ಮೊನಚಾದ ಕುಳವು ಈ ದಿವ್ಯ ದೈತ್ಯನ ಎದೆಹೊಲವನ್ನು ಉಳುತ್ತಿದ್ದುದು ಆತನ ಅಗಲವಾದ ಹಣೆಯ ಮೇಲೆ ನಿರಿನಿರಿಯಾಗಿ ಸುಕ್ಕುಗಳಲ್ಲಿ ಗೋಚರವಾಗುತ್ತಿತ್ತು.

ಬೆಳಗಾವಿಯಿಂದ ಬೆಂಗಳೂರಿಗೆ ಬಂದ ಸ್ವಾಮಿಜಿ ಅಲ್ಲಿ ಕೆಲವು ದಿನಗಳ ತನಕ ಅಜ್ಞಾತವಾಸದಲ್ಲಿದ್ದರು. ಆದರೆ ಕ್ರಮಕ್ರಮೇಣ ಅವರ ಕೀರ್ತಿ ಹರಡಿತು. ಹಾಗೆಯೆ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್‌ರವರ ಪರಿಚಯವೂ ಆಯಿತು. ಪ್ರತಿಭಾಶಾಲಿಯಾಗಿದ್ದ ದಿವಾನರು ಸ್ವಲ್ಪ ಹೊತ್ತಿನ ಸಂಭಾಷಣೆಯಿಂದಲೆ ತರುಣ ಸಂನ್ಯಾಸಿಯ ಮಹಿಮೆಯನ್ನು ಅರಿತರು. ಆತನ ಸಮ್ಮೋಹಕ ತೇಜೋವ್ಯಕ್ತಿತ್ವವನ್ನೂ ಅಲೌಕಿಕ ದೈವಿಕ ಶಕ್ತಿಯನ್ನೂ ಕಂಡು ಆತನು ಕಾಲಾನಂತರದಲ್ಲಿ ಜಗದ್ವಿಖ್ಯಾತನಾದ ಮಹಾಪುರುಷನಾಗುವನೆಂದು ತಿಳಿದರು. ಒಂದು ಸಾರಿ ಅವರು ವಿವೇಕಾನಂದರನ್ನು ಕುರಿತು ಮತ್ತೊಬ್ಬ ಅಧಿಕಾರಿಯೊಡನೆ ಮಾತನಾಡುತ್ತಿದ್ದಾಗ “ಆತನ ಧೀಶಕ್ತಿ ಸಾಮರ್ಥ್ಯಗಳು ಅವರ್ಣನೀಯವಾದುವು. ನಮ್ಮಲ್ಲಿಯೂ ಅನೇಕರು ತತ್ತ್ವಧರ್ಮ ಗ್ರಂಥರಾಶಿಗಳನ್ನು ಓದಿದ್ದಾರೆ. ಆದರೆ ಏನು ಪ್ರಯೋಜನ? ಈ ಸಂನ್ಯಾಸಿಯ ಅಂತರ್ದೃಷ್ಟಿಯನ್ನು ಮೀರಿದ ದೃಷ್ಟಿಯನ್ನು ನಾನು ಬೇರೆ ಕಂಡಿಲ್ಲ. ಏನು ಅದ್ಭುತ ಶಕ್ತಿ! ಆತನು ಜನ್ಮತಃ ಜ್ಞಾನಿಯಾಗಿರಬೇಕು. ಇಲ್ಲದಿದ್ದರೆ ಇಷ್ಟು ಸಣ್ಣ ವಯಸ್ಸಿನಲ್ಲಿ ಪ್ರಾಚ್ಯ ಪಾಶ್ಚಾತ್ಯ ದರ್ಶನಗಳಲ್ಲಿಯೂ ವೇದವೇದಾಂತ ಶಾಸ್ತ್ರಗಳಲ್ಲಿಯೂ ಪ್ರವೀಣನಾಗುವುದೆಂದರೇನು?” ಎಂದರಂತೆ. ಸ್ವಾಮಿಜಿ ದಿವಾನರ ಅತಿಥಿಗಳಾದರು. ಅನೇಕ ದೊಡ್ಡ ದೊಡ್ಡ ಮನುಷ್ಯರು ಅವರಲ್ಲಿಗೆ ಬಂದು ಧರ್ಮ ಚರ್ಚೆ ಮಾಡಿ ಬೆಳಕು ಪಡೆಯುತ್ತಿದ್ದರು. ಕೆಲವು ದಿನಗಳಾದ ಮೇಲೆ ದಿವಾನರು ತರುಣ ಆಚಾರ್ಯನನ್ನು ಮೈಸೂರಿಗೆ ಕರೆದುಕೊಂಡು ಹೋಗಿ ಶ್ರೀ ಚಾಮರಾಜೇಂದ್ರ ಒಡೆಯರಿಗೆ ಆತನ ಪರಿಚಯ ಮಾಡಿಕೊಟ್ಟರು. ದೊರೆಗಳು ಕಾಷಾಯ ವಸ್ತ್ರಧಾರಿಯೂ ರಾಜಪುತ್ರ ಸದೃಶದೇಹಿಯೂ ಆಗಿದ್ದ ಕುಮಾರಯೋಗಿಯನ್ನು ನೋಡಿ ಬಹಳ ಸಂತೋಷಪಟ್ಟರು. ಸ್ವಾಮಿಜಿಯ ಧೀಶಕ್ತಿಗೂ ತೇಜಸ್ಸಿಗೂ ಸೂಕ್ಷ್ಮದೃಷ್ಟಿಗೂ ಧರ್ಮಜೀವನಕ್ಕೂ ದೊರೆಗಳು ಮನಸೋತರು. ಸ್ವಾಮಿಜಿ ಅರಸರ ಅತಿಥಿಯಾದರು.

ದೊರೆಗಳೂ ಸ್ವಾಮಿಜಿಯೂ ಅನೇಕ ಸಾರಿ ಬಹಳ ಹೊತ್ತಿನವರೆಗೆ ಸಂಭಾಷಣೆ ಮಾಡುತ್ತಿದ್ದರು. ಬರುಬರುತ್ತ ರಾಜ ಮತ್ತು ರಾಜಸಂನ್ಯಾಸಿಗಳ ಮೈತ್ರಿ ಪ್ರಬಲವಾಯಿತು. ಸ್ವಾಮಿಜಿ ಅರಸರಲ್ಲಿ ತೋರಿಬಂದ ಕುಂದುಕೊರತೆಗಳನ್ನು ನಿರ್ಭೀತಿಯಿಂದ ಖಂಡನೆ ಮಾಡದೆ ಬಿಡುತ್ತಿರಲಿಲ್ಲ. ಒಂದು ದಿನ ಚಾಮರಾಜೇಂದ್ರ ಒಡೆಯರು ತಮ್ಮ ಕೆಲವು ಅಧಿಕಾರಿಗಳ ಮುಂದೆ ಸ್ವಾಮಿಜಿಯನ್ನು ಕುರಿತು “ಸ್ವಾಮಿಜಿ, ನನ್ನ ಅಧಿಕಾರಿಗಳ ವಿಚಾರವಾಗಿ ತಮ್ಮ ಅಭಿಪ್ರಾಯವೇನು?” ಎಂದು ಕೇಳಿದರು. “ಮಹಾರಾಜರಿಗೇನೋ ಬೇಕಾದಷ್ಟು ಔದಾರ್ಯವಿದೆ. ಆದರೆ ನಿಮ್ಮನ್ನು ಅಧಿಕಾರಿಗಳು ಮುತ್ತಿಕೊಂಡಿರುವರು. ಅಧಿಕಾರಿಗಳು ಎಲ್ಲಿ ಹೋದರೂ ಅಧಿಕಾರಿಗಳೇ!” ಎಂದು ಸ್ವಾಮಿಗಳು ನಸುನಕ್ಕರು. ರಾಜರಿಗೆ ಆಶ್ಚರ್ಯವುಂಟಾಯಿತು. ಅಧಿಕಾರಿಗಳಲ್ಲಿ ಕೆಲವರಿಗೆ ಖೇದವೂ ಮತ್ತೆ ಕೆಲವರಿಗೆ ವಿನೋದವೂ ಉಂಟಾಯಿತು. ಸಭೆ ಮುಕ್ತಾಯವಾದ ಮೇಲೆ ದೊರೆಗಳು ಸ್ವಾಮಿಜಿಯನ್ನು ಕುರಿತು ಸ್ವಾಮಿಜಿ, “ನೀವು ಹೀಗೆಲ್ಲ ಬಾಯಿಬಿಟ್ಟು ಮಾತಾಡಿದರೆ ಏನಾದರೂ ಕೇಡು ಸಂಭವಿಸಬಹುದು. ಇತರ ಸಾಧುಗಳಿಗೆ ಮಾಡಿರುವಂತೆ ನಿಮಗೂ ವಿಷಹಾಕಬಹುದು” ಎಂದರು. ಸ್ವಾಮಿಜಿ ನಸುಗೋಪದಿಂದ “ಏನು! ಜೀವ ಹೋದರೂ ನಿಜವಾದ ಸಂನ್ಯಾಸಿ ಸುಳ್ಳಾಡುವನೆಂದು ತಿಳಿದಿರುವಿರೇನು? ನಾಳೆ ನಿಮ್ಮ ಮಕ್ಕಳೇ ನಿಮ್ಮ ವಿಚಾರವಾಗಿ ಪ್ರಶ್ನೆ ಮಾಡಿದರೆ ನಿಮ್ಮದಲ್ಲದ ನಿಮಗಿಲ್ಲದ ಗುಣವನ್ನು ಆರೋಪಿಸಿ, ನಿಮ್ಮನ್ನು ಹೊಗಳಬೇಕೆ? ಮಿಥ್ಯಾವಾದಿಯಾಗಬೇಕೆ? ಸುಳ್ಳು ಹೇಳುವುದು, ಮುಖಸ್ತುತಿ ಮಾಡುವುದು ಇವೆಲ್ಲ ಆಸ್ಥಾನದ ಸ್ತುತಿ ಪಾಠಕರ ಕೆಲಸ! ಸತ್ಯ ಸಂನ್ಯಾಸಿಗಳ ಧರ್ಮ!” ಎಂದರು.

ಒಂದು ದಿನ ದಿವಾನರ ಅಧ್ಯಕ್ಷತೆಯಲ್ಲಿ ಒಂದು ದೊಡ್ಡ ವಿಚಾರ ಸಭೆ ಕೂಡಿತು. ಸಂಸ್ಥಾನದ ಪಂಡಿತರನೇಕರು ಆ ಸಭೆಯಲ್ಲಿ ಭಾಗಿಗಳಾಗಲು ಆಹೂತರಾಗಿದ್ದರು. ಸ್ವಾಮಿಗಳಿಗೂ ಆಹ್ವಾನ ಬಂದಿತು. ಮಹಾರಾಜರ ಕೇಳಿಕೆಯಂತೆ ಅವರೂ ಸಭಾಪ್ರವೇಶ ಮಾಡಿದರು. ವೇದಾಂತ ವಿಚಾರ ಆರಂಭವಾಯಿತು. ಪಂಡಿತ ವರ್ಗ ವೇದಾಂತದ ವಿಭಿನ್ನ ಪ್ರಕಾರವಾದ ಮತ ವಾದಗಳನ್ನು ಸಮರ್ಥಿಸುತ್ತ ವಾದಾನುವಾದಗಳಲ್ಲಿ ಪ್ರವೃತ್ತವಾಯಿತು. ಸ್ವಮತ ಪ್ರತಿಷ್ಠೆಗಾಗಿ ಪರಮತವನ್ನು ಭ್ರಾಂತಿಯೆಂದು ಹೇಳುತ್ತ ಎಷ್ಟು ವಾದವಿವಾದಗಳಲ್ಲಿ ತೊಡಗಿದರೂ ಯಾವುದೂ ನಿರ್ಣಯವಾಗಲಿಲ್ಲ. ತರುವಾಯ ಎಲ್ಲರ ಬೇಡಿಕೆಯಂತೆ ಸ್ವಾಮಿಗಳೂ ಮಾತನಾಡಿದರು. ಮುಂದೆ ಅಮೆರಿಕಾ, ಇಂಗ್ಲೆಂಡು ದೇಶಗಳಲ್ಲಿ ಯಾವ ಅಭಿಪ್ರಾಯಗಳನ್ನು ಸಾರಿ ವೇದಾಂತ ದರ್ಶನಕ್ಕೆ ಸಾರ್ವಭೌಮಿಕಾ ದರ್ಶನವೆಂಬ ಕೀರ್ತಿಯನ್ನು ತಂದರೋ ಅದೇ ಅಭಿಪ್ರಾಯಗಳನ್ನು ಸಂಕ್ಷೇಪವಾಗಿ ಹೇಳಿದರು.

ವೇದಾಂತವು ಕೆಲವು ಮತವಾದಗಳ ಸಮಷ್ಟಿ ಮಾತ್ರವಲ್ಲ. ಅದು ಸಾಧಕ ಜೀವನದ ವಿಭಿನ್ನಾವಸ್ಥೆಗಳಿಂಧ ಅನುಭೂತವಾದ ಸತ್ಯಸಮೂಹ. ಆದ್ದರಿಂದ ಅವುಗಳು ಪರಸ್ಪರ ವಿರೋಧಿಗಳಲ್ಲ; ಪರಸ್ಪರ ಪೂರಕಗಳು. ನಿಜವಾದ ತತ್ತ್ವ ಜ್ಞಾನ ಬರಿಯ ಸಿದ್ಧಾಂತಗಳ ಮುಂದೆಯಲ್ಲ; ಅದು ಸುವ್ಯವಸ್ಥಿತವಾದ ಅನುಭವಗಳ ಶ್ರೇಣಿ.

ಸಮದೃಷ್ಟಿಯ ಜ್ಯೋತಿಯನ್ನು ಮಳೆಗರೆಯುತ್ತಿದ್ದ ತರುಣ ಸಂನ್ಯಾಸಿಯ ಸ್ವರ್ಗೀಯ ಲಾವಣ್ಯಪಂಡಿತ ಮುಖಶ್ರೀಯನ್ನೂ ಮಿಂಚಿನುಂಡೆಗಳಂತೆ ತಳತಳಿಸುತ್ತಿದ್ದ ವಿಶಾಲ ನೇತ್ರದ್ವಯವನ್ನೂ ನೋಡಿ ಪಂಡಿತರೆಲ್ಲ ಬಿಲ್ಲುಂಬೆರಗಾಗಿ ಹೊಗಳಿದರು.

ಇನ್ನೊಂದು ದಿನ ಮಹಾರಾಜರು “ಸ್ವಾಮಿಜಿ, ನನ್ನಿಂದ ಏನಾದರೂ ಸೇವೆಯನ್ನು ಸ್ವೀಕರಿಸುವುದಿಲ್ಲವೇ?” ಎಂದು ಕೇಳಿದರು. ಸ್ವಾಮಿಗಳು ಭರತಖಂಡದ ಸರ್ವತೋಮುಖವಾದ ದುರವಸ್ಥೆಯನ್ನು ವರ್ಣಿಸಿ, ದೇಶ ವಿದೇಶಗಳಿಗೆ ಹೋಗಿ ಸನಾತನ ಧರ್ಮದ ಜ್ಯೋತಿಯನ್ನು ಹರಡಿ ತನ್ಮೂಲಕ ಸ್ವದೇಶ ಸೇವೆ ಮಾಡಬೇಕೆಂದಿರುವ ತಮ್ಮ ಸಂಕಲ್ಪವನ್ನೂ ತಿಳಿಸಿದರು. ರಾಜರು ಮುಗ್ಧರಾಗಿ ಎಲ್ಲವನ್ನೂ ಕೇಳಿದರು. “ಪಾಶ್ಚಾತ್ಯ ವಿಜ್ಞಾನದ ಸಹಾಯದಿಂದ ನಮ್ಮ ಆರ್ಥಿಕ ಸಾಮಾಜಿಕ ಸ್ಥಿತಿಗತಿಗಳನ್ನು ಉನ್ನತಗೊಳಿಸಬೇಕು. ಆದರೆ ಯುರೋಪಿಯನ್ನರ ಮುಂದೆ ನಿಂತು ಅಳುತ್ತಾ ಭಿಕ್ಷೆ ಬೇಡುವುದರಿಂದ ನಮ್ಮ ಇಷ್ಟಾರ್ಥ ಕೈಗೂಡುವುದಿಲ್ಲ. ಅವರಿಂದ ಕೃಷಿ ವ್ಯಾಪಾರ ಮೊದಲಾದುವುಗಳನ್ನು ಕಲಿತುಕೊಂಡು ವಿನಿಮಯ ರೂಪವಾಗಿ ಅವರಿಗೆ ನಾವು ಏನಾದರೂ ಕೊಡಬೇಕು. ಸದ್ಯಕ್ಕೆ ಆಧ್ಯಾತ್ಮಿಕ ಜ್ಞಾನ ವೊಂದಲ್ಲದೆ ನಮ್ಮಲ್ಲಿ ಮತ್ತೇನಿದೆ? ಆದ್ದರಿಂದ ನಮ್ಮವರು ವೇದಾಂತ ದರ್ಶನದ ಅತ್ಯುದಾರ ಧರ್ಮವನ್ನು ಬೋಧಿಸಲು ಆಗಾಗ ಪಾಶ್ಚಾತ್ಯ ದೇಶಗಳಿಗೆ ಹೋಗಬೇಕು. ಈ ವಿಧವಾದ ಆದಾನಪ್ರದಾನ ಸಂಬಂಧವನ್ನು ಸ್ಥಾಪಿಸಿ, ಅದರಿಂದ ಸ್ವದೇಶ ಕಲ್ಯಾಣವನ್ನು ಸಾಧಿಸಬೇಕು. ತಮ್ಮಂತಹ ಮಹಾಕುಲ ಪ್ರಸೂತರೂ ಶಕ್ತಿಶಾಲಿಗಳೂ ಆದ ರಾಜರುಗಳು ಪ್ರಯತ್ನಪಟ್ಟರೆ ಕಾರ್ಯಾರಂಭವನ್ನಾದರೂ ಮಾಡಬಹುದು. ಇದರಲ್ಲಿ ತಾವು ಮುಂದಾಳುಗಳಾಗಬೇಕೆಂಬುದೇ ನನ್ನ ಪ್ರಾರ್ಥನೆ.”

ಮಹಾರಾಜರು ಸ್ವಾಮಿಜಿ ಪಾಶ್ಚಾತ್ಯ ದೇಶಗಳಿಗೆ ಧರ್ಮಪ್ರಚಾರ ಮಾಡಲು ಹೋಗುವುದಾದರೆ ವ್ಯಯಭಾರವನ್ನೆಲ್ಲ ತಾವೆ ವಹಿಸಿಕೊಳ್ಳುವುದಾಗಿ ಹೇಳಿ, ಆಗಲೇ ಒಂದೆರಡು ಸಹಸ್ರ ರೂಪಾಯಿಗಳನ್ನೂ ಕೊಡಲು ಸಿದ್ಧರಾದರು. ಸ್ವಾಮಿಜಿ “ಮಹಾರಾಜ, ನಾನಿನ್ನೂ ಸ್ಥಿರಸಿದ್ಧಾಂತಕ್ಕೆ ಬಂದಿಲ್ಲ. ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಮಾತ್ರ ಮಾಡಲು ಸಂಕಲ್ಪಿಸಿದ್ದೇನೆ. ಈ ಪರಿವ್ರಾಜಕ ವ್ರತ ಮುಗಿಯುವವರೆಗೂ ಇನ್ನಾವ ಕೆಲಸಕ್ಕೂ ಕೈಹಾಕೆನು. ತರುವಾಯವಾದರೂ ಏನು ಮಾಡಬೇಕು, ಎಲ್ಲಿ ಹೋಗಬೇಕು ಎಂಬುದೊಂದನ್ನೂ ನಾನು ನಿಶ್ಚಯಿಸಿಲ್ಲ” ಎಂದರು.

ಮೈಸೂರಿನಿಂದ ಹೊರಟ ಸ್ವಾಮಿಜಿ ಕೊಚ್ಚಿ, ತಿರುವಾಂಕೂರು, ಮಧುರೆ, ರಾಮನಾಡುಗಳ ಮಾರ್ಗವಾಗಿ ರಾಮೇಶ್ವರಕ್ಕೆ ಬಂದರು.

ರಾಮೇಶ್ವರವು ಭಾರತಾಂಬೆಯ ಪಾದಗಳಲ್ಲಿರುವ ಪುಣ್ಯಕ್ಷೇತ್ರ. ಪುರಾಣ ಪ್ರಖ್ಯಾತವಾಗಿರುವ ಪಾವನತಮ ತೀರ್ಥ. ವಾಯುಪುತ್ರನು ಲಂಕೆಗೆ ಹಾರಿದುದು ಇಲ್ಲಿಂದಲೆ. ಶ್ರೀರಾಮಚಂದ್ರನು ಲಂಕೆಗೆ ಹೋಗುವಾಗ ರಾಮೇಶ್ವರದ ಮೇಲೆಯೆ ಹೋದುದು. ಇಲ್ಲಿಯ ದೇವಾಲಯವನ್ನು ಕಟ್ಟಿಸಿದವನೂ ಶ್ರೀರಾಮನಂತೆ. ಶಿವಲಿಂಗ ಸ್ಥಾಪನೆ ಮಾಡಿದವನೂ ಆತನಂತೆ. ರಾಮೇಶ್ವರದ ರಮಣೀಯತೆಯನ್ನೂ ಪವಿತ್ರ ಸನ್ನಿವೇಶವನ್ನೂ ಪುರಾತತ್ವವನ್ನೂ ನೋಡಿ ನೋಡಿ ನೆನೆನೆನೆದು ಸ್ವಾಮಿಜಿ ಭಾವವಶರಾದರು.

ಅಲ್ಲಿಂದ ೧೮೯೩ನೆಯ ಸಂವತ್ಸರದ ಜನವರಿ ತಿಂಗಳಲ್ಲಿ ಕನ್ಯಾಕುಮಾರಿಯನ್ನು ಸೇರಿದರು. ಮುಂದೆ ಅನಿಲಾಂದೋಳಿತ ವೀಚಿವಿಕ್ಷೋಭಿತ ಸುನೀಲ ಜಲಧಿ! ಹಿಂದೆ ಶೈಲಕಾನನಕಾಂತಾರ ಪರಿಶೋಭಿತ ಸಸ್ಯಶ್ಯಾಮಲೆಯಾದ ಭಾರತ ವರ್ಷ! ನಡುವೆ ಸಮಾಸೀನ ನವ್ಯಭಾರತದ ಮಂತ್ರ ಗುರುವಾದ ಪರಿವ್ರಾಜಕಾಚಾರ್ಯ ವಿವೇಕಾನಂದ! ಎಂತಹ ಮಹಿಮಾಮಯ ದೃಶ್ಯ!

ಯತಿಚಕ್ರೇಶನು ಕಡಲಿನಲ್ಲಿ ಧುಮುಕಿ ಒಂದು ನಡುಬಂಡೆಯನ್ನೇರಿ ಭಾರತ ಮಾತೆಗೆ ಅಭಿಮುಖವಾಗಿ ಯೋಗಾಸನದಲ್ಲಿ ಕುಳಿತು ತನ್ನ ಜನ್ಮೋದ್ದೇಶ ನಿರ್ಣಯಪರನಾದನು. ಬಹಳ ಹೊತ್ತು ಹಾಗೆಯೆ ಕುಳಿತು ಭರತಖಂಡದ ದುರವಸ್ಥೆಯನ್ನೂ ಪುನರುತ್ಥಾನದ ಮಾರ್ಗವನ್ನೂ ಚಿಂತಿಸಿ ಚಿಂತಿಸಿ ಸುಪ್ರತಿಭನಾಗಿ ಮೇಲೆದ್ದನು.‌

“ಯಾರಿವನು?” ಎಂದು ಬೆರಗಾದ ಹಕ್ಕಿಗಳ ಪ್ರಶ್ನೆಗೆ, ಇನ್ನು ಸ್ವಲ್ಪವೆ ಕಾಲದೊಳಗಾಗಿಯೆ, “ಸ್ವಾಮಿ ವಿವೇಕಾನಂದ!” ಎಂಬ ಮಾರುತ್ತರವು ಅಪಾರ ಪಾರಾವಾರಗಳನ್ನೂ ಲಂಘಿಸಿ, ಸಮುದ್ರಘೋಷಕ್ಕಿಂತಲೂ ಸಮಧಿಕವಾಗಿ ಕೇಳಿಬರುತ್ತದೆ ಅಲ್ಲವೆ?

ಕನ್ಯಾಕುಮಾರಿಯಿಂದ ಹೊರಟು ಸ್ವಾಮಿಜಿ ಯಾಯಾವರ ವೃತ್ತಿಯಿಂದ ಕಾಯಾಪನೆಗೈಯ್ಯುತ್ತ ರಾಮನಾಡಿನ ಮಾರ್ಗವಾಗಿ ಪಾಂಡುಚೆರಿಗೆ ಬಂದರು. ಅಲ್ಲಿ ಪ್ರಾಚೀನ ಸಂಪ್ರದಾಯ ದಾಸನಾದ ಪಂಡಿತನೊಬ್ಬನು ಸ್ವಾಮಿಗಳೊಡನೆ ವಾಗ್ಯುದ್ಧ ಹೂಡಿದನು. ಶುಷ್ಕಾಚಾರ ವಿಷಕೀಟ ಪರಿಪೂರ್ಣವಾಗಿ ತಿಮಿರಾವೃತವಾಗಿದ್ದ ಆತನೆದೆ ವೇದಾಂತಿಯ ಪ್ರಚಂಡ ಜ್ಯೋತಿಗೆ ಅಳುಕಿತು. ಎಷ್ಟು ಹೇಳಿದರೂ ಎಷ್ಟು ವಾದಿಸಿದರೂ ಆತನು ಬೇರೆ “ಕದಾಪಿ ನ! ಕದಾಪಿ ನ!” ಎಂಬ ಪಲ್ಲವಿಯನ್ನು ಬಿಡಲೇ ಇಲ್ಲವಂತೆ.

ಪಾಂಡುಚೆರಿಯಿಂದ ಮದರಾಸಿಗೆ ಬಂದ ಸ್ವಾಮಿಗಳ ಖ್ಯಾತಿ ಕೆಲದಿನಗಳಲ್ಲಿಯೇ ಹಬ್ಬಿತು. ಅನೇಕ ಕೃತವಿದ್ಯರಾದ ಪುರಜನರೂ ಅಧಿಕಾರಿಗಳೂ ವಿಶ್ವವಿದ್ಯಾನಿಲಯದ ಅಧ್ಯಾಪಕ ಮತ್ತು ವಿದ್ಯಾರ್ಥಿ ವರ್ಗದವರೂ ಅವರಲ್ಲಿಗೆ ಬಂದು ಸಂಭಾಷಣೆ ಮಾಡತೊಡಗಿದರು. ಎರಡು ವರ್ಷಗಳಿಂದಲೂ ಭಾರತ ಮಹಾಖಂಡದ ತಪ್ತಜೀವನದ ಮೂಷೆಯಲ್ಲಿ ಕರಗಿ ಕುದಿದು ಕಾಳಿಕೆಯನ್ನು ಕಳೆದುಕೊಂಡು ಹೊನ್ನಿನಂತೆ ತಪೋಜ್ವಲರಾಗಿದ್ದ ಸ್ವಾಮಿಜಿಯ ವ್ಯಕ್ತಿತ್ವ ಪ್ರದೀಪಕ್ಕೆ ಜನರು ಪತಂಗಗಳಂತೆ ಆಕರ್ಷಿತರಾಗಿ ಬಂದುದರಲ್ಲಿ ಆಶ್ಚರ್ಯವೇನು?

ಸ್ವಾಮಿಜಿ ಅಮೇರಿಕಾ ಖಂಡದ ಸಂಯುಕ್ತ ಸಂಸ್ಥಾನಗಳಲ್ಲಿ ನಡೆಯಲಿದ್ದ ಸರ್ವಧರ್ಮ ಸಮ್ಮೇಳನಕ್ಕೆ ಹೋಗುವ ತಮ್ಮ ಅಭೀಷ್ಟವನ್ನು ಬಹಿರಂಗಗೊಳಿಸಿದುದು ಮೊತ್ತಮೊದಲು ಮದರಾಸಿನಲ್ಲಿಯೆ. ಮೊತ್ತಮೊದಲು ಕೃತವಿದ್ಯರಾದ ಭಕ್ತಶಿಷ್ಯರು ದೊರಕಿದುದೂ ಮದರಾಸಿನಲ್ಲಿಯೆ. ಅವರ ಸರ್ವತೋಮುಖವಾದ ವಿದ್ವತ್ತಿಗೆ ಬಹಿರಂಗ ಪ್ರಶಂಸೆ ದೊರಕಿದುದೂ ಮೊತ್ತಮೊದಲು ಮದರಾಸಿನಲ್ಲಿಯೆ. ಮುಂದೆ ಅವರು ಪಾಶ್ಚಾತ್ಯ ದೇಶಗಳಿಂದ ಹಿಂತಿರುಗಿದ ಮೇಲೆ ಅವರ ಭರತಖಂಡದ ಕಾರ್ಯ ಪ್ರಾರಂಭವಾದುದೂ ಮದರಾಸಿನಲ್ಲಿಯೆ. ಅವರನ್ನು ಪಶ್ಚಿಮದೇಶಗಳಿಗೆ ಕಳುಹಿಸಲೂ, ಅಲ್ಲಿಗೆ ಹೋದ ಅವರಿಗೆ ನೆರವಾಗಲೂ, ಅವರು ಅಲ್ಲಿದ್ದಾಗ ಅವರ ಸಂದೇಶವನ್ನು ಇಲ್ಲಿ ಹರಡಲೂ ಮೊತ್ತಮೊದಲು ಸಾರ್ವಜನಿಕವಾಗಿ ಪ್ರಯತ್ನ ಮಾಡಿದವರೂ ಅವರ ಮದರಾಸಿನ ಶಿಷ್ಯರೆ!

ಫೆಬ್ರವರಿ ತಿಂಗಳ ಉತ್ತರಭಾಗದಲ್ಲಿ ಸ್ವಾಮಿಗಳು ಹೈದರಾಬಾದಿಗೆ ಆಹ್ವಾನಿತರಾಗಿ ಹೋಗಿ ಅಲ್ಲಿಯ ನವಾಬರ ಮತ್ತು ಇತರರ ಆದರಾತಿಥ್ಯ ಗೌರವಗಳನ್ನು ಸ್ವೀಕರಿಸಿ, ಅವರಿಗೆ ತಮ್ಮ ವಿದ್ಯಾಜ್ಯೋತಿಯನ್ನು ಒಂದಿನಿತು ದಾನಮಾಡಿ, ಮದರಾಸಿಗೆ ಹಿಂತಿರುಗಿದರು.

ಶಿಷ್ಯರು ಸ್ವಾಮಿಗಳನ್ನು ಸರ್ವಧರ್ಮಸಮ್ಮೇಳನಕ್ಕೆ ಕಳುಹುವ ನಿಮಿತ್ತವಾಗಿ ಧನಸಂಗ್ರಹ ಕಾರ್ಯದಲ್ಲಿ ತೊಡಗಿದ್ದರು. ಸ್ವಾಮಿಗಳು ತಮ್ಮ ಪ್ರಿಯತಮ ಶಿಷ್ಯರಾದ ಅಳಸಿಂಗರನ್ನು ಬಳಿಗೆ ಕರೆದು: “ನಾನು ಹಿಂದೂಧರ್ಮದ ಪ್ರತಿನಿಧಿಯಾಗಿ ಸರ್ವಧರ್ಮ ಸಮ್ಮೇಳನಕ್ಕೆ ಹೋಗಬೇಕೆಂದು ನೀವೆಲ್ಲರೂ ಹೇಳುತ್ತೀರಿ. ನಾನು ಬರಿಯ ಶ್ರೀಮಂತರ ಮತ್ತು ರಾಜರ ಪ್ರತಿನಿಧಿಯಾಗಿ ಅಲ್ಲಿಗೆ ಹೋಗಲಾರೆ; ಸಾಧಾರಣ ಜನರ ಪ್ರತಿನಿಧಿಯಾಗಿಯೂ ಇರಬೇಕು. ಆದ್ದರಿಂದ ನೀವು ಶ್ರೀಮಂತರಿಂದ ಮಾತ್ರವೆ ಧನಸಂಗ್ರಹ ಮಾಡುವುದು ಸರಿಯಲ್ಲ. ಸಾಧಾರಣ ಜನರಿಂದಲೂ ಹಣವನ್ನು ಕೇಳಿ, ಅವರ ಅಭಿಪ್ರಾಯವನ್ನೂ ತಿಳಿದುನೋಡಿ” ಎಂದರು.

ಈ ಮಧ್ಯೆ ಸ್ವಾಮಿಜಿ ಶ್ರೀಮಾತೆ ಶಾರದಾಮಣಿದೇವಿಯವರ ಆಶೀರ್ವಾದ ಬಲವಿಲ್ಲದೆ ಯಾವ ಕೆಲಸಕ್ಕೂ ಕೈಹಾಕಬಾರದೆಂದು ತಿಳಿದು ತಮ್ಮ ಸಂಕಲ್ಪವನ್ನು ಸೂಚಿಸಿ, ಪಾಶ್ಚಾತ್ಯ ದೇಶಗಳಿಗೆ ಹೋಗಲು ಅವರ ಆಶೀರ್ವಾದವನ್ನು ಬೇಡಿ ಒಂದು ಕಾಗದ ಬರೆದು ಉತ್ತರವನ್ನೇ ಎದುರು ನೋಡುತ್ತಿದ್ದರು. ಒಂದು ರಾತ್ರಿ ಅವರಿಗೆ ಕನಸು ಬಿತ್ತು: ಕನಸಿನಲ್ಲಿ ಬಿತ್ತರದ ನೀಲಿ ನೀರಿನ ಸೀಮೆ, ಮಹಾ ಸಮುದ್ರ, ನಲಿಯುವ ಪೆರ್ದೆರೆಗಳು, ನೊರೆಗಳು, ಪರಮಹಂಸರು ತರಂಗ ಶಿಖರಗಳ ಮೇಲೆ ಪಶ್ಚಿಮಾಭಿಮುಖವಾಗಿ ನಡೆದುಹೋಗುತ್ತಿದ್ದಾರೆ. ಹಿಂತಿರುಗಿ ತಿರುಗಿ ತಮ್ಮನ್ನು ಕೈಬೀಸಿ ಕರೆಯುತ್ತಿದ್ದಾರೆ! ಸ್ವಪ್ನಭಂಗವಾಯಿತು. ಸಂದೇಹವೂ ನಿವೃತ್ತಿಯಾಯಿತು. ಮರುದಿನವೆ ಶ್ರೀಮಾತೆಯ ಆಶೀರ್ವಾದ ಪೂರ್ವಕವಾದ ಪತ್ರವೂ ಬಂತು. ಶ್ರೀಮಾತೆಗೂ ಅದೇ ಕನಸು ಕಂಡಿತಂತೆ! ಇನ್ನೇನು ಸಂನ್ಯಾಸಿ ಕಡಲನ್ನು ದಾಟಲು ಸಿದ್ಧನಾದನು. ಭರತಖಂಡದ ಚರಿತ್ರೆಯಲ್ಲಿ ಹಿಂದೂ ಸಂನ್ಯಾಸಿ ಶಾಸ್ತ್ರ ನಿಷಿದ್ಧವಾದ ಕಾಳಜಲವನ್ನು ದಾಟಿದುದು ಅದೇ ಮೊತ್ತಮೊದಲಲ್ಲವೆ?

ದೈವಗತಿ ವಿಚಿತ್ರವಾದುದು: ಒಂದು ದಿನ ಇದ್ದಕ್ಕಿದ್ದ ಹಾಗೆ ಖೇತ್ರಿ ಮಹಾರಾಜರ ಕರ್ಮಸಚಿವನಾಗಿದ್ದ ಜಗಮೋಹನಲಾಲಜಿ ಮದರಾಸಿಗೆ ಬಂದನು. ಸ್ವಾಮಿಜಿಯನ್ನು ಕಂಡನು. ಖೇತ್ರಿ ಮಹಾರಾಜರಿಗೆ ಪುತ್ರ ಜನನವಾಗಲೆಂದು ಸ್ವಾಮಿಜಿ ಹರಕೆಗೈದುದು ಪಾಠಕರ ಸ್ಮೃತಿಪಥದಲ್ಲಿರಬಹುದು. ರಾಜರಿಗೆ ಗಂಡು ಮಗು ಹುಟ್ಟಿತ್ತು. ಆ ಪುತ್ರರತ್ನದ ಅನ್ನ ಪ್ರಾಶನೋತ್ಸವಕ್ಕೆ ಸ್ವಾಮಿಜಿಯನ್ನು ತಪ್ಪದೆ ಕರೆದುಕೊಂಡು ಬರಬೇಕೆಂದು ಕಟ್ಟಾಣತಿಯಿತ್ತು ರಾಜರು ತಮ್ಮ ಕರ್ಮ ಸಚಿವನನ್ನು ಕಳುಹಿಸಿದ್ದರು. ವಿಷಯವನ್ನು ಅರಿತ ಕೂಡಲೆ ಸ್ವಾಮಿಜಿ “ಜಗಮೋಹನಜಿ, ನಾನು ಮೇ ತಿಂಗಳು ಮೂವತ್ತಂದಕ್ಕೆ ಅಮೆರಿಕಾಕ್ಕೆ ಹೊರಡಲು ಸಿದ್ಧನಾಗಿದ್ದೇನೆ. ನಾನು ಹೇಗೆ ಬರಲಿ?” ಎಂದರು. ಜಗಮೋಹನಲಾಲನು “ಸ್ವಾಮಿಜಿ, ನೀವು ಒಂದು ದಿನದ ಮಟ್ಟಿಗಾದರೂ ಬರಬೇಕು. ನೀವು ಬರದಿದ್ದರೆ ಮಹಾರಾಜರ ಎದೆ ಬಿರಿಯುತ್ತದೆ. ನಿಮ್ಮ ಪಯಣಕ್ಕೆ ಬೇಕಾದುದೆಲ್ಲವನ್ನೂ ಮಹಾರಾಜರೆ ಮಾಡುತ್ತಾರೆ. ನಿಮಗೆ ಸ್ವಲ್ಪವೂ ಯೋಚನೆ ಬೇಡ. ಸುಮ್ಮನೆ ನನ್ನ ಹಿಂದೆ ಬನ್ನಿ” ಎಂದು ಹಟ ಹಿಡಿದನು.

ಸ್ವಾಮಿಜಿ ಖೇತ್ರಿಗೆ ಹೋಗಿ ಬೊಂಬಾಯಿನಿಂದ ಜಹಜು ಹತ್ತುವುದೆಂದು ನಿರ್ಧಾರವಾಯಿತು. ಕಂಬನಿ ತುಂಬಿದ ಮದರಾಸಿನ ಶಿಷ್ಯರನ್ನು ಸ್ವಾಮಿಜಿ ಕಂಬನಿ ತುಂಬಿ ಬೀಳ್ಕೊಂಡು ಜಗಮೋಹನನೊಡನೆ ಖೇತ್ರಿಗೆ ಪಯಣ ಬೆಳಸಿದರು. ಅಲ್ಲಿ ಅನ್ನಪ್ರಾಶನೋತ್ಸವ ನಿರ್ವಿಘ್ನವಾಗಿ ನೆರವೇರಿದ ಮೇಲೆ ಯತಿವರ್ಯರು ರಾಜ ಶಿಷ್ಯನನ್ನು ಬೀಳುಕೊಂಡು ಜಗಮೋಹನನೊಡನೆ ಬೊಂಬಾಯಿಗೆ ಬಂದರು. ಅಲ್ಲಿಗಾಗಲೆ ಗುರುದರ್ಶನಾರ್ಥವಾಗಿ ಅಳಸಿಂಗ ಪೆರುಮಾಳರೂ ಬಂದಿದ್ದರು.

ಜಗಮೋಹನಲಾಲನು ಸ್ವಾಮಿಗಳ ಪ್ರಯಾಣಾರ್ಥವಾಗಿ ಬಹು ಮೂಲ್ಯವಾದ ವಸನಗಳನ್ನು ಕೊಂಡುಕೊಳ್ಳುತ್ತಿದ್ದುದನ್ನು ಕಂಡು ಸ್ವಾಮಿಜಿ ಪ್ರತಿಭಟಿಸಿದರು. ಆದರೆ ಲಾಲನು ಕೇಳಲಿಲ್ಲ. “ರಾಜಗುರುಗಳು ನೀವು; ರಾಜರ ಮರ್ಯಾದೆಗೆ ತಕ್ಕಂತೆ ಸಜ್ಜಿತವಾಗಿರುವುದೇ ಕರ್ತವ್ಯ” ಎಂದನು. ಉಪಾಯಾಂತರವನ್ನು ಕಾಣದೆ ಸ್ವಾಮಿಗಳು ಸುಮ್ಮನಾದರು. ಆದರೆ ದಂಡ ಕಮಂಡಲುಧಾರಿಯಾಗಿ ಭಿಕ್ಷಾಪಾತ್ರೆಯನ್ನು ಹಿಡಿದು ಸಂಚರಿಸುತ್ತಿದ್ದ ಸಂನ್ಯಾಸಿ ಬಹುಮೂಲ್ಯವಾದ ವಸ್ತ್ರದ್ರವ್ಯಗಳನ್ನು ಪಯಣದಲ್ಲಿ ಹೇಗೆ ನೋಡಿಕೊಳ್ಳುವುದೆಂದು ಎಳೆಯ ಮಗುವಿನಂತೆ ಅಧೀರರಾದರು.

ಸಮುದ್ರಯಾತ್ರೆಯ ದಿನ ಬಳಿ ಸಾರಿತು. ೧೮೯೩ನೆಯ ವರ್ಷದ ಮೇ ತಿಂಗಳು ಮೂವತ್ತೊಂದನೆಯ ದಿನ ಜಗತ್ತಿನ ಧಾರ್ಮಿಕ ಇತಿಹಾಸದಲ್ಲಿ ಒಂದು ಚಿರಸ್ಮರಣೀಯವಾದ ದಿನ. ಪ್ರಾಚ್ಯವು ಪಾಶ್ಚಾತ್ಯವನ್ನು ನಿರ್ದೇಶಿಸಿ ಹೊರಟ ಸುದಿನ. ಸುಮುಹೂರ್ತ ಬಂದಿತು. ಮೊದಲೇ ಜಗಮೋಹನಲಾಲನಿಂದ ರಿಸರ್ವ್ ಮಾಡಿಸಲ್ಪಟ್ಟಿದ್ದ ಪ್ರಥಮ ಶ್ರೇಣಿಯ ಕ್ಯಾಬಿನ್ ಒಂದರಲ್ಲಿ ಸ್ವಾಮಿಜಿ ಕುಳಿತರು. ಅಶ್ರುಪೂರ್ಣಲೋಚನರಾಗಿ ನಮಿಸಿದ ಶಿಷ್ಯರನ್ನು ಆಶೀರ್ವದಿಸಿ, ಭಗವಾನ್ ಶ್ರೀರಾಮಕೃಷ್ಣರನ್ನು ಚಿತ್ತದಲ್ಲಿಯೆ ಸ್ಮರಿಸಿ ನಮಸ್ಕರಿಸಿದರು: “ಹೇ ಗುರುದೇವ, ಸನಾತನ ತ್ಯಾಗ ಭೂಮಿಯಿಂದ ನೂತನ ಭೋಗಭೂಮಿಗೆ ಹೊರಟಿದ್ದೇನೆ. ನನ್ನನ್ನು ಕಾಪಾಡು!” ಎಂದು. ಸ್ವಲ್ಪ ಹೊತ್ತಿನಲ್ಲಿಯೆ, ದೂರವಾಗುತ್ತಿದ್ದ ಭಾರತ ಭೂಮಿಯನ್ನು ಅಭೀಷ್ಟಕ ನಯನಗಳಿಂದ ನೋಡಿದರು. ಚಿತ್ತಭಿತ್ತಿಯಲ್ಲಿ ವರಾಹ ನಗರದ ಮಠವೂ ಸೋದರ ಸಂನ್ಯಾಸಿಗಳೂ ನಲಿದರೇನು?

ಸಿಳ್ಳು ಕೂಗಿತು. ಲೋಹನಿರ್ಮಿತ ಮಹಾಕಾಯದ ಕೂರ್ಮದಂತೆ ಜಹಜು ಮಂದರಗತಿಯಿಂದ ಹೊರಟಿತು. ನೋಡುತ್ತಿದ್ದಾಗಲೆ ಸಸ್ಯಶ್ಯಾಮಲೆಯಾದ ಭಾರತಾಂಬೆ ದೂರದೂರವಾಗಿ, ಮಬ್ಬಾಗಿ, ದಿಗಂತ ವಿಲೀನೆಯಾದಳು. ಎಲ್ಲಿ ನೋಡಿದರಲ್ಲಿ ಫೇನಶುಭ್ರಶಿರ ತರಂಗಮಾಲೆಗಳ ಭೈರವ ಕಲ್ಲೋಲ ನೃತ್ಯ ಮೆರೆಯಿತು. ಶ್ರೀರಾಮಕೃಷ್ಣ ಪರಮಹಂಸರ ಶ್ರೇಷ್ಠತಮ ಶಿಷ್ಯರೂ ಸಂಕ್ಷಿಪ್ತ ಸನಾತನ ಧರ್ಮಸ್ವರೂಪರೂ ಆದ ಅಗ್ನಿಸದೃಶ ದೇಶಭಕ್ತ ಸಂನ್ಯಾಸಿ ಖೇತ್ರಿಯ ಮಹಾರಾಜರು ಕಾಣಿಕೆಯಾಗಿ ನಿವೇದಿಸಿದ್ದ ಬೆಲೆಯುಳ್ಳ ರೇಷ್ಮೆಯ ನಿಲುವಂಗಿಯನ್ನೂ ಕಾವಿಯ ರುಮಾಲನ್ನೂ ವಿವೇಕಾನಂದ ಎಂಬ ಜಗದ್ವಿಖ್ಯಾತವಾಗಲಿದ್ದ ಹೊಸ ಹೆಸರನ್ನೂ ಧರಿಸಿ ಜಹಜಿನ ವೇದಿಕೆಯ ಮೇಲೆ ದಿವ್ಯಪ್ರಸ್ತರ ಮೂರ್ತಿಯಂತೆ ನಿಂತರು!