ಸ್ವಾಮಿ ಶಿವಾನಂದ —ರಾಮಕೃಷ್ಣ ಪರಮಹಂಸರ ಪ್ರಮುಖ ಶಿಷ್ಯರಲ್ಲಿ ಒಬ್ಬರು. ರಾಮಕೃಷ್ಣ ಸಂಸ್ಥೆಗಳ ಅಧ್ಯಕ್ಷರಾಗಿ ಅವನ್ನು ನಿಷ್ಠೆಯಿಂದ ಬೆಳೆಸಿದರು. ಮಾನವ ಸೇವೆಯನ್ನೂ ಅನುಕಂಪದಿಂದ, ಪ್ರೀತಿಯಿಂದ ಮಾಡಿದರು. ನಿರ್ಮಲ ವಾದ, ಸುಂದರವಾದ ಜೀವನ.

ಸ್ವಾಮಿ ಶಿವಾನಂದ

ಕಲ್ಕತ್ತ ನಗರ ಸಮೀಪದಲ್ಲಿರುವ  ದಕ್ಷಿಣೇಶ್ವರದ ಕಾಳಿಕಾ ದೇವಾಲಯದಲ್ಲಿ ಒಂದು ಶನಿವಾರದ ಮುಸ್ಸಂಜೆ. ಮಹಾನ್ ಬೋಧಕ ಶ್ರೀ ರಾಮಕೃಷ್ಣ ಪರಮಹಂಸರ ದಿವ್ಯ ಆಕರ್ಷಣೆಗೆ ಸಿಲುಕಿದ ಯುವಕನೊಬ್ಬ ಅವರನ್ನು ಕಾಣಲು ಬಂದಿದ್ದ.  ಪ್ರಾರಂಭದ ಮಾತುಗಳ ತರುವಾಯ ಶ್ರೀ ರಾಮಕೃಷ್ಣರು ಅವನನ್ನು ‘ನೀನು ದೇವರನ್ನು ಸಾಕಾರದಲ್ಲಿ ನಂಬುವೆಯೋ ಅಥವಾ ನಿರಾಕಾರದಲ್ಲಿಯೋ?’ ಎಂದು ಪ್ರಶ್ನಿಸಿದರು. ಬ್ರಹ್ಮಸಮಾಜದ ಪ್ರಭಾವಕ್ಕೆ ಒಳಗಾದ ಯುವಕ ನಮ್ರವಾಗಿ ‘ನಿರಾಕಾರದಲ್ಲಿ’ ಎಂದು ಉತ್ತರಿಸಿದ.  ಶ್ರೀ ರಾಮಕೃಷ್ಣರು ‘ಆದಿಶಕ್ತಿಯನ್ನು ಒಪ್ಪದೇ ಇರಲು ಆಗುತ್ತದೆಯೇ?’ ಎಂದು ತಕ್ಷಣ ಎದ್ದು, ಯುವಕನಿಗೆ ಹಿಂಬಾಲಿಸುವಂತೆ ಹೇಳಿ ಕಾಳಿಕಾ ದೇವಾಲಯದ ಗರ್ಭಗುಡಿಗೆ ಬಂದರು. ಪವಿತ್ರ ಆವರಣದಲ್ಲಿ ಗಂಟೆಗಳ ಸದ್ದು, ಸಂಜೆಯ ಪ್ರಾರ್ಥನೆ ಅದೇ ಪ್ರಾರಂಭವಾಗಿದೆ ಎಂದು ಸೂಚಿಸಿತು. ಶ್ರೀ ರಾಮಕೃಷ್ಣರು ಕಾಳಿಕಾಮಾತೆಯ ಮುಂದೆ ಸಾಷ್ಟಾಂಗ ನಮಸ್ಕಾರ ಹಾಕಿದರು. ತರುಣ ಮೊದಲು ಕಲ್ಲಿನ ಮುಂದೆ ಅಡ್ಡ ಬೀಳುವುದು ಹೇಗೆ ಎಂದು ಹಿಂಜರಿದ. ಆದರೆ ದೇವರು ಸರ್ವವ್ಯಾಪಿಯಾಗಿರುವಾಗ ಅವನು ಕಲ್ಲಿನಲ್ಲಿ ಏಕಿರಬಾರದು ಎಂಬ ಭಾವನೆಯೊಂದಿಗೆ ಭಕ್ತಿಯಿಂದ ಮೂರ್ತಿಗೆ ತಲೆ ಬಾಗಿ ನಮಸ್ಕರಿಸಿದ.

ಶ್ರೀ ರಾಮಕೃಷ್ಣರಿಂದ ಹೀಗೆ ಪ್ರಭಾವಿತನಾದ ಯುವಕನು ತಾರಕನಾಥ ಘೋಷಾಲ್. ಈತನೇ ಮುಂದೆ ಶ್ರೀ ರಾಮಕೃಷ್ಣ ಸಂಘದಲ್ಲಿ ಸ್ವಾಮಿ ಶಿವಾನಂದ ಎಂದು ಖ್ಯಾತಿ ಪಡೆದದ್ದು. ಅವರಿಗೆ ಸ್ವಾಮಿ ವಿವೇಕಾನಂದರು ಕೊಟ್ಟ ಸಾರ್ಥಕ ಹೆಸರು ‘ಮಹಾ ಪುರುಷ.’

ಬಾಲ್ಯ

ತಾರಕನಾಥನು ಬಂಗಾಳದ ಬಾರಾಸತ್ ಎಂಬಲ್ಲಿ ಜನಿಸಿದವನು. ಜನನದ ವರ್ಷ ಯಾರಿಗೂ ಸರಿಯಾಗಿ ಗೊತ್ತಿಲ್ಲ. ಸಂಪ್ರದಾಯದಂತೆ ತಂದೆ, ತಾಯಿ ಅವನ ಜಾತಕವನ್ನು ಬರೆಸಿದ್ದರು. ತಾರಕನಾಥನು ಸನ್ಯಾಸಿಯಾದ ಕೂಡಲೇ ಜಾತಕವನ್ನು ಗಂಗಾನದಿಗೆ ಅರ್ಪಿಸಿದ್ದಾಗಿತ್ತು. ಅವನು ಹುಟ್ಟಿದುದು ೧೯ನೇ ಶತಮಾನದ ಮಧ್ಯಭಾಗ ದಲ್ಲಿ. ಹುಟ್ಟಿದ ದಿನವನ್ನು ಮಾರ್ಗಶಿರ ಏಕಾದಶಿಯೆಂದು ಆಚರಿಸುತ್ತಾರೆ.

ತಾರಕನಾಥನ ತಂದೆ ರಾಮಕನೈ ಘೋಷಾಲರು, ಪ್ರಖ್ಯಾತ ವಕೀಲರು ಮತ್ತು ತಾಂತ್ರಿಕ ಭಕ್ತರು. ಸಾಧು ಸಂನ್ಯಾಸಿಗಳಿಗೆ, ಬಡ ವಿದ್ಯಾರ್ಥಿಗಳಿಗೆ ಆಶ್ರಯ ನೀಡುತ್ತಿದ್ದ ದಯಾಳು ಅವರ ಮನೆ  ಸುಮಾರು ಮೂವತ್ತು ಬಡ ವಿದ್ಯಾರ್ಥಿಗಳಿಗೆ ಅನ್ನ, ಆಶ್ರಯ ಕೊಡುತ್ತಿತ್ತು. ಅವರು ವಕೀಲಿ ವೃತ್ತಿ ನಿಲ್ಲಿಸಿ ಡೆಪ್ಯುಟಿ ಕಲೆಕ್ಟರ್ ಆದಾಗ ಅವರ ವರಮಾನ ತಗ್ಗಿ ಧಾರ್ಮಿಕ ಕಾರ್ಯಗಳು ಸೀಮಿತ ಗೊಂಡವು. ಇಂದಿಗೂ ಬಾರಾಸತ್‌ನಲ್ಲಿ ಅವರ ದಯಾಳು ತನವು ಮನೆಮಾತಾಗಿದೆ. ತಮ್ಮ ವ್ಯವಹಾರ, ಏಳಿಗೆಗಳಲ್ಲಿ ಅವರು ದೇವರು ಮತ್ತು ಆಧ್ಯಾತ್ಮವನ್ನು ಮರೆಯಲಿಲ್ಲ. ದೇವರನ್ನು ಶಕ್ತಿಯೆಂಬುದಾಗಿ ನಂಬಿ ಶಾಕ್ತ ತಂತ್ರವನ್ನು ಶಿಸ್ತಿನಿಂದ ಅಭ್ಯಾಸ ಮಾಡಿದ್ದರು.

ತಾರಕನಾಥನ ತಾಯಿ ವಾಮಸುಂದರಿ ದೇವಿ, ಸರಳ ಸ್ವಭಾವದ, ಧರ್ಮಶ್ರದ್ಧೆಯುಳ್ಳ ಕುಲೀನ ಮಹಿಳೆಯಾಗಿದ್ದರು. ಮನೆಯಲ್ಲಿ ಸಾಕಷ್ಟು ಮಂದಿ ಆಳುಗಳಿದ್ದರೂ ಆಕೆಯೇ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದವರಿಗೆಲ್ಲಾ ಅಡುಗೆ ತಯಾರಿಸುತ್ತಿದ್ದರು ಮತ್ತು ಮನೆಕೆಲಸಗಳನ್ನೆಲ್ಲ ನಿರ್ವಹಿಸುತ್ತಿದ್ದರು. ಆಶ್ರಿತರು ತನ್ನ ಮಕ್ಕಳೆಂದೂ, ಅವರಿಗೆ ಅನ್ನ ನೀಡುವುದು ತನ್ನ ಪವಿತ್ರ ಕರ್ತವ್ಯವೆಂದೂ ಹೇಳುತ್ತಿದ್ದರು. ಆಕೆಯ ಮೊದಲನೆಯ ಮಗು ಅಕಾಲ ಮರಣ ಹೊಂದಿದಾಗ ಭಗ್ನಹೃದಯಿಯಾಗಿ ಕಲ್ಕತ್ತ ಸಮೀಪ ದಲ್ಲಿರುವ ತಾರಕೇಶ್ವರ ದೇವಾಲಯಕ್ಕೆ ಹೋಗಿ ಭಕ್ತಿ, ಶ್ರದ್ಧೆಗಳಿಂದ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಕೆಲವು ಕಾಲದ ನಂತರ ಜನಿಸಿದ ಮಗನಿಗೆ ತಾರಾಕನಾಥ ನೆಂದು ಹೆಸರಿಟ್ಟರು. ತಾರಕೇಶ್ವರನ ಅಂದರೆ ಶಿವನ ಗುಣಗಳು ಇವನಲ್ಲಿ ಕಂಡಿದ್ದು, ಮುಂದೆ ಸ್ವಾಮಿ ವಿವೇಕಾನಂದರು ಇವನಿಗೆ ನೀಡಿದ ಆಶ್ರಮದ ಹೆಸರು ಸ್ವಾಮಿ ಶಿವಾನಂದ. ತಾರಕನಾಥನಿಗೆ ಒಂಭತ್ತು ವರ್ಷ ಗಳಾಗಿದ್ದಾಗ ಅವನ ತಾಯಿ ತೀರಿಹೋದರ.

ತಂದೆಯಿಂದ ಪರಮಹಂಸರಿಗೆ ನೆರವು

ರಾಮಕನೈ ಘೋಷಾಲರು ವಕೀಲಿ ವೃತ್ತಿಯಲ್ಲಿ ದ್ದಾಗ ರಾಣಿ  ರಾಸಮಣಿಯ (ದಕ್ಷಿಣೇಶ್ವರ ಕಾಳಿಕಾ ದೇವಾಲಯದ ಸ್ಥಾಪಕರು) ವ್ಯವಹಾರ ಕಾರ್ಯಗಳಿಗಾಗಿ ಬರುತ್ತಿದ್ದರು. ಆಗ ಅವರಿಗೆ  ಶ್ರೀ ರಾಮಕೃಷ್ಣ ಪರಮ ಹಂಸರ ಪರಿಚಯವಾಗಿತ್ತು. ಉಗ್ರ ಆಧ್ಯಾತ್ಮಿಕ ಸಾಧನೆಯ ಪರಿಣಾಮವಾಗಿಶ್ರೀ ರಾಮಕೃಷ್ಣರಿಗೆ ದೇಹವೆಲ್ಲ ಉರಿಯುವ ತೊಂದರೆ ಇತ್ತು. ಯಾವ ಚಿಕಿತ್ಸೆಗೂ ಆ ಉರಿ ಇಳಿಯದು. ಘೋಷಾಲರ ಸೂಚನೆಯಂತೆ ಶ್ರೀ ರಾಮ ಕೃಷ್ಣರು ಇಷ್ಟದೇವತೆಯ ನಾಮ ಮಂತ್ರವುಳ್ಳ ಒಂದು ಕವಚ ವನ್ನು ಧರಿಸಿದ ಮೇಲೆ ಮೈ ಉರಿ ಮಾಯವಾಯಿತು.

ಬ್ರಹ್ಮಸಮಾಜದ ಪ್ರಭಾವ

ತಾರಕನನ್ನು ತಂದೆ, ತಾಯಿ ಪ್ರೀತಿ ಎಚ್ಚರಿಕೆಗಳಿಂದ ಸಾಕಿದರು. ಬಾಲ್ಯದಿಂದಲೇ ನಿರ್ಭೀತ, ಉದಾತ್ತ ಧ್ಯೇಯಗಳ ಬಿಚ್ಚುನುಡಿ ಆಡುತ್ತಿದ್ದ. ಪ್ರತಿಭಾ ಶಾಲಿಯಾದರೂ ಶಾಲೆಯ ಪಾಠಗಳಿಗೆ ಗಮನ ಕೊಡುತ್ತಿರಲಿಲ್ಲ. ಆಧ್ಯಾತ್ಮಿಕ ಬದುಕಿನ ಸೆಳೆತಕ್ಕೆ ಒಳಗಾಗಿದ್ದ. ಆಲೋಚನೆ, ಧ್ಯಾನ, ಸತ್ಯವನ್ನು ಕಾಣುವ ಹಸಿವು ಅವನನ್ನು ಕೂಡಿದವು. ನಿರ್ಜನ ಸ್ಥಳ ಸೇರಿ ಧ್ಯಾನ ಮಗ್ನನಾಗುತ್ತಿದ್ದ.

ತಾರಕ ಮುಂದಿನ ವಿದ್ಯಾಭ್ಯಾಸಕ್ಕೆ ಕಲ್ಕತ್ತ ಸೇರಿದ. ಅವನಿಗೆ ಆಧ್ಯಾತ್ಮಿಕದ ಹಸಿವು ಅಧಿಕವಾಗಿತ್ತು. ಅಂದಿನ ಬಂಗಾಳಿ ತರುಣರು ಸತ್ಯಾನ್ವೇಷಣೆಗೆ ಬ್ರಹ್ಮ ಸಮಾಜದ ಪ್ರಭಾವಕ್ಕೆ ಒಳಗಾಗುವುದು ಸಾಮಾನ್ಯ ಸಂಗತಿ. ಅಂತೆಯೇ ತಾರಕನು ಬ್ರಹ್ಮಸಮಾಜದ ಸದಸ್ಯನಾದ. ಆ ಸಂಸ್ಥೆಯ ಮುಖಂಡ ಕೇಶವಚಂದ್ರ ಸೇನರ ಪ್ರಭಾವಶಾಲಿ ಬೋಧನೆ ಗಳು ಅವನ ಮೇಲೆ ಪರಿಣಾಮ ಉಂಟು ಮಾಡಿದವು. ಆದರೂ ತೃಪ್ತಿಯಿರಲಿಲ್ಲ. ಅವನಿಗೆ ದೇವರನ್ನು ಅರಿಯಬೇಕೆಂಬ ಹಂಬಲದೊಂದಿಗೆ ಆಧ್ಯಾತ್ಮಿಕ ಉನ್ನತ ಭಾವನೆಗಳನ್ನು ಬದುಕಿನಲ್ಲಿ ಸೂಚಿಸಿ ಬಲ್ಲ ಗುರುವಿನ ಅಗತ್ಯವೂ ಕಾಣಿಸಿತು.

ತಾರಕನು ಕಾಲೇಜು ಸೇರದೆ ಸಂಸಾರದ ನಿರ್ವಹಣೆಗೆ ಸಹಾಯಕನಾಗಬೇಕಾಗಿ ಬಂತು. ಅದಕ್ಕೆ ಕಾರಣ, ವಿಪುಲವಾಗಿದ್ದ ತಂದೆಯ ಆದಾಯವು ಅವರ ಔದಾರ್ಯ ಗುಣಗಳಿಂದಾಗಿ ಬಹುಬೇಗ ಕರಗಿ ಹೋಗಿತ್ತು. ಅದಕ್ಕಾಗಿ ದೆಹಲಿಗೆ ಹೋಗಿ ಒಂದು ನೌಕರಿ ಹಿಡಿದ. ಅಲ್ಲಿ ಧಾರ್ಮಿಕ ವಿಷಯಗಳಲ್ಲಿ ಆಸಕ್ತನಾದ  ಪ್ರಸನ್ನ ಎಂಬುವವನ ಸ್ನೇಹ ಲಾಭವಾಯಿತು. ಇಬ್ಬರೂ ಗಂಟೆ ಗಟ್ಟಲೆ ಧಾರ್ಮಿಕ ಸಂಗತಿಗಳನ್ನು ಚರ್ಚಿಸುತ್ತಿದ್ದರು. ಒಮ್ಮೆ ಸಮಾಧಿಯ ವಿಷಯ ಚರ್ಚೆಗೆ ಬಂತು. ಮನುಷ್ಯನು ದೇವರೊಂದಿಗೆ ಐಕ್ಯಗೊಳ್ಳುವ ಧ್ಯಾನ ಮಗ್ನತೆಯು ಬಹು ಕಷ್ಟದ ಸಾಧನೆಯೆಂದೂ, ಅದು ಶ್ರೀ ರಾಮಕೃಷ್ಣ ಪರಮಹಂಸರೆಂಬುವವರಿಗೆ ಮಾತ್ರ ಲಭ್ಯವಾಗಿರುವು ದೆಂದೂ ಸ್ನೇಹಿತ ತಿಳಿಸಿದ. ಕಲ್ಕತ್ತೆಗೆ ಹಿಂತಿರುಗಿದ ಮೇಲೆ ಆ ಗುರುವನ್ನು ಕಾಣಬೇಕೆಂಬ ಹಂಬಲ ತಾರಕನಿಗೆ ಉಂಟಾಯಿತು.

ರಾಮಕೃಷ್ಣರ ದರ್ಶನ

ಕಲ್ಕತ್ತೆಗೆ  ಹಿಂತಿರುಗಿದ ಮೇಲೆ ಮಷಿನಾನ್ ಮೆಕೆಂಜಿ  ಅಂಡ್ ಕಂಪನಿ ಎಂಬ ಸಂಸ್ಥೆಯಲ್ಲಿ ಕೆಲಸ ದೊರೆಯಿತು. ಆದರೂ ಬ್ರಹ್ಮಸಮಾಜಕ್ಕೆ ತಪ್ಪದೆ ಹೋಗುತ್ತಿದ್ದ. ೧೮೮೦ ರ ಆ ಸಮಯದಲ್ಲಿ  ಶ್ರೀ ರಾಮಕೃಷ್ಣರು ತಮ್ಮ ಶಿಷ್ಯರಲ್ಲೊಬ್ಬರಾದ ರಾಮಚಂದ್ರದತ್ತ ಎಂಬುವರ ಮನೆಗೆ ಬರುತ್ತಾರೆಂಬುದನ್ನು ಯಾರಿಂದಲೋ ಕೇಳಿ ಅಲ್ಲಿಗೆ ಹೋದ. ತಾರಕನಾಥನ ಭವಿಷ್ಯ ಜೀವನವನ್ನು ನಿರ್ಧರಿಸಿದ ಪವಿತ್ರ ಸಂಜೆ ಅದು. ಬಹು ದಿನಗಳಿಂದ ನೋಡಲು ಬಯಸಿದ್ದ ಸಮಾಧಿ ಸ್ಥಿತಿಯನ್ನು  ಶ್ರೀ ರಾಮಕೃಷ್ಣರಲ್ಲಿ ಕಂಡು ಮಾರುಹೋದ. ಆ ಸ್ಥಿತಿಯಿಂದ ಹೊರಬಂದ ಮೇಲೆ ಅವರ ಉಜ್ವಲವಾದ ಅರ್ಧ ಬಾಹ್ಯಸ್ಥಿತಿಯನ್ನೂ, ಅದ್ಭುತ ಸಂವಾದ ಸರಣಿ ಯನ್ನೂ ಗಮನಿಸಿ, ಅವರ ದಿವ್ಯ ಆಕರ್ಷಣೆಗೆ ಸಿಲುಕಿ ಮುಂದಿನ ಶನಿವಾರ ದಕ್ಷಿಣೇಶ್ವರಕ್ಕೆ ಹೋಗಿ ಅವರನ್ನು ಕಾಣಲು ನಿಶ್ಚಯಿಸಿದ.

ಶನಿವಾರ ಸಂಜೆ ತಪ್ಪದೆ ದಕ್ಷಿಣೇಶ್ವರಕ್ಕೆ ಹೋದ. ದೇವಾಲಯದ ಅಂಗಳದಲ್ಲಿ  ಶ್ರೀ ರಾಮಕೃಷ್ಣರಿಗಾಗಿ ಹುಡುಕಿ ಕೊನೆಗೆ ಕೊಠಡಿಯಲ್ಲಿ ಶಾಂತರಾಗಿ ಕುಳಿತ ಅವರನ್ನು ನೋಡಿದಾಗ ತಾರಕನಾಥನಿಗೆ ತನ್ನ ಜೀವನದ ಗುರಿಯನ್ನು ಮುಟ್ಟಿಸಬಲ್ಲ ಪರಮಾಪ್ತನನ್ನು ನೋಡಿ ದಂತಾಗಿ ಭಾವ ಪರವಶನಾದ, ಸಂಪೂರ್ಣ ಶರಣಾಗತ ನಾದ, ಸಾಕ್ಷಾತ್ ಆದಿಶಕ್ತಿಯನ್ನೇ ಕಂಡಂತಾಯಿತು. ಶ್ರೀ ರಾಮಕೃಷ್ಣರು ಅವನನ್ನು ನೋಡಿದೊಡನೆಯೇ ಅವನು ಆಧ್ಯಾತ್ಮಿಕ ಜೀವನಕ್ಕೆ ಮೀಸಲಾದ ಜೀವಿ ಎಂದು ಅರಿತರು.

ತಂದೆಗೆ ಅನುಗ್ರಹ

ಶ್ರೀರಾಮಕೃಷ್ಣರು ಒಂದು ದಿನ ತಾರಕನಾಥನಿಗೆ ಹೇಳಿದರು, ‘ನನಗೆ ಸಾಧಾರಣವಾಗಿ ಇಲ್ಲಿಗೆ ಬರುವವರ ಮನೆಯ ವಿಷಯ ಕೇಳುವ ರೂಢಿ ಇಲ್ಲ. ಅವರ ಹೃದಯ ದಲ್ಲಿ ನೋಡಿ ಭಾವನೆಗಳನ್ನು ಅರ್ಥಮಾಡಿಕೊಳ್ಳುವೆ. ಆದರೆ ನಿನ್ನನ್ನು ನೋಡಿದ ಕೂಡಲೇ ನೀನು ಇಲ್ಲಿಗೆ ಸೇರಿದವನೆಂದು ತಿಳಿಯಿತು. ನಿನ್ನ ತಂದೆಯ ವಿಷಯ, ಮನೆ ವಿಷಯ ತಿಳಿಯಬೇಕೆಂಬ ಇಚ್ಛೆ ಇದೆ.’

ತಾರಕನಾಥ ತನ್ನ ತಂದೆ ಮತ್ತು ಮನೆಯ ವಿಷಯ ಎಲ್ಲಾ ತಿಳಿಸಿದ. ಹಿಂದೆ ತಮ್ಮ ದೇಹ ಉರಿಯುತ್ತಿದ್ದಾಗ ಚಿಕಿತ್ಸೆ ತಿಳಿಸಿದ ರಾಮಕನೈ ಘೋಷಾಲರೇ ತಾರಕನಾಥನ ತಂದೆ ಎಂದು ತಿಳಿದಾಗ  ಶ್ರೀರಾಮಕೃಷ್ಣರಿಗೆ ಆಶ್ಚರ್ಯ ಮತ್ತು ಸಂತೋಷ ಉಂಟಾಯಿತು. ’ನಿಮ್ಮ ತಂದೆಯನ್ನು ನೋಡಬೇಕು. ಜಾಗ್ರತೆ ಬರಲು ಹೇಳು’ ಎಂದರು. ರಾಮಕನೈ ಘೋಷಾಲರು ದಕ್ಷಿಣೇಶ್ವರಕ್ಕೆ ಬಂದರು.  ಶ್ರೀರಾಮ ಕೃಷ್ಣರು ತಮ್ಮ ಪಾದಗಳನ್ನು ಆಶೀರ್ವಾದ ಪೂರ್ವಕವಾಗಿ ಅವರ ತಲೆಯ ಮೇಲಿಟ್ಟು ಸಮಾಧಿಮಗ್ನರಾದರು. ರಾಮಕನೈ ಘೋಷಾಲರು ಅವರ ಪಾದಗಳ ರೋಮಾಂಚ ಕಾರಿ ಸ್ಪರ್ಶದಿಂದ ಆನಂದಬಾಷ್ಪ ಸುರಿಸಿದರು.

ಗುರುವಿನ ಪರಿವಾರದಲ್ಲಿ

ತಾರಕನಾಥನ ನಾಲ್ಕನೆಯ ಭೇಟಿಯಲ್ಲಿ ಗುರು ಅವನಿಗೆ ತಮ್ಮದೇ ಆದ ರೀತಿಯಲ್ಲಿ ಆಧ್ಯಾತ್ಮದ ಪ್ರಾರಂಭಿಕ ಉಪದೇಶ ನೀಡಿದರು. ಅವನನ್ನು ಒಂದು ಪಕ್ಕಕ್ಕೆ ಕರೆದು ಅವನ ನಾಲಗೆಯ ಮೇಲೆ ಬೆರಳಿನಿಂದ ಏನೋ ಬರೆದರು. ಪರಿಣಾಮ ಅದ್ಭುತವಾಗಿತ್ತು. ಅವನ ಕಣ್ಣುಗಳ ಮುಂದೆಯೇ ಇಂದ್ರಿಯ ಜಗತ್ತು ಕರಗಿ ಹೋಯಿತು. ಮನಸ್ಸು ಅತ್ಯಂತ ಅಂತರ್ಮುಖಿಯಾಯಿತು. ತನ್ನ ವ್ಯಕ್ತಿತ್ವವೆಲ್ಲ ಭಾವ ಸಮಾಧಿಯಲ್ಲಿ ಕರಗಿ ಹೋದಂತೆ ಅನುಭವವಾಯಿತು.

ಶ್ರೀರಾಮಕೃಷ್ಣರ ಸಂಗದಿಂದ ತಾರಕನಾಥನ ಧಾರ್ಮಿಕ ಹಸಿವು ಉತ್ಕಟವಾಗತೊಡಗಿತು. ಆಂತರಿಕ ಪ್ರಪಂಚದಲ್ಲಿ ಇಣಿಕಿದವನಿಗೆ ಅದರಲ್ಲಿ ಆಳವಾಗಿ ಇಳಿಯುವ ಇಚ್ಛೆ ಉಂಟಾಯಿತು. ಪ್ರಪಂಚದ ಆಕರ್ಷಣೆಗಳಿಂದ ದೂರವಾದ. ಧ್ಯಾನದಲ್ಲಿ ಮಗ್ನ ನಾಗಿರುತ್ತಿದ್ದ. ದೇಹ, ಮನಸ್ಸು, ಆತ್ಮ ಗುರುವಿನ ಪಾದಗಳಿಗೆ ಅರ್ಪಿತವಾದವು.

ಶ್ರೀರಾಮಕೃಷ್ಣರು ದಕ್ಷಿಣೇಶ್ವರದಿಂದ ಆಗಾಗ್ಗೆ ಕಲ್ಕತ್ತೆಗೆ ಬರುತ್ತಿದ್ದರು. ಅವರು ಬಹುಮಟ್ಟಿಗೆ ಉಳಿಯುತ್ತಿದ್ದುದು ರಾಮಚಂದ್ರ ದತ್ತ ಎಂಬ ಶಿಷ್ಯರ ಮನೆಯಲಿ. ಅದೇ ಮನೆಯಲ್ಲಿಯೇ ತಾರಕನಾಥನು ಮೊದಲು ಶ್ರೀ ರಾಮಕೃಷ್ಣರನ್ನು ನೋಡಿದ್ದುದು. ರಾಮಚಂದ್ರದತ್ತರ ಸೂಚನೆಯಂತೆ ತಾರಕನಾಥನು ಅವರ ಮನೆಗೆ ಸಮೀಪದಲ್ಲಿದ್ದ ಒಂದು ಸಣ್ಣ ಕೊಠಡಿಗೆ ತನ್ನ ವಾಸ ಬದಲಾಯಿಸಿದ. ಅದರಿಂದ ಅವನಿಗೆ ಗುರುವಿನ ಮತ್ತು ಅವರ ಶಿಷ್ಯರ ಸಂಗದಲ್ಲಿ ಮತ್ತು ಚರ್ಚೆಗಳಲ್ಲಿ ಭಾಗವಹಿಸಲು ಅನುಕೂಲವಾಯಿತು. ಆ ದಿನಗಳಲ್ಲಿ ಅವನಿಗೆ ಆಹಾರ, ಬಟ್ಟೆಗಳ ಮೇಲೆ ಗಮನವಿರಲಿಲ್ಲ. ಎಷ್ಟೋ ದಿನಗಳು ಒಂದೇ ಹೊತ್ತು ಊಟ. ಹೆಚ್ಚು ರಾತ್ರಿಗಳನ್ನು ನಗರದ ಬೀಡನ್ ಚೌಕ ಮತ್ತು ಪಾರ್ಕುಗಳಲ್ಲಿ ಧ್ಯಾನದಲ್ಲಿ ಕುಳಿತು ಕಳೆಯುತ್ತಿದ್ದ. ಕೆಲವು ಸಾರಿ ಕಾಳಿಘಾಟಿನಲ್ಲಿ ದಿನಕಳೆದಂತೆ ಸ್ಮಶಾನದಲ್ಲಿ ತಪಶ್ಚರ್ಯಗಳ ಅಭ್ಯಾಸ ಸಾಗುತ್ತಿತ್ತು.

ದಿನ ಕಳೆದಂತೆ ತಾರಕನಾಥ ಕಲ್ಕತ್ತ ನಗರದ ಜನಸಂದಣಿ ವಾಹನಗಳ ಗಲಾಟೆಯಿಂದ ದೂರವಾಗಿರಲು ಇಚ್ಛಿಸಿ ಕಾಂಕುರಗಾಚೆ ಎಂಬಲ್ಲಿದ್ದ  ರಾಮಚಂದ್ರರ ತೋಟದ ಮನೆಗೆ ಬಂದು ವಾಸಿಸತೊಡಗಿದ. ಭಿಕ್ಷೆಯಿಂದ ದೊರೆಯುತ್ತಿದ್ದ ಅನ್ನ ಬ್ರೆಡ್, ಬಾಳೆಹಣ್ಣುಗಳಿಂದ ಜೀವನ ಸಾಗುತ್ತಿತ್ತು.

ಮದುವೆಯಾದ ಸಂನ್ಯಾಸಿ

ತಾರಕನಾಥನು ವಿವಾಹ ಬಂಧನಕ್ಕೆ ಒಳಗಾದು ದೊಂದು ವಿಚಿತ್ರ ಪ್ರಸಂಗ. ತಾರಕ ಮದುವೆಯಾಗದಿದ್ದಲ್ಲಿ ಅವನ ತಂಗಿಯ ಮದುವೆ ನಿಂತು ಹೋಗುವ ಸಂಭವವಿತ್ತು. ಹೀಗಾಗಿ ತಾರಕನು ನಿತ್ಯಕಾಳಿ ದೇವಿ ಎಂಬಾಕೆಯನ್ನು ಮದುವೆಯಾಗಬೇಕಾಗಿ ಬಂತು. ಮದುವೆಯಾದರೂ ಹೆಂಡತಿಯೊಂದಿಗೆ ಪ್ರಾಪಂಚಿಕ ಜೀವನ ನಡೆಸಲು ಇಚ್ಛಿಸದೆ ತನ್ನ ವೈರಾಗ್ಯಾ ಭಿಲಾಷೆಯನ್ನು ಗುರುವಿಗೆ ನಿವೇದಿಸಿಕೊಂಡ. ಆಗ  ಶ್ರೀರಾಮಕೃಷ್ಣರು, ‘ಅಂಜಬೇಡ. ನಿನ್ನ ಹೆಂಡತಿ ಬದುಕಿರುವವರೆಗೆ ನೀನು ಅವಳನ್ನು ನೋಡಿ ಕೊಳ್ಳಬೇಕು. ಜಗನ್ಮಯಿ ಎಲ್ಲವನ್ನೂ ನೋಡಿಕೊಳ್ಳುತ್ತಾಳೆ’ ಎಂದು ಧೈರ್ಯ ಕೊಟ್ಟರು.

ವಿವಾಹಿತನ ಮನಸ್ಸೆಲ್ಲವೂ ದಕ್ಷಿಣೇಶ್ವರದ ಗುರುದೇವನಿಗೆ ಸಮರ್ಪಿತವಾಗಿದ್ದುದರಿಂದ ಪತಿ ಪತ್ನಿಯರ ಲೌಕಿಕ ಸಂಬಂಧದ ಕಡೆಗೆ ಅದು ಒಲಿಯಲಿಲ್ಲ. ತಾರಕ ಮನೆಯಲ್ಲಿದ್ದಾಗ ರಾತ್ರಿಯನ್ನೆಲ್ಲಾ ದೇವರ ಧ್ಯಾನದಲ್ಲಿ ಕಳೆಯುತ್ತಿದ್ದ. ಪತಿಯ ವಿಲಕ್ಷಣ ವರ್ತನೆಯಿಂದ ಹೆಂಡತಿಗೆ ತುಂಬ ದುಃಖವಾಗುತ್ತಿತ್ತು. ಅದರಿಂದ ತಾರಕನಿಗೂ ಅತೀವ ಸಂಕಟ. ಒಂದು ದಿನ  ಈ ವಿಚಾರವನ್ನು ಗುರುವಿನೊಂದಿಗೆ ಹೇಳಿ, ‘ನನ್ನ ಲೌಕಿಕ ಸಂಬಂಧ ಹರಿಯುವಂತೆ ಕೃಪೆ ಮಾಡಬೇಕು’ ಎಂದು ಪ್ರಾರ್ಥಿಸಿದ. ಶ್ರೀ ರಾಮಕೃಷ್ಣರು ಅವನಿಗೆ ಒಂದು ವ್ರತವನ್ನು ಉಪದೇಶ ಮಾಡಿ, ‘ಅಂಜಬೇಡ. ನನ್ನನ್ನು ಧ್ಯಾನಿಸುತ್ತಾ ವ್ರತವನ್ನು ಆಚರಿಸು. ನಿನ್ನ ವೈರಾಗ್ಯಬುದ್ಧಿ ಇನ್ನೂ ಪ್ರಜ್ವಲವಾಗುವುದನ್ನು ನೀನೇ ಕಾಣುವೆ’ ಎಂಬುದಾಗಿ ಧೈರ‍್ಯ, ಆಶ್ವಾಸನೆ ನೀಡಿದರು.

ಪರಮಹಂಸರ ಉಪದೇಶದಂತೆ ತಾರಕನು ವ್ರತ ಆಚರಿಸಿ ಯಾವ ಅಪಾಯ, ಸೆಳೆತಗಳಿಗೂ ಒಳಗಾಗದಿದ್ದುದು ಒಂದು ಮಹತ್ತರ ಸಂಗತಿ. ಮುಂದೆ ಒಮ್ಮೆ  ಶ್ರೀರಾಮಕೃಷ್ಣರ ಶಿಷ್ಯರಾದ ಬಲರಾಮ ಬೋಸ್ ಎಂಬುವರ ಮನೆಯಲ್ಲಿ ಶಿಷ್ಯರು ವಿವಾಹಜೀವನದ ವೈರಾಗ್ಯದ ಬಗೆಗೆ ಚರ್ಚೆ ಮಾಡುತ್ತಿದ್ದಾಗ ತಾರಕನ ವಿಷಯವು ಪ್ರಾಸಂಗಿಕವಾಗಿ ಬೆಳಕಿಗೆ ಬಂತು. ಅದನ್ನು ಕೇಳಿದ ಸ್ವಾಮಿ ವಿವೇಕಾನಂದರು ಅತ್ಯಂತ ವಿಸ್ಮಿತರಾದರು. ತಾರಕನಿಗೆ, ‘ಅದೇನು ಅತ್ಯಲ್ಪ ವಿಷಯವೆ? ಅದು ಮಹಾಪುರುಷನ ಲಕ್ಷಣ. ನೀನು ನಿಜವಾಗಿಯೂ ಮಹಾಪುರುಷ’ ಎಂದರು.

ಸಂನ್ಯಾಸ ಸ್ವೀಕಾರ

ವಿಧಿವಿಲಾಸದಂತೆ ೧೮೮೩ ರಲ್ಲಿ ತಾರಕನ ಹೆಂಡತಿ ನಿತ್ಯಕಾಳಿ ದೇವಿ ಅಲ್ಪ ದಿನಗಳ ಖಾಯಿಲೆಯಿಂದ ತೀರಿ ಹೋದಳು. ತರುಣ ಜೀವವೊಂದರ ಸಾವಿನಿಂದ ಅವನಿಗೆ ದುಃಖವಾಯಿತು. ಆಕೆಯ ಆತ್ಮಕ್ಕೆ ಚಿರಶಾಂತಿಗಾಗಿ ಪ್ರಾರ್ಥಿಸಿ ಅಂತಿಮ ಕ್ರಿಯೆಗಳನ್ನು ನೆರವೇರಿಸಿದ ಮೇಲೆ ಅವನಿಗೂ ಲೋಕಕ್ಕೂ ಇದ್ದ ಏಕಮಾತ್ರ ಬಂಧನವು ಹರಿದು ಹೋಯಿತು. ಶ್ರೀರಾಮಕೃಷ್ಣರು ದೇಹಧಾರಿ ಯಾಗಿದ್ದಾಗಲೇ ಸಂನ್ಯಾಸ ಸ್ವೀಕರಿಸುವುದಾಗಿ ನಿಶ್ಚಯಿಸಿದ ತಾರಕನಾಥ ತಂದೆಯ ಅನುಮತಿ ಪಡೆಯಲು ಹೋದ. ಮಗನ ನಿಶ್ಚಯವನ್ನು ಕೇಳಿ ಎಲ್ಲಾ ತಂದೆಯರಂತೆ ರಾಮಕನೈ ಘೋಷಾಲರಿಗೆ ದುಃಖ ಉಕ್ಕಿಬಂತು. ಸ್ವಲ್ಪಹೊತ್ತು ಚಿಂತಾಮಗ್ನರಾಗಿದ್ದು ತರುವಾಯ ಕುಳಿತ ಪೀಠದಿಂದ ಎದ್ದು ಮಗನಿಗೆ ತಮ್ಮನ್ನು ಹಿಂಬಾಲಿಸುವಂತೆ ಇಂಗಿತ ಮಾಡಿ, ಪಕ್ಕದಲ್ಲಿದ್ದ ದೇವರ ಮನೆಗೆ ಹೋದರು. ಮನೆದೇವರಿಗೆ ಸಾಷ್ಟಾಂಗ ಪ್ರಣಾಮ ಮಾಡಿ ಮಗನಿಗೂ ಹಾಗೆಯೇ ಮಾಡುವಂತೆ ಹೇಳಿದರು. ತಾರಕನಾಥ ಭಕ್ತಿಯಿಂದ ಅಡ್ಡ ಬಿದ್ದ. ತಂದೆ ಮಗನ ತಲೆಯ ಮೇಲೆ ಕೈಯಿಟ್ಟು ಅನುಮತಿ ನೀಡುತ್ತಾ ಆಶೀರ್ವಾದ ಮಾಡಿದರು, ‘ನಿನಗೆ ಭಗವತ್ ಸಾಕ್ಷಾತ್ಕಾರವಾಗಲಿ ನನಗೂ ಸಂಸಾರ ತ್ಯಾಗ ಮಾಡಿ ಭಗವಂತನನ್ನು ಸಾಕ್ಷಾತ್ಕರಿಸಿ ಕೊಳ್ಳಬೇಕೆಂಬ ಆಸೆ ಬಲವಾಗಿತ್ತು. ಆದರೆ ಅದು ಫಲಿಸಲಿಲ್ಲ. ನಿನಗಾದರೂ ಅದು ಫಲಿಸಲಿ.’

ತಾರಕನಾಥ ನೇರವಾಗಿ ದಕ್ಷಿಣೇಶ್ವರಕ್ಕೆ ತೆರಳಿ ಮನೆಯಲ್ಲಿ ನಡೆದುದನ್ನೆಲ್ಲಾ ಗುರುವಿಗೆ ವಿವರಿಸಿದ. ಮೊದಲೇ ಅವನಿಂದ ಆ ಮಹತ್ತರ ನಿರ್ಧಾರವನ್ನು ನಿರೀಕ್ಷಿಸಿದ್ದ  ಶ್ರೀರಾಮಕೃಷ್ಣರು ಆನಂದಪಟ್ಟರು.

ನರೇಂದ್ರರೊಡನೆ

೧೮೮೫ ರಲ್ಲಿ  ಶ್ರೀ ರಾಮಕೃಷ್ಣರಿಗೆ ಗಂಟಲಿನ ಅರ್ಬುದ ರೋಗವು ತಲೆದೋರಿತು. ಖಾಯಿಲೆ ಉಲ್ಬಣ ಗೊಂಡಾಗ ಅವರನ್ನು ಕಲ್ಕತ್ತೆಯ ಕಾಸಿಪುರಕ್ಕೆ ವರ್ಗಾಯಿಸಲಾಯಿತು. ತಾರಕನಾಥ ತನ್ನ ಕೆಲಸವನ್ನು ಬಿಟ್ಟು ಸಂಪೂರ್ಣವಾಗಿ ಗುರುವಿನ ಸೇವೆಗೆ ತನ್ನ ಬಾಳನ್ನು ಅರ್ಪಿಸಿ ನರೇಂದ್ರ, ಬಾಬು ರಾಮ, ಶರತ್ ಯೋಗಾನಂದ ಮುಂತಾದವರನ್ನು ಸೇರಿಕೊಂಡ. ಕಾಸಿಪುರದ ಯೋಗೋ ದ್ಯಾನದಲ್ಲಿ  ಶ್ರೀರಾಮಕೃಷ್ಣರು ಅತೀವ ನೋವಿನಿಂದ ನಿಶ್ಶಕ್ತ ರಾಗಿದ್ದರೂ ಮಾನಸಿಕವಾಗಿ ಉತ್ಸಾಹಿಗಳಾಗಿದ್ದರು. ಆಗಾಗ್ಗೆ ಸಮಾಧಿ ಮಗ್ನರಾಗುತ್ತಿದ್ದರು. ಶಿಷ್ಯರ ಆಧ್ಯಾತ್ಮಿಕ ಮನೋಭಾವವು ಮತ್ತಷ್ಟು ವಿಕಾಸ ಗೊಳ್ಳುವಂತೆ ಮಾಡಲು ಅವರಿಗೆ ಪ್ರಪಂಚದ ಇತರ ಧರ್ಮಕೃತಿಗಳನ್ನು ಅಧ್ಯಯನ ಮಾಡಲು ಉತ್ತೇಜಿಸುತ್ತಿದ್ದರು. ಕೆಲವು ಶಿಷ್ಯರು ಬೌದ್ಧಮತದ ಬಗ್ಗೆ ಆಸಕ್ತಿ ವಹಿಸಿ ಚರ್ಚೆ ನಡೆಸುತ್ತಿದ್ದರು. ಬುದ್ಧನ ಮಾನವೀಯ ಅನುಪಂಪ, ತ್ಯಾಗ, ಸತ್ಯವನ್ನು ಅರಸಿ ಹೊರಟುದು ತಾರಕನಾಥ, ನರೇಂದ್ರ ಮತ್ತು ಕಾಳಿ ಇವರನ್ನು ತುಂಬಾ ಸೆಳೆಯಿತು. ಅವರು ಬುದ್ಧನು ಜ್ಞಾನೋದಯ ಪಡೆದ  ಸ್ಥಳವಾದ ಬೋಧಿಗಯೆಗೆ ಭೇಟಿ ನೀಡಲು ನಿಶ್ಚಯಿಸಿದರು. ತಾರಕನೇ ರೈಲಿನ ವೆಚ್ಚ ವಹಿಸಿದ.

ಬುದ್ಧನು ಧ್ಯಾನಮಗ್ನನಾಗಿ ಕುಳಿತ ಬೋಧಿವೃಕ್ಷದ ಕೆಳಗೆ ಮೂವರೂ ಕುಳಿತು ಆವರಣದಿಂದ ಸ್ಫೂರ್ತಿ ಪಡೆದು ಅನೇಕ ದಿನ ಧ್ಯಾನಮಗ್ನರಾದರು. ಒಂದು ಸಂಜೆ ಧ್ಯಾನದಲ್ಲಿದ್ದ ನರೇಂದ್ರನಿಗೆ ಮಹಾನ್ ಬುದ್ಧನು ತಾರಕನಾಥನನ್ನು ಪ್ರವೇಶಿಸಿದುದು ಕಾಣಿಸಿತು. ನರೇಂದ್ರನು ಧ್ಯಾನದಲ್ಲಿದ್ದ ತಾರಕನಾಥನನ್ನು ತಬ್ಬಿಕೊಂಡು ಕಣ್ಣೀರು ಸುರಿಸತೊಡಗಿದ.

ಸ್ವಾಮಿ ಶಿವಾನಂದ

ಶ್ರೀರಾಮಕೃಷ್ಣರು ೧೮೮೬ ರಲ್ಲಿ ಮಹಾಸಮಾಧಿ ಹೊಂದಿದ ಮೇಲೆ ಅವರ ದಿಗ್ದರ್ಶನದಲ್ಲಿ ಸಾಗಿ ಸಂನ್ಯಾಸ ಜೀವನಕ್ಕೆ ಇಳಿಯಲು ಸಿದ್ಧರಾಗುತ್ತಿದ್ದ ತರುಣ ಶಿಷ್ಯರು ಕಲ್ಕತ್ತದ ಬಾರನಾಗೂರ್‌ನಲ್ಲಿ ಸೇರಿದರು. ಮೂರು ತಿಂಗಳಲ್ಲಿ  ಶ್ರೀರಾಮಕೃಷ್ಣ ಆಶ್ರಮವನ್ನು ಸ್ಥಾಪಿಸಿದರು. ತಾರಕನಾಥ ಮತ್ತು ಹಿರಿಯ ಗೋಪಾಲ್ ಆಶ್ರಮವನ್ನು ಮೊದಲು ಸೇರಿದರು. ಇತರರು ಅವರನ್ನು ಹಿಂಬಾಲಿ ಸಿದರು. ಶ್ರೀರಾಮಕೃಷ್ಣರ ಜೀವಿತ ಕಾಲದಲ್ಲಿಯೇ ಅವ ರಿಂದ ಕಾವಿ ತೊಡಿಗೆಗಳನ್ನು ಪಡೆದ ಶಿಷ್ಯರು ವಿಧಿವತ್ತಾಗಿ ಸಂನ್ಯಾಸಿಗಳಾದರು. ಅವರ ಹಿಂದಿನ ಸಾಂಸಾರಿಕ  ಹೆಸರುಗಳು ಹೋಗಿ ಆಶ್ರಮದ ಹೊಸ ಹೆಸರುಗಳು ಅಂಕಿತವಾದವು. ಗುರುವಿನ ತತ್ವ, ಬೋಧನೆಗಳನ್ನು ಸಾರಲು, ವಿವೇಕದ ಸಾಕಾರವಾದ ನರೇಂದ್ರಸ್ವಾಮಿ ವಿವೇಕಾನಂದ ಆದರು. ಬುದ್ಧಿ ಮತ್ತು ಹೃದಯಕ್ಕೆ ಸಂಬಂಧಿಸಿದಂತೆ ಶಿವನ ಗುಣಗಳನ್ನು ಹೊಂದಿದ್ದ ತಾರಕನಾಥನಿಗೆ ವಿವೇಕಾನಂದರು ಸ್ವಾಮಿ ಶಿವಾನಂದ ಎಂಬ ಹೆಸರು ನೀಡಿದರು.

ಆಶ್ರಮಕ್ಕಾಗಿ

ಬಾರನಾಗೂರ್ ಮಠದಲ್ಲಿ ಸ್ವಾಮಿ ಶಿವಾನಂದರು ಹೆಚ್ಚು ಕಾಲವನ್ನು ತಪಸ್ಸಿನಲ್ಲಿ ಕಳೆಯುತ್ತಿದ್ದರು. ಉಳಿದ ಕಾಲವನ್ನು ಅಧ್ಯಯನ, ಚರ್ಚೆ ಮತ್ತು ಸಾಮೂಹಿಕ ಪ್ರಾರ್ಥನೆಯಲ್ಲಿ ವಿನಿಯೋಗಿಸುತ್ತಿದ್ದರು. ಎರಡನೆಯ ಬಾರಿಗೆ ಬೃಂದಾವನಕ್ಕೆ ಭೇಟಿಕೊಟ್ಟು ಒಂದು ತಿಂಗಳ ಕಾಲ ಇದ್ದರು. ಅಲ್ಲಿಂದ ಕಾಶಿಗೆ ಹೋಗಿ ತಿಂಗಳಿಗೂ ಹೆಚ್ಚು ಕಾಲ ಉಳಿದರು. ಬಾರನಾಗೂರಿನ ಹೊಸ ಆಶ್ರಮದ ಕಾರ್ಯ ಭಾರ ನಿರ್ವಹಿಸಲು ಸ್ವಾಮಿ ವಿವೇಕಾನಂದರಿಂದ ಕರೆ ಬಂದಾಗ ಹಿಂತಿರುಗಿದರು. ಎರಡೂವರೆ ವರ್ಷಗಳ ಕಾಲ ತೊಂದರೆಯಲ್ಲಿದ್ದ ಆಶ್ರಮವನ್ನು ಭದ್ರಗೊಳಿಸಿ ಅದರ ಸಮಸ್ಯೆಗಳನ್ನು ಬಗೆಹರಿಸುವ ಹೊಣೆ ಅವರದಾಯಿತು.

ತೀರ್ಥಯಾತ್ರೆ

ಶಿವಾನಂದರಿಗೆ ಸಂಚಾರಿ ಜೀವನ ಬಹಳ ಇಷ್ಟವಾಗಿತ್ತು. ತೀರ್ಥಯಾತ್ರೆಗಳಲ್ಲಿ ದೇವರು ಮತ್ತು ದೇವಾಲಯಗಳ ದರ್ಶನದಿಂದ ದೊರೆಯುವ ಸ್ಫೂರ್ತಿ ಅಪಾರ ಹಾಗೂ ಅಮೋಘ. ೧೮೮೯ ರ ಪ್ರಾರಂಭದಲ್ಲಿ ಅವರು ಮಠದ ಕಾರ್ಯಗಳಿಂದ ದೂರವಾಗಿ ಸಂಚಾರಿ ಜೀವನಕ್ಕಾಗಿ ಹಾತೊರೆದರು. ಹಿಮಾಲಯದ ಎರಡು ಪ್ರಸಿದ್ಧ ಪವಿತ್ರ ಸ್ಥಳಗಳಾದ ಕೇದಾರನಾಥ್ ಮತ್ತು ಬದರಿನಾರಾಯಣ್‌ಗಳಿಗೆ ಹೊರಟರು. ತುಂಬ ದೂರ ನಡೆದು ಹೋಗ ಬೇಕಾಗಿದ್ದ ಪರ್ವತ ಪ್ರಯಾಣವು ಪ್ರಯಾಸಕರವಾಗಿದ್ದರೂ ಅವರಿಗೆ ಅದು ಹರ್ಷದಾಯಕ ಮತ್ತು ಸ್ಫೂರ್ತಿದಾಯಕವಾಗಿತ್ತು. ಅಲ್ಲಿಂದ ಹಿಮಾಲಯದ ಪಟ್ಟಣ ಆಲ್ಮೋರಾಕ್ಕೆ ಬಂದು ಕೆಲವು ಕಾಲ ತಂಗಿದ್ದರು. ಆಧ್ಯಾತ್ಮಿಕದಲ್ಲಿ ಆಸಕ್ತಿಯುಳ್ಳ ಅನೇಕರು ಅವರನ್ನು ಸಂದರ್ಶಿಸಿ ಅವರಿಂದ  ಶ್ರೀರಾಮಕೃಷ್ಣರ ಸಂದೇಶ ಪಡೆದರು.

ಮತ್ತೆ ಆಶ್ರಮದ ಹೊಣೆ

ವರ್ಷದ ಕೊನೆಗೆ ಶಿವಾನಂದರು ಬಾರನಾ ಗೂರ್‌ಗೆ ಹಿಂತಿರುಗಿದರು. ಸ್ವಾಮಿಗಳಾದ ವಿವೇಕಾನಂದ ಮತ್ತು ಬ್ರಹ್ಮಾನಂದರು ಆಶ್ರಮದಲ್ಲಿರಲಿಲ್ಲ. ಆದುದರಿಂದ ಶಿವಾನಂದರು ಅವರ ಕಾರ್ಯಭಾರವನ್ನು ವಹಿಸಿಕೊಳ್ಳ ಬೇಕಾಯಿತು. ಎರಡು ವರ್ಷಗಳ ಕಾಲ ಆಶ್ರಮದ ಕೆಲಸಗಳನ್ನು ಚೆನ್ನಾಗಿ ನಿರ್ವಹಿಸಿ ಮತ್ತೇ ೧೮೯೧ ರಲ್ಲಿ ಯಾತ್ರೆಗೆ ಹೊರಟರು. ಗೋದಾವರಿ ತೀರದ ಪಂಚವಟಿ ಅವರಿಗೆ ಅತ್ಯಂತ ಅಪ್ಯಾಯಮಾನವಾಗಿತ್ತು. ರಾಮಸೀತೆ ಯರಿಗೆ ಪ್ರಿಯವಾದ ಆ ತಾಣದಿಂದ  ಬೊಂಬಾಯಿ, ಪುಣೆಗೆ ಭೇಟಿ ಕೊಟ್ಟು ಮತ್ತೆ ಪಂಚವಟಿಗೆ ಹಿಂತಿರುಗಿ ಅನೇಕ ತಿಂಗಳು ಅಲ್ಲಿ ತಂಗಿದ್ದರು. ಅಲ್ಲಿಂದ ಅಲಹಾಬಾದಿಗೆ ಬಂದರು.

೧೮೯೨ ರಲ್ಲಿ ಬಾರನಾಗೂರ್‌ನಲ್ಲಿದ್ದ ಆಶ್ರಮವನ್ನು ಹೆಚ್ಚು ಉತ್ತಮವೆನಿಸಿದ, ದಕ್ಷಿಣೇಶ್ವರದ ಸಮೀಪದಲ್ಲಿದ್ದ ಆಲಂಬಜಾರ್‌ಗೆ ವರ್ಗಾಯಿಸಲಾಯಿತು. ಹೊಸ ಸ್ಥಳದಲ್ಲಿ ಆಶ್ರಮದ  ಕಾರ್ಯಗಳನ್ನು ನಿರ್ವ ಹಿಸಲು ಶಿವಾನಂದರು ಯಾತ್ರೆಯಿಂದ ಹಿಂತಿರುಗಿದರು. ಆ ವರ್ಷದ ಕೊನೆಗೆ ಮತ್ತೆ ಯಾತ್ರೆ ಮುಂದುವರಿ ಯಿತು.

ವಿವೇಕಾನಂದರ ಕರೆ

೧೮೯೪ ರ ಮಧ್ಯೆ ಉತ್ತರಕಾಶಿಯ ಯಾತ್ರೆಯೂ ಸಾಗಿತು. ಅದೇ ಕಾಲದಲ್ಲಿ ಸ್ವಾಮಿ ವಿವೇಕಾನಂದರು ಅಮೆರಿಕದ ಷಿಕಾಗೋ ನಗರದಲ್ಲಿ ನಡೆದ ಪ್ರಪಂಚ ಧಾರ್ಮಿಕ ಸಮ್ಮೇಳನದಲ್ಲಿ ಸಕ್ರಿಯ ಪಾತ್ರ ವಹಿಸಿದರು. ಹಿಂದೂ ಧರ್ಮದ ಹಿರಿಮೆಯನ್ನು ವಿವರಿಸಿದರು. ಅಮೆರಿಕದ ಇತರ ನಗರಗಳಲ್ಲಿ ಹಿಂದೂ ಧರ್ಮ, ಸಂಸ್ಕೃತಿಗಳ ಮಹತ್ತರ, ಪರಿಣಾಮಕಾರಿ ಪ್ರಸಾರ ಕಾರ್ಯಗಳನ್ನು ನಡೆಸಿದ್ದರು.

ಕೆಲವೇ ದಿನಗಳಲ್ಲಿ ಸ್ವಾಮಿ ವಿವೇಕಾನಂದರು ಅಮೆರಿಕದಿಂದ ಶಿವಾನಂದರಿಗೆ ಹೀಗೆ ಪತ್ರ ಬರೆದರು, ‘ನನಗೆ ಊಟ ಮಾಡಲು, ನಿದ್ರಿಸಲು ಸಮಯ ವಿಲ್ಲವಾಗಿದೆ. ನೂರು ಮಂದಿಯ ಕೆಲಸವನ್ನು ನಾನು ಮಾಡಬೇಕಾಗಿದೆ. ಶಕ್ತಿ ಕುಂದುತ್ತಿದೆ. ಸಹೋದರನೆ, ಯಾವ ರೀತಿಯಲ್ಲಾದರೂ ನಕ್ಷೆಗಳು, ಗೋಳಗಳು, ಮಾಯಾದೀಪಗಳನ್ನು ಹೊಂದಿಸಿಕೊಂಡು ಭಾರತದ ಎಲ್ಲಾ ಹಳ್ಳಿಗಳಲ್ಲೂ ಸಂಚರಿಸು, ಬಡಜನರಿಗೆ ಓದು, ಬರಹ, ಕಲಿಸುವುದನ್ನು ಕೂಡಲೇ ಪ್ರಾರಂಭಿಸು. ದೇಶ ನಮ್ಮ ಕಡೆಗೆ ನೋಡುತ್ತಿದೆ. ಸುಮ್ಮನೆ ಕುಳಿತುಕೊಳ್ಳಲು ನಮಗೆ  ಸಮಯವಿಲ್ಲ.’

ಅದೇ ಪತ್ರದಲ್ಲಿ ಶಿವಾನಂದರಿಗೆ ಮತ್ತೊಂದು ಸಂಗತಿ ತಿಳಿಸಿದ್ದರು. ಸಂಚಾರದಲ್ಲಿರುವ ಸ್ವಾಮಿಗಳಾದ ಬ್ರಹ್ಮಾನಂದ ಮತ್ತು ತುರಿಯಾನಂದರನ್ನು ಹುಡುಕಿ ಅವರನ್ನು ಆಶ್ರಮದ  ಕೆಲಸಗಳಿಗೆ ಕರೆಸಿಕೊಳ್ಳಬೇಕೆಂದು ಕರೆ ನೀಡಿದ್ದರು.

ಸಿಂಹಳದಲ್ಲಿ

ನಾಲ್ಕು ವರ್ಷಗಳು ಯಶಸ್ವಿಯಾಗಿ ಅಧ್ಯಾತ್ಮವನ್ನು ಬೋಧಿಸಿ ಭಾರತದ ಕೀರ್ತಿ ಪತಾಕೆಯನ್ನು ವಿದೇಶಗಳಲ್ಲಿ ಎತ್ತಿ ಹಿಡಿದ ಸ್ವಾಮಿ ವಿವೇಕಾನಂದರು ೧೮೯೭ರಲ್ಲಿ ಭಾರತಕ್ಕೆ ಹಿಂತಿರುಗಿದಾಗ ಸ್ವಾಮಿ ಶಿವಾನಂದರು ಸೋದರ ಶಿಷ್ಯರೊಂದಿಗೆ ಬಂಗಾಳದಿಂದ ಮಧುರೆಗೆ ಬಂದು ಅವರನ್ನು ಎದುರುಗೊಂಡು ಅವರೊಂದಿಗೆ ಕಲ್ಕತ್ತೆಗೆ ಹಿಂತಿರುಗಿದರು. ರಾಮಕೃಷ್ಣ ಮಠದ ಕಾರ್ಯಗಳ ವಿಸ್ತರಣೆಗೆ ವಿಪುಲ ಚರ್ಚೆಗಳು ನಡೆದು ಶಿವಾನಂದರು ಸೇವೆಗೆ ಸಿದ್ಧರಾದರು. ವಿವೇಕಾನಂದರ ಕೋರಿಕೆಯಂತೆ ಶಿವಾನಂದರು ವೇದಾಂತವನ್ನು ಬೋಧಿಸಲು ಮತ್ತು ಮಠದ ಪ್ರಚಾರಗಳಿಗಾಗಿ ಸಿಂಹಳಕ್ಕೆ (ಈಗ ಶ್ರೀಲಂಕಾ) ತೆರಳಿದರು. ಅಲ್ಲಿ ಅವರು ನಡೆಸಿದ ಭಗವದ್ಗೀತೆ ಮತ್ತು ರಾಜಯೋಗ ಪ್ರವಚನಗಳು ಅಧಿಕ ಸಂಖ್ಯೆಯಲ್ಲಿ ಹಿಂದೂ ಗಳನ್ನು ಮತ್ತು ಯೂರೋಪಿಯನ್ನರನ್ನು ಆಕರ್ಷಿಸಿದವು. ಅವರಲ್ಲಿ ಶ್ರೀಮತಿ ಪಿಕೆಟ್ ಎಂಬ ಆಂಗ್ಲೇಯಳೂ ಒಬ್ಬಳು. ಅವಳ ಭಕ್ತಿ, ವೈರಾಗ್ಯವನ್ನು ನೋಡಿ ಶಿವಾನಂದರು ಅವಳಿಗೆ ‘ಹರಿಪ್ರಿಯಾ’ ಎಂಬ ಸಂಸ್ಕೃತ ಹೆಸರು ಕೊಟ್ಟು ಪಾಶ್ಚಾತ್ಯ ಜನರಿಗೆ ವೇದಾಂತ ಬೋಧಿಸಲು ಅವಳನ್ನು ಅಣಿ ಮಾಡಿದರು. ಅನಂತರ ಆಕೆ ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್ ದೇಶಗಳಿಗೆ ಹೋಗಿ ಯಶಸ್ವಿಯಾಗಿ ಭಾರತೀಯ ವಿಚಾರ ರೀತಿಯನ್ನು ಹರಡಿದಳು. ಶಿವಾನಂದರು ರಾಜಧಾನಿ ಕೊಲಂಬೊದಲ್ಲಿ ವಿವೇಕಾನಂದ ಸೊಸೈಟಿ ಸ್ಥಾಪಿಸಿದರು.

೧೮೯೮ ರಲ್ಲಿ ವಿವೇಕಾನಂದರು ಗಂಗಾನದಿಯ ಪಶ್ಚಿಮಕ್ಕೆ, ದಕ್ಷಿಣೇಶ್ವರಕ್ಕೆ ಸಮೀಪವಾಗಿ ಬೇಲೂರು ಎಂಬ ಗ್ರಾಮದಲ್ಲಿ ಜಮೀನು ಮತ್ತು ಮನೆ ಕೊಂಡು ಕೊಂಡರು. ಅನಂತರ ಆಶ್ರಮವು ಬೇಲೂರಿಗೆ ಶಾಶ್ವತವಾಗಿ ವರ್ಗಾಯಿಸಲ್ಪಟ್ಟಿತು.

ಮಾನವ ಸೇವೆ

೧೮೯೯ ರಲ್ಲಿ ಕಲ್ಕತ್ತ ಮತ್ತು ಸುತ್ತಲಿನ ಜಿಲ್ಲೆಗಳಲ್ಲಿ ಪ್ಲೇಗ್ ಉಪದ್ರವವು ತಲೆದೋರಿತು. ಸ್ವಾಮಿ ವಿವೇಕಾನಂದರು ಆಗ ಅಸ್ವಸ್ಥರಾಗಿದ್ದುದರಿಂದ ರೋಗಿಗಳ ಚಿಕಿತ್ಸೆಗಾಗಿ ಶಿವಾನಂದ ಮತ್ತು ಸೋದರಿ ನಿವೇದತಾರನ್ನು ಕಳುಹಿಸಿಕೊಟ್ಟರು. ಶಿವಾನಂದರು ಜೀವದ ಹಂಗು ತೊರೆದು ತಮ್ಮ ಇತರ ಗುರುಭಾಯಿಗಳ ಸಹಾಯದಿಂದ ಚಿಕಿತ್ಸಾ ಶಿಬಿರಗಳನ್ನು ಮತ್ತು ನಿರ್ಮಲೀಕರಣ ಕಾರ್ಯ ಗಳನ್ನು ನಡೆಸಿದರು. ಅನಂತರ ವಿವೇಕಾನಂದರ ಕೋರಿಕೆ ಯಂತೆ ಶಿವಾನಂದರು ಹಣ ಸಂಗ್ರಹ ಮಾಡಿದರು. ಅದೇ ವರ್ಷ ಹಿಮಾಲಯದ ಡಾರ್ಜಲಿಂಗ್‌ನಲ್ಲಿ ಸಂಭವಿಸಿದ ಭೂಪಾತದಿಂದ ನೊಂದವರಿಗೆ ಪರಿಹಾರ ಕಾರ್ಯ ನಡೆಸಲು ಹಣ ಕೂಡಿಸಿದರು.

ಶಿವಾನಂದರು ಅಂತರ್ಮುಖಿಗಳು, ಧ್ಯಾನ ಪ್ರಿಯರು. ಹಿಂದೆಯೇ ತಿಳಿಸಿದಂತೆ ಸಂಚಾರಪ್ರಿಯರು. ಪುನಃ ಹಿಮಾಲಯದ ಕಡೆಗೆ ತಪಸ್ಸಿಗೆ ಹೊರಟರು. ವಿವೇಕಾನಂದರು ಅವರಿಗೆ ಹಿಮಾಲಯದಲ್ಲಿ ಒಂದು ಆಶ್ರಮವನ್ನು ತೆರೆಯಲು ಹೇಳಿದರು. ಆದರೆ ಹಿಮಾಲಯದ ಆಲ್ಮೋರಾದಲ್ಲಿ ಆಶ್ರಮ ಸ್ಥಾಪಿಸಲು ಸಾಧ್ಯವಾದುದು ೧೯೦೯ರಲ್ಲೇ.

೧೯೦೦ರಲ್ಲಿ ವಿವೇಕಾನಂದರೊಡನೆ ಹಿಮಾ ಲಯದ ಮಾಯಾವತಿ ಎಂಬಲ್ಲಿದ್ದ ಅದ್ವೈತ ಆಶ್ರಮಕ್ಕೆ ಹೋದರು. ವಿವೇಕಾನಂದರ ಸ್ಫೂರ್ತಿಯಿಂದಲೇ ಅವರ ಆಂಗ್ಲೇಯ ಶಿಷ್ಯರಾದ ಕ್ಯಾಪ್ಟನ್ ಸೇವಿರ್ ಮತ್ತು ಅವರ ಹೆಂಡತಿ ಅಲ್ಲಿ ಆಶ್ರಮವನ್ನು ಸ್ಥಾಪಿಸಿದ್ದರು.

ಕಾಶಿಯ ಆಶ್ರಮ

ಸ್ವಾಮಿ ವಿವೇಕಾನಂದರ ನಿರ್ಯಾಣಕ್ಕೆ ಮುಂಚೆ ಭಿಂಗದ ರಾಜನು ಅವರಿಗೆ ವೇದಾಂತದ ಪ್ರಚಾರ ಕಾರ್ಯಗಳಿಗೆ  ೫೦೦ರೂಪಾಯಿಗಳನ್ನು ಕೊಟ್ಟ. ಅವರು ಆ ಹಣವನ್ನು ಶಿವಾನಂದರಿಗೆ ಕೊಟ್ಟು ಕಾಶಿಯಲ್ಲಿ ಒಂದು ಆಶ್ರಮವನ್ನು ತೆರೆಯಲು ಹೇಳಿದರು. ಅದರಂತೆ ೧೯೦೨ರಲ್ಲಿ ಶಿವಾನಂದರು ಕಾಶಿಯಲ್ಲಿ ಒಂದು ಆಶ್ರಮ ವನ್ನು ತೆರೆದರು. ಶ್ರೀ ರಾಮಕೃಷ್ಣ ಅದ್ವೈತ ಆಶ್ರಮವೆಂದು ಹೆಸರು ಪಡೆದ ಆ ಪವಿತ್ರ ಸಂಸ್ಥೆಯ ಪ್ರಾರಂಭದ ದಿನವೇ ಸ್ವಾಮಿ ವಿವೇಕಾನಂದರು ದೈವಾಧೀನ ರಾದುದು ಅತ್ಯಂತ ದುಃಖದ ಸಂಗತಿ.

ಶಿವಾನಂದರು ಕಾಶಿ ಆಶ್ರಮದಲ್ಲಿ ಧ್ಯಾನ ಜೀವನದಲ್ಲಿ ತನ್ಮಯರಾಗಿ ೭ ವರ್ಷಗಳನ್ನು ಕಳೆದರು. ಅವರ ಸಂನ್ಯಾಸ ಜೀವನದಲ್ಲಿ ಅದೊಂದು ಮುಖ್ಯವಾದ ಪರೀಕ್ಷಾ ಕಾಲ. ಆ ಸಮಯದಲ್ಲಿ ಆಶ್ರಮದ ಆರ್ಥಿಕ ಸ್ಥಿತಿ ಬಹಳವಾಗಿ ಹದಗೆಟ್ಟಿತ್ತು. ಸರಿಯಾದ ಊಟವಿರಲಿಲ್ಲ. ಎಷ್ಟೋ ದಿನಗಳು ಅವರಿಗೆ ಆಹಾರ ಒಣಬ್ರೆಡ್, ಕೆಲವು ದಿನ ಅದೂ ಇಲ್ಲ. ರಾತ್ರಿ ಮಲಗುವುದು ಬೆಂಚಿನ ಮೇಲೆ. ಚಳಿಗಾಲದಲ್ಲಿ ಹೊದೆಯಲು ಬಟ್ಟೆ ಇರಲಿಲ್ಲ. ಎಷ್ಟೋ ದಿನ ಶಿವಾನಂದರು ಕೊರೆಯುವ ಚಳಿಯಲ್ಲಿ ಹುಲ್ಲಿನ ಮೇಲೆ ಮಲಗುತ್ತಿದ್ದರು. ಮಠಕ್ಕೆ ಅವರೇ ಹಿರಿಯರು. ಆದರೂ ಎಷ್ಟೋ ಬಾರಿ ಬಂದ ಅತಿಥಿಗಳಿಗೆ ತಾವೇ ಉಪಹಾರ, ಟೀ ಸಿದ್ಧ ಮಾಡಿಕೊಡುವರು. ಕಿರಿಯ ವಯಸ್ಸಿನ ಸಂನ್ಯಾಸಿಗಳು ‘ನಾವು ಮಾಡುತ್ತೇವೆ’ ಎಂದರೂ ಬಿಡರು. ಬಾಹ್ಯ ಅನುಕೂಲದ ಕಡೆ ಗಮನ ಹಾಕದೆ ಬೆಳಿಗ್ಗೆ ಮೂರು ಗಂಟೆ ಹೊತ್ತಿಗೆ ಎದ್ದು ಧೂಪ ಹೊತ್ತಿಸಿ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದರು. ಸಂಘದ ಅಧ್ಯಕ್ಷರಾದ ಸ್ವಾಮಿ ಬ್ರಹ್ಮಾನಂದರು ಹಾಸ್ಯಪೂರ್ವಕವಾಗಿ ಅವರಿಗೆ ಕಾಗದ ಬರೆದು, ‘ಕೇವಲ ಧ್ಯಾನ ಮಾಡಿದರೆ ಆಶ್ರಮಕ್ಕೆ ಹಣ ಸಿಗುವುದೇ? ಸ್ವಲ್ಪ ಹಣ ಸಂಗ್ರಹಿಸು’ ಎಂದರು. ಆದರೆ ಹಣ ಸಂಗ್ರಹಿಸಲು ಅವರು ಗಮನ ಹರಿಸಲಿಲ್ಲ.

ಆಶ್ರಮದಲ್ಲೇ ಒಂದು ಕಡೆ ಸಣ್ಣ ಪಾಠಶಾಲೆ ತೆರೆದು ಹುಡುಗರಿಗೆ ಇಂಗ್ಲೀಷ್ ಹೇಳಿಕೊಡುತ್ತಿದ್ದರು. ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸಗಳನ್ನು  ಹಿಂದಿ ಭಾಷೆಗೆ ತರ್ಜುಮೆ ಮಾಡಿ ಹಿಂದಿ ಮಾತನಾಡುವ ಜನರಿಗೆಲ್ಲ ಆ ಪುಸ್ತಕದಲ್ಲಿನ ವೇದಾಂತ ಭಾವನೆಗಳು ಹರಡುವಂತೆ ಮಾಡಿದರು. ೧೯೦೯ರವರೆಗೆ ಕಾಶಿಯಲ್ಲಿದ್ದು ಅನಂತರ ಬೇಲೂರು ಮಠಕ್ಕೆ ಬಂದು ಕೆಲವು ಕಾಲ ಇದ್ದು ೧೯೧೦ರಲ್ಲಿ ಸ್ವಾಮಿಗಳಾದ ತುರಿಯಾನಂದ ಮತ್ತು ಪ್ರೇಮಾನಂದ ರೊಡನೆ ಹಿಮಾಲಯದ ಪ್ರಸಿದ್ಧ ಗುಹೆಯಾದ ಅಮರನಾಥಕ್ಕೆ ಯಾತ್ರೆ ಹೊರಟರು. ಅಲ್ಲಿಂದ ಹಿಂತಿರುಗುವಾಗ ತೀವ್ರ ಆಮಶಂಕೆಯಿಂದ ನರಳಿ ದೀರ್ಘ ಚಿಕಿತ್ಸೆಯ ನಂತರ ಚೇತರಿಸಿಕೊಂಡರು.

೧೯೧೦ರಲ್ಲಿ ಸ್ವಾಮಿ ಶಿವಾನಂದರು ಸಂಘದ ಉಪಾಧ್ಯಕ್ಷರಾಗಿ ಚುನಾಯಿತರಾದರು. ೧೯೧೫ರಲ್ಲಿ ಕೆಲವು ಶಿಷ್ಯರ ಅಹ್ವಾನದಂತೆ ಬಿಹಾರದ ರಾಂಚಿಗೆ ತೆರಳಿ ಅಲ್ಲಿಂದ ಆಲ್ಮೋರಾಕ್ಕೆ ಹೋದರು. ಅನಂತರ ಪೂರ್ವ ಬಂಗಾಳದ ಪ್ರವಾಸ ಕೈಗೊಂಡರು. ೧೯೧೯ ರಲ್ಲಿ ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ತಲೆದೋರಿದ ಕ್ಷಾಮಕ್ಕೆ ಸಿಲುಕಿದ ಸಂತ್ರಸ್ಥರ ನೆರವಿಗಾಗಿ ಸ್ವಾಮಿ ಶಿವಾನಂದರು ಸಂನ್ಯಾಸಿ ಕಾರ್ಯಕರ್ತರನ್ನು ಕಳುಹಿಸಿಕೊಟ್ಟರು.

ಹಿರಿಯ ಹೊಣೆ

೧೯೨೨ರಲ್ಲಿ ಸ್ವಾಮಿ ಬ್ರಹ್ಮಾನಂದರ ನಂತರ ಸ್ವಾಮಿ ಶಿವಾನಂದರು ಶ್ರೀರಾಮಕೃಷ್ಣ ಸಂಸ್ಥೆಯ ಅಧ್ಯಕ್ಷ ರಾದರು. ಇವರೇ ಸಂಸ್ಥೆಯ ಎರಡನೆಯ ಅಧ್ಯಕ್ಷರು. ಅವರು ಜೀವಿತದ ಕೊನೆಯವರೆಗೆ ಆ ಸ್ಥಾನದಲ್ಲಿದ್ದರು. ಅವರು ಅಧ್ಯಕ್ಷರಾದ ಸ್ವಲ್ಪ ಕಾಲದಲ್ಲಿ ಸ್ವಾಮಿ ಪ್ರೇಮಾನಂದ, ಸ್ವಾಮಿ ಅದ್ಭುತಾನಂದ, ಶಾರದಾಮಣಿದೇವಿ, ಸ್ವಾಮಿ ಬ್ರಹ್ಮಾ ನಂದ, ಸ್ವಾಮಿ ತುರಿಯಾನಂದ ಮೊದಲಾದ ಹಿರಿಯರೆಲ್ಲ ನಿಧನರಾದದ್ದು ರಾಮಕೃಷ್ಣ ಸಂಸ್ಥೆಗೆ ದೊಡ್ಡ ಆಘಾತ ವಾಯಿತು. ಆದರೂ ಶಿವಾನಂದರು ಧೈರ್ಯಗೆಡದೆ ಸಂಸ್ಥೆಯ ಕೆಲಸವನ್ನು ಸಾರ್ಥಕವಾಗಿ ವಿಸ್ತರಿಸಿದರು. ಅವರ ಕಾಲದಲ್ಲಿ ಸಂಸ್ಥೆ ಮತ್ತು ಆಶ್ರಮದ ಕಾರ್ಯ ಚಟುವಟಿಕೆ ಗಳು ಬಹಳವಾಗಿ ವಿಸ್ತಾರಗೊಂಡವು. ಭಾರತ ಮತ್ತು ವಿದೇಶಗಳಲ್ಲಿ ಹೊಸ ಧಾರ್ಮಿಕ ಕೇಂದ್ರಗಳು ಸ್ಥಾಪನೆಗೊಂಡವು. ಫ್ರಾನ್ಸ್, ಜರ್ಮನಿ, ಹಾಲೆಂಡ್, ಸ್ವಿಟ್ಜರ್‌ಲ್ಯಾಂಡ್, ಅರ್ಜೆಂಟೈನಾ, ಸಿಂಗಾಪುರ ಮತ್ತು ಉತ್ತರ ಅಮೆರಿಕಾ ದೇಶಗಳಲ್ಲಿ ಸಂಸ್ಥೆಯ ಕಾರ್ಯಗಳು ಪ್ರಾರಂಭವಾದವು. ಹೊಸ ಆಶ್ರಮಗಳು ಮುಂಬೈ, ನಾಗಪುರ, ದೆಹಲಿ ಮತ್ತು ರಾಜಕೋಟೆಯಲ್ಲಿ ಸ್ಥಾಪಿತ ವಾದವು. ಉದಕಮಂಡಲದ ಕೇಂದ್ರವನ್ನು ಅವರು ತುಂಬಾ ಪ್ರೀತಿಸುತ್ತಿದ್ದರು. ಅಲ್ಲಿ ಕೆಲವು ತಿಂಗಳು ಆಧ್ಯಾತ್ಮಿಕ ಸಾಧನೆಯಲ್ಲಿ ಕಳೆದರು. ಅಲ್ಲಿನ ಸುತ್ತಮುತ್ತಲಿನ ಸುಂದರ ದೃಶ್ಯಗಳು ಮನಸ್ಸಿಗೆ ಆನಂದ ಉಂಟುಮಾಡುತ್ತಿದ್ದವು.

ಬೆಂಗಳೂರಿನಲ್ಲಿ

ಅಲ್ಲಿಂದ ಅವರು ಬೆಂಗಳೂರು ಮತ್ತು ಮೈಸೂರು ನಗರ ಗಳಿಗೆ ಭೇಟಿ ಕೊಟ್ಟರು. ಬೆಂಗಳೂರಿನ ರಾಮಕೃಷ್ಣ ಆಶ್ರಮದವರು ನಡೆಸುತ್ತಿದ್ದ ವಿದ್ಯಾರ್ಥಿ ನಿಲಯಕ್ಕೆ ಆಗಾಗ ಭೇಟಿ ಕೊಟ್ಟು ಹುಡುಗರೊಡನೆ ಆತ್ಮೀಯವಾಗಿ ಮಾತನಾಡುತ್ತಿದ್ದರು. ಬೆಂಗಳೂರಿನಲ್ಲಿ ಅಸ್ಪಶ್ಯರ ಕಾಲೋನಿ ಯೊಂದಕ್ಕೆ ಭೇಟಿ ಕೊಟ್ಟರು. ಅಲ್ಲಿನ ಜನ ಸ್ವಾಮಿ ಶಿವಾನಂದರಿಗೆ ದೂರದಿಂದ ನಮಸ್ಕಾರ ಮಾಡುವರಲ್ಲದೆ ಹತ್ತಿರ ಬಾರರು. ಸ್ವಾಮಿ ಶಿವಾನಂದರು ದ್ವಿಭಾಷಿಯೊಬ್ಬನ ಮೂಲಕ ಅವರ ಕಷ್ಟದ ಕಥೆಗಳನ್ನು ಕೇಳಿದರು, ಅವರಿಗೆ ಸಮಾಧಾನ ಹೇಳಿದರು. ಬೆಂಗಳೂರಿನಲ್ಲಿದ್ದಾಗ ಆಗಾಗ ತಮ್ಮ ಕೈಯಲ್ಲಿದ್ದಷ್ಟು ಹಣವನ್ನು ತೆಗೆದುಕೊಂಡು ಹೋಗಿ ಅಲ್ಲಿನ ಬಡಮಕ್ಕಳಿಗೆ ಹಂಚುತ್ತಿದ್ದರು.

ಮುಂಬಯಿ ಅಶ್ರಮ

ಸ್ವಾಮಿ ವಿವೇಕಾನಂದರು ಭಾರತದ ನಾಲ್ಕು ಪ್ರಮುಖ ಭಾಗಗಳಲ್ಲಿ ಅಂದರೆ ಹಿಮಾಲಯ, ಕಲ್ಕತ್ತ, ಮದರಾಸು ಮತ್ತು ಮುಂಬಯಿಗಳಲ್ಲಿ ಆಶ್ರಮಗಳನ್ನು ತೆರೆಯಬೇಕೆಂಬ ನಿರ್ಧಾರ ಹೊಂದಿದ್ದರು. ತಮ್ಮ ಜೀವಿತದ ಅವಧಿಯಲ್ಲಿ ಮೂರು ಭಾಗಗಳಲ್ಲಿ ಅದನ್ನು ಪೂರೈಸುವುದರಲ್ಲಿ ಸಫಲರಾದರು. ಉಳಿದ ನಾಲ್ಕನೆಯ ದಾದ ಮುಂಬಯಿ ಆಶ್ರಮ ಸ್ಥಾಪನೆಯ ಹೊಣೆ ಸ್ವಾಮಿ ಶಿವಾನಂದರ ಪಾಲಿಗೆ ಬಂತು. ೧೯೨೫ರಲ್ಲಿ ಸ್ವಾಮಿ ಶಿವಾನಂದರು ತಮ್ಮ ಸಂಗಡಿಗರೊಂದಿಗೆ ಮುಂಬಯಿಗೆ ಬಂದರು. ವಿಕ್ಟೋರಿಯಾ ಟರ್ಮಿನಸ್ ರೈಲು ನಿಲ್ದಾಣದಲ್ಲಿ ಅವರಿಗೆ ಅದ್ಭುತ ಸ್ವಾಗತ ದೊರೆಯಿತು. ಆ ವರೆಗೆ ಅಲ್ಲಿನ ಖಾರ್ ವಿಭಾಗದಲ್ಲಿದ್ದ ಸಾಮಾನ್ಯ ಸಂಸ್ಥೆಯು ಶಾಶ್ವತವಾದ, ದೃಢರೂಪದ ಆಶ್ರಮವಾಯಿತು.

೧೯೨೬ರಲ್ಲಿ ಬಿಹಾರದ ದೇವಘರಕ್ಕೆ ಹೋಗಿ ಅಲ್ಲಿ ಸಂಸ್ಥೆಯ ಆಡಳಿತಕ್ಕೆ ಒಳಪಟ್ಟ ಶ್ರೀರಾಮಕೃಷ್ಣ ವಿದ್ಯಾಪೀಠದ ಬಾಲಕರ ಪ್ರೌಢಶಾಲೆಯನ್ನು ಆರಂಭಿಸಿ ದರು. ಅಲ್ಲಿ ಮೂರು ತಿಂಗಳ ಕಾಲ ಇದ್ದರು.  ಆಗ ಅವರಿಗೆ ಶ್ವಾಸಕೋಶದ ಖಾಯಿಲೆ ಬಂತು. ನೋವು ತೀವ್ರವಾದಾಗ ತಮ್ಮ ಮನಸ್ಸನ್ನು ಪೂರ್ತಿಯಾಗಿ ಅಂತರಾತ್ಮನ ಮೇಲೆ ಏಕಾಗ್ರಗೊಳಿಸಿ ದೇಹವನ್ನು ಮರೆತರು.

೧೯೨೭ರಲ್ಲಿ ಅವರ ಆರೋಗ್ಯ ಕೆಟ್ಟಿತು. ಹವಾ ಬದಲಾವಣೆಗಾಗಿ ಬಿಹಾರದ ಮಧುಪುರದಲ್ಲಿ ಸ್ವಲ್ಪಕಾಲ ಸುಧಾರಿಸಿಕೊಂಡು ಕಾಶಿಯ ಆಶ್ರಮಕ್ಕೆ ಬಂದರು. ಆಗ ಪಂಡಿತ ಜವಾಹರಲಾಲ್ ನೆಹರುರವರು ಆಶ್ರಮಕ್ಕೆ ಬಂದು ಅವರೊಂದಿಗೆ ಮಾತನಾಡಿದರು. ಅನಂತರ ಕಮಲಾ ನೆಹರುರವರೂ ಸ್ವಾಮಿ ಶಿವಾನಂದರನ್ನು ಕಂಡು ಆಶೀರ್ವಾದ ಪಡೆದರು.

ಸ್ವಾಮಿ ಶಿವಾನಂದರ ಜೀವಿತದಲ್ಲಿ ಹಾಗೂ ರಾಮಕೃಷ್ಣ ಸಂಘದ ಕಾರ್ಯ ಪ್ರಗತಿಯಲ್ಲಿ ಮುಖ್ಯವಾದ ಘಟನೆಯು ಬೇಲೂರಿನ ಶ್ರೀರಾಮಕೃಷ್ಣ ದೇವಾಲಯದ ಶಂಕುಸ್ಥಾಪನೆ. ಸ್ವಾಮಿ ವಿವೇಕಾನಂದರಿಂದ ನಿರೂಪಿತ ವಾದ ಯೋಜನೆಗೆ ಸ್ವಾಮಿ ಶಿವಾನಂದರು ರೂಪ ಕೊಟ್ಟರು. ೧೯೨೯ರಲ್ಲಿ ಶ್ರೀರಾಮಕೃಷ್ಣರ ಜನ್ಮ ದಿನಾಚರಣೆಯ ದಿನ ದೇವಾಲಯದ ಅಸ್ತಿಭಾರ ಹಾಕಿದರು.

ಇತರರಿಗಾಗಿ ಬದುಕಿದ ವೃದ್ಧರು

೧೯೩೦ರ ಹೊತ್ತಿಗೆ ಸ್ವಾಮಿ ಶಿವಾನಂದರ ಆರೋಗ್ಯ  ಮತ್ತಷ್ಟು ಕೆಟ್ಟಿತು. ದೇಹದ ಮೇಲೆ ಉಬ್ಬಸ ಖಾಯಿಲೆಯ ಧಾಳಿ ಬಲವಾಗಿತ್ತು. ಆದರೂ ಮನಸ್ಸು ಸದಾ ಪ್ರಶಾಂತವಾಗಿರುತ್ತಿತ್ತು, ಮುಖದಲ್ಲಿ ಮಂದಹಾಸ ಉಕ್ಕುತ್ತಿತ್ತು. ತಮ್ಮ ಅನಾರೋಗ್ಯ ಕುರಿತು ಅವರು ಒಂದು ದಿನವೂ ಅಳುಕು, ಆತಂಕ ತೋರಲಿಲ್ಲ. ಚಿಕಿತ್ಸೆ ಮಾಡಲು ಬಂದ ವೈದ್ಯರು ಅವರ ಹಸನ್ಮುಖ ಕಂಡು ಆಶ್ಚರ್ಯ ಪಡುತ್ತಿದ್ದರು.

ಸಾಮಾನ್ಯ ಮನುಷ್ಯರಿಗೆ ವಯಸ್ಸಾದಂತೆ ಅವರ ಮನಸ್ಸು, ಬುದ್ಧಿಶಕ್ತಿ ಕುಗ್ಗಿ ಶೋಚನೀಯ ಸ್ಥಿತಿಗೆ  ಇಳಿಯುವರು. ಆದರೆ ಅದೇ ಅವಸ್ಥೆಯಲ್ಲಿ ಆಧ್ಯಾತ್ಮಿಕ ವ್ಯಕ್ತಿಗಳು ಪ್ರಕಾಶಮಾನರಾಗುತ್ತಾರೆ. ಆಗ ಅವರ ಆಧ್ಯಾತ್ಮಿಕ ಜೀವನದ ಗಾಂಭಿರ್ಯ ಹೆಚ್ಚುವುದು. ಸ್ವಾಮಿ ಶಿವಾನಂದರು ಇಳಿ ವಯಸ್ಸಿಗೆ ಬಂದ ಮೇಲೆ ಅವರನ್ನು ನೋಡಲು ಬರುವವರ ಸಂಖ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿತ್ತು. ದುಃಖಿಗಳು, ಕಷ್ಟದಲ್ಲಿ ಬೆಂದವರು, ಸಂಶಯದ ಬಿರುಗಾಳಿಗೆ ಸಿಲುಕಿದವರು, ಪಾಪಾತ್ಮರು, ಭ್ರಷ್ಟರು, ಪುಣ್ಯಾತ್ಮರು, ಬಡವ, ಬಲ್ಲಿದ, ವೃದ್ಧ ಮುಂತಾಗಿ ಎಲ್ಲ ವರ್ಗದವರು ಅವರ ಬಳಿಗೆ ಬರುತ್ತಿದ್ದರು. ಶಿವಾನಂದರು ಎಲ್ಲರಿಗೂ ಕರುಣೆ ತೋರುತ್ತಿದ್ದರು, ಅಭಯ ವಚನ ನೀಡುತ್ತಿದ್ದರು.

ದಿನಕಳೆದಂತೆ ಸ್ವಾಮಿ ಶಿವಾನಂದರ ದೇಹವು ತುಂಬಾ ನಿಶ್ಯಿಕ್ತಗೊಂಡಿತು. ವೈದ್ಯರ ಬಿಗಿ ಸೂಚನೆಯಂತೆ ಅಗತ್ಯವಾದ ಸಣ್ಣ ಕೆಲಸವನ್ನೂ ಮಾಡುವಂತಿರಲಿಲ್ಲ. ಕೊನೆಗೆ ಹೊರಗೆ ಹೋಗುವುದನ್ನೂ ನಿಲ್ಲಿಸಿ ಬೇಲೂರು ಮಠದ ತಮ್ಮ ಕೊಠಡಿಯಲ್ಲೇ ಉಳಿಯುವಂತಾಯಿತು. ಒಮ್ಮೆ ಅವರ ಶಿಷ್ಯರಲ್ಲಿ ಕೆಲವರು ಅವರ ಶಿಥಿಲ ಆರೋಗ್ಯದ ಬಗೆಗೆ ಆತಂಕ ವ್ಯಕ್ತಪಡಿಸಿದಾಗ ಮುಗುಳುನಗೆಯೊಂದಿಗೆ  ಹೇಳಿದರು, ‘ಏಕೆ ಹೆದರುತ್ತೀರಿ? ನಿಮಗೆ ಎಲ್ಲವನ್ನೂ ಸರಿಪಡಿಸಿಟ್ಟಿದ್ದೇನೆ. ನಿಮಗೆ ಯಾವುದರ ಕೊರತೆಯೂ ಇರುವುದಿಲ್ಲ. ನಿಮ್ಮ ತೊಂದರೆಗಳು ಕಳೆದಿವೆ.’

ಆಶ್ರಮದ ಸಮಾರಂಭಗಳನ್ನು, ಕಾರ್ಯ ಚಟುವಟಿಕೆಗಳನ್ನು ಅವರ ಅನಾರೋಗ್ಯದ ಕಾರಣ ಮೊಟಕುಗೊಳಿಸಿದಾಗ ಅವರು ಎಲ್ಲವನ್ನೂ ಯಥಾವತ್ತಾಗಿ ನೆರವೇರಿಸುವಂತೆ ಒತ್ತಾಯಪಡಿಸುತ್ತಿದ್ದರು.

ಮಹಾಸಮಾಧಿ

೧೯೩೩ ರ ಪ್ರಾರಂಭದಲ್ಲಿ ದೇಹಸ್ಥಿತಿ ಹದಗೆಡ ಲಾರಂಭಿಸಿತು. ಉಬ್ಬಸ ಖಾಯಿಲೆಯೊಂದಿಗೆ ರಕ್ತದ ಒತ್ತಡ, ಹೃದಯ ದೋಷಗಳೂ ಸೇರಿದವು. ಹಾಸಿಗೆ ಬಿಟ್ಟು ಏಳದಂತಾಯಿತು. ಏಪ್ರಿಲ್ ೨೫ ರಂದು ಪಾರ್ಶ್ವವಾಯು ವಿನ ಹೊಡೆತಕ್ಕೆ  ಸಿಲುಕಿದರು. ಕಲ್ಕತ್ತದಿಂದ ತಜ್ಞ ವೈದ್ಯರು ಧಾವಿಸಿ ಬಂದು ಅವರಿಗೆ ಚಿಕಿತ್ಸೆ ನೀಡಿದರು. ಒಂಭತ್ತು ತಿಂಗಳ ತರುವಾಯ ಅವರಿಗೆ ನ್ಯುಮೋನಿಯಾ ಅಂಟಿತು. ಎಂಬತ್ತು ವರ್ಷಗಳಿಗೂ ಅಧಿಕವಾಗಿ ತಮ್ಮ ಬಾಳನ್ನು ಭಕ್ತರ ದುಃಖ ವಿಮೋಚನೆಗೆ ಧಾರೆ ಎರೆದ ಸ್ವಾಮಿ ಶಿವಾನಂದರು ೧೯೩೪ರ ಫೆಬ್ರವರಿ ೨೦ರಂದು ಮಂಗಳವಾರ ಮಹಾಸಮಾಧಿ ಹೊಂದಿದರು.

ಮಹಾಸಂಯಮಿ, ಕರ್ಮಯೋಗಿ

ಶ್ರೀರಾಮಕೃಷ್ಣ ಪರಮಹಂಸರ ಧರ್ಮ ಪ್ರಸಾರಕರೆಲ್ಲರದೂ  ಎರಡು ಘಟ್ಟಗಳ ಜೀವನ. ಒಂದು ಆಧ್ಯಾತ್ಮ ಮತ್ತು ಭಗವತ್ ಸಾಕ್ಷಾತ್ಕಾರಕ್ಕೆ ಸಂಬಂಧಿಸಿ ದ್ದಾದರೆ ಮತ್ತೊಂದು ಮಾನವ ಕುಲಕ್ಕೆ ಸೇವೆ ಸಲ್ಲಿಸುವುದು. ಸ್ವಾಮಿ ಶಿವಾನಂದರು ಎರಡು ಮುಖಗಳ ಬದುಕಿನಲ್ಲೂ ಪೂರ್ಣ ಸಾರ್ಥಕತೆ ಪಡೆದ ಮಹಾಪುರುಷರು. ತಪಶ್ಚರ್ಯೆಯನ್ನು ಜೀವನದ ಉಸಿರಾಗಿ ಹೊಂದಿದ್ದು ಸ್ವಾಮಿ ವಿವೇಕಾನಂದರ ಕರೆಯಂತೆ ಸಂನ್ಯಾಸ ಜೀವನದ ಆಳವನ್ನು ಅರ್ಥಮಾಡಿಕೊಂಡ ಮಹಾಸಂಯಮಿ, ಜೊತೆಗೆ ಅತ್ಯಂತ ಶ್ರದ್ಧೆಯಿಂದ  ಬಡಬಗ್ಗರ, ರೋಗಿಗಳ ದುಃಖಿಗಳ ಸೇವೆ ಮಾಡಿದ ಕರ್ಮಯೋಗಿ. ಒಮ್ಮೆ ಸ್ವಾಮಿ ಯೋಗಾನಂದ ಎಂಬವರು ಸಿಡುಬಿಗೆ ತುತ್ತಾಗಿ ಅಲಹಾಬಾದಿನಲ್ಲಿ ಹಾಸಿಗೆ ಹಿಡಿದರು. ಸಿಡುಬೆಂದರೆ ಬಹು ಸುಲಭವಾಗಿ ಅಂಟುವ ಕಾಯಿಲೆ, ಭಯಂಕರ ಕಾಯಿಲೆ. ಸ್ವಾಮಿ ಶಿವಾನಂದರೂ ವಿವೇಕಾನಂದರೂ ಬಾರನಾಗೋ ರಿನಿಂದ  ಅಲಹಾಬಾದಿಗೆ ಹೋದರು. ಸ್ವಾಮಿ ಶಿವಾ ನಂದರು ಯೋಗಾನಂದರಿಗೆ ವಾಸಿಯಾಗುವವರೆಗೆ ಅವರ ಹಾಸಿಗೆ ಬಿಟ್ಟು ಕದಲಲಿಲ್ಲ. ಬಲರಾಮ ಬೋಸ್ ಎಂಬಾತ ಕಾಯಿಲೆ ಮಲಗಿದಾಗ ಸ್ವಾಮಿ ಶಿವಾನಂದರೂ ಅವರ ಜೊತೆಯ ಸಂನ್ಯಾಸಿಗಳೂ ಆತ ಕಡೆಯ ಉಸಿರು ಎಳೆಯುವವರೆಗೆ ಶುಶ್ರೂಷೆ ಮಾಡಿದರು. ಒಮ್ಮೆ ಅವರು ಕುಳಿತು ಚಿಂತನೆಯಲ್ಲಿ ಮೈಮರೆತಿದ್ದವರು ಇದ್ದಕ್ಕಿದ್ದಂತೆ ಸೇವಕನನ್ನು ಕರೆದು, ‘ಯಾರಾದರೂ ಹೊರಗೆ ಕಾದಿದ್ದಾರೆಯೇ ನೊಡು’ ಎಂದರು. ಅವನು ನೋಡಿದಾಗ ತರುಣಿಯೊಬ್ಬಳು ಹೊರಗೆ ಕುಳಿತಿದ್ದಳು.  ಆಕೆ ಸ್ವಾಮಿಗಳಿಂದ ತನಗೆ ಉಪದೇಶ ಬೇಕು ಎಂದಳು. ಅವಳು ಯಾರು ಎಂದು ವಿಚಾರಿಸಿದಾಗ, ಅವಳು ತೀರ ಪಾಪಮಯವಾದ ಜೀವನ ನಡೆಸಿದ್ದಳು ಎಂದು ತಿಳಿಯಿತು. ‘ಒಂದು ಬಾರಿ ಮಹಾಪುರುಷರನ್ನು ನಾನು ನೋಡಬೇಕು’ ಎಂದು ಹಂಬಲಿಸುತ್ತಿದ್ದಳು. ಸೇವಕ ಒಳಕ್ಕೆ ಬಂದ. ಸ್ವಾಮಿ ಶಿವಾನಂದರು, ‘ಯಾರಾದರೂ ಇದ್ದಾರೇನು?’ ಎಂದು ಕೇಳಿದರು. ಸೇವಕನು, ‘ಉಪದೇಶ ಬೇಕು ಎಂದು ಹೆಂಗಸೊಬ್ಬರು ಬಂದಿದ್ದಾರೆ’ ಎಂದವನು, ’ಆದರೆ’ ಎಂದು ಪ್ರಾರಂಭಿಸಿದ. ಸ್ವಾಮಿ ಶಿವಾನಂದರು ಅವನ ಮಾತನ್ನು ಅಲ್ಲೇ ತಡೆದು, ‘ರಾಮಕೃಷ್ಣರು ಎಲ್ಲರನ್ನೂ ಸಲಹುವರು. ಆಕೆಗೆ ಗಂಗೆಯಲ್ಲಿ ಸ್ನಾನ ಮಾಡಿ ಬರುವಂತೆ ಹೇಳು’ ಎಂದರು. ಆಕೆ ಮಿಂದು ಬಂದಾಗ, ‘ಮಗಳೆ ಹೆದರಿಕೆ ಏಕೆ? ರಾಮಕೃಷ್ಣರು ಎಲ್ಲರಿಗೂ ಆಶ್ರಯ ಕೊಡುವರು. ಇನ್ನು ಮುಂದೆ ಪಾಪ ಮಾಡುವುದಿಲ್ಲ ಎಂದು ಮನಸ್ಸು ಮಾಡು’ ಎಂದು ಹೇಳಿ ಉಪದೇಶ ಮಾಡಿದರು.

ಶ್ರೀ ರಾಮಕೃಷ್ಣ ಸಂಸ್ಥೆಯಲ್ಲಿ ‘ಮಹಾಪುರುಷ ಮಹಾರಾಜ’ ಎಂದು ಪ್ರಿಯವಾಗಿ ಕರೆಯಲ್ಪಟ್ಟ ಸ್ವಾಮಿ ಶಿವಾನಂದರು ಕೇವಲ ಆಶ್ರಮಕ್ಕೆ ಅಂಟಿಕೊಂಡಿರದೆ ವಿಪುಲವಾಗಿ ತೀರ್ಥಯಾತ್ರೆಗಳನ್ನು ಕೈಗೊಂಡವರು. ಭಾರತದಲ್ಲಿರುವ ಪವಿತ್ರ ಯಾತ್ರಾಸ್ಥಳಗಳಲ್ಲಿ ಯಾವು ದನ್ನೂ ಬಿಡದಂತೆ ಸಂದರ್ಶಿಸಿ ಅವುಗಳಿಂದ ಸ್ಫೂರ್ತಿ, ಸಂದೇಶ ಪಡೆದವರು. ಒಂದೊಂದು ಯಾತ್ರೆಯೂ ಅವರ ಆಧ್ಯಾತ್ಮಿಕ ಸಾಧನೆಯ ಪ್ರಮುಖ ಭಾಗವಾಗಿತ್ತು.

ಬಾಹ್ಯವಾಗಿ ಶಿವಾನಂದರು ತೀವ್ರ ಚಟುವಟಿಕೆಯ ಜೀವನ  ನಡೆಸಿದರು. ತರುಣ ಸಂನ್ಯಾಸಿಯಾಗಿ ಭಾರತ ದಲ್ಲೆಲ್ಲ ಸಂಚರಿಸಿದರು. ಸ್ವಲ್ಪ ವಯಸ್ಸಾಗುತ್ತಲೇ ಪ್ರಪಂಚಾ ದ್ಯಂತ ಹರಡಿದ ರಾಮಕೃಷ್ಣ ಸಂಸ್ಥೆಯ ಮುಖಂಡರಾಗಿ ಅದರ ಏಳಿಗೆಗೆ ಶ್ರಮಿಸಿದರು. ಆದರೂ ಆಂತರಿಕವಾಗಿ ಭಗವಂತನಲ್ಲಿ ವಿಲೀನವಾದ ಅವರ ಬದುಕು ಗಟ್ಟಿ ಬಂಡೆಯ ಮೇಲೆ ನಿರ್ಮಿತವಾದ ಗೋಪುರದಂತಿತ್ತು.

ಸಾಮಾನ್ಯ ಮಾನವನಿಗಿಂತ ಅತ್ಯುನ್ನತ ಹಂತ ದಲ್ಲಿದ್ದರೂ ಸ್ವಾಮಿ ಶಿವಾನಂದರು ಸಂಪೂರ್ಣ ಮಾನವರೇ ಆಗಿದ್ದರು. ಅವರನ್ನು ಬೇಲೂರು ಮಠದಲ್ಲಿ ಭೇಟಿ ಮಾಡಿದ ಬೆಲ್ಜಿಯಂ ದೇಶದ ಅರಸ ಆಲ್ಬಟರು ಹೇಳಿದರು, ‘ಮನುಷ್ಯನು ಮನುಷ್ಯನೊಂದಿಗೆ ಸ್ವಾಭಾವಿಕವಾಗಿ ಮಾತನಾಡುವಂತೆ ಸಾಧ್ಯಗೊಳಿಸಿದ ಇಂತಹ ಅದ್ಭುತ ಮನುಷ್ಯನನ್ನು ಜೀವಿತದಲ್ಲಿ ಪ್ರಥಮ ಬಾರಿಗೆ ಭೇಟಿಯಾದೆ’.

ಶಿವಾನಂದರು ಪುಸ್ತಕಗಳನ್ನು ಬರೆಯಲಿಲ್ಲ, ಭಾಷಣಗಳನ್ನು ಮಾಡಲಿಲ್ಲ. ಅವರು ಶಿಷ್ಯರಿಗೆ, ಭಕ್ತರಿಗೆ ಬರೆದ ಪತ್ರಗಳು ಮತ್ತು ಅವರೊಂದಿಗೆ ನಡೆಸಿದ ಸಂಭಾಷಣೆಗಳು ಅವರ ಆಧ್ಯಾತ್ಮಿಕ ಬದುಕಿನ ಸಾಧನೆಗಳನ್ನು ಸ್ಪಷ್ಟವಾಗಿ ಸಾರುತ್ತವೆ. ತಮ್ಮ ಗುರು ಶ್ರೀ ರಾಮಕೃಷ್ಣರಿಗೆ ತಮ್ಮನ್ನು ಅರ್ಪಿಸಿಕೊಂಡಿದ್ದ ರೀತಿ, ಮಾರ್ಗದರ್ಶಿ ಸ್ವಾಮಿ ವಿವೇಕಾನಂದರಲ್ಲಿ ಪ್ರಾಮಾಣಿಕ ನಿಷ್ಠೆ ಮತ್ತು ಶ್ರದ್ಧೆ; ಮಾನವರಲ್ಲಿ ಕರುಣೆ, ಅನುಕಂಪ ಎಲ್ಲವೂ ಅವರನ್ನು ಅದ್ವಿತೀಯರನ್ನಾಗಿಸಿ, ‘ದೇವರ ಮನುಷ್ಯ’ ಎಂಬ ಹೆಸರನ್ನು ಸಾರ್ಥಕಗೊಳಿಸಿವೆ.

ಶ್ರೀರಾಮಕೃಷ್ಣರ ಶಿಷ್ಯಕೋಟಿ ಎಂಬುದು ಒಂದು ಸುಂದರ, ಪವಿತ್ರ ಹೂವಿನ ತೋಟದಂತೆ. ಅದರಲ್ಲಿ ವೈವಿಧ್ಯಪೂರ್ಣ ಸೌರಭವನ್ನು ಬೀರುವ ಹೂಗಿಡದಂತೆ ಸ್ವಾಮಿ ಶಿವಾನಂದರು.