ಚೇರ್ಕಾಡಿ ರಾಮಚಂದ್ರ ರಾಯರ ಮನೆ ತಲುಪಿದಾಗ ಮಧ್ಯಾಹ್ನವಾಗಿತ್ತು. ಊಟ ಮಾಡುತ್ತಿದ್ದಲ್ಲಿಂದಲೇ ‘ಕುಳಿತುಕೊಳ್ಳಿ. ಊಟದ ಹೊತ್ತಿಗೆ ಬಂದವರು ಅತಿಥಿಗಳು’ ಎಂಬ ಆದರದ ಆತಿಥ್ಯ.  ಧಾರಾಳಿತನ. ‘ಒಂದೆರಡು ತಿಂಗಳಿಂದ ಮನಸ್ಸು ಹೇಳಿದಂತೆ ದೇಹ ಕೇಳುವುದಿಲ್ಲ’ ಉಣ್ಣುತ್ತಾ ಮಾತಿಗೆಳೆದರು. ‘ಮಾತನಾಡಿದರೆ ಈಗೀಗ ತುಂಬಾ ಆಯಾಸವಾಗುತ್ತದೆ’ – ಸೊಸೆ ವೀಣಾ ಎಚ್ಚರಿಸಿದರು!

ಊಟ ಪೂರೈಸಿದ ಚೇರ್ಕಾಡಿಯವರು, ‘ಸ್ವಲ್ಪ ವಿಶ್ರಾಂತಿ ತೆಕ್ಕೊಳ್ತೇನೆ. ನೀವು ಹಾಗೆ ತೋಟ ಸುತ್ತಿ ಬನ್ನಿ’ ಎಂದರು. ಮಗ ಆನಂದ್ ಜತೆ ಸೇರಿದರು. ‘ಯಾಕೋ ವಿಪರೀತ ನಿಶ್ಶಕ್ತಿ. ನಡೆಯಲು ತ್ರಾಣವಿಲ್ಲ. ದಿನಕ್ಕೊಮ್ಮೆಯಾದರೂ ತೋಟ ಸುತ್ತದೆ ಅವರ ದಿನಚರಿ ಸುರುವಾಗುತ್ತಿರಲಿಲ್ಲ. ಆದರೆ ಈಗೀಗ ತೋಟಕ್ಕೆ ಹೋಗುವುದಕ್ಕೆ ಆಗುತ್ತಿಲ್ಲವಲ್ಲಾ ಎಂಬ ಕೊರಗು ಇದೆ’ ಎಂದರು.

ಆನಂದ್ ತಂದೆಯವರ ಜತೆಗಿದ್ದು ಪಡೆದ ಅನುಭವವದ ಸುರಳಿಯನ್ನು ಬಿಚ್ಚುತ್ತಾ ಪುನಃ ಮನೆ ಸೇರಿದಾಗ ರಾಯರು ಕಾಯುತ್ತಿದ್ದರು. ‘ತೋಟ ಸುತ್ತಿದ್ರಾ.. ನಾನೀಗ ಕೃಷಿ ಪಂಡಿತ ಮಾರಾಯ್ರೆ. ಗವರ್ನ್‌ಮೆಂಟಿನವರು ಕೊಟ್ರು. ಅದನ್ನು ತೆಕ್ಕೊಳ್ಬೇಕಿದ್ರೆ… ಇನ್ನು ಇಂತಹ ಪ್ರಶಸ್ತಿ ಬೇಡವೋ ಬೇಡ – ಪ್ರಶಸ್ತಿಯಿಂದ ಪಂಡಿತನಾಗ್ತಾನಾ. ಪ್ರಶಸ್ತಿ ಕೊಡುವವರಿಗೆ ಕೃಷಿ ಗೊತ್ತಾ’ ಹೀಗೆಲ್ಲಾ ವ್ಯವಸ್ಥೆಗಳ ಬಗ್ಗೆ ರಾಮಚಂದ್ರ ರಾಯರು ಮಾತನಾಡುತ್ತಾ, ತಮ್ಮ ಕೃಷಿ ಬದುಕಿತ್ತ ಹೊರಳಿದರು.

ಚೇರ್ಕಾಡಿ ರಾಯರು ನಿಧನರಾಗುವ ಮೂರು ತಿಂಗಳ ಮೊದಲು ಹೀಗಿದ್ದರು.

***

ಒಂದು ಕಾಲ ಇತ್ತು ಮಾರಾಯ್ರೆ. ಒಂದು ಹೊತ್ತಿ ಊಟಕ್ಕೂ ಕಷ್ಟವಾದ ದಿನಗಳು. ತಲೆಗುಂಟು, ಕಾಲಿಗಿಲ್ಲ. ಜತೆಗೆ ಕುಟುಂಬದ ರಾಗವಿಕಾರಗಳು, ಸಾಮಾಜಿಕ ಶೋಷಣೆ, ರಾಜಕೀಯ ಸ್ಥಿತಿಗತಿಗಳು, ಜನನಾಯಕರ ಸಣ್ಣತನ.. ಇವುಗಳ ನಡುವೆ ‘ತೆವಳಾಟದ’ ಬದುಕು. ಶಾಲಾ ದಿನಗಳಲ್ಲೇ ಗಾಂಧಿ ಪ್ರಭಾವ. ಖಾದಿಯ ಮೋಹ. ‘ಭವಿಷ್ಯದ ಬದುಕಿಗೆ ಗಾಂಧಿ-ಖಾದಿಯೇ ಆಧಾರ’ – ನಿರ್ಧಾರ.

ರಾಟೆ ತಿರುಗಿದಂತೆ ಬದುಕಿನ ಚಕ್ರವೂ ಸಾಗುತ್ತಿತ್ತು. ತಿರುಗುವುದು ನಿಂತಾಗ ಬದುಕೂ ಓಲಾಡುತ್ತಿತ್ತು. ನೂಲು ತೆಗದು, ಮಗ್ಗದಲ್ಲಿ ವಸ್ತ್ರ ಮಾಡಿ, ಅದನ್ನು ಧರಿಸಿದಾಗಿನ ಅನುಭವ ಇದೆಯಲ್ಲಾ.. ನಿಜಕ್ಕೂ ಗಾಂಧಿ ದೊಡ್ಡ ಮನುಷ್ಯ. ಈ ಸರಳ ಬದುಕನ್ನು ಹೇಳದಿರುತ್ತಿದ್ದರೆ ಚೇರ್ಕಾಡಿ ನಿಮ್ಮೆದುರು ಇರುತ್ತಿರಲಿಲ್ಲ! ‘ನೂಲು ನೇಯುವುದು ಅವಮಾನ’ ಅಂದವರ ಮಧ್ಯೆಯೂ ಕಾಯಕ ಮುಂದುವರಿದಿತ್ತು. ಸ್ವತಃ ಹತ್ತಿಯನ್ನು ಬೆಳೆದು, ನೂಲು ತೆಗೆದು ಅದರ ವಸ್ತ್ರವನ್ನು ತೊಟ್ಟಾಗಲೇ ಗೊತ್ತಾಯಿತು – ‘ಇದು ಸ್ವಾವಲಂಬಿ ಜೀವನ’.

೧೯೫೧ರಲ್ಲಿ ಉಡುಪಿಯ ಬ್ರಹ್ಮಾವರ ಸನಿಹದ ‘ಚೇರ್ಕಾಡಿ’ಯ ಎರಡೂವರೆ ಎಕ್ರೆಯ ಈ ಜಾಗ ಪಾಲಿಗೆ ಬಂದಾಗ ಬೋಳುಗುಡ್ಡೆ. ಬಾವಿ ಬಿಟ್ಟರೆ ಮಿಕ್ಕಂತೆ ಬಂಜರು ನೆಲ. ಕಲ್ಲು, ಮುಳ್ಳುಗಳು. ಬಂಡೆಗಲ್ಲುಗಳನ್ನು ಅತ್ತಿತ್ತ ಸರಿಸಿ, ಕಲ್ಲು-ಮುಳ್ಳುಗಳನ್ನು ತೆಗೆದು ಸ್ವಚ್ಛಮಾಡಲು ಕೆಲವು ದಿವಸ ಬೇಕಾಯ್ತು. ತಕ್ಷಣ ಉತ್ಪತ್ತಿ ಸಿಗಬೇಕಾದರೆ ತರಕಾರಿ ಕೃಷಿಯೇ ಸಮ. ಜತೆಗೆ ಬಾಳೆ, ಭತ್ತ. ಸುತ್ತಲಿನ ಕೃಷಿಕರು ಯಾವ ರೀತಿ ಮಾಡ್ತಾರೋ, ಅದೇ ರೀತಿಯಲ್ಲಿ ಕೃಷಿ ಸುರು ಮಾಡಿದೆ.

ಬಾವಿಯಿಂದ ನೀರು ಸೇದಿ ಗಿಡಗಳಿಗೆ ಉಣಿಸುತ್ತಿದ್ದೆ. ಭತ್ತದ ಕೃಷಿಗೆ ನೀರು ಹೆಚ್ಚು ಬೇಕಲ್ವಾ. ಕೆಲವೊಂದು ಸಲ  ನೀರು ಸೇದಿ ಕೈ ಊದಿಕೊಳ್ಳುತ್ತಿತ್ತು. ಹೇಗೋ ಜೀವನ ಸಾಗುತ್ತಿತ್ತು.

ನಲುವತ್ತರ ದಶಕದಲ್ಲಿ ದೇಶದಲ್ಲಿ ಅನ್ನ ಕ್ಷಾಮ ಬಂತು. ಮಹಾತ್ಮ ಗಾಂಧಿ ಹೇಳಿದ್ರು. – ‘ನಮ್ಮ ಅನ್ನವನ್ನು ನಾವೇ ಬೆಳೆಯಬೇಕು. ಅವಲಂಬನಾ ಜೀವನ ಸರಿಯಲ್ಲ’. ಆಗಲೇ ವಿನೋಬಾ ಬಾವೆ, ಗಾಂಧಿ ವಿಚಾರಗಳಲ್ಲಿ ನಂಬಿಕೆಯಿದ್ದ ನನಗೆ ಗಾಂಧೀಜಿಯವರ ಮಾತು ಆಪ್ತವಾಯಿತು.

ಚೇರ್ಕಾಡಿಯವರ ಕೃಷಿ ತಪೋಭೂಮಿ

ಅನ್ನ ಬೆಳೆವ ಪರಿ

ಸರಿ, ನಾವೇ ಬೆಳೆಯೋದು ಅಂದ್ರೆ ನನ್ನ ಭೂಮಿಯಲ್ಲಿ ಸಾಧ್ಯವಾ? ಸಂಪನ್ಮೂಲಗಳು ಎಲ್ಲಿವೆ? ಈ ಆಲೋಚನೆಗಳ ಗಿರಕಿ. ೧೯೬೨ನೇ ಇಸವಿ ಇರಬೇಕು – ಸ್ವಲ್ಪ ಜಾಗದಲ್ಲಿ ಮೆಣಸು ಬೆಳೆದೆ. ನೀರು ಹಾಕಿದ್ದು ಹೆಚ್ಚಾಗಿ ಕಾಣುತ್ತದೆ – ಗಿಡಗಳೆಲ್ಲಾ ಕೊಳೆತು ಹೋದುವು. ಸ್ವಲ್ಪ ದುಡ್ಡು ಬರಬಹುದಲ್ಲಾ – ಅಂತ ಆಸೆಯಿತ್ತು. ಅದೂ ಕೈಕೊಟ್ಟಿತ್ತು. ಬೇಸರ ಬಂತು. – ಸ್ವಲ್ಪ ಸಮಯ ಅತ್ತ ಸುಳಿಯಲಿಲ್ಲ.

ಆ ಮಳೆಗಾಲ ಕಳೆಯುತ್ತಾ ಬಂದಿತ್ತು, ತೋಟ ಸುತ್ತಾಡುತ್ತಿದ್ದೆ. ಅದೇ ಮೆಣಸಿನ ಏರಿಯಲ್ಲಿ ಒಂದೇ ಒಂದು ಭತ್ತದ ಕಾಳು ಮೊಳಕೆಯಾಗಿ ಹದಿನಾರು ತೆಂಡೆ ಬಿಟ್ಟು ಬೆಳೆದು ನಿಂತಿತ್ತು! ಅದರ ಭತ್ತವನ್ನು ಕೊಯಿದು ಅಳತೆ ಮಾಡಿದಾಗ ಆರ್ಧ ಪಾವು ಭತ್ತ ಸಿಕ್ಕಿತ್ತು.

‘ಬುಡದಲ್ಲಿ ನೀರು ನಿಲ್ಲಿಸದೆ, ಮಳೆನೀರನ್ನೇ ಬಳಸಿಕೊಂಡು ಭತ್ತದ ಕೃಷಿ ಮಾಡಬಹುದು’ ಎಂಬ ಪಾಠವನ್ನು ತೆನೆ ಕಲಿಸಿತ್ತು! ಮೆಣಸು ಕೈಕೊಟ್ಟದ್ದು ಒಳ್ಳೆದೇ ಆಯ್ತು. ಸಿಕ್ಕ ಅರ್ಧ ಪಾವು ಭತ್ತ ಇದೆಯಲ್ಲಾ, ಅಲ್ಲಿಂದ ನನ್ನ ದೆಸೆ ತಿರುಗಲು ಆರಂಭವಾಯಿತು. ಅದೇ ನೋಡಿ.. ಪ್ರಕೃತಿಯನ್ನು ನಾವು ಆರಾಧಿಸಿದರೆ, ಅದೇ ನಮಗೆ ದಾರಿ ಮಾಡಿ ಕೊಡುತ್ತದೆ!

ಮುಂದಿನ ಮಳೆಗಾಲದಲ್ಲಿ ಒಂದು ಸೆಂಟ್ಸ್ ಜಾಗದಲ್ಲಿ ಇದೇ ಭತ್ತವನ್ನು ಏರುಮಡಿ ಮಾಡಿ ಬಿತ್ತಿ ಬೆಳೆದೆ. ಇಪ್ಪತ್ತೊಂದು ಕಿಲೋ ಭತ್ತ ಸಿಕ್ಕಿತು. ಮುಂದಿನ ದಿನಗಳಲ್ಲಿ ಭತ್ತ ಬೆಳೆಸುವ ಜಾಗವನ್ನು ವಿಸ್ತರಿಸಿಕೊಂಡೆ. ನನ್ನ ಚಿಕ್ಕ ಭೂಮಿಯಲ್ಲಿ ೧೪-೧೫ ಕ್ವಿಂಟಾಲ್ ಪಡೆದ ದಿವಸಗಳಿತ್ತು.

‘ತಪ್ಪು-ಸರಿ’ ಮಾಡುತ್ತಾ ಭತ್ತ ಬೇಸಾಯ ಮಾಡುತ್ತಿದ್ದೆ. ಮೇ ತಿಂಗಳಲ್ಲಿ ಬೀಜ ಬಿತ್ತಿ ಸಸಿ ತಯಾರಿ. ಮೊದಲ ಮಳೆ ಬಂದಾಗ ಉದ್ದನೆಯ ಸಾಲು ತೆಗೆದು, ಮಣ್ಣನ್ನು ಮಡಿಯಂತೆ ಮಾಡಿದೆ. ಎರಡಿಂಚು ಅಂತರದಲ್ಲಿ ಎರಡೆರಡು ಸಸಿಗಳನ್ನು ಊರಿದೆ. ಸಾಲಿಂದ ಸಾಲಿಗೆ ಇಪ್ಪತ್ತೆರಡು ಇಂಚು ಅಂತರ.

ಬೂದಿ, ನೆಲಗಡಲೆ ಹಿಂಡಿ, ನೀರು – ಇವಿಷ್ಟೇ ಗೊಬ್ಬರ. ಪಿಳ್ಳೆ ಬಿಟ್ಟ ನಂತರ ಎರಡು ಸಲ ಪುನರಾವರ್ತನೆ.  ಮಳೆಗಾಲವಾದ್ದರಿಂದ ನೀರಿನ ಸಮಸ್ಯೆಯಿಲ್ಲ ಬಿಡಿ. ಅಕ್ಟೋಬರ್ ಮಧ್ಯದಲ್ಲಿ ಕಟಾವ್. ಏರುಮಡಿ ಬೇಸಾಯಕ್ಕೆ ರಾಜಕಯಮೆ, ಕರಿದಡಿ, ಕುಟ್ಟಿಕಯಮೆ ಒಳ್ಳೆಯದು. ಎಕರೆಗೆ ಅರುವತ್ತು ಮುಡಿ ಭತ್ತ ತೆಗೆಯಬಹುದು.

ಉಳುಮೆ ಬೇಡ, ನೀರು ನಿಲ್ಲಿಸಬೇಕಾಗಿಲ್ಲ. ಉಳ್ಳವರಿಗಾದರೆ ತೊಂದರೆಯಿಲ್ಲ, ನೀರು, ದುಡ್ಡು ಇಲ್ಲದವರು ಏನು ಮಾಡ್ಬೇಕು ಹೇಳಿ. ಅಂತಹವರಿಗೆ ಈ ರೀತಿಯ ಕೃಷಿ ಒಳ್ಳೆಯದು.

ನನ್ನ ಹೊಟ್ಟೆಪಾಡಿಗೆ ಮಾಡಿದ ಸರಳ ಕೃಷಿ ಬಹಳಷ್ಟು ಮಂದಿಯನ್ನು ಆಕರ್ಷಿಸಿತು. ಅಧಿಕಾರಿಗಳ ಗಮನ ಸೆಳೆಯಿತು. ಪೇಪರ‍್ನಲ್ಲಿ ದೊಡ್ಡದಾಗಿ ಬಂತು. ಎಲ್ಲರೂ ನನ್ನಲ್ಲಿಗೆ ಬರುವವರೇ. ಶಹಬ್ಬಾಸ್ ಹೇಳಿ ‘ಇದು ಚೇರ್ಕಾಡಿ ಪದ್ದತಿ’ ಅಂತ ಹೆಸರಿಟ್ಟರು. ಈಗಲೂ ಸಾಕಷ್ಟು ಜನ ಈ ಹೆಸರಲ್ಲಿ ಕೃಷಿ ಮಾಡುತ್ತಾರೆ.

ಆ ಹೊತ್ತಿಗೆ ರಾಸಾಯನಿಕ ಗೊಬ್ಬರಗಳು ಅಂಬೆಗಾಲಿಡುತ್ತಿತ್ತು. ಅಧಿಕ ಇಳುವರಿ, ಸಮೃದ್ಧ ಜೀವನದ ಆಸೆಹೊತ್ತ ಅನೇಕ ಕೃಷಿಕರು ಹಟ್ಟಿಗೊಬ್ಬರ ಮರೆತು, ರಾಸಾಯನಿಕದ ಹಿಂದೆ ಬಿದ್ದರು. ನೀವೂ ಬಳಸಿ ಅಂತ ಶಿಫಾರಸು ಮಾಡಿದ್ದರು. ನನಗ್ಯಾಕೋ  ವಿಶ್ವಾಸವಿರಲಿಲ್ಲ. ಹಟ್ಟಿಗೊಬ್ಬರದಂತಹ ಅಮೃತವಿರುವಾಗ ಬೇರೊಂದು ಗೊಬ್ಬರವನ್ನು ಆ ಜಾಗದಲ್ಲಿ ಕಲ್ಪಿಸಲು ಸಾಧ್ಯನೇ ಇಲ್ಲ. ಇಷ್ಟು ಹೊತ್ತಿಗೆ ನನ್ನ ಬಂಜರು ಭೂಮಿ ಹಸಿರಾಗಿತ್ತು. ಆದರೆ ಖಾದಿ ಸಂಪಾದನೆಯೆಲ್ಲ ಖಾಲಿ.

ಐದಂಶದ ಸೂತ್ರಗಳು

* ಕಡಿಮೆ ನೀರಿನಲ್ಲಿ ಕೃಷಿ ಮಾಡುವ ಕ್ರಮ ಕಲಿಯಬೇಕು * ಕನಿಷ್ಠ ಮುಕ್ಕಾಲು ಭಾಗ ರೈತ ಸ್ವಾವಲಂಬಿಯಾಗಬೇಕು * ಸಾಲ ಮಾಡಬಾರದು * ಯಂತ್ರಗಳ ಅವಲಂಬನೆಯಿಲ್ಲದೆ, ಸ್ವಪರಿಶ್ರಮದ ದುಡಿಮೆ ಅಗತ್ಯ * ತುರ್ತಾಗಿ ಮಾರಲೇ ಬೇಕಾಗಿರುವ ಬೆಳೆಗಳು ಹೆಚ್ಚು ಬೇಡ. ಕೆಲಕಾಲ ಇಟ್ಟು ಮಾರಬಹುದಾದ ಬೆಳೆಗಳಿಗೆ ಪ್ರಥಮ ಆದ್ಯತೆಯಿರಲಿ.

ಹಳ್ಳಿಜ್ಞಾನ

ಮಳೆಗಾಲದಲ್ಲಿ ಹೇಗೋ ನಿಭಾಯಿಸಿ ಕೃಷಿ ಮಾಡಿದ್ದಾಯಿತು. ಬೇಸಿಗೆಯಲ್ಲಿ ಹೇಗೆ? ನಲ್ವತ್ತು ಅಡಿ ಆಳದ ಬಾವಿಯಿಂದ ನೀರೆತ್ತುವ ಬಗೆಯೆಂತು? ಯಂತ್ರವಿಲ್ಲದೆ ಏನಾದರೂ ಮಾಡಲು ಸಾಧ್ಯವಾ? ಏತದ ಮೂಲಕ ಪ್ರಯತ್ನಿಸಿದೆ. ಒಮ್ಮೆ ನೀರೆತ್ತಿ, ಪುನಃ ಎತ್ತುವಾಗ ಮೊದಲಿನ ನೀರೆಲ್ಲಾ ಮಣ್ಣಲ್ಲಿ ಇಂಗಿಹೋಗುತ್ತಿತ್ತು!

ಒಂದು ಉಪಾಯ ಹೊಳೆಯಿತು. ಮನೆಯೊಳಗೆ ಚರಕವಿತ್ತಲ್ಲಾ.. ಇದೇ ಆದರೆ ಸ್ವಲ್ಪ ದೊಡ್ಡದೇ ಆದ ವಿನ್ಯಾಸದ ರಾಟೆಯೊಂದನ್ನು ತಯಾರಿಸಿದೆ. ಮೇಲಿನಿಂದ ನೀರಿಗೆ ಮುಟ್ಟುವಷ್ಟು ಉದ್ದನೆಯ ಹಗ್ಗ. ಎರಡೂ ತುದಿಗಳಿಗೆ ಬಕೆಟ್. ಹಗ್ಗವನ್ನು ರಾಟೆಯ ಮೂಲಕ ಹಾದುಹೋಗುವಂತೆ ಮಾಡಿದೆ. ಒಂದು ಬಕೆಟ್ ಬಾವಿಯೊಳಗೆ ನೀರಿನಲ್ಲಿ   ಮುಳುಗುವಂತೆಯೂ, ಮತ್ತೊಂದು ಮೇಲ್ಬಾಗದಲ್ಲಿರುವಂತೆ ಹೊಂದಾಣಿಸಿಕೊಂಡೆ. ರಾಟೆಯನ್ನು ಒಮ್ಮೆ ಸವ್ಯವಾಗಿ, ಮತ್ತೊಮ್ಮೆ ಅಪಸವ್ಯವಾಗಿ ತಿರುಗಿಸಿದಾಗ ಬಾವಿಯೊಳಗಿನ ಬಕೆಟ್ ಮೇಲೇರುತ್ತದೆ. ಮೇಲಿದ್ದ ಖಾಲಿ ಬಕೆಟ್ ಬಾವಿಗಿಳಿಯುತ್ತದೆ. ರಾಟೆ ತಿರುಗಿದಂತೆಲ್ಲಾ  ಪುನರಾವರ್ತನೆಯಾಗುತ್ತಲೇ ಇರುತ್ತದೆ. ಈ ಕೆಲಸಕ್ಕೆ ಮೊದಲಿನಂತೆ ರಟ್ಟೆ ಬಲ ಬೇಡ. ಸೊಂಟತ್ರಾಣವೂ ಬೇಡ. ಸುಲಭವಾಗಿ ನೀರಿನ ಸಮಸ್ಯೆ ಬಗೆಹರಿಯಿತು. ನನಗೆ ಬೇಕಾದಷ್ಟು ನೀರನ್ನು ಪಡೆಯಲು ರಾಟೆ ಸಹಾಯವಾಯಿತು. ಕೃಷಿಗೆ ಇನ್ನಷ್ಟು ವೇಗ ಸಿಕ್ಕಿತು.

ಕೃಷಿ ಮತ್ತ ರಾಟೆಯ ಸುದ್ದಿ ಮಣಿಪಾಲದ ಡಾ.ಟಿ.ಎ.ಪೈಗಳ ಕಿವಿಗೆ ಬಿತ್ತು. ಒಂದಿವಸ ತೋಟಕ್ಕವರು ಹಾಜರಾಗಬೇಕೇ. ಅವರು ಬರುವ ಹೊತ್ತಿಗೆ ಬೆವರಿಳಿಸಿಕೊಳ್ಳುತ್ತಾ ನೀರು ಸೇದುತ್ತಿದ್ದೆ. ಶ್ರಮವನ್ನು ನೋಡಿ, ‘ನಿಮಗೆ ನಾನು ಉಚಿತವಾಗಿ ಪಂಪ್‌ಸೆಟ್ ಕೊಡಿಸುತ್ತೇನೆ’ ಎಂದರು. ಅವರು ಉದಾರತನಕ್ಕೆ ಕೃತಜ್ಞತೆ ಸಲ್ಲಿಸಿದೆ. ಅವರಂತಹ ದೊಡ್ಡಮನುಷ್ಯರು ನನ್ನ ತೋಟಕ್ಕೆ ಬರುವುದೆಂದರೆ? ಮನಸ್ಸು ತುಂಬಿ ಬಂತು.

ಅವರ ಕೊಡುಗೆಯನ್ನು ಕೃತಜ್ಞತಾ ಭಾವದಿಂದ ನಯವಾಗಿ ತಿರಸ್ಕರಿಸಿದೆ. ಅವರೇನೋ ಉಚಿತವಾಗಿ ಕೊಡುತ್ತಾರೆ. ನಾನೊಬ್ಬನೇ ನಗುನಗುತ್ತಾ ಕೃಷಿ ಮಾಡಬಹುದಿತ್ತು. ನನ್ನ ಸುತ್ತುಮುತ್ತಲಿನ ಕೃಷಿಕರ ಬವಣೆ ಹಾಗೇ ಉಳಿಯುತ್ತದಲ್ಲಾ. ಅದಕ್ಕಿಂತಲೂ ಮುಖ್ಯವಾಗಿ ನನ್ನ ತೋಟದಲ್ಲಿ ಬರುವ ಉತ್ಪತ್ತಿಗಳು ಪಂಪ್‌ಸೆಟ್ ನಿರ್ವಹಣೆಗೆ ಬೇಕು. ಪಂಪ್ ಮೂಲಕ ನೀರೆತ್ತಿದಾಗ ಅರ್ಧ ತಾಸಲ್ಲೇ ಕೆಲಸವೆಲ್ಲಾ ಮುಗಿದುಹೋಗುತ್ತದೆ. ಉಳಿದ ಹೊತ್ತನ್ನು ಹೇಗೆ ಕಳೆಯಲಿ? ಸೋಮಾರಿಯಾಗಿ ಪೇಟೆಯಲ್ಲಿ ಅಲೆಯುವ ಜಾಯಮಾನ ನನ್ನಲ್ಲಿಲ್ಲ.

ನಾನೊಬ್ಬನೇ ಪಂಪ್‌ಸೆಟ್ ತೆಕ್ಕೊಂಡೆ ಎಂದಿಟ್ಟುಕೊಳ್ಳೋಣ. ನಮ್ಮ ರಾಷ್ಟ್ರದ ಕೋಟಿಗಟ್ಟಲೆ ಬಡ ಕೃಷಿಕರಿಗೆ ಯಾರು ಪಂಪ್‌ಸೆಟ್ ಕೊಡುತ್ತಾರೆ? ಯಂತ್ರಗಳಿಂದಲೇ ಕೃಷಿ ಸಾಧ್ಯ ಅಂತ ಕೃಷಿಕರನ್ನು ನಂಬಿಸಲಾಗುತ್ತದೆ. ಯಂತ್ರಗಳು ಕೃಷಿಗೆ, ಕೃಷಿ ಬದುಕಿಗೆ ಪೂರಕವಾಗಿರಬೇಕು. ಅದು ಬದುಕಿನ ಮೇಲೆ ಸವಾರಿ ಮಾಡಬಾರದು!

ಈಗ ಎಲ್ಲೆಲ್ಲೂ ನೋಡಿ. ಪವರ್..! ವಿದ್ಯುತ್..! ಒಂದೇ ಮಂತ್ರ. ಕೃಷಿಕನಿಗೆ ಪವರ್ ಬರುವುದು ಸ್ವಿಚ್ ಹಾಕಿದಾಗ ಅಲ್ಲ, ತೋಟದಲ್ಲಿದ್ದಷ್ಟೂ, ಮಣ್ಣಿನೊಂದಿಗೆ ಇದ್ದಷ್ಟೂ ಹೊತ್ತು ಪವರ್ ಜಮೆ ಆಗುತ್ತಾ ಇರುತ್ತದೆ. ನಾನು ನೋಡಿ.. ಈಗೇನೋ ನಡೆಯಲು ಕಷ್ಟವಾಗುತ್ತಿದೆ. ತೊಂಭತ್ತೊಂದು ಆಯ್ತಲ್ವಾ. ಇಷ್ಟು ವರುಷ ನೆಮ್ಮದಿಯಿಂದ ಜೀವನ ಸಾಗಿಸುತ್ತಾ ಇದ್ದೇನೆ.

ಸಂಮಾನಪುರಸ್ಕಾರ

* ೧೯೭೪-ಮಣಿಪಾಲ ಜೇಸಿಸ್ ಮತ್ತು ಸಿಂಡಿಕೇಟ್ ಬ್ಯಾಂಕ್ ಕೃಷಿ ಪ್ರತಿಷ್ಠಾನ * ೧೯೯೯-ಉಡುಪಿ ತಾಲೂಕು ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನ ಪುರಸ್ಕಾರ * ೨೦೦೨-ಪುರುಷೋತ್ತಮ ರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನದ ‘ಪುರುಷೋತ್ತಮ ಸಂಮಾನ’ ಮತ್ತು ‘ಸಾಧಕ-ಸಾಧನೆ’ ಹೊತ್ತಿಗೆ ಪ್ರಕಟಣೆ * ೨೦೦೫-ಕರ್ನಾಟಕ ಸರಕಾರದ ‘ಕೃಷಿಪಂಡಿತ’ ಪ್ರಶಸ್ತಿ * ೨೦೦೫-ಕರ್ಜೆಯ ಹಿಂದೂ ಯುವ ಸೇನೆಯ ‘ಕೃಷಿಭೂಷಣ’ ಪ್ರಶಸ್ತಿ. * ೨೦೦೬-ಮಣಿಪಾಲದ ವಿಕಾಸ ಟ್ರಸ್ಟ್ ಪ್ರಕಾಶಿಸಿದ ‘ಕೃಷಿಪಂಡಿತ ಚೇರ್ಕಾಡಿ ರಾಮಚಂದ್ರ ರಾಯರು’ ಪುಸ್ತಕ.

ಮಣ್ಣೊಳಗಿನ ಗಂಟು’!

ನನ್ನ ತೋಟದಲ್ಲಿ ಎಲ್ಲವೂ ಇದೆ.  ಆವರಣದ ಸುತ್ತ ಮರಗಳನ್ನು ನೆಟ್ಟಿದ್ದೇನೆ. ಅವುಗಳು ಫಿಕ್ಸೆಡ್ ಡಿಪಾಸಿಟ್! ಶುಂಠಿ ಕೃಷಿ ಮಾಡುವ ಕೃಷಿಕರು ಬೊಬ್ಬೆ ಹಾಕ್ತಾ ಇದ್ದಾರೆ. ‘ರಾಸಾಯನಿಕವೋ ವಿಷವೋ ಇಲ್ಲದಿದ್ದರೆ ಶುಂಠಿ ಬೆಳೆಯಲು ಸಾಧ್ಯವಿಲ್ಲ’ ಎಂದು ಮೊನ್ನೆ ಬಂದ ಕೃಷಿಕರೊಬ್ಬರು ಹೇಳಿದರು.

ಸಂಬಾರ ಉತ್ಪನ್ನಗಳನ್ನು ಹೆಚ್ಚು ವೆಚ್ಚ ಮಾಡದೆ ನಾವೇ ಬೆಳೆದುಕೊಳ್ಳಬಹುದು. ದುಡ್ಡು ಮಾಡುವುದಕ್ಕಾಗಿ ಬೆಳೀತೀರೋ ಹೆಚ್ಚು ದಿವಸ ತಾಳುವಂತಹ ಬೆಳೆಗಳನ್ನು ಬೆಳೆಯಿರಿ.

ಮೇ ತಿಂಗಳಲ್ಲಿ ಮಡಿ ಮಾಡಿ ಶುಂಠಿಯನ್ನು ಊರಿ ಬಿಡಿ. ಸೆಗಣಿನೀರು, ಬೂದಿ, ಸೊಪ್ಪು ಇವಿಷ್ಟೇ ಸಾಕು. ಜೂನ್ ಕೊನೆಗಾಗುವಾಗ ಶುಂಠಿ ಮೊಳಕೆ ಬರುತ್ತದೆ. ಬೇಸಿಗೆ ಮುಗಿಯುವಾಗ ಬಲಿತು, ಗಿಡ ಮಾಗಿರುತ್ತದೆ. ಕೊಯಿಲಿಗೆ ಬಂದಿರುತ್ತದೆ.

ಮಾರುಕಟ್ಟೆಯಲ್ಲಿ ದರ ಹೆಚ್ಚಿದ್ದಾಗ ಮಣ್ಣೊಳಗಿಂದ ತೆಗೆದು ಮಾರಾಟ ಮಾಡಿ. ದರ ಕಡಿಮೆಯಿದೆಯೋ, ಅದು ಮಣ್ಣೊಳಗೇ ಇರಲಿ. ಮುಂದಿನ ಮಳೆಗಾಲದಲ್ಲಿ ಪುನಃ ಚಿಗುರಿ ಮಳೆಗಾಲ ಮುಗಿಯುವಾಗ ಇಮ್ಮಡಿಯಾಗಿರುತ್ತದೆ! ಯಾವ ಬ್ಯಾಂಕ್ ಒಂದೇ ವರುಷದಲ್ಲಿ ಹಣವನ್ನು ಡಬ್ಬಲ್ ಮಾಡಿ ಕೊಡುತ್ತದೆ ಹೇಳಿ? ನಮ್ಮ ಭೂಮಿತಾಯಿ ಕೊಡುತ್ತಾಳೆ.

ಈ ರೀತಿ ಮಾಡುವುದಾದಲ್ಲಿ ಶುಂಠಿಯಿರುವ ಜಾಗವನ್ನು ಬಿಸಿಲ ಝಳದಿಂದ ರಕ್ಷಿಸಲು ಸೊಪ್ಪು, ಮಡಲುಗಳಿಂದ ಮುಚ್ಚಲು ಮರೆಬಾರದು. ಶುಂಠಿಗೆ ಹೆಚ್ಚು ತೇವ ಬೇಡ. ತೇವವಿದ್ದರೆ ರೋಗವೋ ಇನ್ನೊಂದೋ ಬಾಧಿಸುತ್ತದೆ. ‘ಇದು ಮಣ್ಣೊಳಗಿನ ಗಂಟು’!

ಈ ಗುಂಟು ಉಂಟಲ್ಲಾ.. ಅದು ಕೃಷಿಕನ ಆಸ್ತಿ. ಊರಲ್ಲೆಲ್ಲಾ ಬೆಳೆದು ದಿಢೀರ್ ದೊಡ್ಡವನಾಗುತ್ತೇನೆ ಅಂದರೆ ಭೂಮಿ ತಾಯಿ ಬಿಡುವುದಿಲ್ಲ! ನಮಗೆ ಬೇಕಾದಷ್ಟು, ಎಟುಕಿದಷ್ಟು ಮಾತ್ರ ಕೃಷಿ ಮಾಡಬೇಕು.

ತೋಟದಲ್ಲೇನಿದೆ?

ಅಲ್ಫಾನ್ಸೋ, ಹೊನ್ನೆಬೆಟ್ಟು, ತೋತಾಪುರಿ..ಹೀಗೆ ೩೦-೪೦ ಮಾವಿನ ಮರಗಳು, ಬಾಳೆ, ಗೇರು, ಎಲ್ಲಾ ಬಹುವಾರ್ಷಿಕ ಮರಗಳಿಗೂ ಹಬ್ಬಿದ ಕಾಳುಮೆಣಸು ಬಳ್ಳಿ, ಹೆಬ್ಬಲಸು, ಹಲಸು, ಪುನರ್ಪುಳಿ, ಪೇರಳೆ, ಸಿಲ್ಕ್ ಕಾಟನ್ ಮರಗಳು. ಜತೆಗೆ – ಸಾಗುವಾನಿ, ಸುಬಾಬುಲ್, ಚಿಕ್ಕು, ಬಿಂಬುಳಿ, ದಾರೆಹುಳಿ, ಅನಾನಸು – ಇಷ್ಟೆಲ್ಲವೂ ಎರಡೆಕ್ರೆಯಲ್ಲಿ! ‘ಇವುಗಳಲ್ಲಿ ಕೆಲವು ಹೊಟ್ಟೆ ತುಂಬಿಸಬೇಕು, ಇನ್ನು ಕೆಲವು ಗಳಿಸಿಕೊಡಬೇಕು’ ಎನ್ನುವ ನಿಲುವು. ‘ನನ್ನ ಗಿಡಗಳು ಗಳಿಸಿಕೊಟ್ಟ ಹಣದ ಬಡ್ಡಿ ತಿಂಗಳಿಗೆ ಐದಾರು ಸಾವಿರ ಸಿಗುತ್ತದೆ!’

ಮರವೇರಿದ ಕಾಳುಮೆಣಸು

ನಮ್ಮ ತೋಟದಲ್ಲಿ ಕಾಳುಮೆಣಸು ನೋಡಿ. ಮಗ ಆನಂದನಿಗೆ ನಿಭಾಯಿಸಲು ಸಾಕೋ ಸಾಕಾಗುತ್ತದೆ. ವೀಳ್ಯದೆಲೆಯ ಬಳ್ಳಿಯನ್ನು ಮರಕ್ಕೆ ಹಬ್ಬಿಸುತ್ತೇವೆ. ಕಾಳುಮೆಣಸು ಯಾಕಾಗಬಾರದು? ಬಹುಶಃ ನಲವತ್ತು ವರುಷವಾಯಿತೆಂದು ಕಾಣ್ತದೆ – ತೋಟದಲ್ಲಿದ್ದ ಕೆಲವು ಮರಗಳಿಗೆ ಕಾಳುಮೆಣಸು ಬಳ್ಳಿಯನ್ನು ಹಬ್ಬಲು ಬಿಟ್ಟೆ. ಒಂದೊಂದು ಬಳ್ಳಿಯಲ್ಲೂ ಮೂರ್ನಾಲ್ಕು ಕಿಲೋ ಸಿಕ್ಕಿತು. ವಿಶ್ವಾಸ ಬಂತು. ಈಗ ನೋಡಿ. ನಮ್ಮ ತೋಟದೊಳಗಿನ ಎಲ್ಲಾ ಮರಗಳಲ್ಲೂ ಕಾಳುಮೆಣಸಿನ ಬಳ್ಳಿ ಹಬ್ಬಿದೆ.

ಕಾಳುಮೆಣಸಿಗೂ ಏರು ಮಡಿ ಮಾಡಿದ್ದೆ. ಎಲ್ಲಾ ಮರದ ಬುಡಗಳನ್ನು ಎತ್ತರಿಸಿದರೆ ಆಯಿತು. ಸೊಪ್ಪು, ಸೆಗಣಿ ನೀರು, ನೆಲಗಡಲೆ ರಸ, ಬೂದಿ ವರುಷಕ್ಕೊಮ್ಮೆ ಕೊಟ್ಟರೆ ಸಾಕು. ಏರು ಮಡಿಯಿರುವುದರಿಂದ ಬುಡದಲ್ಲಿ ನೀರು ನಿಲ್ಲುವುದಿಲ್ಲ.

ಹೀಗೂ ಮಾಡಬಹುದು – ನೆಲಗಡಲೆಯನ್ನು ಚೆನ್ನಾಗಿ ರುಬ್ಬಿ. ಒಂದು ಕೊಡ ನೀರಿಗೆ ಒಂದು ಲೋಟ ರುಬ್ಬಿದ ಹಿಟ್ಟನ್ನು ಹಾಕಿ ಕಲಕಿ. ಈ ಮಿಶ್ರಣವನ್ನು ದ್ರವಗೊಬ್ಬರವಾಗಿ ಉಣಿಸಿ.

ಎಲ್ಲಾ ಕಡೆ ಅಡಿಕೆ ಮರಗಳಿಗೆ ಕಾಳುಮೆಣಸು ಬಳ್ಳಿಯನ್ನು ಹಬ್ಬಿಸುತ್ತಾರೆ. ಎಷ್ಟೋ ಮಂದಿ ತೊಂದರೆಯಾಗಿಲ್ವಾ ಅಂತ ಕೇಳ್ತಾರೆ? ನನಗೇನೂ ಸಮಸ್ಯೆಯಾಗಿಲ್ಲ. ರೋಗ ಬಂದಿಲ್ಲ.

ದರ ಇದೆ ಅಂತ ಎಳತು-ಬೆಳೆದವನ್ನು ಒಟ್ಟಿಗೆ ಕೊಯಿದು ಮಾರಾಟ ಮಾಡಿದರೆ ರೇಟ್ ಸಿಗುವುದಿಲ್ಲ. ಬಳ್ಳಿಯಲ್ಲಿ ಕಾಳುಮೆಣಸಿನ ಗೊಂಚಲು ಬಲಿತು ಹಣ್ಣಾಗುವ ಹಂತಕ್ಕೆ ತಲುಪಿದವುಗಳನ್ನು ಮಾತ್ರ ಕೊಯ್ದು ಒಣಗಿಸಿದರೆ ಉತ್ತಮ ಗುಣಮಟ್ಟದ ಕಾಳುಮೆಣಸು ಸಿಗುತ್ತದೆ. ಒಂದೆ ಗಾತ್ರದ ಕಾಳುಗಳು ಸಿಗುತ್ತವೆ. ಅವುಗಳ ಬಣ್ಣ ಮಾಸುವುದಿಲ್ಲ. ಹೀಗೆ ಮಾಡಿದರೆ ಒಂದು ಕಷ್ಟವಿದೆ – ಆಗಾಗ್ಗೆ ಮರ ಹತ್ತಿ ಕೊಯ್ಯುತ್ತಿರಬೇಕು! ರೇಟ್ ಸಿಗುತ್ತದೆ ಅಂತ ಆದರೆ ಕೊಯ್ಯಲು ಏನು? ಕೃಷಿಕನಿಗೆ ಬೇರೇನು ಕೆಲಸ ಇದೆ ಹೇಳಿ?

ಅಮೃತದಂತಹ ರುಚಿ!

ತೆಂಗು, ಹಲಸು, ಮಾವು, ಬಾಳೆ, ಆನಾನಸು, ಚಿಕ್ಕು, ಗೇರು. ಎಲ್ಲವೂ ನನ್ನಲ್ಲಿದೆ. ನನ್ನಷ್ಟು ಶ್ರೀಮಂತ ಯಾರಿದ್ದಾರೆ ಹೇಳಿ?

ಗೇರು ಬೀಜವನ್ನೇ ತೆಕ್ಕೊಳ್ಳಿ. ಒಂದೊಂದು ಬೀಜ ಮರದಿಂದ ಬಿದ್ದಾಗಲೂ ಅದು ಇಪ್ಪತ್ತೈದು ಪೈಸೆ ಕೊಡುತ್ತದೆ ಎಂದರ್ಥ! ನಿಮಗೆ ‘ಅರಾರೂಟ್’ ಗೊತ್ತೋ? ಅದರ ಗೆಡ್ಡೆಯನ್ನು ಕತ್ತರಿಸಿ ಅಕ್ಕಿಯೊಂದಿಗೆ ರುಬ್ಬಿ ದೋಸೆ ಮಾಡಿದರೆ ಬಹಳ ರುಚಿಯಾಗಿರುತ್ತದೆ. ಆರೋಗ್ಯಕ್ಕೂ ಒಳ್ಳೆಯದು. ನೋಡಿ. ಅನಾನಸ್ ನೆಟ್ಟುಬಿಟ್ಟಿದ್ದೇನೆ. ಅದರಷ್ಟಕ್ಕೇ ಬೆಳೆಯುತ್ತಿದೆ. ಹಣ್ಣು ಕೊಡುತ್ತದೆ. ಚಿಕ್ಕೂ ಕೂಡಾ ಬೇಕಾದಷ್ಟು ಫಲ ಕೊಡುತ್ತದೆ. ನೀವು ಪೇಟೆಯವರಲ್ವಾ – ಈ ರುಚಿ ಪೇಟೆಯಲ್ಲಿ ಸಿಗುವ ಹಣ್ಣಿಗೆ ಸಿಗುತ್ತದೋ? ಇದಕ್ಕೆ ಅಮೃತದಂತಹ ರುಚಿ. ಇದನ್ನೆಲ್ಲಾ ತಿಂದು ‘ಬೊಡಿಯಿತು’ (ಸಾಕಾಯಿತು) ಅಂದರೆ ಮಾರಿಬಿಡಿ. ರೊಕ್ಕವೂ ಸಿಗುತ್ತದೆ.

ವಿಚಾರಚಿಂತನೆ

ನಮ್ಮ ದೇಶದಲ್ಲಿ ಕೃಷಿಕನೆಂದರೆ ಸಸಾರ. ಸಾಲವೇ ಇರದಂತಹ ಕೃಷಿ ವ್ಯವಸ್ಥೆ ಬಂದರೆ ದೇಶದಲ್ಲಿ ಬಡತನ ಇರದು. ನಾವು ಹತ್ತು ಪೈಸೆ ದುಡಿದರೆ, ಭೂಮಿತಾಯಿ ಮಿಕ್ಕುಳಿದ ತೊಂಭತ್ತು ಪೈಸೆ ನೀಡುತ್ತಾಳೆ! ನೋಡಿ, ಒಂದೇ ಒಂದು ಹಲಸಿನ ಬೀಜದಿಂದ ಮರವಾಗಿದೆ. ಪ್ರತೀವರ್ಷ ಅದರ ಹಣ್ಣನ್ನೂ ತಿಂದೆವು. ಆಸಕ್ತರಿಗೂ ನೀಡಿದೆವು. ಮೊನ್ನೆ ಆ ಮರವನ್ನು ಮಾರಿದೆವು. ಒಂದು ಲಕ್ಷ ರೂಪಾಯಿ ಬಂತು!

ನಾನು ‘ಆಧುನಿಕ ಕೃಷಿ’ಗಾಗಿ ಒಂದು ಪೈಸೆಯನ್ನೂ ಖರ್ಚು ಮಾಡಿಲ್ಲ. ಮಾಡಬೇಕಾದುದೂ ಇಲ್ಲ. ವಿನೋಬಾ ಭಾವೆ ಹೇಳುತ್ತಿದ್ದರು – ‘ದೇಶದಲ್ಲಿ ಪ್ರತೀಯೊಬ್ಬನೂ ಹಾರೆ-ಗುದ್ದಲಿ ಹಿಡಿಯುವಂತಾಗಬೇಕು’. ಎಲ್ಲರೂ ದುಡಿದರೆ ಬಡತನ ಎಲ್ಲಿದೆ?

ಬಹಳಷ್ಟು ಮಂದಿ ಹೊಳೆ ಬದಿ (ದಡ) ಗಳಲ್ಲಿ ಕೃಷಿ ಮಾಡುತ್ತಾರೆ. ಮಳೆಗಾಲದಲ್ಲಿ ಅವೆಲ್ಲಾ ಕೊಚ್ಚಿ ಹೋಗುತ್ತದೆ. ನಂತರ ‘ಪರಿಹಾರ ಕೊಡಿ’ ಅಂತ ಅತ್ತುಕೊಳ್ಳುತ್ತಾರೆ. ನಮ್ಮ ಸರಕಾರದ ಪರಿಹಾರ ನಾಟಕವೂ ಸುರುವಾಗುತ್ತದೆ.! ಅದನ್ನು ಪಡೆಯುವ ಫಲಾನುಭವಿಗಳ ಧೋರಣೆ ಆಗ ಬತ್ತಲಾಗುತ್ತದೆ! ಅಲ್ಲ.. ಎಲ್ಲರಿಗೂ ಪರಿಹಾರ ಕೊಡಲು ಸರಕಾರದಲ್ಲಿ ಹಣವಿದೆಯಾ. ನಾವು ತೆರಿಗೆ ರೂಪದಲ್ಲಿ ಕೊಟ್ಟರೆ ಉಂಟಷ್ಟೇ..

‘ನನ್ನ ಬಡತನ ದೂರ ಮಾಡಲು ಕೃಷಿಯ ಬುಡಕ್ಕೆ ಬಂದೆ. ಅದು ನನ್ನ ಕೈಹಿಡಿಯಿತು. ಇಲ್ಲದಿದ್ದರೆ ಎಲ್ಲೋ ಹೋಟೇಲಿನ ಮೂಲೆಯಲ್ಲಿರುತ್ತಿದ್ದೆ’!

‘ಕೃಷಿಯಲ್ಲಿ ಯಂತ್ರಗಳು ನಮ್ಮ ಮೇಲೆ ಸವಾರಿ ಮಾಡಬಾರದು. ನಾವು ಅವುಗಳ ಮೇಲೆ ಸವಾರಿ ಮಾಡಬೇಕು’, ‘ಬೆಳಿಗ್ಗೆ ದುಡಿದು ಸಾಯಂಕಾಲ ಹಣ ಎಣಿಸುವ ಆಸೆಯಿದ್ದವರಿಗೆ ಕೃಷಿ ಬದುಕು ಸಲ್ಲ. ಅವರಿಗೆ ಲಾಟರಿ ಒಳ್ಳೆಯದು!’

‘ಬ್ಯಾಂಕಿನವರೇ, ದಯಮಾಡಿ ಕೃಷಿಕರಿಗೆ ಸಾಲಕೊಟ್ಟು ಅವರನ್ನು ಲಗಾಡಿ ಕೊಡಬೇಡಿ’, ಕೃಷಿ ಮತ್ತು ಕೈಗಾರಿಕೆಗಳು ರೈಲಿನ ಎರಡು ಹಳಿಯಿದ್ದಂತೆ. ಹಳಿಯಲ್ಲಿ ಸಮತೋಲನವಿದ್ದಾಗ ಮಾತ್ರ ಅಭಿವೃದ್ಧಿಯ ರೈಲು ಅದರ ಮೇಲೆ ಚಲಿಸಲು ಸಾಧ್ಯ’