ಗದಗ ಜಿಲ್ಲೆಯ ಮುಂಡರಗಿ ರಾಜ್ಯದ ಹಿಂದುಳಿದ ತಾಲ್ಲೂಕು.  ಇಲ್ಲಿನ ಮೊದಲ ಸಮಸ್ಯೆ ನೀರು, ಎರಡನೇ ಸಮಸ್ಯೆ ನೀರನೊಳಗಿನ ಫ್ಲೋರೈಡ್.  ಇದರಿಂದ ಸಮಸ್ಯೆಗಳ ಸರಮಾಲೆಯೇ ತುಂಬಿದೆ.

ಈ ಸಮಸ್ಯೆಗಳೆಲ್ಲಾ ಸರ್ಕಾರಕ್ಕೆ ತಿಳಿಯಲಾರದ್ದಲ್ಲ.  ಇದೇ ಸಮಸ್ಯೆ ಕರ್ನಾಟಕದ ಎರಡು ಸಾವಿರ ಹಳ್ಳಿಗಳಲ್ಲಿ ಇದೆ.  ಈ ಸಮಸ್ಯೆಯನ್ನು ಸಮಗ್ರವಾಗಿ ಹಾಗೂ ಕಳಕಳಿಯಿಂದ ನೋಡದ ಕಾರಣ 25 ವರ್ಷಗಳಿಂದಲೂ ಹಾಗೇ ಇದೆ.

ಬೈಫ್(BAIF) ಗ್ರಾಮೀಣಾಭಿವೃದ್ಧಿ ಸಂಸ್ಥೆ ಮುಂಡರಗಿ ತಾಲ್ಲೂಕಿನ ಒಂಭತ್ತು ಹಳ್ಳಿಗಳಲ್ಲಿ ತನ್ನ ಯೋಜನೆಯನ್ನು ಕಾರ್ಯರೂಪಗೊಳಿಸುತ್ತಿದೆ.  ಇದಕ್ಕೆ ಜರ್ಮನ್ ಸಂಸ್ಥೆಯೊಂದರ ಸಹಕಾರವಿದೆ. ವಿರೂಪಾಪುರ, ಕಲ್ಕೇರಿ, ಮುಷ್ಠಿಕೊಪ್ಪ, ತಿಪ್ಪಾಪುರ, ಬೂದಿಹಾಳ, ಹಾರೋಗೇರಿ, ಬಸಾಪುರ, ಬೆನ್ನಿಹಳ್ಳಿ ಹಾಗೂ ಮುಕ್ತಾಂಪುರಗಳು ಬೈಫ್ ಕಾರ್ಯಯೋಜನೆಯ ವ್ಯಾಪ್ತಿಯಲ್ಲಿ ಇವೆ.

ತೆರೆದ ಬಾವಿಯ ನೀರಾಗಿರಲಿ, ಕೊಳವೆ ಬಾವಿಯ ನೀರಾಗಲಿ ಊರಿನ ಎಲ್ಲಾ ನೀರಿನಲ್ಲೂ 3.5 ಮಿಲಿ ಗ್ರಾಂ/ಲೀಟರ್ ನಿಂದ 6.5 ಮಿಲಿಗ್ರಾಂ/ಲೀಟರ್ ಫ್ಲೋರೈಡ್ ಇತ್ತು. ಇದರ ಪರಿಣಾಮ ಜಡತ್ವ, ಹಿಮ್ಮಡಿ ನೋವು, ಸೊಂಟ, ಕಾಲುಗಂಟು ನೋವು ಕೊನೆಯಲ್ಲಿ ನಡು ಬಾಗಿ, ನಡೆಯಲಾಗದೇ ಸಾವಿನ ಹಾದಿ ಕಾಯುತ್ತಾ ಉಳಿವ ಸ್ಥಿತಿ. ದುರ್ಬಲರ ಮೂಳೆಗಳೇ ಈ ಫ್ಲೋರೈಡಿನ ಆಹಾರ.

ಇದರ ನಿವಾರಣೆಗೆ ನೀರನ್ನು ಬದಲಿಸಬೇಕೆಂಬ ಸಲಹೆ ಸರ್ಕಾರದ್ದು. ತುಂಗಭದ್ರಾ ನೀರು ಊರಿಗೆ ಹರಿದು ಬಂದಿದ್ದೂ ಆಯಿತು. ಆದರೂ ಸಮಸ್ಯೆ ಪರಿಹಾರವಾಗಲಿಲ್ಲ. ಅಂದರೆ ನೀರನ್ನೊಂದೇ ಸರಿಪಡಿಸುವುದರಿಂದ ಖಂಡಿತಾ ಊರು ಫ್ಲೋರೈಡ್-ಮುಕ್ತವಾಗುತ್ತದೆ ಎನ್ನುವುದು ಪೂರ್ತಿ ಸತ್ಯವಲ್ಲ ಎಂದು ಸಾಬೀತಾಯಿತು. ಊರಿನ ಸರ್ವಾಂಗ ಅಭಿವೃದ್ಧಿ ಅಥವಾ ಸುಸ್ಥಿರತೆಯೇ ಮುಖ್ಯವಾಗಿತ್ತು.

 • ಫ್ಲೋರೋಸಿಸ್ ಬರುವುದು ಬಡವರಿಗೆ, ಕಾರಣ ಅಪೌಷ್ಟಿಕತೆ.
 • ಮುಂಗಾರಿನಲ್ಲಿ ಬೋರ್ವೆಲ್ ಹಾಗೂ ತೆರೆದ ಬಾವಿಗಳ ಫ್ಲೋರೈಡ್ ಪ್ರಮಾಣ ಕುಗ್ಗುತ್ತದೆ.

ಅಂದರೆ ಬೋರ್ವೆಲ್/ತೆರೆದ ಬಾವಿಗಳ ನೀರು ಹೆಚ್ಚಿದಾಗ ಫ್ಲೋರೈಡ್ ಪ್ರಮಾಣವೂ ಅದರೊಂದಿಗೆ ಬೆರೆಯುತ್ತದೆ. ಹೊಸ ನೀರಿನಲ್ಲಿ ಫ್ಲೋರೈಡ್ ಇಲ್ಲದ ಕಾರಣ ಒಟ್ಟು ನೀರಿನಲ್ಲಿಯ ಫ್ಲೋರೈಡ್ ಅಂಶ ಕಡಿಮೆಯಾಗುತ್ತದೆ.  ಅದೇ ರೀತಿ ಬಡವರು ಪೌಷ್ಟಿಕ ಆಹಾರ ಸೇವನೆ ಮಾಡಿದರೆ ಫ್ಲೊರೈಡಿನ ಪರಿಣಾಮವನ್ನು ಎದುರಿಸುವ ಶಕ್ತಿ ದೇಹಕ್ಕೆ ಬರುತ್ತದೆ. ಪೌಷ್ಟಿಕ ಆಹಾರ ಬಡವರು ಬಳಸುವ ಪಡಿತರದಲ್ಲಿ ಸಿಗಲು ಸಾಧ್ಯವಿಲ್ಲ. ಕೊಳ್ಳಬೇಕು ಅಥವಾ ಬೆಳೆಯಬೇಕು. ಕೊಳ್ಳಲು ದಿನಗೂಲಿ 25 ರೂಪಾಯಿಗಳಾದರೆ, ಹೇಗೆ ಸಾಧ್ಯ? ಬೆಳೆಯಲು ಭೂಮಿ ಬರಡು. ಅಭಿವೃದ್ಧಿಪಡಿಸಲು ಹಣವಿಲ್ಲ, ಬೇರೆ ಮಾರ್ಗ ಗೊತ್ತಿಲ್ಲ.

ಬಡತನ ನಿರ್ಮೂಲನೆ, ನೀರು ನಿರ್ವಹಣೆ ಈ ಎರಡೂ ಒಟ್ಟಾಗಿ ಆದರೆ ಫ್ಲೋರೋಸಿಸ್ ತಾನಾಗಿ ಹೋಗುತ್ತದೆ. ಬಡತನ ನಿರ್ಮೂಲನೆ ಎಂದರೆ ಮಣ್ಣಿನ ಫಲವತ್ತತೆಯ ಹೆಚ್ಚಳ, ಕೃಷಿ ಉತ್ಪಾದಕತೆಯ ಹೆಚ್ಚಳ, ಬೆಳೆ ವಿನ್ಯಾಸ, ನೀರು ಬಳಕೆಯ ರೀತಿ, ನೀರು ಸಂಗ್ರಹ ಪದ್ಧತಿ ಇವೆಲ್ಲಾ ಚಟುವಟಿಕೆಗಳು ಸಮರ್ಥವಾಗಿ ಆಗಬೇಕು.

ಬೈಫ್ ಸಂಸ್ಥೆಯ ‘ಸಚೇತನ’ ಎನ್ನುವ ಯೋಜನೆಯ ಮೂಲಕ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯನ್ನು ಗುರಿಯಾಗಿಟ್ಟುಕೊಂಡು ಸ್ಥಳೀಯ ಬಡತನ ಪರಿಸ್ಥಿತಿಯನ್ನು ಎದುರಿಸುವ ಕೆಲಸ ಮಾಡಿದೆ.

ಫ್ಲೋರೋಸಿಸ್ ಹಾಗೂ ಬಡತನ ಹೇಗೆ ಅಂಟಿಕೊಂಡಿದೆಯೆಂದರೆ ಇದನ್ನು ಬೇರ್ಪಡಿಸುವ ಉಪಾಯವೇ ಇಲ್ಲವೆನ್ನುವಂತೆ ಜನ ನಿರಾಶರಾಗಿದ್ದರು. ಫ್ಲೋರೋಸಿಸ್-ನಿಂದಾಗಿ ಅಂಗವೈಕಲ್ಯ, ಜಡತೆ ಇವರನ್ನು ಕೃಷಿಗಾಗಲೀ, ಕೂಲಿಗಾಗಲೀ ಅಥವಾ ಇನ್ಯಾವುದೇ ಕೆಲಸಕ್ಕೆ ತೊಡಗಲು ಬಿಡುತ್ತಿರಲಿಲ್ಲ. ಕೊಳ್ಳುವ ಶಕ್ತಿ ಕ್ಷೀಣವಾದರೆ ಅಪೌಷ್ಟಿಕತೆ, ಬಡತನ ಏನೆಲ್ಲಾ ನೆಂಟರು ತಾವೇ ತಾವಾಗಿ ಬರುತ್ತಾರೆ. ಇದರಿಂದಾಗಿ ಫ್ಲೋರೋಸಿಸ್ನ ಆರ್ಭಟ ಹೆಚ್ಚುತ್ತದೆ.

ತುರ್ತಾಗಿ ಆಗಬೇಕಾದ ಕೆಲಸವೆಂದರೆ ಜಡತೆಯ ನಿವಾರಣೆ. ಅದಕ್ಕಾಗಿ ಬದಲೀ ನೀರಿನ ವ್ಯವಸ್ಥೆ. ಸಿಹಿನೀರಿನ ಏಕೈಕ ಮೂಲವೆಂದರೆ ಮಳೆ. ಮಳೆ ನೀರನ್ನು ಹಿಡಿದಿಟ್ಟುಕೊಳ್ಳಬೇಕಾದ ವ್ಯವಸ್ಥೆ. ಇದರೊಂದಿಗೆ ಆದಾಯ ಹೆಚ್ಚಿಸುವ ಚಟುವಟಿಕೆಗಳು. ನಿಧಾನವಾಗಿಯಾದರೂ ಆಗಲೇಬೇಕಾದ್ದು ಫ್ಲೋರೈಡ್ ನಿಯಂತ್ರಣ. ಕೃಷಿ ಉತ್ಪಾದನೆಯ ಹೆಚ್ಚಳ. ಅಪೌಷ್ಟಿಕತೆಯ ನಿವಾರಣೆ ಹಾಗೂ ಸಾಕ್ಷರತೆ.

ಮೈಲಾರಪ್ಪ ಬೂದಿಹಾಳ್

ಊರಿನ ರೈತರಂತೆ ಮೈಲಾರಪ್ಪ ಲಿಂಗಶೆಟ್ಟರೂ ಸಹ ಕೃಷಿಯಲ್ಲಿ ಆಸಕ್ತಿ ಕಳೆದುಕೊಂಡಿದ್ದರು. ಕಲ್ಲು, ಮಣ್ಣಿನಿಂದ ಕೂಡಿದ ಅವರ ಮೂರು ಎಕರೆ ಒಣಭೂಮಿ ಮೈಲಾರಪ್ಪನವರ ಕುಟುಂಬಕ್ಕೆ ಹೊರೆಯಾಗಿತ್ತು.

“ಮಳೆಗಾಲದಲ್ಲಿ ಮಾತ್ರ ಹೊಲಕ್ಕೆ ಹೋಗ್ತಿದ್ದೆವು. ಮಳೆ ಇಲ್ಲಾಂದ್ರೆ ಬೆಳೀನೂ ಇರ್ಲಿಲ್ಲ”.  ಮೈಲಾರಪ್ಪ ಅಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಇವರು ಮೊದಲು ಮಾಡಿದ ಕೆಲಸ ಮಣ್ಣು ಸವಕಳಿ ತಡೆದು ಹೊಲದಲ್ಲಿ ನೀರಿಂಗಿಸಿದರು. ಉದಿ ಬದುಗಳು, ತಿರುಗಾಲುವೆ, ಕೃಷಿಹೊಂಡಗಳು ಇವರ ಹೊಲದಲ್ಲಿ ನಿರ್ಮಾಣಗೊಂಡವು. ಜೋಳ, ಶೇಂಗಾದೊಂದಿಗೆ ಹೆಸರು ಹಾಗೂ ಕೆಂಪುಬೇಳೆಗಳು ಅಂತರಬೆಳೆಯಾಗಿ ಸೇರಿದವು.

“ಮುಂಗಾರು ಕೈಕೊಟ್ಟರೂ ಇಳುವರಿ ಸಾಕಷ್ಟು ಸಿಕ್ಕಿತು. ನಾಲ್ಕಾರು ರೀತಿಯ ಬೆಳೆಗಳನ್ನು ಒಟ್ಟಿಗೆ ಬೆಳೆದಿದ್ದು ಇದೇ ಮೊದಲು” – ಮೈಲಾರಪ್ಪನವರ ಈ ಯಶಸ್ಸು ಮುಂದಿನ ಹೆಜ್ಜೆಗೆ ಪ್ರೇರೇಪಣೆಯಾಯಿತು.

ಒಂದು ಎಕರೆಯಲ್ಲಿ ಮಾವು, ಚಿಕ್ಕು, ಹುಣಸೆ, ಪೇರಲೆ, ನಿಂಬೆ, ತೆಂಗು, ಗೇರು, ನೇರಳೆ, ದಾಳಿಂಬೆ ಮರಗಳು, ಮೇವು, ಉರುವಲು ಹಾಗೂ ಹಸುರೆಲೆ ನೀಡುವ ಮರಗಳನ್ನು ಬೆಳೆದರು. ಇವರ ಹೊಲವೀಗ ಮುಚ್ಚಿಗೆ ಬೆಳೆ ಹಾಗೂ ಸಮಗ್ರ ಕೃಷಿ ಪದ್ಧತಿಗೆ ಉತ್ತಮ ಮಾದರಿಯಾಗಿದೆ.

“ನಾನೀಗ ದಿನಾಲೂ ಹೊಲಕ್ಕೆ ಬರುತ್ತೇನೆ. ಸೂಕ್ತ ನಿರ್ವಹಣೆಯಿಂದ ನನ್ನ ನೆಲವಿಂದು ನಗುತ್ತಿದೆ. ನನ್ನ ಕುಟುಂಬ ನೆಮ್ಮದಿಯಾಗಿದೆ”  – ಮೈಲಾರಪ್ಪನವರಂತೆ ಇನ್ನೂ ಅನೇಕ ರೈತರು ಇಂದು ಹೀಗೆ ನೆಮ್ಮದಿ ಕಂಡಿದ್ದಾರೆ.

ಈ ರೀತಿಯ ತುರ್ತು ಕೆಲಸಗಳಿಂದ ಜನರಿಗೆ ಜಡತೆಯ ನಿವಾರಣೆಯೊಂದಿಗೆ ಸಂಸ್ಥೆಯ ಮೇಲೆ ವಿಶ್ವಾಸ ಬಂದಿತ್ತು. ಆತ್ಮವಿಶ್ವಾಸವೂ ಬಂದಿತ್ತು.  ಹೀಗಾಗಿ ಮುಂದಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಉತ್ಸುಕರಾದರು. ಜನರ ಸಹಭಾಗಿತ್ವವಿದ್ದರೆ ಯಾವುದೇ ಕೆಲಸವೂ ಯಶಸ್ವಿಯಾಗಬಲ್ಲದು.

 • ಭೂಮಿಯ ಅಭಿವೃದ್ಧಿ
 • ಜಲಸಂಪನ್ಮೂಲಗಳ ಅಭಿವೃದ್ಧಿ
 • ಸುಸ್ಥಿರ ಕೃಷಿ ವಿಧಾನಗಳ ಅಳವಡಿಕೆ
 • ಭೂರಹಿತರಿಗೆ ಆದಾಯವರ್ಧನೆ ಚಟುವಟಿಕೆ
 • ಸಾಮರ್ಥ್ಯ ತುಂಬುವಿಕೆ ಹಾಗೂ ಜಾಗೃತಿ.

ಇವು ಎರಡನೇ ಹಂತದಲ್ಲಿ ಇಸವಿ 2003ರ ನಂತರ ಹಮ್ಮಿಕೊಂಡ ಕಾರ್ಯಕ್ರಮಗಳು.

ಭೂಮಿಯ ಅಭಿವೃದ್ಧಿ

ಭೂಮಿಯ ಅಭಿವೃದ್ಧಿಯಲ್ಲಿ ಮೊದಲ ಪ್ರಾಧಾನ್ಯತೆ ಬದುಗಳ ನಿರ್ಮಾಣ. ಕೊರಕಲುಗಳಿಗೆ ತಡೆ, ನೀರಿಂಗಿಸುವ ಕಾಲುವೆಗಳಿಗಾಗಿತ್ತು. ಕಾಲುವೆ ಪಕ್ಕ ಬದುಗಳ ನಿರ್ಮಾಣಕ್ಕೆ ಒತ್ತು ನೀಡಲಾಯಿತು. ಇದರಿಂದ ಮಣ್ಣಿನ ಸವಕಳಿ ಕಡಿಮೆ ಮಾಡುವುದು ಹಾಗೂ ನೀರು ಇಂಗಿಸುವ ಮೂಲಕ ಜಮೀನಿನಲ್ಲಿ ತೇವಾಂಶ ಸಂರಕ್ಷಣೆ.

ಒಂದು ಮಳೆ ಋತುವಿನಲ್ಲಿ, ಒಂದು ಎಕರೆಯಲ್ಲಿ ಈ ರೀತಿಯ ಕಾಲುವೆ ಹಾಗೂ ಬದುಗಳ ನಿರ್ಮಾಣದಿಂದ ಒಂದೂವರೆ ಲಕ್ಷ ಲೀಟರ್ ನೀರು ಇಂಗುತ್ತದೆ. ಇದರಿಂದ ಫ್ಲೋರೈಡ್ ಅಂಶ ತಿಳಿಯಾಗುವಿಕೆ ಹಾಗೂ ಮತ್ತೊಂದು ಮಳೆ ಋತುವಿನವರೆಗೆ ಭೂಮಿಯಲ್ಲಿ ತೇವಾಂಶ ಉಳಿಯುವಂತೆ ಪ್ರಯತ್ನ.

ಬದುಗಳ ಮೇಲೆ ಸ್ಟೈಲೋಹೆಮಾಟ ಹಾಗೂ ಗ್ಲಿರಿಸೀಡಿಯಾ ಮೇವಿನ ಬೆಳೆಗಳ ಬಿತ್ತನೆ. ಮೇವಿನ ಪೂರೈಕೆಗೆ ಸುಬಾಬುಲ್, ಬೇವು, ಅಕೇಸಿಯಾ, ಕಕ್ಕೆ ಗಿಡಗಳು ಉರುವಲಿಗೆ, ಗೊಬ್ಬರಕ್ಕೆ. ಹೀಗೆ 1,600 ಕುಟುಂಬಗಳು 2,610 ಹೆಕ್ಟೇರ್ ಪ್ರದೇಶದಲ್ಲಿ ಕಾಲುವೆ ಹಾಗೂ ಬದುಗಳನ್ನು ನಿರ್ಮಿಸಿವೆ.

ಕೊರಕಲು ತಡೆ ನಿರ್ಮಾಣ 168 ಕಡೆಗಳಲ್ಲಾಗಿದೆ. ಹೊಲದ ಸುತ್ತಮುತ್ತ ಸಿಗುವ ಕಲ್ಲುಗಳನ್ನೇ ಬಳಸಿ ಬಾಂದಾರಗಳ ನಿರ್ಮಾಣ, ನೀರಿಂಗಿಸುವ ಕಾಲುವೆಗಳನ್ನು ಪ್ರತಿ ಹೊಲದ ಅಂಚಿನಲ್ಲೂ ನಿರ್ಮಿಸಲಾಗಿದೆ. ಇದರಿಂದ ನೀರು ಹಾಗೂ ಮಣ್ಣು ಕೊಚ್ಚಿಹೋಗುವಿಕೆ ನಿಂತಿದೆ. ಕೃಷಿ ಭೂಮಿಯಲ್ಲದ ಜಾಗಗಳಲ್ಲೂ ಇದನ್ನು ನಿರ್ಮಿಸಲಾಗಿದೆ. ಕಾರಣ ಮಳೆನೀರು ಸಂಗ್ರಹಣೆ ಹಾಗೂ ಫ್ಲೋರೈಡ್ ಅಂಶ ತಗ್ಗಿಸುವಿಕೆ.

ಜಲಸಂಪನ್ಮೂಲಗಳ ಅಭಿವೃದ್ಧಿ

ಅಂತರ್ಜಲ ಹೆಚ್ಚಳದೊಂದಿಗೆ ಫ್ಲೋರೈಡ್ ಅಂಶ ಕಡಿಮೆ ಮಾಡುವಿಕೆ ಗುರಿ. ಅದಕ್ಕಾಗಿ ಕೃಷಿ ಹೊಂಡಗಳ ನಿರ್ಮಾಣ. ಕೊಳವೆ ಬಾವಿಗಳಿಗೆ ಜಲ ಮರುಪೂರಣ ಹಾಗೂ ತಿರುವುಗಾಲುವೆಗಳ ನಿರ್ಮಾಣ ಇವು ಮುಖ್ಯ ಕಾಮಗಾರಿಗಳು.

ಮಳೆನೀರಿನ ಸಂಗ್ರಹ, ಮಳೆನೀರಿನ ಪ್ರಯೋಜನ ತಿಳಿದ ಮೇಲೆ ಛಾವಣಿ ನೀರಿನ ಸಂಗ್ರಹ ಮಾಡುವುದರ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಿದೆ. ಈ ಹಳ್ಳಿಗಳ 35 ಮನೆಗಳಲ್ಲಿ ಛಾವಣಿ ನೀರಿನ ಸಂಗ್ರಹ ಮತ್ತು ನೆಲಮಟ್ಟದ ನೀರಿನ ಸಂಗ್ರಹ ಮಾಡಲಾಗಿದೆ. ಕೆಲವು ಮನೆಯ ಮಾಳಿಗೆಗಳು ಮಣ್ಣಿನವು. ಅವನ್ನು ಸಗಣಿಯಿಂದ ಸಾರಿಸಿ, ಸುಣ್ಣ ಬಳಿದು ಚೊಕ್ಕ ಮಾಡುತ್ತಾರೆ. ಆಮೇಲೆ ಮೊದಲ ಮಳೆಯ ಮೊದಲ ನೀರನ್ನು ಬಿಟ್ಟು ಎರಡನೇ ಮಳೆಯಿಂದ ನೀರು ಸಂಗ್ರಹಣೆ ಪ್ರಾರಂಭಿಸುತ್ತಾರೆ.

ಪ್ರತಿವರ್ಷ ಮಳೆನೀರು ಸಂಗ್ರಹಿಸುವ ಮೊದಲು ಟ್ಯಾಂಕನ್ನು ಸ್ವಚ್ಛಮಾಡಿ ಸುಣ್ಣ ಬಳಿಯುತ್ತಾರೆ. ನೀರು ಬೀಳುವ ಸೋಸು ಗುಂಡಿಯನ್ನು ಸರಿಪಡಿಸುತ್ತಾರೆ. ವಾಸನೆರಹಿತ, ಶುದ್ಧನೀರನ್ನು ಸಂಗ್ರಹಿಸುವ ವಿಧಾನ ಈಗ ಎಲ್ಲರಿಗೂ ತಿಳಿದಿದೆ. 2003ರಲ್ಲಿ ಬೈಫ್ ಸಂಸ್ಥೆ ಈ ತೊಟ್ಟಿಗಳನ್ನು ಕಟ್ಟಿಕೊಳ್ಳಲು ಶೇಕಡಾ 80 ಸಹಾಯಧನ, ಸಹಕಾರ, ಮಾದರಿ ಹಾಗೂ ತಜ್ಞರನ್ನು ನೀಡಿ ಮಾಡಿದ ಕೆಲಸ ಇಂದು ಜನಪ್ರಿಯವಾಗಿದೆ.

ಕೆಲವರು ಮನೆಯ ಪಕ್ಕದ ಜಾಗದಲ್ಲಿ ಮತ್ತು ಹೊಲದಲ್ಲಿ ಈ ರೀತಿ ನೆಲಮಟ್ಟ ಸರಿಪಡಿಸಿಕೊಂಡು ಅದರ ಮೇಲೆ ಬಿದ್ದ ನೀರನ್ನು ಸಂಗ್ರಹಿಸುವ ಮಾದರಿ ಮಾಡಿ ತೊಟ್ಟಿ ಕಟ್ಟಿಸಿದ್ದಾರೆ. ಈ ಮಾದರಿಯಲ್ಲಿ ಆಗಾಗ ನೆಲವನ್ನು ಶುಚಿಗೊಳಿಸುವುದು, ಸುಣ್ಣ ಹಚ್ಚುವುದು ಮುಖ್ಯ. ನೀರು ಸೋಸುಗುಂಡಿಯ ಮಾರ್ಗದಲ್ಲಿ ನೆಲದೊಳಗಿರುವ ತೊಟ್ಟಿಗೆ ಬೀಳುತ್ತದೆ.

ಆಯಾ ಕುಟುಂಬಗಳಿಗೆ ಸಾಕಾಗುಷ್ಟು ದೊಡ್ಡದಾಗಿರುವ, ವರ್ಷವಿಡೀ ಕುಡಿಯಲು ಹಾಗೂ ಅಡುಗೆಗೆ ಸಾಕಾಗುವಷ್ಟು ನೀರು ಸಂಗ್ರಹಿಸುವ ಸಾಮರ್ಥ್ಯದ ತೊಟ್ಟಿಗಳಿವು. ಇವರು ಇದಕ್ಕೆ ಬೀಗ ಹಾಕಿಟ್ಟುಕೊಳ್ಳುವಷ್ಟು ನೀರಿನ ಮೌಲ್ಯ ಹೆಚ್ಚಿದೆ.

ಮಳೆನೀರು ಕುಡಿಯುವುದರಿಂದ ಜನರ ಆರೋಗ್ಯ ಸುಧಾರಿಸುವುದು ಮೇಲ್ನೋಟಕ್ಕೆ ಕಾಣುತ್ತದೆ. ಹಿಮ್ಮಡಿನೋವು, ಮೊಣಕಾಲು ಗಂಟುನೋವು, ಸೊಂಟನೋವು, ಬೆಳಗ್ಗೆ ಏಳಲಾಗದ ಜಡತ್ವ, ಕೆಲಸ ಮಾಡಲಾಗದ ಸುಸ್ತು ಇವೆಲ್ಲಾ ಇಲ್ಲವೆಂದು ಮಳೆನೀರು ಕುಡಿವ ಜನರ ಅಭಿಪ್ರಾಯ. ಆದರೆ ಮುಷ್ಠಿಕೊಪ್ಪದ ಕಲ್ಕೇರಿಯ ಬಸವರಾಜ ಗಾಳಿಯವರ ಪ್ರಕಾರ ಕಲ್ಕೇರಿಯ ಶಾಲೆಯ ಮಕ್ಕಳ ಮತ್ತು ಮುಂಡರಗಿಯ ಕಾಲೇಜಿನ ಅನೇಕ ಯುವಕರ ಹಲ್ಲುಗಳು ಕಪ್ಪಾಗಿರುವುದನ್ನು ಖಂಡಿತವಾಗಿ ಹೇಳುತ್ತಾರೆ.

ಮುಷ್ಠಿಕೊಪ್ಪದ ಅನ್ನಕ್ಕ, ಚೇತನ, ದ್ಯಾಮವ್ವ, ಮುದುಕೇಶ ಹೀಗೆ ಅನೇಕ ಮಕ್ಕಳ ಹಲ್ಲುಗಳು ಈಗಲೂ ಕಪ್ಪಾಗಿವೆ. ಈ ಮಕ್ಕಳಲ್ಲಿ ಕೆಲವರಿಗೆ ಪೌಷ್ಟಿಕ ಆಹಾರದ ಕೊರತೆಯೇ ದುರ್ಬಲತೆಗೆ ಕಾರಣವೆನ್ನುವುದು ಸಮೀಕ್ಷೆಯಿಂದ ತಿಳಿಯುತ್ತದೆ. ಮತ್ತೊಂದು ಮುಖ್ಯ ಕಾರಣ ಸೋದರಸಂಬಂಧದಲ್ಲಿ ಮದುವೆ ಮಾಡಿಕೊಳ್ಳುವುದು. ಇದು ಅನುವಂಶಿಕ ದುರ್ಬಲತೆಗೆ ಕಾರಣವಾಗಿದೆ. ಕಳೆದ ಎರಡು ವರ್ಷಗಳಿಂದ ಮಳೆನೀರು ಕುಡಿಯುತ್ತಿರುವ ಕಾರಣ ಹತ್ತಾರು ವರ್ಷಗಳಿಂದ ಬೇರುಬಿಟ್ಟ ಫ್ಲೋರೋಸಿಸ್ಸನ್ನು ತಕ್ಷಣದಲ್ಲಿ ಕಡಿಮೆಯಾಗಿಸುವುದು ಸಾಧ್ಯವಿಲ್ಲ.

ಆದರೆ ಈಗಿರುವ 40ರ ಹರೆಯದವರಲ್ಲಿ ನಡುಬಾಗಿದವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು ಉಲ್ಲೇಖನೀಯ.

ಕೃಷಿಹೊಂಡಗಳ ನಿರ್ಮಾಣದ ಉದ್ದೇಶ ಕೃಷಿಗೆ ಸಕಾಲದಲ್ಲಿ ನೀರು ಸಿಗುವಂತೆ ಮಾಡುವ ವ್ಯವಸ್ಥೆ ಹಾಗೂ ಹೆಚ್ಚಾದ ನೀರು ಕೃಷಿಹೊಂಡ ಸೇರಿ ಅಂತರ್ಜಲ ಮಟ್ಟ ಏರಿಸಬೇಕೆಂಬ ಉದ್ದೇಶ. ಹೀಗೆ 1,135 ಕೃಷಿಹೊಂಡಗಳ ನಿರ್ಮಾಣ. ಅಳತೆ 30X 30X 10 ಕ್ಯುಬಿಕ್ ಅಡಿಗಳು. ಒಮ್ಮೆ ಒಂದು ಹೊಂಡ ತುಂಬಿದರೆ ನೀರಿಂಗುವ ಪ್ರಮಾಣ ಎರಡು ಲಕ್ಷ ಲೀಟರ್.

ಪಾಟೀಲರ ಹೊಂಡ

ದಿವ್ಯಜ್ಯೋತಿ ಗ್ರಾಮದ ವಿಕಾಸ ಸಮಿತಿ ಅಂದು ಶ್ರಮದಾನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಲ್ಕೇರಿಯ ಎಲ್ಲ ಸ್ವಸಹಾಯ ಗುಂಪುಗಳ ಸದಸ್ಯರು ಹಾಜರಿದ್ದರು. ಅಂದಿನ ಕೆಲಸ ಪಾಟೀಲರ ಕೃಷಿಹೊಂಡದ ಸ್ವಚ್ಛತೆ. ಮಳೆಯಿಂದಾಗಿ ಹೂಳು ತುಂಬಿದ ಹೊಂಡವನ್ನು ಸರಿಪಡಿಸುವಿಕೆ. ಚಿಕ್ಕ ಹೊಂಡ ಸರಿಪಡಿಸಲು ಊರಿನ ಎಲ್ಲರೂ ಬಂದಿದ್ದೇಕೆ? 100ಕ್ಕೂ ಹೆಚ್ಚು ಜನ ಸೇರಿದ್ದರ ಹಿಂದಿನ ರಹಸ್ಯವೇನು? ಅದೂ ಭಾನುವಾರ ಎಂಟುಗಂಟೆಗೆ ಎಲ್ಲರೂ ಬಂದಿರುವುದರ ಗುಟ್ಟೇನು?

ಕಲ್ಕೇರಿಯ ಶಂಕರಗೌಡ ಪಾಟೀಲರು ತಮ್ಮ ಹೊಲದಲ್ಲಿ ಮೊದಲು ಕೃಷಿಹೊಂಡ ತೆಗೆಸಿದರು. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಪರದಾಡುತ್ತಿದ್ದ ಕಲ್ಕೇರಿಯ ಜನಕ್ಕೆ ಅದು ಮರುಭೂಮಿಯ ಜೀವಜಲ ಓಯಸಿಸ್-ನಂತಾಗಿತ್ತು. ಊರಿನ ಕೊಳವೆಬಾವಿ, ತೆರೆದಬಾವಿಗಳು ನೀಡುವ ವಿಷಮಯ, ರುಚಿರಹಿತ ನೀರಿಗಿಂತ ಮಳೆಯಿಂದಾಗಿ ತುಂಬಿದ ಕೃಷಿಹೊಂಡದ ನೀರು ಸಿಹಿಯಾಗಿತ್ತು. ಒಂದಿಬ್ಬರು ಇದರ ನೀರನ್ನು ಕುಡಿದು ಊರಿಗೆಲ್ಲಾ ಸುದ್ದಿ ಹಬ್ಬಿಸಿದರು. ಊರಿನ ಮುಕ್ಕಾಲುಪಾಲು ಜನ ಗುಳೆ ಎದ್ದವರಂತೆ ಪಾಟೀಲರ ಕೃಷಿಹೊಂಡಕ್ಕೆ ನಾಲ್ಕಾರು ಬಿಂದಿಗೆಗಳ ಸಹಿತ ಸಾಲು ಹಚ್ಚಿದರು. ಇದು ಮುಂದೆ ನಿತ್ಯಕಾಯಕವಾಯಿತು. ಶುದ್ಧ, ಸಿಹಿನೀರಿನ ಹೊಂಡ ಊರಿನವರ ಸ್ವತ್ತಾಗಿತ್ತು. ಅದಕ್ಕಾಗಿ ಅದನ್ನು ಚೆನ್ನಾಗಿ ಇಟ್ಟುಕೊಳ್ಳುವುದೂ ಸಹ ಅವರಿಗೆ ಅನಿವಾರ್ಯವಾಗಿತ್ತು.

ಕೃಷಿ ಜಮೀನಿನೊಳಗೆ ಹೊಂಡದ ನಿರ್ಮಾಣಕ್ಕೆ ಮೊದಲಿಗೆ ಎಲ್ಲರ ವಿರೋಧ. ಆದರೆ ಪಾಟೀಲರ ಹೊಲದ ಹೊಂಡದ ಸಿಹಿನೀರು ಕುಡಿದ ಮೇಲೆ ಎಲ್ಲರಿಗೂ ಆಸೆ. 2004ರಲ್ಲಿ ಮಳೆ ಇನ್ನಷ್ಟು ಕಡಿಮೆಯಾದಾಗ ಇನ್ನೂ ತಡಮಾಡುವುದರಲ್ಲಿ ಅರ್ಥವಿಲ್ಲವೆಂದು ಪ್ರತಿಯೊಬ್ಬರೂ ಮುಂದಾಗಿದ್ದು ಈಗ ಇತಿಹಾಸ.

ತಿರುವುಗಾಲುವೆಗಳು ನೋಡಲು ತೀರಾ ಸಾಮಾನ್ಯವೆನಿಸುತ್ತವೆ. ಆದರೆ ವ್ಯರ್ಥವಾಗಿ ಹರಿದುಹೋಗುವ ನೀರನ್ನು ಕೃಷಿಹೊಂಡಕ್ಕೆ, ಬತ್ತಿಹೋದ ಬಾವಿಗಳಿಗೆ, ಕೊಳವೆಬಾವಿ ಜಲಮರುಪೂರಣಕ್ಕೆ ಬಳಸಿದರೆ ಅದರ ವಿಶೇಷತೆ ತಿಳಿಯುತ್ತದೆ. ಇಂತಹ ತಿರುವುಗಾಲುವೆಗಳಿಂದ ನುಗ್ಗಿ ಬರುವ ಕಸಕಡ್ಡಿ, ಹೂಳುಮಣ್ಣು ನಿಯಂತ್ರಿಸಲು ಒಂದು ಇಂಗುಗುಂಡಿಯನ್ನು ಮಾಡಬೇಕಾಗುತ್ತದೆ.

30 ಕೊಳವೆಬಾವಿಗಳಿಗೆ ಜಲ ಮರುಪೂರಣ ವ್ಯವಸ್ಥೆ ಹಾಗೂ 30 ಛಾವಣಿ ನೀರು ಸಂಗ್ರಹ ವ್ಯವಸ್ಥೆಯೂ ಯೋಜನೆಯಲ್ಲಿ ಆಗಿದೆ. ಗುರುತಿಸಲಾದ 62 ಮೂಲಗಳಿಂದ ಪ್ರತಿ ಮೂರು ತಿಂಗಳಿಗೊಮ್ಮೆ ನೀರಿನ ಪರೀಕ್ಷೆ ನಡೆಸಲಾಗುತ್ತಿತ್ತು. ಇದನ್ನು ಸಂಸ್ಥೆಯು ಗುಟ್ಟಾಗಿ ಇಟ್ಟಿತ್ತು ಎಂದು ಈಗ ದಾಖಲಾತಿ ವಿಭಾಗದ ಮುಖ್ಯಸ್ಥ ಬಸವರಾಜ ಪಾಟೀಲರು ಹೇಳುತ್ತಾರೆ. ಇಲ್ಲಿ ಫ್ಲೋರೋಸಿಸ್ ಒಂದು ಸೂಕ್ಷ್ಮ ರಾಜಕೀಯ ವಿಷಯ. ಪರೀಕ್ಷೆಯ ಫಲಿತಾಂಶ ಪೂರ್ತಿ ಅಧ್ಯಯನವಾಗದೇ ಬಹಿರಂಗವಾಗುವುದು ಸರಿಯಲ್ಲ ಹಾಗೂ ಯಾವುದೋ ರಾಜಕೀಯ ವ್ಯಕ್ತಿಗಳು ಇದರ ಲಾಭ ಗಳಿಸಿ ಜನರಿಗೆ ವಂಚಿಸುವುದೂ ಸೂಕ್ತವಲ್ಲ.

ಸುಸ್ಥಿರ ಕೃಷಿ ವಿಧಾನಗಳ ಅಳವಡಿಕೆ

ಏಕಬೆಳೆ ಪದ್ಧತಿ ಇಲ್ಲಿ ಸಾಮಾನ್ಯವಾಗಿತ್ತು. ಜೋಳ, ಸಜ್ಜೆ, ಗೋಧಿ ಮತ್ತು ಮೆಕ್ಕೆಜೋಳ ಮುಖ್ಯಬೆಳೆ. ಶೇಂಗಾ, ಸೂರ್ಯಕಾಂತಿ ಮತ್ತು ಹತ್ತಿ ವಾಣಿಜ್ಯ ಬೆಳೆ. ಕೆಲವು ಕಡೆಗಳಲ್ಲಿ ಜೋಳ ಅಥವಾ ಶೇಂಗಾದೊಂದಿಗೆ ತೊಗರಿಬೇಳೆ ಮತ್ತು ಕೇಸರಿಬೇಳೆಗಳನ್ನು ಮಿಶ್ರ ಬೆಳೆಯಾಗಿ ಬೆಳೆಯುತ್ತಿದ್ದರು.

ಇಳುವರಿ ಕಡಿಮೆಯಾದಂತೆ ಇವರಲ್ಲಿ ಕೃಷಿ ಆಸಕ್ತಿಯೇ ಕುಗ್ಗಿಹೋಗಿತ್ತು. ಮಿಶ್ರಬೆಳೆ ಪದ್ಧತಿ, ಮರ ಆಧಾರಿತ ಕೃಷಿ ಪದ್ಧತಿ, ಬೆಳೆ ಆವರ್ತನೆ ಪದ್ಧತಿಗಳನ್ನು ರೈತರಿಗೆ ಪರಿಚಯಿಸಲಾಯಿತು. ಅದರಲ್ಲಿ ಜೋಳದೊಂದಿಗೆ ಹಾಗೂ ಶೇಂಗಾದೊಂದಿಗೆ ಹೆಸರು, ತೂರ್, ಅಲಸಂದೆ, ಹಸುರು ಗೊಬ್ಬರವಾಗಿ ಸೆಣಬುಗಳನ್ನು ಬೆಳೆಯಲಾಯಿತು. ಖುಷ್ಕಿಯಲ್ಲಿ ಜೋಳ, ತೊಗರಿ ಹಾಗೂ ತರಕಾರಿಗಳಿಗೆ ಆದ್ಯತೆ. ಅದೇ ರೀತಿ ಒಂದು ಹೆಕ್ಟೇರ್ ಪ್ರದೇಶದಲ್ಲಿ 100 ಕಾಡುಜಾತಿಯ ಮರಗಳು ಹಾಗೂ 100 ತೋಟಗಾರಿಕೆ ಮರಗಳನ್ನು ಹಚ್ಚಲಾಯಿತು. ಒಂದೊಮ್ಮೆ ಹೊಲದ ಬೆಳೆ ಕೈಗೆ ಬರದಿದ್ದರೂ ಮರಗಳು ಹಾಗೂ ಹಣ್ಣಿನ ಗಿಡಗಳು ಕೃಷಿಕರನ್ನು ಬದುಕಿಸುತ್ತವೆ ಎಂಬುದು ಯೋಜನೆಯ ಸಂಚಾಲಕರಾದ ಜಿ. ವೀರಣ್ಣನವರ ಅಭಿಪ್ರಾಯ.

ಇದರೊಂದಿಗೆ ಹಸು, ಎಮ್ಮೆ ಸಾಕಿದವರು. ಎರೆಗೊಬ್ಬರ ತಯಾರಿಸತೊಡಗಿದರು. ಇದರಿಂದ ರಾಸಾಯನಿಕ ಗೊಬ್ಬರದ ಮೇಲಿನ ಅವಲಂಬನೆ ತಪ್ಪಿತು. ಹಾಗೇ ಬೀಜ ಬ್ಯಾಂಕಿನಿಂದಾಗಿ ಹೊರಗಿನಿಂದ ಬೀಜಗಳನ್ನು ತರುವುದು ಕಡಿಮೆಯಾಯಿತು.

ಕೃಷಿಹೊಂಡದ ಸುತ್ತ, ಮನೆಯ ಹಿಂದಿನ ಹಿತ್ತಿಲುಗಳಲ್ಲಿ ತರಕಾರಿಗಳು ಹೆಚ್ಚಿದವು. ಮನೆಬಳಕೆಗೆ ಹೆಚ್ಚಾದದ್ದು ಮಾರಾಟಕ್ಕೆ. ಮುಷ್ಠಿಕೊಪ್ಪದ ಗಂಗಮ್ಮ ಹೇಳುತ್ತಾರೆ “ಕಳೆದ ಎಂಟು ತಿಂಗಳಿಂದ ಈ ಟೊಮ್ಯಾಟೋ ಗಿಡಗಳು ಹಣ್ಣು ಕೊಡುತ್ತಾ ಇದಾವ್ರಿ. ಜೊತೆಗೆ ಸೊಪ್ಪು, ಇನ್ನಿತರ ಆರು ತರಕಾರಿಗಳನ್ನೂ ಬೆಳೀತೀನ್ರಿ”.  ಈಕೆಗೆ ಹಿತ್ತಿಲು ಬಿಟ್ಟರೆ ಬೇರೆ ಜಾಗವಿಲ್ಲ. ಇರುವಷ್ಟರಲ್ಲೇ ಏನೆಲ್ಲಾ ಬೆಳೆವ ಆಸಕ್ತಿ.

ಭೂರಹಿತರಿಗೆ ಆದಾಯವರ್ಧನೆ ಚಟುವಟಿಕೆ

ಯೋಜನೆಯ ಅಡಿಯಲ್ಲಿ ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿ ಸಂಘಗಳ ರಚನೆ, ಉಪರಚನೆಯಾಗಿ ಸ್ವಸಹಾಯ ಸಂಘಗಳ ನಿರ್ಮಾಣ. ಜಾನುವಾರು ಸಾಕಣೆ, ಎಣ್ಣೆ, ಬಳೆ, ಪಾತ್ರೆ ವ್ಯಾಪಾರ, ಕಾರ್ಪೆಂಟರಿ, ಚಾಪೆ ನೇಯ್ಗೆ, ಎರೆಹುಳ ಸಾಕಾಣಿಕೆ, ಸೈಕಲ್ ಶಾಪ್, ಟೀಶಾಪ್, ಲಾಂಡ್ರಿ, ದಿನಸಿ, ಸಸ್ಯಾಭಿವೃದ್ಧಿ ಇತ್ಯಾದಿಗಳಿಗೆ ಬಡ್ಡಿರಹಿತ ಸಾಲ ನೀಡಿಕೆ.

ವೀರೇಶಿಯ ಸೈಕಲ್ ಶಾಪ್

ವೀರೇಶ್ ಈಶ್ವರಯ್ಯ ಹೆಸರೂರು ಕಲ್ಕೇರಿಯ ಭೂರಹಿತ ನಿರುದ್ಯೋಗಿ. ಕಪ್ಪತೇಶ್ವರ ಸ್ವಸಹಾಯ ಸಂಘದ ಸದಸ್ಯ. ಅಪ್ಪನ ಕುಡಿತದಿಂದಾಗಿ ಅವರ ಏಕೈಕ ಆದಾಯಮೂಲವಾಗಿದ್ದ ಸೈಕಲ್ ಶಾಪ್ ವ್ಯವಹಾರ ದಿವಾಳಿಯಾಯಿತು. ಕುಟುಂಬದ ಆರು ಜನ ಸದಸ್ಯರಿಗೂ ಅರೆಹೊಟ್ಟೆಯೇ ಗತಿಯಾಯಿತು. ಆಗಲೇ ಭೈಪ್ ಉದ್ಯಮಶೀಲತಾ ಶಿಬಿರದಲ್ಲಿ ಹೊಸ ಹುರುಪು ಪಡೆದ ವೀರೇಶಿ ಸೈಕಲ್ ರಿಪೇರಿ ತರಬೇತಿಗೆ ಸೇರಿದರು.  ದಾಸನಕೊಪ್ಪ ಹಾಗೂ ಸುರಶೆಟ್ಟಿಕೊಪ್ಪಗಳ ಪ್ರವಾಸದಲ್ಲಿ ಭೂರಹಿತ ನಿರುದ್ಯೋಗಿಗಳು ಉದ್ಯಮಶೀಲರಾಗಿರುವುದನ್ನು ನೋಡಿ ಪ್ರೇರೇಪಿತರಾದರು.

ತನ್ನ ಸ್ವಸಹಾಯ ಸಂಘದಲ್ಲಿ 5,000 ರೂಪಾಯಿಗಳನ್ನು ಸಾಲ ಪಡೆದು ತನ್ನಲ್ಲಿದ್ದ 1,000 ರೂಪಾಯಿಗಳನ್ನು ಸೇರಿಸಿ ಸೈಕಲ್ ಶಾಪಿಗೆ ಮರುಜೀವ ನೀಡಿದರು. ಕೆಲವು ಸೈಕಲ್ಗಳ ಖರೀದಿ. ಸೈಕಲ್ ರಿಪೇರಿ, ಪಂಪ್ ರಿಪೇರಿ, ಸ್ಪ್ರೇಯರ್, ಗ್ಯಾಸ್ಲೈಟ್ ರಿಪೇರಿ ಹೀಗೆ ಯಾವುದೇ ರಿಪೇರಿ ಇದ್ದರೂ ವೀರೇಶಿ ಬೇಕೆನ್ನುವಷ್ಟು ಹಕ್ಕೊತ್ತಾಯ. ಕುಟುಂಬದ ಹಿರಿಯ ಮಗನಾದ ವೀರೇಶಿಗೆ ಮನೆಯ ನಿರ್ವಹಣೆಯ ಜವಾಬ್ದಾರಿ. ದಿನಕ್ಕೆ ಸರಾಸರಿ 200 ರೂಪಾಯಿಗಳ ಗಳಿಕೆ. ತಿಂಗಳಿಗೊಮ್ಮೆ ಸೈಕಲ್ ಶಾಪಿಗೆ ಬೇಕಾದ ವಸ್ತುಗಳ ಖರೀದಿ. ಉಳಿದದ್ದು ಮನೆ ಖರ್ಚಿಗೆ.

ಕ್ರಮೇಣ ವೀರೇಶಿ ಆರು ಎಕರೆ ಜಮೀನನ್ನು ಗುತ್ತಿಗೆ ಆಧಾರದಲ್ಲಿ ಕೃಷಿಗೆ ಪಡೆದುಕೊಂಡರು. ಮನೆಯಲ್ಲಿದ್ದವರಿಗೂ ಈಗ ಕೈತುಂಬಾ ಕೆಲಸ. ಜೋಳ, ಸೂರ್ಯಕಾಂತಿ, ಹುರುಳಿ ಹೀಗೆ ಅನೇಕ ಬೆಳೆಗಳನ್ನು ಬೆಳೆಯತೊಡಗಿದರು. ಇದಕ್ಕೂ ಬೈಫ್ ಸಂಸ್ಥೆಯ ಮಾರ್ಗದರ್ಶನ. ಮನೆಯಲ್ಲಿ ಎರಡು ಎಮ್ಮೆ ಹಾಗೂ ಎರಡು ಕುರಿಗಳನ್ನು ಸಾಕತೊಡಗಿದರು. ಹೊಲದಲ್ಲಿ ಸಿಗುವ ಮೇವು ಇವುಗಳ ಪಾಲು. ಬೇರೆ ಖರ್ಚಿಲ್ಲ.

ವೀರೇಶಿಯ ತಾಯಿ ನೀಲಮ್ಮ ಬನಶಂಕರಿ ಸಂಘದ ಸದಸ್ಯೆ. ಸಂಘದಲ್ಲಿ ಸಾಲ ಮಾಡಿ ರೂಪಾಯಿ 800ಕ್ಕೆ ಒಂದು ಕುರಿಮರಿಯನ್ನು ಕೊಂಡರು. ವರ್ಷ ಕಳೆಯುವುದರಲ್ಲಿ ಅದು ಬೆಳೆದು 3,000 ರೂಪಾಯಿಗಳಿಗೆ ಮಾರಾಟವಾಯಿತು.

ವೀರೇಶಿ ಎಲ್ಐಸಿ ಪಾಲಿಸಿ ಮಾಡಿಸಿದ್ದಾರೆ. ಇದೀಗ 25,000 ರೂಪಾಯಿಗಳು ಸಿಗುತ್ತಿದೆ. ತಮ್ಮ ತಂಗಿಯರನ್ನು ಓದಿಸಿದ್ದಾರೆ. ಹೀಗೆ ಸಂಸಾರದ ಗಾಡಿಯನ್ನು ಎಳೆಯುವಾಗಲೇ ಹರೆಯದ ತಂಗಿ ತೀರಿಕೊಂಡಳು.  ಕಲ್ಕೇರಿಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ದೊಡ್ಡ ಆಸ್ಪತ್ರೆಗೆ ಕರೆದೊಯ್ಯಲಾಗದ ಅಸಹಾಯಕತೆ. ಮನಸ್ಸಿಗೆ ನೋವು, ಆದರೆ ಕುಟುಂಬದ ಉಳಿದವರು ಕುಸಿದುಬಿಡುತ್ತಾರೆ ಎಂಬ ಯೋಚನೆಯಿಂದಾಗಿ ಎಲ್ಲವನ್ನೂ ಧೈರ್ಯದಿಂದ ಎದುರಿಸಿದರು. ಇದಕ್ಕೆಲ್ಲಾ ಸಿದ್ಧಿಸಮಾಧಿ ಯೋಗದ ತರಬೇತಿ ಕಾರಣ ಎನ್ನುವ ವಿಶ್ವಾಸ ಅವರದು.

ಇವರಿಗೆ ಫ್ಲೋರೈಡಿನ ವಿಷ ತಟ್ಟಿಲ್ಲ. ಬಡತನದ ಭೂತ ದೂರಾಗಿದೆ. ದಿನಾ ವ್ಯಾಯಾಮ, ಆರೋಗ್ಯಯುತ ಆಹಾರ ಸೇವನೆ ಇವೆಲ್ಲಾ ಇವರನ್ನು ಸದೃಢವಾಗಿಸಿದೆ. ಇಂದು ಯಾವುದೇ ಮಾನಸಿಕ, ದೈಹಿಕ ಹಾಗೂ ಆರ್ಥಿಕ ಸಮಸ್ಯೆಗಳನ್ನು ಎದುರಿಸಬಲ್ಲೆ ಎಂಬ ಆತ್ಮವಿಶ್ವಾಸ 25ರ ಹರೆಯದ ವೀರೇಶಿಯದು.

ವರ್ಷಾವಧಿ ನಡೆವ ಜಲಾನಯನ ಕೆಲಸಗಳಿಗಾಗಿ ದಿನಗೂಲಿಗಳಿಗೆ ಉದ್ಯೋಗ. ಯೋಜನೆಯಲ್ಲಿ ಹೀಗೆ ಒಂದು ಲಕ್ಷದ ಒಂಭತ್ತು ಸಾವಿರ ಮಾನವ ದಿನಗಳ ಕೆಲಸ. ಇದರಿಂದ ಮಣ್ಣಿನ ಫಲವತ್ತತೆ, ನೀರಿನ ಲಭ್ಯತೆಯಿಂದಾಗಿ ಸುಸ್ಥಿರ ಕೃಷಿಯ ಸಾಧ್ಯತೆ. ಇವೆಲ್ಲಾ ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿಗೆ ಕಾರಣವಾಗಿದೆ. ಕೂಲಿಗಳು ಕೆಲಸಕ್ಕಾಗಿ ಊರು ಬಿಟ್ಟು ಗುಳೇ ಹೋಗುವಿಕೆ ನಿಂತಿದೆ.

ಸಾಮರ್ಥ್ಯ ವರ್ಧನೆ ಹಾಗೂ ಜಾಗೃತಿ

ಒಮ್ಮೆ ಸಮುದಾಯದ ಸಾಮರ್ಥ್ಯ ಹೆಚ್ಚಿಸಿದರೆ ಅವರು ನಿರಂತರ ಅಭಿವೃದ್ಧಿಯ ದಾರಿಯಲ್ಲಿ ಸಾಗಲು ಸಾಧ್ಯವಾಗುತ್ತದೆ. ಅದಕ್ಕಾಗಿ ವೈವಿಧ್ಯಮಯ ತಂತ್ರಜ್ಞಾನ ಹಾಗೂ ತಾಂತ್ರಿಕತೆಗಳ ತರಬೇತಿ ಬಲು ಮುಖ್ಯ.  ಅದರಲ್ಲೂ ಏಕಪ್ರಕಾರದ ಕೃಷಿಯ ಬದಲಾಗಿ ಸಮಗ್ರ ವಿಧಾನಗಳು, ಮರ ಆಧಾರಿತ ಕೃಷಿ, ನೀರಿನ ಅಭಿವೃದ್ಧಿ ಅಗತ್ಯ.

ಕೃಷಿಹೊಂಡ ಮಾಡಿದರೆ ಹೊಲದಲ್ಲಿ ಜಾಗ ಕಡಿಮೆಯಾಗುತ್ತದೆ. ಹೊಲದ ನೀರೆಲ್ಲಾ ಹೊಂಡಕ್ಕೆ ಬಸಿದು ಹೋಗುತ್ತದೆ. ಹೊಲದೊಳಗೆ ಗಿಡ ನೆಟ್ಟರೆ ನೆರಳಿನಿಂದಾಗಿ ಬೆಳೆ ಚೆನ್ನಾಗಿ ಬರುವುದಿಲ್ಲ. ಈ ಯೋಚನೆಗಳು ರೈತರಲ್ಲಿ ತುಂಬಿತ್ತು. ಧಾರವಾಡದ ಕಂಪ್ಲಿಕೊಪ್ಪ, ಬಗಡಗೇರಿಯ ರೈತರ ಹೊಲಗಳನ್ನು ನೋಡಿ ಬಂದ ಮೇಲೆ ಮನಸ್ಸು ಬದಲಾಯಿತು. ಕೃಷಿ ಹೊಂಡ, ಮರಗಳಿಂದ ಲಾಭ ಜಾಸ್ತಿ. ಇಳುವರಿಗೆ ಕೊರತೆಯಾಗದು ಎನ್ನುವ ಒಪ್ಪಿಗೆ ಪರಸಪ್ಪ ಮರೇಗೌಡರು, ಯುವ ರೈತರಾದ ರಾಮಚಂದ್ರ ಕಮ್ಮಾರ, ಮಂಜುನಾಥ ಬಡಿಗೇರ, ಪ್ರಕಾಶ ತಿಪ್ಪಾಪುರ ಮುಂತಾದವರದು. ಇದು ಪ್ರಯೋಗವನ್ನು ನೋಡಿ ತಿಳಿದ ಪರಿಣಾಮ.

ಮುಂದೆ ಈ ಹಳ್ಳಿಗಳಲ್ಲಿಯೇ ಹಸುರು ಹಬ್ಬ, ಸೈಕಲ್ ಜಾಥಾ ಹಾಗೂ ಪಾದಯಾತ್ರೆಗಳು ನಡೆದವು. ಒಂಭತ್ತೂ ಹಳ್ಳಿಗಳ ಜನ ನಿಗದಿತ ದಿನ, ನಿಗದಿತ ಸಮಯಕ್ಕೆ, ನಿಗದಿತ ಪ್ರದೇಶದಲ್ಲಿ ಲಕ್ಷಾಂತರ ಅರಣ್ಯ ಸಸ್ಯಗಳನ್ನು ನೆಟ್ಟರು. ಇದೊಂದು ರೀತಿಯಲ್ಲಿ ಸಮುದಾಯವೆಲ್ಲಾ ಸೇರಿ ಆಚರಿಸುವ ಹಬ್ಬಗಳ ಸಾಲಿಗೆ ಸೇರಿದ ಹೊಸ ಹಬ್ಬವಾಗಿತ್ತು. ಹಸಿರು ಕಂಕಣ, ಹಸಿರಿನ ಮಹತ್ವ, ಗಿಡಗಳು ನೀಡುವ ಆರೋಗ್ಯ ಇವೆಲ್ಲಾ ಪಾಠಗಳು ಹಸುರು ನೆಡುವ ಮೂಲಕ ಅರಿವಿಗೆ ಬಂದಿತ್ತು. ಸಮುದಾಯದ ಜೀವನ ವಿಧಾನವನ್ನೇ ಬದಲಿಸುವ ಚಟುವಟಿಕೆ ಇದು.

ಇದಕ್ಕೆಲ್ಲಾ ಕಾರಣವಾದದ್ದು ಒಂಭತ್ತು ಹಳ್ಳಿಯಗಳಲ್ಲಿಯ ಒಗ್ಗಟ್ಟಾದ ಜನ. ಸಹಭಾಗಿತ್ವದ ಸಂಘಟನೆ, ಗ್ರಾಮ ವಿಕಾಸ ಸಮಿತಿಯ ನಿರ್ಧಾರಗಳು. ಸಚೇತನ ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಮೂಲಕ ಕಾರ್ಯ ಚಟುವಟಿಕೆ. ಹೀಗೆ ಆದ ಕೆಲಸಗಳು ಹಳ್ಳಿಯ ಬದುಕನ್ನು, ಜನರ ಜೀವನಮಟ್ಟವನ್ನೇ ಬದಲಿಸಿತು. ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಕಲ್ಕೇರಿಯ ಮೊಹಮ್ಮದ್ ಅಲಿ ಮುಲ್ಲಾ ಹೇಳುತ್ತಾರೆ “ಫ್ಲೋರೋಸಿಸ್ ನಿವಾರಣೆ, ಅಂತರ್ಜಲ ಹೆಚ್ಚಳ, ಮಣ್ಣಿನ ಫಲವತ್ತತೆ, ಹಸಿರು ಹೊದಿಕೆ, ಬಡತನ ನಿವಾರಣೆ ಏನೆಲ್ಲಾ ಆಗಿವೆ. ಅದಕ್ಕಿಂತಲೂ ಸಮುದಾಯದೊಳಗೊಂದು ಸಾಮಾಜಿಕ ಬಂಧ, ಹೃದಯ ಮಿಲನ ಉಂಟಾಗಿದೆ. ಅದಕ್ಕೆ ಸಾಕ್ಷಿ ರಾಷ್ಟ್ರೀಯ ಹಬ್ಬಗಳನ್ನು ಇಡೀ ಊರಿಗೆ ಊರೇ ಸೇರಿ ಆಚರಿಸುತ್ತಿದೆ”

ಈ ಹಳ್ಳಿಗಳ ಈಗಿನ ಪರಿಸ್ಥಿತಿ ಬದಲಾಗಿದೆ. ಕೃಷಿ ಹೊಂಡಗಳು, ಉದಿಬದುಗಳು, ಟ್ರೆಂಚ್ಬಂಡ್ಗಳು ಹೊಲದ ತೇವಾಂಶ ಹೆಚ್ಚಿಸಿವೆ. ಎರೆಗೊಬ್ಬರ ತಯಾರಿಕೆ, ಕೃಷಿ ತ್ಯಾಜ್ಯಗಳ ಮರುಬಳಕೆ ಇವೆಲ್ಲಾ ಭೂಮಿ ಸಾರ ಹೆಚ್ಚಲು ಕಾರಣವಾಗಿದೆ. ಹೊಲದ ಮಧ್ಯೆ ಮರಗಿಡಗಳನ್ನು ಬೆಳೆಸುವುದು, ಮಾವು, ಪೇರಳೆ, ಚಿಕ್ಕು ಗಿಡಗಳನ್ನು ಬೆಳೆಯುವ ಪದ್ಧತಿ ಆದಾಯ ಹೆಚ್ಚಳಕ್ಕೆ ಕಾರಣವಾಗಿದೆ. ಅಂತರಬೆಳೆ, ಮಿಶ್ರಬೆಳೆ ಪದ್ಧತಿಗಳಿಂದ ಮಣ್ಣಿನ ಫಲವತ್ತತೆ ಉಳಿದಿದೆ.

ಮಣಿಬಾಯಿ ದೇಸಾಯಿ ಬೀಜ ಬ್ಯಾಂಕ್, ಹಳೆಯ ತಳಿಗಳ ಸಂರಕ್ಷಣೆ ಹಾಗೂ ಪೌಷ್ಟಿಕ ತರಕಾರಿ, ಕಾಳು, ಬೇಳೆಗಳನ್ನು ಬೆಳೆಯಲು ಸಹಾಯ ನೀಡುತ್ತಿದೆ. ಅಕ್ಕಿ, ಗೋಧಿ, ಬೇಳೆ, ಕಾಳು ಹೀಗೆ ಪ್ರತಿಯೊಂದನ್ನು ಕೊಂಡು ಉಣ್ಣಬೇಕಾದ ಈ ಹಳ್ಳಿಗಳಲ್ಲಿ ಬೀಜ ಸ್ವಾವಲಂಬನೆ, ಬೆಳೆ ಸ್ವಾವಲಂಬನೆ ಹೊಂದಲು ರೈತರಿಗೆ ಮಾರ್ಗದರ್ಶನ ಮಾಡುವ ಹೊಣೆ ಹೊತ್ತಿದೆ.

ರಾಮಚಂದ್ರ ಕಮ್ಮಾರ, ಮಂಜುನಾಥ ಬಡಿಗೇರ, ಪ್ರಕಾಶ ತಿಪ್ಪಾಪುರ, ಪ್ರವೀಣ್, ಕೃಷ್ಣ, ಬಸವರಾಜ್ ಮುಂತಾದ ಯುವ ಮುಂದಾಳುಗಳು ಹಳ್ಳಿಯ ಸ್ವಚ್ಛತೆ, ಆರೋಗ್ಯದ ವಿಚಾರದಲ್ಲಿ ಕಾಳಜಿ ಹೊಂದಿದ್ದಾರೆ. ಹಳ್ಳಿಯ ಪ್ರತಿಯೊಬ್ಬರಿಗೂ ಫ್ಲೋರೈಡ್ ಬಗ್ಗೆ ಗೊತ್ತಿದೆ. ಮನೆಯಲ್ಲಿ ಮಧ್ಯವಯಸ್ಸಿನ ಅಣ್ಣ, ಅಕ್ಕ, ತಾಯಿ, ತಂದೆ ಇವರೆಲ್ಲಾ ಕಾಲುಗಂಟುನೋವು, ಸೊಂಟನೋವು, ಜಡತೆಯಿಂದ ನರಳುವುದನ್ನು ದಿನಾ ನೋಡಿ ಸೋತಿದ್ದಾರೆ.

ಪೌಷ್ಟಿಕ ಆಹಾರದಿಂದ ಪರಿಹಾರ ಸಾಧ್ಯವೆಂದಾದರೆ, ಅದಕ್ಕಾಗಿ ಶ್ರಮಿಸಲು ಸಿದ್ಧವೆನ್ನುವ ಛಲವಿದೆ. “ಈಗಿನ ಆಹಾರ ತಿಂದು, ಬೋರಿನ ನೀರು ಕುಡಿದ್ರೆ ನಾವು 50 ವರ್ಷಾನೂ ಬದುಕಾಕಿಲ್ರಿ” ಎನ್ನುತ್ತಾರೆ ಕೃಷ್ಣ ಬನ್ನಿಕೊಪ್ಪ. ಸೋದರ ಸಂಬಂಧದ ಮದುವೆ, ಬಾಲ್ಯವಿವಾಹವನ್ನು ದೂರ ಮಾಡುವ ನಿರ್ಧಾರ ಇವರದು.

ಸುಸ್ಥಿರ ಕೃಷಿಯಲ್ಲಿ ತೊಡಗಲು 587 ಕುಟುಂಬಗಳೂ ಮುಂದಾಗಿವೆ. ಈ ಕುಟುಂಬಗಳಲ್ಲಿ ಅನೇಕರು ಹಿಂದೆ ಕೆಲಸವಿಲ್ಲದೆ ಮಂಗಳೂರಿಗೋ, ಗೋವಕ್ಕೋ, ಇನ್ನೆಲ್ಲೋ ದುಡಿಯಲು ಹೋಗುತ್ತಿದ್ದರು. ಕಳೆದೆರಡು ವರ್ಷಗಳಿಂದ ಯಾರೂ ಕೂಲಿಗಾಗಿ, ಹೊಟ್ಟೆಪಾಡಿಗಾಗಿ ಊರು ಬಿಟ್ಟಿಲ್ಲ. ವರ್ಷಪೂರ್ತಿ ಕೆಲಸ, ಅದೂ ಸ್ವಂತ ಹೊಲದಲ್ಲಿ. ಸುಸ್ಥಿರ ಕೃಷಿ ಬದುಕೇ ಹಾಗೆ. ದಿನದ ಬಹುಸಮಯ ಹೊಲಕ್ಕೆ ಮೀಸಲು. ಗಿಡಮರಬಳ್ಳಿಗಳೊಂದಿಗೆ ಬದುಕು. ಇದು ಮನಸ್ಸನ್ನು, ದೇಹವನ್ನು ಆರೋಗ್ಯಯುತವಾಗಿರುವಂತೆ ನೋಡಿಕೊಳ್ಳುತ್ತದೆ. 308 ಕುಟುಂಬಗಳೂ ಹಣ್ಣಿನ ಮರ, ಕಾಡುಮರ, ಸೊಪ್ಪ್ಪಿನಮರಗಳನ್ನು ನೆಟ್ಟಿವೆ. ಇದು ಮಣ್ಣಿನ ಫಲವತ್ತತೆಗೆ, ಹಸು-ಎಮ್ಮೆಗಳ ಮೇವಿಗೆ, ಅಧಿಕ ಆದಾಯಕ್ಕೆ, ರೋಗ-ಕೀಟಬಾಧೆಗಳ ನಿಯಂತ್ರಣಕ್ಕೆ, ವರ್ಷಪೂರ್ತಿ ಕೆಲಸಕ್ಕಾಗಿ ಎನ್ನುವುದು ಅಯ್ಯಪ್ಪಗೌಡರ ಅಭಿಪ್ರಾಯ.

ಈ ಎಲ್ಲಾ ಕೆಲಸಗಳ ಹಿನ್ನೆಲೆಯಲ್ಲಿ ಸ್ವಸಹಾಯ ಸಂಘಗಳ ಪಾತ್ರವಿದೆ. ಅಕ್ಷರ ಕಲಿಸುವಿಕೆ, ಶ್ರಮದಾನ, ಗೃಹೋದ್ಯೋಗ, ಡೈರಿ, ಸ್ವಉದ್ಯೋಗ ಹೀಗೆ ಪ್ರತಿ ಹಂತದಲ್ಲೂ ಗ್ರಾಮದ ಸ್ವಸಹಾಯ ಸಂಘಗಳು ಮುಂದಾಳತ್ವ ವಹಿಸಿವೆ. ಮಹಿಳೆಯರ ಹಾಗೂ ಗಂಡಸರ ಸಂಘಗಳು, ಗ್ರಾಮ ವಿಕಾಸ ಸಮಿತಿಗಳು ಪ್ರತಿ ಹಂತದಲ್ಲೂ ಉತ್ಸಾಹದಿಂದ ಕೆಲಸ ಮಾಡುತ್ತಿವೆ.

ಪ್ರತಿಯೊಬ್ಬರ ಮೊದಲ ಗುರಿ ಫ್ಲೋರೈಡನ್ನು ಗ್ರಾಮದಿಂದ ಓಡಿಸುವುದು, ಆರ್ಥಿಕ ಸಬಲತೆ. ಸ್ವಾವಲಂಬನೆ ನಂತರದ್ದು. ಇದಕ್ಕೆ ಉದಾಹರಣೆ ಮುಷ್ಠಿಕೊಪ್ಪದ ಲಕ್ಷ್ಮಿ ಮಹಾಲಕ್ಷ್ಮಿ ಸಂಘದ ರೇಣುಕಮ್ಮ ಯಂಕಪ್ಪ ದಂಪತಿಗಳು ಹಾಗೂ ದೇವೀರಮ್ಮ ಗಾಳಿ ಕುಟುಂಬ. ಇವರುಗಳು ಸಂಘದಿಂದ ಹಣ ಪಡೆದು ಸ್ವ- ಉದ್ಯೋಗಿಗಳಾಗಿ, ಸಾಲ ತೀರಿಸಿದ್ದಲ್ಲದೆ ಹಣದ ಉಳಿತಾಯ ಸಹ ಮಾಡಿದ್ದಾರೆ. ಮಳೆನೀರಿನ ತೊಟ್ಟಿ ಕಟ್ಟಿಸಿಕೊಂಡು ಆರೋಗ್ಯವಂತರಾಗಿಯೂ ಇದ್ದಾರೆ.

ಊರೊಟ್ಟಿನ ಶ್ರಮದಾನ, ಹಕ್ಕುಗಳ ಅರಿವು, ನಾಯಕತ್ವ ತರಬೇತಿ, ಲೆಕ್ಕಪತ್ರ ಇಡುವಿಕೆ ಹೀಗೆ ಏನೆಲ್ಲಾ ಕಲಿತಿದ್ದಾರೆ. ಕೇವಲ ಅಡುಗೆಮನೆಗೆ, ಬುರ್ಖಾದೊಳಗೆ ಸೀಮಿತವಾಗಿದ್ದ ಮಹಿಳೆಯರು ಎಲ್ಲರೊಂದಿಗೆ ಬೆರೆತು ಮಾತನಾಡತೊಡಗುವಂತಾಗಿದ್ದು ಸ್ವಸಹಾಯ ಸಂಘದಿಂದ ಸಾಧ್ಯವಾಗಿದೆ.

ಈ ಹಳ್ಳಿಗಳಲ್ಲಿ ಫ್ಲೋರೈಡ್ ಇರುವುದು ಇನ್ನು ಕೆಲವೇ ದಿನಗಳು ಮಾತ್ರ. ಇವರು ಕೇವಲ ಒಂದೇ ಮದ್ದು ಮಾಡದೆ ಯೋಗ, ಹೋಮಿಯೋಪತಿ, ಪ್ರಾಣಾಯಾಮ ಇವನ್ನೂ ಸೇರಿಸಿ ಹಲವು ರೀತಿಯ ಪ್ರಯೋಗ ನಡೆಸಿದ್ದಾರೆ. ಫ್ಲೋರೈಡಿಗೆ ಅಡಗಿ ಕುಳಿತುಕೊಳ್ಳಲು ಒಂದಿಂಚೂ ಜಾಗವಿಲ್ಲ, ಬೇರುಸಹಿತ ನಾಶವಾಗುವವರೆಗೂ ಬಿಡದ ಛಲ ಊರಿನವರಲ್ಲಿದೆ.

ಯಶೋಗಾಥೆಗಳು

ಜುಬೇದಾ ಬೇಗಂ

ಕಲ್ಕೇರಿಯ ಅಬ್ದುಲ್ ರಜಾಕ್ ನನ್ನಸಾಬ್ ಖಲೇಬಾ ಸುಮಾರು 70ರ ಹರೆಯದ ಮಾತುಗಾರ. ಟೈಲರಿಂಗ್ ಮಾಡಿ 9 ಜನರ ಸಂಸಾರ ಸಾಗಿಸಿದವರು. ಮಗಳು ಜುಬೇದಾ ಬೇಗಂ ವಿಧವೆಯಾಗಿ ಮನೆಗೆ ಬಂದಾಗ ಜಮೀನಿಲ್ಲದ ರಜಾಕ್-ಗೆ ಚಿಂತೆಯಾಗಿದ್ದು ಸಹಜ. ಜೊತೆಗೆ ನೀರಿನ ಸಮಸ್ಯೆಯಿಂದ ಕೈಕಾಲು, ಸೊಂಟನೋವು ಹೆಚ್ಚಿ ಟೈಲರಿಂಗ್ ಕೆಲಸ ನಿಂತಿತ್ತು. ಮಕ್ಕಳೆಲ್ಲಾ ನೌಕರಿ ಹುಡುಕಿ ಊರು ಬಿಟ್ಟಿದ್ದರು. ಬೇಗಂ ಸಹ ಇಹಲೋಕ ತೊರೆದಾಗ ಮಗಳು ಜುಬೇದಾ ಬೇಗಂ ಸಂಸಾರದ ಭಾರ ಹೊರಲೇಬೇಕಾಯಿತು.

ಜುಬೇದಾ ಬೇಗಂ ಬುರ್ಖಾ ತೆಗೆದು ಹೊರ ಪ್ರಪಂಚ ನೋಡಿದ್ದೇ ಕಡಿಮೆ. ಅದರಲ್ಲೂ ಹರೆಯದ ವಿಧವೆಗೆ ಕಟ್ಟುಪಾಡುಗಳು ಅಧಿಕ. ಸಮಾಜದೊಳಗೆ ಮಾತನಾಡಲು ಆತಂಕ. ಮನೆ ಬಿಟ್ಟು ಹೊರಬರಲು ಭಯ. ಬೈಫ್ ಪ್ರಾರಂಭದಲ್ಲಿ ಸಂಘ ರಚನೆ ಮಾಡಿದಾಗ ಜುಬೇದಾರನ್ನು ಸೇರಿಸುವುದು ಸುಲಭವಾಗಿರಲಿಲ್ಲ. ಸುಧಾರಣೆಯ ಬಗ್ಗೆ ಒಲವಿರುವ ರಜಾಕ್ ಸಾಬ್ರು ಸಂಪ್ರದಾಯದ ವಿಚಾರದಲ್ಲಿ ಸ್ವಲ್ಪವೂ ಸಡಿಲ ಬಿಡಲು ಒಪ್ಪುವುದಿಲ್ಲ. ಜುಬೇದಾರಿಗೆ ಎಷ್ಟೆಲ್ಲಾ ತಡೆಗಳಿದ್ದರೂ, ಸ್ವಾವಲಂಬಿ ಆಗಬೇಕೆಂಬ ಹಂಬಲ ಧೈರ್ಯ ನೀಡಿತು.

ಬೈಫ್ ಮಳೆನೀರು ಸಂಗ್ರಹ ಮಾಡಲು ತೊಟ್ಟಿ ಕಟ್ಟಿಸಿಕೊಡುತ್ತೇವೆಂದಾಗ ಜುಬೇದಾರ ದನಿಗೆ ಜೀವ ಬಂತು. ಫ್ಲೋರೈಡ್-ಯುಕ್ತ ಕೊಳವೆಬಾವಿ ನೀರನ್ನು ಕುಡಿಯುವ ಸಮಸ್ಯೆಯಿಂದ ಪಾರಾಗಬಹುದು ಎನ್ನಿಸಿತು.

ಮನೆಯಲ್ಲಿ ತಾಯಿ- ತಂದೆಯರಿಗೆ ಹೆಚ್ಚಿದ ಕಾಲುನೋವು, ಸೊಂಟನೋವುಗಳು ನಿವಾರಣೆಯಾಗಬೇಕೆಂದರೆ ಇರುವುದೊಂದೇ ದಾರಿ. ಮಳೆನೀರು ಸಂಗ್ರಹ.  ಹೊಲವಿಲ್ಲದ ಜುಬೇದಾ ಯಾರದೋ ಕೃಷಿಹೊಂಡದಿಂದ ನೀರು ತರುತ್ತಿದ್ದರು. ಅದಕ್ಕಾಗಿ ಮೈಲುಗಟ್ಟಲೆ ನಡೆಯುವುದಕ್ಕೂ ಹಿಂಜರಿಯುತ್ತಿರಲಿಲ್ಲ. ಮಳೆನೀರಿನ ರುಚಿ ಹಾಗೂ ಫ್ಲೋರೈಡ್-ರಹಿತವಾಗಿರುವುದು ನೀರು ತರುವ ಶ್ರಮವನ್ನು ಮರೆಸುತ್ತಿತ್ತು.

ಜುಬೇದಾ ಬೇಗಾಂ ಈಗ ನೀರು ತರಲು ದೂರ ನಡೆಯಬೇಕಾಗಿಲ್ಲ. ಆಕೆಯ ಮನೆ ಎದುರಿಗೆ ಮಳೆನೀರು ಸಂಗ್ರಹದ ತೊಟ್ಟಿ ಕಾಮಧೇನುವಿನಂತೆ ನಿಂತಿದೆ. ಪ್ರತಿದಿನ ಆಕೆ ಕುಡಿಯಲು ಎರಡು ಕೊಡ ನೀರು ಬಳಸಿದರೂ ಎಂಟು ತಿಂಗಳು ನಿಶ್ಚಿಂತೆಯಿಂದ ಇರಬಹುದು. ಜಾಣೆ ಜುಬೇದಾ ಬೇಗಂ ಅದರಲ್ಲೂ ಉಳಿತಾಯ ಮಾಡಿ 300ಕ್ಕೂ ಹೆಚ್ಚು ದಿನಗಳ ಕಾಲ ಬಳಸಿದ್ದಾರೆ.

ಆಕೆ ತನ್ನ ಸ್ವಸಹಾಯ ಸಂಘದಿಂದ ಎರಡು ಎಮ್ಮೆಗಳನ್ನು ಕೊಂಡಿದ್ದಾರೆ. 14 ಸಾವಿರ ರೂಪಾಯಿಗಳ ಸಾಲದಲ್ಲಿ ಈಗಾಗಲೇ 11,500 ರೂಪಾಯಿಗಳನ್ನು ತೀರಿಸಿಯೂ ಆಗಿದೆ. ಎಮ್ಮೆ ಹಾಲು ದಪ್ಪವಾಗಿರುವ ಕಾರಣ ಆಕೆ ಅದನ್ನು ಕೆಎಂಎಫ್ ಡೈರಿಗೆ ನೀಡುತ್ತಿಲ್ಲ. ಅಲ್ಲಿಗೆ ನೀಡಿದರೆ ಬೆಲೆ ಕಡಿಮೆ. ಅದರ ಬದಲು ಹೋಟೆಲಿಗೆ ನೀಡುತ್ತಿದ್ದಾರೆ. ಈಗ ದಿನಾ ನಾಲ್ಕು ಲೀಟರ್ ಹಾಲನ್ನು ಲೀಟರಿಗೆ ಹತ್ತು ರೂಪಾಯಿಗಳಂತೆ ನೀಡುತ್ತಿದ್ದಾರೆ.

ನೀರು ತರುವ ಕೆಲಸ ಇಲ್ಲದ ಕಾರಣ ಎಮ್ಮೆಗಳಿಗೆ ಕಾಡಿನಿಂದ ಹುಲ್ಲು, ಸೊಪ್ಪು ತರಲು ಸಮಯ ಸಿಗುತ್ತಿದೆ. “ಹೊಲವಿಲ್ಲದ ನಮಗೆ ಉದ್ಯೋಗ ಸಿಕ್ಕಂಗಾಗೈತ್ರಿ” ಎನ್ನುವ ನಗುನುಡಿ ಜುಬೇದಾ ಬೇಗಂರವರದು.

ಜುಬೇದಾ ಬೇಗಂ ಈಗ ಬುರ್ಖಾ ಧರಿಸುತ್ತಿಲ್ಲ. ಸಮಾಜದಲ್ಲಿ ಧೈರ್ಯದಿಂದ ಸ್ವಾವಲಂಬಿಯಾಗಿ ತಲೆ ಎತ್ತಿ ನಡೆಯುತ್ತಾರೆ. ಸಂಘದ ಸಭೆಯಲ್ಲಿ ಮುಕ್ತವಾಗಿ ಮಾತನಾಡಬಲ್ಲರು. ಮಳೆನೀರಿನಿಂದಾದ ಉಪಯೋಗದ ಬಗ್ಗೆ ಉಪನ್ಯಾಸ ನೀಡಬಲ್ಲರು. ತಮ್ಮ ಬದುಕಿನ ಬದಲಾವಣೆಗೆ ಬೈಫ್ ಕಾರಣ ಎನ್ನುವುದನ್ನು ಹೇಳಲು ಮರೆಯುವುದಿಲ್ಲ. ಅವರಿಗಿಂತಲೂ ದೊಡ್ಡದಾಗಿ ಅವರ ಅಬ್ಬು ರಜಾಕ್ ಸಾಬ್ರು ಹೇಳುತ್ತಾರೆ.

ದೇವೀರಮ್ಮ ಗಾಳಿ

ದೇವೀರಮ್ಮ ಗಾಳಿ ಕಲ್ಕೇರಿ ಗ್ರಾಮದ ಮುಷ್ಠಿಕೊಪ್ಪ ಹಳ್ಳಿಯ ಲಕ್ಷ್ಮೀ ಮಹಾಲಕ್ಷ್ಮಿ ಸಂಘದ ಸಕ್ರಿಯ ಸದಸ್ಯೆ.

ಮೊದಲಿನಿಂದಲೂ ಮನೆಯಿಂದ ದೂರವಿದ್ದ ಈಕೆಯ ಕುಟುಂಬ ದುಡಿದು ಉಣ್ಣುವುದರಲ್ಲಿಯೇ ಸುಖ ಕಂಡಿತ್ತು. ಊರಿನಲ್ಲಿರುವ ರೋಗಪೀಡಿತರು, ಕೆಟ್ಟುಹೋದ ನೀರು ಇವೆಲ್ಲಾ ಈಕೆಯನ್ನು ಭಯದ ನೆರಳಿನಲ್ಲೇ ಇಟ್ಟಿತ್ತು.

ಮನೆ ಸಾಲದಾಗ ಅನಿವಾರ್ಯವಾಗಿ ಊರಿಗೆ ಬರಬೇಕಾಯಿತು. ಪಾಲಿನ ಹೊಲದೊಂದಿಗೆ ಸಾಲವೂ ಹೆಗಲೇರಿತು. ದೇವೀರಮ್ಮನವರ ಪತಿ ನೀರಿನ ದೋಷದಿಂದ ಮೂತ್ರಕೋಶ ವಿಫಲರಾಗಿ ನೆಲ ಹಿಡಿದರು. ಮಕ್ಕಳ ವಿದ್ಯಾಭ್ಯಾಸ, ಹೊಟ್ಟೆ ಹಸಿವು ದೇವೀರಮ್ಮನವರನ್ನು ಹಣ್ಣು ಹಣ್ಣು ಮಾಡಿತು. ಒಂದು ಸಂಜೆ ದೇವೀರಮ್ಮನವರ ಪತಿ ಕಳಕಪ್ಪ ಗಾಳಿ ಪರಲೋಕ ಸೇರಿದರು.

ಆದೇ ಸಮಯದಲ್ಲಿ ಆಸರೆಯಾಗಿದ್ದು ಬೈಫ್. ದೇವೀರಮ್ಮನವರಲ್ಲಿ ನರ್ಸರಿ ಮಾಡಿ ಗಿಡ ಬೆಳೆಸಲು ಹೇಳಿತು. ನೆರಮನೆಯ ಹನುಮವ್ವ ಕರಿಯಪ್ಪನವರ ಜೊತೆ ಸೇರಿ ನರ್ಸರಿ ಪ್ರಾರಂಭಿಸಿದರು. ಸಾವಿರಾರು ಗಿಡಗಳನ್ನು ತಯಾರಿಸಿದರು.

ಹಳೆಯ ಸಾಲ 35 ಸಾವಿರ ರೂಪಾಯಿಗಳು ನರ್ಸರಿಯ ಆದಾಯದಿಂದ ತೀರಿತು. ಮನೆಯನ್ನು ನವೀಕರಿಸಿದರು. ಮಳೆನೀರಿಗೆ ತೊಟ್ಟಿ ಕಟ್ಟಿಸಿ ನೀರಿನ ಬವಣೆ ನೀಗಿಕೊಂಡರು. ಆದರೂ ಕಿರಿಯ ಮಗನಾದ ಗಣೇಶ ಇಲ್ಲಿಯೇ ಹುಟ್ಟಿ ಬೆಳೆದದ್ದಕ್ಕೆ ಹಲ್ಲು ಕಂದಾಗಿದೆ ಎನ್ನುತ್ತಾರೆ. ಈ ನೀರು ಮೊದಲೇ ಸಿಕ್ಕಿದ್ದರೆ ಕಳಕಪ್ಪನವರು ಉಳಿಯುತ್ತಿದ್ದರೇನೋ ಎನ್ನುವ ಹಂಬಲ ಆಕೆಯದು. ಮಗ ಬಸವರಾಜನಿಗೆ ಡಿಗ್ರಿ ಮುಗಿಸುವುದಕ್ಕೆ ಬೆಂಬಲ ನೀಡುತ್ತಿರುವ ದೇವೀರಮ್ಮ ಇಂದು ಸಂಘದ ಪ್ರಮುಖ ಮಹಿಳೆ.

ಪಕ್ಕದ ಕರಿಯಪ್ಪನವರ ಮನೆಗೆ ನೀವು ಹೋದಿರೆಂದರೆ ಅವರದು ವಿಪರೀತ ಉಪಚಾರ. ಛಾವಣಿ ನೀರು ಸಂಗ್ರಹದ ತೊಟ್ಟಿ ನಿರ್ಮಿಸಿರುವ ಕರಿಯಪ್ಪ ನರ್ಸರಿಯ ಆದಾಯದಿಂದ ಮನೆಯನ್ನು ಚಂದಾಗಿ ಕಟ್ಟಿಸುತ್ತಿದ್ದಾರೆ.  ಎರಡು ಹಸುಗಳನ್ನು ಕೊಂಡಿದ್ದಾರೆ. ಮೂವರು ಮಕ್ಕಳಿರುವ ಐದು ಜನರ ಈ ಸಂಸಾರ ನಗುನಗುತ್ತಿರುವುದು ಸಂತೋಷ ತರುತ್ತದೆ. ಆದರೆ ಮೊದಲ ಮಗ ಮುದುಕೇಶ್ನಿಗೆ ಹಲ್ಲು ಕಂದಾಗಿದೆ. ಮಗಳಿಗೂ ಕಂದಾಗಿದೆ.  ತಾಯಿ ಹನುಮವ್ವ ಮುಷ್ಠಿಕೊಪ್ಪದವರೇ ಆಗಿದ್ದಾರೆ. ಹೀಗೆ ನೀರಿನಿಂದ ಹಾಗೂ ವಂಶದಿಂದ ಈ ಮಕ್ಕಳಿಗೆ ಫ್ಲೋರೋಸಿಸ್ ಬಂದಿರುವ ಸಾಧ್ಯತೆಯಿದೆ.

ಮೊದಲು ಹಾಲು ಮಾರಾಟ ಮಾಡಲು ಬಯಸಿದ್ದರೂ ಮಕ್ಕಳಿಗೋಸ್ಕರ ಹಾಲನ್ನು ಮನೆಯಲ್ಲೇ ಉಳಿಸಿಕೊಂಡಿದ್ದಾರೆ. ಅತಿಥಿಗಳಿಗೂ ದಪ್ಪಹಾಲಿಗೆ ಬೆಲ್ಲ ಹಾಕಿ ಕಾಯಿಸಿ ನೀಡುತ್ತಾರೆ. ಚಪ್ಪರಿಸಿ ಕುಡಿಯುವ ವೇಳೆಗೆ ಕಾಳಿನ ಹಪ್ಪಳ ಸುಟ್ಟು ತರುತ್ತಾರೆ. ಇವರಿಬ್ಬರದೂ ಅನ್ಯೂನ್ಯ ಜೋಡಿ. ದುಡಿದು ತಿನ್ನುವ ಶ್ರಮಜೀವಿಗಳು. ಹನುಮವ್ವ ಸಹ ಸಂಘದಲ್ಲಿ ಪ್ರಮುಖ ಮಹಿಳೆ. ಲೆಕ್ಕಾಚಾರದಲ್ಲಿ ಜಾಣೆ. ಈ ಮನೆಗಳು ಉಳಿಯಲು ಈ ಮಹಿಳೆಯರೇ ಮುಖ್ಯಕಾರಣರಾಗಿದ್ದಾರೆ.

ಫ್ಲೋರೋಸಿಸ್ ಬಗೆ

ಕುಡಿಯುವ ನೀರಿನಲ್ಲಿ ಅಧಿಕ ಫ್ಲೋರೈಡ್ ಇದ್ದಾಗ ಫ್ಲೋರೋಸಿಸ್ ಬರುತ್ತದೆ. ಫ್ಲೋರೋಸಿಸ್ ಮೂರು ರೀತಿಯಲ್ಲಿ ಮನುಷ್ಯರ ದೇಹದ ಮೇಲೆ ದಾಳಿ ಮಾಡುತ್ತದೆ. ಬಾಲ್ಯದಿಂದಲೇ ಹಲ್ಲುಗಳನ್ನು ಕಪ್ಪಾಗಿಸುತ್ತಾ ಕೆಲವೇ ವರ್ಷಗಳಲ್ಲಿ ಹಲ್ಲುಗಳು ಪೂರ್ತಿ ಹಾಳಾಗುವಂತೆ ಮಾಡುತ್ತದೆ. ಎಲುಬುಗಳಲ್ಲಿರುವ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳುತ್ತಾ, ಸಂದಿಗಳಲ್ಲಿ ನೋವು, ಹಿಮ್ಮಡಿ, ಮೊಣಕಾಲು ಗಂಟು, ಸೊಂಟನೋವುಗಳು ಪ್ರಾರಂಭವಾಗುತ್ತವೆ. ದಿನಗಳೆದಂತೆ ರೋಗವು ಉಲ್ಬಣಿಸಿ ನಡು ಬಾಗಿ ನಡೆಯಲು ಆಗದೇ ರೋಗಿ ಹಾಸಿಗೆ ಹಿಡಿಯುವಂತಾಗುತ್ತದೆ. ಕೆಲವು ವರ್ಷಗಳ ತೀವ್ರ ನೋವು ಅನುಭವಿಸಿ ಸಾವನ್ನಪ್ಪುತ್ತಾರೆ. ಬುದ್ಧಿಮಾಂದ್ಯತೆ, ಕೆಳಹೊಟ್ಟೆನೋವು, ನರದೌರ್ಬಲ್ಯ ಮುಂತಾದವು ಫ್ಲೋರೈಡಿನಿಂದಲೂ ಬರುತ್ತದೆ. ಗೊತ್ತಾಗದಂತೆ ಆಕ್ರಮಿಸುವ ಈ ಕಾಯಿಲೆಗಳು ಸಂಪೂರ್ಣ ವಾಸಿಯಾಗುವುದಿಲ್ಲ.

ಯಾವೂರಲ್ಲಿ ಎಷ್ಟು ಫ್ಲೋರೈಡ್?

1. ಪಂಜಾಬಿನ ಮಕ್ತಸರ                      – 42.5 ಮಿಲಿ ಗ್ರಾಂ/ಲೀಟರ್

2. ದೆಹಲಿ                                        – 32.5 ಮಿಲಿ ಗ್ರಾಂ/ಲೀಟರ್

3. ಅಸ್ಸಾಂನ ಕಾರ್ಬಿ ಆಂಗ್ಲಾಂಗ್           – 23.4 ಮಿಲಿ ಗ್ರಾಂ/ಲೀಟರ್

4. ಹರಿಯಾಣದ ಭಿವಾನಿ                     – 17.3ಮಿಲಿ ಗ್ರಾಂ/ಲೀಟರ್

5. ಪಶ್ಚಿಮಬಂಗಾಳದ ಭೀರ್ಭೂಮ್         – 14.47 ಮಿಲಿ ಗ್ರಾಂ/ಲೀಟರ್

6. ಗುಜರಾತಿನ ಮೆಹಸಾನ                   – 12.9 ಮಿಲಿ ಗ್ರಾಂ/ಲೀಟರ್

7. ಒರಿಸ್ಸಾದ ಕೋರಾಪಟ್                   – 9.2 ಮಿಲಿ ಗ್ರಾಂ/ಲೀಟರ್

8. ಬಿಹಾರದ ಗಯಾ                            – 8.12 ಮಿಲಿ ಗ್ರಾಂ/ಲೀಟರ್

9. ಕರ್ನಾಟಕದ ಕೋಲಾರ                    – 7.79 ಮಿಲಿ ಗ್ರಾಂ/ಲೀಟರ್

10. ಉತ್ತರಪ್ರದೇಶದ ಕನೌಜು                – 7.67 ಮಿಲಿ ಗ್ರಾಂ/ಲೀಟರ್

11. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆ              – 7.1 ಮಿಲಿ ಗ್ರಾಂ/ಲೀಟರ್

12. ತಮಿಳುನಾಡಿನ ಈರೋಡು              – 7 ಮಿಲಿ ಗ್ರಾಂ/ಲೀಟರ್

 

ಭಾರತದ ಸ್ಥಿತಿ- ಗತಿ

 • 19 ರಾಜ್ಯಗಳಲ್ಲಿ ಫ್ಲೋರೈಡ್ ವಿಷದಂತೆ ಕೆಲಸ ಮಾಡುತ್ತಿದೆ. ಆರು ಕೋಟಿ ಜನರಿಗೆ; ಅದರಲ್ಲೂ 60 ಸಾವಿರ ಮಕ್ಕಳನ್ನು ಭಯಂಕರವಾಗಿ ಕಾಡುತ್ತಿದೆ.
 •  ತೆರೆದ ಬಾವಿಗಳ ನೀರಿನಲ್ಲಿ ಲೀಟರಿಗೆ ಒಂದು ಮಿಲಿ ಗ್ರಾಂನಿಂದ 48 ಮಿಲಿ ಗ್ರಾಂವರೆಗೆ ಫ್ಲೋರೈಡ್ ಇದೆಯೆಂದು ಡಬ್ಲ್ಯೂ.ಎಚ್.ಒ. ಹೇಳಿದೆ.
 • 59,111 ಹಳ್ಳಿಗಳಲ್ಲಿ ಲೀಟರಿಗೆ 1.5 ಮಿಲಿ ಗ್ರಾಂಗಿಂತ ಹೆಚ್ಚು ಫ್ಲೋರೈಡ್ ಇದೆ ಎಂದು ಸಾಬೀತಾಗಿದೆ.
 • 35,000 ಜನ ಲೀಟರಿನಲ್ಲಿ 10 ಮಿಲಿ ಗ್ರಾಂಗಿಂತಲೂ ಅಧಿಕ ಫ್ಲೋರೈಡ್ ಇರುವ ನೀರನ್ನು ಕುಡಿಯುತ್ತಾರೆ.
 • ಇಂದಿಗೂ ಫ್ಲೋರೈಡ್ ಇರುವ ನೀರು ಕುಡಿಯುವ ಶೇಕಡಾ 70ರಷ್ಟು ಜನರಿಗೆ ಫ್ಲೋರೋಸಿಸ್ ಬರುತ್ತಿದೆ.
 • ಶೇಕಡಾ 74.4ರಷ್ಟು ಜನರಿಗೆ ಹಲ್ಲು ತೊಂದರೆ ಇದೆ. ಶೇಕಡಾ 52ರಷ್ಟು ಜನರಿಗೆ ಕಾಲು ಗಂಟುನೋವು ತೊಂದರೆ ಇದೆ.
 • ಫ್ಲೋರೈಡಿನಿಂದ 500ಕ್ಕೂ ಹೆಚ್ಚು ಸಮಸ್ಯೆಗಳು ಉಂಟಾಗುತ್ತವೆ.

ರೋಗಕ್ಕೆ ಗುಡ್ ಬೈ

ಕಲ್ಕೇರಿಯ ಗ್ರಾಮದೇವತೆ ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿ ಸಂಘದಲ್ಲಿ ಸುಮಾರು 40 ವರ್ಷ ದಾಟಿದ ಸದಸ್ಯರು ಶಂಕರಗೌಡ, ಮುದುಕನಗೌಡ ಪಾಟೀಲ, ಚನ್ನಬಸಪ್ಪ ದೇಸಾಯಿ, ಸೋಮಣ್ಣ ಅಚ್ಚಪ್ಪ ದೇಸಾಯಿ, ಲಿಂಗಪ್ಪವಾರದ, ಬಸವನಗೌಡ ಪಾಟೀಲ ಹೀಗೆ ಎಲ್ಲರೂ ಬಾಲ್ಯದಲ್ಲಿ ದೇಸಾಯರ ಬಾವಿ, ಕೊರಗೇರಿ ಗುಂಡಬಾವಿ, ಸೆವನೀರು ಗುಂಡಬಾವಿ ನೀರು ಕುಡಿಯುತ್ತಿದ್ದರು.

ಬಾಲ್ಯದಲ್ಲೇ ಹಲ್ಲುಗಳು ಕಪ್ಪಾದವು. ಹರೆಯದಲ್ಲಿ ಹಲ್ಲುಗಳು ಬಾಚಿಗಳಂತೆ ಉದ್ದವಾದವು. ಹಿಮ್ಮಡಿ ನೋವು, ಮೊಣಕಾಲು ಗಂಟು ನೋವು, ಸೊಂಟ ನೋವು ಒಟ್ಟಾರೆ ಬೆಳಗ್ಗೆ ಮುಂಜಾವಿಗೆ ಏಳಲೇ ಆಗದಷ್ಟು ಜಡ, ಬೆಳಗಿನ ಒಂಭತ್ತಾದರೂ ಬಿಡದ ನೋವು ಕೆಲಸ ಮಾಡಲು ಬಿಡುತ್ತಿರಲಿಲ್ಲ. ಊರಿನ ನೀರಿನಲ್ಲಿ ಫ್ಲೋರೈಡ್ ಇರುವುದು ರಾಜ್ಯದಲ್ಲಿ ದೊಡ್ಡ ಸುದ್ದಿಯಾದರೂ ಪರಿಹರಿಸಲು ಯಾರೂ ಮುಂದಾಗಲಿಲ್ಲ.

ದೂರದ ತುಂಗಭದ್ರಾ ನೀರು ಕೊಳವೆಗಳ ಮೂಲಕ ತರುವ ಏರ್ಪಾಡು ನಡೆದರೂ ಕೆಲವೇ ತಿಂಗಳುಗಳಲ್ಲಿ ತೊಡಕಿನಿಂದ ನಿಂತುಹೋಯಿತು. ಹೀಗಾಗಿ ಇವರೆಲ್ಲಾ ಫ್ಲೋರೈಡಿನಿಂದ ಮುಕ್ತರಾಗಲು ಸಾಧ್ಯವಾಗಲಿಲ್ಲ. ಈಗ ಮಳೆನೀರು ಸಂಗ್ರಹ ಯೋಜನೆ ಇವರಿಗೆ ಹೊಸ ಹುರುಪು ನೀಡಿದೆ. ತೊಟ್ಟಿಯಿರಲಿ, ಕೃಷಿ ಹೊಂಡವಿರಲಿ, ಕುಡಿಯಲು ಬಾವಿ ಅಥವಾ ಬೋರನ್ನು ಅವಲಂಬಿಸುವುದು ನಿಂತಿದೆ.

ಶಂಕರಗೌಡ ಪಾಟೀಲರ ಹೊಲ ಊರಿನಿಂದ ಅರ್ಧಮೈಲು ದೂರಲ್ಲಿದೆ. ಅಲ್ಲಿರುವ ಕೃಷಿ ಹೊಂಡದಲ್ಲಿ ನೀರು ಶುದ್ಧ, ಸ್ವಚ್ಛ ತಿಳಿಯಾಗಿದೆ. ವರ್ಷಾವಧಿ ನೀರಿರುವ ಕಾರಣ ಊರಿನವರ ಸಾಲು ಸರತಿ ಹೆಚ್ಚಿದೆ. ಮಳೆ ಬಂದ ಮರುದಿನ ಆ ಕೃಷಿಹೊಂಡದ ಎದುರು ಜಾತ್ರೆಯೇ ಸೇರಿರುತ್ತದೆ.

ಹಾಗಂತ ಪಾಟೀಲರು ಮೈ- ಕೈ, ಸೊಂಟ, ಕಾಲುನೋವಿನಿಂದ ಮುಕ್ತರಾಗಿದ್ದು ಕೇವಲ ಮಳೆನೀರಿನಿಂದ ಮಾತ್ರವಲ್ಲ ಎನ್ನುತ್ತಾರೆ.

ಮೊದಲು ಸಿದ್ಧಿ ಸಮಾಧಿಯೋಗ ತರಬೇತಿ ಪಡೆದಾಗ ಅಲ್ಲಿ ಹೇಳಿಕೊಡುವ ಆಸನಗಳು, ಪ್ರಾಣಾಯಾಮ ಕಷ್ಟವಾಗಿದ್ದರೂ ದೇಹಕ್ಕೆ ಸಾಕಷ್ಟು ವ್ಯಾಯಾಮ ಒದಗಿಸುತ್ತಿತ್ತು. ನೋವು ನಿವಾರಣೆಗೆ ನಿರ್ಗುಂಡಿ ತೈಲ ಸಹಾಯ ಮಾಡಿತ್ತು. ಅನಂತರದಲ್ಲಿ ಹೊಲದಲ್ಲಿ ಬೆಳೆಯುವ ಅನೇಕ ರೀತಿಯ ತರಕಾರಿಗಳು ಆಹಾರದಲ್ಲಿ ಪೌಷ್ಟಿಕತೆಯನ್ನು ಹೆಚ್ಚಿಸಲು ಕಾರಣವಾಯಿತು. ಹೀಗೆ ಅನೇಕ ಕಾರಣಗಳಿಂದ, ಕೆಟ್ಟುಹೋದ ಮುಖ, ಹಲ್ಲುಗಳು ಸರಿಯಾಗಿವೆ. ಮುಂಜಾನೆ ಏಳಲು, ಶ್ರಮ ವಹಿಸಿ ದುಡಿಯಲು ಸಾಧ್ಯವಾಗಿದೆ ಎನ್ನುವ ವರದಿ ಪಾಟೀಲರದು.

ಪಾಟೀಲರು ಬೈಫ್ ಸಹಯೋಗದಲ್ಲಿ ಗಿಡಗಳ ನರ್ಸರಿಯನ್ನು ಮಾಡಿದ್ದಾರೆ. ಸಾಕಷ್ಟು ಲಾಭ ಗಳಿಸಿ ಸಾಲದಿಂದ ಮುಕ್ತರಾಗಿದ್ದಾರೆ. ಪಾಟೀಲರ ಪ್ರಕಾರ ಕೇವಲ ನೀರು ಬದಲಿಸಿದ ಮಾತ್ರಕ್ಕೆ ಅನೇಕ ವರ್ಷಗಳಿಂದ ಅಂಟಿಕೊಂಡಿರುವ ಫ್ಲೋರೈಡ್ ತಕ್ಷಣಕ್ಕೆ ಹೋಗಲು ಸಾಧ್ಯವಿಲ್ಲ. ಅದಕ್ಕೆ ಸರಿಯಾದ ಆರೈಕೆ, ಔಷಧಿಗಳು, ಪೌಷ್ಟಿಕ ಆಹಾರ, ಶಿಸ್ತು ಏನೆಲ್ಲಾ ಅಗತ್ಯ ಎಂದು ಪ್ರತಿಪಾದಿಸುತ್ತಾರೆ. ಇದನ್ನೆಲ್ಲಾ ಪಾಲಿಸಿದರೆ ನಲವತ್ತಕ್ಕೆ ವಕ್ರವಾಗುವ ಕಾಲುಗಳು, ಬಾಗುವ ನಡುವಿನ ತೊಂದರೆಗಳನ್ನು ನಿವಾರಿಸಲು ಸಾಧ್ಯವೆನ್ನುತ್ತಾರೆ.

ರಾಯಮ್ಮನ ಸಫಲತೆ

ಮುಷ್ಠಿಕೊಪ್ಪದ ರಾಯಮ್ಮ ಸಾಬಣ್ಣವರ್ ಲಕ್ಷ್ಮಿ ಮಹಾಲಕ್ಷ್ಮಿ ಸ್ವಸಹಾಯ ಸಂಘದ ಸದಸ್ಯೆ. ಪುಟ್ಟಮನೆಯ ಹಿಂಭಾಗದ ಪುಟ್ಟ ಜಾಗದಲ್ಲಿ ಎರೆಗೊಬ್ಬರ ತಯಾರಿಕೆ ನಡೆಸಿದ್ದಾರೆ. ಮೊದಲ ವರ್ಷ ನಾಲ್ಕು ಕ್ವಿಂಟಾಲ್ ಎರೆಗೊಬ್ಬರ ತಯಾರಿಸಿದ್ದಾರೆ.

ಈಕೆಯ ಹೊಲದಲ್ಲಿರುವ ಕೃಷಿಹೊಂಡ ಸದಾ ತುಂಬಿಯೇ ಇರುತ್ತದೆ. ಕಾರಣ ಸುತ್ತಲಿನ 12ಕ್ಕೂ ಹೆಚ್ಚು ಕೃಷಿಹೊಂಡಗಳ ಸರಣಿ ರಾಯಮ್ಮನವರಿಗೆ ಈ ಅನುಕೂಲ ಒದಗಿಸಿದೆ. ಹೊಲದ ಮಣ್ಣು ಫಲವತ್ತಾಗಿರದ ಕಾರಣ ಇಳುವರಿಯೂ ಕಡಿಮೆಯಾಗಿತ್ತು. ನೀರಿಲ್ಲದ ಕಾರಣ ಮಳೆ ಆಶ್ರಯದಲ್ಲಿ ಬೆಳೆವ ಶೇಂಗಾದ ಇಳುವರಿ ಮೂರೂವರೆ ಕ್ವಿಂಟಾಲ್ ದಾಟುತ್ತಿರಲಿಲ್ಲ. ಇರುವ ಒಂದು ಎಕರೆಗೆ ಸಿಗುವ ಮೂರೂವರೆ ಕ್ವಿಂಟಾಲ್ ಇಳುವರಿಯಲ್ಲಿ ಕುಟುಂಬವನ್ನು ಸಾಕಲು ಹೇಗೆ ಸಾಧ್ಯ?

ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಮಣ್ಣು ಬಿಸಿಲಿನ ತಾಪಕ್ಕೆ ತನ್ನೆಲ್ಲಾ ಸತ್ವವನ್ನು ಕಳೆದುಕೊಂಡಿರುತ್ತದೆ. ಅದಕ್ಕಾಗಿ ಹೊಲಕ್ಕೆ ಮುಚ್ಚಿಗೆ ಬೆಳೆ ಬೆಳೆಸಬೇಕಾಗುತ್ತದೆ. ಸಾವಯವ ವಸ್ತುಗಳನ್ನು, ಸೊಪ್ಪು, ದರಕುಗಳನ್ನು ಹಾಕಬೇಕಾಗುತ್ತದೆ. ಆದರೆ ಇದೆಲ್ಲಾ ಮಳೆಯಿಲ್ಲದೆ ಸಿಗುವುದು ಹೇಗೆ? ಪಕ್ಕದಲ್ಲಿರುವ ಕಪ್ಪತಗುಡ್ಡದ ಸಾಲು ಸಹ ಬೋಳು ಬೋಳು.

ಆದರೆ ರಾಯಮ್ಮ ತಮಗೆ ಸಿಗುವಷ್ಟು ತ್ಯಾಜ್ಯದಿಂದ ತಯಾರಿಸಿದ ಎರೆಗೊಬ್ಬರ ಹೊಲದ ಮಣ್ಣನ್ನು ಸತ್ವಯುತಗೊಳಿಸಿತು. ಕೃಷಿಹೊಂಡ ಹೊಲದ ಮಣ್ಣಲ್ಲಿ ತೇವಾಂಶ ಉಳಿಯುವಂತೆ ಮಾಡಿತು. ಇದರಿಂದ ಇಳುವರಿಯೂ ಹೆಚ್ಚಿತು.

ರಾಯಮ್ಮ 2005ರಲ್ಲಿ ಒಂದು ಎಕರೆ ಹೊಲದಲ್ಲಿ 4.95 ಕ್ವಿಂಟಾಲ್ ಶೇಂಗಾ ಬೆಳೆದು 9,125 ರೂಪಾಯಿಗಳ ಆದಾಯ ಪಡೆದರು. ಈಗ ಊರಿನಲ್ಲಿ ಎರೆಗೊಬ್ಬರ ತಯಾರಿಸುವವರ ಸಂಖ್ಯೆ ಹೆಚ್ಚಿದೆ. ಮಣ್ಣಿನ ತೇವಾಂಶ ಉಳಿಸಲು ಹೇಗಿದ್ದರೂ ಎಲ್ಲರ ಹೊಲದಲ್ಲೂ ಕೃಷಿ ಹೊಂಡ ಇದ್ದೇ ಇದೆಯಲ್ಲಾ…

ಇಲ್ಲೊಂದು ಸಣ್ಣ ಲೆಕ್ಕಾಚಾರವಿದೆ. ಮೊದಲು ರಾಯಮ್ಮ ಒಂದು ಎಕರೆಗೆ, ಮಳೆ ಆಶ್ರಯಿಸಿ ತೆಗೆದ ಬೆಳೆ 350 ಕಿಲೋಗ್ರಾಂ. ಕೃಷಿಹೊಂಡ, ಎರೆಗೊಬ್ಬರ ಬಳಸಿದ ಮೇಲೆ ಸಿಕ್ಕ ಇಳುವರಿ 495 ಕಿಲೋಗ್ರಾಂ. ಅಂದರೆ ಒಂದು ಹನಿ (ಒಂದು ಮಿಲಿಮೀಟರ್) ನೀರಿನಿಂದ 800ಗ್ರಾಂ ಶೇಂಗಾ ದೊರೆಯುತ್ತಿತ್ತು. ಈಗ ಅದೇ ಒಂದು ಹನಿ ನೀರಿನಿಂದ (ಒಂದು ಮಿಲಿಮೀಟರ್) 1.1 ಕಿಲೋಗ್ರಾಂ ಶೇಂಗಾ ಬೆಳೆಯುತ್ತಿದೆ(ವರ್ಷಕ್ಕೆ 43 ಮಿಲೀಮೀಟರ್ ಮಳೆ). ಅಂದರೆ ಒಂದು ಹನಿ ನೀರಿಗೆ 300 ಗ್ರಾಂನಷ್ಟು ಇಳುವರಿ ಹೆಚ್ಚಳವಾಗಿದೆ. ಇದರಿಂದ ಹೆಚ್ಚಿದ ಮಣ್ಣಿನ ಗುಣಮಟ್ಟ, ಫಲವತ್ತತೆಯ ಕಾರಣ.

ಪವಾಡದ ನೀರು

ಪದ್ಮಮ್ಮ ಶಾಗೋಟಿಗೆ 50 ವರ್ಷ. ಆಕೆಯ ತಾಯಿ, ಗಂಡ ಎಲ್ಲರಿಗೂ ಗಂಟುನೋವು, ಜಡತೆ, ನಿಶ್ಯಕ್ತಿ ಹಾಗೂ ಅದುರುವಿಕೆ. ಮೂವರು ಮಕ್ಕಳು ಆರೋಗ್ಯವಾಗಿದ್ದಾರೆ. ಉಳಿದವರು ದಿನಾಲು ಮಾತ್ರೆ ಸೇವಿಸದೇ ಇದ್ದರೆ ಬೆಳಗ್ಗೆ ಏಳಲೇ ಸಾಧ್ಯವಿಲ್ಲ. ತಿಂಗಳ ಮಾತ್ರೆ ಖರ್ಚು 700 ರೂಪಾಯಿಗಳು. ಇದಕ್ಕೆಲ್ಲಾ ನೀರೇ ಕಾರಣವೆಂದು ವೈದ್ಯರು ಹೇಳಿದರೂ ಪರ್ಯಾಯ ಸಿಗದೇ ಒದ್ದಾಟ.

ಪಕ್ಕದ ಮನೆಯವರು ಮಳೆನೀರಿಗೆ ತೊಟ್ಟಿ ಕಟ್ಟಿಸಿದರು. ಪದ್ಮಮ್ಮಳಿಗೂ ಪಾಲು ಸಿಕ್ಕಿತು. ಕೈಕಾಲು ಗಂಟುನೋವು ಕಡಿಮೆಯಾದ ಅನುಭವ. ಆಕೆಗೂ ಮಳೆನೀರಿನ ತೊಟ್ಟಿ ಕಟ್ಟಿಸಿಕೊಳ್ಳಬೇಕೆಂಬ ಆತುರ. ತಮ್ಮ ಸ್ವಸಹಾಯ ಗುಂಪಿನಿಂದ ಸಾಲ ಪಡೆದರು. ಸ್ನೇಹಿತರಿಂದ ಕೈಗಡ. ಮನೆ ಪಕ್ಕದಲ್ಲಿ ನೆಲಮಟ್ಟದ ತೊಟ್ಟಿ ನಿರ್ಮಾಣ. ತಿಂಗಳು ಕಳೆಯುವುದರಲ್ಲೇ ಮಳೆನೀರಿನಿಂದ ತೊಟ್ಟಿ ತುಂಬಿತ್ತು. ಆರೋಗ್ಯ ಸುಧಾರಣೆ. ಮಾತ್ರೆ ಸೇವಿಸುವ ಪ್ರಮಾಣ ಇಳಿಮುಖ. ಖರ್ಚು ಹತೋಟಿಗೆ ಬಂತು.

ಮಳೆನೀರಿನ ಬಳಕೆಯಿಂದ ಅಡುಗೆ ಬೇಗ ಆಗುತ್ತದೆ. ಸ್ನಾನದಿಂದ ಮೈ ತುರಿಕೆಯಾಗದು ಎನ್ನುತ್ತಾರೆ ಪದ್ಮಮ್ಮ. ಅವರಿಗೆ ನೀರು ಹೊರುವಿಕೆ ತಪ್ಪಿದೆ. ದಿನದ ಬಹಳ ಸಮಯ ಇದರಿಂದ ಉಳಿತಾಯ. ಕೆಲಸದಲ್ಲಿ ಆಸಕ್ತಿ.  ಮಕ್ಕಳಿಗೆ ಈ ರೋಗ ಬರಲಾರದು ಎಂಬ ವಿಶ್ವಾಸ. ಈಗಿರುವ ನೋವು ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಬಂದಿದೆ.

ಮುಂಡರಗಿ ತಾಲ್ಲೂಕು ಮಾಹಿತಿ

ರಾಜ್ಯ: ಕರ್ನಾಟಕ

ಜಿಲ್ಲೆ: ಗದಗ

ಭೂಪ್ರದೇಶ: 882 ಚದರ ಕಿಲೋಮೀಟರ್

ಸಾಕ್ಷರತೆ: ಶೇಕಡಾ 36.2

ಪ್ರಮುಖ ವೃತ್ತಿ: ಕೃಷಿ ಶೇಕಡಾ 80, ಉಳಿದದ್ದು ಕೃಷಿ ಕೂಲಿ.

ಮಣ್ಣಿನ ಗುಣ: ಕೆಂಪುಮಣ್ಣು

[ಕೆಲವು ಕಡೆಗಳಲ್ಲಿ ಕಪ್ಪುಮಣ್ಣು ಇದೆ] ಬರಡುಭೂಮಿ

ವಾರ್ಷಿಕ ಮಳೆ ಪ್ರಮಾಣ: 450 ಮಿಮೀ.

ಅಂತರ್ಜಲ ಮಟ್ಟ: 150ರಿಂದ 200 ಅಡಿ ಆಳ

ನೀರಾವರಿ: ಶೇಕಡಾ 8

ನೀರು: 5.4ರಿಂದ 8.5ರಷ್ಟು ಫ್ಲೋರೈಡ್ ಇದೆ.

ಮುಖ್ಯಬೆಳೆ: ಮೊದಲು ನವಣೆ/ಶೇಂಗಾ, ಈಗ ಜೋಳ

ಇತರ ಬೆಳೆಗಳು: ತೊಗರಿ, ಹುರುಳಿ, ಹೆಸರು, ಸೂರ್ಯಕಾಂತಿ

ಸಾಧನೆ

ನಿರ್ಮಾಣಗಳು                                 –   ವಿಸ್ತೀರ್ಣ

ಟ್ರಂಚ್ ಕಂ ಬದುಗಳು                          – 2,610 ಹೆಕ್ಟೇರ್

ಬದುಗಳ ಮೇಲೆ ಮಾಡಿದ ಪ್ಲಾಂಟೇಷನ್   – 6,91600 ಮೀಟರ್

ನೀರಿಂಗುವ ಕಾಲುವೆ                          – 6,327 ಕ್ಯುಬಿಕ್ ಮೀಟರ್

ಮಳೆನೀರಿನ ತೊಟ್ಟಿಗಳು                     – 37

ಕೃಷಿಹೊಂಡಗಳು                              – 1,131

ಕೊಳವೆಬಾವಿ ಮರುಪೂರಣ                 – 31

ಪ್ಲಾಂಟೇಷನ್                                    – 716.7 ಹೆಕ್ಟೇರ್

ನರ್ಸರಿಯಲ್ಲಿ ಬೆಳೆಸಿದ ಅರಣ್ಯ ಸಸ್ಯಗಳು   – 8,22,614

ತೋಟಗಾರಿಕೆ ಸಸ್ಯಗಳು                      – 40,625

ಹೆಚ್ಚಿದ ಆದಾಯ- ಇಳುವರಿ

 

ಕುಟುಂಬದ ವಿಧ ಕುಟುಂಬಗಳು ಸರಾಸರಿ ಆದಾಯ-2002ರಲ್ಲಿ ಸರಾಸರಿ ಆದಾಯ- 2007ರಲ್ಲಿ ಶೇಕಡವಾರು ಹೆಚ್ಚಳ
ಬಡವರು 119 13,690.00 18,710.00 37
ಮಧ್ಯಮವರ್ಗ 06 19,400.00 32,500.00 68

 

ಬೆಳೆಗಳು ಇಳುವರಿ (ಕ್ವಿಂಟಾಲ್/ಎಕರೆ) ಶೇಕಡವಾರು ಹೆಚ್ಚಳ
2002ರಲ್ಲಿ 2007ರಲ್ಲಿ
ಜೋಳ 5 605 30
ಹರುಳಿ 2.5 3.5 39
ತೊಗರಿ 3 3.5 17
ಕೇಸರಿ ಬೇಳೆ 3 3.7 23
ಹೆಸರು ಬೇಳೆ 1 2.5 150
ಹಬ್ಬು ಶೇಂಗಾ 7 9 29
ಸೂರ್ಯಕಾಂತಿ 3 3.25 8

ತೆರೆದ ಬಾವಿಗಳಲ್ಲಿ ಹೆಚ್ಚಿದ ನೀರಿನ ಪ್ರಮಾಣ

 

ಹಳ್ಳಿಗಳು ತೆರೆದ ಬಾವಿಗಳು 2002ರಲ್ಲಿ ನೀರಿದ್ದ ಬಾವಿಗಳು 2007ರಲ್ಲಿ ನೀರಿದ್ದ ಬಾವಿಗಳು ಹೆಚ್ಚಿದ ನೀರಿನ ಮಟ್ಟ (ಅಡಿಗಳಲ್ಲಿ)
ಸಂಖ್ಯೆ ಸರಾಸರಿ ಆಳ (ಅಡಿಗಳಲ್ಲಿ) ಸಂಖ್ಯೆ ಸರಾಸರಿ ಆಳ (ಅಡಿಗಳಲ್ಲಿ)
ವಿರೂಪಪುರ 24 12 2.2 24 11.4 9.2
ಕಲ್ಕೇರಿ 34 21 4.2 34 12.0 7.8
ಮುಷ್ಠಿಕೊಪ್ಪ 19 11 2.2 19 15.0 12.8
ತಿಪ್ಪಾಪುರ 10 6 7.8 10 10.5 2.7
ಬೂದಿಹಾಳ್ 69 27 2.8 69 11.0 8.2
ಒಟ್ಟು 156 77 3.9 156 12.0 8.1

ಉಕ್ಕಿ ಹರಿದ ಕೊಳವೆಬಾವಿಗಳು

 

ವಿರೂಪಪುರ 6
ಕಲ್ಕೇರಿ 9
ಮುಷ್ಠಿಕೊಪ್ಪ 11
ತಿಪ್ಪಾಪುರ 2
ಬೂದಿಹಾಳ್ 17 [14+3]
ಬೆನ್ನಿಹಾಳ್ 11 [9+2]
ಮುಕ್ತಾಂಪುರ 6 [3+3]
ಒಟ್ಟು 62

ಬದಲಾವಣೆಗೆ ಕಾರಣವಾದ ಸಂಸ್ಥೆ

BAIF ಗ್ರಾಮೀಣಾಭಿವೃದ್ಧಿ ಸಂಸ್ಥೆ 1967 ಆಗಸ್ಟ್ 24ರಂದು ಡಾ. ಮಣಿಭಾಯಿ ದೇಸಾಯಿಯವರಿಂದ ಪ್ರಾರಂಭ. ಪೂನಾದ ಉರುಳಿಕಾಂಚನ್ನಲ್ಲಿ ಮಹಾತ್ಮಾಗಾಂಧಿಯವರಿಂದ ಅರಳಿದ ನೇಚರ್ ಕ್ಯೂರ್ ಆಶ್ರಮದಲ್ಲಿ ಪ್ರಾಯೋಗಿಕ ಕೆಲಸಗಳು. ಆರೋಗ್ಯ, ಸ್ವಚ್ಛತೆ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಹೀಗೆ ಸ್ಥಳೀಯ ಬಡತನ ನಿವಾರಣೆಗೆ ಪರಿಹಾರದ ಹುಡುಕಾಟ.

ಉದ್ದೇಶಗಳು

ಗ್ರಾಮಾಂತರ ಪ್ರದೇಶದ ಕುಟುಂಬಗಳು ಸ್ವಉದ್ಯೋಗಸ್ಥರಾಗಲು ಅವಕಾಶಗಳನ್ನು ಕಲ್ಪಿಸುವುದು, ಸುಸ್ಥಿರ ಜೀವನಮಟ್ಟ, ಪ್ರೋತ್ಸಾಹಕರ ಪರಿಸರ ನಿರ್ಮಾಣ, ಉತ್ತಮ ಜೀವನ ಹಾಗೂ ಮಾನವೀಯ ಮೌಲ್ಯಗಳ ಪ್ರಸಾರ ಇವು ಮುಖ್ಯ ಉದ್ದೇಶಗಳು. ಅಭಿವೃದ್ಧಿ, ಸಂಶೋಧನೆ, ಸ್ಥಳೀಯ ಸಂಪನ್ಮೂಲಗಳ ಸಮರ್ಥ ಬಳಕೆ, ಸೂಕ್ತ ತಂತ್ರಜ್ಞಾನ ವಿಸ್ತರಣೆ ಮತ್ತು ಸಮುದಾಯದ ಸಹಭಾಗಿತ್ವದಲ್ಲಿ ಕೌಶಲ್ಯವರ್ಧನೆ, ಸಾಮರ್ಥ್ಯ ವರ್ಧನೆಯನ್ನು ಕೈಗೊಳ್ಳುವುದರ ಮೂಲಕ ಉದ್ದೇಶಗಳ ಸಾಧನೆ. ಇದೊಂದು ರಾಜಕೀಯರಹಿತ, ಸುರಕ್ಷಿತ ಮತ್ತು ಉದ್ಯೋಗಿಗಳಿಂದ ನಿರ್ವಹಿಸಲಾಗುತ್ತಿರುವ ಸಂಘಟನೆ.

ಕರ್ನಾಟಕದಲ್ಲಿ BAIF ಗ್ರಾಮೀಣಾಭಿವೃದ್ಧಿ ಸಂಸ್ಥೆ- ಕರ್ನಾಟಕ (BIRD-K) ಪ್ರಾರಂಭ 1980ರಲ್ಲಾಯಿತು, ಹಸುಗಳ ಅಭಿವೃದ್ಧಿ, ಜಲಾನಯನ ಅಭಿವೃದ್ಧಿ, ಕೃಷಿ- ಅರಣ್ಯ, ಮಹಿಳಾ ಸಬಲೀಕರಣ, ರೇಷ್ಮೆ, ಸ್ವಸಹಾಯ ಸಂಘಗಳು, ಸುಸ್ಥಿರ ಕೃಷಿ, ಸಮುದಾಯ ಆರೋಗ್ಯ ಇವೆಲ್ಲಾ ಇಲ್ಲಾಗುತ್ತಿರುವ ಕೆಲಸಗಳು.

ಕರ್ನಾಟಕದ 19 ಜಿಲ್ಲೆಗಳಲ್ಲಿ, ಆಂಧ್ರಪ್ರದೇಶದ 5 ಜಿಲ್ಲೆಗಳಲ್ಲಿ ಇದು ಕೆಲಸ ಮಾಡುತ್ತಿದೆ. ಇಸವಿ 2001-2002ರಲ್ಲಿ ಅರಣ್ಯ ಹಾಗೂ ಪರಿಸರ ಮಂತ್ರಾಲಯವು ಇವರಿಗೆ ಪರಿಸರಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ಸಚೇತನ ಕುಡಿಯುವ ನೀರಿನ ಯೋಜನೆ ಗದಗ, ಕೋಲಾರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ನಡೆಯುತ್ತಿದೆ. ಕರ್ನಾಟಕ ಸರ್ಕಾರ ಹಾಗೂ ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತಿರಾಜ್ ಇಲಾಖೆಯ ಪ್ರಾಯೋಜಿತ ಕಾರ್ಯಕ್ರಮವಿದು. ಮೂರು ಜಿಲ್ಲೆಗಳ ಪ್ರತಿ ತಾಲ್ಲೂಕಿನ 15 ಹಳ್ಳಿಗಳ 1,500 ಕುಟುಂಬಗಳನ್ನೊಳಗೊಂಡಿದೆ. ಯೋಜನೆಯ ಅವಧಿ ಏಪ್ರಿಲ್ 2006ರಿಂದ ಮಾರ್ಚ್ 2011.

ಕೊಳವೆಬಾವಿ ಮತ್ತು ಬಾವಿಗಳಲ್ಲಿ ಬದಲಾದ ಫ್ಲೋರೈಡ್ ಪ್ರಮಾಣ (ಮಿಲಿ ಗ್ರಾಂ/ಲೀಟರ್)

———————————————————————————————–

ಹಳ್ಳಿಗಳು                            20.5.2004           9.4.2006            28.6.2008

———————————————————————————————–

ವಿರೂಪಾಪುರ

ಕೊಳವೆಬಾವಿ                       5.8                        4                              2.35

ತೆರೆದಬಾವಿ                         6.14                      4.9                           1.78

———————————————————————————————–

ವಿರೂಪಾಪುರ ತಾಂಡಾ

ಕೊಳವೆಬಾವಿ                       1.43                     1.4                              —

———————————————————————————————–

ಕಲ್ಕೇರಿ

ಕೊಳವೆಬಾವಿ                       6.42                    4.96                          2.22

ತೆರೆದಬಾವಿ                        6.05                    5.37                           1.91

———————————————————————————————–

ಮುಷ್ಠಿಕೊಪ್ಪ

ಕೊಳವೆಬಾವಿ                    4.9                       7.02                           2.32

ತೆರೆದ ಬಾವಿ                     5.04                     5.04                           1.92

———————————————————————————————–

ತಿಪ್ಪಾಪುರ

ಕೊಳವೆಬಾವಿ                   6.1                         7.56                           5.58

———————————————————————————————–

ಬೂದಿಹಾಳ್

ಕೊಳವೆಬಾವಿ                    4.9                         3.4                             3.77

ತೆರೆದ ಬಾವಿ                     4.1                          4.73                           2.38

———————————————————————————————–

ಹಾರೋಗೇರಿ

ಕೊಳವೆಬಾವಿ                    3.65                       1.9                             2.55

———————————————————————————————–

ಬಸಾಪುರ

ಕೊಳವೆಬಾವಿ                   4.66                      4.7                             4.01

ತೆರೆದ ಬಾವಿ                     5.0                        5.7                                   —

———————————————————————————————

ಮುಕ್ತಾಪುರ

ಕೊಳವೆಬಾವಿ                  4.84                      5.7                             2.61

———————————————————————————————

ಬೆನ್ನಿಹಳ್ಳಿ

ಕೊಳವೆಬಾವಿ                  5.35                      5.2                           2.44

———————————————————————————————-

ಗ್ರಾಮಗಳ ಜನಸಂಖ್ಯೆ ಹಾಗೂ ವಿಸ್ತೀರ್ಣ

ಹಳ್ಳಿಗಳು                       ಜನಸಂಖ್ಯೆ              ಹೆಕ್ಟೇರ್ ಪ್ರದೇಶ

ಕಲ್ಕೇರಿ                          3631                     4114

ಮುಷ್ಟಿಕೊಪ್ಪ                   430                       1182

ವಿರೂಪಾಪುರ                 337                        607

ತಾಂಡ                         494

ಬೂದಿಹಾಳ                   1555                        1574

ತಿಪ್ಪಾಪುರ                    170                         328

ಬೆನ್ನಿಹಳ್ಳಿ                      1120                        1579

ಮಕ್ತಂಪುರ                   689                         706

ಹಾರೋಗೇರಿ               2285                        4769

ಬಂಕಾಪುರ                 431                            678

————————–