ದರುವು

ತರವಲ್ಲ ನಿಮಗಿದೂ ನಾಥ ಮನೋಪ್ರೀತ॥
ನಿಮಗೆ ಸೆರಗೊಡ್ಡಿ ಬೇಡುವೇ ಲಾಲಿಸೀ ಮಾತ॥
ಧರೆಯೊಳು ಕ್ಷಾತ್ರಧರ್ಮವನೂ ಅರಿತು ನೀನೂ
ಶರಣಾಗತರಾಗುವುದೂ ಸರಿಯೇ ನಿಮಗಿನ್ನೂ॥
ತುರಗ ಬಂಧಿಸಿ ನೀವು ಇನ್ನೂ ಬಿಡಲು ಇನ್ನೂ
ಸರಿ ದೊರೆಗಳು ಇದ ನೋಡಿ ನಗುವರು ಇನ್ನೂ॥

ಜ್ವಾಲೆ: ಹೇ ಪ್ರಿಯಾ ಯನ್ನ ಮಾತು ಲಾಲಿಸಬೇಕು ರಾಯ. ಕ್ಷತ್ರಿಯ ವಂಶದವರಾಗಿ ರಾಜಧರ್ಮವನ್ನರಿತವರಾಗಿ ಏನೂ ತಿಳಿಯದ ಮೂಢರಂತೆ ನೀವು ವರ್ತಿಸಬಹುದೇ: ಕಟ್ಟಿದಂಥ ಕುದುರೆಯನ್ನು ಜಯಿಸಿದಲ್ಲದೇ ಬಿಡಬಹುದೇ. ಶತೃವಿಗೆ ಶರಣಾಗತರಾಗಿ ಜೀವಿಸಬಹುದೇ. ಇದ ನೀವು ಅರಿಯದವರೇ. ಈ ನಿಮ್ಮ ನೀತಿಯನ್ನು ನೋಡಿದಂಥ ಸರಿ ರಾಜರುಗಳು ನಗುವರಲ್ಲದೇ ನೀವು ಅಪಹಾಸ್ಯಕ್ಕೆ ಗುರಿಯಾಗುವಿರೀ ನಲ್ಲಾ ನಿಮಗಿದು ಸಲ್ಲಾ॥

ದರುವು

ಉಡುರಾಜ ವಂಶಜ ಪಾರ್ಥ ಅವನು ದೂರ್ತ
ಒಡನೇ ಮಾಡಿ ಯುದ್ಧವ ಜಾತ ಮಡಿದಿರುವಾತ॥
ಬಿಡದೆ ಮುಯ್ಯಿಗೆ ಮುಯ್ಯಿ ನಾಥ ಮಾಡು ಘಾತ ಹರುಷ
ಪಡುವನು ಸ್ವರ್ಗದೋಳ್‌ ಇರುವ ತನುಜಾತ॥

ಜ್ವಾಲೆ: ಹೇ ಪ್ರಾಣನಾಥ! ಯಮ್ಮ ಸುತನಾದ ಪ್ರವೀರನು ಆ ಪಾರ್ಥನ ಕುದುರೆಯನ್ನು ಬಂಧಿಸಿ, ವೀರಾವೇಶದಿಂದ ಯುದ್ಧಮಾಡಿ ಸುರ ಲಲನೆಯರನ್ನಪ್ಪಿದನಲ್ಲದೇ ಶತೃವಿಗೆ ತಲೆಬಾಗಿ ಕುದುರೆಯನ್ನು  ಬಿಡಲು ಒಪ್ಪಿದನೆ. ಅಂಥ ಧುರವೀರನಾದ ನಮ್ಮ ಮುದ್ದು ಕಂದನನ್ನು ಬಳಲಿಸಿದ ಗುರುಹಿರಿಯರ ಘಾತುಕನಾದ ಧೂರ್ತ ಪಾರ್ಥನ ಶಿರ ಚೆಂಡಾಡಿ ಪರಲೋಕದಲ್ಲಿರುವ ನಮ್ಮ ಸುತನಿಗೆ ಹರುಷವನ್ನುಂಟುಮಾಡಬೇಕಲ್ಲದೇ ತುರಗವನ್ನೊಪ್ಪಿಸಿ ಶರಣಾಗತರಾಗುವುದು ಎಷ್ಟು ಮಾತ್ರಕ್ಕೂ ನಿಮಗೆ ಥರವಲ್ಲವೈ ಪತಿಯೇ ನೀವಿದನರಿಯೇ॥

ದರುವು

ಧರಣಿಯೊಳಧಿಕವಾಗಿರುವಾ ಮೆರೆಯುತಿರುವಾ
ಶ್ರೀ ಹಿರಿಯ ಬಳ್ಳಾಪುರವಾ ಪಾಲಿಸುತಿರುವಾ॥
ಗಿರಿಜೆಯ ಅರಸನಾಗಿರುವಾ ತಾನಿರುವಾ ಮಾರ
ಹರನೂ ಸೋಮೇಶ್ವರನೂ ಕರುಣದಿಂ ಪೊರೆವಾ॥

ಜ್ವಾಲೆ: ಹೇ ದೊರೆಯೇ! ಈ ಧರಣಿಯೊಳಗೆ ಸುರಪನಮರಾವತಿಗೆ ಸರಿಯೆನಿಸಿ ಮೆರೆಯುವ ಹಿರಿಯ ಬಳ್ಳಾಪುರವನ್ನು ಪ್ರೀತಿಯಿಂದ ಪರಿಪಾಲಿಸುವಾ ಗಿರಿಜೆಯರಸನಾದ ಶ್ರೀ ಸೋಮೇಶ್ವರನು ಕರುಣದಿಂದ ಸಲಹುವನಾದ ಕಾರಣ, ತುರಗವನ್ನೊಪ್ಪಿಸಿ ಶರಣಾಗತನಾಗದೆ ಸುತ ಘಾತುಕನ, ಶಿರವನ್ನು ತರಿದೀಡಾಡು ದೊರೆಯೇ ನಿಮಗಿದು ಸರಿಯೇ॥

ದರುವು

ಕಾಂತೆ ನಿನ್ನಯ ಮಾತು ಅಂತರಂಗಕೆ ತರೆನೂ
ಶಾಂತಿಯನೂ ಬಿಟ್ಟು ಅ ಶಾಂತಿ ಒಪ್ಪುವೆನೇ ಪೇಳ್ ನೀನೇ॥

ಕಂತು ಜನಕನು ಲಕ್ಷ್ಮೀ ಕಾಂತನು ನರನ ಬಳಿ
ನಿಂತು ರಕ್ಷಿಸುತವನ ಸಂತಸದೋಳಿಹನೂ ತಾನಿಹನೂ॥

ನೀಲಧ್ವಜ: ಹೇ ಕಾಂತೆ! ದಾನವಾಂತಕನು ಧನಂಜಯನಿಗೆ ರಕ್ಷಕನಾಗಿ ಸದಾ ಸಲಹುತ್ತಿರುವನಾದ್ದ ರಿಂದಲೂ ಹಿರಿಯ ಬಳ್ಳಾಪುರದ ಶ್ರೀ ಸೋಮನಾಥನ ಶರಬಲವಿರುವುದರಿಂದಲೂ ಯಮ್ಮ ಅಳಿಯನಾದ ಅಗ್ನಿಪುರುಷನ ಮಾತಿನಂತೆಯೂ ನಾನು ಶಾಂತಿಗೆ ಚ್ಯುತಿಯನ್ನು ತರುವ ಈ ಯುದ್ಧವನ್ನು ನಿಲ್ಲಿಸಿ ತುರಗವನ್ನೊಪ್ಪಿಸಲು ಅನುಮತಿಸಿರುವೆನೇ ನಲ್ಲೇ ನಿನ್ನ ಮಾತು ಸರಿಯಲ್ಲೇ.

ದರುವು

ಬಾಲಕ ಪ್ರವೀರನೂ ಕಾಲನ ಆಲಯಕಿನ್ನೂ
ಜ್ವಾಲೆ ಪೋಗಿಹನಿನ್ನೂ ನಾ ಪೇಳ್ವುದೇನೂ ಕೇಳ್ ನೀನೂ॥

ಧರಣಿಯೋಳ್ ಹಿರಿಬಳ್ಳಾ ಪುರದಾ ಸೋಮೇಶ್ವರನಾ॥
ಚರಣದಾಣೆಯು ನಿನ್ನ ಮಾತು ತರವಲ್ಲೇ ಹೇ ನಲ್ಲೇ॥

ನೀಲಧ್ವಜ: ದುಃಸ್ವಭಾವವುಳ್ಳ ಹೇ ಜ್ವಾಲೆಯೇ ಕೇಳು. ಹಿಂದೆ ನಿನ್ನ ಮಾತನ್ನು ಕೇಳಿ ತುರಗವನ್ನು ಒಪ್ಪಿಸದೆ ಯುದ್ಧ ಸನ್ನದ್ಧನಾಗಲೂ ಯನ್ನ ಸುತರೂ ಸಹೋದರರೂ ಸಮರದಲ್ಲಿ ಮಡಿದು ಹೋದರೂ ಇನ್ನು ಈಗಲೂ ಯನ್ನನ್ನು ಯುದ್ಧಕ್ಕೆ ಪ್ರಚೋದಿಸಿ ಇನ್ನೆಷ್ಟು ಅನಾಹುಕ್ಕೊಳಪಡಿಸಬೇಕೆಂದಿರುವೆಯೇ. ಇನ್ನು ಶಾಂತಿ ಪ್ರತಿಕೂಲೆಯಾದ ನಿನ್ನ ಮಾತನ್ನು ಎಷ್ಠು ಹೇಳಿದರೂ ನಾನು ಕೇಳುವುದಿಲ್ಲವೇ ಜ್ವಾಲೆ ದುರ್ಗುಣ ವಿಶಾಲೆ॥

ಕಂದ

ನಿನ್ನೆ ಪಾರ್ಥನೆ ಹಯವನಾತಂಗೆ ಬಿಡಲೀಯ
ದೆನ್ನ ಕೆಡಿಸಿದೆಯಲಾ ಪಾತಕಿಯೇ ಸುತರಳಿದ
ರಿನ್ನೇನು ಘಾತಕಿಯೇ ಮತ್ಕುಲ ಕರಿಷ್ಠೆ
ನೀನತಿಕಷ್ಠೆ ಪೋಗು ದುಷ್ಠೆ॥

ನೀಲಧ್ವಜ: ಎಲಾ ಕುಲ ಘಾತಕಿಯೇ! ಈಗ ಆಗಿರತಕ್ಕ ಪರಿಭವವೂ ಸುತ ಸೋದರರು ಅಳಿದಿರುವುದೂ ಸಾಲದೇ, ಪುನಃ ಯುದ್ಧವನ್ನು ಹವಣಿಸಿ ಅಶಾಂತಿಯನ್ನು ಪುಟ್ಟಿಸುವೆಯಾ ಘಾತಕಿಯೇ. ಇನ್ನು ಅರಮನೆಯನ್ನು ಬಿಟ್ಟು ತೊಲಗುವಂಥವಳಾಗೇ ದುಷ್ಠೆ ನೀನತಿಕಷ್ಠೆ॥

ಜ್ವಾಲೆ: ಅಪ್ಪಾ ಸಾರಥಿ ಸುಕುಮಾರನನ್ನೂ ಸಂಹರಿಸಿದ ಆ ದುರುಳ ಪಾರ್ಥನ ಶಿರವರಿಯೆಂದು ಎಷ್ಟು ಹೇಳಿದರೂ ಕೇಳದೆ, ಆ ಧೂರ್ತನಿಗೆ ಶರಣಾಗತನಾದ ಯನ್ನ ಇನಿಯನು, ಎಲ್ಲಾ ಅನಾಹುತಕ್ಕೂ ನಾನೇ ಕಾರಣಕರ್ತಳೆಂದು ಯನ್ನನ್ನು ದಟ್ಟಿಸಿ ಬೈದು ದೂಷಿಸುತ್ತಿರುವುದು ಸರಿಯೇನಪ್ಪಾ ಸಾರಥಿ! ಈ ಅಪಮಾನವನ್ನು ನಾನೆಂತು ಸಹಿಸಲಿ. ಅವಮಾನಿತಳಾಗಿ ಬಾಳುವುದಕ್ಕಿಂತ ಸಾಯುವುದೇ ಲೇಸಲ್ಲವೇ! ಅಪ್ಪಾ ಸಾರಥಿ: ಹೇಗಾದರೂ ಮಾಡಿ ಸುತಘಾತುಕನಾದ ಧನಂಜಯನ ಶಿರವನ್ನರಿಸದೇ ಬಿಡಲೂ ಇನ್ನು ಈ ಜನ್ಮವೇತಕ್ಕೆ ಈಗಲೇ ಯನ್ನ ಅನುಜನಾದ ಉನ್ಮುಖನ ಸಮೀಪವಂ ಸಾರ್ದು ಯನ್ನ ಮನದ ಅನುತಾಪವನ್ನು ಹೇಳಿಕೊಳ್ಳುವೆನಪ್ಪಾ ಸಾರಥಿ॥

ಭಾಗವತರ ಕಂದ

ಲಾಲಿಸು ಪೇಳ್ವೆ ಜನಮೇಜಯನೇ
ನೀಲಕೇತು ಸತಿಯನು ತಾ ಬೈದು ನಿಂದಿಸಲ್‌॥
ಜ್ವಾಲೆಯು ಮನದಿ ಕುಪಿತವಂ ತಾಳ್ದು
ಆಲಯವಂ ತ್ಯಜಿಸಿ ಉನ್ಮುಖದ ಬಳಿಗೆ ಬಂದಳಾಗಂ॥

(ಉನ್ಮುಖ ಬರುವಿಕೆ)

ಉನ್ಮುಖ: ಯಲಾ ಚಾರ ಹೀಗೆ ಬಾ ಮತ್ತೂ ಒಂದು ಸಾರಿ ಹೀಗೆ ನಿಲ್ಲು. ಭಲಾ! ಸಾರಥಿ! ಈಗ ಬಂದವರು ಧಾರೆಂದು ಪರಿಪರಿ ಕೃತಾಂಜಲೀಬದ್ಧನಾಗಿ ಯಮ್ಮನ್ನು ವಿಚಾರಿಸುತ್ತಿರುವೆ, ನಮ್ಮಯ ವೃತ್ತಾಂತವನ್ನು ಪೇಳುತ್ತೇನೆ ಚಿತ್ತವಿಟ್ಟು ಕೇಳೋ ಸಾರಥಿ ಸಂಧಾನಮತಿ॥

ಈ ಬ್ರಹ್ಮಾಂಡ ಮಂಡಲದೋಳ್ ಮಂಡಿತಕರದಿಂದೊಪ್ಪುವಾ ಭೂಮಂಡಲಾಧಿಪರ ಗಂಡ ಚಂಡ ಪ್ರಚಂಡ ಪ್ರಳಯಕಾಲ ಮಾರ್ತಾಂಡನೆಂದೆನಿಸಿ ಉಕ್ಕುವ ರೋಷದಿಂದ ಹೆಚ್ಚಿದವರ ಸೊಕ್ಕನ್ನು ಕೊಚ್ಚಿ ಹಾಕಿ ಚೆಕ್ಕಿ ಚೆಂಡಾಡುತ್ತ, ಸುರಪನಮರಾವತಿಯಂತೆ ಪರಿಪಾಲಕನಾಗಿ, ಪಕ್ಷಿವಾಹನ ಕ್ಷಯ ರಹಿತ ಶ್ರೀಲಕ್ಷ್ಮಿರಮಣ, ಕಟಾಕ್ಷವೀಕ್ಷಣ ಧ್ಯಾನಾಸಕ್ತ ದುರ್ಜನ ಧ್ವಂಸಕನಾದ ಉನ್ಮುಖ ರಾಜನು ಬಂದು ಇದ್ದಾನೆಂದು ಈ ಪೊಡವಿಯೋಳ್ ಒಂದೆರಡು ಬಾರಿ ಜಯಭೇರಿ ಬಾರಿಸುವಂಥವನಾಗೋ ಚಾರ ಯನ್ನ ಆಜ್ಞಾಧಾರ॥

ಅಂದವಾದ ಈ ವರಸಭೆಗೆ ನಾನು ಚಂದದಿಂದ ಬಂದ ಪರಿಯಾಯವೇನೆಂದರೆ ಯನ್ನ ಅಗ್ರಜೆಯಾದ ಜ್ವಾಲಾದೇವಿಯು ಬಂದಿರುವಳೆಂಬ ವರ್ತಮಾನವನ್ನು ಕೇಳಿ ಬಂದು ಇರುತ್ತೇನೆ. ಧಾವಲ್ಲಿರುವಳೋ ಅತಿಜಾಗ್ರತೆ ತೋರಿಸೋ ಚಾರಕಾ ದ್ವಾರಪಾಲಕ॥

ನಮೋನ್ನಮೋ ಅಕ್ಕಯ್ಯನವರೇ
ಜ್ವಾಲೆ: ವಿಜಯೀಭವತು ಬಾರೈ ಅನುಜಾ ದಿನಮಣಿತೇಜ॥

ಉನ್ಮುಖ: ಅಮ್ಮಾ ಅಕ್ಕಯ್ಯ ನಿನ್ನನ್ನು ನೋಡಿದರೆ ಖಿನ್ನಳಾಗಿ ಇರುವ ಹಾಗೆ ಕಾಣುತ್ತಾ ಇದೆ. ಅದು ಏನು ವೃತ್ತಾಂತವೋ ಮಾಜದೆ ಯನ್ನೊಳು ಬಿತ್ತರಿಸುವಳಾಗಮ್ಮಾ ಸಹೋದರೀ ಮಂಗಳೋದರೀ॥

ದರುವು

ಅನುಜಾ ಲಾಲಿಸು ನೀ ಯನ್ನ
ಮನದನುತಾಪ॥
ಧನಂಜಯನ ತುರಗವನೂ ಯನ್ನ ತನಯನು ಕಟ್ಟೀ
ಅನುವರದೊಳು ತಾನು ಮಡಿದಾ ಇನಿಯಾ ಶರಣಾಗತನಾದಾ॥

ಜ್ವಾಲೆ: ಹೇ ಅನುಜಾ! ಯನ್ನ ಮನದ ಅನುತಾಪವನ್ನು ನಿನ್ನಲ್ಲಿ ಹೇಗೆ ಹೇಳಲಪ್ಪಾ ತಮ್ಮಾ. ಹಸ್ತಿನಾವತಿಯನ್ನಾಳುವಂಥ ಧರ್ಮರಾಯರ ಯಾಗದ ಕುದುರೆಯು ಯಮ್ಮ ಪುರದ ಉಪವನಕ್ಕೆ ಬರಲು, ಅದಂ ಕಂಡ ಯನ್ನ ತನುಜನು ಕಟ್ಟಿಹಾಕಿ, ಬೆಂಬಲವಾಗಿ ಬಂದಿದ್ದ ಆ ಧೂರ್ತ ಪಾರ್ಥನೊಡನೆ ಕಾದಾಡಿ ವೀರಸ್ವರ್ಗವನ್ನೈದಲೂ, ಸುತ ಘಾತುಕನನ್ನು ಸಂಹರಿಸಿದಲ್ಲದೇ ತುರಗವನ್ನು ಒಪ್ಪಿಸದಿರೆಂದು ಎಷ್ಠು ಹೇಳಿದರೂ ಯನ್ನ ಪತಿಯು ಯನ್ನ ಮಾತನ್ನು ಕೇಳದೆ ಆ ಧೂರ್ತನಿಗೆ ಶರಣಾಗತರಾದರಪ್ಪಾ ಅನುಜಾ ಭಾಸ್ಕರ ತೇಜಾ॥

ದರುವು

ಸುತನನ್ನು ಫಲುಗುಣಾ ಹತವ ಮಾಡಿದ ನಿಂದೂ
ಮತಿಗೇಡಿ ನರನ ನೀ ಕೊಂದೂಯನ್ನಾ
ಸುತನಾ ಶೋಕ ಮರೆಸಿಂದೂ॥

ಜ್ವಾಲೆ: ಹೇ ಅನುಜಾ! ಯನ್ನ ಮುದ್ದು ಸುಪುತ್ರನಾದ ಪ್ರವೀರನನ್ನು ಮರೆತು ನಾನು ಹೇಗೆ ಜೀವಿಸಲಪ್ಪಾ ತಮ್ಮಾ ಯನ್ನ ದುಃಖವನ್ನು ಎಂತು ಶಮನಗೊಳಿಸಲೀ, ಪತಿಯು ಆ ಸವ್ಯಸಾಚಿಗೆ ಶರಣಾಗತನಾಗಲು ಯನ್ನ ಹೃದಯ ಬೇನೆಯನ್ನು ನಿನಗಲ್ಲದೇ ಮತ್ತ್ಯಾರಲ್ಲಿ ಪೇಳಲಪ್ಪಾ ಸಹೋದರಾ ಆ ಮೂಢ ಪಾರ್ಥನ ಶಿರ ಚೆಂಡಾಡಿಸಿದಲ್ಲದೇ ಯನ್ನ ಮನಸ್ಸಿಗೆ ಶಾಂತಿಯು ಬಾರದಾದ ಕಾರಣ ಆ ಇಂದ್ರಾತ್ಮಜನ ಶಿರವನ್ನು ನಿನ್ನ ಶರಕೋದಂಡದಿಂದ ತರಿದು, ಪುತ್ರ ಶೋಕವನ್ನು ಮರೆಸಿ ಯನಗೆ ಹರುಷವನ್ನುಂಟು ಮಾಡೈ ತಮ್ಮಾ ಸದೆಬಡಿ ನರನ ಹಮ್ಮಾ॥

ದರುವು

ಧರಣಿಯೊಳು ಹಿರಿ ಬಳ್ಳಾಪುರದ ಸೋಮೇಶ್ವರನು
ಕರುಣದಿ ತಾನು ಮೆಚ್ಚುವನೂ ನಿನ್ನ
ಪೊರೆದು ಸಲಹುವನೂ॥

ಜ್ವಾಲೆ: ಹೇ ಸಹೋದರಾ ಸುತ ಘಾತುಕನಾದ ಮತಿಗೇಡಿ ಸಿತವಾಹನನನ್ನು ಸಮರದಲ್ಲಿ ಹತಗೊಳಿಸಿ ಯಮಗೆ ಸಂತೋಷವನ್ನು ಮಾಡಿದ್ದೇ ಆದರೆ ಈ ಧರಣಿಯೊಳಗೆ ಹಿರಿದೆನಿಸಿ ಮೆರೆಯುವ ಹಿರಿಯ ಬಳ್ಳಾಪುರದ ಶ್ರೀ ಸೋಮನಾಥನು ನಿನ್ನ ಈ ಕಾರ‌್ಯವನ್ನು ಮೆಚ್ಚಿ ಸಲಹುವನಪ್ಪಾ ಅನುಜಾ ಈ ಮಾತು ಸಹಜಾ॥

ದರುವು

ನೀನು ಪೇಳ್ವುದನ್ನೂ ಅಕ್ಕಾ ನಾನು ಒಪ್ಪೆನಿನ್ನೂ॥
ಮನಸಿಜ ಜನಕನು ಅನುವಿನಿಂ ಪೊರೆಯುವಾ
ಆ ನರನೊಳು ಹಗೆ ತನವಿದು ಸಲ್ಲದೂ॥

ಉನ್ಮುಖ: ಹೇ ಅಗ್ರಜೆ! ಈ ಮರುಳು ಬುದ್ಧಿ ನಿನಗೇತಕ್ಕೆ? ಜಗದ್ರಕ್ಷಕನಾದ ಶ್ರೀಕೃಷ್ಣನ ಸಹಾಯವಿರಲು, ವಾಯಕೆ ಅರ್ಜುನನ ತಲೆ ಬೀಳ್ಹಪುದೇ! ಆತನೊಳು ದ್ವೇಷವನ್ನು ಸಾಧಿಸಿದ ಕೌರವರ ಗತಿಯೇನಾಯಿತೆಂಬುದು ತಿಳಿಯದೆ! ಮಮ ಪ್ರಾಣಾಹಿ ಪಾಂಡವಾಃ ಎಂಬ ಬಿರುದನ್ನು ಪೊತ್ತು, ಪಾಂಡವರಿಗೆ ವಜ್ರಕವಚದಂತಿರುವ ಆ ಶ್ರೀಹರಿಯಲ್ಲಿ ಹಗೆಗೊಂಡು ಕೆಡುವ ಆಯಾಸವು ಯನಗೇತಕೆ ಅಕ್ಕಾಇಡು ಮಾತಿನೊಳು ಚೊಕ್ಕ॥

ದರುವು

ಕೆಟ್ಟು ಹೋದೆಯಮ್ಮಾ ಅಕ್ಕಾ ಭ್ರಷ್ಠೆಯಾದೆಯಮ್ಮಾ॥
ಸೃಷ್ಠಿಪತಿಯು ನಿ ನ್ನಿಷ್ಠ ರಮಣನಾ
ಇಷ್ಠವ ಒಪ್ಪದೇ ದಿಟ್ಟೆಯೇ ಬಂದೆಯಾ॥

ಉನ್ಮುಖ: ಹೇ ಅಕ್ಕಯ್ಯ ಈ ಸೃಷ್ಠಿಯೊಳಗೆ ಸತಿಗೆ ಪತಿಯೇ ಪರದೈವವೆಂದು ಶೃತಿತತಿಗಳು ಸಾರುತ್ತಿರಲು, ಆ ದೇವ ಸ್ವರೂಪನಾದ ನಿನ್ನ ಇಷ್ಠಕಾಂತನ ಮನೋಭಿಷ್ಠವನ್ನು ಅನುಮೋದಿಸದೆ ದಿಟ್ಟತನದಿಂದ ಆತನಿಗೆ ವ್ಯತಿರಿಕ್ತಳಾಗಿ ವರ್ತಿಸಿ ಕೆಟ್ಟು ಹೋಗುವುದಲ್ಲದೇ ಈ ಭ್ರಷ್ಠವಚನವನ್ನು ಪೇಳಲು ಯನ್ನಲ್ಲಿಗೆ ಸಾರಿ ಬಂದೆಯಾ ದಿಟ್ಟೇ ನೀನೀಗ ಕೆಟ್ಟೇ॥

ದರುವು

ದನುಜನು ರಾವಣನಾ ಕುಲ ತನ್ನನುಜೆ ನೀಗಿದ ಪರಿಯಾ॥
ಯನ್ನಯ ವಂಶ ನಿರ್ಮೂಲನಗೊಳಿಸಲು,
ದಾನವಾರಿ ಮೈದುನನೊಳು ವೈರವಾ॥

ಉನ್ಮುಖ: ಹೇ ಸಹೋದರೀ! ಹಿಂದೆ ಮಾಯಕಾರ್ತಿಯಾದ ಶೂರ್ಪಣಖಿಯು ತನ್ನ ಅಣ್ಣನಾದ ದಶಕಂಠನಿಗೆ ಶ್ರೀರಾಮಚಂದ್ರನ ಮೇಲೆ ದ್ವೇಷವಂ ಪುಟ್ಟಿಸಿ ಆತನಿಂದ ಅಣ್ಣನ ಕುಲವನ್ನು ಧ್ವಂಸ ಮಾಡಿಸಿದ ಹಾಗೆ ಪರಮಾತ್ಮ ಪಾಪರಹಿತ, ಫಾಲಾಕ್ಷ ಸಖನಾದ ಪಾರ್ಥಸಾರಥಿಯು ಭಾವಮೈದುನ ಪಾರ್ಥನೊಳು ವೈರವಂ ಪುಟ್ಟಿಸಿ ಯನ್ನ ವಂಶಕ್ಕೆ ಹಾನಿಯನ್ನು ತರಲು ದುರುಳು ಬುದ್ಧಿಯಿಂದ ಇಲ್ಲಿಗೆ ನೀನು ಬಂದಿಹೆಯಾ ಸಹೋದರೀ-ನೀ ಬಹು ಅಪಾಯಕಾರಿ॥

ದರುವು

ಜರಿದಾ ಅನುಜನು ಯನ್ನಾ॥
ವರಸುತನು ಮಡಿಯಲೂ ಪರಿ ಪರಿ ದುಃಖದೊಳೂ
ನರನನ್ನು ನೀ ಕೊಂದು ಹರುಷವ ತೋರೆನಲೂ॥ಜರಿದಾ॥

ಧುರದಿ ಯನ್ನಯ ರಮಣಾ ಶರಣಾಗತನಾಗಲೂ
ಉರುತರ ತಾಪದೊಳೂ ತ್ವರಿತಾದಿ ನಾ ಬರಲೂ॥

ಹರನೂ ಸೋಮೇಶ್ವರನಾ ಕರುಣದಿಂದಲಿ ನಾನೂ
ನರನೊಳು ಛಲವಿಡಿದೂ ಶಿರವ ತೆಗೆಸದೆ ಬಿಡೆನೊ॥

ಜ್ವಾಲೆ: ಹೇ ಸಭಾ ಜನರೇ! ಸುತರಳಿದ ದುಃಖದಿಂದಲೂ, ಪಾರ್ಥನಿಗೆ ಶರಣಾಗತನಾದ ಪತಿಯಿಂದ ತಿರಸ್ಕೃತಳಾಗಿಯೂ ನಾನು ಬಂದು ಅನುಜನಲ್ಲಿ ಯನ್ನ ಅನುತಾಪವನ್ನು ಹೇಳಿಕೊಳ್ಳಲೂ, ಆತನು ಸಹ ಯನ್ನನ್ನು ಪರಿಭಂಜಿಸಿ ನುಡಿಯುತ್ತಿರುವುದು ನೋಡಿದಿರೇನೈ ಸಭಾಸದರೇ! ಎಲ್ಲಕ್ಕೂ ಕಾರಣ ನಾವು ಅಬಲೆಯರೆಂದಲ್ಲವೇ ನಮಗೀ ಅಪಮಾನ, ಒಲಿದರೆ ನಾರಿ ಮುನಿದರೆ ಮಾರಿ ಎಂಬಂತೆ ಈ ಅಬಲೆಯು ಬಲಯುತಳಾಗಿ ಮಕ್ಕಳಂ ಕೊಂದು ಪತಿಯಂ ಗೆಲ್ದ ಪಾರ್ಥನ ಶಿರವನ್ನು ನೆಲಕ್ಕುರುಳಿಸಲು ತಕ್ಕ ಉಪಾಯವನ್ನು ನಾನೆಸಗದಿರ್ದರೆ ಇನ್ನು ಈ ಜನ್ಮವೇತಕ್ಕೆ? ಸಭಾಜನರೇ! ಈಗಲೇ ಹೊರಡುವೆನು ಛಲವನ್ನು ಸಾಧಿಸುವೆನು. ಯನಗೆ ಜ್ವಾಲೆಯೆಂಬ ಹೆಸರನ್ನು ಸಾರ್ಥಕಪಡಿಸಿಕೊಳ್ಳುವೆನೈ ಸಭಾಜನರೇ॥

ಕಂದ

ಜ್ವಾಲೆ ಬಳಿಕನುಜನಂ ಬೈದು ಕೋಪದೊಳಾತ
ನಾಲಯದೊಳಿರದೆ ಪೊರಮಟ್ಟು ನಡೆತರೆ ಮುಂದೆ
ಲೀಲೆ ಮಿಗೆ ನಲಿದುಲಿದು, ಸುಳಿದಿಳಿದು, ಬೆಳದಳಿದು
ತಳೆದಳೆದು ಪೊಳೆದು ಸೆಳೆದು॥
ಮೇಲೆ ಮೇಲೊದಗುವ ಘನಪ್ರವಾಹದ ಸುಕ
ಲ್ಲೋಲ ಮಾಲಾಕುಲದ ಬುದ್ಭುದದ ಜಲಜಂತು
ಜಾಲದ, ಲಳಿಯ ಲಹರಿಗಳ ವಿಸ್ತರದ
ವರಗಂಗೆಯಂ ಕಂಡಳು॥

ಭಾಗವತರು: ಕೇಳಿದರೇನಯ್ಯ ಭಾಗವತರೇ, ಈ ಪ್ರಕಾರವಾಗಿ ಉನ್ಮುಖನು ತನ್ನ ಅಗ್ರಜೆಯನ್ನು ಜರಿದು ನಿಂದಿಸಲು, ಜ್ವಾಲೆಯು ಆತನಂ ಬೈದು ಕೋಪಾವೇಶಳಾಗಿ ಅಲ್ಲಿರದೆ ಪೊರಮಟ್ಟು ಬರುತಿರಲು, ಮೂಜಗದ ಪಾಪಗಳನ್ನು ತೊಳೆದು ರಕ್ಷಿಸುವ ಪುಣ್ಯಶಾಲಿನಿಯಾಗಿ ನಲಿದುಲಿದು ಸುಳಿದಿಳಿದು ಹರಿಯುತ್ತಿರುವ ಗಂಗಾನದಿಯನ್ನು ಕಂಡು ಅದರ ತಡಿಗೆ ಬಂದು ಅಲ್ಲಿರ್ದ ನಾವಿಕರೊಳು ಇಂತೆಂದಳೈಯ್ಯ ಭಾಗವತರೇ॥

ದರುವು

ಸಾರಥಿ ಬಾರೈಯ್ಯ ನೀನೂ ಬೇಗ
ತೋರಯ್ಯ ನಾವಿಕನನ್ನೂ ॥
ಸುರನದಿಯೊಳು ಈಗ ತ್ವರಿತದಿಂದಲಿಯವನು
ನೀರು ಮುಟ್ಟದ ತೆರದಿ ಚಲಿಸೀ ಯನ್ನ
ಭರದಿ ದಾಂಟಿಸೀ॥

ಜ್ವಾಲೆ: ಅಪ್ಪಾ ಸಾರಥಿ! ತರತರದ ಕಲ್ಲೋಲ ಮಾಲೆಗಳ, ಬೆರೆಬೆರೆವ ರಾಜಹಂಸಾಳಿಗಳ, ತಿರುತಿರುಗಿ ಸುಳಿವ ಜಲಜಂತುಗಳ ಸಮೂಹದಿಂದ ಕೂಡಿ ಹರಿಯುತ್ತಿರುವ ಈ ಗಂಗಾನದಿಯನ್ನು ನೋಡಿದೆಯೇನಪ್ಪಾ ಸಾರಥಿ! ಈ ನದಿಯ ನೀರು ಮುಟ್ಟದಂತೆ ಯನ್ನನ್ನು ಆಚೆಯ ದಡಕ್ಕೆ ದಾಂಟಿಸುವ ಧಾರ್ಮಿಕರು ಈ ನಾವಿಕರಲ್ಲಿ ಧಾರಾದರೂ ಇರುವರೇನೋ ಯನಗೆ ತೋರಿಸಪ್ಪಾ ಸಾರಥಿ॥

ಸಾರಥಿ: ಹೇ ತಾಯೆ! ಈ ಗಂಗೆಯ ಒಂದು ಬಿಂದು ಮಾತ್ರ ಮೈಮೇಲೆ ಬೀಳಲು ಬ್ರಾಹ್ಮಣನ ಕೊಂದ ಪಾಪವೂ ಸಹ ಪರಿಹಾರವಾಗಲೂ ಇನ್ನು ಈ ಗಂಗೆಯೊಳಗೆ ಮಿಂದವನ ಪರಿಯಂದವನ್ನು ಬಣ್ಣಿಸಲು ಚತುರ್ಮುಖ ಬ್ರಹ್ಮನಿಗೂ ಅಸಾಧ್ಯವಾಗಿರುವಾಗ, ಇಂದು ಇಲ್ಲಿಗೆ ತಾವು ಬಂದು ಗಂಗಾಂಬುವನ್ನು ಮುಟ್ಟಕೂಡದು ಯೆನ್ನುವ ಪ್ರಾರ್ಥನೆಯೇನಮ್ಮಾ ತಾಯೇ॥

ದರುವು

ಸುರಗಂಗೆಯಲಿ ದೋಷ ನಿರುತವೊಂದಿರುವುದೂ
ಒರೆವುದಲ್ಲವು ಯನಗೆ ಅವಳೂ ಮೈ,
ದೋರಲು ಪೇಳ್ವೆನೂ॥

ಜ್ವಾಲೆ: ಅಪ್ಪಾ ಸಾರಥಿ, ನಿನಗೆ ತಿಳಿಯದು! ಈ ಗಂಗೆಯಲ್ಲಿ ಒಂದು ದೋಷವುಂಟು. ಅದು ನಿಮಗೆ ಹೇಳುವುದಲ್ಲ. ಈ ಗಂಗೆಯು ತನ್ನ ನಿಜ ರೂಪಿನಿಂದ ಯನಗೆ ಮೈದೋರಿದರೆ ಆಗ ದೋಷವನ್ನು ಪೇಳುವೆನಪ್ಪಾ ಸಾರಥೀ॥

ಕಂದ

ಅಂಬುರುಹ ರೋಲಂಬ ಮತ್ಸ್ಯಕಚ್ಛಪವಾರಿ
ಕಂಬು ಶೀಕರ ಚಕ್ರವಾಕ ಶೈವಾಲ ಕಾಂಬ
ಗಂಭೀರ ಸೈಕತ ಮೃಣಾಳಂಗಳಿವು
ತನಗವಯವಂಗಳಾಗೇ॥
ಇಂಬಾದ ಸೌಂದರ‌್ಯ ಮಾನದಿಯ ನಡುವೆ ಪ್ರತಿ
ಬಿಂಬಿಸಿದ ವೋಲ್ ದಿವ್ಯರೂಪನಳವಡಿಸಿ ಜಗ
ದಂಬೆ ಜಾಹ್ನವಿ ಸಲಿಲ ಮಧ್ಯದಿಂದೆದ್ದು
ಬಂದಾ ಜ್ವಾಲೆಯಂ ಕೇಳ್ದಳು॥

ಭಾಗವತರು: ಕೇಳಿದರೇನಯ್ಯ ಭಾಗವತರೇ: ಈ ಪ್ರಕಾರವಾಗಿ ತನಗೆ ದೋಷವುಂಟೆಂದು ಕೇಳಿ ವಿಸ್ಮಯಗೊಂಡ ಗಂಗೆಯು, ಕಮಲ, ರೋಲಂಬ ಮತ್ಸ್ಯ ಕಚ್ಛಪ ವಾರಿ ಕಂಬು ಶೀಕರ, ಶೈವಾಲ ಸೈಕತ ಮೃಣಾಳಂಗಳು ಮೊದಲಾದವು ಅವಯವಗಳಾಗಿರುವಂತೆ ಕಂಗೊಳಿಸುವ ಆ ಸುಂದರವಾದ ನದಿಯ ಮಧ್ಯದಿಂದ ದಿವ್ಯರೂಪವನ್ನು ಧರಿಸಿ ಜಗದಂಬೆ ಜಾಹ್ನವಿಯು ಎದ್ದು ಬಂದು ಜ್ವಾಲೆಯೊಡನೆ ಇಂತೆಂದಳೈಯ್ಯ ಭಾಗವತರೇ॥

ಗಂಗಾದೇವಿ ಬರುವಿಕೆ

ತೆರೆದರುವು

ಬಾರೋ ಸಾರಥಿಯೇ ನೀನೂ
ತೋರೋ ನಾರೀ ಮಣಿಯನೂ॥
ನಿರುತ ದೋಷವೆನ್ನೊಳಿನ್ನೂ
ಇರುವುದೆಂದು ಪೇಳುತಿಹಳೂ॥

ಗಂಗಾದೇವಿ: ಅಪ್ಪಾ ಸಾರಥೀ ಹೀಗೆ ಬಾ! ಮತ್ತು ಒಂದು ಸಾರಿ ಹೀಗೆ ನಿಲ್ಲು. ಅಪ್ಪಾ ಸಾರಥಿ: ಈಗ ಬಂದವರು ಧಾರೆಂದು ಪರಿ ಪರಿ ಕೃತಾಂಜಲೀ ಬದ್ಧನಾಗಿ ಭೀತಿಯಂ ಪಟ್ಟು ನೀತಿಯಂ ಬಿಡದೆ ಕೇಳುತ್ತಿರುವೆ. ನಮ್ಮಯ ವಿದ್ಯಮಾನವನ್ನು ಪೇಳುತ್ತೇನೆ ಸಹೃದಯದಿಂದ ಕೇಳುವಂಥವನಾಗೋ ಚಾರ ಗುಣಮಣಿಹಾರ॥

ಕೃತಯುಗದೊಳಗೇ ತರಣಿ ವಂಶಜನಾದ ಸಗರ ಚಕ್ರವರ್ತಿಯ ಯಾಗದ ಕುದುರೆಯನ್ನು ಹುಡುಕಲು ಹೊರಟ ಆತನ ಮಕ್ಕಳು ಅರವತ್ತು ಸಾವಿರ ಜನವು ಕಪಿಲ ಮಹರ್ಷಿಯ ಕೋಪ ಜ್ವಾಲೆಗೆ ಸುಟ್ಟು ಭಸ್ಮವಾಗಿ ಹೋಗಲೂ, ಅವರ ಬೂದಿಯನ್ನು ದೇವಗಂಗೆಯಿಂದ ಕೆದರಿದರೆ ಸದ್ಗತಿಯು ಬರುವುದೆಂಬ ವೈನತೇಯನ ವಚನದಂತೆ, ಅಂಶುಮಂತ ದಿಲೀಪನೇ ಮೊದಲಾದವರು ಯನ್ನನ್ನು ತರಲು ಭಗ್ನ ಮನೋರಥರಾಗಿ ಮೃತಿಯನ್ನೈದಲೂ ಅವರ ವಂಶಸ್ಥನಾದ ಭಗೀರಥನು, ಬ್ರಹ್ಮನನ್ನು ತಪಸ್ಸಿನಿಂದ ಮೆಚ್ಚಿಸಿ ಭೂಲೋಕಕ್ಕೆ ತಂದಿದ್ದರಿಂದ ಭಾಗೀರಥೀ ಯೆಂತಲೂ, ಜಹ್ನು ಮಹರ್ಷಿಗಳ ಕರ್ಣದ್ವಾರ ಹೊರಬಂದದ್ದರಿಂದ ಜಾಹ್ನವೀಯೆಂತಲೂ, ನಾಮಾಂಕಿತವನ್ನು ಹೊಂದಿ, ಭಗೀರಥನ ಪಿತೃಗಳ ಬೂದಿರಾಶಿಯ ಮೇಲೆ ಹರಿದು ಅವರಿಗೆ ಸದ್ಗತಿಯನ್ನು ದೊರಕಿಸಿ ಯನ್ನಲ್ಲಿ ಮಿಂದವರ ಪಾಪಗಳನ್ನು ಪರಿಹರಿಸುವ ಗಂಗಾದೇವಿಯು ನಾನೇ ಅಲ್ಲವೇನಪ್ಪಾ ಸಾರಥಿ॥ಅಂದವಾದ ಈ ವರಸಭೆಗೆ ನಾನು ಬಂದ ಕಾರಣವೇನೆಂದರೆ, ಈ ಲೋಕದ ಜನರಿಗೆ ಸಕಲ ಇಷ್ಠಾರ್ಥಗಳನ್ನು ಕೈಗೂಡಿಸುತ್ತಾ, ಪರಮಪುಣ್ಯಪ್ರದಳಾಗಿರುವ ಯನ್ನಲ್ಲಿ ದೋಷವುಂಟೆಂದು ಧಾವಳೋ ಒಬ್ಬ ನಾರೀಮಣಿಯು ಯನ್ನ ತಡಿಗೆ ಬಂದು ಪೇಳುತ್ತಿರುವುದನ್ನು ಯನ್ನ ಕರ್ಣಗಳಿಂದ ಕೇಳಿದ ನಾನು ಬಂು ಇರುತ್ತೇನೆ. ಆ ನಾರಿಯು ಧಾವಲ್ಲಿರುವಳೋ ತೋರಿಸಪ್ಪಾ ಸಾರಥೀ॥

ದರುವು
ನಾರೀಮಣಿಯೇ ಕೇಳು ಧಾರ ಅರಸಿಯೇ ನೀನೂ
ನಿರುತ ಯನ್ನೊಳು ದೋಷ ಸಾರಿ ಪೇಳುತಲಿರುವೇ॥

ಗಂಗೆ: ಹೇ ನಾರೀಮಣಿ ನೀನು ಧಾವ ನೃಪಾಲನ ಹೃದಯವನ್ನು ಸೂರೆಗೊಂಡಿರುವೆಯಮ್ಮಾ, ಅಲ್ಲದೇ ನಿನ್ನ ಪೆಸರೇನು? ಯನ್ನಲ್ಲಿ ದೋಷವುಂಟೆಂದು ಪೇಳುತ್ತಿರುವ ಕಾರಣವಾದರೂ ಏನಮ್ಮಾ ನಾರೀ ಮದನ ಸುಂದರಿ

ದರುವು

ಸರಸಿಜಾಸನಾ ವರ ಕರಪಾತ್ರದೊಳು ಇರುವಾ
ಹರಿಪಾದೋದ್ಭವ ಗಂಗೆ ನಾರೀಮಣಿಯೇ ಕೇಳೂ॥

ಮಾರವೈರಿಯು ಶಿವನಾ ಶಿರದೊಳು ನೆಲೆಸಿರುವಾ
ಪರಮಪಾವನೆ ಗಂಗೆ ತರುಣೀಮಣಿಯೇ ಕೇಳು॥

ಗಂಗೆ: ಹೇ ತರುಣೀಮಣಿ ಸೃಷ್ಠಿಕರ್ತನ ಕಮಂಡಲುವಿನ ಅಗ್ರೋದಕವಾಗಿ, ವಿಷ್ಣು ಪಾದೋದ್ಭವೆ ಎಂದು ಹೆಸರು ಪಡೆದವಳಾಗಿ ಪರಶಿವನ ತಲೆಯನ್ನಲಂಕರಿಸಿರುವ ನಾನು ಪರಮಪಾವನೆಯಾಗಿ, ದೋಷಹರನೆ ತಾನೆಂದೂ ವೇದಶಾಸ್ತ್ರಂಗಳು ಘೋಷಿಸುವಾಗ, ಮುಟ್ಟಲಾಗದು ತನ್ನನೆಂದು ನೀನು ದೂಷಿಸುವ ಕಾರಣವು ಅದಾವುದಮ್ಮ ತರುಣೀ ಸುಗುಣಮಣೀ॥