ದರುವು

ಪುತ್ರರಿಲ್ಲದಾ ಅಪ ವಿತ್ರದ ದೋಷವು
ಧಾತ್ರಿಯೊಳೂ ನಿನಗೆ ವರ್ತಿಸಿ ಇಹುದಮ್ಮಾ॥

ಜ್ವಾಲೆ: ಹೇ ಗಂಗೆಯೇ! ಮಾಹಿಷ್ಮತೀ ಪುರದರಸನಾದ ನೀಲಧ್ವಜ ಭೂಪಾಲರ ಸತಿಯಾದ ಯನ್ನನ್ನು ಜ್ವಾಲೆಯೆಂದು ಕರೆಯುವರು ಹೇ ತಾಯೆ! ನಾನು ದೂಷಣದ ಮಾತನಾಡುವವಳಲ್ಲ. ಲೋಕದ ಸುಭಾಷಿತವೇನೆಂದರೆ ಪುತ್ರರಿಲ್ಲದ ನಾರಿಯ ಸ್ಪರ್ಶನವು ಪಾಪಕರವೆಂದು ಶೃತಿ ವಚನವಿರುವುದಾದ್ದರಿಂದ ನಾನು ನಿನ್ನನ್ನು ಮುಟ್ಟಲು ಬೆದರಿದೆನಮ್ಮಾ ಭಾಗೀರಥೀಪರಶಿವನ
ಸತೀ॥

ದರುವು

ಧುರವೀರ ಪಿತೃಭಕ್ತ ಚಿರಂಜೀವಿ ಭೀಷ್ಮನು
ವರಪುತ್ರ ನಿರುವಲ್ಲಿ ನಾರಿ ದೋಷವಿನ್ನೆಲ್ಲಿ॥

ಗಂಗೆ: ಹೇ ಮಂದಮತಿಯಾದ ಜ್ವಾಲೆಯೇ ಸಮಸ್ತ ರಾಜರ ವೃಂದದಲ್ಲಿ ಯನ್ನ ಮಗನು ಕೀರ್ತಿವಂತನಾಗಿ ಧುರವೀರ ಪಿತೃಭಕ್ತನಾಗಿ, ಇಚ್ಛಾಮರಣಿ ಭಾಗವತ ಮಸ್ತಕಮಣಿಯೆನಿಸಿ ಸತ್ಯಸಂಧನಾಗಿರುವ ಭೀಷ್ಮನು ಮೂರು ಲೋಕದಲ್ಲಿಯೂ ಪ್ರಖ್ಯಾತನಾಗಿರಲೂ ನೀನೆನಗೆ ಸುತರಿಲ್ಲ ಎನ್ನಬಹುದೇ ಸುದತಿ ಬಿಡು ಮಂದಮತಿ॥

ದರುವು

ಧುರದೊಳು ಭೀಷ್ಮನ ನರನು ಮೋಸದಿ ಕೊಂದ
ಸುರಗಂಗೆ ಕೇಳ್ ನಿನ್ನ ತರಳನೆಲ್ಲಿಹನಮ್ಮಾ॥

ಜ್ವಾಲೆ: ಹೇ ದೇವಗಂಗೆ! ನಿನ್ನಯ ಎಂಟು ಸುತರಲ್ಲಿ ಒಬ್ಬ ಉಳಿದು ಭೀಷ್ಮನೆಂಬ ಅಭಿದಾನದಿಂದ ಪ್ರಖ್ಯಾತಿಯನ್ನು ಹೊಂದಿದ ನಿನ್ನ ಮಾತು ನಿಜವೇ ಸರಿ. ನಾನು ಸಹ ತಿಳಿದಿಹೆನು. ಆದರೇ ಕೌರವ ಪಾಂಡವರೊಳಗೆ ಕಲಹವು ಪುಟ್ಟಿ ಧೂರ್ತ ಪಾರ್ಥನು ಮೋಸದಿಂದ ನಿನ್ನಯ ಸುತನನ್ನು ಕೊಂದು ಹಾಕಿರುವುದರಿಂದ ಭೀಷ್ಮನಭ್ಯುದಯವು ಇನ್ನೆಲ್ಲಿಹುದಮ್ಮಾ ದೇವನದೀ-ಶಂಕರನ ಮಡದೀ॥

ದರುವು

ಯನ್ನ ಸುತನು ಭೀಷ್ಮಚಾರಿಯಾ
ಬಹು ಠಕ್ಕಿನಿಂದ
ತಾನು ಕೊಂದನೇ ಆ ಧನಂಜಯಾ॥

ಅವನ ಸುತನು ಹೆಚ್ಚಿ ರಣದಲೀ
ಮಾಸಾಂತ್ಯದಲ್ಲಿ
ಅವನ ಶಿರವ ಕೊಚ್ಚಿ ಕೆಡಹಲೀ॥

ಗಂಗೆ: ಅಮ್ಮಾ ಜ್ವಾಲೆ! ತನ್ನ ತಂದೆಗೆ ವಚನವನ್ನು ಕೊಟ್ಟ ಪ್ರಕಾರ ಬ್ರಹ್ಮಚರ‌್ಯವನ್ನು ಪಾಲಿಸಿ ಚಿರಂಜೀವತ್ವವನ್ನು ಪಡೆದಂಥ ಯನ್ನ ಸುತನಾದ ಭೀಷ್ಮನನ್ನು ಬಹು ಮೋಸದಿಂದ ಕೊಂದಂಥ ಆ ಅರ್ಜುನನ ತಲೆಯನ್ನು ತಿಂಗಳ ಕಾಲದಲ್ಲಿ ಅವನ ಸುತನಾದ ಬಭ್ರುವಾಹನನು ಕೊಚ್ಚಿ ಕೆಡಹಲಿ ಎಂದು ಶಾಪವನ್ನು ಕೊಟ್ಟಿರುತ್ತೇನಮ್ಮಾ ಜ್ವಾಲೆ.

ದರುವು

ಹಿರಿಯ ಬಳ್ಳಾಪುರ ನಿವಾಸನಾ
ಸೋಮೇಶ್ವರನಾ
ಶಿರದೊಳಿರುವ ಸತಿಯು ಗಂಗೆ ನಾ॥

ಕೊಟ್ಟ ಶಾಪ, ತಪ್ಪದೂ ಇನ್ನೂ
ಕೇಳಮ್ಮ ಜ್ವಾಲೇ
ನೆಟ್ಟನೇ ನಾ ಪೋಗಿ ಬರುವೆನೂ॥

ಗಂಗೆ: ಹೇ ಜ್ವಾಲೆಯೇ ಕೇಳು! ಈ ಧರಣಿಗಧಿಕವಾಗಿ ಕಂಗೊಳಿಸುವ ಹಿರಿಯ ಬಳ್ಳಾಪುರವನ್ನು ಪ್ರೇಮದಿಂದ ಪರಿಪಾಲಿಸುವ ಶ್ರೀ ಸೋಮನಾಥನ ಪ್ರಿಯಪತ್ನಿ ಗಂಗೆಯಾದ ನಾನು ಕೊಟ್ಟ ಶಾಪವು ಎಂದಿಗೂ ತಪ್ಪಲಾರದು. ಇನ್ನು ನಾನು ಪೋಗಿ ಬರುವೆನಮ್ಮಾ ಜ್ವಾಲೇ ನಯಗುಣಶೀಲೆ॥

ದರುವು

ಅಬಲೆಯು ನಾ ಬಲವ ತೋರಿದೆ
ಶಿರವನ್ನು ತೆಗೆಯೇ
ದುರ್ಬಲನಿಗೆ ಶಾಪ ಕೊಡಿಸಿದೆ॥

ಜ್ವಾಲೆ: ಹೇ ಸಭಾಜನರೇ! ಅಬಲೆಯೆಂದು ಯನ್ನನ್ನು ಎಲ್ಲರೂ ತಿರಸ್ಕರಿಸಿ ಅಪಮಾನಗೈದದ್ದರಿಂದ ಛಲವನ್ನು ಸಾಧಿಸಿ ಆ ದುರುಳ ಧನಂಜಯನ ಶಿರವು ಆತನ ಸುತನಿಂದಲೇ ಧರೆಗುರುಳುವಂದದೀ ಸುರಗಂಗೆಯಿಂದ ಶಾಪವನ್ನು ಕೊಡಿಸಿದೆನೈ ಸಭಾಜನರೇ॥

ದರುವು

ಬಿಡದೆ ಛಲವ ಸಾಧಿಸಿರ್ಪೆನಾ
ಅಗ್ನಿಪ್ರವೇಶ
ಮಾಡಿ ಕ್ರೂರ ಅಸ್ತ್ರವಾಗಿ ನಾ॥

ಧುರದಿ ಅವನ ಶಿರವ ತೆಗೆಯಲೂ
ಹರನಾಣೆ ಇರುವೆ
ನರನ ಸುತನ ಮೂಡಿಗೆಯೊಳೂ ॥

ಜ್ವಾಲೆ: ಅಪ್ಪಾ! ಸಾರಥೀ! ಈ ಪೊಡವಿಯೊಳು ಅತಿ ರಮ್ಯವಾಗಿ ರಾರಾಜಿಸುವ ಹಿರಿಯ ಬಳ್ಳಾಪುರದ ಮೃಡಮೃತ್ಯುಂಜಯ ಶ್ರೀಸೋಮೇಶ್ವರನ ಅಡಿದಾವರೆಗಳಾಣೆಯೂ ನಾನು ಈಗ ಅಗ್ನಿಪ್ರವೇಶವಂ ಮಾಡಿ, ಆ ದುರ್ಜನನಾದ ಅರ್ಜುನನ ತಲೆಯನ್ನು ಪೊಡವಿಗುರುಳಿಸುವ ಕ್ರೂರಾಸ್ತ್ರವಾಗಿ ಆತನ ಸುತನಾದ ಬಭ್ರುವಾಹನನ ಬತ್ತಳಿಕೆಯಲ್ಲಿ ಇರಬೇಕಾಗಿರುವುದರಿಂದ ನೀನು ಅತಿ ಜಾಗ್ರತೆ ಅಗ್ನಿಕುಂಡವನ್ನು ರಚಿಸೈಯ್ಯ ಸಾರಥೀ॥

(ಜ್ವಾಲೆಪ್ರಾರ್ಥನೆ)

ಕಂದಸಾವೇರಿರಾಗ

ಇಳೆಯೊಳೀ ಜೀವಿತವು ಸಲ್ಲದು
ಅಳಿಯನಾಗಿಹ ಅಗ್ನಿ ದೇವನೆ
ಘಳಿಲನೇ ನಿನ್ನೊಳಗೆ ಉಗುವೆನು ದೇವ ಸಲಹೆನ್ನ॥
ಖೂಳ ಪಾರ್ಥನ ಶಿರವ ತೆಗೆಯಲು
ತಾಳಿ ಕ್ರೂರಾಸ್ತ್ರವನು ತ್ವರಿತದಿ
ಬಾಲ ಬಭ್ರುವಾಹನನೊಳು ಸೇರುವೆನು ಬೇಗ॥

(ಜ್ವಾಲೆಯು ಅಗ್ನಿಯಲ್ಲಿ ಪ್ರವೇಶಿಸುವಿಕೆ)

ಭಾಗವತರಕಂದ

ನಾರಿಯರ ಛಲಮೆಂತುಟೋ ಕೇಳ್ಮಹೀಶ ಭಾ
ಗೀರಥಿಗೆ ಕೋಪಮಂ ಬರಿಸಿ ಕೊಡಿಸಿದಳತಿ ಕ
ಠೋರತರ ಶಾಪವಂ ಜ್ವಾಲೆ ಬಳಿಕದು ಸಾಲದಾ
ನರನ ತಲೆಯನರಿವ॥
ಕೂರಲಗಿನಸ್ತ್ರವಾದಪೆನೆಂದು ಸುರನದಿಯ
ತೀರದೊಳಗ್ನಿ ಪ್ರವೇಶಮಂ ಮಾಡಿ, ಜಂ
ಭಾರಿ ತನಯನ ಸೂನು ಬಭ್ರುವಾಹನನ
ಮೂಡಿಗೆಯೊಳಂಬಾಗಿರ್ದಳೂ॥

ಭಾಗವತರು: ಕೇಳಿದರೇನಯ್ಯ ಭಾಗವತರೇ ಈ ಪ್ರಕಾರವಾಗಿ ಒಣಗಿದ ಮರದಿಂದ ಹೊರಟ ಬೆಂಕಿಯು ಹಸಿಯ ಮರಕ್ಕೂ ತಗುಲಿ ಅದನ್ನುರಿಸುವಂತೆ ಜ್ವಾಲೆಯೂ ತನ್ನ ಆಗ್ರಹದಿಂದ ಗಂಗೆಯನ್ನು ಕೆರಳಿಸಿ ಅರ್ಜುನನಿಗೆ ಶಾಪವನ್ನು ಕೊಡಿಸಿದ್ದೂ ಸಾಲದೇ, ಜ್ವಾಲೆಯು ಗಂಗಾ ತೀರದಲ್ಲಿ ಅಗ್ನಿಪ್ರವೇಶವಂ ಮಾಡಿ ಅರ್ಜುನನ ತಲೆಯನರಿವ ಕೂರಲಗಿನ ಅಸ್ತ್ರವಾಗಿ ಆತನ ಸುತನಾದ ಬಭ್ರುವಾಹನನ ಬತ್ತಳಿಕೆಯೊಳಿರಲೂ, ಇತ್ತಲಾ ಅಗ್ನಿದೇವನು ನೀಲಧ್ವಜನೊಡನೆ ಇಂತೆಂದನೈಯ್ಯ ಭಾಗವತರೇ॥

(ಯಾಗದ ಕುದುರೆಯನ್ನು ಅರ್ಜುನನಿಗೆ ಒಪ್ಪಿಸುವಿಕೆ)

ದರುವುಜಂಪೆ

ನೀಲಧ್ವಜ ಭೂಪಾಲ ಲಾಲಿಸೆನ್ನಯ ನುಡಿಯ
ಲೀಲೆಯಿಂದಖಿಲ ವ ಸ್ತುವನರ್ಪಿಸು ನರಗೇ ಪಾರ್ಥನಿಗೇ॥

ಅಗ್ನಿದೇವ: ಹೇ ರಾಜೇಂದ್ರ! ಜಂಭಾರಿ ಸಂಭವನಾದ ಈ ಅರ್ಜುನನು ನರ ನಾರಾಯಣಾಂಶಭೂತನು. ಈತನಲ್ಲಿ ವೈರತ್ವವನ್ನು ನಿಲ್ಲಿಸಿ, ಮಿತ್ರತ್ವವನ್ನು ಬೆಳೆಸಿ, ನಿನ್ನ ಸಪ್ತ ಪ್ರಕೃತಿಗಳನ್ನು ಯಾವತ್ತು ಯಾಗದ ಕುದುರೆ ಸಮೇತ ಆತನ ಪದತಲಕ್ಕೆ ಅರ್ಪಿಸಿ ಧರ್ಮರಾಯರು ನಡೆಸುವ ಯಾಗಕ್ಕೆ ಸಹಾಯಕನಾಗೈ ದೊರೆಯೇ- ಧೈರ‌್ಯದಲ್ಲಿ ಕೇಸರಿಯೇ॥

ದರುವು

ವಾಸವಾತ್ಮಜ ನಿನಗೆ ಕೇಶವನೇ ಸಾರಥಿಯು
ಏಸು ಹೊಗಳಲು ನಮಗ ಸಾಧ್ಯವಾಗಿಹುದೂ ಕೇಳಿಹುದೂ॥

ಘಾಸಿ ಹೊಂದುತ ರಣದೀ ಅಸುವಳಿದ ಸುತನಿನ್ನೂ
ಅಸಮ ಭಾಗ್ಯವ ಸಹಿತ ಅಶ್ವವನೊಪ್ಪಿಸುವೇನಾ ಕೊಡುವೇ॥

ನೀಲಧ್ವಜ: ವಾಸವಾತ್ಮಜನಾದ ಹೇ ಧನಂಜಯ! ಈ ಬ್ರಹ್ಮಾಂಡವನ್ನು ತನ್ನ ಉದರದಲ್ಲಿಟ್ಟು ಕಾಪಾಡುವ ಪುಂಡರೀಕಾಕ್ಷ ಪಾಂಡವಪಕ್ಷ ಶ್ರೀ ಕೃಷ್ಣನೇ ನಿನಗೆ ರಥವನ್ನು ನಡೆಸುವ ಸಾರಥಿಯಾಗಿರುವಾಗ ನಿನ್ನನ್ನು ಎಷ್ಟು ಹೊಗಳಿದರೂ ಅತ್ಯಲ್ಪವಾಗಿಯೇ ಕಾಣುವುದು. ಹೇ ಅರ್ಜುನ! ಯನ್ನ ಸುತನೂ, ಸೋದರರೂ ಕಾಲನ ವಶವರ್ತಿಯಾಗಿರಲೂ, ಈ ಅಷ್ಟೈಶ್ವರ‌್ಯ ಸಕಲ ಸಂಪತ್ತು ಎನ್ನ ಚತುರಂಗ ಬಲ ಭಂಡಾರದರ್ಥವೆಲ್ಲವನ್ನೂ ನಿನ್ನ ಪಾದಾಂಬುಜಕ್ಕೆ ಅರ್ಪಿಸಿರುವೆನು. ಇಷ್ಟನ್ನೂ ಸ್ವೀಕರಿಸಿ ನಿನ್ನ ಅಣ್ಣಂದಿರ ಯಾಗವನ್ನು ನಿರ್ವಿಘ್ನವಾಗಿ ನೆರವೇರಿಸಿ ಕೀರ್ತಿ ಪಡೆಯೈ ಪಾರ್ಥ ತ್ರಿಲೋಕಸಮರ್ಥ॥

ದರುವು

ಧುರದೊಳಗೆ ಕಲಿಯೊಳಗೆ ವರಬಾಹು ಬಲದೊಳಗೆ
ನರಪಾಲ ನಿನಗೆ ಇ ನ್ನಾರು ಸಮನಿಹರೂ, ಯಾರಿಹರೂ॥

ಹಿರಿಯ ಬಳ್ಳಾಪುರದ ಹರ ಸೋಮೇಶನ ದಯದಿ
ಹರುಷದಿ ನೀ ಸಾರೈಯ್ಯ ತುರಗ ಯಾಗಕ್ಕೆ ಅಧ್ವರಕೆ॥

ಅರ್ಜುನ: ಹೇ ನೀಲಧ್ವಜ ಭೂಪಾಲ! ಧೈರ್ಯದಲ್ಲಿಯೂ ಸಾಹಸದಲ್ಲಿಯೂ, ಕಲಿತನದಲ್ಲಿಯೂ, ಬಾಹುಬಲದಲ್ಲಿಯೂ ನಿನಗೆ ಸಮಾನರಾದ ಅನ್ಯರಾಜರನ್ನು ಈ ಧರೆಯೊಳಗೆ ನಾನು ಕಾಣೆನು ಹೇ ರಾಜೇಂದ್ರನೇ ಸುತ ಸೋದರರನ್ನು ಕೊಂದಿಹೆನೆಂಬ ಶತ್ರುತ್ವವನ್ನು ಬಿಟ್ಟು ನಿನ್ನ ಮಿತ್ರತ್ವವನ್ನು ಎನಗೆ ಕೊಟ್ಟು ಈ ಧರಣಿಗಧಿಕವಾಗಿ ಮೆರೆಯುವ ಹಿರಿಯ ಬಳ್ಳಾಪುರವನ್ನು ಪ್ರೀತಿಯಿಂದ ಪರಿಪಾಲಿಸುವ ಗಿರಿಜೆಯರಸ ಶ್ರೀ ಸೋಮೇಶ್ವರನ ಕರುಣವಂ ಪಡೆದು ಯಾಗದ ಕುದುರೆಯ ಬೆಂಗಾವಲಿಗಾಗಿ ಎನ್ನ ಸೇನೆಯೊಡನೆ ನೀನು ಹೊರಟು ಬಂದು ನಮ್ಮ ಅಣ್ಣಂದಿರು ನಡೆಸುವ ಅಶ್ವಮೇಧ ಯಾಗಕ್ಕೆ ಸಹಾಯಕನಾಗೈ ನೀಲಧ್ವಜರಾಜ- ಆಶ್ರಿತಕಲ್ಪಭೋಜ॥

ನೀಲಧ್ವಜ: ಚಂದ್ರವಂಶ ಲಲಾಮನೇ ತಥಾಸ್ತು॥

ಭಾಗವತರಕಂದ

ಕೊಂಡು ಬರಿಸಿದನಖಿಳ ವಸ್ತುಗಳ ನಮಲಮಣಿ
ಮಂಡನಾಳಿಗಳಂ, ವಿವಿಧ ದುಕೂಲಂಗಳಂ
ಹಿಂಡಾಕಳಂ, ಮಹಿಷಿಗಳನುತ್ತಮ ಸ್ತ್ರೀಯರಂ
ಗಜತುರಗ ಹಯಾವಳಿಯನು॥
ಭಂಡಾರದರ್ಥಮಂ, ಗುಡತೈಲ ಧಾನ್ಯಮಂ
ಬಂಡಿಗಳ ಮೇಲೆ ತುಂಬಿಸಿ ಪಾರ್ಥನಂ ಬಂದು
ಕಂಡ ನಸಿತ ಧ್ವಜಂ, ಬಳಿಕವನನರ್ಜುನಂ,
ಪ್ರೀತಿ ಮಿಗೆ ಮನ್ನಿಸಿದನು॥

ಭಾಗವತರದರುವು

ಕೇಳು ಜನಮೇಜಯ ಧರಿತ್ರೀ
ಪಾಲ ಗಜರಥಯಾಗದಶ್ವವ
ಲೀಲೆಮಿಗೆ ಭಂಡಾರದರ್ಥವ ತೈಲಧಾನ್ಯವನು॥

ಮಂಡನಾಳಿಗಳ್ ಮಣಿಯ ತುಂಬಿಸಿ
ಬಂಡಿಗಳಲೀ ನೀಲಕೇತವು
ಕಂಡು ಅರ್ಪಿಸಿ ನರನ ಅಂಘ್ರಿಗೆ ಮಂಡೆಬಾಗಿದನು॥

ಇಂದು ಕುಲಮಣಿ ಸವ್ಯಸಾಚಿಯು
ಬಂಧುರತ್ವದಿ ನೃಪನ ಕೂಡಿ
ಅಂದು ಹೊರಟನು ಯಾಗದಶ್ವವು ಮುಂದೆ ಸಾಗುತಿರೇ॥

ಎಂದು ಜೈಮಿನಿ ಋಷಿಯು ಪೇಳಿದ
ಅಂದು ಜನಮೇಜಯಗೆ ಈ ಕಥೆ
ಇಂದು ಶಿವನಂಕಿತದಿ ರಚಿಸಿದ ಸುಬ್ಬರಾಯಪ್ಪ॥

ವರುಷ ಶೀ ಪ್ಲವ ಮಾಘ ಮಾಸ ದೊ
ಳಿರುವ ಶುದ್ಧದ ಚೌತಿ ತಿಥಿ ಗುರು
ವಾರ ಉತ್ತರ ಭಾದ್ರ ತಾರೆಯೊಳ್, ಪ್ರಕಟಿಸಿದ ಕಥೆಯ॥

ಹಿರಿಯ ಬಳ್ಳಾಪುರದಿ ನೆಲೆಸಿದ
ಹರನ ಸೋಮೇಶ್ವರನ ಕರುಣದಿ
ಬರೆದ ಕಥೆಯಾದರದಿ ಲಾಲಿಸೆ ಪರಮಸುಖವಿಹುದು॥

ಭಾಗವತರು: ಕೇಳಿದರೇನಯ್ಯ ಭಾಗವತರೇ ಈ ಪ್ರಕಾರವಾಗಿ ನೀಲಧ್ವಜ ಭೂಪಾಲನು ಅಗ್ನಿದೇವನ ವಚನದಂತೆ ದೇವಪುರ ನಿವಾಸ ಶ್ರೀ ಲಕ್ಷ್ಮೀಕಾಂತನ ಭಾವ ಮೈದುನನಾದ ಅರ್ಜುನನಿಗೆ ಯಾಗದ ಕುದುರೆಯನ್ನು ಒಪ್ಪಿಸಿ ತನ್ನಯ ಗಜರಥ, ಅಶ್ವ ಪದಾತಿಗಳನ್ನೂ, ಅಮಲಮಣಿ ವಿವಿಧ ದುಕೂಲಂಗಳು, ಅನೇಕ ಗೋವುಗಳು, ಮಹಿಷಿಗಳು, ಉತ್ತಮ ಸ್ತ್ರೀಯರು, ಗುಡ ತೈಲ ಧಾನ್ಯಗಳನ್ನೂ ಅಷ್ಟೇಕೆ ಭಂಡಾರದರ್ಥವೆಲ್ಲವನ್ನೂ, ಫಲುಗುಣನ ಪದತಲಕ್ಕೆ ಅರ್ಪಿಸಿ ಶರಣಾಗತನಾಗಲು, ಪಾರ್ಥನು ನೀಲಧ್ವಜನನ್ನು ಪ್ರೀತಿಯಿಂದ ಮನ್ನಿಸಿ ಪರಮ ಸಂತೋಷದಿಂದ ಆತನೊಡಗೂಡಿ ಯಾಗದ ಕುದುರೆಯು ಮುಂದೆ ಹೊರಡಲು, ಈ ಧರಣಿಯೊಳು ಅತಿರಮ್ಯವಾಗಿರುವ ಹಿರಿಯ ಬಳ್ಳಾಪುರದ ಶ್ರೀ ಸೋಮೇಶ್ವರನ ಆಶೀರ್ವಾದವಂ ಶಿರಗಳಲ್ಲಿ ತಳೆದು ಯಾಗದ ಕುದುರೆಯ ಬೆಂಗಾವಲಿಗಾಗಿ ಮುಂದಕ್ಕೆ ಹೊರಟರೆಂಬುದಾಗಿ ಜನಮೇಜಯನರಾಯನಿಗೆ ಜೈಮಿನೀ ಋಷಿಗಳು ಪೇಳಿದರಯ್ಯ ಭಾಗವತರೇ॥

ಸಂಪೂರ್ಣಂ

ಶ್ಲೋಕ

ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ
ಶ್ರೀಮದ್ ವೆಂಕಟನಾಥಾಯ ಶ್ರೀನಿವಾಸಾಯ ಮಂಗಳಂ॥

ಮಂಗಳಾರತಿ
ಕೇದಾರಗೌಳರಾಗ

ಮಂಗಳಂ ಮಂಗಳಂ ಸೋಮೇಶ್ವರಗೇ ಮಂಗಳಂ ಮಂಗಳಂ॥
ನರನಿಗೆ ಒಲಿಯುತಉರುತರ ಶರವಿತ್ತು॥

ಕುರುಕುಲವನು ಸಂ ಹರಿಸಿದ ಹರಗೇ॥ಮಂಗಳಂ॥

ಪರಮ ಪತಿವ್ರತೆ ನಾರಿ ಬೃಂದೆಯಳಿಗೆ
ಸುರಪದವಿಯನಿತ್ತ ಉರಗ ಭೂಷಣಗೇ॥ಮಂಗಳಂ॥

ಸುರಥ ಸುಧನ್ವರ ಶಿರವ ತೆಗೆಯಲು ಪಾರ್ಥ
ಕೊರಳೊಳಾ ಶಿರಗಳ ಧರಿಸಿದ ಹರಗೇ॥ಮಂಗಳಂ॥

ಜಯ ಜಯ ಶೂಲಿಗೆ ಜಯ ಜಯ ಶಿವನಿಗೆ
ಜಯ ಗೌರಿ ರಮಣ ಶ್ರೀ ಕಾಯಜ ಹರಗೇ॥ಮಂಗಳಂ॥

ಜಯತು ಶ್ರೀ ಗಂಗಾ ಧರಗೆ ತ್ರಿಣೇತ್ರಗೆ
ಜಯ ಮೃತ್ಯುಂಜಯ ಶ್ರೀ ನೀಲಕಂಠನಿಗೇ॥ಮಂಗಳಂ॥

ಮಂಗಳಂ ಭವಹರ ಮಂಗಳಂ ಪುರಹರ
ಮಂಗಳಂ ಅಂಗಜ ಸಂಹರ ಶಿವಗೇ॥

ಹಿರಿಯ ಬಳ್ಳಾಪುರ ಪೊರೆವ ಸೋಮೇಶಗೆ
ಶರಣ ಸುಬ್ಬಾರ‌್ಯನು ಸ್ಮರಿಸುವ ಶಿವಗೇ॥ಮಂಗಳಂ॥

ವಿಜ್ಞಾಪನೆ: ಶ್ರೀ ಹಿರಿಯ ಬಳ್ಳಾಪುರ ನಿಲಯ ಮೃಡ ಮೃತ್ಯುಂಜಯನಾದ ಹೇ ಸೋಮೇಶ್ವರನೇ! ಎನ್ನ ಈ ಕೃತಿ ರಚನೆಯಲ್ಲಿ ಹಸ್ತದೋಷದಿಂದಾದ ಲೋಪಗಳಿದ್ದಲ್ಲಿ ಹಂಸಕ್ಷೀರ ನ್ಯಾಯದಂತೆ ಸ್ವೀಕರಿಸಿದ ಎನ್ನನ್ನು ಮನ್ನಿಸಿ ರಕ್ಷಿಸಬೇಕು ಶಂಕರಾ- ನಾನಿನ್ನ ಕಿಂಕರ॥

ಪರಿ ಸಮಾಪ್ತಿ ಕಂದಆರವಿ ರಾಗ

ಹರನ ಕರುಣದಿ ರಚನೆಗೈದಿಹ
ಯಾರ ವಶದಲ್ಲಿರಲಿ ಪ್ರತಿಯು
ಮರೆಸಿ ಗುಪಿತದಲಿಡದೆ ಕಥೆಯನು ಧರೆಯ ಬುಧ ಜನರು॥
ಸರಸತರ ನಾಟ್ಯಾಭಿನಯದಿಂ
ವೆರಸಿ ಧಾರುಣಿಯೊಳಗೆ ಪ್ರಕಟಿಸಿ
ಬರೆದ ಶ್ರಮ ಪರಿಹರಿಸಲೆಂದು ಕರವ ಮುಗಿಯುವೆನು॥

***