(ಸತ್ಯಕೀರ್ತಿ ಬರುವಿಕೆ)

ಸತ್ಯಕೀರ್ತಿ: ಯಲಾ ಚಾರ ಹೀಗೆ ಬಾ ಮತ್ತೊಂದು ಸಾರಿ ಹೀಗೆ ನಿಲ್ಲು. ಈಗ ಬಂದವರು ಧಾರೆಂದು ಪರಿ ಪರಿ ಕೃತಾಂಜಲೀ ಬದ್ಧನಾಗಿ ಕರವೆರಡಂ ಮುಗಿದು ವಿಚಾರಿಸುವ ನರ ನೀ ಧಾರು? ನಿನ್ನ ಪೆಸೆರೇನು? ತುಸು ಮಾತ್ರ ಭಯವಿಲ್ಲದೇ ಉಸುರುವನಾಗೋ ಭಟನೇ- ಭಟರೋಳ್ ಶ್ರೇಷ್ಠನೇ॥ಭಲಾ ಸಾರಥೀ ಹಾಗಾದರೆ ಯಮ್ಮ ವೃತ್ತಾಂತವನ್ನು ಬಿತ್ತರಿಸುತ್ತೇನೆ. ಚಿತ್ತವಿಟ್ಟು ಕೇಳೋ ಸಾರಥೀ ಚರರೋಳ್ ಸುಮತಿ॥

ಭಲಾ ಸಾರಥೀ ಈ ಬ್ರಹ್ಮಾಂಡ ಮಂಡಲದೋಳ್ ಮಂಡಿತದಿಂದೊಪ್ಪುವಾ. ಭೂಮಂಡಲಾಧಿಪರ ಗಂಡನೆಂದು ಪೆಸರ್‌ಗೊಂಡು ಈ ಪೃಥ್ವಿಯ ಮೇಲೆ ವಿಸ್ತಾರದಿಂದೊಪ್ಪುವ ಮಾಹಿಷ್ಮತೀ ಪಟ್ಟಣವನ್ನು ನಿಷ್ಠೆಯಿಂದ ಪರಿಪಾಲಿಸುವ ನೀಲಧ್ವಜ ಭೂಪಾಲರ ಸಮ್ಮುಖದೋಳ್ ರಾಜಕಾರ‌್ಯ ದುರಂಧರನಾಗಿ ಪ್ರಧಾನರೋಳ್ ಶ್ರೇಷ್ಠನಾದ ಸತ್ಯಕೀರ್ತಿಯೆಂಬ ನಾಮಾಂಕಿತವಲ್ಲವೇನೋ ದೂತ-ರಾಜ ಸಂಪ್ರೀತ॥

ಈ ರತ್ನ ಖಚಿತಮಾದ ಸಭಾಸ್ಥಾನಕ್ಕೆ ಆಗಮಿಸಿದ ಕಾರಣವೇನೆಂದರೆ ನಮ್ಮ ದೊರೆಯಾದ ನೀಲಕೇತು ಮಹಾರಾಜರು ಕರೆಸಿದ ಕಾರಣ ಬಂದು ಇದ್ದೇನೆ. ಧಾವಲ್ಲಿರುವರೋ ಅತಿಜಾಗ್ರತೆ ತೋರಿಸೋ ಚಾರ-ಯನ್ನ ಆಜ್ಞಾಧಾರ॥ನಮೋನ್ನಮೋ ಹೇ ರಾಜ- ಆಶ್ರಿತಕಲ್ಪಭೋಜ॥

ನೀಲಧ್ವಜ: ಧೀರ್ಘಾಯುಷ್ಯಮಸ್ತು ಬಾರೈಯ್ಯ ಸತ್ಯಕೀರ್ತಿ॥

ಮಂತ್ರಿ: ಯನ್ನಿಷ್ಠು ಜಾಗ್ರತೆಯಿಂದ ಕರೆಸಿದ ಕಾರಣವೇನೋ ಪೇಳಬೇಕಯ್ಯ ದೊರೆಯೇ ಧೈರ‌್ಯದಲ್ಲಿ ಕೇಸರಿಯೇ॥

ನೀಲಧ್ವಜ: ಕೇಳುತ್ತೇನೆ ಚಿತ್ತವಿಟ್ಟು ಕೇಳೈಯ್ಯ ಮಂತ್ರೀ॥

ದರುವು

ಸತ್ಯಾ ಕೀರ್ತಿಯೇ ಕೇಳು ಒತ್ತಿ ಹೇಳುವೆ ನಿನಗೇ
ನಿತ್ಯಾದಿಂ ಪ್ರಜೆಗಳೂ ಸುಖದಿಂದ ಇಹರೇ ತಾವಿಹರೇ                     ॥

ನೀಲಧ್ವಜ: ಪ್ರಧಾನ ಶಿರೋಮಣಿಯಾದ ಸತ್ಯ ಕೀರ್ತಿಯೆ ಕೇಳು. ನಮ್ಮ ಈ ರಾಜ್ಯದ ಸಕಲ ಪ್ರಜಾ ಪರಿವಾರವೆಲ್ಲವೂ ಕುಂದು ಕೊರತೆಗಳಿಲ್ಲದೆ ಸುಖದಿಂದ ಸತ್ಯಶೀಲರಾಗಿ ಬಾಳುತ್ತಿಹರೇನೈಯ್ಯಿ ಮಂತ್ರೀಶೇಖರಾ-ರಾಜಕಾರ‌್ಯ ದುರಂಧರಾ॥

ದರುವು

ಧರಣೀಶ ಪೇಳುವೆನು ಧಾರುಣಿಯ ಜನರೆಲ್ಲಾ
ಪರಮಾ ಹರುಷಗಳಿಂದ ಬಾಳುತ್ತಲಿಹರೂ॥

ಮಂತ್ರಿ: ಮಾಹಿಷ್ಮತಿ ಪುರವರಾಧೀಶರೇ ಕೇಳಿ. ನಿಮ್ಮ ಆಳ್ವಿಕೆಯಲ್ಲಿ ಕಷ್ಠ ನಿಷ್ಠುರ, ಮರೆ. ಮೋಸ ಮುಂತಾದ ದುಷ್ಕೃತ್ಯಗಳು ಒಂದೂ ಕಾಣದೆ ಪ್ರಜೆಗಳಲ್ಲಿ ನೀತಿ ಚತುರತೆ. ಭಗವದ್ಭಕ್ತಿ, ಜಾತಿ ಧರ್ಮಾಚಾರ ನಿಷ್ಠೆ ಶಮ ದಮ ದಾನ ದಾಕ್ಷಿಣ್ಯ ಮೊದಲಾದ ಸದ್ಗುಣಗಳು ತುಂಬಿ, ನೀಚಕೃತ್ಯ, ಪರಸ್ಪರ ವೈರ, ಹರಿದ್ವೇಷ ಮತಿ ಶೂನ್ಯತೆ ಮುಂತಾದ ನ್ಯೂನತೆಗಳಿಲ್ಲದೆ ಜನರು ನಿತ್ಯ ತೃಪ್ತರಾಗಿ ಭೋಗಿಗಳಾಗಿರುವರೈ ಭೂಪ-ಕೀರ್ತಿ ಕಲಾಪ॥

ದರುವು

ಧರಣಿಯೊಳು ಸಾಮಂತಾ ನರಪಾಲಕರೆಲ್ಲಾ
ಇರದೇ ಕಪ್ಪವ ತಂದು ಒಪ್ಪಿಸುವರೇ ಮಂತ್ರೀ॥

ನೀಲಧ್ವಜ: ಅಯ್ಯ ಮಂತ್ರೀ ನಮಗೆ ಅಧೀನರಾದಂಥ ಅಂಗ ವಂಗ ಕಳಿಂಗ ಕಾಂಭೋಜ ಮಗಧ ಮಾಳವ. ನೇಪಾಳ, ಚೋಳ ಮೊದಲಾದ ಸಾಮಂತ ರಾಜರೆಲ್ಲಾ ಭಯಗೊಂಡು ಕಪ್ಪವಂ ತಂದೊಪ್ಪಿಸುತ್ತಾ ಇದ್ದಾರೆಯೇ. ಅಲ್ಲದೇ ತಾರದೆ ತಿರುಗಿ ಮಾರ‌್ಮಲೆತು ನಡೆಯುವಂಥ ರಾಜರೂ ಇದ್ದಾರೆಯೇ. ಮಾಜದೆ ಯನ್ನೊಳು ಪೇಳೈಯ್ಯ ಪ್ರಧಾನಿ-ನೀತಿ ಜ್ಞಾನಿ॥

ದರುವು

ಅಧಿರಾಜ ಕುಲವೆಲ್ಲಾ ಭರದೀ ಕಪ್ಪವ ತಂದು
ಪಾದ ಪಂಕಜಗಳಿಗೆ ಎರಗುತ್ತಲಿಹರೂ॥

ಮಂತ್ರಿ: ಹೇ ರಾಜೇಂದ್ರಾ! ಅರುಣನು ಚಂದ್ರನ ಶೀತಲ ಕಿರಣಗಳನ್ನು ಸೆಳೆದುಕೊಳ್ಳುವ ಹಾಗೆ. ತಮ್ಮ ಧೈರ‌್ಯ ಸಾಹಸ ಪರಾಕ್ರಮಗಳಿಗೆ ಅಧಿರಾಜರೆಲ್ಲಾ ಭಯಗೊಂಡು ತಾವು ವಿಧಿಸಿದ ಪ್ರಕಾರ ಕಪ್ಪವನ್ನು ತಂದು ತಮ್ಮ ಪಾದಕಮಲಗಳಿಗೆ ಒಪ್ಪಿಸಿ ತಲೆಯನ್ನು ಬಾಗಿಸುವರಲ್ಲದೇ ಮೀರಿದಂಥವರನ್ನು ಕಾಣಲಿಲ್ಲವೈ ರಾಜ- ದಿನಮಣಿ ತೇಜ॥

ಕಂದ

ಧಾರುಣೀಪತಿ ನಿಮಗೆ ಸರಿ ಸಮ
ಧಾರು ಮಲೆತೂ ಇಹರು ಜಗದೀ
ಮೀರಿ ಕಾದುವ ರಾಯರುಗಳು ಧರಣಿಯೊಳಗಿಲ್ಲಾ॥
ಸುರಪ ದಿಕ್ಪಾಲಕರಿಗೆಲ್ಲವೂ
ಮೀರಿಸುತಿದೆ ನಿಮ್ಮ ವೈಭವಾ
ಮೂರು ಲೋಕದಿ ನಿಮ್ಮ ಕೀರ್ತಿಯು ಪ್ರಸರಿಸಿ ಇಹುದೂ॥

ಮಂತ್ರಿ: ಶತೃಗಳೆಂಬ ಕಾಳ ಸರ್ಪಕ್ಕೆ ಗರುಡನಂತಿರುವ ನೀಲಧ್ವಜ ಭೂಪಾಲರೆ ಕೇಳಿ. ತಮ್ಮ ರಾಜ್ಯ ತಂತ್ರ ಧರ್ಮಾ ಧರ್ಮ. ಸೂಕ್ಷ್ಮಾ ಸೂಕ್ಷ್ಮ, ಯುಕ್ತಾ ಯುಕ್ತ ಪಾತ್ರ ಪಾತ್ರ ವಿವೇಚನೆ. ಧೈರ‌್ಯ ಸಾಹಸಗಳಿಗೆ ಧಾರಾದರೂ ಸಮನೆನಿಸುವರೇ ಸ್ವಾಮೀ ಭುಜಬಲ ದೋರ್ದಂಡರಾದಂಥ ದೇಶಾಧಿಪತಿಗಳು ತಮ್ಮ ಹೆಸರು ಕೇಳಿದ ಮಾತ್ರಕ್ಕೆ ಭಯಗೊಂಡು ತಲ್ಲಣಿಸುವರಲ್ಲದೇ ಮತ್ತೆ ಬೇರಿಲ್ಲಾ. ಅಲ್ಲದೇ ಕುಲಪರ್ವತಾರಿಯೂ ವಜ್ರಾಯುಧನೂ ಪಾಕಶಾಸನನೂ ಅತಿಬಲ ಪರಾಕ್ರಮಶಾಲಿಯೂ, ಸದಾಚಾರ ಸಂಪನ್ನನೂ ಆದ ದೇವೇಂದ್ರನ ಆಳ್ವಿಕೆಗಿಂತ ಇಮ್ಮಿಗಲಾಗಿ ನಿಮ್ಮ ರಾಜಕೀರ್ತಿ ಲಕ್ಷ್ಮಿಯು ಮೂರುಲೋಕಗಳಲ್ಲಿಯೂ ಪ್ರಸಿದ್ಧವಾಗಿಹಳೈಯ್ಯ ರಾಜ ರವಿಸಮತೇಜ॥

ದರುವು

ಹಿರಿಯಾ ಬಳ್ಳಾಪುರದಾ ವರದಾ ಸೋಮೇಶ್ವರನಾ
ಕರುಣಾದಿಂದಲಿ ವೃಷ್ಠಿ ಕರೆದು ಬೆಳೆಯಬಹುದೇ ಕೇಳ್ ಇಹುದೇ॥

ನೀಲಧ್ವಜ: ಅಯ್ಯ ಸಚಿವ ಶಿಖಾಮಣಿ! ಈ ಧರೆಯೊಳಗೆ ಅಧಿಕವಾಗಿ ರಂಜಿಸುವ ಹಿರಿಯಬಳ್ಳಾಪುರ ವಾಸ ಶ್ರೀ ಸೋಮೇಶ್ವರನ ಅಪಾರವಾದ ಕರುಣಕಟಾಕ್ಷದಿಂದ ಕಾಲ ಕಾಲಕ್ಕೆ ಮಳೆ ಬೆಳೆಗಳಾಗಿ ಧನ ಧಾನ್ಯ ಸಮೃದ್ಧಿಯಾಗಿ ದೇಶವು ಸುಭಿಕ್ಷದಿಂದ ಇಹುದೇನೈಯ್ಯ ಮಂತ್ರೀ- ಕಾರ‌್ಯೇಷು ತಂತ್ರೀ॥

ದರುವು

ಗಿರಿಜೇಶ ಸೋಮಧರ ಹರನಾ ದಯದಲಿ
ವೃಷ್ಠಿ ಕರೆದೂ ಬೆಳೆಯಾಗುತ್ತಲಿಹುದೂ॥

ಮಂತ್ರಿ: ಅಧಿರಾಜರ ಕಿರೀಟಮಣಿಗಳಿಂದ ಅಲಂಕೃತವಾದ ಚರಣ ಕಮಲಗಳಿಂದ ರಾರಾಜಿಸುತ್ತಿರುವ ಕ್ಷೋಣಿಪಾಲಕರೇ ಲಾಲಿಸಿ, ಶ್ರೀ ಸೋಮೇಶ್ವರನ ಕೃಪಾಕಟಾಕ್ಷದಿಂದ ದೇಶದಲ್ಲಿ ಕಾಲಕಾಲಕ್ಕೆ ವರ್ಷವಾಗಿ, ಸುಭಿಕ್ಷದಿಂದ ಎಲ್ಲಿ ನೋಡಿದರೂ ಮನೆಗಳಲ್ಲಿ ವೀಣಾಧ್ವನಿ ರಾಜಶುಕಗಳ ಮಾತು ಕೋಗಿಲೆಗಳ ಸಂಗೀತ, ಮ್ಯದಂಗದ ಶಬ್ದ, ಘಂಟಾನಾದ, ಜಯ ಜಯ ಧ್ವನಿ, ಸಾಮಗಾನ ವೇದಘೋಷ ಮೊದಲಾದ ರಮ್ಯವಾದ ಧ್ವನಿಗಳು ಕೇಳಿಸುತ್ತಿರುವುದಲ್ಲದೆ, ಸಮುದ್ರರಾಜನು ತನ್ನ ಮಗಳಾದ ಪುರಲಕ್ಷ್ಮಿಗೆ ಕೊಟ್ಟ ರತ್ನ ಸಮೂಹದಂತೆ ಪ್ರತಿಪೇಟೆ ಅಂಗಡಿಗಳಲ್ಲಿಯೂ ರತ್ನಗಳು ಹೊಳೆಯುತ್ತಿರುವುದರಿಂದ ಈ ಮಾಹಿಷ್ಮತೀಪುರವು ಶ್ರೀದೇವಿಯ ಆವಾಸನಾಧಿನವೋ ಎಂಬಂತೆ ಕಂಗೊಳಿಸುತ್ತಾ ಸುಖಸಮೃದ್ಧಿಯಿಂದ ಇರುವುದೈಯ್ಯ ಭೂಪಾಲಕಾ ಕ್ಷಿತಿಜನ ಪಾಲಕ॥

ನೀಲಧ್ವಜ: ಅಯ್ಯ ಸಚಿವಾ. ನಾವು ಪರಿಪಾಲಿಸುವಂಥ ಈ ವಸುಧೆಯಲ್ಲಿ ಪ್ರಜಾಪರಿವಾರಗಳಿಗೆ ಕುಂದು ಕೊರತೆಯೆನಿಸದೆ ತ್ರಿಪುರಾಂತಕನು ನಡೆಸಿಕೊಂಡು ಹೋಗುತ್ತಿರುವನಲ್ಲದೇ, ನಮ್ಮ ರಾಜ್ಯದಲ್ಲಿ ಮಣಿಮಯವಾದ ಅಶ್ವಶಾಲೆಯಲ್ಲಿನ ಕುದುರೆಗಳು ಸೆರೆ ಹಿಡಿದು ತಂದ ಸೂರ‌್ಯನ ಕುದುರೆಗಳಂತೆ ಕಾಣುತ್ತಿರಲು, ಕೈಲಾಸ ಪರ್ವತದ ಗುಹೆಯಲ್ಲಿ ಐರಾವತವಿರುವ ಹಾಗೆ ಚಂದ್ರಕಾಂತ ಶಿಲೆಯ ಗಜ ಶಾಲೆಯಲ್ಲಿ ಪಟ್ಟದಾನೆಯು ಒಪ್ಪುತ್ತಿರಲು ತನ್ನ ಕಾಂತಿಯೆಂಬ ಅಮೃತವನ್ನು ಬಯಸಿದ ಕಾಲಸರ್ಪಗಳಂತೆ ಆಯುಧ ಶಾಲೆಯಲ್ಲಿನ ಶಸ್ತ್ರಾಸ್ತ್ರಗಳು ಕಾಣುತ್ತಿರಲು ಸಮಸ್ತ ದೇಶಾಧೀಶ್ವರರು ನಮಗೆ ಮಾರ‌್ಮಲೆತು ನಿಲ್ಲುವರೇ ಮಂತ್ರಿ ಆದಾಗ್ಯೂ ನಾವು ಮೈಮರೆತು ಇರಲಾಗದು. ನಾವು ಒಂದೊಂದು ವೇಳೆ ರಾಣೀವಾಸದಲ್ಲಿ ಇದ್ದ ಕಾಲಕ್ಕೂ ರಾಜ್ಯಾಡಳಿತಕ್ಕೆ ವಿಘ್ನ ಬಾರದಂತೆ ಸರಿಯಾಗಿ ನೆರವೇರಿಸಿಕೊಂಡು ಹೋಗಬೇಕಯ್ಯ ಪ್ರಧಾನಿ ನೀತಿ ಜ್ಞಾನಿ॥

ಮಂತ್ರಿ: ಅದೇ ಪ್ರಕಾರ ಆಗಬಹುದೈಯ್ಯ ದೊರೆಯೇ ಧೈರ‌್ಯದಲ್ಲಿ ಕೇಸರಿಯೇ॥

ಭಾಗವತರ ಕಂದಕೇದಾರಗೌಳ

ರಾಜಕುಲಮಣಿ ನೀಲಕೇತೂ
ರಾಜಕಾರ‌್ಯದೊಳು ತಾನು ಇರುತಿರಲಿತ್ತಲಾ
ರಾಜ ಸಹಧರ್ಮಿಣಿ ಜ್ವಾಲೆಯೂ
ರಾಜಸುತೆ ಪರಿಣಯದ ಯೋಚನೆಯಿಂ ಬಂದಳಾಗ॥

ಭಾಗವತರು: ಕೇಳಿದರೇನಯ್ಯ ಭಾಗವತರೇ ಈ ಪ್ರಕಾರವಾಗಿ ರಾಜಕುಲಮಕುಟ ನೀಲಧ್ವಜನು ರಾಜಕಾರ‌್ಯದೊಳಿರಲು ರಾಜನ ಪತ್ನಿ ಜ್ವಾಲೆಯು ತನ್ನ ಸುತೆಯ ಪರಿಣಯದ ಯೋಚನೆಯಿಂದ ಬಂದಳೈಯ್ಯ ಭಾಗವತರೇ॥

 

(ಜ್ವಾಲಾದೇವಿ ಬರುವಿಕೆ)

ದ್ವಿಪದೆಕಾಂಭೋಧಿ ರಾಗ
ಶ್ರೀಕಾಂತನ ಮನದೊಳಗೆ ಶ್ರೀ ಕಾಮಿನಿಮಣಿ ನೆನೆದೂ
ಶಿಖೆಯ ಬಾಚಿ ಬೈತಲೆತಿದ್ದಿ ಪುಷ್ಪವಂ ಮುಡಿದೂ
ಉಟ್ಟ ಪಟ್ಟಾವಳಿಯ ನೆರಿಗೆ ಚಿಮ್ಮತಲೀ
ತೊಟ್ಟ ಪೈಠಣೆಯ ಕುಪ್ಪಸವು ತೋಳಿನಲೀ॥
ಥಳ ಥಳಿಪ ಸ್ವರ್ಣದೊಡ್ಯಾಣಗಳಳವಟ್ಟೂ
ಕಾಲು ಅಂದಿಗೆ ಗೆಜ್ಜೆ ಪಿಲ್ಲಿಯಾ ನಿಟ್ಟೂ
ಚಂದ್ರಕಾಂತಿಯ ಪೋಲ್ವ ಮೂಗುತಿ ಧರಿಸುತಲೀ
ಇಂದ್ರನಾ ಸತಿ ಶಚಿದೇವಿಯಂತೆ ಹೊಳೆಯುತಲೀ
ಜನರ ಕಣ್ಮನಕೆ ಜಯ ಸಿರಿಯು ಸುಳಿದಂತೆ
ಜನಪ ನೀಲಧ್ವಜನ ಪಟ್ಟದರಾಣಿ ಜ್ವಾಲೆಯೂ
ತನ್ನಿಜರಮಣನಂ ಕಾಣುವ ತವಕದಿಂದಲಾ ತರುಣೀ
ಧರೆಯೊಳು ಹಿರಿಯ ಬಳ್ಳಾಪುರವಾಸನಂ ಭಜಿಸೀ
ಹರುಷದಿಂದಲಿ ಬಂದು ತೆರೆಯೊಳಗೆ ನಿಂದೂ॥

ತೆರೆದರುವು

ನೀರೆ ನೀ ಬಾರೇ ಬೇಗಾ
ವೀರಾನೂ ಕಾಂತನೆಡೆಗೇ॥
ಶೌರ‌್ಯಾನೂ ಧಾರ ಚರಿತಾ
ವಾರುಧೀ ಚಂದಿರನೆಡೆಗೆ॥

ಜ್ವಾಲಾದೇವಿ: ಯಲಾ ಚಾರ ಹೀಗೆ ಬಾ ಮತ್ತೂ ಹೀಗೆ ಬಾ. ಈಗ ಬಂದವರು ಧಾರೆಂದು ಕೇಳುವ ಮುನ್ನ ನೀನು ಧಾರೋ ಹೀಗೆ ಬಾರೋ॥

ಅಪ್ಪಾ, ಸಾರಥಿ! ಹಾಗಾದರೆ ಯಮ್ಮ ವಿದ್ಯಮಾನವನ್ನು ಪೇಳುತ್ತೇನೆ. ಚಿತ್ತವಿಟ್ಟು ಕೇಳೋ ಚಾರ- ತಿಳಿಸುವೆನು ವಿಚಾರ॥

ಶ್ರೀಮನ್ಮಹೀಮಂಡಲದೋಳ್ ಶಶಿಭಾನು ತೇಜದಂತೆ ವಿರಾಜಿಸುವ ಪುರ ಮಾಹಿಷ್ಮತೀ ನಗರವಂ ಪರಿಪಾಲಿಸುವ ಕರುಣಾಕರ ಚಂದ್ರರಾಗಿ ಶತೃರಾಜರ ರಾಜ್ಯಲಕ್ಷ್ಮಿಯ ಕೈ ಹಿಡಿಯುವರಾಗಿ ಇಂದ್ರನು ಬೆಟ್ಟಗಳನ್ನು ಧ್ವಂಸಮಾಡಿದ ಹಾಗೆ ಶತೃಗಳೆಂಬ ಪರ್ವತಗಳನ್ನು ನಿರ್ಮೂಲ ಮಾಡುವವರೂ, ಕಮಲವು ಲಕ್ಷ್ಮಿಯನ್ನೊಳಗೊಂಡಿರುವಂತೆ ವಿಸ್ತಾರವಾದ ಸದ್ಗುಣವುಳ್ಳವರೂ, ನೈದಿಲೆಗಳು ಚಂದ್ರಕಾಂತಿಯಿಂದ ವಿಕಸಿತವಾಗಿರುವಂತೆ ಈಶ್ವರ ಪಾದಪದ್ಮಗಳಲ್ಲಿ ಭಕ್ತಿಯುಳ್ಳವರಾಗಿಯೂ ಇರುವ ನೀಲಧ್ವಜ ಭೂಪಾಲರಿಗೆ ಪ್ರಾಣಪತ್ನಿಯಾದ, ಏಣಾಂಕವದನೆ, ನಾರಿ ಶಿರೋಮಣಿ ಜಾಣೆಯರ ಜಾಣೆ, ಜ್ವಾಲಾದೇವಿಯೆಂದು ಮಾಣದೆ ನಿನ್ನ ವಕ್ಷಸ್ಥಲದಲ್ಲಿ ನಿಕ್ಷೇಪಿಸೋ ಚಾರ- ಸುಗುಣ ಗಂಭೀರ.

ಅಂದವಾದ ಈ ಸಭಾ ಮಂದಿರಕ್ಕೆ ನಾನು ಬಂದ ಕಾರಣವೇನೆಂದರೆ ಯನ್ನ ಮನೋವಲ್ಲಭರಾದ ನೀಲಧ್ವಜ ಭೂಪಾಲರನ್ನು ಕಾಣಲೋಸುಗ ಬಾಹೋಣವಾಯ್ತು. ಧಾವಲ್ಲಿರುವರೋ ತೋರಿಸಪ್ಪಾ ದ್ವಾರಪಾಲಕ- ನಿನಗೀವೆನು ಯನ್ನ ಕೊರಳಪದಕ॥

ಕಂದರಾಗ

ನರಪಾಲ ವಂದನೆ ಮಾಡುವೆ
ಚರಣ ಪಂಕಜಗಳಿಗೆ ಕರುಣಾ ಸಮುದ್ರನೇ॥
ಧರಣಿಗಧಿಕ ಮಾಹಿಷ್ಮತೀ
ಪುರಾಧಿಪತಿ ಮತ್ಪ್ರಿಯಾಂಘ್ರಿಗೆ ಬಿನ್ನಪವು ರಾಯ॥

ಜ್ವಾಲೆ: ಇದೇ ಶಿರಸಾಷ್ಠಾಂಗ ಬಿನ್ನಪಂಗಳು ರಾಯ ಯನ್ನ ಮನೋಪ್ರಿಯ॥

ನೀಲಧ್ವಜ: ಸೌಮಾಂಗಲ್ಯಾಭಿವೃದ್ಧಿರಸ್ತು ಬಾರೇ ರಮಣಿ- ಕಾಂತಿದ್ಯುಮಣಿ॥ಪೇಳುತ್ತೇನೆ ಲಾಲಿಸುವಂಥವಳಾಗೆ ಕಾಂತೆ ಮತಿಗುಣವಂತೆ॥

ದರುವು

ಇಂದುಮುಖಿಯೇ ಕೇಳು ಚಂದದಿಂದಲಿ ಈಗ
ಬಂದ ಪರಿಯ ಪೇಳು ನೀ ಪೇಳೂ॥
ಅಂದವಾಗಿಹ ನಿನ್ನ ಚಂದಿರ ವದನವು
ಕುಂದಲೇಕೆ ನೀರೆ, ಗಂಭೀರೇ॥

ನೀಲಧ್ವಜ: ಹೇ ಇಂದೀವರಾಕ್ಷಿಯಾದ ಜ್ವಾಲೆಯೇ ಕೇಳು. ಅಂದವಾದ ಅಂತಃಪುರವನ್ನು ಬಿಟ್ಟು ಚಂದವಾದ ಈ ಸಭಾ ಮಂದಿರಕ್ಕೆ ನೀನು ಬಂದ ಕಾರಣವೇನು? ಅಲ್ಲದೇ ಅಂದವಾದ ಕುತ್ತಿಗೆಯಿಂದ ಮನೋಹರಳಾಗಿ, ಆಗ ತಾನೆ ಉದಯಿಸುತಿರುವ ಅರುಣಕಾಂತಿಯಂತೆ ಪಾಟಲಿತಗಳಾದ ಕರಗಳಿಂದೊಪ್ಪಿ, ಕಮಲಪತ್ರ ಗಳನ್ನು ಧಿಕ್ಕರಿಸುವ ನೇತ್ರಂಗಳಿಂದ ವಿರಾಜಿಸುತ್ತಾ, ಚಂದ್ರನನ್ನು ಹೀಯಾಳಿಸುವ ನಿನ್ನ ಮುಖ ಪಂಕಜವು ಕಂದಿ ಕುಂದಿರಲು ನಿನ್ನ ಸದಮಲ ಹೃದಯಕ್ಕೊದಗಿರುವ ಪರಿತಾಪವೇನೆ ಜ್ವಾಲೆ-ಸುಗುಣವಿಶಾಲೆ॥

ದರುವು
ಬಂಧುರ ಸುಖಸಿರಿ ಯಿಂದ ಕೂಡಿರೆ ನೀನೂ
ನೊಂದ ಕಾರಣವೇನೇ ಪರಿಯೇನೇ॥
ಮಂದರೋದ್ಧರ ಮುಚು ಕುಂದನ ಸಖನಾಣೆ
ಚಂದದಿಂದಲಿ ಪೇಳೇ॥ನೀ ಪೇಳೇ॥

ನೀಲಧ್ವಜ: ಮುಖಕಮಲದಲ್ಲಿ ಕಂಗೊಳಿಸುತ್ತಿರುವ ಕಸ್ತೂರಿಯೆಂಬ ಮಕರಂದವನ್ನು ಪಾನಮಾಡುವುದಕ್ಕಾಗಿ ತಿರುಗಾಡುತ್ತಿರುವ ದುಂಬಿಗಳಂತೆ. ಹಣೆಯಲ್ಲಿ ಕುಣಿದಾಡುತ್ತಿರುವ ಮುಂಗುರುಳುಗಳುಳ್ಳ ಹೇ ರಮಣಿ, ರಂಭೆಯಂತೆ ಅಧಿಕವಾದ ಸಂಪತ್ತಿನಿಂದ ಕೂಡಿ, ನಾನಾ ವಿಧಂಗಳಾದ ಆಭರಣಗಳಿಂದ ಉಪಶೋಭಿತಳಾಗಿ ನೂತನ ಸೌಂದರ್ಯರಾಶಿಯಂತೆ ಬೆಳಗುತ್ತಾ, ಸೌಂದರ್ಯದ ಗಣಿಯಾಗಿ ಸದ್ಗುಣಗಳ ನಿಧಿಯಾಗಿರುವ ನಿನಗೆ ಒದಗಿರುವ ಕ್ಲೇಶವೇನು ಕಾಂತೆ. ಮಂದರೋದ್ಧರನ ಮಿತ್ರನಾಣೆಗೂ ಚಂದದಿಂದ ಯನ್ನ ಮುಂದೆ ಬಿತ್ತರಿಸುವಳಾಗೆ ನಾರಿ-ಮದನ ವೈಯ್ಯರಿ॥

ದರುವು

ಧರಣಿಗಧಿಕವಾಗಿ, ಮೆರೆಯುತ ರಂಜಿಪಾ
ಹಿರಿಯ ಬಳ್ಳಾಪುರದಾ ಶ್ರೀ ವರದಾ॥
ಹರನೂ ಸೋಮೇಶ್ವರ ಹರುಷದಿ ಸಲಹುವ
ಒರೆಯೆ ಮಾಜದೆ ನಾರಿ ವೈಯ್ಯರಿ॥

ನೀಲಧ್ವಜ: ಹಂಸಗಮನೆಯಾಗಿ ಗಾನ ಕೋಗಿಲೆಯಾಗಿ, ಸಿಂಹ ಮಧ್ಯೆಯಾದ ಕಾಂತೆಯೇ ಲಾಲಿಸು. ಈ ಧರಣಿಯೊಳತಿ ಸೊಬಗಿನಿಂದ ಮೆರೆಯುವ ಹಿರಿಯ ಬಳ್ಳಾಪುರದಲ್ಲಿ ನೆಲೆಸಿ ಅಷ್ಠಮಿಯ ಚಂದ್ರನನ್ನು ಜಟಾಜೂಟದಲ್ಲಿ ಧರಿಸಿ, ದೇವಾದಿ ದೇವತೆಗಳಿಂದ ನಮಸ್ಕರಿಸಲ್ಪಟ್ಟ ಪಾದಕಮಲಗಳುಳ್ಳ ಶ್ರೀ ಸೋಮೇಶ್ವರನು ಖಂಡಿತವಾಗಿಯೂ ನಿನ್ನ ಮನದ ಕ್ಲೇಶವನ್ನು ಪರಿಹರಿಸಿ ಕಾಪಾಡುವನು. ಮಾಜದೆ ಯನ್ನೊಳು ವಿವರಿಸುವಳಾಗೆ ನೀರೇ-ಗುಣಗಂಭೀರೇ॥

ದರುವು

ಧಾರುಣೀಶನೇ ಲಾಲಿಸು ಬಿನ್ನಪಾ ॥
ಧರಣಿಯೊಳಗೆ ಸುತರು ಇಲ್ಲದೇ
ನಾರಿ ಮಣಿಯು ಕಾಡಿಬೇಡಿ॥
ಹರನ ಕರುಣದಿಂದ ಸುತರ
ವರವ ಪಡೆದು ಸುಖದಿ ಇಹಳೂ ॥

ಜ್ಞಾಲೆ: ಶತೃಸೈನ್ಯವೆಂಬ ಸಾಗರಕ್ಕೆ ನೀರಾನೆಯಂತಿರುವ ಹೇ ನನ್ನ ಸ್ವಾಮಿಯೇ, ಈ ಧರಣಿಯೋಳ್ ರತಿ ಸೌಂದರ್ಯವನ್ನು ಅಲ್ಲಗಳೆಯುವ ಕೋಮಲೆಯರಾದ ನಾರೀಮಣಿಯರು, ಶಿವನಲ್ಲಿ ಭಕ್ತಿಯಿಲ್ಲದವನ ಬಾಳ್ವಿಕೆಯೂ, ಕವಿತ್ವ ಮಾಡದವನ ಬುದ್ಧಿಯೂ, ಸೌಂದರ್ಯವಿಲ್ಲದ ಹೆಂಗಸೂ ವೇಗವಾಗಿ ಓಡದಿರುವ ಕುದುರೆ, ಮಕ್ಕಳಿಲ್ಲದ ಐಶ್ವರ‌್ಯವು ನಿರರ್ಥಕವೇ ಸರಿಯೆಂದು ತಮಗೆ ಸುತರಿಲ್ಲವೆಂದು ಪರಿತಪಿಸುತ್ತಾ ಕೊನೆಗೆ ದೈವದೊಲುಮೆಯಿಂದ ವರಸುತರನ್ನು ಪಡೆದು ಅವರ ಲಾಲನೆ ಪಾಲನೆಯಿಂದ ಸುಖಿಸುತ್ತಿರುವುದು ನಿಮಗೆ ತಿಳಿಯದೇ ಪ್ರಾಣನಾಯಕ-ಕ್ಷೋಣಿಪಾಲಕ॥

ದರುವು

ಚಂದ್ರನಂದದೀ, ಹೊಳೆವ ಪುತ್ರಿಯೂ॥
ಇಂದು ಯಮಗೆ ಇರಲು ನೀವೂ
ಸುಂದರಾಂಗನನ್ನು ನೋಡಿ
ಚಂದದಿಂದ ಪರಿಣಯವನು
ಇಂದು ನಡೆಸೋ ಪ್ರಾಣನಾಥ॥

ಜ್ವಾಲೆ: ಹೇ ನನ್ನ ದೊರೆಯೇ ಕಳಂಕವಿಲ್ಲದ ಚಂದ್ರನಂತೆಯೂ ಕಾಂತಿಗುಂದದ ಬೆಳ್ದಿಂಗಳಿನಂತೆಯೂ ದಿನಮಣಿಯ ಪ್ರಭಾವವಿರುವಾಗಲೇ ಅರಳಿ, ಕಾಂತಿಯಲ್ಲಿ ಸ್ವಲ್ಪವೂ ಕಡಿಮೆಯಾಗದ ಕನ್ನೈದಿಲೆಯಂತೆಯೂ ಅನವರತವೂ ಕುಗ್ಗದ ಅಪ್ರತಿಹತ ಸೌಂದರ್ಯರಾಶಿಯಂತೆ ಹೊಳೆಯುವಾ ಲೋಕೈಕ ಸುಂದರಳಾದ ಸುಪುತ್ರಿಯು ಹರನ ಕರುಣದಿಂದೆಮಗೆ ಇರಲೂ, ಆ ಸುಂದರಿಗೆ ತಕ್ಕ ಮಾರಸುಂದರನನ್ನು ಅಕ್ಕರೆಯಿಂದ ತಂದು ಪರಿಣಯವಂ ಮಾಡಲಿಲ್ಲವೆಂಬ ದುಗುಡವನ್ನು ತಾಳಿರುತ್ತೇನೆ. ಯನ್ನ ಮನದ ಚಿಂತೆಯನ್ನು ಕಳೆದು ಸಂತೋಷವನ್ನುಂಟು ಮಾಡೈ ಸ್ವಾಮಿ ಕರುಣಾಕರ ಪ್ರೇಮಿ॥

ದರುವು

ಶಾರದೇ ಪ್ರಿಯಾ, ಸೃಷ್ಠಿಕರ್ತನೂ॥
ನಿರುತ ತನ್ನ ಪೀಠವಾದ
ಸರಸಿಜಗಳ ನೋಯಿಸುವನೆಂ
ದರಿತು ಶಶಿಯ ಕಂದಿಸುತಲೀ
ಭರದಿ ಕುವರಿಗಿತ್ತ ರೂಪಾ॥

ಜ್ಞಾಲೆ: ಅರಿವರ್ಗಳ ಗುಂಪೆಂಬ ಕತ್ತಲೆಗೆ ಸೂರ‌್ಯಪ್ರಾಯವಾಗಿರುವ ಹೇ ಕಾಂತ! ಮನ್ಮಥನು ತ್ರಿಭುವನಗಳನ್ನು ಜಯಿಸಲು ನಮ್ಮ ಸುತೆಯ ನಗು ಮುಖವೇ ಸಾಕೆಂದು ತನ್ನ ಧನುಸ್ಸನ್ನು ಹೆದೆ ಬಿಚ್ಚಿದಂತೆ ಸ್ವಾಹಾದೇವಿಯ ಶರೀರವು ಕಂಗೊಳಿಸುತ್ತಿದೆಯಲ್ಲದೇ, ಸಚರಾಚರ ಪ್ರಾಣಿ ಜಾಲಂಗಳ ಸೃಷ್ಠಿಕರ್ತನೂ ಶಾರದೆಪತಿಯೂ ಚತುರ್ಮುಖನೂ ಆದ ಬ್ರಹ್ಮನು ತನ್ನ ಪೀಠವಾದ ಕಮಲವನ್ನು ಕಂದಿ ಬಾಡಿಸುವ ಚಂದ್ರನಿಗೆ ಅವಮಾನಪಡಿಸುವುದಕ್ಕಾಗಿ, ಆತನನ್ನು ನಶಿಸುವಂತೆ (ಕ್ಷಯಿಸುವಂತೆ) ಮಾಡಿ ಆ ಚಂದ್ರನ ಸೌಂದರ್ಯವೆಲ್ಲವನ್ನೂ ಈಕೆಯ ಮುಖಕ್ಕೆ ಕೊಟ್ಟಿರುವನೋ ಎನ್ನುವಂತೆ ರಾರಾಜಿಸುತ್ತಾ ಇಹಳೈ ಮನೋಹರಾ-ಆಶ್ರಿತ ಜನೋದ್ಧಾರ॥

ದರುವು

ಉಕ್ಕಿ ಪ್ರಾಯವೂ ನಮ್ಮ ಸ್ವಾಹಾದೇವಿಗೆ॥
ಸೊಕ್ಕು ಜವ್ವನದಿಂದ ಕೂಡಿ
ಮಿಕ್ಕ ತರುಣಿಯರನು ಮೀರ॥
ತಕ್ಕ ಸೊಬಗಿನಿಂದ ಮೆರೆದು
ಸಿಕ್ಕಿ ಸ್ಮರನ ಮೋಹದ ಬಲೆಗೆ॥

ಜ್ವಾಲೆ: ಹೇ ದೊರೆಯೇ! ನಮ್ಮ ಮಗುವಾದ ಸ್ವಾಹಾದೇವಿಗೆ ಕರಗಳೆಂಬ ಚಿಗರುಗಳಿಗೆ ಅರುಣತೆಯುಂಟಾಗಿರಲು, ನೇತ್ರಕಮಲಗಳಿಗೆ ಮನೋಹರತೆಯೂ ಮುಖಚಂದ್ರನಲ್ಲಿ ಶುಭ್ರತೆಯೂ, ಮೈಗೆ ತೊಡೆದಿರುವ ಚಂದನಾದಿಗಳಿಂದ ಕಮನೀಯತೆಯುಂಟಾಗಿ ಯೌವನೋದಯವೆಂಬ ವಸಂತಕಾಲವು ಪ್ರಾಪ್ತವಾಗಿರಲು, ಉಕ್ಕಿದ ಪ್ರಾಯ, ಸೊಕ್ಕು ಜವ್ವನದಿಂದ ಹೊಳೆಯುತ್ತಾ ಮಿಕ್ಕ ಸುಂದರಿಯರನ್ನು ಮೀರತಕ್ಕ ಸೌಂದರ್ಯದಿಂದ ಮೆರೆಯುತ್ತಾ, ಮನ್ಮಥನ ಸತಿ ರತಿದೇವಿಯನ್ನು ಧಿಕ್ಕರಿಸುತ್ತಾ ಕಾಮಾನಲಕ್ಕೆ ಸಿಕ್ಕಿ ತಪಿಸುತಿಹಳೈ ದೇವಾ-ಕರುಣಾ ಪ್ರಭಾವ॥

ದರುವು

ಧಾರುಣಿಯೊಳೂ ಹಿರಿದಾಗಿಮೆರೆಯುವಾ॥
ಹಿರಿಯ ಬಳ್ಳಾಪುರದ ಒಡೆಯ
ಗಿರಿಜೆಯರಸ ಸೋಮನಾಥ॥
ಕರುಣವಿಟ್ಟು ಸಲಹಲೆಂದು
ಎರಗಿ ಬೇಡಿಕೊಂಬೆ ರಮಣಾ ॥

ಜ್ವಾಲೆ: ಹೇ ಕಾಂತ! ಈ ವಸುಧೆಗೆ ಅತಿಶಯವಾದ ಹಿರಿಯ ಬಳ್ಳಾಪುರ ನಿವಾಸ ಅಸಮಾಕ್ಷ ಸೋಮೇಶನ ಕೃಪೆಯಿಂದ ವರರೂಪಳಾದ ನಮ್ಮ ಕನ್ಯೆಗೆ ತಕ್ಕ ಮಾರಸುಂದರನು ದಕ್ಕುವಂತಾಗಲೆಂದು ಮುಕ್ಕಣ್ಣನಿಗೆ ಎರಗಿ ಬೇಡುವೆನೈ ರಾಯ-ಯನ್ನ ಮನೋಪ್ರಿಯಾ॥

ದರುವು

ಇದಕೆ ದುಗುಡವೇಕೆ ಬಿಡು ಬಿಡು
ಪದುಮಾಕ್ಷಿಯೇ ಮನಕೇ ॥
ವಿಧ ವಿಧ ಕೇಳುವೆ ಮುದವನು ತೊರೆದು ನೀಯುತೇ
ಹೃದಯ ಚಿಂತೆ ಬಿಡು ಮದಗಜಯಾನೆಯೇ॥
ಇದಕೆ ದುಗುಡವೇಕೆ॥

ನೀಲಧ್ವಜ: ಕಸ್ತೂರಿಯ ಗಂಧದ ಶರೀರವುಳ್ಳ ಹೇ ರಮಣೀ ಇಷ್ಠು ಮಾತ್ರಕ್ಕೆ ವಿಶೇಷವಾದ ಯೋಚನೆಯ ತಾಪದಿಂದ ನಿನ್ನ ಮುಖವೆಂಬ ಚಂದ್ರನಲ್ಲಿ ನಗೆಯೆಂಬ ಬೆಳ್ದಿಂಗಳು ತೋರದೆ, ನಿಟ್ಟುಸಿರು ತುಟಿಗಳೆಂಬ ಚಿಗುರುಗಳನ್ನು ಬಾಡಿಸುತ್ತಿದೆ ಯಲೈ ನಾರಿ. ಹೇ ಚಂಚಲಾಕ್ಷಿ ಕತ್ತಲೆಯೊಳಗಿನ ನಕ್ಷತ್ರಗಳಂತೆ ನಿನ್ನ ಮುಡಿಯಲ್ಲಿ ಹೂವುಗಳು ಕಾಣದೆ ಅನುರಾಗವೆಂಬ ಸಮುದ್ರವು ಕ್ಷೀಣವಾಗುತ್ತಿದೆ. ಇನ್ನೂ ಈ ದುಗುಡವನ್ನು ಬಿಡು. ಹೇ ಕಾಂತೆ: ಮೃದು ಮಾತಿಲ್ಲದ ನಿನ್ನ ಮುಖವನ್ನು ನೋಡಿದರೆ ದುಂಬಿಗಳ ಝೇಂಕಾರವಿಲ್ಲದ ಕಮಲವನ್ನು ನೋಡಿದ ಹಾಗೆ ಇದೆಯಲ್ಲೇ ರಾಜೀವಲೋಚನೆ-ಬಿಡುಮನದ ಯೋಚನೆ.

ದರುವು

ಪುತ್ರಿಗೆ ಪರಿಣಯವಾ ಮಾಡಲು
ಹಿತದೊಳು ಯತ್ನಿಸುವಾ॥
ಧಾತ್ರಿಯ ಮೇಲಣ ಕ್ಷತ್ರಿಯ ನೃಪರನೂ
ಚಿತ್ರದಿ ಬರೆಸುತಾ ಪುತ್ರಿಗೆ ತೋರ್ಪೆನೂ॥

ನೀಲಧ್ವಜ: ಹೇ ಕೋಕಿಲ ಧ್ವನಿಯುಳ್ಳವಳೇ ಕಮಲದಂತಿರುವ ಕಣ್ಣುಗಳುಳ್ಳ, ಮುಗುಳ್ನಗೆಯಿಂದ ಕೂಡಿದ ಕೆಂಪಾದ ತುಟಿಗಳಿಂದಲೂ, ವಜ್ರಗಳಂತೆ ಹೊಳೆಯುತ್ತಿರುವ ಹಲ್ಲುಗಳಿಂದಲೂ, ನೀಳವಾದ ಕೈಗಳಿಂದಲೂ, ಪ್ರಕಾಶಮಾನವಾದ ಕೆನ್ನೆಗಳಿಂದಲೂ, ವಿಶಾಲವಾದ ವಕ್ಷಸ್ಥಳದಿಂದಲೂ, ಕೆಂದಾವರೆಯಂತಿರುವ ಕೈಗಳಿಂದಲೂ, ಬಾಳೆಯ ಗಿಡಗಳಂತಿರುವ ತೊಡೆಗಳಿಂದಲೂ ಬೆಡಗು ಬೀರುತ್ತಾ ಮದನ ಕಾಂತಿಯುಳ್ಳ ಚಪ್ಪನ್ನೈವತ್ತಾರು ದೇಶದ ರಾಜಕುಮಾರರ ಚಿತ್ರಪಟಗಳನ್ನು ಬರೆಯಿಸಿ ಯನ್ನ ಮುದ್ದುಕುವರಿಗೆ ತಂದು ತೋರಿಸುವೆನೇ ಕಾಂತೆ-ಬಿಡು ನಿನ್ನ ಚಿಂತೆ॥

ದರುವು

ಅನುಪಮ ಚಿತ್ರವನೂ ನೋಡುತಾ
ಮನದ ಸಂತೋಷವನೂ॥
ಅನುನಯದಿಂದಲೀ ತನುಜೆಯು ತೋರುವಾ
ವಿನುತ ವರನಿಗೇ ತಾನುರುತರ ಲಗ್ನವಾ॥

ನೀಲಧ್ವಜ: ಮಾರನರಗಿಣಿಯಂತೆ ತೋರುವ ಹೇ ಕಾಂತೆ ನಮ್ಮ ಸುತೆಯಳಾದ ಸ್ವಾಹಾದೇವಿಯು ಯಾವಾತನ ಭಾವಚಿತ್ರವನ್ನು ನೋಡಿ, ರವಿ ಶಶಿಯರನ್ನು ಕಂಡು ಅರಳುವ ಕಮಲ ಕುಮುದಗಳಂತೆ, ವಸಂತಾಗಮನವನ್ನರಿತು ಸ್ವರಗೈಯುವ ಕೋಗಿಲೆಗಳಂತೆ, ಮೇಘವನ್ನು ಕಂಡು ನಲಿಯುವ ಮಯೂರದಂತೆ ಮಕರಂದವನ್ನು ಕಂಡ ಮಧುಕರದಂತೆಯೂ, ಚಂದ್ರನನ್ನು ಹಾರೈಸುವ ಚಕೋರ ಪಕ್ಷಿಯಂತೆಯೂ, ತನ್ನ ಮನಸ್ಸಿನ ಸಂತೋಷವನ್ನು ವ್ಯಕ್ತಪಡಿಸಿ ಅನುರಕ್ತಳಾಗುವಳೋ ಆ ಮನ್ಮಥಾಕಾರನಾದ ಸುಂದರ ತರುಣನಿಗೆ ರತಿದೇವಿಯಂತೊಪ್ಪುವ ಯಮ್ಮ ಕುವರಿಯನ್ನು ಕೊಟ್ಟು ಪರಿಣಯವಂ ಮಾಡುವೆನು ಇಂದುವದನೇ ಬಿಡು ಮನದ ವೇದನೆ॥

ದರುವು

ಹಿರಿಬಳ್ಳಾಪುರದಾ ಒಡೆಯ ಗಿರಿಜೆಯರರಸನಾದ॥
ಹರ ಸೋಮೇಶನ ಕರುಣದಿ ಪುತ್ರಿಗೇ
ವರವನು ತಂದು ಪರಿಣಯ ಗೈಯುವೇ॥

ನೀಲಧ್ವಜ: ಹೇ ನಳಿನದಳಾಯತಾಕ್ಷಿಯೇ ಈ ಧರಣಿಗೆ ಹಿರಿದೆನಿಸುವ ಶ್ರೀ ಹಿರಿಯ ಬಳ್ಳಾಪುರವನ್ನು ಪ್ರೇಮದಿಂ ಪರಿಪಾಲಿಸುವ ಗಿರಿಜಾತೆ ಪ್ರಾಣನಾಥನಾದ ಶ್ರೀ ಸೋಮೇಶನ ಕರುಣ ಕಟಾಕ್ಷದಿಂದ ನಮ್ಮ ತನುಜೆಗೆ ಅನುರೂಪನಾದ ವರನನ್ನು ತಂದು ಹರಿಸುರರು ಮೆಚ್ಚುವಂತೆ ಪರಿಣಯವೆಸಗುವೆನು. ಇನ್ನು ನಿನ್ನ ಮನದ ದುಗುಡವನ್ನು ಬಿಡುವಂಥವಳಾಗೆ ನಾರೀ ಪೇಳುತ್ತಿರುವೆನು ಸಾರಿ

ಕಂದ

ದೊರೆಯೇ ನಿಮ್ಮಯ ನುಡಿಯು ನಿಜವೆಂ
ದರಿತು ಹರುಷವ ತಾಳಿ ಮನಕೇ
ಎರಗಿ ನಮಿಸುವೆ ಸೋಮನಾಥನ ಚರಣ ಸರಸಿಜಕೆ
ಭರದಿ ಕಾರ‌್ಯವನುಜ್ಜಗಿಸು ನೀ
ತರಿಸು ಸುರನರ ನಾಗಲೋಕದ
ಪುರುಷ ಶ್ರೇಷ್ಠರ ಭಾವಚಿತ್ರವ ಬರೆಸಿ ಪಟದೊಳಗೇ॥

ಜ್ವಾಲೆ: ಹೇ ಪ್ರಾಣನಾಥ॥ನೀವು ಹೇಳುತ್ತಿರುವ ಮಾತಿನಿಂದ ಯನ್ನ ಮನಕ್ಕೆ ಹರುಷವಾಗಿ ಅದು ದಿಟವಾಗಲೆಂದು ಶ್ರೀ ಸೋಮನಾಥನನ್ನು ಯನ್ನ ಹೃತ್ಕಮಲದೊಳು ಧ್ಯಾನಿಸುತ್ತಿರುವೆನಾದ ಕಾರಣ, ಮೂರು ಲೋಕದಲ್ಲಿರುವ ಪುರುಷ ಶ್ರೇಷ್ಠರ ಭಾವ ಚಿತ್ರಗಳನ್ನು ಪಟದ ಮೇಲೆ ರೂಪಿಸಿ ಸುತೆಗೆ ತಂದು ತೋರಿಸುವ ಕಾರ‌್ಯದಲ್ಲಿ ಭರದಿಂದ ನಿರತರಾಗಬೇಕು ದೊರೆಯೇ-ಯನ್ನ ಮನದ ಸಿರಿಯೇ॥