ಭಾಗವತರ ಕಂದಕೇದಾರಗೌಳ

ಕೇರಿ ಕೇರಿಯ ಬೀದಿಗಳ ಪ
ನ್ನೀರ ಚಳೆಯದ ಕಳಸ ಕನ್ನಡಿ
ತೋರಣದ ಸೂಸಕದ ಮುತ್ತಿನ ಮಕರ ತೋರಣದ॥
ಓರಣದ ಹೊಂಗೆಲಸದಖಿಳಾ
ಗಾರ ಪಂಕ್ತಿಯ ಸೋಮವೀಧಿಯ
ಸೂರ ವೀಧಿಯ ರಚನೆಯಲಿ ರಚಿಸಿದರು ಪಟ್ಟಣವಾ॥

ಭಾಗವತರು: ಕೇಳಿದರೇನಯ್ಯ ಭಾಗವತರೇ, ಈ ಪ್ರಕಾರವಾಗಿ ಪುರ ಶೃಂಗಾರವಂ ಗೈಯುತ್ತಿರಲೂ ಅದಂ ನೋಡಿ ರಾಜಸುತೆಯಾದ ಸ್ವಾಹಾದೇವಿಯು ಆಶ್ಚರ್ಯಚಕಿತಳಾಗಿ ತನ್ನ ಸಖಿಯೊಡನೆ ಇಂತೆಂದಳೈಯ್ಯ ಭಾಗವತರೆ.

 

(ಸ್ವಾಹಾದೇವಿ ಬರುವಿಕೆ)

ದ್ವಿಪದೆಕಾಂಬೋಧಿರಾಗ

ಶ್ರೀಧರಣಿದೇವಿಯ ರಮಣ ಶ್ರೀನಿವಾಸನನೂ
ಶ್ರೀ ದಂತಿ ಗಮನೆಯು ಮನದಿ ನೆನೆಯುತ ತಾನೂ॥
ಶೋಧಿಸಿದ ಪನ್ನೀರ ಮುಖಮಜ್ಜನವ ಮಾಡುತಲೀ
ಸಾದರದಿ ಸೀರೆಯನು ಸಡಗರದಿಂದುಡತಲೀ॥
ರಂಗುಳ್ಳ ಕಂಚುಕವ ಸಾನಂದದಿಂ ತೊಟ್ಟೂ
ಅಂಗನೆಯು ಕುರುಳ ಬಾಚಿ, ತುರುಬನಳವಟ್ಟೂ॥
ಸುರಗಿ ಬಕುಳ ಮಂದಾರ ಪುಷ್ಪಂಗಳಿಂ ನಲಿದೂ
ಕರವೀರ ಮಾಲತಿ ಮಲ್ಲಿಕಾದಿಗಳ ಮುಡಿದೂ॥
ಫಣಿಗೆ ಕಸ್ತೂರಿ ತಿಲಕ ವಿನಯದಿಂದಿಟ್ಟೂ
ಕರ್ಣದಲಿ ಭೂಷಣವ ಚಂದದಿಂದಲಿ ಇಟ್ಟೂ॥
ಇಟ್ಟ ಮೂಗುತಿ ಬೊಟ್ಟು ಕಮಲಮುಖಿ ತಾನಿಟ್ಟೂ
ದಿಟ್ಟ ಸರಪಣಿಗೆಜ್ಜೆ, ಕಾಲ ಅಂದಿಗೆಯಿಟ್ಟೂ॥
ಚೌಲಿ ಬಾವುಲಿ ಬುಗುಡಿ ರೇಘಟಿಯನಿಟ್ಟೂ
ಥಳಥಳಿಪ ಓಲೆ ಒಡ್ಯಾಣಗಳಳವಟ್ಟೂ॥
ನೀಲಧ್ವಜನ ಸುತೆ ಸ್ವಾಹಾದೇವಿ ತಾ ಬಂದೂ
ಲಲನೆಯು ಸಿಂಗರಿಸಿ ಬೇಗ ತೆರೆಯೊಳು ನಿಂದೂ॥
ಹಿರಿಯ ಬಳ್ಳಾಪುರವಾಸ ಶ್ರೀ ಸೋಮನಾಥನಾ
ಪರಮ ಹರುಷದಿ ನೆನೆದು ಇಂತೆಂದಳಾಗಾ॥

ತೆರೆದರುವು

ವನಜಾಕ್ಷೀ ತೋರಿಸೇ ಯನ್ನ ಜನಕನಾ
ಯನ್ನ ಜನಕನಾ ಈ ಭೂಮಿ ಪಾಲಕನಾ॥
ವನಜ ಗಂಧಿಯೇ ನೀ ಜನಕನ ತೋರಿಸೆ
ಅನುನಯದೊಳು ಯನ್ನ ಪದಕವೀವೆ॥

ಸ್ವಾಹಾದೇವಿ: ಅಪ್ಪಾ ಸಾರಥೀ ಹೀಗೆ ಬಾ ಯನ್ನನ್ನು ನಯವಿನಯ ಭಯ ಭಕ್ತಿಗಳಿಂದ ಕರಕಂಜಾತವಂ ಮುಗಿದು ಧಾವ ದೇಶದ ರಾಜಕುಮಾರಿಯೆಂದು ಕೇಳುತ್ತಿರುವೆ. ಆದರೆ ಯಮ್ಮ ವಿದ್ಯಮಾನವನ್ನು ಪೇಳುತ್ತೇನೆ ಕೇಳಪ್ಪಾ ಚಾರ ಸರಸಗುಣ ವಿಚಾರ॥

ಈ ಧರಾಮಂಡಲದೋಳ್ ಶ್ರೇಷ್ಠವಾದ ಗೌಳ, ಚೋಳ, ಕೇರಳ ಬರ್ಬರ ಸಾವೀರ, ಕಾಶ್ಮೀರ ಭೋಟ ವರಾಳ ಆಂಧ್ರ ದೇಶಗಳಿಗಿಂತ ಅಧಿಕವಾಗಿ ಭೂರಮಣಿಯ ಸಿಂಧೂರಾಲಂಕೃತವಾದಂತೆ ಕಂಗೊಳಿಸುತ್ತಿರುವ ಮಾಹಿಷ್ಮತೀ ಪುರವನ್ನು ಭೂಕಾಂತೆಗೆ ಸಂತೋಷವೂ, ಶತೃರಾಜರಿಗೆ ಸಂತಾಪವೂ, ಲಕ್ಷ್ಮಿಗೆ ಆನಂದವೂ ಬ್ರಾಹ್ಮಣ ಶ್ರೇಷ್ಠರ ದಾರಿದ್ರಕ್ಕೆ ವಿಚ್ಛಿತ್ತಿಯೂ, ಶರಣರಿಗೆ ಸಂಮೋದವೂ ಉಂಟಾಗುವಂತೆ ಬಹು ವೈಭವದಿಂದ ಪರಿಪಾಲಿಸುತ್ತಿರುವ ಅರಸು ಧಾರೆಂದು ಕೇಳಿಬಲ್ಲೆ?

ಸಾರಥಿ: ನೀಲಧ್ವಜ ಭೂಪಾಲರೆಂದು ಕೇಳಿಬಲ್ಲೆವಮ್ಮಾ ತಾಯೇ ಹಿಮಾಂಶು ಮುಖಚ್ಛಾಯೇ॥

ಸ್ವಾಹಾದೇವಿ: ಅಂಥಾ ನೀಲಧ್ವಜ ಭೂಪಾಲರ ಧರ್ಮಪತ್ನಿ ನಾರಿ ಶಿರೋಮಣಿ ಜ್ವಾಲಾದೇವಿಯವರ ಗರ್ಭಾಂಬುಧಿಯೋಳ್, ಕಮಲವು ಹಂಸವನ್ನೂ, ಕನ್ನೈದಿಲೆಯು ಸುಗಂಧವನ್ನು, ಸತ್ಕಾವ್ಯವು ಯಶಸ್ಸನ್ನೂ ಚಂದ್ರಕಾಂತ ಶಿಲೆಯು ಬೆಳದಿಂಗಳನ್ನೂ ಪಡೆಯುವಂತೆ, ಉದ್ಭವಿಸಿದ ನೀರಜನೇತ್ರೆ ಕೋಮಲಗಾತ್ರೆ, ಸ್ವಾಹಾದೇವಿಯೆಂಬ ನಾಮಾಂಕಿತವಲ್ಲವೇನಪ್ಪಾ ಸಾರಥೀ ಚಮತ್ಕಾರಮತಿ॥

ಅನೇಕ ರಾಮಣೀಯಕಗಳಿಂದ ಕೂಡಿ ರಂಜಿಸುತ್ತಾ ಆನಂದದಾಯಕವಾಗಿರುವ ಈ ಸಭಾಸ್ಥಾನಕ್ಕೆ ಇಂದು ನಾನು ಚಂದದಿಂದ ಬಂದ ಕಾರಣವೇನೆಂದರೆ ಯನ್ನ ಮುದ್ದು ಸಖಿಯಾದ ಮಾಲಿನಿಯನ್ನು ಕಾಣುವ ಉದ್ದಿಶ್ಯ ಬಾಹೋಣವಾಯ್ತು. ಜಾಗ್ರತೆ ಕರೆಸಪ್ಪಾ ಚಾರ ನಿನ್ನ ಕೊರಳಿಗೆ ಪುಷ್ಪಾಹಾರ॥

 

(ಮಾಲಿನಿಯೆಂಬ ಸಖಿ ಬರುವಿಕೆ)

ಮಾಲಿನಿ: ಅಪ್ಪಾ ಚಾರ ಹೀಗೆ ಬಾ ಮತ್ತೂ ಹೀಗೆ ಬಾ. ಈಗ ಬಂದವರು ಧಾರೆಂದು ಕೇಳುವ ಚಾರ ನೀ ಧಾರು? ನಿನ್ನ ಮಾತಾ ಪಿತೃಗಳು ಪ್ರೀತಿಯಿಂದ ಕರೆಯುವ ನಾಮಧೇಯವೇನು? ಹಸನಾಗಿ ಯನ್ನೊಳು ಉಸುರಪ್ಪಾ ಚಾರ ಸರಸಗುಣ ಗಂಭೀರ॥

ಅಪ್ಪಾ ಸಾರಥೀ ಈ ಪೊಡವಿಯೋಳ್ ಸಡಗರದಿಂದೊಪ್ಪುವ ಪುರ ಮಾಹಿಷ್ಮತೀ ಪಟ್ಟಣವನ್ನು ಬಹುನಿಷ್ಠೆಯಿಂದ ಪಾಲಿಸುವ ನೀಲಧ್ವಜ ಭೂಪಾಲರ ಮೋಹದ ಸುತೆ, ಚಾರುಚರಿತೆ, ಸಕಲಗುಣಯುತೆ ಸೌಂದರ್ಯ ಶೋಭಿತೆ ಸಲ್ಲಲಿತೆ ಸ್ವಾಹಾದೇವಿಯವರ ಸೇವೆಯಲ್ಲಿ ನಿರತಳಾಗಿ ದಾಸಿಯರೋಳ್ ಶ್ರೇಷ್ಠಳಾದ ಮಾಲಿನಿಯೆಂಬ ನಾಮಾಂಕಿತವನ್ನು ಕೇಳಲರಿಯೆಯೇನಪ್ಪಾ ಸಾರಥಿ ಸಕಲ
ಸಂಧಾನಮತಿ॥

ಈ ಅಂದವಾದ ಸಭಾಸ್ಥಾನಕ್ಕೆ ನಾ ಬಂದ ಕಾರಣವೇನೆಂದರೆ ನಮ್ಮ ಅಮ್ಮಾಜಿಯವರು ಕರೆಸಿದ ಕಾರಣ ಬಾಹೋಣವಾಯ್ತು. ಧಾವಲ್ಲಿರುವರೋ ತೋರಿಸಪ್ಪಾ ಸಾರಥೀ॥

ಶಿರಸಾಷ್ಠಾಂಗ ಬಿನ್ನಪಂಗಳಮ್ಮಾ ತಾಯೇ ಬಾಲಾರ್ಕ ಛಾಯೇ॥

ಸ್ವಾಹಾದೇವಿ: ಸೌಮಂಗಲ್ಯಾಭಿವೃದ್ಧಿರಸ್ತು ಬಾರಮ್ಮಾ ಮಾಲಿನಿ ಸರೋಜಗಂಧಿನಿ॥

ಮಾಲಿನಿ: ಅಮ್ಮಾ ತಾಯೇ, ಇಷ್ಟು ಕಾತುರತೆಯಿಂದ ಯನ್ನನ್ನು ಕರೆಸಲು ಕಾರಣವೇನಮ್ಮಾ ಜನನಿ ಅಂಬುಜವರ್ನನಿ॥

ದರುವು

ನಗರ ರಚನೆ ಗೈವರೇಕೇ ನಾಗವೇಣಿಯೇ
ಬಗೆಯ ಪೇಳೆ ಮುದದಿ ಯನಗೆ ಸೊಗಸುಗಾತಿಯೇ॥

ಸ್ವಾಹಾದೇವಿ: ಮಾರನರಗಿಳಿಯಂತೊಪ್ಪುವ ಹೇ ಸಖಿಯೇ ನಮ್ಮ ಈ ಮಾಹಿಷ್ಮತೀಪುರವನ್ನು ಅತಿ ಮನೋಹರವಾಗಿ ಶೃಂಗಾರ ರಚನೆ ಮಾಡುತ್ತಿರುವುದು ನೋಡಿದರೇ ಯನ್ನ ಮನಸ್ಸಿಗೆ ಬಹಳ ಆಶ್ಚರ್ಯವಾಗಿ ಕಾಣುತ್ತಾ ಇದೆ. ಇದರ ಪರಿಯಾಯವನ್ನು ತಿಳಿದು ಹೇಳಮ್ಮಾ ಸಖಿಯೇ-ವರಚಂದ್ರ ಮುಖಿಯೇ.

ದರುವು

ಸುರಪಲೋಕಾದಂತೆ ಪುರವು ತೋರುತಿರ್ಪುದೂ
ಭೂರಿ ವಿಭವ ದಿಂದ ಎಸೆದೂ ಮೆರೆಯುತಿರ್ಪುದೂ॥

ಸ್ವಾಹಾದೇವಿ: ಸರಸೀರುಹಾಂಬಕಿಯಾದ ಹೇ ಸಖಿಯೇ! ಅನೇಕ ರಾಮಣೀಯತೆಗಳಿಂದ ಕೂಡಿ ರಂಜಿಸುತ್ತಾ ಅತಿಶಯವಾದ ಅಲಂಕಾರಗಳಿಂದ ಅತಿ ಶೋಭಾಯಮಾನವಾಗಿ ಪದ್ಮರಾಗ ಮಣಿಗಳಿಂದ ಸಂಕಲಿತವಾದ ಚಿತ್ರ ವಿಚಿತ್ರವಾದ ಸ್ತಂಭಗಳಿಂದ ಕೂಡಿ ಸಕಲಜನ ಮನೋರಂಜಕವಾಗಿ ಮೆರೆಯುತ್ತಿರುವ ಈ ಪಟ್ಟಣವು ವೃತ್ರಾಸುರ ಸಂಹಾರಕನೂ ಕುಲಪರ್ವತಾರಿಯೂ ಆದ ದೇವೇಂದ್ರನ ಅಮರಾವತಿ ನಗರದಂತೆ ತೋರುತ್ತಾ ಇದೆಯಮ್ಮಾ ಸಖಿಯೇ ನೀರಜಾಂಬಕಿಯೇ॥

ದರುವು

ಮುತ್ತುರತ್ನ ವಜ್ರದಿಂದಾ ಕೆತ್ತಿ ಇರುವುದೂ
ಬಿತ್ತರೀಸಲೂ ಆದಿಶೇಷಗೆ ಅತಿಶಯವಾಗಿಹುದೂ॥ನಗರ॥

ಸ್ವಾಹಾದೇವಿ: ಹೇ ಸಖಿಯೇ ರಾಜವೀಧಿಗಳು ಹೂವಿನ ದಂಡೆಗಳಿಂದ ಘಮಘಮಿಸುತ್ತಾ, ಹವಳದ ಗೊಂಚಲಿನ ಸಾಲುಗಳಿಂದಲೂ, ಚಿತ್ರಿತ ಬಂಗಾರದ ಪತಾಕೆಗಳಿಂದಲೂ ಬಹುರಮ್ಯವಾಗಿ, ಥಳಥಳನೆ ಹೊಳೆಯುತ್ತಿರುವ ಜಾಲರಿಗಳಿಂದಲೂ, ಮುತ್ತು ಮಾಣಿಕ್ಯ ಮಕರ ತೋರಣಗಳಿಂದಲೂ ಅತಿ ಚಮತ್ಕಾರವಾಗಿ ಚಿತ್ರಿಸಿರುವ ಪುತ್ಥಳಿ ಗೊಂಬೆಗಳಿಂದಲೂ ಪ್ರಕಾಶಿಸುತ್ತಾ ನಿಬಿಡವಾದ ಮದನ ಗೃಹಗಳಿಂದ ರಾರಾಜಿಸುತ್ತಾ, ನೋಡುವರ ಕಣ್ಣುಗಳಿಗೆ ಕುತೂಹಲವನ್ನು, ಭೂಮಿಗೆ ಆಶ್ಚರ್ಯವನ್ನುಂಟು ಮಾಡುತ್ತಾ, ಸಹಸ್ರ ನಾಲಿಗೆಯುಳ್ಳ ಆದಿಶೇಷನಿಗೂ ವರ್ಣಿಸಲು ಅಸಾಧ್ಯವಾದ ಶೃಂಗಾರ ರಚನೆಯುಳ್ಳದ್ದಾಗಿದೆಯಮ್ಮಾ ಸಖಿಯೇ ಸರಸಿಜಮುಖಿಯೇ॥

ದರುವು

ಧರಣಿಗಧಿಕಾ ಹಿರಿಯ ಬಳ್ಳಾ ಪುರದ ಒಡೆಯನು
ಮಾರಹರನಾ ಚರಣದಿಂದ ಅರುಹು ನೀನಿನ್ನೂ॥

ಸ್ವಾಹಾದೇವಿ: ಹೇ ನಾಗವೇಣಿಯೇಈ ಭೂತಳಕಧಿಕವೆನಿಸಿ ಮೆರೆಯುವ ಶ್ರೀಹರಿಯ ಬಳ್ಳಾಪುರವನ್ನು ಪ್ರೀತಿಯಿಂದ ಪರಿಪಾಲಿಸುವ ಶ್ರೀ ಸೋಮೇಶ್ವರನ ಚರಣ ನೀರಜಗಳಾಣೆಗೂ ಪುರ ಶೃಂಗಾರ ರಚನೆಯ ಪರಿಯಾಯವನ್ನು ಮಾಜದೆ ಯನ್ನೊಳು ಬಿತ್ತರಿಸುವಂಥವಳಾಗೇ ಸಖಿಯೇ ಕಮಲಪತ್ರ ಮುಖಿಯೇ॥

ದರುವು

ಸ್ವಾಹಾದೇವೀ ಪೇಳುವೆನಮ್ಮಾ ಬಹಿರಂಗವಾಗಿ
ಸಹಜ ಸೊಬಗೂ ಕಾಣುತಿಹುದಮ್ಮಾ॥

ಮಾಲಿನಿ: ಅಮ್ಮಾ ತಾಯೇ! ಸೂರ‌್ಯನಿಂದ ವಿಸ್ತತವಾದ ಕಮಲವು ಭ್ರಮರಗಳಿಂದಲೂ ಮಧುರದಿಂದಲೂ ಉಪಶೋಭಿತವಾಗಿರುವಂತೆ ವಿಶಾಲವಾದ ಮನೋಹರವಾದ ಪದ್ಮರಾಗಮಣಿಗಳ ಸಮೂಹಗಳಿಂದ ಶೋಭಿಸುತ್ತಾ, ಮುತ್ತುಗಳ ಮೇಲ್ಕಟ್ಟಿನಿಂದ ಥಳಥಳಿಸುತ್ತಾ, ಕೈಲಾಸ ಪರ್ವತವು ಶಿವನ ಪ್ರಭಾವಕ್ಕೆ ಆಸರೆಯಾಗಿದ್ದರೂ ಮನ್ಮಥನ ಹಾವಭಾವ ವಿಲಾಸಗಳಿಗೆ ಆಸರೆಯೆಂಬುದನ್ನು ಸೃಷ್ಠೀಕರಿಸುತ್ತಾ ಸಹಜ ಸುಂದರವಾಗಿ ಕಂಗೊಳಿಸುತ್ತಿರುವ ನಮ್ಮ ಈ ಪುರ ರಚನೆಯ ಪರಿಯಾಯವನ್ನು ಬಿತ್ತರಿಸುವೆನಮ್ಮ ತಾಯೇ-ಹಿಮಾಂಶು ಮುಖಛಾಯೇ॥

ದರುವು

ಮಹಿಯೊಳಗೇ ಶ್ರೇಷ್ಠರಾಗಿರುವಾ
ಮಹಾಪುರುಷರುಗಳ
ರೂಹು ಚಿತ್ರ ಬರೆಯಿಸೀ ಇರುವಾ॥

ಮಾಲಿನಿ: ನಿಜನಯನಗಳ ಕಾಂತಿಯು ಮನ್ಮಥನ ಬಾಣವನ್ನೂ, ಮುಖವು ಚಂದ್ರನನ್ನೂ ಪಾದಗಳು ಆಗತಾನೆ ಅರಳುತ್ತಿರುವ ಚಿಗುರುಗಳನ್ನು ಧಿಕ್ಕರಿಸಿ ಪ್ರಕಾಶಿಸುತ್ತಿರುವ ಹೇ ತಾಯೇ! ನಿಮ್ಮ ಜನಕನು ಈ ಮೂರು ಲೋಕದಲ್ಲಿ ಪ್ರಸಿದ್ಧರಾಗಿ ಕಾಂತಿಯಲ್ಲಿ ಮನ್ಮಥನಂತೆಯೂ ಬಲದಲ್ಲಿ ಹಲಧರನಂತೆಯೂ ಶೌರ‌್ಯದಲ್ಲಿ ಕುಮಾರನನ್ನೂ ಸರಿದೂಗುವ ಪುರುಷ ಶ್ರೇಷ್ಠರಾದವರ ಭಾವ ಚಿತ್ರಗಳನ್ನು ಪಟದ ಮೇಲೆ ಅಂದವಾಗಿ ಬರೆಯಿಸಿರುವರಂತಮ್ಮಾ ತಾಯೇ ನೀವಿದನರಿಯೇ॥

ದರುವು

ವಜನನೇತ್ರೇ, ನಿಮಗೆ ಒಪ್ಪಿರುವಾ
ಅನುರೂಪ ವರಗೇ
ವಿನಯದಿಂದಾ, ಕೊಟ್ಟು ಪರಿಣಯವಾ॥

ಮಾಲಿನಿ: ಮೀನಕೇತನನು ಕಳಶ ಪೂಜೆಯನ್ನು ಮಾಡಿದ ಪುಷ್ಪಗಳಂತೆ ಸ್ತನ ಮಧ್ಯದಲ್ಲಿ ಮುಕ್ತಾಹಾರದಿಂದ ರಾರಾಜಿಸುತ್ತಿರುವ ಅಮ್ಮಾ ಸ್ವಾಹಾದೇವಿಯೇ! ಇಂತಪ್ಪ ಸುಂದರವಾದ ರೂಹು ಚಿತ್ರಗಳನ್ನು ತಮ್ಮ ಅಂದವಾದ ಕಮಲನಯನಗಳಿಂದ ವೀಕ್ಷಿಸಿ, ಮಧುವನ್ನು ಕಂಡ ಭ್ರಮರದಂತೆಯೂ ದಿನಕರನನ್ನು ಕಂಡ ಬಿಸಜದಂತೆಯೂ, ಯಾವ ಚಿತ್ರದಲ್ಲಿ ತಮ್ಮ ಅನುರಾಗವನ್ನು ವ್ಯಕ್ತಪಡಿಸುವಿರೋ ಆ ಸುಂದರ ಪುರುಷನಿಗೆ ನಿಮ್ಮನ್ನು ಕೊಟ್ಟು ಪರಿಣಯವಂ ಬೆಳೆಸುವರಂತಮ್ಮಾ ತಾಯೇ ಕರುಣದಿಂ ಕಾಯೇ॥

ದರುವು

ಹಿರಿಯ ಬಳ್ಳಾ,ಪುರದ ಶಂಕರನಾ
ವರ ದಯದೀ ಪೇಳ್ದೆ
ಪುರದ ರಚನೇ ಗೈಯ್ಯುತಿರುವುದನಾ॥

ಮಾಲಿನಿ: ಬಾಲ ಸೂರ್ಯನ ಕಾಂತಿಯು ಬಿದ್ದ ಕಮಲದ ಹಾಗೆ ಕುಂಕುಮ ಕೇಸರಿಯ ಕರ್ದಮವನ್ನು ಲೇಪಿಸಿಕೊಂಡು ಬಂಗಾರದ ಪ್ರತಿಮೆಯನ್ನು ಅಣಕಿಸುವಂತೆ ಪ್ರಕಾಶಿಸುವ ಹೇ ತಾಯೇ! ತಮಗೆ ಯೌವನಾಂಕುರವಾದುದನ್ನು ಅರಿತ ಜನನೀ ಜನಕರು ನಿಮಗೆ ವೈವಾಹವಂ ಬೆಳೆಸುವ ಪ್ರಯುಕ್ತ ಪುರಶೃಂಗಾರವನ್ನು ರಚಿಸುತ್ತಿರುವ ಪರಿಯನ್ನು ಯನಗೆ ತಿಳಿದಂತೆ ವಿವರಿಸುತ್ತೇನೆ. ಇನ್ನು ಈ ಧರಣಿಗೆ ಹಿರಿದಾಗಿ ಮೆರೆಯುವ ಹಿರಿಯ ಬಳ್ಳಾಪುರ ವರದ ಶ್ರೀ ಸೊಮೇಶ್ವರನ ಕರುಣ ಕಟಾಕ್ಷವು ಎಂತಿರುವುದೋ ತಾಯೇ ಮತ್ತೊಂದ ನಾನರಿಯೇ॥

ದರುವು

ಸರಸಿಜಮುಖಿ ನೀ ವರೆದ ವಚನ ಕೇಳಿ
ಹರುಷವು ಯನಗೀಗಾ ಬೇಗಾ.
ಸರಸಿಯು ಚಂದ್ರನ ಕಿರಣದಿ ಉಕ್ಕುವಾ
ತೆರದಿ ಯನ್ನ ಮನವೂ ತನುವೂ॥

ಸ್ವಾಹಾದೇವಿ: ಕೋಕಿಲಗಾನೆಯಾದ ಮಾಲಿನಿಯೇ ಕೇಳು! ಪುರ ಶೃಂಗಾರ ರಚನೆಯ ಕಾರಣವನ್ನು ನಿನ್ನ ಮುಖಾಂತರ ತಿಳಿದು ಯನ್ನ ಮನವು ಕುಮುದ ಬಾಂಧವನಿಂದ ಶರಧಿಯು ಹೇಗೆ ಉಕ್ಕುವುದೋ ಕುಮುದಕ್ಕೆ ಚಂದ್ರನಿಂದ ಹೇಗೆ ಸಂತೋಷವು ಅಧಿಕವಾಗುವುದೋ ಆ ತೆರನಾಗಿ ಸಂತೋಷಾಧಿಕ್ಯವಾಗಿ  ಹರ್ಷಾಬ್ಧಿಯಲ್ಲಿ ತೇಲಾಡುತ್ತಿದೆಯಮ್ಮಾ ಸಖಿಯೇ ವಾರಿಜಾಂಬಕಿಯೇ॥

ದರುವು

ಸ್ಮರ ವರ ಬಾಧೆಯ ಪರಿಹರಿಸುವ ಕಾಲ
ನೀರೆ ಯನಗೆ ಬಂತೂ ಸಂತೂ॥
ವರಸಾಮ್ಯ ದೊರೆಯಲು ಹರುಷದಿ ನಮಿಸುವೆ
ಗಿರಿಜೇ ಪ್ರಿಯ ಶಿವನಾ ಹರನಾ॥

ಸ್ವಾಹಾದೇವಿ: ಮೃದುಲತೆಯಂತೆ ಮನೋಹರವಾದ ಶರೀರವುಳ್ಳ ಹೇ ಸಖಿಯೇ ಯನ್ನಯ ಮುಖ, ನೇತ್ರ, ಚರಣ ಹಸ್ತ ಮಂದಹಾಸಗಳ ಕಾಂತಿಗೆ ಸೋತಿರುವ ಕಮಲ, ಕುಮುದ, ಆಮ್ರಪಲ್ಲವ, ಅಶೋಕ, ಮಲ್ಲಿಗೆಗಳೆಂಬ ಪಂಚ ಬಾಣಗಳ ಸಮೂಹವು ಯನ್ನ ಮೇಲೆ ಹಗೆತನವನ್ನೆಣಿಸಿ ಮನ್ಮಥನ ಬತ್ತಳಿಕೆಯನ್ನು ಸೇರಿ ಅವುಗಳ ಪ್ರಯೋಗದಿಂದ ಮನಸಿಜನು ಯನ್ನ ಹೃದಯದಲ್ಲಿ ಕಾಮಾನಲವನ್ನುಂಟು ಮಾಡಿ ಬಾಧಿಸುತ್ತಿರುವ ಈ ವೇಳೆಯಲ್ಲಿ ಅದನ್ನು ಪರಿಹರಿಸುವಂಥ ಕಾಲವು ಒದಗಿದ್ದರಿಂದ ಯನ್ನ ಅನುರಾಗಕ್ಕೆ ಅನುಮೋದಿಸುವ ಅನುರೂಪನು ಇನಿಯನಾಗಿ ದೊರೆತಿದ್ದೇ ಆದರೇ ಕಂತುವೈರಿಯಾದ ಗಿರಿಜಾ ಕಾಂತನಿಗೆ ವಂದಿಸುವೆನಮ್ಮಾ ಮಾಲಿನೀ- ಕುಸುಮ ಗಂಧಿನಿ॥

ಮಾಲಿನಿ: ದುಂಬಿಗಳಂತೆ ಕೃಷ್ಣವರ್ಣವನ್ನೈದಿದ ಕೇಶರಾಶಿಯುಳ್ಳ ಅಮ್ಮಾ ಸ್ವಾಹಾದೇವಿಯೇ! ರಾಜೇಂದ್ರರು ಈ ವಿಷಯವನ್ನು ನಿಮಗೆ ಅರುಹಿ ನಿಮ್ಮ ಮನೋಭಿಪ್ರಾಯವನ್ನು ತಿಳಿಯಲು ಬರುತ್ತಾ ಇದ್ದ ಹಾಗೆ ಕಾಣುತ್ತಾ ಇರುವುದು. ಇನ್ನು ನಾನು ಪೋಗಿ ಬರುವೆನಮ್ಮಾ ತಾಯೇಹಿಮಾಂಶು ಮುಖಛಾಯೇ॥ಅಪ್ಪಣೆಯನ್ನೀಯೇ॥

(ಸುತೆಯ ಬಳಿಗೆ ಪಿತನು ಬರುವಿಕೆ)

ಸ್ವಾಹಾದೇವಿ: ಶಿರಸಾಷ್ಠಾಂಗ ನಮಸ್ಕಾರಂಗಳೈ ಜನಕಾ ನೃಪ ಕುಲತಿಲಕಾ॥

ನೀಲಧ್ವಜ: ಶುಭಮಸ್ತು ಶೀಘ್ರದಿಂ ಬಾರಮ್ಮಾ ಸ್ವಾಹಾ ಸುಮಂಗಲೀ ಭವ॥

ದರುವು

ಚಂದಿರಾನನೆ ಸ್ವಾಹಾದೇವಿ ಇಂದು ಪೇಳ್ವೆನೂ
ಚಂದದಿಂದಾ ಲಾಲಿಸೆನ್ನಾ ಒಂದು ಮಾತನೂ॥ಚಂದಿರಾನನೆ॥

ನೀಲಧ್ವಜ: ಚಂದ್ರನಂತೆ ಮುಖ ಕಮಲವುಳ್ಳ ಹೇ ತನುಜೆಯಾದ ಸ್ವಾಹಾದೇವಿಯೇ ಪ್ರೀತಿಯಿಂದ ಪೇಳುವ ತಂದೆಯ ಮಾತನ್ನು ಲಾಲಿಸುವಂಥವಳಾಗಮ್ಮಾ ಪುತ್ರಿ ಚಾರು ಚರಿತ್ರೀ॥

ದರುವು

ಮೂರು ಲೋಕದಿ ಶ್ರೇಷ್ಠರಾದ ಪುರುಷ ವರ್ಗವನೂ
ಬರೆಸೀ ಚಿತ್ರದೀ ಅಂದದಿಂದ ತರಿಸಿ ಇರುವೆನೂ॥ಚಂದಿರಾನನೇ॥

ನೀಲಧ್ವಜ: ರೂಪಿನಲ್ಲಿ ಸಾಕ್ಷಾತ್ ರತಿಯೆಂತೊಪ್ಪುವ ಅಮ್ಮಾ ಕುವರಿಯೇ! ನೀನು ಇದುವರೆವಿಗೂ ಬಾಲ್ಯಾವಸ್ಥೆಯಲ್ಲಿ ವಿನೋದದಿಂದ ಆಟಪಾಠಗಳಲ್ಲಿ ಕಾಲವಂ ಕಳೆಯುತ್ತಾ ಇದ್ದು ಈಗ ಪ್ರಾಪ್ತ ವಯಸ್ಕಳಾಗಿರುವುದರಿಂದ, ವಯೋಧರ್ಮವನ್ನರಿತು ನಿನಗೆ ವಿವಾಹ ಮಹೋತ್ಸವವನ್ನು ನೆರವೇರಿಸಬೇಕಾಗಿರುವ ಪ್ರಯುಕ್ತ ಈ ಮೂರು ಲೋಕದೊಳಗೆ ಶ್ರೇಷ್ಠರಾಗಿ ಕೀರ್ತಿಯಂ ಪಡೆದಿರುವ ಮಹಾಪುರುಷರ ಭಾವಚಿತ್ರಗಳನ್ನು ಅಂದವಾಗಿ ಪಟದ ಮೇಲೆ ರೂಪಿಸಿ ಬರೆಯಿಸಿರುತ್ತೇನಮ್ಮಾ ಕುವರಿಯೇ ನೀನಿದನರಿಯೇ॥

ದರುವು

ಇಂದು ಚಿತ್ರ ನೋಡಿ ಮನದಾ ಚಂದದಾಶೆಯಾ
ಕಂದ ತೋರಿಸೇ ಕೊಟ್ಟು ಆತಗೇ ಸಂದ ಪರಿಣಯಾ॥ಚಂದಿರಾನನೇ॥

ನೀಲಧ್ವಜ: ಹೇ ಪುತ್ರಿಯೇ! ಈ ಸುಂದರವಾದಂಥ ಶ್ರೇಷ್ಠ ಭಾವ ಚಿತ್ರಗಳನ್ನು ಮನದಣಿಯೆ ನೋಡುವಂಥವಳಾಗು. ಯಾವ ಚಿತ್ರಪಟದಲ್ಲಿ ನಿನ್ನ ಹೃದಯವು ಲೀನವಾಗಿ ಅನುರಾಗವನ್ನು ವ್ಯಕ್ತಪಡಿಸುವಿಯೋ ಆ ಮಹಾಪುರುಷನಿಗೆ ನಿನ್ನನ್ನು ಕೊಟ್ಟು ಪರಿಣಯವನ್ನು ಬೆಳೆಸುವೆನಮ್ಮಾ ಕುಮಾರಿ ಚಿತ್ತಜ ಮನೋಹಾರಿ॥

ದರುವು

ಹಿರಿಯ ಬಳ್ಳಾ ಪುರದ ಗಿರುಜೇ ವರನ ನೀ ಸ್ಮರಿಸು॥
ಪುರುಷ ಶ್ರೇಷ್ಠನ ಹರುಷದಿಂದ ತರಳೇ ನೀ ವರಿಸು॥ಚಂದಿರಾನನೇ॥

ನೀಲಧ್ವಜ: ಹೇ ತನುಜೆಯೇ! ಅಂಗಜಹರ ಭಸಿತಾಂಗಧರ ಶಂಭುಲಿಂಗನೆಂಬುವ ಬಿರುದನ್ನು ವಹಿಸಿರುವ ಶ್ರೀಹಿರಿಯ ಬಳ್ಳಾಪುರದ ಭಕ್ತಜನ ಸಂಗ ಹೃತ್ಪದ್ಮ ಲಿಂಗ ಭವ ಭಂಗನಾದ
ಶ್ರೀ ಸೋಮೇಶ್ವರನ ಚರಣಂಗಳನ್ನು ಸ್ಮರಿಸಿದವಳಾಗಿ ಈ ಚಿತ್ರಪಟಗಳಲ್ಲಿ ಶ್ರೇಷ್ಠನಾದ ಪುರುಷನನ್ನು ವರಿಸುವಂಥವಳಾಗಮ್ಮಾ ತರಳೇ ಮಲ್ಲಿಗೆಯ ಹರಳೇ॥

ಕಂದಕೇದಾರಗೌಳ

ಈತ ಮಾಳವನೀತ ಕೊಂಕಣ
ನೀತ ಗುಜ್ಜರನೀತ ಬರ್ಬರ
ನೀತ ಕೋಸಲನೀತ ಖೇಟಕನೀತ ಹಮ್ಮೀರ॥
ಈತ ಕೇರಳನೀತ ಸಿಂಹಳ
ನೀತ ಚೋಟಕನೀತ ಚೀನಕ
ನೀತ ಮಾಗಧನೀತ ದ್ರಾವಿಡನೀತ ಗೌಳ ನೃಪ॥

ನೀಲಧ್ವಜ: ಅಮ್ಮಾ ಸ್ವಾಹಾದೇವಿ! ಮಾಳವ,  ಗುಜ್ಜರ, ಬರ್ಬರ, ಕೇರಳ, ಸಿಂಹಳ, ಚೋಟಕ, ಖೇಟಕ ಮಾಗಧ ದ್ರಾವಿಡ ಮೊದಲಾದ ಚಪ್ಪನ್ನೈವತ್ತಾರು ದೇಶದ ರಾಜರುಗಳ ಚಿತ್ರಪಟಗಳನ್ನು ವೀಕ್ಷಿಸು ಮಗಳೇ. ಅಲ್ಲದೇ ಗಂಧರ್ವ ಯಕ್ಷ, ಸುರಾಸುರರು, ಹರಿ-ಹರ ವಿರಿಂಚಿ, ಮದನ, ವಸಂತರ, ಭಾವ ಚಿತ್ರಗಳನ್ನು ಇಂದ್ರ, ಅಗ್ನಿ, ಯಮ, ವರುಣ ಮೊದಲಾದ ಅಷ್ಠದಿಕ್ಪಾಲಕರ ರೂಹು ಚಿತ್ರಗಳನ್ನು ಕಮಲನೇತ್ರಂಗಳಿಂ ನೋಡಿ ಹೃದಯಾರವಿಂದದಿಂದ ಅನುಮೋದಿಸಿ ವರಿಸುವಂಥವಳಾಗಮ್ಮಾ ಕುಮಾರಿ ಕಲಕಂಠ ಹಾರಿ॥

ಭಾಗವತರಕಂದ

ವಿಪುಲಗಂಧರ್ವ ಯಕ್ಷೋರಗ ಸುರಾಸುರರ
ನಪಹಾಸ್ಯಮಂ ಮಾಡಿ, ಸಕಲ ಭೂಮಂಡಲದ
ನೃಪವರ್ಗಮಂ ಪಳಿದು, ಹರಿ ಹರ ವಿರಿಂಚಿ,
ಶಕ್ರಾದಿಗಳ ನಿಳಿಕೆಗೈದು॥
ತಪನೇಂದು ಮನ್ಮಥ ವಸಂತರ್ಕಳಂ ಜರೆದ
ನುಪಮ ದಿಕ್ಪಾಲಕರ ನಡುವೆ ಕುಳ್ಳಿರ್ದು ರಾ
ಜಿಪ ವೀತಿಹೋತ್ರನಂ ಕಂಡವಳ್ತೋರಿಸಿದಳ್
ಯನಗಿವಂ ಕಾಂತನೆಂದೂ॥

ಭಾಗವತರು: ಕೇಳಿದರೇನಯ್ಯ ಭಾಗವತರೇ! ಈ ಪ್ರಕಾರವಾಗಿ ನೀಲಧ್ವಜನು ಸುತೆಗೆ ಚಿತ್ರಪಟಗಳನ್ನು ತೋರಿಸಲೂ, ಆಕೆಯು ಸರ್ವ ಭಾವಚಿತ್ರಗಳನ್ನು ಜರೆದು ಅನುಪಮ ದಿಕ್ಪಾಲಕರ ನಡುವೆ ರಾರಾಜಿಸುತ್ತಾ ಕುಳಿತಿರ್ದ ಅಗ್ನಿ ಪುರುಷನನ್ನು ಕಂಡು ಈತನೇ ಯನ್ನ ಪತಿಯೆಂದು ತಂದೆಗೆ ತೋರಿಸಿದಳೈಯ್ಯ ಭಾಗವತರೇ॥

ದರುವುವಸಂತ ಕೋಕಿಲ ರಾಗಅಟತಾಳ

ತಂದೆ ಕೇಳೈ ಭೂಪ, ಕೀರ್ತಿ ಕಲಾಪ
ಚಂದದಿಂದಿಹನಗ್ನಿ ದೇವಾ ಸ್ವರೂಪ॥ತಂದೆ ಕೇಳೈ॥

ಸ್ವಾಹಾದೇವಿ: ಮಲೆತಿರುವ ಶತೃರಾಜರ ವೀರ ಪ್ರತಾಪವೆಂಬ ಚಿಗುರಿಗೆ ಗಜಪ್ರಾಯರಾದ ಹೇ ತಂದೆಯೇ ಲಾಲಿಸು. ಮೇಘ ಮಂಡಲದೊಳ್ ತಾರಾಗಣದ ಮಧ್ಯದಲ್ಲಿ ಕಂಗೊಳಿಸುವ ಉಡುರಾಜನಂತೆ ಅಷ್ಠದಿಕ್ಪಾಲಕರ ಪಂಕ್ತಿಯಲ್ಲಿ ರಾರಾಜಿಸುತ್ತಾ ಕುಳಿತಿರುವ ಅಗ್ನಿದೇವನು ಯನ್ನ ಮನವನ್ನು ಸೂರೆಗೊಂಡಿರುವನೈ ಜನಕಾ ಕ್ಷೋಣಿ ಜನಪಾಲಕಾ॥

ದರುವು

ಚಪ್ಪನ್ನ ರಾಜರಾ ಚಿತ್ರ ನೋಡುತ ಮನಾ
ಒಪ್ಪಿರುವುದು ಅಗ್ನಿ ದೇವ ಸ್ವರೂಪನಾ॥ತಂದೆ ಕೇಳೈ॥

ಸ್ವಾಹಾದೇವಿ: ಶತೃರಾಜರ ದುರಹಂಕಾರವೆಂಬ ಪರ್ವತಗಳನ್ನು ಭೇದಿಸಲು ವಜ್ರಾಯುಧವನ್ನು ಧರಿಸಿದ ಅಮರಾಧಿಪನಂತೆಸೆವ ಹೇ ಜನಕಾ! ಮಾನಸ ಸರೋವರದಲ್ಲಿ ರಾಜಹಂಸೆಯು ಕಮಲದಿಂದ ಕಮಲಕ್ಕೆ ಯಾವ ರೀತಿ ಸಂಚರಿಸುವುದೋ ಆ ತೆರನಾಗಿ ಯನ್ನ ಹೃದಯವು ಚಿತ್ರದಿಂದ ಚಿತ್ರಕ್ಕೆ ಚಲಿಸುತ್ತಾ ಕೊನೆಗೆ ಪುರುಷ ಶ್ರೇಷ್ಠನಾಗಿ, ಸಕಲಕಲಾ ಕೋವಿದನಾಗಿ, ವಿದ್ಯೈಶ್ವರ‌್ಯ ಸಂಪನ್ನನಾಗಿ ಪ್ರಕಾಶಿಸುವ ಅಗ್ನಿಪುರುಷನ ಭಾವಚಿತ್ರದಲ್ಲಿ ಸ್ಥಿರವಾಗಿ ನೆಲಸಿ ಆತನೇ ತಕ್ಕ ಅನುರೂಪನೆಂದು ಅನುಮೋದಿಸಿರುವುದೈಯ್ಯ ತಂದೆ ಸಲಹೆನ್ನ ಮುಂದೇ॥

ದರುವು

ಹಿರಿಯ ಬಳ್ಳಾಪುರದ ವರದ ಸೋಮೇಶನು
ಕರುಣದಿಂದಲಿ ವರನ ದೊರಕಿಸಿ ಇರುವನು॥ತಂದೆ ಕೇಳೈ॥

ಸ್ವಾಹಾದೇವಿ: ಹೇ ತಂದೆಯೇ ಈ ವಸುಧೆಗೆ ಅತಿಶಯಮಾದ ಶ್ರೀ ಹಿರಿಯ ಬಳ್ಳಾಪುರವಾಸಿಯಾದ ಶ್ರೀ ಸೋಮೇಶ್ವರನು ತರಳೆಯಾದ ಯನ್ನಲ್ಲಿ ಕನಿಕರವಿಟ್ಟು ಸುಂದರನು, ಧೀರನೂ, ಶೂರನೂ, ಜಯಶಾಲಿಯೂ ಆಗಿರುವ ಅನುರೂಪನನ್ನು ಯನಗೆ ಪತಿಯಾಗಿ ದೊರಕಿಸಿ ಇರುವನೈ ತಾತಾ ಲೋಕ ಪ್ರಖ್ಯಾತ॥

ದರುವು
ವಾರಿಜಾಕ್ಷಿಯೇ ಲಾಲಿಸೆನ್ನಯ, ಹಿತದಿ ಪೇಳುವ ವಚನವಾ
ಹರುಷವನು ನೀ ತೋರು ಉಳಿದು ಪಾವಕನ ವರ ಚಿತ್ರವಾ॥

ನೀಲಧ್ವಜ: ವಾರಿಜದಂತೆ ನೇತ್ರಗಳುಳ್ಳ ಹೇ ತನುಜೆಯೇ! ನಿನ್ನ ತಂದೆಯಾದ ನಾನು ಪ್ರೀತಿಯಿಂದ ಪೇಳುವ ಮಾತನ್ನು ಲಾಲಿಸುವಂಥವಳಾಗು. ಈ ಅಷ್ಠ ದಿಕ್ಪಾಲಕರೋಳ್ ರಾರಾಜಿಸುವ ಅಗ್ನಿದೇವನನ್ನು ಬಿಟ್ಟು ಉಳಿದ ಮಹಾ ಪುರುಷರ್ಕಳಲ್ಲಿ ನಿನ್ನ ಮನ ವೊಪ್ಪುವನನ್ನು ಹರುಷದಿಂದ ವರಿಸುವಂಥವಳಾಗೆ ಪುತ್ರೀ ಚಾರು ಚರಿತ್ರೀ॥

ದರುವು

ಜನಕ ಬಿನ್ನೈಸುವೆನು ನಿಮ್ಮಯ ನುಡಿಗೆ ಪ್ರತಿ ಮಾತ್ಹೇಳ್ವೆನೇ
ಅನುನಯದೊಳೂ ಮಾಡು ಪರಿಣಯ ಮನವು ಒಪ್ಪುವ ವರನನೇ॥

ಸ್ವಾಹಾದೇವಿ: ಸಕಲ ರಾಜವಂದಿತ ಪಾದ ಪದ್ಮವುಳ್ಳ ಹೇ ಯನ್ನ ತಂದೆಯೇ! ಉನ್ನತವಾದ ತಮ್ಮ ಸವಿನುಡಿಗೆ ಪ್ರತಿ ವಚನವಾಡಬಲ್ಲೆನೇ! ಪ್ರತ್ಯುತ್ತರ ಹೇಳಲು ನಾನು ಶಕ್ತಳಲ್ಲಾ ಮತ್ತು ತಮ್ಮ ಮಾತು ಮೀರುವವಳಲ್ಲಾ. ಆದರೆ ಒಂದು ಬಿನ್ನಪವನ್ನು ಲಾಲಿಸಬೇಕೈ ಜನಕಾ ಯನಗೆ ತಾವು ಚಿತ್ರಪಟಗಳನ್ನು ತೋರಿಸಿ ಮಗಳೇ, ಇವರಲ್ಲಿ ನಿನಗೊಪ್ಪಿದವರನ್ನು ವರಿಸು ಎಂದು ಅಪ್ಪಣೆ ಕೊಡಿಸಿದಂತೆ, ಈ ದೇವಸ್ವರೂಪನಾದ ಅಗ್ನಿಪುರುಷನನ್ನು ಮನವೊಲಿದು ಒಪ್ಪಿರುವುದು ಯನ್ನಲ್ಲಿ ಲೇಶವಾದರೂ ತಪ್ಪಿಲ್ಲ. ಆದ ಕಾರಣ ಪರಮ ಹರುಷದಿಂದ ಆತನಿಗೇ ಕೊಟ್ಟು ಪರಿಣಯವನ್ನು ಬೆಳೆಯಿಸೈ ತಂದೇ- ಸಲಹೆನ್ನಾ ಮುಂದೇ॥

ದರುವು

ಸುಂದರಾಂಗಿಯೇ ಅಗ್ನಿಯನು ನೀ ನಿಂದು ತ್ಯಜಿಸೂ ಮನದಲಿ
ಕಂದಿ ಕುಂದಿಸಿ ದಹಿಸುವಾತನು ಇಂದು ಅಗ್ನಿಯು ಧರೆಯಲೀ॥

ನೀಲಧ್ವಜ: ಅಪ್ರತಿಹತವಾದ ಸೌಂದರ್ಯರಾಶಿಯಿಂದ ಕಂಗೊಳಿಸುವ ಹೇ ಪುತ್ರೀ. ಈ ಪಾವಕನು ಸಾಮಾನ್ಯ ಮಾನವರಿಗೆ ಸಿಕ್ಕುವವನಲ್ಲ. ಅಲ್ಲದೇ ಈತನು ದಹನ ಶಕ್ತಿಯುಳ್ಳವನಾದ್ದರಿಂದ ಅಣುರೇಣು ಸೋಂಕಿದಾಕ್ಷಣಾ ಈ ಇಳೆಯಲ್ಲಿ ಸಕಲವೂ ಸುಟ್ಟು ಭಸ್ಮವಾಗುವುದಾದ ಕಾರಣ, ಈತನಿಂದ ನಿನಗೆ ಅಂಗಸುಖವು ದೊರೆತು ಎಂತು ಸುಖದಿಂದಿಹೆಯೇ ಮಗಳೇ! ಇದು ಕಾರಣ ನೀನು ಈ ಅಗ್ನಿಯನ್ನು ನಿನ್ನ ಮನದಿಂದ ತ್ಯಜಿಸಿ ಮತ್ತೊಬ್ಬ ಪುರುಷನನ್ನು ವರಿಸುವಂಥವಳಾಗೆ ಕುವರೀ ಕಲಕಂಠಹಾರಿ॥