ದರುವು

ಮನವು ಒಪ್ಪಿ ಕುರೂಪಿಯಾಗಲೀ ಪತಿಯು ತಾನೆಂದರಿಯುವೇ
ಅನ್ಯ ಪುರುಷರು ಧಾರುಣಿಯೊಳು ನಿಮಗೆ ಸರಿಸಮ ತಿಳಿಯುವೇ॥

ಸ್ವಾಹಾದೇವಿ: ಭಾರತೀದೇವಿಯ ಭಾಗ್ಯರೂಪರಾದ ಹೇ ತಂದೇ. ಹೃತ್ಕಮಲದಿಂದ ಒಂದು ಸಾರಿ ಒಪ್ಪಿ ಪತಿಯಾಗಿ ವರಿಸಿದ ಮೇಲೆ ಆತನು ಭಾಗ್ಯವಂತನಾಗಲೀ ಭಾಗ್ಯಹೀನನಾಗಲೀ. ಸ್ಪುರದ್ರೂಪಿಯಾಗಲೀ ಕುರೂಪಿಯಾಗಲೀ, ಆತನನ್ನು ತ್ಯಜಿಸಿ ಅನ್ಯಪುರುಷರಿಗೆ ಮನಸೋತರೆ ಸತೀತ್ವಕ್ಕೆ ಕುಂದು ಬರುವುದಿಲ್ಲವೇ ತಂದೆ. ಇದ ನೀವು ತಿಳಿಯದವರೇ. ಆದ ಕಾರಣ ಪ್ರಥಮತಃ ಈ ಅಗ್ನಿದೇವನನ್ನು ಯನ್ನ ಮನೋದೇವನನ್ನಾಗಿ ಆರಿಸಿ ಒಪ್ಪಿ ವರಿಸಿರುವೆನಾದ ಕಾರಣ ಈಗ ಈ ಧಾರುಣಿಯಲ್ಲಿನ ಅನ್ಯ ಮಹಾಪುರುಷರೆಲ್ಲರೂ ನಿಮಗೆ ಸರಿ ಸಮಾನರೆಂದು ತಿಳಿದು ಪಿತೃ ಭಾವನೆಯಿಂದ ಯಿಂದಿರುತ್ತೇನೈ ತಾತಾ ಬಿನ್ನವಿಸುವೆನು ಮಾತ॥

ದರುವು

ಹಿರಿಯ ಬಳ್ಳಾಪುರವ ಪಾಲಿಪ
ಹರನೂ ಸೋಮನಾಥನೂ
ಕರುಣದಿಂದ ಪೊರೆದು ಸಲಹುವ
ತರಳೆ ಲಾಲಿಸು ಮಾತನೂ॥

ನೀಲಧ್ವಜ: ಶುಕವಾಣಿಯಾದ ಹೇ ಸುತೆಯೇ! ನಿನ್ನ ಅಚಲವಾದ ಮನೋಭಾವನೆಯನ್ನು ತ್ಯಜಿಸಿ ಯನ್ನ ಹಿತವಾದ ಮಾತನ್ನು ಲಾಲಿಸಿದ್ದೇ ಆದರೆ ಈ ಪೊಡವಿಗೆ ವಡೆಯನೆನಿಸಿ ಸಡಗರದಿಂದ ವಿರಾಜಿಸುವ ಹಿರಿಯ ಬಳ್ಳಾಪುರದ ಶ್ರೀ ಸೋಮೇಶ್ವರನು ಕರುಣವಿಟ್ಟು ನಿನ್ನನ್ನು ಸಲಹುವನಲ್ಲದೇ ಯನಗೂ ಪರಮ ಸಂತೋಷವುಂಟಾಗುವುದಮ್ಮಾ ಕುವರೀಚಲಿಸು ನಿನ್ನ ದಾರಿ॥

ದರುವು

ಧರಣಿಗಧಿಕವಾಗಿ ರಂಜಿಪಾ
ಹಿರಿಯ ಬಳ್ಳಾಪುರದವನೂ
ಪೊರೆವ ಗಿರಿಜಾಕಾಂತನಾಣೆಯೂ
ಚಲಿಸೆನೆನ್ನಯ ಮನವನೂ॥

ಸ್ವಾಹಾದೇವಿ: ಹೇ ಜನಕಾ! ಹಿಂದೆ ಸತೀಮಣಿ ಸಾವಿತ್ರಿಯು ತನ್ನ ಹೃದಯ ಕಮಲದಿಂದ ಸತ್ಯವಂತನನ್ನು ಒಪ್ಪಿ ವರಿಸಿದ ನಂತರ, ಅಲ್ಪಾಯುಷ್ಯನೆಂದು ತಿಳಿದನಂತರವೂ ಸಹ ತನ್ನ ಮನವನ್ನು ಬದಲಾಯಿಸಿದಳೆ. ಅನ್ಯ ಪುರುಷರ್ಗೆ ಮನಸೋತಳೇ. ಇದ ನೀವು ಅರಿಯದವರೇ! ಆದ ಕಾರಣ ಹೇ ತಂದೆ. ಈ ಧರೆಯಲ್ಲಿ ಸುರಪನಮರಾವತಿಗೆ ಸರಿಯೆನಿಸಿ ಮೆರೆಯುವ ಹಿರಿಯ ಬಳ್ಳಾಪುರವನ್ನು ಕರುಣದಿಂದ ಪರಿಪಾಲಿಸುವ ಪರಶಿವಮೂರ್ತಿ ಪಾರ್ವತೀಪತಿಯಾದ ಶ್ರೀ ಸೋಮೇಶ್ವರನ ಚರಣದಾಣೆಗೂ ಯನೈ ಹೃದಯದಲ್ಲಿ ನೆಲೆಸಿರುವ ಅಧಿದೇವನನ್ನು ತ್ಯಜಿಸಿ ಅನ್ಯ ಪುರುಷರ್ಗೆಡೆ ನೀಯಲಾರೆನೈ ತಾತ ಕ್ಷಮಿಸೆನ್ನ ಮಾತ॥

ನೀಲಧ್ವಜ: ಅಯ್ಯ ಸಾರಥೀ! ಯನ್ನ ಸುತೆಯು ಎಷ್ಠು ವಿಧವಾಗಿ ಹೇಳಿದರೂ ತನ್ನ ಮನವನ್ನು ಚಲಿಸಲಿಲ್ಲ. ಆದ ಕಾರಣ ಯನ್ನ ಸತಿ ಶಿರೋಮಣಿಯಾದ ಜ್ವಾಲೆಯನ್ನು ಅತಿ ಜಾಗ್ರತೆ ಕರೆದುಕೊಂಡು ಬಾರೈಯ್ಯ ಸಾರಥೀ-ಸಂಧಾನಮತಿ॥

ಜ್ವಾಲೆ: ನಮೋನ್ನಮೋ ಹೇ ಪ್ರಾಣನಾಥ ಯನ್ನಯ ಮನೋಪ್ರೀತ॥

ನೀಲಧ್ವಜ: ಸೌಮಾಂಗಲ್ಯಾಭಿವೃದ್ಧಿರಸ್ತು ಬಾರೇ ಜ್ವಾಲೇ ನಯ ಗುಣಶೀಲೇ॥

ಜ್ಞಾಲೆ: ಯನ್ನಿಷ್ಟು ಜಾಗ್ರತೆಯಿಂದ ಕರೆಸಿದ ಕಾರಣವೇನು ಪೇಳಬೇಕು ರಾಯ ತಿಳಿಸು ಮನೋಭಿಪ್ರಾಯ॥ಯನ್ನ ಮನೋಪ್ರಿಯ॥

ನೀಲಧ್ವಜ: ಹೇ ಕಾಂತೆ, ಯಮ್ಮ ತನುಜೆಗೆ ಅಗ್ನಿದೇವನನ್ನು ವರಿಸಬೇಡವೆಂದು ಎಷ್ಟು ವಿಧವಾಗಿ ಹೇಳಿದರೂ ಕೇಳಲೊಲ್ಲಳು, ನೀನಾದರೂ ಒಳ್ಳೆಯ ಮಾತುಗಳಿಂದ ಆಕೆಯ ಅಚಲವಾದ ಮನಸ್ಸನ್ನು ಬದಲಾಯಿಸಿ ಇತರ ಪುರುಷವರ್ಗವನ್ನು ಅನುಮೋದಿಸುವ ಹಾಗೆ ತಿಳಿಯ ಹೇಳೆ ರಮಣಿ ಕಾಂತಿದ್ಯುಮಣೀ॥

ಜ್ವಾಲೆ: ಅದೇ ಪ್ರಕಾರ ಮಾಡುತ್ತೇನೈ ರಮಣಾ ಕರುಣಾಭರಣ॥

ಸ್ವಾಹಾದೇವಿ: ನಮೋ ನಮಸ್ಕಾರಂಗಳಮ್ಮಾ ಜನನೀ ಜಗನ್ಮೋಹಿನಿ॥

ಜ್ವಾಲೆ: ಸೌಮಾಂಗಲ್ಯಾಭಿವೃದ್ಧಿರಸ್ತು ಬಾರಮ್ಮಾ ಕುಮಾರಿ ಕಲಕಂಠಹಾರಿ॥

ದರುವು

ನೀರಜಮುಖಿ ಬಾರೆ ಪುತ್ರೀ ತೋರೆ
ಹರುಷವ ಚಾರು ಚರಿತ್ರೀ॥
ಮೂರು ಲೋಕದೊಳಿಹ ಪುರುಷ ಶ್ರೇಷ್ಠರುಗಳಾ
ವರರೂಪು ಪಟದೊಳು ಬರೆಸೀ ಚಿತ್ರಪಟವನ್ನು ತರಿಸೀ॥

ಜ್ವಾಲೆ: ನೀರಜದಂತೆ ಮುಖವುಳ್ಳ ಹೇ ಪುತ್ರಿಯೇ ಕೇಳು! ನಿನಗೆ ಯೌವನೋದಯವೆಂಬ ವಸಂತ ಕಾಲವು ಪ್ರಾಪ್ತವಾಗಿರುವುದನ್ನು ಅರಿತು ನಿಮ್ಮ ಜನಕನು ತಕ್ಕ ವರನನ್ನು ನೋಡಿ ನಿನಗೆ ವಿವಾಹ ಮಹೋತ್ಸವವನ್ನು ಬೆಳೆಸುವುದಕ್ಕಾಗಿ ಈ ಮೂರು ಲೋಕದೊಳಿಹ ಪುರುಷ ಶ್ರೇಷ್ಠರ ಭಾವ ಚಿತ್ರಗಳನ್ನು ಪಟದ ಮೇಲೆ ರೂಪಿಸಿ ತರಿಸಿರುವರಮ್ಮಾ ಪುತ್ರೀ ಚಾರು ಚರಿತ್ರೀ॥

ದರುವು

ಕ್ಷಿತಿಯೊಳಗ್ನಿಯು ದೊರೆಯೇ ಸಾಧ್ಯವಲ್ಲವು ನಮಗೇ
ಸುತೆಯೇ ನೀ ಮನದೊಳು ತಿಳಿಯೇ
ಮಾತೆ ವಚನ ಲಾಲಿಸೆ ॥ನೀರಜಮುಖಿ॥

ಅಷ್ಠ ದಿಕ್ಪಾಲಕರೋಳ್‌ ಅಗ್ನಿಯಲ್ಲದೆ ನಿನ
ಗಿಷ್ಠ ಬಂದವರಿಗೆ ಕೊಟ್ಟೂ ನಿನ್ನ ಲಗ್ನ
ಮಾಡುವೆವು॥ನೀರಜಮುಖಿ॥

ಜ್ವಾಲೆ: ಹೆದೆಯನ್ನು ಬಿಚ್ಚಿದ ಬಿಲ್ಲಿನಂತೆ ನೀಳವಾದ ಜಡೆಯಿಂದ ಮನೋಹರವಾದ ಶರೀರವುಳ್ಳ ಹೇ ಸುತೆಯೇ! ಭೂ ಪ್ರದಕ್ಷಿಣ ಷಟ್ಕೇನ ಕಾಶೀ ಯಾತ್ರಾಯುತೇನಚ ಸೇತು ಸ್ನಾನ ಶತೈರ‌್ಯಶ್ಚ ತತ್ಫಲಂ ಮಾತೃ ವಂದನೇ॥ಎಂಬಂತೆ ನಿನ್ನ ತಾಯಿಯಾದ ಯನ್ನ ಮಾತನ್ನು ಲಾಲಿಸು. ಇಂದ್ರ, ಅಗ್ನಿ, ಯಮ, ವರುಣ, ನೈರುತ್ಯ, ಈಶಾನ್ಯ, ವಾಯು, ಕುಬೇರನೇ ಮೊದಲಾದವರಲ್ಲಿ ಅಗ್ನಿ ಪುರುಷನು ದಹನ ಶಕ್ತಿಯಿಂದ ದೊರೆಯಲು ಅಸಾಧ್ಯನಾಗಿರುವನಾದ ಕಾರಣ ಆತನನ್ನು ಅನುಮೋದಿಸದೆ ಉಳಿದ ಪುರುಷವರ್ಗದವರಲ್ಲಿ ಶ್ರೇಷ್ಠನಾದವನನ್ನು ವರಿಸುವಂಥವಳಾಗಮ್ಮಾ ಕುವರೀ ಇದ ನೀನು ಅರಿ॥

ದರುವು

ಚಪ್ಪನ್ನ ದೇಶದ ಕ್ಷತ್ರಿಯರೊಳು ನೀನೂ
ಒಪ್ಪಿದ ವರಗೇ ವಿವಾಹ ಮನವೊಪ್ಪಿ
ಮಾಡುವೆವು॥ನೀರಜಮುಖಿ॥

ಭೂಮಿ ಪಾಲಕರನ್ನು ಕಾಮಿಸಲಾತಗೇ
ಪ್ರೇಮದಿಂದಲಿ ನಿನ್ನ ಕೊಡುವೇ
ಕಾಮಹರನಾಣೆ ಪೇಳ್ವೆ॥ನೀರಜಮುಖಿ॥

ಜ್ವಾಲೆ: ತುರುಬಿನಲ್ಲಿ ಮುಡಿದ ಹೂವುಗಳ ಮತ್ತು ಹಣೆಯೊಳಗಿನ ಕಸ್ತೂರಿ ತಿಲಕದ ಸುವಾಸನೆಗೆಳಸಿ ಸುತ್ತವರಿವ ದುಂಬಿಗಳನ್ನು ಓಡಿಸುತ್ತಿರುವ ಚೂತಪಲ್ಲವದಂತೆ ಎಸೆವ ಕರಗಳುಳ್ಳ ಹೇ ತನುಜೇ! ಅನ್ನೋದಕಕ್ಕೆ ಸಮನಾದ ದಾನವೂ, ದ್ವಾದಶಿಗೆ ಸಮವಾದ ವ್ರತವೂ, ಗಾಯಿತ್ರಿಗಿಂತ ಅಧಿಕವಾದ ಮಂತ್ರವೂ. ತಾಯಿಗಿಂತ ಹೆಚ್ಚಾದ ದೇವರೂ ಇಲ್ಲವೆಂಬುದನ್ನು ತಿಳಿದು ಯನ್ನ ಮಾತನ್ನು ಚಿತ್ತವಿಟ್ಟು ಲಾಲಿಸಮ್ಮಾ ಪುತ್ರೀ: ಈ ಧಾರುಣಿಯಲ್ಲಿ ವಿದ್ಯೆ ವಿನಯರೂಪು. ಗಾಂಭೀರ‌್ಯ ವೀರತ್ವಕ್ಕೆ ಸರಿಸಮನಾದವರ ಕ್ಷತ್ರಿಯ ಕುಲದ ಶ್ರೇಷ್ಠ ಪುರುಷರಲ್ಲಿ ಅನುರೂಪನನ್ನು ನೀನು ಅನುಮೋದಿಸಿದ್ದೇ ಆದರೆ ಆ ಮನ್ಮಥ ಸದೃಶನಿಗೆ ಮನ್ಮಥಾರಿಯಾಣೆಗೂ ನಿನ್ನನ್ನು ಕೊಟ್ಟು ಪರಿಣಯವಂ ಮಾಡುವೆನಮ್ಮಾ ಕುಮಾರೀ ಚಿತ್ತಜ ಮನೋಹಾರಿ॥

ದರುವು

ಬಿನ್ನವಿಸುವೆ ಮಾತೆಯೇ ಜನಕನ ವಾಮಾಂಗಿಯೇ
ವಿನಯ ಸುಗುಣವಂತೆಯೇ ಯನ್ನ ಮುದ್ದು ತಾಯಿಯೇ॥

ಸ್ವಾಹಾ: ಮಾತೃ ದೇವೋಭವ, ಪಿತೃ ದೇವೋಭವ, ಆಚಾರ‌್ಯ ದೇವೋಭವ, ಗುರು ದೇವೋಭವ ಎಂಬಂತೆ ದೈವ ಸ್ವರೂಪರಾದ ಹೇ ತಾಯಿಯೇ. ನಿಮ್ಮ ಮುದ್ದು ಕುಮಾರಿಯಾದ ಯನ್ನ ಬಿನ್ನಪವನ್ನು ಪ್ರೀತಿಯಿಂದ ಲಾಲಿಸಮ್ಮಾ ತಾಯೇ ಹಿಮಾಂಶು ಮುಖಛಾಯೇ॥

ದರುವು

ತೋರಿ ಚಿತ್ರಪಟವನೂ ಆರಿಸೆಂದು ವರನನೂ
ಭರದಿ ಪೇಳೆ ಜನಕನೂ ತೋರಿದೆ ಪಾವಕನನೂ॥

ಸ್ವಾಹಾ: ಹೇ ಜನನೀ! ಪೂಜ್ಯರಾದ ತಂದೆಯವರು ಮೂರು ಲೋಕದೊಳಿಹ ಪುರುಷಶ್ರೇಷ್ಠರ ಭಾವಚಿತ್ರಗಳನ್ನು ಯನಗೆ ತೋರಿಸಿ ಮಗಳೇ ಇವರಲ್ಲಿ ನಿನಗೊಪ್ಪಿದವರನ್ನು ವರಿಸು ಎಂದು ಹೇಳಲು ಅದೇ ಪ್ರಕಾರ ಕಮಲಗಳ ಮಧ್ಯದೋಳ್ ರಾರಾಜಿಸುವ ರಾಜಹಂಸದಂತೆ ಅಷ್ಠದಿಕ್ಪಾಲಕರ ಮಧ್ಯೆ ಹೇದಿಪ್ಯಮಾನರಾಗಿ ಕುಳಿತಿರುವ ಅಗ್ನಿ ಪುರುಷನನ್ನು ಮನವೊಪ್ಪಿ ತೋರಿದೆನಮ್ಮಾ ಜನನೀ ಸುಚರಿತ್ರ ಮಾನಿನೀ॥

ದರುವು

ಸುಗುಣವಂತನಾಗಲೂ ದುರ್ಗುಣಿ ತಾನಾಗಲೂ
ಬಗೆಯೊಳೊಮ್ಮೆ ವರಿಸಲೂ ಮಿಗೇ ಪತಿಯು ತಿಳಿಯಲೂ॥

ಸ್ವಾಹಾ: ಹೇ ತಾಯೇ! ಒಂದು ಸಾರಿ ಒಬ್ಬ ಪುರುಷನನ್ನು ಮನದೊಳು ಒಪ್ಪಿ ವರಿಸಿದ ನಂತರ, ಆತನು ಸುಗುಣಿಯಾಗಲೀ. ದುರ್ಗುಣಿಯಾಗಲೀ. ಆಳಾಗಲೀ ಅರಸಾಗಲೀ, ದೋಷಿಯಾಗಲೀ, ದೋಷ ರಹಿತನಾಗಲೀ. ಆತನೇ ತನ್ನ ಸರ್ವಸ್ವವೆಂದೂ ತಿಳಿಯಬೇಕಾದುದು ಸತೀಮಣಿಗಳ ಧರ್ಮವಲ್ಲವೇ ತಾಯಿ: ಇದ ನೀನು ಅರಿಯದವಳೇ ಜನನೀ! ಆದ ಕಾರಣ ಈಗ ಅಗ್ನಿಯನ್ನು ನಿರಾಕರಿಸಿ ಅನ್ಯರ್ಗೆ ಮನವೆಳಸೇ ವರಿಸಲಾರೆನಮ್ಮಾ ತಾಯೇ ಕರುಣದಿಂದೆನ್ನ ಕಾಯೇ॥

ದರುವು

ಸತೀವ್ರತಕೆ ಚ್ಯುತಿಯನೂ ಮಾತೆ ತಾರಲಾರೆನೂ
ಕ್ಷಿತಿಯೊಳೆನ್ನ ಮೆಚ್ಚನೂ ಹಿತದಿ ಸೋಮನಾಥನೂ॥ಬಿನ್ನವಿಸುವೆ ಮಾತೆಯೇ॥

ಸ್ವಾಹಾ: ಹೇ ಮಾತೇ ಚಲಂ ಚಿತ್ತಂ ಚಲಂ ವಿತ್ತಂ ಚಲಂ ಜೀವಿತ ಯೌವನಂ ಚಲಾ ಚಲ ಮಿದಂ ಸರ್ವಂ ಕೀರ್ತಿರ್ಯಸ್ಯ ಸ ಜೀವತಿ॥ಎಂಬಂತೆ ಎಲ್ಲವೂ ಅಸ್ಥಿರ, ಕೀರ್ತಿಯೊಂದೇ ಇಹಪರಗಳೆರಡರಲ್ಲೂ ಸ್ಥಿರವಾದದ್ದು. ಆದ ಕಾರಣ, ಭಾರತದ ಆದರ್ಶ ನಾರೀಮಣಿಗಳ ಸತೀತ್ವಕ್ಕೆ ಚ್ಯುತಿಯನ್ನುಂಟುಮಾಡಿ ಅಪಕೀರ್ತಿಯನ್ನು ಹೊಂದಿದ್ದೇ ಆದರೆ ಈ ಧರಣಿಗಧಿಕವಾದ ಹಿರಿಯ ಬಳ್ಳಾಪುರ ನಿವಾಸ ಶ್ರೀ ಸೋಮೇಶ್ವರನು ಯನ್ನನ್ನು ಎಷ್ಟು ಮಾತ್ರಕ್ಕೂ ಮೆಚ್ಚಲಾರನು. ಆದ ಕಾರಣ ಯನ್ನ ಮನವನ್ನು ತಿರುಗಿಸಲಾರೆನಮ್ಮಾ ತಾಯೇ ನೀವಿದನರಿಯೇ.

ಜ್ವಾಲೆ: ಅಧರಗಳ ಅರುಣ ಕಾಂತಿಯೊಡನೆ ಸೇರಿದ ಮುಖಚಂದ್ರನ ಬೆಳದಿಂಗಳಂತೆ ಶುಭ್ರಕಾಂತಿಯಿಂದ ಹೊಳೆಯುವ ದಂತ ಪಂಕ್ತಿಗಳುಳ್ಳ ಹೇ ತನುಜಾತೇ ನಿನ್ನ ಈ ನುಡಿಯು ಅಮರವಾಗಿದೆ. ಮುಂದೆ ನಾನು ಹೇಳಲಾರೆನು. ಆದರೆ ಒಂದು ಮಾತು ಪುತ್ರೀ! ಈ ವೈಶ್ವಾನರನು ಯಮಗೆ ದೊರೆಯಲು ಅಸಾಧ್ಯನಾದ ಕಾರಣ ಆತನನ್ನು ವಿವಿಧ ಅರ್ಚನೆಗಳಿಂದ ನೀನು ಒಲಿಸಿಕೊಳ್ಳಬೇಕಮ್ಮಾ ಸುತೆಯೇ ನೀನಿದನು ತಿಳಿಯೇ॥

ನೀಲಧ್ವಜ: ಮಂದಗಮನೆಯಾದ ಹೇ ಮನೋವಲ್ಲಭೆಯೇ ಸುತೆಯು ತನ್ನ ಮನವನ್ನು ಬದಲಾಯಿಸಿದಳೇ. ಅಗ್ನಿಪುರುಷನು ಯಮಗೆ ದೊರೆಯುವನೇ! ಇದು ಸಾಧ್ಯವೇ! ಮುಂದಿನ ಪ್ರಯತ್ನವೇನು? ಪೇಳು ಯೋಚನೆ ರಾಜೀವಲೋಚನೆ॥

ಜ್ವಾಲೆ: ಸುಂದರ ಸ್ತ್ರೀಯರ ಕಡೆಗಣ್ಣೋಟವೆಂಬ ಕುಡಿ ಮಿಂಚುಗಳಿಗೆ ಹೆದರಿದ ರಾಜಹಂಸದಂತೆ ಭ್ರಾಂತಿಪಡುತ್ತಿರುವ ಮನ್ಮಥ ಸ್ವರೂಪರಾದ ಹೇ ಪ್ರಾಣನಾಥ! ನಾನು ವಿಧವಿಧವಾಗಿ ನಯ ನೀತಿಗಳಿಂದ ಹೇಳಿದರೂ ಸುತೆಯು ತನ್ನ ಮನವನ್ನು ತಿರುಗಿಸಲು ಅಸಮರ್ಥಳಾಗಿರುವಳಾದ ಕಾರಣ, ಆಕೆಯ ಮನೋಭೀಷ್ಠವನ್ನು ನೆರವೇರಿಸುವುದು ಮಾತಾಪಿತೃಗಳಾದಂಥ ನಮ್ಮಗಳ ಆದ್ಯ ಕರ್ತವ್ಯವಲ್ಲವೇ ರಾಯಇದೇ ಯನ್ನ ಅಭಿಪ್ರಾಯ॥

ಕಂದ

ಮಾನನಿಧಿ ಮತ್ಪಿತನೇ ಕನ್ಯಾ
ದಾನವನು ಮೇಣ್‌ಧನ ವಿಭಾಗವ
ಮಾನವರು ತಾವೊಮ್ಮೆ ಮಾಳ್ಪುದು ಧರ್ಮಪದ್ಧತಿಯು॥
ಏನುಸಿರ್ವೆ ನಿಮ್ಮಾಜ್ಞೆಯಿಂದಲೆ
ನಾನವನ ವರಿಸಿದೆನು ಮನದೊಳ
ಗೀ ನೆಲದೊಳೆನಗವನೆ ಪತಿಯೆಂದು ತಿಳಿದಿಹೆನು ಜನಕಾ॥

ಸ್ವಾಹಾ: ಮಾನನಿಧಿಯಾದ ಹೇ ಪಿತನೇ! ಲೋಕದಲ್ಲಿ ಮಾನವರು ಕನ್ಯಾದಾನವನ್ನು ಮತ್ತು ಧನ ವಿಭಾಗವನ್ನು ವೊಮ್ಮೆ ಮಾಡುವುದು ಧರ್ಮ ಪದ್ಧತಿಯಲ್ಲವೇ. ಇದ ನೀವು ಅರಿಯದವರೇ. ತಾನೊಮ್ಮೆ ಆತನನ್ನು ಮನದೊಳಗೆ ವರಿಸಿದಾಗಲೇ ನೀವು ಯನ್ನನ್ನು ಕನ್ಯಾದಾನ ಮಾಡಿದ ಹಾಗೆ ಆಗಲಿಲ್ಲವೇ. ಈಗ ನಿರಾಕರಿಸುವುದು ತರವೇ. ಏನು ಪೇಳುವಿರಿ ತಂದೇ. ನಿಮ್ಮಾಜ್ಞೆಯಿಂದಲೇ ನಾನು ಆತನನ್ನು ವರಿಸುವೆನಾದ ಕಾರಣ, ಯನ್ನ ಮನದೊಳಗೇ, ಮತ್ತು ಈ ಧರೆಯೊಳಗೇ ಆತನೇ ನಿಜಪತಿಯೆಂದು ತಿಳಿದು ಅನುದಿನವೂ ಭಕ್ತಿಯಿಂದ ಆತನನ್ನು ಅರ್ಚಿಸಿ ಮೆಚ್ಚಿಸುವೆನೈ ಜನಕನೇ ಬಿಡು ಮನದ ಯೋಚನೇ॥

ನೀಲಧ್ವಜ: ನಾಶಿಕವೆಂಬ ಸಂಪಿಗೆ ಹೂವಿಗೆ ಅರಿಯದೆರಗಿ ಭಯಪಟ್ಟು ಸ್ವೇದ ಬಿಂದುವನ್ನು ಹೊಂದಿದ ಭ್ರಮರದಂತೆ ಕಾಣುತ್ತಿರುವ ಕಸ್ತೂರಿಯ ತಿಲಕವುಳ್ಳ ಹೇ ಸುಕುಮಾರಿ

ಕಂದಕೇದಾರಗೌಳ

ಬೇಡಿ ಬೇಡಿದ ವಸ್ತುವ ಪೆಣ್ಮಗುವಿಗೆ
ನೀಡುವ ನೇಮಗಾರರಿಗೆ॥
ಷೋಡಶದಾನದ ಫಲ ಸುಲಭದೊಳು ಕೈ
ಗೂಡುವುದೆಂಬರುತ್ತಮರೂ॥

ನೀಲಧ್ವಜ: ನಿನ್ನ ಹಿತವೇ ನಮ್ಮ ಹಿತ, ನಿನ್ನ ಸುಖವೇ ನಮ್ಮ ಸುಖವೆಂದು ತಿಳಿದಿರುವೆನಾದ ಕಾರಣ ನಿನ್ನ ಮನೋಭಿಪ್ರಾಯದಂತೆ ದುರ್ಲಭನಾದ ಪಾವಕನ ಮನ ಮೆಚ್ಚುವಂತೆ ಪೂಜಿಸಿ ಆತನನ್ನು ಒಲಿಸಿ ವರಿಸಮ್ಮಾ ಕುವರೀ ಮದನ ಸುಂದರೀ॥

ಭಾಗವತರಕಂದ

ಆ ನೀಲಕೇತು ನೃಪನವಳ ನುಡಿಗೇಳ್ದಣುಗಿ
ನೀನಘಟಿತದ ವರನನೊಪ್ಪಿರುವೆ ಪೇಳ್ದೊಡಿ
ನ್ನೇನಪ್ಪುದೆಂದು ಚಿಂತಿಸುತಿರಲ್ಕಾ,
ತನನೊಪ್ಪಿಸಿ ಬೀಳ್ಕೊಂಡು ಬಳಿಕಾ॥
ಮಾನಿನಿ ಪುರೋದ್ಯಾನದೊಳ್ ಪ್ರವಾಹಿಪ ನರ್ಮ
ದಾನದಿಗೆ ಬಂದು, ಮಿಂದಲ್ಲಿ ಸುವ್ರತೆಯಾಗಿ
ನಾನಾ ವಿಧಾನದಿಂದರ್ಚಿಸಿದಳಗ್ನಿಯಂ
ಭಕ್ತಿಯಿಂದನುದಿನದೊಳೂ॥

ಭಾಗವತರು: ಕೇಳಿದರೇನಯ್ಯ ಭಾಗವತರೇ! ಈ ಪ್ರಕಾರವಾಗಿ ನೀಲಧ್ವಜನು, ಅಸಾಧ್ಯನಾಗಿಹ ಹುತವಹನನನ್ನು ತನ್ನ ಸುತೆಯು ಅನುಮೋದಿಸಿರುವುದನ್ನು ಕಂಡು ಚಿಂತೆಗೊಳಗಾಗಿರಲೂ, ಸ್ವಾಹಾದೇವಿಯು ಮನಸ್ಸನ್ನು ಚಲಿಸದೆ ತಮ್ಮ ಪುರದ ಉದ್ಯಾನವನದಲ್ಲಿ ಪ್ರವಹಿಸುವ ನರ್ಮದಾನದೀತೀರಕ್ಕೆ ಬಂದು, ಸ್ನಾನವಂಗೈದು ಶುಚಿರ್ಭೂತಳಾಗಿ ಅನುದಿನವೂ ಪಾವಕನನ್ನು ಭಕ್ತಿಯಿಂದ ಅರ್ಚಿಸುತ್ತಿದ್ದಳೈಯ್ಯಿ ಭಾಗವತರೇ॥

ಕಂದ

ದೇವ ನಿಮ್ಮಯ ದಿವ್ಯರೂಪವಾ
ಭಾವಿಸೊಲಿದಿಹೆ ಯನ್ನ ಮನದೊಳು
ಕಾವುದೆನ್ನನು ಕರವ ಪಿಡಿದೂ ಪರಮ ಹರುಷದೊಳು
ದೇವಿ ಧರಣೀ ಜಾತೆಯಳನೂ
ದೇವಪುರಪತಿ ನಿನ್ನೊಳುಗಿಸೇ
ಪಾವಕನೇ ನೀ ಪೊರೆದ ತೆರದೀ ಯನ್ನ ಸಲಹುವುದು

ಸ್ವಾಹಾದೇವಿ: ಹೇ ದೇವಾ! ವೈಶ್ವಾನರನೇ! ಹಿಂದೆ ದಶರಥಾತ್ಮಜನು ದಶಶಿರನು ಕೊಂಡೊಯ್ದ ಅಯೋ ನಿಜೆಯನ್ನು ನಿನ್ನಲ್ಲಿ ಉಗಿಸಲು, ಆಕೆಯು ಮುಡಿದಿದ್ದ ಪುಷ್ಪಗಳೂ ಸಹ ಬಾಡದೆ ಇರಲೂ ತಮ್ಮ ಕರಕಮಲಗಳಿಂದ ಧರಣಿಜೆಯನ್ನು ತೆಗೆದಪ್ಪಿ ದಶಶಿರಾರಿಗೆ ಒಪ್ಪಿಸಿ ಸಲಹಿದಂತೆ, ಮನವೆಲ್ಲವೂ ನಿನ್ನಲ್ಲಿಯೇ ಲೀನವಾಗಿರುವ ಯನ್ನಯ ಕರವಂ ಪಿಡಿದು ಸಲಹಬೇಕೆಂದು ಪ್ರಾರ್ಥಿಸುವೆನೈ ಅಗ್ನಿದೇವಾ ಮಹಾನುಭಾವ॥

ಭಾಗವತರು: ಕೇಳಿದರೇನಯ್ಯ ಭಾಗವತರೇ! ಈ ಪ್ರಕಾರವಾಗಿ ಸ್ವಾಹಾದೇವಿಯು ಹವ್ಯವಾಹನನನ್ನು ಭಕ್ತಿಯಿಂದ ಅನುದಿನವೂ ಪೂಜಿಸುತ್ತಿರಲೂ, ಆಕೆಯ ಪರಮಭಕ್ತಿಗೆ ಮೆಚ್ಚಿದ ಅಗ್ನಿದೇವನು, ಆಕೆಯ ಇಷ್ಠಾರ್ಥವನ್ನು ನೆರವೇರಿಸಲು ಭೂಸುರ ವೇಷವನ್ನು ಧರಿಸಿ ನೀಲಧ್ವಜ ನೃಪಾಲನ ಸಭಾಮಂದಿರಕ್ಕೆ ಬಿಜಯಂಗೈದನೈಯ್ಯ ಭಾಗವತರೇ॥

 

(ಅಗ್ನಿದೇವ ಬರುವಿಕೆ)

ತೆರೆದರುವು

ಪಾವನಾತ್ಮ ಪಾಪದೂರನೂ ಪರಿಶುದ್ಧನಾದ
ಪಾವಕನೂ ಸಭೆಗೆ ಬಂದನೂ॥

ರಾಜಮಕುಟ ಶಿರದಿ ಧರಿಸಿರೇ ಕರವೆರಡರಲ್ಲೀ
ರಾರಾಜಿಸುವಾ ಭರಣವೊಪ್ಪಿರೇ॥

ತರುಣಿ ಮಣಿಯ ಪರಮ ಭಕ್ತಿಗೇ ಸಂತೋಷ ಹೊಂದಿ
ಭರದಿ ಬಂದ ರಾಜನಲ್ಲಿಗೇ॥

ಹಿರಿಯ ಬಳ್ಳಾಪುರದ ವರದನೂ ಶಂಕರನ ಫಣಿಯೊಳ್‌
ಸ್ಥಿರದಿ ಇರುವ ಅಗ್ನಿದೇವನೂ॥

ಅಗ್ನಿ: ಯಲಾ ಚಾರ ಹೀಗೆ ಬಾ ಮತ್ತೂ ಹೀಗೆ ಬಾ. ಈಗ ಬಂದವರು ಧಾರೆಂದು ಪರಿ ಪರಿಯಿಂದ ಕರವೆರಡರಿಂದ ಮುಗಿದು ವಿಚಾರಿಸುತ್ತಿರುವೆ. ಆದರೆ ಯಮ್ಮ ವಿದ್ಯಮಾನವನ್ನು ಬಿತ್ತರಿಸುತ್ತೇನೆ. ಚಿತ್ತವಿಟ್ಟು ಕೇಳೋ ಚಾರ-ಗುಣಮಣಿಹಾರ॥

ಅಯ್ಯ ಸಾರಥೀ, ಘನ ರಜೋಗುಣದಲ್ಲಿ ಚತುರಾಸನನು ಯೆನಿಸಿ, ತಮೋಗುಣದಲ್ಲಿ ಶಂಕರನೆನಿಸಿ, ಸತ್ವಗುಣಾನುಗತಿಯಲ್ಲಿ ವಿಷ್ಣುವೆಂದೆನಿಸಿ ಜಗನ್ಮಯನಾಗಿ ಸರ್ವಾತ್ಮನು ಮಹೇಶ್ವರನು ಎನಿಸಿರುವ ಶ್ರೀಕೃಷ್ಣಪರಮಾತ್ಮನಿಗೆ ಗರುಡಧ್ವಜರಥವನ್ನೂ ಕಾಮೋದಕೀ ಗದೆಯನ್ನೂ, ಕೊಟ್ಟು ಕೀರ್ತಿಯಂ ಪಡೆದವನಾಗಿಯೂ, ಅಲ್ಲದೇ ಈ ಧರಣಿಗೆ ಅಧಿಕವಾಗಿ ಕಂಗೊಳಿಸುವ ಹಿರಿಯ ಬಳ್ಳಾಪುರ ವರಾಧೀಶ್ವರಾ, ಕಾಲ ವಿಜಯ ಶೂಲಿ ಮೃತ್ಯುಂಜಯ ಫಾಲಲೋಚನ ಪಾರ್ವತೀರಮಣನ ಭಾಳನೇತ್ರವೇ ಆವಾಸಸ್ಥಾನವೆನಿಸಿಕೊಂಡು, ಅಷ್ಠದಿಕ್ಪಾಲಕರೋಳ್ ಶ್ರೇಷ್ಠನಾಗಿ ಆಗ್ನೇಯ ದಿಕ್ಕಿಗೆ ಅಧಿಪತಿಯಾಗಿರುವ ಅಗ್ನಿದೇವನು ಬಂದು ಇದ್ದಾನೆಂದು ಈ ಪೊಡವಿಯೋಳ್ ಜಯಭೇರಿ ಬಾರಿಸೋ ದೂತ ರಾಜಸಂಪ್ರೀತ॥

ಈ ವರ ಸಭಾಸ್ಥಾನಕ್ಕೆ ನಾನು ಬಂದ ಪರಿಯಾಯವೇನೆಂದರೆ ನೀಲಧ್ವಜ ನೃಪಾಲನ ಸುತೆಯಾದ ಸ್ವಾಹಾದೇವಿಯು ಯನ್ನನ್ನು ವರಿಸಲೋಸುಗ ಪರಿ ಪರಿ ವಿಧವಾಗಿ ಸ್ತೋತ್ರ ಮಾಡುತ್ತಿರುವಳಾದ ಕಾರಣ ನಾನು ಆಕೆಯ ಭಕ್ತಿಗೆ ಮೆಚ್ಚಿ ಆಕೆಯೊಡನೆ ವೈವಾಹವಂ ಬೆಳೆಸಲೋಸುಗ ಬಂದು ಇರುತ್ತೇನೆ. ಈಗ ನಾನು ಬ್ರಾಹ್ಮಣ ವೇಷವನ್ನು ಧರಿಸಿ ನೀಲಧ್ವಜ ನೃಪಾಲನ ಆಸ್ಥಾನಕ್ಕೆ ಹೋಗಿ ಆತನಂ ಕಂಡು ಮುಂದಿನ ವಿಷಯವನ್ನು ತಿಳಿಯುವೆನೈಯ್ಯ ಸಾರಥೀ-ಸಂಧಾನಮತಿ॥

(ವಿಪ್ರವೇಷ ಧರಿಸಿ ಆಸ್ಥಾನಕ್ಕೆ ಬರುವಿಕೆ)

ಭಾಗವತರಕಂದ

ಪಾವಕಂ ಬಳಿಕ ಮೆಚ್ಚಿದನವಳ ನೋಂಪಿಗೆ, ಮ
ಹೀವಿಬುಧ ವೇಷಮಂ ತಾಳ್ದು ನೀಲಧ್ವಜನ
ಚಾವಡಿಗೆ ಬರಲಾತನಿದಿರೆದ್ದು ಸತ್ಕರಿಸಿ ಕೈ ಮುಗಿದು ಇಂತೆಂದನೂ॥

ಭಾಗವತರು: ಕೇಳಿದರೇನಯ್ಯ ಭಾಗವತರೇ ಈ ಪ್ರಕಾರವಾಗಿ ಅಗ್ನಿಪುರುಷನು ಬ್ರಾಹ್ಮಣ ವೇಷ ಧರಿಸಿ ನೀಲಧ್ವಜನ ಅರಮನೆಗೆ ಬರಲು ಆ ರಾಜನು ವಿಪ್ರನನ್ನು ಇದಿರುಗೊಂಡು ಸತ್ಕರಿಸಿ ಕೈಮುಗಿದು ಇಂತೆಂದನೈಯ್ಯ ಭಾಗವತರೇ॥

ನೀಲಧ್ವಜ: ನಮೋನ್ನಮೋ ಭೂಸುರನೇ ವಿಪ್ರಕುಲೋತ್ತಮನೇ॥

ಬ್ರಾಹ್ಮಣ: ಸಕಲ ಸನ್ಮಂಗಳಾನಿ ಭವಂತು ರಾಜೇಂದ್ರಾ ಸದ್ಗುಣ ಸಾಂದ್ರ॥

ದರುವು

ಗಗನಾಚಲನೆ ಸುಗುಣ ವರನೇ ಬಿಜಯಂಗೈದಿಹ ಪರಿಯ ಎನಗೆ
ದ್ವಿಜಕುಲೋತ್ತಮನೇ ಮಾಜದರುಹು ಬೇಡಿಕೊಂಬೆ, ಸುಜನವಿನುತನೇ॥

ಬ್ರಾಹ್ಮಣ: ಹೇ ಸ್ವಾಮೀ! ಭೂಸುರೋತ್ತಮರೇ, ನಮ್ಮ ಅರಮನೆಗೆ ತಾವು ದಯಮಾಡಿಸಿರುವ ಪರಿಯಾಯವೇನು. ಮಾಜದೆ ಯನ್ನೊಳು ಪೇಳುವಂಥವರಾಗಿರೈ ಭೂಸುರರೇ ವಿಪ್ರ ಕುಲೋತ್ತಮರೇ!

ದರುವು

ದಿನಪ ತೇಜನೇ ಪೇಳ್ವೆನೀಗ ವಿನಯದಿಂದಲೀ॥
ನಿನ್ನೊಳೂ ನಾಂ ಬಂದು ಇಹೆನು ಕನ್ಯಾಪೇಕ್ಷೆಯಲೀ॥

ಬ್ರಾಹ್ಮಣ: ಭೂಪಾಲರೆಂಬ ಚಕೋರ ಪಕ್ಷಿಗಳಿಗೆ ಚಂದ್ರಪ್ರಾಯನಾಗಿರುವ ಹೇ ಪ್ರಭುವೇ! ನಾನು ನಿನ್ನಲ್ಲಿಗೆ ಕನ್ಯಾಪೇಕ್ಷೆಯಿಂದ ಬಂದಿರುವುದಾಗಿ ತಿಳಿಸುವೆನೈಯ್ಯ ದೊರೆಯೇ ಧೈರ‌್ಯದಲ್ಲಿ ಕೇಸರಿಯೇ॥

ದರುವು

ಕೊಡುವುದೆನಗೆ ಪರಿಣಯದೊಳು ಜಲಜನೇತ್ರೆಯನು
ಕೊಡಲು ಬಹುದು ದ್ವಿಜಗೆ ರಾಜರು ದೃಡದಿ ಸುತೆಯನು॥

ಬ್ರಾಹ್ಮಣ: ಹೇ ರಾಜೇಂದ್ರಾ! ಜಲಜಾಕ್ಷಿಯಾದ ನಿನ್ನ ಸುತೆಯನ್ನು ಹರುಷದಿಂದ ಯನಗೆ ಕೊಟ್ಟು ವಿವಾಹ ಮಹೋತ್ಸವವನ್ನು ಬೆಳೆಸು. ನೀನು ಇದಕ್ಕಾಗಿ ಮನದೊಳು ಚಿಂತಿಸಬೇಡ. ಶೂದ್ರೈವಭಾರ‌್ಯಾ ಶೂದ್ರಸ್ಯ ಸಾಚಚ ಸ್ವಾ ಚ ವಿಶಃಸ್ಮತೇ ತೇ ಚ ಸ್ವಾ ಚೈವ ರಾಜ್ಞಶ್ಚ ತಾಶ್ಚ ಸ್ವಾ ಜಾಗ್ರ ಜನ್ಮನಃ॥ಎಂದು ಶೃತಿ ಪ್ರಮಾಣವಿರುವುದರಿಂದ ಧರಣಿಯೊಳು ಧರಣೀ ಪಾಲಕರು ತಮ್ಮ ವರ ಸುತೆಯರನ್ನು  ಧರಣಿಸುರರಿಗೆ ಕೊಟ್ಟು ಪರಿಣಯವಂ ಬೆಳಸಬಹುದೈಯ್ಯ ರಾಜೇಂದ್ರಾ ಸದ್ಗುಣಸಾಂದ್ರ॥

ಕಂದ

ಕನ್ಯಾರ್ಥಿಯಾಗಿ ನೀಂ ಬಂದು ಬೇಡುವುದಿಳೆಯೊ
ಳನ್ಯಾಯವಲ್ಲ ವಿಪ್ರರ್ಗೆ ಕೊಡಬಹುದು ರಾ
ಜನ್ಯರದಕೇನೊಂದು ಛಲದಿಂದ ತನ್ನ ಕುವರಿಗೆ ಮರುತ್ಸಖನಲ್ಲದೇ॥
ಅನ್ಯರಂ ಪತಿಯಾಗಿ ವರಿಸಬೇಕೆಂಬ ಚೈ
ತನ್ಯಮಿಲ್ಲೇನು ಮಾಡುವೆನಿನ್ನು ನಿನಗೀವ
ಧನ್ಯತೆಗೆ ಬಾಹಿರಂ ತಾನಾದೆನಲಾ ಧರಣಿ ಸುರ ಕುಲೋತ್ತಮನೇ॥

ನೀಲಧ್ವಜ: ಹೇ ಧರಣೀಸುರರೇ ಯನ್ನ ಸುತೆಯನ್ನು ನಿಮಗೆ ಕೊಟ್ಟು ಪರಿಣಯ ಮಾಡುವುದಕ್ಕೆ ಹೇಗೆಂದು ಯೋಚನೆ ಮಾಡುತ್ತಿಲ್ಲ. ಆದರೆ ಒಂದು ಮಾತನ್ನು ಲಾಲಿಸಬೇಕು. ನಮ್ಮ ಕುವರಿಯಾದ ಸ್ವಾಹಾದೇವಿಯು ಅಷ್ಠದಿಕ್ಪಾಲಕರೋಳ್ ಶ್ರೇಷ್ಠನಾದ ಅಗ್ನಿಯನ್ನು ತನ್ನ ಮನದಲ್ಲಿ ಪತಿಯಾಗಿ ವರಿಸಿದವಳಾಗಿ, ಅನ್ಯ ಪುರುಷರನ್ನು ಯನಗೆ ಸಮಾನರಾಗಿ ತಿಳಿದಿರುತ್ತಾಳಾದ ಕಾರಣ ಈಗ ನಾನು ನಿಮಗೆ ಆಕೆಯನ್ನು ಕೊಟ್ಟು ವೈವಾಹ ಸಂಬಂಧ ಬೆಳೆಸುವ ಭಾಗ್ಯಕ್ಕೆ ಬಾಹಿರನಾಗಿರುತ್ತೇನೈ ಭೂಸುರರೇ ವಿಪ್ರವರ‌್ಯರೇ॥

ಕಂದರಾಗಬೇಗಡೆ

ಪ್ರಾಪ್ತಮಾದುದು ನಿನ್ನ ಮಗಳೆಣಿಕೆ: ಸುವ್ರತ, ಸ
ಮಾಪ್ತಿಯಂ ಮಾಡಿಸಿನ್ನಾನಗ್ನಿ ಸಂಶಯ
ವ್ಯಾಪ್ತಿಯಂ ಬಿಡು ಕುಡು ನಿಜಾತ್ಮಜೆಯನು
ಹರುಷದಿಂ ನಡೆಸು ಪರಿಣಯವನೂ॥

ಬ್ರಾಹ್ಮಣ: ಹೇ ರಾಜೇಂದ್ರ ಸುವ್ರತೆಯಾದ ನಿನ್ನಾತ್ಮಜೆಯ ಮನೋರಥವು ಸಫಲವಾಯಿತೆಂದು ತಿಳಿ. ನಾನು ದಿಕ್ಪಾಲಕನಾದ ಅಗ್ನಿಪುರುಷನು ಇನ್ನು ನಿನ್ನ ಮನದ ಸಂಶಯವನ್ನು ಬಿಟ್ಟು, ಯನಗೆ ನಿನ್ನ ತನುಜೆಯನ್ನು ಕೊಟ್ಟು ಪರಿಣಯವಂ ಮಾಡುವ ಕಾರ‌್ಯೋನ್ಮುಖನಾಗೈಯ್ಯೋ ಭೂವರ ಹರ ಕೊಡಲಿ ನಿನಗೆ ವರ॥