ಕಂದಾರ್ಧರೇಗುಪ್ತಿ

ಇಂದಿರಾಮಣಿ ಕೇಳೆಲೆ ಕಂದರ್ಪಮದ ಭಯಾನೇ
ಚಂದಿರಾನನೇ ಚಂದದಿಂ ಪೇಳುವೆ ಸರಸಿಜ
ನಯನೆ ಮುಂದಿನಾ ಪರಿಯಾ॥
ಇಂದು ಚಿತ್ರವನೂ ಅಂದದಿಂ ಬರೆಸೀ
ಇಂದು ಚಿತ್ರವನೂ॥
ಕಂದಾ ಸ್ವಾಹಾ ದೇವಿ ಗಿಂದು ತ್ವರಿತದಿ ನಾನೂ
ಸುಂದರಾಂಗನ ನೋಡಿ ಚಂದದಿಂ ಲಗ್ನವನೂ॥
ಇಂದು ಮಾಡುವೆನೂ ಬಿಡುವ ಚಿಂತೆಯನೂ
ಇಂದು ಮಾಡುವೆನೂ॥

ನೀಲಧ್ವಜ: ಮಧುಕರಗಳಂತೆ ಅತಿಕಪ್ಪಾಗಿ ಚಲಿಸುತ್ತಿರುವ ಮುಂಗುರುಳುಳ್ಳ ಹೇ ರಮಣೀ ಧಾರುಣಿಯ ನೃಪವರ್ಗದವರನ್ನಲ್ಲದೇ, ಗಂಧರ್ವ ಯಕ್ಷ, ಉರಗ ಸುರಾಸುರರು ದಿಕ್ಪಾಲಕರನ್ನು ಪಟದ ಮೇಲೆ ರೂಪಿಸಿ ತಂದು ನಮ್ಮ ಸುತೆಯಾದ ಸ್ವಾಹಾದೇವಿಗೆ ತೋರಿಸುವೆನು. ಹೇ ನಾರಿ, ಆಕೆಯು ಯಾವ ಶ್ರೇಷ್ಠ ಪುರುಷನ ಭಾವಚಿತ್ರವನ್ನು ನೋಡಿ ಶಶಿಯನ್ನು ಕಂಡ ಶರಧಿಯಂತೆ ತನ್ನ ಮನ ಹರುಷವನ್ನು ವ್ಯಕ್ತಪಡಿಸುವಳೋ ಆ ಪುರುಷ ಶ್ರೇಷ್ಠನಿಗೆ ನಮ್ಮ ಮಗಳಾದ ಸ್ವಾಹಾದೇವಿಯನ್ನು ಕೊಟ್ಟು ಕಲ್ಯಾಣ ಮಹೋತ್ಸವವನ್ನು ಬೆಳೆಸುವೆನು ಕಾಂತೆ-ಬಿಡು ಮನದ ಚಿಂತೆ॥

ಕಂದಾರ್ಧ

ಜಯವಾಗಲಿ ರಮಣಾ ಜಯ ಸುಗುಣಾ ಭರಣಾ
ಭಯ ದುರಿತ ನಿವಾರಣಾ, ಯನ್ನ ಪ್ರಾಣ ರಮಣಾ॥
ತೋಯಜಾಕ್ಷದೀನ ಶರಣ್ಯ ಜಯ ಕೃಪಾ ಭ
ರಣಾ, ಭಾವಚಿತ್ರಗಳಾ॥ಚಿತ್ರಪಟಗಳಾ॥

ಬರೆಸೈಯ್ಯ ರಮಣಾ॥ಕರುಣಾ ಭರಣಾ
ತರಿಸೈಯ್ಯ ರಮಣಾ॥
ರಾಯ ನೀವೀಗಲೇ ಕಾಯಜ ರೂಪನಾ
ಆಯತದಿಂ ತಂದು ತೋಯಜಾಕ್ಷಿಗೆ ಇಂದೂ॥
ಲಗ್ನವ ಮಾಡೂ ಆನಂದಗೂಡು
ಲಗ್ನವ ಮಾಡೂ॥

ಜ್ವಾಲೆ: ಹೇ ಭೂನಾಥ ಕೇಳೆನ್ನ ಪ್ರಾಣನಾಥ, ನೀವು ಯತ್ನಿಸುವ ಮಂಗಳ ಕಾರ‌್ಯಕ್ಕೆ ನಿರ್ವಿಘ್ನತೆಯಿಂದ ಜಯವಾಗಲಿ. ಕನ್ಯಾಪಿತೃತ್ವಂ ದುಃಖಾಯ ಅಂದರೆ ಕನ್ಯೆಯ ಮಾತಾಪಿತೃಗಳಿಗೆ ನಿರಂತರವೂ ದುಃಖವಲ್ಲದೆ, ಸುಖವಿಲ್ಲ ಎಂಬಂತೆ. ಈಗ ಪ್ರಾಪ್ತವಯಸ್ಕಳಾದ ಕುವರಿಗೆ ತಕ್ಕ ವರನನ್ನು ನೋಡಿ ಪರಿಣಯವಂ ಮಾಡದೆ ಇರಲೂ ಧಾರುಣೀ ಜನರು ಯಮ್ಮನ್ನು ಜರಿದು ಆಡಿಕೊಂಬುವರಲ್ಲದೇ ಗಿರಿಜೇಶ ಸೋಮೇಶನು ಎಷ್ಠು ಮಾತ್ರಕ್ಕೂ ಮೆಚ್ಚಲಾರನು. ಆದ ಕಾರಣ ಹೇ ಸ್ವಾಮಿ ! ನೀವು ಹೇಳಿದ ಪ್ರಕಾರ ಬಹು ಆಯತದಿಂದ ಕಾಯಜರೂಪನಾದ ವರನನ್ನು ತಂದು ನಮ್ಮ ತೋಯಜಾಕ್ಷಿಗೆ ವೈಭವಾನಂದಗಳಿಂದ ವಿವಾಹವನ್ನು ನಡೆಸೈಯ್ಯ ಈಶನೇ-ಪ್ರಾಣೇಶನೇ॥

ನೀಲಧ್ವಜ: ಕಮಲಗಂಧಿಯಾದ ಜ್ವಾಲೆಯೇ ಕೇಳು: ನಾವು ಈಗಲೇ ಆಸ್ಥಾನಕ್ಕೆ ತೆರಳಿ ಆಪ್ತ ಪ್ರಧಾನರಿಗೆ ಈ ಕಾರ‌್ಯವನ್ನು ವಿವರಿಸಿ ಅತಿ ತ್ವರಿತದಿಂದ ಚಿತ್ರಪಟಗಳನ್ನು ಸಿದ್ಧಪಡಿಸುತ್ತೇನೆ. ಇನ್ನು ನೀನು ಅರಮನೆಗೆ ತೆರಳುವಂಥವಳಾಗೆ ಕಾಂತೆ ಮತಿ ಗುಣವಂತೆ.

ಜ್ವಾಲೆ: ಅದೇ ಪ್ರಕಾರ ಆಗಬಹುದು ಸ್ವಾಮಿ ಭಕ್ತ ಜನ ಪ್ರೇಮಿ॥

ನೀಲಧ್ವಜ: ಅಯ್ಯ ಸಾರಥೀ, ಯನ್ನ ಪ್ರಧಾನರೋಳ್ ಶ್ರೇಷ್ಠನಾದ ಸತ್ಯಕೀರ್ತಿಯನ್ನು ಅತಿಜಾಗ್ರತೆ ಕರೆಸೋ ಚಾ ಯನ್ನ ಆಜ್ಞಾಧಾರ॥

ದರುವು
ಮಾಡುವೆ ಲಗ್ನವನೂ ಸುಕುಮಾರಿಗೆ
ನೋಡಿ ಅನುರೂಪನನೂ॥
ರೂಢಿಯೊಳಗೆ ಕೀರ್ತಿ ರೂಢಿಸುವಂದದೀ॥
ಮಾಡೈಯ್ಯ ಮಂತ್ರಿ ನೀನೂ ॥

ನೀಲಧ್ವಜ: ಅಯ್ಯ ಮಂತ್ರಿ, ಲೋಕದಲ್ಲಿ ಹೆಣ್ಣು ಮಕ್ಕಳನ್ನು ಪಡೆದ ಮಾನವನು ಕಾರ್ಪಣ್ಯ ಪಡುವನು ಎಂಬ ವಚನವು ಅನುಭವಸಿದ್ಧವಾಗಿ ಯನಗೆ ಕಾಣುತ್ತ ಇದೆಯಾದ ಕಾರಣ, ಪೂಜ್ಯರಾದ ಮಹಾಕುಲೀನತ್ವಾದಿ ಗುಣಗಳಿಂದೊಪ್ಪಿ ಮೆರೆಯುತ್ತಾ ವಿವಾಹ ವಯಸ್ಕಳಾಗಿರುವ ಯನ್ನ ತನುಜೆಗೆ ತಕ್ಕ ಅನುರೂಪ ವರನನ್ನು ನೋಡಿ, ಪರಿಣಯವಂ ಮಾಡಿ ಲೋಕ ನಿಂದೆಗೆ ಬಾಹಿರನಾಗಬೇಕೈ ಪ್ರಧಾನಿ॥

ದರುವು

ಮೂರು ಲೋಕದೊಳಿರುವಾ ಬಲಯುತರೊಳು
ವರರೂಪರಾಗಿರುವಾ॥
ಪುರುಷ ಶ್ರೇಷ್ಠರುಗಳಾ ಪಟದಲ್ಲಿ ರೂಪಿಸಿ
ತರಿಸೈಯ್ಯ ಬೇಗ ಸಚಿವಾ॥

ನೀಲಧ್ವಜ: ಅಯ್ಯ ಸಚಿವ ಶಿಖಾಮಣಿ! ಆದ ಕಾರಣ ಅತಿ ತ್ವರೆಯಿಂದ ನೀನು ಮೂರು ಲೋಕದಲ್ಲಿ ಶ್ರೇಷ್ಠರಾಗಿರುವ ಪುರುಷರ ಭಾವಚಿತ್ರಗಳನ್ನು ಪಟದಲ್ಲಿ ರೂಪಿಸಿ ಯನಗೆ ತಂದೀಯಬೇಕೈಯ್ಯ ಮಂತ್ರಿ ಶೇಖರಾ- ರಾಜ ಕಾರ‌್ಯ ದುರಂಧರಾ॥

ದರುವು

ಧಾರುಣಿಯೊಳಗೆ ಹಿರಿಯಾ ಬಳ್ಳಾಪುರದಾ
ವರ ಕಾತ್ಯಾಯಿನಿಯ ಪ್ರಿಯಾ॥
ಹರನೂ ಸೋಮೇಶನೂ ದೊರಕಿಸಿ ವರನನೂ
ಕರುಣಿಸಲೆನಗಭಯಾ॥

ನೀಲಧ್ವಜ: ಅಯ್ಯ ಪ್ರಧಾನಿ! ಈ ವಸುಧೆಗೆ ಪೊಸತೆನಿಸಿ ಮೆರೆಯುವ ಹಿರಿಯ ಬಳ್ಳಾಪುರವಾಸ ವರ ಕಾತ್ಯಾಯಿನೀ ಪ್ರಿಯನಾದ ಶ್ರೀ ಸೋಮೇಶ್ವರನೂ ಯನ್ನ ಸುತೆಗೆ ತಕ್ಕ ಮಾರ ಸುಂದರನನ್ನು ಕರುಣಿಸಿ ಸಲಹಬೇಕೈ ಪ್ರಧಾನಿ ನೀತಿ ಜ್ಞಾನಿ॥

ದರುವು

ಇಷ್ಠ ಯೋಚನೆ, ಏಕೆ ರಾಯನೆ ನೆಟ್ಟನೇ ಕಲಿ,
ರೂಪಿನಿಂದಲೀ ಶ್ರೇಷ್ಠರಹ ಮೂಲೋಕ
ಪುರುಷರ, ದಿಟ್ಟ ಚಿತ್ರಗಳಾ॥

ಆದರದಿ ನಾ, ಬರೆಸಿಕೊಡುವೆನು ಪದುಳ
ವೈಭವದಿಂದ ನಡೆಸು ಪದುಮ ಗಂಧಿನಿಯಾದ
ಕುವರಿಗೇ ಮುದದಿ ಪರಿಣಯವಾ॥

ಮಂತ್ರಿ: ಅರಿಗಳೆಂಬ ಕರಿಗಳ ಹಿಂಡಿಗೆ ಕಂಠೀರವ ಪ್ರಾಯನಾದ ರಾಜೇಂದ್ರನೇ ಲಾಲಿಸು, ಯನ್ನಂಥಾ ಅಜ್ಞಾನಿಗಳಿಗೆ ಸುಜ್ಞಾನಿಗಳಾದ ನೀವು ಜ್ಞಾನೋಪದೇಶಗೈಯುವ ಚೈತನ್ಯವುಳ್ಳವರಾಗಿ ಇಷ್ಠು ಮಾತ್ರಕ್ಕೆ ಯೋಚಿಸಲೇಕೇ ಅತಿ ತೀವ್ರದಿಂದ ಮೂರು ಲೋಕದಲ್ಲಿ ಶ್ರೇಷ್ಠರಾದವರ ಭಾವಚಿತ್ರಗಳನ್ನು ಬರೆಸೀಯುವೆನು. ಅತಿ ಮುದದಿಂದ ಪದುಮಾಕ್ಷಿಯು ಒಪ್ಪಿದ ವರನಿಗೆ ಆಕೆಯಂ ಕೊಟ್ಟು ಪದುಳ ವೈಭವದಿಂದ ವೈವಾಹವನ್ನು ಬೆಳೆಯಿಸೈಯ್ಯ ದೊರೆಯೇ-ಯೋಚಿಸುವುದು ಸರಿಯೇ॥

ನೀಲಧ್ವಜ: ಅಯ್ಯ ಮಂತ್ರಿ! ಅದೇ ಪ್ರಕಾರವಾಗಿ ನಮ್ಮ ರಾಜ್ಯದ ಕುಶಲ ಚಿತ್ರ ಬರಹಗಾರರನ್ನು ಕರೆಯಿಸಿ ಶ್ರೇಷ್ಠ ಪುರುಷರ ಚಿತ್ರಗಳನ್ನು ಬರೆಯಿಸುವ ಕಾರ‌್ಯೋನ್ಮುಖನಾಗೈ ಮಂತ್ರಿಶೇಖರಾ-ರಾಜಕಾರ‌್ಯ ದುರಂಧರಾ॥

ಮಂತ್ರಿ: ತಮ್ಮ ಅಪ್ಪಣೆಯನ್ನು ಶಿರಸಾವಹಿಸಿರುವೆನು ಸ್ವಾಮಿ ಭಕ್ತಜನ ಪ್ರೇಮೀ॥

ಭಾಗವತರ ಕಂದ

ಧರಣೀಶ ಕುಲ ರನ್ನ ಲಾಲಿಸು
ದುರದೊಳಗರಿನೃಪರ ಜೈಸುತಾ ಪ್ರವೀರನೂ॥
ವರಪಿತನ ಕಾಣುವ ತವಕದಿಂ
ದರಮನೆಗಾಗ ಬಿಜಯಂಗೈದ ನೊಲವಿನಲೀ॥

ಭಾಗವತರು: ಕೇಳಿದರೇನಯ್ಯ ಭಾಗವತರೇ. ಈ ಪ್ರಕಾರವಾಗಿ ನೀಲಧ್ವಜನು ತನ್ನ ಸುತೆಯ ವೈವಾಹ ಕಾರ‌್ಯಭಾರದಲ್ಲಿ ನಿರತನಾಗಿರಲೂ, ಇತ್ತಲಾ ಅರಮನೆಯ ಬೊಕ್ಕಸದ ಕರಣೀಕರು ಲೆಕ್ಕಗಳನ್ನು ನೋಡಿ ಗೌಳ ದೇಶದ ರಾಜನು ಕಪ್ಪವಂ ತೆರಲಿಲ್ಲವೆಂಬುದಾಗಿ ಅರುಹಲು ಅದಂ ತಿಳಿದಾ ಪ್ರವೀರನೂ, ಆತನ ಮೇಲೆ ದಂಡೆತ್ತಿ ಹೋಗಿ ಧುರದಲ್ಲಿ ಜೈಸಿ ಆತನಿಂದ ಕಪ್ಪವಂ ತಂದು  ತಂದೆಯ ಚರಣಾರವಿಂದಕ್ಕೆ ಒಪ್ಪಿಸಿದನೈಯ್ಯಿ ಭಾಗವತರೇ॥

 

(ಪ್ರವೀರ ಬರುವಿಕೆ)

ತೆರೆದರುವು

ಧರಣಿ ಮಂಡಲ ಮಧ್ಯದೊಳಗೆ
ಮೆರೆವ ಮಾಹಿಷ್ಮತಿಯ ಪುರದ
ವರ ನೃಪಾಲನ ಸುತ ಪ್ರವೀರನೂ ಧುರ ಭಯಂಕರನೂ                  ॥

ಸುರಗಿ ಹಿರಿಯಬ್ಬಣ ವಢಾಯುಧ
ಹರಿಗೆ ಚಕ್ರ ಮುಸುಂಡಿ ಮುದ್ಗರ
ಪರಶು ಮೊದಲಾದಖಿಳ ಶಸ್ತ್ರಾ ಸ್ತ್ರಗಳ ಕೋವಿದನೂ                      ॥

ಬಂದನಾಕ್ಷಣ ವರ ಪ್ರವೀರನೂ
ಇಂದುಧರ ಶ್ರೀ ಸೋಮನಾಥನಾ
ಚಂದದಿಂ ಮನದೊಳಗೆ ಧ್ಯಾನಿಸಿ ಬಂದನಾ ಸಭೆಗೆ                        ॥

ಪ್ರವೀರ: ಯಲಾ ಚಾರ ಹೀಗೆ ಬಾ. ಮತ್ತೂ ಹೀಗೆ ಬಾ. ಭಲಾ, ಚಾರ! ಹೆಚ್ಚಿದವರ ಕೆಚ್ಚನ್ನು ಕಾಳ್ಕಿಚ್ಚಿನಂತೆ ಕೊಚ್ಚಿ ನುಚ್ಚು ನೂರಾಗಿ ಮಾಡಿ ಹೆಚ್ಚಿದ ಬಲದಿಂದ ತನ್ನಿಚ್ಚಾನುಸಾರ ಪೊಚ್ಚ ಪೊಸ ಕೆಂಡಗಳಂತೆ ಸೆವ ಮುದ್ಗರ. ಮುಸಂಡಿ, ತೋಮರ ಖಡ್ಗ ಮೊದಲಾದ ಆಯುಧಗಳನ್ನು ಬಹು ಶಿಸ್ತಿನಿಂದ ಹಸ್ತದೋಳ್ ಧರಿಸಿ, ಸಾರಿ ಸಂಗ್ರಾಮದಿಂದ ಆಗಮಿಸುತ್ತಿರುವ ಯನ್ನನ್ನು ಬಹು ಮೆಚ್ಚಿಕೆಯಿಂದ ಧಾರೆಂದು ಉಚ್ಚರಿಸುವ ನೆಚ್ಚಿನ ಪುರುಷ ನೀ ಧಾರೋ ಬದಲುತ್ತರವ ಸಾರೋ॥

ಭಲಾ ಸಾರಥಿ ಹಾಗಾದರೆ ಯಮ್ಮ ವಿದ್ಯಮಾನವನ್ನು ಬಿತ್ತರಿಸುತ್ತೇನೆ ಚಿತ್ತವಿಟ್ಟು ಕೇಳೋ ಸಾರಥೀ ಸಕಲ ಸಂಧಾನಮತಿ॥

ಅಯ್ಯ ಸಾರಥೀ, ಈ ಭೂಮಂಡಲದೋಳ್ ರಾರಾಜಿಸುವ ಚೋಳ, ಸಿಂಹಳ ಪಾಂಡ್ಯ ಕೇರಳ ಮಾಳವ ಆಂಧ್ರ ಕರೂಷ ಬರ್ಬರ ಗೌಳ ಕೋಸಲ ಮೊದಲಾದ ದೇಶಂಗಳಿಗೆ ಕಳಶಪ್ರಾಯವಾಗಿರುವ ಪುರ ಮಾಹಿಷ್ಮತೀ ನಗರವನ್ನು ದೇವೇಂದ್ರನಿಗಿಮ್ಮಿಗಿಲಾದ ವೈಭವದಿಂದ ಪಾಲಿಸುವ ನೀಲಧ್ವಜ ಭೂಪಾಲರ ಮುದ್ದುಕುಮಾರ ಮಾರ ಸುಂದರಾಕಾರ, ಅರಿ ಭಯಂಕರಾ, ಸಮರಧೀರ ಅಸಮವೀರ. ಪ್ರವೀರನು ಬಂದು ಇದ್ದಾನೆಂದು ಈ ಭೂಮಿಯೋಳ್ ಒಂದೆರಡು ಬಾರಿ ಜಯಭೇರಿ ಹೊಡೆಯಿಸೋ ದೂತ ರಾಜ ಸಂಪ್ರೀತ.

ಭಳಿರೇ ಸಾರಥಿ, ಅಂದವಾದ ಈ ವರಸಭೆಗೆ ಚೆಂದದಿಂದ ನಾ ಬಂದ ಕಾರಣವೇನೆಂದರೆ ಯನ್ನ ಜನಕರಾದಂಥ ನೀಲಧ್ವಜ ಭೂಪಾಲರನ್ನು ಕಾಣುವ ಉದ್ಧಿಶ್ಯ ಬಾಹೋಣವಾಯ್ತು. ಧಾವಲ್ಲಿರುವರೋ ತೋರಿಸೋ ಚಾರಕಾ ಯನ್ನ ಆಜ್ಞಾಧಾರಕ॥

ನಮೋ ನಮಸ್ಕಾರಂಗಳೈಯ್ಯಾ ಜನಕಾ ಕ್ಷಿತಿಜನಪಾಲಕಾ॥

ನೀಲಧ್ವಜ: ಧೀರ್ಘಾಯುಷ್ಯಮಸ್ತು ಬಾರೈ ಪ್ರವೀರ- ರಣರಂಗಧೀರ॥

ದರುವು

ಸುಜನಪಾಲ ಜನಕ ಪೇಳ್ವೆ ವಿಜಯ ವಾರ್ತೆಯಾ
ನಿಜದಿ ನೋಡೆ ಪಡೆದರೀಗ ತ್ರಿಜಗ ಕೀರ್ತಿಯಾ॥೧॥

ಪ್ರವೀರ: ನೀತಿ ಲಲನಾಪತಿಯಾದ ಹೇ ತಂದೆ! ಅಪ್ರತಿಹತವಾದ ಶೌರ್ಯ, ಧೈರ್ಯ ಪರಾಕ್ರಮಗಳಿಂದ ಜಯಭೇರಿಯನ್ನು ಬಾರಿಸಿ, ಮೂಜಗದಲ್ಲಿ ನಿನ್ನ ಕೀರ್ತಿಯು ಪ್ರಸರಿಸುವಂತೆ ಮಾಡಿರುವ ವಾರ್ತೆಯನ್ನು ಅರುಹುತ್ತೇನೆ ಲಾಲಿಸೈಯ್ಯ ಜನಕಾ॥

ದರುವು

ಅತುಲವೀರ‌್ಯ ಶೌರ‌್ಯದಿಂದ, ಕ್ಷಿತಿಪ ಗೌಳನಾ
ಘಾತಿಪಡಿಸಿ ರಣದೀ ಕಪ್ಪ ಹಿತದಿ ತಂದೆ ನಾ॥೨॥

ಪ್ರವೀರ: ಹೇ ಜನಕಾ! ಆ ಗೌಳ ದೇಶದ ರಾಜನು ನನ್ನೆದುರು ನಿಲ್ಲಬಲ್ಲನೇ, ಸಿಂಹದ ಮುಂದೆ ಜಿಂಕೆಗಳು ನಿಲ್ಲಬಲ್ಲವೇ, ಮಳೆಗಾಲವು ಮಿಂಚುಗಳಿಂದಲೂ, ಧಾರಾಪೂರ್ವಕವಾಗಿ ಸುರಿಯುತ್ತಲಿರುವ ಆನೆ ಕಲ್ಲುಗಳಿಂದಲೂ ಅಲಂಕೃತವಾಗಿದ್ದಂತೆ ಜಯಶೀಲಗಳಾದ ಬಿಲ್ಲು ಬಾಣಗಳಿಂದ ಕೂಡಿ ಬೆಳೆಯುತ್ತಿರುವ ಸೇನಾ ಸಮೂಹದಿಂದ ಆ ದುರುಳನನ್ನು ಧೂಳೀಕೃತಮಾಡಿ, ಶರಣಾಗತನಾದ ಆತನಿಂದ ಅಪಾರವಾದ ಅಮೂಲ್ಯ ಮುತ್ತುರತ್ನಗಳನ್ನೂ, ಗಜತುರಗ ದಾಸದಾಸೀ ಜನಗಳನ್ನು ಕಪ್ಪಕಾಣಿಕೆಯಾಗಿ ಸ್ವೀಕರಿಸಿ ತಂದಿರುತ್ತೇನೈ ತಂದೆ ಪೇಳುವೆನು ಮುಂದೆ॥

ದರುವು

ಕರಿಯ ಘಟೆಯೂ ಚಟುಲವಾಜಿ ವರ ಪದಾತಿಯಾ
ಕರದ ಖಡ್ಗ ದಿಂದ ತರಿದೆ ಅರಿಯ ಸೇನೆಯಾ ॥

ಪ್ರವೀರ: ಹೇ ತಾತ! ಹೆಗಲಿನಲ್ಲಿದ್ದ ಪಟ್ಟ ಕತ್ತಿಯನ್ನು ಒರೆಯಿಂದ ತೆಗೆದವನಾಗಿ, ಝಳಪಿಸುತ್ತಾ ಬೊಬ್ಬೆಯಿಟ್ಟು ಒಟ್ಟುಗೂಡಿ ಎದುರಾಳಿಗಳ ಖೇಡ್ಯವನ್ನು ತುಂಡುತುಂಡಾಗಿ ಬೀಳುವಂತೆ ಹೊಡೆದುಹಾಕಿ ಶಿರಸ್ತ್ರಾಣವನ್ನು ಹೊಡೆದು ಭುಜಗಳನ್ನು ಖಂಡಿಸಿ, ಗಜ ತುರಗಗಳನ್ನು ತುಂಡು ತುಂಡಾಗಿ ಸೀಳಿ, ಮೇಲಕ್ಕೆ ಹಾರುತ್ತಲಿರುವ ಶಿರಗಳನ್ನು ಗುರಿಯಿಟ್ಟು ಕತ್ತರಿಸುತ್ತಾ, ಅತಿಬಲದ ಎಣೆಯಿಲ್ಲದ ಶೌರ‌್ಯದಿಂದ ಕಾದಾಡಿ ಜೈಸಿ ಬಂದೆನೈಯ್ಯ ತಾತಾ ಲೋಕ ವಿಖ್ಯಾತ॥

ದರುವು

ಹಿರಿಯ ಬಳ್ಳಾಪುರದ ಒಡೆಯ ಗಿರಿಜೆಯರಸನಾ
ಕರುಣದಿಂದ ಧುರವ ಜೈಸಿ ಚರಣದೆಡೆಗೆ ನಾ॥

ಪ್ರವೀರ: ಹೇ ತಂದೆ ಈ ಧರೆಯೊಳಗೆ ಅಧಿಕವಾಗಿ ರಂಜಿಸುವ ಹಿರಿಯ ಬಳ್ಳಾಪುರವಾಸ ಶ್ರೀ ಸೋಮೇಶ್ವರನ ಕರುಣ ಕಟಾಕ್ಷದಿಂದ, ಯುದ್ಧರಂಗದಲ್ಲಿ ರಥಗಳ ಚೀತ್ಕಾರ ಧ್ವನಿ ಹೆದೆಗಳ ಠಂಕಾರ ಧ್ವನಿ ಆನೆಗಳ ಘಾತ್ಕಾರನಾದ, ಪಟ್ಟ ಕತ್ತಿಗಳ ಠಣತ್ಕಾರ ಶಬ್ದ, ಬಾಣಗಳ ಛಟಭಟ ಧ್ವನಿಗಳಿಂದ ಅತಿ ಚಮತ್ಕಾರವನ್ನು ಪಡೆದು ಭೀಕರವಾಗಿ ರಕ್ತದಲ್ಲಿ ತೇಲಾಡುವ ಮಾಂಸ ಖಂಡಗಳಿಂದ ಭೂತ ಪ್ರೇತಂಗಳಿಗೆ ಅತಿಯಾದ ಔತಣವನ್ನುಂಟುಮಾಡಿ ಬಂದೆನೈಯ್ಯ ಜನಕಾ-ಕ್ಷೋಣಿ ಜನಪಾಲಕ॥

ದರುವು

ಧುರವ ಸುತನೇ ಗೆಲಿದೆಯಾ ಅರಿಯ ಶಿರವ ತರಿದೆಯಾ
ಹರುಷ ಯೆನಗೆ ಇತ್ತೆಯಾ ಕರವ ಬಿಡದೆ ತಂದೆಯಾ॥

ನೀಲಧ್ವಜ: ಹೇ ಸುಕುಮಾರ ಲೋಕದಲ್ಲಿ ಕಮಲವು ಕಳಂಕ ರಹಿತವಾಗಿ, ರವಿ ಕಿರಣ ಸಂಪರ್ಕದಿಂದ ಅರಳುವುದಾಗಿ, ಸದ್ಗುಣಭರಿತವಾಗಿ, ಮನೋಹರವಾಗಿ, ತನ್ನ ಮನೋಹರತೆಯಿಂದಲೇ ಹರಡಿದ ಕೀರ್ತಿಯುಳ್ಳದ್ದಾಗಿರುವುದರಿಂದ ಶ್ರೀದೇವಿಗೆ ವಾಸಸ್ಥಾನವೆನಿಸಿಕೊಂಡಂತೆ, ಹೇ ಪುತ್ರ! ಯಾವ ರಾಜನು ತನ್ನ ಗುಣಗಳಿಂದಲೇ ವಿಸ್ತತವಾದ ಕೀರ್ತಿಯನ್ನೂ, ಕಳಂಕ ರಾಹಿತ್ಯವನ್ನು ಪಡೆದಿರುತ್ತಾನೋ ಅಂತಹ ನೃಪಾಲನು, ಲೋಕಪೂಜ್ಯನಾದ್ದರಿಂದ ಆ ತೆರನಾದ ಯಶಸ್ಸು ಯನಗೊದಗಿಸಿ ಕೀರ್ತಿ ಪಡೆದೆಯೊ ಕುಮಾರ ಶತೃಜನ ಭಯಂಕರಾ॥

ದರುವು

ಮುದ್ದು ಪುತ್ರ ಪೇಳುವೆ ಮುದದಿ ಚಿತ್ರ ಬರೆಸುವೆ
ಮುದ್ದು ಸುತೆಗೆ ಪರಿಣಯಾ ಹೊದ್ದಿ ವಿಪುಲ ಶೋಭೆಯಾ॥

ನೀಲಧ್ವಜ: ಸಕಲ ವಿದ್ಯಾ ವಿಶಾರದನಾದ ಹೇ ಪುತ್ರ! ನಿನ್ನ ತಂಗಿಯಾಗಿರುವ ಸ್ವಾಹಾದೇವಿಗೆ ಯೌವನವು ಪ್ರಾಪ್ತವಾಗಿ ಸ್ಮರನ ಜೀವಿತ ಮಣಿಯಂತೆಯೂ ಪುಷ್ಪಗುಚ್ಛಗಳಿಂದ ಅಲಂಕೃತವಾದ ಮದನ ಧ್ವಜದಂತೆಯೂ ಕಂಗೊಳಿಸುತ್ತಿರುವುದರಿಂದ, ತ್ರಿಜಗದಲ್ಲಿ ಶ್ರೇಷ್ಠರಾದ ಪುರುಷರ ಭಾವಚಿತ್ರಗಳನ್ನು ಬರೆಯಿಸಿ, ಅನುಜೆಯು ಒಪ್ಪಿದ ಅನುರೂಪನಿಗೆ ಆಕೆಯನ್ನು ಕೊಟ್ಟು ವೈವಾಹವನ್ನು ಬೆಳೆಸುವೆನೈಯ್ಯ ಪುತ್ರ ಸೌಂದರ‌್ಯಗಾತ್ರ॥

ದರುವು

ಹಿರಿಯ ಬಳ್ಳಾಪುರವನೂ ಹರಸಿ ಕಾಯುತಿರುವನೂ
ಹರನು ಸೋಮನಾಥನೂ ಕರುಣದಿಂದ ಕಾಯ್ವನೂ॥

ನೀಲಧ್ವಜ: ಗುಣರತ್ನ ವಾರಿಧಿಯಾದ ಹೇ ಸುಕುಮಾರ ಇಂತು ಅತ್ಯಧಿಕ ಚಲುವಿಕೆಯ ಮನೋಹರತೆಯನ್ನು ಬೀರಿ ರಾರಾಜಿಸುತ್ತಿರುವ ಸುತೆಗೆ ಈಗಿನ ವೇಳೆಯಲ್ಲಿ ಪರಿಣಯವನ್ನು ಬೆಳೆಸಿದ್ದೇ ಆದರೆ, ಅನೇಕ ವಿಧವಾದ ರಾಮಣೀಯಕಗಳಿಂದ ಕೂಡಿ ರಂಜಿಸುತ್ತಿರುವ ಹಿರಿಯ ಬಳ್ಳಾಪುರವಾಸ ಶ್ರೀ ಸೋಮೇಶ್ವರನು ಕರುಣದಿಂದ ಸಲಹುವನೈಯ್ಯ ಕುಮಾರ-ಅರಿವಂಶ ಕುಠಾರ॥

ದರುವು

ಜನಕಾ ಹರುಷವಿದೆನಗೇ ಅನುಜೇ ಸರಸಿಜ ಮುಖಿಗೇ
ಅನುರೂಪಾ ವರನಾ ನೋ ಡು ವಂಥ ವಾಕ್ಯ ಸದ್ ವಾಕ್ಯ॥

ಪ್ರವೀರ: ಶರಣಾಗತರಾದ ಶತೃ ರಾಜರ ಕಿರೀಟಗಳ ಇಂದ್ರ ನೀಲ ರತ್ನಗಳಿಂದ ಅಲಂಕರಿಸಲ್ಪಟ್ಟ ಪಾದಪೀಠವುಳ್ಳ ಹೇ ಜನಕಾ! ಸರಸಿಜಮುಖಿಯಾದ ಅನುಜೆಗೆ ತಕ್ಕ ಅನುರೂಪನನ್ನು ನೋಡುವಂಥ ತಮ್ಮ ವಚನದಿಂದ ಯನ್ನಯ ಮನಸ್ಸು, ಚಂದ್ರನನ್ನು ಕಂಡ ಅಂಬುಧಿಯಂತೆ ಉಬ್ಬಿದೆಯಲ್ಲದೇ ದಿನಕರನನ್ನು ಕಂಡ ನೀರಜದಂತೆ ಅರಳುತ್ತಾ ಪ್ರಫುಲ್ಲವಾಯಿತೈಯ್ಯ ಜನಕ ಕ್ಷಿತಿಜನ ಪಾಲಕ॥

ದರುವು

ಸೃಷ್ಟಿಯೊಳಗೆ ಬಹಳಾ ಶ್ರೇಷ್ಠನಾಗಿಹ ವರಗೇ
ಕೊಟ್ಟರೇ ಸುತೆಯಳನೂ ತ್ಕೃಷ್ಠವೈ ಜನಕಾ ನೃಪತಿಲಕಾ॥

ಪ್ರವೀರ: ಕ್ಷಮಾಪೂರ್ಣ, ರಾಜ್ಯ ತಂತ್ರ ವಿಶಾರದರಾದ ಹೇ ತಂದೆ. ಈ ಸೃಷ್ಠಿಯೊಳಗಿನ ಶ್ರೇಷ್ಠ ಪುರುಷನಿಗೆ ಸೃಷ್ಠಿ ಮೋಹಿನಿಯಾದ ಅನುಜೆಯನ್ನು ಕೊಟ್ಟು ಪರಿಣಯವಂ ಬೆಳೆಸುವುದು ಉತ್ಕೃಷ್ಠವಾಗಿ ಕಾಣುವುದೈ ತಂದೇ-ಪೇಳುವೆನು ಮುಂದೇ॥

ದರುವು

ಇಂದಿರಾನನೆಯಳಿಗೇ ಸುಂದರನಾ ತರುತಿಹುದು
ಚಂದಾವಹುದೈ ನಮ್ಮ ಕ್ಷತ್ರಿಯ ಕುಲಕೇ ಬಂಧು ಜನಕೇ॥

ಮಾಡಿದರೆ ಪರಿಣಯವಾ ಕಡು ಮುದದಿ ಅನುಜೇಗೇ
ಮೃಡನೂ ಸೋಮೇಶ್ವರನೂ ಬಿಡದೆ ಮೆಚ್ಚುವನು ಒಪ್ಪುವನೂ॥

ಪ್ರವೀರ: ಶರಣರೆಂಬ ಸಮುದ್ರಕ್ಕೆ ಚಂದ್ರಪ್ರಾಯನಾದ ಹೇ ಜನಕಾ ಕುಸುಮಾಯುಧನಾದ ಮನ್ಮಥನ ಅಪ್ಪಣೆಯಿಂದ ಪ್ರಾಪ್ತವಾಗಿರುವ ಯೌವನಾನುಭವವೆಂಬ ರಾಜ್ಯಕ್ಕೆ ಪಟ್ಟಾಭಿಷೇಕವಂ ಗೈಯುವ ವೇಳಯು ಸಮೀಪಿಸಿದೆಯೋ ಎನ್ನುವಂತೆ ಸೌಂದರ್ಯರಾಶಿಗಳಿಗೆ ತೌರೂರಾಗಿ, ರತಿಸೌಂದರ್ಯವನ್ನು ಅಲ್ಲಗೆಳೆಯುವ ಕೋಮಲೆಯಾದ ಸ್ವಾಹಾದೇವಿಗೆ ಸುಂದರನಾಗಿ ಪುರುಷಶ್ರೇಷ್ಠನಾದ ವರನನ್ನು ತಂದಿದ್ದೇ ಆದರೆ ಬಂಧು ಮಿತ್ರಾದಿಗಳು ಸಂತೋಷಪಟ್ಟು ನಮ್ಮ ರಾಜವಂಶಕ್ಕೆ ಕೀರ್ತಿ ಲಭಿಸುವುದಲ್ಲದೇ, ಈ ಧರಣಿಯೊಳ್ ಅತಿ ಮನೋಹರವಾಗಿ ಮೆರೆಯುವ ಹಿರಿಯ ಬಳ್ಳಾಪುರವಾಸ ಶ್ರೀ ಸೋಮನಾಥನೂ ಸಹ ಒಪ್ಪಿ ಮೆಚ್ಚುವನೈಯ್ಯ ಜನಕಾ ನೃಪಕುಲತಿಲಕಾ॥

ಕಂದ

ವರಸುತನ ವಿಜಯ ವಾರ್ತೆಯೊಳೂ
ಧರಣಿಪನು ಪರಮ ಹರುಷದಿಂ ತಾನಿರುತಿರೇ॥
ಪುರುಷ ಶ್ರೇಷ್ಠ ಚಿತ್ರಗಳನೂ
ಬರೆಯಿಸಿ ತಂದು ತೋರಿಸಿದನು ಮಂತ್ರಿಶೇಖರನಾಗಂ॥

ಭಾಗವತರು: ಕೇಳಿದರೇನಯ್ಯ ಭಾಗವತರೇ! ಈ ಪ್ರಕಾರವಾಗಿ ನೀಲಧ್ವಜನು ತನ್ನ ಸುತನ ವಿಜಯ ವಾರ್ತೆಯಂ ಕೇಳಿ ಸಂತೋಷದಿಂದಿರಲೂ ಇತ್ತಲಾ ಮಂತ್ರಿಯು ಮೂಜಗದ ಪುರುಷ ಶ್ರೇಷ್ಠರ ಭಾವಚಿತ್ರವನ್ನು ಪಟದಲ್ಲಿ ರೂಪಿಸಿ ತಂದು ನೃಪಾಲನ ಕರಕಮಲದೊಳು ವಿನಯದಿಂದರ್ಪಿಸಿದನೈಯ್ಯ ಭಾಗವತರೇ॥

ದರುವು

ತಂದಿಹೆ ನೋಡೈ ರಾಜೇಂದ್ರನೇ ನೀನೂ
ಅಂದವಾಗಿಹ ಭಾವ ಚಿತ್ರಗಳನ್ನು ॥

ಮಂತ್ರಿ: ರಾಜಕುಲ ಮಕುಟಪ್ರಾಯರಾದ ನೀಲಧ್ವಜ ಭೂಪಾಲರೇ ಲಾಲಿಸಿ. ದೇಶದ ಕುಶಲ ಚಿತ್ರಗಾರರನ್ನು ಕರೆಯಿಸಿ ಮೂರುಲೋಕದಲ್ಲಿ ಶ್ರೇಷ್ಠರಾಗಿರುವ ಪುರುಷರ ಭಾವಚಿತ್ರಗಳನ್ನು ಪಟದಲ್ಲಿ ಬಹು ಅಂದವಾಗಿ ಬರೆಯಿಸಿ ತಂದಿರುತ್ತೇನೆ. ನೋಡುವಂಥವರಾಗಿರೈ ದೊರೆಯೇ ನಿಮಗಾರು ಸರಿಯೇ॥

ದರುವು

ಚಂದದಿ ಸುತೆಯು ತಾನೊಪ್ಪಿದಾ ವರನಾ
ತಂದು ವೈವಾಹವಾ, ನಡೆಸೈಯ್ಯ ಮುನ್ನ॥

ಮಂತ್ರಿ: ಸಮಸ್ತ ಸಾಮಂತ ರಾಜಸ್ತ್ರೀಯರ ಬೈತಲೆಯ ಸಿಂಧೂರದಿಂದ ಅರುಣಗಳಾದ ಪಾದ ಕಮಲಗಳುಳ್ಳ ಹೇ ಸ್ವಾಮಿ ಪಾರ್ವತಿಯಂತೆ ಚಂದ್ರ ಕಳಾಧರೆಯೂ, ಲಕ್ಷ್ಮಿಯಂತೆ ಅತನೂದ್ಭವಳೂ, ಸರಸ್ವತಿಯಂತೆ ಪದ್ಮಜಾತ್ಯುತ್ಸವೆಯೂ, ವನದಂತೆ ಪೃಥುಳ ಕುಚಶೋಭಿತೆಯೂ, ನರ್ತಕಿಯಂತೆ ಮಂಜುಲಾಸ್ಯ ಸುಂದರಳೂ ಆಗಿ, ನೂತನ ಸೌಂದರ್ಯರಾಶಿಯಂತೆ ಕಂಗೊಳಿಸುತ್ತಿರುವ ನಮ್ಮ ರಾಜಕುಮಾರಿಯು ಯಾವಾತನ ಭಾವಚಿತ್ರವನ್ನು ನೋಡಿ ಆತನ ರೂಪು ಲಾವಣ್ಯ ಠೀವಿಗಳಿಗೆ ಮಾರುಹೋಗಿ ತನ್ನ ಸಂತೋಷವನ್ನು ವ್ಯಕ್ತಪಡಿಸುವಳೋ ಆ ಸುಂದರಾಂಗನನ್ನು ತಂದು ಚಂದದಿಂದ ಸುತೆಗೆ ವೈವಾಹವನ್ನು ಬೆಳೆಸೈಯ್ಯ ರಾಜ ಆಶ್ರಿತಕಲ್ದಭೋಜ॥

ದರುವು

ಧಾರುಣಿ ಹಿರಿಬಳ್ಳಾ ಪುರವ ಪಾಲಿಸುವಾ
ಹರನು ಸೋಮೇಶ್ವರಾ ಕರುಣದಿ ಪೊರೆವಾ॥

ಮಂತ್ರಿ: ರಾಜ್ಯಲಕ್ಷ್ಮಿಯನ್ನು ಕಾಪಾಡುವುದರಲ್ಲಿ ದಕ್ಷತೆಯನ್ನು ಹೊಂದಿರುವ ಶಕ್ತಿಯಿಂದ ಇಂದ್ರನು ಪರ್ವತ ಪಕ್ಷಗಳನ್ನು ಛೇದಿಸಿದಂತೆ ಶತೃ ರಾಜರನ್ನು ಸದೆಬಡಿಯುವ ಹೇ ರಾಜೇಂದ್ರ! ಈಗಿನ ವೇಳೆಯಲ್ಲಿ ಸುಕುಮಾರಿಗೆ ಪರಿಣಯವನ್ನು ಮಾಡಿದ್ದೇ ಆದರೆ ಈ ವಸುಧೆಗೆ ಪೊಸತೆನಿಸಿ ಮೆರೆಯುವ ಹಿರಿಯ ಬಳ್ಳಾಪುರವನ್ನು ಕುಶಲದಿಂದ ಪರಿಪಾಲಿಸುವ ಅಸಮಾಕ್ಷನಾದ ಶ್ರೀಮದ್ ಸೋಮೇಶ್ವರನು ಕರುಣದಿಂದ ಸಲಹುವನೈ ದೊರೆಯೇ ಧೈರ‌್ಯದಲ್ಲಿ ಕೇಸರಿಯೇ॥

ಕಂದಕೇದಾರಗೌಳ

ಕೇಳು ಸಚಿವ ಶ್ರೇಷ್ಠ ಕೇರಳಾ
ಮಾಳವಾಂಧ್ರ ಕರೂಷ ಬರ್ಬರಾ
ಗೌಳ ಕೋಸಲ ಮಗಧ ಕೇಕಯ ಚೋಳ ಸೌವೀರಾ
ಲಾಳ ಸಿಂಹಳ ಜೀನ ಕುರುನೇ
ಪಾಳ ಶಿಖಿ ಕಾಶ್ಮೀರ ಭೋಟ ವ
ರಾಳ ನೃಪ ದಿಕ್ವಾಲಕರುಗಳ ತೋರಿಸುವೆ ಸುತೆಗೆ

ನೀಲಧ್ವಜ: ಶೌರ‌್ಯ, ಧೈರ‌್ಯ, ಸ್ಥೈರ‌್ಯ ಗಾಂಭೀರ‌್ಯಾದಿ ಸಕಲ ಸದ್ಗುಣ ಭೂಷಿತನಾದ ಹೇ ಸಚಿವ ಶಿಖಾಮಣಿಯೇ! ಈ ಧಾರುಣಿಯಲ್ಲಿ ಮೆರೆಯುವ ಮಾಳವ ಕೇರಳ, ಕರೂಕ್ಷ, ಬರ್ಬರಾ, ಮಗಧ, ಕೇಕಯ, ಸಿಂಹಳ, ನೇಪಾಳ ಮೊದಲಾದ ಚಪ್ಪನ್ನೈವತ್ತಾರು ದೇಶದ ನೃಪವರ್ಗದವರನ್ನಲ್ಲದೇ ಸುರಾಸುರರ, ಯಕ್ಷ, ಗಂಧರ್ವ, ದಿಕ್ಪಾಲಕರುಗಳ, ಹರಿ ಹರ ವಿರಿಂಚಾದಿಗಳ ಅಂದವಾದ ಭಾವಚಿತ್ರಗಳನ್ನು ಚಂದದಿಂದ ಯನ್ನ ವರಸುತೆಗೆ ತೋರಿಸಿ ಆಕೆಯು ಒಪ್ಪಿದ ವರನಿಗೆ ವೈಭವದಿಂದ ಪರಿಣಯವನ್ನು ಬೆಳೆಸುವೆನೈಯ್ಯ ಮಂತ್ರಿಶೇಖರಾ ರಾಜಕಾರ‌್ಯ ದುರಂಧರಾ॥

ನೀಲಧ್ವಜದರುವು

ಪಟ್ಟಣವ ಶೃಂಗರಿಸೂ ಕಟ್ಟಿಸೂ ತೋರಣವಾ
ದೃಷ್ಠೀಗಮರಾವತಿಯಂ ತೋರಲಿ ಪುರವೂ ಶೃಂಗಾರವೂ                ॥
ಉರುತರದ ಹರುಷದಲೀ ಪರಮ ವೈಭವಗಳಲೀ
ಹರ ಸೋಮೇಶ್ವರನ ದಯದಿ ಪರಿಣಯವ ಮಾಳ್ಪೆ॥ನಾ ಮಾಳ್ಪೆ       ॥

ನೀಲಧ್ವಜ: ಜ್ಞಾನಿಗಳಲ್ಲಿ ರತ್ನಪ್ರಾಯನಾಗಿ ರಾಜನೀತಿ ವಿಶಾರದನಾದ ಹೇ ಪ್ರಧಾನಿ! ಈ ಪೊಡವಿಯೋಳ್ ಸಡಗರಮಾದ ಹಿರಿಯ ಬಳ್ಳಾಪುರದೊಡೆಯ ಉಡುರಾಡ್‌ಧರನಾದ ಶ್ರೀಮದ್ ಸೋಮೇಶ್ವರನ ವರಕರುಣ ಕಟಾಕ್ಷದಿಂದ ಸುತೆಯು ತನ್ನ ಅಂತರಂಗದ ಅಭಿಲಾಷೆಯನ್ನು ವ್ಯಕ್ತಪಡಿಸಿ ಯಾವಾತನನ್ನು ಒಪ್ಪುವಳೋ ಆ ಮಾರ ಸುಂದರನಿಗೆ ಕೊಟ್ಟು ಪರಿಣಯವಂ ಮಾಡಬೇಕಾಗಿರುತ್ತೆ. ಆ ಪ್ರಯುಕ್ತ  ರತ್ನ ಖಚಿತವಾದ ಕಳಶಗಳುಳ್ಳದ್ದಾಗಿ ವೈಢೂರ‌್ಯಗಳ ಜಗುಲಿಗಳಿಂದಲಂಕೃತವಾಗಿ, ಬಂಗಾರದ ನೆಲವುಳ್ಳದ್ದಾಗಿ ಇಂದ್ರನೀಲ ಸ್ತಂಭಗಳುಳ್ಳದ್ದಾಗಿ ವಜ್ರಗಳ ಗೋಡೆಗಳಿಂದ ಕೂಡಿದ್ದಾಗಿ, ಮುತ್ತುಗಳ ಬಾಗಿಲ್ವಾಡಗಳಿಂದಲೂ, ಹವಳಗಳ ಬಾಗಿಲುಗಳುಳ್ಳದ್ದಾಗಿ ಮಾಣಿಕ್ಯಾದಿ ರತ್ನಗಳಿಂದ ರಚಿಸಿದ್ದ ತೋರಣಗಳಿಂದ ರಂಜಿಸುತ್ತಾ. ಇಂದ್ರನಮರಾವತಿಯಂ ಧಿಕ್ಕರಿಸುವಂತೆ ನಮ್ಮ ಅರಮನೆಯನ್ನು ಪಟ್ಟಣವನ್ನು ಮಹದಾಶ್ಚರ್ಯಕರವಾದ ರೀತಿಯಲ್ಲಿ ಶೃಂಗಾರಮಾಡುವಂತೆ ಕುಶಲ ಶಿಲ್ಪಿಗಾರರಿಗೆ ಆಜ್ಞಾಪಿಸೈಯ್ಯ ಪ್ರಧಾನಿ ನೀತಿ ಜ್ಞಾನಿ॥

ಮಂತ್ರಿ: ಅದೇ ಪ್ರಕಾರ ಮಾಡುತ್ತೇನೈ ಚಕ್ರವರ್ತಿನಾನು ತಮ್ಮ ಆಜ್ಞಾನುವರ್ತಿ॥