ನೀಲಧ್ವಜ: ಹಾಗಾದರೆ ಪರೀಕ್ಷಿಸಿ ನೋಡುವೆನೈ ವಿಪ್ರೋತ್ತಮರೇ॥

ದರುವು

ನೋಡೈಯ್ಯ ಮಂತ್ರೀ ಪಾವಕನೇನೋ
ನೋಡೈಯ್ಯ ಮಂತ್ರೀ॥
ನೋಡೈಯ್ಯ ನೀನೀಗಾ ನಾಡಿನೊಳೀ ವಿಪ್ರಾ
ಬಡಬಾನಲನೇನೋ ದೃಢದೀ ಪರೀಕ್ಷಿಸು॥ನೋಡಯ್ಯ॥

ನೀಲಧ್ವಜ: ಅಯ್ಯ ಮಂತ್ರಿ ಈ ವಿಪ್ರನು ತಾನು ಅಗ್ನಿ ಪುರುಷನು ಎಂಬುದಾಗಿ ಹೇಳುತ್ತಿರುವನು. ಆದ ಕಾರಣ ನೀನು ಆತನ ಸಮೀಪ ವರ್ತಿಸಿ ಆತನನ್ನು ಸ್ಪರ್ಶಿಸಿ, ಅಗ್ನಿಯು ಅಹುದೋ, ಅಲ್ಲವೋ ಎಂಬ ನಿಜಾಂಶವನ್ನು ತಿಳಿದು ನೋಡುವಂಥವನಾಗೈ ಮಂತ್ರಿಶೇಖರಾ ರಾಜಕಾರ‌್ಯ ದುರಂಧರಾ॥

ದರುವು

ದಶರಥನ ಸುತರಾದ ರಾಜೇಂದ್ರಾ ವಿಪ್ರನನೂ ನಿಜದಿ ಸ್ಪರ್ಶವ ಮಾಡೆ
ರಾಜಿಪ ಮೀಸೆಯು ಗಡ್ಡ, ದಹಿಸೀ ಪೋಗಿಹುದೂ॥

ಮಂತ್ರಿ: ಹೇ ರಾಜ! ಈ ಭೂಸುರೋತ್ತಮನನ್ನು ಪರೀಕ್ಷಿಸಲು ಸಮೀಪಕ್ಕೆ ನಾನು ಹೋಗುತ್ತಿರಲು, ಆತನ ಬಿಸಿಯು ಯನಗೆ ತಾಗಿ ಗಡ್ಡ ಮೀಸೆಗಳು ದಹಿಸಿ ಪೋದವೈಯ್ಯ ರಾಜೇಂದ್ರ ಸದ್ಗುಣ ಸಾಂದ್ರ॥

ದರುವು

ದೇವಿ ನೀ ನೋಡು ಪಾವಕನೇನೋ
ದೇವೀ ನೀ ನೋಡು॥
ದೇವಿ ನೀನೀಕ್ಷಿಸು ಈ ವಿಪ್ರೋತ್ತಮನನ್ನೂ
ಪಾವಕನಾದೊಡೆ ಈವೆ ಯನ್ನಯ ಸುತೆಯಾ ದೇವಿ ನೀ ನೋಡು॥

ನೀಲಧ್ವಜ: ನಾರಿ ಶಿರೋಮಣಿಯಾದ ಜ್ವಾಲೆಯೇ ಕೇಳು. ಈ ಬ್ರಾಹ್ಮಣನಿಗೆ ಯಮ್ಮ ಮುದ್ದು ಕುವರಿಯಾದ ಸ್ವಾಹಾದೇವಿಯನ್ನು ಕೊಟ್ಟು ಲಗ್ನವಂ ಮಾಡಬೇಕಾಗಿರುವ ಪ್ರಯುಕ್ತ, ಈತನು ಪಾವಕನಾಗಿಹನೋ ಅಥವಾ ಇಲ್ಲವೋ ಪರೀಕ್ಷಿಸಿ ನೋಡುವಂಥವಳಾಗೇ ಜ್ವಾಲೆ ಸುಗುಣವಿಶಾಲೆ॥

ದರುವು

ವೈಶ್ವಾನರನೂ ಲಾಲಿಸು ರಮಣಾ ವೈಶ್ವಾನರನೂ॥
ಭೂಸುರನ ವರ್ತಿಸಲೂ ಬಿಸಿಯು ಕಾಣುತ್ತಿಹುದೂ
ವಸನ ದಹಿಸೀ ಇಹುದೂ ಅಸಮಾಕ್ಷನಾಣೆಯೂ॥ವೈಶ್ವಾನರನೂ॥

ಜ್ವಾಲೆ: ಹೇ ನನ್ನ ಸ್ವಾಮಿಯೇ ಈ ಭೂಸುರೋತ್ತಮನನ್ನು ಸಮೀಪಿಸಲು, ಯನ್ನ ಪೀತಾಂಬರವು ದಹಿಸಿರುವುದಾದ ಕಾರಣ. ಈತನು ನಿಜವಾಗಿಯೂ ಅಗ್ನಿಪುರುಷನಾಗಿ ಕಾಣುತ್ತಿರುವನೈ ರಾಯ-ಇದೇ ಯನ್ನ ಅಭಿಪ್ರಾಯ॥

ದರುವು

ಭೂದೇವನಗ್ನೀ ಈ ಮಾತು ನಿಜವೇ ಭೂದೇವನಗ್ನೀ॥
ಸುದತೀ ಮಣಿಯೆ ಕೇಳು ಮುದದೀ ಪಾವಕನಾಗೆ
ಪದುಮಾಕ್ಷಿ ತನುಜೆಗಾ ದರದಿಂದ ಪರಿಣಯವಾ॥ಭೂದೇವನಗ್ನೀ॥

ನೀಲಧ್ವಜ: ಮಾರನರಗಿಳಿಯಂತೆ ಕಂಗೊಳಿಸುವ ಹೇ ರಮಣಿ ಈ ವಿಪ್ರನು ನಿಜವಾಗಿಯೂ ಅಗ್ನಿಪುರುಷನಾದದ್ದೇ ಆದರೆ ಪದುಮಲೋಚನೆಯಾದ ಸ್ವಾಹಾದೇವಿಯನ್ನು ಕೊಟ್ಟು ಪರಿಣಯವಂ ಮಾಡುವೆನೇ ರಮಣೀ – ಕಾಂತಿ ದ್ಯುಮಣೀ॥

 

(ಬ್ರಾಹ್ಮಣನು ನಿಜರೂಪನ್ನು ತೋರುವಿಕೆ)

ದರುವು

ಧರಣೀಶನೇ ಮೆಚ್ಚಿದೆ ತನುಜೆಯ ಭಕ್ತಿಗೆ
ಧರಣೀಶನೇ ಮೆಚ್ಚಿದೆ॥
ಧರಣಿಪಾಲಕ ನಿನ್ನ ತನುಜೆಯ
ಪರಮಭಕ್ತಿಗೆ ಒಲಿದು ನಾನು
ಭರದಿ ಭೂಸುರ ವೇಷ ಧರಿಸೀ
ಹರುಷದಿಂದಲಿ ಬಳಿಗೆ ಬಂದೆನು॥ಧರಣೀಶನೇ ಮೆಚ್ಚಿದೆ॥

ಅಗ್ನಿ: ಹೇ ಭೂಪತಿಯೇ ಸರ್ವಾಂಗ ಸುಂದರಿಯಾದ ನಿನ್ನ ತನುಜೆಯು ಸುವ್ರತೆಯಾಗಿ ಪರಮ ನಿಷ್ಠೆಯಿಂದ ಯನ್ನನ್ನು ಅನುದಿನವೂ, ಪ್ರಾರ್ಥಿಸುತ್ತಿರುವಳಾದ ಕಾರಣ ಆಕೆಯ ಭಕ್ತಿಗೆ ಮೆಚ್ಚಿದವನಾಗಿ ಈ ಬ್ರಾಹ್ಮಣ ವೇಷವನ್ನು ಧರಿಸಿ ನಿನ್ನ ಬಳಿಗೆ ಬಂದಿರುವೆನೈ ರಾಜನೇ ಬಿಡು ಮನೋವೇದನೇ॥

ದರುವು

ಭೂವರ ಲಾಲಿಸಿನ್ನೂ ದಿಕ್ಪಾಲಕರೋಳ್‌
ಪಾವಕನಾಗಿಹೆನೂ॥
ಜೀವಿತೇಶ್ವರನೆಂದು ಬಹುವಿಧ
ಭಾವಭಕ್ತಿಯಿಂದ ತರುಣಿಯು
ದೇವ ನೀ ಕರವಿಡಿದು ಯನ್ನನು
ಸಾವಧಾನದಿ ಸಲಹು ಯೆನಲೂ॥ಧರಣೀಶನೇ ಮೆಚ್ಚಿದೆ॥

ಅಗ್ನಿ: ಹೇ ಕ್ಷೋಣಿ ಪಾಲಕನೇ ಅಷ್ಠದಿಕ್ಪಾಲಕರೋಳ್ ಆಗ್ನೇಯ ದಿಕ್ಕಧಿಪತಿಯಾಗಿ ರಾರಾಜಿಸುತ್ತಿರುವ ಅಗ್ನಿ ಪುರುಷನಾದ ಯನ್ನನ್ನು ಮನೋವಲ್ಲಭನೆಂದು ಮನದಲ್ಲಿ ತಿಳಿದು, ಬಹು ಏಕಾಗ್ರಚಿತ್ತದಿಂದ ಆ ತರುಣಿಯು ಕರವಿಡಿದು ಸಾವಧಾನದಿ ಸಲಹು ಎಂದು ಮೊರೆಯಿಡಲು, ಆಕೆಯ ಭಕ್ತಿಗೆ ಒಲಿದು ಬಂದಿಹೆನೈಯ್ಯ ರಾಯ ಕೊಡು ನಿನ್ನ ಸುತೆಯಾ॥

ದರುವು

ಮಾಡು ವೈವಾಹವನ್ನೂ ತನುಜೆಯ ಕೊಟ್ಟು
ಪೊಡವಿಯೊಳಗೆ ನೀ ಇನ್ನೂ॥
ಜಲಜಲೋಚನೆ ಸ್ವಾಹಾದೇವಿಯ
ಒಡನೆ ಸಂಭ್ರಮ ವಿಭವದಿಂದಲಿ॥
ಮಾಡು ಪರಿಣಯ ಮುದದಿ ಯನಗೇ
ರೂಢಿಗೀಶನು ಮೆಚ್ಚುವಂದದೀ ॥ಧರಣೀಶನೇ ಮೆಚ್ಚಿದೆ॥

ಅಗ್ನಿ: ಹೇ ಭೂ ಲಲಾಮನೇ! ಈ ವಸುಧೆಗಧಿಕವಾದ ಹಿರಿಯ ಬಳ್ಳಾಪುರವನ್ನು ಕುಶಲದಿಂದ ಪರಿಪಾಲಿಸುವ ಅಸಮ ನಯನ ಶ್ರೀ ಸೋಮೇಶ್ವರನು ಮೆಚ್ಚುವಂದದೀ ನಿನ್ನ ತನುಜೆಯನ್ನು ಬಹು ಸಂಭ್ರಮದಿಂದ ವಿವಾಹ ಮಹೋತ್ಸವದಲ್ಲಿ ಯನಗೆ ಕೊಟ್ಟು ಧಾರೆಯೆರೆಯುವಂಥವನಾಗೈ ರಾಜ ಆಶ್ರಿತಕಲ್ಪ ಭೋಜ॥

ನೀಲಧ್ವಜ: ಹೇ ಅಗ್ನಿದೇವ! ಮಾರ್ದವದಿಂದ ಕಮಲನಾಳವನ್ನು ಜಯಿಸಿದ ಆಕೆಯ ಬಾಹುಗಳಲ್ಲಿ ಬೆಳೆದ ಕಮಲಗಳಂತೆ ಕಂಗೊಳಿಸುತ್ತಿರುವ ಹಸ್ತಗಳುಳ್ಳ ಯನ್ನ ತನುಜೆಯಾದ ಸ್ವಾಹಾದೇವಿಯನ್ನು ನಿನಗೆ ಕೊಟ್ಟು ಪರಿಣಯವಂ ಮಾಡುವೆನು. ಆದರೆ ಇಂದು ಮೊದಲಾಗಿ ಮಾಹಿಷ್ಮತಿಯ ಪಟ್ಟಣಕ್ಕೆ ಪ್ರಾಕಾರಮಾಗಿ ನೀನು, ಯನ್ನ ಅರಮನೆಯೊಳು ಇರಬೇಕೈ ಅಗ್ನಿದೇವ ಮಹಾನುಭಾವ॥

ಅಗ್ನಿ: ಅದೇ ಪ್ರಕಾರವಾಗಿ ನಿಮ್ಮ ಇಷ್ಟದಂತೆ ಪುರಕ್ಕೆ ಪ್ರಾಕಾರಮಾಗಿ ನಿಮ್ಮ ಅರಮನೆಯಲ್ಲಿಯೇ ಇರುವೆನೈ ದೊರೆಯೇ ಧೈರ‌್ಯದಲ್ಲಿ ಕೇಸರಿಯೇ॥

ಕಂದಾರ್ಧ

ಧರಣೀಶ ಕುಲತಿಲಕ ಕೇಳೈ ಸರಸಿಜ ರವಿಗರಳುವಂದದೀ
ಹರುಷವಿದು ಯನಗೆ ಕರುಣಾಕರ ಕೀರ್ತಿ ಚಂದ್ರನೇ
ತ್ವರಿತದೀ ಬಂಧುಗಳಾ॥
ಕರೆಸುವುದೂ ಕಾಂತಾ ಸದ್ಗುಣವಂತಾ ಕರೆಸುವುದೂ ಕಾಂತಾ॥
ವರ ದಿಕ್ಪಾಲಕರೊಳೂ ಮಾರನಂದದಿ ತೋರ್ಪ
ಧೀರ ವೈಶ್ವಾನರಗೇ ವಾರಿಜಾಕ್ಷಿಯ ಕೊಟ್ಟೂ॥
ಪರಿಣಯ ಮಾಡುಸಂತಸಗೂಡು ಪರಿಣಯ ಮಾಡು॥

ಜ್ವಾಲೆ: ಹೇ ನನ್ನ ದೊರೆಯೇ! ಸರಸಿಜಗಳಿಗೆ ರವಿಯಿಂದ ಹೇಗೆ ಸಂತೋಷವು ಅಧಿಕವಾಗುವುದೋ ಹಾಗೆಯೇ ಯಮ್ಮ ಸುತೆಯಾದ ಸ್ವಾಹಾದೇವಿಗೆ ಅಗ್ನಿಪುರುಷನಿಂದ ಸಂತೋಷಾಧಿಕ್ಯವುಂಟಾಗುವುದೇ ವಿನಹ ಅನ್ಯತ್ರ ಉಂಟಾಗಲಾರದು. ಆದಕಾರಣ ಇದನ್ನು ಚೆನ್ನಾಗಿ ತಿಳಿದು ಹಿಮವಂತನು ಪಾರ್ವತಿಯನ್ನು ಸೋಮನಾಥನಿಗೆ ಕೊಟ್ಟು ಕಲ್ಯಾಣ ಮಾಡಿದಂತೆ ತಾವು ಪುರುಷಶ್ರೇಷ್ಠನಾದ ವೈಶ್ವಾನರನಿಗೆ ತನುಜೆಯನ್ನು ಕೊಟ್ಟು ಕಲ್ಯಾಣ ಮಹೋತ್ಸವವನ್ನು ಬೆಳೆಸಲು ಬಂಧು ಮಿತ್ರರಿಗೆಲ್ಲರಿಗೂ ವಿವಾಹ ಮಹೋತ್ಸವ ಆಹ್ವಾನ ಪತ್ರಿಕೆಗಳನ್ನು ಕಳುಹಿಸಿ ಕರೆಸೈ ರಮಣಾ ಸದ್ಗುಣಾಭರಣ॥ಸಂತೋಷವು ಮಂತ್ರೀಶ ಬಾರೈ.

ದರುವು

ಸಂತೋಷವು, ಸತಿಮಣಿಯೇ ಕೇಳು ಸಂತೋಷವು॥
ಸುಂದರಾ ಪಾವಕಗೇ ಇಂದು ಸುತೆಯನಿತ್ತು
ಚಂದದಿಂ ವೈವಾಹಾ ನಂದದಿಂದ ಮಾಳ್ಪೆ॥ಸಂತೋಷವು॥

ನೀಲಧ್ವಜ: ಮಂದಗಮನೆಯಾದ ಮನೋಹರೆಯೇ ಕೇಳು ತೇಜಸ್ವಿಯಾದ ವೈಶ್ವಾನರನಿಗೆ ನಮ್ಮ ಸುತೆಯನ್ನು  ಕೊಟ್ಟು ಪರಿಣಯವಂ ಬೆಳೆಸಲು ಯನ್ನ ಮನಸ್ಸು ಸಹ ಸಂತೋಷದಿಂದ ಕೂಡಿರುವುದಾದ ಕಾರಣ ಅತಿ ಜಾಗ್ರತೆ ವಿವಾಹಕ್ಕೆ ತಕ್ಕ ಸಕಲ ಸಿದ್ಧತೆಯನ್ನೂ ಮಾಡುವನೇ ರಮಣೀ ಕಾಂತಿ ದ್ಯುಮಣೀ॥ಅಯ್ಯ ಸಚಿವ ಶಿಖಾಮಣಿ! ನೀನು ಅತಿ ಜಾಗ್ರತೆ ನಮ್ಮ ಅರಮನೆ ಪುರೋಹಿತನನ್ನು ಬರಮಾಡುವುದಲ್ಲದೇ ಅವರಿಂದ ಲಗ್ನವಂ ನಿಶ್ಚಯಿಸಿ ಲಗ್ನಪತ್ರಿಕೆಯನ್ನು ಬರೆಯಿಸಿ. ಸಕಲ ದೇಶಾಧಿಪತಿಗಳಿಗೂ ಬಂಧು ಮಿತ್ರರಿಗೂ ಕಳುಹಿಸಿ ಕರೆಸುವಂಥವನಾಗೈ ಮಂತ್ರಿಶೇಖರಾ ರಾಜಕಾರ‌್ಯ ದುರಂಧರಾ॥

ಮಂತ್ರಿ: ಅದೇ ಪ್ರಕಾರ ಮಾಡುತ್ತೇನೈ ಸ್ವಾಮಿ ಭಕ್ತ ಜನಪ್ರೇಮಿ॥

(ಅಗ್ನಿಸ್ವಾಹಾದೇವಿ ಪರಿಣಯ)

ಕಂದ

ಚೋಳ ಸಿಂಹಳ ಪಾಂಡ್ಯ ಕೇರಳ
ಮಾಳವಾಂಧ್ರ ಕರೂಷ ಬರ್ಬರ
ಗೌಳ ಕೋಸಲ ಮಗಧ ಕೇಕಯ ಹೂಣ ಸೌವೀರ॥
ಲಾಳ ಜೋನೆಗ ಜೀನ ಕುರು ನೇ
ಪಾಳ ಶಿಖಿ ಕಾಶ್ಮೀರ ಬೋಟ, ವ
ರಾಳ ವರ ದೇಶಾಧಿಪತಿಗಳು ಬಂದರೊಗ್ಗಿನಲೀ॥

ಶುಭಮುಹೂರ್ತದಿ ನೀಲಕೇತುವು
ಸಭೆಯು ಜಯವೆನೆ ಪಾವಕನಿಗೆ
ಅಭಿನವಾಲಂಕಾರ ಭೂಷಿತೆಯಾದ ನಿಜಸುತೆಯ॥
ವಿಭವದಿಂದಲಿ ಧಾರೆಯೆರೆದನು
ನಭವು ಘುಮ್ಮಿಡಿಸಿದುದು ಜಯ ದುಂದುಭಿ
ನಿನದವೇನೆಂಬೆನಾ ಪರಿಣಯ ಮಹೋತ್ಸವವಾ॥

ಭಾಗವತರು: ಕೇಳಿದರೇನೈಯ್ಯ ಭಾಗವತರೇ ಈ ಪ್ರಕಾರವಾಗಿ ಸಮಸ್ತ ದೇಶಾಧೀಶ್ವರರೂ ಬಂಧು-ಮಿತ್ರರೂ ಬಂದು ನೆರೆಯಲೂ ಶುಭಮುಹೂರ್ತದಿ ನೀಲಕೇತುವು ತನ್ನ ಸುತೆಯನ್ನು ಜಯ ದುಂದುಭಿ ಮೊಳಗುತ್ತಿರಲೂ ಅಗ್ನಿದೇವನಿಗೆ ಧಾರೆಯೆರೆದನೈಯ್ಯ ಭಾಗವತರೇ॥

ಪುರೋಹಿತ: ಹೇ ರಾಜೇಂದ್ರಾ! ಲಗ್ನದ ವೇಳೆಯಾಗಿದೆ. ವಧೂ-ವರರನ್ನು ಸಕಲ ವಾದ್ಯಗಳೊಡನೆ ವಿವಾಹ ಮಂಟಪಕ್ಕೆ ಕರೆದು ತಾರೈ ರಾಜೇಂದ್ರಾ ಸದ್ಗುಣಸಾಂದ್ರ॥

ನೀಲಧ್ವಜ: ಅದೇ ಪ್ರಕಾರವಾಗಿ ವಧೂ ವರರೂ ಬಿಜಯ ಮಾಡಿಸಿದ್ದಾರೆ. ಮುಂದಿನ ಕಾರ್ಯಗಳು ಭರದಿಂದ ನಡೆಯಲಿ ಪುರೋಹಿತರೇ ಮಹೀಜನ ಮಿತ್ರರೇ॥

ಶ್ಲೋಕ

ಸಮ್ಮಂಧ ಮಾಲಿಕಂ ಗ್ರಾಹ್ಯಂ ಚಂದ್ರಸೂರ‌್ಯಾದಿ ಲಕ್ಷಣಂ
ಪುಷ್ಪಮಾಲ್ಯಾದ್ಯಲಂಕಾರಂ ಸಮ್ಮಂದೇಹೇ ಸಂತತಿ ಧೃವಂ॥

ಮಾಂಗಲ್ಯಂ ತಂತು ನಾನೇನ ಮಮ ಜೀವನ ಹೇತುನಾ
ಕಂಠೇ ಭದ್ರಾಮಿ ಸುಭಗೇ ಸಹಜೀವ ಶರದಶ್ಶತಂ॥

ತದೇವಲಗ್ನಂ ಸುದಿನಂ, ತದೇವ ತಾರಾಬಲಂ ಚಂದ್ರ
ಬಲಂ ತದೇವ ವಿದ್ಯಾಬಲಂ ಗುರು ಬಲಂ ದೈವಬಲಂ
ತದೇವ ಲಕ್ಷ್ಮೀಪತೇ ಅಂಘ್ರಿ ಯುಗ್ಮಂ ಸ್ಮರಾಮಿ
ಸುಮೂಹರ್ತಮಸ್ತು ಸುಪ್ರತಿಷ್ಠಿತಮಸ್ತು॥

ಭಾಗವತರದರುವು

ಬಲ್ಲಿದವರೊಳು ಎಸೆವ ಭೂಮಿ
ವಲ್ಲಭನ ಗುರು ವರ ಪುರೋಹಿತ
ಬುಲ್ಲವಿಸುವಗ್ನಿಯನು ಹೋಮದ ತುಪ್ಪದಲಿ ತಣಿಸೀ॥

ಸಲ್ಲಲಿತ ವೈವಾಹ ಮಂಗಳ
ಕಲ್ಲಿ ಸಾಕ್ಷ್ಯವ ಪಡೆದು ವಧುವನು
ವಲ್ಲಭನೊಳು ಒಡಗೂಡಿ ಗಂಟಿಕ್ಕಿದನು ಮದುವೆಯಲೀ॥

ಬಳಿಕ ಮಿರುಗುವ ಹೊನ್ನು ಹಸೆಯೊಳು
ಕುಳಿತು ತದ್ದಂಪತಿಗಳೊಯ್ಯನೇ
ಬಳಿಗೆ ಬಂದಾ ಸ್ನಾತಕರ ನರಪತಿಯ ತೆತ್ತಿಗರಾ॥

ಹೊಳಲ ವಿನುತ ಪುರಂಧ್ರಿಯರಕರ
ತಳದಿ ತಳಿದಾ ಸೇಸೆಯನು ಕಂ
ದಳಿತ ಮಾನಸರಾಗಿ ತಳೆದರು ತಮ್ಮ ತಲೆಗಳಲಿ॥

ಅಂತು ನೃಪವರ ನೀಲಕೇತವು
ಸಂತಸದ ಸೊಂಪಿನಲಿ ತನುಜೆಗ
ನಂತ ವಿಭವದೊಳೆಸಗಿ ಪಾಣಿಗ್ರಹಣ ಮಂಗಳವಾ॥

ಹಂತಿಯಲಿ ನೆರೆದಿರ್ದ ಭೂಮೀ
ಕಾಂತರಂತರ ವರಿತು ಮುನ್ನಿನ
ಲಂತರಂಗದ ಪರಿಜನಕೆ ಬೆಸಸಿದನು ನಲವಿನಲೀ॥

ನರಪನೆಸಗಿದ ಪರಮ ವಿಭವದೀ
ತರುಣಿ ಸ್ವಾಹಾದೇವಿ ಪರಿಣಯ
ಹಿರಿಯ ಬಳ್ಳಾಪುರದ ಸೋಮೇಶ್ವರನ ದಯದಿಂದಾ॥

ಭಾಗವತರು: ಕೇಳಿದರೇನಯ್ಯ ಭಾಗವತರೇ! ಈ ಪ್ರಕಾರವಾಗಿ ನೀಲಧ್ವಜನು ಸ್ವಾಹಾದೇವಿಯ ಪರಿಣಯವನ್ನು ಅತ್ಯಂತ ವೈಭವದಿಂದ ನೆರವೇರಿಸಲೂ ಅಳಿಯನಾದ ಅಗ್ನಿದೇವನು ರಾಜನ ಅಭಿಪ್ರಾಯದಂತೆ ಅರಮನೆಯಲ್ಲಿಯೇ ಉಳಿದಿರಲೂ, ಒಂದು ಸಮಯದಲ್ಲಿ ವಸಂತಕಾಲವು ಪ್ರಾಪ್ತವಾಗಲು ಪ್ರವೀರನು ತನ್ನ ಸತಿಯಾದ ಮದನ ಮಂಜರಿಯೊಡನೆ ಉದ್ಯಾನ ಕೇಳಿಗಾಗಿ ಬಂದನೈಯ್ಯ ಭಾಗವತರೇ॥

ಸ್ವಾಹಾ ಪರಿಣಯ ಸಂಪೂರ್ಣ

(ಗಂಗಾ ಶಾಪಮದನ ಮಂಜರಿ ಬರುವಿಕೆ)

ದ್ವಿಪದೆ

ಶ್ರೀ ಹರಿಯನೆಡೆಬಿಡದೆ, ಶ್ರೀಮುಖಿಯು ತಾ ನೆನೆದೂ
ಮೋಹತಾಪದಿಂ ರಮಣಿ ತಾನು ನಿಜಪತಿಯ ನಾರೈದೂ॥
ಮೋದದಿಂ ಪನ್ನೀರು ಜಳಕಂಗಳಾಡೀ
ಆದರದಿ ಗಂಧ ದ್ರವ್ಯಗಳಿಂದೊಡಗೂಡೀ॥
ಝರತಾರಿ ಸೀರೆಯನು ನೆರಿಗೆ ವಿಡಿದುಟ್ಟೂ
ವರಸ್ವರ್ಣಮಯವಾದ ಕುಪ್ಪಸವ ತಾ ತೊಟ್ಟು॥
ತಲೆಯ ಬಾಚಿ ಬೈತಲೆ ತೆಗೆದು ಚೌಲಿಯನಿಟ್ಟು
ಲಲಿತ ಪಾದರಿ ಕರ್ಣಿಕಾರಗಳ ತುರುಬಿನಲ್ಲಿಟ್ಟೂ॥
ಓಲೆ ಬಾವುಲಿ ಬಾಜಿ ಬಂದು ಮೂಗುತಿಯನಿಟ್ಟೂ
ಕಾಲು ಅಂದಿಗೆ ಗೆಜ್ಜೆ ಪಿಲ್ಲಿಯಾನಳವಟ್ಟೂ
ಬಂಗಾರದೊಡವೆಗಳ ಧರಿಸುತಾ ಮುದದೊಳೂ
ಅಂಗನೆಯು ಸಿಂಗರಿಸಿ ತಾನತಿ ಬೇಗದೊಳೂ॥
ಭೂಪತಿ ಸುತ ಪ್ರವೀರನ ಪತ್ನಿ ಮದನ ಮಂಜರಿಯೂ
ವಿಪುಲ ವೈಭವದಿಂದಾ ಅತಿ ಸಂತೋಷದಿಂದಾ
ಹಿರಿಯ ಬಳ್ಳಾಪುರದ ಸೋಮೇಶ್ವರನಂ ನೆನೆದೂ
ಹರುಷದಿಂದಲಿ ಬಂದು ತೆರೆಯೊಳಗೆ ನಿಂದೂ॥

ತೆರೆದರುವು

ಕಮಲಾನೇತ್ರೆಯೇ ಯನ್ನಾ ರಮಣಾನ ತೋರಿಸಮ್ಮಾ
ಕಮಲನಾಭನಾ ಸುತನಾ ಸಮನಾಗಿ ಹೊಳೆಯುವಂಥ॥

ಸರಸಿಜಾನಯನೆ ನೀನೂ ಧುರವೀರ ಪತಿಯ ತೋರೇ
ಕೊರಳ ಪದಕಾ ಹಾರವನ್ನೂ  ಹರುಷದಿಂದ ಕೊಡುವೆ ನಿನಗೆ॥

ಧರಣೀಗೆ ಅಧಿಕವಾದ ಹಿರಿಯ ಬಳ್ಳಾಪುರದ ಒಡೆಯ
ಹರನು ಸೋಮೇಶನಾಣೆ ತೋರ ಮಾಣಿಕವ ಕೊಡುವೆ॥

ಮದನ ಮಂಜರಿ: ಅಪ್ಪಾ ಸಾರಥೀ ಹೀಗೆ ಬಾ ಮತ್ತು ಒಂದು ಸಾರಿ ಹೀಗೆ ನಿಲ್ಲು. ಅಪ್ಪಾ ಸಾರಥೀ: ಈಗ ಬಂದವರು ಧಾರೆಂದು ಕರ ಕಂಜಾತವಂ ಮುಗಿದು ಶಾಂತಿಗುಣ ನೀತಿಯಿಂದ ಭಯ ಭಕ್ತಿಯುತನಾಗಿ ಮಾತನಾಡಿಸುತ್ತಿರುವೆ. ಆದರೆ ಯಮ್ಮ ವೃತ್ತಾಂತವನ್ನು ಪೇಳುತ್ತೇನೆ. ಚಿತ್ತವಿಟ್ಟು ಕೇಳಪ್ಪಾ ಸಾರಥೀ: ಈ ಧರಾಮಂಡಲದೋಳ್ ವನಮಾಲಾ ಸುಶೋಭಿಯಾಗಿ, ಅನವರತವೂ ಮನ್ಮಥೋದ್ಭವಕಾರಿ ಯಾಗಿ, ತನ್ನಲ್ಲಿ ವಾಸಿಸುವ ಜನರಿಗೆ ಸೌಖ್ಯವೃದ್ಧಿಯಾಗಲೆಂದು ತನ್ನಿಷ್ಠ ದೇವತೆಯನ್ನು ಬೇಡಲು ನಗರ ದೇವತೆಯು ಹಸುರುಮಡಿ ಉಟ್ಟಿದೆಯೋ ಎಂಬಂತೆ ಉಪವನಗಳಿಂದ ಕೂಡಿ ಧನಧಾನ್ಯ ಸಂಪತ್ತಿನಿಂದಲೂ ಪ್ರಕೃತಿ ಸಂಪತ್ತಿನಿಂದಲೂ ಮಂಗಳಮಯವಾಗಿ ರಂಜಿಸುವಾ ಮಾಹಿಷ್ಮತೀಪುರವನ್ನು ಸದ್ಧರ್ಮದಿಂದ ಪರಿಪಾಲಿಸುವ ನೀಲಧ್ವಜ ಭೂಪಾಲರ ಮೋಹದ ಪುತ್ರ ಸುಂದರಗಾತ್ರ. ಧೀರ ಪ್ರವೀರ ಯುವರಾಜರಿಗೆ ಧರ‌್ಮಪತ್ನಿಯಾದ ಜಾಣೆಯರ ಜಾಣೆ ನಾರಿ ಶಿರೋಮಣಿಯಾದ ತ್ರೈಲೋಕ ಸುಂದರೀ ಮದನ ಮಂಜರಿಯೆಂದು ತಿಳಿಯಪ್ಪಾ ಸಾರಥೀ॥ಮಂಗಳವಾದ್ಯಗಳು ಶ್ರವಣ ಮನೋಹರವಾಗಿ ಮೊಳಗುತ್ತಾ ಭವ್ಯವಾದ ಈ ಸಭಾ ಮಂದಿರಕ್ಕೆ ಬಂದ ಕಾರಣವೇನೆಂದರೆ ಯನ್ನ ಪ್ರಾಣನಾಥನನ್ನು ಕಾಣುವ ಉದ್ಧಿಶ್ಯ ಬಾಹೋಣವಾಯ್ತು. ಧಾವಲ್ಲಿರುವರೋ ತೋರಿಸಪ್ಪಾ ದ್ವಾರಪಾಲಕಾನಿನಗೀವೆನು ಯನ್ನ ಕೊರಳ ಪದಕಾ॥

ಕಂದ

ಭೂಮಿಪತಿ ವಂದನೆ ಮಾಡುವೇ
ಪ್ರೇಮಾಕರನೇ ವೀರನೇ ಪರಮ ದಯಾಕರನೇ
ಸೋಮನಾಥನ ವೈರಿಯನೂ
ತಾ ಮೀರಿಸುವ ಮತ್ಪ್ರಿಯಾಂಘ್ರಿಗೆ ಬಿನ್ನಪವು ರಮಣಾ॥

ಮದನಮಂಜರಿ: ಇದೇ ಶಿರಸಾಷ್ಠಾಂಗ ಬಿನ್ನಪಂಗಳೂ ಪ್ರಾಣನಾಥ ಯನ್ನ ಮನೋಪ್ರೀತ॥

ಪ್ರವೀರ: ಸೌಮಾಂಗಲ್ಯಾಭಿವೃದ್ಧಿರಸ್ತು ಬಾರೇ ಮದನ ಮಂಜರೀ ಯನ್ನ ಹೃದಯೇಶ್ವರೀ॥

ದರುವು

ದೊರೆಯೇ ಲಾಲಿಸು ಯನ್ನಾ ಕಾಂತ
ಪರಮಾ ಸದ್ಗುಣಾವಂತ॥
ಹರುಷಾ ದಿಂದಿಹುದೂ ವಸಂತ
ಸರಸಾ ಸಮಯ ಧೀಮಂತ॥
ಮಾರಸುಂದರ ಬೇಗ ತೋರೋ ಮುದವನು ಈಗ
ಸ್ಮರನ ಉರುತರ ಪುಷ್ಪ ಶರದಿ ನೊಂದಿಹೆ ಸಾರೈ॥ದೊರೆಯೆ ಲಾಲಿಸು॥

ಮದನಮಂಜರಿ: ಸಕಲ ರಾಜರ ಕಿರೀಟಗಳ ರತ್ನಗಳ ಕಾಂತಿಯೆಂಬ ಬಿಸಿಲಿನಿಂದ ಕೂಡಿದ ಪಾದಪದ್ಮಗಳುಳ್ಳ ಹೇ ರಮಣಾ: ಸಮಸ್ತ ಋತುಗಳಿಗೆ ಒಡೆಯನಾಗಿ ವನಲಕ್ಷ್ಮಿಗೆ ಪತಿಯಾಗಿ ನಿರುಪಮ ಐಶ್ವರ್ಯವುಳ್ಳವನಾಗಿ ಮೆರೆಯುತ್ತಲಿರುವ ವಸಂತರಾಜನೂ ತರುಲತಾದಿಗಳ ಚಿಗುರುವಿಕೆಯಿಂದಾದ ಪುಷ್ಪಗುಚ್ಛಗಳೇ ಚಾಮರಗಳಾಗಿರಲೂ, ಕೋಗಿಲೆಗಳ ಧ್ವನಿಗಳೇ ತುತ್ತೂರಿಗಳಾಗಿರಲೂ ದುಂಬಿಗಳ ಝೇಂಕಾರವೇ ಸಂಗೀತಮಯವಾಗಿರಲೂ ಶಾರಿಕೆಗಳ ದಿವ್ಯ ಧ್ವನಿಯೇ ವಂದಿಮಾಗಧರ ಧ್ವನಿಗಳಾಗಿರಲೂ ಅಪಾರವಾದ ಬಿರುದುಗಳಿಂದ ಬಂದಿರುವ ಈ ಕಾಲದಲ್ಲಿ ಆತನ ಸಖನಾದ ಮನ್ಮಥನು ಪುಷ್ಪಬಾಣಗಳಿಂದ ಯನ್ನನ್ನು ಬಹುವಿಧವಾಗಿ ಬಾಧಿಸುತ್ತಿರುವನೈ ಕಾಂತ-ಕಾಮಿನೀ ವಸಂತ॥

ದರುವು

ಮದನ ಮಂಜರಿಯೇ ನೀ ಬಾರೇ
ಕದಳೀ ಸಮ ಊರು ನೀರೇ॥
ಸದಮಲ ಹೃದಯೇ ಗಂಭೀರೇ॥
ಉದ್ಯಾನವನಕೀಗ ಸಾರೇ॥
ಪಾದರಿ ಮಂದಾರ ಮೊದಲಾದ ತರುಲತೆಗಳ್‌
ಆದರದಿ ಪ್ರಣಯಿಗಳ ಮುದವ ಪೆರ್ಚಿಸುತಿಹುದು॥

ಮದನಮಂಜರಿ: ಉದಯಿಸುವ ಚಂದ್ರನ ಅರುಣಕಾಂತಿಯನ್ನು ಹತ್ತಿಸಿದಂತೆ ಶೋಭಿಸುತ್ತಿರುವ ಆಧರಗಳುಳ್ಳ ಹೇ ಕಾಂತೆ! ಈ ಮನೋಹರವಾದ ವಸಂತಋತುವಿನಲ್ಲಿ ವೃಕ್ಷ ಲತಾದಿಗಳು ಚಿಗುರಿ, ಮೊಗ್ಗುಗಳಿಂದಲೂ ಹೂಗಳಿಂದಲೂ ಅತಿಮನೋಹರವಾಗಿ ಕಾಣುತ್ತಾ ಮಂದ ಮಾರುತನು ಹೂಗಳ ಮಕರಂದವನ್ನೂ ಸುವಾಸನೆಯನ್ನೂ ಧರಿಸಿ ಬೀಸುತ್ತಾ ವಿರಹಿಗಳ ಶರೀರದಲ್ಲಿ ಮನ್ನಥಾಗ್ನಿ ಯನ್ನುರಿಸುತ್ತಾ ಪ್ರಣಯಿಗಳ ಮನದಲ್ಲಿ ಮುದವೇರಿಸಿ ನಲಿಸುತ್ತಿರುವನಾದ ಕಾರಣ, ಉದ್ಯಾನ ಕೇಳಿಗಾಗಿ ನಾವು ಪುರದ ಉಪವನಕ್ಕೆ ಹೋಗೋಣ ಬಾರೇ ನೀರೇ-ಗುಣ ಗಂಭೀರೇ॥

ದರುವು

ರಾರಾಜಿಸುತ್ತಲೀ ಮೆರೆವಾ
ಧರೆಯಾ ಹಿರಿ ಬಳ್ಳಾಪುರವಾ॥
ಕರುಣದಿಂದಲೀ ತಾನು ಪೊರೆವಾ
ಹರನಾ ವೈರಿಯ ಶರವಾ॥
ಭರದಿಂದ ಪರಿಹರಿಸೇ ಪುರದ ಉಪವನಕೀಗ
ಪರಮ ಹರುಷದಿ ನಾವು ತ್ವರಿತದಿಂ ಪೋಗುವಾ॥

ಮದನಮಂಜರಿ: ಹೇ ದೊರೆಯೇ! ಈ ಧರಣಿಯಲ್ಲಿ ಸುರಪನಮರಾವತಿಗೆ ಸರಿಯೆನಿಸಿ ಮೆರೆಯುವ ಹಿರಿಯ ಬಳ್ಳಾಪುರವನ್ನು ಕರುಣದಿಂದ ಪರಿಪಾಲಿಸುವ ಪರಶಿವಮೂರ್ತಿ ಶ್ರೀ ಸೋಮೇಶ್ವರನ ಉರಿಗಣ್ಣಿನಿಂದ ಸುಟ್ಟು ಅನಂಗನಾದ ಮನ್ಮಥನ ಉರುತರ ಭಾದೆಯನ್ನು ಪರಿಹರಿಸಲೋಸುಗವಾಗಿ ಉದ್ಯಾನವನಕ್ಕೆ ತೆರಳಿ ಸರಸ ಸಲ್ಲಾಪದಿಂದಿರೋಣ ಬಾರೈ ಕಾಂತ-ಸರಸ ಧೀಮಂತ॥

ಪ್ರವೀರ: ಅದೇ ಪ್ರಕಾರ ಹೋಗೋಣ ಬಾರೇ ನಾರೀ-ಮದನ ವೈಯ್ಯರಿ॥

 

(ಉಪವನಕ್ಕೆ ಬರುವಿಕೆ)

ದರುವು

ಎಂತಿರ್ಪುದೀ ವನವೂ ನೋಡಲು ಬಹು ಸಂತೋಷಕರಮನವೂ॥
ಎಂತಿರ್ಪುದೀ ವನ ಕಾಂತಿ ಇಂದ್ರನ ವನ
ದಂತೆಸೆವ ವನ ಕಾಂತಿಯಿಂ ಕಾಂಬುದೂ॥ಎಂತಿರ್ಪುದೀ॥

ಪ್ರವೀರ: ಲೋಚನಗಳೆಂಬ ತಾವರೆಗಳನ್ನು ನೋಡಲು ಬಂದ ಚಂದ್ರನಂತೆ ಶೋಭಿಸುತ್ತಿರುವ ಕಪೋಲವುಳ್ಳ ಹೇ ರಮಣೀ! ಈ ಉದ್ಯಾನವನದ ವೃಕ್ಷಗಳಲ್ಲಿರುವ ಮೊಗ್ಗುಗಳೇ ಮೊಡಿಮೆಗಳಾಗಿಯೂ ಹೂಗೊಂಚಲುಗಳೇ ಸ್ತನಗಳಾಗಿಯೂ, ಬಳ್ಳಿಗಳೇ ಶರೀರವಾಗಿಯೂ, ಕಪ್ಪಾದ ಹೊಗೆಯ ಸಾಲುಗಳೇ ರೋಮರಾಜಿಯಾಗಿಯೂ, ವಿಕಸಿತಂಗಳಾದ ಕಮಲಗಳೇ ನಯನಗಳಾಗಿಯೂ ರಾರಾಜಿಸುತ್ತಿರಲು ವನಲಕ್ಷ್ಮಿಗೆ ಯೌವನವೇನಾದರೂ ಬಂದಿರುವುದೋ ಎಂಬಂತೆ ರಮಣೀಯವಾಗಿ ಇಂದ್ರನ ನಂದನ ವನದಂತೆ ಮನೋಹರವಾಗಿ ಕಾಣುತ್ತಿರುವುದು ನೀರೆ ಗುಣಗಂಭೀರೆ॥

ದರುವು

ರಾಜಹಂಸೆಗಳಿಂದ ರಾಜೀಸುತಿರ್ಪುದೂ
ಮೂಜಗಕಿದು ನೋಡಲ್‌ ಸೋಜಿಗವಂದದೀ ಕಾಂಬುದೂ॥ಎಂತಿರ್ಪುದು॥

ಮದನಮಂಜರಿ: ಹೇ ಕಾಂತ! ಕೆಂಪಾದ ಚಿಗುರುಗಳೇ ಕಾಸೆಯಂತೆಯೂ ಮದಿಸಿದ ದುಂಬಿಗಳ ಧ್ವನಿಯೇ ಗೆಜ್ಜೆಗಳ ಧ್ವನಿಯಂತೆಯೂ ಹೂಗೊಂಚಲುಗಳೇ ಚೌರಿಯಂತೆಯೂ, ಕೋಕಿಲೆ ಧ್ವನಿಯೇ ಕಳಕಳ ಧ್ವನಿಯಂತೆಯೂ ಈ ವನವೇ ರಂಗಮಂಟಪದಂತೆಯೂ ಕಾಣುತ್ತಿರಲೂ ರಾಜಹಂಸೆಗಳೆಂಬ ನರ್ತಕಿಯರು ನರ್ತನ ಮಾಡುತ್ತಿರುವಂತೆ ತೋರುವುದೈ ರಮಣಾ ಸದ್ಗುಣಾಭರಣ॥

ದರುವು

ಹಿರಿಯ ಬಳ್ಳಾಪುರದ ವರದ ಸೋಮೇಶನಾ
ಪರಮಾ ಸಖನಾ ಸತಿಯೂ ಸಿರಿಯಂತೆ ಮೆರೆವುದೂಎಂತಿರ್ಪುದೀ

ಪ್ರವೀರ: ಕೇಶಪಾಶವೆಂಬ ಕತ್ತಲೆಯು ತನಗೆ ಹೆದರುವುದಿಲ್ಲವೆಂಬ ಯೋಚನೆಯಲ್ಲಿ ಮಗ್ನನಾದ ಚಂದ್ರನಂತೆ ರಂಜಿಸುತ್ತಿರುವ ಹಣೆಯುಳ್ಳ ಹೇ ಚಂಚಲಾಕ್ಷಿ! ಈ ವನಲಕ್ಷ್ಮಯು ಶುಕಗಳ ರೆಕ್ಕೆಗಳೆಂಬ ಪಚ್ಚೆಗಳ ಹಾರಗಳನ್ನೂ ಭ್ರಮರಗಳೆಂಬ ನೀಲರತ್ನಗಳ ಹಾರಗಳನ್ನೂ ಸಿಹಿಮಾವಿನ ಪಲ್ಲವಗಳೆಂಬ ಕೆಂಪುರತ್ನಗಳ ಹಾರಗಳನ್ನು ಅಲಂಕರಿಸಿಕೊಂಡು, ಹಿರಿಯ ಬಳ್ಳಾಪುರವರಾಧೀಶ ಶ್ರೀ ಸೋಮೇಶನ ಸಖನಾದ ಮಹಾವಿಷ್ಣುವಿಗೆ ಮಹಾಲಕ್ಷ್ಮಿಯು ಮನೋಹರಳಾಗಿರುವಂತೆ, ತಾನೂ ಕೂಡ ವಿಷ್ಣುವಿನಂತಿರುವ ವಸಂತರಾಜನಿಗೆ ಮನೋರಮೆಯಾಗಿ ಕಾಣುತ್ತಿಹಳೈ ಕಾಂತೆ ಮತಿಗುಣವಂತೆ॥

ಕಂದರಾಗ

ಬಕುಳ ಮಂದಾರ ಪಾದರಿ ಕರ್ಣಿಕಾರ ಚಂ
ಪಕ ಕೋವಿದಾರ ಪ್ರಿಯಂಗು ಕರವೀರ ಕುರ
ವಕ, ತಿಲಕ, ಸುರಗಿ ನಂದ್ಯಾವರ್ತ, ಮೇರು
ಸೇವಂತಿಗೆ ಶಿರೀಷಮೆಂಬ॥
ಸಕಲ ತರು ನಿಚಯಂಗಳಂಗಜನ ವಿವಿಧ ಸಾ
ಯಕದ ಮೂಡಿಗೆಗಳಂತೆಸೆವ ನವಕುಸುಮ
ಸ್ತಬಕದಿಂದೊಪ್ಪುತಿರೆ ಕುಂದ ಮಾಲತಿ
ಮಲ್ಲಿಕಾದಿ ಪೂವಲ್ಲಿ ಗೂಡಿ॥

ಮದನಮಂಜರಿ: ಮದನ ಸುಂದರನಾದ ಹೇ ರಮಣಾ! ಇಂತಪ್ಪ ತರುಲತಾದಿಗಳಿಂದ ಕೂಡಿ ನಂದನವನಕಿಮ್ಮಿಗಿಲಾದ ಈ ವನದಲ್ಲಿ ಯನ್ನ ಸಖಿಯರೊಂದಿಗೆ ಸಂಚರಿಸಿ ಬರುವೆನಾದ ಕಾರಣ ಅದುವರೆವಿಗೂ ಈ ಲತಾಗೃಹದಲ್ಲಿನ ಚಂದ್ರಕಾಂತ ಶಿಲೆಯ ಮೇಲೆ ಪವಡಿಸಿ ವಿಶ್ರಮಿಸಿ ಕೊಳ್ಳುವಂಥವರಾಗಿರೈ ರಮಣಾ ಕರುಣಾಭರಣ॥