(ಯಜ್ಞಾಶ್ವ ಬರುವಿಕೆ)

ಕಂದರಾಗ

ಜಾತಿ ಸೇವಂತಿಗೆ ಶಿರೀಷ ಮೊದಲಾದ ಪೂ
ಜಾತಿ ಗಳೊಳಿಂತಲರ್ಗೊಯ್ಯುತುಪವನ
ದೊಳ್ನಿಜಾತಿಶಯ ಲೀಲೆಯಿಂದಿರುತಿರ್ದಳಾ
ಮದನ ಮಂಜರಿ ಕೆಳದಿಯರೊಡನೇ॥
ಭೂತಳದೊಳಿದು ಶುಭಾಕಾರದಿಂದಾಶ್ಚರ್ಯ
ಭೂತಮೆನೆ ಮೈ ತೋರಿತಾಗಳಮರೇಂದ್ರ
ಸಂಭೂತನ ತುರಂಗಮದಂ ಕಂಡು
ಮುತ್ತಿದರ್ ಮತ್ತಗಜಗಾಮಿನಿಯರು॥

ಭಾಗವತರು: ಕೇಳಿದರೇನಯ್ಯ ಭಾಗವತರೇ ಈ ಪ್ರಕಾರವಾಗಿ ಮದನ ಮಂಜರಿಯು ತನ್ನ ಗೆಳತಿಯರೊಂದಿಗೆ ವನವಿಹಾರದೊಳಿರಲೂ, ಇಂದು ಕುಲತಿಲಕರಾದಂಥ ಧರ್ಮರಾಯರ ಯಾಗದ ಕುದುರೆಯು ಅಮರೇಂದ್ರ ಸಂಭೂತನ ಬೆಂಗಾವಲಿನಿಂದ ಮಾಹಿಷ್ಮತಿಯ ಪುರದ ಉಪವನಕ್ಕೆ ಬರಲು ಅದಂ ಕಂಡ ಮದನ ಮಂಜರಿಯು ಆಶ್ಚರ‌್ಯಚಕಿತಳಾಗಿ ತನ್ನ ಗೆಳತಿಯರೊಂದಿಗೆ ತುರಗವನ್ನು ಸುತ್ತುವರಿದಳೈಯ್ಯ ಭಾಗವತರೇ॥

ಮದನಮಂಜರಿ: ಅಪ್ಪಾ! ಸಾರಥೀ ನಾನಾ ಬಗೆಯ ಪಕ್ಷಿಗಳ ಇಂಪಾದ ಗಾನವಂ ಆಲಿಸುತ್ತಾ, ಪುಷ್ಪಗಳ ಮಕರಂದ ಸೌರಭವನ್ನು ಆಸ್ವಾದಿಸುತ್ತಾ ಕೆಳದಿಯರೊಂದಿಗೆ ಈ ವನದಲ್ಲಿ ವಿಹರಿಸುತ್ತಿರುವ ವೇಳೆಯಲ್ಲಿ ಧಾವುದೋ ಒಂದು ಕುದುರೆಯು ಬಂದು ತರುಲತಾದಿಗಳನ್ನು ತುಳಿದು ಹಾಳು ಮಾಡುತ್ತಿದೆಯಲ್ಲಪ್ಪಾ ಸಾರಥೀ ನೋಡಿದರೆ ಅದು ಸಾಮಾನ್ಯವಾದ ಕುದುರೆಯ ಹಾಗೆ ಕಾಣುವುದಿಲ್ಲ. ಧಾವುದೋ ದೇಶದ ರಾಜರ ಕುದುರೆಯಾಗಿ ಕಾಣುತ್ತಾ ಇದೆ. ಗಂಧಾಕ್ಷತೆಗಳಿಂದ ಪೂಜ್ಯತೆ ಹೊಂದಿರುವುದಲ್ಲದೆ ಅದರ ಫಣಿಯಲ್ಲಿ ಕನಕದಪಟ್ಟಿಯನ್ನು ಕಟ್ಟಿದ ಹಾಗೆ ಕಾಣುತ್ತಿರುವುದಾದ ಕಾರಣ ಈಗ ನಾನು ತ್ವರಿತದಿಂದ ಹೋಗಿ ಯನ್ನಯ ಪ್ರಾಣಕಾಂತನನ್ನು ಇಲ್ಲಿಗೆ ಕರೆದು ತಂದು ತುರಗವನ್ನು ತೋರಿಸುವೆನಪ್ಪಾ ಸಾರಥೀ॥

ಮದನ ಮಂಜರಿದರುವು

ತುರಗವು ಧಾರದೋ ಪರಿಯೇನ ತಿಳಿಯದೂ ಪ್ರಾಣಕಾಂತ
ತರುಲತಾದಿಗಳನ್ನು ಮುರಿಯುತ್ತಲಿರುವುದೂ ಪ್ರಾಣಕಾಂತ॥

ಮದನ ಮಂಜರಿ: ಹೇ ಪ್ರಾಣಕಾಂತ! ನಮ್ಮ ಈ ಉದ್ಯಾನವನದಲ್ಲಿ ತನ್ನಿಚ್ಛಾನುಸಾರವಾಗಿ ಸಂಚರಿಸುವ ಈ ಕುದುರೆಯು ಧಾರದೋ ತಿಳಿಯಲಿಲ್ಲಾ ಅದು ಒಳಹೊಕ್ಕು ನಾನಾ ಬಗೆಯ ಪುಷ್ಪಲತೆಗಳನ್ನು ಖುರಗಳಿಂದ ಮುರಿದು ಧರೆಗೀಡಾಗುವುದನ್ನು ನೋಡಿದೆಯೇನೈ ರಮಣಾ-ಕರುಣಾಭರಣ॥

ದರುವು

ವರ್ಣವು ಬಿಳಿಯದೂ ಕರ್ಣವೊಂದಾಗಿದೆ ಪ್ರಾಣಕಾಂತ
ಬಣ್ಣಿಸೆ ಪುಚ್ಛವೂ ವರ್ಣದಿ ಪೀತವೂ ಪ್ರಾಣಕಾಂತ॥

ಮದನ ಮಂಜರಿ: ಹೇ ಮನೋಪ್ರೀತ! ಈ ಕುದುರೆಯನ್ನು ನೋಡಿದ್ದೇ ಆದರೆ ಶ್ವೇತವರ್ಣದ್ದಾಗಿ, ಏಕ ಕರ್ಣವುಳ್ಳ ತುರಗವಾಗಿ ಕಾಣುತ್ತಿರುವುದು, ಅಲ್ಲದೇ ಅದರ ಬಾಲವು ಹಳದಿಯಬಣ್ಣವಾಗಿ ಮನೋಹರವಾಗಿ ಕಂಗೊಳಿಸುತ್ತಾ ಇರುವುದೈ ಕಾಂತ-ಸದ್ಗುಣವಂತ॥

ದರುವು

ಮುತ್ತು ರತ್ನಗಳಿಂದ ಮೊತ್ತವಾಗಿರುವುದು ಪ್ರಾಣಕಾಂತ
ನೆತ್ತಿಯೊಳು ಹೇಮದಿಂ ಕೆತ್ತಿದ ಪಟ್ಟಿಯೂ ಪ್ರಾಣಕಾಂತ॥

ಮದನಮಂಜರಿ: ಹೇ ರಮಣಾ! ಮುತ್ತುರತ್ನ ವಜ್ರ-ವೈಢೂರ‌್ಯ ಮಾಲೆಗಳಿಂದ ದೇದೀಪ್ಯವಾಗಿ ಕುದುರೆಯು ಹೊಳೆಯುತ್ತಿರುವುದು ನೋಡಿದರೆ ಧಾವುದೋ ದೇಶದ ರಾಜನ ಕುದುರೆಯಾಗಿ ಕಾಣುತ್ತಿರುವುದು. ಅಲ್ಲದೆ ಅದರ ಮಸ್ತಕದಲ್ಲಿ ಬಂಗಾರದಿಂದ ಕೆತ್ತಲ್ಪಟ್ಟ ಕನಕಪಟ್ಟಿಯನ್ನು ಕಟ್ಟಿ ಇದೆ. ಅದರಲ್ಲಿ ಏನೋ ಲಿಖಿತವನ್ನು ಬರೆದ ಹಾಗೆ ಕಾಣುತ್ತಾ ಇದೆಯೈಯ್ಯ ದೊರೆಯೇನೀವಿದ
ತಿಳಿಯೇ॥

ದರುವು

ಗಂಧಪುಷ್ಪಾದಿಗ ಳಿಂದ ಪೂಜಿಸಿಹುದೂ ಪ್ರಾಣಕಾಂತ
ಸುಂದರವಾಗಿದೆ ಇಂದ್ರನ ತುರಗವೋ ಪ್ರಾಣಕಾಂತ॥

ಮದನ ಮಂಜರಿ: ಹೇ ಮನೋವಲ್ಲಭಾ! ಗಂಧ ಪುಷ್ಪಾದಿಗಳಿಂದ ಬಹುಪೂಜ್ಯತೆ ಹೊಂದಿರುವುದು ನೋಡಿದ್ದೇ ಆದರೆ ದೇವೇಂದ್ರನ ಕುದುರೆಯಾದ ಉಚ್ಚೈಃಶ್ರವದಂತೆ ಬಹು ಸುಂದರವಾಗಿ ತೋರುತ್ತಿರುವುದೈ ನಾಥ ಯನ್ನ ಮನೋಪ್ರೀತ॥

ದರುವು

ಹಿರಿಯ ಬಳ್ಳಾಪುರ ವರದ ಸೋಮೇಶನಾ ಪ್ರಾಣಕಾಂತ
ಕರುಣದಿಂದಿಲ್ಲಿಗೆ ಭರದಿ ಬಂದಿಹೆಯೇನೋ ಪ್ರಾಣಕಾಂತ॥

ಮದನ ಮಂಜರಿ: ಹೇ ಕಾಂತ! ಈ ಧರಣಿಗೆ ಅಧಿಕವಾಗಿ ಮೆರೆಯುವ ಹಿರಿಯ ಬಳ್ಳಾಪುರವನ್ನು ಕರುಣದಿಂದ ಪರಿಪಾಲಿಸುವ ಗಿರಿಸುತೇ ಪ್ರಾಣೇಶ್ವರನಾದ ಶ್ರೀ ಸೋಮೇಶ್ವರನ ಕೃಪಾ ಕಟಾಕ್ಷದಿಂದ ಕುದುರೆಯು ನಮ್ಮ ಉಪವನಕ್ಕೆ ಬಂದಿರುವ ಹಾಗೆ ಕಾಣುತ್ತಾ ಇದೆಯೆಯೈ ಕಾಂತ ಕಾಮಿನೀ ವಸಂತ॥

ದರುವುಜಂಪೆ

ಖುಲ್ಲರಾಯರ ಕುದುರೇ ಸೊಲ್ಲು ನುಡಿಯುತಲಿರುವೇ
ಪುಲ್ಲಲೋಚನೆಯದರ ಫಾಲಲಿಖಿತವನೂ ಪತ್ರವನೂ॥
ಉಲ್ಲಾಸದಿಂದಲೀ ನಿಲ್ಲಾದೆ ನೀ ನೋಡು
ಎಲ್ಲಾ ವಿವರಗಳನ್ನೂ, ನಲ್ಲೆ ತಿಳಿಸೆನಗೇ, ಪೇಳ್ ಎನಗೇ॥

ಪ್ರವೀರ: ಕಮಲಗಂಧಿಯಾದ ಹೇ ಕಾಂತೆ! ಈ ಕುದುರೆಯು ಬಹಳ ವಿಚಿತ್ರವಾಗಿ ಕಾಣುತ್ತಾ ಇದೆ. ಅಲ್ಲದೆ ಇದು ಧಾವ ಖುಲ್ಲರಾಯನ ಕುದುರೆಯೋ ತಿಳಿಯದು. ಹೇ ಪುಲ್ಲಲೋಚನೆ ಈ ತುರಗದ ಸುಂದರವಾದ ಸೊಲ್ಲನ್ನು ಉಲ್ಲಾಸದಿಂದ ಪರಿಪರಿಯಾಗಿ ವರ್ಣಿಸದೇ, ಅದರ ಫಣಿಯಲ್ಲಿ ಕಟ್ಟಿರುವ ಬಂಗಾರದ ಲಿಖಿತ ಪತ್ರವನ್ನು ಅತಿಜಾಗ್ರತೆ ಬಿಚ್ಚಿ ಶೃತಪಡಿಸುವಂಥವಳಾಗೆ ನಾರೀ-ಮದನ ವೈಯ್ಯರಿ॥

ಮದನಮಂಜರಿ: ಹೇ ಪ್ರಾಣಕಾಂತ! ಈ ಕುದುರೆಯ ಫಣಿಯಲ್ಲಿರುವ ಬಂಗಾರದ ಪತ್ರವನ್ನು ಓದುತ್ತಾ ಇದ್ದೇನೆ. ಚಿತ್ತವಿಟ್ಟು ಲಾಲಿಸೈ ಭೂಪಾ ಕೀರ್ತಿ ಕಲಾಪ॥

ಕಂದಕೇದಾರಗೌಳ

ಇಂದು ಕುಲದಗ್ಗಳೆಯ, ಪಾಂಡವ ಸುಧಾಪಾಲ
ನಂದನ, ಯುಧಿಷ್ಠಿರ ನರೇಂದ್ರನಧ್ವರ ಹಯ
ಮಿದಂ, ದಿಟ್ಟರಾರಾದೊಡಂ ಕಟ್ಟಿಕೊಳಲಾ
ರ್ಪೊಡಿಳೆಯೊಳೆಂಬೀ ಲಿಪಿಯನೂ॥
ಸಂದಿಸಿ ಬರೆದ ಕನಕಪಟ್ಟ ಮನದರ ಫಣಿ
ಯೊಳೊಂದಿಸಿ ತುರಂಗಮವನಮಲ ವಸ್ತ್ರಾ
ಭರಣದಿಂ ದಿವ್ಯ ಗಂಧ ಮಾಲ್ಯಾಕ್ಷತೆ
ಗಳಿಂದಲಂಕರಿಸಿ ಬಿಟ್ಟಿರುವರೈ ರಮಣಾ॥

ಮದನಮಂಜರಿ: ಹೇ ರಮಣಾ ಈ ಧರಣಿಯೋಳ್ ಅತಿ ವೈಭವದಿಂದ ಮೆರೆಯುವ ಇಂದ್ರಪ್ರಸ್ತ ಪುರವನ್ನು ದಿಟ್ಟತನದಿಂದ ಪರಿಪಾಲಿಸುವ ಕುಮುದ ಸಖ ಕುಲ ತಿಲಕರಾದಂಥ ಪಾಂಡು ಮಹಾರಾಜರ ಪುತ್ರ ಯುಧಿಷ್ಠಿರ ಚಕ್ರವರ್ತಿಯ ಯಾಗದ ಕುದುರೆಯಂತೆ, ಈ ವಸುಧೆಯಲ್ಲಿ ಪರಾಕ್ರಮವುಳ್ಳಂಥ ರಾಜರು ಧಾರಾದರೂ ಇದ್ದರೆ ಈ ಕುದುರೆಯನ್ನು ಕಟ್ಟಿಕೊಳ್ಳಬಹುದಂತೆ. ಆ ರೀತಿ ತುರಗವನ್ನು ಕಟ್ಟಿದ ರಾಜರನ್ನು ಯುದ್ಧದಲ್ಲಿ ಜೈಸಿ ಬಿಡಿಸಿಕೊಂಡುಹೋಗುವುದಕ್ಕೆ ಸೈನ್ಯದೊಡನೆ ಮಹಾವೀರನಾದ ಪಾರ್ಥನನ್ನು ಕಳುಹಿಸಿ ಇದ್ದಾರೆಂತಲೂ ಬರೆದು ಇದೇ ಸ್ವಾಮಿ ಇದ್ದ ವಿವರವನ್ನು ಶೃತಪಡಿಸಿದ್ದೇನೈ ರಮಣಾ ಕರುಣಾಭರಣಾ॥

ದರುವು

ಇಷ್ಠು ಗರ್ವದ ಲಿಖಿತಾ ದುಷ್ಠ ಬರೆಯಲುಬಹುದೇ
ಸೃಷ್ಠಿಗೀಶನ ದಯದೀ ಕಟ್ಟುವೆ ತುರಗವನೂ ನಾ ಬಿಡೆನೂ
ಕೆಟ್ಟಲಿಖಿತವ ಬರೆದೂ ಬಿಟ್ಟಿರುವ ಅಶ್ವವನೂ
ಕಟ್ಟಾದೇ ಬಿಡಲು ತಾ ದಿಟ್ಟ ನೃಪಸುತನೇ, ವರಸುತನೆ, ಕ್ಷತ್ರಿಯನೇ॥

ಮದನಮಂಜರಿ: ಚಕ್ರವಾಕ ಕುಚದ್ವಯೆಯಾದ ಮದನ ಮಂಜರಿಯೇ ಕೇಳು! ಕುದುರೆ ಯಾರದು? ಪುನಃ ಹೇಳು ಧರ್ಮರಾಯನದೋ, ಕಟ್ಟಿದ ಕುದುರೆಯನ್ನು ಬಿಡಿಸಿಕೊಂಡು ಹೋಗಲು ಅರ್ಜುನನು ಬಂದಿದ್ದಾನಂತೆಯೋ. ಆತನು ಬಹಳ ಪರಾಕ್ರಮಿಯಂತೆಯೋ ಬರಲಿ, ಬಂದ ಮೇಲೆ ಅಲ್ಲವೇ ಅವನ ಶೌರ‌್ಯ ಧೈರ‌್ಯಗಳು ತಿಳಿಯುವುದು. ತಾನು ಬಹಳ ಬಲಿಷ್ಠನೆಂದೂ ಇತರರು ಅಬಲರೆಂತಲೂ ತಿಳಿದು ಇಂಥ ಲಿಖಿತವನ್ನು ಬರೆದು ಕುದುರೆಯ ಫಣೆಗೆ ಕಟ್ಟಬಹುದೇ. ಆಗಲಿ ಕುದುರೆಯನ್ನು ಕಟ್ಟಿ ಅವನ ಪರಾಕ್ರಮವನ್ನು ಇಂದು ನೋಡಿಯೇ ಬಿಡುವೆನು ರಮಣೀ ಕಾಂತಿದ್ಯುಮಣಿ॥

ದರುವು

ಪಟ್ಟದ ರಾಣಿಯೇ ನೀನೂ ನೆಟ್ಟನೇ ಸಖಿಯರೊಳು
ಪಟ್ಟಣಕೆ ಭರದಿಂದ ಥಟ್ಟನೆ ನೀ ತೆರಳೇ ಹೇ ತರಳೇ॥
ಮುಟ್ಟಿಸುತ ವಾರ್ತೆಯನೂ ದಿಟ್ಟ ಯನ್ನಯ ಪಿತಗೇ
ದುಷ್ಠನೊಳು ಕಾದಾಡಿ ಶ್ರೇಷ್ಠಾನೆನಿಸುವೆನೂ ನಾ ಬಿಡೆನು॥

ಪ್ರವೀರ: ಎಲೆ ಭೃಂಗ ಕುಂತಳೆಯಾದ ಪಟ್ಟದರಾಣಿಯೇ! ನೀನು ಕೆಳದಿಯರೊಂದಿಗೆ ನಮ್ಮ ಪಟ್ಟಣಕ್ಕೆ ಥಟ್ಟನೇ ತೆರಳುವಂಥವಳಾಗು. ನಾನೀಗಲೇ ಪಟ್ಟಣದಲ್ಲಿರುವ ಯನ್ನಯ ಜನಕನಿಗೆ ಈ ವಾರ್ತೆಯನ್ನು ಚಾರನ ಮುಖೇನ ಮುಟ್ಟಿಸಿ, ಸೈನ್ಯವನ್ನು ಕರೆಸಿ ಅರ್ಜುನನೊಡನೆ ಯುದ್ಧವಂ ಮಾಡಿ ಜೈಸದಿರ್ದರೆ ನೀಲಧ್ವಜ ಭೂಪಾಲನ ವೀರಸುತ ವೀರ ಪ್ರವೀರನೆಂದೆನಿಸಬೇಕೆ ಕಾಂತೆ-ಮತಿಗುಣವಂತೆ॥

ಕಂದಾರ್ಥ

ಇಂದೀವರಾಕ್ಷ ರಣಧೀರ ಕಂದರ್ಪ ಸಮರೂಪ
ಸುಂದರಾಂಗನೇ ಜಯವಧುವ ಚಂದದಿಂದೆಳೆತರಲು
ಪೋಗಿಬಾ ರಮಣಾ ಕರುಣಾಭರಣಾ
ಪೋಗಿ ಬಾ ರಮಣಾ॥
ಇಂದು ಸಮರಕೆ ಪೋಗಿ ಇಂದ್ರನಾತ್ಮಜನನ್ನು
ಚಂದದಿಂ ಜೈಸುತಾ ನಂದದಿಂ ಬರುವುದಕೆ॥
ಮುತ್ತಿನಾರತಿಯಾ ಯೆತ್ತುವೆ ರಾಯ
ರತ್ನದಾರತಿಯಾ॥

ಮದನಮಂಜರಿ: ಇಂದ್ರನ ವಜ್ರಾಯುಧವನ್ನು ಅಣಕಿಸುವ ಖಡ್ಗಧರನಾಗಿಯೂ ಮದಿಸಿರುವ ಅರಿರಾಜರ ಶೌರ‌್ಯ ಪ್ರತಾಪವೆಂಬ ಚಿಗುರಿಗೆ ವಾರಣಪ್ರಾಯನಾಗಿಯೂ ಇರುವ ಹೇ ಕಾಂತ! ಯುದ್ಧಕ್ಕೆ ಪೋಗಿಬಾರೈ ರಮಣ! ಮಂಗಳವಾಗಲಿ! ಇಂದಿನ ಸಮರದಲ್ಲಿ ಪುರಹೂತ ಸಂಭವನಾದ ಪಾರ್ಥನನ್ನು ಜಯಿಸಿ ಜಯಲಕ್ಷ್ಮಿಯ ಕರವಿಡಿದು ಹರುಷದಿಂದ ಬರಲೆಂದು ನಿಮಗೆ ಮುತ್ತಿನಾರತಿಯನ್ನು ಬೆಳಗಿ ಪಾಡುವೆ ಕಾಂತ! ಜಗತ್ಪಾವನನಾದ ದೇವಪುರದೊಡೆಯನ ಕೃಪೆಯು ನಿಮಗಿರಲಿ ಹಿರಿಯ ಬಳ್ಳಾಪುರದ ಗಿರಿಜಾಕಾಂತ ಶ್ರೀಸೋಮನಾಥನು ನಿಮ್ಮನ್ನು ಕಾಪಾಡಲಿ. ರಿಪುಗಳನ್ನು ಸದೆ ಬಡಿದು ಸುಖಿಯಾಗಿ ಬಾಳುವಂತಾಗಲಿ ರಣಾಗ್ರದಲ್ಲಿ ಶ್ರೇಷ್ಠರಾದ ಶತೃಗಳನ್ನು ಜಯಿಸಿ ಈ ವಸುಧೆಗೆ ಒಡೆಯರಾಗಿ ಕೀರ್ತಿಯನ್ನು ಗಳಿಸಿ ಮೈದೆಗೆದು ಕಾದು ಜಯಸಿರಿಯ ಐದೆತನವು ನಿಮ್ಮಿಂದ ಮೆರೆದು ಶೋಭಿಸಲು ಇಂದು ನೀವು ಸಮರಕ್ಕೆ ಪೋಗಿ ಬರಬಹುದೈ ರಮಣಾ-ಹರ ತೋರಿಸಲಿ ಕರುಣಾ॥

ಭಾಗವತರ ದರುವು

ಕೇಳು ಜನಮೇಜಯ ಧರಿತ್ರೀ
ಪಾಲ ತುರಗವ ಕಟ್ಟಿ ವೀರನೂ
ಬಳಿಕ ತರಿಸಿದ ನಖಿಲ ಸೈನ್ಯವ ಕಾಳಗವ ಜೈಸೇ॥

ಪುರದೊಳಿರುತಿಹ ಯನ್ನ ಜನಕಗೇ
ಚರರನಟ್ಟಿಸಿ ವಿವರಗಳನೂ॥
ಭರದಿ ತಿಳಿಸಿದ ಕದನವೊದಗಿದ ಪರಿಯನೆಲ್ಲವನೂ॥

ಹಿರಿಯ ಬಳ್ಳಾಪುರದ ಅಂತ್ಯದಿ
ಸ್ಥಿರದಿ ನೆಲೆಸಿದ ಸೋಮನಾಥನ
ಸ್ಮರಿಸಿ ಕುವರನು ಧುರಕೆ ಹೊರಟನು ಧರೆಯು ತಲ್ಲಣಿಸೇ॥

ಪ್ರವೀರ: ಯಲಾ ಸಾರಥಿ ನೀನು ಅತಿಭರದಿಂದ ತೆರಳಿ ಪುರದೊಳಿರುವ ನಮ್ಮ ತಂದೆಯವರಾದ ನೀಲಧ್ವಜ ಭೂಪಾಲರ ಸಮ್ಮುಖಕ್ಕೆ ತೆರಳಿ, ಯನಗೆ ಪಾರ್ಥನೊಡನೆ ಕಾಳಗವು ಸಂಭವಿಸಿರುವ ವಾರ್ತೆಯನ್ನು ತಿಳಿಸಿ ಚತುರಂಗ ಸೈನ್ಯವನ್ನು ಯಾವತ್ತೂ ಸಿದ್ಧಪಡಿಸಿ ಕಳಿಸುವುದಲ್ಲದೇ ಆ ಖೂಳನಾದ ಅರ್ಜುನನಿಗೆ, ಧೀರ ಪ್ರವೀರನು ಕುದುರೆಯನ್ನು ಕಟ್ಟಿ ಯುದ್ಧಕ್ಕೆ ಬರುತ್ತಿರುವನೆಂಬ ವಾರ್ತೆಯನ್ನು ಅತಿ ಜಾಗ್ರತೆ ಅರುಹಿ ಬಾರೋ ದೂತ-ರಾಜಸಂಪ್ರೀತ॥

(ಅರ್ಜುನ ಮತ್ತು ಸೈನ್ಯ ಬರುವಿಕೆ)

ತೆರೆದರುವು

ಹಿಮಕರನ ಕುಲತಿಲಕ ವಸುಧಾ
ರಮಣ ಪುಣ್ಯೋದಯ ಸುಭಾಷಿತ
ವಿಮಲ ಗುಣಚಾರಿತ್ರ ಸನ್ನುತ ಸತ್ಯ ಸಂಚಾರ॥

ತುರಗ ಕಟ್ಟಿದ ವಾರ್ತೆ ತಿಳಿಯುತಾ
ನರಪ ಫಲುಗುಣ ಕಿಡಿಗಳುಗುಳುತಾ
ಧುರಕೆ ಬಂದನು ಧೀರ ನಿಜಪರಿ ವಾರ ಸಹಿತಾ॥

ತರಣಿ ಪೌತ್ರನು ಕರ್ಣ ತನಯನೂ
ಧುರಪರಾಕ್ರಮಿ ಯೌವನಾಶ್ವನೂ
ಮಾತನೂ ಅನುಸಾಲ್ವರಾಜನಾ ಸೇರಿ ತ್ವರಿತದಲಿ॥

ಬಂದನಾಕ್ಷಣ ವಾಸವಾತ್ಮಜಾ
ಇಂದುಧರ ಶ್ರೀ ಸೋಮನಾಥನಾ
ಚಂದದಿಂ ಮನದೊಳಗೆ ಸ್ಮರಿಸುತಾ ಅಂದು ರೌದ್ರದಲೀ॥

ಅರ್ಜುನ: ಯಲಾ ಚಾರ ಹೀಗೆ ಬಾ, ಮತ್ತೂ ಒಂದು ಸಾರಿ ಹೀಗೆ ನಿಲ್ಲು. ಭಳಿರೆ ಚಾರ! ವಾಸವಾತ್ಮಜನೆನಿಸಿ ಆತನಿಂದ ದತ್ತವಾದ ಸಿಡಿಲಿಗೆ ಸಮಾನವಾದ ದಿವ್ಯ ಶಕ್ತಿಯನ್ನು ಧರಿಸಿದವನಾಗಿ ಮದಗಜದಂತೆ ಗರ್ವ ವಿಜೃಂಭಿತನಾಗಿ, ಧೂಮ ರಹಿತನಾದ ಯಜ್ಞೇಶ್ವರನೋಪಾದಿಯಲ್ಲಿ ಜ್ವಾಜ್ವಲ್ಯಮಾನನಾಗಿ ಸಾರಿ ಸಂಗ್ರಾಮಕ್ಕೆ ಸಿದ್ಧನಾಗಿ ಬರುತ್ತಿರುವ ಯನ್ನನ್ನು ಧಾರೆಂದು ವಿಚಾರಿಸುವ ಪಾಮರ ನೀ ಧಾರೋ ಯನ್ನೊಳು ಸಾರೋ॥

ಹಾಗಾದರೆ ಯಮ್ಮ ವಿದ್ಯಮಾನವನ್ನು ಪೇಳುತ್ತೇನೆ ಚಿತ್ತವಿಟ್ಟು ಕೇಳೋ ಸಾರಥೀ-ಸಂಧಾನಮತಿ

ಈ ಸಪ್ತಾಚಲ ಮಧ್ಯದೋಳ್ ಅತಿರಮಣೀಯವಾಗಿ ಕಂಗೊಳಿಸುವ ಧಾವ ಇಂದ್ರಪ್ರಸ್ತಪುರವನ್ನು ಸಾಂದ್ರ ವೈಭವದಿಂದ ಪರಿಪಾಲಿಸಿದ ಬ್ರಾಹ್ಮಣಹಿತ, ಶಸ್ತ್ರಾಸ್ತ್ರಕೋವಿದ ಪಾಂಡುಮಹಾರಾಯರ ಧರ್ಮಪತ್ನಿ ನಾರಿ ಶಿರೋಮಣಿ ಕುಂತೀದೇವಿಯವರ ಗರ್ಭಾಂಬುಧಿಯೋಳ್ ಅಮರಾವತೀಶ್ವರನ ವರದಿಂದ ಉದ್ಭವಿಸಿ, ಸತ್ಯಸಂಧನೂ, ಅಜಾತಶತೃವೂ ಎನಿಸಿದ ಧರ್ಮರಾಯರಿಗೆ ಅನುಜನೆಂದೆನಿಸಿ, ಅಪ್ರಮೇಯ ಪ್ರಭಾವನಾದ ಪುಂಡರೀಕಾಕ್ಷನಿಗೆ ಭಾವ ಮೈದುನನೆಂದೆನಿಸಿದ ಅರಿರಾಯರ ಮಿಂಡ, ಮೂರು ಲೋಕದಗಂಡ, ಭುಜಬಲದೋರ್ದಂಡ, ಚಂಡ ಪ್ರಚಂಡ, ಗಂಡುಗಲಿ ಗಾಂಡೀವಿಯಾದ ಅರ್ಜುನನು ಬಂದು ಇದ್ದಾನೆಂದು ಈ ಪೊಡವಿಯೋಳ್ ಒಂದೆರಡು ಬಾರಿ ಕಿತಾಬ್ ಮಾಡಿಸೋ ಸಾರಥೀ॥

ಭಲಾ ಸಾರಥೀ! ಈ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ! ನಮ್ಮ ಅಣ್ಣಂದಿರಾದ ಧರ್ಮರಾಯರು, ಮುನಿಮೌನಿಯಾದ ವೇದವ್ಯಾಸರ ಉಪದೇಶದಂತೆ ಅಶ್ವಮೇಧಯಾಗವನ್ನು ಪ್ರಾರಂಭಿಸಿಕೊಂಡು, ಯೌವನಾಶ್ವನ ಪಟ್ಟಣದಿಂದ ಯಾಗದ ಕುದುರೆಯನ್ನು ತರಿಸಿ, ಯಜ್ಞಕುಂಡವನ್ನು ರಚಿಸಿ, ದ್ರೌಪದೀ ಸಮೇತವಾಗಿ ಅಣ್ಣಂದಿರು ಯಾಗವನ್ನು ನಡೆಸುತ್ತಾ ಕಂಕಣಬದ್ಧರಾಗಿ ಕುಳಿತು ಇದ್ದಾರೆ. ತಮ್ಮ ಬಿರುದಿನ ಅಗ್ಗಳಿಕೆಯನ್ನು ಯಾಗದ ಕುದುರೆಯ ಮಸ್ತಕಕ್ಕೆ ಕಟ್ಟಿ, ಆ ಕುದುರೆಯನ್ನು ದೇಶದ ಮೇಲೆ ಬಿಟ್ಟಿರುವಂಥ ಕಾಲದಲ್ಲಿ ಧಾರಾದರೂ ಪರಾಕ್ರಮಿಗಳು ಕಟ್ಟಿಕೊಂಡರೆ, ಅವರೊಡನೆ ಯುದ್ಧವಂ ಮಾಡಿ ಜಯಿಸಿ ಕುದುರೆಯನ್ನು ಬಿಡಿಸಿ, ಅವರಿಂದ ಕಪ್ಪ ಕಾಣಿಕೆಯನ್ನು ತೆಗೆದುಕೊಂಡು ಹೋಗಲು ಸಕಲ ಸೇನಾ ಸಮೇತನಾಗಿ ಬಂದು ಇರುತ್ತೇನೆ. ಈಗ ನಮ್ಮ ಸೇನಾಧಿಪತಿಗಳಾದ ಯೌವನಾಶ್ವ ಅನುಸಾಲ್ವ ವೃಷಕೇತು ಪ್ರದ್ಯುಮ್ನಾದಿಗಳನ್ನು ಅತಿ ಜಾಗ್ರತೆ ಕರೆಸುವಂಥವನಾಗೊ ಸಾರಥೀ॥

ವೃಷಕೇತು: ಭಲಾ ಚಾರ: ಹೀಗೆ ಬಾ ಮತ್ತೂ ಒಂದು ಸಾರಿ ಹೀಗೆ ನಿಲ್ಲು. ಭಳಿರೇ ಚಾರ! ಭಟರ ಸಿಂಹನಾದಗಳು ವೀರರ ಕಿಲ ಕಿಲಾರವಗಳು ಭಯಂಕರಗಳಾದ ಗೋವಿಷಾಣ, ಭೇರಿ, ಮೃದಂಗ, ಶಂಖಕಹಳಾದಿ ವಾದ್ಯ ಧ್ವನಿಗಳೂ ಹಯದ ಹೇಷಾರವಗಳು, ಗಜದ ಬೃಂಹಿತಗಳು ಒಟ್ಟಿಗೆ ಕೂಡಿ ವಾಯುವಿನಿಂದ ಉಲ್ಲೋಲ ಕಲ್ಲೋಲವಾದ ಸಮುದ್ರ ಘೋಷದಂತೆ ಅನುಕರಿಸಿ ಬಹುರೌದ್ರದಿಂದ ಬರುತ್ತಿರುವ ಯನ್ನನ್ನು ಧಾರೆಂದು ಕೇಳುವ ನಿನ್ನಯ ನಾಮಾಂಕಿತವೇನು? ತಟತಟನೇ ಪೇಳೋ ಚಾರ-ಸುಗುಣ ವಿಚಾರ! ಹಾಗಾದರೆ ಯಮ್ಮಯ ವೃತ್ತಾಂತವನ್ನು ಪೇಳುತ್ತೇನೆ. ಸ್ವಸ್ಥಿರದಿಂದ ಕೇಳೋ ಸಾರಥೀ-ಸಂಧಾನಮತಿ॥ಈ ಭೂಮಂಡಲದೋಳ್ ಅನೇಕ ರಮಣೀಯಕಗಳಿಂದ ಕೂಡಿ ಮನೋಹರವಾಗಿ ಕಂಗೊಳಿಸುವ ಹಸ್ತಿನಾವತೀ ಪಟ್ಟಣವನ್ನು ಬಹುದಿಟ್ಟತನದಿಂದ ಪರಿಪಾಲಿಸಿದ ಪಾಂಡುಮಹಾರಾಯರ ಅರ್ಧಾಂಗಿನಿ ಕುಂತೀದೇವಿಯವರ ಗರ್ಭಾಂಬುಧಿಯೋಳ್ ದಿನಕರನ ವರ ಪ್ರಸಾದದಿಂದ ಉದ್ಭವಿಸಿ, ಈ ಮಹೀಯೋಳ್ ದಾನಶೂರನೆಂದೆನಿಸಿ, ಧರ್ಮರಾಯರ ದಾಯಾದಿಯಾದ ಕೌರವೇಶ್ವರನ ಸೈನ್ಯದಲ್ಲಿ ಕಡುಪರಾಕ್ರಮಿಯೆಂದೆನಿಸಿ ಭಾರತ ಯುದ್ಧದೋಳ್ ಹೋರಾಡಿ ಸ್ವರ್ಗವನ್ನೈದೂ ಸುರಪನಗರಿಯ ರಂಭಾದಿ ಊರ್ವಶಿಯರ ಅಂಗಸುಖವೆಂಬ ಸಾಮ್ರಾಜ್ಯ ವೈಭವದಿಂದ ಸುಖಿಸುತ್ತಿರುವ ಕರ್ಣಭೂಪಾಲನ ಸುುಮಾರ ರಣಧೀರ ಕಂಠೀರವ ರಿಪುಭಯಂಕರ. ವೀರ ವೃಷಕೇತು ಬಂದು ಇದ್ದಾನೆಂದು ಈ ಮೇದಿನಿಯೋಳ್ ಒಂದೆರಡು ಬಾರಿ ಜಯಭೇರಿ ಬಾರಿಸೋ ದೂತ-ರಾಜ ಸಂಪ್ರೀತ॥ಅಯ್ಯ ಸಾರಥೀ ಈ ನವರತ್ನ ಖಚಿತಮಾದ ಈ ವರ ಸಭಾಸ್ಥಾನಕ್ಕೆ ನಾನು ಆಗಮಿಸಿದ ಪರಿಯಾಯವೇನೆಂದರೇ ಧರ್ಮರಾಯರು ನಡೆಸುವ ಅಶ್ವಮೇಧಯಾಗದ ಕುದುರೆಯ ಬೆಂಬಲವಾಗಿ  ನಮ್ಮ ಚಿಕ್ಕ ತಂದೆಯವರಾದ ಅರ್ಜುನ ಭೂಪಾಲರೊಡನೆ ಬಾಹೋಣವಾಯ್ತು. ಈಗ ನಮ್ಮ ಚಿಕ್ಕ ತಂದೆಯವರು ಧಾವಲ್ಲಿರುವರೋ ಅತಿಜಾಗ್ರತೆ ತೋರಿಸೋ ಚಾರಕಾ ಯನ್ನ ಆಜ್ಞಾಧಾರಕ॥ನಮೋನ್ನಮೋ ಹೇ ಜನಕಾ ಚಂದ್ರಕುಲತಿಲಕಾ॥

ಅರ್ಜುನ: ಧೀರ್ಘಾಯುಷ್ಯಮಸ್ತು ಬಾರೈ ಕಂದಾ ಸಕಲ ಗುಣವೃಂದಾ॥

ವೃಷಕೇತು: ಯನ್ನಿಷ್ಠು ಜಾಗ್ರತೆಯಿಂದ ಕರೆಸಿದ ಕಾರಣವೇನೋ ಪೇಳಬೇಕೈ ತಂದೆ ಸಲಹೆನ್ನ ಮುಂದೆ॥

ಅರ್ಜುನ: ಹೇಳುತ್ತೇನೆ, ಈ ರತ್ನ ಖಚಿತಮಾದ ಸಿಂಹಾಸನವನ್ನು ಅಲಂಕರಿಸುವಂಥವನಾಗೈಯ್ಯ ಕುವರಾ- ಸಮರವೀರಾ॥

ಪ್ರದ್ಯುಮ್ನ: ಯಲಾ ಚಾರ ಹೀಗೆ ಬಾ ಮತ್ತೂ ಒಂದು ಸಾರಿ ಹೀಗೆ ನಿಲ್ಲು, ಅಯ್ಯ ಚಾರ ಈಗ ಬಂದವರು ಧಾರೆಂದು ಕರ ಸರೋಜಯುಗಳವಂ ಮುಗಿದು ಅತ್ಯಂತ ಭೀತಿಪರನಾಗಿ ನಯ ವಿನಯಗಳಿಂದ ಮಾತನಾಡಿಸುವ ಭಟನೇ ನೀ ಧಾರು ? ನಿನ್ನಯ ನಾಮಾಂಕಿತವೇನು ? ತಟತಟನೆ ಪೇಳೋ ಭಟ ಕುಟುಂಬಿ ॥ಹಾಗಾದರೆ ಯಮ್ಮ ವಿದ್ಯಮಾನವನ್ನು ಪೇಳುತ್ತೇನೆ ಸ್ವಸ್ಥಿರದಿಂದ ಕೇಳೋ ಸಾರಥೀ ॥

ಈ ಧರಣಿಯೋಳ್ ಸುರನದಿಗೆ ಮಿಗಿಲೆನಿಸಿ ಮೆರೆಯುವಾ ಯಮುನಾ ನದೀ ತೀರದಲ್ಲಿ ಮನೋ ರಮ್ಯವಾದ ಹೂ ಹಣ್ಣುಗಳಿಂದ ಕೂಡಿದ ಅನೇಕ ವಿಧವಾದ ತರುಲತಾದಿಗಳಿಂದಲೂ ನಾನಾ ಬಗೆಯ ಪಕ್ಷಿ ಜಾತಿ ವಿಶೇಷಗಳಿಂದಲೂ, ಕೂಡಿ ನಂದನಕ್ಕೆ ಇಮ್ಮಿಗಿಲಾಗಿ ರಂಜಿಸುವ ಉಪವನಗಳಿಂದ ರಾರಾಜಿಸುತ್ತಾ ಮೆರೆಯುವ ದ್ವಾರಕಾಪುರದೊಡೆಯನೆನಿಸಿ, ದೇವಪುರ ನಿವಾಸಿಯಾದ ಶ್ರೀಮನ್ ಲಕ್ಷ್ಮೀನಾರಾಯಣನ ಪಟ್ಟದ ರಾಣಿ, ಶುಕವಾಣಿ, ಪನ್ನಗ ವೇಣಿ ಕಮಲಪಾಣಿಯಾದ ರುಕ್ಮಿಣೀ ದೇವಿಯ ಗರ್ಭಾಂಬುದಿಯೋಳ್ ಉದ್ಭವಿಸಿ, ಪಂಚ ಬಾಣನೆಂದು ಮೆರೆಯುವಾ ಪ್ರದ್ಯುಮ್ನನು ಬಂದು ಇದ್ದಾನೆಂದು ಈ ಪೊಡವಿಯೋಳ್ ಒಂದೆರಡು ಭಾರಿ ಜಯಭೇರಿ ಬಾರಿಸೋ ದೂತ – ರಾಜ ಸಂಪ್ರೀತ ॥

ಅಂದವಾದ ಈ ವರ ಸಭಾಸ್ಥಾನಕ್ಕೆ ನಾನು ಬಂದ ಕಾರಣವೇನೆಂದರೆ, ಧರ್ಮರಾಯರು ನಡೆಸುವ ಅಶ್ವಮೇಧಯಾಗದ ಕುದುರೆಯ ಬೆಂಬಲವಾಗಿ ಯಾದವ ಸೈನ್ಯ ಸಮೇತನಾಗಿ, ನಮ್ಮ ಮಾವಯ್ಯನವರಾದ ಅರ್ಜುನ ಭೂಪಾಲರೊಡನೆ ಬಾಹೋಣವಾಯ್ತು. ಈಗ ನಮ್ಮ ಮಾವಯ್ಯನವರು ಧಾವಲ್ಲಿರುವರೋ ಅತಿ ಜಾಗ್ರತೆ ತೋರಿಸೋ ಚಾರಕ ದ್ವಾರಪಾಲಕ ॥ನಮೋನ್ನಮೋ ಹೇ ಮಾವ ಪ್ರಾಣ ಸಂಜೀವ ॥

ಅರ್ಜುನ: ಸುಖೀಭವತು ಬಾರೈ ಮಾರನೇ ಸುಂದರಾಕಾರನೇ ಮದನ ಸುಂದರವದನ ॥

ಪ್ರದ್ಯುಮ್ನ: ಯನ್ನಿಷ್ಠು ಜಾಗ್ರತೆಯಿಂದ ಕರೆಸಿದ ಕಾರಣವೇನೋ ಪೇಳಬೇಕೈ ಮಾವ ಕರುಣ ಪ್ರಭಾವ ॥

ಅರ್ಜುನ: ಪೇಳುತ್ತೇನೆ ಈ ರತ್ನಮಣಿಮಯವಾದ ಪೀಠವನ್ನು ಅಲಂಕರಿಸೈ ಮನ್ಮಥನೇ ಅತಿರಥನೇ॥

ಯೌವನಾಶ್ವ: ಯಲಾ ಚಾರ ! ಹೀಗೆ ಬಾ ಮತ್ತೂ ಒಂದು ಸಾರಿ ಹೀಗೆ ನಿಲ್ಲು. ಭಳಿರೇ ಚಾರ ! ಪೂರ್ಣ ಜಲಯುತವಾದ ಕಪ್ಪಾದ ಮೇಘಗಳಿಂದ ಕೂಡಿ ಅಗ್ನಿ ಸಮಾನವಾದ ಮಿಂಚುಗಳಿಂದ ನಿಬಿಡೀಕೃತವಾಗಿ ರಂಜಿಸುವ ಮೇಘ ಮಂಡಲವನ್ನು ನೋಡಿ ತನ್ನ ಮನದೋಳ್ ಹರ್ಷವಂ ಪಟ್ಟು “ಪರಶಿವನು ವಿಷಪಾನ ಮಾಡಿ ತಾಂಡವ ವನದಲ್ಲಿ ನಾಟ್ಯ ಮಾಡುವಂತೆ’  ವಿಷಾಧಾರ ಭೂತಗಳಾದ ಸರ್ಪಗಳನ್ನು ತುಂಡಿಸಿ ತಕತಕನೇ ಕುಣಿದು ಮೆರೆಯುವ ಮಯೂರದಂತೆ ಯಮ್ಮನ್ನು ಕಂಡು ಭಯಪಟ್ಟು, ಗದ್ಗದ ಸ್ವರದಿಂದ ಮಾತನಾಡಿಸುವ ನಿನ್ನಯ ನಾಮಾಂಕಿತವೇನು ಭಟನೇ – ಭಟರೋಳ್ ಪ್ರಖ್ಯಾತನೇ ॥ಹಾಗಾದರೆ ಯಮ್ಮ ವಿದ್ಯಮಾನವನ್ನು ಪೇಳುತ್ತೇನೆ ಚಿತ್ತವಿಟ್ಟು ಕೇಳೋ ಸಾರಥೀ ॥ಯಲಾ ಸಾರಥೀ ಹಾಡುತ್ತಿರುವ ಗಾಯಕರಿಂದಲೂ ಕುಣಿಯುತ್ತಿರುವ ನರ್ತಕಿಯರಿಂದಲೂ ಕೀರ್ತಿಸುತ್ತಿರುವ ವಂದಿ ಮಾಗಧರಿಂದಲೂ ಸ್ತೋತ್ರ ಮಾಡುತ್ತಿರುವ ಕವಿ ಶ್ರೇಷ್ಠರಿಂದಲೂ, ಕಪ್ಪವನ್ನೊಪ್ಪಿಸಿ ನಮಸ್ಕಾರ ಮಾಡುತ್ತಿರುವ ಮಾಂಡಲೀಕರಿಂದಲೂ, ಆಶೀರ್ವಾದ ಮಾಡುತ್ತಿರುವ ಬ್ರಾಹ್ಮಣೋತ್ತಮರಿಂದಲೂ, ದೇದೀಪ್ಯಮಾನವಾದ ಸಭಾಮಂದಿರದಿಂದ ವಿರಾಜಿಸುವ ಭದ್ರಾವತಿ ಪಟ್ಟಣವನ್ನು ಬಹು ನಿಷ್ಠೆಯಿಂದ ಪರಿಪಾಲಿಸುವ ಯೌವನಾಶ್ವ ಭೂಪಾಲನು ಬಂದು ಇದ್ದಾನೆಂದು ಈ ವಸುಮತಿಯೋಳ್ ಒಂದೆರಡು ಬಾರಿ ಜಯಭೇರಿ ಬಾರಿಸೋ ದೂತ – ರಾಜಸಂಪ್ರೀತ ॥

ಯಲಾ ಸಾರಥೀ ॥ಅಂತಃಪುರ ಸ್ತ್ರೀಯರ ಕಡೆಗಣ್ಣೋಟವೆಂಬ ಕುಡಿ ಮಿಂಚುಗಳಿಗೆ ಹೆದರಿದ ರಾಜಹಂಸದಂತೆ ಭ್ರಾಂತಿಪಡುತ್ತಿರುವ  ಮನ್ಮಥ ಸ್ವರೂಪರಾದ ರಾಜಪುತ್ರರನ್ನು ಉಚಿತಾಸನಗಳಲ್ಲಿ ಕೂಡಿಸುತ್ತಿರುವ ಕಟ್ಟಿಗೆಯವರಿಂದ ಕಂಗೊಳಿಸುವ ಈ ಸಭಾಮಂದಿರಕ್ಕೆ ನಾನು ಬಂದ ಪರಿಯಾಯವೇನೆಂದರೆ  ಧರ್ಮರಾಯರು ನಡೆಸುವ ಅಶ್ವಮೇಧಯಾಗಕ್ಕೆ ಯಾಗದ ಕುದುರೆಯನ್ನು ಕೊಟ್ಟು, ಅದರ ಬೆಂಬಲವಾಗಿ ಅರ್ಜುನನೊಡನೆ ಸಕಲ ಸೇನಾ ಸಮೇತನಾಗಿ ಬಂದು ಇರುತ್ತೇನೆ ಈಗ ಅರ್ಜುನ ಭೂಪಾಲರು ಧಾವಲ್ಲಿರುವರೋ ತೋರಿಸೋ ಚಾರ ಯನ್ನ ಆಜ್ಞಾಧಾರ ॥ನಮೋ ನಮೋ ಅರ್ಜುನ ಭೂಪ ಕೀರ್ತಿ ಕಲಾಪ ॥

ಅರ್ಜುನ: ಅಷ್ಠೈಶ್ವರ‌್ಯ ಸಿದ್ಧಿರಸ್ತು ಬಾರೈ ಯೌವನಾಶ್ವ ಭೂಪಾಲ ಕ್ಷೋಣಿ ಜನಪಾಲ ॥

ಯೌವನಾಶ್ವ: ಯನ್ನಿಷ್ಠು ಜಾಗ್ರತೆಯಿಂದ ಕರೆಸಿದ ಕಾರಣವೇನೋ ಪೇಳಬೇಕೈ ದೊರೆಯೇ – ಧೈರ‌್ಯದಲ್ಲಿ ಕೇಸರಿಯೇ ॥

ಅರ್ಜುನ: ಪೇಳುತ್ತೇನೆ ಈ ರತ್ನ ಸಿಂಹಾಸನವನ್ನು ಸ್ವೀಕರಿಸೈಯ್ಯ ರಾಜೇಂದ್ರಾ ಸದ್ಗುಣಸಾಂದ್ರ॥

ಅನುಸಾಲ್ವ: ಯಲಾ ಚಾರ ಹೀಗೆ ಬಾ ಮತ್ತೂ ಒಂದು ಸಾರಿ ಹೀಗೆ ನಿಲ್ಲು. ಭಳಿರೇ ಚಾರ ! ಭಯಂಕರವಾದ ಕಾನನದ ಮಧ್ಯಭಾಗದೋಳ್ ತನ್ನ ಮನ ಬಂದಂತೆ ಸಂಚರಿಸುವ ಮೃಗರಾಜನಾದ ಕೇಸರಿಯ ಮುಂದೆ ತಿಳಿಯದೇ ನಿಂತ ಕಳಾಹೀನವಾದ ಮೊಲದ ಮರಿಯಂತೆ, ಯನ್ನ ಆಗಮನವಂ ಕಂಡು, ಭಯಪಟ್ಟು ದಯಾರ್ದ್ರಚಿತ್ತನಾಗಿ ಬಹು ನಯವಿನಯಗಳಿಂದ ಮಾತನಾಡಿಸುವ ಪಾಮರ ನೀ ಧಾರು ? ಜಾತನಾದ ನಿನ್ನನ್ನು ಪೆತ್ತ ಮಾತಾಪಿತೃಗಳು ಪ್ರೀತಿಯಿಂದ ಕರೆವ ಅಭಿಧಾನವೇನು? ಸ್ವಾಭಿಲಾಷೆಯಿಂದ ಪೇಳೋ ಚಾರ – ಗುಣಮಣಿಹಾರ.

ಹಾಗಾದರೆ ಯಮ್ಮ ವೃತ್ತಾಂತವನ್ನು ಪೇಳುತ್ತೇನೆ ಚಿತ್ತವಿಟ್ಟು ಕೇಳೋ ಸಾರಥೀ ಸಂಧಾನಮತೀ॥ಭಲಾ ಸಾರಥಿ ! ವಿಷ್ಣುವು ನಂದಕವೆಂಬ ಖಡ್ಗಧಾರಿಯಾದಂತೆ ಸಂತೋಷಯುತನೂ, ಬ್ರಹ್ಮನು ದೇವತೆಗಳಿಂದ ಸೇವಿಸಲ್ಪಟ್ಟು ಹಂಸವಾಹನನಾದಂತೆ ಜ್ಞಾನಿಗಳಿಂದ ಸೇವಿಸಲ್ಪಟ್ಟು ಸಿಂಹಾಸನಾಸೀನನೂ ದೇವೇಂದ್ರನು ಸಾಸಿರನೇತ್ರಗಳಿಗೆ ಆಶ್ರಯ ಭೂತವಾದ ಶರೀರವುಳ್ಳವನೂ, ದೈತ್ಯಧ್ವಂಸಿಯೂ ಆದಂತೆ, ಸಾವಿರಾರು ಪ್ರಜೆಗಳಿಂದ ವೀಕ್ಷಿಸಲ್ಪಟ್ಟ ತನುವುಳ್ಳವನೂ, ಶತೃ ಸಂಹಾರಕನೂ ರವಿಯು ಅರಣ್ಯಗಳಲ್ಲಿನ ತಮವನ್ನು ಧ್ವಂಸಮಾಡುವ ಹಾಗೆ, ಅನೇಕ ಸ್ತ್ರೀಯರ ಮದನ ತಾಪವನ್ನು ಪರಿಹರಿಸತಕ್ಕವನೂ, ಯಮನು ದುಷ್ಠರನ್ನು ನರಕದಲ್ಲಿ ಪೀಡಿಸುವಂತೆ  ಪೀಡಿಸುವವನೂ, ರಾಕ್ಷಸ ಶ್ರೇಷ್ಠರಿಂದ ಸೇವಿಸಲ್ಪಟ್ಟು ನೂತನ ವೈಭವವುಳ್ಳವನೂ, ವರುಣನು ಅಪಾರ ಸಮುದ್ರ ನೀರಿನಿಂದ ಕೂಡಿರುವಂತೆ ಅಜೇಯ ಸೈನ್ಯಯುಕ್ತನೂ ಆದಂಥ ಸಾಲ್ವ ರಾಜನ ಅನುಜ, ಭಾನು ಸಮತೇಜ, ಭೂಭುಜಲಲಾಮ ಅನುಸಾಲ್ವ ರಾಜೇಂದ್ರನು ಬಂದು ಇದ್ದಾನೆಂದು ಈ ಮೇದಿನಿಯೋಳ್ ಒಂದೆರಡು ಬಾರಿ ಜಯಭೇರಿ ಬಾರಿಸೋ ದೂತ – ರಾಜಸಂಪ್ರೀತ ॥

ಯಲಾ ಸಾರಥೀ – ರತ್ನ ಖಚಿತವಾದ ಬಂಗಾರದ ಸಿಂಹಾಸನದ ಇಕ್ಕೆಲಗಳಲ್ಲಿಯೂ ಕಡಗಗಳು ಧ್ವನಿ ಮಾಡುತ್ತಿರಲು, ಬಂದು ನಿಂತು ಗಾಳಿಯಿಂದ ಪುಷ್ಪಭರಿತವಾದ ಲತೆಯು ತೂಗಾಡುವಂತೆ ಕೈಯೊಳಗಿನ ಚಾಮರಗಳನ್ನು ಸಮಯವರಿತು ಬೀಸುತ್ತಿರುವ ಚಾಮರ ಧಾರಿಣಿಯರಿಂದ ರಂಜಿಸುವ ಈ ಸಭಾ ಮಂದಿರಕ್ಕೆ ನಾನು ಬಂದ ಕಾರಣವೇನೆಂದರೆ ಧರ್ಮರಾಯರು ನಡೆಸುವ ಅಶ್ವಮೇಧ ಯಾಗದ ಕುದುರೆಯ ಬೆಂಬಲವಾಗಿ ಅರ್ಜುನ ಭೂಪಾಲರೊಡನೆ ಬಾಹೋಣವಾಯ್ತು. ಈಗ ಅರ್ಜುನ ಭೂಪಾಲರು ಧಾವಲ್ಲಿರುವರೋ ಅತಿಜಾಗ್ರತೆ ತೋರಿಸೋ ಚಾರಕ – ದ್ವಾರಪಾಲಕ ॥ನಮೋನ್ನಮೋ ಹೇ ಪಾರ್ಥ ಸಮರ ಸಮರ್ಥ ॥

ಅರ್ಜುನ: ನಿನಗೆ ಮಂಗಳವಾಗಲಿ ಅನುಸಾಲ್ವ ರಾಜೇಂದ್ರಾ ॥

ಅನುಸಾಲ್ವ: ಯನ್ನಿಷ್ಟು ಜಾಗ್ರತೆಯಿಂದ ಕರೆಸಿದ ಪರಿಯಾಯವೇನು ಪೇಳಬೇಕೈ ದೊರೆಯೇ – ಧೈರ‌್ಯದಲ್ಲಿ ಕೇಸರಿಯೇ ॥

ಅರ್ಜುನ: ಪೇಳುತ್ತೇನೆ ಚಿತ್ತವಿಟ್ಟು ಲಾಲಿಸಿರೈಯ್ಯ ಸೇನಾ ನಾಯಕರೇ ಅಸಹಾಯ ಶೂರರೇ ॥

ದರುವು

ವೀರರೇ ಲಾಲಿಸಿಯಿನ್ನೂ  ಈಗ
ಒರೆವೇ ಯಮ್ಮಯ ತುರಗವನೂ ॥
ಪುರವೂ ಮಾಹಿಷ್ಮತೀ  ರಾಜನ ವರಸುತನೂ
ಭರದಿ ಕಟ್ಟಿಹನೆಂದು ಪೇಳಿದ ಚಾರನೂ ವೀರರೇ ಲಾಲಿಸಿ                         ॥

ಅರ್ಜುನ: ಹೇ ಸೇನಾಧಿಪತಿಗಳೇ ಲಾಲಿಸಿ ! ನಮ್ಮ ಅಣ್ಣಂದಿರಾದ ಧರ್ಮರಾಯರು ಅಶ್ವಮೇಧಯಾಗವನ್ನು ಮಾಡಲೋಸುಗ ಯಾಗದೀಕ್ಷೆಯನ್ನು ವಹಿಸಿ ಕುದುರೆಯನ್ನು ಶಾಸ್ತ್ರೋಕ್ತವಾಗಿ ಪೂಜಿಸಿ, ದೇಶದ ಮೇಲೆ ಬಿಟ್ಟಿರುವಂಥ ಕಾಲದಲ್ಲಿ, ಅದರ ಹಿಂಬಲವಾಗಿ ನಾವುಗಳು ಸೇನಾ ಸಹಿತ ಬರುತ್ತಿರಲು ಆ ಕುದುರೆಯು ದಕ್ಷಿಣಾಭಿಮುಖವಾಗಿ ಹೊರಟು ಈ ಮಾಹಿಷ್ಮತೀ ಪುರದ ಉಪವನದಲ್ಲಿ ಮೇಯುತ್ತಿರಲು ಅದನ್ನು ಕಂಡು ರಾಜಸುತನಾದ ಪ್ರವೀರನೂ ನಮ್ಮ ಕುದುರೆಯನ್ನು ಕಟ್ಟಿ ಹಾಕಿರುವನೆಂದು ಚಾರನು ಪೇಳುತ್ತಿರುವನೈಯ್ಯಿ ಸೇನಾ ನಾಯಕರೇ ಸಮರಾಂಗಣ ಧೀರರೇ॥