ದರುವು

ತುರಗವ ಶೌರ‌್ಯದಿಂ ಕಟ್ಟೀ ॥ಬೇಗ
ಚರರ ನಮ್ಮಯ ಬಳಿಗಟ್ಟೀ ॥
ದುರಕನುವಾಗಲೀ  ಶರಗಳಿಂದಲಿ ಕುಟ್ಟೀ ॥
ತರಿದು ಹಾಕುವೆನೆಂದೇಳಿಹ ಭುಜತಟ್ಟೀ                                        ॥

ಅರ್ಜುನ: ಅಯ್ಯ ವೀರರೇ ! ಆ ನೀಲಧ್ವಜನ ಸುತನಾದ ಪ್ರವೀರನೂ ನಮ್ಮ ಕುದುರೆಯನ್ನು ಭುಜಬಲ ಪರಾಕ್ರಮದಿಂದ ಕಟ್ಟಿ ಹಾಕಿರುವನಲ್ಲದೇ, ಅದನ್ನು ಜಯಿಸಿ ಬಿಡಿಸಿಕೊಳ್ಳಲು ನಾವು ದುರಕನುವಾದದ್ದೇ ಆದರೇ ತನ್ನಯ ನಿಶಿತ ಮಾರ್ಗಣಗಳಿಂದ ನಮ್ಮನ್ನು ಕುಟ್ಟಿ ಕುಟ್ಟಿ ಕೋಲಾಹಲವಂ ಮಾಡುವೆನೆಂದು ಚರನ ಮುಖೇನ ಹೇಳಿ ಕಳುಹಿಸಿರುವನು. ಈ ಮಾತನ್ನು ಕೇಳಿ ನಾವುಗಳು ಸುಮ್ಮನಿರಬಹುದೇನೈ ಪ್ರದ್ಯುಮ್ಯಾದಿಗಳೇ ॥

ದರುವು

ಇಳೆಯೊಳಗಧಿಕವಾಗಿರುವಾ  ಹಿರಿಯಾ
ಬಳ್ಳಾಪುರದೊಳಗೆ ಮೆರೆವಾ ॥
ವ್ಯಾಳ ಭೂಷಣ ಸೋ  ಮೇಶನ ಕರುಣವಾ
ತಳೆದು ವರಶಿರದಲ್ಲಿ  ಸಮರಕ್ಕೆ ಪೋಗುವಾ ॥                                      ॥

ಅರ್ಜುನ: ಅಯ್ಯ ಸೇನಾಪತಿಗಳೇ ! ಈ ಇಳೆಯಲ್ಲಿ ಅಧಿಕವಾಗಿ ಮೆರೆಯುವ ಹಿರಿಯ ಬಳ್ಳಾಪುರವನ್ನು ಕುಶಲದಿಂದ ಪರಿಪಾಲಿಸುವ ಕೈಲಾಸಗಿರಿವಾಸ, ವ್ಯಾಳ ಭೂಷಣ, ಶೈಲಜೆಯ ಪ್ರಾಣನಾಥ  ಶ್ರೀ ಸೋಮೇಶ್ವರನ ಅಪಾರವಾದ ಕಟಾಕ್ಷ ವೀಕ್ಷಣವನ್ನು ಯಮ್ಮ ಶಿರಗಳಲ್ಲಿ ತಳೆದು ಕದನೋನ್ಮುಖರಾಗಿ ಆ ದುರುಳನನ್ನು ಜೈಸಿ ತುರಗವನ್ನು ಬಿಡಿಸಬೇಕೈ ಸೇನಾ ನಾಯಕರೇ ಕಡು ಸಮರ್ಥರೇ ॥

ದರುವು

ಪುರುಹೂತ ಸಂಭವಾ  ಕರುಣಿಸಭಯವಾ
ಅರಿಯ ಸಮರವಾ  ಭರದಿ ಜೈಸುವಾ                                           ॥

ವೃಷಕೇತು: ಪುರುಹೂತ ಸಂಭವನಾದ ಜನಕನೇ ಲಾಲಿಸು, ಯನಗೆ ಅಭಯವನ್ನು ದಯಪಾಲಿಸಿ ಯುದ್ಧಕ್ಕೆ ಕಳುಹಿಸಿ ಇದಕೇಕೆ ಯೋಚಿಸುವಿರಿ ದುರುಳರನ್ನು ಗೆದ್ದು ಯಮ ಸದನಕ್ಕೆ ಅಟ್ಟುವೆನು. ಅಲ್ಲದೇ ಅವರನ್ನು ಸಮರದಲ್ಲಿ ಅರೆದು ಉಸಿರು ತೆಗೆದು ಬಗೆ ಮಾಡುವೆನು. ಲೋಕದಲ್ಲಿ ವೃಷಕೇತುವು ಶ್ರೇಷ್ಠನಾದವನು ಎಂದು ಎನ್ನಿಸಿಕೊಳ್ಳದಿರ್ದರೇ ನಾನು ನಿಮ್ಮ ಸುಪುತ್ರನಲ್ಲವೆಂದು ತಿಳಿಯಿರಿ. ಆದಕಾರಣ ಅತಿಜಾಗ್ರತೆ ಯನಗೆ ನೇಮವನ್ನು ದಯಪಾಲಿಸಿ ಕಳುಹಿಸೈ ತಂದೆ – ಸಲಹೆನ್ನ ಮುಂದೇ ॥

ದರುವು

ತುರಗ ಚೋರನಾ  ಧುರದಿ ಪಿಡಿದು ನಾ
ಶರದಿ ಶಿರವನಾ  ತರಿದು ಬಿಡುವೆ ನಾ                                           ॥

ವೃಷಕೇತು: ಹೇ ಜನಕಾ ! ಮೃಗ ಜಲವನ್ನು ದಾಟಲಿಕ್ಕೆ ಹರಗೋಲನ್ನು ಹಾಕುವುದುಂಟೆ ! ಚಿತ್ರದೊಳಗಿನ ಹಾವನ್ನು ಹಿಡಿಯಲಿಕ್ಕೆ ಗರುಡ ಮಂತ್ರವನ್ನು ಜಪಿಸಬೇಕೆ ?  ಈ ಹುಡುಗನು ಎಷ್ಠು ಚಪಲನಿರುವನೆನ್ನಬೇಡ ! ಈಗಲೇ ಯನ್ನನ್ನು ಕಳುಹಿಸಿ ನೋಡು, ತುರಗ ಚೋರನನ್ನು ಹಿಡಿದುಕೊಲ್ಲದಿದ್ದರೇ ಅವನಿಯನ್ನು ಗೆದ್ದೆವೆನ್ನುವ ಮಹಾರಥರನ್ನು ಅವನಿಯ ಮೇಲೆ ಮಲಗಿಸದಿದ್ದರೇ, ಹಾಗೆಯೇ  ಮರಳಿ ಬಂದೆನೆಂದರೆ, ನಾನು ಸಹಸ್ರಾರ್ಕನ ಸುತ ದಾನಶೂರಕರ್ಣನ ಮಗ ವೀರ ವೃಷಕೇತು ಅಲ್ಲವೆಂದು ತಿಳಿಯೆಯ್ಯ ಜನಕಾ ಕ್ಷಿತಿಜನ ಪಾಲಕ ॥

ದರುವು

ಸೋಮನಾಥನಾ  ಪ್ರೇಮದಿಂದ ನಾ
ಸಮರ ಜೈಸಿ ನಾ  ಕಮಲದಡಿಗೆ ನಾ                                            ॥

ವೃಷಕೇತು: ಹೇ ಜನಕಾ ! ಗಾಳಿ ಬೆವರುವದುಂಟೇ, ವಹ್ನಿ ಜ್ವಾಲೆ ಹಿಮಕ್ಕೆ ಅಂಜುವುದೇ. ಬಲು ಬೇಸಿಗೆಯ ಬಿಸಿಲಿನಲ್ಲಿ ಮಂಜಿಗೆ ಅಂಜುವುದೇ. ಇವನು ಬಾಲಕನೆನ್ನದಿರು. ದುಗುಡವನ್ನು ತಾಳಬೇಡ! ಹೇ ತಂದೆ ಈ ಧರಣಿಗಧಿಕವಾದ ಹಿರಿಯಬಳ್ಳಾಪುರದ ಶ್ರೀ ಸೋಮನಾಥನ ಕರುಣದಿಂದ ಯುದ್ಧದಲ್ಲಿ ಶತೃಗಳನ್ನು ಜಯಿಸಿ ಅತಿ ಸಂತೋಷದಿಂದ ಬರುವೆನು. ನಿಮ್ಮ ಪಾದ ಕಮಲಕ್ಕೆ ವಂದಿಸುತ್ತಲಿದ್ದೇನೆ. ಅತಿ ಜಾಗ್ರತೆ ಅಪ್ಪಣೆಯನ್ನು ಕೊಟ್ಟು ಕಳುಹಿಸೈಯ್ಯ ಜನಕಾ ಇಂದುಕುಲತಿಲಕಾ ॥

ದರುವು

ಭಾನು ತನುಜನ ಪುತ್ರ  ಅನುವರಕೆ ನೀ ಪೋಗಿ
ಮಾನವಾಧಿಪ ಸುತನ  ಜೈಸೀ ಬಾರೈಯ್ಯ ॥                                 ॥

ಇಂದು ಸಮರದಿ ನೀನೂ  ಕೊಂದು ಅರಿನೃಪರುಗಳಾ
ಇಂದುವಂಶದ ಕೀರ್ತಿ  ಚಂದದಿಂ ಮೆರೆಸೋ                                  ॥

ಹಿರಿಯ ಬಳ್ಳಾಪುರದ  ಹರನ ಕರುಣದಿ ಈಗಾ  ನೀನೂ
ದುರುಳರ ಜೈಸೀ ಬರಲೂ  ತೆರಳೈಯ್ಯ ಮಗುವೇ                                  ॥

ಅರ್ಜುನ: ಹೋಗು ! ಮಗುವೇ ನಿನಗೆ ಮಂಗಳವಾಗಲಿ. ಯುದ್ಧದಲ್ಲಿ ಜಯಶೀಲನಾಗು. ರಣದಲ್ಲಿ ಉತ್ಸಾಹದಿಂದ ಶತೃಗಳನ್ನು ಸವರಿ, ಕುದುರೆಯನ್ನು ಬಿಡಿಸಿ ಯಮ್ಮ ಚಂದ್ರವಂಶಕ್ಕೆ ಕೀರ್ತಿ ತಾ ಮಗನೇ, ಕಾಳ್ಗಿಚ್ಚು ಎದ್ದು ಅಡವಿಯನ್ನೆಲ್ಲಾ ನಾಶ ಮಾಡುವಂತೆ, ಸುಂಟರಗಾಳಿಯು ಮುಗಿಲಿನಲ್ಲಿಯ ಮೋಡಗಳನ್ನು ಅರೆಯಟ್ಟಿ ಚದುರಿಸುವಂತೆ ಸಮರದಲ್ಲಿ ವೈರಿಗಳನ್ನು ಸದೆ ಬಡಿದು ಜಯಶೀಲನಾಗಿ ಬಾರೈ ಕುಮಾರ ಅರಿವಂಶ ಕುಠಾರ ॥

 

(ವೃಷಕೇತು ಯುದ್ಧಕ್ಕೆ ಬರುವಿಕೆ)

ವೃಷಕೇತು: ಯಲಾ ಸಾರಥೀ !  ನೀನು ಅತಿ ಜಾಗ್ರತೆ ದುರುಳ ಪ್ರವೀರನಲ್ಲಿಗೆ ಹೋಗಿ ಅರ್ಜುನನ ಸೈನ್ಯವು ಯುದ್ಧ ಸನ್ನದ್ಧವಾಗಿ ಬಂದಿದೆಯೆಂದು ಹೇಳಿ ಬಾರೋ ಸಾರಥೀ ॥

ಪ್ರವೀರ: ಯಲಾ ಸಾರಥೀ ! ಅರ್ಜುನನ ಸೈನ್ಯವು ಮಹಾರಥಿಕರಿಂದ ಕೂಡಿರಲು ಈ ಅಣುಗ ಎದುರಾಗಿ ಬಂದು ಇದ್ದಾನೆ. ಇವನು ಧಾರು ಇವನ ಹೆಸರೇನು ? ಇವನು ಧಾರ ಮಗನು ? ಅತಿ ಜಾಗ್ರತೆ ತಿಳಿದು ಬಾರೈ ಸಾರಥೀ ಸಂಧಾನಮತೀ ॥

ದರುವು

ಧರೆಗೆ ಬೆಳಕನು ಕೊಡುವಾ  ತರಣಿ ಪೌತ್ರನು ನಾನು ॥
ದುರದೊಳಗೆ ಕುಲವನ್ನು  ಅರಿಯುವ ನೀನ್ಯಾರೋ ಬೇಗುಸುರೋ ॥

ವೃಷಕೇತು: ಯಲಾ ಮೂರ್ಖ ! ತನ್ನ ಪ್ರಕಾಶದಿಂದ ಈ ಲೋಕದಲ್ಲಿರುವ ಸಕಲ ಜೀವರಾಶಿಗಳಿಗೆಲ್ಲಾ ಜೀವದಾತನಾಗಿರುವ ಸೂರ‌್ಯನ ವರ ಪ್ರಸಾದದಿಂದ ಉದ್ಭವಿಸಿದ ದಾನ ಶೂರ ಕರ್ಣನ ಮಗ ವೀರ ವೃಷಕೇತುವನ್ನು ಧುರದೊಳಗೆ ಧಾರೆಂದು ಕೇಳುವ ಮೂರ್ಖನು ನೀನು ಧಾರು ? ಪೇಳುವಂಥವನಾಗೋ ದುರುಳಾ ಕತ್ತರಿಸುವೆ ಕೊರಳಾ ॥

ದರುವು

ಪುರವೂ ಮಾಹಿಷ್ಮತಿಯ  ಅರಸು ನೀಲಧ್ವಜನಾ
ವರಸುತನೂ ಧೀರ ಪ್ರ  ವೀರನೆನ್ನುವರೂ, ಕರೆಯುವರೂ ॥

ಪ್ರವೀರ: ಯಲಾ, ವೃಷಕೇತು ! ಈ ಮಾಹಿಷ್ಮತಿ ಪಟ್ಟಣದ ಅರಸನಾದ ನೀಲಧ್ವಜ ಭೂಪಾಲನ ಸುತ ಧೀರ ಪ್ರವೀರನೆಂದು ತಿಳಿಯೋ ಮೂಢ ಕೊಡುಕಾಳಗವ ಗಾಢ ॥

ದರುವು

ಧೀರಪ್ರವೀರನೂ  ಭರದೀ ನೀನಾಗಿರಲೂ
ಶರಮುಖದಿ ಪೌರುಷವಾ  ತೋರಿಸೋ ತರಳಾ  ಹೇ ದುರುಳಾ ॥

ವೃಷಕೇತು: ಯಲಾ ಪ್ರವೀರ ! ನಿನ್ನ ಪೌರುಷವನ್ನು ಶರ ಸಂಧಾನದಲ್ಲಿ ತೋರಿಸು ! ನಿನ್ನ ಕುಲವನ್ನು ಸುಟ್ಟು, ನಿನ್ನನ್ನು ತರಿದು ಭೂತಗಣಕ್ಕೆ ಬೋನವನ್ನುಣ್ಣಿಸುವೆನು ನೋಡಿಲ್ಲಿ, ನೀನೆನಗೆ ಮೇಳವೇನಲಾ ಮೂರ್ಖ ಬಿಡು ಯನ್ನೊಳು ತರ್ಕ ॥

ದರುವು

ಉರುತರದ ಅಸ್ತ್ರಗಳಾ  ತ್ವರಿತದಿಂದೆಸೆಯುವೆನು
ಧುರಕೆ ನೀನೆದುರಾಗಿ  ಬಾರೋ ಹೇ ಮೂರ್ಖ ಬಿಡು ತರ್ಕ ॥

ಪ್ರವೀರ: ಯಲಾ ವೃಷಕೇತು ! ಉರುತರವಾದ ಚಂಡಕಾಂಡಗಳನ್ನು ಎಸೆದು, ಮಹಾವಾಯುವಿನಿಂದ ಚಲಿತವಾದ ಸಮುದ್ರದ ಹಾಗೆ ನಿನ್ನ ಸೈನ್ಯವನ್ನು ಚದುರಿಸಿ ಓಡಿಸುವೆನು. ಅತಿಜಾಗ್ರತೆ ಕದನಕ್ಕಿದಿರಾಗಿ ಬಾರೋ ಮೂರ್ಖ ಬಿಡು ಯನ್ನೊಳು ತರ್ಕ ॥

ದರುವು

ಹಿರಿಯ ಬಳ್ಳಾಪುರದ  ಪರಶಿವನ ಕರುಣದಲೀ
ಶಿರಕಡಿದು ಪುಟ ಚೆಂಡ  ನ್ನಾರಿಸುವೆ ಬೇಗಾ ನೋಡೀಗ ॥

ವೃಷಕೇತು: ಯಲಾ ಪ್ರವೀರ ! ಈ ಧರಣಿಗಧಿಕವಾದ ಹಿರಿಯ ಬಳ್ಳಾಪುರದ ಶ್ರೀ ಸೋಮನಾಥನ ಕರುಣದಿಂದ ವಜ್ರಾಯುಧವು ಪರ್ವತಗಳನ್ನು ಕೆಡಹುವ ಹಾಗೆ ತೀವ್ರ ನಾರಾಚಗಳಿಂದ ನಿನ್ನ ಶಿರ ತರಿದು ಪುಟ ಚೆಂಡನಾಡಿಸುವೆನೋ ಅಧಮಾ ನೋಡೆನ್ನ ಪರಾಕ್ರಮಾ ॥

ದರುವು

ಧರಣಿಗಧಿಕಾವಾದ  ಹಿರಿಯ ಬಳ್ಳಾಪುರದಾ
ವರ ಸೋಮೇಶನ ದಯದೀ  ತರಿವೆ ನಿನ್ನ  ಶಿರವಾ ಕಂಧರವಾ ॥

ಪ್ರವೀರ: ಯಲಾ ವೃಷಕೇತು ! ಮಂಜಿನ ಮಳೆಗೆ ಕುಲಗಿರಿ ಕರಗುವುದೇ ! ನೀನು ಬಿಟ್ಟ ಶರಪಂಜರಕ್ಕೆ ಸಿಲುಕುವ ವೀರನೇ ಈ ಪ್ರವೀರನು, ಶ್ರೀ ಸೋಮನಾಥನ ದಯದಿಂದ ಕೂರಂಬುಗಳನ್ನೆಸೆದು, ನಿನ್ನ ಗರ್ವವನ್ನು ಖಂಡಿಸಿ, ನಿನ್ನ ರಕ್ತವನ್ನು ಈ ರಣರಂಗದ ಮಾರಿಗೆ ಆಹುತಿಯಂ ಮಾಡುವೆನು, ಅತಿಜಾಗ್ರತೆ ಯುದ್ಧಕ್ಕೆ ನಿಲ್ಲೊ ತರಳಾ – ಕತ್ತರಿಸುವೆ ಕೊರಳಾ ॥

(ಉಭಯರ ಯುದ್ಧವೃಷಕೇತು ಪರಾಭವ)

ಪ್ರದ್ಯುಮ್ನ ಯುದ್ಧಕ್ಕೆ ಬರುವಿಕೆ

ಪ್ರದ್ಯುಮ್ನ: ಯಲಾ ಖೂಳನಾದ ಪ್ರವೀರನೇ ಅತಿಜಾಗ್ರತೆ ಯುದ್ಧಕ್ಕೆ ನಿಲ್ಲುವಂಥವನಾಗೋ ಮೂರ್ಖ॥

ದರುವು

ಬಾರೋ ಬಾರೆಲೋ ದುರುಳಾ  ಈಗ
ತರಿದು ಬಿಡುವೆ ಕೊರಳಾ ॥
ಹರಿಯ ಪುತ್ರನೆಂದು ತಿಳಿದು
ದುರಕೆ ನಿಲ್ಲೋ  ಅಧಮ ಬೇಗ ॥

ಪ್ರದ್ಯುಮ್ನ: ಯಲಾ ಪ್ರವೀರ ! ಇಂದು ಮುಂದು ಯೋಚಿಸದೇ ಮಂದ ಬುದ್ಧಿಯಿಂದ ಯಮ್ಮ ತುರಗವನ್ನು ಕಟ್ಟಿದ್ದೀಯೇ, ಘೋರ ಸಂಗ್ರಾಮವೆಂದು ನಿನಗೆ ತಿಳಿಯದೇ ಹೋಯಿತೇ ! ಯಲಾ ಮರುಳೇ ದಾನವಾಂತಕವಾದ ಕೃಷ್ಣನ ಕುಮಾರ ಪ್ರದ್ಯುಮ್ನನು ನಿನ್ನೆದುರಾಗಿ ಬಂದು ನಿಂತಿರುವನೆಂದು ತಿಳಿದು ಬೇಗ ಯುದ್ಧ ಸನ್ನದ್ಧನಾಗೋ ಅಧಮಾ ನೋಡೆನ್ನ ಪರಾಕ್ರಮಾ ॥

ದರುವು

ಹರಿಯ ಪುತ್ರನಹುದೂ  ಬೇಗ
ಪುರಕೆ ತೆರಳಬಹುದೂ ॥
ಘೋರತನದ ಸಮರಕೀಗಾ
ಬರಿದೆ ಬಂದು ಯಾಕೆ ನಿಲ್ಲುವೆ ॥

ಪ್ರವೀರ: ಯಲಾ ಪ್ರದ್ಯುಮ್ನ ! ಝಳಕ್ಕೆ ಬೆದರಿ ಕಲಿರಾಹುವು ಸೂರ‌್ಯನನ್ನು ಉಳುಹುವನೇ !
ಶ್ರೀ ಸಾಂಬಮೂರ್ತಿಯ ಉರಿಗಣ್ಣಿನಿಂದ ಸುಟ್ಟು ಅನಂಗನಾದ ನೀನು ಕೃಷ್ಣನ ಮಗನೆಂಬುವುದು ಈ ಲೋಕವೆಲ್ಲಾ ಬಲ್ಲದು. ಆದರೆ ನಿನ್ನ ಪೊಳ್ಳು ಬೆದರಿಕೆಗೆ ನಾನು ಬೆದರುವೆನೇ, ಜೀವದಾಸೆಯಿದ್ದರೆ ಪಟ್ಟಣಕ್ಕೆ ಹಿಂತಿರುಗುವಂಥವನಾಗೋ ಪ್ರದ್ಯುಮ್ನ ॥

ದರುವು

ನೀಲಧ್ವಜನ ಪುತ್ರ  ನಿನ್ನ
ಜಾಳು ವಚನ ವ್ಯರ್ಥ ॥
ಬೀಳ ಹೊಯ್ವೆ ನಿನ್ನ ಶರದೀ
ತಾಳಿ ನಿಲ್ಲೋ ಧುರಕೆ ಈಗಾ ॥

ಪ್ರದ್ಯುಮ್ನ: ನೀಲಧ್ವಜನ ಪುತ್ರನೇ, ಸುಮ್ಮನೇ ವ್ಯರ್ಥವಾಗಿ ಜಾಳು ನುಡಿಗಳನ್ನು ಯಾತಕ್ಕೆ ನುಡಿಯುತ್ತಾ ಇದ್ದೀ, ನೀನು ಬಾಲಕನೆಂದು ಇದುವರೆಗೂ ಸೈರಿಸಿಕೊಂಡು ಇದ್ದೆ. ಇನ್ನು ಸೈರಿಸುವವನಲ್ಲಾ, ಅತಿ ಜಾಗ್ರತೆ ಯನ್ನ ಶರ ಸಮುದಾಯಕ್ಕೆ ತಾಳಿಕೊಂಡು ನಿಲ್ಲುವಂಥವನಾಗೋ ದುರುಳಾ ಹೊರ ತೆಗೆಯುವೆ ಕರುಳಾ ॥

ದರುವು

ತಾಳಿಕೊಂಬೆನು ಬಾಲ  ಯೇನು
ಪೇಳುವೆ ದುಶ್ಶೀಲಾ ॥
ಬಾಲಕಿಯರ ಹೃದಯಗಳನು
ಸೀಳಿ ಬಿಸುಡು ಪುಷ್ಪ ಶರದಿ ॥

ಪ್ರವೀರ: ಯಲಾ ಪ್ರದ್ಯುಮ್ನ ! ಬೀಸಣಿಗೆಯ ಗಾಳಿಯಿಂದ ಮೇಘ ಸಮೂಹ ಮುರಿಯುವುದೇ! ಮಿಂಚು ಹುಳದಿಂದ ಕತ್ತಲೆಯು ಮಾಯವಾಗುವುದೇ, ಸೀಸದ ಉಳಿಯಿಂದ ಪರ್ವತವನ್ನು ಸೀಳಬಹುದೇ, ಯಲಾ ಮೀನಕೇತನ ! ನಿನ್ನಯ ಬಾಣಗಳು ಕಾಮಿನಿಯರಿಗೆ ವಿರಹಾಗ್ನಿಯನ್ನು ಪುಟ್ಟಿಸಿ ಬಳಲಿಸುವುದಲ್ಲದೇ, ವೀರ ಪ್ರವೀರನ ಮೇಲೆ ಏನೂ ನಡೆಯಲಾರವು. ಅತಿ ಜಾಗ್ರತೆ ಯುದ್ಧಕ್ಕೆ ನಿಲ್ಲುವಂಥವನಾಗೋ ಅಧಮಾ ॥

ದರುವು

ರಣದ ಭೂಮಿಯೊಳಗೆ  ನಿನ್ನ
ಅಣಕ ಮಾತಿನೊಳಗೆ ॥
ಜಾಣಹೀನನಂತೆ ಭಂಗ
ಮಾಣದೀಗ ಬಿಡೆನು ನಿನ್ನ ॥

ಪ್ರದ್ಯುಮ್ನ: ಯಲಾ ಪ್ರವೀರ ! ಈ ರಣಭೂಮಿಯಲ್ಲಿ ಕುಣಿಕುಣಿದು ಅಣಕವನ್ನಾಡಿದರೇ ಸಿಡಿಲಿನಷ್ಠು ವೇಗವಾಗಿ ಘರ್ಜಿಸುವ ಅಣಿಯಾದ ಬಾಣವನ್ನು ಬಿಟ್ಟು ಗತ ಪ್ರಾಣನಾಗುವಂತೆ ಮಾಡದಿದ್ದರೆ ನನ್ನ ಹೆಸರು ಪ್ರದ್ಯುಮ್ನನೆಂದು ಕರೆಯಬೇಕೆ. ಜಾಗ್ರತೆ ಯನ್ನ ಕೈ ಚಳಕವನ್ನು ನೋಡು ಭ್ರಷ್ಠಾ ಪರಮಪಾಪಿಷ್ಠ॥

ದರುವು

ಧರಣಿಗಧಿಕವಾದ  ಶ್ರೀ
ಹಿರಿಯ ಬಳ್ಳಾಪುರದ ॥
ಪರಶಿವನಾ ಪರಮ ಸಖನು
ಬರಲು ವಹಿಸಿ ನಿನ್ನ ಬಿಡೆನೂ ॥

ಪ್ರವೀರ: ಯಲವೊ ಕುಸುಮ ಶರನೇ  ಈ ಧರಣಿಗಧಿಕವಾದ ಹಿರಿಯ ಬಳ್ಳಾಪುರವನ್ನು ಪ್ರೀತಿಯಿಂದ ಪರಿಪಾಲಿಸುವ ಪರಶಿವಮೂರ್ತಿ ಶ್ರೀ ಸೋಮೇಶ್ವರನ ಸಖನಾದಂಥ ಕೃಷ್ಣನು ನಿನಗೆ ಬೆಂಬಲವಾಗಿ ಬಂದರೂ, ಹುತ್ತಕ್ಕೆ ನುಗ್ಗುವ ಸರ್ಪದಂತೆ ಈ ನನ್ನ ಪೊಸಮಸೆಯ ಶರಗಳು ನಿನ್ನ ದೇಹದಲ್ಲಿ ಹೊಕ್ಕು ರುಧಿರವನ್ನು ಸೂರೆಗೊಂಡು ತ್ರಾಣವಿಲ್ಲದಂತೆ ಮಾಡಿ ಪ್ರಾಣವನ್ನಪಹರಿಸದೆ ಬಿಡುವುದಿಲ್ಲ. ಆದ್ದರಿಂದ ಸಾಕು ಸುಮ್ಮನೆ ಹಿಂದಿರುಗಿ ಹೋಗಿ ಆ ಪಾರ್ಥನನ್ನು ಬರಹೇಳೋ ಮೂರ್ಖ ಬಿಡು ಯನ್ನೊಳು ತರ್ಕ ॥

 

(ಉಭಯರ ಯುದ್ಧಪ್ರದ್ಯುಮ್ನ ಪರಾಭವ)

(ಯೌವನಾಶ್ವ ಯುದ್ಧಕ್ಕೆ ಬರುವಿಕೆ)

ಯೌವನಾಶ್ವ: ಯಲವೋ ಪ್ರವೀರ ! ಸುಮ್ಮನೆ ನನ್ನ ಮೇಲೆ ಹೋರಾಡಿ ಸಾಯದೆ ಧನಂಜಯನ ಬಳಿಗೆ ಬಂದು ಶರಣಾಗತನಾಗು ಇಲ್ಲವೇ ಸಮರ ಭೂಮಿಯನ್ನು ಬಿಟ್ಟು ಹೋಗುವಂಥವನಾಗೋ ತರಳಾ ॥

ದರುವು

ತರಹರಿಸೂ ವೀರನಾದೊಡೇ
ಪರಿಹರಿಸು ಈಗ
ಬಿರುಗಣೆಯಲೊಡೆವೆ ನೀ ತಡೆ ॥

ಪ್ರವೀರ: ಯಲವೋ ಯೌವನಾಶ್ವ ! ನಿನಗೆ ಹೆದರಿ ಹಿಂದಕ್ಕೆ ಹೋದರೆ ನೀಲಧ್ವಜನ ಕುಮಾರನೆನಿಸುವೆನೇ  ಶರಧಾರಿ ವೀರ ಪ್ರವೀರನೆನಿಸುವೆನೇ, ನಾನು ಆ ಶಿಖಂಡಿಗೆ ಶರಣು ಬರುವವನಲ್ಲ. ನಿನ್ನನ್ನು ಸಾವಿನ ದವಡೆಯಲ್ಲಿ ನೂಕತಕ್ಕವನು. ಇದೋ ನೋಡೆನ್ನ ಶರೌಘಮಂ ಮೂಢ – ಕೊಡು ಕಾಳಗವ ಗಾಡ ॥

ದರುವು

ನಿಂದು ಮರುಳೇ ತೋರೊ ಬಲವನೂ
ರಣರಂಗದೊಳಗೇ
ಕೊಂದಡಲ್ಲದೇ ಬಿಡೆನು ನಿನ್ನನೂ ॥

ಯೌವನಾಶ್ವ: ಯಲವೋ ದುಷ್ಠ ! ನಿನ್ನ ಬಾಣಗಳನ್ನು ತರಿತರಿದು ಕತ್ತರಿಸಿ ಶರಗಿರಿಯನೊಟ್ಟುವೆನು. ನಾ ಎಸೆವ ಕ್ರೂರ ನಾರಾಚಗಳು ಕೊರೆದರೆದು ಕಡದಿರಿದು ತುರುಗಿ ತುಂಡಿಸಿ ಬಿಡುವುವು ನಿನ್ನ  ಸಹಿಸಿಕೋ ಯನ್ನ ಶರಾಘಾತವಂ ದುರುಳಾ ಕತ್ತರಿಸುವೆ ಕರುಳಾ ॥

ದರುವು

ಮೊಲವ ಹಿಡಿವ ಚದುರ ಬಲೆಯೊಳೂ
ಕಾನನದ ಕರಿಯು
ಸಿಲುಕಲಹುದೇ ಅಬಲತನದೊಳೂ ॥

ಪ್ರವೀರ: ಯಲಾ ಮೂರ್ಖ ! ಮೊಲವನ್ನು ಹಿಡಿಯಲು ಬೀಸುವ ಬಲೆಯಲ್ಲಿ ಕಾನನದ ಮದಕರಿಯು ಸಿಲುಕಿ ಬಳಲುವುದೇ ! ಪ್ರಳಯ ಕಾಲದಲ್ಲಿ ಬೀಸುವ ಜಂಝಾ ಮಾರುತದಂತೆ ಯನ್ನ ಚಂಡಕಾಂಡಗಳು ನಿನ್ನ ಪೆರ್ಬಡೆಯನ್ನು ಸಂಹರಿಸಿ ಆರ್ಭಟಿಸುತ್ತಾ ಬರುವಾಗ ನೀನು ಪರಾಕ್ರಮದಿಂದ ಆ ಕೂರ್ಗಣಿಗಳ ಇರಿತವನ್ನು ಸಹಿಸಿಕೊಂಡು ನಿಲ್ಲುವಂಥವನಾಗೋ ಅಧಮಾ – ನೋಡೆನ್ನ ಪರಾಕ್ರಮಾ ॥

ದರುವು

ಬಾರೋ ತರಳಾ ತೋರೋ ಶೌರ‌್ಯವಾ
ದುರದೊಳಗೆ ನಿನ್ನ
ಶಿರವ ತೆಗೆವೆ ಎಸೆದು ಅಸ್ತ್ರವಾ ॥

ಯೌವನಾಶ್ವ: ಯಲಾ ಪ್ರವೀರ ! ಯನ್ನ ಅಂಜಿಕೆಯಿಲ್ಲದೆ ಹಂಗುದೊರೆದು ಅಜರಾಮರನಾಗಬೇಕೆಂದು ಹವಣಿಸುತ್ತಿರುವೆಯಾ ಬಾಲ ! ನೀನು ಇನ್ನೂ ಹಸುಳೆ. ನಿನ್ನ ಹುಡುಗತನವನ್ನು ನಿನ್ನ ಹೆತ್ತ ತಾಯಿಯ ಬಳಿ ತೋರು ಹೋಗು ! ಸುಮ್ಮನೆ ಯನ್ನ ಕ್ರೂರ ಬಾಣಕ್ಕೆ ಏತಕ್ಕೆ ಬಲಿಯಾಗುವೆಯಾ ಬಾಲ – ವದಗಿತು ನಿನಗೆ ಕಡೆಗಾಲ ॥

ದರುವು

ಹಸುಳೆಯೆಂದು ತಿಳಿದೆಯೇನಲಾ
ಅಸಮಾಕ್ಷನಾಣಿ
ಮುಸುಡ ಮುರಿವೆ ನಿನ್ನ ನೋಡೆಲಾ ॥

ಪ್ರವೀರ: ಯಲಾ ಯೌವನಾಶ್ವ ! ಯನ್ನನ್ನು ಹಸುಳೆಯೆಂದು ತಿಳಿದೆಯೇನಲಾ ಭ್ರಷ್ಠಾ  ನಾನು ಚಿಕ್ಕವನಾದರೆ ಯನ್ನ ಕೈಯಲ್ಲಿರುವ ಬಿಲ್ಲು ಬಾಣಗಳು ಚಿಕ್ಕವೇ ! ಏಕೆ ಸುಮ್ಮನೆ ಶಬ್ದಾಡಂಬರ ಮಾಡುತ್ತಿರುವೆ – ಜಾಗ್ರತೆ ಕದನಕ್ಕೊದಗು. ಈ ಹಸುಳೆ ಕೈಯಲ್ಲಿರುವ ಅಸಮ ಬಾಣವನ್ನು ಎಸೆದು ಅಸಮಾಕ್ಷನಾಣೆಗೂ ವಸುಮತೀಶನಾದ ನಿನ್ನ ಮುಸಡನ್ನು ಮುರಿದು ಅಸುವನ್ನು ಕಾಲನ ವಶವರ್ತಿ ಮಾಡದಿರ್ದರೇ ನಾನು ವೀರನೆಂದೆನಿಸಬೇಕೆನಲಾ ಭಂಡಾ ನಾ ನಿನ್ನ ಮಿಂಡ ॥

ದರುವು

ಅಟ್ಟಿ ಬಿಡುವೆ ವಾರಣಗಳನೂ
ಹುಡಿಗಟ್ಟಿ ರಥದ
ಥಟ್ಟುಗಳನು ಸೀಳಿ ಬಿಡುವೆನೂ ॥

ಯೌವನಾಶ್ವ: ಯಲೇ ಪ್ರವೀರ ! ಕಾಳ ಸರ್ಪದಂತೆ ತೀಕ್ಷ್ಣವಾದ ಯನ್ನ ಖಡ್ಗದಿಂದ ನಿನ್ನ ಸೈನ್ಯದ ರಥಿಕರ ರಥಗಳನ್ನು ಪದಾತಿಗಳ ತಲೆಗಳನ್ನು ಕುದುರೆಗಳ ಬುರುಡೆಗಳನ್ನೂ ತುಂಡು ತುಂಡಾಗಿ ಕತ್ತರಿಸಿ ಚೆಂಡಾಡುವೆನಲ್ಲದೇ ಕರಿಘಟೆಯು ಬಯಲಾಗುವಂತೆಯೂ, ಕುದುರೆಯ ಬಲವು ಚದುರುವಂತೆಯೂ ರಥಗಳು ಸಿಡಿದು ಹೋಗುವಂತೆಯೂ ವಿಜೃಂಭಿಸುವೆನು. ಜಾಗ್ರತೆ ಯುದ್ಧಕ್ಕೆ ಸಿದ್ಧನಾಗಿ ನಿಲ್ಲೋ ತರಳಾ ಕತ್ತರಿಸುವೆ ಕೊರಳಾ ॥

 

(ಉಭಯರ ಯುದ್ಧಯೌವನಾಶ್ವ ಪರಾಭವ)

(ಅನುಸಾಲ್ವ ಯುದ್ಧಕ್ಕೆ ಬರುವಿಕೆ)

ಅನುಸಾಲ್ವ: ಯಲವೋ ದುರುಳನಾದ ಪ್ರವೀರನೇ ! ಕುದುರೆಯನ್ನು ತಂದು ಯನ್ನೊಡೆಯನಿಗೆ ಒಪ್ಪಿಸಿ ವಿಧೇಯನಾಗದೆ ಪೊಳ್ಳು ಪರಾಕ್ರಮವನ್ನು ಹೊಂದಿ ಯನ್ನೊಡನೆ ಯುದ್ಧ ಮಾಡಲಾಸಕ್ತನಾಗಿ ಬಂದಿರುವೆಯಾ ಹೋರಾ ಕುದುರೆಯ ಚೋರ ॥

ದರುವು

ಕಡುಮೂರ್ಖ ದಾನವ  ಬಿಡು ನಿನ್ನ ಪೌರುಷ
ಬಡಿದು ಕೊಲ್ಲುವೆ ನಿನ್ನಾ  ಕೇಳ್ ನಿನ್ನಾ ॥
ತಡೆ ಬಡೆಯಿಲ್ಲದೆ  ದುಡುಕು ಮಾತಾಡಲು
ಹೊಡೆದು ಕೆಡಹುವೆನೂ  ಬಿಡೆನೂ ॥

ಪ್ರವೀರ: ಯಲಾ ಮೂರ್ಖ ದಾನವನೇ ! ತಡೆಬಡೆಯಿಲ್ಲದೆ ಯಂಥಾ ದುಡುಕು ವಚನವನ್ನಾಡುವೆಯೋ ಅಧಮಾ ॥ಅರಿಗಳಿಗೆ ಶರಣಾಗತರಾಗುವುದಕ್ಕೆ ನಾನೇನು ದುರ ಹೇಡಿಯಲ್ಲಾ. ದುರಕ್ಕನುವಾಗಿ ಪಾರ್ಥನೆಂಬ ಸಾಮಜವೇ ಬರಲಿ. ಸ್ತೋಮವಾದ ಕೇಸರಿಯಂತೆ ನಿಂತು ಶರಮುಖದಿಂದ ಪರಿ ಭಂಗಿಸುವೆನೋ ಭ್ರಷ್ಠಾ- ಪರಮ ಪಾಪಿಷ್ಠ ॥

ದರುವು

ದುರುಳ ಪೇಳುವೆ ಕೇಳ್  ಧುರಕನುವಾಗಲು
ತರಿದು ಬಿಡುವೆ ಶಿರವಾ  ಕಂಧರವಾ ॥
ಹಿರಿಯಬಳ್ಳಾಪುರ  ವರದ ಸೋಮೇಶನಾ
ಕರುಣದಿಂದ ಬಡಿವೇ  ಕಡಿವೇ ॥

ಅನುಸಾಲ್ವ: ಯಲೋ ಮರುಳೇ ! ನಿನ್ನಂತಹ ಮಂದ ಬುದ್ಧಿಯ ಮಾನವನು ಮತ್ತೊಬ್ಬನಿಲ್ಲ ನೋಡು. ಆಡಿನ ಕುತ್ತಿಗೆಯಲ್ಲಿರುವ ಸ್ತನದಂತೆ ವ್ಯರ್ಥವಾದ ನಿನ್ನ ಪರಾಕ್ರಮವನ್ನು ಧೀರ ಅನುಸಾಲ್ವನಲ್ಲಿ ತೋರಬೇಡ ಕಂಡ್ಯಾ. ನೀನು ಬಿಟ್ಟ ಶರಪಂಜರಕ್ಕೆ ಸಿಲುಕುವ ವೀರನೇ ನಾನು  ವೃಥಾ ಬಳಲುವುದೇತಕ್ಕೇ? ತೋಳನ ಅಳವಿಯಲ್ಲಿ ಮೃಗ ಸಿಕ್ಕಿದಂತೆ ಯನ್ನ ಕೈಗೆ ಸಿಕ್ಕಿ ಪ್ರಾಣ ನೀಗುವೆ ಯಾಕೆ ? ತುರಗವನ್ನು ಬಿಟ್ಟು ಜೀವವನ್ನು ಉಳಿಸಿಕೊಂಡು ತೆರಳುವಂಥವನಾಗೋ ತರಳಾ ಮುರಿಯುವೆ ಕೊರಳಾ ॥

 

(ಉಭಯರ ಯುದ್ಧಅನುಸಾಲ್ವ ಪರಾಭವ)

ಭಾಗವತರ ಕಂದ

ಜನಪ ಜಯಮೇಜಯನೆ ಲಾಲಿಸು
ಮೀನಕೇತನ ಯೌವನಾಶ್ವರೂ
ಭಾನುಪೌತ್ರ ಅನುಸಾಲ್ವ ವೀರರು ಅತುಲ ಶೌರ‌್ಯದಲೀ ॥
ಅನುವರದಿ ಕಾದಾಡಿ ಪರಿಭವ
ವನ್ನು ಹೊಂದಲು ಬಂದ ಪಾರ್ಥನು
ದಿನಮಣಿಯನಾವರಿಸೆ ರಾಹುವು ಬರುವ ತೆರನಂತೆ ॥

ಸಾರಥಿ: ಸ್ವಾಮಿ ಅರ್ಜುನ ಭೂಪಾಲರೇ ! ನೀಲಧ್ವಜನ ಸುತನಾದ ಪ್ರವೀರನು ಶ್ಯಾಮಲಾವತಿಯರಸನಂತೆ ಮುಳಿದು, ದುರದಲ್ಲಿ ಭೀಮ ವಿಕ್ರಮರಂತೆ ಮೆರೆಯುವ ನಿಮ್ಮ ಸೇನಾ ನಾಯಕರೆಲ್ಲರನ್ನೂ ಪರಾಭವಗೊಳಿಸಿದನೈಯ್ಯ ಭೂಪ ಕೀರ್ತಿ ಕಲಾಪ ॥

ಅರ್ಜುನ: ಅಯ್ಯ ಸಾರಥಿ ! ನೀನು ನುಡಿಯುತ್ತಿರುವ ವಚನವು ನಿಜವೇ ! ಅತುಲ ಪರಾಕ್ರಮಿಗಳಾದ ನಮ್ಮ ಸೇನಾ ನಾಯಕರು ಆ ದುರುಳ ಬಾಲಕನಿಂದ ಪರಾಜಿತರಾದರೇ, ಆಶ್ಚರ‌್ಯ ಆಶ್ಚರ‌್ಯ. ನಾನು ಈಗಲೇ ಯುದ್ಧ ಸನ್ನದ್ಧನಾಗಿ ಹೊರಟು ಆ ತರಳನನ್ನು ಸದೆ ಬಡಿಯುವೆನೈಯ್ಯ ಸಾರಥೀ ॥

(ಅರ್ಜುನ ಯುದ್ಧಕ್ಕೆ ಬರುವಿಕೆ)

ಅರ್ಜುನ: ಯಲೋ ಪ್ರವೀರ ! ಈ ಅರ್ಜುನನ ಅಂಜಿಕೆಯಿಲ್ಲದೆ ಬವರಕ್ಕೆ ಬಂದ ಭಟರನ್ನೆಲ್ಲಾ ಬಯಲು ಮಾಡಿದೆನೆಂಬ ಬಿಂಕದಿಂದ ಭಯವಿಲ್ಲದೆ ಬಲಶಾಲಿಯೆಂದು ನಿಂತಿರುವೆಯಾ ಮೂರ್ಖ! ನೀನು ಹಸುಳೇ ! ನಿನ್ನಿಂದಾಗದು ಪುರಕ್ಕೆ ತೆರಳಿ ನಿನ್ನ ತಾತನನ್ನು ಬರಮಾಡೋ ತರಳಾ ಕತ್ತರಿಸುವೆ ಕೊರಳಾ ॥

ಪ್ರವೀರ: ಯಲಾ ಅರ್ಜುನ ! ನೀನು  ಭೀಮಾನುಜನೋ ! ಭಯವಿಲ್ಲದೆ ಬಲವಿದೆಯೆಂದು ಸಮರಕ್ಕೆ ಬಲು ಬಿರುಸಿನಿಂದ ಸೊಕ್ಕಿ ಶಬ್ದಾಡಂಬರ ಮಾಡುತ್ತಾ  ಸಮೀಪಕ್ಕೆ ಸಾರುತ್ತಿರುವೆಯೋ ! ಶತೃಗಳ ಸಮ್ಮುಖದಲ್ಲಿ ಶೌರ್ಯ ಸಾಹಸಗಳನ್ನು ತೋರಿ ಧುರವೀರನೆನಿಸಿಕೊಳ್ಳಬೇಕೆಂದು ಹವಣಿಸುತ್ತಿರುವೆಯಾ. ಬಾ ನಿನ್ನ ಸಾಹಸವನ್ನು ಈ ಧೀರ ಪ್ರವೀರನಲ್ಲಿ ತೋರುವಂಥವನಾಗೋ ಅರ್ಜುನ ಅತಿ ದುರ್ಜನ  ॥