ದರುವು

ಕೇಳೆಲೋ ಖೂಳ ಹೇ ಪ್ರವೀರ  ಕೊಳು
ಗುಳಕೆ ಸಾರೋ ಚೋರ ॥
ಇಳೆಯ ರಾಯರ ಗಂಡನೆಂದು
ತಿಳಿದು ಶರಣು ಬಾರೋ ಯನಗೆ ॥

ಅರ್ಜುನ: ಯಲಾ ಖೂಳ ಪ್ರವೀರ ! ಅರಿಯದೆ ತುರಗವನ್ನು ಬಂಧಿಸಿ ಯುದ್ಧಕ್ಕೆ ಮುಂದಾಗಿ ಬಂದೆಯಾ ಪ್ರಚಂಡ ಪ್ರತಾಪಿ ಎಂದು. ಸಾಕು ಸಾಕು. ಇನ್ನಾದರೂ ರಣವನ್ನು ಸಾಕು ಮಾಡಿ ಶರಣು ಬಂದಿರುವೆನೆಂದು ಸೋಲನ್ನೊಪ್ಪಿಕೋ. ಮರೆಯದಿರು. ನಿನ್ನೆದುರಿರುವವನು ಮೂರು ಲೋಕದ ಗಂಡ ಗಾಂಡೀವಿಯೆಂದು ತಿಳಿಯೋ ಭ್ರಷ್ಠಾ ಪರಮ ಪಾಪಿಷ್ಠ ॥

ದರುವು

ಹಲ್ಲು ಮುರಿವೆ ಪಾರ್ಥ  ಕೆಟ್ಟ
ಸೊಲ್ಲು ನುಡಿವ ಧೂರ್ತ ॥
ಖುಲ್ಲ ನಿನಗೆ ಶರಣು ಬರಲು ನಾನು
ಅಲ್ಲ ರಣದ ಹೇಡಿ ಮೂರ್ಖ  ॥

ಪ್ರವೀರ: ಯಲಾ ಪಾರ್ಥ ! ನನ್ನೆದುರಿರುವವನು ಮೂರು ಲೋಕದ ಗಂಡನೆಂದೂ ಮಹಾ ಪರಾಕ್ರಮಿಯೆಂದು ಅನೇಕರ ಮುಖದಿಂದ ಕೇಳಿರುವೆನು. ಆದ್ದರಿಂದಲೇ ನಾನು ನಿನ್ನೊಡನೆ ಸಂಗ್ರಾಮದಾನವನ್ನಪೇಕ್ಷಿಸಿ ಬಂದಿರುವೆನು. ಜಾಗ್ರತೆ ನನ್ನ ಅಪೇಕ್ಷೆಯನ್ನು ಪೂರ್ತಿ ಮಾಡು. ಕೆಟ್ಟ ಸೊಲ್ಲು ನುಡಿವ ಧೂರ್ತನಾದ ನಿನ್ನನ್ನು ಸಮರದೊಳಗೆ ಹಲ್ಲು ಮುರಿಯುವೆನಲ್ಲದೇ ನಿನಗೆ ಶರಣು ಬರಲು ನಾನು ಧುರ ಹೇಡಿಯಲ್ಲವೋ ಖುಲ್ಲ ಅಡಗಿಸುವೆ ನಿನ್ನ ಸೊಲ್ಲ ॥

ದರುವು

ಅಂದು ಕುರು ಕುಲವನೂ  ನಾನು
ಕೊಂದ ಪರಿಯ ನೀನೂ ॥
ಚಂದದಿಂದ ಅರಿತು ಈಗ
ಬಂದು ನಿಲ್ಲೊ ಧುರಕೆ ಬೇಗ ॥

ಅರ್ಜುನ: ಯಲಾ ಮರುಳೇ ! ಅರಿಯದೆಮ್ಮೊಡನೆ ಯುದ್ಧಾಕಾಂಕ್ಷಿಯಾದ ನೀನು ಅಪ್ರಬುದ್ಧನಲ್ಲವೇ! ದೇವದಾನವ ಮಾನವರೋಳ್ ನನ್ನೊಡನೆ ಸೆಣಸಿ ಸಮರಧೀರರಾದ ಸಾಹಸಿಗಳುಂಟೆ ! ಹಿಂದೆ ಭಾರತ ಯುದ್ಧದಲ್ಲಿ ಕುರುಕುಲವನ್ನೆ ಧ್ವಂಸ ಮಾಡಿದೆನಲ್ಲದೆ ಯುದ್ಧ ಸನ್ನದ್ಧರಾಗಿ ಬಂದು ಸೆಣಸಿದ ಕರ್ಣ ದ್ರೋಣ ಭೀಷ್ಮ ಶಲ್ಯಾದಿಗಳೇನಾದರೆಂಬುದನ್ನು ಮನದಲ್ಲಿ ಚೆನ್ನಾಗಿ ತಿಳಿದು ಸಂಗ್ರಾಮಕ್ಕೆ ಸಿದ್ಧನಾಗಿ ಬಾರೋ ಖೂಳಾ ನಂತರ ನೋಡು ಗೋಳ ॥

ದರುವು

ಭಾರತ ಸಮರದೊಳು
ಮಾರ ಜನಕನಿರಲೂ  ನೀ
ಭಾರತ ರಣ ಜೈಸಲೂ ॥
ಧುರದಿ ಕರ್ಣ ದ್ರೋಣ ಭೀಷ್ಮಾ
ಭರದಿ ಧರೆಗೆ ಉರುಳಿ ಬಿದ್ದರಂದೂ ॥

ಪ್ರವೀರ: ಯಲವೋ ಅರ್ಜುನ ! ಶ್ರೀ ಕೃಷ್ಣನ ಬಲದಿಂದ ಕೌರವ ಬಲದ ವೀರರನ್ನು ಗೆದ್ದೆಯಲ್ಲದೆ ನಿನ್ನ ಸ್ವ ಶಕ್ತಿಯಿಂದಲ್ಲ. ಕರ್ಣನ ಸರ್ವ ಶಕ್ತಿಯನ್ನು ಹರಿಯು ಅಪಹರಿಸಿ ಸತ್ವಹೀನನನ್ನಾಗಿ ಮಾಡಿ ಸೋಲಿಸಿ ಸಾವು ತಂದನಲ್ಲದೇ ನಿನ್ನ ಶೌರ್ಯದಿಂದಲ್ಲ. ಗುರುವಾದ ದ್ರೋಣಚಾರ‌್ಯರನ್ನು ಕುಟಿಲತನದಿಂದ ಕೃಷ್ಣನು ಕೊಂದನಲ್ಲದೇ ನಿನ್ನ ಕೈ ಚಳಕದಿಂದಲ್ಲ. ಶಿಖಂಡಿಯನ್ನು ಮುಂದೆ ಮಾಡಿ ಸರ್ವೇಶ್ವರನು ನಿನ್ನ ಮುತ್ತಯ್ಯನಾದ ಭೀಷ್ಮರನ್ನು ಕೊಂದನಲ್ಲದೇ ನಿನ್ನ ಭುಜಬಲದಿಂದಲ್ಲ ಧನಂಜಯಾ. ಈ ನಿನ್ನ ಧೀರತ್ವವನ್ನೂ ಧರೆಯಲ್ಲಿ ಯಾರರಿಯರು ? ಸ್ವಪ್ನದಲ್ಲಿಯೂ ನನ್ನೊಡನೆ ಜಯವನ್ನಾಶಿಸದಿರು. ನೋಡು ಈಗ ನಾನು ಬಿಡುವ ಬಾಣಗಳನ್ನು ತರಹರಿಸುವವನಾಗೋ ಪಾರ್ಥ ನೀನು ಬಂದಿದ್ದು ವ್ಯರ್ಥ ॥

(ಉಭಯರ ಯುದ್ಧ)

ದರುವು

ಓಡಿ ಬಂದೆನೂ, ದೊರೆಯೇ ! ಓಡಿ ಬಂದೆನು ॥
ಕೂಡಿ ಸೈನ್ಯವೊಂದು ಬರಲು
ಒಡನೆ ತಮ್ಮ ಸುತನು ರಣದಿ
ಬಡಿದು ಕೊಲ್ಲುತಿರಲು ಪಗೆಯ
ನೋಡಿ ತಮಗೆ ಅರುಹಲೆಂದು ಓಡಿ ಬಂದೆನೋ                                     ॥

ಚಾರ: ಸ್ವಾಮಿ ನೀಲಧ್ವಜ ಭೂಪಾಲರೇ ! ಸೇವಕನ ಬಿನ್ನಪವನ್ನು ಲಾಲಿಸಬೇಕು ಜೀಯಾ ! ಹಸ್ತಿನಾವತಿಯನ್ನಾಳುವಂಥ ಧರ್ಮರಾಯರ ಯಾಗದ ಕುದುರೆಯು ನಮ್ಮ ಉಪವನದಲ್ಲಿ ಮೇಯುತ್ತಿರಲು ಅದನ್ನು ಕಂಡ ತಮ್ಮ ಸುಕುಮಾರನಾದ ಪ್ರವೀರನು ಕಟ್ಟಿ ಹಾಕಿ ಧುರಕ್ಕನುವಾಗಲೂ, ಅರ್ಜುನನಿಂದ ಕೂಡಿರುವ ಮಹಾಸೇನೆಯೂ ಕೂಡಲೇ ಬಂದು ನಿಮ್ಮ ತನುಜನ ಮೇಲೆ ಕವಿಯಲು ಉಭಯತ್ರರಿಗೂ ಘೋರವಾದ ಕದನವು ನಡೆಯುತ್ತಿರುವುದು ನೋಡಿ ತಮಗೆ ಅರುಹಲೆಂದು ಓಡಿ ಬಂದೆನು ಸ್ವಾಮೀ  ಭಕ್ತಜನ ಪ್ರೇಮಿ ॥

ದರುವು

ಕುಟ್ಟಿ ತರುಬುವೆ ಕೇಳು ಪಾವಕ
ಅಟ್ಟಿ ಬರುತಾಲಿರುವಾ ಸೈನ್ಯವಾ
ನಷ್ಠಪಡಿಸದೆ ಇರಲು ದುರಳರ  ಸೃಷ್ಠಿಪತಿಯಹೆ ನೇ                                ॥

ನೀಲಧ್ವಜ: ಹೇ ಅಗ್ನಿದೇವ ! ಆ ದುಷ್ಠ ಪಾರ್ಥನಿಗೆ ಬಂದಿರುವುದೇ ಇಷ್ಠು ಗರ್ವ ! ಈ ನೀಲಧ್ವಜನ ಪರಾಕ್ರಮವನ್ನು ಅರಿಯದೇ ಹೋದನೇ ! ಬರಲಿ, ಅಟ್ಟಿ ಬರುತ್ತಲಿರುವ ಅರ್ಜುನನ ಸೈನ್ಯವನ್ನು ನಷ್ಠಪಡಿಸಿ, ಕುಟ್ಟಿ ಕುಟ್ಟಿ ಕೋಲಾಹಲವಂ ಮಾಡಿ ಅಟ್ಟಿ ತರುಬದಿದ್ದರೇ ನಾನು ಸೃಷ್ಠಿಪತಿಯೆನಿಸಿ ಕೊಳ್ಳುವೆನೇ ದೇವಾ ಮಹಾನುಭಾವ ॥

ದರುವು

ದುಷ್ಠ ಪಾರ್ಥನ ಬಿಡಿಸಲೋಸುಗ
ಜ್ಯೇಷ್ಠಪಿತಶ್ರೀ ಹರಿಯೆ ಬರಲಿ
ಅಷ್ಠ ಮೂರುತಿ ಶಿವನು ಬಂದರೂ  ಕಷ್ಠವಿಲ್ಲೆನಗೇ                                     ॥

ನೀಲಧ್ವಜ: ಹೇ ವೈಶ್ವಾನರನೇ ! ಆ ಜಡಮತಿ ಭ್ರಷ್ಠನಾದ ಪಾರ್ಥನಿಗೆ ಬೆಂಬಲವಾಗಿ ಜ್ಯೇಷ್ಠನಾದ ಚತುರ್ಮುಖನ ಜನಕನಾದ ಕೃಷ್ಣನೇ ಬರಲಿ, ದೃಷ್ಠಿ ಮೂರುಳ್ಳ, ಅಷ್ಠ ಮೂರುತಿಯಾದ ಪರಶಿವನೇ ಬರಲೀ, ಇಷ್ಟು ಮಂದಿ ಒಟ್ಟುಗೂಡಿ ಬಂದಾಗ್ಯೂ ದಿಟ್ಟತನದಿಂದ ಕೆಟ್ಟ ನಾರಾಚಗಳನ್ನು ಬಿಟ್ಟು ದುಷ್ಠ ಧನಂಜಯನ ಹುಟ್ಟಡಗಿಸಿ ಬಿಡುವೆನೈ ದೇವನೇ ವೈಶ್ವಾನರನೇ ॥

ದರುವು

ಧರಣಿಗತಿಶಯ ಹಿರಿಯ ಬಳ್ಳಾ
ಪುರದ ಸೋಮೇಶ್ವರನ ಧ್ಯಾನಿಸಿ
ಧುರಕೆ ತೆರಳುವ ಸೇನೆ ಸಹಿತಲಿ  ಭರದಿ ಪಾವಕನೇ                               ॥

ನೀಲಧ್ವಜ: ಹೇ ಹುತವಹನನೇ ! ಈ ಧರಣಿಯೋಳ್ ಅತಿಶಯವಾಗಿ ಕಂಗೊಳಿಸುವ ಹಿರಿಯ ಬಳ್ಳಾಪುರದ ಗಿರಿಜಾಕಾಂತ ಶ್ರೀ ಸೋಮೇಶ್ವರನನ್ನು ಯಮ್ಮ ಮನದೋಳ್ ಧ್ಯಾನಿಸುತ್ತಾ ಸಕಲ ಸೇನಾಪರಿವಾರ ಸಮೇತರಾಗಿ ಅತಿ ಜಾಗ್ರತೆ ಯನ್ನ ಕುವರನು ಧಾವಲ್ಲಿ ಯುದ್ಧ ಗೈಯುತ್ತಿರುವನೋ ಆ ಸಮರ ಭೂಮಿಗೆ ತೆರಳೋಣ ನಡಿಯೈಯ್ಯ ದೇವ ಯಜ್ಞೇಶ್ವರ – ವೈಶ್ವಾನರ ॥

ಅಗ್ನಿದೇವ: ಕರಿಕುಲಕ್ಕೆ ಕೇಸರಿಯಂತೊಪ್ಪುವಾ ಹೇ ರಾಜೇಂದ್ರಾ ತಮ್ಮ ಸುಕುಮಾರನಿಗೆ ಬೆಂಬಲಿಗರಾಗಿ ಅತಿ ಜಾಗ್ರತೆ ಹೋಗೋಣ ಬಾರೈ  ದೊರೆಯೇ ನಿಮಗಾರು ಸರಿಯೇ ॥

 

(ನೀಲಧ್ವಜ ಯಜ್ಞೇಶ್ವರ ಯುದ್ಧಕ್ಕೆ ಬರುವಿಕೆ)

ಅರ್ಜುನ: ಯಲಾ ಪ್ರವೀರ ! ನಾನು ಮೊದಲೇ ಹೇಳಲಿಲ್ಲವೇ ! ನೀನು ಇನ್ನೂ ಹಸುಳೆ. ನಿನ್ನಿಂದಾಗದು. ನಿನ್ನ ತಾತನನ್ನು ಬರಹೇಳು ಎಂದು ಇದಿಗೋ ಆ ಖೂಳನಾದ ನೀಲಧ್ವಜನು ನಿನಗೆ ಸಹಾಯಕನಾಗಿ ಪರಿವಾರ ಸಮೇತನಾಗಿ ಬರುತ್ತಿರುವನು. ಬರಲಿ, ಭೂತಗಣಕ್ಕೆ ಬಲಿಯನಿಕ್ಕದಿದ್ದರೆ ಧುರವೀರ ಪಾರ್ಥನೆನಿಸಬೇಕೆನಲಾ ತರಳಾ ಮುರಿಯುವೆ ಕೊರಳಾ

ದರುವು

ಬಾರೋ ಪಾರ್ಥ  ತೋರೋ ಶೌರ‌್ಯ  ಧುರದಿ ಈ ದಿನಾ
ದುರುಳತನವ  ತೋರಲೀಗ  ಶಿರವ ತರಿವೆ ನಾ ॥

ನೀಲಧ್ವಜ: ಯಲಾ ಅರ್ಜುನ ! ಬಾಲಕನ ಮೇಲೆ ತೋರುವ ಪೌರುಷವನ್ನು ಯನ್ನಲ್ಲಿ ತೋರಿಸು. ಆಗ ನಿನ್ನನ್ನು ವೀರನೆನ್ನುವೆ. ದುರುಳ ಬುದ್ಧಿಯಿಂದ ಮೆರೆಯದೆ ಬಂದ ದಾರಿಯನ್ನು ಹಿಡಿಯೋ ಮೂರ್ಖ ಬಿಡು ಯನ್ನೊಳು ತರ್ಕ ॥

ದರುವು

ದುಷ್ಠ ಭೂಪ   ಕೆಟ್ಟ ವಚನ  ಭ್ರಷ್ಠ ನುಡಿಯುವೇ
ದಿಟ್ಟತನದಿ  ಸೃಷ್ಟಿಗೀಗಾ  ಥಟ್ಟನೊರಗಿಸುವೇ ॥

ಅರ್ಜುನ: ಯಲಾ ದುಷ್ಠ ನೀಲಕೇತುವೆ ಭ್ರಷ್ಟತನದಿಂದ ಕೆಟ್ಟ ವಚನಗಳನ್ನಾಡುತ್ತಿರುವೆಯಾ. ನಿನ್ನ ಶೌರ‌್ಯವನ್ನು ಮಾತಿನಲ್ಲಿ ತೋರಿಸದೆ ಶರ ಸಂಧಾನದಿಂದ ತೋರಿಸು. ಆಗ ಅಗ್ನಿಯಲ್ಲಿ ಬಿದ್ದ ಪತಂಗದ ಹುಳುವಿನಂತೆ ನಾಶವನ್ನೈದುವುದು ಖಂಡಿತವೆಂದು ತಿಳಿಯೋ ಅಧಮಾ ನೋಡೆನ್ನ ಪರಾಕ್ರಮಾ॥

ದರುವು

ವದಗೊ ಧುರಕೆ  ಅಧಮ ನೀನು  ಬೆದರುತಲಿರುವೇ
ಮದವು ಯಾಕೆ  ಭರದಿ ನಿನ್ನ  ಸದೆಯ ಬಡಿಯುವೆ ॥

ಪ್ರವೀರ: ಯಲಾ ಅಧಮಾ ! ನಿನ್ನಯ ಪೊಳ್ಳು ಬೆದರಿಕೆಗೆ ಬೆದರುವವನಲ್ಲವೋ ಭ್ರಷ್ಠಾ. ಜಾಗ್ರತೆ ನಿಲ್ಲು. ತ್ರಿದಶಾಧೀಶ್ವರರ ಮರೆ ಹೊಕ್ಕರೂ ನಿನ್ನನ್ನು ಬಿಡುವವನಲ್ಲಾ. ನಿನ್ನಯ ಮದಗರ್ವವನ್ನು ಮುರಿದು ಸದೆಬಡಿಯುವೆನು. ಜಾಗ್ರತೆ ಕದನಕ್ಕಿದಿರಾಗಿ ಬಾರೋ ಖೂಳಾ ನಂತರ ನೋಡು ನಿನ್ನ
ಗೋಳಾ ॥

ದರುವು

ಧರಣಿಗಧಿಕಾ  ಹಿರಿಯ ಬಳ್ಳಾ  ಪುರದ ವರದನಾ
ಕರುಣದಿಂದ  ಕ್ರೂರ ಶರವ  ಭರದಿ ಬಿಡುವೆ ನಾ ॥

ಅರ್ಜುನ: ಯಲಾ ದುಷ್ಠ ಬಾಲಕನೇ ! ಈ ಮೇದಿನಿಯೋಳ್ ಅತಿ ಮನೋಹರವಾಗಿ ರಂಜಿಸುವಾ ಹಿರಿಯ ಬಳ್ಳಾಪುರದ ಶ್ರೀ ಸೋಮನಾಥನ ಕರುಣದಿಂದ ಚಂಡ ಶರವನ್ನೆಸೆಯುವೆನು ತರಹರಿಸುವವನಾಗೋ ಬಾಲ ವದಗಿತು ಕಡೆಗಾಲ ॥

ದರುವು

ಪುಂಡು ಮಾತನೂ  ಭಂಡ ನುಡಿಯುವೇ
ಷಂಡ ನಿನ್ನನೂ  ಖಂಡ್ರಿಸ್ಹಾಕುವೇ ॥

ನೀಲಧ್ವಜ: ಯಲೋ ಭಂಡ ! ತಾನೇ ಗಂಡುಗಲಿ ಸುಭಟನೆಂದು ಅಂಡಲೆಯಬೇಡ. ಈ ಕೋದಂಡದಿಂದ ನಿನ್ನ ಹುಲು ಶರವನ್ನು ತುಂಡು ತುಂಡಾಗಿ ಖಂಡ್ರಿಸಿ ಮಂಡೆಯನ್ನು ಸೂರೆಗೊಂಡು ಪುಟಚೆಂಡ ನಾಡುವೆನು ಖಂಡ ಗರ್ವದಿಂ ಪುಂಡು ಮಾತಾಡುವೆಯಾ ಖುಲ್ಲ ಮುರಿಯುವೆ ನಿನ್ನ ಹಲ್ಲ ॥

ಕಂದ

ಹಯಕೆ ಹಯ ರಥ ರಥಕೆ ಪಯದಳ
ಪಯದಳಕೆ ಗಜಸೇನೆ ಗಜಸೇ
ನೆಯಲಿ ಭಾಷೆಯ ಭಟರು ಭಾಷೆಯ ಭಟರ ಗಡಣದಲಿ ॥
ನಿಯತ ಚಾತುರ್ಬಲವೆರಡು ನಿ
ರ್ಭಯದಲೊರಗಿತು ಮಕುಟ ಮಸ್ತಕ
ಮಯ ಮಹೀತಳವೆನಲು ಹಳಚಿದು ಹೊಯ್ದುದುಭಯ ಬಲ ॥

ಭಾಗವತರು: ಕೇಳಿದರೇನಯ್ಯ ಭಾಗವತರೇ ! ಈ ಪ್ರಕಾರವಾಗಿ ಯೋಧರು ತಮ್ಮ ಗುರಾಣಿಗಳಿಂದಲೂ ಸಿಡಿಲಿನಂತಿರುವ ಕತ್ತಿಗಳಿಂದಲೂ ಅರಿಗಳ ಶಿರ ಚೆಂಡಾಡುತ್ತಾ ಭಯಂಕರವಾಗಿ ಕುದುರೆಯಿಂದ ಕುದುರೆಯನ್ನು ರಥದಿಂದ ರಥವನ್ನೂ, ಆನೆಯಿಂದ ಆನೆಗಳನ್ನೂ ಹೊಡೆದು ಚೂರ್ಣ ಮಾಡುತ್ತ ಅತಿಬಲ ಪರಾಕ್ರಮವನ್ನು ಹೊಂದಿ, ಎಣೆಯಿಲ್ಲದ ಶೌರ‌್ಯದಿಂದ ಬೊಬ್ಬೆಯಿಟ್ಟು ಒಬ್ಬರಿಗೊಬ್ಬರು ಕಾದಾಡಿದರೈಯ್ಯ ಭಾಗವತರೇ ॥

ದರುವು

ಹರನ ನೆನೆಯಲೋ  ಭರದಿ ನಿಲ್ಲೆಲೋ
ಧುರಕೆ ತೊಡಗಲೊ  ಶಿರವ ತೆಗೆವೆಲೋ ॥

ಪ್ರವೀರ: ಯಲಾ ಅರ್ಜುನ ! ಈ ಧರಣಿಗೆ ಶ್ರೇಷ್ಠವಾದ ಹಿರಿಯ ಬಳ್ಳಾಪುರದೊಡೆಯ ಶ್ರೀ ಸೋಮನಾಥನ ಅಡಿದಾವರೆಗಳನ್ನು ನೆನೆಯುತ್ತಾ ಧುರಕೆ ಧೃಡಕರಿಸಿ ನಿಲ್ಲುವಂಥವನಾಗು. ಭೋರ್ಗರೆಯುವ ಶರಗಳನ್ನು ಬಿಡುವೆನು. ತರಹರಿಸುವವನಾಗೋ ಪಾರ್ಥ ಧುರದೊಳಗೆ ಸಮರ್ಥ॥

ದರುವು

ತರಳಾನೆನ್ನುತಾ  ಇರಲು ಯನ್ನನೂ
ಜರಿಯಬಹುದೇ  ದುರಳನೆ ನೀನೂ                                              ॥

ಬಾಲ ನಿನ್ನನೂ  ಕಾಲ ಕರೆವನೂ
ಶೂಲ ಬಿಡುವೆನೂ  ತಲೆಯ ತೆಗೆವೆನೂ                                         ॥

ಅರ್ಜುನ: ಹೇ ದುರುಳ ಬಾಲಕನೆ ! ತರಳನ ಮೇಲೆ ಕೈ ಮಾಡಬಾರದೆಂದು ಅರಿತು ಮರ್ಯಾದೆಯಿಂದ ಸುಮ್ಮನಿದ್ದರೆ ದುರ್ವಚನದ ಮಾತನ್ನಾಡುವೆಯಾ ಭ್ರಷ್ಠಾ ಅತಿ ಜಾಗ್ರತೆ ಯುದ್ಧಕ್ಕೆ ನಿಲ್ಲುವಂಥವನಾಗೋ ಬಾಲ ನಿನ್ನ ಕರೆವನು ಕಾಲ ॥

(ಉಭಯರ ಯುದ್ಧಪ್ರವೀರ ಪರಾಭವ)

ದರುವು

ದುರುಳನು ಎಸೆದಿಹ ಶರವು ಯನಗೆ ತಾಕಿ
ಬರುತಲಿದೆ ರುಧಿರಾ ಪೂರಾ ॥
ಧರೆಯಿಂದ ಏಳಲು  ಕರಚರಣ ಕುಂದಿದೆ
ಕರುಣಿಸೂ ಪರಮೇಶಾ ಸೋಮೇಶಾ ॥

ಪ್ರವೀರ: ಹೇ ದೇವಾ ! ಹಿರಿಯ ಬಳ್ಳಾಪುರವರಾಧೀಶ್ವರಾ ಕಾಲವಿಜಯ ಶೂಲಿ ಮೃತ್ಯುಂಜಯ ಫಾಲಲೋಚನ ಪಾರ್ವತೀ ರಮಣಾ. ಈ ದುರುಳನು ಬಿಟ್ಟ ಶರಗಳು ಯನ್ನ ದೇಹಕ್ಕೆ ನಾಂಟಿ ಕಾಲಾಗ್ನಿಯಂತೆ ಸುಡುತ್ತಿರುವುವು. ಮೇಲಕ್ಕೆ ಏಳುವೆನೆಂದರೆ ಕರ ಚರಣಗಳು ಕುಂದಿ ಕುಸಿದು ಬೀಳುವುವು. ನೀನೇ ಪಾಲಿಸಬೇಕೋ ಹಿರಿಯ ಬಳ್ಳಾಪುರವರಾಧೀಶಾ ಸೋಮೇಶಾ ॥

(ಪ್ರವೀರನ ಮೂರ್ಛೆ)

ಭಾಗವತರು: ಕೇಳಿದರೇನಯ್ಯ ಭಾಗವತರೇ ! ಈ ಪ್ರಕಾರವಾಗಿ ಪ್ರವೀರನು ಅರ್ಜುನನೊಡನೆ ಶೌರ‌್ಯದಿಂ ಕಾದಾಡಿ ಬಳಿಕ ತಾನು ಸುರಲಲನೆಯರ ಚೆಲುವಿಂಗೆ ಮನಸೋತು ವೀರ ಸ್ವರ್ಗವನ್ನೈದಲೂ ಅದಂ ಕಂಡು ನೀಲಧ್ವಜನು ಅಗ್ನಿಯೊಡನೆ ಇಂತೆಂದನೈಯ್ಯ ಭಾಗವತರೇ ॥

ಕಂದ

ತರಣಿ ತೊಲಗಿದ ಗಗನವೋ ಪಂ
ಕರುಹವಿಲ್ಲದ ಸರಸಿಯೋ ಕೇ
ಸರಿಯ ಲೀಲಾಳಾಪವಿಲ್ಲದ ಬಹಳ ಕಾನನವೋ
ಪರಮ ತತ್ತ್ವ ನಿಧಾನವರಿಯದ
ನರನ ವಿದ್ಯಾರಚನೆಯೋ ನಿ
ರ್ಭರ ಭಯಂಕರವಾಯ್ತು ಪಾಳಯ ನೋಡು ಪಾವಕನೇ ॥

ಭಾಗವತರು: ಹೇ ದೇವ ! ತರಣಿ ತೊಲಗಿದ ಗಗನವೋ ಕಮಲವಿಲ್ಲದ ಸರೋವರವೋ, ಸಿಂಹದ ವೀರಾಳಾಪಗಳಿಲ್ಲದ ಕಾನನವೋ, ಪರಮತತ್ತ್ವ ನಿಧಾನವನರಿಯದ ನರನ ವಿದ್ಯಾ ರಚನೆಯೋ ಎಂಬಂತೆ ಪಾಳಯವು ನಿರ್ಭರ ಭಯಂಕರವಾಗಿದೆಯೈ ದೇವ ಮಹಾನುಭಾವ ॥

ದರುವು

ನೋಡು ಪಾವಕನೆ ನೀನೂ  ಧನಂಜಯನೂ
ಮಾಡಿದ ವಿಘಾತಿಯನ್ನೂ ॥
ಕೂಡಿರಲು ನಿನ್ನನೂ  ಬಾಡಿ ಬಳಲಿದ ಸುತನೂ
ನೀಡೈಯ್ಯ ಅಭಯವನೂ                                                          ॥

ನೀಲಧ್ವಜ: ಹೇ ದೇವಾ ! ಕುಂತಿ ಕುಮಾರನಿಂದ ಯಮಗೊದಗಿದ ಕಷ್ಠವನ್ನು ನೋಡಿದೆಯಾ ದೇವಾ, ದೈವಗಳಿಲ್ಲದ ಕಾವ್ಯ ರಚನೆ ಕೃತಕವಾಗಿರುವಂತೆ ಪ್ರವೀರನಿಲ್ಲದ ಯನ್ನ ಆಸ್ಥಾನ ಇನ್ನು ರಂಜಿಪುದೇ ಹೇ ದೇವ, ದೆಸೆದೆಸೆಯ ನೋಡಿದರೆ ಕತ್ತಲೆ ಮಸಗುವುದು. ಪರಿತಾಪ ಮುಸುಕುವುದು. ಧೈರ‌್ಯ ಕಳವಳಿಸುವುದು. ನೀನಿರ್ದು ಯನಗೀ ತೆರನಾದ ಕಷ್ಠವು ಸಂಭವಿಸಬಹುದೇ. ನನಗಿನ್ನೇನು ಗತಿಯೈಯೈ ದೇವಾ ವೈಶ್ವಾನರನೇ ಅಗ್ನಿ ಪುರುಷನೇ ॥

ದರುವು

ಹಿರಿಯ ಬಳ್ಳಾಪುರವಾ  ಪಾಲಿಪ ಸೋಮ
ಧರನೆ ನಿಮ್ಮಯ ಚರಣವಾ ॥
ಮರೆಹೊಕ್ಕಿರುವೆನಯ್ಯಿ  ದೊರಕಿಹ ಕಷ್ಠವಾ
ಪರಿಭವಗೊಳಿಸೋ ದೇವಾ                                                        ॥

ನೀಲಧ್ವಜ: ಹೇ ಪರಮೇಶ್ವರ ! ಹಿರಿಯಬಳ್ಳಾಪುರ ವರಾಧೀಶ್ವರ ! ಗಿರಿಸುತೆ ಪ್ರಾಣೇಶ್ವರಾ ! ಪರಶಿವನಾದ ಶ್ರೀ ಸೋಮೇಶ್ವರಾ ! ಈ ಸಮಯದಲ್ಲಿ ಯನಗೆ ದೊರಕಿರುವ ಕಷ್ಠವನ್ನು ನೀನೇ ಪರಿಹರಿಸಿ ಕಾಯಬೇಕೋ ಹರನೇ ಭಸ್ಮಾಂಗಧರನೇ ॥

ದರುವು

ಯಾಕೆ ಯೋಚನೆ ರಾಜಕುಲಮಣಿ
ಸಾಕು ಬಿಡು ಬಿಡು ದಹಿಸಿ ಬಿಡುವೆನು
ಕಾಕು ಪಾರ್ಥನ ಸೈನ್ಯವೆಲ್ಲವಾ  ನೇಕ ಉರಿಯಿಂದಾ                              ॥

ಅಗ್ನಿದೇವ: ಹೇ ರಾಜೇಂದ್ರಾ ! ಇಷ್ಠು ಮಾತ್ರಕ್ಕೆ ನೀನು ಯೋಚಿಸಬೇಕೆ ? ಕ್ಷಾತ್ರ ಧರ್ಮವನ್ನರಿತು ಮನಸ್ಸಿಗೆ ಧೈರ‌್ಯವನ್ನು ತಂದುಕೋ ! ನಾನು ಈಗಲೇ ದಹನ ಶಕ್ತಿಯಿಂದ ಆ ಫಲುಗುಣನ ಸೈನ್ಯವಂ ಹೊಕ್ಕು ಆತನನ್ನೂ ಆತನ ಪರಿವಾರವೆಲ್ಲವನ್ನೂ ಸುಟ್ಟು ಯಮ ಸದನಕ್ಕೆ ಅಟ್ಟುವೆನು. ನೋಡುವಂಥವನಾಗೈ ರಾಜೇಂದ್ರಾ ಸದ್ಗುಣ ಸಾಂದ್ರ ॥

ದರುವು

ಹೊಗೆ ಹೊಗೆಯು ಹೊಗೆ ಸುತ್ತಿ ದೆಶೆ ದೆಶೆ
ಬೇಗ ರಣವನು ಮುಸುಕೆ ದಳ್ಳುರಿ
ಆಗ ಪಾರ್ಥನ ಸೇನೆಯೆಲ್ಲವೂ  ಕೂಗಿ ಬಾಯ್ಬಿಡುತಾ                              ॥

ಧಗಧಗಿಸುವ ಜ್ವಾಲೆ ಮಾಲೆಯು
ಭುಗಿಲುಭುಗಿಲೆಂದಾವರಿಸುತಲೀ
ತೆಗೆ ತೆಗೆ ತಾ ದಹಿಸತೊಡಗುತಾ  ತಗುಳ್ದುದೆಲ್ಲರನೂ                             ॥

ಅಗ್ನಿದೇವ: ಹೇ ಕ್ಷೋಣಿಪಾಲಕನೆ ನೋಡಿದೆಯಾ ಯನ್ನ ಪರಾಕ್ರಮವನ್ನು ಆ ಪಾಂಡವರ ಸೇನೆಯ ಛತ್ರ ಚಾಮರ ಹರಿಗೆ ಹಕ್ಕರಿಗೆ ಹಲ್ಲಣ ಪತಾಕೆ ಸಿಂಧ ಸೀಗುರಿ ಸೀಸಕ ಬತ್ತಳಿಕೆ ಬಂಡಿ ಪತ್ರ ಬಾಣಕೋದಂಡ ರಥ ರಥಾಂಗ ಮೊದಲಾದವು ಸುಟ್ಟು ಭಸ್ಮವಾಗಿ ಸೇನೆಯಲ್ಲವೂ ಬೆದರಿ ಕೆದರಿ, ಕಿಡಿಯನೊದರಿ, ಓಡುತ್ತಿರುವುದು ನೋಡಿದೆಯಾ ಧರಣಿಪಾಲನೆ ಬಿಡು ಮನದ ಯೋಚನೇ ॥

ನೀಲಧ್ವಜ: ಹೇ ದೇವಾ ! ನಿನ್ನ ಪ್ರಭಾವವು ಈಗ ಎಷ್ಠು ವರ್ಣಿಸಿದರೂ ಸ್ವಲ್ಪವಾಗಿಯೇ ಇದೆ. ಅರ್ಜುನನ ಅಹಂಕಾರಕ್ಕೆ ತಕ್ಕ ಪ್ರಾಯಃಶ್ಚಿತ್ತವಾಯಿತು. ಆ ದುಷ್ಟನಿಗೆ ಇನ್ನು ಉಳಿಗಾಲವಿಲ್ಲೈ ದೇವಾ ಕರುಣ ಪ್ರಭಾವ ॥

ಕಂದ

ಕಟ್ಟುಗ್ರ ಕೋಪದಿಂ ಮುಳಿದಂದು ರಾಘವಂ
ತೊಟ್ಟ ಬಾಣದ ಮೊನೆಯ ದಳ್ಳುರಿಯ ಜಳಕೆ
ಕಂಗೆಟ್ಟು ಸಿಡಿಮಿಡಿಗೊಂಡ ಸಾಗರದ ಜೀವಾಳಿ
ಯಂತೆ ಪಾಂಡವನ ಸೇನೆ ॥

ಅಟ್ಟಿ ಸುಡುವನಲ ಧೂಮಜ್ವಾಲೆಗೊಡನೆ ಗೋ
ಳಿಟ್ಟು ಹೊದ ಕುಳಿಗೊಂಡು ಹೊರಳುತಿರಲುಬ್ಬೆಗಂ
ಬಟ್ಟು ಪಾರ್ಥಂ ಚಿಂತಿಸಿದನೆತ್ತಣದ್ಭುತ
ಮಿದೆಂದು ಪಾವಕನುರುಬೆಗೇ ॥

ಭಾಗವತರು: ಕೇಳಿದರೇನಯ್ಯ ಭಾಗವತರೇ, ಈ ಪ್ರಕಾರವಾಗಿ ಹಿಂದೆ ಶ್ರೀರಾಮನು ತೊಟ್ಟ ಆಗ್ನೇಯಾಸ್ತ್ರದ ಉರಿಗೆ ಸಿಕ್ಕಿ ಸಾಗರದ ಜೀವಿಗಳು ಸಿಡಿಮಿಡಿಗೊಂಡಂತೆ ಇಂದು ಪಾರ್ಥನ ಸೇನೆಯು ಅಗ್ನಿಯ ಭೀಕರ ಜ್ವಾಲೆಗಳಿಗೆ ಸಿಕ್ಕಿ ಸುಡಲಾರಂಭಿಸಲು, ಅರ್ಜುನನು ಕೂಡಲೇ ಧರ್ಮಜನ ಯಾಗಕ್ಕೆ ವಿಘ್ನ ಬಂದಿತೆಂದು ಹೆದರಿ ಯಜ್ಞೇಶ್ವರನನ್ನು ಭಕ್ತಿಯಿಂದ ಪ್ರಾರ್ಥಿಸಿದನೈಯ್ಯಾ ಭಾಗವತರೇ ॥

ದರುವು

ಮಂಡಲದೊಳಗೆ ನೀ  ಚಂಡವಿಕ್ರಮನೈಯ್ಯ  ಅಗ್ನಿದೇವಾ
ಖಾಂಡವ ವನದೊಳು  ಗಾಂಡೀವವೆನಗಿತ್ತೆ  ಅಗ್ನಿದೇವಾ                          ॥

ನಾರಿ ಶಿರೋಮಣಿ  ತರುಣಿ ಪಾಂಚಾಲಿಯು  ಅಗ್ನಿದೇವಾ
ವರ ಅಗ್ನಿಕುಂಡದೋಳ್  ಭರದಿ ಉದ್ಭವಿಸಿಹಳು  ಅಗ್ನಿದೇವಾ                   ॥

ಹಿರಿಬಳ್ಳಾಪುರವರಾ  ಪರಶಿವನ ಫಣಿಯೊಳು  ಅಗ್ನಿದೇವಾ
ಸ್ಥಿರದೊಳು ನೆಲೆಸಿಹೆ  ಕರುಣದಿ ಸಲಹೈಯ್ಯ  ಅಗ್ನಿದೇವಾ                        ॥

ಅರ್ಜುನ: ಈ ಧರಣಿಗಧಿಕವಾಗಿ ರಾರಾಜಿಸುತ್ತಾ ಮೆರೆಯುತ್ತಿರುವ ಹಿರಿಯ ಬಳ್ಳಾಪುರದ ಗಿರಿಜಾ ಮನೋಹರ ಶ್ರೀಸೋಮೇಶ್ವರನ ಫಾಲನೇತ್ರವೇ ಆವಾಸಸ್ಥಾನವೆನಿಸಿಕೊಂಡಿರುವ ಹೇ ಯಜ್ಞೇಶ್ವರಾ! ಹಿಂದೆ ಖಾಂಡವ ವನದಹನ ಕಾಲದಲ್ಲಿ ನಿನಗೆ ನಾನು ನೆರವಾಗಲು, ನೀನು ಕರುಣಿಸಿ ಗಾಂಡೀವವನ್ನು ಯನಗಿತ್ತಿರುವೆ. ಯನ್ನ ಸತಿ ಶಿರೋಮಣಿಯಾದ ಪಾಂಚಾಲಿಯು ನಿನ್ನೊಳು ಉದ್ಭವಿಸಲು, ನಿನ್ನ ಸುತೆಯಾಗಲಿಲ್ಲವೆ ದೇವಾ! ಈಗ ಧರ್ಮರಾಯರು ನಡೆಸುತ್ತಿರುವ ಯಾಗವು ನಿನಗಾಗಿಯಷ್ಠೆ. ದೇವತೆಗಳಿಗೆ ಕೊಡುತ್ತಿರುವ ಹವಿರ್ಭಾಗವು ನಿನ್ನ ಮುಖಾಂತರವೇ ಅಲ್ಲವೇ! ನಾವು ನಿನಗೆ ಹೊರಬಿಗರೆ ದೇವಾ! ಈಗ ನಿನ್ನ ಭೀಕರ ಜ್ವಾಲೆಗೆ ಆನೆ ಕುದುರೆ ಮೊದಲಾದ ಚತುರಂಗ ಬಲವೂ ಸಿಕ್ಕಿ ಯಾವತ್ತೂ ಕಂಗೆಟ್ಟು ಪರಿತಪಿಸುತ್ತಿರುವುದನ್ನು ಪರಿಹರಿಸಿ ಕಾಪಾಡು ಅಗ್ನಿದೇವಾ ಮಹಾನುಭಾವ॥

ದರುವು

ಪರಿಹರಿಸಿ ತಾನೊಲಿದು ಭಕ್ತಿಗೆ
ಮುರಹರಿಯು ಸಮ್ಮುಖದೊಳಿರುತಿರೆ
ತುರಗಮೇಧವ ಮಾಡಲೇತಕೆ ನರನೇ ನಾನರಿಯೆ

ಅಗ್ನಿದೇವ: ಹೇ ಪಾರ್ಥ ನಿನ್ನ ಪ್ರಾರ್ಥನೆಗೆ ಪ್ರಸನ್ನನಾಗಿ ಸುಡುವುದನ್ನು ಪರಿಹರಿಸಿರುತ್ತೇನೆ. ನಿನ್ನ ಮನದ ಯೋಚನೆಯನ್ನು ಬಿಡು ಅರ್ಜುನ! ಜಗನ್ನಿಯಾಮಕನಾಗಿ ಸರ್ವೇಶ್ವರನಾಗಿ, ಸರ್ವದೋಷಹರನಾಗಿರುವ ಶ್ರೀಕೃಷ್ಣನೇ ನಿಮ್ಮ ಬಳಿಯಲ್ಲಿರಲು ಏನೂ ತಿಳಿಯದ ಅಜ್ಞಾನಿಗಳಂತೆ ಈ ಅಶ್ವಮೇಧಯಾಗವನ್ನು ಕೈಗೊಂಡಿರುವಿರಲ್ಲಾ ಪಾರ್ಥಯೇನಿದರರ್ಥ॥

ಅರ್ಜುನ: ಹೇ ಅಗ್ನಿಪುರುಷಾ! ನಿಮ್ಮ ಮಾತು ಯತಾರ್ಥವೇ ಸರಿ. ಸರ್ವಲೋಕ ರಕ್ಷಕನಾದ ಶ್ರೀಕೃಷ್ಣ ಪರಮಾತ್ಮನು ಸಮೀಪದಲ್ಲಿರಲೂ ಈ ಕಾರ‌್ಯವು ನಿರರ್ಥಕವೆಂದೇ ಭಾವಿಸುವೆನು. ಆದರೇನು ಮಾಡುವುದು. ಮುನಿಮೌರ‌್ಯರಾದ ವೇದವ್ಯಾಸರೇ ಉಪದೇಶವಂ ಮಾಡಿ ಈ ಯಾಗವನ್ನು ಮಾಡಲು ಆಜ್ಞೆ ಮಾಡಿರುತ್ತಾರಾದ್ದರಿಂದಲೂ ವಿಹಗೇಂದ್ರ ವಾಹನನ ಅನುಗ್ರಹದಿಂದಲೂ ಈ ಅಶ್ವಮೇಧಯಾಗವನ್ನು ಕೈಗೊಂಡಿರುವೆವೇ ವಿನಹ ಅನ್ಯಥಾ ಬೇರೆ ಇಲ್ಲ ದೇವಾ ಕರುಣ ಪ್ರಭಾವ॥ಇದೇ ನಮ್ಮ ಮನೋಭಾವ॥

ಅಗ್ನಿದೇವ: ಹೇ ನೀಲಧ್ವಜ ಭೂಪಾಲ! ಇನ್ನು ಯುದ್ಧವನ್ನು ಸಾಕು ಮಾಡು ಪುರಕ್ಕೆ ನಡೆ. ಕುದುರೆಯನ್ನು ತಂದು ಪಾರ್ಥನಿಗೊಪ್ಪಿಸು. ನರನಾರಾಯಣರ ಅಂಶಭೂತನಾದ ಅರ್ಜುನನು ಸಾಮಾನ್ಯನೇ. ಆತನಿಗೆ ಮುರಧ್ವಂಸಿಯು ವಜ್ರಕವಚವಾಗಿ ಸದಾ ರಕ್ಷಕನಾಗಿಲ್ಲವೆ. ಇದರ ಮೇಲೆ ಯನ್ನನ್ನು ಬಹು ಅನನ್ಯ ಭಕ್ತಿಯಿಂದ ಪ್ರಾರ್ಥಿಸುತ್ತಿರುವನಾದ ಕಾರಣ ಈತನ ಸಖ್ಯವಂ ಬೆಳೆಯಿಸೈ ರಾಜೇಂದ್ರ ಸದ್ಗುಣಸಾಂದ್ರ॥

ನೀಲಧ್ವಜ: ಹೇ ಅಗ್ನಿದೇವಾ! ನಿನ್ನ ವಚನದ ಪ್ರಕಾರ ಯಾಗದ ಕುದುರೆಯನ್ನು ಧನಕನಕ ವಸ್ತುವಾಹನಾದಿಗಳ ಸಹಿತ ತಂದು ಅರ್ಪಿಸುವ ಬಾರೈ ದೇವ ಮಹಾನುಭಾವ॥

ಕಂದ

ಇಂದು ಕುಲತಿಲಕ ಜನಮೇಜಯ ನರೇಂದ್ರ ಕೇಳ್‌
ಅಂದು ನೀಲಧ್ವಜಂ ತಿರುಗಿ ತನ್ನರಮನೆಗೆ
ಬಂದು ವೈಶ್ವಾನರನನುಜ್ಞೆಯಿಂ ಪಾರ್ಥನ
ತುರಂಗಮಂ ಬಿಡುವೆನೆಂದೂ॥
ನಿಂದು ಮಂತ್ರಿಗಳಂ ಕರೆಸಲದಂ ಕೇಳ್ದು ನಡೆ
ತಂದು ನುಡಿದಳ್ ಜ್ವಾಲೆಯೆಂಬರಸಿ ಪತಿಗೆ ನೀ
ನಿಂದು ಸಿತವಾಹನಂಗೀಯದಿರ್ ಕುದುರೆಯಂ
ಬೆದರದಿರೆನುತ ತಡೆದಳೂ॥

ಭಾಗವತರು: ಕೇಳಿದರೇನಯ್ಯ ಭಾಗವತರೇ! ಈ ಪ್ರಕಾರವಾಗಿ ಅರ್ಜುನನ ಪ್ರಾರ್ಥನೆಗೆ ಅಗ್ನಿಯು ಪ್ರಸನ್ನನಾಗಿ ಸುಡುವುದನ್ನು ನಿಲ್ಲಿಸಲೂ ಅದುವರೆಗೆ ವ್ಯಾಪಿಸಿದ್ದ ಉರಿಯನ್ನು ಅರ್ಜುನನು ನಾರಾಯಣಾಸ್ತ್ರದಿಂದ ಪರಿಹರಿಸಿದನಂತರ, ನೀಲಧ್ವಜನು ಅಗ್ನಿಯ ಮಾತಿನ ಪ್ರಕಾರ ಕುದುರೆಯನ್ನು ತಂದು ಪಾರ್ಥನಿಗೆ ಒಪ್ಪಿಸುವುದಕ್ಕಾಗಿ ಪುರಕ್ಕೆ ತೆರಳಿ ಮಂತ್ರಿಯೊಡನೆ ಆಲೋಚಿಸುತ್ತಿರಲು, ಅದನ್ನು ತಿಳಿದ ಜ್ವಾಲೆಯು ತನ್ನ ಕಾಂತನೆಡೆಗೆ ಬಂದು ಇಂತೆಂದಳೈಯ್ಯ ಭಾಗವತರೇ॥