ರಚನೆ ಮತ್ತು ಬರಹ       :           ಎಚ್.ಎಸ್. ಸುಬ್ಬರಾಯಪ್ಪ, ಬಿ,ಎಸ್ಸಿ.,
ಹಣಬೆ ಶ್ರೀಕಂಠಪ್ಪನವರ ಕುಮಾರ
                                                ಜವಳಿ ವ್ಯಾಪಾರಿಗಳು, ಪೊಲೀಸ್ ಸ್ಟೇಷನ್ ಹಿಂಭಾಗ
ದೊಡ್ಡಬಳ್ಳಾಪುರ.

ಆರಂಭ ಮಾಡಿದ್ದು          :           ೨೦೧೦೧೯೬೧

ಸಂಪೂರ್ಣವಾದುದು      :  ೦೮೦೨೧೯೬೨

ಶ್ರೀ ಪ್ಲವನಾಮ ಸಂವತ್ಸರದ ಆಶ್ವಯುಜ ಮಾಸ ಶುದ್ಧ ಏಕಾದಶಿ ಶುಕ್ರವಾರ ಸ್ವಾಹಾದೇವಿ ಪರಿಣಯವೆಂಬ ಕಥೆಯನ್ನು ಬರೆಯುವುದಕ್ಕೆ ಪ್ರಾರಂಭಿಸಿ ಇದೇ ಶ್ರೀ ಪ್ಲವ ನಾಮ ಸಂವತ್ಸರದ ಮಾಘ ಮಾಸ ಶುದ್ಧ ಚೌತಿ ಗುರುವಾರ ಸಂಪೂರ್ಣವಾಗಿದೆ.

 

ಅರಿಕೆ

ಕಂದ

ಭಾರತದೊಳಗೆ ಬರುವ ಚರಿತೆಯ
ಮಾರ ವೈರಿಯ ಭೂರಿ ಕರುಣಾ
ಪಾರ ವಾರಿಧಿ ತಳೆಯುತಾ ಕವಿವರರ ಪದ್ಯಗಳಾ॥
ಸೇರಿ ಸುತ ವಿರಚಿಸುವೆನೀ ಕಥೆ
ಸೂರ‌್ಯ ಚಂದ್ರಮರುಳ್ಳನಕ ಸು
ಸ್ಥಿರವೆನಿಸಲೀ ಕೃತಿಯ ಸಜ್ಜನರರಿತು ತಿದ್ದುವುದೂ॥

ಹರನ ಕರುಣದಿ ರಚನೆ ಗೈದಿಹ
ಯಾರ ವಶದಲ್ಲಿರಲಿ ಪ್ರತಿಯು
ಮರೆಸಿ ಗುಪಿತದಲಿಡದೆ ಕಥೆಯನು ಧರೆಯ ಬುಧಜನರು॥
ಸರಸತರ ನಾಟ್ಯಾಭಿನಯದಿಂ
ವೆರಸಿ ಧಾರುಣಿಯೊಳಗೆ ಪ್ರಕಟಿಸಿ
ಬರೆದ ಶ್ರಮ ಪರಿಹರಿಸಲೆಂದು ಕರವ ಮುಗಿಯುವೆನು॥

ಶ್ಲೋಕ

ವಕ್ರತುಂಡ ಮಹಾಕಾಯ
ಸೂರ್ಯ ಕೋಟಿ ಸಮಪ್ರಭ॥
ನಿರ್ವಿಘ್ನಂ ಕುರು ಮೇ ದೇವ
ಶುಭ ಕಾರ್ಯೇಷು ಸರ್ವದಾ॥

ನೆನಪು

ಕಂದ

ಬಾಲರ್ಕ ನಂದದಿ ತಾ ಹೊಳೆದೂ॥
ಪ್ರಾಣ ಸ್ನೇಹಿತರಾಗಿ ತಾ ಮೆರೆದೂ
ಕಣ್ಮರೆಯಾಗಿ ಪೋಗಿಹರು ಅಂದೂ
ಸುಬ್ಬಣ ಶೆಟ್ಟರ ಆತ್ಮಕಿಂದೂ॥
ಚಿರಶಾಂತಿಯು ನೆಲಸಲಿ ಎಂದೂ
ಹರನು ಸೋಮೇಶ್ವರನ ನೆನೆದೂ
ಭಾರತದೀ ಕಥೆಯ ಕೃತಿಗೈದೂ
ವಿರಚಿಸುವೆ ನಾದರದಿ ಮಣಿದೂ॥

ವಿಘ್ನೇಶ್ವರ ಪ್ರಾರ್ಥನೆ

ಗಜಾನನಂ ಭೂತಗಣಾದಿ ಸೇವಿತಂ ಕಪಿತ್ಥ ಜಂಬೂಫಲ ಸಾರ ಭಕ್ಷಿತಂ
ಉಮಾಸುತಂ ಶೋಕವಿನಾಶ ಕಾರಣಂ ನಮಾಮಿ ವಿಘ್ನೇಶ್ವರ ಪಾದ ಪಂಕಜಂ॥

ಶಾರದಾ ಸ್ತುತಿ

ನಮಸ್ತೇ ಶಾರದಾದೇವಿ ವರದೇ ಭಕ್ತವತ್ಸಲೇ
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ॥

ನಾರಾಯಣ ಸ್ತುತಿ

ವೇದಾನುದ್ಧರತೇ ಜಗನ್ನಿವಹತೇ, ಭೂಗೋಲಮುದ್ಧಿಭ್ರತೇ
ದೈತಾಂದಾರಯತೇ, ಬಲಿಂ ಫಲಯತೆ, ಕ್ಷತ್ರಕ್ಷಯಂ ಕುರ್ವತೇ
ಪೌಲಸ್ತ್ಯಂ ಜಯತೇ, ಹಲಂ ಕಲಯತೇ, ಕಾರುಣ್ಯ ಮಾತನ್ವತೇ
ಮ್ಲೇಛ್ಚಾನ್ಮೂರ್ಛಯತೇ, ದಶಾಕೃತಿಕೃತೇ, ಕೃಷ್ಣಾಯ ತುಭ್ಯಂ ನಮಃ॥

ಗುರುಸ್ತುತಿ

ಗುರುಬ್ರಹ್ಮಾ, ಗುರುರ್ವಿಷ್ಣುಃ, ಗುರುರ್ದೇವೋ ಮಹೇಶ್ವರಃ
ಗುರುಸ್ಸಾಕ್ಷಾತ್ಪರ ಬ್ರಹ್ಮ ತಸ್ಮೈಶ್ರೀ ಗುರುವೇನ್ನಮಃ॥

ದೇವಸ್ತುತಿ

ರಜೋಜುಷೇ ಜನ್ಮನಿ ಸತ್ವವೃತ್ತಯೇ
ಸ್ಥಿತೌ ಪ್ರಜಾನಾಂ ಪ್ರಲಯೇ ತಮೋಸ್ಪಶೇ
ಅಜಾಯ ಸರ್ಗಸ್ಥಿತಿ ನಾಶಹೇತವೇ
ತ್ರಯೀ ಮಯಾಯ ತ್ರಿಗುಣಾತ್ಮನೇ ನಮಃ॥

ಇಷ್ಟದೇವತಾ ಪ್ರಾರ್ಥನೆ

ಪರಮಪುರುಷಾ ಗಿರಿಜೆಯರಸಾ ಸುರಪವಂದ್ಯನೇ
ಉರಗ ಭೂಷಣ ಚರಣ ನಂಬಿದೆ ಪೊರೆಯೋ ದೇವನೆ                     ॥

ಕಾಮಹರನೇ ಸೋಮಧರನೇ ವ್ಯೋಮ ಕೇಶನೇ
ಸಾಮಜಾಸುರ ಹರನೇ ವರನೇ ಭೂಮಿಪಾಲನೇ                           ॥

ಗರಳ ಧರಿಸೀ ಧರೆಯ ಪೊರೆದ ತೆರದಿ ದೇವನೇ
ಹರನೇ ಕೃತಿಗೇ ವರವ ಪಾಲಿಸು ಮಾರಸಂಹರನೇ                        ॥

ಧರಣಿಗಧಿಕಾ ಹಿರಿಯ ಬಳ್ಳಾ ಪುರದ ಒಡೆಯನೇ
ಕರುಣದಿಂದಲೀ ಪೊರೆಯೋ ಯನ್ನ ವರ ಸೋಮೇಶನೇ                 ॥

ಸಭಾ ವಂದನೆ
ದರುವು

ವಾರಣಾಧಿಪ ಮುಖನ ಸ್ಮರಿಸುತಾ
ಶಾರದೆಯನು ಬಿಡದೆ ಭಜಿಸುತಾ
ಭೂರಿ ಭಕ್ತಿ ಭಾವದಿಂದಲಿ ಯೆರಗಿ ಜೈಮಿನಿಗೇ                               ॥

ಶ್ರೀ ವಧೂವಿನ ರಮಣನಾಗಿಹ
ದೇವಪುರದೊಳು ಸ್ಥಿರದಿ ನೆಲೆಸಿಹ
ಧಾವ ಶ್ರೀಪತಿ ಲಕ್ಷ್ಮಿರಮಣನ ಭಾವಿಸೀ ನಮಿಸೇ                            ॥

ಧರೆಯೊಳಧಿಕವಾಗಿ ರಂಜಿಪಾ
ಹಿರಿಯ ಬಳ್ಳಾಪುರದ ಹಣಬೇ
ಸಿರಿ ಕಂಠಪ್ಪನ ವರ ಸುಪುತ್ರನು ಸುಬ್ಬರಾಯಪ್ಪಾ                          ॥

ವಿರಚಿಸಿದನೂ ಯಕ್ಷಗಾನದಿ
ನರಪ ಕುಲಮಣಿ ನೀಲಕೇತುವ
ವರ ಮಹಾಸುತೆ ಸ್ವಾಹಾದೇವಿಯ ಪರಿಣಯದ ಕಥೆಯೂ                 ॥

ಗುರುವು ತುಲಸೀ ರಾಮದಾಸರ
ಚರಣ ಸೇವಕ ರಾಮದಾಸರು
ಒರೆದು ಕಥೆಯನು ಬರೆಯಲೆನಗೇ ದಾರಿ ತೋರಿದರೂ                    ॥

ಗದ್ಯ ಪದ್ಯಾ ರಚನೆ ಗೈಯುವ
ವಿದ್ಯೆ ಪ್ರೌಢಿಮೆಯೊಂದನರಿಯೇ॥
ವಿದ್ಯೆ ದೇವೊಲಿದೊರೆದ ತೆರದೀ ಸದ್ಯ ಪೇಳುವೆನೂ                        ॥

ಹಿರಿಯ ಬಳ್ಳಾಪುರದಿ ನೆಲೆಸಿಹ
ಹರನೂ ಸೋಮೇಶ್ವರನ ಕರುಣದೀ
ಬರೆದ ಕಥೆಯನು ಧರೆಯ ಬುಧಜನ ರರಿತು ತಿದ್ದುವುದೂ॥               ॥

ಆಸ್ತಿಕ ಮಹಾಶಯರಲ್ಲಿ ವಿನಂತಿ: ಸ್ವಾಮೀ- ಪ್ರಥಮತಃ ಗಣಪ ಶಾರದೆಯರನ್ನು ಪ್ರಾರ್ಥಿಸಿ ಗುರುಹಿರಿಯರಿಗೆ ಶಿರಬಾಗಿ ನಮಸ್ಕರಿಸಿ ಶುಕಮುನಿ ಜೈಮಿನಿ ಮಹಾ ಋಷಿಗಳಿಗೆ ವಂದನೆಯಂ ಮಾಡಿ, ಕಾಳಿದಾಸ, ಲಕ್ಷ್ಮೀಶ, ಕುಮಾರವ್ಯಾಸ ಮೊದಲಾದ ಕವಿಕುಲ ತಿಲಕರನ್ನು ಸ್ಮರಿಸೀ, ಹಿರಿಯ ಬಳ್ಳಾಪುರವಾಸ ಶ್ರೀ ಸೋಮೇಶ್ವರನ ಕೃಪಾಕಟಾಕ್ಷದಿಂದ ಶ್ರೀಮದ್ ಮಹಾಭಾರತದ ಅಶ್ವಮೇಧಿಕ ಪರ್ವದೊಳಗಿನ ಸ್ವಾಹಾದೇವಿ ಪರಿಣಯವೆಂಬ ಕಥೆಯನ್ನು ಬಯಲು ನಾಟಕಕ್ಕೆ ಅನುಕೂಲವಾಗುವಂತೆ ಯಕ್ಷಗಾನದಿಂದ ರಚಿಸಿರುತ್ತೇನೆ. ಈ ಕಾರ‌್ಯದಲ್ಲಿ ಸಹಕರಿಸಿದ ಯನ್ನ ಮಿತ್ರಭಾಂಧವರಿಗೆಲ್ಲರಿಗೂ ನನ್ನ ವಂದನೆಗಳನ್ನು ಅರ್ಪಿಸಿ ಅತ್ಯಂತ ಕೃತಜ್ಞನಾಗಿರುತ್ತೇನೆ.

ಮಹನೀಯರಾದ ಈ ಸಭಾ ಜನರು ಮಮತಾವಲಂಬನರಾಗಿ ವೇಷ ಭಾಷೆಗಳಿಂದುಂಟಾಗುವ  ದೋಷ ಪ್ರಮಾದಗಳನ್ನು ಲೇಶವಾದರೂ ಎಣಿಸದೇ ಜಾತರಾದವರಾದ ತೊದಲು ನುಡಿಗಳನ್ನು ಲಾಲಿಸಿ ಪ್ರೀತಿಯನ್ನು ಹೊಂದುವ ತಾತಾ ಮಾತೆಯರಂತೆ ಉತ್ತಮವಾದ ತಮ್ಮ ಹೃತ್ಕಮಲದೋಳ್ ಪ್ರೇರೇಪಿಸಲೆಂದು ಚಿತ್ತಜಾರಿ ಪ್ರಿಯನಾದ ಶ್ರೀಕೃಷ್ಣಪರಮಾತ್ಮನಂ ಕುರಿತು ಪ್ರಮಥದಲ್ಲಿಯೇ ಪ್ರಾರ್ಥಿಸುವೆನು. ಅಲ್ಲದೆ ತಿಳಿದಂಥ ಮಹಾ ಜನರು ಯನ್ನ ತಪ್ಪು  ನುಡಿಯನ್ನು ತಮ್ಮ ಚಿತ್ತಕ್ಕೆ ತಾರದೆ ಪ್ರೋತ್ಸಾಹಿಸಬೇಕಾಗಿ ಪ್ರಾರ್ಥಿಸುವೆನು ಸಭಾಸದರೇ॥

ಬಿನ್ನಪಕಂದ

ಕೆನೆವಾಲಗಡೆದು ನವನೀತಮಂ ತೆಗೆದು ಬಾ ಯ್ಗಿನಿದಾಗಿ
ಸವಿಯದದರೊಳಗೆ ಪುಳಿವಿಡಿದು ರಸವನೆ ಕೆಡಿಸಿದೊಡೆ,
ಕರೆದ ಸುರಭಿಗಪ್ಪುದೇ ಕೊರತೇ, ಕಾವ್ಯಮಂ ಕೇಳ್ದು ಮಥಿಸೀ॥
ಜನಿಸಿದ ಪದಾರ್ಥಮಂ ತಿಳಿದು ನೋಡದೆ ವಿನೂತನ ಕವಿತೆಯೆಂದು
ಕುಂದಿಟ್ಟು ಜರೆದೊಡೆ ಪೇಳ್ದವನೊಳಾವ ದೂಣೆಯಂ,
ಜಾಣ ರಿದ ನರಿದು ಮತ್ಸರವನುಳಿದಾಲಿಸುವುದು॥

ಗಣಸ್ತುತಿ
ದರುವು

ಗಿರಿಜತೆ ವರ ತನಯಾ ಪೊರೆದೀಯೋ ಘನಮತಿಯಾ
ಕರಿವದನಾ ಈ ಕಥೆಗೆ ಕರುಣಿಸು ಮಂಗಳವಾ ಸಂಪದವಾ               ॥

ಭುಜಗ ಭೂಷಣರಾಯ ಭಜಿಸುವೆನು ನಿಮ್ಮಡಿಯಾ
ನಿಜಮತಿಯ ಕೊಡು ಯನಗೆ ಅಜಸುರ ಮುನಿ ವಿನುತಾ, ಪ್ರಖ್ಯಾತ     ॥

ಯತಿಯೂ ಗಣಪ್ರಾಸವನೂ ಹಿತದೀ ನಾನರಿಯೆನೂ
ಮಥಿಸೂ ವಿಘ್ನಗಳನ್ನೂ ಸತತಾ ಗಣನಾಥ ಗುಣಭರಿತಾ                  ॥

ಧರಣಿ ಗಧಿಕಾವಾದ ಹಿರಿಯ ಬಳ್ಳಾಪುರದಾ
ವರ ಸೋಮೇಶನಪುತ್ರ ವರವೀಯೋ ಗಣಪಾ ಹೇ ಗಣಪಾ             ॥

ಭಾಗವತರು: ಶ್ರೀ ಗಿರಿಜೇಶ, ಜಗದೀಶ, ಹಿರಿಯ ಬಳ್ಳಾಪುರ ವರಾಧೀಶ, ಪರಮೇಶ ಶ್ರೀ
ಸೋಮೇಶನ ಪುತ್ರನಾದ ಹೇ ಸ್ವಾಮೀ ವಾರಣಾನನಾ-ತಾವು ಈ ರತ್ನ ಖಚಿತವಾದ ಸಭಾಸ್ಥಾನಕ್ಕೆ ದಯಮಾಡಿಸಿದ್ದರಿಂದ ಇಲ್ಲಿ ನೆರೆದಿರುವ ಸರ್ವ ಮಹಾಜನಗಳಿಗೆಲ್ಲಾ ಆನಂದವಾಯಿತು. ಈಗ ನಾವು ಅಭಿನಯಿಸುವ ಸ್ವಾಹಾದೇವಿ ಪರಿಣಯವೆಂಬ ಯಕ್ಷಗಾನ ನಾಟಕಕ್ಕೆ ಯಾವ ವಿಘ್ನವೂ ಬಾರದಂತೆ ನಿರ್ವಿಘ್ನವನ್ನು ದಯಪಾಲಿಸಿ ತಾವು ಹಿಮಗಿರಿಗೆ ತೆರಳಬಹುದು ಸ್ವಾಮೀ ಗಜಮುಖನೇ- ಮೆರೆವೇಕದಂತನೇ॥

ಶಾರದಾ ಸ್ತುತಿ
ದರುವು

ಅಜನ ಪಟ್ಟದ ರಾಣಿಯೇ ಭುಜಗರಾಜ ವೇಣಿಯೇ
ತ್ರಿಜಗ ವಂದ್ಯೆವಾಣಿಯೇ ಭಜಿಪೆ ಪುಸ್ತಕಪಾಣಿಯೇ॥                        ॥

ಕಮಲ ಉಪಮ ಆಸ್ಯಳೇ ದ್ಯುಮಣಿಕಾಂತಿ ಗಾತ್ರಳೇ
ಅಮರರಾದಿ ಸೇವ್ಯಳೇ ಕಾಮಿತಾರ್ಥದಾನಳೇ॥                            ॥

ಶಾರದಾಂಬೆ ನಿಮ್ಮನೂ ಹರುಷದಿಂದ ಭಜಿಪೆನೂ
ಕರುಣಿಸೀಗ ಮತಿಯನೂ ತೋರಿ ಯನಗೆ ಕೃಪೆಯನೂ॥                 ॥

ಹಿರಿಯ ಬಳ್ಳಾಪುರದೊಳು ವರ ಚಂಡಿಕಾಲಯದೊಳು
ಇರುವ ದೇವಿ ಶಾರದಾ ಪೊರೆಯೇ ಯನ್ನ ಸರ್ವದಾ॥                     ॥

ಹರನು ಗಿರಿಜೆಯರಸನಾ॥ವರವ ಸೋಮನಾಥನಾ
ಸ್ಮರಿಪ ನಿನ್ನ ತರಳನಾ ಪೊರೆಯೆ ದೇವಿ ಅನುದಿನಾ॥                      ॥

ಶಾರದೆ: ಅಹೋ ಸೂತ್ರಧಾರ: ಹೀಗೆ ಬಾ ಮತ್ತೊಂದು ಸಾರಿ ಹೀಗೆ ನಿಲ್ಲು. ಅಯ್ಯ ಚಾರ ಈಗ ಬಂದವರು ಧಾರೆಂದು ಪರಿಪರಿ ಕೃತಾಂಜಲೀ ಬದ್ಧನಾಗಿ ಭೀತಿಯಂ ಪಟ್ಟು ನೀತಿಯಂ ಬಿಡದೆ ಬಹು ನಯ ವಿನಯ ಭಯ ಭಕ್ತಿಗಳಿಂದ ಮಾತನಾಡಿಸುವ ಪಾಮರ ನೀ ಧಾರೋ ಯನ್ನೊಳು ಸಾರೋ. ಅಪ್ಪಾ ಸಾರಥಿ, ಹಾಗಾದರೆ ಯಮ್ಮ ವಿದ್ಯಮಾನವನ್ನು ಪೇಳುತ್ತೇನೆ ಚಿತ್ತವಿಟ್ಟು ಕೇಳೋ ಸಾರಥೀ-ಸಕಲ ಸಂಧಾನಮತೀ॥ಅಯ್ಯ ಸಾರಥಿ, ಅಖಿಲ ಕಾರಣಕರ್ತನೂ ನಿಷ್ಕಾರಣನೂ ಅದ್ಭುತ ಕಾರಣನೂ ಸರ್ವಾಗಮಗಳಿಗೆಲ್ಲಾ ಮಹಾರ್ಣವದಂತೆ ಮೋಕ್ಷ ಸ್ವರೂಪನಾಗಿ ಪಾರಾಯಣನಾದ ನಾರಾಯಣನ ನಾಭೀ ಕಮಲದಲ್ಲಿ ಉದ್ಭವಿಸಿ ಸತ್ಯಲೋಕಕ್ಕೆ ಅಧಿಪತಿಯಾದ ಬ್ರಹ್ಮದೇವರಿಗೆ ಧರ್ಮಪತ್ನಿಯಾದ ಈ ತ್ರಿಜಗದೋಳ್ ಸಕಲ ವಿದ್ಯಾಕರ್ತಳೆಂದೆನಿಸಿ ಯಮ್ಮನ್ನರ್ಚಿಸುವ
ಭಕ್ತರಿಗೆ ಇಷ್ಠಾರ್ಥಮಂ ಪಾಲಿಸುವ ಸರ್ವ ಮಂಗಳೆಯಾದ ಶಾರದಾದೇವಿಯೆಂದು ತಿಳಿಯಪ್ಪಾ ಸಾರಥಿ.

ಅಪ್ಪಾ! ಸೂತ್ರಧಾರ! ಸಲ್ಲಲಿತ ಸುಂದರವಾಗಿ ಕಂಗೊಳಿಸುವ ಈ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ ನೀನು ಯಮ್ಮನ್ನು ಪರಿಪರಿ ವಿಧವಾಗಿ ಪ್ರಾರ್ಥನೆ ಮಾಡಿದ್ದರಿಂದ ಸಂತೋಷ ಭರಿತಳಾಗಿ ಬಂದು ಇರುತ್ತೇನೆ. ನಿನ್ನ ಇಷ್ಟಾರ್ಥವೇನಿದ್ದರೂ ಬೇಡಿಕೊಳ್ಳಬಹುದೈಯ್ಯ ಚಾರ॥

ಸಾರಥಿ: ಅಮ್ಮಾ ಶಾರದಾಂಬ, ಜಗದಾಂಬ ನಾವು ಈ ದಿನ ಅಭಿನಯಿಸುವ ಯಕ್ಷಗಾನ ಸ್ವಾಹಾದೇವಿ ಪರಿಣಯವೆಂಬ ನಾಟಕಕ್ಕೆ ಸರ್ವ ವಿಘ್ನೋಪ ಶಾಂತಿಯಾಗಲೆಂದು ಆಶೀರ್ವಾದವನ್ನು ದಯಪಾಲಿಸ ಬೇಕಮ್ಮಾ ತಾಯೇ- ವರವನ್ನೀಯೇ॥

ಶಾರದೆ: ಅಪ್ಪಾ ಸಾರಥೀ ಈಗ ನೀನು ಅಭಿನಯಿಸುವ ಯಕ್ಷಗಾನ ಸ್ವಾಹಾದೇವಿ ಪರಿಣಯವೆಂಬ ನಾಟಕಕ್ಕೆ ಯಾವ ವಿಘ್ನವೂ ಬಾರದಂತೆ ನಿರ್ವಿಘ್ನವನ್ನು ಕರುಣಿಸಿ ಆಶೀರ್ವದಿಸಿರುತ್ತೇನೆ. ನಾನು ಈ ಭೂಲೋಕಕ್ಕೆ ಬಂದು ಹೇರಳ ಹೊತ್ತಾಯಿತು. ಇನ್ನು ವಿರಂಚಿಯ ಪಟ್ಟಣಕ್ಕೆ ಪೋಗಿ ಬರುತ್ತೇನೈ ಸೂತ್ರಧಾರ- ಮುಂದೆ ನಡೆಯಲಿ ಕಥಾನುಸಾರ॥

ಕಥಾ ಸೂಚನೆ
ದರುವು

ಶ್ರೀ ಮಹಾಭಾರತದ ಕಥೆಯೊಳು
ರಾಮಣೀಯಕವಾಗಿ ಮೆರೆಯುವಾ
ಸೀಮೆ ಮಾಹಿಷ್ಮತಿಯ ನಗರವ ಪ್ರೇಮದಿಂ ಪೊರೆವಾ                      ॥

ಆ ನರಾಧಿಪ ನೀಲಕೇತುವು
ತನ್ನ ಸುತೆಯ ಸ್ವಾಹಾದೇವಿಯ
ಅನಲದೇವನಿಗಿತ್ತು ಪರಿಣಯ ವಿನಯದಿಂದೆಸಗೇ                           ॥

ಅಳಿಯನಾದ ಅಗ್ನಿ ಪುರುಷನು
ಇಳೆಯು ಮಾಹಿಷ್ಮತಿಯ ನಗರದಿ
ಉಳಿದು ಇರ್ದನು ತನ್ನ ಮಾವನ ಕೇಳಿಕೆಯ ತೆರದೀ                       ॥

ಇಂತು ಇರುತಿರಲೊಂದು ದಿನ ಭೂ
ಕಾಂತ ಸುತನೂ ವರ ಪ್ರವೀರನೂ
ಸಂತಸದಿ ಉದ್ಯಾನದೊಳು ನಿಜ ಕಾಂತೆಯ ಒಡನೇ                      ॥

ವಿಹರಿಸುತಲಿರೇ ಧರ್ಮರಾಯರಾ
ಮಹಾಯಾಗದ ಕುದುರೆ ವೃಕ್ಷ ಸ
ಮೂಹ ತುಳಿದೀಡಾಡುತಿರೇ ಸಾಹಸಾದಿಂದಾ                                ॥

ಬಂಧಿಸಲು ತಾ ತುರಗವಾಕ್ಷಣಾ
ಸಂಧಿಸಲು ರಣ ಪಾರ್ಥನೊಡನೇ
ಬಂಧುರದ ಗೆಳೆತನವ ಬೆಳೆಸಿದ ಚಂದದಿಂದಗ್ನಿ                              ॥

ಜ್ವಾಲೆ ತಿಳಿಯುತಾ ಕೆರಳಿ ಕೋಪದಿ
ಆಲಯವನೂ ತ್ಯಜಿಸಿ ಪಾರ್ಥನ
ಮೇಲೆ ತಂತ್ರವನೆಸಗಿ ಶಾಪವ ಛಲದಿ ಕೊಡಿಸಿದಳೂ                      ॥

ಎಂದು ಮುನಿವರ ಜೈಮಿನೀ ಋಷಿ
ಇಂದು ಧರನನು ಭಜಿಸಿ ಮನದೊಳು
ಅಂದು ಜನಮೇಜಯಗೇ ಪೇಳಿದ ಚಂದದೀ ಕಥೆಯಾ॥                   ॥

ಭಾಗವತರು: ಕೇಳಿದರೇನಯ್ಯ ಭಾಗವತರೇ ಈ ಧರಣಿಯೋಳ್ ಅತಿಮನೋಹರವಾಗಿ ರಂಜಿಸುವ ಮಾಹಿಷ್ಮತಿಯ ನಗರದ ಅರಸನಾದ ನೀಲಧ್ವಜನು ತನ್ನ ಸುತೆಯಳಾದ ಸ್ವಾಹಾದೇವಿಗೆ ಯೌವನಾಂಕುರವಾದುದನ್ನು ಅರಿತು ಆತನು ಮೂರು ಲೋಕದಲ್ಲಿ ಶ್ರೇಷ್ಠರಾದವರ ಚಿತ್ರಪಟಗಳನ್ನು  ತರಿಸಿ ಆ ಕುವರಿಗೆ ತೋರಿಸಿ ಮಗಳೇ ಇವರಲ್ಲಿ ನಿನಗೊಪ್ಪಿದವರನ್ನು ವರಿಸು ಎಂದು ಹೇಳಲು, ಆ ಕನ್ಯೆಯು ಯಕ್ಷಗಂಧರ್ವಾದಿಗಳನ್ನೆಲ್ಲಾ. ಅಪಹಾಸ್ಯಮಾಡಿ ಅಗ್ನಿಯನ್ನು ತೋರಿಸಿ ಆತನನ್ನೇ ಮದುವೆಯಾಗುವುದಾಗಿ ತಿಳಿಸಿದ ಸುತೆಯ ಮಾತಿಗೆ; ನೀಲಕೇತುವು, ಆತನು ಸಾಮಾನ್ಯ ಮಾನವರಿಗೆ ದೊರೆಯಲಸಾಧ್ಯನಾಗಿಹನೆಂದು ಹೇಳಿ ಚಿಂತೆಗೊಳಗಾದ ಸಮಯದಲ್ಲಿ, ಸ್ವಾಹಾದೇವಿಯು ಅಲ್ಲಿಂದ ಹೊರಟು ನರ್ಮದಾ ತೀರಕ್ಕೆ ಬಂದು ನದಿಯಲ್ಲಿ ಮಿಂದು ಸುವ್ರತೆಯಾಗಿ ಪಾಪಕನನ್ನು ನಾನಾ ವಿಧವಾಗಿ ಅರ್ಚಿಸಲು ಆಕೆಯ ಭಕ್ತಿಗೆ ಮೆಚ್ಚಿದ ಅಗ್ನಿ ಪುರುಷನು ಬಂದು ಆಕೆಯ ಮನೋರಥದಂತೆ ಅವಳನ್ನು ಪಾಣಿಗ್ರಹಣ ಮಾಡಿಕೊಂಡು, ತನ್ನ ಮಾವನಾದ ನೀಲಧ್ವಜನ ಮನೋಭಿಪ್ರಾಯದಂತೆ ಮಾಹಿಷ್ಮತೀ ನಗರದಲ್ಲಿಯೇ ಉಳಿದಿರಲು, ಹಸ್ತಿನಾವತಿಯನ್ನಾಳುವಂಥ ಧರ್ಮರಾಯರ ಯಾಗದಶ್ವವು ಆ ಪುರದ ಉಪವನಕ್ಕೆ ಬಂದು ವೃಕ್ಷ ಸಮೂಹವನ್ನು ತುಳಿದು ಹಾಳು ಮಾಡುತ್ತಿರುವ ಸಮಯದಲ್ಲಿ ರಾಜನು ಆ ತುರಗವನ್ನು ಬಂಧಿಸಿ, ಅರ್ಜುನನೊಡನೆ ಕಾದಾಡಿ ಕೊನೆಗೆ ವೈಶ್ವಾನರ ನಿಂದ ಸಖ್ಯವನ್ನು ಬೆಳೆಸಿ ಕುದುರೆಯನ್ನು ಬಿಡಲು, ತನ್ನ ಸತಿಯಾದ ಜ್ವಾಲೆಯು ಪಾರ್ಥನಿಗೆ ಹೆದರಿ ಕುದುರೆಯನ್ನು ಬಿಡಕೂಡದು ಎಂಬ ಮಾತನ್ನು ನಿರಾಕರಿಸಿ, ಕಾಂತೆ ಪ್ರತಿಕೂಲೆಯಾದುದಕ್ಕೆ ಆಕೆಯನು ಜರಿದು ನಿಂದಿಸಲು, ಅವಮಾನಿತಳಾಗಿ ಬಾಳುವುದಕ್ಕಿಂತ ಸಾಯುವುದೇ ಲೇಸೆಂದು ಜ್ವಾಲೆಯು ಗಂಗಾತೀರಕ್ಕೆ ಬಂದು, ಆ ದೇವಗಂಗೆಯನ್ನು ಕೆರಳಿಸಿ, ಪಾರ್ಥನಿಗೆ ಆಕೆಯಿಂದ ಶಾಪವಂ ಕೊಡಿಸಿ, ತಾನು ಅಗ್ನಿ ಪ್ರವೇಶವಂ ಮಾಡಿ, ಅರ್ಜುನನನ್ನು ಕೊಲ್ಲುವ ಕ್ರೂರಾಸ್ತ್ರವಾಗಿ ಬಭೃವಾಹನನ ಬತ್ತಳಿಕೆಯಲ್ಲಿರುತಿರ್ದಳೆಂದು ಜನಮೇಜಯರಾಯನಿಗೆ ಜೈಮಿನೀ ಮಹರ್ಷಿಗಳು ಪೇಳಿದರೈಯ್ಯ ಭಾಗವತರೇ॥

ಕಥಾ ಪ್ರಾರಂಭ

ಮಾಹಿಷ್ಮತೀ ಪುರವರ್ಣನೆ

ದರುವುಜಂಪೆ

ಉಡುರಾಜ ವಂಶಜನೇ ಬಿಡುಮನದ ವೇಧನೆಯಾ
ಕಡು ಮುದದಿ ಪೇಳುವೆನು ಲಾಲಿಸು ಈ ಕಥೆಯಾ ಸತ್ಕಥೆಯಾ         ॥

ಪರಮಾ ಪುಣ್ಯವೂ ಅಹುದು ನಿರುತಾ ಸುಖವು ಇಹುದು
ಭಾರತದ ಕಥೆಯನ್ನು ಹಿತದಿ ಪೇಳ್ದವಗೇ ಕೇಳ್ದವಗೇ                        ॥

ಧರಣೀ ಬೈತಲೆ ಮಣಿಯ ತೆರದಿ ರಾರಾಜಿಸುತಾ
ತೋರುತ್ತಾಲಿಹುದೈಯ್ಯಾ ಮಾಹಿಷ್ಮತಿ ಪುರವೂ ಪಟ್ಟಣವೂ ಆ ಪುರವೂ     ॥

ಥಳಥಳಿಸುವ ಶಿಖರಗಳೂ ಹೊಳೆಯುವ ಕೋಟೆ ತೆನೆಯು
ಗಿಳಿ ಕೋಗಿಲೆ ತುಂಬೀ ತುಳುಕಾಡುವ ವನವೂ ಉಪವನವೂ           ॥

ಇಂತಪ್ಪಾ ಪುರದೊಳು ಭೂ ಕಾಂತ ನೀಲಧ್ವಜನೂ
ಕಾಂತೇ ಜ್ವಾಲೆಯ ಕೂಡಿ ಅ ನಂತ ಸುಖದಿಹನೂ ತಾನಿಹನೂ          ॥

ಧರಣಿಯೋಳ್ ಹಿರಿಬಳ್ಳಾ ಪುರದಾ ಸೋಮೇಶ್ವರನಾ
ಸ್ಮರಿಸೀ ಮಂತ್ರಿಯ ಕರೆಸೀ ಕಾರ‌್ಯವ ಬಿತ್ತರಿಸೀ ವಿಸ್ತರಿಸೀ          ॥

ಭಾಗವತರು: ಈ ಪ್ರಕಾರವಾಗಿ ಮಾಹಿಷ್ಮತೀ ಪುರದರಸನಾದ ನೀಲಧ್ವಜನು ತನ್ನ ಮಂತ್ರಿಯೊಡನೆ ಇಂತೆಂದನೈಯ್ಯ ಭಾಗವತರೇ॥

(ನೀಲಧ್ವಜ ಬರುವಿಕೆ)

ತೆರೆದರುವು

ಭೂಮಿರಮಣೀ ಭೂಷಣಂದದೀ
ರಮಣೀಯವಾದ
ಸೀಮೆ ಮಾಹಿಷ್ಮತಿಯ ನಗರದೀ                                                ॥

ಸುರಪನಂತೆ ರಾಜ್ಯಭಾರವೂ
ರಾರಾಜಿಸುತ್ತಾ
ಮೆರೆಯುತಿರುವ ನೀಲಕೇತುವೂ                                                ॥

ಮುತ್ತು ರತ್ನ ವಜ್ರ ಕೆತ್ತಿದಾ
ಕಿರೀಟವನ್ನು
ನೆತ್ತಿಯಲ್ಲಿ ತಾನು ಧರಿಸಿದಾ                                                      ॥

ಹಿರಿಯ ಬಳ್ಳಾಪುರ ನಿವಾಸನೂ
ಶ್ರೀ ಸೋಮಧರನಾ
ಸ್ಮರಿಸುತಾಗ ನೃಪನು ಬಂದನೂ                                               ॥

ಪೀಠಿಕೆ: ಯಲಾ ಚಾರ, ಹೀಗೆ ಬಾ ಮತ್ತೂ ಒಂದು ಸಾರಿ ಹೀಗೆ ನಿಲ್ಲು. ಭಲಾ ಮಾನುಷ್ಯನೇ ದಿನಕರನಂತೆ ಪ್ರಕಾಶಿಸುವ ಈ ಕನಕಮಯ ಸಭಾ ಮಂದಿರಕ್ಕೆ ಸಿಂಧ ಸೀಗುರಿ ಪತಾಕೆಗಳಿಂದ, ನಭೋ ಮಂಡಲಂ ಮೀರಿದ ಬಿಂಕದಿಂದ ಮುಸಲ ಮುದ್ಗರ ಬಿಲ್ಲು ಬಾಣ ಬತ್ತಳಿಕೆ ಇವೇ ಮೊದಲಾದ ಆಯುಧಗಳನ್ನು ಕರ ಸರೋಜ ಯುಗಳದಲ್ಲಿ ಧರಿಸಿ ಮಿತ್ರರಂ ಮನ್ನಿಸಿ, ಹೆಚ್ಚಿದವರ ಕೆಚ್ಚನ್ನು ಮುರಿದು, ಅರಿಕುಲವೆಂಬ ಕರಿ ಸಮೂಹಕ್ಕೆ ಕೇಸರಿಯಂತೊಪ್ಪುವಾ, ಯನ್ನನ್ನು ನಯ ವಿನಯಗಳಿಂದ ಮಾತನಾಡಿಸುವ ನೀತಿ ಚತುರ ನೀ ಧಾರೋ ಯನ್ನೊಳು ಸಾರೋ॥

ಭಲಾ ಸಾರಥೀ, ಹಾಗಾದರೆ ಯಮ್ಮ ವಿದ್ಯಮಾನವನ್ನು ಪೇಳುತ್ತೇನೆ ಸ್ವಸ್ಥಿರದಿಂದ ಕೇಳೋ ಸಾರಥೀ- ಸಕಲ ಸಂಧಾನಮತಿ॥

ಸ್ವರ್ಗ ಮರ್ತ್ಯ ಪಾತಾಳಾದಿ ತ್ರಿಭುವನದೋಳ್ ಬಂಧುರವಾಗಿ ಚೆಂದದಿಂದೊಪ್ಪುವಾ ಆಳವಾದ ಅಗಳುಗಳು. ಗಗನ ಚುಂಬಿಸುವ ಕೋಟೆ ತೆನೆಗಳೂ ಪಚ್ಚೆಗಳಿಂದ ಮಾಡಿದ ತೋರಣಗಳೂ ಬಂಗಾರದ ಉಯ್ಯಲೆಗಳು ಇಂದ್ರನೀಲಮಣಿಮಯ ಜಗುಲಿಗಳೂ. ಮುತ್ತುಗಳ ಮಹಡಿಗಳಿಂದಲಂಕೃತವಾಗಿ ನಂದನ ವನಕ್ಕಿಮ್ಮಿಗಿಲಾದ ಉಪವನಗಳಿಂದ ಕೂಡಿ ಅಶ್ವಘೋಷ, ಗಜಝೇಂಕಾರಗಳಿಂದುದ್ಯುಕ್ತವಾಗಿ  ದೇವಗಂಗೆಗೆ ಸರಿಸಮನೆನಿಸುವ ನರ್ಮದಾ ತೀರದಲ್ಲಿ ಅಖಿಲ ವೈಭವಗಳಿಂದ ಶೋಭಿಸುತ್ತಿರುವ ಮಾಹಿಷ್ಮತಿ ಪಟ್ಟಣವನ್ನು ಬಹು ನಿಷ್ಠೆಯಿಂದ ಪರಿಪಾಲಿಸುವ ನೀಲಧ್ವಜ ಭೂಪಾಲನು ಬಂದು ಇದ್ದಾನೆಂದು ತಿಳಿಯೋ ಚಾರ – ಇದೇ ಯನ್ನ ವಿಚಾರ॥

ಭಲಾ ಸಾರಥೀ ಈ ವರ ಸಭೆಗೆ ನಾನು ತೆರಳಿದ ಪರಿಯಾಯವೇನೆಂದರೆ ಪ್ರಧಾನರೋಳ್ ಶ್ರೇಷ್ಠನಾದ ಸತ್ಯಕೀರ್ತಿಯನ್ನು ಕಾಣುವ ಉದ್ದಿಶ್ಯ ಬಾಹೋಣವಾಯ್ತು. ಅತಿ ಜಾಗ್ರತೆ ಕರೆಸೋ ಚಾರಕಾ- ಯನ್ನ ಆಜ್ಞಾಧಾರಕ॥