ಹಂಗಾಮು ಎಂದರೆ ಹವಾಮಾನ. ಬೆಳೆಗಳ ಆರೋಗ್ಯ, ಕೀಟ ಬಾಧೆ, ಕಳೆ- ಕಸ ನಿರ್ವಹಣೆ, ಕೊಯ್ಲು ಮತ್ತು ಒಕ್ಕಣೆಗೆ ಹಂಗಾಮಿಗನುಸರಿಸಿ ಬೆಳೆ ಮಾಡಬೇಕಾದ ಅವಶ್ಯಕತೆ ಇದೆ. ಹಂಗಾಮುಗಳಲ್ಲಿ ಎರಡು ವಿಧ. ಒಂದು ಮುಂಗಾರು, ಮತ್ತೊಂದು ಹಿಂಗಾರು. ಮುಂಗಾರು ಹಂಗಾಮು ಮಳೆಗಾಲ. ಹಿಂಗಾರು ಹಂಗಾಮು ಚಳಿಗಾಲ. ಕಾಲ, ಋತುಮಾನಕ್ಕನುಗುಣವಾಗಿ ತಲೆತಲಾಂತರದಿಂದಲೂ ರೈತರು ಬೆಳೆ ಮಾಡುತ್ತ ಬಂದಿದ್ದಾರೆ. ಹಸಿರು ಕ್ರಾಂತಿಯ ತರುವಾಯ ಹಂಗಾಮಿಗನುಸರಿಸಿ ಬೆಳೆ ಮಾಡುವ ವಿಧಾನ ಕಣ್ಮರೆಯಾಗಿದೆ.

ಹೈಬ್ರಿಡ್ ತಳಿಯ ಬೀಜಗಳಿಗೆ ಹಂಗಾಮಿನ ಹಂಗಿಲ್ಲ. ಜವಾರಿ ತಳಿಯ ಬೀಜಗಳನ್ನು ಹಂಗಾಮಿಗನುಸರಿಸಿ ಬೆಳೆ ಮಾಡುವುದು ಅನಿವಾರ್ಯ. ಕೃಷಿಯಲ್ಲಿ ಆಗಿರುವ ಆಧುನಿಕ ಆವಿಷ್ಕಾರಗಳು ವೈಜ್ಞಾನಿಕ ಕೃಷಿಯ ಹೆಸರಲ್ಲಿ ಪರಂಪರಾಗತ ಕೃಷಿಯನ್ನು ಹಾಳುಮಾಡಿವೆ. ಆದರೂ, ನಮ್ಮ ಕೃಷಿ ಹಂಗಾಮುಗಳನ್ನೇ ಅವಲಂಬಿಸಿದೆ. ‘ಹದ ನೋಡಿ ಹರಗುವುದು’ ಎಂದರೆ ಭೂಮಿಯ ಮಣ್ಣಿನ ಹದ ನೋಡಿ ಗಳೆ ಹೊಡೆಯುವ, ಬಿತ್ತುವ ಮತ್ತು ಎಡೆ- ಕುಂಟೆ ಹೊಡೆಯುವ ಕೃಷಿ ಕಾರ್ಯ ಮಾಡಬೇಕು. ಬಿತ್ತುವ ಕಾರ್ಯಕ್ಕೆ ಹದ ಮತ್ತು ಬೆದೆ ನೋಡುವುದು ಅವಶ್ಯಕ. ಅದೇ ರೀತಿ ಹಂಗಾಮು ಮಹತ್ವದ್ದಾಗಿದೆ.

ಜೂನ್ ತಿಂಗಳಿನಲ್ಲಿ ಮುಂಗಾರು ಹಂಗಾಮು ಆರಂಭವಾಗುತ್ತದೆ. ಮಾನ್ಸೂನ್ ಮಳೆಯು ಮುಂಗಾರು ಹಂಗಾಮಿನಲ್ಲಿ ಸುರಿಯುತ್ತದೆ. “ರೋಣಿ(ರೋಹಿಣಿ) ಮಳೆಗೆ ಓಣೆಲ್ಲಾ ಕಾಳು…” ಎಂಬ ಮಾತು ಪ್ರಚಲಿತದಲ್ಲಿದೆ. ಅಂದರೆ; ಮುಂಗಾರು ಬಿತ್ತನೆ ರೋಹಿಣಿ ಮಳೆಯ ಸಂದರ್ಭದಲ್ಲಿ ಆರಂಭವಾಗುವುದು. ಮುಂಗಾರುನಲ್ಲಿ ಸಾಮಾನ್ಯವಾಗಿ ಹೆಸರು, ಸಾವೆ, ಶೇಂಗಾ, ಸೋಯಾ ಅವರೆ, ನವಣೆ, ಸಜ್ಜೆ, ಹೈಬ್ರಿಡ್ ಜೋಳ ಮತ್ತು ಉದ್ದು ಮೊದಲಾದ ಬೆಳೆ ಮಾಡಲಾಗುತ್ತದೆ.

ಮಲೆನಾಡು ಪ್ರದೇಶದಲ್ಲಿ ಮುಂಗಾರುನಲ್ಲಿ ಭತ್ತ ಮತ್ತು ರಾಗಿಯನ್ನು ಸಾಮಾನ್ಯವಾಗಿ ಬೆಳೆಯಲಾಗುತ್ತದೆ. ಭತ್ತಕ್ಕೆ ಹೆಚ್ಚು ಮಳೆ ಬೇಕಾದ್ದರಿಂದ ಮುಂಗಾರು ಹಂಗಾಮು ಹೆಚ್ಚು ಸೂಕ್ತ. ಹತ್ತಿಯನ್ನು; ಅದರಲ್ಲೂ ಜವಾರಿ ಹತ್ತಿಯನ್ನು ಹಿಂಗಾರುನಲ್ಲೇ ಬೆಳೆಯಲಾಗುತ್ತಿತ್ತು. ಆದರೆ, ಹೈಬ್ರಿಡ್ ತಳಿ ಹತ್ತಿಯನ್ನು ಇತ್ತೀಚೆಗೆ ಮುಂಗಾರು ಹಂಗಾಮಿನಲ್ಲೇ ಬೆಳೆಯಲಾಗುತ್ತಿದೆ. ರಾಜ್ಯದ ಬಹುತೇಕ ಪ್ರದೇಶದಲ್ಲಿ ಮುಂಗಾರುನಲ್ಲಿ ಬಿತ್ತಿದ ಬೆಳೆಯನ್ನು ಕಟಾವು ಮಾಡಿ, ಮತ್ತೆ ಗಳೆ ಹೊಡೆದು ಹಿಂಗಾರು ಬೆಳೆ ಮಾಡಲಾಗುತ್ತಿದೆ.

ಇನ್ನೂ ಕೆಲವು ಪ್ರದೇಶದಲ್ಲಿ ಮುಂಗಾರು, ಇಲ್ಲವೆ ಹಿಂಗಾರುನಲ್ಲಿ ಒಂದು ಹಂಗಾಮಿನಲ್ಲಿ ಮಾತ್ರ ಬೆಳೆ ಮಾಡಲಾಗುತ್ತದೆ. ಕಡುಗಪ್ಪು(ಎರೆ) ಜಮೀನಿನಲ್ಲಿ ಹಿಂಗಾರುನಲ್ಲಿ ಒಂದೇ ಬೆಳೆ ಮಾಡಲಾಗುತ್ತದೆ. ಇನ್ನೂ ಕೆಲವು ಕಡೆ ಮುಂಗಾರುನಲ್ಲಿ ಬಿತ್ತಿದ ಬೆಳೆಯ ನಡುವೆಯೇ ಹಿಂಗಾರು ಹಂಗಾಮಿನಲ್ಲೂ ಬೆಳೆ ಬೆಳೆಯಲಾಗುತ್ತದೆ. ಜವಾರಿ ಜೋಳದಲ್ಲಿ ಅಕ್ಕಡಿ ಬೆಳೆಯಾಗಿ ತೊಗರಿಯನ್ನು ಹಿಂಗಾರು ಹಂಗಾಮಿನಲ್ಲಿ ಬೆಳೆಯುತ್ತಾರೆ. ಅದೇ ರೀತಿ ಮುಂಗಾರು ಬೆಳೆಯಾದ ಸಾವೆಯ ಸಾಲಿನ ನಡುವೆ ಸಾವೆ ಹೊಡೆ ಹಾಕುವ ಮೊದಲು ಹುರುಳಿಯನ್ನು ಹಿಂಗಾರು ಬೆಳೆಯಾಗಿ ಬೆಳೆಯುತ್ತಿದ್ದರು. ಇತ್ತೀಚೆಗೆ ರೈತರು ಹಾಗೆ ಮಾಡದೆ, ಸಾವೆಯ ಜೊತೆಗೇ ತೊಗರಿಯನ್ನು ಅಕ್ಕಡಿ ಬೆಳೆಯಾಗಿ ಹಿಂಗಾರುನಲ್ಲಿ ಬೆಳೆಯುತ್ತಿದ್ದಾರೆ.

ಹಿಂಗಾರು ಹಂಗಾಮು ಅಕ್ಟೋಬರಿನಲ್ಲಿ ಆರಂಭವಾಗುತ್ತದೆ. ಮುಂಗಾರು ಬೆಳೆಗಳು ಕಟಾವಾಗಿ ಉಳುಮೆ ಮಾಡಿದ ನಂತರ ಹಿಂಗಾರು ಮಳೆ ಚೆನ್ನಾಗಿ ಆದರೆ ಹಿಂಗಾರು ಬೆಳೆಗಳು ಚೆನ್ನಾಗಿ ಬೆಳೆಯುತ್ತವೆ. ಸಾಮಾನ್ಯವಾಗಿ ಮುಂಗಾರುನಲ್ಲಿ ಹೆಸರು ಬಿತ್ತಿದ ಹೊಲಕ್ಕೆ, ಜೋಳ ಬಿತ್ತಿದರೆ ಚೆನ್ನಾಗಿ ಬೆಳೆಯುತ್ತದೆ. ಶೇಂಗಾ ಅಥವಾ ಸೋಯಾ ಬಿತ್ತಿದ ಹೊಲಕ್ಕೆ ಗೋಧಿಯನ್ನು ಬಿತ್ತುತ್ತಾರೆ. ಜೈಧರ ಹತ್ತಿಯನ್ನು ಮೊದಲು ಮುಂಗಾರುನಲ್ಲಿ ಶೇಂಗಾ ಬಿತ್ತಿದ ಸಾಲಿನ ನಡುವೆ ಬಿತ್ತಿದರೆ, ಹಿಂಗಾರುನಲ್ಲಿ ಚೆನ್ನಾಗಿ ಬೆಳೆ ಬರುತ್ತದೆ. ಕೆಲವು ಕಡೆ ಮೆಣಸಿನ ಗಿಡದ ಸಾಲಿನ ನಡುವೆ ಜೈಧರ ಹತ್ತಿ ಬಿತ್ತುತ್ತಾರೆ.

ಹಿಂಗಾರು ಬೆಳೆಗಳಲ್ಲಿ ಗೋಧಿ, ಜೋಳ ಜವಾರಿ ಮತ್ತು ಹವಾದ ಜೋಳ(ಬಿಜಾಪುರ ಜೋಳ), ಕಡಲೆ, ಕುಸುಬೆ, ತೊಗರಿ, ಹತ್ತಿ, ಅವರೆ, ಅಗಸೆ, ಸಾಸಿವೆ, ಎಳ್ಳು, ನವಣೆ ಪ್ರಮುಖವಾಗಿವೆ. ಕುಸುಬೆಯನ್ನು ಗೋಧಿ ಮತ್ತು ಕಡಲೆ ಬೆಳೆಯಲ್ಲಿ ಅಕ್ಕಡಿ ಬೆಳೆಯಾಗಿ ಬೆಳೆಯಲಾಗುತ್ತಿದೆ. ಹಂಗಾಮಿಗನುಸರಿಸಿ ಬೆಳೆ ಮಾಡುವಲ್ಲಿ ವೈವಿಧ್ಯಮಯ ಬೆಳೆ ಮಾಡುತ್ತಿರುವುದು ಗಮನಾರ್ಹ ಸಂಗತಿ. ಏಕದಳ ಧಾನ್ಯ ಮತ್ತು ದ್ವಿದಳ ಧಾನ್ಯಗಳ ಮಿಶ್ರಬೆಳೆ ಸಂಗಾತಿ ಬೆಳೆ ಆಗಿವೆ. ಹಿಂಗಾರು ಬೆಳೆಗಳು ಚಳಿಗಾಲದ ಬೆಳೆಗಳಾಗಿವೆ. ಬಿತ್ತನೆ ಮಾಡುವಾಗ ಕೇವಲ ಮೊಳಕೆಯೊಡೆಯಲು(ನಾಟಲು) ಮಣ್ಣಿನಲ್ಲಿ ತೇವಾಂಶ ಇದ್ದರೆ ಸಾಕು. ತಂಪು ಹವೆಯ ಮೂಲಕ ಹಿಂಗಾರು ಬೆಳೆಗಳು ಚೆನ್ನಾಗಿ ಬೆಳೆಯುತ್ತವೆ.

ಉತ್ತರಿ ಮತ್ತು ಹಸ್ತ ಮಳೆಗಳು ದೊಡ್ಡ(ಅಡ್ಡ) ಮಳೆಗಳಾಗಿದ್ದು, ಈ ಮಳೆ ಚೆನ್ನಾಗಿ ಸುರಿದರೆ ಹೊಲಗಳು ಹಸಿಯಾಗುತ್ತವೆ. ಈ ಮಳೆಯಿಂದ ಹಿಂಗಾರು ಹಂಗಾಮು ಆರಂಭವಾಗುತ್ತದೆ. ಉತ್ತರಿ ಮಳೆ ಹುಸಿಯಾಗಲಾರದು, ಅದು ರೈತರಿಗೆ ಭಾಷೆ ಕೊಟ್ಟ ಮಳೆ ಆಗಿದೆ. “ಉತ್ತರಿ ಹುಸಿಯಾದರೆ ಸತ್ಯರು ಹುಸಿಯಾಡಿದರೆ ಜಗವಿನ್ನೆತ್ತ ಬಾಳುವುದು?” ಎಂದು ಸರ್ವಜ್ಞ ಕವಿ ಕೇಳಿದಂತೆ ಉತ್ತರಿ ಮಳೆಯಾದರೆ, ಹಿಂಗಾರು ಬೆಳೆಗಳು ವಿಫಲ ಆಗಲಾರವು. ಹಿಂಗಾರು ಬೆಳೆ ರೈತರಿಗೆ ಲಾಭದಾಯಕ.

ಲಾಭದಾಯಕ ಹಿಂಗಾರು

ಮುಂಗಾರು ಬೆಳೆಗಳಿಗಿಂತ ಹಿಂಗಾರು ಬೆಳೆಗಳು ಆರೋಗ್ಯಪೂರ್ಣವಾಗಿರುತ್ತವೆ. ರೋಗ ಮತ್ತು ಕೀಟದ ಬಾಧೆ ಕಡಿಮೆ. ಕಳೆ- ಕಸಗಳ ಕಾಟವೂ ಕಡಿಮೆ. ಕೃಷಿ ಕೂಲಿಕಾರರ ಕೊರತೆಯಾದಾಗ್ಯೂ, ಹಿಂಗಾರು ಬೆಳೆ ಮಾಡಲು ತೊಂದರೆಯಾಗದು. ಹೀಗಾಗಿ ಬೇಸಾಯದ ವೆಚ್ಚ ಕೂಡ ಕಡಿಮೆಯಾಗುವುದು. ಕೊಯ್ಲು, ಒಕ್ಕಣೆ ಮಾಡಲು ಹಿಂಗಾರು ಹವೆಯು ಅನುಕೂಲಕರವಾಗಿರುತ್ತದೆ. ಹಿಂಗಾರು ಬೆಳೆಗಳನ್ನು ನವೆಂಬರ್ ಎರಡನೆ ವಾರದ ಒಳಗೆ ಬಿತ್ತನೆ ಮಾಡಿ ಮುಗಿಸಬೇಕು.

ಹಿಂಗಾರು ಬೆಳೆಗಳು ಬೆಳೆದು ದೊಡ್ಡದಾಗುತ್ತಿದ್ದಂತೆ ವಿಶಾಖ ಮಳೆ ಆಗುತ್ತದೆ. ಈ ಮಳೆಯ ಹನಿಗಳು ವಿಷಪೂರಿತವಾಗಿರುತ್ತವೆ ಎಂಬ ನಂಬಿಕೆ ರೈತರಲ್ಲಿದೆ. ಆದ್ದರಿಂದ ಈ ಮಳೆ ಸುರಿದರೆ ಕೀಟಗಳು ಸಾಯುತ್ತವೆ ಎಂಬ ಮಾತಿದೆ. ಅದೂ ಅಲ್ಲದೆ ಆ ಸಂದರ್ಭದಲ್ಲಿ ಶುಭ್ರ ನೀಲಾಕಾಶವಿದ್ದು, ಚಳಿ ಹವೆ ಇರುವುದರಿಂದ ಕೀಟಗಳ ವಂಶಾಭಿವೃದ್ಧಿಗೆ ತಡೆಯಾಗಿ ಕೀಟಬಾಧೆ ಆಗಲಾರದು. ಪದೇ- ಪದೇ ಮಳೆ ಸುರಿಯದಿರುವುದರಿಂದ ಕಳೆ- ಕಸ ಕೂಡ ಕಡಿಮೆ ಇರುತ್ತದೆ. ಒಂದೆರಡು ಸಲ ಎಡೆಕುಂಟೆ(ಮಧ್ಯಂತರ ಬೇಸಾಯ) ಹೊಡೆದರೆ ಕಳೆ- ಕಸ ನಿರ್ವಹಣೆ ಸುಲಭ.

ಕಡಲೆ, ಕುಸಬೆ, ತೊಗರಿ ಮತ್ತು ಹತ್ತಿ ಕಾಯಿಗಳು ಚಳಿಯ ವಾತಾವರಣದಲ್ಲಿ ಚೆನ್ನಾಗಿ ಬಲಿಯುತ್ತವೆ. ಈ ಕಾಯಿಗಳನ್ನು ಕೊರೆಯುವ ಕೀಟದ ಹಾವಳಿಯೂ ಕಡಿಮೆ ಆಗುವುದು. ಜೋಳದ ತೆನೆ ರಸ ಹೀರುವ ಹೇನು, ನುಸಿಯಂತಹ ಸಣ್ಣ ಕೀಟಗಳ ಹಾವಳಿ ಆಗುವುದಿಲ್ಲ. ಇದರಿಂದ ಜೋಳದ ಕಾಳು ರಸದುಂಬಿ ಗಟ್ಟಿ ಕಾಳುಗಳಾಗುತ್ತವೆ. ಜೋಳ ಕಾಳುಗಟ್ಟುವ ಸಂದರ್ಭದಲ್ಲಿ ಮಳೆ ಇಲ್ಲದಿರುವುದರಿಂದ ಜೋಳದ ಕಾಳು ಬಣ್ಣಗುಂದದೆ ಮುತ್ತಿನಂಥ ಕಾಳುಗಳಾಗುತ್ತವೆ.

ಮುಂಗಾರು ಹಂಗಾಮಿನ ಬೆಳೆಗಳಂತೆ ಮಳೆಯ ಕಾಟ ಹಿಂಗಾರು ಬೆಳೆಗೆ ಇಲ್ಲದಿರುವುದರಿಂದ ಗೋಧಿ ಹೊಟ್ಟು, ಜೋಳದ ಕಣಿಕೆ ತೊಯ್ಯದೆ ದನಗಳಿಗೆ ತಿನ್ನಲು ಉತ್ತಮ ಮೇವು ದೊರೆಯುತ್ತದೆ. ಚಳಿಗಾಲದಲ್ಲಿ ಮಂಜು, ಇಬ್ಬನಿ ಕಡಿಮೆ ಇದ್ಗದರೆ, ಬೆಳೆಗಳಿಗೆ ರೋಗದ ಬಾಧೆ ಆಗಲಾರದು. ಹಿಂಗಾರು ಬೆಳೆಗಳ ಕಟಾವಿನ ಸಂದರ್ಭದಲ್ಲಿ ಮಳೆ ಇಲ್ಲದ್ದರಿಂದ ಕೃಷಿ ಕೂಲಿಕಾರರ ಅಭಾವದ ಈ ದಿನಗಳಲ್ಲಿ ಕೊಯ್ಲು, ಒಕ್ಕಣೆ ಹಾಗೂ ಹೊಟ್ಟು ಕಣಿಕೆಯ ಬಣವೆ ಒಟ್ಟಲು ಸಾಕಷ್ಟು ಸಮಯಾವಕಾಶ ಸಿಗುತ್ತವೆ. ಮುಂಗಾರು ಬೆಳೆಗಳಂತೆ ಮಳೆಯ ಒತ್ತಡ ಇಲ್ಲದ್ದರಿಂದಾಗಿ ಒಕ್ಕಣೆ ಮಾಡಲು ತೂರಿ ಸ್ವಚ್ಛ ಮಾಡಿ ರಾಶಿ ಮಾಡಲು ಅನುಕೂಲವಾಗುವುದು.

ಈಗೆಲ್ಲಾ ಡಿಸಿಎಚ್(ಹೈಬ್ರಿಡ್) ತಳಿಯ ಹತ್ತಿಯನ್ನು ಮುಂಗಾರುನಲ್ಲೇ ಬೆಳೆಯಲಾಗುತ್ತಿದೆ. ಇದರಿಂದ ಹತ್ತಿ ಕಾಯಿಗೆ ಕಾಯಿಕೊರಕ ಕೀಟದ ಬಾಧೆ ಹೆಚ್ಚಾಗುವುದು. ಮಳೆಗಾಲ ಹಾಗೂ ಮೋಡ ಕವಿದ ವಾತಾವರಣ ಇರುವುದರಿಂದ ಎಲೆಮುಟುರು ರೋಗ, ಹೇನು- ಸೀನು, ನುಸಿಯಂತಹ ರಸ ಹೀರುವ ಕೀಟಗಳ ಬಾಧೆಯೂ ಹೆಚ್ಚಿರುತ್ತದೆ. ಅದೂ ಅಲ್ಲದೆ ಹತ್ತಿ ಕಾಯಿಗಳು ಬಲಿತಾಗ ಮಳೆಯಾಗುವುದರಿಂದ ಕಾಯಿಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಕಾಯಿ ಒಡೆದು ಹತ್ತಿ ಹೊರಬರಲು ಶುಭ್ರವಾಗಿ ಹತ್ತಿ ಅರಳುವುದಿಲ್ಲ. ಅರಳಿದ ಕಾಯಿಯಿಂದ ಹೊರಬಂದ ಹತ್ತಿಯೂ ಮಣ್ಣು ಮಿಶ್ರವಾಗಿ ಬಣ್ಣಗೆಡುತ್ತದೆ.

ಅದೇ ರೀತಿ ಜೋಳ(ಹೈಬ್ರಿಡ್), ಶೇಂಗಾದಂತಹ ಬೆಳೆಗಳು, ಹೆಸರು, ಉದ್ದು, ಅಲಸಂದೆ, ಸೋಯಾ ಅವರೆಯಂತಹ ಬೆಳೆಗಳು ಮಳೆಗಾಲದಲ್ಲಿಯೇ ಕಟಾವಿಗೆ ಬರುತ್ತವೆ. ಇದರಿಂದಾಗಿ ಕೊಯ್ಲು ಒಕ್ಕಣೆಗೆ ತೊಂದರೆ. ಕೂಲಿಕಾರರ ಅಭಾವದ ಈ ದಿನಗಳಲ್ಲಿ ಯಂತ್ರದ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ. ಹಂಗಾಮಿಗನುಸರಿಸಿ ಬೆಳೆ ಮಾಡದಿರುವುದರಿಂದ ಹಾನಿಯೇ ಹೆಚ್ಚು.

ಹಂಗಾಮಿಗನುಸರಿಸಿ ಬೆಳೆ ಮಾಡುವುದರಿಂದ ರೈತರಿಗೆ ಹಲವು ಪ್ರಯೋಜನಗಳಿವೆ. ಕಳೆಗಳ ನಿಯಂತ್ರಣಕ್ಕೆ ಕಳೆನಾಶಕಗಳ ಬಳಕೆ ಮಾಡಬೇಕಿಲ್ಲ. ರೋಗ, ಕೀಟ ಬಾಧೆಯಿಂದ ಬೆಳೆಗಳ ರಕ್ಷಣೆಗೆ ರಾಸಾಯನಿಕ ಕೀಟನಾಶಕ ಹಾಗೂ ಕ್ರಿಮಿನಾಶಕಗಳ ಬಳಕೆ ಮಾಡಬೇಕಿಲ್ಲ. ಕೃಷಿ ಕೂಲಿಕಾರರ ಅಭಾವದಲ್ಲೂ ಬೆಳೆ ಮಾಡಲು ಅನುಕೂಲತೆ ಇದೆ. ಒಕ್ಕುವ ಯಂತ್ರಗಳ ಅನಿವಾರ್ಯತೆ ಇರಲಾರದು. ಹೈಬ್ರಿಡ್ ಅಥವಾ ಹೈಟೆಕ್ ಕೃಷಿ ಸಲಕರಣೆಗಳ ಅವಶ್ಯಕತೆಯೂ ಇರಲಾರದು. ಬೀಜ, ರಸಗೊಬ್ಬರ, ರಾಸಾಯನಿಕ ಕೀಟನಾಶಕಗಳ ಬಳಕೆಗೆ ದುಬಾರಿ ಬೆಲೆ ತೆರಬೇಕು. ಅದಕ್ಕೆ ಬಂಡವಾಳ ಹೂಡಬೇಕು, ಸಾಲ ಮಾಡಬೇಕು. ಇಂತಹ ಯಾವ ಕಿರಿಕಿರಿಯಿಲ್ಲದೆ ಬೆಳೆ ಮಾಡಿದರೆ ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚ ಕಡಿಮೆ ಆಗುವುದು. ಹೊಲದ ಮಣ್ಣಿನಲ್ಲಿ ಸುಸ್ಥಿರತೆ ಸಾಧ್ಯವಾಗುವುದು. ಪರಿಸರಕ್ಕೆ ಹಾನಿಯಾಗದೆ ಪರಿಸರ ಸ್ನೇಹಿ ಕೃಷಿ ಸಾಧ್ಯವಾಗುವುದು.

ಹವಾಮಾನ ವೈಪರೀತ್ಯದಲ್ಲೂ ಹಂಗಾಮಿಗನುಸರಿಸಿ ಬೆಳೆ ಮಾಡಿದರೆ ಕೃಷಿ ರಂಗದ ಹಲವಾರು ಸವಾಲುಗಳನ್ನು ಸಮರ್ಥವಾಗಿ ಎದುರಿಸಬಹುದಾಗಿದೆ. ಅತಿವೃಷ್ಟಿ ಇರಲಿ, ಅನಾವೃಷ್ಟಿ ಬರಲಿ, ಉಷ್ಣ, ಶೀತ, ತೇವಾಂಶಕ್ಕೆ ತಕ್ಕ ಬೆಳೆ ಮಾಡುವುದರಿಂದ ಮುಂಗಾರು ಹಂಗಾಮಿಗೆ ಮುನ್ನುಡಿ ಬರೆಯಬಹುದಾಗಿದೆ. ಹಿಂಗಾರುನಲ್ಲೂ ಬೆಳೆಗಳು ಯಶಸ್ವಿಯಾಗಿ ಬೆಳೆಯಬಲ್ಲವು. ಹಂಗಾಮಿಗನುಸರಿಸಿ ಮಾಡುವ ಬೆಳೆ ವಿಧಾನಗಳಲ್ಲಿ ವೈಜ್ಞಾನಿಕ ಸಂಗತಿಗಳೂ ಇವೆ. ಅವುಗಳ ಅವಲೋಕನ ಮತ್ತು ಅಳವಡಿಕೆಯತ್ತ ರೈತರು ಗಮನಹರಿಸಬೇಕಿದೆ.