ಜನನ : ೧೫-೮-೧೯೨೭ ರಂದು ಉಡುಪಿಯಲ್ಲಿ

ಮನೆತನ : ಶ್ರೀ ಜಗನ್ನಾಥದಾಸರ ಶಿಷ್ಯ ಪರಂಪರೆಗೆ ಸೇರಿದ ಮನೆತನ. ತಂದೆ ಹಂಡೆ ಶ್ರೀಪಾದದಾಸರು ಹೆಸರಾಂತ ಕೀರ್ತನಕಾರರಾಗಿದ್ದವರು. ತಾಯಿ ರುಕ್ಮಿಣಿದೇವಿ.

ಗುರುಪರಂಪರೆ : ಹರಿಕಥಾ ಶಿಕ್ಷಣ ತಂದೆಯವರಿಂದಲೇ. ಸಂಗೀತ ಶಿಕ್ಷಣ ಉಡುಪಿಯ ದಿ|| ಲಕ್ಷ್ಮೀನಾರಾಯಣ ಭಟ್ಟರು (ಕಾಳುಭಟ್ಟರು) ಅವರಿಂದ ಉತ್ತರಾದಿ -ದಕ್ಷಿಣಾದಿ ಎರಡೂ ಪದ್ಧತಿಯಲ್ಲಿನ ಗಾಯನದಲ್ಲಿ ಪರಿಶ್ರಮವಿದೆ. ಹಾರ್ಮೋನಿಯಂ ನುಡಿಸುವುದರಲ್ಲೂ ಪರಿಶ್ರಮವಿದೆ.

ಕ್ಷೇತ್ರ ಸಾಧನೆ : ತಮ್ಮ ಹತ್ತನೆಯ ವಯಸ್ಸಿನಲ್ಲೇ ಮೊದಲ ಕಾರ್ಯಕ್ರಮ ನೀಡಿ ಹರಿಗುರುಗಳ ಕೃಪೆಗೆ ಒಳಗಾಗಿ ಈಗ ನಾಡಿನ ಪ್ರಸಿದ್ಧ ಕೀರ್ತನಕಾರರಲ್ಲಿ ಒಬ್ಬರೆನಿಸಿದ್ದಾರೆ. ಈಗ ಸುಮಾರು ಆರು ದಶಕಗಳಿಂದಲೂ ರಾಜ್ಯಾದ್ಯಂತ ಸಂಚರಿಸಿ ಕಾರ್ಯಕ್ರಮಗಳನ್ನು ನೀಡಿರುವುದೇ ಅಲ್ಲದೆ ಆಂಧ್ರ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಉತ್ತರ ಭಾರತದ ಹಲವು ಪ್ರಮುಖ ನಗರಗಳಲ್ಲೂ ಕಾರ್ಯಕ್ರಮಗಳನ್ನೂ ನೀಡಿರುತ್ತಾರೆ. ಆಕಾಶವಾಣಿಯ ಹಿರಿಯ ಕಲಾವಿದರು. ಬಾನುಲಿಯ ಹಲವಾರು ಕೇಂದ್ರಗಳಿಂದ ಇವರ ಕಥಾಕೀರ್ತನ ಕಾರ್ಯಕ್ರಮಗಳು ರಾಷ್ಟ್ರಾದ್ಯಂತ ಪ್ರಸಾರಗೊಂಡಿವೆ. ಚೆನ್ನೈನ ಮಾಸ್ಟರ್ ರೆಕಾರ್ಡಿಂಗ್ ಸಂಸ್ಥೆಯ ವತಿಯಿಂದ ಇವರ ಹಲವಾರು ಕಥಾ ಪ್ರಸಂಗಗಳು ಕೀರ್ತನೆ ರೂಪೀ ಧ್ವನಿ ಸುರುಳಿಗಳಾಗಿ ಬಿಡುಗಡೆಯಾಗಿವೆ. ಹದಿನೆಂಟು ಪುರಾಣಗಳನ್ನೂ ಆಳವಾಗಿ ಅಭ್ಯಸಿಸಿ ಹರಿಕಥಾ ರೂಪದಲ್ಲಿ ’ಹರಿಸರ್ವೋತ್ತಮತ್ವ’ವನ್ನು ಜನತೆಗೆ ಉಪದೇಶಿಸುವಲ್ಲಿ ದಾಸರು ಪ್ರಮುಖ ಸ್ಥಾನ ಪಡೆದಿದ್ದಾರೆ.

ಒಂದು ಲಕ್ಷ ಪುಟಗಳಿಗೂ ಮಿಕ್ಕು ಕೀರ್ತನಾಭ್ಯಾಸಿಗಳಿಗೆ ಅನುಕೂಲವಾಗುವಂತೆ ಹಲವಾರು ವಿಚಾರಗಳನ್ನು ತತ್ವಗಳನ್ನು ಸಂಗ್ರಹಿಸಿದ್ದಾರೆ. ಐವತ್ತಕ್ಕೂ ಹೆಚ್ಚು ಸಂಸ್ಕೃತಿ ಪ್ರಚಾರ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಸುಮಾರು ೧೨೦೦ ಪುಟಗಳನ್ನೊಳಗೊಂಡ “ರಾಮಾಯಣ ರಸ ಕಾರಂಜಿ” ಎಂಬ ಉದ್ಗ್ರಂಥ ಪ್ರಕಟವಾಗಿದೆ. ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತಿನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿ – ಪುರಸ್ಕಾರಗಳು : ಉಡುಪಿಯ ಅಷ್ಟ ಮಠಾಧಿಪತಿಗಳಿಂದಲೂ, ಮಾಧ್ವ ಮಠತ್ರಯಗಳಿಂದಲೂ ಇತರ ಮಠ-ಮಾನ್ಯಗಳಿಂದಲೂ ಪುರಸ್ಕೃತರಾಗಿದ್ದಾರೆ. ಉಡುಪಿಯ ಪರ್ಯಾಯ ಪೀಠಸ್ಥ ಯತಿಗಳಿಂದ ಸುವರ್ಣ ಕಡಗವನ್ನು ಪಡೆದಿದ್ದಾರೆ. ಹರಿದಾಸ ರತ್ನ ಕೀರ್ತನಾಲಂಕಾರ, ಧರ್ಮ ಪ್ರಚಾರಕ, ಹರಿದಾಸ ಭೂಷಣ, ಹರಿದಾಸ ಚೂಡಾಮಣಿ, ಕೀರ್ತನ ಕೇಸರಿ, ವ್ಯಾಸರಾಜ ಮಠಾಧೀಶರಿಂದ ’ಆಸ್ಥಾನ ವಿದ್ವಾನ್’ ಪದವಿ ಹೀಗೆ ಹತ್ತು ಬಿರುದು – ಮಾನ್ಯತೆಗಳನ್ನು ಹೊಂದಿರುವ ವೇದವ್ಯಾಸಾಚಾರ್ಯರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೮೪-೮೫ ರ ಸಾಲಿನ ’ಕರ್ನಾಟಕ ಕಲಾ ತಿಲಕ’ ಪ್ರಶಸ್ತಿ ನೀಡಿ ಗೌರವಿಸಿದೆ.