ಅವ್ಯಕ್ತ ಚರಿತ್ರೆ ಬರೆದ ಬೆನ್ನಲ್ಲೆ ಹಂಪಿ ಜೀವಜಾಲ ಜಾನಪದ ಬರೆದ. ಈ ಎರಡೂ ಕೃತಿಗಳು ಒಂದೇ ನೆಲೆಯವಾದರೂ ಅವುಗಳ ಅಂತರಂಗದ ವಿವರಗಳು, ಆಲೋಚನೆಯ ದಾರಿಗಳು ಬೇರೆ ಬೇರೆ. ಜಾನಪದ ಅಧ್ಯಯನಗಳು ಈಗ ಭಾರತದಲ್ಲೇ ಅರ್ಥಾತ್ ಕರ್ನಾಟಕದಲ್ಲಿ ಮಾತ್ರವೇ ವಿಶೇಷ ಆಯಾಮಗಳಲ್ಲಿ ವ್ಯಾಪಕತೆಯನ್ನು ಸಾಧಿಸಿಕೊಳ್ಳುತ್ತಿರುವುದು. ಜಗತ್ತಿನ ಯಾವ ದೇಶಗಳಲ್ಲೂ ಸಾಧ್ಯವಿಲ್ಲದ ಜಾನಪದ ವಿಶ್ವವಿದ್ಯಾಲಯ ಕರ್ನಾಟದಲ್ಲಿ ಮಾತ್ರವೇ ಸಾಧ್ಯವಿದೆ. ಇದು ನಮ್ಮ ನಾಡಿನಲ್ಲಿ ಹೇಗೆ ಜಾನಪದ ಒಂದು ಪ್ರಮುಖ ಜ್ಞಾನ ಪರಂಪರೆಯಾಗಿ ಬೆಳೆದಿದೆ ಎಂಬುದನ್ನು ತೋರುತ್ತದೆ. ಜನಪದಗಳೇ ಜೀವನ ವಿಧಾನಗಳ ಸಮಷ್ಠಿ ವಿಶ್ವವಿದ್ಯಾನಿಲಯಗಳು. ನಾವು ಕಂಡುಕೊಳ್ಳಬಹುದಾದ ಎಷ್ಟೋ ವಿಷಯಗಳಿಗೆಲ್ಲ ಜನಪದ ಪರಂಪರೆಗಳು ಅವ್ಯಕ್ತವಾದ ಜೀವಜಾಲದ ಕೊಂಡಿಗಳನ್ನು ಮೊದಲೇ ಅಳವಡಿಸಿಕೊಂಡು ಜ್ಞಾನ ಪರಂಪರೆಗಳನ್ನು ಮುಂದಿನ ತಲೆಮಾರುಗಳಿಗೆ ಬಿಟ್ಟಿರುತ್ತವೆ. ವಿಜ್ಞಾನಿಗಳು, ಪರಿಸರ ಚಿಂತಕರು ಅದನ್ನೇ ಬೇರೊಂದು ಶಿಸ್ತಿನಿಂದ ವಿಸ್ತರಿಸಿರುತ್ತಾರೆ. ಜೀವಜಾಲ ಜಾನಪದವನ್ನು ಕೇವಲ ಹಳ್ಳಿಗಾಡಿನ ಗತ ಸ್ಮೃತಿ ಎಂದು ಭಾವಿಸದೆ ಸಮಷ್ಠಿ ಜೀವ ದರ್ಶನಗಳ ಬಹುರೂಪಿ ನಿರೂಪಣೆಗಳೆಂದೇ ಆಧುನಿಕೋತ್ತರ ಸಮಾಜಗಳು ಭಾವಿಸಬೇಕು. ಜಾನಪದ ಅಧ್ಯಯನ ಹೀಗಾಗಿಯೇ ಒಂದು ಗತಕಾಲದ ದನಿ ಮಾತ್ರವಲ್ಲ, ಅದು ವರ್ತಮಾನದ ಅಸ್ತಿತ್ವದ ತತ್ತರ ದನಿಯೂ ಹೌದು. ಈ ತತ್ತರ ದನಿ ವ್ಯಾಪಕವಾದುದು. ರೈತರ ಆತ್ಮಹತ್ಯೆಯ ಆರ್ತ ಅಳಲಿನಿಂದ ಬರ್ಬರ ಹಿಂಸಾತ್ಮಕ ವ್ಯಗ್ರತೆಯವರೆಗೂ ಈ ಧನಿ ವ್ಯಾಪಿಸಿಕೊಳ್ಳಬಲ್ಲದು.

ನಮ್ಮ ಪೂರ್ವಿಕರು ಹಲವು ಹಂತಗಳಲ್ಲಿ ಬಿತ್ತನೆ ಮಾಡಿದ ಪರಿಸರವನ್ನು ಆರ್ಥಿಕ ಲೂಟಿತನದ ರಾಜಕಾರಣವು ತನಗೆ ಬೇಕಾದಂತೆ ಬಳಸುತ್ತ ಇಡಿಯಾಗಿ ಜನಪದ ಪರಂಪರೆಗಳನ್ನು ಬಿಸಾಡಲು ಅದಕ್ಕೆ ಯಾವ ಅಧಿಕಾರವೂ ಇಲ್ಲ. ಭ್ರಷ್ಟಗೊಳಿಸುವುದೇ ಅಭಿವೃದ್ಧಿಯ ಸಾಹಸವಾಗಿ ಬಿಟ್ಟಿರುವ ಈ ಕಾಲದಲ್ಲಿ ವಿಕಾಸದ ವಿಸ್ಮಯ ದಿವ್ಯದ ಚಲನೆಯ ವೇಗವೇ ಅಪರಿಮಿತವಾದ ಅವಕಾಶ ಹಾಗು ಪರಿಣಾಮವಾಗಿದೆ. ಇದನ್ನೇ ನಾವು ಆಧ್ಯಾತ್ಮ ವಿಕಾಸ ಎಂದು ಭಾವಿಸಬೇಕಾಗುತ್ತದೆ. ಜನಪದ ಪರಂಪರೆಗಳು ಇಂತಹ ಹಾದಿ ಬೀದಿಗಳಲ್ಲೇ ಕಾಡು ಮೇಡುಗಳಲ್ಲೇ, ಹೊಲಗದ್ದೆಗಳಲ್ಲೇ, ಜೀವಜಾಲದ ದುರ್ಗಮ ತಾವುಗಳಲ್ಲೇ ಬದುಕಿಳಿಯುವ ಜೈವಿಕ ಸಂಸ್ಕೃತಿಯ ವಿರಾಟ್ ಸಾಮಾಜಿಕತೆಯನ್ನು ಸ್ಥಳೀಯ ಜೀವನ ಕ್ರಮಗಳಲ್ಲೇ ವಿಶ್ವಾತ್ಮಕ ನಂಬಿಕೆಗಳನ್ನು ಬಿತ್ತಿ ಬೆಳೆದಿರುವುದು.

ಹಂಪಿಯ ವಿಶ್ವಪರಂಪರೆಯ ಹಳ್ಳಿಗಳ ವ್ಯಾಪ್ತಿಯಲ್ಲಿ ಇಂತಹ ಜೀವಜಾಲ ಜೈವಿಕ ಜೀವನ ವಿಧಾನಗಳು ಹೇಗೆ ರೂಪುಗೊಂಡು ವಿಜಯನಗರ ಸಾಮ್ರಾಜ್ಯದ ಭಾಗವಾಗಿಯೂ ಬದುಕಿ ವರ್ತಮಾನದ ಆಚೆ ತೀರದವರೆಗೂ ಸಂಬಂಧಗಳನ್ನು ಬೆಸೆದುಕೊಂಡಿವೆ ಎಂಬುದನ್ನು ಈ ಕೃತಿಯು ವ್ಯಾಪಕವಾಗಿ ಅವಲೋಕಿಸುತ್ತದೆ. ಪರಂಪರಾಗತ ಜೈವಿಕ ವಿಚಾರಗಳು ಸಂಸ್ಕೃತಿಯ ನಂಬಿಕೆಗಳಾಗಿ ರೂಪಾಂತರಗೊಳ್ಳುವ ಕ್ರಮವು ನಾಳಿನ ಅಸ್ತಿತ್ವದ ಕುರುಹುಗಳನ್ನು ರೂಪಿಸುವ ಒಂದು ಸಮಷ್ಟಿ ವಿಧಾನ. ಹಂಪಿ ವಿಶ್ವಪರಂಪರೆಯ ವ್ಯಾಪ್ತಿಯ ಇಪ್ಪತ್ತೊಂಬತ್ತು ಹಳ್ಳಿಗಳ ನೆಲೆಯ ಜೀವಜಾಲ ಜೈವಿಕ ಜೀವನ ವಿಧಾನಗಳ ಸಂಗತಿಗಳನ್ನು ಇಲ್ಲಿ ಮೊದಲ ಬಾರಿಗೆ ಮಾಹಿತಿ ಹಾಗು ವ್ಯಾಖ್ಯಾನ ನೆಲೆಯ ಜೈವಿಕ ಗ್ರಹಿಕೆಯ ನಿರೂಪಣೆಗಳಿಂದ ದಾಖಲಿಸಲಾಗಿದೆ. ಕುತೂಹಲಕ್ಕೆಂದು ಓದಿಕೊಂಡಿದ್ದ ಜೀವಜಾಲ ವಿಜ್ಞಾನಿಗಳ ಅರಿವು ಜೀವಜಾಲ ಜಾನಪದವನ್ನು ನಿರೂಪಿಸಲು ಸಹಕರಿಸಿದೆ. ಭೂಮಿಯನ್ನು ಆಕಾಶದೃಷ್ಟಿಯಿಂದ  ದಿಟ್ಟಿಸಿದರೆ ಅದೊಂದು ಪುಟ್ಟ, ಜೀವ ಸಾಧ್ಯತೆ. ನಮ್ಮ ಇರುವಿಕೆಯ ಬೃಹತ್ ಸ್ವರೂಪವೇ ಆಕಾಶದ ಕಣ್ಣಳತೆಯ ವಿಹಂಗಮ ಚಲನೆಯಲ್ಲಿ ಬಹಳ ಪುಟ್ಟದಾದುದು. ಹಂಪಿ ಭೂ ಪ್ರದೇಶದ ನೆಲೆಯ ಜೀವಿಗಳ ಜನಪದ ಕಥನಗಳು ಏಕಕಾಲಕ್ಕೆ ವಿಶ್ವಾತ್ಮಕವೂ ಹೌದು ಹಾಗೆಯೇ ಸ್ಥಳೀಯವೂ ಹೌದು. ಹೇಗೆ ಒಂದು ಪುಟ್ಟ ಹಂಪಿಯ ವಿಶ್ವಪರಂಪರೆಯ ತಾಣವು ವಿಜಯನಗರ, ಸಾಮ್ರಾಜ್ಯದ ಚರಿತ್ರೆಯ ಕಾಲಮಾನವನ್ನೂ ಮೀರಿ ವಿಶ್ವಾತ್ಮಕವಾದ ಜೀವನ ಕಥನಗಳನ್ನು ಜೀವಜಾಲದ ಜೊತೆ ರೂಪಿಸಿಕೊಂಡಿವೆ ಎಂಬುದು ಮುಖ್ಯ. ಸಾಮಾನ್ಯ ಎನಿಸುವ ಜನಪದರ ಜೈವಿಕ ನಿರೂಪಣೆಗಳು ಸರಳ ಕಲ್ಪನೆಯಂತಿರುವುದು ನಿಜ. ಅವನ್ನು ಬೇರೊಂದು ಜೈವಿಕ ಸಂವೇದನೆಯಿಂದ ಓದುಗರು ಭಾವಿಸಬೇಕು. ಆ ಮೂಲಕ ವರ್ತಮಾನದ ಜೀವ ಪರಿಸರದ ಸವಾಲುಗಳನ್ನು ಆಲೋಚಿಸಬೇಕು. ಹಂಪಿ ಪರಿಸರದ ಜೀವಜಾಲದ ವಿವರಗಳಿಗೆ ಚಿತ್ರಗಳನ್ನು ಒದಗಿಸುವ ಗೋಜಿಗೆ ಹೋಗಿಲ್ಲ. ಚಿತ್ರಗಳ ಚೌಕಟ್ಟನ್ನು ಮೀರಿದ ಜನಪದರ ನಿರೂಪಣೆಗಳನ್ನು ವಿಶಾಲವಾಗಿಯೆ ಭಾವಿಸಬೇಕಾಗಿದೆ. ಹಂಪಿಯ ಜೀವ ಪರಿಸರದ ಕೆಲವಷ್ಟೇ ಸಂಗತಿಗಳನ್ನಿಲ್ಲಿ ನಿರೂಪಿಸಿರುವೆ. ವ್ಯಾಪಕವಾದ ವೈವಿಧ್ಯ ನೆಲೆಯ ಅಧ್ಯಯನಗಳಿಗೆ ಇನ್ನೂ ಸಾಕಷ್ಟು ಅವಕಾಶಗಳಿವೆ. ಈ ನಿಟ್ಟಿನಲ್ಲಿ ಮುಂದಿನವರಿಗೆ ಈ ಕೃತಿಯು ಒತ್ತಾಸೆಯಾಗಲೆಂದು ಆಶಿಸುವೆನು.

ಇಂತಹ ಒಂದು ಕೃತಿಯನ್ನು ರೂಪಿಸಲು ಅವಕಾಶ ಮಾಡಿಕೊಟ್ಟ ಹಂಪಿ ಪ್ರದೇಶ ಅಭಿವೃದ್ಧಿ ನಿರ್ವಹಣಾ ಪ್ರಾಧಿಕಾರವನ್ನು ನೆನೆಯುತ್ತಲೇ ಈ ಯೋಜನೆಯ ಜವಾಬ್ದಾರಿಯನ್ನು ಈ ಮೊದಲು ನನಗೆ ವಹಿಸಿಕೊಟ್ಟಿದ್ದ ಕುಲಪತಿಗಳಾಗಿದ್ದ ಪ್ರೊ. ಬಿ.ಎ. ವಿವೇಕ ರೈ ಅವರನ್ನೂ, ಸಧ್ಯದ ಕುಲಪತಿಗಳಾದ ಪ್ರೊ. ಡಾ.ಎ. ಮುರಿಗೆಪ್ಪ ಅವರನ್ನೂ, ನನ್ನ ಮಿತ್ರರೂ, ಪ್ರಸಾರಾಂಗದ ನಿರ್ದೇಶಕರೂ, ವಿಶ್ವವಿದ್ಯಾಲಯವ ಕುಲಸಚಿವರೂ ಆದ ಡಾ. ಬೇವಿನಕಟ್ಟಿ ಮಂಜುನಾಥ ಅವರನ್ನೂ ಸ್ಮರಿಸುವೆನು. ಇನ್ನು ಈ ಅಧ್ಯಯನದಲ್ಲಿ ಸಹಕರಿಸಿದ ನೂರಾರು ವಕೃಗಳನ್ನು ಪ್ರಾಂಜಲವಾಗಿ ನೆನೆಯುವೆನು. ಡಿ.ಟಿ.ಪಿ. ಮಾಡಿದ ಜೆ. ಶಿವಕುಮಾರ, ವಿನ್ಯಾಸ ಮಾಡಿದ ಬಿ. ಸುಜ್ಞಾನಮೂರ್ತಿ ಮೊದಲಾದ ಎಲ್ಲರನ್ನು ಗೌರವಿಸುವೆನು.

ಮೊಗಳ್ಳಿ ಗಣೇಶ್
ಕನ್ನಡ ವಿಶ್ವವಿದ್ಯಾಲಯ, ಹಂಪಿ

ತಾ.೧೨.೧೨.೨೦೧೦
ವಿದ್ಯಾರಣ್ಯ