ಯಾವ ಕಾಲದಲ್ಲೂ ಎಲ್ಲ ಸಂಸ್ಕೃತಿಗಳಲ್ಲೂ ವರ್ತಮಾನವು ಪ್ರಧಾನ ಪಾತ್ರ ವಹಿಸಿರುತ್ತದೆ. ವರ್ತಮಾನದ ಒಂದು ತುದಿಯಲ್ಲಿ ಅದರ ಗತವಿದ್ದರೆ ಅದರ ಆಚೆ ತುದಿಯಲ್ಲಿ ಅದರ ನಾಳೆಯೂ ಅಡಗಿರುತ್ತದೆ. ಜನಪದ ಪರಂಪರೆಗಳು ವರ್ತಮಾನವನ್ನು ಬಿಡಿಯಾಗಿ ಎಂದೂ ಭಾವಿಸಿಲ್ಲ. ಜೀವಜಾಲದ ನೈಸರ್ಗಿಕ ಸಂಗತಿಗಳು ಮೊದಲೇ ಅಖಂಡವಾಗಿ ಸಂಸ್ಕೃತಿಗಳಲ್ಲಿ ಬೆರೆತಿರುವಾಗ ವರ್ತಮಾನದ ನಿರೂಪಣೆಗಳು ಜೈವಿಕ ನೆನಪುಗಳನ್ನು ಅವ್ಯಕ್ತವಾಗಿಯೆ ಕೊಂಡೊಯ್ಯಬೇಕಿರುತ್ತದೆ. ಆದರೆ ಬದಲಾವಣೆಗಳು ಜೈವಿಕ ನೆನಪುಗಳನ್ನು ಮಣಿಸಬಲ್ಲವು. ಒಂದು ನಿರ್ದಿಷ್ಟ ಜನವಸತಿಯು ಅದರ ನಿರ್ದಿಷ್ಟ ಜನಪದದಿಂದಲೇ ತನ್ನ ಗತವನ್ನು ವರ್ತಮಾನದಲ್ಲಿ ಪುನರ್ ಸೃಷ್ಟಿಸಿಕೊಳ್ಳುತ್ತದೆ.  ಆ ಒಂದು ಜನಪದವು ತನ್ನ ಮೂಲ ನೆಲೆಯಿಂದ ಅಳಿವಿನ ಅಂಚಿಗೆ ತಲುಪಿದರೆ, ವಲಸೆ ಹೋದರೆ, ಕಣ್ಮರೆಯಾದರೆ, ಅಲೆಮಾರಿಯಾದರೆ ಅದರ ಜೀವಜಾಲದ ಜೈವಿಕ ಜಾನಪದ ಕೂಡ ಅದೇ ಬಗೆಯಲ್ಲಿ ಛಿದ್ರವಾಗಿ ಅಪೂರ್ಣವಾಗುತ್ತ ಅಸ್ಪಷ್ಟವಾಗುತ್ತದೆ. ಜನಪದಗಳು ತಮ್ಮ ವಾಸದ ನೆಲೆಯಿಂದಲೇ ಜೈವಿಕ ಜಾನಪದವನ್ನು ಕಂಡಿರುವುದು.ಧೀರ್ಘಕಾಲೀನ ವಾಸದ ನೆಲೆಗಳು ಗ್ರಾಮ ಪರಂಪರೆಯ ಹಲವು ಘಟ್ಟಗಳಲ್ಲಿ ತಮ್ಮ ಪರಿಸರವನ್ನು ಗಾಢವಾಗಿ ಅಳವಡಿಸಿಕೊಂಡಿರುತ್ತವೆ. ಇದು ಒಂದು ಭೂಪ್ರದೇಶದ ಭೌಗೋಳಿಕತೆಯ ಪರಿಚಯಕ್ಕೆ ಮಾತ್ರ ಸೀಮಿತವಾಗಿರದೆ ಆ ಒಂದು ಜನಪದ ಸಂಸ್ಕೃತಿಯ ವಿಕಾಸವೂ ಆಗಿರುತ್ತದೆ. ಹಾಗೆಯೇ ಪ್ರಾದೇಶಿಕವಾದ ಜೀವ ಪರಿಸರದ ಹೊಂದಾಣಿಕೆಯ ಅಸ್ತಿತ್ವದ ಕಥನವೂ ಆಗಿರುತ್ತದೆ. ಇಂತಹ ವೈವಿಧ್ಯ ಪ್ರಾದೇಶಿಕ ಜೀವಜಾಲದ ಹೊಂದಾಣಿಕೆಯಿದಲೇ ಪರಿಸರದಲ್ಲಿ ಸಮತೋಲನ ಉಂಟಾಗುವುದು. ಕೃಷಿ ಪರಂಪರೆಗಳು ಇಂತಹ ಸಂಬಂಧದಿಂದಲೇ ಪ್ರಾದೇಶಿಕವಾಗಿ ಜೀವಜಾಲ ಜಾನಪದವನ್ನು ಸೃಷ್ಟಿಸಿರುವುದು.

ಯಾವ ಸಮುದಾಯಗಳು ಆಯಾ ಪರಿಸರದಲ್ಲಿ ಜೀವಜಾಲವನ್ನು ಅರ್ಥಪೂರ್ಣವಾಗಿ ಜೀವನ ಕ್ರಮದಲ್ಲಿ ಹೊಂದಿಸಿಕೊಳ್ಳುತ್ತವೋ ಅಂತಹ ಸಮಾಜಗಳು ದೀರ್ಘಕಾಲೀನ ಜೈವಿಕ ಸಾಮರ್ಥ್ಯವನ್ನು ಸಾಂಸ್ಕೃತಿಕ ಅವಕಾಶಗಳಲ್ಲಿ ಪಡೆದಿರಲು ಸಾಧ್ಯವಾಗುತ್ತದೆ. ಸಂಸ್ಕೃತಿಯ ಬಹುಪಾಲು ಆಚರಣೆಗಳೆಲ್ಲವು ಜೀವ ಜಾಲದ ಸಂಬಂಧವನ್ನೇ ವ್ಯಕ್ತಪಡಿಸುತ್ತವೆ. ಸಮುದಾಯಗಳು ನಿಸರ್ಗದಲ್ಲಿ ಬದುಕುಳಿಯಲು ಕೂಡ ಇದು ಅನಿವಾರ್ಯ. ಕೃಷಿ ಸಮಾಜಗಳು ನಿಸರ್ಗದ ವೈವಿಧ್ಯ ಸಂಬಂಧದಿಂದಲೇ ಆಧುನಿಕತೆಯತ್ತ ನಡೆದು ಬಂದದ್ದು. ಜೀವಜಾಲ ಜಾನಪದದ ಕೊಂಡಿಗಳನ್ನು ಕಳಚಿಕೊಳ್ಳುವ ಗ್ರಾಮ ಸಮಾಜಗಳು ಜೈವಿಕ ಪ್ರತಿರೋಧವನ್ನು ಬಹು ಬೇಗನೆ ಕಳೆದುಕೊಂಡು ಆಧುನಿಕತೆಯ ಯಂತ್ರ ತಂತ್ರಗಳ ದಾಸ್ಯಕ್ಕೆ ಈಡಾಗಿ ವಿಕಾಸ ಪಥದಲ್ಲಿ ಅನೇಕ ಇಕ್ಕಟ್ಟುಗಳನ್ನು ಸೃಷ್ಟಿಸಿಕೊಳ್ಳಬಲ್ಲವು. ಜಗತ್ತಿನ ಎಷ್ಟೋ ಬುಡಕಟ್ಟುಗಳು ಹೀಗೆಯೆ ಕಳೆದು ಹೋಗಿವೆ. ಎಷ್ಟೋ ಭಾಷೆಗಳು  ನಾಶವಾಗಿವೆ. ಜೈವಿಕವಾದ ಅದೆಷ್ಟೋ ಜ್ಞಾನ ಪರಂಪರೆಗಳು ನೆಲ ಸಮವಾಗಿವೆ. ನೆಲಿಸಿದ್ದಾಗ ಆ ಪ್ರದೇಶಕ್ಕೆ ಭಾವನಾತ್ಮಕ ಜೈವಿಕ ಕೊಂಡಿ ಸಾಧ್ಯವಾಗುತ್ತದೆ. ಹಂಪಿಯ ಪರಿಸರಕ್ಕೆ ದೀರ್ಘಕಾಲೀನ ಪರಿಸರ ಸಂಬಂಧಗಳು ಇದ್ದದ್ದು ಪಶುಪಾಲಕ ಸಮುದಾಯಗಳಿಗೆ ಮಾತ್ರ. ಹಳೆ ಕಾಲದ ಪಶುಪಾಲಕ ಸಮಾಜಗಳು ಆಧುನಿಕತೆಗೆ ಮುಖ ಮಾಡಿವೆ. ಇದರ ಪರಿಣಾಮ ಮೊದಲು ನಿಸರ್ಗದ ಮೇಲಾಗುವುದು. ಕೃಷಿ ಪದ್ಧತಿಗಳು ಬದಲಾದಂತೆ ನಿಸರ್ಗದ ಸಂಬಂಧಗಳು ಕೂಡ ಏರುಪೇರಾಗುತ್ತವೆ.

ಯಾವುದೇ ದೀರ್ಘಕಾಲೀನ ಜೀವಜಾಲ ಸಂಬಂಧವು ಒಂದು ಪ್ರದೇಶದ ಜೈವಿಕ ಸಮತೋಲನಕ್ಕೆ ಅವಕಾಶ ಕಲ್ಪಿಸಿರುತ್ತದೆ. ಹೊರಗಿನಿಂದ ಬಂದ ವಲಸೆ ಸಮುದಾಯಗಳು ಒಂದು ಭೂಪ್ರದೇಶದ ಜೊತೆಗಿದ್ದ ಜೈವಿಕ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲಾರವು. ಹಂಪಿಯ ಎಷ್ಟೋ ಸ್ಥಳ ಪುರಾಣಗಳು ಅಲ್ಲಿನ ಭೌಗೋಳಿಕ ರಚನೆಯಿಂದ ಉಂಟಾಗಿರುತ್ತವೆ. ಹೊರಗಿನಿಂದ ಬಂದವರು ಹಳೆಯ ಅಂತಹ ಐತಿಹ್ಯ ಸಂಬಂಧಗಳ ಜೊತೆ ಅವಿನಾಭಾವ ಸಂಬಂಧವನ್ನು ಹೊಂದಲಾರರು. ಇದು ಹೊಂದಾಣಿಕೆಯ ಲೋಪವಾಗಿ ಪರಿಣಮಿಸುವುದು. ಜೈವಿಕ ಸಂಸ್ಕೃತಿಗಳು ವ್ಯಕ್ತಿ ಕೇಂದ್ರಿತವಲ್ಲ. ಅವು ಸಮೂಹ ನಿಷ್ಟ ಜೀವನ ಕ್ರಮಗಳಾಗಿರುತ್ತವೆ. ಸಾವಯವ ಸಂಬಂಧ ಸಾಧ್ಯವಾದಲ್ಲಿ ಮಾತ್ರ ನಿಸರ್ಗದ ಗುಣಗಳು ಸಮಾಜಗಳಲ್ಲಿ ಪ್ರತಿಫಲಿಸುತ್ತವೆ. ಹೊರಗಿನಿಂದ ಹಂಪಿಗೆ ನಿರಂತರವಾಗಿ ವಲಸೆಯ ಪ್ರವಾಹ ಉಂಟಾಗಿದೆ. ಹೀಗೆ ಹೊರಗಿನಿಂದ ಬಂದವರ ಪ್ರಮಾಣವೇ ಹಂಪಿ ಗ್ರಾಮಗಳಲ್ಲಿ ಹೆಚ್ಚು. ಹೊಸದಾಗಿ ಬಂದು ನೆಲೆಯಾದವರು ಸ್ಥಳೀಯ ನೆಲೆಯ ಹಳೆಯ ನಂಬಿಕೆಗಳನ್ನು ಅಷ್ಟಾಗಿ ಇಷ್ಟ ಪಡಲಾರರು. ಹಾಗಾಗಿಯೇ ಹಂಪಿ ಗ್ರಾಮಗಳ ಜನಪದಗಳು ಹಂಪಿಯ ಜೈವಿಕ ಸಂಬಂಧಗಳ ಕಥನಗಳನ್ನು ಹೇಳಲಾರವು.

ಅಂದರೆ ಒಂದು ಭೂಪ್ರದೇಶದ ಹಳೆಯ ಜನಪದಗಳು ಕಣ್ಮರೆ ಆದವು ಎಂದಾದರೆ ಅವರ ಜೈವಿಕ ಸಂಸ್ಕೃತಿ, ಜಾನಪದ, ಚರಿತ್ರೆ, ಸಾಹಿತ್ಯದ ಮೌಲ್ಯಗಳೆಲ್ಲವೂ ಕಳೆದು ಹೋಗುತ್ತವೆ. ಹೀಗೆ ನಾಶವಾದ ಜೈವಿಕ ಸ್ಮೃತಿಗಳು ವರ್ತಮಾನದ ಜಾನಪದದಲ್ಲಿ ಹೇಗೆ ಹೊಸ ಹೊಸ ರೂಪ ಧರಿಸಬಲ್ಲವು ಎಂಬುದು ಕುತೂಹಲಕಾರಿಯಾದುದು. ಹೊಸ ಜನಪದಗಳು ತಾವು ಬಿಟ್ಟು ಬಂದ ಪರಿಸರದ ಅನುಭವಗಳಿಂದಲೇ ಹೊಸ ಪರಿಸರದ ಬದುಕಿನ ಸಂಬಂಧಗಳನ್ನು ಮರು ಸೃಷ್ಟಿಸಿಕೊಳ್ಳುತ್ತವೆ. ಪಲ್ಲಟ್ಟವಾದ ಬದುಕು, ವಾಸದ ನೆಲೆ, ಸಾಂಸ್ಕೃತಿಕ ಹಿನ್ನೆಲೆ ಇವು ಮಾತ್ರ ಹೊಸ ಜನಪದಗಳಲ್ಲಿ ಹೊಸ ರೂಪ ಪಡೆಯಬಲ್ಲವು. ಆದರೆ ಹಳೆಯ ರೂಪಗಳು ಅಂದರೆ ನೈಸರ್ಗಿಕ ಮೌಲ್ಯಗಳು, ಭಾವನಾತ್ಮಕ ಕಥನಗಳು ಮರೆಗೇ ಸರಿಯುತ್ತವೆ. ನೈಸರ್ಗಿಕವಾದ ಸಹಜ ತಿಳುವಳಿಕೆಗಳು ಅಳಿಯುತ್ತಾ ಸಾಗಿದಂತೆಲ್ಲ ಆ ಜನಪದಗಳು ಮೊದಲಿಗೆ ಸಾಂಸ್ಕೃತಿಕ ಪ್ರತಿರೋಧ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಹಾಗೆಯೇ ಭೌಗೋಳಿಕವಾದ ಭಾವನಾತ್ಮಕ ಕೊಂಡಿಗಳನ್ನು ಕಳಚಿಕೊಳ್ಳುತ್ತವೆ. ರೈತರ ಆತ್ಮಹತ್ಯೆ, ಹಳ್ಳಿಗಳ ಆಧುನಿಕತೆಯ ಭ್ರಮೆ, ರಾಜಕೀಯ ಅಧಿಕಾರದ ದುರಾಸೆ, ಬಂಡವಾಳಶಾಹಿ ವ್ಯವಸ್ಥೆಯ ದುರಾಕ್ರಮಣ, ಕೃಷಿ ವಲಯದ ಬಿಕ್ಕಟ್ಟುಗಳು, ಜಾತಿ ವ್ಯವಸ್ಥೆಯ ಹೊಸ ಸವಾಲುಗಳು ಇವೆಲ್ಲವೂ ಜೈವಿಕ ಸಂಘರ್ಷದ ಅವ್ಯಕ್ತ ಪರಿಣಾಮಗಳು. ಲಿಂಗಸಂಬಂಧಗಳ ಬಿರುಕುಗಳಾಗಿರಬಹುದು ಇಲ್ಲವೇ ಆಧುನಿಕತೆಯ ಜೊತೆಗೆ ಹಳ್ಳಿಗಳಿಗೆ ಪ್ರವೇಶಿಸಿರುವ ಅಪರಾಧ ಜಗತ್ತಿನ ಹಿಂಸೆಯ ಬೇರೆ ಬೇರೆ ರೂಪಗಳಿರಬಹುದು. ಇವೆಲ್ಲವೂ ದೂರದ ಜೈವಿಕ ಸಂಘರ್ಷದ ಭಾಗವಾಗಿಯೇ ಉಂಟಾಗುತ್ತಿವೆ. ನಮ್ಮ ಬುದ್ಧಿಗೆ ಕಾಣುವ ಕಾರಣಗಳು ವರ್ತಮಾನದ ಅನುಭವದಿಂದ ಬರಬಹುದಾದರೂ ಇಂತಹ ನಕಾರಾತ್ಮಕ ಸಂಘರ್ಷದ ಪರಿಣಾಮಗಳೆಲ್ಲವೂ ಆಳದಲ್ಲಿ ಜೈವಿಕ ಸಂಬಂಧಗಳ ವ್ಯತ್ಯಯದಿಂದಲೆ ಉಂಟಾಗುತ್ತವೆ.

ಹಂಪಿ ಪರಿಸರದ ಗ್ರಾಮಗಳು ಅತ್ತ ಚರಿತ್ರೆಯ ಬೇರುಗಳಿಂದಲೂ ದೂರವಾಗುತ್ತ ಇತ್ತ ನಿಸರ್ಗದ ಜೀವಜಾಲ ಮೌಲ್ಯಗಳಿಂದಲೂ ಅನ್ಯವಾಗುತ್ತಿವೆ. ಅಭಿವೃದ್ಧಿಯ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯ ಮಾನದಂಡಗಳೇ ಉದ್ದಾರದ ದಾರಿಗಳೆಂದು ಭ್ರಮಿಸಿ ಮುಂದಾಗುತ್ತಿರುವುದು ಎಲ್ಲೆಡೆಯಂತೆ ಇಲ್ಲೂ ಅದೇ ಆಗುತ್ತಿದೆ. ಜೈವಿಕವಾದ ಅಭಿವೃದ್ದಿಗೆ ಬೇಕಾದ ಆರ್ಥಿಕತೆಯನ್ನು ಬಿಟ್ಟು ಈಗಾಗಲೇ ಹಳ್ಳಿಗಳು ಬಹು ದೂರ ಬಂದುಬಿಟ್ಟಿವೆ. ಈ ದಾರಿಯಲ್ಲಿ ಗ್ರಾಮ ಪರಂಪರೆಗಳು ಜೈವಿಕ ಸರಪಳಿಯನ್ನು ಇನ್ನೆಷ್ಟು ದೂರ ತಾನೆ ಕೊಂಡೊಯ್ಯಬಲ್ಲವು. ಪರಿಸರ ನಾಶವನ್ನು ಬೃಹತ್ ಆರ್ಥಿಕ ಯೋಜನೆಗಳ ಮೂಲಕ ತಂತ್ರಜ್ಞಾನವೂ ರಾಜಕಾರಣವೂ ಒಟ್ಟಾಗಿ ಸಾಮ್ರಾಜ್ಯಶಾಹಿ ಆರ್ಥಿಕ ಧೋರಣೆಗಳಿಗೆ ತಕ್ಕಂತೆ ಪರಿವರ್ತಿಸುತ್ತಿರುವಾಗ ಬರಿದೇ ಜನಪದಗಳನ್ನು ಅಳಿದು ಏನು ಉಪಯೋಗ ಎಂದೆನಿಸದೆ ಇರದು. ಜಾಗತಿಕವಾದ ಪರಿಸರ ವಿನಾಶದ ಆರ್ಥಿಕ ತಂತ್ರಜ್ಞಾನವೂ ಯಾವುದೇ ಹಳ್ಳಿಯ ಜೈವಿಕ ಸಂಬಂಧಗಳ ಮೇಲೂ ಯುದ್ಧ ಸಾರಬಲ್ಲದು. ಚರಿತ್ರೆಯ ನೆನ್ನೆಯ ನೈಸರ್ಗಿಕ ಬಾಂಧವ್ಯವೂ ಮರೆಯಾಗಿ ಗಣಿಗಾರಿಕೆಯ ರಾಜಕಾರಣವು ಆರ್ಥಿಕತೆಯ ಹೆಸರಲ್ಲಿ ನೈಸರ್ಗಿಕ ಸಂಪತ್ತಿನ ಮೇಲೆ ದಾಳಿ ಮಾಡುತ್ತಿದೆ. ಯಾವ ಬೆಟ್ಟಗುಡ್ಡಗಳನ್ನು ಪ್ರಾಚೀನ ಹಂಪಿಯ ವಾಸಿಗಳು ನೈಸರ್ಗಿಕವಾಗಿ ಭಾವಿಸಿದ್ದರೊ ಅವನ್ನೆಲ್ಲ ವ್ಯಾಪಾರದ ಸರಕಾಗಿಸಿ ಅವುಗಳ ಜೊತೆಗಿನ ಜೈವಿಕ ಒಪ್ಪಂದಗಳನ್ನು ಕೂಡ ಹರಾಜಿಗಿಡಲಾಗುತ್ತಿದೆ.

ದೀರ್ಘಕಾಲೀನ ಜನಜೀವನದ ನೈಸರ್ಗಿಕ ಒಪ್ಪಂದಗಳು ಕಡೆಗಣಿಸಲ್ಪಡುತ್ತ ಅಭಿವೃದ್ಧಿ ಹೆಸರಿನ ವೇಗದಲ್ಲಿ ಸಾಗಿದರೆ ಪರಿಸರದಲ್ಲಿ ನಿಗೂಢವಾದ ಜೈವಿಕ ಸಮಸ್ಯೆಗಳು ಎದುರಾಗುತ್ತವೆ. ತರ್ಕಕ್ಕೆ ನಿಲುಕದ ಮಾನವ ಸ್ವಭಾವಗಳು ಕೊಬ್ಬುತ್ತವೆ. ಆದ್ದರಿಂದ ಇತರೆ ಜೀವಿಗಳಿಗೆ ಹೆಚ್ಚಿನ ಅನಾನುಕೂಲತೆ ಉಂಟಾಗುವುದಕ್ಕಿಂತ ಅದು ಹೆಚ್ಚಾಗಿ ಮಾನವ ಜನಾಂಗದ ಸಮಷ್ಠಿ ಬೆಳವಣಿಗೆಗೆ ಮಾರಕವಾಗುತ್ತದೆ. ಮನುಷ್ಯರ ನಡುವಿನ ತಾರತಮ್ಯಗಳು ಹೆಚ್ಚುವುದೇ ನಿಸರ್ಗದ ಮೇಲೆ ಕೆಲವರು ಮಾತ್ರವೆ ಆಧಿಪತ್ಯ ಸ್ಥಾಪಿಸುವುದರಿಂದ. ಭೂಮಿಯನ್ನು ಕೈಗಾರೀಕರಣಕ್ಕೆ ವ್ಯಾಪಕವಾಗಿ ಒಳಪಡಿಸಿ ಭೂ ಕಬಕೆಯನ್ನು ವಿಸ್ತರಿಸುತ್ತ ಹೋದಂತೆಲ್ಲ ಭೂಮಿಯ ಮೇಲಿನ ಜನಸಾಮಾನ್ಯರ ಅವಕಾಶವೇ ಸಂಕುಚಿತಗೊಂಡು ವಿಕಾಸದ ಅವ್ಯಕ್ತ ತೊಡಕುಗಳು ಎದುರಾಗುತ್ತವೆ. ಹಂಪಿಯ ಗ್ರಾಮಗಳ ಮೇಲೆ ಈಗಾಗಲೇ ಹೊರಗಿನವರ ಅದರಲ್ಲೂ ಬಂಡವಾಳಶಾಹಿಗಳ ಅತಿಕ್ರಮಣ ನಡೆದಿದ್ದು ಬಿಟ್ಟಿಕೊಟ್ಟರೂ ಬೇಡ ಎನ್ನುತ್ತಿದ್ದ ಭೂಮಿಯ ಬೆಲೆ ವಿಪರೀತವಾಗಿದೆ. ಭೂಮಿಯ ಮೇಲಿನ ಹಣದ ವಿಪರೀತ ಬೆಲೆ ಯಾವತ್ತೂ ಅಪಾಯಕಾರಿಯಾದುದೇ. ಭೂಮಿಯನ್ನೇ ಒಂದು ಬೃಹತ್ ಉದ್ಯಮವಾಗಿಸಿಕೊಳ್ಳುವ ಆಧುನಿಕೋತ್ತರ ನವಬಂಡವಾಳಶಾಹಿ ಸಾಮ್ರಾಜ್ಯಶಾಹಿ ಆರ್ಥಿಕತೆಯು ನೈಸರ್ಗಿಕ ಸಂಬಂಧಗಳನ್ನು ಒಪ್ಪದು. ಜೀವಜಾಲದ ಮುಗ್ಧ ಭಾವನೆಗಳನ್ನು ನಿಸರ್ಗನಿಷ್ಠ ವಿಕಾಸಕ್ಕೆ ಬದ್ಧವಾಗಿರುತ್ತವೆ.

ನಿಸರ್ಗವನ್ನು ನಿರಾಕರಿಸಿ ಅದರ ಮೇಲೆ ಯಜಮಾನಿಕೆ ಮಾಡುವ ಯಾವ ತಂತ್ರಜ್ಞಾನವೂ ಆರ್ಥಿಕ ಯೋಜನೆಯೂ ವಿಕಾಸದ ದೀರ್ಘಕಾಲೀನ ಬೆಳವಣಿಗೆಗಳಲ್ಲಿ ಉಳಿಯಲಾರವು. ಹೀಗೆ ಮುಂದೆ ಎಂದೊ ನಾಶವಾಗಲೆಂದೇ  ಅವಸರದಲ್ಲಿ ಏರ್ಪಡುತ್ತಿರುವ ಅಭಿವೃದ್ಧಿ ಯೋಜನೆಗಳ ಇಂತಹ ಸ್ಥಿತಿಯಿಂದ ಜೀವಜಾಲದ ಪರಿಸ್ಥಿತಿಯಲ್ಲಿ ಆಗ ಯಾವ ಇಕ್ಕಟ್ಟು ಎದುರಾಗುತ್ತವೆ ಎಂಬ ಪೂರ್ವದ ಎಚ್ಚರವೂ ಸಾಧ್ಯವಿಲ್ಲವಾಗಿದೆ. ಲಯವಾಗಲೆಂದೇ ಆಕರ್ಷಕವಾಗಿ ಕಾಣುತ್ತಿರುವ ಬದಲಾವಣೆಗಳು ಜೈವಿಕವಾದ ನೈತಿಕತೆಯನ್ನು ಅನುಸರಿಸಿದರೆ ಮಾತ್ರ ನಾಳಿನ ಸಮಾಲುಗಳಿಗೆ ಪರಿಹಾರ ಸಾಧ್ಯ. ಅಭಿವೃದ್ಧಿಯ ಹೆಸರಲ್ಲಿ ಮುಂದುವರಿದ ದೇಶಗಳು ಬೃಹತ್ ನಗರ ಸಮಾಜಗಳನ್ನು ಕಟ್ಟಿಕೊಂಡು ಉಸಿರಾಡಲು ಕಷ್ಟ ಪಡುತ್ತಿವೆ. ಜಾಗತಿಕ ತಾಪಮಾನ ವಿಪರೀತವಾಗುತ್ತಿದ್ದು ಪರಿಸರದಲ್ಲಿ ಅನೇಕ ವೈಪರೀತ್ಯಗಳು ಎದುರಾಗುತ್ತಿವೆ. ನಿಸರ್ಗಕ್ಕೆ ನಿಸರ್ಗವೇ ಪರಿಹಾರ ಕಂಡುಕೊಳ್ಳಬೇಕೇ ವಿನಃ ಮಾನವರು ಅದಕ್ಕೆ ಪರಿಹಾರ ಕೊಡುವಷ್ಟು ಬಲಾಢ್ಯರಲ್ಲ. ಹಂಪಿಯ ವರ್ತಮಾನ ಜನಪದವು ಈ ಯಾವ ಭಯವೂ ಇಲ್ಲದೆ ತನ್ನ ಪಾಡಿಗೆ ತಾನು ತನ್ನ ನೆಲೆಯಲ್ಲಿ ಬಹುಬೇಗನೆ ಅಭಿವೃದ್ಧಿಯ ಪಥದಲ್ಲಿ ಸಾಗಲು ಹಗಲುಗನಸು ಕಾಣುತ್ತಿದೆ. ನೈತಿಕವಾದ ಬದಲಾವಣೆಗೆ ವಿಕಾಸದ ಸಮ್ಮತಿ ಇದೆ. ಅನೈತಿಕ ಬೆಳವಣಿಗೆಯು ಅನಾಹುತದಿಂದಲೇ ಅಂತ್ಯ ಕಾಣಬೇಕಾಗಿದೆ. ಅಮೆರಿಕಾದ ಭೂಖಂಡ ಪತ್ತೆಯಾದ ಕೂಡಲೇ ಯುರೋಪಿನಿಂದ ಅನೇಕ ಅಲೆಮಾರಿ ಸಮಾಜಗಳು ಅಲ್ಲಿಗೆ ಲಗ್ಗೆ ಇಟ್ಟು ವಾಸದ ನೆಲೆಗಳನ್ನು ಕಂಡುಕೊಂಡವು. ಹೊಸ ಪರಿಸರಕ್ಕೆ ದಿಢೀರನೆ ಅವು ತಮಗೆ ತಿಳಿದಂತೆ ಆಕ್ರಮಣಶೀಲವಾಗಿ ಹೊಂದಿಕೊಂಡವು. ಜಗತ್ತಿನ ಎಲ್ಲೆಡೆ ಮಾನವರ ವಲಸೆ ಒಂದೆಡೆಯಿದ ಇನ್ನೊಂದೆಡೆಗೆ ಅಸಹಜವಾಗಿ ಸಾಗಿ ನಡೆದಾಗ ನಾಗರೀಕತೆಗಳು ಹೊಸದಾಗಿ ಬೆಳೆದಿವೆ ಎಂದು ಭಾವಿಸುವವರೇ ಹೆಚ್ಚು. ಆದರೆ ವಾಸ್ತವದಲ್ಲಿ ಆಗುವುದೇ ಬೇರೆ. ಹೊಸದಾಗಿ ಧಾವಿಸಿ ಬಂದವರು ಆ ನೆಲೆಯ ಹಳಬರನ್ನು ಹತ್ತಿಕ್ಕದೆ ಬಿಡುವುದಿಲ್ಲ. ಆರ್ಯರು ದಾಳಿ ಮಾಡಿ ಸ್ಥಾಪಿಸಿದ ಮೌಲ್ಯಗಳು ಪೂರ್ವದ ಜನಪದಗಳ ಪರಂಪರೆಗಳನ್ನು ಏನು ಮಾಡಿವೆ. ಅದರಿಂದ ಸಾವಯವ ನೈಸರ್ಗಿಕ ಸಂಬಂಧಗಳಲ್ಲಿ ಯಾವ ಏರುಪೇರು ಉಂಟಾಗಿವೆ ಎಂಬುದನ್ನು ಊಹಿಸಬಹುದು.

ದಕ್ಷಿಣ ಅಮೇರಿಕದ ಕಪ್ಪು ಜನಾಂಗದ ಮೇಲೆ ಬಿಳಿಯರ ದಾಳಿ ಯಾವ ಸ್ವರೂಪವನ್ನು ತಂದಿತೆಂಬುದನ್ನು ನೋಡುತ್ತಲೇ ಇದ್ದೇವೆ. ಅಮೆರಿಕಾದ ಮೂಲನಿವಾಸಿಗಳಾದ ರೆಡ್ ಇಂಡಿಯನ್ನರು ಈಗ ಬಿಳಿಯರ ಅವಿಷ್ಕಾರವಾದ ಮ್ಯೂಸಿಯಂ ಸಂಸ್ಕೃತಿಯ ಪ್ರತೀಕಗಳಾಗಿ ಮಾತ್ರ ಉಳಿದಿದ್ದಾರೆ. ದಕ್ಷಿಣ ಏಷ್ಯಾದ ಸರ್ವಾಧಿಕಾರಿ ಧೋರಣೆಯ ರಾಷ್ಟ್ರಗಳಲ್ಲಿ ಕೂಡ ಜೀವಜಾಲದ ಸಂಬಂಧಗಳು ದಿಕ್ಕೆಟ್ಟಿವೆ. ಆಪ್ ಘಾನಿಸ್ತಾನದ ಒಂದೇ ಉದಾಹರಣೆ ಸಾಕು, ಹೇಗೆ ಯುದ್ಧದಾಹಿ ಸಾಮ್ರಾಜ್ಯಶಾಹಿ ಧೋರಣೆಗಳು ಜೀವಜಾಲ ಸಂಸ್ಕೃತಿಗಳ ನೆನಪುಗಳನ್ನು ಅಳಿಸಿಹಾಕುತ್ತವೆ ಎಂದು ತಿಳಿಯಲು. ಅಂತಹ ಮಹಾ ಗೋಡೆಯನ್ನು ಕಟ್ಟಿಕೊಂಡ ಚೀನ ದೇಶದ ಒಳಗೂ ಅನೇಕ ಬುಡಕಟ್ಟು, ಸಮೂಹಗಳನ್ನು ಬೇಟೆ ಆಡಲಾಗುತ್ತಿದೆ. ದಕ್ಷಿಣ ಏಷ್ಯಾದ ಅನೇಕ ಬುಡಕಟ್ಟುಗಳು ಅಳಿವಿನ ಅಂಚಿನಲ್ಲಿ ಕೊನೆ ದಿನಗಳನ್ನು ಎಣಿಸುತ್ತಿವೆ. ಜಗತ್ತಿನ ಆದಿಮ ಜೀವಜಲದ ಜೈವಿಕ ನೈಕೆಕತೆಯನ್ನೆ ತಮ್ಮ ಸಂಸ್ಕೃತಿಗಳ ಮೂಲ ಆಶಯವನ್ನಾಗಿಸಿಕೊಂಡ ಎಷ್ಟೋ ಆದಿವಾಸಿ ಸಮೂಹಗಳು ಹಾಕಿದ ಬುನಾದಿಯ ಮೇಲೆಯೇ ಜೀವಜಾಲ ಜಾನಪದದ ಗ್ರಾಮ ನಾಗರೀಕತೆಗಳು ವಿಕಾಸಗೊಂಡಿದ್ದುದು. ವಿಪರ್ಯಾಸ ಎಂದರೆ ಅದೇ ಗ್ರಾಮ ಸಮಾಜಗಳು ತಮ್ಮ ಪೂರ್ವಿಕರ ಜೈವಿಕ ಕೊಂಡಿಗಳನ್ನೆ ಕಳಚಿಕೊಳ್ಳುವ ಅನಿವಾರ್ಯತೆಗೆ ತೊಡಗಿರುವುದು ಅವರ ಸ್ವಯಂಕೃತ ಅಪಾರಾಧವಲ್ಲ. ಈ ಜೈವಿಕ ಅಪರಾಧವನ್ನು ಆಧುನಿಕತೆಯ ತಂತ್ರಜ್ಞಾನ ನಿಷ್ಟವಾದ ಪ್ರಭುತ್ವಗಳು ರಾಜಕೀಯ ಕ್ರಮಗಳಿಂದ ಅಮಾಯಕರ ಮೂಲಕ ಮಾಡಿಸುತ್ತಿವೆ.

ಹಂಪಿ ಪರಿಸರದ ಗಣಿ ಉದ್ಯಮದಲ್ಲಿ ಈಗ ದುಡಿಯಲು ಮುನ್ನುಗ್ಗಿ ನಡೆವವರು ಅದೇ ಹಳೆಯ ಜನಪದದ ಪಳೆಯುಳಿಕೆಯಂತಿರುವ ಜನಸಾಮಾನ್ಯರು. ಗಣಿ ಲೂಟಿಯ ಅವ್ಯಾಹತ ದಂದೆ ಜನಪದರನ್ನು ವಂಚಿಸಿ ಹಣದ ಭ್ರಮೆಯಲ್ಲಿ ತೇಲಿಸುತ್ತಿದೆ. ಚಿನ್ನ ತೆಗೆದು ಮಾರಿಕೊಂಡ ಮೇಲೆ ಚಿನ್ನದ ಗಣಿಗಳ ಮುಚ್ಚಿ ಮತ್ತೆ ಆ ನಿಸರ್ಗಕ್ಕೆ ಮರಳಿ ಉದ್ಯಮಿಗಳು ಕೊಟ್ಟಿದ್ದಾದರೂ ಕ್ರೂರ ಬಡತನವನ್ನು ಮಾತ್ರ. ಗಣಿಗಳ ಆಳಕ್ಕಿಳಿದವರು ಮತ್ತೆ ಮತ್ತೆ ಬಡವರೇ ಆದರೇ ಹೊರತು ಶ್ರೀಮಂತರಾಗಲಿಲ್ಲ. ಕೋಲಾರದ ಚಿನ್ನದ ಗಣಿಗಳೀಗ ಸ್ಮಶಾನವಾಗಿ ತುಕ್ಕು ಹಿಡಿದಿವೆ. ಯಾವುದೇ ಗಣಿ ಉದ್ಯಮವು ನಿಸರ್ಗದ ಸಮತೋಲನವನ್ನು ಹದಗೆಡಿಸಿಯೇ ಸಾಮಾನ್ಯ ಜನಪದರನ್ನು ಬೀದಿಪಾಲು ಮಾಡುವುದು. ಈ ಸಂಗತಿಗಳು ಹಂಪಿಯ ವರ್ತಮಾನ ಜಾನಪದಕ್ಕೂ ಸಂಬಂಧ ಪಡುತ್ತವೆ. ಇವೆಲ್ಲವೂ ಒಂದಕ್ಕೊಂದು ಸಂಬಂಧ ಇಲ್ಲ ಎಂದೆನಿಸಿದರೂ ನಮ್ಮ ತರ್ಕದಲ್ಲಿ ಸರಿ ಇದ್ದರೂ ನಿಸರ್ಗದ ಸಾವಯವ ಸಂಬಂಧಗಳಲ್ಲಿ ಎಲ್ಲೆಲ್ಲಿಯದೊ ಜೈವಿಕ ಸಂಬಂಧಗಳೆಲ್ಲವೂ ಒಂದಕ್ಕೊಂದು ಅವಿನಾಭಾವ ಕೊಂಡಿಗಳನ್ನು ಬೆಸೆದುಕೊಂಡಿರುತ್ತವೆ.

ಈ ಹಿನ್ನೆಲೆಗಳಿಂದ ಭಾವಿಸಿದರೆ ಹಂಪಿಯ ವರ್ತಮಾನ ಜಾನಪದವನ್ನು ಅರ್ಥೈಸುವುದು ಸಲೀಸಲ್ಲ. ವರ್ತಮಾನದ ಅನುಭವಗಳಿಂದ ಜಾನಪದವನ್ನು ಗ್ರಹಿಸಿದರೆ, ಹಂಪಿ ಪರಿಸರದ ಜನಪದಗಳೇ ಪರಂಪರೆಯಿಂದ ಭಗ್ನವಾಗಿವೆ. ಕಳಚಿದ ಅನೇಕ ಕೊಂಡಿಗಳು ದೂರ ದೂರ ಸರಿದು ಅನ್ಯತೆಯಲ್ಲಿ ಹೆಚ್ಚು ಹೆಚ್ಚು ಸ್ವಕೇಂದ್ರಿತವಾಗುತ್ತಿವೆ. ಸಮಷ್ಟಿ, ಪ್ರಜ್ಞೆ ಇಲ್ಲವಾದ ಕಾರ‍ಣ ಸಮಷ್ಟಿ ಸೃಷ್ಠಿಯೂ ಅಸಾಧ್ಯವಾಗಿದೆ. ಈ ಹಿನ್ನಲೆಯಿಂದ ಗಮನಿಸಿದರೆ ಹಂಪಿಯ ಜೀವಜಾಲ ಜಾನಪದವು ಅಳಿವಿನ ಅಂಚಿನ ಜಾನಪದವಾಗಿಯೆ ಕಾಣುವುದು. ಗಮನಿಸಬೇಕಾದ ಅಂಶವೆಂದರೆ, ಹಂಪಿಯ ಬೌಗೋಳಿಕತೆಗೆ ಸಾಂಸ್ಕೃತಿಕ ಗಡಿಗಳು ವಿಶಾಲವಾದುವೇ ಆಗಿದ್ದವು. ಮಹಾರಾಷ್ಟ್ರ, ಆಂಧ್ರಪ್ರದೇಶ ಇವೆರಡೂ ರಾಜ್ಯಗಳ ಅಲೆಮಾರಿ ಸಮುದಾಯಗಳು ಹಂಪಿ ಪ್ರದೇಶವನ್ನು ವಿಶೇಷವಾಗಿ ಅನುಸರಿಸಿವೆ. ಪಶುಪಾಲಕರ ಕಾಲದಿಂದಲೂ ಬೇರೆ ಕಡೆಗಳಿಂದ ವಲಸೆ ಬಂದು ತಾತ್ಕಾಲಿಕವಾಗಿ ನೆಲೆಸಿ ಹೋಗುವ ಪದ್ಧತಿಗಳಿದ್ದವು. ಆ ಹಳೆಯ ಪಳೆಯುಳಿಕೆಗಳು ಈಗಲೂ ಇವೆ. ಇಂತಹ ಅಲೆಮಾರಿ ಸಮುದಾಯಗಳು ನೈಸರ್ಗಿಕವಾದ ಆವರ್ತನೆಗಳಿಗೆ ತಕ್ಕಂತೆ ಜೀವಜಾಲ ಸಂಬಂಧಗಳನ್ನು ಹೊಂದಿಸಿಕೊಂಡಿದ್ದವು. ವರ್ತಮಾನದಲ್ಲಿ ನಿಸರ್ಗದ ಭಾಗವಾಗಿ ಬೆಟ್ಟ, ಗುಡ್ಡ, ಬಯಲುಗಳಲ್ಲೂ ಊರ ಹಾಸುಪಾಸಿನಲ್ಲೋ ಬಂದು ಹೋಗುತ್ತಿದ್ದ ಅಲೆಮಾರಿಗಳೀಗ ಅತ್ಯಂತ ಕ್ರೂರವಾದ ಕೊಳಚೆ ಪ್ರದೇಶಗಳಲ್ಲಿ ಬದುಕುವುದು ಪರಿಸರದ ಅಸಮತೋಲನದ ಪರಿಣಾಮವಲ್ಲದೆ ಬೇರೇನಲ್ಲ. ಹಳೆ ಕಾಲದಲ್ಲಾದರೊ ಅಲೆಮಾರಿಗಳು ಬಂದು ಬೀಡು ಬಿಡಲು ಒಂದಿಷ್ಟಾದರು ಜಾಗು ಸಿಗುತ್ತಿತ್ತು. ಈಗ ಅಂತಹ ಪಾರಂಪರಿಕ ಅಲೆಮಾರಿ ವಾಸದ ನೆಲೆಗಳನ್ನು ನಿರ್ಭಂದಿಸಲಾಗಿದೆ. ಈ ಸ್ಥಿತಿಯಲ್ಲಿ ವರ್ತಮಾನ ಜಾನಪದವು ಹಿಂಸೆಯ ಜಾಡಿಗೇ ಸರಿಯಬೇಕಾದ ಇಕ್ಕಟ್ಟಿದೆ. ವರ್ತಮಾನ ಜಾನಪದವು ಕಠಿಣವಾದ ಅಸ್ತಿತ್ವದ ರೂಪ ವಿರೂಪಗಳ ಸಂಘರ್ಷವನ್ನೇ ಧ್ವನಿಸುವಂತಿದೆ. ಮಧ್ಯಕಾಲೀನ ಸಮಾಜದ ಸಮಷ್ಠಿ ಮೌಲ್ಯಜೀವನ ಕ್ರಮಗಳು ಇಪ್ಪತ್ತನೆಯ ಶತಮಾನದ ಕೊನೆಯ ವೇಳೆಗಾಗಲೇ ಅಳಿದು ಅವು ವ್ಯಕ್ತಿನಿಷ್ಠ ಬಿಡುಗಡೆಗೆ ಮಾತ್ರ ಹರಿದು ಹಂಚಿ ಹೋಗಿವೆ.

ಗತಕಾಲದಿಂದ ಬಂದ ನಂಬಿಕೆಗಳು ಮಾತ್ರವೇ ಜಾನಪದಕ್ಕೆ ಸಂಬಂಧಿಸಿದ ಸಂಗತಿಗಳಾಗುತ್ತವೆ ಎಂಬ ಸಾಮಾನ್ಯ ನಿಲುವೊಂದಿದೆ. ಹಳೆಯದು ರೂಢಿಗತವಾಗಿ ಸಾಗಿ ಬಂದದ್ದು ಸಂಸ್ಕೃತಿಗಳಲ್ಲಿ ತಕ್ಕ ಆಚಾರ ವಿಚಾರಕ್ಕೆ ಒಳಗಾಗಿ ಬೇರೂರುತ್ತವೆ ಎಂತಲೂ ಹೇಳುವುದುಂಟು. ವರ್ತಮಾನದ ಜೀವನ ವಿಧಾನಗಳನ್ನು ಯಾವ ಮಾನದಂಡಗಳಿಂದ ನಿರ್ಧರಿಸುವುದು? ವರ್ತಮಾನದ ಜೀವನ ಕ್ರಮವೂ ನಾಳಿನ ಜಾನಪದವೇ ಹೌದು. ಯಾಕೆ ಹೀಗೆ ದೀರ್ಘಕಾಲೀನ ಅವಧಿಯೂ ಒಂದು ಮಾನದಂಡವಾಗಬಲ್ಲದು ಎಂದರೆ ಸಮಷ್ಠಿ ಪ್ರಜ್ಞೆಯು ಒಂದಲ್ಲ ಒಂದು ರೀತಿಯಲ್ಲಿ ಮೌಲ್ಯಗಳನ್ನು ಪರಿಷ್ಕರಿಸಿರುತ್ತದೆ. ಆಧುನಿಕ ಸಮಾಜಗಳು ಪರಂಪರೆಯನ್ನು ಮುರಿಯುವತ್ತಲೇ ಆಸಕ್ತವಾಗಿರುತ್ತವೆ. ಅಂತಹ ಸ್ಥಿತಿಯಲ್ಲಿ ಗತವೂ ಅಲ್ಲದ ವರ್ತಮಾನವೂ ಅಲ್ಲದ ತಾತ್ಕಾಲಿಕವಾದ ಅನುಕೂಲ ಸಂದರ್ಭಗಳು ಯಾವುದೇ ಸಮುದಾಯಗಳಿಗೂ ಹಿತವಾಗಿಯೆ ಕಾಣುತ್ತವೆ. ಈ ಅನುಕೂಲ ಸಿದ್ಧಾಂತ ಯಾವತ್ತೂ ಕೂಡ ವರ್ತಮಾನದ ಬಿಕ್ಕಟ್ಟಿನ ಅನಿವಾರ್ಯ ಸ್ಥಿತಿ. ಇದರಲ್ಲಿ ನ್ಯಾಯ ಅನ್ಯಾಯ ರೂಪ ವಿರೂಪ, ವ್ಯಷ್ಟಿ, ಸಮಷ್ಠಿ, ಇವೆಲ್ಲವೂ ಜರೂರಿನಿಂದ ಬೆರಕೆಯಾಗುತ್ತ ನಾಳಿನ ಯಾವುದೋ ಒಂದು ಗುರಿಯಲ್ಲಿ ಕಾಲವನ್ನು ಪೂರೈಸಿಕೊಳ್ಳುವತ್ತಲೇ ಸಾಗಿರುತ್ತವೆ. ಹೀಗಿರುವಾಗ ಅಳಿವಿನಂಚಿನ ಜಾನಪದವು ಅನಿರ್ದಿಷ್ಟ ಜೀವನ ವಿಧಾನಗಳ ತಾತ್ಕಾಲಿಕ ಒಪ್ಪಂದಗಳ ವ್ಯವಹಾರವೇ ಆಗಿರುತ್ತದೆ. ಇದರಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬ ಖಚಿತ ನಿಲುವುಗಳಿರುವುದಿಲ್ಲ. ಇಲ್ಲಿ ಎಲ್ಲವೂ ಸಾಂದರ್ಭಿಕ ಫಲಾಯನಗಳೇ ಮೇಲುಗೈ ಸಾಧಿಸಿರುತ್ತವೆ.

ಪರಂಪರೆಯ ಕಳಚಿದ ಕೊಂಡಿಯ ಪರಿಸ್ಥಿತಿಯೇ ಇಂತಾದ್ದು. ಅಳಿವಿನಂಬಿನ ಜಾನಪದವು ಕಾಲದ ಅಲೆಯಲ್ಲಿ ಸುಮ್ಮನೆ ಸಾಗುವುದನ್ನೇ ಪ್ರತಿನಿಧಿಸುತ್ತದೆ. ಈ ಸ್ಥಿತಿಯಲ್ಲಿ ಜೈವಿಕ ಸಂಬಂಧಗಳು ಕೂಡ ತಾತ್ಕಾಲಿಕವಾಗಿಯೇ ಘಟಿಸಿರುತ್ತವೆ. ಅಭಿವೃದ್ಧಿ ಯೋಜನೆಯಿಂದ ಜನರಿಗೆ ಇಷ್ಟಿಷ್ಟು ಲಾಭಗಳಿವೆ ಎಂದು ಆಸೆ ಹುಟ್ಟಿಸಿದಾಗ ಆ ಆರ್ಥಿಕ ಯೋಜನೆಗಾಗಿ ಜನಪದಗಳು ತಮ್ಮ ಪರಂಪರಾನುಗತ ಜೀವನ ವಿಧಾನಗಳನ್ನೇ ಬೇಕಾದರೂ ರಾತ್ರೋರಾತ್ರಿ ಬಿಟ್ಟು ಕೊಟ್ಟು ವಲಸೆ ಹೊರಟು ಬಿಡಬಲ್ಲವು. ಇಪ್ಪತ್ತೊಂದನೆ ಶತಮಾನದ ಮೌಲ್ಯಗಳು ಸಮಷ್ಠಿಯನ್ನು ಕೇವಲ ಬಂಡವಾಳಶಾಹಿ ಮಾರುಕಟ್ಟೆಯಲ್ಲಿ ಮಾತ್ರ ಬಯಸುತ್ತವೆ. ತನ್ನ ಉತ್ಪನ್ನಗಳನ್ನು ಎಲ್ಲರೂ ತೆಗೆದುಕೊಳ್ಳಲಿ, ಅದರಿಂದ ಅಧಿಕ ಲಾಭ ಬರಲಿ, ಮಾರುಕಟ್ಟೆಯಲ್ಲಿ ತನ್ನದೇ ಅಧಿಪತ್ಯ ಸ್ಥಾಪಿತವಾಗಲಿ ಎಂಬಲ್ಲಿ ಮಾತ್ರ ಸಮಷ್ಠಿಯನ್ನು ಜಾಗತಿಕ ಆರ್ಥಿಕ ಪ್ರಭುತ್ವವಾಗಲೀ, ಸ್ಥಳೀಯ ಮಾರುಕಟ್ಟೆಯಾಗಲಿ ಬಯಸುತ್ತೇವೆ. ಸಮಷ್ಠಿ ಅನುಭೋಗ, ಸಮಷ್ಠಿ ಮಾರುಕಟ್ಟೆ, ಸಮಷ್ಠಿ ವ್ಯಾಪಾರ ಜಾಲ, ಸಮಷ್ಠಿ ಮಾಹಿತಿ ಹೆದ್ದಾರಿಗಳಲ್ಲಿ ಮಾತ್ರ ಮನುಷ್ಯರನ್ನು ಏಕರೂಪೀಕರಿಸುವ ಇಂತಹ ಆರ್ಥಿಕತೆಯೇ ವರ್ತಮಾನದ ಜಾನಪದವಾಗಿ ಮಾರ್ಪಡುತ್ತದೆ. ವಿಶ್ವದ ಯಾವುದೋ ಒಂದು ಉತ್ಪನ್ನ ಹಳ್ಳಿಯ ಯಾವುದೋ ಮೂಲೆಯಲ್ಲಿ ಬಳಕೆಯಾಗಬಲ್ಲದು. ಇದು ಸಂಪರ್ಕ ಜಾಲದ ಸಮಷ್ಠಿ. ಈ ಸಂಪರ್ಕ ಸಮಷ್ಠಿಯ ಮಾನವ ಸಂಬಂಧಗಳನ್ನು ವ್ಯಾಪಾರ ಮಾಡುತ್ತದೆಯೇ ವಿನಃ ನಿಸರ್ಗ ನಿಷ್ಠವಾದ ಜೈವಿಕ ಜಾಲವನ್ನು ಬೆಸೆಯಲಾರದು. ವಿಕಾಸದಲ್ಲಿ ಸಮೀಪವೇ ಶತ್ರುವಾಗಬಲ್ಲದು. ಜೀವಜಾಲದಲ್ಲಿ ಪ್ರತಿಯೊಂದು  ಜೀವಿಗೂ ನಿರ್ದಿಷ್ಟ ದೂರದ ಅವಕಾಶದ ಗಡಿಗಳಿವೆ. ಅವನ್ನು ಅತಿಕ್ರಮಿಸುವುದು ಜೈವಿಕ ಗಡಿಗಳ ಒಡಂಬಡಿಕೆಗಳನ್ನು ಭಗ್ನಗೊಳಿಸಿದಂತೆ. ಜೀವವಿಕಾಸದಲ್ಲಿ ಜೈವಿಕ ದೂರ ಮಹತ್ವದ ಸಂಬಂಧಗಳನ್ನು ಸಾಧಿಸಿದೆ. ಕಾಡಿನ ಪ್ರಾಣಿಗಳಿಗೂ ಮನುಷ್ಯರಿಗೂ ಒಂದು ಅಂತರವಿದೆ. ಈ ಅಂತರವನ್ನು ಮುರಿಯುತ್ತ ಹೋದಂತೆ ಆಗುವ ಅನಾಹುತಗಳು ತಕ್ಷಣಕ್ಕೆ ಕಾಣುವಂತವಲ್ಲ. ದೀರ್ಘಕಾಲೀನ ಅಪಾಯವಾಗಿ ಬೆಳೆಯುವ ಅವು ವಿಕಾಸದಲ್ಲಿ ದೊಡ್ಡ ಕಂದಕಗಳನ್ನು ರೂಪಿಸಬಲ್ಲವು.

ಪರಿಸರವೇ ತಂತಾನೆ ತನಗೆ ಬೇಕಾದ ಜೈವಿಕ ಪರಿಹಾರವನ್ನು ಕಂಡುಕೊಳ್ಳುತ್ತದೆ. ಇದರ ಅರಿವು ಮನುಷ್ಯರ ಆಳದಲ್ಲಿ ಇದ್ದೇ ಇರುವುದು ಕೂಡ ನಿಸರ್ಗದ ಸುಪ್ತ ಪ್ರಜ್ಞೆಯಿಂದ. ಅದನ್ನೇ ಜೈವಿಕ ಪ್ರಜ್ಞೆ ಎಂದು ಭಾವಿಸಬಹುದು. ಕೃಷಿ ಪ್ರಧಾನ ಸಮಾಜಗಳಿಗೆ ಆಧುನಿಕತೆ ಎಷ್ಟೇ ಪ್ರಭಾವ ಬೀರಿದರೂ ತಳದಲ್ಲಿ ಜೈವಿಕ ಸ್ವಭಾವಗಳನ್ನು ಬಿಟ್ಟುಕೊಡಲಾಗದು. ಕಾಲದ ತೀವ್ರತರ ವೇಗ ಜೈವಿಕ ಸಂವೇದನೆಯನ್ನು ಭ್ರಷ್ಟಗೊಳಿಸಿದರೂ ನಿಸರ್ಗದ ಸ್ವಯಂಚಾಲಿತ ಪ್ರಜ್ಞೆಯು ನಿಸರ್ಗದ ಬೇರುಗಳನ್ನು ಉಳಿಸಿಕೊಳ್ಳುವಂತೆಯೇ ಸ್ವಭಾವಗಳನ್ನು ಬೆಸೆದಿರುತ್ತದೆ. ವಿಕಾಸದ ಕ್ರಮ ನಿರಂತರವಾಗಿ ಒಂದೇ ಸ್ವರೂಪದಲ್ಲೂ ಇರಲಾಗದು. ಜೀವ ವಿಕಾಸದ ನಿಯಮಗಳಲ್ಲಿ ಪ್ರತಿಯೊಂದು ವಿನಾಶವೂ ರೂಪಾಂತರದಲ್ಲಿ ಮರುರೂಪ ಪಡೆಯುತ್ತವೆ. ನಿಸರ್ಗದ ಇಂತಹ ಶಕ್ತಿಯಿಂದಾಗಿಯೇ ಜೈವಿಕವಾದ ಸ್ವಯಂಚಾಲಿತ ಬೆಳವಣಿಗೆ ಸಾಧ್ಯವಾಗಿರುವುದು. ಜೈವಿಕ ಸತ್ಯಗಳೇ ನಿರಂತರವಾದ ಮಾನವ ಸಂಬಂಧಗಳನ್ನು ಬೆಳೆಸಬಲ್ಲವು. ಈ ಸಂವೇದನೆಯು ಎಲ್ಲ ಸಮಾಜಗಳು ಎಲ್ಲ ಕಾಲಗಳಲ್ಲೂ ಎಲ್ಲ ಸಮುದಾಯಗಳಲ್ಲೂ ಒಂದಿಷ್ಟು ಪ್ರಮಾಣದಲ್ಲಿ ಇದ್ದೇ ಇರಬೇಕಾದ ಜೈವಿಕ ಪ್ರವೃತ್ತಿ. ಇಡೀ ಮಾನವ ಜನಾಂಗವೇ ಪರಿಸರ ತಜ್ಞರಂತೆ ಬದುಕಿರಲಾಗದು. ಎಲ್ಲರೂ ಜೀವಜಾಲ ಸಂರಕ್ಷಕರೇ ಆಗುವುದೂ ಅಸಾಧ್ಯ. ಸೃಷ್ಟಿಯಲ್ಲಿ ವಿನಾಶವೂ ಒಂದು ಸಕಾರಾತ್ಮಕ ಕ್ರಿಯೆ. ಚಲನೆಯ ನಿಯಮವೇ ಅಂತಾದ್ದು. ವಿಕಾಸದ ನಡಿಗೆಯಲ್ಲಿ ಜೀವಜಾಲದ ಜ್ಞಾನ ಪರಂಪರೆಗಳು ಒಂದೇ ಸಮನಾಗಿರಲಾರವು. ಆದ್ದರಿಂದಲೇ ಜೀವಜಾಲದ ವಿಕಾಸದಲ್ಲಿ ಬಹಳ ಬಲಿಷ್ಠವಾಗಿದ್ದ ಜೀವಿಗಳೂ, ಜ್ಞಾನಪರಂಪರೆಗಳೂ ಕೂಡ ಮರೆಗೆ ಸರಿದು ಬೇರೊಂದು ಕಾಲಕ್ಕೆ ಬೇರೊಂದು ಆಯಾಮ ಪಡೆದಿರುವುದು.

ಒಂದೊಂದು ಜೀವಿಯೂ ತನ್ನದೇ ವೈಶಿಷ್ಟ್ಯದಿಂದ ಅಖಂಡ ಜೀವಜಾಲ ವಿಕಾಸಕ್ಕೆ ತೆತ್ತುಕೊಳ್ಳುತ್ತಿರುತ್ತವೆ. ಸಸ್ಯಲೋಕ ಸುಮ್ಮನೆ ಹುಟ್ಟಿ ಬೆಳೆದು ಹಸಿರಾಗಿರುವುದಿಲ್ಲ. ಹಾಗೆ ಹಸಿರಾಗಿ ಇರುವುದೇ ಅನೇಕ ಜೀವಿಗಳಿಗೆ ಜೀವಾಶ್ರಯ ನೀಡುವ ಕಾರಣಕ್ಕಾಗಿ. ಆಹಾರ ಸರಪಳಿಯ ಸಂಬಂಧಗಳು ಇಡಿಯಾಗಿ ಜೀವಿವಿಕಾಸದ ತತ್ವಕ್ಕೆ ಬದ್ಧವಾಗಿರುತ್ತವೆ. ಹೀಗಾಗಿ ಜೈವಿಕತೆಯ ಒಂದೊಂದಕ್ಕೂ ಒಂದೊಂದು ಅನನ್ಯತೆಯ ಕರ್ತವ್ಯವನ್ನು, ನೈಸರ್ಗಿಕ ಗುಣವನ್ನು, ಜೀವಜಾಲದ ಕೊಂಡಿಗಳನ್ನು ಬೆಸೆದಿರುತ್ತದೆ. ಜೈವಿಕ ಅನನ್ಯತೆಯ ವಿಕಾಸದ ಪ್ರಮುಖ ತತ್ವ. ವಿವಿಧ ಅನನ್ಯತೆಗಳನ್ನೇ ಜೀವ ವೈವಿಧ್ಯ ಎಂದು ಕರೆಯುವುದು. ಜೀವಿಗಳ ವೈವಿಧ್ಯ ಚಹರೆಯು ಅಂತಿಮವಾಗಿ ಜನಪದಗಳ ಸಂಸ್ಕೃತಿಗಳನ್ನು ರೂಪುಗೊಳಿಸಿವೆ. ಪಶುಪಾಲಕ ಸಮಾಜಗಳು ದೈವದತ್ತವಾಗಿ ಬೆಳೆದವಲ್ಲ. ಅವು ಜೈವಿಕ ವೈವಿದ್ಯತೆಯ ನೈಸರ್ಗಿಕ ಸಂಬಂಧಗಳಿಂದ ಮಾತ್ರ ಬದುಕುಳಿದವು. ಇಲ್ಲದಿದ್ದರೆ ಕೃಷಿ ಪರಂಪರೆಗಳ ತನಕ ಮಾನವ ಪಯಣ ಸಾದ್ಯವಾಗುತ್ತಲೇ ಇರಲಿಲ್ಲ.

ಸಂಸ್ಕೃತಿಗಳು ನಿಸರ್ಗಕ್ಕೆ ಬದ್ಧವಾಗಿದ್ದವು. ಜೀವಜಾಲದ ವಿಕಾಸದ ರೀತಿಯಲ್ಲೇ ಸಂಸ್ಕೃತಿಗಳೂ ವಿಕಾಸವಾದವು. ಇಪ್ಪತ್ತನೆ ಶತಮಾನದ ಕೊನೆ ಹೊತ್ತಿಗೆ ವರ್ತಮಾನದ ಪರಿಸರ ಗತಕಾಲದ ಪರಿಸರದಿಂದ ದೂರ ಸರಿದಂತೆ ಜೀವನ ವಿಧಾನದಲ್ಲಿ ತುಂಬ ವ್ಯತ್ಯಯಗಳು ಉಂಟಾಗಿ ಸಂಸ್ಕೃತಿಗಳಿಗಿದ್ದ ನೈಸರ್ಗಿಕ ಕೊಂಡಿಗಳು ಕಳಚತೊಡಗಿದವು. ಜೈವಿಕ ಸಂಸ್ಕೃತಿಯ ಪ್ರಜ್ಞೆ ಇಲ್ಲದೆ ತಂತ್ರಜ್ಞಾನ ಕೇಂದ್ರಿತ ಆಧುನಿಕತೆಯ ತನ್ನ ಜೀವನ ವಿಧಾನದಲ್ಲಿ ಹೊಸ ಬಗೆಯ ಮೌಲ್ಯಗಳನ್ನು ಅಳವಡಿಸಿಕೊಂಡಿತು. ಈ ಹೊಸ ಮೌಲ್ಯಗಳು ವಿಶೇಷವಾಗಿ ಹೆಚ್ಚು ಉತ್ಪಾದನೆ, ಹೆಚ್ಚು ಸಮಯ ಸುಖ ಸೌಲಭ್ಯಗಳನ್ನು ಅನುಭೋಗಿಯಾಗಿ ಸವಿಯುವುದು, ನೈಸರ್ಗಿಕವಾದ ಪರೀಕ್ಷೆಗಳಿಂದ ಜಾಣ್ಮೆಯಿಂದ ಜಾರಿಕೊಂಡು ಕೃತಕ ಪ್ರತಿರೋಧಗಳನ್ನು ಸೃಷ್ಟಿಸಿಕೊಳ್ಳುವುದು ಹಾಗು ವ್ಯಕ್ತಿ ವಿಶಿಷ್ಟ ತಿಳುವಳಿಕೆಯನ್ನೇ ಶ್ರೇಷ್ಠ ಎಂದು ಭಾವಿಸುವುದು. ಇವುಗಳಿಂದ ವಿಕಾಸದಲ್ಲಿ ಏನಾಗಿದೆ ಎಂಬುದನ್ನು ಆಧುನಿಕ ಸಮಾಜಗಳು ನೆನಪು ಮಾಡಿಕೊಳ್ಳುವ ಗೋಜಿಗೇ ಹೋಗಿಲ್ಲ. ಯಾವುದೇ ಆಹಾರೋತ್ಪಾದನೆಯು ಅಳತೆ ಮೀರಿದಾಗಲೂ ಅಪಾಯವೇ. ಹೆಚ್ಚು ಸುಖ ವಿಕಾಸಕ್ಕೆ ಹೊರೆಯಾದುದೇ. ವಿರಾಮ ಕಾಲವೂ ಅಪಾಯಕಾರಿಯಾದುದೇ. ನೀತಿ ಮೀರಿದ ಸುಖ, ಸಮಯ, ಆಹಾರ ಜೀವವಿಕಾಸಕ್ಕೆ ಅಡ್ಡಿ ಪಡಿಸುತ್ತವೆ. ಅಲ್ಲದೆ ಈ ಬಗೆಯ ನಿಸರ್ಗದ ಸಹಜ ಪರೀಕ್ಷೆಗಳಿಗೆ ಒಳಗಾಗದಂತೆ ತಡೆದು ಪ್ರತಿರೋಧ ಶಕ್ತಿ ಕುಗ್ಗಲು ಕಾರಣವಾಗುತ್ತದೆ.

ಆಧುನಿಕ ಮಾನವ ವಿಶೇಷ ಕಾಳಜಿ ತೋರಿರುವುದು ಸ್ವಕೇಂದ್ರಿತ ಉತ್ಪಾದನೆಗಳಲ್ಲಿ. ಅನುಕೂಲಗಳೇ ಪ್ರಧಾನ ಕಾಳಜಿಗಳಾಗಿರುವುದರಿಂದ ಮನುಷ್ಯ ಸಹಜವಾಗಿ ಮಾಡಿಕೊಳ್ಳಬಹುದಾದ ಎಷ್ಟೋ ಅಸಂಖ್ಯ ಸಂಗತಿಗಳನ್ನೆಲ್ಲ ತಾನು ಮಾಡದೆ ಅನುಕೂಲ, ಸೌಲಭ್ಯ, ಸವಲತ್ತುಗಳ ಮೂಲಕ ಮಾಡಿಕೊಳ್ಳುವುದು ಜೀವಜಾಲದ ಜೈವಿಕ ಸಂವೇದನೆಯೆ ಲೋಪಗೋಳ್ಳುವಂತೆ ಮಾಡುತ್ತದೆ. ಮನುಷ್ಯರು ಅಪರಿಮಿತ ಸೌಲಭ್ಯಗಳನ್ನು ಹುಡುಕುತ್ತಾ ನಡೆದಂತೆ ಬೌದ್ಧಿಕವಾದ ಭೌತಿಕವಾದ ಎರಡೂ ವಿಕಾಸಗಳು ಅಡ್ಡದಾರಿ ಹಿಡಿಯುತ್ತವೆ. ಯುದ್ಧಗಳು, ಹುನ್ನಾರಗಳು, ಭಯೋತ್ಪಾದನಾ ತಂತ್ರಗಳು, ದಾಳಿಕೋರ ರಾಜಕಾರಣದ ಆರ್ಥಿಕ ವಿರೂಪಗಳು ಉಂಟಾಗುವುದೇ ವಿಪರೀತ ಸೌಲಭ್ಯ ಹಾಗೂ ಸಂಪತ್ತಿನ ದಾಹದಿಂದ, ಧರ್ಮಗಳು ಕೂಡ ಜೈವಿಕತೆಯಿಂದ ದೂರ ಸರಿದಾಗ ಅಂತಹ ಧಾರ್ಮಿಕ ಮೌಲ್ಯಗಳು ಕೂಡ ನಿಸರ್ಗದ ಹಂಗು ತೊರೆದು ವರ್ತಮಾನದ ಭಗ್ನ ಅವಸ್ಥೆಗಳಿಗೆ ಆತ್ಮಹತ್ಯಾತ್ಮಕ ವಿಕೃತಿಗಳಿಗೆ ಒಳಗಾಗಬಲ್ಲವು. ಸೌಲಭ್ಯಗಳೆಲ್ಲ ಪರೋಕ್ಷವಾಗಿ ಜೈವಿಕವಾದ ಸಂಬಂಧಗಳನ್ನು ದೂರ ಮಾಡುವಂತೆಯೆ ಅವಿಷ್ಕಾರಗೊಳ್ಳುತ್ತಿರುವುದು ಜೈವಿಕತೆಯ ಯಾವ ಸ್ವಭಾವವೋ ಏನೋ ಪತ್ತೆ ಮಾಡಬೇಕಾಗಿದೆ.

ಪಶುಪಾಲಕರು ನಿಸರ್ಗದ ಸೌಲಭ್ಯಗಳಿಂದಲೆ ಜೀವನ ಸಾಗಿಸಿದರು. ಅಂತಹ ಜೀವನ ಮೌಲ್ಯಗಳನ್ನು ಆಧುನಿಕತೆ ನಿರಾಕರಿಸುವಂತಾದರೆ ಅದು ಯೋಗ್ಯವಾದ ಆಧುನಿಕತೆ ಅಲ್ಲ. ಪರಿಷರಿಸಿ ಪ್ರತಿಸೃಷ್ಟಿಸಿ ಜೈವಿಕವಾದ ಸಂಬಂಧವನ್ನು ಮತ್ತಷ್ಟು ಉತ್ತಮಪಡಿಸುವುದೇ ಸಮರ್ಥ ಆಧುನಿಕತೆ. ಕೃಷಿ ಸಮಾಜಗಳು ಹೆಚ್ಚು ಸೌಲಭ್ಯಗಳಿಲ್ಲದೆಯೇ ಸ್ವಯಂ ಉತ್ಪದಕವಾಗಿ ಪರಿಪೂರ್ಣತೆಯನ್ನು ನಿಸರ್ಗದ ಭಾಗವಾಗಿ ಅನುಭವಿಸಿದ್ದಕ್ಕೆ ಗತ ಕಾಲದ ನೆನಪುಗಳಿವೆ. ವಿಪರೀತ ಸೌಲಭ್ಯಗಳು ಹೆಚ್ಚು ಸುಖ ನೀಡುತ್ತವೆ ಎಂಬುದು ಕೇವಲ ಭ್ರಮೆ. ಗಾಂಧೀಜಿ ಅವರು ಹೀಗಾಗಿಯೇ. ಆಧುನಿಕ ತಂತ್ರಜ್ಞಾನದ ವಿಪರೀತ ಅವಲಂಬನೆಯ ಬಗ್ಗೆ ಅಸಹನೆ ತೋರುತ್ತಿದ್ದುದು. ಜೈವಿಕವಾದ ಆಧ್ಯಾತ್ಮವಿಲ್ಲದೆ ಆಧುನಿಕ ಸಮಾಜಗಳು ಹೆಚ್ಚು ಕಾಲ ಬದುಕಿರಲಾರವು. ಹೆಚ್ಚು ಹೆಚ್ಚು ತಾಂತ್ರೀಕೃತ ಸೌಲಭ್ಯಗಳು ಹೆಚ್ಚಿದಂತೆಲ್ಲ ಸಾಮಾಜಿಕ ಮೌಲ್ಯಗಳು ಸಮಷ್ಠಿ ನೀತಿಯನ್ನು ಕಳೆದುಕೊಳ್ಳುತ್ತವೆ. ಭೊತಿಕ ಜಗತ್ತಿನ ಸೌಲಭ್ಯಗಳನ್ನು ವಿಪರೀತ ಮಾಡಿಕೊಂಡಾಗ ನಮ್ಮ ಗಾಳಿ ಬೆಳಕು ಬೇರೊಂದು ಸ್ವರೂಪದಲ್ಲಿ ಸ್ವಸ್ತ ಗುಣವನ್ನು ಕಳೆದುಕೊಳ್ಳಬಲ್ಲವು.

ಕಣ್ಣಿಗೆ ಕಾಣದಿರುವ ಬಹುಬಗೆಯ ಕಿರಣಗಳಿಂದಲೇ, ವಿದ್ಯುತ್ ತರಂಗಾಂತರಗಳಿಂದಲೆ ಆಧುನಿಕ ಜಗತ್ತು ವಿಪರೀತ ಸಂಪರ್ಕವನ್ನು ಸೌಲಭ್ಯವನ್ನು ಪಡಿದಿರುವುದು. ಇದು ಅಳತೆ ಮೀರಿದರೆ ಜಗತ್ತಿನ ಸಂವಹನ ಜಾಲವೇ ನಾಶವಾಗಿ ಬಿಡಬಲ್ಲದು. ಅಂದರೆ ಸೌಲಭ್ಯಗಳು ಭೌತಿಕವಾಗಿ ವಿಪರೀತ ಆದಂತೆಲ್ಲ. ಅಭೌತಿಕವಾದ ಸಂಪರ್ಕಗಳು ಮನುಷ್ಯರಿಗೆ ದೂರವಾಗ ತೊಡಗುತ್ತವೆ. ಕಣ್ಣಿಗೆ ಕಾಣದ ಆದರೆ ಜೀವಜಾಲಕ್ಕೆ ಆಳದ ಸಂಬಂಧವನ್ನು ಬೆಸೆದುಕೊಂಡಿರುವ ಮತ್ತೊಂದು ಸ್ಥಿತಿಯ ಜೈವಿಕ ಆಧ್ಯಾತ್ಮ. ಇದನ್ನು ಪ್ರತಿಜಗತ್ತು ಎಂದು ಬೇಕಾದರೂ ಭಾವಿಸಬಹುದು. ನಮ್ಮ ನೈಸರ್ಗಿಕ ಲೋಕದ ಭೌತಿಕ ಸ್ವರೂಪದ ಆಚೆ ಇನ್ನೊಂದು ಅಭೌತಿಕ ನಿಸರ್ಗವೂ ಇದೆ. ಹಾಗೆ ನೋಡಿದರೆ ಆಕಾಶವೂ ಒಂದು ನಿಸರ್ಗವೇ. ಅಲ್ಲಿಂದ ತೂರಿಬರುವ ತರಂಗಗಳೂ ಕೂಡ ನೇರವಾಗಿ ನಮ್ಮ ಭೌತಿಕ ನಿಸರ್ಗದ ಕೊಂಡಿಯೇ. ಸೌಲಭ್ಯಗಳು ಇಂತಹ ಅಭೌತಿಕ ನಿಸರ್ಗದ ಜೊತೆ ಯೋಗ್ಯ ಜೈವಿಕ ಸಂಬಂಧವನ್ನು ರೂಢಿಸಿಕೊಳ್ಳದೆ ಬೆಳೆಯುವುದು ಸಹಜ ವಿಕಾಸದ ಕ್ರಮವಲ್ಲ. ಅಂದರೆ ನೈಸರ್ಗಿಕ ಸೌಲಭ್ಯಗಳಿಗೂ, ಮಾನವ ನಿರ್ಮಿತ ಸೌಲಭ್ಯಗಳಿಗೂ ಇವೆರಡರ ಆಚೆ ಇರುವ ಅವ್ಯಕ್ತ ಜೈವಿಕತೆಯ ಸೌಲಭ್ಯಗಳಿಗೂ ಸಮಾನಾಂತರವಾದ ಚಲನೆ ಇರಬೇಕು. ಕಣ್ಣಿಗೆ ಕಾಣುವ ನೈಸರ್ಗಿಕ ಸೌಲಭ್ಯಗಳಿಗಿಂತ ಕಣ್ಣಿಗೆ ಕಾಣದಿರುವ ನೈಸರ್ಗಿಕತೆಯೇ ಹೆಚ್ಚಿನ ಸೌಲಭ್ಯಗಳನ್ನು ನೀಡಿರುವುದು. ಆಮ್ಲಜನಕ ಒಂದಿಲ್ಲದಿದ್ದರೆ ಜೀವಜಾಲದ ಚಲನೆಯೇ ಇರುತ್ತಿರಲಿಲ್ಲ. ಹೀಗಾಗಿ ವರ್ತಮಾನದ ಜೀವಜಾಲದ ಮೇಲಿನ ಮಾನವ ಹಲ್ಲೆ ನಿಯಂತ್ರಣಕ್ಕೆ ಬಾರದಿದ್ದರೆ ಜೈವಿಕ ಸಂಸ್ಕೃತಿಗಳ ಪರಂಪರೆಗಳಿಗೆ ಯಾವ ಅರ್ಥವೂ ಇರುವುದಿಲ್ಲ. ಅಂತೆಯೇ ಅಭಿವೃದ್ಧಿಯ ಯಾವ ಯೋಜನೆಗಳೂ ನಾಳೆಯನ್ನು ನಿರ್ಮಿಸಲಾರದೆ ತಾತ್ಕಾಲಿಕ ಸೌಲಭ್ಯಗಳ ಭ್ರಷ್ಟತೆಯಲ್ಲಿ ಕಳೆದುಹೋಗುತ್ತವೆ.

ಈ ಸ್ಥಿತಿಗಳಿರುವಾಗ ಹಂಪಿಯ ಅಳಿವಿನಂಚಿನ ಜಾನಪದವನ್ನು ಅದರ ಗತಕಾಲದ ರಮ್ಯ ಭಾವಗಳಿಂದ ವಿವರಿಸಲಾಗದು. ಒಂದು ಕಾಲಕ್ಕೆ ಪಶುಪಾಲಕ ಜೈವಿಕ ಸಮಾಜಗಳ ನೆಲೆಯಾಗಿದ್ದ ಹಂಪಿಯ ವರ್ತಮಾನದಲ್ಲಿ ಅಭಿವೃದ್ಧಿ ದಾಹದ ಜಾಗತಿಕ ಸೆಳೆತಕ್ಕೆ ಸುಲುಕಿದೆ. ಈ ಸೆಳೆತದಿಂದ ತಪ್ಪಿಸಲು ಬದಲಿ ವ್ಯವಸ್ಥೆಗಳೆ ಇಲ್ಲವಾಗಿವೆ. ಜೀವನ ವಿಧಾನವೇ ಬದಲಾದಾಗ, ಅದರ ಸಾಮಾಜಿಕ ಪರಿಸರವೂ ಬದಲಾಗುತ್ತದೆ. ಹಳೆ ಕಾಲದ ಅಭಿವ್ಯಕ್ತಿಗಳು ಇಂತಲ್ಲಿ ಹಿಂದೆ ಸರಿಯುತ್ತವೆ. ಆಯಾಯ ಜೀವನ ವಿಧಾನಕ್ಕೆ ತಕ್ಕಂತೆ ಅಭಿವ್ಯಕ್ತಿಗಳಿರುತ್ತವೆ. ಹಳೆಯ ಅಭಿವ್ಯಕ್ತಿಗಳೇ ಬೇಕು ಎನ್ನುವುದಾದರೆ ಹಳೆಯ ಜೀವನ ವಿಧಾನವನ್ನೂ ಉಳಿಸಿಕೊಂಡಿರಬೇಕಾಗುತ್ತದೆ. ಆ ಜೀವನ ವಿಧಾನವೇ ಇಲ್ಲ ಎಂದಾದಾಗ ಅಂತಹ ಅಭಿವ್ಯಕ್ತಿಗಳೂ ಅಸಾಧ್ಯ. ಹಂಪಿಯ ಜೀವಜಾಲ ಜಾನಪದದ ಬಹುರೂಪಗಳನ್ನು ಗತ ನೆನಪುಗಳಿಂದ ವಿವರಿಸುವುದೇ ಬೇರೆ. ವರ್ತಮಾನದ ಜೀವಜಾಲ ಸ್ಥಿತಿಯನ್ನು ನಿರ್ವಚಿಸುವ ಸ್ಥಿತಿಯೇ ಬೇರೆ. ಹಂಪಿಯ ಸಸ್ಯ ಜಾನಪದ, ಪ್ರಾಣಿ ಜಾನಪದ, ಕೀಟ ಜಾನಪದ, ಜಲಚರ ಜಾನಪದ, ಜಲ ಜಾನಪದ, ಪಕ್ಷಿ ಜಾನಪದ ಹಾಗೂ ಭೌಗೋಳಿಕ ಜಾನಪದಗಳನ್ನು ನಿರೂಪಿಸುವಾಗ ಗಮನಕ್ಕೆ ಬಂದ ಸಂಗತಿಗಳಲ್ಲಿ ಹೆಚ್ಚಿನವು ಗತ ಕಾಲದ ಅಳಿದುಳಿದ ಸ್ಮೃತಿಗಳು ಮಾತ್ರ. ಖಡ್ಡಾಯವಾಗಿ ಆ ಬಗೆಯ ಜೈವಿಕ ನಿಯಮಗಳನ್ನು ಪಾಲಿಸಬೇಕಾದ ನೈತಿಕ ಅನಿವಾರ್ಯತೆ ಇಂದಿನ ಹಂಪಿಯ ಜನಪದಗಳಿಗೆ ಇಲ್ಲವಾಗಿದೆ. ಜಗತ್ತಿನ ಯಾವುದೋ ಒಂದು ಪುಟ್ಟ ಹಂಪಿಯು ವಿಶ್ವ ಪರಂಪರೆಯ ಗ್ರಾಮಗಳ ನೈಸರ್ಗಿಕ ಪ್ರಜ್ಞೆಯಲ್ಲಿ ಇಷ್ಟೆಲ್ಲವನ್ನು ನಿರೀಕ್ಷಿಸುವುದು ಸಮಂಜಸವಲ್ಲ ಎನ್ನಿಸಬಹುದು. ಜೈವಿಕ ಸಂವಿಧಾನ ಜಗತ್ತಿನ ಎಲ್ಲ ಮಾನವರಿಗೂ ಸಂಬಂಧಪಟ್ಟಿದ್ದು. ಆ ಜೈವಿಕ ಸಂವಿಧಾನವನ್ನು ನಮಗೆ ಬೇಕಾದಂತೆ ತಿದ್ದುಪಡಿ ಮಾಡಲು ಸಾಧ್ಯವೇ ಇಲ್ಲ. ಹೋಮೊಸೆಫಿಯನ್ ಮಾನವ ಕುಲದಿಂದ ವಿಕಾಸಗೊಂಡ ಎಲ್ಲರಿಗೂ ಜೈವಿಕ ಸಂವಿಧಾನ ನಿರ್ದಿಷ್ಟ ಪ್ರವೃತ್ತಿಗಳ ಸಂವೇದನೆಯನ್ನು ಮೂಲಭೂತವಾಗಿ ನೀಡಿದೆ. ಆ ಸತ್ಯವನ್ನು ಉಲ್ಲಂಘಿಸಿದರೆ ವರ್ತಮಾನವು ಮತ್ತೆ ಮತ್ತೆ ಭೀಕರವಾಗುವುದಲ್ಲದೆ ಸುಂದರವಾಗಲಾರದು.

ಕೊನೆಗೂ ಉಳಿಯುವುದು ಜೈವಿಕ ಸಂವೇದನೆ ಮಾತ್ರ. ಆ ಸಂವೇದನೆಯು ಯಾವ ಕೃತಕ ಸೌಲಭ್ಯಗಳಿಲ್ಲದೆಯೂ ಅಭಿವೃದ್ಧಿಯ ವೇಗ ಇಲ್ಲದೆಯೂ ಆಧುನಿಕತೆಯ ದಿಗ್ವಿಜಯಗಳಿಲ್ಲದೆಯೂ ತನ್ನೊಳಗೆ ತಾನೇ ಸ್ನಿಗ್ಧವಾಗಿ ಮುಗ್ಧವಾಗಿ ದಿವ್ಯವಾಗಿ ಕಾಲದ ನಿತ್ಯ ನಿರಂತರ ಚಲನೆಯ ಹಾಗೆ ಇರಬಲ್ಲದು. ಅದು ಭೌತಿಕ ಜಗತ್ತಿನ ಆಚೆಗಿನ ಅವ್ಯಕ್ತ ಜೈವಿಕ ಸ್ಥಿತಿ. ಆ ಸ್ಥಿತಿಯ ಜೊತೆ ಮಾನವ ಸಮಾಜಗಳು ಮರು ಒಪ್ಪಂದಗಳನ್ನು ಸಾಧಿಸಿ ಹೊಂದಿಸಿಕೊಂಡಾಗ ಮಾತ್ರವೇ ಅತ್ಯಂತಿಕವಾದ ಜೈವಿಕ ಸಂಸ್ಕೃತಿಗಳು ಹೊಸ ರೂಪ ಪಡೆಯಲು ಸಾಧ್ಯವಾಗುವುದು.