ಅಭೌತಿಕ ಚಲನೆ

ಚಲನೆಯಲ್ಲಿಯೂ ವಿಕಾಸವಾಗಿದೆ. ಮನುಷ್ಯ ಈಗ ಸಾಧಿಸಿಕೊಂಡಿರುವ ಚಲನೆಯಲ್ಲೂ ಅನೇಕ ವೈರುಧ್ಯಗಳಿವೆ. ಆದರೆ, ಅಭೌತ ಚಲನೆಯ ವೇಗ ಮಾನವರ ನಿಯಂತ್ರಣಕ್ಕೆ ಒಳಪಟ್ಟಿಲ್ಲ. ಅಭೌತ ಚಲನೆಗೂ ಜನಪದರಿಗೂ ಸಂಬಂಧವಿದೆ. ಸಂಸ್ಕ್ಟುತಿಗಳಿಗೆ ಚಲನೆ ಇರುವುದಕ್ಕೂ ಅವ್ಯಕ್ತವಾದ ಜೀವಜಾಲದ ಸಂಬಂಧಗಳ ಚಲನೆಗೂ ತಾರ್ಕಿಕ ಸಂಬಂಧಕ್ಕಿಂತ ಹೆಚ್ಚಾಗಿ ಅಸ್ತಿತ್ವದ ಸಂಬಂಧಗಳಿವೆ. ಕೃಷಿ ಸಂಸ್ಕೃತಿಗಳು ಧಾರ್ಮಿಕ ವಲಯವನ್ನು ಪ್ರವೇಶಿಸುತ್ತಿದ್ದಂತೆಯೇ ತಮ್ಮ ಸುತ್ತಲ  ಜೀವಜಾಲದ ಭೌತಿಕ ಚಲನೆಗೆ ಭಿನ್ನವಾದೊಂದು ಆಲೋಚನೆಯನ್ನು ದೈವಿಕ ಸಂಬಂಧಗಳಿಂದ ಕಂಡುಕೊಂಡವು. ಗಾಳಿ ಬೆಳಕಿನ ಚಲನೆಗೆ ಬೇರೆ ಬೇರೆ ಅರ್ಥಗಳು ಇದರಿಂದ ದೊರೆತವು. ಪಂಚಭೂತಗಳು ಧಾರ್ಮಿಕ ಪರಿವೇಷದಲ್ಲಿ ಅಭೌತಿಕ ಲೋಕದ ಚಲನೆಯನ್ನು ಭಿನ್ನವಾಗಿ ಜನಪದರಿಗೆ ಕಾಣಿಸಲ್ಪಟ್ಟವು. ಹಗಲು ರಾತ್ರಿಗಳ ಚಲನೆ ಅಭೌತಿಕ ಚಲನೆ. ಹುಟ್ಟು ಸಾವು ಕೂಡ ಜನಪದರಿಗೆ ಅಭೌತ ಚಲನೆಯೇ ಆಗಿ ಕಂಡಿದೆ. ತಾನೊಂದು ಬಗೆದರೆ ದೈವ ಬೇರೊಂದನ್ನು ಬಗೆವುದು ಎಂಬ ಪ್ರಜ್ಞೆಯು ಅಭೌತ ಚಲನೆಯ ಬೇರೊಂದು ಪ್ರಮಾಣವನ್ನು ಧ್ವನಿಸುತ್ತಿದೆ.

ಭೌತ ಚಲನೆಗೂ ಅಭೌತ ಚಲನೆಗೂ ಜನಪದರಲ್ಲಿ ದೊಡ್ಡ ವ್ಯತ್ಯಾಸವಿಲ್ಲ. ಅವೆರಡನ್ನೂ ಅಧ್ಯಾತ್ಮದ ಚಲನೆಯಲಿ ಭಾವಿಸಲಾಗುತ್ತದೆ. ಅಂದರೆ ಅಮೂರ್ತತೆಯಿಂದ ವರ್ತಮಾನದ ಮೂರ್ತತೆಗೆ ಅರ್ಥಸಂಬಂಧವನ್ನು ಜನಪದಗಳು ಎಟುಕಿಸಿಕೊಳ್ಳುತ್ತವೆ. ಭೌತಿಕ ಚಲನೆ ಲೌಕಿಕದ ಎಲ್ಲೆಯನ್ನು ಕ್ರಮಿಸಿದರೆ ಅಭೌತ ಚಲನೆಯು ಅಲೌಖಿಕದ ವ್ಯಾಪ್ತಿಯನ್ನು ಸಾಧಿಸುತ್ತದೆ. ಜನಪದರು ಎತ್ತಿನಬಂಡಿಯ ಮೇಲೆ ಸಾಗುತ್ತಲೇ ಆಕಾಶದ ಅನಂತ ದೂರವನ್ನು ಭಾವಿಸುವ ಆಕಾಶಕಾಯಗಳ ಕಥನಗಳನ್ನು ನಿರೂಪಿಸಲು ಸಾಧ್ಯಾವಾಗಿರುವುದು ಇಂತಹ ಅಭೌತ ಚಲನೆಯ ನೆರವಿನಿಂದ. ಅಭೌತ ಚಲನೆಯ ವಿಕಾಸದಲ್ಲಿ ಏನೇನು ನಿಗೂಢಗಳಿವೆ ಎಂಬುದು ಇನ್ನೂ ಸ್ವಷ್ಟವಾಗಿಲ್ಲ. ಆಕಾಶ ಕಾಯಗಳ ಚಲನೆ ಹೇಗೆ ಭೂಮಿಯ ಮೇಲಿನ ಜೀವಜಾಲದ ಅಸ್ತಿತ್ವಕ್ಕೆ ಕಾರಣ ಎಂಬುದನ್ನು ಊಹಿಸಬಹುದು. ಹಗಲು ರಾತ್ರಿಗಳು ಆಕಾಶ ಕಾಯಗಳ ಚಲನೆಯ ಪರಿಣಾಮ. ಜನಪದರು ಹಗಲು ರಾತ್ರಿಗಳನ್ನು ಆಧರಿಸಿಯೇ ಪರಂಪರೆಗಳನ್ನು ರೂಪಿಸಿಕೊಂಡಿರುವುದು. ತಾಂತ್ರೀಕೃತ ಸಮಾಜಗಳಿಗೆ ಹಗಲು ರಾತ್ರಿಗಳ ಪರಿವೆಯೇ ಇಲ್ಲ ಎನ್ನುವುದು ಬೇರೆಯೇ ಮಾತು. ಜೀವಜಲ ವಿಕಾಸದ ಭೌತಿಕ ಚಲನೆಗೆ ಮಿತೆ ಬಂದೊದಗಬಹುದು. ಅದಕ್ಕೆ ನೇರ ನಿಸರ್ಗವೇ ಹೊಣೆ ಅಲ್ಲ. ಅಭೌತ ಚಲನೆಗೆ ಭಾಗಶಃ ಯಾವ ಮಿತಿಯೂ ಇಲ್ಲವೇನೋ. ಆಕಾಶಕಾಯಗಳನ್ನು ಹೀಗಾಗಿಯೇ ನಾವು ನಿಯಂತ್ರಿಸಲಾಗದು. ಮುಗ್ಧವಾಗಿದ್ದ ಜನಪದಗಳು ಇಪ್ಪತ್ತೊಂದನೆಯ ಶತಮಾನದ ತಾಂತ್ರೀಕೃತ ಕೃತಕತೆಗೆ ಮುಖಾಮುಖಿ ಆಗುವ ಹೊತ್ತಿನಲ್ಲೆ ಗತಕಾಲದ ಅಭೌತಿಕ ಚಲನೆಯ ಜನಪದ ನಂಬಿಕೆಗಳು ಕಳಚಿದ ಕೊಂಡಿಗಳಂತೆ ಕಾಣುತ್ತಿರಬಹುದು. ಚಲನೆಯ ಅಭೌತ ಗತಿಯೇ ಜೀವ ವಿಕಾಸದ ಪರಮ ಪ್ರಮಾಣ. ಜನಪದ ಪರಂಪರೆಗಳು ಅಂತಹ ಪ್ರಮಾಣದ ನಂಬಿಕೆಯಿಂದಲೇ ಈಗಲೂ ಬದುಕುಳಿದಿವೆ.

ಆದಿ ಮಾನವ ಖಂಡಾಂತರಗಳನ್ನು ಯಂತ್ರಗಳಿಲ್ಲದೆ ದಾಟುತ್ತಿದ್ದ. ಹಾಗೆ ಸಾಗಿದ್ದರಿಂದಲೇ ಆತನ ಜೈವಿಕತೆಯಲ್ಲಿ ಅನೇಕ ಬದಲಾವಣೆಗಳು ಆದವು. ಒಂದೇ ನಿರ್ದಿಷ್ಟ ನೆಲೆಯೂ ಒಂದೇ ದಾವಂತದ ವೇಗವೂ ಒಂದೇ ಆಸೆಯ ಗುರಿಯೂ ಬೇಗ ನಮ್ಮ ಚಲನೆಯನ್ನು ಮುಗಿಸಿ ಬಿಡುತ್ತದೆ. ಆದಿ ಮಾನವರ ಜೈವಿಕ ಸಂಬಂಧ ನೈಸರ್ಗಿಕ ಒಪ್ಪಂದಗಳಿಗೆ ಬದ್ಧವಾಗಿತ್ತು. ವೇಗದ ಮಿತಿಯಲ್ಲಿದ್ದಷ್ಟೂ ತಲುಪಬೇಕಾದ ಗುರಿ ನಿಶ್ಚಿತವಾಗಿರುತ್ತದೆ. ಎತ್ತಿನ ಬಂಡಿಯ ಪಯಣ ಈಗ ಸಾಧ್ಯವಿಲ್ಲ ನಿಜ. ಭೌತಿಕವಾಗಿ ಸಾಧ್ಯವಾಗದ್ದನ್ನು ಮಾನಸಿಕವಾಗಿ ಸಾಧಿಸಬಹುದು. ಮನುಷ್ಯನ ಮನಸ್ಸಿನ ವೇಗವನ್ನು ನೆನೆದರೆ ಭಾಗಶಃ ಆ ವೇಗವೂ ಬಳಕಿನ ವೇಗದಂತೆ ಚಲಿಸಬಲ್ಲದು. ತಾನು ಈಗಾಗಲೆ ಕಂಡಿರುವ ನೆಲೆಯನ್ನು ಅದು ಎಷ್ಟೇ ದೂರವಿದ್ದರೂ ಮನಸ್ಸು ವಿದ್ಯುತ್ ತರಂಗದಂತೆ ತಕ್ಷಣವೆ ಆ ನೆಲೆಯ ಬಿತ್ರವನ್ನು ನಮ್ಮ ಕಣ್ಣ ಮುಂದೆ ತಂದು ನಿಲ್ಲಿಸುವುದಿಲ್ಲವೇ? ಈ ಮಟ್ಟದಲ್ಲಿಯಾದರೂ ನಾವು ವೇಗದ ಅಂತರವನ್ನು ಬೇರೆ ಸಂಗತಿಗಳ ನಡುವೆ ಸುಧಾರಿಸಿಕೊಳ್ಳಬಹುದು. ಇದು ಮನಸ್ಸಿನ ಸಾಧ್ಯತೆ ಹಾಗೆಯೇ ಮೆದುಳಿನ ಸಾಧ್ಯತೆ. ಇಂತಹ ಸಾಧ್ಯತೆ ಹೇಗೆ ಇಷ್ಟು ವೇಗವನ್ನು ಸಾಧಿಕೊಂಡಿತು  ಎಂಬುದನ್ನು ಬೇರೆಯೇ ಆಗಿ ಪರಿಶೀಲಿಸಬೇಕಾಗಿದೆ. ನಾವು ಕಾಣದ ಲೋಕವನ್ನು ಒಂದು ವೇಳೆ ಅದು ಇದ್ದುದ್ದೇ ಆಗಿದ್ದಲ್ಲಿ ಕಾಣುವಂತೆ ಮಾಡಿಕೊಳ್ಳಲು ಬೇಕಾದ ವೇಗವನ್ನು ಮನುಷ್ಯ ಕಂಡುಕೊಂಡರೆ ನಿಜಕ್ಕೂ ಆಗ ಅದೊಂದು ವೇಗೋತ್ಕರ್ಷದ ಜಿಗಿತ. ಅಂತಹ ವೇಗವನ್ನು ಮನಸ್ಸು ಆಕಾಶದ ಬಳಕಿನ ಅಥವಾ ಇನ್ನಾವುದೊ ಕಿರಣಗಳ ಸಹಾಯದಿಂದ ಸಾಧಿಸಿ, ಅರ್ಶಿಸುವಂತಾದರೆ ಆಗ ನಾವು ಜೀವಿಗಳಿರಬಹುದಾದ ಆಕಾಶ ಕಾಯಗಳನ್ನು ಸುಲಭವಾಗಿ ನೋಡಬಹುದು. ಇದೊಂದು ಖಗೋಳ ಕಲ್ಪನೆಯಂತೆ ಕಾಣುವುದಾದರೂ ಮನಸ್ಸಿನ ವೇಗಕ್ಕೆ ಇರುವ ಸಾಧ್ಯತೆಗೆ ತಕ್ಕ ಮಧ್ಯವರ್ತಿಗಳು ನಮಗೆ ಸಾಧ್ಯವಾಗಬಹುದು. ಅಂತಹ ವೇಗದ ಕೊಂಡಿಗಳನ್ನು ಎಟುಕಿಸಿಕೊಳ್ಳುವುದು ನಿಜವಾದ ವೇಗದ ಸಾಧ್ಯತೆಯೇ ವಿನಃ ರೇಸ್ ಗಳಲ್ಲಿ ಡಿಕ್ಕಿ ಹೊಡೆದುಕೊಂಡು ಬಿದ್ದು ಎದ್ದು ಕೈ ಬೀಸುವುದಲ್ಲ. ಆಧುನಿಕ ಜ್ಞಾನ ಪರಂಪರೆಗಳು ಇಂತಹ ವೇಗದ ಹಂಗಿನವು. ವೇಗವನ್ನು ವೃದ್ಧಿಸಿಕೊಳ್ಳುವುದೇ ಪರಮ ಸಾಮರ್ಥ್ಯವಲ್ಲ.

ವೇಗವೂ ಕೊನೆಗೂ ಭೌತಜಗತ್ತಿನ ಬೇರೆ ಬೇರೆ ಅಂತರ್ಗತ ಮಧ್ಯವರ್ತಿಗಳ ಕ್ರಿಯೆ. ಬಲವಿದ್ದಾಗ ಒಂದು ವಸ್ತು ಚಲಿಸುತ್ತದೆ ಎಂಬುದು ಸಾಮಾನ್ಯ ತಿಳುವಳಿಕೆ. ಚಲನೆಗೆ ಪೂರಕವಾಗಿ ಸಂಚಲಿಸುವ ಶಕ್ತಿ ಮೂಲವಿರಬೇಕು. ಹಾಗೆಯೇ ಚಲನೆ ಹಾಗು ಶಕ್ತಿ ಇವೆರಡರ ನಡುವೆ ಒಂದು ಅವಕಾಶವಿರಬೇಕು. ಈ ತುದಿಯಿಂದ ಆ ತುದಿಗೆ ಒಂದು ದೂರವೇ ಇಲ್ಲದಿದ್ದರೆ ಆಗ ಚಲನೆಗೆ ಅರ್ಥವೇ ಇರುವುದಲ್ಲ. ಅಂತೆಯೆ ಕ್ರಿಯೆ ಅಥವಾ ಪರಿಣಾಮ ಉಂಟಾಗುವುದಲ್ಲ. ಜನಪದರು ಈ ಬಗೆಯ ಚಲನೆಯ ನಿಯಮಗಳಿಗೆ ತಲೆ ಕೆಡಿಸಿಕೊಂಡವರಲ್ಲ. ಹೊತ್ತು ಗೊತ್ತುಗಳನ್ನು ಸೂರ್ಯ ಮುಳುಗೇಳುವುದರಲ್ಲಿ ಕಂಡುಕೊಂಡವರು. ’ತಾನು ಇದನ್ನು ನಡೆಸುವೆ ಎಂಬ ಗರ್ವ ಯಾಕೆ. ಚರಾಚರ ಜೀವಿಗಳಿಗೆಲ್ಲ ಬೇರೊಂದು ಶಕ್ತಿಯ ನಿಯಂತ್ರಣವಿದೆ. ಅದು ಎಲ್ಲವನ್ನು ನಡೆಸುತ್ತದೆ. ಬಿದ್ದವರನ್ನು ಎಬ್ಬಿಸಿ ನಡೆಸುವುದು ನಡೆದಾಡಿ ಅಬ್ಬರಿಸುವರ ಬೀಳಿಸಿ ಮಲಗಿಸುವುದು. ನಮ್ಮ ಶಕ್ತಿಯ ಆಚೆಗಿನ ಕೈಯ ಕೈವಾಡ. ನಮ್ಮದೇನಿದ್ದರೂ ಅದರಿಚ್ಛೆಯಂತೆ ನಡೆಯುವುದಷ್ಟೇ ಕರ್ಮ’ ಎಂಬ ಇಂತಹ ಜನಪದ ಆಡುನುಡಿಗಳ ಲೋಕಾರೂಢಿಯಂತೆ ಕಾಣಬಲ್ಲುವಲ್ಲವೆ? ನಿಜ. ಸಾಮಾನ್ಯ ನುಡಿಗಳಿವು. ಇವುಗಳಿಗೆ ಯಾವ ಭೌತ ವಿಜ್ಞಾನಿಯ ತತ್ವದ ತಳಹದಿ ಇಲ್ಲ ಖರೇ.

ಹಾಗಿದ್ದರೂ ಇಂತಹ ಮಾತುಗಳು ಭೌತ ಜಗತ್ತಿನ ನಿಸ್ತಂತು ತರಂಗಗಳನ್ನು ಆಧರಿಸಿ ನುಡಿದಂತಿವೆ. ನಮ್ಮ ಇರುವಿಕೆಯ ಆಚೆಗಿನ ಅಸ್ತಿತ್ವವೇ ನಮ್ಮ ಚಲನೆಗೆ ಮೂಲ ಎಂದು ಹೇಳುತ್ತಿವೆ. ಆ ಚಲನೆಯ ನೀತಿಗೂ ನಮ್ಮ ನಡತೆಯ ನೀತಿಗೂ ಅವಿನಾಭಾವ ಸಂಬಂಧ ಸೂಕ್ತವಾಗಿದ್ದರೆ ಮಾತ್ರ ನಮ್ಮ ಅಸ್ತಿತ್ವ ಸುಭದ್ರ ಎಂಬ ತತ್ವ ಇಲ್ಲೆ ಧ್ವನಿತವಾಗುತ್ತಿದೆ. ಒಂದೊಂದು ಋತುವೂ, ಒಂದೊಂದು ದಿನವೂ, ವಾರವೂ, ತಿಂಗಳೂ, ವರ್ಷಗಳೂ, ಯುಗಗಳೂ ತಾರಾ ಮಂಡಲದ ಲೆಕ್ಕದಂತೆ ನಿರ್ಣಯಸಲ್ಪಟ್ಟಿರುವ ಜನಪದ ಖಗೋಲ ನಿರೂಪಣೆಗಳು ಚಲನೆಯ ನಿಯಮದ ನೈತಿಕತೆಯನ್ನು ದಿವ್ಯವಾಗಿ ಪ್ರತಿ ಸೃಷ್ಟಿಸಿವೆ.

ಇಂತಹ ಪರಂಪರಗಳಿದ್ದೂ ಕೂಡ ಅದೇ ಜನಪದ ವರ್ತಮಾನದಲ್ಲಿ ಹೇಗೆ ತನ್ನ ಜೈವಿಕ ಅನುಸಂಧಾನದ ಕೊಂಡಿಗಳನ್ನು ಕಳಚಿಕೊಳ್ಳಲು ಮುಂದಾಗುತ್ತದೆ? ತಾನೇ ಕಟ್ಟಿದ ಜ್ಞಾನವನ್ನು ತಾನೇ ನಿರಾಕರಿಸಲು ಯಾವ ಬಗೆಯ ಒತ್ತಡಗಳು ಕಾರಣ ಎಂದು ಕೆದಕಿದರೆ ಮತ್ತದೇ ಸಿದ್ಧ ತೀರ್ಮಾನಗಳಿಗೇ ಬಂದು ನಿಲ್ಲಬೇಕಾಗುತ್ತದೆ. ಅಂತಹ ತರ್ಕ ಪರಿಶೀಲನೆಯಿಂದ ವಿಕಾಸದ ಸಮಯಕ್ಕೆ ಲೋಪವಾಗುತ್ತದೆ. ನಮ್ಮ ಸುತ್ತಲ ಪರಿಸರವನ್ನು ಮುಗ್ಧವಾಗಿ ಭಾವಿಸುವುದೇ ಒಂದು ಬಗೆಯ ಜೈವಿಕ ಅನುಸಂಧಾನ. ಸಾಧು ಸಂತರು ಕಾಡಿನಲ್ಲೆ ಧ್ಯಾನ ಮಾಡುತ್ತಿದ್ದರು. ವೇದೋಪನಿಷತ್ತುಗಳು ಕಾಡಿನ ಏಕಾಂತದಲ್ಲಿ ನಿಸರ್ಗದ ಮಡಿಲಲ್ಲಿ ಜ್ಞಾನಪರಂಪರೆಯಾಗಿ ರೂಪುಗೊಂಡವು. ಗಿಡ, ಮರ ಪ್ರಾಣಿ ಪಕ್ಷಿಗಳ ಜೊತೆ ಋಷಿಗಳು. ಮಾತನಾಡುತ್ತಿದ್ದರು ಎಂಬುದನ್ನು ಕೇಳಿದ್ದೇವೆ. ಅವಧೂತರು ಜೀವಜಾಲದ ಅದೃಷ್ಯ ಶಕ್ತಿಗಳ ಜೊತೆಯೂ ಸಂವಹನ ಮಾಡುತ್ತಿದ್ದರೆಂದು ಬಲ್ಲೆವು. ದೇವರು, ಧರ್ಮ ಎಂಬ ಈ ಎರಡು ಶಬ್ದಗಳನ್ನು ಬಿಟ್ಟು ನೀವು ಯಾವುದೇ ಧರ್ಮಶಾಸ್ತ್ರವನ್ನು ಮುಕ್ತವಾಗಿ ಅಧ್ಯಯನ ಮಾಡಿದರೆ ಅವು ಆಳದಲ್ಲಿ ವೇದಾಂತದ ಪರಿಭಾಷೆಯಲ್ಲಿ ನಿಸರ್ಗದ ಅನಂತ ಸಾಧ್ಯತೆಯನ್ನು ನಿಗೂಢ ಮಾರ್ಗಗಳಲ್ಲಿ ವಿವರಿಸುತ್ತಿರುತ್ತವೆ. ಧರ್ಮಶಾಸ್ತ್ರದ ಕವಚ ತೆರೆದು ದಿವ್ಯವಾದ – ಅಂದರೆ ನಮ್ಮ ನಮ್ಮ ಸುಪ್ತಪ್ರಜ್ಞೆಯ ಪ್ರಪಾತದ ಆಳಕ್ಕೆ ಇರುವಿಕೆಯ ಎಲ್ಲ ನಿಯಂತ್ರಣಗಳನ್ನು ಮೀರಿ ಧುಮುಕಿದರೆ – ಪ್ರಜ್ಞೆಯಲ್ಲಿ ನೋಡಿದರೆ ವಿಶ್ವದ ಕಿಟಕಿಯನ್ನೊ, ಬಾಗಿಲನ್ನೊ ಹೆದ್ದಾರಿಯನ್ನೊ ತೆರೆದಂತೆ ಅವು ನಮ್ಮನ್ನು ಕರೆದೊಯ್ಯಬಲ್ಲವು. ಈ ಹಾದಿಯಲ್ಲಿ ಜನಪದ ಪರಂಪರೆಗಳು ಅಂತಹ ಸಾಧ್ಯತೆಯನ್ನು ಎಟುಕಿಸಿಕೊಳ್ಳಲು ಪ್ರತಿ ಹಂತದಲ್ಲೂ ನಮ್ಮ ಜೊತೆಗಿರುತ್ತವೆ. ಹಾಗಾಗಿಯೇ ಈ ನಿಸರ್ಗದ ಅನಂತತೆಯನ್ನು ಕಳೆದುಕೊಂಡು ವೇಗದ ಅಮಲಲ್ಲಿ ತೇಲಲಾಗದು. ಚಾರ್ಲ್ಸ್ ಡಾರ್ವಿನ್ ಮೂಲತಃ ಧರ್ಮಶಾಸ್ತ್ರದಲ್ಲಿ ಉನ್ನತ ಅಧ್ಯಯನ ಮುಗಿಸಿ ಅದರಲ್ಲಿ ಶ್ರದ್ಧೆಯನ್ನು ಇರಿಸಿಕೊಂಡೇ ಜೀವಜಾಲದ ಅನಂತ ಸಾಧ್ಯತೆಯ ಕಿಟಕಿಗಳನ್ನು ತೆರೆದವನು ಐನ್ ಸ್ಟೈನ್ ಅಣುವಿಜ್ಞಾನದ ಅಂತಹ ಸಾಧ್ಯತೆಯನ್ನು ತೋರಿದವನಾದರೂ ಧರ್ಮಶ್ರದ್ದೆಯ ಅತೀತವಾದ ಜ್ಞಾನ ಪರಂಪರೆಯನ್ನು ನಿರಾಕರಿಸಿದ್ದವನಲ್ಲ. ಜನಪದರು ವಿಜ್ಞಾನಿಗಳಾಗಿರಲಿಲ್ಲ ನಿಜ. ಆದರೆ ಅವರ ಜೀವನ ದರ್ಶನದಲ್ಲಿ ವಿಜ್ಞಾನಿಗಳಿಗೆ ಇರಬಹುದಾದ ಎಷ್ಟೊ ದಾರ್ಶನಿಕತೆ ಇತ್ತು. ಅದರಂತೆಯೇ ಜನಪದರು ಕೂಡ ಸೂರ್ಯಚಂದ್ರರ ಚಲನೆಗೆ ಅನುಸಾರವಾಗಿ ತಮ್ಮ ಸಂಸ್ಕೃತಿಗಳನ್ನು ಕಂಡುಕೊಂಡವರಾಗಿದ್ದರು.

ಅಖಂಡ ಜೈವಿಕತೆ

ಜೀವಜಾಲ ಬಿಡಿಯಾಗಿದ್ದರೂ ಜೈವಿಕತೆಯು ಅಖಂಡವಾಗಿಯೇ ಜೀವಜಾಲವನ್ನು ಮುನ್ನಡೆಸುತ್ತದೆ. ಕೇವಲ ಮಾನವರ ಜೈವಿಕತೆ ಒಂದೇ ಮನುಷ್ಯರ ಅಸ್ತಿತ್ವಕ್ಕೆ ಸಾಧ್ಯವಿಲ್ಲ. ಜೀವಜಾಲದ ವೈರುಧ್ಯ ಸರಪಳಿಯು ಏಕಕಾಲಕ್ಕೆ ಬಿಡಿಬಿಡಿಯಾಗಿ ವಿಕಾಸವಾಗುತ್ತಲೇ ಅಖಂಡ ಜೈವಿಕತೆಯನ್ನು ನಿಸರ್ಗದಲ್ಲಿ ಉಳಿಸಿಕೊಳ್ಳುತ್ತಿರುತ್ತದೆ. ಪ್ರಾಣಿಲೋಕ, ಸಸ್ಯಲೋಕ, ಕೀಟಲೋಕ, ಪಕ್ಷಿಲೋಕ ಹೀಗೆ ಭಿನ್ನಲೋಕಗಳು ಭಿನ್ನ ವಿಕಾಸವನ್ನು ಸಾಧಿಸುತ್ತಾದ್ದರೂ ಇವೆಲ್ಲವೂ ಒಟ್ಟಿಗೇ ವಿಕಾಸದ ನೈಸರ್ಗಿಕ ಒಪ್ಪಂದಗಳಿಗೆ ಬದ್ಧವಾಗಿರಲೇ ಬೇಕು. ಹಾಗೆ ಅಖಂಡವಾಗಿ ಬದ್ಧವಾಗಿರುವ  ಅನಿವಾರ್ಯತೆಯಲ್ಲೇ ಒಂದೊಂದು ಜೀವಿಯು ಅಸ್ತಿತ್ವವಿರುವುದು. ಒಂದು ಜೀವಿಯ ಜೀವನ ವಿಧಾನದ ಅರುವು ಇನ್ನೊಂದು ಜೀವಿಯ ಅಸ್ತಿತ್ವಕ್ಕೆ ಗೊತ್ತಿರಬೇಕಾಗುತ್ತದೆ. ಪ್ರಾಣಿಪಕ್ಷಿಗಳಿಗೆ ಜೀವವಿಕಾಸದ ಅರಿವಿರಲು ಸಾಧ್ಯವಿಲ್ಲ ಎಂದು ನಾವು ಭಾವಿಸಲಾಗದು. ಜೀವಜಾಲದ ವಿಕಾಸದಲ್ಲಿ ಪತಿಯೊಂದು ಜೀವಿಗೂ ತನ್ನ ಜೈವಿಕ ಪಯಣದ ಅರಿವಿರುತ್ತದೆ. ಇದು ಅಂತಸ್ಥವಾಗಿರುವ ಪ್ರಜ್ಞೆಯಾದ್ದರಿಂದ ಪ್ರತಿಯೊಂದೂ ಕೂಡ ತನ್ನ ಪರಿಸರದ ಇತರೆ ಜೀವಿಗಳ ವಿಕಾಸವನ್ನು ಅವ್ಯಕ್ತವಾಗಿಯೆ ಭಾವಿಸಿರುತ್ತವೆ. ಮನುಷ್ಯರಷ್ಟು ತರ್ಕವಿಜ್ಞಾನವನ್ನು ಪ್ರಾಣಿಲೋಕ ಅರಿತಿಲ್ಲದಿರಬಹುದಾದರೂ ಅವುಗಳ ಜೈವಿಕ ಎಚ್ಚರ ಸ್ವಯಂ ಸಹಜವಾಗಿ ಜೀವಜಾಲದ ಬೇರೆ ಬೇರೆ ಸಂಬಂಧವು ಹೇಗೆ ವ್ಯಾಪಿಸಿದೆ ಎಂಬುದನ್ನು ತಿಳಿಸಿಕೊಟ್ಟಿರುತ್ತದೆ. ಹೀಗಾಗಿ ಜೀವಜಾಲವು ಅಖಂಡವಾದ ಹೊಂದಾಣಿಕೆಯನ್ನು ಮಾಡಿಕೊಳ್ಳಲು ಸಾಧ್ಯವಾಗಿರುವುದು. ಜನಪದ ಸಮಾಜಗಳು ಅಖಂಡ ಜೈವಿಕತೆಯನ್ನು ಭಾವನಾತ್ಮಕವಾಗಿ ಬೆಸೆದುಕೊಂಡಿವೆ.

ಜನಪದ ಪರಂಪರೆಗಳ ತುಮ್ಬ ಜೀವಜಾಲದ ಅನೇಕ ಕೊಂಡಿಗಳಿವೆ. ಜನಪದ ಸಂಸ್ಕೃತಿಗಳು ಬೆಳೆದು ಬಂದದ್ದೇ ಪ್ರಾಣಿ ಪಕ್ಷಿ ಸಸ್ಯಲೋಕಗಳ ಅವಿನಾಭಾವ ಸಂಬಧಗಳಿಂದ. ಅಖಂಡ ಜೈವಿಕತೆಯು ವಿಶ್ವಾತ್ಮಕವಾದುದು. ವಿಶ್ವದ ಉಗಮ ವಿಕಾಸದ  ಸ್ಥಿತಿಗತಿಗಳಲ್ಲಿ ಅಖಂಡ ಜೈವಿಕತೆಯು ಎಲ್ಲ ಜೀವಿಗಳಿಗೂ ಒದಗಿ ಬಂದ ಗುಣವಾಗಿದೆ. ಇರುವೆ ಕೂಡ, ಸೂಕ್ಷ್ಮಾಣು ಜೀವಿಕೂಡ ನಮ್ಮ ಇರುವಿಕೆಯ ಭಾಗವಾಗಿಯೇ ಜೀವಜಾಲವನ್ನು ಅಳವಡಿಸಿಕೊಂಡಿವೆ. ಅಖಂಡ ಜೈವಿಕತೆಯ ಒಪ್ಪಂದಗಳಿಂದ ಬೇರ್ಪಡಿಸಿಕೊಳ್ಳುವ ಯಾವ ಜೀವಿಗಳಿಗೂ ಉಳಿಗಾಲವಿಲ್ಲ, ಹಾಗೆಯೇ ಸಂಸ್ಕೃತಿಗಳು ಕೂಡ. ವರ್ತಮಾನದ ಸಮಾಜಗಳ ನಾಳಿನ ಸ್ವರೂಪ ತೀರ್ಮಾನವಾಗಬೇಕಿರುವುದು ಅಖಂಡ ಜೈವಿಕತೆಯ ಸಮತೋಲನದ ಮೂಲಕವೇ. ಈ ಸಮತೋಲನದಲ್ಲಿ ಮಾನವ ನಿರ್ಮಿತ ಪರಿಸರ ವಿಪರೀತ ಏರುಪೇರುಗಳಿಂದ ಪ್ರಮಾಣಗೆಡುತ್ತಿದೆ. ಜನಪದಗಳ ನೆನ್ನೆಯ ಮುಗ್ಧ ಅರಿವೂ ವರ್ತಮಾನದ ವಿಜ್ಞಾನದ ಎಚ್ಚರವೂ ಕೂಡಿಯೇ ಭವಿಷ್ಯದ ಜೀವಜಾಲದ ಸಂಬಂಧಗಳು ಬೆಳೆಯಬೇಕು. ಸಾಮಾಜಿಕ ವ್ಯವಸ್ಥೆಗಳು ಜೀವಜಾಲದ ಅರಿವನ್ನು ಪುನರ್ ರೂಪಿಸಿಕೊಳ್ಳುವುದೇ ಸದ್ಯಕ್ಕಿರುವ ಜೈವಿಕ ನ್ಯಾಯ. ಇದನ್ನು ಮಾನವಿಕ ವಿಜ್ಞಾನಗಳು ತಮ್ಮ ತಮ್ಮ ನೆಲೆಗಳಲ್ಲಿ ಮುಂದುವರಿದುಕೊಂಡೇ ಬಂದಿವೆ. ಅವನ್ನೆಲ್ಲ ಅಂತರ್ಗತಿಸಿಕೊಳ್ಳುವ ಜೀವಜಾಲ ಜಾನಪದ ನಿರೂಪಣೆಗಳು ಅನ್ವಯಿಕವಾಗಿ ಆಗಬೇಕಾಗಿದೆ.

ಜೀವಜಾಲ ಜಾನಪದ ಅನುಸಂಧಾನಕ್ಕೆ ಇಂತಹ ಬಹುರೂಪಿ ಸಂಯೋಗ ನಿರೂಪಣೆಯು ಬಲವಾದ ತಾತ್ವಿಕ ತಳಹದಿಯನ್ನು ಒದಗಿಸಬಲ್ಲದು. ಬಹುಪಾಲು ಎಲ್ಲ ಮಾನವಿಕ ವಿಜ್ಞಾನಿಗಳಿಗೂ ಜೀವಜಾಲದ ಸಂಬಂಧವಿದೆ. ವಿಜ್ಞಾನಗಳು ಎಲ್ಲೊ ಆಕಾಶದಿಂದ ಹುಟ್ಟಿಬರಲಿಲ್ಲ. ಅಂತಹ ಜ್ಞಾನ ಪರಂಪರೆಗಳನ್ನು ಸಂಶೋಧನೆಯ ನಿಖರ ಅರಿವಿನಿಂದ ಕಂಡುಕೊಂಡವರು ಕೂಡ ನಮ್ಮ ಸಮಾಜದ ಮೂಲಕವೇ ಬಂದವರು. ಜನಪದರೂ ವಿಜ್ಞಾನಿಗಳೂ ಕೂಡಿಯೇ ಜೀವ ಜಾಲದ ಕಥನಗಳನ್ನು ಬೆಳೆಸಿದ್ದಾರೆ. ಇಬ್ಬರ ಆಲೋಚನೆಯಲ್ಲಿ ವ್ಯತ್ಯಾಸ, ವೈರುಧ್ಯ ಸಹಜವಾಗಿದ್ದರೂ ವಿಶ್ವದ ಅಸ್ತಿತ್ವವನ್ನು ಕುರಿತಾಗಿಯೆ ಇಬ್ಬರೂ ಹುಡುಕಾಡಿದ್ದಾರೆ. ವಿಜ್ಞಾನಿಯ ಕಣ್ಣೋಟ ವಸ್ತುನಿಷ್ಠವಾದ ಭೌತಜಗತ್ತಿನ ಅವ್ಯಕ್ತ ಕೊಂಡಿಗಳ ಕಂಡುಕೊಳ್ಳುವ ದರ್ಶನವಾದರೆ; ಇದಕ್ಕೆ ಕೊಂಚವೆ ವಿಭಿನ್ನವಾಗಿ ಜನಪದರು ಅದೇ ಅವ್ಯಕ್ತ ಕೊಂಡಿಗಳ ದಿವ್ಯತೆಯಿಂದ ದೈವಿಕ ಪರಿಭಾಷೆಗಳಿಂದ ವರ್ತಮಾನದ ಭೌತಿಕ ಲೋಕಕ್ಕೆ ಸಂಬಂಧಗಳನ್ನು ಬೆಸೆದುಕೊಳ್ಳುವರು. ಹಾಗಾಗಿಯೇ ಇಬ್ಬರೂ ಕೂಡ ಮಾನವ ಸಾಧ್ಯತೆಯ ಅವ್ಯಕ್ತ ಸ್ವರೂಪಗಳನ್ನು ತಮ್ಮ ತಮ್ಮ ಅರಿವಿನ ವ್ಯಾಪ್ತಿಗಳಲ್ಲಿ ಮಾಡುತ್ತಲೇ ಇರುವುದು. ಇಂತಹ ಅನುಸಂಧಾನಕ್ಕೆ ಜನಪದರಲ್ಲಿ ಅನೇಕ ನಿದರ್ಶನಗಳನ್ನು ಕೊಡಬಹುದು. ಅಖಂಡ ಜೈವಿಕತೆಯಿಂದಲೇ ಜನಪದರು ಜೀವನ ರೂಪಿಸಿಕೊಂಡಿದ್ದುದು. ಅಳಲೆಕಾಯಿ ಪಂಡಿತ ಎನಿಸಿಕೊಳ್ಳುವ ಜನಪದ ವೈದ್ಯನಿಗೆ ಸಸ್ಯಶಾಸ್ತ್ರದ ಔಷಧೀಯ ಗುಣ ಹೇಗೆ ಅರಿವಿಗೆ ಬಂತು? ಸಸ್ಯವಿಜ್ಞಾನಿಗೂ ಮೊದಲೇ ಜನಪದರು ನೂರಾರು ಸಾವಿರಾರು ಔಷಧೀಯ ಗಿಡಗಳ ಹುಡುಕಿ ಅವನ್ನೆಲ್ಲ ಜೀವನ ವಿಧಾನದ ಭಾಗವಾಗಿ ಅಳವಡಿಸಿಕೊಂಡದ್ದು ಸಸ್ಯ ವಿಜ್ಞಾನಕ್ಕಿಂತಲೂ ಮಿಗಿಲಲ್ಲವೆ? ಅಜ್ಜಿಯರು ಬೆರಕೆ ಸೊಪ್ಪು ಕೊಯ್ದು ತಂದು ಮಾಡುವ ಸೊಪ್ಪಿನ ಸಾರು ಯಾವ ಪ್ರಯೋಗಾಲಯದ ಔಷಧಿಗಿಂತಲೂ ಕಡಿಮೆ ಆದದ್ದಲ್ಲ. ಇನ್ನು ಸಾಹಿತ್ಯದ ಒಂದು ಅತ್ಯುತ್ತಮ ಉದಾಹರಣೆ ಕೊಡುವುದಾದರೆ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೊ ಕಾದಂಬರಿಯಲ್ಲಿ ಬರುವ ಮಂದಣ್ಣ ವಿಜ್ಞಾನಿ ಕರ್ವಾಲೊ ಅವರಿಗಿಂತ ಜೀವಜಾಲದ ಕಳಚಿದ ಕೊಂಡಿಗಳನ್ನು ಬಹಳ ಸಲೀಸಾಗಿ ಹುಡುಕಿ ತೋರಿಸುವ ಜ್ಞಾನ ಸಾಧಾರಣವಾದದ್ದೇನು? ಜನಪದರ ನಿಸರ್ಗದ ತಿಳುವಳಿಕೆ ಓದಿನದಲ್ಲ. ಬದುಕಿನಿಂದ ಬಂದ ಅಂತಹ ತಿಳುವಳಿಕೆಯ ಹಿಂದೆ ಸಾವಿರಾರು ವರ್ಷಗಳ ತಲೆಮಾರುಗಳ ಸಮಷ್ಥಿಯಾದ ಅನುಭವವಿದೆ.

ಜೈವಿಕವಾದ ಇಂತಹ ಸ್ವಭಾವವು ಅಂತರ್ಗತವಾಗಿ ಬಂದದ್ದಾಗಿದ್ದು ಕಾಲದ ಅಲೆಗಳಲ್ಲಿ ಕೆಲವೊಂದು ಜೈವಿಕೆ ತಿಳುವಳಿಕೆಗಳು ಅಚೀಚೆಗೆ ಜರುಗುತ್ತವೆ. ಕಳಚಿದ ಕೊಂಡಿಯ ಸಂಬಂಧವೂ ಕೂಡ ಇಂತಹ ಒಂದು  ವ್ಯತ್ಯಾಸವಿರಬಹುದು. ವಿಕಾಸದ ಚರಿತ್ರೆಯಲ್ಲಿ ಕಳಚಿದ ಕೊಂಡಿಯ ವಿಚಾರಕ್ಕೆ ವಿಶೇಷ ಹುಡುಕಾಟವಾಗಿದೆ ನಿಜ. ಆದರೆ ಹಾಗೆ ಕಳಚಿದ ಕೊಂಡಿಯ ಪ್ರಜ್ಞೆಸುಪ್ತ ಪ್ರಜ್ಞೆಯಲ್ಲೊ ಮನುಷ್ಯರ ಡಿ.ಎನ್.ಇ. ರಚನೆಯ ಪದರಿನಲ್ಲೊ ಎಲ್ಲೊ ಬಚ್ಚಿಡಲ್ಪಟ್ಟಿದೆಯಾದ ಕಾರಣದಿಂದಲೇ ಹಾಗೆ ಮರೆಯಾಗಿದ್ದರೂ ಕೂಡ ಅದರ ಬಗೆಗಿನ ಗ್ರಹಿಕೆಗಳು ಉಳಿದುಕೊಂಡಿರುವುದು.ಜನಪದರು ಹಾಗೆ ಕಳಚಿದ ಕೊಂಡಿಗಳ ಸಂಶೋಧನೆಗೆ ತಲೆಕೆಡಿಸಿಕೊಂಡವರಲ್ಲ. ಅವರ ಜನ್ಮಾಂತರಗಳ ಪ್ರಜ್ಞೆವ್ಯಾಪಕವಾದ ಕೊಂಡಿಗಳನ್ನು ಜೋಡಿಸಿ ಕೊಳ್ಳುತ್ತದೆ. ಮಾನವರು ಹೊಮೊಸೆಫಿಯನ್ ಭಾಗವಾಗಿ ಕಳಚಿದ ಕೊಂಡಿಗಳನ್ನು ಹುಡುಕಿದರೆ, ಜನಪದರು ನೂರಾರು ಬೇರೆ ಬೇರೆ ಜೀವಿಗಳಗಿ ಜನ್ಮವೆತ್ತಿ ಸಾಗುವ ಕೊಂಡಿಗಳನ್ನು ಜೀವಾತ್ಮದ ಜೊತೆ ಬೆಸೆದುಕೊಳ್ಳುವರು. ಈ ಪ್ರಜ್ಞೆಯು ಅದಿಮ ಮಂತ್ರವಿದ್ಯೆಯ ಕಾಲದ ತಿಳುವಳಿಕೆ. ಮನುಷ್ಯರ ಸಂಸ್ಕಾರಗಳಿಗೆ ತಕ್ಕಂತೆ ಆ ಮೊದಲು ಹತ್ತಾರು ರೂಪದ ಪ್ರಾಣಿಗಳ ಜನ್ಮವೆತ್ತಿ ಬರುವರು ಎಂಬ ನಂಬಿಕೆ ಜೀವಜಾಲದ ಅಖಂಡತೆಯನ್ನು ತನ್ನ ಅಸ್ತಿತ್ವದ ಬಹುರೂಪಗಳಿಗೆ ಹೊಂದಿಸಿಕೊಳ್ಳುವಂತದಾಗಿದೆ. ಮನುಷ್ಯರ ವಿಕಾಸದ ಕೊಂಡಿಗಳೇ ಮುಖ್ಯ ಅಲ್ಲ. ಜನಪದರು ಮುಗ್ಧವಾಗಿ ನಿಸರ್ಗವನ್ನು ನೋಡುತ್ತಲೇ ಅದರ ವ್ಯಾಪಕತೆಯನ್ನು ಅಪಾರವಾಗಿ ತಿಳಿದಿರುವುದರಿಂದ ಜೀವಜಾಲದ ಅನಂತತೆಯೇ ಅಂತಿಮ ಎಂದು ನಿಸರ್ಗವನ್ನು ತರ್ಕ ಆಚೆಗೆ ಕಂಡಿದ್ದಾರೆ. ತನ್ನ ಅಸ್ತಿತ್ವ ಈ ಜೀವಜಾಲದಲ್ಲಿ ಯಾವುದು ಎಂದು ಕೇಳಿ ಕೊಳ್ಳುವುದು ಕೂಡ ಸವಾಲಿನ ಪ್ರಶ್ನೆಯೇ! ತನ್ನ ಮೂಲ ಯಾವುದು ಎನ್ನುವುದರಲ್ಲೇ ನಿಸರ್ಗಕ್ಕೂ ತನಗೂ ಏನು ಸಂಬಂಧ ಎಂಬುದನ್ನು ವಿಭಜಿಸಿ ನೋಡಿಕೊಳ್ಳುವ ಭಾವನೆಯೂ ಆಡಗಿರುತ್ತದೆ. ಇದು ತನ್ನ ಮೂಲದ ಕುರುಹನ್ನು ಪತ್ತೆ ಮಾಡುತ್ತಲೇ ಉಳಿದೆಲ್ಲದರ ಸಂಬಂಧಗಳಿಂದ ಅಂತರವನ್ನು ಕಾಯ್ದುಕೊಳ್ಳುವ ಒಂದು ವೈಜ್ಞಾನಿಕ ಗುಣ.

ಜನಪದರು ಮೂಲವನ್ನು ಹುಡುಕಬಾರದು ಎಂಬ ನಿಷೇಧವನ್ನು ಅನೇಕ ಸಂಗತಿಗಳಲ್ಲಿ ಪಾಲಿಸಿದ್ದಾರೆ. ಇದು ಸರಿಯೊ ತಪ್ಪೋ ಎಂದು ವಿಮರ್ಶಿಸುವುದಕ್ಕಿಂತಲೂ ಯಾಕೆ ಹೀಗೆ ಜನಪದರು ಮೂಲವನ್ನು ಹಾಗೇ ನಿಗೂಢವಾಗಿ ಉಳಿಸಿಕೊಳ್ಳಲು ಪ್ರಯತ್ನಿಸಿದರು ಎಂಬುದರ ವಸ್ತುಸ್ಥಿತಿಯನ್ನು ಮನಗಾಣಬೇಕು. ಈ ಪ್ರಶ್ನೆಗೆ ಎಲ್ಲ ಧರ್ಮಗಳೂ ಬಹುಪಾಲು ಒಂದೇ ಬಗೆಯ ಜೀವವಿಕಾಸದ ಉತ್ತರ ಕಂಡುಕೊಂಡಿವೆ. ಹಾಗೆ ದೈವಿಕವಾಗಿ ವಿವರಿಸುತ್ತಲೇ ದೈವಿಕವಾದ ಕೊಂಡಿಗಳನ್ನು ಬಂಧಿಸಿಕೊಂಡಿವೆ. ಇಂತಹ ದೈವಿಕ ಕೊಂಡಿಯ ಪಾತ್ರ ಜೀವವಿಕಾಸದದಲ್ಲಿ ಇದ್ದಂತಿಲ್ಲ ಎಂದೇ ಡಾರ್ವಿನ್ ಜೀವವಿಕಾಸ ಕಥನದ ಕೊನೆಯ ನಿಲುವಾಗಿ ಮಂಡಿಸುದ್ದು ಬೇರೊಂದು ದಾರಿ. ಈ ದಾರಿಯಲ್ಲಿ ಜೀವವಿಜ್ಞಾನಿಗಳು ಹೊರಟು ಈಗ ಬಹುದೂರ ಸಾಗಿ ಜೀವಜಾಲದ ಕಥನಗಳನ್ನು ವಿಸ್ತರಿಸಿ ಬಿಟ್ಟಿದ್ದಾರೆ. ಯಾವತ್ತೂ ಕೂಡ ಸಂಸ್ಕೃತಿಗಳು ಈ ಲೋಕದ ಜೈವಿಕ ಸಂಬಂಧಗಳನ್ನೆಲ್ಲ ವಿಸ್ಮಯದಿಂದಲೇ ನಿಗೂಢತೆಯಿಂದಲೇ ಅಖಂಡತೆಯಿಂದಲೇ ನಿರೂಪಿಸಿಕೊಳ್ಳುತ್ತ ಬಂದ ಅನಿವಾರ್ಯತೆಯನ್ನು ನಾವಿನ್ನೂ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲವೇನೊ. ಒಂದೊಂದಾಗಿ ಜೀವಜಾಲ ಸರಪಳಿಯ ಬಿಡಿಸಿ ಬಿಡಿಸಿ ಅವುಗಳ ಸಂಬಂಧ ಇಷ್ಟಿಷ್ಟೇ ಎಂದು ನಿಗಧಿಪಡಿಸಿದರ ಅದರಿಂದ ಮುಂದೊಂದು ದಿನ ಇಡೀ ಜೀವಜಾಲದ ಅವ್ಯಕ್ತ ಕೊಂಡಿಗಳೆಲ್ಲ ಮರೆತು ಹೋಗುತ್ತವೇನೋ ಎಂಬ ಆತಂಕದಲ್ಲಿ ಎಚ್ಚರದಲ್ಲಿ ಸಮುದಾಯಗಳು ಜೀವಜಾಲವನ್ನು ವಿರಾಟ್ ಸ್ವರೂಪದಲ್ಲೇ ಸಂಸ್ಕೃತಿಯಾಗಿಸಿಕೊಂಡಿರಬೇಕು.

ಜೈವಿಕ ಸಂವಹನ

ಜೀವವಿಕಾಸದ ಅರಿವು ವ್ಯಾಪಕವಾದಂತೆಲ್ಲ ಅಖಂಡ ಜೀವಜಾಲ ವಿಕಾಸಕ್ಕೆ ಸೂಕ್ತವಾದ ಸಂಬಂಧಗಳು ಬೆಳೆಯುತ್ತವೆ. ಜೀವವಿಜ್ಞಾನಿಗಳು ತೋರಿರುವ ವಿಕಾಸದ ಹಾದಿಯಲ್ಲಿ ಸಮಾಜಗಳು ಸುಧಾರಿಸಲ್ಪಟ್ಟಿವೆ. ಈ ನಿಟ್ಟಿನಲ್ಲಿ ಜನಪದರ ಜೀವಜಾಲ ಪರಂಪರೆಗಳು ಕೂಡ ಜೀವವಿಕಾಸದ ಅರಿವನ್ನು ವಿಸ್ತರಿಸಿವೆ. ಮಾನವ ಮತ್ತು ಪ್ರಾಣಿಲೋಕ ನಿರಂತರವಾದ ಜೈವಿಕ ಸಂವಹನವನ್ನು ಸಾಧಿಸಿಕೊಳ್ಳುತ್ತಲೇ ಬಂದಿವೆ. ಆದರೂ ಸೂಕ್ತ ಸಂವಹನ ಇನ್ನೂ ಸಾಧ್ಯವಾಗಿಲ್ಲ. ಜೈವಿಕತೆಯು ಮೂಲತಃ ಎಲ್ಲ ಜೀವಿಗಳಿಗೂ ಒಂದೇ ಆಗಿದ್ದರೂ ಸಂವಹನದಲ್ಲಿ ಮಾತ್ರ ನಿರ್ದಿಷ್ಟ ಅಂತರಗಳಿವೆ. ಹೀಗಾಗಿರುವುದರಿಂದ ವಿಕಾಸದಲ್ಲಿ ಏನೇನು ಅಸಂವಹನಗಳು ಘಟಿಸುತ್ತವೆ ಎಂದು ಪತ್ತೆ ಮಾಡಬೇಕಿದೆ. ಒಂದೇ ಮಾನವ ಗುಂಪುಗಳು ಕೂಡ ಅನ್ಯತೆಯನ್ನು ಸಾಧಿಸುವಂತೆ ಭಾಷೆಗಳನ್ನು ರೂಢಿಸಿಕೊಂಡಿವೆ. ಜಗತ್ತಿನ ಎಲ್ಲ ಮಾನವರೂ ಒಂದು ಸಾರ್ವತ್ರಿಕ ಭಾಷೆಯ ವ್ಯಾಕರಣದಿಂದಲೇ ಉಳಿದೆಲ್ಲ ಭಾಷೆಗಳಿಂದ ಸಂವಹನ ಮಾಡುತ್ತಾರೆ ಎಂಬ ಚಾಮ್ಸ್ ಕಿಯ ತತ್ವವನ್ನು ಒಪ್ಪಬಹುದಾದರೂ ಹೀಗೆ ಭಿನ್ನ ಭಾಷಿಕ ಸಂವಹನವು ಕೇವಲ ವೈವಿಧ್ಯ ಮಾತ್ರವೇ ಆಗಿರುವುದಿಲ್ಲ. ಎಲ್ಲ ಪ್ರಾಣೆ ಪಕ್ಷಿ ಕೀಟಗಳೂ ಪ್ರತ್ಯೇಕ ಸಂವಹನವನ್ನು ರೂಢಿಸಿಕೊಂಡಿವೆ ಎಂದುಕೊಂಡರೂ ಜೀವಜಾಲದ ಎಷ್ಟೋ ಸಂಗತಿಗಳು ಒಂದೇ ಬಾರಿಗೆ ಎಲ್ಲರಿಗೂ ಅರ್ಥವಾಗುತ್ತವೆ. ಜೀವಜಾಲದ ಜೊತೆ ಸಂವಹನ ಸಾಧಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಣಿ ಪಕ್ಷಿ ಕೀಟಗಳ ಲೋಕವೇ ಮುಂದಿರಬಹುದು.

ನೈಸರ್ಗಿಕ ವಿಕೋಪಗಳು ಅವುಗಳಿಗೇ ಮೊದಲು ತಿಳಿಯುವುದು. ಮನುಷ್ಯರ ಸಂವಹನ ಸಾಮರ್ಥ್ಯ ಸಮರ್ಥವಾಗಿ ವಿಕಾಸವಾಗಿಲ್ಲ ಎನಿಸುತ್ತದೆ. ಜೀವಿಗಳು ಅತ್ಯಂತ ಸೂಕ್ಷ್ಮ ಸಂವಹನವನ್ನು ತರಂಗಾಂತರಗಳಿಂದಲೇ, ವಾಸನೆಗಳಿಂದಲೇ, ಬಣ್ಣಗಳಿಂದಲೇ ಸಾಧಿಸಿಬಿಡಬಲ್ಲವು. ಜನಪದ ಸಮಾಜ ಇಂತಹ ವಿಚಾರಗಳಿಗೆ ನೇರ ಸ್ಪಂದಿಸುವುದಿಲ್ಲವಾದರೂ ಅತೀತವಾದ ಸಂವಹನ ಸಾದ್ಯತೆಯನ್ನು ಹುಡುಕುವಲ್ಲಿ ಹಿಂದುಳಿದಿಲ್ಲ. ಜೀವಜಾಲ ಕೂಡ ತಮ್ಮಂತೆಯೇ ಸಂವಹನ ರೂಢಿಸಿಕೊಂಡಿವೆ ಎಂಬುದನ್ನು ಜನಪದರು ಅನುಭಾವಗಳಿಂದ ಬಲ್ಲರು. ಅದಿಮ ಸಮುದಾಯಗಳು ಕಾಡಿನ ಪರಿಸರದಲ್ಲಿ ಜೈವಿಕ ಸಂವಹನವನ್ನು ಸಾಧಿಸಿಕೊಂಡಿದ್ದವು. ಮನುಷ್ಯ ಸಮಾಜ ಬದುಕುಳಿದು ಬರುವಲ್ಲೆ ಇಂತಹ ಜೈವಿಕ ಸಂವಹನವೂ ಸಹಕರಿಸಿದೆ. ಭಾಷೆಗಳು ವಿಕಾಸವಾಗುವಲ್ಲಿ ಜೀವಜಾಲದ ಸಂವಹನದ ತಂತ್ರಗಳನ್ನು ಅಳವಡಿಸಿಕೊಂಡಿವೆ. ಜೈವಿಕ ಸಂವಹನ ಸಾಧ್ಯವಾಗದೇ ಹೋಗಿದ್ದಿದ್ದರೆ ವಿಕಾಸದ ನಡಿಗೆ ಈ ಸ್ವರೂಪದಲ್ಲಿರುತ್ತಿರಲ್ಲಿಲ್ಲ. ಭಾಷೆಯ ಮೂಲಕ ಒಂದು ಬಗೆಯಾದರೆ ಜೀವಜಾಲದ ಅಖಂಡ ಸಂಬಂಧಗಳ ಜೊತೆ ಮುಖಾಮುಖಿ ಆಗುವುದು ಮತ್ತೊಂದು ಬಗೆಯ ಸಂವಹನ ಋಷಿಗಳು, ಸಾಧು ಸಂತರು, ಅನುಭಾವಿಗಳು, ಯತಿಗಳು, ತಪಸ್ವಿಗಳು ಅತೀತವಾದ ಸಂವಹನವನ್ನು ಸಾಧಿಸುತ್ತಿದ್ದುದು ಜೈವಿಕ ಸಂವಹನದ ಅಖಂಡ ಅರ್ಥಗಳಿಂದ.

ಅಸ್ತಿತ್ವದ ಬೇರೆ ಬೇರೆ ತರಂಗಗಳನ್ನು ಸಂಪರ್ಕಿಸುವಂತೆ ಧ್ಯಾನಿಸುವ ರೀತಿಯು ಮೌನದ ಭಾಷೆಯಾಗಿರುತ್ತದೆ. ಮೌಖಿಕ ಭಾಷೆಅಳ ಸಂವಹನಕ್ಕಿಂತ ಈ ಬಗೆಯ ಮೌನ ಸಂವಾದ, ಸಂವಹನ ಜೀವವಿಕಾಸಕ್ಕೆ ನೆರವಾಗಿದೆ. ಜೀವಜಾಲದ ಜೊತೆಗಿನ ತಪಸ್ಸು ಅನೇಕ ಬಗೆಯಲ್ಲಿ ಅಸ್ತಿತ್ವದ ಜೀವನ ಕ್ರಮಗಳನ್ನು ದೈವಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ನಿರೂಪಿಸಿರುವ ರೀತಿಯಲ್ಲಿ ಅವ್ಯಕ್ತ ಜೈವಿಕತೆಯ ಕೊಂಡಿಗಳಿವೆ. ಮನುಷ್ಯಾತೀತವಾದ ಬೇರೆ ಬೇರೆ ಲೋಕಗಳನ್ನು ಗ್ರಹಿಸುವ ಹಾಗು ಅದನ್ನು ವ್ಯಕ್ತಪಡಿಸುವ ನಿರಂತರ ಅಭಿವ್ಯಕ್ತಿಗಳಲ್ಲಿ ಜೈವಿಕ ಸಂವಹನದ ಪಾತ್ರ ಹಿರಿದಾಗಿದೆ. ಅತೀಂದ್ರಿಯ ದೃಷ್ಟಿಯನ್ನು ಜೈವಿಕ ಸಂವಹನದ ನಿಟ್ಟಿನಲ್ಲಿ ಭಿನ್ನವಾಗಿ ಅರ್ಥೈಸಿಕೊಳ್ಳಬಹುದು. ಇಂದ್ರಿಯಗಳ ಚೌಕಟ್ಟಿನ ಆಚೆಗೆ ಮನಸ್ಸು ಚಲಿಸಲು ಅದರ ಸುಪ್ತಪ್ರಜ್ಞೆಯೇ ನೆರವು ನೀಡುತ್ತದೆ. ಆಳದ ಸುಪ್ತಪ್ರಜ್ಞೆಗೆ ಜೈವಿಕ ನೆನಪುಗಳಿರುವುದರಿಂದ ಲೋಕ ಲೋಕಗಳಾಚೆಯ ಸಂಬಂಧಗಳನ್ನು ಕಲ್ಪಿಸಲು ಊಹಿಸಲು ಸುಲಭವಾಗಿದೆ. ಜೀವಜಾಲ ಜಾನಪದ ಅಭಿವ್ಯಕ್ತಿಗಳು ಲೌಕಿಕದ ಭಾಷೆಯ ಆಚೆಗೂ ಸಂವಹನ ಮಾಡಿವೆ. ಪ್ರಾಣಿ ಪಕ್ಷಿಗಳ ಜೆತೆ ಮಾತನಾಡುವ ಮುಗ್ಧತೆಯ ಆಳದಲ್ಲಿ ಮಾನವೀಕರಣವಿದೆ. ಮನುಷ್ಯ ಕೇಂದ್ರಿತ ಭಾಷೆಗಳು ಜೀವಜಾಲವನ್ನು ತಮ್ಮ ಸಂವಹನ ಸಾಧ್ಯತೆಗಳಿಂದಷ್ಟೇ ಕಂಡು ತಮ್ಮ ಅರ್ಥಗಳಿಂದಲೇ ಜೀವಜಾಲದ ಅರ್ಥವನ್ನು ನಿರೂಪಿಸಿವೆ. ಜೈವಿಕ ಸಂವಹನದಲ್ಲಿ ಜೀವಿಗಳೆಲ್ಲವೂ ಒಂದೇ ಅರ್ಥದಲ್ಲೆ ಅಭಿವ್ಯಕ್ತಿಸಿರುವುದಿಲ್ಲ. ಒಬ್ಬೊಬ್ಬರ ಅರ್ಥವೂ ಬೇರೆಯೇ ಇದ್ದರೂ ಅವರವರ ಅರ್ಥಗಳು ಒಂದೇ ಅಭಿವ್ಯಕ್ತಿಯಲ್ಲಿ ವೈವಿಧ್ಯವಾಗುತ್ತವೆ. ಆಯಾಯ ಜೈವಿಕ ಸಂದರ್ಭವೇ ಅವರವರ ಅರ್ಥಗಳನ್ನು ನಿರೂಪಿಸುತ್ತವೆ.

ಹೀಗಾಗಿಯೇ ಒಂದೇ ಭಾಷೆಯು ಒಂದೇ ಹಂತದಲ್ಲಿ ಬೇರೆ ಬೇರೆಯವರಿಗೆ ವಿಭಿನ್ನ ಸಂವಹನಗಳನ್ನು ಮಾಡಬಲ್ಲದು. ಜೈವಿಕ ಸಂವಹನವೂ ಇಂತಹ ಸ್ವರೂಪದಲ್ಲಿ ಜೀವಜಾಲಕ್ಕೆ ಬೇರೆ ಬೇರೆ ಅರ್ಥಗಳನ್ನು ನೀಡುತ್ತದೆ. ಕೋಗಿಲೆ ತನ್ನ ಜೈವಿಕ ಒತ್ತಡದಲ್ಲಿ ವ್ಯಕ್ತಪಡಿಸುವ ದನಿಯನ್ನೆ ಕವಿಗಳು ಪ್ರಣಯ ಗಾನ ಎಂದು ಭಾವಿಸುವುದೆದೆ. ಆದರೆ ಕೋಗಿಲೆಯ ಆ ದನಿಯಲ್ಲಿ ಜೀವಜಾಲಕ್ಕೆ ಬೇರೆ ಬೇರೆ ಅರ್ಥಸಂವಹನ ಸಾಧ್ಯವಾಗುತ್ತಿರುತ್ತದೆ. ಜೈವಿಕ ಸಂವಹನದ ಇಂತಹ ಬಹು ಅರ್ಥಗಳನ್ನು ಮಾನವ ಭಾಷೆಗಳು ತಕ್ಕುದಾಗಿ ಅನುಸಂಧಾನ ಮಾಡಿಕೊಳ್ಳಲು ಜೀವವಿಕಾಸದಲ್ಲಿ ಇನ್ನೂ ಸಾಧ್ಯವಾಗಿಲ್ಲ. ಭಾವನಾತ್ಮಕವಾದ ಊಹೆಗಳೇ ಅನೇಕ ಬಾರಿ ಜೈವಿಕ ಸಂವಹನದಲ್ಲಿ ಉಂಟಾಗುತ್ತಿರುತ್ತವೆ. ಜನಪದ ಪರಂಪರೆಗಳಿಗೆ ಅದು ಅನಿವಾರ್ಯ ಸ್ಥಿತಿ. ನಿಸರ್ಗದ ಸೃಷ್ಟಿ ವಿಕಾಸದಲ್ಲಿ ಎಲ್ಲ ನಿರೂಪಣೆಗಳೂ ಕೂಡ ಆಯಾಯ ಕಾಲಮಾನದ ಅಪೂರ್ಣ ತಿಳಿವಳಿಕೆಗಳೇ ವಿನಃ ಅಖಂಡ ಜ್ಞಾನವಲ್ಲ. ಜನಪದರು ಕೂಡ ಹೀಗೆಯೇ ಜೀವಜಾಲವನ್ನು ತಮ್ಮ ಬದುಕಿನ ಅನುಭವಕ್ಕೆ ತಕ್ಕಂತೆ ಅರ್ಥೈಸಿಕೊಂಡಿದ್ದಾರೆ. ಸತತವಾದ ನೈಸರ್ಗಿಕ ಅನುಸಂಧಾನವೇ ಜೀವವಿಕಾಸದ ವಿರಾಟ್ ನಿರೂಪಣೆ. ಡಾರ್ವಿನ್ ವಿಕಾಸವಾದ ಈ ಪ್ರಕ್ರಿಯೆಯಲ್ಲೆ ಒಂದು ಮಹತ್ವದ ಮೈಲಿಗಲ್ಲಷ್ಟೇ. ಈ ಕಾಲದ ಜೀವ ವಿಕಾಸವಾದಿಗಳು ಪ್ರಮುಖವಾಗಿ ಹುಡುಕುತ್ತಿರುವುದು ಮಾನವೇತರ ಜೀವಿಗಳ ವಿಕಾಸದ ಜಾಡನ್ನು, ಮನುಷ್ಯನ ವಿಕಾಸದ ಮೂಲಕ ನಿಸರ್ಗದ ಸಂಬಂಧ ಹುಡುಕಿದ್ದು ಒಂದು ದಾರಿಯಾದರೆ ಅತ್ಯಂತ ಸೂಕ್ಷಾಣು ಜೀವಿಗಳ ಅಸ್ತಿತ್ವದ ಅಧ್ಯಯನ ಮತ್ತೊಂದು ಸಾಧ್ಯತೆ. ಜೀವವಿಕಾಸದ ಕೃತಕ ಸಾಧ್ಯತೆಗಳನ್ನೂ ಕಂಡುಕೊಂಡಿರುವ ಆಧುನಿಕ ಜೀವ ವಿಕಾಸವಾದಿಗಳು ಅನ್ಯಗ್ರಹಗಳ ಜೀವಿಗಳು ಒಂದು ವೇಳೆ ಎದುರಾದರೆ ಅಂತಹ ಜೀವಿಗಳ ಜೊತೆಗಿನ ಸಂವಹನಕ್ಕೆ ಯಾವ ಜೀವಿಗಳು ಸ್ಪಂದಿಸಲು ಸಾಧ್ಯ ಎಂಬ ಕುತೂಹಲಕಾರಿ ಶೋಧನೆಗಳನ್ನೂ ಮುಂದುವರಿಸಿದ್ದಾರೆ.

ಈ ನಿಟ್ಟಿನಲ್ಲೆ ಪ್ರಾಣಿಗಳ ಮಾನಸಿಕ ಸ್ವರೂಪವನ್ನು ತಿಳಿಯುವುದು ಕೂಡ ಜೀವಜಾಲ ಸಂವಹನದ ಸಾಧ್ಯತೆಯನ್ನು ಹುಡುಕಿದಂತೆಯೇ ಆಗುತ್ತದೆ. ಜೀವಶಾಸ್ತ್ರದಲ್ಲಿ ವಿಶೇಷವಾದ ಒಂದು ಸಂಶೋಧನೆ ಎಂದರೆ ಪ್ರಾಣಿಗಳ ವರ್ತನೆಯನ್ನು ಅಭ್ಯಾಸ ಮಾಡುವುದು ಹಾಗೂ ಅವುಗಳ ಜೈವಿಕತೆಗೂ ಮನುಷ್ಯರಿಗೂ ಇರುವ ಸಾಧ್ಯತೆಗಳನ್ನು ಹೊಂದಿಸಿಕೊಳ್ಳುವುದು. ಮನೋ ವಿಜ್ಞಾನಿಗಳು ಪ್ರಾಣಿಗಳ ಮಾನಸಿಕ ಸ್ಥಿತಿಯನ್ನು ಗಾಢವಾಗಿ ಪರಿಶೀಲಿಸಲಾಗುತ್ತದೆ. ಕಾಡಿನ ಸಹಜ ಪರಿಸರದಲ್ಲಿ ವನ್ಯಜೀವಿಗಳ ಅಧ್ಯಯನಕಾರರು ವರ್ಷಾನುಗಟ್ಟಲೆ ವ್ಯಾಪಕ ಕ್ಷೇತ್ರ ಕಾರ್ಯದ ಅಧ್ಯಯನಗಳನ್ನು ಮುಂದುವರಿಸುತ್ತಲೇ ಬಂದಿದ್ದಾರೆ. ಇವೆಲ್ಲವೂ ಜೀವಜಾಲದ ವೈವಿಧ್ಯ ಸಂಶೋಧನೆಯ ವ್ಯಾಪಕ ಕ್ಷೇತ್ರಗಳೇ ಆಗಿದ್ದು ಅನೇಕ ವೈಜ್ಞಾನಿಕ ಸಂಶೋಧನೆಗಳಿಗೆ ಪ್ರಯೋಗ ಪಶುಗಳಾಗಿಯೂ ಜೀವಿಗಳು ಬಳಕೆಯಾಗುತ್ತಿವೆ. ಆ ನಡುವೆ ಪರಿಸರವಾದಿಗಳು ಜೀವದಯಾ ಸಂಸ್ಥೆಗಳು ಅಂತಹ ಪ್ರಯೋಗಗಳನ್ನು ಧಿಕ್ಕರಿಸುವುದೂ ಇದೆ. ಮನುಷ್ಯರ ಅಸ್ತಿತ್ವವನ್ನೇ ಕಾಯುವಂತಹ ಔಷಧೀಯ ಪರೀಕ್ಷೆಗಳ ಸಂದರ್ಭದಲ್ಲಿ ಪ್ರಾಣಿಗಳ ಮೇಲೆ ಅಂತಹ ಔಷಧಿಗಳ ಪ್ರಯೋಗ ಮಾಡುವುದು ಈಗಲೂ ನಡೆದಿದೆ. ಮನುಷ್ಯ ಕೇಂದ್ರಿತವಾದ ಇಂತಹ ಪ್ರಯೋಗಗಳು ಜನಪದ ಪರಂಪರೆಗಳ ಜೀವಜಾಲದ ಭಾವನಾತ್ಮಕ ಸಂಬಂಧಗಳನ್ನು ಪಾಲಿಸುವುದಿಲ್ಲ. ತಳಿವಿಜ್ಞಾನಿಗಳು ಕೂಡ ಮಾನವ ಕೇಂದ್ರಿತವಾದ ಸಂಶೋಧನೆಗಳ ವ್ಯಾಪ್ತಿಯಲ್ಲೆ  ಹುಡುಕಾಡುವುದಿದೆ. ವ್ಯಾಪಕವಾಗಿ ಇಂತಹ ಬಹುವಿಜ್ಞಾನಿಗಳ ನೆಲೆಯ ಅನುಭವಗಳನ್ನೆಲ್ಲ ಜೀವಜಾಲ ಜಾನಪದದ ನೈತಿಕ ನಿರ್ವಚನಕ್ಕೆ ತಂದು ಬೆಸೆದುಕೊಳ್ಳಬೇಕು. ಇಲ್ಲದಿದ್ದರೆ ಬರಿದೇ ಜನಪದರ ಜೀವಜಾಲದ ವಿವರಣೆಗಳನ್ನು ಸಂಗ್ರಹಿಸಿ ಮುಂದಿಟ್ಟರೆ ಅವುಗಳಿಗೆ ವಿಶಾಲವಾದ ಅರ್ಥದ ಕೊಂಡಿಗಳು ಸಾಧ್ಯವಾಗದೇ ಹೋಗುತ್ತವೆ. ಪಕ್ಷಿಶಾಸ್ತ್ರಜ್ಞರು ಪಕ್ಷಿಗಳ ಬಗ್ಗೆ ಚೆನ್ನಾಗಿ ಬಲ್ಲರು; ಆದರೆ ಜನಪದರು ಪಕ್ಷಿಗಳ ಬಗ್ಗೆ ನೀಡುವ ವಿವರಗಳನ್ನೂ ಜೊತೆಗೂಡಿಸಿಕೊಂಡಾಗಲೇ ಜೀವಜಾಲದ ಬೇರೊಂದು ಕೊಂಡಿ ವೈಜ್ಞಾನಿಕ ಸತ್ಯದ ಜೊತೆ ಬೆಸುಗೆಯಾಗುವುದು. ಪಶುವೈದ್ಯರಷ್ಟೇ ಸಮರ್ಥವಾಗಿ ಜನಪದರು ಪ್ರಾಣಿಗಳ ಜೀವಜಾಲವನ್ನು ತಿಳಿದಿರುತ್ತಾರೆ. ಪಶುವೈದ್ಯರಿಗೆ ಪಶುಗಳ ಶರೀರಶಾಸ್ತ್ರವು ಚೆನ್ನಾಗಿ ಗೊತ್ತಿರಬಲ್ಲದು. ಜನಪದರಿಗೆ ಪ್ರಾಣಿಗಳ ಇಡೀ ಜೀವನಕ್ರಮವೇ ತಿಳಿದಿರುತ್ತದೆ. ಈ ಎರಡೂ ಬಗೆಯ ಜ್ಞಾನಗಳ ನಡುವೆ ಅಂತರ್ ಜಾಲದಂತೆ ಅನೇಕ ಪೂರಕ  ವಿಚಾರಗಳು ಚಾಚಿಕೊಂಡಿರುತ್ತವೆ. ಇವೆಲ್ಲವುಗಳ ಸಂಯೋಗ ಮಾಡಿಯೇ ಜೀವಜಾಲ ಜಾನಪದ ಕಥನಗಳನ್ನು ಸ್ಥಳೀಯ ಬೇರುಗಳಿಂದಲೇ ವಿಶ್ವಾತ್ಮಕವಾಗಿ ಮಾಡಿಕೊಳ್ಳಬೇಕು.

ಹಂಪಿ ಜೀವಜಾಲ ಜಾನಪದ

ಈ ನಿಟ್ಟಿನಲ್ಲಿ ಹಂಪಿ ಪರಿಸರದ ಜನಪದರ ಜೀವಜಾಲ ಜಾನಪದ ವಿವರಗಳು ವೈಜ್ಞಾನಿಕವಾದ ಅನ್ವಯಿಕ ವಿಚಾರಗಳಿಗೆ ಪೂರಕವಾದ ಅರ್ಥಾನುಸಾರ ಕೊಂಡಿಗಳನ್ನು ನೀಡಬಲ್ಲವು. ಹಂಪಿಯ ವಿಶ್ವಪರಂಪರೆಯ ಬಗ್ಗೆ ದೊಡ್ಡ ಮಾತುಗಳನ್ನು ಯುನೆಸ್ಕೋ ಆಡುವುದಿದೆ. ವಿಜಯನಗರ ಸಾಮ್ರಾಜ್ಯದ ನೆರಳಿನಲ್ಲಿ ಹಂಪಿಯ ವ್ಯಾಪ್ತಿಗೆ ಬರುವ ಇಪ್ಪತ್ತೊಂಬತ್ತು ಹಳ್ಳಿಗಳನ್ನು ಗುರುತಿಸಲಾಗಿದೆ. ಈ ಪ್ರದೇಶದ ಜೀವಜಾಲ ಕೂಡ ಗತಿಸಿದ ವಿಜಯನಗರ ಸಾಮ್ರಾಜ್ಯದಷ್ಟೇ ಮುಖ್ಯವಾದದ್ದು. ಗತಕಾಲದ ಜನಪದರ ಜೀವಜಾಲದ ಅಳಿದುಳಿದ ಪಳೆಯುಳಿಕೆಯಂತೆ ಈಗಲೂ ಹಂಪಿ ಗ್ರಾಮಗಳಲ್ಲಿ ಛಿದ್ರಗೊಂಡ ಜೀವಜಾಲ ನಿರೂಪಣೆಗಳು ಉಳಿದುಕೊಂಡಿವೆ. ಒಂದು ಬೃಹತ್ ಸಾಮ್ರಾಜ್ಯದ ಭಾಗವಾಗಿದ್ದ ಅಂದಿನ ಹಳ್ಳಿಗಳ ನೈಸರ್ಗಿಕ ಪ್ರಜ್ಞೆಚರಿತ್ರೆಯ ನಿರ್ವಚನದಲ್ಲಿ ಮುಖ್ಯವಾದ ಸಂಗತಿ. ವಿಜಯನಗರ ಸಾಮ್ರಾಜ್ಯ ಅಸ್ತಿತ್ವ ಉಳಿಸಿಕೊಂಡಿದ್ದುದೇ ಅದರ ಭೌಗೋಳಿಕ ವಿಶಿಷ್ಟತೆಗಳ ಮೂಲಕ. ಸಾಮ್ರಾಜ್ಯದ ರಾಜಧಾನಿ ಹಂಪಿಯು ವಿಖ್ಯಾತವಾಗಿದ್ದುದು ಅದರ ಬೆಟ್ಟಗುಡ್ಡಗಳ ನದಿಯ ನೆಲೆಯಿಂದಲೇ. ಯಾವುದೇ ಒಂದು ಸಾಮ್ರಾಜ್ಯದ ಸಾಮರ್ಥ್ಯವು ಆ ಪ್ರದೇಶದ ನೈಸರ್ಗಿಕ ಸಂಬಂಧಗಳಿಂದ ನಿರ್ಧಾರವಾಗಿರುತ್ತದೆ. ಹಂಪಿಯು ಅಂತಹ ಒಂದು ನೆಲೆಯಾಗಿತ್ತು. ಹಂಪಿಯು ಹೇಗೆ ಸಾಮ್ರಾಜ್ಯಕ್ಕೆ ಬೇಕಾದ ರಕ್ಷಣೆಯ ಭೌಗೋಳಿಕೆ ನೆಲೆಗಳನ್ನು ಒದಗಿಸಿತ್ತೋ ಹಾಗೆಯೇ ಅನೇಕ ಜೀವಿಗಳಿಗೂ ತಕ್ಕ ಜೀವಜಾಲ ಆವರಣವನ್ನು ನೀಡಿತ್ತು. ಆದಿಮ ಹಂಪಿಯ ಪರಿಸರವು ಕರ್ನಾಟಕದ ಅನೇಕ ಪಶುಪಾಲಕ ಸಮೂಹಗಳಿಗೆ ನೆಲೆಯಾಗಿತ್ತು. ಚರಿತ್ರೆ ಪೂರ್ವಕಾಲದ ಜನವಸತಿಯ ನೆಲೆಯೂ ಆಗಿತ್ತು. ಇಲ್ಲಿನ ಭೌಗೋಳಿಕ ವಿಶಿಷ್ಟತೆಗಳನ್ನು ಗಮನಿಸಿದರೆ ಅಪರೂಪದ ಜೀವಜಾಲ ಇಲ್ಲೆ ನೆಲೆಗೊಂಡಿದ್ದುದಕ್ಕೆ ಅನೇಕ ಕುರುಹುಗಳಿವೆ. ಪ್ರಾಚೀನ ಕರ್ನಾಟಕದ ಅನೇಕ ಹೆಜ್ಜೆಗಳನ್ನು ಹಂಪಿಯಿಂದಲೂ ಗುರುತಿಸಬಹುದು.

ಇಂತಹ ನೆಲೆಯ ಜನಪದಗಳು ಆದಿಯಿಂದಲೂ ಸಾಗಿ ಬಂದಿವೆ. ವಿಜಯನಗರ ಪೂರ್ವಕಾಲದ ಸಾಮ್ರಾಟರನ್ನು ದಾಟಿ ಬದುಕಿ ಬಂದಿರುವ ಗ್ರಾಮ ಪರಂಪರೆಗಳು ಈಗಲೂ ಹಂಪಿಯ ಹಳ್ಳಿಗಳಲ್ಲಿ ಉಳಿದೆವೆ. ಆದರೆ ಆ ಬಗೆಯ ಜೀವಜಾಲದ ನಿರೂಪಣೆಗಳು ಸಾವಿರಾರು ವರ್ಷಗಳ ಏರುಪೇರುಗಳಿಗೆ ಒಳಗಾಗಿ ಭಗ್ನಗೊಂಡು ತಮ್ಮ ಗತಕಾಲದ ದನಿಗಳನ್ನೆಲ್ಲ ಉದುಗಿಸಿಕೊಂಡು ಸರಳ ನಿರೂಪಣೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಆದರೂ ಇಂತಹ ವಿವರಣೆಗಳೆಲ್ಲವೂ ಜೀವಜಾಲದ ಸಮಷ್ಠಿ ಕಥನಗಳ ಮರುಜೋಡಣೆಗೆ ಅಗತ್ಯವಾಗಿ ಬೇಕಾಗಿವೆ. ಹಂಪಿ ಪರಿಸರ ವಿಶ್ವಪರಂಪರೆಯ ಪಟ್ಟಿಯಲ್ಲಿ ಮುಖ್ಯವಾಗಿ ದಾಖಲಾಗಿಲ್ಲ. ವಿಜಯನಗರ ಸಾಮ್ರಾಜ್ಯದ ಒಳಿಕೆಗಳು ಮಾತ್ರವೇ ವಿಶ್ವಮಾನ್ಯತೆ ಪಡೆದು ಸಂರಕ್ಷಣೆಗೆ ಒಳಗಾಗುತ್ತಿರುವುದು. ಆದರೆ ಒಂದು ಮಹಾಸಾಮ್ರಾಜ್ಯದ ಭಾಗವಾಗಿದ್ದ ಗತಕಾಲದ ಹಳ್ಳಿಗಳ ಸಂರಕ್ಷಣೆಯೂ ಮುಖ್ಯ. ಗತದ ಉಳಿಕೆಗಳ ಜೀವಂತ ಕೊಂಡಿ ಎಂದರೆ ಸಾಮ್ರಾಜ್ಯವೇ ಮುಳುಗಿ ಹೋದರೂ ಕಾಲದ ಅಲೆಯಲ್ಲಿ ತೇಲಿ ಬಂದು ಉಳಿದಿರುವ ಗ್ರಾಮಗಳು. ಗಮನಿಸಬೇಕಾದ ಅಂಶ ಎಂದರೆ ಇಂತಹ ಅಳಿದುಳಿದ ಗ್ರಾಮದ ಕೊಂಡಿಗಳು ಬದುಕಲು ತಕ್ಕ ಅವಕಾಶವನ್ನು ಪಡೆದದ್ದು ಹಂಪಿಯ ಭೌಗೋಳಿಕ ನೆಲೆಯ ಪರಿಸರದಿಂದಲೇ. ಗತಕಾಲದ ಹಂಪಿಯ ಹಳ್ಳಿಗಳು ಹಂಪಿಯ ಬಟ್ಟಗುಡ್ಡಗಳಲ್ಲಿ ಇದ್ದವೆಂಬುದಕ್ಕೆ ಸಾಕಷ್ಟು ಆಧಾರಗಳಿವೆ. ಆ ಬಗೆಯ ಎಷ್ಟೋ ಹಳ್ಳಿಗಳೀಗ ನಾಶವಾಗಿವೆ. ಚದುರಿದ ಜನಪದಗಳು ಆಸುಪಾಸಿನಲ್ಲೆ ಹೊಸನೆಲೆಯ ಊರುಗಳನ್ನೂ ಕಟ್ಟಿಕೊಂಡು ಮೇಲೆದ್ದಿವೆ. ಇಂತಹ ಸ್ಥಿತಿಯಲ್ಲಿ ಈ ಬಗೆಯ ಹಳ್ಳಿಗಳ ಜೈವಿಕ ಕೊಂಡಿಗಳನ್ನು ವಿಜಯನಗರ ಕಾಲದ ಚರಿತ್ರೆಯ ಜೊತೆಗೆ ಅನುಸಂಧಾನ ಮಾಡುವುದು ಕಠಿಣವಾದ ಕ್ರಿಯೆ. ಇಲ್ಲಿ ಚರಿತ್ರೆಯ ಕೊಂಡಿಗಳು ಕಳಚಿಹೋಗಿವೆ; ಪರಿಸರದ ಅರೆಬರೆ ಸಂಬಂಧಗಳು ಮಾತ್ರ ಬದುಕಿನ ಅನಿವಾರ್ಯತೆಯಲ್ಲಿ ಸಾಗಿ ಬಂದಿವೆ.

ಜೀವಂತ ಚರಿತ್ರೆ ಯಾವತ್ತೂ ಕೂಡ ನಿಸರ್ಗದ ಸಂಘರ್ಷಗಳ ಜೊತೆಗಿರುತ್ತದೆ. ಜೀವ ವಿಕಾಸದ ಚರಿತ್ರೆ ಈ ಬಗೆಯಲ್ಲಿ ನಿತ್ಯ ಘಟಿಸುತ್ತಲೇ ಇರುತ್ತದೆ. ಹಂಪಿ ಪರಿಸರದ ಮೇಲೆ ಯಜಮಾನಿಕೆ ಯಾವತ್ತೊ ಆಗಿ ಹೋಗಿದೆ. ತುಂಗಾಭದ್ರಾ ನದಿ ಇಲ್ಲಿ ಹರಿಯದೆ ಹೋಗದಿದ್ದರೆ ಅಕ್ಷರ ಸಹ ಹಂಪಿ ಬಂಡೆಗಾಡುಗಳ ಮರುಭೂಮಿಯೆ ಆಗಿರುತ್ತಿತ್ತು. ಹಂಪಿಯ ಗ್ರಾಮಗಳು ತುಂಗಾಭದ್ರಾ ನದಿಯ ಹಾಸುಪಾಸಿನಲ್ಲೇ ಹುಟ್ಟಿ ಬೆಳೆದಿವೆ. ಅವುಗಳ ಚರಿತ್ರೆಯು ವಿಜಯನಗರ ಸಾಮ್ರಾಜ್ಯದ ಪೂರ್ವಕ್ಕೂ ಪ್ರಾಚೀನ ಶಿಲಾಯುಗದ ಆವಧಿಗೂ ಹೋಗುತ್ತದೆ. ನೂತನ ಶಿಲಾ ಯುಗದ ಮಾನವ ವಸತಿ ನೆಲೆಗಳು ಹಂಪಿಯ ಮೊಸಳಯ್ಯನ ಗುಡ್ಡದಲ್ಲಿ ದೊರೆತಿರುವುದು ಪ್ರಾಚೀನ ಪೂರ್ವ ಕರ್ನಾಟಕದ ಗ್ರಾಮ ನಾಗರೀಕತೆಯ ಕುರುಹನ್ನು ತೋರುವಂತಿದೆ. ಹಂಪಿಯೇ ಇಡೀಯಾಗಿ ಪ್ರಾಚೀನ ಗ್ರಾಮ ನಾಗರೀಕತೆಯ ಬಹುದೊಡ್ಡ ಆದಿ ಗ್ರಾಮದಂತಿದೆ. ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಇಂತಹ ನೆಲೆಗಳು ಇರುವವಾದರೂ ಹಂಪಿಯ ವಿಶ್ವ ಪರಂಪರೆಯ ಪಟ್ಟಿಯ ಇಪ್ಪತ್ತೊಂಬತ್ತು ಗ್ರಾಮಗಳ ಲೆಕ್ಕಾಚಾರದಲ್ಲಿ ವಿಶೇಷವಾಗಿ ಗಮನಿಸಬೇಕಾಗುತ್ತದೆ. ಇಂತಹ ಗ್ರಾಮಗಳು ಮುಖ್ಯವಾಗಿ ನೈಸರ್ಗಿಕ ಒಪ್ಪಂದಗಳ ಮೂಲಕ ನೆಲೆಗೊಂಡಿರುತ್ತದೆ. ಅವುಗಳಿಗೆ ಭಾಷೆಯ ಗಡಿಗಳಿರಲಿಲ್ಲ. ಮನುಷ್ಯ ಸಮಾಜ ನೆಲೆಗೊಳ್ಳುವ ಮೊದಲಿನ ದಿನಗಳ ನೈಸರ್ಗಿಕ ತಿಳುವಳಿಕೆಯ ಆ ನಂತರ ಗ್ರಾಮ ನಾಗರೀಕತೆಗಳ ಜೀವಜಾಲ ಜಾನಪದಕ್ಕೆ ಅನೇಕ ಬಗೆಯ ಕೊಂಡಿಗಳನ್ನು ಬೆಸೆದಿರುವುದು.

ತುಂಗಾಭಾದ್ರಾ ನದಿಗೆ ಅಣೆಕಟ್ಟು ಕಟ್ಟಿದೆ ಮೇಲೆ ಹಂಪಿಯ ಪ್ರಾಚೀನ ಗ್ರಾಮ ನಾಗರೀಕತೆಯ ಕುರುಹುಗಳು ದಿಢೀರನೆ ಪಲ್ಲಟಗೊಂಡಿವೆ. ಆ ಮೊದಲು ವಿಜಯನಗರ ಸಾಮ್ರಾಜ್ಯವೇ ಪ್ರಾಚೀನ ಕುರುಹುಗಳ ಮೇಲೆ ದಿಗ್ವಿಜಯ ಸಾಧಿಸಿತ್ತು. ಹಂಪಿಯನ್ನು ಕೇವಲ ವಿಜಯನಗರ ಸಾಮ್ರಾಜ್ಯದ ಕಣ್ಣಿಂದಲೇ ನೋಡುವುದು ತರವಲ್ಲ. ಇಲ್ಲಿನ ಗ್ರಾಮಗಳ ಪ್ರಾಚೀನ ಪರಂಪರೆಗಳು ಮುಖ್ಯವಾಗಿ ನಿಸರ್ಗದ ಭಾಗವಾಗಿದ್ದವು. ಇಲ್ಲಿನ ಬೆಟ್ಟಗುಡ್ಡಗಳ ಪರಿಸರವು ಗ್ರಾಮ ನಾಗರೀಕತೆಯನ್ನು ವಿಭಿನ್ನವಾಗಿ ಬೆಳೆಸಿದ್ದರಿಂದಲೇ ಈಗಲೂ ನೆನ್ನೆಯ ಗ್ರಾಮ ಪರಂಪರೆಗಳ ಪಳೆಯುಳಿಕೆಗಳಂತೆ ಅನೇಕ ಪಶುಪಾಲಕ ಸಮಾಜಗಳು ಇದೇ ಬೆಟ್ಟಗುಡ್ಡಗಳ ಪರಿಸರದ ಜೈವಿಕತೆಯ ಭಾಗವಾಗಿಯೆ ಉಳಿದೆವೆ. ಹಾಗೆ ನೋಡಿದರೆ ಯಾವುದೇ ಮಹತ್ವದ ಕಥನವನ್ನು ವಿಜಯನಗರ ಸಾಮ್ರಾಜ್ಯದ ಗತ ವೈಭ್ಯವದ ಬಗ್ಗೆ ಇಲ್ಲಿನ ಪಶುಪಾಲಕ ಸಮಾಜಗಳು ಹೇಳಲಾರವು. ಆದರೆ ಸ್ಥಳೀಯ ಪಶುಪಾಲಕ ಸಮಾಜಗಳ ಪರಿಸರದ ಸಂಘರ್ಷ ಬದುಕಿ ಉಳಿಯುವ ಪೈಪೋಟಿಯ ಜೀವಜಾಲದ ಕಥನಗಳನ್ನು ಧಾರಾಳವಾಗಿ ಹೇಳಬಲ್ಲವು. ಗೊಲ್ಲರು, ಕುರುಬರು, ಬೇಡರು ಹಾಗೂ ಈ ಮುಖ್ಯ ಮೂರು ಸಮುದಾಯಗಳ ಒಳಗಿನ ಅನೇಕೆ ಬಿಡಿ ಚಹರೆಯ ಅದೇ ಸಮುದಾಯಗಳು ಹಂಪಿ ಪರಿಸರದಲ್ಲಿ ಬದುಕಲು ಎದುರಿಸಿದ ಸವಾಲುಗಳನ್ನು ತಮ್ಮ ಕಾವ್ಯಗಳಲ್ಲಿ, ಆಚರಣೆಗಳಲ್ಲಿ, ಸಂಪ್ರದಾಯಗಳಲ್ಲಿ ವ್ಯಾಪಕವಾಗಿ ದಾಖಲಿಸಿಕೊಂಡಿದ್ದಾರೆ. ಹಾಗೆ ನೋಡಿದರೆ ಹೇಗೆ ದಕ್ಷಿಣ ಭಾರತದ ಒಂದು ಪುಟ್ಟ ಹಂಪಿಯ ನೆಲೆಯಲ್ಲಿ ಹತ್ತಾರು ಸಮುದಾಯಗಳು ಗ್ರಾಮ ನಾಗರೀಕತೆಯ ಭಾಗವಾಗಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡಿವೆ ಎಂಬುದನ್ನು ನೈಸರ್ಗಿಕ ಸಂಬಂಧಗಳಿಂದ ವಿವರಿಸಲು ಸಾಕಷ್ಟು ವಿವರಗಳಿವೆ. ಇಲ್ಲಿನ ಪಶುಪಾಲಕ ಸಮುದಾಯಗಳು ಹತ್ತಾರು ಬಗೆಯ ಮಹಾಕಾವ್ಯಗಳನ್ನು ಸ್ಥಳೀಯ ಪರಿಸರದ ಭಾಗವಾಗಿ ನಿರೂಪಿಸಿಕೊಂಡು ಬಂದಿವೆ. ಕುಮಾರರಾಮನ ಒಂದೇ ನೆಲೆಯಲ್ಲಿ ಅನೇಕ ಕಾವ್ಯಗಳಿವೆ. ಲಿಖಿತ ಪರಂಪರೆಯೂ ಈ ಬಗ್ಗೆ ವ್ಯಾಪಕವಾಗಿ ದಾಖಲಿಸಿದೆ. ಪಶುಪಾಲಕ ಸಮುದಾಯಗಳು ಬದುಕುಳಿಯುವ ಪೈಪೋಟಿಯಲ್ಲಿ ಹೇಗೆ ಹಂಪಿ ಪರಿಸರದಲ್ಲಿ ಅಭಿವ್ಯಕ್ತಿ ಸಾಧಿಸಿವೆ ಎಂಬುದು ಕೂಡ ಜೀವಜಾಲದ ಜಾನಪದ ನಿರೂಪಣೆಯೇ ಆಗಿಬಿಡುತ್ತದೆ. ವಿಜಯನಗರ ಸಾಮ್ರಾಜ್ಯಕ್ಕೆ ಪೂರ್ವದಲ್ಲಿ ಕನ್ನಡದ ಜನಪದಗಳಾಗಿ ಇಂತಹ ತಳ ಸಮುದಾಯಗಳು ಹಂಪಿ ಪರಿಸರದ ನೈಸರ್ಗಿಕ ಸೌಲಭ್ಯಗಳನ್ನು ಆಶ್ರಯಿಸಿಯೆ ಬೆಳೆದು ಆನಂತರ ದೂರ ದೂರ ವಲಸೆ ಹೋಗಿವೆ. ಇದನ್ನೇ ಜೈವಿಕ ವಲಸೆ ಎಂದು ಸಂಸ್ಕೃತಿಯ ಪರಿಭಾಷೆಯಲ್ಲಿ ಗುರುತಿಸಬಹುದು. ಬೆಟ್ಟಗುಡ್ಡಗಳನ್ನೇ ಅರಸಿ ವಲಸೆ ಹೊರಟ ಈ ಸಮುದಾಯಗಳು ಆಗಿನ್ನೂ ಜಾತಿಯ ಚಹರೆಗೆ ಒಳಪಟ್ಟಿರಲಿಲ್ಲವೇನೊ. ಪಶುಸಂಪತ್ತಿನ ಹಂಚಿಕೆಯಲ್ಲಾದ ಸಂಘರ್ಷಗಳನ್ನು ವಿವರಿಸುವ ಈ ಜನಪದಗಳ ಕಾವ್ಯಗಳಲ್ಲಿ ಇಕ್ಕಟ್ಟುಗಳು ಚಾಚಿಕೊಂಡಿವೆ.

ನೆನ್ನೆಯ ಇಂತಹ ಜನಪದಗಳ ಆಳದ ಸಂವೇದನೆಯಲ್ಲಿ ಜೀವಜಾಲದ ನೆನಪುಗಳು ರೂಪಾಂತರಗೊಂಡು ಬಂದಿರುತ್ತವೆ. ವಿಶಾಲ ಮೈದಾನ ಪ್ರದೇಶದ ಪ್ರದೇಶದ ಜನಪದ ಕಾವ್ಯಗಳಲ್ಲಿ ಜೈವಿಕ ಸಂಘರ್ಷಗಳ ವಿವರಗಳು ತೆಳುವಾಗಿವೆ. ಮಲೆಮಾದೇಶ್ವರ, ಮಂಟೇಸ್ವಾಮಿ ಕಾವ್ಯಗಳು ಸಾಂಸ್ಕೃತಿಕ ಚಹರೆಗಳ ಸಂಘರ್ಷದಲ್ಲಿ ತೀವ್ರವಾಗಿ ತೊಡಗುತ್ತವೆ. ಆದರೆ ಹಂಪಿಯ ಪರಿಸರದ ಪಶುಪಾಲಕ ಸಮುದಾಯಗಳಾದ ಬೇಡ, ಕುರುಬ, ಗೊಲ್ಲ ಸಮಾಜಗಳ ಮೌಖಿಕ ಕಾವ್ಯಗಳಲ್ಲಿ ನಿಸರ್ಗದಲ್ಲಿ ದತ್ತಕವಾದ ಪಶು ಆಹಾರದ ಬಯಲುಗಳು, ಭೂಮಿಯ ಸಂಬಂಧ, ಕೌಟುಂಬಿಕ ನೆಲೆಯ ಹಕ್ಕುಗಳು, ಅವುಗಳ ಸಂಘರ್ಷಗಳು ವಿಶೇಷವಾಗಿ ಮುಖಾಮುಖಿ ಆಗುತ್ತವೆ. ಜನಪದಗಳು ಬೆಳೆಯುತ್ತಾ ಸಾಗಿದಂತೆ ಅದರಿಂದ ನೈಸರ್ಗಿಕ ಸಂಪನ್ಮೂಲದ ಮೇಲಿನ ಒತ್ತಡ ಹೆಚ್ಚಾದಂತೆ ಹೇಗೆ ನಿಸರ್ಗ ಹಾಗೂ ಸಂಸ್ಕೃತಿ ಎರಡೂ ಚಹರೆಗಳು ಸಾಮಾಜಿಕ ಅಸ್ತಿತ್ವದಲ್ಲಿ ಘರ್ಷಣೆಗೂ ಒಪ್ಪಂದಗಳಿಗೂ ಒಳಗಾಗಿ ಅವರವರ ಪ್ರಾದೇಶಿಕ ನೆಲೆಯ ಕುರುಹು ಸ್ಥಾಪಿತವಾಗಲು ಸಾಧ್ಯವಾಯಿತು ಎಂಬುದನ್ನು ಧ್ವನಿಸುತ್ತಿವೆ. ಮ್ಯಾಸ ಬೇಡರೂ ಊರ ಬೇಡರೂ ಇಂತಹ ಸಂಘರ್ಷವನ್ನು ಬಿಂಬಿಸುವ ಕಥನಗಳನ್ನು ನಿರೂಪಿಸಿರುವುದು ಗಮನಾರ್ಹವಾಗಿದೆ. ಇನ್ನು ಗೊಲ್ಲ ಸಮುದಾಯದ ಕಥನಗಳು ಪರಿಸರವನ್ನು ತಮ್ಮ ಪಶುಪಾಲಕ ಸಂಸ್ಕೃತಿಯ ಸ್ವರೂಪಕ್ಕೆ ತಕ್ಕಂತೆ ಹಂಚಿಕೊಂಡಿರುವುದನ್ನು ಕಾಣಬಹುದು. ಜುಂಜಪ್ಪನ ಕಾವ್ಯವಂತು ಉಳಿದ ಪಶುಪಾಲಕ ಸಮುದಾಯಗಳ ಪರಿಸರಗಳ ಮೇಲೆ ಹೆಚ್ಚು ಅಧಿಕಾರವನ್ನು ಸ್ಥಾಪಿಸುವಂತೆ ಕಾವ್ಯವನ್ನು ವಿಸ್ತರಿಸಿಕೊಂಡಿದೆ. ಪಶುಪಾಲಕ ಸಮುದಾಯಗಳ ಒಳ ಬಣಗಳು, ಬೆಡಗುಗಳು, ಪಣ ಸಂಬಂಧಗಳು ನೈಸರ್ಗಿಕ ಮುಖಾಮುಖಿಗಿಂತಲೂ ಆ ನೈಸರ್ಗಿಕ ಸಂಪತ್ತಿನ ಯಜಮಾನ್ಯ ಹೋರಾಟಗಳಲ್ಲಿ ತೀವ್ರವಾಗಿ ತೊಡಗಿದ್ದವೆಂಬುದನ್ನು ಅವರ ಜೀವಜಾಲ ಸಂಬಂಧಗಳು ವಿವರಿಸುತ್ತವೆ.

ಹಂಪಿಯ ಪಶುಪಾಲಕ ಸಮುದಾಯಗಳ ನೆನ್ನೆಯ ಕುರುಹುಗಳು ಬದಲಾದ ಕಾಲದಲ್ಲಿ ರೂಪಾಂತರಗೊಂಡಿರುವುದು ಸಾಮಾನ್ಯ ಸಂಗತಿ. ಇದನ್ನು ನಾವು ಯಾರೂ ತಡೆದು ನಿಲ್ಲಿಸಲಾಗದು. ಯಾವ ಸಮುದಾಯದ ಜೈವಿಕ ಕೊಂಡಿಯೂ ಒಂದೇ ಬಗೆಯಾಗಿ ಸಾಗುವುದಿಲ್ಲ. ಕರಕುಶಲ ಸಮುದಾಯಗಳ ಕಥನಗಳೂ ಹೀಗೆಯೇ; ಅವು ಕೂಡ ಮಾರ್ಪಟ್ಟಿವೆ. ಹೀಗಿದ್ದಾಗಲೂ ಜೀವಜಾಲದ ಬೆಸುಗೆಯನ್ನು ಅವರವರ ಸಂಸ್ಕೃತಿಗಳು ಅವರವರ ಚಹರೆ ಪೂರ್ವ ರೂಪಗಳ ಜೊತೆ ಆಧುನಿಕತೆಗೆ ತೆತ್ತುಕೊಳ್ಳುತ್ತಿರುತ್ತವೆ. ಹಂಪಿ ಪರಿಸರದ ಗ್ರಾಮಗಳ ಜನಪದರು ಜೈವಿಕತೆಯ ಕೊಂಡಿಗಳನ್ನು ಪೂರ್ಣವಾಗಿ ತುಂಡರಿಸಿಕೊಂಡಿಲ್ಲ. ಹಂಪಿಯ ಬೆಟ್ಟಗುಡ್ಡಗಳು, ಕಂಪ್ಲಿಯ ಬೆಟ್ಟಗುಡ್ಡಗಳು, ಚಿತ್ರದುರ್ಗ ಜಿಲ್ಲೆಯ ಬೆಟ್ಟಗುಡ್ಡಗಳು ಸಮಾನವಾಗಿ ಪ್ರಾಚೀನ ಕರ್ನಾಟಕದ ನೂತನ ಶಿಲಾಯುಗದ ಗ್ರಾಮ ನಾಗರೀಕತೆಯ ಆರಂಭದ ಕುರುಹುಗಳನ್ನು ಬಿಟ್ಟಿವೆ. ಇವುಗಳ ಜೊತೆಗೆ ಪೂರಕವಾಗಿ ಕಾಣುವ ಆಂಧ್ರಪ್ರದೇಶದ ಶ್ರೀಶೈಲಂ, ಕರ್ನೂಲು ಬೆಟ್ಟಗುಡ್ಡಗಳು ಇಂತದೇ ಪಶುಪಾಲಕ ಸಮುದಾಯಗಳನ್ನು ಇದೇ ಕಾಲದಲ್ಲಿ ರೂಪಿಸಿವೆ. ಈ ನಾಲ್ಕೂ ಬಗೆಯ ಬೆಟ್ಟಗುಡ್ಡಗಳ ಜೀವಜಾಲ ಪರಿಸರವು ಒಂದೇ ಬಗೆಯದು. ನೂತನ ಶಿಲಾಯುಗದ ಪಶುಪಾಲಕ ಸಮುದಾಯಗಳು ಹಂಪಿಯ ಪರಿಸರವನ್ನು ವಿಶೇಷವಾಗಿ ಆಶ್ರಯಿಸಿದಂತಿವೆ. ಕುಡುತಿನಿಯ ಬಳಿ ದೊರೆತಿರುವ ಬೂದಿ ದಿಬ್ಬಗಳು ಅಂತಹ ಹಿನ್ನೆಲೆಗೆ ಸಾಕ್ಷ್ಯ ಒದಗಿಸುತ್ತವೆ. ಬೆಟ್ಟಗುಡ್ಡಗಳ ನಡುವಿನ ಫಲವತ್ತಾದ ಹುಲ್ಲುಗಾವಲಿನ ಬಯಲುಗಳು ಪಶುಸಂಪತ್ತಾಗಿ ಕಂಡಿರುವುದು ಒಂದೆಡೆಗಿದ್ದರೆ ಅದೇ ಪರಿಸರವು ಫಲವತ್ತಾದ ಬಕ್ಕಲು ಬಯಲುಗಳಾಗಿ ಪರಿವರ್ತನೆಗೊಂಡದ್ದರ ಪೈಪೋಟಿಯ ವಿವರವೂ ಈ ಸಮುದಾಯಗಳ ಜೀವಜಾಲ ಜಾನಪದದಲ್ಲಿ ಕಾಣುವುದಿದೆ. ಇಂತಹ ಪರಿಸರದ ಹಿನ್ನೆಲೆಯನ್ನು ಜೀವಜಾಲ ಸರಪಳಿಯ ವಿವರಗಳಿಂದ ಹುಡುಕಿದರೆ ಈ ಭಾಗದ ಸಮುದಾಯಗಳ ಭೌಗೋಳಿಕ ಚಹರೆಗಳು ಕೂಡ ಗಮನಕ್ಕೆ ಬರುತ್ತವೆ.

ನೆನ್ನೆಯ ಪರಿಸರದ ಸಂಬಂಧಗಳಿಗೂ ಇಂದಿನ ಪರಿಸರದ ಬದಲಾವಣೆಗಳಿಗೂ ವೈರುಧ್ಯಗಳಿವೆಯಾದರೂ ಸಧ್ಯದ ಬಿಕ್ಕಟ್ಟಿನಿಂದ ನೆನ್ನೆಯ ಜೀವಜಾಲದ ಸಂಬಂಧಗಳನ್ನು ನಿರಾಕರಿಸಲಾಗದು. ಹಂಪಿ ಪರಿಸರದ ಭೌಗೋಳಿಕ ಸಂಬಂಧಗಳು ಈಗ ಬೇರೆಯಾಗಿದ್ದರೂ ಗತಕಾಲದ ಕನ್ನಡ ಜನಪದಗಳ ಜೊತೆಗೆ ಅವಿನಾಭಾವ ಸಂಬಂಧ ಸಾಧಿಸಿದ್ದಿದೆ. ಹಾಗೆಯೇ ಇಲ್ಲಿನ ಇದೇ ಪಶುಪಾಲಕ ಸಮುದಾಯಗಳೇ ಕಟ್ಟಿದ ವಿಜಯನಗರ ಸಾಮ್ರಾಜ್ಯಕ್ಕೂ ಇಲ್ಲಿನ ಭೌಗೋಳಿಕತೆಗೂ ಸಂಬಂಧವಿದೆ. ಮೇಲೆ ಸೂಪಿಸಿದ ನಾಲ್ಕೂ ಬೆಟ್ಟಗಾಡುಗಳ ಪ್ರದೇಶಗಳು ರೂಪಿಸಿಕೊಂಡಿದ್ದ ಜೀವಜಾಲ ಸಂಬಂಧಗಳಲ್ಲಿ ಸಾಮತ್ಯೆಗಳಿವೆ. ಹಾಗೆಯೇ ಸಾಮಾಜಿಕ ಚಹರೆಗಳಲ್ಲೂ ಒಳ ಸಂಬಂಧಗಳಿವೆ. ವಿಜಯನಗರ ಸಾಮ್ರಾಜ್ಯವು ರೂಪುಗೊಂಡದ್ದೇ ಇಂತಹ ಪಶುಪಾಲಕ ಸಮುದಾಯಗಳಿಂದ. ಕುರುಬ, ಬೇಡ, ಗೊಲ್ಲ, ಈ ಮೂರು ಪಶುಪಾಲದ ಸಮುದಾಯಗಳು ತ್ರಿವಳಿಗಳಿದ್ದಂತೆ. ಒಂದೇ ಕುಟುಂಬದ ಕವಲುಗಳಾದ ಈ ಗುಂಪುಗಳು ನಾಲ್ಕೂ ಉಲ್ಲೇಖಿತ ಬೆಟ್ಟಗಾಡುಗಳ ಪಾಲುದಾರಿಕೆಯಲ್ಲಿ ಬೆಳೆದಿವೆ. ಅದಕ್ಕೆ ತಕ್ಕಂತದೇ ಪಶುಪಾಲಕ ಜೀವಜಾಲ ಸಂಬಂಧಗಳನ್ನು ಅಳವಡಿಸಿಕೊಂಡಿದ್ದಾರೆ. ಈ ಮೂರು ಮುಖ್ಯ ಪಶುಪಾಲಕ ಸಮಾಜಗಳು ಅಂತರ್ಯದಲ್ಲಿ ಗತಕಾಲದ ಪಶುಪಾಲದ ಜೀವನ ವಿಧಾನಗಳ ಆಚರಣೆಗಳನ್ನು ಜೀವಂತವಾಗಿಟ್ಟುಕೊಂಡಿವೆ. ಹಾಗೆಯೇ ಗ್ರಾಮ ನಾಗರೀಕತೆಯ ಸಾಮ್ರಾಜ್ಯಗಳ ಸಹವಾಸದಲ್ಲಿ ಬೆರಕೆಯಾಗುತ್ತಿದ್ದಂತೆಯೇ ಕೃಷಿಕ ವರ್ಗವಾಗಿಯೂ ರೂಪಾಂತರಗೊಂಡು ಬೇಟೆ ಯುಗದ ನೆನಪುಗಳನ್ನು ಸಾಂಕೇತಿಕ ಆಚರಣೆಗಳಲ್ಲಿ ಮಾತ್ರ ಉಳಿಸಿಕೊಂಡಿವೆ. ಜೀವಜಾಲದ ಒಪ್ಪಂದ ಹಾಗೂ ಸಂಘರ್ಷದ ಯಾವುದೊ ಕೊಂಡಿಯ ವೈರುಧ್ಯದಂತೆ ಈಗಲೂ ಯುಗಾದಿಯಂದು ಬೇಡರು ಸಾಮೂಹಿಕ ಬೇಟೆಯ ಸಂಪ್ರದಾಯವನ್ನು ಉಳಿಸಿಕೊಂಡಿದ್ದಾರೆ.

ಪಶುಪಾಲಕ ಸಮುದಾಯಗಳ ಜೀವನ ವಿಧಾನದಲ್ಲಿ ಅನೇಕ ಜೈವಿಕ ಪದರುಗಳಿರುತ್ತವೆ. ಆದಿಮ ಯುಗದ ಜೀವಜಾಲದ ಒಡನಾಟದ ಸಂಘರ್ಷಗಳೇ ಬೇರೆ. ಅವನ್ನು ಪಳಗಿಸಿದ ರೀತಿಯೇ ಬೇರೆ. ನಂತರ ಹೈನುಗಾರಿಕೆಗೂ ಕೃಷಿಗೂ ಹೊಂದಿಸಿ ಪಳಗಿಸಿದ ರಿವಾಜುಗಳೇ ಬೇರೆ ಬೇರೆ. ಇವೆಲ್ಲವೂ ಜನಪದಗಳ ಜೈವಿಕ ಪದರುಗಳೇ ಆಗಿವೆ. ಈ ಒಂದೊಂದು ಪದರವೂ ಕೂಡ ಪರಿಸರದ ಒಂದೊಂದು ಬಗೆಯ ಜೈವಿಕ ಅನುಸಂಧಾನವಾಗಿ ಸಾಗಿ ಬಂದಿರುತ್ತವೆ. ಈ ಎಲ್ಲ ಪದರುಗಳ ವಿವರಗಳು ಒಂದೇ ನಿರೂಪಣೆಯಲ್ಲಿ ಸಿಗುವುದುಲ್ಲ. ಆಚರಣೆಗಳು ಭಾಗಶಃ ಜೀವಜಾಲದ ಆದಿಮ ಒಪ್ಪಂದಗಳೇ ಇರಬೇಕು. ಎಲ್ಲ ಜನಪದಗಳ ಜಾನಪದಗಳಲ್ಲೂ ಇಂತಹ ಜೈವಿಕ ಅನುಭವಗಳ ಪದರುಗಳಿರುತ್ತವೆ. ಕೆಲವೊಂದು ರೂಪಾಂತರಗೊಂಡರೆ ಮತ್ತೆ ಕೆಲವು ಹೊಸದಾಗಿ ಹುಟ್ಟಿಕೊಂಡು ವಿಭಿನ್ನವಾಗಿರುತ್ತವೆ. ಇಂತಹ ವೈವಿಧ್ಯ ಅನುಭಾವಗಳೆಲ್ಲ ಕೂಡಿ ಆ ಜನಾಂಗದ ಸಮಷ್ಠಿಯಾಗಿ ಬೆಳೆದು ಅವರವರ ಜೀವಜಾಲ ಲೋಕದೃಷ್ಠಿ ರೂಪುಗೋಂಡಿರುತ್ತದೆ.

ಜೀವಜಾಲ ಜಾನಪದ ಎಂದರೆ ಕೇವಲ ಜನಪದರು ನೀಡುವ ಜೀವಜಾಲದ ಪ್ರಾಥಮಿಕ ವಿವರಗಳ ಅಧ್ಯಯನ ಮಾತ್ರವಲ್ಲ ಇದೊಂದು ಮಾನವಿಕ ವಿಜ್ಞಾನದ ಶಾಖೆಯೇ ಆದರೂ ಜೀವಜಾಲದ ಎಲ್ಲ ಜೀವ ವಿಜ್ಞಾನಗಳನ್ನೂ ಅನುಸರಿಸಿಕೊಳ್ಳಬೇಕಾದ ಸಂಯುಕ್ತ ಜೀವಜಾಲ ವಿಜ್ಞಾನವೂ ಹೌದು. ಮಾನವರ ಹುಡುಕಾಟದ ಮೊದಮೊದಲ ಮುಗ್ಧ ಉತ್ತರಗಳೇ ಜೀವಜಾಲ ಜಾನಪದದ ಬಹುರೂಪಿ ನಿರೂಪಣೆಗಳು. ನಮ್ಮ ಪ್ರಜ್ಞೆಯಲ್ಲಿ ಇಷ್ಟೆಲ್ಲಾ ಆಕಾಶ ಕಾಯಗಳ ಬಗ್ಗೆ ಇಷ್ಟೊಂದು ಭಾವನೆಗಳು ಹೇಗೆ ಬಂದವು ಎಂದರೆ ಮಾನವರ ಮೊದಮೊದಲ ನೋಟವೇ ನಮ್ಮ ಜೈವಿಕತೆಯಲ್ಲೂ ಸಾಗಿ ಬಂದು ಈಗ ಇಷ್ಟು ಸಲೀಸಾಗಿ ಆಕಾಶ ಕಾಯಗಳನ್ನು ಕಂಡು ಸ್ಪಂದಿಸಲು ಸಾಧ್ಯವಾಗುತ್ತಿರುವುದು. ಸುಮ್ಮನೆ ಒಂದು ವಸ್ತುಸ್ಥಿತಿಯನ್ನು ನೋಡಿದ ಕೂಡಲೆ ನಮಗೆ ಒಂದು ಅಭಿಪ್ರಾಯ ಒದಗಿ ಬರುವುದಿಲ್ಲ. ಆ ಮೊದಲೇ ನಮ್ಮ ಜೈವಿಕ ಅನುಭವಗಳು ಸುಪ್ತಪ್ರಜ್ಞೆಯಲ್ಲಿ ಪದರು ಪದರಾಗಿ ಅಡಕಗೊಂಡು ಸಂಕೇತಗಳಾಗಿ ಅರ್ಥದ ಭಾವನೆಗಳು ಮೂಡಿ ಬರುತ್ತವೆ. ಅಂದರೆ ಒಂದೆಡೆ ಅವ್ಯಕ್ತವೂ, ಅಮೂರ್ತವೂ ಆದ ಸಂಯುಕ್ತ ಭಾವ ಸಮಷ್ಠಿಯ ಗ್ರಹಿಕೆಗಳಿಂದ ಒದಗಿ ಬರುವ ಅರ್ಥಗಳು ಸಂಸ್ಕೃತಿಯ ಅನೇಕ ಶಾಖೆಗಳಲ್ಲಿ ಜಾರಿಗೊಳ್ಳುತ್ತಿದ್ದರೆ; ವಿಜ್ಞಾನಿಗಳ ನಿಕಷದಿಂದ ತೆರೆದುಕೊಳ್ಳುವ ವಸ್ತುನಿಷ್ಠ ಕಥನಗಳು ವಿಕಾಸದ ಸಾಧ್ಯತೆಗಳನ್ನು ಬಿಂಬಿಸುತ್ತಿರುತ್ತವೆ. ಜಾನಪದ ಅಧ್ಯಯನದ ನಿರೂಪಣೆಗಳು ಇಂತಹ ಯತ್ನಗಳಲ್ಲಿ ತೀವ್ರವಾಗಿ ತೊಡಗಿದಾಗ ಜ್ಞಾನ ಪರಂಪರೆಗಳು ತಕ್ಕುದಾಗಿ ವಿಕಾಸವಾಗಬಲ್ಲವು. ಎಷ್ಟೇ ವೈಜ್ಞಾನಿಕ ಸಾಧನೆಗಳನ್ನು ಮಾಡಿದರೂ ಮಾನವಿಕ ಅಧ್ಯಯನದ ದಾರಿಗಳೂ ಅಷ್ಟೇ ಪ್ರಮಾಣದಲ್ಲಿ ಜ್ಞಾನ ಕ್ರಮಗಳನ್ನು ವಿಸ್ತರಿಸುತ್ತಿರಬೇಕು. ಇವೆರೆಡರ ಸಮಾನ ಪಯಣವು ವಿಕಾಸದ ನಾಳಿನ ಎಚ್ಚರವನ್ನು ಒದಗಿಸುತ್ತಿರುತ್ತದೆ. ಆ ಮಟ್ಟಿಗೆ ಜೀವಜಾಲ ಜಾನಪದದ ನಿರೂಪಣೆಗಳು ಪ್ರಮುಖ ಜ್ಞಾನಶಾಖೆಗಳ ಜೊತೆ ತಕ್ಕ ಅವಕಾಶವನ್ನು ಸೃಷ್ಟಿಸಿಕೊಳ್ಳಬೇಕಾಗಿದೆ.