ಅಂತಸ್ಥ ಜೈವಿಕತೆ

ಜೀವ ಜಾಲದ ಅನಂತ ವಿಕಾಸಕ್ಕೆ ಆದಿ ಅಂತ್ಯಗಳಿಲ್ಲ. ಪ್ರತಿಯೊಂದು ಜೀವಿಯೂ ತನಗೆ ಬೇಕಾದ ಕಾಲಾವಕಾಶವನ್ನು ರೂಪಿಸಿಕೊಳ್ಳಲು ನಿರಂತರವಾದ ಜೈವಿಕ ಅನುಸಂಧಾನವನ್ನು ನಿಸರ್ಗದ ಜೊತೆಗೆ ಮಾಡುತ್ತಲೆ ಇರುತ್ತದೆ. ಜೈವಿಕವಾದ ಆಲೋಚನೆ ಎಲ್ಲ ಜೀವಿಗಳ ಅಸ್ತಿತ್ವದ ಅಭಿವ್ಯಕ್ತಿಯ ಒಂದು ಕೌಶಲ್ಯ. ತನ್ನ ಸುತ್ತಲ ಪರಿಸರದ ಜೊತೆಗಿನ ಜೀವಜಾಲ ಸರಪಳಿಯ ಅರಿವಿನ ಸಂಬಂಧವನ್ನು ಜೈವಿಕ ವಿವೇಚನೆ ರೂಪಿಸುತ್ತಲೇ ಇರುತ್ತದೆ. ಮಾನವರ ಉಗಮ ವಿಕಾಸದ ಉದ್ದಕ್ಕೂ ಜೈವಿಕ ಒಪ್ಪಂದ ಸಾಗಿ ಬಂದಿದೆ. ಯಾವ ಜೀವಿಗಳು ಅತ್ಯುತ್ತಮವಾಗಿ ಜೈವಿಕ ನಡತೆಯನ್ನು ಸಾಧಿಸಿಕೊಳ್ಳುತ್ತವೆಯೋ ಅವು ದೀರ್ಘಕಾಲ ಬಾಳಿ ಬದುಕಬಲ್ಲವು. ಹೊಂದಾಣಿಕೆಗೆ ಬೇಕಾದದ್ದು ಕೇವಲ ಪರಿಸರವಲ್ಲ; ಆ ಪರಿಸರಕ್ಕೆ ತಕ್ಕುದಾಗಿ ವಿವೇಚಿಸಬೇಕಾದ ದಾರಿಗಳನ್ನು ಸ್ವತಃ ತಾವೇ ಕಂಡುಕೊಳ್ಳುವುದು ಮುಖ್ಯವಾಗಿದೆ. ಇಡಿಯಾಗಿ ಎಲ್ಲವನ್ನು ನಿಸರ್ಗವೆ ಕೊಟ್ಟುಬಿಡುವುದಿಲ್ಲ, ನಿಸರ್ಗದಲ್ಲಿ ಎಲ್ಲವೂ ಇದೆ ನಿಜ: ಆದರೆ ಇರುವ ಆ ಎಲ್ಲದರಲ್ಲಿ ತನಗೆ ಬೇಕಾದ್ದನ್ನು ನಿಸರ್ಗದ ತಕ್ಕ ಅರಿವಿನಿಂದ ಬಳಸಿಕೊಳ್ಳುವುದೇ ಅತ್ಯುತ್ತಮವಾದ ಜೈವಿಕ ಚಹರೆ.

ಆದಿಮ ಸಮಾಜ ತೀವ್ರವಾಗಿ ನಿಸರ್ಗದ ಭಾಗವಾಗಿಯೇ ಅಸ್ತಿತ್ವದ ದಾರಿಗಳನ್ನು ಹುಡುಕುತ್ತಿತ್ತು. ನಿಧಾನಕ್ಕೆ ತನ್ನ ಸುತ್ತಲ ಪರಿಸರದ ಮೇಲೆ ಅಧಿಪತ್ಯ ಸ್ಥಾಪಿಸುತ್ತ ನಡೆದಂತೆಲ್ಲ ಮನುಷ್ಯ ಜೀವಜಾಲದ ಎಷ್ಟೋ ಸಂಗತಿಗಳ ಮೇಲೆ ಅಧಿಕಾರವನ್ನೂ, ಆತ್ಮೀಯತೆಯನ್ನೂ, ಭಕ್ತಿಯನ್ನೂ, ಭಯವನ್ನೂ, ವಿಶ್ವಾಸವನ್ನೂ ಹಾಗೆಯೇ ನಿಗೂಢ ಸಂಬಂಧಗಳನ್ನೂ ಸಾಧಿಸಿಕೊಂಡ, ಸಂಸ್ಕೃತಿ ವಿಕಾಸದ ಮರೆಯಲ್ಲಿ ವ್ಯಾಪಕವಾಗಿ ನಡೆದಿರುವುದು ಜೈವಿಕ ಸಂಘರ್ಷ ಹಾಗೆಯೇ ಜೈವಿಕ ಅನುಸಂಧಾನ, ಯಾವುದೇ ಅನುಸಂಧಾನದ ಆರಂಭದಲ್ಲಿ ಸಂಘರ್ಷ ಇದ್ದೇ ಇರುತ್ತದೆ. ಜೀವವೈವಿಧ್ಯದ ವಿರಾಟ್ ವಿಶ್ವದಲ್ಲಿ ಮನುಷ್ಯ ತನ್ನ ಅಸ್ತಿತ್ವವನ್ನು ಕೇವಲ ಆಕ್ರಮಣಶೀಲತೆ ಒಂದರಿಂದಲೇ ಸ್ಥಾಪಿಸಿಕೊಳ್ಳಲು ಸಾಧ್ಯವಿಲ್ಲ. ದೀರ್ಘಕಾಲೀನ ಒಪ್ಪಂದಗಳಿಂದಲೇ ನಿಸರ್ಗದಲ್ಲಿ ಮಾನವರು ತಮ್ಮ ಚಹರೆಗಳನ್ನು ಗಾಢವಾಗಿ ರೂಪಿಸಿಕೊಂಡಿರುವುದು ಜೀವಜಾಲದ ವಿಕಾಸವನ್ನು ಸಂಸ್ಕೃತಿಗಳು ತಮ್ಮ ಅನುಭವಗಳಿಂದ ವಿವರಿಸುವುದನ್ನೇ ಜೈವಿಕ ಅನುಸಂಧಾನವೆಂದು ಕೂಡ ತಿಳಿಯಬಹುದು. ಬೇಟೆ ಸಂಸ್ಕೃತಿ, ಪಶುಪಾಲಕ ಸಂಸ್ಕೃತಿ, ಒಕ್ಕಲು ಸಂಸ್ಕೃತಿ ಈ ಮೂರು ಕಾಲಘಟ್ಟಗಳೂ ನಮಗೆ ಚಿರಪರಿಚಿತವೇ. ಆದರೆ ಈ ಮೂರು ಅವಧಿಗಳ ಪೂರ್ವಕಾಲದ ಮಾನವ ಹೆಜ್ಜೆಯ ಗುರುತುಗಳು ನಮಗೆ ಎಲ್ಲಿ ಗೋಚರವಾಗಬಹುದು? ಭಾಗಶಃ ಆದಿಮ ಆಚರಣೆಗಳಲ್ಲಿ, ನಂಬಿಕೆಗಳಲ್ಲಿ, ಮಾಂತ್ರಿಕ ವಿಧಿನಿಷೇಧಗಳ ಪ್ರಜ್ಞೆಗಳಲ್ಲಿ, ಅತ್ಯಂತ ಆದಿಮ ಪರಿಸರ ಹೇಗಿದ್ದೀತು? ಹಿಮಖಂಡಗಳ ಕಾಲವನ್ನು ನಾವು ಬಲ್ಲೆವು. ಅದಕ್ಕೂ ಮೊದಲು ಭೂಖಂಡಗಳು ಆಗ ತಾನೇ ಪ್ರತ್ಯೇಕಗೊಳ್ಳುತ್ತಿದ್ದಾಗ ಇದ್ದ ಪರಿಸರದ ಮಾನವ ಸಂಬಂಧ ಹೇಗಿದ್ದೀತು? ಭೂಖಂಡಗಳು ಚದುರಿ ಎಷ್ಟೋ ಸಾವಿರ ವರ್ಷಗಳು ಉರುಳಿದ ಮೇಲೆ ಖಂಡಾಂತರ ವಲಸೆಯಲ್ಲಿ ಚದುರಿದ ಆದಿ ಸಮಾಜಗಳ ಜೈವಿಕ ಅನುಸಂಧಾನ ಯಾವ ಸ್ವರೂಪದಲ್ಲಿ ವಿಸ್ತರಿಸಿತು? ಇವೆಲ್ಲವನ್ನು ಬಿಡಿಸಲು ಭಾಗಶಃ ಅಳಿದುಳಿದಿರುವ ಅದಿಮ ಆಚರಣೆಗಳಿಂದ ಸಾಧ್ಯವಿರಬಹುದಾದರೂ ಖಚಿತವಾಗಿ ಅಂತಹ ಕಾಲದ ಜೈವಿಕ ಚಹರೆಗಳ ಪಲ್ಲಟಗಳನ್ನು ತೋರಲಾಗದು. ಆದರೆ ಮಾನವ ಜೀವಶಾಸ್ತ್ರದ ವ್ಯಾಪಕ ಅಧ್ಯಯನಗಳಿಂದ ಅದಿಮ ಪರಿಸರದ ಮಾನವ ಸಂಬಂಧಗಳ ಜೈವಿಕ ಒಪ್ಪಂದಗಳನ್ನೂ ಜೈವಿಕ ಅನುಸಂಧಾನದ ಕ್ರಮಗಳನ್ನೂ ಅರಿಯಬಹುದು.

ಇಷ್ಟೊಂದು ದೀರ್ಘಕಾಲೀನ ಜೈವಿಕ ಅನುಸಂಧಾನದ ಸಂಕೇತಾರ್ಥಗಳು ಮೆದುಳಿನ ತಳದಲ್ಲಿ ಉಳಿದಿರಬಹುದು. ಅನುವಂಶಿಕ ಗುಣಗಳು ಸಾಗಿ ಬರುವಂತೆಯೆ ಪೂರ್ವಿಕರ ಜೈವಿಕ ಅನುಸಂಧಾನದ ಜ್ಞಾನ ಕೂಡ ನಮ್ಮ ಮೂಲಕವೂ ಅನೈಚ್ಛಿಕವಾಗಿ ಸಾಗಿ ಬಂದಿರುತ್ತದೆ. ಆದರೆ ಅಂತಹ ತಿಳುವಳಿಕೆಯನ್ನು ತೆರೆಯಲಾಗದ ಜೈವಿಕ ಕೌಶಲ್ಯ ವಿಕಾಸದ ಯಾವುದೊ ತೊಡಕಿನಲ್ಲಿ ತುಂಡಾದಂತಿದೆ. ಆದರೆ ತುಂಡಾದ ಕೊಂಡಿ ನಾಶವಾಗಿದೆ ಎಂದು ತಿಳಿಯಬೇಕಾಗಿಲ್ಲ. ಜೈವಿಕ ಅನುಸಂಧಾನದ ಲಕ್ಷಾಂತರ ವರ್ಷಗಳ ನೆನಪು ನಮ್ಮ ಜೈವಿಕತೆಗೆ ಇದ್ದೇ ಇರುತ್ತದೆ. ಹೀಗೆ ಆಂತರ್ಗತವಾಗಿರುವ ಕೊಂಡಿಯ ಸಂಬಂಧದಿಂದಲೆ ಆದಿಮ ಮನಸ್ಸು ತನ್ನ ಸುಪ್ತಪ್ರಜ್ಞೆಯ ಮೂಲಕ ಪುರಾಣ ಕಥನದ ಅನೇಕ ಲೋಕಗಳ ನಿರೂಪಣೆಗಳನ್ನು ಸೃಷ್ಟಿಸಿಕೊಳ್ಳಲು ಸಾಧ್ಯವಾಗಿರುವುದು.

ಜೀವಜಾಲದ ಅನುಸಂಧಾನ ಸಂಸ್ಕೃತಿಗಳಿಗೆ ಒಂದು ಅಸ್ತಿತ್ವದ ಗುಣ. ಯಾವ ಜನಪದವು ಬರಿದೇ ಮನುಷ್ಯರ ಬಗ್ಗೆಯೇ ಕಥನಗಳನ್ನು ಮಂಡಿಸುವುದಿಲ್ಲ. ಮಾನವ ಕೇಂದ್ರಿತ ನಿರೂಪಣೆಗಳೇ ಜಾನಪದದಲ್ಲಿ ತುಂಬಿರುವಂತೆ ಮೇಲು ನೋಟಕ್ಕೆ ಭಾಸವಾದರೂ ಆಳದಲ್ಲಿ ಜೀವಜಾಲದ ಸರಪಳಿಯ ಬಹುಕೊಂಡಿಗಳ ಬಹುಕಾಲ ಧಾರೆಗಳ ಕಥನಗಳನ್ನೆಲ್ಲ ಸಮಷ್ಠಿಯಾಗಿ ನಿರೂಪಿಸುವುದಿದೆ. ಆಕಾಶದ ಬಗೆಗಾಗಲಿ, ಭೂಮಿಯ ಮೇಲಿನ ಸರ್ವಸಂಗತಿಗಳ ಬಗೆಗಾಗಲಿ ಮಾನವ ಜೈವಿಕ ಸಂಬಂಧಗಳ ಕೊಂಡಿಗಳನ್ನೇ ನಿರೂಪಿಸಿಕೊಳ್ಳುತ್ತಿರುವುದು. ವ್ಯಾಪಕವಾದ ಜೈವಿಕ ಕೊಂಡಿಗಳ ಅನುಸಂಧಾನವನ್ನು ಮಾಡಿಯೇ ಮಾನವ ಸಮೂಹಗಳು ಬದುಕುಳಿಯಬೇಕು ಎಂಬುದು ವಿಕಾಸದ ಅಂತಸ್ಥ ಎಚ್ಚರವಾಗಿ ಸಾಗಿಬಂದಿದೆ. ವಿಕಾಸದ ಸ್ಥಿತಿ ಮೂಲತಃ ಪರಿಸರದ ನಿಯಮಗಳಿಗೆ ಬದ್ಧವಾಗಿದ್ದರೂ ವಿಕಾಸ ಆಗಲೇಬೇಕು ಎಂಬ ಒತ್ತಡ ಎಲ್ಲ ಜೀವಿಗಳಲ್ಲು ಅಂತಸ್ಥವಾಗಿ ಇದ್ದೇ ಇರುತ್ತದೆ. ಈ ನಿಯಮವ ಮೂಲಕವೇ ಮಾನವ ತನ್ನ ಸುತ್ತಲ ಪರಿಸರದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು. ಹೊಂದಾಣಿಕೆಯೂ ಕೂಡ ಅಂತಸ್ಥ ಜೈವಿಕತೆಯ ಒಂದು ಗುಣ. ಹೊಂದಾಣಿಕೆಗೂ ಬದುಕುವ ಪರಿಸರಕ್ಕೂ ಜೀವವೈವಿಧ್ಯದ ಪೈಪೋಟಿಗೂ ಅಂತರ್ಗತವಾದ ಸಂಬಂಧಗಳಿವೆ. ಇವಕ್ಕೆಲ್ಲ ಸಾವಯವವಾದ ಸಂಬಂಧ ಇರುವುದರಿಂದಲೇ ವಿಕಾಸವು ಏಕಕಾಲಕ್ಕೆ ಅಖಂಡವಾದ ಜೀವ ವೈವಿಧ್ಯವನ್ನೆಲ್ಲ ನಿಸರ್ಗದ ಜೊತೆಗೇ ಸಾಗಿಸಲು ಸಾಧ್ಯವಾಗುವುದು. ಜನಪದ ಸಮಾಜಗಳು ಹೀಗಾಗಿಯೆ ತಮ್ಮ ಇಡೀ ಸಂಸ್ಕೃತಿಗಳ ಉದ್ದಕ್ಕೂ ಅಂತಸ್ಥವಾದ ಜೈವಿಕ ಸರಪಳಿಯ ಜೊತೆಗೆ ಪರಿಸರದ ಸಂಬಂಧಗಳನ್ನು ಜೀವನ ವಿಧಾನಗಳಲ್ಲಿ ಅಳವಡಿಸಿಕೊಂಡಿರುವುದು. ಡಿ.ಎನ್.ಎ. ರಚನೆಯಲ್ಲಿ ಜೈವಿಕತೆಯು ಅಂತಸ್ಥವಾಗಿದೆ. ಹಾಗೆಯೇ ಈ ಅಂತಸ್ಥ ಜೈವಿಕತೆಯು ಒಳಗೇ ನಾಳಿನ ಪರಿಸರಕ್ಕೂ ಅದರಾಚೆಗಿನ ಅಭೌತಿಕ ಲೋಕದ ಅವ್ಯಕ್ತಕೊಂಡಿಗಳಿಗೂ ಪೂರಕವಾದ ನಾಳಿನ ವಿಕಾಸದ ಎಷ್ಟೋ ಗುಣಗಳು ಅಂತಸ್ಥವಾಗಿಯೇ ಉಳಿದಿರುತ್ತವೆ. ಜೀವವಿಕಾಸದ ಆದಿಯಿಂದ ಈವರೆಗಿನ ಸ್ಥಿತಿಯನ್ನು ಗಮನಿಸಿದರೆ ರೂಪರೂಪಾಂತರಗಳೆಲ್ಲವಕ್ಕೂ ಅಂತಸ್ಥ ಜೈವಿಕತೆಯೇ ಆಧಾರವಾಗಿದೆ. ಹೀಗಾಗಿಯೇ ಜೈವಿಕ ಕೊಂಡಿಗಳು ಭೌತಿಕವಾಗಿ ಅದೃಶ್ಯವಾಗಿದ್ದರೂ ಅವ್ಯಕ್ತ ನೆಲೆಯಲ್ಲಿ ಅವು ಮುಂದುವರಿದೇ ಬಂದಿರುತ್ತವೆ. ಹೀಗೆ ಅಂತಸ್ಥವಾಗಿರುವ ಮೂಲ ಜೈವಿಕತೆಯು ಮುಂದೊಂದು ದಿನ ಜಗದ ಪರಿಸರವೇ ಬದಲಾದರೂ ಕೂಡ ಅದಕ್ಕೆ ತಕ್ಕಂತೆಯೇ ಜೈವಿಕ ಸ್ವರೂಪಗಳನ್ನು ಮಾರ್ಪಡಿಸಿಕೊಳ್ಳಬಹುದು. ಇದು ವಿಕಾಸದ ಅನಂತಯಾತ್ರೆಯ ಪರಿ. ಒಂದು ವೇಳೆ ಜೈವಿಕತೆಯು ಅಂತಸ್ಥವಾಗಿ ಇರದೇ ಹೋಗಿದ್ದಿದ್ದರೆ ಮಾನವರ ವಿಕಾಸದ ಈ ನಡಿಗೆ ಸಾಧ್ಯವೇ ಆಗುತ್ತಿರಲಿಲ್ಲ. ಭೌತಿಕ ಸ್ವರೂಪದ ಏರುಪೇರುಗಳಿಗೆ ಹೀಡಾಗಿ ಅಂತಹ ಅಂತಸ್ಥ ಜೈವಿಕತೆಯು ಕಳೆದುಹೋಗುತ್ತಿತ್ತೇನೊ. ಜನಪದ ಪರಂಪರೆಗಳು ಈ ಪರಿಯ ಅಂತಸ್ಥ ಜೈವಿಕತೆಯನ್ನು ಭಾವಿಸಿದಂತೆ ಅಖಂಡತೆಯೇ ಶಾಶ್ವತ ಎಂದು ನಂಬಿವೆ. ಹಾಗಾಗಿಯೇ ಲೌಖಿಕದ ನಶ್ವರತೆಯ ಆಚೆಗೆ ಅನಂತವಾದ ಜೀವದ ತಾಣಗಳನ್ನು ಜನಪದ ಪರಂಪರೆಗಳು ಅತ್ಯಂತಿಕವಾಗಿ ಧ್ಯಾನಿಸುತ್ತವೆ.

ಜೈವಿಕ ಜೀವನ ವಿಧಾನ

ಅಂತಸ್ಥ ಜೈವಿಕತೆಗೂ ಜೀವನ ವಿಧಾನಗಳಿಗೂ ಸಂಬಂಧವಿದೆ. ಇವೆರಡನ್ನೂ ಜನಪದ ಸಮಾಜಗಳು ಬೆಸುಗೆ ಮಾಡಿಕೊಂಡಿವೆ. ಒಂದನ್ನೊಂದು ಬೇರ್ಪಡಿಸುವ ಬದಲು ಅಂತರ್ಗತವಾಗಿ ಬೆಸುಗೆ ಮಾಡಿಕೊಳ್ಳುವ ಅನಿವಾರ್ಯ ಎಲ್ಲ ಜನಪದಗಳಿಗೂ ಇತ್ತು. ನೇರವಾಗಿ ನಿಸರ್ಗದ ಜೊತೆಯೇ ಜೀವಿಸಬೇಕಾಗಿದ್ದ ಸಮಾಜಗಳು ತಮ್ಮ ಅನುಭವಗಳನ್ನೆಲ್ಲ ಪರಿಸರದ ಘಟನೆಗಳ ಜೊತೆ ಸಮೀಕರಿಸಿಕೊಂಡವು. ಹಾಗೆ ಮಾಡಿದ್ದರಿಂದ ತಂತಾನೆ ತಮ್ಮೊಳಗಿನ ಜೈವಿಕ ಸ್ವಭಾವಗಳಿಗೂ ತಮ್ಮ ಸುತ್ತಲಿನ ಪರಿಸರದ ತಿಳುವಳಿಕೆಗೂ ಅವಿನಾಭಾವದ ಸಂಬಂಧ ಸಾಧ್ಯವಾಗಿದೆ. ಪರಿಸರದ ಬದಲಾವಣೆಗೂ, ಅದನ್ನು ತಮ್ಮ ಜೀವನ ಕ್ರಮಗಳಿಗೆ ತಕ್ಕಂತೆ ಹೊಂದಿಸಿ ನಿಯಂತ್ರಿಸಿಕೊಳ್ಳುವುದಕ್ಕೂ ದೇಹದ ಒಳಗಿನ ಜೈವಿಕ ಸ್ವಭಾವಗಳಿಗೂ ತಕ್ಕ ಒಪ್ಪಂದಗಳು ಆದಾಗ ಮಾತ್ರವೆ ಬದುಕುಳಿಯುವ ಜೀವನ ವಿಧಾನಗಳು ವಿಕಾಸವಾಗುತ್ತವೆ. ಕೇವಲ ನಿಸರ್ಗದಲ್ಲಿ ವಿಕಾಸವಾದರೆ ಸಾಲದು. ಅದರ ಭಾಗವಾಗಿ ರೂಪುಗೊಂಡ ಜೀವನ ವಿಧಾನಗಳು ಕೂಡ ವಿಕಾಸವಾಗಬೇಕು. ಹೋಮೋಸೆಫಿಯನ್ ಮಾನವನಾಗಿ ಬೆಳೆದು ಬರುವ ದಾರಿಯಲ್ಲಿ ಏಕಕಾಲಕ್ಕೆ ಜೀವಜಾಲದ ಪರಿಸರದಲ್ಲೂ ಮಾನವ ನಿರ್ಮಿತ ಪರಿಸರದಲ್ಲೂ ಸಾಕಷ್ಟು ಒಪ್ಪಂದಗಳು ಉಂಟಾಗಿವೆ. ಹಾಗಾಗಿಯೇ ನಿಸರ್ಗವೇ ಸಂಸ್ಕೃತಿಯಾಗಿ ಮಾರ್ಪಾಟಾದುದು. ಜೀವನ ವಿಧಾನಗಳ ವಿಕಾಸವನ್ನು ಭೌತಿಕವಾಗಿ ಗುರುತಿಸುವಂತೆಯೇ ಮಾನಸಿಕವಾಗಿಯೂ ಕಂಡುಕೊಳ್ಳುವುದುಂಟು. ಶರೀರ ವಿನ್ಯಾಸದ ವಿಕಾಸಕ್ಕೆ ಅಂತಸ್ಥವಾಗಿರುವ ಜೈವಿಕತೆಯೂ ಆದರೆ ಒಂದು ಭಾಗವಾದ ಮಾನಸಿಕ ಸ್ಥತಿಯೂ ತಕ್ಕ ಪ್ರಮಾಣಗಳಲ್ಲಿ ವಿಕಾಸವಾದರೆ ಮಾತ್ರ ತಕ್ಕ ವಿಕಾಸದ ಚಲನೆ ಸಾಧ್ಯ. ಜೀವನ ವಿಧಾನಗಳು ವಿಕಾಸದ ವೇಗದ ಜೊತೆಯೇ ಸಾಗಬೇಕು. ಆಧುನಿಕ ಮಾನವ ಸಮೂಹಗಳು ಈ ವೇಗದಲ್ಲಿ ಪೈಪೋಟಿಗಿಳಿದಿರುವುದು ಅಜೈವಿಕ ವೇಗವೇ ಸರಿ. ಜೀವನ ವಿಧಾನಗಳು ಭೌತಿಕವಾಗಿ ವೇಗವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದಂತೆ ಅವು ಜೈವಿಕ ವೇಗದ ಸುಪ್ತ ಸಂಬಂಧಗಳಿಂದ ದೂರವಾಗುತ್ತವೆ. ಇಂತಹ ಅಂತರಗಳಿಂದಲೇ ಜನಪದಗಳು ಅಭಿವೃದ್ಧಿ ಎಂಬ ಭ್ರಮೆಯ ಪಥಗಳಲ್ಲಿ ತಮ್ಮ ಎತ್ತಿನ ಬಂಡಿಗಳ ಗಾಲಿಗಳು ಉರುಳಿದಂತೆ ಆಘಾತಕ್ಕೆ ಹೀಡಾಗುವುದು. ಜೀವನ ವಿಧಾನಗಳು ಭೌತಿಕವಾಗಿ ವಿಪರೀತ ವೇಗವನ್ನು ಹೆಚ್ಚಿಸಿಕೊಂಡಂತೆಲ್ಲ ಅವುಗಳ ವಕ್ತಾರರಾದ ಸಮಾಜಗಳು ಬೇಗನೆ ಕ್ಷಯಿಸುತ್ತವೆ. ತಾಂತ್ರಿಕ ವೇಗ ಯಾವತ್ತೂ ಜೈವಿಕ ವೇಗದ ಮುಂದೆ ಗೆಲ್ಲಲಾರದು. ಅಂತಸ್ಥವಾಗಿರುವ ದೇಹದ ಒಳಗಿನ ವೇಗವೇ ಮನುಷ್ಯರ ನಿಜವಾದ ವೇಗ. ಅದಕ್ಕೆ ತಕ್ಕಂತೆಯೇ ಜೀವನ ವಿಧಾನಗಳು ಆಧುನಿಕವಾಗಬೇಕೇ ವಿನಃ ಅಂತಸ್ಥ ಜೈವಿಕತೆಯ ವೇಗವನ್ನು ಧಿಕ್ಕರಿಸುವಂತಹ ನಡಿಗೆ ಉಚಿತವಲ್ಲ. ಜನಪದ ಪರಂಪರೆಗಳ ಮೇಲೆ ಈಗಾಗಲೇ ಈ ವೇಗದ ತಾರತಮ್ಯದಿಂದ ಅನೇಕ ಒತ್ತಡಗಳು ಕಷ್ಟನಷ್ಟಗಳು ಉಂಟಾಗಿವೆ. ಗತಕಾಲದ ಜನಪದಗಳ ಜೈವಿಕ ವೇಗವೂ ಜೇವನ ವಿಧಾನಗಳ ವೇಗವೂ ಜೀವಜಾಲ ವಿಕಾಸದ ಭಾಗವಾಗಿ ಸಾಗಿದ್ದನ್ನು ವಿಪರೀತ ವೇಗದ ಕಾಲದಲ್ಲಿ ಮರುರೂಪಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ವಿಕಾಸದಲ್ಲಿ ಹಿಮ್ಮುಖ ಚಲನೆ ಇಲ್ಲ ಎಂದು ಹೇಳುವುದುಂಟು. ಮುಂದೆ ಸಾಗುವುದು ಮಾತ್ರವೇ ಚಲನೆಯಲ್ಲ. ನಮ್ಮ ವರ್ತಮಾನದ ಗಡಿಯಾರಗಳು ಹಿಮ್ಮುಖವಾಗಿ ಚಲಿಸಲಾರವು ಎಂದ ಮಾತ್ರಕ್ಕೆ ಮನುಷ್ಯ ಸಂವೇದನೆಯೂ ಹಿಂದಕ್ಕೆ ಸರಿಯುವುದಿಲ್ಲ ಎಂದು ಹೇಳಲಾಗದು. ರೂಪಾಕೃತಿ ತನ್ನ ಪೂರ್ವ ರೂಪವನ್ನೆ ಪಡೆಯುವುದು ಸಾಧ್ಯವಿಲ್ಲದಿದ್ದರೂ ಜೈವಿಕವಾದ ಗುಣಗಳು ಮಾತ್ರ ಗತಕಾಲದ ಎಲ್ಲ ಅವಸ್ಥೆಗಳನ್ನು ಮತ್ತೆ ಹಿಂದೆ ಮುಂದೆ ಅತ್ತ ಇತ್ತ ಚಲಿಸಿ ಮರು ಜೋಡಿಸಿಕೊಳ್ಳಬಲ್ಲವು. ಇದರಿಂದಾಗಿಯೆ ಕಣ್ಮರೆಯಾಗಿದ್ದ ಎಷ್ಟೋ ಜೀವಿಗಳು ಮತ್ತೆ ಪುನರ್ ಸೃಷ್ಠಿಗೊಳ್ಳುವ ಅವಕಾಶ ನಿಸರ್ಗದಲ್ಲಿರುವುದು. ಪೂರ್ವಿಕರ ಅನುಭವಗಳು ಜೈವಿಕವಾಗಿ ಮತ್ತೆ ವರ್ತಮಾನದಲ್ಲಿ ಪ್ರತಿಫಲಿಸುವುದು ಕೂಡ ಇದೇ ಬಗೆಯಲ್ಲಿ. ಹೀಗೆ ಪ್ರತಿಫಲಿಸುವಾಗ ಗತಕಾಲದ ಅನುಭವ ವರ್ತಮಾನದ ಅನುಭವದ ಜೊತೆ ಒಂದೇ ಸಮಾನತೆಯಲ್ಲಿ ಅನುಸಂಧಾನವಾಗಲಾರದು. ಮೌಖಿಕ ಪರಂಪರೆಗಳ ಭಿನ್ನ ಕಾಲಘಟ್ಟಗಳು ಒಂದೇ ಬಗೆಯ ಅನುಭವ ಸಂಧಾನ ಮಾಡಿಕೊಳ್ಳದೆ ಬೇರೆ ಬೇರೆ ಚಾರಿತ್ರಿಕ ಸಂದರ್ಭಗಳನ್ನು ತಮ್ಮ ಚಹರೆಗೆ ಅನುಗುಣವಾಗಿ ರೂಪಾಂತರಿಸಿಕೊಳ್ಳುತ್ತವೆ. ಒಕ್ಕಲುತನದ ಜೈವಿಕ ಸಂಬಂಧಗಳು ಕೈಗಾರಿಕಾ ಸಮಾಜಗಳ ವೇಳೆಯಲ್ಲಿ ಪಲ್ಲಟಗೊಳ್ಳುತ್ತವೆ. ಹಾಗೆಯೇ ಏರುಪೇರುಗಳನ್ನು ಕಾಣುತ್ತವೆ. ಹೀಗೆ ವ್ಯತ್ಯಾಸವಾಗುವುದೂ ಕೂಡ ಜೀವಜಾಲದ ಸಾಮಾನ್ಯಕ್ರಮ. ಇಂತಹ ಸಾಮಾನ್ಯ ಕ್ರಮದಲ್ಲಾಗುವ ಸಂವೇದನೆಯ ನಷ್ಟ, ಸಂಸ್ಕೃತಿಗಳ ಬಿಕ್ಕಟ್ಟುಗಳು, ಸಾಮಾಜಿಕ ತಾರತಮ್ಯಗಳು ಹೇಗೆ ನಿವಾರಣೆ ಆಗಬೇಕು ಎಂಬುದನ್ನು ಜೈವಿಕ ಅನುಭವಗಳಿಂದಲೇ ತಿಳಿಯಬೇಕು ಕಾರ್ಲ್ ಮಾಕ್ಸ್ ಅಂತದೊಂದು ದಾರಿಯನ್ನು ಈ ಹಿಂದೆಯೇ ತೋರಿದ್ದಿದೆ.

ಇಪ್ಪತ್ತೊಂದನೆ ಶತಮಾನದ ಈ ತುದಿಯಲ್ಲಿ ನಿಂತು ಜೀವಜಾಲದ ನೆನ್ನೆಯನ್ನು ನೆನೆದರೆ; ನಮ್ಮ ಅರಿವಿಗೆ ಬರುವ ಮುನ್ನವೇ ಎಷ್ಟೋ ಜೀವಿಗಳು ಅಳಿದು ಹೋಗಿವೆ. ಆದರೂ ಅಂತಹ ಅವ್ಯಕ್ತ ಕೊಂಡಿಯ ಪ್ರಜ್ಞೆ ಮನುಷ್ಯರಿಗಿದೆ. ಹಾಗೆಯೇ ಹೊಸಜೀವಿಗಳೂ ಮರುಸೃಷ್ಟಿಗೊಂಡಿವೆ. ಪರಿಸರದ ಸಮಷ್ಠಿ ಜಾಲವನ್ನು ಜನಪದರು ಅಖಂಡವಾಗಿಯೆ ಕಂಡಿದ್ದಾರೆ. ಹಾಗಾಗಿಯೇ ಇರುವೆಯ ಬಗೆಗೂ ಆನೆಯ ಬಗೆಗೂ ಮಾನವ ಸಂಬಂಧಗಳ ಕೊಂಡಿಗಳನ್ನು ಬೆಸುಗೆ ಮಾಡಿಕೊಳ್ಳಲು ಸಾಧ್ಯವಾಗಿರುವುದು. ಜೀವಜಾಲದ ಜೊತೆಗಿನ ಅಸಂಖ್ಯ ಪುರಾಣಗಳಲ್ಲಿ ಕೇವಲ ಒಂದೇ ಒಂದು ಪ್ರಾಣಿಯ ಬಗ್ಗೆ ಮಾನವ ಸಮೂಹಗಳು ಎಷ್ಟೆಲ್ಲಾ ಬಗೆಯಲ್ಲಿ ಅನುಸಂಧಾನ ಸಂಬಂಧ ಮಾಡಿವೆ ಎಂದು ಜಾಗತಿಕವಾಗಿ ಮಾಹಿತಿ ಸಂಗ್ರಹಿಸಿದರೆ ಈವರೆಗೆ ನಮ್ಮ ಅರಿವಿಗೆ ಭಾರದಿರುವ ಜೈವಿಕ ಅನುಭವಗಳೆಲ್ಲ ಎದುರಾಗಬಲ್ಲವು ಹಸು ಹಿಂದುಗಳಿಗೆ ಪವಿತ್ರ. ಅದನ್ನು ಈ ದೇಶದ ಒಂದೊಂದು ಜಾತಿಯೂ ವಿಭಿನ್ನವಾಗಿ ನೋಡುವುದಿದೆ. ಪಶುಪಾಲಕರು ಹಸುಗಳ ಬಗ್ಗೆ ಬಹು ಬಗೆಯ ಜೈವಿಕ ಜಾನಪದವನ್ನು ಸೃಷ್ಟಿಸಿಕೊಂಡಿದ್ದಾರೆ. ಆಫ್ರಿಕಾದ ಮಸಾಯಿ ಮಾರಾ ಆದಿವಾಸಿಗಳು ಈಗಲೂ ಹಿಂಡು ಹಿಂಡು ಹಸುಗಳ ಸಾಕಿಕೊಂಡು ಅವುಗಳನ್ನು ನಂಬಿಯೇ ಬದುಕುವರು. ಹಸುವಿನ ಉತ್ಪನ್ನಗಳು ಜಗತ್ತಿನ ಬೃಹತ್ ಮಾರುಕಟ್ಟೆಯ ಭಾಗವೇ ಆಗಿಬಿಟ್ಟಿವೆ. ಹೈನುಗಾರಿಕೆ ಕೈಗಾರೀಕರಣದ ಭಾಗವಾಗಿ ಈಗಲೂ ಸಾಗಿದೆ. ಜಗತ್ತಿನ ಅನೇಕ ದೇಶಗಳಲ್ಲಿ ಹಸುಗಳ ಬಗ್ಗೆ ವೈವಿಧ್ಯ ಕಥನಗಳಿವೆ. ಆಡು ಕುರಿಗಳ ಸಂಗತಿಯೂ ಹೀಗೆಯೇ. ಅಂದರೆ ಕೇವಲ ಒಂದೇ ಒಂದು ಹಸುವಿನ ಸುತ್ತ ನಮ್ಮ ನಮ್ಮ  ಭಾಷೆಗಳು  ಜೀವನ  ವಿಧಾನಗಳು  ಎಂತೆಂತಹ ಜೈವಿಕ  ಕಥನಗಳನ್ನು ಕಟ್ಟಿವೆ ಎಂಬುದರ ಮೂಲಕವೇ ಜೀವಜಾಲ ವಿಕಾಸದ ಸಂಬಂಧಗಳು ಕೂಡ ಸ್ಪಷ್ಟವಾಗುತ್ತವೆ. ವಾಸ್ತವ ಹೀಗಿರಬೇಕಾದರೆ ಇನ್ನು ಜಗತ್ತಿನ ಎಲ್ಲ ಪ್ರಾಣಿ – ಪಕ್ಷಿ ಕೀಟಗಳ ಬಗೆಗೂ, ಜಲಚರ ಬಗೆಗೂ, ಮರಗಿಡಗಳ ಬಗೆಗೂ, ನದಿ ಕೆರೆಕಟ್ಟೆ, ಸಾಗರಗಳ ಬಗೆಗೂ, ಆಕಾಶಕಾಯಗಳ ವ್ಯಾಪ್ತಿಗೂ ಇನ್ನೂ ಎಂತೆಂತಹ ನಿರೂಪಣೆಗಳನ್ನು ಮಾಡಿಕೊಂಡಿವೆ ಎಂದು ತಿಳಿದರೆ ಹೇಗಿರುತ್ತದೆ? ಇನ್ನು ಜಗತ್ತಿನ ಎಲ್ಲಾ ಒಕ್ಕಲು ಸಮಾಜಗಳು ದವಸ ಧಾನ್ಯ, ಕಾಳು ಕಡ್ಡಿ, ಹಣ್ಣು ಹಂಪಲು, ಸೊಪ್ಪು ಇತ್ಯಾದಿಗಳ ಬಗ್ಗೆ ಏನೆಲ್ಲ ಜೈವಿಕ ಸಂಗತಿಗಳನ್ನು ಬಿತ್ತಿರಬಹುದು? ಜೈವಿಕ ಪರಿಭಾಷೆಯ ಯಾವ ಗೋಜಲೂ ಇಲ್ಲದೆ ಜನಪದರು ಜೈವಿಕ ತತ್ವದ ಪ್ರಕಾರವಾಗಿಯೇ ಬದುಕಿ ಬಿಟ್ಟು, ಹೋದ ಅದೆಷ್ಟೋ ಸಂಗತಿಗಳನ್ನು ಅರಿತರೆ ಪ್ರಕೃತಿಯ ಮೇಲಿನ ಆಕ್ರಮಣಕಾರಿ ಅನುಸಂಧಾನ ತಪ್ಪುತ್ತದೆ. ಈ ಕಾಲಮಾನದ ಮಾನವ ಯತ್ನಗಳೆಲ್ಲವೂ ಪರಿಸರಕ್ಕೆ ಒತ್ತಡವನ್ನು ಹೇರುವಂತವೇ ಆಗಿದ್ದು ನಿಸರ್ಗದ ಆಳದ ತಾಳ್ಮೆ ಕೆಡುವಂತಿದೆ. ಮುಗ್ಧವಾಗಿದ್ದ ಸಮುದಾಯಗಳು ಮಾನವ ಕೇಂದ್ರಿತ ಪರಿಸರವನ್ನು ನಿಸರ್ಗದ ತತ್ವಕ್ಕೆ ಅನುಗುಣವಾಗಿ ಅಳವಡಿಸಿಕೊಂಡಿದ್ದವು. ನಿಸರ್ಗನಿಷ್ಟ, ಸಾಮಾಜಿಕತೆಯೇ ಜೀವನ ಕ್ರಮವಾಗಿದ್ದಲ್ಲಿ ಪರಿಸರ ನಾಶ ಆಗುತ್ತಿರಲಿಲ್ಲ. ಕೃತಕ ಜೀವಜಾಲ ನಿರ್ಮಿಸುವುದರಲ್ಲೆ ಮುಂದಾಗಿರುವ ಆಧುನಿಕ ಮಾನವ ಒಂದೇ ಬಗೆಯ ಬೆಳೆಯನ್ನು ಲಕ್ಷಾಂತರ ಎಕರೆಗಳಲ್ಲಿ ಯಾಂತ್ರಿಕವಾಗಿ ಬಿತ್ತಿ ಆಹಾರ ಬೆಳೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದನ್ನು ತಕ್ಕ ಜೈವಿಕ ಅನುಸಂಧಾನವೆಂದು ಕರೆಯಲಾಗದು. ಹೊಸ ಕೃತಕ ತಳಿಯ ತಂತ್ರಜ್ಞಾನ ಸಮತೋಲನದಲ್ಲಿ ಇಡಲಾರದು.

ಆಖಂಡವಾಗಿ ನಿಸರ್ಗವನ್ನು ನೋಡುವ ಜೈವಿಕತೆಯು ವಿಕಾಸ ಪರವಾದದ್ದು. ಅದನ್ನು ಬಿಡಿಯಾಗಿ ಛಿದ್ರವಾಗಿ ನೋಡುವುದು, ಅಭಿವೃದ್ಧಿಯ ಹೆಸರಿನ ಋಣಾತ್ಮಕ ಕ್ರಿಯೆಯಾಗಿದೆ. ಒಂದೇ ಜೀವ ಸಂಕುಲ ಕೊಬ್ಬಿ ಬೆಳೆಯುವುದು ಅಭಿವೃದ್ಧಿ ಹೆಸರಿನ ಅವಿಕಾಸ ನಡಿಗೆಯಿಂದ ಮಾತ್ರ. ಹೀಗೆ ಕೊಬ್ಬಿದ ಅಮಲಿನ ಜೈವಿಕ ಆಕ್ರಮಣಶೀಲತೆಯು ತನಗೆ ತಾನೇ ವಿಪತ್ತು ತಂದುಕೊಳ್ಳುವಂತದ್ದು. ವೇಗದ ಇಂತಹ ಕಾಲದಲ್ಲಿ ಜೈವಿಕ ಸರಪಳಿಯ ಜೀವಜಾಲ ಜಾನಪದ ಕಥನಗಳು ಕೂಡ ಅಳಿವಿನ  ಅಂಚಿನ ಸಂಗತಿಗಳಂತೆ ಕಾಣುತ್ತವೆ. ಮಾನವ ಜೀವಿ ಒಂದೇ ಅತ್ಯುನ್ನತ ವಿಕಾಸವನ್ನು ಸಾಧಿಸಿಲ್ಲ. ವಿಪರೀತ ಬೆಳವಣೆಗೆ ಹಾಗೂ ಪರಿಣಿತಿ ಕೂಡ ಅಪಾಯಕಾರಿ. ಬಲವೇ ಎಲ್ಲ ಕಾಲದಲ್ಲೂ ಸಲ್ಲುವುದಿಲ್ಲ. ನಿಸರ್ಗದಲ್ಲಿ ಅತ್ಯಂತ ತಳದಲ್ಲಿದ್ದುದೇ ತಿರಸ್ಕಾರಕ್ಕೆ ಒಳಗಾಗಿದ್ದುದೇ ವಿಕಾಸದ ಪಯಣದ ಮುಂದಿನ ಹಂತದಲ್ಲಿ ಅತ್ಯುನ್ನತ ಸ್ಥಿತಿಯನ್ನು ತಲುಪಬಲ್ಲದು. ನಿಸರ್ಗದಲ್ಲಿ ಅದು ಸಹಜಕ್ರಿಯೆ. ನಮ್ಮ ಅರಿವಿಗೆ ಬಾರದೆಯೇ ಉನ್ನತ ಜೈವಿಕ ಸಂಬಂಧವನ್ನು ತೀರ ಕ್ಷುಲ್ಲಕ ಎನಿಸಿರುವ ಹುಳು ಉಪ್ಪಟ್ಟೆಗಳು ನಿಸರ್ಗದ ಜೊತೆ ಸಾಧಿಸಿರುತ್ತವೆ.

ಅಳಿವಿನ ಅಂಚಿನ ಎಷ್ಟೋ ಸಂಗತಿಗಳು ಮತ್ತೆ ಪುನರುಜ್ಜೀವನಗೊಳ್ಳಬಲ್ಲವು. ಹಿರೋಷಿಮಾ – ನಾಗಸಾಕಿಯ ಮೇಲೆ ಬಾಂಬು ಎಸೆದ ಮೇಲೆ ಮಾಯಾಮಯವಾಗಿ ಭೂಮಿಯ ತಳದಿಂದ ಹೊಸದೊಂದು ಚೈತನ್ಯ ಚಿಗಿತು ಬರಲಿಲ್ಲವೆ? ಹಿಮಖಂಡಗಳ ನಿರ್ಗಲ್ಲುಗಳು ತಾಪಮಾನಕ್ಕೆ ಕರಗಿ ಸಮುದ್ರದ ನೀರಿನ ಮಟ್ಟ ಏರುತ್ತಿದೆ ಎಂದು ಆತಂಕ ಪಡುತ್ತಿರುವಾಗಲೇ ಸೂಕ್ಷ್ಮಾಣು ಜೀವಿಯುಂತಹ ಪಾಚಿಗಳು ಬೆಳೆದು ಹಿಮಗಡ್ಡೆಗಳು ಸುಲಭವಾಗಿ ಕರಗದಂತೆ ತಡೆಯುತ್ತಿಲ್ಲವೆ? ಓಜೋನ್ ಲೇಯರ್ ತೂತಾಗಿ ವಿಕಿರಣ ಸೂಸುತ್ತಿದೆ ಎಂದು ಎಪ್ಪತ್ತರ ದಶಕದಿಂದ ವಿಜ್ಞಾನಿಗಳು ಆತಂಕಕಾರಿ ವಿದ್ಯಮಾನಗಳನ್ನು ಬಿತ್ತರಿಸುತ್ತಿದ್ದರೂ ಓಜೋನ್ ಪರದೆ ತನಗೆ ತಾನೆ ತನ್ನ ಸಮಸ್ಥಿತಿಯನ್ನು ಕಾಯ್ದುಕೊಳ್ಳುತ್ತ ಬರುತ್ತಿಲ್ಲವೆ? ನಿಸರ್ಗಕ್ಕೆ ಅಪಾರವಾದ ಸೃಷ್ಟಿಯ ತಾಳ್ಮೆಯಿದೆ. ಆತುರ ಸೃಷ್ಠಿಯ ಮಾನವನೇ ಅತ್ಯಂತ ಅಪಾಯಕಾರಿ ಜೀವಿಯಾಗಿ ವೇಗವಾಗಿ ವಿರುದ್ದ ದಿಕ್ಕಿನಲ್ಲು ಸಾಗುತ್ತಿರುವುದು. ಸುಮ್ಮನೆ ನಿಸರ್ಗವನ್ನು ಅದರ ಪಾಡಿಗೆ ಅದನ್ನು ಬಿಟ್ಟುಬಿಟ್ಟರೆ ಅದು ತನ್ನ ಎಲ್ಲ ಸಾಧ್ಯತೆಗಳನ್ನು ಎಲ್ಲರಿಗೂ ಮುಕ್ತನಾಗಿ ತೆರೆದಿಡುತ್ತಲ್ಲೇ ಇರುತ್ತದೆ. ಗತಕಾಲದ ಜನಪದಗಳು ಜೈವಿಕ ಸಂವಿಧಾನಕ್ಕೆ ತಕ್ಕಂತೆ ನಿಸರ್ಗವನ್ನು ಅನುಸರಿಸುತ್ತಿದ್ದವು. ತಮ್ಮ ಅಗತ್ಯಕ್ಕೆ ಏನು ಬೇಕೊ ಅಷ್ಟನ್ನು ಮಾತ್ರ ಸಂಸ್ಕೃತಿ ಜೀವನ ಎಂದು ರೂಪಿಸಿಕೊಳ್ಳುತ್ತಿದ್ದವು. ಅಳಿವಿನ ಅಂಚಿಗೆ ಯಾವುದೇ ಒಂದು ಜೀವೆ ತಲುಪುತ್ತಿದೆ ಎಂದರೆ ಅದರ ಹೊಣೆ ಮಾನವರ ಅತಿಯಾದ ಬೆಳವಣೆಗೆಯೇ ಆಗಿದೆ. ಒಂದು ಜೀವಿ ಅಳಿಯಿತು ಎಂದರೆ ಮನುಷ್ಯರ ಸಾಧ್ಯತೆ ಅಷ್ಟರಮಟ್ಟಿಗೆ ತುಂಡಾಯಿತು ಎಂತಲೇ. ಒಂದು ಜೀವಿಯ ಅಳಿವು ತನಗೆ ತಾನೇ ಅಳಿದು ಬಿಡುವುದಿಲ್ಲ. ತಾನು ಅಳಿಯುವುದರ ಜೊತೆಯಲ್ಲೇ ನಮ್ಮ ಅರಿವಿಗೆ ಬಾರದಂತೆ ನೂರಾರು ಜೈವಿಕ ಸಂಗತಿಗಳ ಅಂತರ್ ಜಾಲವನ್ನು ತುಂಡಾಗಿಸಿ ತನ್ನ ಅಸ್ತಿತ್ವವನ್ನು ಆ ಕಾಲಮಾನಕ್ಕೆ ಕಳೆದುಕೊಂಡಿರುತ್ತದೆ.

ಜೈವಿಕ ಸಂವಿಧಾನ

ಮಾನವ ನಿರ್ಮಿತ ನೀತಿ-ನಿಯಮಗಳ ಸಂವಿಧಾನಗಳ ಸಂವಿಧಾನಗಳು ಸಾಮಾಜಿಕ ವ್ಯವಸ್ಥೆಯ ಒಟ್ಟು ನಿರ್ವಹಣೆಗೆ ಅನಿವಾರ್ಯ. ಆ ಬಗೆಯು ಸಂವಿಧಾನಗಳೂ ಒಂದು ಬಗೆಯಲ್ಲಿ ಜೀವಜಾಲದ ಜೊತೆಗಿನ ಅರಿವನ್ನು ಮೂಲಕವಾಗಿಯೆ ರೂಪುಗೊಂಡಿರಬೇಕಾಗುತ್ತದೆ. ನಿಸರ್ಗದ ಮೇಲಿನ ಯಜಮಾನಿಕೆಗೆ ಆವಕಾಶ ಮಾಡಿಕೊಡುವ ಯಾವ ಸಾಮ್ರಾಜ್ಯಶಾಹಿ ರಾಜಕೀಯ ಸಂವಿಧಾನಗಳು ಕೂಡ ಬದುಕುಳಿಯಲಾರವು. ಅಶೋಕ ಚಕ್ರವರ್ತಿ ಸಾಲುಮರಗಳನ್ನೂ ಕೆರೆಕಟ್ಟೆಗಳನ್ನೂ ವ್ಯಾಪಕವಾಗಿ ನಿರ್ಮಿಸಿದ ಬಗ್ಗೆ ತಿಳಿದಿದ್ದೇವೆ. ಉತ್ತಮ ಪ್ರಭುತ್ವ ಅಥವಾ ರಾಜನಾದವನು ಪ್ರಮಾಣ ಸ್ವೀಕರಿಸುವ ವೇಳೆ ಕೆರೆಕಟ್ಟೆಗಳ ಕಟ್ಟಿಸುವ, ಜಲತತ್ವವನ್ನು ಪಾಲಿಸುವ ಸಕಲ ಜೀವಿಗಳೆಲ್ಲವುಗಳ ಮೇಲೂ ಪ್ರೀತಿ ಇಟ್ಟುಕೊಳ್ಳುವ ಶ್ರದ್ದೆಯನ್ನು ತೋರಬೇಕಾಗಿತ್ತು. ಈಗಲೂ ವಿಶ್ವಸರ್ಕಾರ ಜೀವಜಾಲದ ಸಮತೋಲನವನ್ನೆ ಒತ್ತಿಹೇಳುತ್ತದೆ. ಸಾಲುಮರದ ತಿಮ್ಮಕ್ಕನಂತಹ ಅದೆಷ್ಟೋ ಜನಪದರು ಜೀವನದ ಉದ್ದಕ್ಕೂ ಜೀವಜಾಲ ಸಂರಕ್ಷಕರಾಗಿ ಬಾಳಿ ಹೋಗಿದ್ದಾರೆ. ಇಂತಹ ಬದ್ಧತೆಗೆ ನಡೆದುಕೊಂಡಲ್ಲದೆ ಮುಂದಿನ ಕಾಲ ಹಸಿರಾಗಿ ಉಳಿಯದು. ಹಸಿರು ಸಂವಿಧಾನವೇ ಎಲ್ಲ ಕಾಲದ ಜೀವಜಾಲದ ಒಪ್ಪಂದ ಹಾಗು ಸಂಹಿತೆ. ಜೀವಜಾಲದ ಆಂತರಿಕ ಒಪ್ಪಂದಗಳಿಂದಾಗಿಯೆ ಮಾನವ ಸಮಾಜ ಈ ಪ್ರಮಾಣದಲ್ಲಿ ವ್ಯಾಪಿಸಿರುವುದು. ಜೈವಿಕ ಸಂವಿಧಾನ ಎಲ್ಲ ಕಾಲದ ಪ್ರಭುತ್ವಗಳ ಹಂಗಿನ ಆಚೆಗೆ ಇರುತ್ತದೆ. ಅದು ಒಟ್ಟು ಜೀವಜಲದ ಅಸ್ತಿತ್ವದ ಸಂವಿಧಾನ. ನಮ್ಮ ಸಂವಿಧಾನದ ನಿಯಮಗಳನ್ನು ರಾಜಕೀಯವಾಗಿ, ಜನಾಂಗಿಯವಾಗಿ ಅಧಿಕಾರ ಲಾಲಸೆಯಲ್ಲಿ ಹೇಗೆ ಬೇಕಾದರೂ ತಿದ್ದುಪಡಿಗೆ ಒಳಪಡಿಸಬಹುದು.

ಆದರೆ ಜೈವಿಕ ನೀತಿಯ ಕೇಂದ್ರವಾಗಿ ರೂಪುಗೊಂಡ ಜೀವಜಾಲದ ಜೈವಿಕ ಸಂವಿಧಾನವನ್ನು ನಾವು ಬದಲಿಸಲಾಗದು. ಕೃತಕ ಮಳೆ ತರಿಸುವ ನಮ್ಮ ತಿಳಿವಳಿಕೆಯೂ ಒಂದು ಲೋಪವೇ. ಜೈವಿಕ ಸಂವಿಧಾನವು ಅಖಂಡ ಭೂಮಿಯ ಅಸ್ತಿತ್ವದ ನೆಲೆಯಲ್ಲಿ ರೂಪುಗೊಂಡಿರುವ ಒಂದು ನೈಸರ್ಗಿಕ ಪ್ರಕ್ರಿಯೆ. ಡಾ. ಅಂಬೇಡ್ಕರ್ ಅವರು ರೂಪಿಸಿದ ಭಾರತೀಯ ಸಂವಿಧಾನದಲ್ಲಿ ಜೀವಜಾಲದ ಸಮಾನ ಅವಕಾಶದ ತತ್ವವಿದೆ. ಅಸ್ತಿತ್ವದ ಬಗೆಗಿನ ಜೈವಿಕ ನ್ಯಾಯದ ಆಶಯವಿದೆ. ಜೈವಿಕ ಸಂವಿಧಾನವು ಎಲ್ಲರಿಗೂ ಸಮಾನತೆಯನ್ನೇ ನೀಡಿರುತ್ತದೆ. ಈ ಕೆರೆಯ ನೀರನ್ನು ನೀನು ಮಾತ್ರ ಕುಡಿಯಬಹುದು, ಅವರು ಯಾವತ್ತೂ ಕೂಡ ಈ ಕೆರೆಯ ನೀರನ್ನು ಮುಟ್ಟಿ ಮೈಲಿಗೆ ಮಾಡಬಾರದು ಎಂದು ಯಾವ ಕೆರೆಯೂ ನದಿಯೂ ಹಳ್ಳವೂ ಬಾವಿಯೂ ನಿರ್ದೇಶನ ಹೊರಡಿಸುವುದಿಲ್ಲ. ಈ ನೀರಿನಲ್ಲಿ ಜೀವಜಾಲದ ಎಲ್ಲರಿಗೂ ಸಮಾನ ಹಕ್ಕಿದೆ. ಪಂಚಭೂತಗಳಿಗೆ ಯಾರೂ ಹಕ್ಕು ಸ್ವಾಮ್ಯವನ್ನು ಹೇರಲಾಗದು. ಆದರೆ ನಿಸರ್ಗ ತನ್ನ ಸಂಪತ್ತನ್ನು ಯಾರಿಗೆ ಬೇಕಾದರೂ ಯಾವ ಪ್ರತಿಫಲಾಪೇಕ್ಷೆ ಇಲ್ಲದೆಯೂ ಹಂಚಿಬಿಡುತ್ತದೆ. ಮುಕ್ತವಾದ ಇಂತಹ ಜೈವಿಕ ಅವಕಾಶವನ್ನು ಮುಕ್ತಮಾರುಕಟ್ಟೆಯಾಗಿ ಪರಿವರ್ತಿಸಿಕೊಳ್ಳುವ ಆರ್ಥಿಕ ಹುನ್ನಾರಗಳು ನಿಸರ್ಗಕ್ಕೆ ಅಪಾಯಕಾರಿಯಾದವು. ಅಂಬೇಡ್ಕರ್ ಅವರು ಜೈವಿಕ ತತ್ವದ ಸಮಾನತೆಯನ್ನು ಆಧರಿಸಿಯೆ ಸಂವಿಧಾನವನ್ನು ರೂಪಿಸಿದ್ದರಿಂದ ಅನೇಕ ಬಗೆಯಲ್ಲಿ ಮಾನವ ನಿರ್ಮಿತ ಪರಿಸರದ ತಾರತಮ್ಯಗಳನ್ನು ಒಂದಿಷ್ಟಾದರೂ ಸುಧಾರಿಸಲು ಸಾಧ್ಯವಾದದ್ದು. ಜೈವಿಕ ಸಂವಿಧಾನವು ವಿಶಾಲವಾದ ಜೀವವಿಕಾಸದ ಸಂಹಿತೆ. ಈ ಸಂವಿಧಾನದ ಒಂದಿಷ್ಟಾದರೂ ಅನುಭಾವಗಳಿಂದಲೇ ಜನಪದ ಸಮಾಜಗಳು ರೂಪುಗೊಂಡಿರುವುದು. ಜೈವಿಕವಾದ ತಿಳಿವಳಿಕೆಯೇ ಪಶುಪಾಲನೆ, ಹೈನುಗಾರಿಕೆ ಕೃಷಿ ಜೀವನ ವಿಧಾನಗಳಿಗೆ ದಾರಿ ತೋರಿದ್ದು.

ನಿಸರ್ಗದ ನಿರಂತರ ಪುನರ್ ಸೃಷ್ಟಿಯ ಅಂತರ್ ಜಾಲವು ಸಂಸೃತಿಯಾಗಿ ಪರಿವರ್ತನೆಗೊಳ್ಳುವಾಗ ಜನಪದರು ನಿಸರ್ಗದ ಆವರ್ತಗಳಿಗೆ ಬದ್ಧವಾಗಿಯೇ ಜೀವನ ವಿಧಾನಗಳನ್ನು ಅಳವಡಿಸಿಕೊಂಡರು. ಮಳೆಗಾಲದಲ್ಲಿ ಏನು ಮಾಡಬೇಕು. ಬೇಸಿಗೆಯಲ್ಲಿ ಯಾವ ಕಾಯಕದಲ್ಲಿ ತೊಡಗಬೇಕು ಎಂಬ ಒಂದೊಂದು ಕಾಲಘಟ್ಟವನ್ನು ಜನಪದರು ವಿಂಗಡಿಸಿಕೊಂಡಿದ್ದರಲ್ಲಿ ಜೈವಿಕ ಕಾಲಮಾನದ ಸಂಗತಿಗಳಿವೆ. ಒಂದೊಂದು ಮಳೆಗೂ ಯಾವ ಯಾವ ಗುಣವಿದೆ, ಗಾಳಿಯ ಅಲೆಗಳಿಗೆ ಯಾವ ಸ್ವಭಾವವಿದೆ. ಯಾವ ಯಾವ ಋತುಗಳಲ್ಲಿ ಯಾವ ಯಾವ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು ಎಂಬುದು ಅಪ್ಪಟ್ಟ ಜೈವಿಕ ಸಂವಿಧಾನದ ನಡವಳಿಕೆಯಾಗಿದೆ. ಆದಿಮ ಸಮಾಜಗಳಲ್ಲಿ ಜೈವಿಕೆ ಸಂವಿಧಾನ ಎಲ್ಲ ಬಗೆಯ ಸೂಚನೆಗಳನ್ನು ನೀಡುತ್ತಿದ್ದುದು. ಅದಕ್ಕೆ ತಕ್ಕಂತೆಯೇ ಜನಪದಗಳು ಬಾಳಬೇಕಾಗಿತ್ತು. ಸಂವಿಧಾನಗಳು ರಾಷ್ಟ್ರಗಳ ಪರಿಕಲ್ಪನೆಯಲ್ಲಿ ಬರುವ ಎಷ್ಟೋ ಮೊದಲು ಜೈವಿಕ ಸಂವಿಧಾನಗಳೆ ನೆನ್ನೆಯ ಸಮಾಜಗಳನ್ನು ರೂಪಿಸಿರುವುದು. ಮಳೆ ಬಿದ್ದ ಕೂಡಲೇ ರೈತ ಹೊಲದ ಕಾಯಕದಲ್ಲಿ ತಟ್ಟನೆ ತೊಡಗುವ ಪ್ರವೃತ್ತಿಗೆ ಯಾರೂ ಯಾವ ಕಾನೂನು ಸಲಹೆಯನ್ನು ನೀಡಬೇಕಾಗಿರುವುದಿಲ್ಲ. ತಂತಾನೆ ಜೈವಿಕವಾದ ಒತ್ತಡವನ್ನು ಜೈವಿಕ ಸಂವಿಧಾನ ಜನಪದಗಳಿಗೆ ನೀಡುವುದಿದೆ. ಪರಿಸರದ ಅಸಮತೋಲನಕ್ಕೆ ದಾರಿ ಮಾಡಿದ ಹಸಿರು ಕ್ರಾಂತಿಯ ನಂತರದ ಪರಿಣಾಮದಲ್ಲಿ ಆಥಿಕ ನೀತಿಗಳು, ವ್ಯಾಪಾರದ ಹುನ್ನಾರಗಳು, ದಲ್ಲಾಳಿ ಕಂಪನಿಗಳು, ಅನೈಸರ್ಗಿಕ ರಾಸಾಯನಿಕಗಳಿಂದ ಕೃಷಿಯೂ ರೈತನೂ ಒಟ್ಟಿಗೇ ಸಾಯುವ ಸ್ಥಿತಿ ಬಂದೊದಗಿದೆ. ಜೈವಿಕ ಸಂವಿಧಾನದ ಅಳತೆಯಂತೆ ಕೃಷಿ ಮಾಡುತ್ತಿದ್ದ ಕಾಲಮಾನದಲ್ಲಿ ರೈತರ ಆತ್ಮಹತ್ಯೆಗೆ ಅವಕಾಶವೇ ಇರಲಿಲ್ಲ.

ಈಗ ಮಾತ್ರವೇ ಅಭಿವೃದ್ಧಿಯ ದುರಾಸೆಯಲ್ಲಿ ಮಾನವ ನಿರ್ಮಿತ ಮಾರುಕಟ್ಟೆಯ ನೀತೆಗಳಲ್ಲಿ ಜೈವಿಕ ಸಂವಿಧಾನದ ನೀತಿಗಳಲ್ಲಿ ಅನೇಕ ಏರುಪೇರುಗಳಾಗಿವೆ. ಜನಪದರು ಜೈವಿಕವಾದ ಸಂವಿಧಾನದಲ್ಲಿಯೇ ಹೆಚ್ಚು ಸುಖವನು ಕಂಡಿದ್ದರು. ಗ್ರಾಮೀಣ ಭಾರತದ ಜೀವಜಾಲದ ಒಪ್ಪಂದಗಳೆಲ್ಲ ಈಗ ಅರ್ಥಹೀನ ಎನಿಸುತ್ತಿರುವುದು ನಾಗರೀಕತೆಯ ಗರ್ವದ ಅಭಿವೃದ್ಧಿ ಎಂಬ ಲೂಟಿಕೋರ ದಂಧೆಯಲ್ಲಿ. ಜೀವಜಾಲ ಜಾನಪದವು ಬಹುವಾಗಿ ಜೈವಿಕ ಸಂವಿಧಾನದ ಫಲ. ಅಂತಹ ತಿಳುವಳಿಕೆಯಿಂದ ಪರಿಸರ ನಾಶವಾಗುತ್ತಿರಲಿಲ್ಲ. ಪುನರ್ ಸೃಷ್ಠಿಯ ನಿರಂತರ ಕಾಯಕವಾಗಿ ಬೆಳೆದಿದ್ದ ಅಂತಹ ಜ್ಞಾನಪರಂಪರೆಗಳು ಕೂಡಾ ಅಳಿವಿನಂಚಿನಲ್ಲಿವೆ. ನಿಸರ್ಗತತ್ವವನ್ನು ಒಂದೊಂದು ಶತಮಾನವೂ ಮೀರುತ್ತಲೇ ಬಂದಿರುವುದು ಜನಪದರ ಮೇಲೆ ಬಹುಬಗೆಯ ಒತ್ತಡಗಳು ಉಂಟಾಗಲು ಕಾರಣವಾಗಿದೆ. ನಾಗರೀಕತೆಯ ಭಾಗವಾಗಿ ಬೆಳೆದುಬಂದ ಸಂವಿಧಾನಗಳೆಲ್ಲವೂ ಜೀವಜಾಲದ ಸಂವಿಧಾನಗಳ ಮೇಲೆ ದಿಗ್ವಿಜಯವನ್ನು ಸಾಧಿಸುವಂತೆಯೇ ಹೊರಡುತ್ತಿವೆ. ತಂತ್ರಜ್ಞಾನ ಕೂಡ ಈ ಭರಾಟೆಯಲ್ಲಿ ಆಧುನಿಕತೆಯ ಬೇರೆ ಬೇರೆ ಅವತಾರಗಳಿಂದ ಕೈಜೋಡಿಸುತ್ತಿದ್ದು ನಗರ ಸಂಸ್ಕೃತಿಗಳು ಜನಪದರ ಜೀವಜಾಲದ ಕೊಂಡಿಗಳು ದುರ್ಬಲವಾಗುವಂತೆ ಮಾಡುತ್ತಿವೆ.

ಅಖಂಡ ಜೀವಜಾಲವನ್ನೆಲ್ಲ ಬಿಡಿಯಾಗಿ ನೋಡಿದರೆ ಅದು ಬಿಡಿಬಿಡಿಯಾಗಿಯೇ ಅರ್ಥವನ್ನು ಬಿಡಿಸಿ ಅಖಂಡವಾದ ಅರಿವನ್ನು ಹಾಗೇ ಉಳಿಸಿಕೊಂಡಿರುತ್ತದೆ. ಹೀಗಾಗಿ ಅಖಂಡ ಜೀವಜಾಲ ದೃಷ್ಟಿ ಅತ್ಯಂತ ಕಠಿಣವಾದ ಸಾಧ್ಯತೆ. ಜನಪದ ಪರಂಪರೆಗಳು ಇಂತಹ ಅಖಂಡತೆಯನ್ನು ಭಾವಿಸುವುದರಿಂದಲೇ ಅವರಿಗೆ ಬಿಡಿಯಾದ ಖಚಿತ ಅರ್ಥಗಳಿಗೆ ಬದಲಾಗಿ ಇಡಿಯಾದ ಆದರೆ ಅಮೂರ್ತವಾದ ಅರ್ಥಗಳೇ ಮುಖ್ಯವಾಗುತ್ತವೆ. ಹೀಗಾಗಿಯೇ ಒಬ್ಬ ರೈತ ಕೇವಲ ಭೂಮಿಯನ್ನೆ ನಂಬಿ ಅದೃಷ್ಟಕ್ಕೆ ಮಾತ್ರ ನಿಷ್ಟನಾಗಿ ತನಗೆ ಬೇಕಾದ ಜೈವಿಕ ಸಾಧ್ಯತೆಯನ್ನು ಕಂಡುಕೊಳ್ಳುವುದಿಲ್ಲ. ಆತ ಭೂಮಿಯ ಜೊತೆಗೆ ಮಳೆ, ಗಾಳಿ, ಮಿಂಚು, ಗುಡುಗು ಹೇಗೆ ತನ್ನ ಕಾಯಕದ ಭಾಗವಾಗಿದೆ ಎಂದು ಅವನ್ನೂ ಧ್ಯಾನಿಸುತ್ತಾನೆ. ವರ್ಷ ಋತುವಿನ ಕ್ರಮವನ್ನು ಭೂಮಿಯ ಜೊತೆಗೆ ಹೊಂದಿಸಿ ಅದರಲ್ಲಿ ತನ್ನ ಕೆಲಸ ಕಾರ್ಯಗಳ ಗುರುತು ಮಾಡಿಕೊಳ್ಳುವನು. ಇದರ ಜೊತೆಯಲ್ಲೇ ವಿವಿಧ ಧಾನ್ಯಗಳ ತಿಳುವಳಿಕೆಯೂ ಅವನಿಗಿರುತ್ತದೆ. ಬಿಸಿಲು ಚಳಿಗಳ ಹಿನ್ನೆಲೆಯೂ ಹೇಗೆ ಮುಖ್ಯ ಎಂದು ಭಾವಿಸುತ್ತಾನೆ. ಬಾದೆ ಕೊಡುವ ಕೀಟಗಳ ಅಪಾಯ ಎಷ್ಟು ಎಂದು ಲೆಕ್ಕ ಹಾಕಿ ಅದಕ್ಕಾಗಿ ಎಚ್ಚರ ವಹಿಸುತ್ತಾನೆ. ಪ್ರಾಣೆ ಪಕ್ಷಿ ಹುಳು ಉಪ್ಪಟ್ಟೆಗಳಿಗೂ ತನ್ನ ಬೆಳೆಯಲಿ ಒಂದು ಪಾಲಿದೆ ಎಂದು ನಂಬುತ್ತಾನೆ. ಕೃಷಿ ಉಪಕರಣಗಳ ಅವಶ್ಯಕತೆಯ ಜೊತೆಯಲ್ಲೇ ಅಂತಹ ಎಲ್ಲ ಚಟುವಟಿಕೆಗಳ ಭಾಗವಾಗಿರುವ ಇತರ ಸಮುದಾಯಗಳ ಭಾಗವಹಿಸುವಿಕೆಯೂ ಎಷ್ಟೊಂದು ಮುಖ್ಯ ಎಂದು ಮನಗಂಡಿರುತ್ತಾನೆ. ಇವೆಲ್ಲ ಆದ ಮೇಲೆ ಪಾಪ ಪುಣ್ಯಗಳನ್ನೂ ಲೆಕ್ಕಾಚಾರ ಮಾಡಬೇಕಾಗುತ್ತದೆ. ಬಿತ್ತಿ ಬೆಳೆದದ್ದರ ಸಂರಕ್ಷಣೆಯೂ ವಿತರಣೆಯೂ ಬಳಕೆಯೂ ಹೇಗೆ ಆಗಬೇಕು ಎಂಬ ತಿಳುವಳಿಕೆಯೂ ಒಂದು ಜೈವಿಕ ವಿಚಾರವೇ. ಆಹಾರ ಬೆಳೆ ವಿಪರೀತವಾದಾಗಲೂ ಅಪಾಯವಿರುತ್ತದೆ. ಅತೀವೃಷ್ಠಿ, ಅನಾವೃಷ್ಟಿಗಳ ಬಗ್ಗೆ ತಿಳಿದಷ್ಟೂ ಮುಂದಿನ ದಾರಿಗಳು ಸುಲಭವಾಗುತ್ತವೆ. ಹೀಗೆ ರೈತ ಕೇವಲ ಒಂದೇ ತಿಳುವಳಿಕೆಯಲ್ಲಿ ಜೈವಿಕವಾದ ಒಪ್ಪಂದಗಳಿಗೆ ಯತ್ನಿಸುವುದಿಲ್ಲ. ಅಖಂಡವಾದ ನೋಟದಿಂದಲೇ ಇಡೀ ಪರಿಸರವನ್ನು ಒಳಗೊಂಡಂತೆಯೇ ಒಕ್ಕಲುತನವನ್ನು ಮಾಡಬೇಕಾಗುತ್ತದೆ.

ಜೈವಿಕ ಅಭಿವೃದ್ಧಿ

ಕೃಷಿ ಪ್ರಧಾನ ಸಮಾಜಗಳು ನಿಸರ್ಗದ ಮೇಲೆ ಯಜಮಾನಿಕೆಯನ್ನು ಸ್ಥಾಪಿಸಿಕೊಂಡಿರಲಿಲ್ಲ, ಸಾಮಾಜಿಕ ಪರಿಸರದಲ್ಲಿ ಯಜಮಾನಿಕೆ ಇತ್ತಾದರೂ ಜೀವಜಾಲದ ಮೇಲೆ ಸಂಪೂರ್ಣ ಪ್ರಭುತ್ವ ಸ್ಥಾಪಿಸಿಕೊಂಡಿರಲಿಲ್ಲ. ಅಂತಹ ಯಜಮಾನಿಕೆ ಎಂದಿಗೂ ಸಾಧ್ಯವೂ ಇಲ್ಲ. ಆದರೆ ಮನುಷ್ಯ ಆಗಾಗ ವಿಪರೀತ ಆಕ್ರಮಣಶೀಲತೆಯನ್ನು ನಿಸರ್ಗದ ಮೇಲೆ ತೋರುತ್ತಲೇ ಬಂದಿದ್ದಾನೆ. ಇದು ಅಕ್ರಮ ಜೈವಿಕ ಸಂಘರ್ಷ. ಬದುಕುಳಿಯಲು ಹೂಡುವ ಸಂಘರ್ಷದಲ್ಲಿ ಕೊನೆಯ ಪಕ್ಷ ಸಾಧ್ಯತೆಗಳ ಹುಡುಕಾಟವೋ, ಪರೀಕ್ಷೆಯೋ ನಡೆದು ಒಂದು ಹಂತದ ಬಲವೋ, ಒಪ್ಪಂದವೋ ಸಾಧ್ಯವಾಗುತ್ತದೆ. ಪಶುಪಾಲನಾ ಸಂಸ್ಕೃತಿಯು ಜೀವಜಾಲದ ಹೊಂದಾಣಿಕೆಯ ಜೈವಿಕತೆಯಾಗಿತ್ತು. ಆದರೆ ಕುಕ್ಕುಟ ಉದ್ಯಮ, ಮತ್ಸೋದ್ಯಮ ಇತ್ಯಾದಿ ಮಾಂಸಹಾರಿ ಉದ್ಯಮ ಅಕ್ರಮ ಜೈವಿಕ ಸಂಘರ್ಷದ ದಿಗ್ವಿಜಯವೇ ಹೊರತು ಸೂಕ್ತ ಜೈವಿಕ ಸಾಮರ್ಥ್ಯವಲ್ಲ. ಅಧಿಕ ಇಳುವರಿಯ ಉತ್ಪಾದನಾ ಸಾಮರ್ಥ್ಯವೂ ಜೈವಿಕ ಬೆಳವಣಿಗೆಯೇ ಆಗಿರುತ್ತದೆ. ಎಷ್ಟೋ ಸಮಾಜಗಳು ಈಗಲೂ ಹಸಿವಿನಿಂದ ನರಳುತ್ತಿವೆ. ಆಹಾರದ ಭದ್ರತೆ ಅಭದ್ರತೆ ಎರಡೂ ಜಾಗತಿಕ ಸಮಸ್ಯೆಯಾಗಿ ಆಹಾರ ಮಾರುಕಟ್ಟೆಯೇ ಒಂದು ಬೃಹತ್ ಅಜೈವಿಕ ವಿದ್ಯಮಾನವಾಗಿ ಸಾಗುತ್ತಿದೆ. ಆಹಾರ ಪ್ರಕ್ರಿಯೆಗೂ ಜನಪದಗಳ ಉತ್ಪಾದನಾ ಸಾಮರ್ಥ್ಯಕ್ಕೂ ಜೀವಜಾಲದ ತಕ್ಕ ಸಂಬಂಧಗಳಿದ್ದವು. ಆಹಾರವೇ ಈಗ ಬೃಹತ್ ಉದ್ಯಮ. ಜೀವ ವಿಕಾಸಕ್ಕೆ ಅಗತ್ಯವಾಗಿ ಬೇಕಿದ್ದ ಜೀವಜಾಲವನ್ನೇ ಬಂಡವಾಳಶಾಹಿ ವ್ಯವಸ್ಥೆಯು ಖಾಸಗೀಕರಿಸಿಕೊಳ್ಳುತ್ತಿದೆ. ಗಾಳಿ ಬೆಳಕಿನ ಮೇಲೂ ಹಕ್ಕು ಚಲಾಯಿಸುವ ದಿನಗಳೂ ಮುಂದೆ ಬರಲಿವೆ. ಇದೆಲ್ಲವೂ ಅಜೈವಿಕ ಅಭಿವೃದ್ಧಿಯ ವಿರೂಪವೇ ಹೊರತು ಜೀವಜಾಲ ಸರಪಳಿಯ ಹೊಂದಾಣಿಕೆಯ ಚಲನೆ ಅಲ್ಲ.

ಜೈವಿಕ ಬಂಧ ಸಡಿಲವಾಗುತ್ತಿದ್ದಂತೆಯೆ ಜೀವಜಾಲದಲ್ಲಿ ಏನೇನು ಬದಲಾವಣೆ ಆಗುತ್ತಿವೆ ಎಂದು ತಿಳಿಯುವುದಕ್ಕಾಗಿಯಾದರೂ ಮೊದಲಿಗೆ ಜನಪದ ಪರಂಪರೆಗಳ ಜೈವಿಕ ಅನುಸಂಧಾನವನ್ನು ಮಾಡಬೇಕಾಗಿದೆ. ಕೈಗಾರಿಕಾ ಕ್ರಾಂತಿ ಕೃಷಿಯನ್ನು ಉದ್ಯಮವಾಗಿಸಿತು. ಅದರಿಂದ ಅನೇಕ ಜೀವಿಗಳು ನಾಶವಾದವು. ಆಹಾರ ಬೆಳೆ ವಿಪರೀತವಾದಂತೆ ಎಷ್ಟೋ ಸಸ್ಯಗಳು ಕಣ್ಮರೆಯಾದವು. ಭೂಮಿಯ ವ್ಯಾಪಕ ಬಯಲುಗಳೆಲ್ಲ ಆಹಾರ ಬೆಳೆಯ ವಾಣಿಜ್ಯ ಬೆಳೆಯ ವಸಾಹತುಗಳಾದವು. ಬೃಹತ್ ಬಂಡವಾಳಿಗರ ಉದ್ಯಮಶೀಲತೆಗೆ ಲಕ್ಷಾಂತರ ಹೆಕ್ಟೇರು ಭೂಮಿ ಎಲ್ಲಾ ದೇಶಗಳಲ್ಲೂ ಕಬಳಿಕೆಯಾಗಿ ಭೂಮಿಯೇ ಒಂದು ಉದ್ಯಮ ಗೋಲದಂತೆ ಪರಿವರ್ತಿತವಾಯಿತು. ಇದರ ಪರಿಣಾಮವಾಗಿ ಜೀವವೈವಿಧ್ಯತೆ ಯಾವ ಪ್ರಮಾಣದಲ್ಲಿ ಸಂಕಷ್ಟಕ್ಕೆ ಸಿಲುಕಿದೆ ಎಂದು ಊಹಿಸಬಹುದು. ಭಾಗಶಃ ಆರ್ಥಿಕ ವೇಗವೇ ಮುಂದೊಂದು ದಿನ ಆಘಾತಕಾರಿ ಪರಿಣಾಮಗಳಿಗೆ ಎಡೆ ಮಾಡಿ ಕೊಡಬಲ್ಲದು. ವಾಸ್ತವ ಹೀಗಿದ್ದರೂ ಈಗ ಸಹಜ ಕೃಷಿ, ಸಾವಯವ ಬೇಸಾಯ, ಪಾರಂಪರಿಕ ಒಕ್ಕಲುತನದ ಒತ್ತಡಗಳು ಈಗ ತಂತಾನೆ ಎಲ್ಲೆಡೆ ಗರಿ ಬಿಚ್ಚುತ್ತಿವೆ. ಯಾವ ಕಾಲದ ಆರ್ಥಿಕ ಸಾಮ್ರಾಜ್ಯವೇ ಆದರೂ ಅದು ನಿಸರ್ಗದ ನಿಯಮಗಳಿಗೆ ಬದ್ಧವಾಗಿ ಅಸ್ತಿತ್ವ ಉಳಿಸಿಕೊಳ್ಳಬೇಕಾಗುತ್ತದೆ. ಜೈವಿಕವಾದ ಒಪ್ಪಂದಗಳು ಬದಲಾಗುವುದು ಸಹಜ. ಆದರೆ ಈ ಪ್ರಕ್ರಿಯೆಯಲ್ಲಿ ಎಲ್ಲಾ ಜೀವಿಗಳೂ ಒಂದೇ ಬಗೆಯ ಒಪ್ಪಂದವನ್ನು ಸಾಧಿಸಿಕೊಳ್ಳಲಾರವು. ಅದು ನಿಸರ್ಗದ ತಪ್ಪೂ ಅಲ್ಲ ; ಆಯಾ ಜೀವಿಗಳ ಸಮಸ್ಯೆಯೂ ಅಲ್ಲ.

ಜೀವಜಾಲದಲ್ಲಿ ಕೆಲವೊಂದು ಅನಿವಾರ್ಯ ವಿದಾಯ ಸಂದರ್ಭಗಳು ಉಂಟಾಗುತ್ತವೆ. ನಿಸರ್ಗದಲ್ಲಿ ಯಾವೊಂದರ ಅಸ್ತಿತ್ವವೂ ಶಾಶ್ವತವಲ್ಲ. ದೈತ್ಯ ಡೈನೋಸಾರಸ್ ಗಳು ಬಲಶಾಲಿಯಾಗಿದ್ದರೂ ಬದುಕುಳಿಯಲಿಲ್ಲ. ಈ ಅನಿವಾರ್ಯ ವಿದಾಯ ನಿಸರ್ಗದ ಒಂದು ಸ್ಥಿತಿ ಮಾತ್ರ. ಹಾಗೆಯೇ ಅತ್ಯಂತ ದುರ್ಬಲ ಎನಿಸಿದ್ದು ಕೂಡ ಬದುಕುಳಿಯುವ ಸಾಧ್ಯತೆಯನ್ನು ಅದೇ ನಿಸರ್ಗದಿಂದ ಪಡೆದಿರುತ್ತದೆ. ಅತ್ಯಂತ ಚಾಣಾಕ್ಷ ಬುದ್ಧಿ ಕ್ರಮಗಳು ಉಳಿದ ಜೀವಿಗಳಿಗಿಂತ ಮುಂದೆ ಸಾಗಿದ್ದರೆ ಇದು ನಿಸರ್ಗದ ಇತರ ಜೀವಿಗಳ ಅಸಮತೋಲನಕ್ಕೆ ಕಾರಣವಾಗಿ ಯಜಮಾನ್ಯ ಸ್ವಭಾವಗಳನ್ನು ಬೆಳೆಸುತ್ತದೆ. ಜೀವಜಾಲದಲ್ಲಿ ಯಜಮಾನ್ಯ ಸ್ವಭಾವ ಪೈಪೋಟಿಯ ಒಂದು ಸ್ಚಭಾವ. ಇರುವೆಯಂತಹ ಜೀವಿಗಳಲ್ಲೂ ಯಜಮಾನ್ಯ ವ್ಯವಸ್ಥೆ ಇದೆ. ನಮ್ಮ ಹತ್ತಿರದ ಗೋರಿಲ್ಲ, ಚಿಂಪಾಜಿ, ಮಂಗ ಮುಂತಾದ ಜೀವಿಗಳಲ್ಲಿ ಸಾಮಾಜಿಕ ವ್ಯವಸ್ಥೆಯಂತದೇ ಯಜಮಾನಿಕೆ, ಕೌಟುಂಬಿಕ ರೀತಿ ನೀತಿಗಳಿವೆ. ಯಜಮಾನ್ಯ ಸ್ವಭಾವ ಮಾನವೇತರ ಜೀವಿಗಳಲ್ಲೂ ಇದೆ. ಆದರೆ ಮನುಷ್ಯ ಯಜಮಾನ್ಯ ವ್ಯವಸ್ಥೆಯನ್ನು ಅಗತ್ಯ ಮೀರಿ ಸ್ಥಾಪಿಸುವುದು ಅತ್ಯಂತ ಅಪಾಯಕಾರಿಯಾದುದು. ಎರಡೂ ಮಹಾಯುದ್ಧಗಳ ಜನಾಂಗೀಯ ದ್ವೇಷ, ಭೌಗೋಳಿಕ ವ್ಯಾಪ್ತಿಯ ವಿರೂಪ, ಸಾಮ್ರಾಜ್ಯಶಾಹಿ ಗುಣ, ಮಾನವರ ಆದಿಮ ಕಾಲದ ಕಿಲಿಂಗ್ ಇನ್ಸ್ ಸ್ಟಿಂಕ್ಟಿನ ಪರಿಸ್ಕೃತ ರೂಪವೇ ಆಗಿದ್ದು ಆ ಮೂಲಕ ಯಜಮಾನ್ಯ ವ್ಯವಸ್ಥೆಯ ಸಾಮ್ರಾಜ್ಯಶಾಹಿ ಪ್ರಭುತ್ವದ ಹಿಂಸೆಯ ಸ್ವರೂಪ ಹೇಗೆ ಸಾಗಿ ಬಂದಿದೆ ಎಂಬುದನ್ನು ಜೈವಿಕವಾಗಿಯೂ ಪರಿಶೀಲಿಸಬಹುದಾಗಿದೆ.

ಹೀಗೆ ಜೀವಜಾಲ ಜಾನಪದ ಅನುಸಂಧಾನವನ್ನು ಅತ್ಯಂತ ಸ್ಥಳಿಯವಾಗಿ ಭಾವಿಸುತ್ತಲೇ ವಿಶ್ವಾತ್ಮಕವಾಗಿಯೂ ನೋಡಬಹುದು. ಭೂಮಿ ಮೂಲತಃ ಒಂದು ಅಖಂಡ ಜೀವ ಜಾಲ. ಭೂಖಂಡಗಳು ಚದುರಿದಂತೆಯೇ ಜೀವಜಾಲವು ಚದುರಿದೆ. ನಮ್ಮೂರ ಮಂಗಗಳು ಮತ್ತೊಂದು ಭೂಖಂಡದಲ್ಲೂ ಕಾಣಬಲ್ಲವು. ಆದರೆ ಹಾಗೆ ಕಾಣುವ ಮಂಗಗಳ ಸ್ವರೂಪದಲ್ಲಿ ವ್ಯತ್ಯಾಸವಿದೆಯಾದರೂ ಅವುಗಳ ಜೀವನಕ್ರಮದಲ್ಲಿ ಮಾತ್ರ ಸ್ಥಳೀಯತೆ ಇದ್ದು ಇನ್ನುಳಿದ ಜೈವಿಕ ಸಂಗತಿಯಲ್ಲಿ ಅವು ವಿಶ್ವಾತ್ಮಕವಾಗಿಯೇ ಉಳಿದಿರುತ್ತವೆ. ಯಾವುದೇ ಭೂ ಭಾಗದಲ್ಲೂ ಈ ಜೈವಿಕತೆಯು ಒಂದೇ ಆಗಿರುತ್ತದೆ. ಜೀವಜಾಲದ ಪರಿಸರ ಬೇರೆ ಬೇರೆಯಾಗುತ್ತಿದ್ದಂತೆ ವಿಕಾಸದ ಸ್ವರೂಪವೂ ಬದಲಾಗುತ್ತಾ ಹೋಗುತ್ತದೆ. ಹಿಮಕರಡಿಗಳನ್ನು ಕಾಣುವ ಎಸ್ಕಿಮೂಗಳು ರೂಪಿಸಿಕೊಳ್ಳುವ ಜೈವಿಕ ಅನುಸಂಧಾನ ಒಂದು ಬಗೆಯಾದರೆ ಹಂಪಿಯ ದರೋಜಿ ಕರಡಿಧಾಮದ ಬಗೆಗಿನ ಜನಪದರ ಅನುಸಂಧಾನ ಇನ್ನೊಂದು ರೀತಿಯದಾಗಿರುತ್ತದೆ. ಕಾಣುವ ರೂಪ ಮತ್ತು ತಿಳಿಯುವ ಭಾವ ಮಾತ್ರ ಇಲ್ಲಿ ವೈವಿಧ್ಯ. ಆದರೆ ಆ ಜೀವಿಯ ಜೈವಿಕ ಸ್ವಭಾವಗಳು ಆಳದಲ್ಲಿ ಒಂದೇ ಜೈವಿಕ ಜಾಲದಿಂದ ನಿರ್ಧಾರಿತವಾಗುತ್ತಿರುತ್ತದೆ. ಜನಪದ ಪರಂಪರೆಗಳು ಇಂತಹ ವೈವಿಧ್ಯ ಜೀವಜಾಲ ಪರಿಸರದ ಆಧಾರದಲ್ಲಿಯೇ ತಮ್ಮ ಜೈವಿಕ ಪರಂಪರೆಯ ನಿರೂಪಣೆಗಳನ್ನು ಕಂಡುಕೊಂಡಿರುವುದು.

ಜೀವಜಾಲದ ಪ್ರಾದೇಶಿಕ ಪ್ರಭೇದಗಳ ರೀತಿಯಲ್ಲಿಯೇ ಜೈವಿಕ ನಿರೂಪಣೆಗಳು ಕೂಡ ಬೆಳೆದಿವೆ. ಹಿಮಖಂಡದ ತೋಳ, ನಾಯಿ, ಕರಡಿ, ಸೀಲ್ ಮುಂತಾದ ಜೀವಿಗಳು ಬದುಕುಳಿಯಲು ರೂಪಿಸಿಕೊಂಡಿರುವ ಕ್ರಮಕ್ಕೂ ಅಲ್ಲಿನ ಎಸ್ಕಿಮೋಗಳು ಬದುಕುಳಿಯುವ ಜೀವನ ಕ್ರಮಕ್ಕೂ ಸಾವಯವ ಸಂಬಂಧವಿದೆ. ಆದರೆ ನೈಸರ್ಗಿಕವಾದ ಒತ್ತಡಗಳು ಸಡಿಲವಾದಲ್ಲೆಲ್ಲ ಜೀವಜಾಲದ ಮೇಲಿನ ಹಿಡಿತದಲ್ಲೂ ಏರುಪೇರುಗಳಾಗುತ್ತವೆ. ಬಟಾಬಯಲು ಪ್ರದೇಶಗಳ ಜೀವಜಾಲದ ಕಥನಗಳು ಹೀಗಾಗಿಯೇ ಬಹಳ ತೆಳುವಾಗುವುದು ಹಾಗೆಯೇ ಪಶ್ಚಿಮ ಘಟ್ಟಗಳ ಜೀವಜಾಲದ ಜನಪದ ನಿರೂಪಣೆಗಳು ಸಂಕೀರ್ಣವಾದ ಜೈವಿಕ ಸಂಬಂಧಗಳನ್ನು ಧ್ವನಿಸುವುದು. ಹೀಗೆ ನೈಸರ್ಗಿಕವಾದ ಒತ್ತಡ, ಒಪ್ಪಂದ, ಸಂಬಂಧ ಕ್ರಮೇಣ ಸಡಿಲವಾಗುತ್ತ ಸಾಗಿದಂತೆ ಪರಿಸರದ ಮೆಲೆ ಯಾವ ಬಗೆಯ ಪರಿಣಾಮ ಉಂಟಾಗುವುದೆಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಕಾಡು ನಾಶವಾಗುತ್ತಿದ್ದಂತೆ ಕಾಡಿನ ನಿರೂಪಣೆಗಳೂ ತುಂಡಾಗುತ್ತಿರುತ್ತವೆ. ಕಾಡು ನಾಡಿನ ಸಂಬಂಧ ಅತಿರೇಕಕ್ಕೆ ಹೋದಂತೆಲ್ಲ ಜೈವಿಕ ಪರಂಪರೆಗಳೂ ನಾಶವಾಗುತ್ತಿರುತ್ತವೆ.

ಅಜೈವಿಕ ಚಟುವಟಿಕೆಯನ್ನು ತಡೆಯಲು ಸಾಧ್ಯ. ಆದರೆ ಅದು ಕೇವಲ ಮನುಷ್ಯ ಮಾತ್ರದಿಂದಲೇ ಸಾಧ್ಯವಿಲ್ಲ. ಕೃಷಿ ಚಟುವಟಿಕೆಯ ಪಾರಂಪರಿಕ ಪುನರುಜ್ಜೀವನದಿಂದ ಎಷ್ಟೋ ಜೈವಿಕ ಚಟುವಟುಕೆಗಳು ಪುನರುದಿಸಬಲ್ಲವು. ಇದೊಂದು ಪುಟ್ಟ ಸಾಧ್ಯತೆ ಮಾತ್ರ. ನಿಸರ್ಗದ ತೊಟ್ಟಿಲಲ್ಲಿ ಮಾನವರ ಎಲ್ಲಾ ಯಜಮಾನಿಕೆಗಳು ಒಂದು ದಿನ ಅಪಹಾಸ್ಯಕ್ಕೆ ಹೀಡಾದಂತೆ ಮುರಿದು ಬಿದ್ದು ಅನಂತವಾದ ಜೀವ ವಿಕಾಸದಲ್ಲಿ ಸ್ವತಃ ಮನುಷ್ಯನೆ ತಬ್ಬಲಿಯಾಗಿ ಬಿಡಬಲ್ಲ. ಜೀವವಿಕಾಸದಲ್ಲಿ ಸ್ವಯಂ ಒಂದೇ ಜೀವಿ ತನಗೆ ತಾನೇ ವಿಕಾಸವಾಗಲಾರದು. ಒಂದು ಜೀವಿಯ ವಿಕಾಸ ಇನ್ನೊಂದು ಜೀವಿಯ ವಿಕಾಸಕ್ಕೆ ಅವಕಾಶ ಮಾಡಿಕೊಟ್ಟಿರುತ್ತದೆ. ಆ ಹಾದಿಯಲ್ಲಿ ಮನುಷ್ಯ ತನ್ನ ವೇಗದ ವಿಕಾಸಕ್ಕಾಗಿ ಅಸಂಖ್ಯಾತ ಜೈವಿಕ ಕೊಂಡಿಗಳನ್ನೆಲ್ಲ ತನ್ನ ಹಿತಕ್ಕೆ ತಕ್ಕಂತೆ ಬಲವಂತವಾಗಿ ಜೋಡಿಸಿಕೊಂಡಿದ್ದಾನೆ. ಪ್ರಾಣಿ ಜಗತ್ತಿನ ಯಜಮಾನಿಕೆಯನ್ನೊ, ಅಸ್ತಿತ್ವದ ಕೊಂಡಿಗಳ ಸಕಾರಾತ್ಮಕ ಜೈವಿಕ ಸಂಬಂಧಗಳನ್ನೊ ಮನುಷ್ಯ ಜಗತ್ತಿನ ಜೊತೆ ಹೋಲಿಸಿ ನೋಡಿದರೆ ಅತಿಯಾದ ಸ್ವಹಿತದಿಂದ ಸುರಕ್ಷಿತವಾಗಿರುವಂತೆ ಕಾಣುವ ಮಾನವ ಅಸ್ತಿತ್ವವೇ ಅತ್ಯಂತ ದುರ್ಬಲವಾದದ್ದು. ಒಂದೊಂದು ಜೀವಿಯ ವಿಕಾಸಕ್ಕೆ ಎಷ್ಟು ಪ್ರಮಾಣದ ಜೈವಿಕ ಕೊಂಡಿಗಳನ್ನು ನಿಸರ್ಗಕೊಟ್ಟಿರುತ್ತದೊ ಅಷ್ಟನ್ನು ಮಾತ್ರವೆ ಆಯ್ಕೆ ಮಾಡಿಕೊಂಡರೆ ಜೀವಜಾಲದಲ್ಲಿ ತಂತಾನೆ ಸಮತೋಲನವಿರುತ್ತದೆ. ಮನುಷ್ಯ ಎಷ್ಟು ಬಗೆಯಲ್ಲಿ ಆಹಾರವನ್ನು ಸೇವಿಸಬಲ್ಲ, ಎಷ್ಟೊಂದು ಸೌಲಭ್ಯಗಳನ್ನು ರೂಪಿಸಿಕೊಳ್ಳಬಲ್ಲ. ಈ ನಿಸರ್ಗದಲ್ಲಿ ಅವನ ಅವಕಾಶ ಎಷ್ಟು ಎಂದು ಲೆಕ್ಕ ಹಾಕಿದರೆ ಇಡೀ ಪರಿಸರವನ್ನೆ ತನ್ನ ಖಾಸಗಿ ಆಸ್ತಿಯನ್ನಾಗಿ ಮಾಡಿಕೊಂಡು ಜೀವಜಾಲವನ್ನೆಲ್ಲ ತನ್ನ ಸಂಪತ್ತು ಎಂಬಂತೆ ಯಜಮಾನಿಕೆ ಮಾಡಿಕೊಂಡಿದ್ದಾನೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಬದುಕುಳಿಯಲು ಮಾಡಿಕೊಳ್ಳುವ ಹೆಚ್ಚಿನ ಪ್ರಮಾಣದ ಸವಲತ್ತುಗಳು ಕೂಡ ಅಸುರಕ್ಷ ಜೀವನಕ್ರಮಗಳೇ ಆಗಿರುತ್ತದೆ. ಇದು ಹೊಂದಾಣಿಕೆಯಲ್ಲ, ಜೀವಕೌಶಲ್ಯ ಅಲ್ಲ, ಜೈವಿಕ ಸಾಮರ್ಥ್ಯವಲ್ಲ, ಹಾಗೆಯೇ ವಿಕಾಸದ ತಕ್ಕ ಚಲನೆಯೂ ಅಲ್ಲ, ಅತ್ಯಂತ ದುರ್ಬಲವೆನಿಸುವ ಜೀವಿಗಳು ಕನಿಷ್ಟ ಪ್ರಮಾಣದ ಸೌಲಭ್ಯಗಳನ್ನು ಮಾತ್ರವೇ ಹೊಂದಿರುತ್ತವೆ. ಎರೆಹುಳು ಏನು ತಾನೆ ಯಜಮಾನಿಕೆಯನ್ನು ಭೂಮಿಯ ಮೇಲೆ ಸಾಧಿಸಬಹುದು? ಆದರೆ ಮುಂದೆ ಎಷ್ಟೇ ಭೂಕಂಪಗಳಾದರೂ ಎರೆಹುಳುಗಳ ಅಸ್ತಿತ್ವಕ್ಕೆ ಯಾವುದೇ ಧಕ್ಕೆ ಆಗಲಾರದು. ಇಂತಹ ಜೈವಿಕ ಜೀವನ ಕ್ರಮವನ್ನು ಆಧ್ಯಾತ್ಮದ ಪರಿಭಾಷೆಯಲ್ಲಿ ಜನಪದ ಪರಂಪರೆಗಳು ಭಾವಿಸುತ್ತವೆ. ಮೃದ್ವಂಗಿಗಳು ನಮ್ಮ ಪಾದದಡಿಯೇ ಹೇಗೊ ಜರುಗಿ ಬಾಳಿ ಬದುಕುತ್ತವೆ. ಅವುಗಳಿಗೆ ಯಾವ ಸುರಕ್ಷಾ ದಾರಿಗಳಿವೆ? ಇಂತಹ ನೂರಾರು ಜೀವಿಗಳ ಅಸ್ತಿತ್ವವನ್ನು ಜನಪದರು ತಮ್ಮ ಬಾಳಿನ ನಡತೆಯಲ್ಲಿ ಸ್ಮರಿಸಿಕೊಂಡು ಸಾಗಿದ್ದರಲ್ಲಿ ಸೂಕ್ತ ಜೈವಿಕ ಒಪ್ಪಂದಗಳಿವೆ ಹಾಗೆಯೇ ಮನುಷ್ಯರಾದ ನಾವು ಕೂಡ ಅತ್ಯಂತ ಕಡಿಮೆ ಸೌಲಭ್ಯಗಳ ಮೂಲಕವೆ ಉನ್ನತವಾದ ಜೈವಿಕ ಸಂಬಂಧಗಳ ಸುಖವನ್ನು ಎಟುಗಿಸಿಕೊಳ್ಳಬಹುದು ಎಂಬ ದಿವ್ಯತೆಯನ್ನು ತಮ್ಮ ಪರಂಪರೆಗಳಲ್ಲಿ ಬಿತ್ತಿಕೊಂಡಿದ್ದಾರೆ. ಗಾಂಧೀಜಿ ಅಂತಹ ಜೀವನ ಕ್ರಮಗಳನ್ನೆ ಆದರ್ಶ ರಾಜ್ಯದ ಕಲ್ಪನೆಗಳಲ್ಲಿ ಕನಸುತ್ತಿದ್ದರು.

ಜೈವಿಕ ಒಗಟು

ಜನಪದರು ಜೀವಜಾಲದ ಒಗಟುಗಳನ್ನು ತಮ್ಮದೇ ಆದ ಆಲೋಚನೆಗಳಿಂದ ಪುನರಚಿಸಿಕೊಳ್ಳುತ್ತಿದ್ದರು. ಇದಕ್ಕೆ ಪೂರಕವಾಗಿ ಒಂದು ಒಗ್ಗಟಿನಲ್ಲಿ ಪರಿಶೀಲಿಸುವ.

’ ಊಟಕ್ಕೆ ಮೊದಲು ಬರೋದ್ಯಾವುದು
ಊಟ ಆದ ಮೇಲೆ ಬಿಡೋದ್ಯಾವುದು ’

ಇದೊಂದು ಜೈವಿಕ ಒಗಟು. ಸಾಧಾರಣ ಪ್ರಶ್ನೆಯಂತಿರುವ ಈ ಒಗಟಿನ ಆಳದಲ್ಲಿ ಜೀವಜಾಲದ ಕೊಂಡಿಗಳ ಸಂಬಂಧವಿದೆ. ಮಾತೃಪ್ರಧಾನ ಸಮಾಜವು ಕಟ್ಟಿಕೊಂಡಿರುವ ಈ ಒಗಟಿನಲ್ಲಿ ಜೈವಿಕ ಸರಪಳಿ ಹೇಗೆ ಮಾನವ ನಿರ್ಮಿತ ಪರಿಸರದ ಜೊತೆ ಬೆಸುಗೆ ಆಗಿದೆ ಎಂಬುದನ್ನು ಧ್ವನಿಸುತ್ತದೆ. ಊಟಕ್ಕೆ ಮೊದಲು ಬರುವುದು ಯಾವುದು ಎಂದರೆ ತಾಯ ಎದೆ ಹಾಲ ಕುಡಿಯಲು ಬರುವ ಮಗುವಾಗಿದೆ. ಊಟಕ್ಕೆ ಮೊದಲು ಮಗು ಹಾಲನ್ನೇ ಕುಡಿಯುವುದು. ತಾಯ ಎದೆ ಹಾಲು ಜೀವದ ಕೊಂಡಿಯೇ ಆಗಿರುತ್ತದೆ. ಹೆರಿಗೆ ಕ್ರಿಯೆಯನ್ನು ಆಹಾರ ಸರಪಳಿಯ ಜೊತೆ ಜೋಡಿಸಿ ಜೈವಿಕ ಅನುಸಂಧಾನವನ್ನು ಇಲ್ಲಿ ಮಾಡಲಾಗಿದೆ. ಊಟದ ಕ್ರಿಯೆ ದೊಡ್ಡವರದು. ಆಹಾರದ ಸ್ವಾವಲಂಬನೆ ಅಥವಾ ತಾನೇ ತನ್ನ ಅಸ್ತಿತ್ವವನ್ನು ರೂಪಿಸಿಕೊಳ್ಳುವ ಕಾಲಮಾನದ ಭದ್ರತೆ ಬೇರೆಯದು. ಆ ಹಂತ ನಿಜವಾಗಿಯೂ ಊಟ ಅಥವಾ ಆಹಾರ ಸಾಧ್ಯತೆಯ ದಾರಿಯನ್ನೇ ತಾನೇ ಕಂಡುಕೊಳ್ಳುವಂತದ್ದು. ಊಟದ ಮೊದಲಿನ ಶೈಶವಾವಸ್ಥೆಗೂ ತಾಯ ಬಂಧಕ್ಕೂ ಅವಿನಾಭಾವ ಸಂಬಂಧವಿರುವುದರಿಂದ ಎದೆ ಹಾಲನ್ನು ಊಟದ ಸೀಮಿತ ಅರ್ಥದ ಆಚೆಗೂ ಜನಪದರು ಭಾವಿಸುತ್ತಾರೆ. ಎದೆ ಹಾಲಿನ ಬಗೆಗೇ ಅನೇಕ ನಂಬಿಕೆ, ಆಚರಣೆ, ಸಂಪ್ರದಾಯಗಳಿವೆ. ಸಾಕು ಪ್ರಾಣಿಗಳ ಎದೆ ಹಾಲಿಗೂ ದೈವಿಕತೆ ಇದೆ. ಹಾಲು ಜೀವಜಾಲದ ಅತ್ಯುನ್ನತ ಆಹಾರ. ಸಸ್ತನಿಗಳು ಹಾಲಿನಿಂದಲೇ ತಮ್ಮ ಜೀವನವನ್ನು ಆರಂಭಿಸುವುದು. ಮಾತೃತ್ವದ ಪರಿಕಲ್ಪನೆಯ ಜೊತೆ ಎದೆಹಾಲಿಗೆ ಉನ್ನತ ಗೌರವವಿದೆ. ವ್ಯಾಪಕವಾದ ಜೈವಿಕ ಕೊಂಡಿಯ ಎದೆ ಹಾಲಿನ ವಿವರಗಳೇ ಬೃಹತ್ ನಿರೂಪಣೆಗಳನ್ನು ಮಾಡಿಬಿಡಬಲ್ಲವು. ಹೀಗಾಗಿ ಊಟಕ್ಕೆ ಮೊದಲು ಬರುವುದು ಯಾವುದು ಎಂಬ ಒಂದು ಪುಟ್ಟ ಪ್ರಶ್ನೆಯ ಹಿಂದೆ ಜೀವವಿಕಾಸದ ಸಂಬಂಧವಿದೆ. ಈ ಒಗಟನ್ನು ಮಕ್ಕಳಿಗೆ ಕೇಳಿ ಅದರ ಅರ್ಥವನ್ನು ಸರಳವಾಗಿ ಬಿಡಿಸಿ ತಿಳಿಸಲಾಗುತ್ತದೆಯಾದರೂ ಅಂತಹ ಎದೆ ಹಾಲಿನ ಸಂಬಂಧವನ್ನು ಸಂವೇದನೆಯಲ್ಲಿ ಬಿತ್ತುವುದು ಜನಪದರ ಆಶಯವಾಗಿದೆ.

ಊಟಕ್ಕೆ ಮೊದಲು ಏನು ಎಂಬುದು ನಮ್ಮ ನಮ್ಮ ವರ್ತಮಾನದ ನೂರೆಂಟು ಕಲ್ಪನೆಗಳಿಗೆ ಬಿಟ್ಟ ಸಂಗತಿ ಎಂಬುದು ಹುಸಿಯಾಗಿ ಈ ವರ್ತಮಾನದ ಆಚಿನ ಗತದ ಜೈವಿಕ ಎಲ್ಲೆಯನ್ನೆಲ್ಲ ಈ ಪ್ರಶ್ನೆ ಆವರಿಸಿಕೊಳ್ಳುತ್ತದೆ. ಊಟದ ಕ್ರಿಯೆ ಹೆರಿಗೆಯೆ ಜೊತೆ ಅರ್ಥ ಪಡೆದಿರುವುದೂ ಕುತೂಹಲಕರವಾಗಿದೆ. ಲೌಖಿಕದ ಸಣ್ಣ ಸಂಗತಿಯ ಜೊತೆ ಜೀವಜಾಲದ  ಸೃಷ್ಠಿಕ್ರಿಯೆಯು ಹೇಗೆ ಕೊಂಡಿಯನ್ನು ಸಾಧಿಸಿಕೊಳ್ಳಲು ಸಾಧ್ಯವಾಯಿತು ಎಂಬುದನ್ನು ಈ ಒಗಟಿನ ಹಿನ್ನೆಲೆಯಲ್ಲಿ ಚರ್ಚಿಸಲು ಅವಕಾಶವಿದೆ. ಹೀಗೆಯೇ ಜನಪದರು ಸೃಷ್ಠಿಕ್ರಿಯೆಯ ಅಸಂಖ್ಯ ವಿಷಯಗಳ ತಾಳು ತುದಿಯನ್ನೆಲ್ಲ ಜೀವನ ವಿಧಾನದ ಮೂಲಕವೇ ಅನುಸಂಧಾನ ಮಾಡುವುದಿದೆ. ಊಟ ಮಾಡಿದ ನಂತರ ಬಿಡುವುದು ಏನು ಎಂಬ ಎರಡನೆ ಪ್ರಶ್ನೆ ಮತ್ತೆ ಊಟದ ಕ್ರಿಯೆಗೇ ಬಂದು ನಿಲ್ಲುತ್ತದೆ. ಮಗು ಹಾಲು ಬಿಡುವುದು ಒಂದು ಬೆಳವಣಿಗೆಯ ಕ್ರಿಯೆ. ತಾಯಿಯ ಎದೆ ಹಾಲಿನ ಸಂಬಂಧವನ್ನು ಬಿಡಿಸಿಕೊಳ್ಳುವುದು ಜೈವಿಕ ಒಪ್ಪಂದದ ಕರಾರು. ಅದನ್ನು ಎಲ್ಲರೂ ಪಾಲಿಸಲೇಬೇಕು. ಹೀಗಾಗಿ ಊಟವಾದ ಮೇಲೆ ಬಿಡುವುದು ತಾಯಿಯ ಎದೆ ಹಾಲಿನ ಸಂಬಂಧವನ್ನು ಎಂಬುದು ಇಲ್ಲಿ ಧ್ವನಿತಾರ್ಥ.

ಇಂತಹ ಸಂಗತಿಗಳ ಸಾಲಿನ ಜೊತೆಯೇ ಜನಪದರ ಜೈವಿಕ ಅನುಸಂಧಾನವನ್ನು ಪರಿಶೀಲಿಸಬೇಕು, ಜ್ಞಾನ ಪರಂಪರೆಗಳು ಅಂತರವಿಟ್ಟುಕೊಳ್ಳುವುದು ಒಂದನ್ನೊಂದು ವಿರೋಧಿಸುವುದಕ್ಕಲ್ಲ. ಹಾಗೆ ವಿರೋಧಿಸಲಿಕ್ಕಾಗಿಯೇ ಹುಟ್ಟಿಕೊಳ್ಳುವ ಸಂಗತಿಗಳನ್ನು ಜ್ಞಾನ ಪರಂಪರೆಯ ಭಾಗವಾಗಿ ಗುರುತಿಸಲಾಗದು. ಜನಪದರ ಜೈವಿಕ ಆಲೋಚನೆಗಳನ್ನು ಉಪೇಕ್ಷಿಸದೆ  ಕೀಳೆಂದು ತಿಳಿಯದೆ ಉನ್ನತ ಸಂಶೋಧನೆಗಳ ವೈಜ್ಞಾನಿಕ ಸತ್ಯಗಲ್ಳ ಜೊತೆಯಲ್ಲೇ ಅನುಸಂಧಾನ ಮಾಡಿದರೆ ಅದರಿಂದ ಜ್ಞಾನವಿಕಾಸದ ಬಹುರೂಪಗಳು ಕೂಡ ತಿಳಿಯುತ್ತವೆ. ಮೇಲೆ ವಿವರಿಸಿದ ಒಗಟಿನ ಅಂತರಾರ್ಥಗಳು ವೈಜ್ಞಾನಿಕ ಸತ್ಯದ ವಾಸ್ತವವನ್ನೇ ಅಲೌಖಿಕವಾದ ಆಧ್ಯಾತ್ಮದ ಪರಿಭಾಷೆಯಲ್ಲಿ ಪ್ರತಿಬಿಂಬಿಸುವಂತಿವೆ. ಊಟ ಆದ ನಂತರ ಬಿಡುವುದು ಹಾಲು ಕುಡಿವ ತಾಯಿಯ ಒಪ್ಪಂದವನ್ನೇ ಎಂದಾದರೂ ಸಾವಿನ ಕೊನೆಯ ಸಂಸ್ಕಾರಗಳಲ್ಲಿ ಮತ್ತೆ ಹಾಲನ್ನು ಎರೆಯಲಾಗುತ್ತದೆ. ಸತ್ತವರ ಸಮಾಧಿಯ ಮೇಲೆ ಒಂಬತ್ತು ದಿನ ತುಂಬಿದ ಮೇಲೆ (ಗಮನಿಸಿ; ತಾಯಿ ಒಂಬತ್ತು ತಿಂಗಳಿಗೆ ಹೆರಿಗೆ ಮೂಲಕ ಮಗು ಹಡೆದು ಎದೆ ಹಾಲು ನೀಡುವುದು) ಹಾಲು ತುಪ್ಪ ಬಿಡುವ ಪದ್ಧತಿ ಇದೆ. ಇದು ಸತ್ತವರ ಆತ್ಮಕ್ಕೆ ನೀಡುವ ಕೊನೆಯ ಕೂಳು. ಹೀಗೆ ಜನಪದರ ಜೈವಿಕತೆಯು ವ್ಯಾಪಕವಾದ ಅರ್ಥದ ಎಲ್ಲೆಗಳನ್ನು ಕರುಳು ಬಳ್ಳಿಯಂತೆ ಸುತ್ತಿಕೊಂಡು ಜೀವಜಾಲದ ಸಂಬಂಧಗಳನ್ನು ಗುರುತಿಸಿಕೊಳ್ಳುತ್ತದೆ.

ಜೀವಜಾಲದ ಅಸಂಖ್ಯ ನಿರೂಪಣೆಗಳು ಜಾನಪದದಲ್ಲಿ ಅಪಾರವಾಗಿದೆ. ಸಂಕೀರ್ಣವಾದ ಜ್ಞಾನ ಪರಂಪರೆಗಳನ್ನು ಸಂಸ್ಕೃತಿಗಳು ವಿಸ್ತರಿಸುತ್ತಲೆ ಬಂದಿವೆ. ಆಧುನಿಕನಾದ ಮನುಷ್ಯನಲ್ಲಿ ಅಖಂಡ ದೃಷ್ಠಿಕೋನವೆ ಇಲ್ಲವಾದ್ದರಿಂದ ಆತ ವಿಜ್ಞಾನ ಮತ್ತು ತಂತ್ರಜ್ಞಾನದ ತರ್ಕ ನಿರೂಪಣೆಗಳಿಂದ ಕೆಲವೊಂದು ಅಗತ್ಯ ಜ್ಞಾನವನ್ನು ಸಾಧಿಸಿರಬಹುದು. ಈ ಬಗೆಯ ಜ್ಞಾನ ಇಡೀ ಸಮಾಜಗಳನ್ನು ವ್ಯಕ್ತಿಗತವಾಗಿ ವಿಂಗಡಿಸುತ್ತವೆಯೇ ವಿನಃ ಸಮುದಾಯಗಳನ್ನಾಗಲಿ, ವ್ಯಕ್ತಿಗಳನ್ನಾಗಲಿ ಸಮಷ್ಠಿಯಾಗಿ ಬೆಸೆಯುವಂತೆ ಮಾಡುವುದಿಲ್ಲ. ಅವರವರ ಅನನ್ಯತೆ, ಖಾಸಗಿತನ, ಸ್ವಚಹರೆಯ ಅನ್ಯತೆಯನ್ನು ಬಲವಾಗಿ ಬೆಳೆಸುವ ಆಧುನಿಕ ಆರ್ಥಿಕ ಚಿಂತನೆಗಳು ಜೀವಜಾಲದ ಸಮಷ್ಠಿ ಸಂವೇದನೆಗಳನ್ನೆಲ್ಲ ಭಂಗಪಡಿಸಿ ಛಿದ್ರಗೊಳಿಸಿವೆ.

ಅಖಂಡ ಜ್ಞಾನ ಪರಂಪರೆ ಜೀವವಿಕಾಸದ ಒಂದು ಅನಿವಾರ್ಯ ಒಪ್ಪಂದ. ಅಖಂಡವಾಗಿ ಭಾವಿಸುವುದರಿಂದ ಅಸ್ತಿತ್ವ ಬಲಗೊಳ್ಳುತ್ತದೆ. ಮೆದುಳಿನ ವಿಕಾಸ ಕೂಡ ಸಮಗ್ರವಾಗಿ ಆಗುತ್ತದೆ. ಆಧುನಿಕನಾಗುತ್ತ ಬಂದ ಮಾನವ ನಿಸರ್ಗದ ಅಖಂಡತೆಯಿಂದ ಜಾರಿಕೊಳ್ಳುವುದನ್ನೇ ಮಾಡುತ್ತಿದ್ದಾನೆ. ಅದೃಷ್ಟವಶಾತ್ ಅಪರೂಪದ ವಿಜ್ಞಾನಿಗಳು ಮಾತ್ರವೆ ಜೀವಜಾಲದ ನಿಗೂಢಗಳನ್ನು ಬಿಡಿಸುವ ಸಂಶೋಧನೆಗಳನ್ನು ಮಾಡುತ್ತಿದ್ದಾರೆ. ಆದರೆ ಅಂತಹ ಉನ್ನತ ಚಿಂತನೆ ಸಾಮಾಜೀಕರಣವಾಗದೆ ಸಂಸ್ಕೃತಿಯ ಭಾಗವಾಗದೆ ಜೀವನ ಕ್ರಮವಾಗದೆ ಪ್ರಯೋಜನವಿಲ್ಲ. ಅನ್ಯಗ್ರಹಗಳ ಜೀವಿಗಳ ಅಸ್ತಿತ್ವವನ್ನು ಹುಡುಕುವ ಮಾನವ ಭೂಮಿಯ ಮೇಲಿನ ಎಷ್ಟೋ ಜೀವಿಗಳ ಅಸ್ತಿತ್ವಕ್ಕೆ ಮಾರಕವಾಗಿರುವ ರೀತಿಯೇ ವಿಕಾಸದ ಜೊತೆಗಿನ ವೈರುಧ್ಯವನ್ನು ತೋರುವಂತಿದೆ. ಅಖಂಡವಾಗಿಯೇ ಸಾಮಾಜಿಕ ಹಾಗೂ ಅರ್ಥಿಕ ಸಂರಚನೆಗಳು ಸಾಗಬೇಕು. ಅದಕ್ಕೆ ಪೂರಕವಾಗಿಯೇ ನಿಸರ್ಗವನ್ನು ಅನುಸರಿಸಬೇಕು.

ಶೂನ್ಯ ಜೈವಿಕ ಅವಕಾಶ

ಶೂನ್ಯದಲ್ಲಿ ಏನೂ ಇಲ್ಲ ಎಂಬ ಸಾಮಾನ್ಯ ಅಭಿಪ್ರಾಯವಿದೆ. ಆದರೆ ಶೂನ್ಯದಲ್ಲಿ ನಮ್ಮ ಅರಿವಿಗೆ ಬಾರದ ಎಷ್ಟೋ ಸಂಗತಿಗಳು ಆಡಗಿರುತ್ತವೆ. ಶೂನ್ಯಸಂಪಾದಮೆ ಎಂಬ ನುಡಿಗಟ್ಟೊಂದಿದೆ. ಹಾಗೆಯೇ ಜನಪದರು ಶೂನ್ಯದಲ್ಲೂ ಮಾಂತ್ರಿಕವಾದ ಆರ್ಥಗಳನ್ನು ಕಂಡುಕೊಳ್ಳಬಲ್ಲರು. ಜನಪದ ಪರಂಪರೆಗಳು ತಾವು ಕಾಣುವ ಲೋಕದ ಮೂಲಕವೇ ತಾವು ಕಾಣದಿರುವ ಲೋಕವನ್ನು ಕಲ್ಪಿಸಿಕೊಳ್ಳುತ್ತಾರೆ. ಕಾಣುವುದು ಮಾತ್ರ ಸತ್ಯವಲ್ಲ. ಕಾಣದಿರುವುದು ಕೂಡ ಒಂದು ಪ್ರಮಾಣವೇ ಆಗಿ ಜನಪದ ಸಮಾಜಗಳಲ್ಲಿ ಅಂತಹ ತಿಳುವಳಿಕೆಯು ಪ್ರಧಾನವಾಗಿದೆ. ಶಾಶ್ವತ ನಶ್ವರ ಎಂಬ ಈ ಎರಡೂ ನಂಬಿಕೆಗಳು ಕಾಣುವ ಹಾಗೂ ಕಾಣದಿರುವ ಲೋಕಗಳ ನಡುವಿನ ಶೂನ್ಯಾವಕಾಶದ ಭಾಗವಾಗಿ ಬಂದಿವೆ. ಕಾಣದ ಕೈಯ ಕೈವಾಡದ ಪ್ರಜ್ಞೆ ಕೂಡ ಇದೇ ಮೂಲದ್ದು. ಶೂನ್ಯಜೈವಿಕತೆ ಎನ್ನುವ ಪರಿಕಲ್ಪನೆಯನ್ನು ಈ ನೆಲೆಗಳಿಂದ ಅರ್ಥೈಸಬಹುದು. ಮಾಂತ್ರಿಕ ವಿಧಿ ವಿಧಾನಗಳು , ಆಚರಣೆಗಳು ಶೂನ್ಯದ ಜೊತೆ ಸಂವಾದ ಹೂಡುವಂತಿವೆ. ಆದರ ಈ ಶೂನ್ಯ ಸ್ಥಿತಿಯ ಕಾಣುವ ಲೋಕಕ್ಕೆ ಆಧಾರವಾಗಿರಬಹುದಾದ ಒಂದು ಚೈತನ್ಯ ಎಂಬಂತೆ ಜನಪದಗಳು ಭಾವಿಸುತ್ತವೆ. ಅತೀತವಾದ ಶಕ್ತಿಯನ್ನು ಧ್ಯಾನಿಸುವ ಪರಿಯಲ್ಲಿ ಜೀವಜಾಲದ ಅವ್ಯಕ್ತ ಕೊಂಡಿಗಳನ್ನು ಕೂಡಿಸಿಕೊಳ್ಳುವ ಹುಡುಕಾಟವಿದೆ. ಜೈವಿಕವಾದ ಮೂಲಸ್ಥಿತಿಗೆ  ಭೌತಿಕ ಆಕಾರದ ಹಂಗಿಲ್ಲವೇನೋ. ನಿರ್ದಿಷ್ಟ ರೂಪ ರಚನೆಗೆ ಪ್ರತಿಯಾಗಿ ಜೈವಿಕತೆಯು ಇನ್ನೊಂದು ಅಂತಸ್ಥರೂಪವನ್ನು ಯಾವತ್ತೂ ಉದುಗಿಸಿಟ್ಟುಕೊಂಡಿರಲೇ ಬೇಕು. ಆದ್ದರಿಂದಲೇ ಜೀವಾಣುಗಳು ಕಣ್ಣಿಗೆ ಕಾಣದಿದ್ದರೂ ಜೀವದ ಎಲ್ಲ ರೂಪಗಳನ್ನು ಜತನವಾಗಿ ಕಾಯ್ದಿಟ್ಟುಕೊಂಡು ಅವಕಾಶ ಬಂದಾಗ ರೂಪ ಧರಿಸಿ ಬರುತ್ತವೆ. ಡಿ.ಎನ್.ಎ ರಚನೆ ಕಣ್ಣಿಗೆ ಕಾಣದು ಆದರೆ ಅದು ಅನೇಕ ರೂಪಾಕೃತಿಗಳಿಗೆ ಮೂಲ ಜೈವಿಕತೆಯ ಕೇಂದ್ರವಾಗಿಯೂ ಇರುತ್ತದೆ.

ಜನಪದ ಪರಂಪರೆಗಳ ಶೂನ್ಯತತ್ವಕ್ಕೂ ವಿಜ್ಞಾನದ ಅದೃಶ್ಯ ರೂಪದ ವಾಸ್ತವ ರೂಪಕ್ಕೂ ವ್ಯತ್ಯಾಸವಿದೆ ನಿಜ. ಆದರೆ ಜೀವ ವಿಕಾಸದ ಸಂಬಂಧಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಜನಪದಗಳು ಸೃಷ್ಠಿ ರಹಸ್ಯದ ಕಥನಗಳನ್ನು ಪುರಾಣೀಕರಿಸುತ್ತಲೇ ಜೀವನ ವಿಧಾನಗಳನ್ನು ರೂಪಿಸಿಕೊಂಡಿವೆ. ತಾತ್ವಕವಾಗಿ ಜೀವಜಾಲವು ಅದೃಶ್ಯವಾದ ಲೋಕದಿಂದಲೇ ಈ ಸ್ವರೂಪವನ್ನು ಪಡೆದಿದೆ ಎಂಬ ತಿಳುವಳಿಕೆಯಲ್ಲಿ ಈ ಎರಡೂ ಆಲೋಚನೆಗಳಲ್ಲಿ ವೈರುಧ್ಯವಿಲ್ಲ. ಇಂದ್ರಿಯಗಳ ಅರಿವಿನ ಆಚೆಗಿನ ಅರಿವನ್ನು ಎಟುಕಿಸಿಕೊಳ್ಳುವ ನಿಟ್ಟಿನಲ್ಲಿ ಜನಪದಗಳು ಆಶ್ರಯಿಸಿದ್ದು ಧ್ಯಾನವನ್ನೇ. ಮನಸ್ಸಿನ ಸುಪ್ತಸ್ಥಿತಿಗೆ ಇಳಿದು ಅರಿವ ಕ್ರಮದಲ್ಲಿ ಗತಕಾಲದ ಅನುಭವಗಳನ್ನೆಲ್ಲ ಜೈವಿಕವಾಗಿಯೂ ಭಾವಿಸಬಹುದು. ಮನಸ್ಸು ಕೂಡ ಜೈವಿಕತೆಯ ಒಂದು ಗುಣ ಸ್ವಭಾವ. ಕಾಣದಿದ್ದನ್ನು ಪ್ರತಿಫಲಿಸಲು ಸುಪ್ತಪ್ರಜ್ಞೆಗೆ ಸಾಧ್ಯವಾಗುತ್ತದೆ. ಚಲನೆಯ ಭೌತಿಕ ಕ್ರಮಕ್ಕೂ ಶೂನ್ಯಚಲನೆಯ ಅಭೌತ ಕ್ರಮಕ್ಕೂ ಅದಿಮ ಸಂಸ್ಕೃತಿಗಳು ಸಂಪರ್ಕ ಕಲ್ಪಿಸಿಕೊಳ್ಳಲು ಮನಸ್ಸನ್ನೇ ಮಾಧ್ಯಮವಾಗಿಸಿಕೊಂಡಿದ್ದವು. ಅಂತಹ ನೆಲೆಯಲ್ಲಿ ಆಚರಣೆಗಳು ಜೀವಜಾಲದ ಶೂನ್ಯ ತತ್ವವನ್ನು ಭಾವಿಸಿವೆ. ಆರಾಧಿಸಿವೆ. ಆರ್ಥೈಸಿವೆ. ಇಂತಹ ಶೂನ್ಯ ಜೈವಿಕಾವಕಾಶದಲ್ಲು ಸಂಸ್ಕೃತಿಗಳು ವಿಕಾಸವಾಗುತ್ತ ನಡೆದಂತೆಲ್ಲ ಅವು ತಮ್ಮ ಅಂತಹ ಅವಕಾಶವನ್ನು ಕೂಡ ಕಿರಿದಾಗಿಸಿಕೊಳ್ಳಲು ಒತ್ತಡಗಳಿಗೆ ಸಿಲುಕಿವೆ. ನಿಸರ್ಗದಿಂದ ದೂರವಾಗುವ ಭಾವನೆಗಳು ಕೂಡ ಹೆಚ್ಚುತ್ತಿವೆ.

ಹೀಗೆ ನಿಸರ್ಗದಿಂದ ಸೀಳಿಕೊಳ್ಳುವ ಆಲೋಚನೆ ಹೆಚ್ಚುತ್ತಿರುವುದು ಭಾಗಶಃ ಸಾಮ್ರಾಜ್ಯಶಾಹಿ ಆರ್ಥಿಕತೆಯ ಆಮಿಷದಿಂದಿರಬಹುದು. ಹಾಗೆಯೇ ಸ್ವತಃ ನಿಸರ್ಗವೆ ಅಪರಿಮಿತ ಅವಕಾಶಗಳನ್ನು ಕೆಲವೊಂದು ಜೀವಿಗಳಿಗೆ ನೀಡುತ್ತ ಬಂದಿದೆ. ಈಗ ಮಾನವ ಸಮೂಹಗಳು ಅಂತಹ ಸರದಿಯಲ್ಲಿ ಪ್ರಬಲ ಅವಕಾಶ ಪಡೆದಿವೆ. ತಾನೇ ಆ ಅಪರಿಮಿತದ ಪರಿಣಾಮವಾಗಿ ವಿಕಾಸದ ಗತಿಯಲ್ಲಿ ಬಲಶಾಲಿಯಂತೆ ಮನುಷ್ಯ ಕಾಣಿಸಿಕೊಳ್ಳುತ್ತಿರಬಹುದು. ಅತೀವೃಷ್ಟಿ ಅನಾವೃಷ್ಟಿಗಳು ನಿಸರ್ಗದಲ್ಲಿ ಸುಮ್ಮನೆ ಘಟಿಸುವುದಲ್ಲ. ಮಾನವರಿಗೆ ಪರಿಸರ ತಿಳಿದಿದೆಯೆ ಹೊರತು ನಿಸರ್ಗ ಇನ್ನೂ ತಕ್ಕುದಾಗಿ ಅರಿವಿಗೆ ಬಂದಿಲ್ಲ. ಹಸಿರಾಗಿ ಕಂಡ ಕಾಡು ಮೇಡು ಮಾತ್ರವೆ ನಿಸರ್ಗವಲ್ಲ. ಕಣ್ಣಿಗೆ ಕಾಣದಿರುವ ನಿಸರ್ಗವೂ ಇದೆ. ಆಕಾಶದ ಶೂನ್ಯ ಎನಿಸುವ ಅವಕಾಶವೂ ನಿಸರ್ಗವೇ. ಹೀಗಾಗಿ ನಮ್ಮ ಅರಿವಿನ ವ್ಯಾಪ್ತಿಯ ನಿಸರ್ಗದ ಮೇಲೆ ನಾವೇನೊ ಭಾರೀ ಹಿಡಿತ ಸಾಧಿಸಿದ್ದೇವೆಂದು ಬೀಗಬಹುದು. ಒಂದು ವೇಳೆ ಗುರುತ್ವಾಕರ್ಷಣೆಯ ಶಕ್ತಿಯನ್ನು ನಿರಾಕರಿಸಿ ನಾವು ಕವಚದಲ್ಲಿ ಬದುಕಲು ಸಾಧ್ಯವೆ? ಗುರುತ್ವದ ಸೆಳೆತವನ್ನು ಮೀರಿ ಮೇಲೆ ಹಾರಬೇಕಾದರೆ ಸೆಕೆಂಡಿಗೆ ಕನಿಷ್ಟ ಒಂಬತ್ತು ಕಿಲೋಮೀಟರು ವೇಗದಲ್ಲಿ ಮನುಷ್ಯ ಚಲಿಸುವ ವೇಗವನ್ನು ಸಾಧಿಸಿಕೊಳ್ಳಬೇಕಾಗುತ್ತದೆ. ಇದು ನಿಸರ್ಗದ ಅವ್ಯಕ್ತ ಶಕ್ತಿಯ ಒಪ್ಪಂದ. ಈ ಒಪ್ಪಂದದ ಪ್ರಕಾರ ಬೆಳಕಿನ ಒಂದು ಸೆಕೆಂಡಿನ ವೇಗವನ್ನು ಇನ್ನು ಮನುಷ್ಯ ಸಾಧಿಸಿಕೊಳ್ಳುವುದುಂಟೇ? ಬಾಹ್ಯಾಕಾಶ ಯಂತ್ರಗಳನ್ನು ಮಾತ್ರ ಹಾಗೆ ವೇಗವಾಗಿ ಚಲಿಸುವಂತೆ ಮಾಡಲಷ್ಟೇ. ನಮ್ಮ ಸೀಮಿತ ಶಕ್ತಿ ಇದೆಯೇ ವಿನಃ ಸ್ವತಃ ನಮ್ಮ ದೇಹವೇ ಆ ವೇಗವನ್ನು ವೃದ್ದಿಸಿಕೊಳ್ಳಲು ಸಾಧ್ಯವಿಲ್ಲ. ಈವರೆಗೆನ ವಿಶ್ವದಾಖಲೆಯ ಪ್ರಕಾರ ಒಂದು ನೂರು ಮೀಟರ್ ದೂರವನ್ನು ಅತ್ಯಂತ ವೇಗವಾಗಿ ದಾಟಲು ಮನುಷ್ಯ ತೆಗೆದುಕೊಂಡದ್ದು ಸರಿಸುಮಾರು ಎಂಟು ಸೆಕೆಂಡುಗಳು. ಅದೂ ಉದ್ದೀಪನ ಮದ್ದು ಸೇವಿಸಿ. ಅಂದರೆ ಈ ಮಿತಿಯ ಅಳತೆಯ ಪ್ರಕಾರ ಹೇಳುವುದಾದರೆ; ಅಭಿವೃದ್ಧಿಯ ಹೆಸರಿನ ಆರ್ಥಿಕ ವೇಗವೂ ಹಾಸ್ಯಾಸ್ಪದವಾದುದೇ.

ಯಾವ ವೇಗವೂ ನಿಸರ್ಗದಲ್ಲಿ ತನಗೆ ತಾನೇ ಸ್ವಯಂ ಪರಿಪೂರ್ಣ ಚಲನೆ ಅಲ್ಲ. ಬೆಳಕಿನ ವೇಗಕ್ಕೂ; ವಿದ್ಯುತ್ ತರಂಗಗಳ ವೇಗಕ್ಕೂ ಅಲ್ಪಾ ಗಾಮಾ ಇತ್ಯಾದಿ ಆಕಾಶ ಕಿರಣಗಳ ವೇಗಕ್ಕೂ ಅವ್ಯಕ್ತ ಪರಿಸರದ ಚಲನೆಯ ನಿಯಮಗಳಿವೆ. ಹೀಗಾಗಿಯೇ ಅನ್ಯಗ್ರಹಗಳ ಜೈವಿಕ ಪರಿಸರದ ಕೊಂಡಿಗಳೂ ಕೂಡ ಜೀವ ವಿಕಾಸದಲ್ಲಿ ನಮಗೆ ಅರಿವಿಲ್ಲದಂತೆ ಸಾಧ್ಯವಾಗಿರಬಹುದು. ಜನಪದ ಪರಂಪರೆಗಳು ಅನ್ಯಗ್ರಹಗಳನ್ನು ಭಾವಿಸಿರುವ ತಿಳುವಳಿಕೆಯನ್ನು ಖಗೋಳ ವಿಜ್ಞಾನದ ಜೊತೆಗೂಡಿಸಿ ಅರಿಯಬೇಕಾದ ಅಗತ್ಯವಿದೆ. ಶೂನ್ಯ ಜೈವಿಕ ಅವಕಾಶದ ನಿಯಮಗಳ ಮುಂದೆ ಮನುಷ್ಯರ ಕೃತಕ ಚಲನೆಯು ಅತೀತವಾದುದೇನಲ್ಲ. ಖಗೋಳ ಚಲನೆಯು ಮನುಷ್ಯರ ಅಸ್ತಿತ್ವದ ಚಲನೆಯಾಗಿರುತ್ತದೆ. ಇದರ ಆಧಾರದಲ್ಲಿಯೇ ವಿಕಾಸ ಕೂಡ ಸಾಗಿರುವುದು. ಅನ್ಯಗ್ರಹಗಳ ಅನೂಹ್ಯ ಸಂಬಂಧಗಳ ಅಸಮರ್ಪಕ ಸಂವಹನವನ್ನೇ ಜನಪದರು ಅತಿಮಾನುಷವಾಗಿ ಭಾವಿಸಿರಬಹುದು. ಜನಪದ ಪರಂಪರೆಗಳು ವೇಗವನ್ನು ಆಧುನಿಕ ಸಮಾಜಗಳ ಹಾಗೆ ಆರ್ಥಿಕವಾಗಿ ಲೆಕ್ಕಿಸಲಿಲ್ಲ. ಸೂರ್ಯ, ಚಂದ್ರ, ಗ್ರಹ ತಾರೆಗಳ ಚಲನೆಯನ್ನು ಅವರೂ ಬಲ್ಲವರಾಗಿದ್ದರು. ಭೌತಶಾಸ್ತ್ರಜ್ಞರ ರೀತಿಯಲ್ಲಿಯೇ ಜೈವಿಕವಾದ ಕೊಂಡಿಗಳನ್ನು ಕಾಣಬೇಕಾದ ಅನಿವಾರ್ಯತೆ ಜನಪದರಿಗೆ ಇರಲಿಲ್ಲ.

ಕಾಲವನ್ನು ಜನಪದರು ಕಾಯಕವಾಗಿಯೂ ಭಾವಿಸಿದ್ದಿದೆ. ಕಾಲದ ವೇಗವನ್ನು ಅವರು ಜೀವನ ಕ್ರಮಕ್ಕೆ ಅಳವಡಿಸಿಕೊಂಡಿದ್ದರು. ಕಾಲ ಎಂದರೆ ಶಾಶ್ವತ ಅಸ್ತಿತ್ವದ ಅನಂತತೆ ಎಂದು ಧ್ಯಾನಿಸುವ ಜನಪದರ ಆರಾಧನೆಗಳಲ್ಲಿ ಕಾಲದ ಚಲನೆಯಲ್ಲಿ ತಮಗೆ ತಾವೇ ಲೀನವಾಗುವ ಭಾವನೆಯನ್ನು ಕಾಣಬಹುದು. ಅದನ್ನವರು ಮಿಕ್ತಿ ಎಂದು ಮುಗ್ಧವಾಗಿ ಹೇಳುವರಷ್ಟೇ. ಜೀವಜಾಲದಲ್ಲಿ ಒಂದೊಂದು ಅಸ್ತಿತ್ವಕ್ಕೂ ಒಂದೊಂದು ಚಲನೆ ಇದೆ. ಕಾಲುಗಳುಳ್ಳ ಜೀವಿಗಳು ಒಳ್ಳೆಯ ಚಲನೆಯವು ಎಂದೇ ತಾನೆ ನಮ್ಮ ತಿಳುವಳಿಕೆ. ಚಿರತೆಗಳು ಕುದುರೆಗಳು ವೇಗವಾಗಿ ಓಡಬಲ್ಲವಷ್ಟೇ. ಆದರೆ ಕಾಲುಗಳಿದ್ದ ಮಾತ್ರಕ್ಕೆ ಒಳ್ಳೆಯ ಚಲನೆ ಸಾಧ್ಯವಾಗಿದೆ ಎಂದೆನ್ನಲಾಗದು. ಚತುಷ್ಟಾದಿಯಾಗಿದ್ದ ನಮ್ಮ ಪೂರ್ವಿಕ ಎದ್ದು ನಿಂತು ನಡೆದು ಮುಂಗಾಲುಗಳ ವಿಶೇಷವಾಗಿ ಆಹಾರಕ್ಕಾಗಿ, ರಕ್ಷಣೆಗಾಗಿ ಬಳಸಿ ಅವನ್ನೇ ಮುಂಗೈಗಳಾಗಿ ಮಾರ್ಪಾಡಿಸಿಕೊಂಡು ವ್ಯವಸ್ಥಿತವಾಗಿ ಓಡಾಡುವುದನ್ನು ಕಲಿತುಕೊಂಡ ಎಂಬುದು ಒಳ್ಳೆಯ ಕಥೆಯೇ. ಆದರೆ ಮನುಷ್ಯ ಚೆನ್ನಾಗಿಯೇ ಅರ್ಥಪೂರ್ಣವಾದ ಚಲನೆಯನ್ನೇ ಸಾಧಿಸುತ್ತಾ ಬಂದಿರುವನೆ ಎಂದು ಕೇಳಿದರೆ ತಕ್ಕ ಉತ್ತರ ಸಿಗಲಾರದು.

ಭೂಮಿಯ ಮೇಲಿನ ಜೀವಜಾಲದ ಪ್ರಮಾಣಗಳ ಅವಕಾಶ ಮತ್ತು ಅಸ್ತಿತ್ವದ ಕೌಶಲ್ಯಗಳಲ್ಲಿ ಯಾವುದೋ ಅನ್ಯಸಂಪರ್ಕದ ಜೈವಿಕ ಆಸ್ಪೋಟ ಮನುಷ್ಯರ ಸಂಬಂಧದಲ್ಲಿ ಆದಂತಿದೆ. ಧಿಡೀರನೆ ಮಾನವ ಸಂಕುಲ ಇಷ್ಟೊಂದು ಕಡಿಮೆ ಅವಧಿಯಲ್ಲಿ ಹೇಗೆ ಇಷ್ಟೊಂದು ಪ್ರಮಾಣದ ಸಂಖ್ಯಾ ದ್ವಿಗುಣತೆಯನ್ನು ಸಾಧಿಸಿಕೊಂಡಿತು ಎಂಬುದು ನಿಗೂಢವಾಗಿಯೇ ಇದೆ. ಜನಪದರ ಉಗಮ ವಿಕಾಸದ ಅಮೂರ್ತ ಕಥನಗಳು ಈ ನಿಟ್ಟಿನಲ್ಲಿ ಜೀವಜಾಲದ ಶೂನ್ಯಾವಕಾಶದ ಕೊಂಡಿಗಳನ್ನು ಪರೋಕ್ಷವಾಗಿ ಬಿಂಬಿಸಬಲ್ಲವು. ದೆವ್ವ, ಭೂತ, ಪಿಶಾಚಿ, ದುಷ್ಟದೈವ ಮುಂತಾದ ಮಾನಸಿಕ ಆಕೃತಿಗಳು ಶೂನ್ಯಾವಕಾಶದ ಜೈವಿಕ ಜೀವ ಮೂಲಗಳ ಅಸ್ಪಷ್ಟ; ನಿರೂಪಣೆಗಳೆ ಆಗಿವೆ. ಅತಿಮಾನುಷ ಕಲ್ಪನೆಗಳು ಅನ್ಯಮಾನವ ಸಂಪರ್ಕದ ಪರಿಣಾಮವಾಗಿರಬಹುದು. ಮಾನವ ಜೀವಿಗಳು ಮೆದುಳಿನ  ಸಾಮರ್ಥ್ಯದಲ್ಲಿ ಬಹಳ ಬೇಗ ಮುಂದೆ ಬಂದು ವೇಗವನ್ನು ವೃದ್ಧಿಸಿಕೊಂಡಿದ್ದರೂ ಅತಿಮಾನುಷ ಕಲ್ಪನೆಗಳನ್ನು ಸ್ವತಂತ್ರವಾಗಿ ಬಿಡಿಸಿ ಅರ್ಥೈಸಿಕೊಳ್ಳುವಲ್ಲಿ ವಿಫಲವಾಗಿವೆ. ಜೈವಿಕ ಶೂನ್ಯಾವಕಾಶದ ಬಗ್ಗೆ ಜೀವನ ವಿಜ್ಞಾನಿಗಳು ನಿರಂತರವಾಗಿ ಹುಡುಕುತ್ತಲೇ ಇದ್ದಾರೆ. ಖಗೋಳ ವಿಜ್ಞಾನಿಗಳು ಅನ್ಯಗ್ರಹಗಳ ಜೀವಜಾಲವನ್ನು ಹುಡುಕುವ ಇಷ್ಟು, ಧಾವಂತಕ್ಕೆ ಏನು ಕಾರಣ? ನೀಲಾಕಾಶದ ಆಚೆ ಮರೆಯ ಮಾನುಷ ಸಂಬಂಧಗಳಿಗಾಗಿ ಯಾಕೆ ಇಷ್ಟೊಂದು ಹುಡುಕಾಟ? ಇದಕ್ಕೆ ಯಾವ ಜೈವಿಕ ಸ್ಮೃತಿಯ ಕೊಂಡಿಯಿರಬಹುದು? ಎಂಬ ಇಂತಹ ಪ್ರಶ್ನೆಗಳಿಗೆ ಜನಪದ ಪರಂಪರೆಗಳ ಇಂತಹ ಅತಿಮಾನುಷ ಕಲ್ಪನೆಗಳ ಕಥನಗಳಲ್ಲಿ ಒಂದಿಷ್ಟಾದರೂ ವಿವರ ಸಿಗಬಹುದು.

ಈ ನಿಟ್ಟಿನಲ್ಲೇ ಭೂಮಿಯ ಮೇಲಿನ ಇತರೆ ಜೀವಜಾಲಗಳ ವೇಗ ಹಾಗೂ ಸಂಹವನದ ಸಾಧ್ಯತೆಗಳನ್ನು ಪರಿಶೀಲಿಸಬೇಕು. ನಮಗೆ ಸಾಧ್ಯವಾಗದ ಬೇರೊಂದು ರೀತಿಯ ಅನ್ಯಜೈವಿಕ  ಸಂಸರ್ಗ ಭೂಮಿಯ ಮೇಲಿನ ಇತರೆ ಜೀವಿಗಳ ಮೇಲೆ ಆಗಿರಬಹುದು. ಹಾಗಾಗಿಯೇ ವಿಕಾಸದ ಕ್ರಮದಲ್ಲಿ ಎಷ್ಟೋ ಜೀವಿಗಳು ಮಾನವರಿಗಿಂತಲೂ ಜೈವಿಕವಾಗಿ ಬಹಳ ಮುಂದಿವೆ. ಸಮುದ್ರ ಜೀವಿಗಳಿಗೆ ತಕ್ಕ ಕಾಲುಗಳೂ ಇಲ್ಲ ರೆಕ್ಕೆಗಳೂ ಇಲ್ಲ; ಆದರೆ ಅವು ಅತ್ಯುನ್ನತ ಚಲನೆಯನ್ನು ನೀರಿನ ತಳದಲ್ಲಿ ಸಾಧಿಸಿಕೊಂಡಿವೆ. ಇದನ್ನು ಚಲನೆಯ ಯಾವ ಸಿದ್ಧಾಂತದಿಂದ ಭಾವಿಸುವುದು? ಶಬ್ದ ಜಾಲದಲ್ಲಿ ಪರಿಣಿತನಾದ ಮಾನವ ಭಾಷೆಯನ್ನು ಕಲಿತು ಮುಂದಿದ್ದಾನೆಂದು ನಂಬಿದ್ದೇವೆ. ಆದರೆ ತಿಮಿಂಗಿಲಗಳು ಹೊರಡಿಸುವ ತರಂಗಾಂತರಗಳು ಸಮುದ್ರದ ತಳದಿಂದಲೇ ಅತಿದೂರವನ್ನು ತಲುಪಿ ಸಂದೇಶ ತಲುಪಿಸಬಲ್ಲವು. ಇನ್ನು ನಮ್ಮ ಅರಿವಿಗೆ ಬಾರದಂತೆ ನಮ್ಮ ಕಿವಿಗೆ ಕೇಳಿಸದಂತೆ ಅನೇಕ ತರಂಗಗಳನ್ನು ಹೊರಡಿಸುತ್ತಲೇ ಇರುವ ಜೀವಿಗಳ ಸಾಧ್ಯತೆಗಳ ಬಗ್ಗೆ ನಾವು ಇನ್ನೂ ಯೋಚಿಸಿಯೇ ಇಲ್ಲ.

ಕೇಳಿಸಲ್ಪಟ್ಟದ್ದನ್ನು ಶಬ್ದ ಎನ್ನುವುದಾದರೆ; ನಮ್ಮ ಇಂದ್ರಿಯಗಳನ್ನು ಮೀರಿ ಘಟಿಸುವ ಶಬ್ದ ಜಾಲಕ್ಕೆ ಯಾವ ಮಾನದಂಡಗಳಿಂದ ಅರ್ಥ ಹೇಳುವುದು. ಆದ್ದರಿಂದಲೇ ತರಂಗಾಂತರಗಳಿಗೂ, ಅವು ಚಲಿಸುವ ವೇಗಕ್ಕೂ ನಮ್ಮ ಇಂದ್ರಿಯಗಳ ಸಾಮರ್ಥ್ಯಕ್ಕೂ ಜೀವಜಾಲದ ಅವ್ಯಕ್ತ ಸಂಪರ್ಕ ಜಾಲಕ್ಕೂ ತುಂಬಾ ತುಂಬ ಅಂತರಗಳಿವೆ. ಆ ಎಲ್ಲ ಸಂಗತಿಗಳಿಂದ ವೇಗದ ಲೆಕ್ಕವನ್ನು ಮನುಷ್ಯರ ಸಂವಹನ ಸಾಧ್ಯತೆಯ ಅಳತೆಗೆ ಹೋಲಿಸಿದರೆ ನಮ್ಮ ವೇಗವು ಇನ್ನೂ ಎಳೆಯದಾದುದೇ ಇರಬೇಕು. ಎತ್ತಿನ ಬಂಡಿಯ ವೇಗವನ್ನು ವಿಮಾನದ ಎದಿರು ಹೋಲಿಸಿ ಹಾಸ್ಯ ಮಾಡುವುದುಂಟು. ಮೊಲ ಹಾಗೂ ಆಮೆಯ ಕಥೆಯ ನೀತಿಯನ್ನು ನೆನಪಿಸಿಕೊಳ್ಳಿ. ವೇಗವಾಗಿ ಹೋಗಿ ಮುಟ್ಟುವ ನೆಲೆಯಾದರೂ ತಕ್ಕುದಾದುದೇ? ನಮ್ಮ ಅಗತ್ಯದ ವೇಗಕ್ಕೂ ಜೀವಜಾಲದ ವೇಗದ ಅಗತ್ಯಕ್ಕೂ ಅವಿನಾಭಾವ ಸಂಬಂಧ ಇರಬೇಕು. ನಾನು ಮುಂದಿದ್ದೇನೆ ಎಂದರೆ ಅದರೆ ಜೈವಿಕ ಅರ್ಥ ತಾನು ಅಷ್ಟರಮಟ್ಟಿಗೆ ಉಳಿದೆಲ್ಲ ಜೀವಿಗಳಿಗಿಂತ ಹಿಂದಿದ್ದೇನೆ ಎಂದೇ ಆಗುತ್ತದೆ. ಸಹ ಜೀವಿಗಳಿಗಿಂತ ಮುಂದೆ ವೇಗವಾಗಿ ಹೋಗುವುದು  ಅಸಮರ್ಪಕ ಚಲನೆಯಷ್ಟೇ. ಜೀವಿಗಳೆಲ್ಲ ಒಂದೇ ಸಮಪಾತಳಿಯಲ್ಲಿ ಸಾಗಬೇಕು ಎಂಬುದಲ್ಲ ಇದರರ್ಥ. ಎಲ್ಲ ಜೀವಿಗಳೂ ನಿರ್ದಿಷ್ಟ ಅಸ್ತಿತ್ವದ ಅಂತರದಿಂದಲೇ ಸಾಗಿ ತಮ್ಮ ತಮ್ಮ ಪಥದ ನಿಯಮ ಪಾಲನೆ ಮಾಡಬೇಕು. ನಮಗಿಂತ ನಿಧಾನವಾಗಿ ಚಲಿಸುವ ಜೀವಿಗಳು ತಾವು ತಲುಪಬೇಕಾದ ನೆಲೆಯನ್ನು ಅಪಾಯವಿಲ್ಲದೆ ಮುಟ್ಟಬಲ್ಲವು. ಜೀವಜಾಲದಲ್ಲಿ ಮನುಷ್ಯ ಮಾತ್ರವೇ ಕೃತಕ ಯಂತ್ರಗಳನ್ನು ಬಳಸಿ ವೇಗವಾಗಿ ಸಾಗಿ ದೂರವನ್ನು ಮುಟ್ಟುತ್ತಿರುವುದು.