ಜೈವಿಕ ಅನುಭಾವ

ಜೀವಜಾಲ ಜಾನಪದ ಪರಿಕಲ್ಪನೆ ಕನ್ನಡದಲ್ಲಿ ಹೊಸದು. ಜನಪದ ಪರಂಪರೆಗಳ ಮೌಖಿಕ ಕಥನಗಳು ತುಂಬ ಜನಪ್ರಿಯ ಸಂಗತಿಗಳು. ಅವುಗಳ ಆಚೆಗೆ ಅವ್ಯಕ್ತವಾದ ಎಷ್ಟೋ ಜೈವಿಕ ಸಂಗತಿಗಳು ಹಾಗೇ ಉಳಿದಿರುತ್ತವೆ. ಜೀವ ವಿಜ್ಞಾನ, ಸಸ್ಯ ವಿಜ್ಞಾನ, ತಳಿ ವಿಜ್ಞಾನ, ಪರಿಸರ ವಿಜ್ಞಾನಗಳು ಜೀವಜಾಲವನ್ನು ಪ್ರಯೋಗನಿಷ್ಠ ನಿಕಷ್ಟಕ್ಕೆ ಒಡ್ಡಿ ತಮ್ಮ ಜೈವಿಕ ಕಥನಗಳನ್ನು ನಿರೂಪಿಸಿದರೆ, ಸ್ವತಃ ಅನುಭವ ನಿಷ್ಠವಾದ ಅನುಭಾವಿಕೆ ನೆಲೆಯ ಜನಪದರು ತಮ್ಮ ಜೈವಿಕ ಕಥನಗಳನ್ನು ನಿಸರ್ಗನಿಷ್ಠ ಸಂಸ್ಕೃತಿಗಳ ಸಾವಯವ ಸಂಬಂಧಗಳಿಂದ ಆಭಿವ್ಯಕ್ತಿಸುತ್ತಾರೆ. ನಿಸರ್ಗವನ್ನು ಹೊರಗೆ ನಿಂತು ಅರ್ಥೈಸುವ ಆಧುನಿಕ ಚಿಂತನೆ ಒಂದೆಡೆ ಇದ್ದರೆ ಜನಪದರು ನಿಸರ್ಗದ ಭಾಗವಾಗಿ ಅದರ ಅಸ್ತಿತ್ವದಲ್ಲಿ ತನ್ನನ್ನು ತೊಡಗಿಸಿಕೊಂಡು ಜೀವಿಸುವ ರೀತಿಯು ಮತ್ತೊಂದು ಸ್ವರೂಪದ್ದಾಗಿದೆ. ಈ ಎರಡೂ ಕ್ರಮಗಳಲ್ಲಿ ಜೈವಿಕ ಸಂಬಂಧವೇ ಸಮಾನವಾಗಿ ಮಿಡಿಯುವುದು. ಆದರೆ ಅರ್ಥೈಸುವ ಭಾವಿಸುವ ಕ್ರಮ ಬೇರೆ ಬೇರೆಯಾಗಿವೆ. ಜನಪದರು ನಿಸರ್ಗವನ್ನು ಬದುಕಿದರೆ ಜೀವವಿಜ್ಞಾನಿಗಳು ಆ ನಿಸರ್ಗವನ್ನು ಬಿಡಿಸಿ ಅರ್ಥೈಸುವ ಕಾಯಕವನ್ನು ಮಾಡುತ್ತಾರೆ. ಇವರಿಬ್ಬರ ನಡುವೆ ಆಧುನಿಕ ಸಮಾಜಗಳು ನಿಸರ್ಗವನ್ನು ಅನುಭೋಗಿಯಾಗಿ ಸ್ವೇಚ್ಛೆಯಾಗಿ ಉದ್ಯಮವಾಗಿ ಬಳಸುವ ಜೀವನ ಕ್ರಮಗಳನ್ನು ರೂಢಿಸಿಕೊಂಡು ವಿಕಾಸದ ಸಹಜ ಚಲನೆಗೆ ವ್ಯತಿರಿಕ್ತವಾಗಿ ವಿಪರೀತ ವೇಗದ ಧಾವಂತದಲ್ಲಿ ಓಡುತ್ತಿರುತ್ತವೆ.

ಹೀಗಾಗಿಯೆ ಜೀವಜಾಲ ಜಾನಪದ ಪರಂಪರೆಗಳು ಅಭಿವೃದ್ಧಿ ಭ್ರಮೆಯು ಕಾಲಮಾನದಲ್ಲಿ ಅಳಿವಿನಂಚಿನ ಸಂಗತಿಗಳಾಗಿರುವುದು. ಜೀವಜಾಲದಲ್ಲಿ ಕೆಲವು ಪ್ರಾಣಿ ಪಕ್ಷಿ ಅಳಿಯುವ ಸಮಾಚಾರ ಸಾಮಾನ್ಯವೆನಿಸುತ್ತದೆ. ಆದರೆ ಜೀವಜಾಲದ ಜೈವಿಕ ಸಂವೇದನೆಯೇ ಅಳಿವಿನಂಚಿಗೆ ಸಾಗಿದರೆ ಅದು ಆಹಾರ ಪ್ರಮಾಣದ ಮಾನವ ನಷ್ಟವಾಗುತ್ತದೆ. ಆಷ್ಟು ಮಾತ್ರವಲ್ಲದೆ ಜೀವಜಾಲದ ಅವ್ಯಕ್ತ ಕೊಂಡಿಗಳು ಸಡಿಲವಾಗುವುದಕ್ಕೂ ಅಪಾಯ ಎದುರಾಗುತ್ತದೆ. ಜೈವಿಕ ಸಂವೇದನೆಯು ನಿಸರ್ಗ ನಿಷ್ಟ ಪ್ರವೃತ್ತಿ. ಈ ಪ್ರವೃತ್ತಿ ಕೇವಲ ದೈಹಿಕ ರಚನೆಯಿಂದ ಮಾತ್ರವೇ ಸಾಧ್ಯವಾದ ಸ್ವಭಾವವಲ್ಲ. ದೇಹದ ಆಚೆಯ ಸ್ವರೂಪಗಳೇ ದೇಹದ ಒಳಗಿನ ಸ್ವಭಾವಗಳನ್ನು ನಿರ್ಧರಿಸುವುದು. ದೇಹ ಅನೇಕ ಬಾರಿ ನಿಸರ್ಗದ ಹೊರಗಿನ ಸ್ವಭಾವ ಗುಣಗಳನ್ನು ರವಾನಿಸುವ ಮಾಧ್ಯಮವೂ ಹೌದು. ದೈಹಿಕ ರಚನೆಯು ನಿಸರ್ಗದ ಅವಲಂಬನೆಯಿಂದಲೇ ವಿಕಾಸಗೊಳ್ಳುತ್ತ ಬಂದಿರುವುದು. ಅಂದರೆ ದೇಹದ ಮೂಲ ಗುಣ ಸ್ವಭಾವಗಳೇ ಜೈವಿಕ ಸಂವೇದನೆ. ಜೈವಿಕ ಸಂವೇದನೆಯ ಆಧಾರದಲ್ಲಿ ಜೀವನ ವಿಧಾನಗಳನ್ನು ಆಯಾಯ ಪರಿಸರದಲ್ಲಿ ರೂಪಿಸಿಕೊಳ್ಳುವುದೇ ಜೀವಜಾಲ ಜಾನಪದ. ಜೈವಿಕ ಸಂಸ್ಕೃತಿ ಎಂತಲೂ ಇದೇ ಅರ್ಥವನ್ನು ವಿಸ್ತರಿಸಬಹುದು. ಮಾನವರ ಉಗಮ ವಿಕಾಸದ ಹಲವು ಹಂತಗಳ ಉದ್ದಕ್ಕೂ ಜೈವಿಕ ಸಂಸ್ಕೃತಿಯು ಪರಿಷ್ಕಾರಗೊಳ್ಳುತ್ತ ಬಂದಿದೆ. ಜೈವಿಕ ಸಂವೇದನೆಯು ಜೀವಜಾಲದ ಪ್ರವೃತ್ತಿಯ ಸ್ವಭಾವವಾದರೆ ಜೈವಿಕ ಸಂಸ್ಕೃತಿಯು ಆ ಸ್ವಭಾವಗಳ ಅಭಿವ್ಯಕ್ತಿಯೇ ಆಗಿದೆ. ಪಶುಪಾಲಕ ಸಮುದಾಯಗಳು ಕೃಷಿ ಯುಗದ ಹೆಬ್ಬಾಗಿಲು ದಾಟಿ ಆಧುನಿಕ ಗ್ರಾಮ ಸಮಾಜಗಳ ಗಡಿಗಳಿಗೆ ಬರುವ ವೇಳೆಗೆ ನೈಸರ್ಗಿಕ ಸಂಬಂಧಗಳಲ್ಲಿ ಅನೇಕ ಏರುಪೇರುಗಳಾಗಿವೆ.

ದೀರ್ಘಕಾಲೀನ ವಾಸದ ನೆಲೆಗಳು ಜೈವಿಕ ಸಂವೇದನೆಯನ್ನು ಗಾಢವಾಗಿ ಬೆಳೆಸಬಲ್ಲವು. ಹಂಪಿ ಪರಿಸರದ ಗ್ರಾಮಗಳು ಆದಿಶಿಲಾಯುಗದ ಕುರುಹುಗಳ ಜೊತೆಗೇ ಬೆಳೆದು ಬಂದಿವೆ. ನೈಸರ್ಗಿಕ ಪರಿಸರ ಇಲ್ಲಿನ ಸಂಸ್ಕೃತಿಗಳಿಗೆ ನೀಡಿರುವ ಜೈವಿಕತೆಯು ಕಠಿಣವಾದುದೇ ಆಗಿದೆ. ಜೈವಿಕ ಸ್ವಭಾವಗಳನ್ನು ಅನುವಂಶೀಯವಾಗಿ ನೋಡುವ ರೀತಿ ಒಂದು ತೆರನಾಗಿದ್ದರೆ. ಇಡೀ ಪರಿಸರವೇ ಭೌಗೋಳಿಕವಾದ ಸ್ವಭಾವಗಳನ್ನು ಕೂಡ ಅನುವಂಶೀಯ ಸ್ವಭಾವದಂತೆಯೇ ನೀಡುವ ಇನ್ನೊಂದು ಸ್ವರೂಪವೇ ಬೇರೆಯಾಗಿದೆ. ಅಂದರೆ ಅನುವಂಶಿಕ ಗುಣಗಳು ದೇಹದ ಒಳಗಿನ ಸ್ವರೂಪಕ್ಕೆ ಸಂಬಂಧಿಸಿದರೆ ಭೌಗೋಳಿಕ ಗುಣ-ಸ್ವಭಾವಗಳು ದೇಹದ ಹೊರಗಿನ ನೈಸರ್ಗಿಕ ಹೊಂದಾಣಿಕೆಗೆ ಸಂಬಂಧಿಸಿರುತ್ತದೆ. ದೇಹದ ಬಾಹ್ಯ ಗುಣಗಳು ಆಯಾ ಪರಿಸರದ ಪ್ರಭಾವ ಪ್ರೇರಣೆಗಳಿಂದ ಸಾಧ್ಯವಾಗುತ್ತವೆ. ಹಾಗೆಯೇ ದೇಹದ ಒಳಗಿನ ಗುಣ-ಸ್ವಭಾವಗಳು ಅಖಂಡವಾಗಿ ದತ್ತಕವಾಗಿರುವ ಜೈವಿಕೆಯಿಂದ ರೂಪುಗೊಂಡಿರುತ್ತದೆ. ಇವೆರಡೂ ಸಂವೇದನೆ, ಸ್ವಭಾವ, ರೂಪ, ರಚನೆ, ನಡತೆಗಳೆಲ್ಲವೂ ಜೀವಜಾಲದ ಅವ್ಯಕ್ತ ಬಂಧಗಳಲ್ಲಿ ತಮಗೆ ಬೇಕಾದ್ದನ್ನು ಜೈವಿಕವಾಗಿಯೇ ಪಡೆಯುತ್ತಿರುತ್ತವೆ.

ಹಾಗೆ ನೋಡಿದರೆ, ಜೀವವಿಕಾಸವು ವಿಶೇಷವಾಗಿ ಸಾಧ್ಯವಾಗಿರುವುದು ದೇಹದ ಹೊರಗಿನ ಜೈವಿಕ ಪರಿಸರದಿಂದಾಗಿಯೇ ವಿನಃ ಸ್ವತಃ ದೇಹವೇ ಪಡೆದಿರುವ ಅನುವಂಶಿಕ ಗುಣಗಳಿಂದಷ್ಟೇ ಅಲ್ಲ. ಭೌತಿಕವಾದ ಜೀವಜಾಲ ನಮ್ಮ ಅಸ್ತಿತ್ವದ ವ್ಯಕ್ತ ಸ್ಥಿತಿಯಾಗಿದ್ದರೆ ಅವ್ಯಕ್ತವಾಗಿರುವ ಅಭೌತಿಕ ಜೀವಪರಿಸರವು ಅಖಂಡ ಜೀವವಿಕಾಸದ ಅವ್ಯಕ್ತ ಸ್ಥಿತಿಯಾಗಿದೆ. ಈ ಎರಡೂ ಪರಿಸರಗಳನ್ನು ಸಮರ್ಥವಾಗಿ ಹೊಂದಿಸಿಕೊಂಡ ಜೀವಿಗಳು ಮಾತ್ರವೇ ಸಮರ್ಥ ಸ್ವರೂಪವನ್ನು ಪಡೆಯಲು ಸಾಧ್ಯ. ಭಾಗಶಃ ಮಾನವರು ಈ ಸ್ಥಿತಿಗಳನ್ನು ಗಾಢವಾಗಿ ಗ್ರಹಿಸಿದ್ದರಿಂದಲೇ ಅವರ ಜೈವಿಕ ಸಂವೇದನೆಯು ನಿಸರ್ಗದ ವೇಗವನ್ನು ಮೀರಿಸುವಂತೆ ಪ್ರತಿಬಾರಿಯೂ ತೀವ್ರವಾಗುತ್ತಿರುವುದು. ಜೀವಜಾಲದ ಸಂವೇದನೆಯನ್ನು ಅತಿಯಾಗಿ ಜಾಣ್ಮೆಗೆ ಒಳಪಡಿಸಿದಂತೆಲ್ಲ ಜೈವಿಕತೆಯು ತೆಳುವಾಗುತ್ತ ಸಾಗುತ್ತದೆ. ಭೌತಿಕ ಜಗತ್ತಿನ ತಿಳುವಳಿಕೆಗಿಂತಲೂ. ಅಭೌತಿಕ ಜಗತ್ತಿನ ಅರಿವೇ ನಿಸರ್ಗದಲ್ಲಿ ಪ್ರಧಾನವಾದದ್ದು. ನಾಗರೀಕತೆಗಳು ಇದನ್ನು ಸರಿಯಾದ ರೀತಿಯಲ್ಲಿ ಸಂಯೋಜಿಸಿಕೊಂಡಂತೆ ಕಾಣುವುದಿಲ್ಲ. ಆದಿಮ ಸಮುದಾಯಗಳು ಕೃತಕ ಸೌಲಭ್ಯಗಳ ಹಂಗಿಲ್ಲದೆಯೂ ನಿಸರ್ಗದ ಜೊತೆ ಗಾಢವಾದ ಸಂವಹನವನ್ನು ಸಾಧಿಸಿಕೊಂಡಿದ್ದವು. ಜೈವಿಕವಾಗಿಯೇ ಬಾಳಿ ಬದುಕಿ ಜೀವಜಾಲದ ಒಪ್ಪಂದಗಳನ್ನು ಸಮರ್ಥವಾಗಿ ನಿರ್ವಹಿಸಿದ್ದವು. ಆಧುನಿಕ ಮಾನವ ಅಂತಹ ಒಪ್ಪಂದ ಹಾಗು ನಿರ್ವಹಣೆಗಳಲ್ಲಿ ದುರ್ಬಲನಾಗುತ್ತಿದ್ದಾನೆ. ಇದು ಜೈವಿಕ ಸಂಬಂಧದ ತೊಡಕಲ್ಲದೆ ಬೇರೇನಲ್ಲ.

ಜೈವಿಕ ಸಂಸ್ಕೃತಿಗಳು ವಿಕಾಸದ ನೀತಿಗೆ ಬದ್ಧವಾಗಿದ್ದರೆ ಆಧುನಿಕ ತಂತ್ರಜ್ಞಾನ ಸಮಾಜಗಳು ವಿಕಾಸದ ವೇಗವನ್ನು ಹೆಚ್ಚಿಸಿಕೊಳ್ಳುವತ್ತ ಮುಖ ಮಾಡಿವೆ. ಇದು ಸರಿಯೊ ತಪ್ಪೊ ಎಂಬ ವೈರುಧ್ಯ ಚರ್ಚೆಗಿಂತಲೂ ಯಾಕೆ ಈ ಪರಿಯ ವೇಗವನ್ನು ಆಧುನಿಕ ಸಮಾಜಗಳು ಮೈಮೇಲೆ ಎಳೆದುಕೊಂಡಿವೆ ಎಂದು ವಿವೇಚಿಸುವುದೇ ಸೂಕ್ತ. ಭೌತ ಜಗತ್ತಿನ ವಿವೇಕದಲ್ಲೆ ಕಾಲ ಮತ್ತು ಅವಕಾಶಗಳು ಬಹಳ ಮುಖ್ಯ ವೇಗದ ಲೆಕ್ಕವೆ ಅಲ್ಲಿ ಅನೇಕ ಬಾರಿ ಪ್ರಮಾಣ. ಭೌತಜಗತ್ತಿನ ಪ್ರಮಾಣಗಳು ಯಾವತ್ತೂ ದಾಪುಗಾಲಿಡುವುದರಲ್ಲೇ ಹೆಚ್ಚು ಶ್ರದ್ಧೆ ವಹಿಸುತ್ತವೆ. ಭೌತಜಗತ್ತು ಕೇವಲ ಭೌಗೋಳಿಕತೆಗೊ, ಆಕಾಶದ ವ್ಯಾಪ್ತಿಗೊ ಮಾತ್ರ ಸಂಬಂಧಿಸಿದ್ದಲ್ಲ. ಸೌಲಭ್ಯಕ್ಕಾಗಿ ರೂಪಿಸುವ ಪ್ರತಿಯೊಂದು ಸ್ವರೂಪವೂ ಭೌತಿಕವಾದದ್ದೇ. ಆದರೆ ಭೌತಿಕ ಸ್ವರೂಪದ ಆಚೆಗಿನ ಅಭೌತಿಕತೆಯ ಪ್ರಮಾಣಗಳು, ಅದರ ಕಾಲ ಮೆತ್ತು ಅವಕಾಶಗಳು ಭೌತಿಕ ಜಗತ್ತಿನ ನಿಯಮಗಳಿಗಿಂತಲೂ ಭಿನ್ನವಾಗಿರುತ್ತವೆ. ಆ ಬಗೆಯೆ ಅವ್ಯಕ್ತ ಭೌತಿಕತೆಯು ನಮ್ಮ ತರ್ಕಗಳಿಗೆ ನಿಲುಕುವುದಿಲ್ಲ. ಭೌತಿಕ ಪ್ರಮಾಣಗಳಿಗೂ ಅಭೌತಿಕ ಪ್ರಮಾಣಗಳಿಗೂ ಜೈವಿಕ ಸಂವೇದನೆಯ ಕೊಂಡಿ ಯಾವತ್ತೂ ಇರಬೇಕಾಗುತ್ತದೆ. ಆಧುನಿಕ ಪ್ರಮಾಣಗಳಿಗೂ ಜೈವಿಕ ಸಂವೇದನೆಯ ಕೊಂಡಿ ಯಾವತ್ತೂ ಇರಬೇಕಾಗುತ್ತದೆ. ಆಧುನಿಕ ಸಮಾಜಗಳು ಕುಶಾಗ್ರಮತಿಗಳಾಗಿದ್ದರೂ ಯಾಕೆ ಅಭೌತಿಕ ಜಗತ್ತಿನ ಜೈವಿಕ ಸಂವೇದನೆಯನ್ನು ವಿಶೇಷವಾಗಿ ಪರಿಗಣಿಸುವುದಿಲ್ಲ ಎಂಬುದು ವಿಪರ್ಯಾಸಕರವಾಗಿದೆ. ಅಭೌತಿಕ ಜಗತ್ತಿನ ಜೀವಜಾಲದ ಪ್ರಮಾಣಗಳು ಹುಟ್ಟು ಸಾವಿನ ಹಂಗಿನವಲ್ಲ. ಬೆಳವಣಿಗೆಯ ಒಂದೇ ಉದ್ದೇಶಕ್ಕೆ ಅಭೌತಿಕ ಲೋಕದ ಪ್ರಮಾಣಗಳು ಜೋತು ಬೀಳುವುದಿಲ್ಲ. ಜೀವಜಾಲದಲ್ಲಿ ಅಭೌತಿಕ ಪ್ರಮಾಣಗಳು ಹೇಗೆ ಕಾರ್ಯನಿರ್ವಹಿಸುತ್ತವೆ? ಆ ಪ್ರಮಾಣಗಳ ಕೊನೆ ಅರ್ಥ ಯಾವುದು? ಆ ಪ್ರಮಾಣಗಳು ಲೌಕಿಕದ ಈ ಭೌತಿಕ ಪ್ರಮಾಣಗಳ ಜೊತೆ ಯಾವ ನೆಲೆಯಲ್ಲಿ ಒಂದಾಗುತ್ತವೆ ಎಂಬುದನ್ನು ಬಿಡಿಸಿ ನೋಡುವ ಅವಶ್ಯಕತೆ ಇದೆ.

ಜೈವಿಕ ಸಂಸ್ಕೃತಿ

ಆದಿಮ ಜನಪದಗಳು ನಿಸರ್ಗದ ಸವಲತ್ತುಗಳನ್ನೇ ಸಂಸ್ಕೃತಿಯ ಮೌಲ್ಯವಾಗಿಸಿಕೊಂಡಿದ್ದವು. ಪ್ರತಿಯೊಂದು ಜೀವಿಯಲ್ಲೂ ಜೀವಾತ್ಮ ಇದೆ ಎಂದು ನಂಬಿದ್ದುದು ಅಖಂಡ ಜೈವಿಕತೆಯ ಸ್ವಭಾವದಿಂದ, ವಿಶೇಷವಾಗಿ ಕಾಣುವ ಪರಿಸರಕ್ಕಿಂತಲೂ ಹೆಚ್ಚಾಗಿ ಕಾಣದಿರುವ ಪರಿಸರವನ್ನು ದೈಹಿಕವಾಗಿ ಕಂಡಿದ್ದರಿಂದಲೇ ಜೈವಿಕ ಆಧ್ಯಾತ್ಮ ಅದಿಮ ಜನಪದಗಳಿ ಸ್ವಾಭಾವಿಕವಾಗಿದ್ದುದು. ಅವ್ಯಕ್ತ ಜೈವಿಕತೆಯು ಮನುಷ್ಯರ ಸುಪ್ತ ಮನಸಿನಲ್ಲಿ ದಿವ್ಯತೆಯನ್ನು ಸ್ಪುರಿಸುತ್ತದೆ. ಆ ದಿವ್ಯತೆಯು ಕಲ್ಪನೆಯನ್ನೂ ಆಧರಿಸಿರುತ್ತದೆ. ಕಲ್ಪನೆಗಳು ಕೇವಲ ಊಹೆಗಳಲ್ಲ. ಅವು ನಿಸರ್ಗದ ಅಂತರಂಗ ಏನು ಎಂಬುದನ್ನು ಗಾಢವಾಗಿ ವಿವೇಚಿಸಿದ್ದರ ಪರಿಣಾಮ. ಆದಿಮ ಮನಸ್ಸು ಅಖಂಡವಾಗಿ ಅವ್ಯಕ್ತ ನಿಸರ್ಗವನ್ನು ತುಂಬಿಕೊಂಡಿದೆ. ಕಾಣುವ ಪರಿಸರಕ್ಕೂ ಕಾಣದಿರುವ ಪರಿಸರಕ್ಕೂ ಅರ್ಥಸಂಬಂಧವನ್ನು ಕಲ್ಪನೆಗಳು ಊಹೆಗಳು ಗ್ರಹಿಕೆಗಳು ಕಾಣ್ಕೆಗಳು ತಂದುಕೊಟ್ಟಿವೆ. ಇವು ಅಪ್ಪಟ್ಟ ಜೈವಿಕ ಸ್ವಭಾವಗಳು. ಹಗಲುಗನಸಿನ ಆಧುನಿಕ ಲೋಭಿತನ ಬೇರೆ. ವಿಕೃತ ಕಲ್ಪನೆಗಳು ಅಜೈವಿಕವಾದವು. ಅದಿಮ ಸುಪ್ತಪ್ರಜ್ಞೆಯು ಅವ್ಯಕ್ತ ನೈಸರ್ಗಿಕ ಸ್ವರೂಪಗಳನ್ನು ಕಲ್ಪನೆಗಳಿಂದಲೇ ಬಿಡಿಸಿಕೊಂಡದ್ದು. ಆಧುನಿಕ ತರ್ಕ ವಿಶ್ಲೇಷಣೆಗಳು ಭೌತಿಕ ಸ್ವರೂಪವನ್ನು ಪ್ರಧಾನವಾಗಿ ಗ್ರಹಿಸಿಯೇ ವ್ಯಾಖ್ಯಾನಕ್ಕೆ ತೊಡಗುತ್ತವೆ. ಸಂಸ್ಕೃತಿಗಳ ಸುಪ್ತಪ್ರಜ್ಞೆಯು ತಂತಾನೆ ಜೈವಿಕತೆಯನ್ನು ಪ್ರತಿನಿಧಿಸಿದರೆ ಆಧುನಿಕ ತರ್ಕಜ್ಞಾನವು ಭೌತಿಕ ಲೋಕದ ಪ್ರಮಾಣಗಳನ್ನೇ ಆಶ್ರಯಿಸಿರುತ್ತದೆ. ಜನಪದರು ಶುದ್ಧಾಂಗವಾಗಿ ವೈಜ್ಞಾನಿಕ ತರ್ಕಕ್ಕೂ ಸಿಲುಕುವುದಿಲ್ಲ. ಅಂತೆಯೇ ಆದಿಮ ಸುಪ್ತಪ್ರಜ್ಞೆಯ ಒಂದೇ ಅನುಭವಕ್ಕೂ ಬದ್ಧರಾಗುವುದಿಲ್ಲ. ಜೈವಿಕ ಸಂವೇದನೆಯು ಆ ಕ್ಷಣಕ್ಕೆ ತೋರಿದ ಬೆಳಕಿನಲ್ಲೆ ಪರಂಪರೆಯ ಜೊತೆ ಬೆಸುಗೆಯನ್ನು ಮಾಡಿಕೊಳ್ಳುವಲ್ಲಿಯೇ ಜನಪದರ ಜೀವಜಾಲ ಸಂಬಂಧಗಳು ತೀರ್ಮಾನವಾಗುತ್ತವೆ. ಆದ್ದರಿಂದ ಅವರ ಜೈವಿಕ ಸಂವೇದನೆಯು ಸಾಂದರ್ಭಿಕವಾಗಿ ಹೊಂದಾಣಿಕೆಯ ಸಹಜ ಮುಗ್ಧತೆಯಲ್ಲಿ ಅರ್ಥ ಪಡೆದುಕೊಳ್ಳುತ್ತದೆ.

ಹೀಗಾಗಿ ಜೀವಜಾಲ ಜಾನಪದವನ್ನು ಸಂಸ್ಕೃತಿ ವಿಕಾಸದ ನೆಲೆಯಲ್ಲಿ ವಿಶ್ಲೇಷಿಸುವುದೇ ಉಚಿತವಾದುದು. ಪ್ರಮಾಣಗಳ ತರ್ಕಕ್ಕೆ ಜನಪದರ ಆಚಾರ ವಿಚಾರಗಳು ನಿಲುಕುವುದಿಲ್ಲ. ಜೀವದ ಅಸ್ತಿತ್ವವನ್ನು ಅಖಂಡ ನಿಸರ್ಗದ ಒಂದು ಭಾಗವಾಗಿ ನೋಡುವುದರಿಂದ ಜೀವ ಸಾಧ್ಯತೆಯ ವೈವಿಧ್ಯ ರೂಪಗಳನ್ನು ಜನಪದ ಪರಂಪರೆಗಳು ಪ್ರತಿನಿಧಿಸುತ್ತವೆ. ಜೀವನ ಬಹುರೂಪ ಜೀವಜಾಲ ಸರಪಳಿಯ ನಂಬಿಕೆಯೇ ಹೊರತು ಸೃಷ್ಟಿ ವಿಕಾಸದ ಪ್ರತ್ಯೇಕತೆಯನ್ನು ತುಂಡಾದ ಸ್ಥಿತಿಯನ್ನು ಧ್ವನಿಸುವುದಿಲ್ಲ. ನಿತ್ಯ ನಿರಂತರತೆಯ ಈ ಭಾವವೇ ಅಖಂಡ ಜೈವಿಕತೆ. ಭೂಮಿ ಆಕಾಶ ಎರಡನ್ನೂ ಒಂದಾಗಿ ಕಾಣುವ ಜನಪದಗಳು ಅಖಂಡ ಜೈವಿಕತೆಯಿಂದಲೇ ಸಂಸ್ಕೃತಿಗಳನ್ನು ಕಂಡಿರುವುದು. ಅಸ್ತಿತ್ವದ ತತ್ವ ಇದು. ಸಾವಿನಾಚೆಯ ಬೇರೊಂದು ಲೋಕದ ಕಲ್ಪನೆಯೂ ಜೀವ ವಿಕಾಸದ ರೂಪಾಂತರಗಳನ್ನು ಸೂಚಿಸುವುದೇ ಆಗಿದೆ. ಆ ಮಟ್ಟಿಗೆ ಯಾವುದೇ ಜನಪದಗಳು, ಆದಿವಾಸಿಗಳು, ಅಲೆಮಾರಿಗಳು ಅಖಂಡ ಜೈವಿಕತೆಯ ಬೇರುಗಳನ್ನು ಸಂಪೂರ್ಣವಾಗಿ ಕಡಿದುಕೊಂಡಿರಲಾರವು. ತಾತ್ಕಾಲಿಕ ವಿಸ್ಮೃತಿಯಿಂದ ಸಮುದಾಯಗಳು ಬಳಲುತ್ತವೆಯಾದರೂ ಆ ವಿಸ್ಮೃತಿಯಿಂದಲೂ ಪಾರಾಗುವ ಸ್ವಭಾವ ಜೈವಿಕವಾಗಿಯೇ ದತ್ತಕವಾಗಿರುತ್ತದೆ. ಅಭೌತಿಕವಾದ ಜೀವಜಾಲದ ಸಂಬಂಧವೇ ಇಂತಹ ಗುಣವನ್ನು ಉದ್ದೀಪಿಸುವುದು.

ಗತಕಾಲದ ಜೈವಿಕ ಪರಂಪರೆಗಳು ಅಲಕ್ಷಿತ ಸಮುದಾಯಗಳಲ್ಲಿಯೇ ಹೆಚ್ಚು ಅರ್ಥವಂತಿಕೆಯಿಂದಿರುವುದು. ನಿಸರ್ಗದ ಗಾಢವಾದ ಸಂಬಂಧ ಎಲ್ಲ ಸಮಾಜಗಳಿಗೂ ಒಂದೇ ಪ್ರಮಾಣದಲಿ ಇರುವುದಿಲ್ಲ. ನಗರೀಕರಣವಾದಂತೆಲ್ಲ ನೈಸರ್ಗಿಕ ಪರಿಸರದ ಅವಲಂಬನೆ ಇಳಿಮುಖವಾಗುತ್ತಲೆ ಸಾಗುತ್ತದೆ. ನಗರೀಕೃತ ತಂತ್ರಜ್ಞಾನವು ಜೈವಿಕತೆಯನ್ನು ಅನುಭೋಗಿಯಾಗಿ ತಿಳಿಯುತ್ತ ಹೆಚ್ಚು ಹೆಚ್ಚು ಸುಖಲೋಲುಪತೆಯಲ್ಲಿ ಅನ್ಯವಾಗುತ್ತಿರುತ್ತದೆ. ಹೀಗೆ ಒಂದೆಡೆ ಅದಿಮ ಸ್ವಭಾವವಾದ ಜೈವಿಕತೆಯು ಕಡಿಮೆ ಆಗುತ್ತ ಸಾಗಿದಂತೆಲ್ಲ ಅಭೌತಿಕ ಜಗತ್ತಿನ ಪ್ರಮಾಣಗಳಲ್ಲಿ ವ್ಯತ್ಯಯ ಉಂಟಾಗಿ ಅವು ಭೌತಿಕ ಪ್ರಮಾಣಗಳ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತವೆ.

ದೃಷ್ಟಿಗೋಚರವಾದದ್ದರ ಬಗ್ಗೆ ಮಾನವರಿಗೆ ಒಂದು ಸ್ವಷ್ಟ ಕಲ್ಪನೆ ಇದೆ. ಈ ಕಲ್ಪನೆಯ ಜೊತೆಗೆ ಭೌತಿಕ ಅನುಭವಗಳು ಬೆರೆತಿರುತ್ತವೆ. ಭೌತಿಕ ಪ್ರಮಾಣಗಳು ತರ್ಕಪ್ರಧಾನವಾಗಿ ವಸ್ತುಸ್ಥಿತಿಯ ಅಸ್ತಿತ್ವವನ್ನು ತಿಳಿಸುತ್ತವೆ. ವಾಸ್ತವವಾದಿ ಚಿಂತನೆಗಳು ಜನಪದರ ಪ್ರಮಾಣಗಳ ಜೊತೆ ಬೆರೆಯಲಾರವು. ಕಾಣದ ಕೈ ಎಲ್ಲವನ್ನು ನಿರ್ಧರಿಸುತ್ತದೆ ಎಂಬ ಸುಪ್ತಕಲ್ಪನೆಯು ಅಭೌತಿಕ ಸ್ವಭಾವದ್ದಾಗಿದೆ. ಈ ವಸ್ತು ಇತ್ತು, ಆದ್ದರಿಂದ ಅದಕ್ಕೆ ಈ ಅರ್ಥವಿದೆ. ಈ ವಸ್ತು ಸ್ಥಿತಿಯನ್ನು ತಾನು ಅನುಭವಿಸಿದ್ದೆ, ಈ ಭೌತಿಕ ಆಕೃತಿ ನನ್ನ ತಿಳುವಳಿಕೆಯ ಜೊತೆ ಒಂದಾಗಿದೆ. ಆದ್ದರಿಂದ ಭೌತಿಕ ಪ್ರಮಾಣಗಳು ಕಾರ್ಯಕಾರಣಗಳ ಪರಿಣಾಮದಿಂದ ನಿರ್ಧಾರವಾಗುತ್ತವೆ ಎಂಬ ಈ ಬಗೆಯ ಹೆಗಲಿಯನ್ ತಿಳುವಳಿಕೆಯಿಂದ ಹುಟ್ಟುವ ನೈಸರ್ಗಿಕ ಸಂಬಂಧಗಳು ಮೂಲದಲ್ಲಿ ಮನುಷ್ಯ ಕೇಂದ್ರಿತವಾದವು. ಇವು ಹೆಚ್ಚಾಗಿ ವೈಚಾರಿಕತೆಯ ಭಾಗವಾಗಿ ಬರುವ ಆಲೋಚನೆಗಳು. ಜನಪದರು ಇಂತಹ ಪ್ರಮಾಣ ಕ್ರಮಗಳಲ್ಲಿ ಅಚಲವಾದ ವಿಶ್ವಾಸವಿಡಲಾರರು. ತನ್ನ ಸುತ್ತಲ ಸಸ್ಯಲೋಕ ಯಾಕೆ ಇಷ್ಟೊಂದು ವೈವಿಧ್ಯವಾಗಿದೆ ಎಂಬುದಕ್ಕೆ ಅವರು ಜೀವಜಾಲದ ಸೃಷ್ಟಿಯ ಜೀವ ಸಮಾನತೆಯ ತತ್ವದಿಂದ ಉತ್ತರ ಕಂಡುಕೊಳ್ಳುತ್ತಾರೆ ಪ್ರತಿಯೊಂದು ಜೀವಿಯೂ ದೈವಿಕ ಸೃಷ್ಟಿ, ಇಲ್ಲಿ ಎಲ್ಲದಕ್ಕೂ ಬದುಕಲು ಅವಕಾಶವಿದೆ ಎಂಬ ತತ್ವವು ವಿಕಾಸದ ಸರ್ವಚೇತನದ ಅಖಂಡತೆಯನ್ನು ಧ್ವನಿಸುತ್ತದೆ. ಈ ಆಧಾರದಿಂದ ನಿಸರ್ಗವನ್ನು ಸಂಸ್ಕೃತಿಯಾಗಿಸಿಕೊಂಡ ದಾರಿಯಲ್ಲಿ ಜೀವಜಾಲದ ಅವ್ಯಕ್ತ ಕೊಂಡಿಗಳು ಬೆರೆತು ಹೋಗಿವೆ. ಈ ಅಖಂಡ ಜೈವಿಕ ಪ್ರಜ್ಞೆ ಕಲಿಕೆಯಿಂದ ಬಂದದ್ದಲ್ಲ. ಎಷ್ಟೋ ಬಾರಿ ಪ್ರಮಾಣಗಳು ಕಲಿಕೆಯಿಂದ ಜಾಣ್ಮೆಯಿಂದ ತರ್ಕದಿಂದ ಪ್ರಜ್ಞಾಪೂರ್ವಕ ಉದ್ದೇಶದಿಂದ ಉಂಟಾಗಿರುತ್ತವೆ. ಜನಪದರು ಇಂತಹ ದಾರಿಯ ಜೈವಿಕ ಪಯಣಿಗರಲ್ಲ. ಉದ್ದೇಶಪೂರ್ವಕ ಪ್ರಮಾಣಗಳು ನಿರ್ದಿಷ್ಟ ದೂರದಲ್ಲಿ ಮಾತ್ರ ನಿರ್ದಿಷ್ಟ ಅರ್ಥಕ್ಕೆ ಕಟ್ಟು ಬಿದ್ದು ಜೈವಿಕತೆಯ ಸಾಧ್ಯತೆಯನ್ನು ಕಳೆದುಕೊಂಡಿರುತ್ತವೆ.

ಜೈವಿಕ ಚಲನೆ

ಸಂವೇದನಾಶೀಲ ಸ್ವಭಾವಗಳು ತಮಗೆ ತಾವೆ ವಸ್ತುಸ್ಥಿತಿಯ ಆಚೆಗಿನ ಅಭೌತಿಕ ಅರ್ಥ ಸಂಬಂಧಗಳನ್ನು ಗ್ರಹಿಸುತ್ತಿರುತ್ತವೆ. ತರ್ಕಾತೀತವಾದ ಆಲೋಚನೆಗಳು ರೂಪರಹಿತ ಪ್ರಮಾಣಗಳಿಂದ ವ್ಯಕ್ತವಾಗುತ್ತದೆ. ತರ್ಕಾಧಾರಿತ ಪ್ರಮಾಣಗಳಿಂದ ಜನಪದರು ತಮ್ಮ ಸುತ್ತಲ ಪರಿಸರವನ್ನು ಭಾವಿಸಿದ್ದಿದ್ದರೆ ಬಹಳ ಬೇಗನೇ ಈ ಪರಿಸರ ನಾಶವಾಗಿ ಬಿಡುತ್ತಿತ್ತು. ಕೈಗಾರಿಕಾ ಕ್ರಾಂತಿ ಇಂಗ್ಲೆಂಡಿನಲ್ಲಿ ಆರಂಭವಾಗಿ ಅದು ಎಲ್ಲೆಲ್ಲೋ ಸುತ್ತು ಹಾಕಿಕೊಂಡು ಜಾಗತಿಕವಾಗಿ ವ್ಯಾಪಿಸಿದ ಮೇಲೆ ತರ್ಕಬದ್ದ ಉತ್ಪಾದನೆ, ಅದರ ಸೌಲಭ್ಯ, ಅದರ ಮಾರುಕಟ್ಟೆ, ಆ ಬಗೆಯ ಲಾಭ, ನಷ್ಟ, ಬಂಡವಾಳ ಅವುಗಳ ಜೊತೆಗೆ ಬೆಸೆದುಕೊಂಡಿರುವ ಜಾಗತಿಕ ರಾಜಕಾರಣ, ಸಾಮ್ರಾಜ್ಯಶಾಹಿ ತಂತ್ರ ಮುಂತಾದುವೆಲ್ಲವೂ ವ್ಯವಸ್ಥಿತ ತರ್ಕ ಪ್ರಮಾಣಗಳ ಪರಿಣಾಮಗಳು. ಜನಪದ ಪರಂಪರೆಗಳು ಪರಿಸರವನ್ನು ಅತ್ಯಂತ ಸ್ಥಳೀಯ ಜೈವಿಕ ಸಂವೇದನೆಯಿಂದ ಕಂಡಿದ್ದರಿಂದಲೇ ಜೀವ ವೈವಿಧ್ಯದ ಜೈವಿಕ ಪರಂಪರೆಗಳು ಬಹುರೂಪಗಳಲ್ಲಿ ವಿಸ್ತರಿಸಲು ಸಾಧ್ಯವಾದದ್ದು. ಅಖಂಡ ಜೈವಿಕತೆ ಸುಪ್ತವಾಗಿ ಜನಪದಗಳಲಿ ಇರುವುದು ಕೂಡ ಸ್ಥಳೀಯ ಜೈವಿಕತೆಯ ಬಹುರೂಪಿ ಕೊಂಡಿಗಳಿಂದ. ಸ್ಥಾನೀಯವಾಗಿ ಜೈವಿಕ ಸ್ವಭಾವವನ್ನು ಧಾರಣ ಮಾಡಿಕೊಂಡೇ ಅದರ ಅನುಭಾವದಿಂದಲೇ ಜಾಗತಿಕವಾದ ಜೀವಜಾಲದ ನೆಂಟನ್ನು ಬೆಸೆದುಕೊಳ್ಳುವ ಸಂಬಂಧವು ತರ್ಕಾತೀತ ಜೀವಜಾಲದ ಪ್ರಮಾಣಗಳ ಕಾರಣವಾಗಿ ಸಾಧ್ಯವಾಗಿದೆ. ಗಾಳಿ ಬೀಸುವುದು ತನ್ನ ಸ್ವಭಾವದಲ್ಲಿ. ಅದಕ್ಕೆ ಸ್ಪಷ್ಟ, ತರ್ಕವನ್ನು ಹೇರಲಾಗದು. ಮಳೆ ಬೀಳುವುದೂ ಕೂಡ ಖಚಿತ ನಿರ್ದೇಶನಗಳಿಂದಲ್ಲ. ಅವ್ಯಕ್ತ ಜೀವಜಾಲವು ಖಗೋಳದ ವ್ಯಾಪ್ತಿಗೆ ಸಂಬಂಧಿಸುತ್ತದೆ. ಭೂಮಿಯ ಪ್ರಮಾಣಗಳು ಸ್ವಯಂ ಸ್ವತಂತ್ರವೂ ಅಲ್ಲ. ಅದರ ಚಲನೆಯ ಜೊತೆ ಉಳಿದ ಗ್ರಹಗಳ ಚಲನೆಯೂ ಲೀನವಾಗಿರುತ್ತದೆ. ಚಲನೆಯ ಭೌತಿಕ ನಿಯಮಗಳು ಒಂದು ಬಗೆಯಾದರೆ ಕಣ್ಣಿಗೆ ಕಾಣದ ಅಭೌತಿಕ ಚಲನೆಯ ನಿಯಮಗಳು ತರ್ಕಬದ್ಧವಲ್ಲ. ಆಕಾಶದ ಜೀವಜಾಲ ಪರಿಸರದ ಚಲನೆಯನ್ನು ಮಾನವ ಕೇಂದ್ರಿತ ತರ್ಕಗಳಿಂದ ಅರ್ಥೈಸಲಾಗದು. ಭೂಮಿಯೇ ಹಾಸಿಗೆ, ಆಕಾಶವೇ ಹೊದಿಕೆ ಎಂಬ ಜನಪದರ ಇಂತಹ ವಿಶಾಲ ಪ್ರಜ್ಞೆ ತರ್ಕಾತೀತವಾದದ್ದು.

ಅಭೌತಿಕ ಪ್ರಮಾಣಗಳು ಉದ್ದೇಶ ಕೇಂದ್ರಿತವಾದವಲ್ಲ. ಭೌತಿಕ ಪ್ರಮಾಣಗಳು ಮಾತ್ರ ಉದ್ದೇಶ ಬದ್ಧವಾಗಿರುತ್ತವೆ. ಹೀಗಾಗಿಯೇ ನಾಗರಿಕತೆಗಳು ಉದ್ದೇಶ ನಿಷ್ಠವಾದ ತರ್ಕಗಳನ್ನೇ ಬಳಸಿಕೊಂಡು ಬಂದದ್ದು. ಅವ್ಯಕ್ತ ಪ್ರಮಾಣಗಳು ನಿರ್ದಿಷ್ಟ  ಅರ್ಥಕ್ಕೂ ಒಳಪಡುವುದಿಲ್ಲ. ಅರ್ಥ ಪ್ರಧಾನವಲ್ಲದ ಸ್ವಭಾವ ಅಭೌತಿಕ ಪ್ರಮಾಣಗಳಿಗೆ ಇದ್ದಿದ್ದರಿಂದಲೇ ವಿಕಾಸ ನಿರಂತರವಾಗಿರುವುದು. ಭೌತಿಕ ಲೋಕ ಅರ್ಥ ಪ್ರಧಾನವಾದರೆ ಅಭೌತ ಜಗತ್ತು ಪರಿಣಾಮ ಪ್ರಧಾನವಾದದ್ದು. ಭೌತಿಕವಾದ ಪರಿಣಾಮಗಳಿಗೆ ಕಾರ್ಯಕಾರಣ ಸಂಬಂಧವಿದ್ದರೆ ಅಭೌತ ಪರಿಣಾಮಗಳಿಗೆ ಅಸ್ತಿತ್ವದ ನಿತ್ಯನಿರಂತರ ಚಲನೆ ಮಾತ್ರ ಮುಖ್ಯವಾಗಿರುತ್ತದೆ. ಹೀಗಾಗಿಯೇ ಸಂಸ್ಕೃತಿಗಳ ಮುಗ್ದ ಭಾವನೆಗಳು ಅಸ್ತಿತ್ವ ಮುಖಿಯಾದುವೇ ಹೊರತು ಅರ್ಥಪ್ರಧಾನ ಸ್ವಭಾವದವಲ್ಲ.

ಈ  ಸ್ಥಿತಿಯನ್ನು  ಸಂಸ್ಕೃತಿಗಳು  ಪ್ರಜ್ಞಾಪೂರ್ವಕವಾಗಿ ಭಾವಿಸಿರುವುದಿಲ್ಲ. ಹಗಲು ರಾತ್ರಿಗಳಾಗುವ ಕ್ರಿಯೆ ಜೈವಿಕ ಗಡಿಯಾರದ ಪ್ರಜ್ಞ್ನೆಯಿಂದ ತಂತಾನೆ ತಿಳಿಯುತ್ತದೆ. ಹಾಗೆಯೆ ಸಂಸ್ಕೃತಿಗಳ ಸುಪ್ತಪ್ರಜ್ಞೆಯು ಅಭೌತ ಪ್ರಮಾಣಗಳನ್ನು ಜೈವಿಕವಾಗಿಯೇ ಗ್ರಹಿಸುತ್ತದೆ. ಪ್ರಮೇಯಾತ್ಮಕವಾದ ಈ ಪರಿಯ ಗ್ರಹಿಕೆಗಳು ಕೂಡ ಜೈವಿಕ ಸಂವೇದನೆಯಿಂದಲೇ ವ್ಯಕ್ತಗೊಳ್ಳುತ್ತವೆ. ಅಭೌತ ಪ್ರಮಾಣಗಳಿಗೆ ಜನಪದ ಪರಂಪರೆಗಳು ಸ್ಪಂದಿಸಿರುವ ರೀತಿ ಧಾರ್ಮಿಕ ಸ್ವರೂಪದ್ದೇನಲ್ಲ. ವಿವರಿಸುವ ಮಟ್ಟಿಗೆ ಜನಪದ ಪರಂಪರೆಗಳು ಅಭೌತ ಪ್ರಮಾಣಗಳ ಜೊತೆ ಸ್ಪಂದಿಸಿರುತ್ತವೆ. ಜೀವಜಾಲದ ಎಲ್ಲ ವಿವರಗಳು ತಮ್ಮ ಅಸ್ತಿತ್ವವನ್ನು ಅಖಂಡ ಜೈವಿಕತೆಯ ಚಲನೆಯ ಜೊತೆಗೆ ಹೊಂದಿಸುತ್ತವೆ. ಇದು ಅಭೌತ ಪ್ರಮಾಣಗಳನ್ನು ಅರ್ಥಾನುಸಂಧಾನ ಮಾಡುವ ಇರಾದೆಯದಲ್ಲ. ವಿವರಿಸುವುದು ಅರ್ಥವಲ್ಲ. ಮುಖ್ಯವಾಗಿ ಅದು ಭಾವನಾತ್ಮಕ ಚಹರೆ ಸ್ವರೂಪದ ಸಂಬಂಧಗಳ ನೀತಿ ಆಗಿರುತ್ತದೆ. ಅರ್ಥ ಕಟ್ಟುವುದು ತರ್ಕದಿಂದ, ವಿವರ ಹುಟ್ಟುವುದು ಜೈವಿಕ ಸ್ವಭಾವದಿಂದ. ಅರ್ಥವು ವಿವರಗಳ ಹಂಗಿನದೇನಲ್ಲ. ವಿವರಗಳು, ವಿವರಣೆಗಳು, ಮುಗ್ಧ ನಿರೂಪಣೆಗಳು, ಭಾವನಾತ್ಮಕ ಅಭಿವ್ಯಕ್ತಿಗಳು ಸಂಬಂಧದ ಅನ್ವಯಿಕ ಸಾಧ್ಯತೆಗಳನ್ನೆ ಬಲವಾಗಿ ನಂಬಿರುತ್ತವೆ. ಹೀಗಾಗಿಯೇ ಸಸ್ಯ ಜಾನಪದ, ಪ್ರಾಣಿ ಜಾನಪದ, ಕೀಟ ಜಾನಪದ, ಭೌಗೋಳಿಕ ಜಾನಪದ ಮುಂತಾದ ಇಂತಹ ವಿವರಗಳು ಅರ್ಥಾನುಸಾರಿ ಚಲನೆಯ ಅನುಸಂಧಾನಕ್ಕೆ ನಿಲುಕುವುದಿಲ್ಲ. ಮನುಷ್ಯರ ಜೀವಜಾಲದ ಸಂವೇದನೆಯು ವಿವರಗಳಿಂದಲೇ ಅವ್ಯಕ್ತ ಪ್ರಮಾಣಗಳ ಜೊತೆ ಸಂಬಂಧ ಸಾಧಿಸಿಕೊಂಡಿರುತ್ತವೆ

ತರ್ಕಜ್ಞಾನವು ಸಮೀಪವಾದದ್ದು, ತರ್ಕಾತೀತ ಜ್ಞಾನವು ಬಹುದೂರದ್ದು. ವಿಕಾಸದ ದೂರ ಅನಂತವಾದದ್ದು. ಭೌತಿಕವಾದ ತಾರ್ಕಿಕ ದೂರ ತಾತ್ಕಾಲಿಕವಾದದ್ದು. ಆದ್ದರಿಂದ ಯಂತ್ರಗಳ ವೇಗ ವರ್ತಮಾನದಲ್ಲಿ ತೀವ್ರತರವಾಗಿದ್ದರೂ ಆ ವೇಗ ಅನಂತವಲ್ಲ. ಗುರಿತ್ವಾಕರ್ಷಣೆಯ ಸೆಳೆತವನ್ನು ಮೀರಿ ಹಾರುವ ವೇಗ ಕೂಡ ಅನಂತವಲ್ಲ. ಮನಸ್ಸಿನ ವೇಗ ಬಳಕಿನ ವೇಗಕ್ಕೆ ಹೊಂದುವಂತದ್ದು. ಅಂದರೆ ಮನಸ್ಸು ಜೈವಿಕ ಸ್ವಭಾವದ ಭಾಗವಾದ್ದರಿಂದಲೇ ಬೆಳಕಿನ ಚಲನೆಯ ವೇಗವಾಗಿ ಮತ್ತೊಂದು ಅಸ್ತಿತ್ವದ ತುದಿಯನ್ನು ಭಾವಿಸಬಲ್ಲದು. ಅರ್ಥೈಸುವುದಕ್ಕಿಂತ ಭಾವಿಸುವುದೇ ಜೈವಿಕತೆಯ ಮೂಲಗುಣ. ಜೈವಿಕ ದೂರವನ್ನು ಕ್ರಮಿಸಬೇಕಾದರೆ ಸಂಸ್ಕೃತಿಗಳು ಜೈವಿಕ ಸಂವೇದನೆಯ ಬಲದಿಂದಲೇ ಅದರ ವೇಗದಿಂದಲೇ ವಿಕಾಸದ ಕ್ರಮಗಳಿಗೆ ಒಳಪಡಬೇಕು. ಜನಪದ ಪರಂಪರೆಗಳಲ್ಲಿ ಇಂತಹ ಅವ್ಯಕ್ತಗುಣ ಇದೆ. ಆದಿವಾಸುಗಳಲ್ಲಂತು ಇಂತಹ ಸಂವೇದನೆಯು ದಟ್ಟ ಜೈವಿಕತೆಯಿಂದಲೆ ತುಂಬಿದೆ. ಈ ಗುಣ ತೆಳುವಾಗಿರುವುದು ನಗರೀಕೃತ ತಂತ್ರಜ್ಞಾನ ನಿಷ್ಟ ವೇಗೋತ್ಕರ್ಷದ ಸಮಾಜಗಳಲ್ಲಿ.

ಅರ್ಥ ಪ್ರಧಾನ ಸಮಾಜಗಳು ತರ್ಕಕ್ಕೆ ಸಿಲುಕಿರುತ್ತವೆ. ಅರ್ಥ ಎನ್ನುವುದು ಇದೆಯೊ ಇಲ್ಲವೊ ಎನ್ನುವುದು ಆದಿಮ ಸಮಾಜಗಳಿಗೆ ಮುಖ್ಯ ಅಲ್ಲ. ಅರ್ಥ ಇದ್ದೇ ಇದೆ ಎಂಬ ಪೂರ್ವ ತೀರ್ಮಾನದಲ್ಲೇ ಅರ್ಥವ್ಯಸನಿಗಳಾಗಿರುವ ಆಧುನಿಕ ಸಮುದಾಯಗಳು ಅರ್ಥದ ಆಚೆಯ ವಿವರಗಳ ಕಡೆ ಯೋಚಿಸುವುದೇ ಇಲ್ಲ. ವಿವರಗಳಲ್ಲಿ ತನ್ಮಯವಾಗುವ ಮೌಖಿಕ ಪರಂಪರೆಗಳು ಜೈವಿಕತೆಯ ಬೇರಿನಿಂದ ತಮ್ಮ ವರ್ತಮಾನವನ್ನು ಜೀವಿಸುತ್ತವೆ. ಅರ್ಥವು ಆಧುನಿಕತೆಯ ಅವಿಷ್ಕಾರ. ಅರ್ಥವಿಲ್ಲದೆ ಏನು ಇಲ್ಲ ಎಂಬ ಭಾವನೆಯು ವ್ಯಕ್ತಿನಿಷ್ಟ ಚಿಂತನೆಯ ಫಲ. ಜೀವಜಾಲದ ಸಂಬಂಧಗಳು ಅರ್ಥದ ಯಾವ ಗರ್ವವನ್ನೂ ತೋರಲಾರವು. ಮನುಷ್ಯಕೇಂದ್ರಿತ ಅರ್ಥಗಳು ಜೀವಜಾಲವನ್ನು ಕೂಡ ತನ್ನ ಅನುಭೋಗದಲ್ಲಿ ಬಂಡವಾಳ ಮಾಡಿಕೊಳ್ಳಬಲ್ಲವು. ಮುಗ್ದ ಜನಪದರ ಆಚಾರ ವಿಚಾರಗಳು ಭಾವ ಪ್ರಧಾನವಾದವು. ಸಂವೇದನೆಯೇ ಅವುಗಳ ಕೇಂದ್ರ. ಜೈವಿಕ ಸಂಬಂಧಗಳ ಅಸ್ತಿತ್ವವೇ ಮುಖ್ಯ ವಿಕಾಸವು ತರ್ಕಮುಖಿ ಅಲ್ಲ. ವಿಕಾಸಕ್ಕೆ ಚಲನೆಯೇ ಅತ್ಯಂತಿಕ ಗುಣ. ಚಲನೆ ನಿಂತ ಕೂಡಲೆ ವಿಕಾಸವೂ ಕೂಡ ಬೇರೊಂದು ಆಯಾಮಕ್ಕಾಗಿ ಸಿದ್ಧಗೊಳ್ಳಬೇಕಾಗುತ್ತದೆ. ಈ ಅರ್ಥದಲ್ಲಿ ಅಚಲನೆಯೂ ಮುಂದಿನ ಯಾವುದೋ ಒಂದು ಸ್ಥಿತಿಯ ಸ್ವರೂಪವೇ ಆಗಿರುತ್ತದೆ. ಜನಪದ ಪರಂಪರೆಗಳು ಅನೇಕ ಭಾವನೆಗಳನ್ನು ಕಂಡುಕೊಳ್ಳುವುದು ಇಂತಹ ಸಂವೇದನೆಯಿಂದಲೇ. ಅಂದರೆ ಚಲನೆಯ ಆಚೆಗಿನ ತರ್ಕವು ಜೈವಿಕವಾದ ಗುಣಗಳ ಆಧಾರದಿಂದಲೇ ರೂಪಾಂತರಗೊಳ್ಳುತ್ತದೆ. ಜೀವಿಗಳ ಉಗಮ ವಿಕಾಸದಲ್ಲಿ ಚಲನೆ ನಿರ್ಣಾಯಕವಾದರೂ ಅವುಗಳ ಜೈವಿಕತೆಯು ಪರಿಸರದ ಭೌತಿಕ ಅಭೌತಿಕ ಪ್ರಮಾಣಗಳಿಂದಲೇ ನಾಳಿನ ಅಸ್ತಿತ್ವವನು ವಿಸ್ತರಿಸಿಕೊಳ್ಳಲು ಸಾಧ್ಯವಾಗುವುದು. ಈ ಹಾದಿಯಲ್ಲಿ ಯಾವುದೇ ಜೀವಿಯ ಯಾವುದೇ ಸ್ಥಾಪನೆ ಕೇವಲ ಕಾಲ ಸಂಬಂಧಿಯೇ ವಿನಃ ಯಾವುದೂ ಶಾಶ್ವತ ಅಲ್ಲ.

ಜೈವಿಕ ಆಧ್ಯಾತ್ಮ

ಜನಪದ ಪರಂಪರೆಗಳು ತಮ್ಮ ವಾರ್ಷಿಕ ಆವರ್ತನವನ್ನು ಸಾಂಸ್ಕೃತಿಯಾಗಿ ರೂಪಿಸಿಕೊಂಡಿರುವುದು ಇಂತಹ ಜೈವಿಕ ಪ್ರಮಾಣಗಳ ಆಧಾರದಿಂದ. ಹಾಗಾಗಿಯೆ ಅವರ ಸಾಂಸ್ಕೃತಿಕ ಕಾಲಗಣನೆಯಲ್ಲಿ ಕಾಲಾವಕಾಶವು ಅನಂತವಾಗಿರುವುದು. ಈ ಅನಂತತೆಯು ಹಸಿರು ಸ್ವಭಾವವನ್ನು, ಸೃಷ್ಟಿಶೀಲ ಗುಣವನ್ನು ಅಂದರೆ ನಿಸರ್ಗನಿಷ್ಠ ನಡತೆಯನ್ನು ಹೊಂದಿರುತ್ತದೆ. ಜನಪದರು ಇಂತಹ ಸ್ವಭಾವಗಳನ್ನು ಅಲೌಕಿಕ ಸ್ವರೂಪದಲ್ಲಿ ಅಭಿವ್ಯಕ್ತ ಮಾಡುವರು. ಮಳೆ ಬೆಳೆಯ ಆಚರಣೆಗಳಲ್ಲಿ ಇಂತಹ ಅಂಶವನ್ನು ಗುರುತಿಸಬಹುದು. ಸಸ್ಯಶಾಸ್ತ್ರಜ್ಞರು ಹೇಳುವ ದ್ಯುತಿಸಂಶ್ಲೇಷಣಾ ವಿವರಣೆಯು ಬೇರೆಯಾದುದು. ಅದು ಜೀವಜಾಲದ ಬೇರುಗಳನ್ನು ಗ್ರಹಿಸಿ ಅರ್ಥೈಸುವಂತದ್ದಾಗಿದ್ದರೆ, ಜನಪದರು ಮಳೆಯಿಂದ ಬೆಳೆಯಾಗುವ ಕ್ರಮವನ್ನು ಜೈವಿಕ ಆಧ್ಯಾತ್ಮದಿಂದ ಭಾವಿಸುವರು. ಸೃಷ್ಟಿಯಲ್ಲಿ ಎಷ್ಟೋ ಬಾರಿ ಭಾವಿಸುವ ಪರಿಯಿಂದ ಅಸ್ತಿತ್ವದ ಸ್ವರೂಪ ಅರಿವಿಗೆ ಬರುತ್ತದೆಯೇ ವಿನಃ ಸ್ವತಃ ತರ್ಕ ಶೀಲ ಪ್ರಯೋಗ ಮಾತ್ರದಿಂದಲೇ ಎಲ್ಲವೂ ತಿಳಿದುಬಿಡುವುದಿಲ್ಲ. ಒಂದೊಂದು ಮಳೆಗೂ ಜನಪದರು ಹೆಸರಿಟ್ಟಿರುವ ಪರಿ, ಆ ಮಳೆಯ ಗುಣ, ಅದರಿಂದಾಗುವ ಭೂ ಸ್ವರೂಪದ ಪರಿಣಾಮ ಅಂತೆಯೇ ಬೆಳೆಬಿತ್ತಿ ಜೀವಜಾಲದ ಜೊತೆ ಸಾಧಿಸಿಕೊಳ್ಳುವ ಸಂಬಂಧ ಇವೆಲ್ಲವೂ ಜೀವಜಾಲದ ಧ್ಯಾನವನ್ನು ಆಧರಿಸಿಯೇ ಅನುಭವವು ಹಸಿರು ಅನುಭಾವವಾಗಿ ಜೀವಜಾಲ ಆಧ್ಯಾತ್ಮವಾಗಿ ರೂಪುಗೊಂಡಿರುತ್ತದೆ.

ಜೈವಿಕ ಆಧ್ಯಾತ್ಮ ಎಂದರೆ ಜೀವ ಜಾಲದ ಅಖಂಡ ಭಾವನೆ ಎಂದರ್ಥ. ಜೀವದ ಕೊಂಡಿಯನ್ನು ಕಂಡುಕೊಳ್ಳುವ ಧ್ಯಾನವಿದು. ಸೃಷ್ಟಿಯ ಅನಂತ ಕಾಲಾವಕಾಶವನ್ನು ಅರಿಯುವ ವಿವೇಕವಿದು. ವಿಕಾಸದ ಬಹುರೂಪಗಳ ಅಂತರ್ ಸಂಬಂಧಗಳನ್ನು ಹೊಂದಿಸಿಕೊಳ್ಳುವ ಈ ಧ್ಯಾನದಲ್ಲಿ ಪ್ರತಿಯೊಂದು ಅಸ್ತಿತ್ವವನ್ನು ಕಾಯ್ದುಕೊಳ್ಳುವ ಜೈವಿಕ ಎಚ್ಚರವೂ ಇದಾಗಿದೆ. ದೈವದ ಆಧ್ಯಾತ್ಮಿಕ ಹುಡುಕಾಟ ಒಂದು ಬಗೆಯಾದರೆ ಜೀವಜಾಲದ ಜೈವಿಕ ಆಧ್ಯಾತ್ಮಿಕ ಪರಿಯು ಮತ್ತೊಂದು ಬಗೆಯಾಗಿದೆ. ಈ ಬಗೆಯನ್ನು ಜನಪದ ಪರಂಪರೆಗಳು ತಮಗೆ ತಿಳಿದಂತೆಲ್ಲ ವೈವಿಧ್ಯ ಜೀವಜಾಲದಂತೆ ಬೆಳೆಸಿಕೊಂಡಿರುವುದು ಭಾಗಶಃ ಜೀವಜಾಲದ ವೈವಿಧ್ಯತೆಯ ಸಂವೇದನೆಯ ಪರಿಣಾಮವೇ ಆಗಿರಬಹುದು. ಇಂತಹ ವೈವಿಧ್ಯ ಪ್ರವೃತ್ತಿಯಿಂದಾಗಿಯೆ ಪರಿಸರದ ಕುರಿತಾದ ಅಭಿವ್ಯಕ್ತಿಗಳು ಕೂಡ ವೈವಿಧ್ಯತಿಯಿಂದ ಹಾಗು ಸಂಕೀರ್ಣತೆಯಿಂದ ಕೂಡಿರುವುದು. ಯಾವುದೇ ಭೂ ಪ್ರದೇಶದ ಜನಪದ ಪರಂಪರೆಗಳು ಈ ಬಗೆಗಳಿಂದ ಹೊರತಲ್ಲ. ಮರುಭೂಮಿ ಪ್ರದೇಶಗಳು ಕೂಡ ಆಯಾ ಪರಿಸರದ ಹಿನ್ನೆಲೆಗೆ ತಕ್ಕಂತೆ ಜೈವಿಕವಾದ ಆಧ್ಯಾತ್ಮವನ್ನು ರೂಢಿಸಿಕೊಂಡಿದ್ದರೆ, ನಿತ್ಯ ಹರಿದ್ವರ್ಣದ ಕಾಡಿನ ಸಮುದಾಯಗಳು ಕೂಡ ತಮಗೇ ವಿಶಿಷ್ಟವಾದ ಜೈವಿಕ ಆಧ್ಯಾತ್ಮದ ಆಚರಣೆಗಳನ್ನು ರೂಢಿಸಿಕೊಂಡಿರುತ್ತವೆ. ಇನ್ನು ಕಡಲದಂಡೆಯ ಸಮುದಾಯಗಳು ಆ ಪರಿಸರಕ್ಕೆ ತಕ್ಕದಾದ ಜೈವಿಕ ಧ್ಯಾನವನ್ನು ಮಾಡಿರುತ್ತವೆ. ಹಂಪಿ ಪರಿಸರದ ಜೀವಜಾಲವೂ ಈ ಮಾತಿಗೆ ಅನ್ಯವಲ್ಲ. ಹಂಪಿ ವಿಶ್ವವಿಖ್ಯಾತ ಚಾರಿತ್ರಿಕ ನೆಲೆಗಳಲ್ಲಿ ಒಂದು ವಿಶ್ವಪರಂಪರೆಯ ಪಟ್ಟಿಯಲ್ಲಿರುವ ಹಂಪಿಯ ಗ್ರಾಮಗಳು ಚರಿತ್ರೆ ಮತ್ತು ನಿಸರ್ಗದ ಎರಡು ವಿಶಿಷ್ಟ ಸಂಬಂಧಗಳನ್ನು ಹೊಂದಿವೆ. ವರ್ತಮಾನ ಮತ್ತು ಗತದ ಎರಡೂ ಪರಿಸರಗಳ ನೆನಪು ಇಲ್ಲಿನ ಪರಂಪರೆಗಳಿಗಿದೆ. ಜೈವಿಕ ಸಂವೇದನೆಯು ಚರಿತ್ರೆಯ ಜೊತೆ ಹೇಗೆ ಬೆಳೆದು ಬಂದಿದೆ ಎಂಬುದನ್ನು ಹಂಪಿಯ ಪರಿಸರದ ಹಿನ್ನೆಲೆಯಲ್ಲಿ ಈಗಾಗಲೇ ’ಅವ್ಯಕ್ತ ಚರಿತ್ರೆ’ ಕೃತಿಯಲ್ಲಿ ವ್ಯಾಪಕವಾಗಿ ವಿಶ್ಲೇಷಿಸಿರುವೆನು. ಹಂಪಿಯ ಜೀವಜಾಲ ಜಾನಪದದ ಈ ಸಂದರ್ಭದಲ್ಲಿ ವಿಶೇಷವಾಗಿ ಸ್ಥಳೀಯ ಜನಪದಗಳು ಹೇಗೆ ಜೈವಿಕ ಸಂಬಂಧಗಳನ್ನು ತಮ್ಮ ಅಸ್ತಿತ್ವದ ಭಾಗವಾಗಿ ರೂಢಿಸಿಕೊಂಡಿವೆ ಎಂಬುದನ್ನು ಗಮನಿಸಲಾಗಿದೆ. ಯಾವುದೇ ಭೌಗೋಳಿಕ ಪರಿಸರವು ತನಗೇ ಬೇಕಾದ ಜಾನಪದ ಅಭಿವ್ಯಕ್ತಿಗಳನ್ನು ಜೈವಿಕವಾಗಿ ಕಂಡುಕೊಂಡಿರುತ್ತದೆ. ಆ ಹಿನ್ನೆಲೆಯಿಂದ ನೋಡಿದರೆ ಹಂಪಿ ಪರಿಸರದ ಜಾನಪದದ ವೈವಿಧ್ಯ ನಿರೂಪಣೆಗಳು ದೂರದಿಂದ ಅದರ ಚರಿತ್ರೆಗೂ ಸಂಬಂಧ ಪಡುತ್ತವೆ. ಚರಿತ್ರೆ, ನಿಸರ್ಗ, ಸಮಾಜ, ವರ್ತಮಾನ ನಾಳಿನ ಅಸ್ಥಿತ್ವ ಇವೆಲ್ಲವೂ ಜೈವಿಕ ಕೊಂಡಿಗಳಾಗಿ ವ್ಯಾಪಿಸಿಕೊಳ್ಳುವ ಸಂಗತಿಗಳು. ಹಂಪಿಯ ಜೀವಜಾಲದ ಗತಕಾಲದ ವಿವರಣೆಗಳು ಈ ಕಾಲಕ್ಕೆ ವಿಶೇಶವಾಗಿ ಕೇಳಿಸದೇ ಇದ್ದರೂ ವರ್ತಮಾನದ ಪರಿಸರದ ವಿವರಗಳು ಜೈವಿಕ ಸಂವೇದನೆಯನ್ನು ಪರೋಕ್ಷವಾಗಿ ಬಿಂಬಿಸಬಲ್ಲವು.

ಹಂಪಿ ಪರಿಸರದ ಒಟ್ಟು ಜೀವಜಾಲದ ಜನಪದೀಯ ಅಂಶಗಳನ್ನು ವಿಶ್ಲೇಷಿಸುವಾಗ ಜನಪದರು ನೀಡುವ ವಿವರಗಳನ್ನಷ್ಟೇ ಮುಖ್ಯವಾಗಿ ಭಾವಿಸದೆ ಜೀವ ವಿಜ್ಞಾನಗಳು ವಿಶ್ಲೇಷಿಸುವ ಅನೇಕ ತಾತ್ವಿಕ ಸಂಗತಿಗಳನ್ನು ಕೂಡ ನಿರೂಪಣೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಜನಪದ ಪರಂಪರೆಗಳು ಹೇಗೆ ಸಂಸ್ಕೃತಿಯ ಒಳಗೆಯೇ ಜೈವಿಕ ಸ್ವಭಾವಗಳನ್ನು ಬೆಸೆದುಕೊಂಡಿರುತ್ತವೊ ಅಂತೆಯೇ ಅವುಗಳ ಜೀವನ ವಿಧಾನಗಳಲ್ಲೂ ಜೈವಿಕ ಸಂವೇದನೆಯನ್ನು ಖಡ್ಡಾಯವಾಗಿ ರೂಢಿಸಿಕೊಂಡೇ ಇರಬೇಕಾಗುತ್ತದೆ. ಹಂಪಿ ಪರಿಸರದ ಜನಪದಗಳು ಬದಲಾಗುತ್ತಿರುವ ಕಾಲಮಾನದಲ್ಲಿ ಜೈವಿಕ ಕೊಂಡಿಗಳನ್ನು ಸಡಿಲಗೊಳಿಸಿಕೊಳ್ಳುತ್ತಿವೆ ಎಂಬುದು ನಿಜವಿದ್ದರೂ ಆ ಕೊಂಡಿಯನ್ನು ಯಾವುದೇ ಜನಪದವೂ ಅಂತಿಮವಾಗಿ ಕಡಿದುಕೊಳ್ಳಲು ಸಾಧ್ಯವೇ ಇಲ್ಲ. ಜೀವಜಾಲ ಜಾನಪದ ಸಂವೇದನೆ ಮೂಲತ: ಅನುಭವಿಸಬೇಕಾದ ಸಂಗತಿಯೇ ಹೊರತು ಪ್ರಕಾರುನುಸಾರ ಅಭಿವ್ಯಕ್ತಿಸುವಂತಹ ಸಂಗತಿ ಅಲ್ಲ. ಅಂದರೆ ಜೀವಜಾಲ ಸ್ವಭಾವವು ಅನುವಂಶಿಕವಾದ ರೀತಿಯಲ್ಲೆ ಅನುಭವಕ್ಕೆ ಬರಬೇಕಾದ ಸಂಗತಿಯೇ ಹೊರತು ಅದು ಕಲಾ ಪ್ರಕಾರಗಳ ರೀತಿ ಅಭಿವ್ಯಕ್ತಿಯ ಒಂದು ವಿಧಾನವನ್ನು ಆಯ್ಕೆ ಮಾಡಿಕೊಂಡತಲ್ಲ. ಹೀಗಾಗಿಯೆ ಜೀವಜಾಲ ಜಾನಪದ ಸಂವೇದನೆಯು ಜೀವನ ವಿಧಾನದ ಎಲ್ಲ ಸಂಗತಿಗಳಲ್ಲು ಅಡಕವಾಗಿರುವ ಜೈವಿಕ ಸ್ವಭಾವ. ಇದರ ಆಧಾರದಲ್ಲಿಯೇ ಆಹಾರ ಸರಪಳಿ ಆಗಲಿ, ಸಾಮಾಜಿಕ ರಚನೆ ಆಗಲಿ, ಸಾಂಸ್ಕೃತಿಕ ಅನನ್ಯತೆಗಳಾಗಲಿ, ವರ್ತಮಾನದ ಅಸ್ತಿತ್ವವಾಗಲಿ ಸಾಧ್ಯವಾಗಿರುವುದು. ಆದ್ದರಿಂದಲೆ ಜೀವಜಾಲ ಜಾನಪದವು ಸಂವೇದನಾಶೀಲ ಜೀವನ ವಿಧಾನವೇ ಹೊರತು ಕೇವಲ ಅದೊಂದು ಸಂಗತಿ ಮಾತ್ರವಲ್ಲ. ಜೀವ ವಿಕಾಸದ ಅಸ್ತಿತ್ವದ ಚಲನೆಯನ್ನು ಹೀಗಾಗಿಯೇ ನಿರ್ಧಿಷ್ಟ ಪಡಿಸಲಾಗದು. ಹುಟ್ಟುಸಾವಿನ ನಿರಂತರ ಕೊಂಡಿಗಳ ಅಂತರ್ಗತ ಸಂವೇದನೆಯಾಗಿಯೇ ಜೀವಜಾಲ ಜಾನಪದವನ್ನು ಗ್ರಹಿಸಬೇಕು.

ಜೈವಿಕ ಚ್ರರಿತ್ರೆ

ಹಂಪಿ ಪರಿಸರವು ಪ್ರಾಚೀನ ಕರ್ನಾಟಕದ ಸಮುದಾಯಗಳ ಅಸ್ತಿತ್ವದಲ್ಲಿ ಪ್ರಮುಖ ಪಾತ್ರ ವಹಿಸಿದ ನೆಲೆ. ಕರ್ನಾಟಕ ಹಾಗೂ ಆಂಧ್ರ ಪ್ರದೇಶಗಳ ಜೊತೆಗೆ ಮಹಾರಾಷ್ಟ್ರದ ಅನೇಕ ಆದಿಮ ಸಮುದಾಯಗಳ ಪಶುಪಾಲಕ ಜೀವನ ಕ್ರಮಕ್ಕೆ ತಕ್ಕ ನೈಸರ್ಗಿಕ ಪರಿಸರವನ್ನು ಒದಗಿಸಿ ಕೊಟ್ಟಿದ್ದ ಹಂಪಿಯು ತನ್ನ ಗತಕಾಲದ ಜೈವಿಕ ಲಕ್ಷಣಗಳನ್ನು ಆ ಬಗೆಯ ಜೀವನ ವಿಧಾನಗಳನ್ನು ಈಗಲೂ ಪರೋಕ್ಷವಾಗಿ ಉಳಿಸಿಕೊಂಡು ಬಂದಿದೆ. ಅವ್ಯಕ್ತವಾಗಿರುವ ನೈಸರ್ಗಿಕ ಸಂಬಂಧಗಳು ಹೇಗೆ ಚರಿತ್ರೆಯ ನಿರ್ಮಾಣದಲ್ಲಿ ಸಂಸ್ಕೃತಿಯ ಸ್ವರೂಪದಲ್ಲಿ, ಜಾನಪದದ ರೀತಿ ನೀತಿಯಲ್ಲೆ, ಸಾಮಾಜಿಕ ರಚನೆಯ ಪ್ರಕ್ರಿಯೆಯಲ್ಲಿ ಜೀವಜಾಲದ ಚಾರಿತ್ರಿಕ ನಿರೂಪಣೆಗಳಲ್ಲಿ ಹಾಗೂ ಪರಿಸರ ಸಂಬಂಧಿ ಕ್ರಮಗಳಲ್ಲಿ ವ್ಯಕ್ತವಾಗಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು. ಮೌಖಿಕ ಪರಂಪರೆಗಳು ಮಧ್ಯಕಾಲೀನ ಸಮಾಜಗಳ ಲೌಖಿಕದ ಅಭಿವ್ಯಕ್ತಿಗಳು. ಅವು ಪರಿಪೂರ್ಣವಾದ ಮುಕ್ತವಾದ ಸಹಜ ಅಭಿವ್ಯಕ್ತಿಗಳಲ್ಲ. ಅಂಕುಷದಿಂದ ವ್ಯಕ್ತವಾಗುವ ಎಲ್ಲ ಬಗೆಯ ಸಾಮಾಜಿಕ ಜಾನಪದದ ಅಭಿವ್ಯಕ್ತಿಗಳು ತಮ್ಮ ಸಹಜ ಅಭಿವ್ಯಕ್ತಿಗಳನ್ನು ತಮಗೆ ತಾವೇ ತುಂಡರಿಸಿಕೊಂಡು ವ್ಯಕ್ತವಾಗಿವೆ. ಆದರೆ ನಿಸರ್ಗಕ್ಕೆ ಸಂಬಂಧಿಸಿದ ಅಭಿವ್ಯಕ್ತಿಗಳಲ್ಲಿ ಮಾತ್ರ ಗಾಢವಾದ ಭಾವನಾತ್ಮಕ ಸಂಬಂಧಗಳನ್ನು ವ್ಯಕ್ತ ಪಡಿಸಲು ಸಾಧ್ಯವಾಗಿದೆ. ಕಾವ್ಯದಲ್ಲಿ ವಾಸ್ತವವನ್ನು ಹಾಡುವುದಕ್ಕಿಂತಲೂ ಹೆಚ್ಚು ಸ್ವಾತಂತ್ರ್ಯ ಜನಪದರಿಗೆ ನಿಸರ್ಗದ ಆರಾಧನೆಯಲ್ಲಿ ಸಾಧ್ಯವಾಗಿದೆ.

ಹಂಪಿ ಪರಿಸರದ ನಿಸರ್ಗಾರಾಧನೆಯು ಆದಿಮದ ನೆನಪಿನಿಂದಲೇ ವರ್ತಮಾನದ ಪರಿಸರದ ಜೊತೆ ಬೆಸುಗೆಯನ್ನು ಮಾಡಿಕೊಂಡಿದೆ. ಯಾವುದೇ ಒಂದು ನಿರ್ದಿಷ್ಟ ಪರಿಸರವು ತನಗೇ ವಿಶಿಷ್ಟವಾಗುವ ಸಾಮಾಜಿಕ ಚರಿತ್ರೆಯನ್ನು ಜೈವಿಕವಾಗಿಯೇ ಹೊಂದಿರುತ್ತದೆ. ಆ ಸಮಾಜಗಳು ಕೂಡ ಆ ನಿರ್ದಿಷ್ಟ ಭೂ ವಲಯವನ್ನು ತಮಗೆ ಬೇಕಾದಂತೆ ಹೊಂದಿಸಿಕೊಂಡಿರುತ್ತವೆ. ನಿಸರ್ಗ ಚರಿತ್ರೆ ಹಾಗೂ ಸಮಾಜ ಮೂರೂ ಅವಿನಾಭಾವ ಸಂಬಂಧದಿಂದಲೇ ವಿಕಾಸವಾಗಿರುತ್ತವೆ. ನಿಸರ್ಗ ಕೂಡ ತನಗೆ ತಾನೇ ಎಲ್ಲವನ್ನು ರೂಪಿಸಿಕೊಳ್ಳಲಾಗದು. ಅದಕ್ಕೆ ಅದರದೇ ಜೀವಜಾಲದ ಸಂಬಂಧವೂ ಮುಖ್ಯ. ಸಮಾಜಗಳು ಈ ದಿಸೆಯಲ್ಲಿ ನಿಸರ್ಗದ ಭಾಗವಾಗಿಯೆ ವಿಕಾಸವಾಗಿರುತ್ತವೆಯೆ ಹೊರತು ಅವುಗಳೇ ಸ್ವಯಂ ಶಕ್ತಿಶಾಲಿಯಾಗಿ ಬೆಳೆಯಲಾರವು. ಪರಿಸರವೇ ಸಮಾಜಗಳ ಮೂಲ. ನಿಸರ್ಗವೇ ಸಂಸ್ಕೃತಿಯಾಗಿ ರೂಪಾಂತರಗೊಳ್ಳುವುದು. ಜನಪದರು ನಿಸರ್ಗವನ್ನು ತಮಗೆ ಬೇಕಾದಂತೆ ಬೆಳೆಸುತ್ತಾ ಆ ನಿಸರ್ಗದ ಅಗತ್ಯಕ್ಕೆ ತಕ್ಕಂತೆಯೂ ಚರಿತ್ರೆಯನ್ನು ಹೊಂದಾಣಿಕೆ ಮಾಡಿಕೊಳ್ಳುತ್ತಾ ಬಂದರಿಂದ ಇನ್ನೊಂದು ಪಡೆದುಕೊಳ್ಳುತ್ತಾ ಬಂದಿದ್ದಾರೆ. ಇದರಿಂದಾಗಿಯೆ ವಿಕಾಸದಲ್ಲಿ ಅನೇಕ ಮಾನವ ಮಾರ್ಪಾಡುಗಳು ಕೂಡ ಯಶಸ್ವಿಯಾಗಲು ಸಾಧ್ಯವಾಗಿರುವುದು. ಪಶುಪಾಲಕ ಸಮಾಜಗಳು ಕೃಷಿ ಸಮಾಜಗಳಾಗಿ ರೂಪಾಂತರಗೊಳ್ಳುವ ಪ್ರಕ್ರಿಯೆಯಲ್ಲಿ ನಿಸರ್ಗ ಮತ್ತು ಸಮಾಜಗಳ ನಡುವೆ ಅನೇಕ ಬಗೆಯ ಜೈವಿಕ ಒಪ್ಪಂದಗಳು ಆಗಿವೆ. ಈ ಬಗೆಯ ಒಪ್ಪಂದಗಳ ಅನುಸಂಧಾನವೇ ಅಭಿವ್ಯಕ್ತಿಯೇ ಅಳವಡಿಕೆಯೇ ಜೀವಜಾಲ ಜಾನಪದ. ಇದು ಪ್ರತಿಯೊಂದು ಜನಪದಗಳ ಲೋಕದೃಷ್ಟಿಯಲ್ಲಿ ತಾತ್ವಿಕವಾಗಿ ವ್ಯಕ್ತವಾಗುತ್ತಲೆ ಇರುತ್ತದೆ. ಜನಪದರು ಪರಿಸರವನ್ನು ಕೇವಲ ಹಸಿರು ರೂಪದಿಂದ ಮಾತ್ರ ಗ್ರಹಿಸುವುದಿಲ್ಲ. ಭೂಮಿ ಆಕಾಶದ ಸರ್ವಚೇತನದ ಎಲ್ಲ ದೃಷ್ಠಿಗಳಿಂದಲೂ ಪರಿಸರವನ್ನು ಭಾವಿಸಿರುತ್ತಾರೆ. ಹೀಗಾಗಿ ಅಖಂಡ ಜೈವಿಕತೆಯು ಎಲ್ಲ ಪ್ರದೇಶಗಳ ಜನಪದಗಳಿಗೂ ಸಮಾನವಾಗಿರುತ್ತದೆ. ಸಾರ್ವತ್ರಿಕವಾದ ಇಂತಹ ಭಾವವು ಕೇವಲ ಸ್ಥಳೀಯತೆಯಲ್ಲಿ ಮಾತ್ರ ವ್ಯತ್ಯಾಸವಾಗಿದ್ದು ಉಳಿದಂತೆ ತಮ್ಮ ಅಖಂಡತೆಯಲ್ಲಿ ಭೂಮಿಯ ಮೇಲಿನ ಎಲ್ಲ ಪರಿಸರಗಳಲ್ಲು ಸಾಮ್ಯತೆಯನ್ನು ಕಾಣಬಹುದು.

ಜೀವಜಾಲ ಪರಿಸರವು ಜೈವಿಕ ಸಂಪರ್ಕವನ್ನು ಆದಿಯಿಂದಲೂ ತನಗೆ ಬೇಕಾದಂತೆ ರೂಪಿಸಿಕೊಂಡು ಬಂದಿದೆ. ಜನಪದರು ಈ ತತ್ವವನ್ನು ಜೀವ ಪರಿಸರದ ಅಗತ್ಯವಾಗಿಯೇ ಗ್ರಹಿಸಿದ್ದಾರೆ. ನಿಸರ್ಗದ ಆರಾಧನೆಯಲ್ಲಿ ಸಾಮ್ಯತೆಯು ಒಂದು ಜೈವಿಕ ಸಾಧ್ಯತೆಯೇ ಹೊರತು ಮಿತಿ ಅಲ್ಲ. ಜನಪದರು ತಮ್ಮ ಜೀವನ ವಿಧಾನದಲ್ಲಿ ಜೀವಜಾಲವನ್ನು ತಮ್ಮ ಅಸ್ತಿತ್ವದ ಭಾಗವಾಗಿಯೇ ತಿಳಿಯುವುದು ಇಂತಹ ಜೈವಿಕ ಸಾಧ್ಯತೆಯಿಂದಲೇ ಜೀವ ವೈವಿಧ್ಯತೆಯು ಜೀವಜಾಲದ ಅನಿವಾರ್ಯತೆ ಹೇಗೊ ಹಾಗೆಯೇ ಜೀವಜಾಲದ ಸಾಮ್ಯತೆಯೂ ಅನಿವಾರ್ಯವಾದ ಜೈವಿಕ ಗುಣ. ಸಾಮ್ಯತೆಯು ಜೀವ ವೈವಿಧ್ಯತೆಯ ಸರಪಳಿಯ ಸಂಬಂಧವನ್ನು ಹೇಳುತ್ತಿದೆ. ವಿಭಿನ್ನತೆ ಕೂಡ ಸಾಮ್ಯತೆಯಿಂದ ಅನ್ಯವಾದ ಮತ್ತೊಂದು ಸ್ವರೂಪ. ಜೀವಜಾಲದ ಸಾಮ್ಯತೆಯ ಹಾಗೆಯೇ ಜನಪದ ಪರಂಪರೆಗಳು ಕೂಡ ವಿಭಿನ್ನ ಸ್ಥಳೀಯತೆಯಲ್ಲಿ ವೈವಿಧ್ಯತೆಯನ್ನು ಸಾಧಿಸಿದ್ದರೂ ಆ ಎಲ್ಲ ಅನನ್ಯತೆಗಳಿಗೂ ಸಾಮ್ಯತೆಯ ಕೊಂಡಿ ಜೈವಿಕವಾಗಿ ಬೆಸುಗೆ ಆಗಿರುತ್ತದೆ. ಈ ಹಿನ್ನೆಲೆಗಳಿಂದ ನೋಡಿದರೆ ಜೀವಜಾಲ ಜಾನಪದವು ಹೇಗೆ ಸಾರ್ವತ್ರಿಕವಾದ ವಿಕಾಸ ಒಪ್ಪಂದಗಳನ್ನು ನಿಸರ್ಗದ ಜೊತೆ ಮಾಡಿಕೊಂಡಿದೆ ಎಂಬುದು ಮುಖ್ಯವಾದ ಸಂಗತಿ. ಸಂಸ್ಕೃತಿಗಳ ವಿಕಾಸದಲ್ಲಿಯೇ ಜೀವಜಾಲ ನಿಸರ್ಗಾರಾಧನೆಗಳು ಮೈದಳೆದಿರುವುದು. ಜಗತ್ತಿನ ಉದ್ದಕ್ಕೂ ಎಲ್ಲ; ಜನಪದಗಳು ವಿಶೇಷವಾಗಿ ಪಶುಪಾಲಕ ಹಾಗು ಆದಿವಾಸಿ ಸಮುದಾಯಗಳು ಜೀವಜಾಲ ಜಾನಪದ ತತ್ವಗಳ ನಿರಂತರ ಅನುಸಂಧಾನದಲ್ಲೇ ಅಸ್ತಿತ್ವವನ್ನು ವಿಸ್ತರಿಸಿರುವುದು. ಆ ಮಟ್ಟಿಗೆ ಜೀವಜಾಲ ಜಾನಪದದ ವೈವಿಧ್ಯವಾದ ಸ್ಥಳೀಯ ಅಧ್ಯಯನಗಳು ನಿಸರ್ಗ ವಿಜ್ಞಾನಗಳ ಅರಿವಿಗೆ ಉಪಯುಕ್ತ ಜೈವಿಕ ಮಾಹಿತಿಗಳನ್ನು ಜೋಡಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಹಂಪಿಯ ಜೀವಜಾಲ ಜಾನಪದವು ಒಂದು ಕಿರುಯತ್ನ. ನಿಸರ್ಗದ ಸಂಬಂಧಗಳಿಂದ ದೂರ ಸರಿಯುತ್ತಿರುವ ಕಾಲಮಾನದ ಒತ್ತಡಗಳಲ್ಲಿ ಜೈವಿಕ ವಿವರಗಳು ನೆನಪಿನ ಕೋಶಗಳಲ್ಲಿ ಮಸುಕಾಗುವುದು ಸಹಜ. ಇಂತಹ ವೇಗದ ಕಾಲದಲ್ಲಿ ಜನಪದರು ಜತನವಾಗಿ ಆ ಎಲ್ಲ ನೆನಪುಗಳಿಂದಲೇ ಬದುಕಬೇಕು ಎಂದು ಒತ್ತಾಯಿಸುವುದು ಕೂಡ ಕಠಿಣ. ಪರಿಸರವನ್ನು ತನ್ನ ಅನುಕೂಲಕ್ಕಾಗಿ ಅಭಿವೃದ್ಧಿಯ ಹೆಸರಿನಲ್ಲೆ ದುರುಪಯೋಗ ಪಡಿಸಿಕೊಳ್ಳುವುದು ವಿಪರೀತವಾಗುತ್ತಿರುವಾಗ ಜನಪದರು ಮಾತ್ರ ಪರಿಸರದ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಲಾಗದು. ಆದರೂ ಈಗಲೂ ಜನಪದರೇ ನಿಸರ್ಗದ ಸಂಬಂಧಗಳನ್ನು ವಿಶೇಷವಾಗಿ ಉಳಿಸಿಕೊಂಡಿರುವುದು. ವರ್ತಮಾನದ ಜಾನಪದ ಕಥನಗಳೇ ಬೇರೆಯಾಗಿದ್ದು ಅವು ಗತಕಾಲದ ಜೈವಿಕತೆಯನ್ನು ವಿಸ್ತರಿಸುವಲ್ಲಿ ಅನೇಕ ಬಗೆಯ ತೊಡಕುಗಳನ್ನು ಎದುರಿಸುತ್ತಿವೆ. ಜನಪದ ಪರಂಪರೆಗಳನ್ನು ರೂಪಿಸಿರುವುದು ಮತಧರ್ಮಗಳಲ್ಲೇ. ನಿಸರ್ಗವೇ ಆಯಾ ಜೀವಜಾಲ ಪರಿಸರವೇ ಜನಪದ ಸಮಾಜಗಳು ಬೆಳೆಸಿರುವುದು. ನಿಸರ್ಗದ ಆರಾಧನೆಗಳೆಲ್ಲವೂ ಜೈವಿಕ ಆಧ್ಯಾತ್ಮವನ್ನೇ ಧ್ವನಿಸುತ್ತಿದ್ದು ಜೀವವಿಕಾಸದ ಒಪ್ಪಂದದ ಸಂಬಂಧಗಳನ್ನು ಸಾಂಕೇತಿಕವಾಗಿ ಆಚರಿಸುತ್ತಿವೆ.

ವಿಶ್ವಾತ್ಮಕ ಜೈವಿಕತೆ

ಈ ಬಗೆಯ ಜೈವಿಕ ಸಂಗತಿಗಳನ್ನೆಲ್ಲ ಹಂಪಿ ಪರಿಸರದ ಸಾಮಾಜಿಕ, ಸಾಂಸ್ಕೃತಿಕ ಸಂದರ್ಭಗಳಿಂದ ಅರಿಯುವುದು ಸ್ಥಳೀಯವಾದ ಜೈವಿಕ ಸಂಬಂಧಗಳ ವೈವಿಧ್ಯತೆಯನ್ನು ವಿಶ್ವಾತ್ಮಕವಾಗಿಯೂ ಚರ್ಚಿಸಿದಂತಾಗುತ್ತದೆ. ಬಹುಬಗೆಯ ಜೀವಜಾಲ ಜಾನಪದ ನಿರೂಪಣೆಗಳು ಆಯಾ ಪ್ರದೇಶಕ್ಕೆ ತಕ್ಕಂತೆ ವಿಭಿನ್ನವಾಗಿರುವುದು ಸಹಜವೇ. ಆದರೆ ಈ ವೈವಿಧ್ಯತೆಯನ್ನೆಲ್ಲ ಕೂಡಿಸುವ ಜೈವಿಕ ಸಂವೇದನೆಯ ನಿರೂಪಣೆಗಳು ಕೂಡ ನಾಳಿನ ಜೀವಜಾಲ ತಿಳುವಳಿಕೆಗೆ ಅಗತ್ಯವಾಗಿರುತ್ತವೆ. ಜೈವಿಕ ಸಂಬಂಧ ಭಾಷೆಯನ್ನು ಮೀರಿದ್ದುದು. ಸ್ಥಳೀಯವಾದ ಒಂದು ಜೈವಿಕ ವಿವರದ ಆಚೆ ತುದಿಯ ಕುಡಿಯು ಜಗತ್ತಿನ ಇನ್ನಾವುದೊ ಜೈವಿಕ ವಿವರದ ಜೊತೆ ಸಂಬಂಧ ಸಾಧಿಸಿಕೊಂಡಿರುತ್ತದೆ. ಇದು ಭೂಮಿಯ ಮೇಲಿನ  ಯಾವುದೋ ಒಂದು ಮೂಲೆಯ ಆಹಾರ ಧಾನ್ಯವು ಇನ್ನಾವುದೊ ಗೋಲದ ಮಾನವರ ಅಸ್ತಿತ್ವದ ಆಹಾರವಾಗಿ ಮಾರ್ಪಟ್ಟಿರುವಂತೆ ಜೈವಿಕ ಬೇರುಗಳು ಎಲ್ಲಿಂದೆಲ್ಲಿಗೋ ಚಾಚಿಕೊಂಡಿರುತ್ತದೆ. ಜೀವಜಾಲ ಜಾನಪದದ ಅವ್ಯಕ್ತ ಸಂಗತಿಗಳು ಹೀಗೆಯೇ ಎಲ್ಲಿಂದಲೋ ಹುಟ್ಟಿ ಎಲ್ಲೆಲ್ಲಿಗೋ ವ್ಯಾಪಿಸಿಕೊಳ್ಳುವಂತೆ ವಿಶ್ವಾತ್ಮಕ ಜೈವಿಕತೆಯ ಸಂಬಂಧಗಳ ಕಡೆಗೆಯೇ ತುಡಿಯುತ್ತಿರುತ್ತವೆ. ಹಂಪಿ ಪರಿಸರದ ಜೀವಜಾಲ ಜಾನಪದದ ಮೇಲುನೋಟದಲ್ಲಿ ಇಂತಹ ದೂರಗಾಮಿ ಸಂಗತಿಗಳು ಕಾಣದಿದ್ದರೂ ಅಂತರ್ಯದಲ್ಲಿ ಅವು ಬೆಸುಗೆಯಾಗಿರುತ್ತವೆ. ಭೂಖಂಡಗಳು ಈಗ ಬೇರೆ ಬೇರೆಯಾಗಿದ್ದರೂ ಭೂಮಿ ಒಂದೇ ಆಗಿ ವಿಕಾಸಗೊಂಡಿರುವುದರಿಂದ ಜೈವಿಕ ಸಂಬಂಧಗಳು ಎಲ್ಲ ಜನಪದಗಳಿಗೂ ವೈವಿಧ್ಯ ರೂಪದಲ್ಲಿ ಹೊಂದಿಕೆಯಾಗುತ್ತವೆ. ಜೀವಜಾಲದ ಎಷ್ಟೋ ಸಂಬಂಧಗಳು ಅಳಿವಿನ ಅಂಚಿಗೆ ಸರಿಯುತ್ತಿರುವ ಈ ಕಾಲಮಾನದಲ್ಲಿ ಜೀವಜಾಲ ಜಾನಪದದ ಅಧ್ಯಯನವನ್ನು ವಿಶೇಷವಾಗಿ ಸಾರ್ವತ್ರಿಕವಾಗಿ ವಿಸ್ತರಿಸಿಕೊಳ್ಳಬೇಕಾಗಿದೆ. ಹಾಗೆ ನೋಡಿದರೆ ಇಂತಹ ಸ್ಥಳೀಯತೆಯ ಜೀವ ವೈವಿಧ್ಯದ ವಿವರಗಳಿಂದಲೇ ಅಖಂಡವಾದ ಸಾರ್ವತ್ರಿಕವಾದ ಸಾಮಾಜಿಕ ಮೌಲ್ಯಗಳು ರೂಪುಗೊಂಡಿರುವುದು. ಹಂಪಿ ಪರಿಸರದ ಜೀವಜಾಲ ಜಾನಪದ ಕೂಡ ಇಂತಹ ವಿಚಾರಗಳಿಗೆ ಪೂರಕವಾಗಿ ಜೈವಿಕ ಸಂಬಂಧಗಳನ್ನು ದಾರಣ ಮಾಡಿಕೊಂಡಿರುವುದು ಮಹತ್ವದ್ದಾಗಿದೆ.

ಹಂಪಿ ಪರಿಸರದ ಪಶುಪಾಲಕ ಸಂಸ್ಕೃತಿಯ ಅವ್ಯಕ್ತ ಸಂಬಂಧಗಳನ್ನು ಅದರ ಜೀವಜಾಲದ ಜಾನಪದದಿಂದ ಪರಿಭಾವಿಸಬಹುದು. ಜಾನಪದ ಪರಂಪರೆಯಲ್ಲಿ ಜೀವಜಾಲಕ್ಕೆ ವಿಶೇಷ ಸ್ಥಾನವಿದೆ. ಪರಿಸರ ಜಾನಪದ ಎನ್ನುವ ವಿಶಾಲ ವ್ಯಾಪ್ತಿಯಲ್ಲಿ ಜನಪದರ ಜೀವಜಾಲದ ತಿಳುವಳಿಕೆಯನ್ನು ಗ್ರಹಿಸಬಹುದು. ಪರಿಸರವನ್ನು ಅದರ ಜೀವಜಾಲದ ಸಂಬಂಧದಿಂದ ಅರ್ಥಮಾಡಿಕೊಳ್ಳಲು ವಿವೇಚಿಸಿದ್ದರ ಪರಿಣಾಮವೇ ಪರಿಸರ ಜಾನಪದ. ಮನುಷ್ಯರು ಉಗಮ ವಿಕಾಸದ ಉದ್ದಕ್ಕೂ ನಿಸರ್ಗದ ಜೊತೆ ಮುಖಾಮುಖಿಯಾಗಿ ಪಡೆದುಕೊಂಡ ಎಲ್ಲ ಅನುಭವಗಳು ಪರಿಸರವನ್ನು ಅರ್ಥೈಸುವ ರೀತಿಯನ್ನೆ ಬಿಂಬಿಸುತ್ತವೆ. ಈ ನಿಸರ್ಗದಲ್ಲಿ ತನ್ನ ಸ್ಥಾನ ಯಾವುದು. ಇದರ ಜೊತೆ ತನ್ನ ಸಂವಹನ ಹೇಗೆ, ಈ ಜೀವ ಪರಿಸರದ ವೈವಿಧ್ಯತೆಯಲ್ಲಿ ತಾನು ಬದುಕಿ ಉಳಿಯಬೇಕಾದರೆ ಮಾಡಬೇಕಾದ ಉಪಾಯಗಳು ಯಾವುವು ಎಂಬ ಸುದೀರ್ಘ ಚಿಂತನೆ, ಹೋರಾಟ, ಒಪ್ಪಂದಗಳು ಸಂಸ್ಕೃತಿಗಳಲ್ಲಿ ವ್ಯಕ್ತವಾಗಿವೆ. ಮಾನವ ವಿಕಾಸದ ಅಖಂಡ ನೈಸರ್ಗಿಕ ಸಂಬಂಧದ ಅಭಿವ್ಯಕ್ತಿಯೆ ಜೀವಜಾಲ ಜಾನಪದ. ಜೀವಜಾಲದ ನಿರಂತರ ಹೊಂದಾಣಿಕೆಯಿಂದಲೇ ನಾಗರೀಕತೆಗಳು ಬೆಳೆದಿರುವುದು. ಬೇಟೆ ಸಂಸ್ಕೃತಿ, ಪಶುಪಾಲಕ ಸಂಸ್ಕೃತಿ, ಕೃಷಿ ಸಂಸ್ಕೃತಿ, ಕೈಗಾಗಿಕೆ ಸಂಸ್ಕೃತಿ ಇವೆಲ್ಲವೂ ನಿಸರ್ಗ ಸಂಬಂಧಿ ಚಟುವಟಿಕೆಗಳು ಹಾಗು ಮಾನವರ ಸಾಮಾಜಿಕ ರಚನೆಯ ಸ್ವರೂಪವೇ ಆಗಿವೆ. ಒಂದಲ್ಲ ಒಂದು ಬಗೆಯಲ್ಲಿ ಜೀವಜಾಲದ ಸಂಪತ್ತನ್ನು ಆಶ್ರಯಿಸಿಯೆ ಯಾವುದೆ ಕಾಲದ ಸಮಾಜವು ಬದುಕುಳಿಯಲು ಸಾಧ್ಯವಾಗುವುದು. ತಂತ್ರಜ್ಞಾನದ ಬಲ ಎಷ್ಟೇ ಉನ್ನತವಾಗಿದ್ದರೂ ಮನುಷ್ಯ ತಂತ್ರಜ್ಞಾನವನ್ನೆ ಆಹಾರ ಎಂದು ಸೇವಿಸಿ ಬದುಕಲಾಗದು. ಜೀವಜಾಲದ ವಿಶ್ವಾತ್ಮಕ ಸಂಬಂಧವಿಲ್ಲದೆ ಮನುಷ್ಯ ಸಮಾಜ ಉಳಿಯಲಾರದು.

ಪಶುಪಾಲಕ ಜೀವಜಾಲ

ಹಂಪಿಯ ಜೀವಜಾಲ ಜಾನಪದವನ್ನು ಪಶುಪಾಲಕ ಸಂಸ್ಕೃತಿಯಿಂದಲೇ ನೋಡಬೇಕಾಗುತ್ತದೆ. ಪ್ರಧಾನವಾಗಿ ಪಶುಪಾಲಕ ಸಮಾಜವು ಜೀವಜಾಲವನ್ನೆ ಜೀವನ ವಿಧಾನವಾಗಿ ಕಂಡಿತ್ತು. ಬೇಟೆಯ ಕಠಿಣ ಜೀವನಕ್ಕಿಂತ ಬೇಟೆಗೆ ಒಳಪಡಬಹುದಾದ ಕೆಲವು ಸುಲಭ ಪ್ರಾಣಿಗಳನ್ನು ಪಳಗಿಸಿ ಅವುಗಳನ್ನೆ ಸಂಪತ್ತನ್ನಾಗಿ ಪರಿವರ್ತಿಸಿಕೊಳ್ಳುವುದು ಆದಿ ಹಂಪಿಯ ಪಶುಪಾಲಕ ಜನಗಳಿಗೂ ಕಂಡಿದೆ. ಹಾಗಾಗಿಯೇ ಹಂಪಿ ಪರಿಸರದಲ್ಲಿ ಪಶುಪಾಲಕ ಸಮುದಾಯಗಳು ವಿಶೇಷವಾಗಿ ಬೆಳೆದಿರುವುದು. ನೈಸರ್ಗಿಕ ಪರಿಸರ ಕೂಡ ಇಂತಹ ಪಲ್ಲಟಕ್ಕೆ ಅವಕಾಶ ಮಾಡಿದೆ. ಎಲ್ಲಿ ಆಹಾರದ ಅಪರಿಮಿತ ಅವಕಾಶ ಸಾಧ್ಯವೋ ಅಂತಲ್ಲೆಲ್ಲ ಪಶುಪಾಲಕ ಸಂಸ್ಕೃತಿಗಳು ಫಲವತ್ತಾಗಿ ಬೆಳೆದೆವೆ. ಪಶು ಆಹಾರದ ಸಾರ್ವಭೌಮತ್ವಕ್ಕೆ ಉಂಟಾದ ಪೈಪೋಟಿಯಲ್ಲಿ ಯಶಸ್ವಿಯಾದ ಸಮುದಾಯಗಳು ಮಾತ್ರ ಹಂಪಿ ಪರಿಸರದಲ್ಲಿ ಬೇಡ, ಗೊಲ್ಲ, ಕುರುಬ ಇತರೆ ಸಮುದಾಯಗಳಾಗಿ ಗುರುತಿಸಿಕೊಂಡವು. ಈ ಪೈಪೋಟಿಯಲ್ಲಿ ಗೆಲ್ಲಲಾಗದ ಸಮುದಾಯಗಳು ಅಲೆಮಾರಿಯಾಗಿ ಚದುರಿ ಹೋದವು. ಹಾಗೆ ಚದುರಿದ ಬೇಟೆ ಸಮುದಾಯಗಳು ಅಲೆಮಾರಿಯಾಗಿ ಉಪ ವೃತ್ತಿಗಳನ್ನು ಕಂಡುಕೊಂಡವು. ಅವುಗಳು ಅತ್ತ ಪೂರ್ಣ ಬೇಟೆ ಸಂಸ್ಕೃತಿಯನ್ನೂ ಉಳಿಸಿಕೊಳ್ಳಲಾಗದೆ ಇತ್ತ ಪಶುಪಾಲಕ ಸಮಾಜವಾಗಿಯಾ ಬೆಳೆಯಲಾಗದೆ ಅತಂತ್ರ ಸ್ಥಿತಿಯಲ್ಲಿ ಅಲೆಮಾರಿಗಳಾಗಿ ಹೋದವು. ಜೀವಜಾಲದ  ಸಂಬಂಧವನ್ನು ಗಾಢವಾಗಿ ವಿಸ್ತರಿಸಿಕೊಳ್ಳಲು ಅನೇಕ ಭಗ್ನ ಅಲೆಮಾರಿಗಳಿಗೆ ಸಾಧ್ಯವಾಗಲಿಲ್ಲ. ಹಂಪಿ ಪರಿಸರಕ್ಕೆ ಪ್ರತಿವರ್ಷ ಬಂದು ಹೋಗುವ ಪಶುಪಾಲಕ ಸಮುದಾಯಗಳು ನಿಸರ್ಗದ ಅವಲಂಬನೆಯಲ್ಲಿ ಪಶು ಸಂಪತ್ತನ್ನು ಬೆಳೆಸುವ ಕ್ರಮ ಬೇರೆಯಾಗಿತ್ತು. ಆದರೆ ಅಲೆಮಾರಿ ಸಮುದಾಯಗಳು ಪಶುಸಂಪತ್ತಿನಿಂದ ವಂಚಿತವಾದ ಮೇಲೆ ಅವು ನಿಸರ್ಗದ ಕಳಚಿದ ಕೊಂಡಿಯಂತೆ ದೂರ ದೂರ ಸರಿದಿವೆ. ಈಗಲೂ ಹಂಪಿ ಪರಿಸರಕ್ಕೆ ಬಂದು ಹೋಗುವ ಅಲೆಮಾರಿಗಳು ನಗರೀಕರಣದ ದಾಳಿಗೆ ಸಿಲುಕಿ ನಿಸರ್ಗದ ಸುಂದರ ಪರಿಸರದಿಂದ ಬಹಳ ದೂರಕ್ಕೆ ಎಸೆಯಲ್ಪಟ್ಟಿವೆ. ಇಂತಹ ಸ್ಥಿತಿಯಲ್ಲಿ ಅವರವರ ಜೀವಜಾಲ ಜಾನಪದವನ್ನು ಅರಸುವುದು ರಮ್ಯ ಸೈದ್ದಾಂತಿಕತೆಯ ಅಧ್ಯಯನದಂತೆ ಕಾಣಬಲ್ಲದು. ಹೀಗಿದ್ದರೂ ಹಂಪಿ ಪರಿಸರದಲ್ಲಿ ಪಳೆಯುಳಿಕೆಯಂತಿರುವ ಈ ಬಗೆಯ ಛಿದ್ರ ವಿವರಗಳನ್ನೆಲ್ಲ ಜೀವಜಾಲದ ಪಲ್ಲಟಗಳಲ್ಲಿಟ್ಟು ಅಭ್ಯಾಸ ಮಾಡಬೇಕಿದೆ. ಅಲೆಮಾರಿ ಸಮುದಾಯಗಳು ಹಂಪಿ ಪರಿಸರಕ್ಕೆ ಪ್ರತಿ ವರ್ಷವು ವಲಸೆ ಬಂದು ಗುಡಾರ ಹೂಡಿ ಮುಂದಿನ ನೆಲೆಗಳಿಗೆ ಹೊರಟು ಹೋಗುತ್ತವೆ. ಈ ಬಗೆಯ ಅಲೆದಾಟದ ದಿಕ್ಕೆಟ್ಟ ಸ್ಥಿತಿಯು ಭಾಗಶಃ ವಿಜಯನಗರ ಪೂರ್ವಕಾಲದ ಪಶುಪಾಲಕ ಸಮುದಾಯಗಳ ಘರ್ಷಣೆಯ ಪರಿಣಾಮವೂ ಆಗಿರಬಹುದು. ಮಧ್ಯಕಾಲೀನ ಸಾಮ್ರಾಜ್ಯಗಳು ಜಾತಿ ವ್ಯವಸ್ಥೆಯನ್ನು ಪುನರ್ ನವೀಕರಿಸುವ ಸಂದರ್ಭದಲ್ಲಿ ದಿಕ್ಕೆಟ್ಟ ಅಲೆಮಾರಿ ಸಮುದಾಯಗಳು ತಮಗೆ ಸೂಕ್ತವೆಂದು ತೋಚಿದ ಒಂದೊಂದು ಉಪವೃತ್ತಿಯನ್ನೆ ಜಾತಿಯಾಗಿ ಮಾರ್ಪಡಿಸಿಕೊಂಡಿವೆ.

ಈ ಬಗೆಯ ಬಿಕ್ಕಟ್ಟಿನಲ್ಲಿ ನಿಸರ್ಗದ ಜೀವಜಾಲದ ಜಾನಪದ ಸಂಬಂಧವು ವಿಶೇಷವಾಗಿ ವಿಸ್ತರಿಸಲಿಲ್ಲ. ಅಲ್ಲದೆ ಅಸಂಖ್ಯಾತ ಜನ ವಸತಿಗಳಿಗೆ ಭೂಮಿಯ ಪಾಲು ಸಿಕ್ಕಿರಲಿಲ್ಲ. ಸಿಕ್ಕಿದ್ದ ಕೆಲವೇ ಸಮುದಾಯಗಳು ಭೂಮಾಲೀಕ ಸ್ವಭಾವದಲ್ಲಿ ಜೀವಜಾಲದ ವೈವಿಧ್ಯ ಸಂಬಂಧಗಳಿಗೆ ತೆರೆದುಕೊಳ್ಳಲಿಲ್ಲ. ಅಲಕ್ಷಿತವಾಗಿದ್ದ ಜನಪದ ಸಮುದಾಯಗಳು ಮಾತ್ರ ’ಆಕಾಶವೆ ಹೊದಿಕೆ ಭೂಮಿಯ ಚಾಪೆ’ ಆದರೂ ಕೃಷಿ ಸಂಸ್ಕೃತಿಯಲ್ಲಿ ಸಾಕು ಪ್ರಾಣಿಗಳ ಬಗ್ಗೆ ಗಾಢವಾದ ಸಂಬಂಧ ಉಳಿದೇ ಇತ್ತು. ಪಶುಪಾಲಕ ಸಮಾಜಗಳಿಗೆ ಪಶು ಸಂಬಂಧವೇ ನಿರ್ಣಾಯಕವಾಗಿದ್ದರಿಂದ ಅವು ಭಾವನಾತ್ಮಕವಾದ ನಿಲುವಿಗೂ ಬದ್ಧವಾಗಿದ್ದವು. ಜನಪದ ಪರಂಪರೆಗಳು ಜೀವಜಾಲದ ನ್ಯಾಯದಲ್ಲಿಯೆ ಬಾಳುವೆ ಸಾಗಿಸಿರುವುದು. ಹಂಪಿ ಪರಿಸರದ ಗ್ರಾಮ ಪರಂಪರೆಗಳು ನಿರಂತರವಾಗಿ ಆದುನಿಕತೆಯ ಜೊತೆ ಮುಖಾಮುಖಿ ಆಗುತ್ತಲೆ ಬಂದಿವೆ. ಗತಕಾಲದ ಜೈವಿಕ ಸಂಸ್ಕೃತಿ ಮುಖ್ಯವೊ ವರ್ತಮಾನದ ಬದುಕುಳಿಯುವ ಪೈಪೋಟಿಯ ಆದುನಿಕತೆ ಅನಿವಾರ್ಯವೊ ಎಂಬ ಸವಾಲಿನಲ್ಲಿ ಈ ಗ್ರಾಮ ಪರಂಪರೆಗಳು ದಿಕ್ಕಟ್ಟಿವೆ. ಅತ್ತ ಪರಂಪರೆಯ ಜೈವಿಕ ಕೊಂಡಿಗಳನ್ನು ಮುಂದುವರಿಸಲಾಗದೆ ಇತ್ತ ಆಧುನಿಕತೆಯ ಅರ್ಥಪೂರ್ಣ ಸಂವಾದಕ್ಕೂ ಅನ್ವಯಿಕತೆಗೂ ಹೊಂದಲಾರದೆ ಸಾಗಿರುವ ಹಂಪಿಯ ಗ್ರಾಮಗಳು ವಿಶ್ವ ಪರಂಪರೆಯ ಬರಿದೇ ಘನತೆಯಲ್ಲಿ ಕಳೆದುಹೋಗುತ್ತಿವೆ. ನಿನ್ನೆಯ ಪಶುಪಾಲಕ ಸಮಾಜಗಳು ಇಂದಿನ ಆಧುನಿಕ ಜನಪದಗಳ ಜೊತೆ ಬದುಕುಳಿಯಬೇಕಾದ ಪೈಪೋಟಿಗೆ ಒಳಪಟ್ಟಿವೆ. ಇಂತಹ ಯಾವ ಪೈಪೋಟಿಗೂ ಪಶುಪಾಲಕ ಸಮಾಜಗಳಾಗಲಿ, ಜೈವಿಕ ಗ್ರಾಮ ಸಂಸ್ಕೃತಿಯ ಸಮುದಾಯಗಳಾಗಲಿ ತಂತಾನೆ ಮುಂದೆ ಬಂದಿರಲಿಲ್ಲ. ಇದು ಅಜೈವಿಕ ಪೈಪೋಟಿ. ಅನ್ಯಾಯದ ಬಲವಂತ ಹೊಂದಾಣಿಕೆಯ ಒಪ್ಪಂದದ ಒತ್ತಡ. ಇಂತಹ ಸ್ಥಿತಿಯಲ್ಲಿ ಪಶುಪಾಲಕ ಸಮಾಜಗಳು ನಿಸರ್ಗವನ್ನು ರಮ್ಯವಾಗಿ ಧ್ಯಾನಿಸಲಾರದಷ್ಟು ಪೈಪೋಟಿಯ ದಣಿವಿಗೆ ತುತ್ತಾಗಿರುತ್ತವೆ. ಹೀಗಾಗಿಯೆ ಜೀವಜಾಲದ ನೆನ್ನೆಯ ಎಲ್ಲ ಸಂಬಂಧಗಳನ್ನು ವ್ಯಾಪಕವಾಗಿ ಮರುರೂಪಿಸಲು ಇಲ್ಲಿನ ಜನಪದಗಳಿಗೆ ಸಾಧ್ಯವಾಗದೇ ಹೋಗಿರಬಹುದು.

ಹಂಪಿಯ ಜೀವಜಾಲ ಜಾನಪದದಲ್ಲಿ ಗ್ರಾಮ ಪರಂಪರೆಗಳು ರೂಢಿಸಿಕೊಂಡಿರುವ ಕೃಷಿ ಪದ್ಧತಿಗಳು ಕೂಡ ಈ ನಿಟ್ಟಿನಲ್ಲಿ ರೂಪಾಂತರಗೊಂಡಿವೆ. ಸಹಜ ಕೃಷಿ, ಸಾವಯವ ಕೃಷಿ, ಪ್ರಾಚೀನ ಬೇಸಾಯ ಪದ್ಧತಿಯ ಕುರುಹುಗಳು ಅಪರೂಪಕ್ಕೆ ಮಾತ್ರ ಉಳಿದೆವೆ. ಜೀವಜಾಲ ಜಾನಪದದ ವ್ಯಾಪ್ತಿಯಲ್ಲಿ ದೇಸೀಯ ಬಿತ್ತನೆ ಬೀಜಗಳ ತಿಳುವಳಿಕೆಯೂ ಮಹತ್ವದ ಸಂಗತಿ. ಅದನ್ನು ಪ್ರತ್ಯೇಕವಾಗಿಯೇ ಅಧ್ಯಯನ ಮಾಡಬೇಕಾಗುತ್ತದೆ. ನಿಸರ್ಗದ ಸುತ್ತಲಿನ ಆಚರಣೆಗಳು ಹಂಪಿ ಪರಿಸರಲ್ಲಿ ವ್ಯಾಪಕವಾಗಿವೆ. ಇವು ಕೂಡ ಜೀವಜಾಲದ ಆದಿಮ ಸ್ಥಿತಿಯನ್ನು ಬಿಂಬಿಸಬಲ್ಲವು. ಮೊದಲಿಗೆ ಜೀವಜಾಲದ ಪ್ರಾಥಮಿಕ ಆಕರಗಳನ್ನು ಹೊಂದಿಸಿಕೊಂಡು ಮುಂದಿನ ಹಂತದಲ್ಲಿ ಆಚರಣೆಗಳ ನೆಲೆಯಿಂದಲೇ ಗತಕಾಲದ ಜೈವಿಕ ಆಯಾಮಗಳನ್ನೆಲ್ಲ ಪರಿಶೀಲಿಸಬಹುದು. ಯಾವುದೇ ಪಶುಪಾಲಕ ಸಮಾಜವೂ ತನಗೆ ತಾನೇ ಸ್ವಾತಂತ್ರ್ಯವಲ್ಲ. ಅದು ಆಧುನಿಕತೆಯ ವೇಗದ ಬೇರೆ ಬೇರೆ ಸಮಾಜಗಳ ಜೊತೆ ಲಾಭ ನಷ್ಟಗಳ ಲೆಕ್ಕದಲ್ಲಿ ವ್ಯವಹರಿಸಬೇಕಾಗಿದೆ. ಲಾಭ ನಷ್ಟಗಳು ಜೈವಿಕ ವ್ಯವಸಾಯದಲ್ಲಿ ಹಿಂದೆ ಪಶುಪಾಲಕರಿಗೆ ಸಮಸ್ಯೆಯೇ ಆಗಿರಲಿಲ್ಲ. ಬದಲಾದ ಆರ್ಥಿಕ ಕ್ರಮಗಳಲ್ಲಿ ಜೀವಜಾಲದ ಒಪ್ಪಂದಗಳು ಜನಪದರಿಗೆ ನಷ್ಟದ ಬಾಬತ್ತೇ ಆಗಿವೆ. ಹಂಪಿಯ ವಿಶ್ವ ಪರಂಪರೆಯ ಗ್ರಾಮಗಳು ತುಂಗಭದ್ರಾ ನದಿಯ ಗತಕಾಲದ ಜೀವಜಾಲ ರಮ್ಯತೆಯಲ್ಲಿ ಈಗ ವ್ಯವಹರಿಸಲಾರವು. ಜೀವಜಾಲದ ಕೊಂಡಿಗಳು ನಾಶವಾಗುವುದು ಸಾಮ್ರಾಜ್ಯಗಳ ವಿನಾಶದ ಎದಿರು ಬಹುದೊಡ್ಡ ನಷ್ಟವೇ ಸರಿ. ವಿಜಯನಗರ ಸಾಮ್ರಾಜ್ಯ ಅಳಿದಿದ್ದರೂ ಅಲ್ಲಿನ ಪರಿಸರ ಜೀವಿಗಳು ಅಳಿಯಲಿಲ್ಲ. ಅಂತೆಯೇ ಅಲ್ಲಿನ ಪರಿಸರದ ಆಧಾರದಲ್ಲಿ ವ್ಯಾಪಿಸಿದ್ದ ಪಶುಪಾಲಕ ಸಮಾಜಗಳೂ ನಾಶವಾಗಲಿಲ್ಲ. ಬದಲಾಗುವ ಪ್ರಕ್ರಿಯೆಗಳಲ್ಲಿ ಎಲ್ಲ ನೆನಪುಗಳು ಒಂದೇ ಪ್ರಮಾಣದಲ್ಲಿ ಉಳಿಯುವುದಿಲ್ಲ. ಅಳಿದುಳಿದ ಸಂಗತಿಗಳ ಆಧಾರದಿಂದಲೇ ಅಳಿದ ಸಂಗತಿಗಳನ್ನು ಪುನರ್ ರೂಪಿಸಬಹುದು. ಹಂಪಿ ಪರಿಸರದ ಜೀವಜಾಲವನ್ನು ಜನಪದ ಪರಂಪರೆಗಳು ಒಂದೇ ಬಗೆಯಲ್ಲೇನು ಭಾವಿಸಿಲ್ಲ. ಒಂದೊಂದು ಸಮುದಾಯಕ್ಕೂ ಆ ವಿವರಗಳು ಬದಲಾಗಬಲ್ಲವು. ಕಾಲದ ಅಲೆಗಳು ಕೂಡ ಈ ಸ್ಥಿತಿಗೆ ಕಾರಣವಾಗಬಲ್ಲವು. ಜೀವಜಾಲ ಜಾನಪದದ ಈ ವೈವಿಧ್ಯ ವಿವರಗಳನ್ನು ನೋಡಿದರೆ ಇದೆಲ್ಲ ಸಾಧಾರಣ ವಿಷಯಗಳಂತೆ ಕಾಣಬಹುದು. ವಸ್ತುನಿಷ್ಟ ವಿವರಗಳ ಆಚೆಗಿನ ದೃಷ್ಟಿಯನ್ನು ಭಾವಿಸಿದರೆ ಮಾತ್ರ. ಈ ವಿವರಗಳಿಗೂ, ಜನಪದ ಪರಂಪರೆಗಳ ಜೀವನ ವಿಧಾನಗಳಿಗೂ, ಜೀವವಿಜ್ಞಾನದ ವರ್ತಮಾನದ ನಿರ್ವಚನಗಳಿಗೂ ಹಾಗೂ ಇಲ್ಲಿನ ಎಲ್ಲಾ ಜೀವಜಾಲ ಜಾನಪದದ ದೇಶಿಯ ವಿವರಗಳಿಗೂ ಸಂವಹನ ಸಾಧ್ಯವಾಗುತ್ತದೆ. ಹಂಪಿ ಪರಿಸರದಲ್ಲಿದ್ದ ಜೀವಜಾಲವನ್ನು ಕೇಂದ್ರಿಕರಿಸಿ ಇಲ್ಲಿನ ಜನಪದರ ಪರಂಪರೆಗಳಲ್ಲಿ ಅವುಗಳ ಬಗೆಗಿನ ನಿಲುವು ಹೇಗೆ ವ್ಯಕ್ತವಾಗಿದೆ ಎಂಬುದನ್ನು ವಿವಿಧ ನೆಲೆಯ ವ್ಯಾಪ್ತಿಗಳಲ್ಲಿ ವಿವರವಾಗಿ ಈ ಕೆಳಗೆ ವಿಂಗಡಿಸಿದಂತೆ ಚರ್ಚಿಸಬಹುದು.

* ಹಂಪಿ ಪ್ರಾಣಿ ಜಾನಪದ

* ಹಂಪಿ ಜಲಚರ ಜಾನಪದ

* ಹಂಪಿ ಪಕ್ಷಿ ಜಾನಪದ

* ಹಂಪಿ ಸಸ್ಯ ಜಾನಪದ

* ಹಂಪಿ ಕೀಟ ಜಾನಪದ

* ಹಂಪಿ ಜಲ ಜಾನಪದ

* ಹಂಪಿ ಭೌಗೋಳಿಕ ಜಾನಪದ

* ಅಳಿವಿನ ಅಂಚಿನ ಜಾನಪದ

ಪ್ರಧಾನವಾಗಿ ಕಂಡುಬರುವ ಈ ಪ್ರಕಾರಗಳಲ್ಲಿ ಹಂಪಿಯ ಜೀವಜಾಲ ಜಾನಪದದ ಸಂಬಂಧಗಳನ್ನು ಮುಂದಿನ ಅಧ್ಯಾಯಗಳಲ್ಲಿ ಪರಿಶೀಲಿಸುವ.